ಜ್ಯಾಪ್ರತಿಪಾಳನಮಂ ಧ
ರ್ಮಪ್ರೀತಿಯಿನೈದೆ ಮಾಡಿದಂ ಸುಕರತೆಯಿಂ
ದಾಪ್ರಭು ಮಾರ್ಗಣಕುಶಲಾ
ಭಿಪ್ರಾಯನೆನಿಪ್ಪವಂಗೆ ತಾನುಚಿತಮ ದಲ್ || ೫೧

ಮ || ವಿ || ಪಗಲರ್ಕಂ ತಳೆದಬ್ಜಮಸ್ತಮಯಸಂಧ್ಯಾರಾಗವಿಭ್ರಾಂತಿಯಿಂ
ಮುಗಿವನ್ನಂ ದಿಗಿಭೋತ್ಕರಂ ದವಭವಜ್ವಾಳಾವಳೀಶಂಕೆಯಿಂ
ದಗಿವನ್ನಂ ರಿಪುಗಳ್ ದಿನಪ್ರಪತದುಳ್ಕೋದ್ಯತ್ಪ್ರಭಾಭೀತಿಯಿಂ
ಸುಗಿವನ್ನಂ ನಿಮಿರ್ದತ್ತು ತನ್ನೃಪಮಹಾತೇಜಃಪ್ರಭಾಮಂಡಳಂ || ೫೨

ವ || ಅಂತಲಂಘ್ಯತೇಜನುಮವನತರಿಪುಸಮಾಜನುಂ ಸಫಲೀಕೃತಾರ್ಥಿನಿಚಯಾಶನುಂ ವಿಶದಯಶಃಬಳಿತಾಶನುಮೆನಿಸಿ –

ಮ || ಸ್ರ || ಅನಿಶಂ ಸೋಮಪ್ರಭಾದೇವಿಯ ವದನಸುಧಾಸೂತಿಯಿಂದುಳ್ಳಲರ್ತಂ
ದ ನಿಜಸ್ವಾಂತೋತ್ಪಲಕ್ಕತ್ಯಧಿಕವಿಕಸನಶ್ರೀಯನಾದೇಯಕಾಯಂ
ತನುಜಾತಂ ಸ್ವರ್ಣನಾಭಂ ತುಹಿನಪವನಸಂಸ್ಪರ್ಶದಂತಿಯೆ ಪುಣ್ಯಾ
ರ್ಚನವಿಶ್ರಾಂತಾತಿಲೋಭಂ ಸುಖದರಸುಗೆಯುತ್ತಿರ್ದನಾ ಪದ್ಮನಾಭಂ ೫೩

ವ || ಅಂತು ಕತಿಪಯಸಂವತ್ಸರಂಗಳ್ ಸಲ್ವಿನಂ ಪ್ರರೂಢಯೌವನಮನೋಹರನುಂ ಕವಚಹರನುಂ ಆದ ನಿಜತನೂಜನಂ ನೋಡಿ –

ಮ || ಸ್ರ || ಧರಣೀಚಕ್ರೋರುಭಾರೋದ್ಧರಣವಿಧಿಯೊಳಸ್ಮದ್ಭುಜಕ್ಕೀ ಕುಮಾರಂ
ನೆರವಾಗಲ್ ಸಾಲ್ವನೀತಂ ಬಱಿದಿರೆ ಪುರುಳೇನೆಂದು ಮಂತ್ರಿಪ್ರಧಾನೋ
ತ್ಕರಯುಕ್ತಂ ವ್ಯಕ್ತಹರ್ಷಂ ಶುಭದಿನದೊಳಿಳಾಧೀಶ್ವರಂ ಮಾಡೆ ಶೂರ್ಯ
ಸ್ವರದೊಳ್ ತಳ್ಪೊಯ್ದದೇಂ ಶೋಭಿಸಿದುದೊ ಪಿರಿದುಂ ಯೌವರಾಜ್ಯಾಭಿಷೇಕಂ || ೫೪

ವ || ಅನಂತರಂ ಮನೋಹರಮಂಗಳಾಳಮಕಾರಾಳಂಕೃತನಂ ಮಾಡಿ –

ಚಂ || ಸಕಲಧರಾಧಿರಾಜ್ಯಪದಚಿಹ್ನ ಕಿರೀಟಸಮರ್ಪಣಕ್ಕೆ ಸಂ
ಚಕರಮಿದೆಂಬಿನಂ ಪ್ರಿಯಕುಮಾರನ ಕಂಠದೊಳುದ್ಘರತ್ನಕಂ
ಠಿಕೆಯನನೂನಹರ್ಷರಸಗದ್ಗದಕಂಠನಿಳೇಶನುತ್ಸವೋ
ತ್ಸುಕಕಳಕಂಠಿಕಾಂಧುರಮಂಗಳಗೀತಿಗಳುಣ್ಮೆ ಕಟ್ಟಿದಂ || ೫೫

ವ || ಆಗಳ್ –

ಕಂ || ಬಿಡದೆ ನಮೇರುವನಡರ್ದೊಡ
ಮೊಡನೆಯೆ ಸಂತಾನಕಕ್ಕೆ ಕಲ್ಪಲತಿಕೆ ದಾಮ
ಗುಡಿಯಿಟ್ಟು ಲೀಲೆಯಂ ಸಿರಿ
ಪಡೆದುದಧೀಶ್ವರಿಯುಪೇಶ್ವರಾಳಂಬನದಿಂ || ೫೬

ವ || ಅಂತು ಸುವರ್ಣನಾಭಕುಮಾರಂ ಭೂರಿಭುಜಮಂಡಳನಿವೇಶಿತಾರ್ಧರಾಜ್ಯಭರನಾಗಿ –

ಮ || ಸ್ರ || ಎಣಿಪಾಗಳ್ ಕೃತ್ಯಶೇಷಂ ಪರಮಮುನಿಮನಸ್ತರ್ಪಣಂ ಶೀಲಸಂರ
ಕ್ಷಣಮಾಸಂಪನ್ನಭವ್ಯೋದ್ಧರಣಮತುಳಚೈತ್ಯಾಲಯಾನೀಕನಿರ್ಮಾ
ಪಣಮರ್ಹತ್ಸೂಕ್ತಯುಕ್ತಿಶ್ರವಣಮಿವೆ ದಲೆಂದಿಂತವಂ ತನ್ನ ಚಿತ್ತಂ
ತಣಿವನ್ನಂ ಮಾಡಿ ನಿಶ್ಚಂ ಪೊಗಳಿಸಿದನಿಳಾಚಕ್ರದಿಂ ಶಕ್ರಲೀಲಂ || ೫೭

ವ || ಅಂತು ನಿಜನಿರ್ಮಲಸ್ವಭಾವಾನುರೂಪವ್ಯಾಪಾರಂಗಳಿಂ ಪೊೞ್ತುಗಳೆಯುತಿರ್ದೊಂದು ಪುಣ್ಯವಾಸರಪ್ರಥಮಪ್ರಹರದೊಳ್ –

ವ || ಅಂತು ನಿಜನಿರ್ಮಲಸ್ವಭಾವಾನುರೂಪವ್ಯಾಪಾರಂಗಳಿಂ ಪೊೞ್ತುಗಳೆಯುತಿರ್ದೊಂದು ಪುಣ್ಯವಾಸರಪ್ರಥಮಪ್ರಹರದೊಳ್ –

ಮ || ಸ್ರ || ಲಲನಾಲಾವಣ್ಯವಾರಿಪ್ರಸರದೊಳಬಲಾಪಾಂಗರೋಚಿರ್ಮೃಣಾಲೀ
ಕುಲದೊಳ್ ಕಾಂತಾನನಾಂಭೋರುಹಪರಿಕರದೊಳ್ ಕಾಮಿನೀಹಾಸಫೇನಾ
ವಲಿಯೊಳ್ ಸೀಮಂತಿನೀಕುಂತಲಮಧುಕರದೊಳ್ ಪ್ರೇಯಸೀದೋಸ್ತರಂಗಾ ಕುಲದೊಳ್ ತಾನಿರ್ದನಾಸ್ಥಾನಿಯೊಳಮಳಸರಃಕಲ್ಪದೊಳ್ ರಾಜಹಂಸಂ || ೫೮

ವ || ಆಪ್ರಸ್ತಾವದೊಳ್-

ಮ || ಸ್ರ || ಧೃತವೇತ್ರಂ ಚಾರುಚೀನಾಂಬರರಚಿತಶಿರೋವೇಷ್ಟನಂ ಘಂಟಿಕಾಲಂ
ಬಿತಕೂರ್ಪಾಸಂ ಜರಾನಿರ್ಮಳಸರಳತರಶ್ಮಶ್ರುಕೂರ್ಚಂ ನಿಯುಕ್ತ
ದ್ರುತಯಾನೋತ್ಕಂಪಿಪೀನೋದರನವನಪನೊಡ್ಡೋಲಗಕ್ಕೈದೆ ವಂದಂ
ಪ್ರತಿಹಾರಂ ಕೌತುಕಪ್ರಸ್ತುತಯುತಪುರುಷಾವಾಪ್ತಿ ವಿಜ್ಞಾಪನೋತ್ಕಂ || ೫೯

ವ || ಅನಂತರಂ ನಿಟಿಲನಿಹಿತಕರಕುಟ್ಮಳಂದೇವ ವನಮಹತ್ತರಂ ವಿಚಿತ್ರ ಪುಷ್ಪಫಲಹಸ್ತಂ ಬಂದು ಬಾಗಿಲೊಳಿರ್ದಪನೆಂಬುದುಂ ಬರವೇೞೆನೆ ಮಹಾಪ್ರಸಾದಮೆಂದೊಡಗೊಂಡು ಬಂದೊಡವನವನತಿಪುರಸ್ಸರಂ ವಿವಿಧಪತ್ರಪುಟಿಕಾನಿಹಿತಂಗಳಂ ತಂದು ಮುಂದಿೞಿಪಿ –

ಕಂ || ಇವು ಜಂಬೂಫಲಮಂಜರಿ
ಯಿವು ಫಲಿನೀಫಲದ ಗುಚ್ಛಮಿವು ಚೂತಫಲ
ಸ್ತವಕಂ ದಲೆಂದು ತೋಱಿದ
ನವನೀಪಾಲಂಗೆ ಲೀಲೆಯಿಂ ವನಪಾಲಂ || ೬೦

ಮ || ವಿ || ಇವು ಕಂಕೆಲ್ಲಿದಳತ್ಪ್ರಸೂನಮಿವು ಮಲ್ಲೀಸ್ಮೇರಪುಷ್ಪಂ ಪೊದ
ೞ್ದಿವು ನೀಪಪ್ರಸವಂ ಬೞಿಕ್ಕಿವಸನಪ್ರೋತ್ಫುಲ್ಲಪುಷ್ಪಂ ಸಮಂ
ತಿವು ಮಂದಸ್ಮಿತಸಿಂಧುವಾರಕುಸುಮಂ ನೋೞ್ಪಂದಿವಿಂತೈದೆ ಲೋ
ಧ್ರವಿನಿದ್ರೋದ್ಗಮಮೆಂದು ತೋಱಿದನನೂನಾಶ್ಚರ್ಯಮಪ್ಪನ್ನೆಗಂ || ೬೧

ವ || ಆಗಳವಂ ಕಂಡು ಕಾಲತ್ರಯಋತುಷಟ್ಕೋಚಿತಂಗಳಪ್ಪ ಫಲಪ್ರಸವಂಗಳೇಕೆ ಸಮಯ ಪ್ರಸವಮೆಂತಾದುದೆಂದು ವಿಸ್ಮಯಂಬಟ್ಟು ತನ್ನೊಳೆ ವಿಚಾರಿಸಿ ಬೞಿಕ್ಕರಸನವನನಿಂ ತೆಂಡಂ-

ಕಂ || ಇದು ಸಮವಸರಣಸಂಸ
ರ್ಗದಿನಲ್ಲದೊಡಮಲಬೋಧಮುನಿಜನಸಾಮ
ರ್ಥ್ಯದಿನಕ್ಕುಮಲ್ಲದಂದಾ
ಗದು ಸಕಲರ್ತುಪ್ರಭಿನ್ನಗುಣಸಮವಾಯಂ || ೬೨

ವ || ಎಂಬುದುಂ ವನಮಹತ್ತರನಿಂತೆಂದು ಬಿನ್ನವಿಸಿದಂ ದೇವರ್ ಬೆಸಸಿದಂದದಿಂದಿಂದು ಮನೋಹರೋದ್ಯಾನಮನನವದ್ಯಚರಿತ್ರನೊರ್ವ ಮುನಿಮುಖ್ಯಂ ಬಂದು ಪೊಕ್ಕಂ ಆನುಮಾಸಮಯದೊಳ್ –

ಕಂ || ತ್ರೈಕಾಲ್ಯಯೋಗಿ ಬಂದುದ
ನೀ ಕುಸುಮಫಳಂಗಳಿಂದಮಸಯಕೃತಭೃಂ
ಗೀಕೀರಕೇಕಿಕೋಕಿಳ
ಕಾಕಳಿಯಿಂದಱಿದು ಬನದೊಳಱಸಿದೆನಾಗಳ್ || ೬೩

ವ || ಅನಂತರಮೊಂದು ಪಾವನಪ್ರದೇಶದೊಳ್ –

ಮ || ಸ್ರ || ಯತಿಪಂ ಪಂಚಾತಿಚಾರಪ್ರಕೃತನಿಯಮದಿಂ ತುಂಗಶಾಖಾಚ್ಛದಚ್ಛ
ನ್ನತರುಚ್ಛಾಯಾವನೀಭಾಗದೊಳಳವಡೆ ಕೈಯಿಕ್ಕಿಕೊಂಡಿರ್ದು ಚೈತ್ಯ
ಕ್ಷಿತಿಜಾತಪ್ರಾಂತದೇಶಸ್ಥಿ ತಕನಕಮಯಪ್ರಾತಿಹಾರ್ಯಾಷ್ಟಕಾರ್ಹ
ತ್ಪ್ರತಿಬಿಂಬಭ್ರಾಂತಿಯಂ ಮಾಡಿದನವಯದಿಂದೀಕ್ಷಣಕ್ಕಾಗಳೆನ್ನಾ || ೬೪

ಕಂ || ಅತಿಸೌಮ್ಯಾಕೃತಿಯುಮನು
ಗ್ರತಪಸ್ತೇಜಮುಮನಾದಮೊಳಕೆಯ್ದಂತಾ
ವ್ರತಿಪತಿ ಶಶಿಸೂರ್ಯಸಮಾ
ಹೃತಿಯಿಂ ನಿಷ್ಪನ್ನವಾದ ತೆಱದಿಂದಿರ್ದಂ || ೬೫

ಸಕಲವ್ಯಾಪಿನಿಯಂ ಭ
ವ್ಯಕಮಲನಿಕರಪ್ರಮೋದದಾಯಿನಿಯಂ ತಿ
ಗ್ಮಕರಂ ಪ್ರಭೆಯಂ ತಳೆವಂ
ತಕಳಂಕಂ ಶ್ರೀಧರಾಖ್ಯೆಯಂ ಮುನಿ ತಳೆದಂ || ೬೬

ಮುಕುರದೊಳಾ ಪ್ರತಿಬಿಂಬಂ
ನಿಕಾಮಮೆಸೆವಂತೆ ತದ್ವಚೋವಿಸ್ತರದೊಳ್
ಸಕಲಜಗಂ ಸೊಗಯಿಸುಗಂ
ತ್ರಿಕಾಲಗೋಚರಮನಂತಪರ್ಯಾಯಯುತಂ || ೬೭

ದಂತರುಚಿನಿಚಯಮುಕ್ತಾ
ಕ್ರಾಂತಂ ಭಾಸುರಸುವರ್ಣರಚಿತಂ ತದ್ವಾ
ಕ್ಸಂತತಿ ವಿಬುಧಜನಕ್ಕೆ ನಿ
ರಂತರಕಮನೀಯಮಾಯ್ತು ಕರ್ಣಾಭರಣಂ || ೬೮

ಬಳಸಿ ಭುವನಂಗಳಂ ನಿ
ಶ್ಚಳಂಗಳೆನಿಸಿದುವು ಮತ್ತೆ ಗಣನೀಯತೆಯಂ
ತಳೆದಿರ್ದುಮಸಂಖ್ಯೇಯಂ
ಗಳೆನಿಸಿದುವು ತನ್ಮುನೀಶನಮಲಗುಣಂಗಳ್ || ೬೯

ಏವೇೞ್ವುದೊ ತತ್ಪದರಾ
ಜೀವರಜೋವ್ರಾತದಿಂದಳಂಕರಿಸಿ ಶಿರೋ
ಜಾವಳಿಯಂ ನರಸುರಖಚ
ರಾವಳಿ ಮಾಣ್ದತ್ತು ತಳಿವ ಪುಡಿಗತ್ತುರಿಯಂ || ೭೦

ಆ ಮುನಿಪನ ಪರಮತಪ
ಸ್ಸಾಮರ್ಥ್ಯದಿನಾದ ವನದ ಮರಗಳ ಸಿರಿಯು
ದ್ದಾಮತೆಯಂ ಪೊಗೞ್ವಂದೆನ
ಗೇಮಾತೊ ಫಣೀಶವೃತ್ತಿ ಸಮನಿಸವೇೞ್ಕುಂ || ೭೧

ವ || ಆದೊಡಮೆನ್ನಱಿವನಿತನಱಿಪಿದಪೆನದೆಂತೆಂದೊಡೆ –

ಕಂ || ಪಾರದೆ ವಸಂತಮಂ ಕೈ
ವಾರದ ತೆಂಬೆಲರನಾ ಮುನೀಶನ ಬರವಿಂ
ಪಾರೈಸಿದಂದದಿಂ ಸಹ
ಕಾರಂ ತಾಳ್ದಿತ್ತು ಪುಳಕಮೆನೆ ಕಳಿಕೆಗಳಂ || ೭೨

ಯತಿಪತಿಸನ್ನಿಧಿಯಿಂ ಶಾಂ
ತತೆಯಂ ತಳೆದಂತೆ ಕಾಮಿನೀವಾಮಪದಾ
ಹತಿಯಂ ಬಯಸದೆಯುಂ ಪು
ಷ್ಪಿತಮಾದುದು ಲಲಿತಪಲ್ಲವಂ ಕಂಕೆಲ್ಲಂ || ೭೩

ನಿರುತಮಣುವ್ರತಮಂ ಮುನಿ
ವರನೊಳ್ ಕೈಕೊಂಡ ತೆಱದೆ ಮಧುಸೇಕಮನಾ
ದರಿಸದೆ ವಕುಳಂ ಮುಕುಳಮ
ನರಲಂ ಧರಿಸಿದುದು ಕೊಂಬುಕೊಂಬಿನೊಳೆಲ್ಲಂ || ೭೪

ತಿಲಕಂ ಕಾಣಲೊಡಂ ಭೂ
ತಿಲಕನನೊಲವಿಂದಮಲರ್ದುದಂತುಟೆ ವಸುಧಾ
ತಲದೊಳ್ ಸ್ವಪಕ್ಷದರ್ಶನ
ವಿಲಾಸಮೊದವಿಸದೆ ಮುದಮನಾರ್ಗಂ ಮನದೊಳ್ || ೭೫

ಅವಿವೇಕಂ ತದ್ಧರ್ಮ
ಶ್ರವಣದಿನೋಸರಿಸಿದಂತಿರಾಶ್ರಯಮಣಮಾ
ಗವೆ ಚಂಪಕಧಾತ್ರೀರುಹ
ನಿವಹಂಗಳ್ ಮುಖರಮಲಿನಮಧುಪವ್ರಜದಾ || ೭೬

ಜಯಜಯರುತಿಯಂ ಖಗಸಂ
ಚಯರುತಿಯಿಂದೈದೆ ಮಾೞ್ಪ ವನಲಕ್ಷ್ಮೀಕಾಂ
ತೆಯ ಕಾಂತಧವಳದಂತಾ
ಳಿಯವೊಲ್ ಸೊಗಯಿಸಿತು ಕುಂದಕುಟ್ಮಲನಿಕರಂ || ೭೭

ಶುಚಿಸಂಗದಿಂದರಲ್ವುದಿ
ದುಚಿತಮೆನಗೆ ನೋೞ್ಪೊಡೀ ಮುನೀಂದ್ರನುಮಾದಂ
ಶುಚಿಯೆಂದರಲ್ದುದೊಲವಿಂ
ವಿಚಕಿಲನಿಚಯಂ ನವೀನಗಂಧೋಪಚಯಂ || ೭೮

ಆಡುವ ಸೋಗೆನವಿಲ್ಗಳ
ಗಾಡಿಯನೊಲವಿಂದೆ ಪಲವು ಕಣ್ಮಲರ್ಗಳಿನೇಂ
ನೋಡಿದಪುದೆಂಬ ಸಂದೆಗ
ದಾಡಿಂಬೊಲನಾಯ್ತು ಪಲವುಮಲರಿಂ ಕುಟಜಂ || ೭೯

ಮುನಿ ಪೊಕ್ಕನೆಂಬ ಭಯದಿಂ
ಬನದೊಳಗೆ ಬಿಸುಟ್ಟು ಪೋದ ವಿಷಮಾಸ್ತ್ರನ ನ
ಚ್ಚಿನ ಬಾಣಾವಳಿಯೆನಿಸಿದು
ವನೂನಕುಸುಮಾವಕೀರ್ಣಬಾಣಾವಳಿಗಳ್ || ೮೦

ಧರಣೀವಲ್ಲಭ ತನ್ಮುನಿ
ನಿರೀಕ್ಷಣಕ್ಷಣದೊಳಲರ್ದು ಕಡವಿನ ಮರಗಳ್
ಪರಿಗತರೋಮಾಂಚತೆಯಿಂ
ದೊರೆಮಾಡಿದುದೆನ್ನ ತನುವುಮಂ ನೆಱೆ ತನ್ನೊಳ್ || ೮೧

ಎಂದುಂ ತಪಃಪ್ರಭಾವದೊ
ಳೊಂದಿಯೆ ಕುಸುಮಿಸುವುವಂತದಂ ಮಾಣ್ದಲರಂ
ಸೆಂದುರಮಂ ಲೋಧ್ರಮುಮಿರ
ದಿಂದು ತಪಸ್ವಿಪ್ರಭಾವದಾಂತುದು ಚಿತ್ರಂ || ೮೨

ಚಂ || ಅಲರ್ಗಳ ಕೀೞೆಸಳ್ ಕೞಲದಂತು ಲತಾಳಿಯ ತಳ್ಪು ಬಿರ್ಚದಂ
ತೆಲೆಯ ತೊಡಂಬೆಗಳ್ ಪಱಿಯದಂತು ಸರೋರುಹಿಣೀವನಂಗಳೊಳ್
ವಲಿ ತಲೆದೋಱದಂತು ನಲಿದಾಡುವ ಸೋಗೆಯ ಸೋಗೆ ಸೂಸದಂ
ತೆಲರೊಲವುಣ್ಮೆ ತೀಡಿದುದು ತಣ್ಣನೆ ಪಣ್ಣನೆ ತದ್ವನಾಂತದೊಳ್ || ೮೩

ಬನದೊಳಗುಬ್ಬರಂ ಪರಿವ ಶಾಂತರಸಾಮೃತದಿಂದಮೆಯ್ದೆ ತ
ಣ್ಣನೆ ತಣಿದಂತೆ ಚುಂಬಿಸವೆ ಪೂಗುಡಿಯಂ ಮಱೆದುಂ ಮದಾಳಿಗಳ್
ಕನರ್ಗೊನರಂ ಕರ್ದುಂಕವೆ ವಿನೋದದೊಳಂ ಕಳಕೋಕಿಳಂಗಳೊಂ
ದಿನಿತುಮನಪ್ಪೊಡಂ ಗಿಳಿಗಳುಣ್ಣವೆ ಪಣ್ಣನದೆಲ್ಲಿ ನೋೞ್ಪೊಡಂ || ೮೪

ವ || ಮತ್ತಂ –

ಉ || ಆತ್ತವಿರಾಗವರ್ತನೆ ದೃಢೀಕೃತಮೂಲಗುಣಂ ನಿರೀಹತಾ
ವೃ‌ತ್ತಿಯಸಂಗಭಾವಭಜನಂ ಸುಮನಃಪ್ರತಿಪತ್ತಿ ಮಾನಸಂ
ಪತ್ತಿ ಕರಂ ವಿರಾಜಿಸೆ ವನಸ್ಥಿತಶಾಖಿನಿಕಾಯಮಾವಗಂ
ಪೆತ್ತುದು ಚೆಲ್ವನಾಮುನಿಪನೊಳ್ ತಳೆದಂತೆ ತಪೋನಿಯೋಗಮಂ || ೮೫

ವ || ಅದಲ್ಲದೆಯುಂ ನಿರ್ಭರಭಕ್ತಿರಸರಸಿಕವನದೇವತಾಪ್ರೇರಣದಿಂ –

ಕಂ || ಬಳಸಿ ಮುನಿಗರ್ಘ್ಯಮಂ ಮರ
ಗಳೆ ಕುಡುವಂತೆಸೆವ ತಳಿರ ಮೞೆಯಂ ಪೊಸವೂ
ಗಳ ತಂದಲನೊಪ್ಪುವ ಪ
ಣ್ಗಳ ಸರಿಯಂ ಸುರಿಯುತಿರ್ದುವಿರ್ದಿರ್ದೆಡೆಯೊಳ್ || ೮೬

ಆನವಱೊಳಾಯ್ದು ತಂದ ನ
ವೀನಫಲಪ್ರಸವಮಿವು ದಲೆಂದಱಿಪಿದನು
ದ್ಯಾನಮಹತ್ತರನರಸಂ
ಗಾನತಭುವನನ ಸಮಾಗಮಪ್ರಸ್ತುತಮಂ || ೮೭

ವ || ಅದಂ ಕೇಳ್ದು ಹರ್ಷರಸವಿಸರಮಕರಂದಸಂದೋಹಭರಿತಹೃದಯಾರವಿಂದನುಂ ಪುಳಕ ನಿಕರಕಳಿಕಾವಳೀಕಳಿತನಿಜಶರೀರೋದಾರಪಾರಿಜಾತನುಂ ಪ್ರಮೋದಬಾಷ್ಪ ಜಲಲುಳಿತ ನಯನಪಾಠೀನನುಮಾಗಿ – ೮೮

ಕಂ || ನಾಮಱಸಿ ಪೋಗಿ ಪೂಜಿಸು
ವಾಮುನಿಪತಿ ತಾನೆ ದಯೆಯಿನೆೞ್ತಂದಂ ಮ
ತ್ತೇಮಾತೊ ನಮ್ಮ ಪುಣ್ಯದ
ಸಾಮರ್ಥ್ಯಮನೂನಮನುಪಮಾನಮದಲ್ತೇ || ೮೯

ವ || ಎಂದು ಮಣಿಮಯನಿಜೋವಿಷ್ಟವಿಷ್ಟರಾಗ್ರದಿಂದೆ –

ಕಂ || ಇೞಿದಾ ದೆಸೆಗೇೞಡಿಯಂ
ಗೞಗೞನವನಿಪತಿ ಮುಗಿದ ಕೈಯಂ ನೊಸಲಿಂ
ದಿೞಿಪಿದನಡಿಗೆಱಗಿದನೋ
ಕುೞಿಯಾಡೆ ಪೊದೞ್ದ ರಾಗರಸದಿಂ ಚಿತ್ತಂ || ೯೦

ವ || ಆಗಳ್ –

ಶಾ || ಧಾತ್ರೀಶಾಜ್ಞೆಯಿನುಣ್ಮಿದತ್ತು ಪೊೞಲೊಳ್ ಪಾಪಪ್ರತೀಪದ್ವಿಪೈ
ಕತ್ರಾಸಪ್ರದಪುಣ್ಯಕೇಸರಿರವಂ ಭವ್ಯಾವಳೀಸೌಖ್ಯಸ
ಸ್ಯತ್ರಣಾಮೃತವರ್ಷಧರ್ಮಘನಘೋಷಂ ಬಂಧುರಂ ವಂದನಾ
ಯಾತ್ರೋತ್ಸಾಹನಿವೇದಕಂ ಕನಕಕೋಣಾಘಾತಭೇರೀರವಂ || ೯೧

ವ || ಅನಂತರಂ –

ಕಂ || ಬಳೆದ ಮುನಿನಾರ್ಥವಾರ್ತಾ
ವಿಳಸತ್ಕಲ್ಪಲತೆ ಫಲಿತವಾದತ್ತೆನೆ ಭೂ
ತಳಪಾಲಂ ವನಪಾಲಂ
ಗಳತೆಗೆ ಮಿಗಿಲೆನಿಸಿ ಪಾರಿತೋಷಕಮಿತ್ತಂ || ೯೨

ವ || ಅಂತನೇಕಾಳಂಕಾರವಸನವಸುವಿಸ್ತರದಿಂ ಸಂತಸಂಬಡಿಸಿ ಭೇರೀರವಾಕರ್ಣನನಿಮೀಳಿತ ನಾನಾರ್ಚನಾವ್ಯಗ್ರಹಸ್ತಪರಿವಾರಪರಿವೃತಾನೇಕರಾಜಲೋಕಸಂಕೀರ್ಣಮಪ್ಪ ರಾಜ ಮಂದಿರದ್ದಾರದೊಳ್ ಪಣ್ಣಿ ಬಂದಿರ್ದ ಪಟ್ಟವರ್ಧನಗಂಧಸಿಂಧುರಸ್ಕಂಧಾರೂಢನಾಗಿ ಪುರಮಂ ಪೊಱಮಟ್ಟು –

ಕಂ || ಬಳೆದ ಮುನಿನಾರ್ಥವಾರ್ತಾ
ವಿಳಸತ್ಕಲ್ಪಲತೆ ಫಲಿತವಾದತ್ತೆನೆ ಭೂ
ತಳಪಾಲಂ ವನಪಾಲಂ
ಗಳತೆಗೆ ಮಿಗಿಲೆನಿಸಿ ಪಾರಿತೋಷಕಮಿತ್ತಂ || ೯೨

ವ || ಅಂತನೇಕಾಳಂಕಾರವಸನವಸುವಿಸ್ತರದಿಂ ಸಂತಸಂಬಡಿಸಿ ಭೇರೀರವಾಕರ್ಣನನಿಮೀಳಿತ ನಾನಾರ್ಚನಾವ್ಯಗ್ರಹಸ್ತಪರಿವಾರಪರಿವೃತಾನೇಕರಾಜಲೋಕಸಂಕೀರ್ಣಮಪ್ಪ ರಾಜ ಮಂದಿರದ್ವಾರದೊಳ್ ಪಣ್ಣಿ ಬಂದಿರ್ದ ಪಟ್ಟವರ್ಧನಗಂಧಸಿಂಧುರಸ್ಕಂಧಾರೂಢನಾಗಿ ಪುರಮಂ ಪೊಱಮಟ್ಟು –

ಕಂ || ಸಸುತಂ ಸಸ್ತ್ರೀನಿಕರಂ
ಸಸುಹೃತ್ಪ್ರಕರಂ ಸಪೌರಲೋಕಂ ಸಬಲ
ಪ್ರಸರಂ ಸಮಂತ್ರಿವಿಸರಮ
ವಸುಧಾಪತಿ ನಡೆದನಧಿಕವಿಭವಸಮೇತಂ || ೯೩

ವ || ಆ ಪ್ರಯಾಣದೊಳ್ –

ಉ || ಕಾರಮುಗಿಲ್ಗಳಿಂ ಪೊಳೆವ ಮಿಂಚುಗಳಿಂ ಸುರಕಾರ್ಮುಕಂಗಳಿಂ
ಪೂರಿಸಿದಂದದಿಂದವನಿಮಂಡಲಮಷ್ಟದಿಶೋರುಮಂಡಳಂ
ನೀರದಮಾರ್ಗಮಂಡಲಮದೇನೆಸೆದತ್ತೊ ಮದದ್ವಿಪಾವೃತಂ
ವೀರಭಟಾಸ್ತ್ರರುಕ್ಪರಿವೃತಂ ಮಣಿಭೂಷಣಕಾಂತಿಸಂವೃತಂ || ೯೪

ವ || ಅಂತು ನಡೆದು –

ಕಂ || ನುತಕಮಳಾಕರಮಂ ಪರಿ
ವೃತಪುನ್ನಾಗಮನುದಾತ್ತಚಂದನತಿಲಕಾ
ನ್ವಿತಮಂ ವಿರಾಜಿತಮನಾ
ಕ್ಷಿತಿಪತಿ ಸಾರ್ತಂದನಾತ್ಮಸಮಮಂ ವನಮಂ || ೯೫

ವ || ಆಗಳಾಮುನೀಂದ್ರಪ್ರಭಾವದೂತಾಹೂತವಸಂತವಲ್ಲಭನವೀನಸಂಯೋಗದಿಂ ಪರಿಶ್ರಾಂತೆ ಯಾದುದ್ಯಾನಲಕ್ಷ್ಮಿಯ ನಱುಸುಯ್ಯದೆನಿಸಿ ಪಸರಿಸುವ ತಣ್ಗಾಳಿಯುಂ ತೆಣ್ಗಾಳಿಯಲೆಪ ದಿಂದೊಲೆದು ಪುಣ್ಯಪಣ್ಯಾರ್ಥಿಭವ್ಯ ಸಾರ್ಥಮನಿತ್ತಲೆೞ್ತರ್ಪುದೆಂದು ಕೈಸನ್ನೆಯಿಂ ಕರೆವಂತೆ ಕರಮೆ ಸೊಗಯಿಸುವ ತಳಿರ್ಗೊಂಬುಗಳುಮ ತಳಿರ್ಗೊಂಬುಗಳೊಳಿರ್ದು ಮುನ್ನಿನಂದದಿಂದಿಂದು ಪೊಕ್ಕೊಡೆ ಪೊಲ್ಲದಕ್ಕುಮೆಂದು ಕಂದರ್ಪನಂ ಪುಗಲ್ ಪುಗಲೆಂ ಬಂದದಿಂ ಸರಂಗೆಯ್ವ ಗಂಡುಗೋಗಿಲೆಯ ದನಿಗಳುಂ ಗಂಡುಗೋಗಿಲೆಯ ದನಿಯ ವಾದ್ಯನಿನದಮಪ್ಪಿನಮಾಗಳೆ ಬಂದ ಮುನಿವೃಂದಾರಕನ ಬರವಿನೊಸಗೆಯೊಳ್ ಮಂಗಳಂ ಬಾಡುವಂತಿನಿಯದನಿಯಂ ನೆರೆದು ಮೊರೆವ ಪೆಣ್ದುಂಬಿಗಳುಂ ಅಸದಳಂ ಸೊಗಯಿಸುವ ಬನದ ಬಾಗಿಲೊಳ್ ಸೇನಾಪತಿ ಪ್ರಮುಖಚತುರಂಗಪೃತನಾಪ್ರತಾನಮನಿಲ್ಲಿಯೆ ನಿಲ್ಕೆಂದು ಬೆಸಸಿ ವಿಗತಧವಲಚ್ಛತ್ರ ಚಾಮರಾದಿರಾಜಚಿಹ್ನಸಮಾಜನುಂ ಕತಿಪಯ ಭವ್ಯಪಾರ್ಥಿವಪ್ರಧಾನಪರಿವಾರನುಂ ಸಜ್ಜನಸಜ್ಜೀಕೃತಾನೇಕಪೂಜಾರಪರಿಕರನುಂ ವನಮ ಹತ್ತರಪುರಸ್ಸರನುಮಾಗಿ –

ಮ || ಸ್ರ || ಪುರಹೂತಂ ಪ್ರೀತಿಯಿಂನಂದನವನಕೆ ಮಹೋತ್ಸಾಹದಿಂ ಚೈತ್ರದೊಳ್ ಚೈ
ತ್ರರಥೋದ್ಯಾನಕ್ಕೆ ವಿತ್ತಾಧಿಪನತುಳವಿಳಾಸಾನ್ವಿತಂ ಬರ್ಪವೋಲ್ ತ
ದ್ಧರಣೀಚಕ್ರೇಶನಂತಾ ಬನಕೆ ಸವಿಭವಂ ಬಂದು ಯೋಗೀಂದ್ರಪೂಜಾ
ತುರಚಿತ್ತಂ ಪೊಕ್ಕನುದ್ಯತ್ಪುಳಕತನುಲತಂ ಕಾವ್ಯನೌಕರ್ಣಧಾರಂ || ೯೬

ಗದ್ಯಂ

ಇದು ಪರಮಪುರುನ್ನಾಥಕುಲಕುಭೃತ್ಸಮುದ್ಭೂತಪ್ರವಚನಸರಿತ್ಸರಿನ್ನಾಥ
ಶ್ರುತಿಕೀರ್ತಿ ತ್ರೈವಿದ್ಯಾಚಕ್ರವರ್ತಿ ಪದಪದ್ಮನಿಧಾನದೀಪವರ್ತಿ
ಶ್ರೀಮದಗ್ಗಳದೇವ
ವಿರಚಿತಮಪ್ಪ
ಚಂದ್ರಪ್ರಭಪುರಾಣದೊಳ್
ಪದ್ಮನಾಭಮುನಿವಂದನಾಯಾತ್ರೋತ್ಸವಂ
ದ್ವಿತೀಯಾಶ್ವಾಸಂ