ಪಸರಿಪ ತಮದಿಂ ರಜದಿಂ
ಮಸುಳ್ಕೆವೆತ್ತಿರದೆ ದೆಸೆಗಳುಂ ದಿಗ್ದೇವೀ
ವಿಸರದ ಮೊಗದೊಡನೆನಸುಂ
ಪ್ರಸನ್ನಭಾವಮನದೇಂ ಪುದುಂಗೊಳಿಸಿದುದೋ || ೪೬

ದಿವಿಜಜ್ಯೋತಿರ್ವ್ಯಂತರ
ಭವನಾಮರರಿಂದ್ರನಾಜ್ಞೆಯಿಂದತ್ತಿತ್ತಿ
ರ್ದವರುಮನಭವವಿಹಾರೋ
ತ್ಸವಕ್ಕೆ ನೆಱೆ ಕರೆವ ಸಂಭ್ರಮಂ ಕರಮೆಸೆಗುಂ || ೪೭

ಪರಮಸಭಾಮಂಡಳಸಂ
ಚರಣಕ್ಕಿನಮಂಡಳಂ ಪುರಶ್ಚರಮಾದಂ
ತಿರೆ ಧರ್ಮಚಕ್ರಮೆಸೆದ
ತ್ತರದಶಶತಕಿರಣಭರಿತರೋದಶ್ಚಕ್ರಂ || ೪೮

ಮಿಮಳಮಣಿದರ್ಪಣಾದ್ಯ
ಷ್ಟಮಂಗಳೋತ್ಕರಮನಾಂತು ಬರೆ ಮುಂದಮರ
ಪ್ರಮದೆಯರಂಬರದೊಳ್ ನಾ
ಡೆ ಮನೋಹರಮಾಯ್ತು ಸಮವಸರಣವಿಹಾರಂ || ೪೯

ವ || ಅಂತು ದೇವಕಲ್ಪಿತಚತುರ್ದಶಾತಿಶಯಮುಂ ಪ್ರಾಕ್‌ಪ್ರಣೀತಸಹೋತ್ಪನ್ನದಶಾತಿಶಯಮುಂ ಘಾತಿಕ್ಷಯಾನಂತರಜನಿತ ದಶಾತಿಶಯಮುಮೆಂಬ ಚತುಸ್ತ್ರಿಂಶದತಿಶಯಮುಮಷ್ಟಮಹಾ ಪ್ರಾತಿಹಾರ್ಯಮುಮನಂತಚತುಷ್ಟಯಮುಂ ತ್ರಿವಿಷ್ಟಪಾಧಿಪತ್ಯಮಂ ಸ್ಪಷ್ಟಂಮಾಡೆ ಸೌರಾ ಷ್ಟ್ರ ಮಹಾರಾಷ್ಟ್ರಕುಂತಳಾವಂತಿ ವಿದರ್ಭ ಪಾಂಚಾಳ ಕುರುಜಾಂಗಣಾದಿವಿಷಯದೊಳಂ ಧರ್ಮತೀರ್ಥಪ್ರಭಾವನೆಯಂ ಸಂಭಾವಿಸುತುಂ ಬರ್ಪಲ್ಲಿ-

ಚಂ || ಇಳೆಗೆ ಸುಧರ್ಮಮೆಂಬಮೃತವರ್ಷಮನಾಗಿಪಪೂರ್ವಮೇಘಮಂ
ಡಳಮೊ ಕುತೀರ್ಥಮೆಂಬ ತಮಮಂ ಸಲೆ ತೂಳ್ದುವ ನೂತ್ನಭಾನುಮಂ
ಡಳಮೊ ದಿಟಕ್ಕೆ ತಾನೆನಿಸಿ ಚಂದ್ರಜಿನೇಂದ್ರಸಭಾಸಮಗ್ರಮಂ
ಡಳಮೆಸೆದಿರ್ದುದಬ್ದಪಥಮಂಡಳಲಕ್ಷ್ಮಿಯನರ್ಘ್ಯಮಂಡನಂ || ೫೦

ಮ || ಸ್ರ || ಪಿರಿದುಂ ಚೆಲ್ವಾಯ್ತು ಭೇರೀನಿವಹಪಟುರವವ್ಯಾಪ್ತದಿಕ್ಚಕ್ರಪಾರಂ
ಸುರಪುಷ್ಟಾಸಾರಸಾರಂ ಭುವನವಿನುತಧರ್ಮಾವತಾರಂ ಪುರಸ್ಸಂ
ಚರಚಂಚದ್ಧರ್ಮಚಕ್ರಪ್ರಚುರಕಿರಣಭಾರಂ ಸಮಸ್ತಾತಿದೂರಂ
ಪುರುಹೂತಾನಂದಕಾರಂ ಜಿನಪತಿಪರಿಷನ್ಮಂಡಳಶ್ರೀವಿಹಾರಂ || ೫೧

ವ || ಮತ್ತಂ ದ್ಯಾವಾಪೃಥಿವಿಯೆಲ್ಲಂ ಜಯಜಯನಿನಾದಮಯಮುಂ ಅಗುರುಧೂಪಾಮೋದ ಮಯಮುಂ ದಯಾರಸಪ್ರವಾಹಮಯಮುಂ ಅನೇಕ ಮಂಗಳಸಮೂಹಮಯಮುಂ ವೃಂದಾರಕಬೃಂದಮಯಮುಂ ಅನೂನಾನಂದಮಯಮುಂ ಪುಣ್ಯಕಾರ್ಯಯಮುಂ ಆಶ್ಚರ್ಯಮಯಮುಮಾಗಿ ವಿಹಾರಿಸುತ್ತುಂ ಬಂದು ಛದ್ಮಸ್ಥಕಾಲಂ ಮೂಱುತಿಂಗಳ್ ಪೊಱಗಾಗೆ ತೊಂಬತ್ತೊಂಬತ್ತು ಸಾಸಿರದೊಂಬೈನೂಱ ತೊಂಬತ್ತೊಂಬತ್ತು ಪೂರ್ವ ಮುಮೆಣ್ಬತ್ತುಮೂಱು ಲಕ್ಕೆಯುಂ ತೊಂಬತ್ತೊಂಬತ್ತು ಸಾಸಿರದೊಂಬೈನೂಱೆೞ್ಪತ್ತೈದು ಪೂರ್ವಾಂಗಮುಮೆಣ್ಬತ್ತುಮೂಱುಲಕ್ಕೆಯುಂ ತೊಂಬತ್ತೊಂಬತ್ತು ಸಾಸಿರದೊಂಬೈನೂಱ ತೊಂಬತ್ತೊಂಬತ್ತು ಬರಿಸಮುಮೊಂಬತ್ತು ತಿಂಗಳುಮಪ್ಪ ಕೇವಳಿಕಾಲಂ ಮಾಸಾವಶೇಷ ಮಾದುದೆಂಬಂದಿಂಗೆ-

ಕಂ || ಎಸೆವಂತರೀಪಮಂ ಗಗ
ನಸಮುದ್ರದ ನಾವೆ ಸಾರ್ದುದೆನೆ ತಜ್ಜಿನರಾ
ಜಸಭಾವಳಯಂ ಸಾರ್ದ
ತ್ತಸಮಂ ಸಮ್ಮೇದಮೇದಿನೀಧರಶಿರಮಂ || ೫೨

ವ || ಆಗಳರ್ಹತ್ಪ್ರಭಾವದಿಂದಂ-

ಶಾ || ಆಡುತ್ತಿರ್ದುದು ಸೋಗೆವಿಂಡು ತರುಷಂಡಂ ತೋರವಣ್ ಪೇಱೆ ತೂ
ಗಾಡುತ್ತಿರ್ದುದು ಕೈರವಾಬ್ಜನಿಳಯಂ ಸ್ವಚ್ಛಾಂಬುವಿಂ ತುಂಬಿ ತು
ಳ್ಕಾಡುತ್ತಿರ್ದುದು ಪೂತ ವಲ್ಲಿಗಳೊಳೆಲ್ಲಂ ಕೂಡೆ ಭೃಂಗಾಳಿ ಮು
ದ್ದಾಡುತ್ತಿರ್ದುದು ವಿಸ್ಮಯಂ ನೆಗೞ್ವಿನಂ ಸಮ್ಮೇದಶೈಳೇಂದ್ರದೊಳ್ || ೫೩

ವ || ಮತ್ತಂ-

ಉ || ಭೂಮಿಯೊಳದ್ರಿಗಳ್ ಪಲವುಮಿರ್ದೊಡವಂ ಪೆಱಗಿಕ್ಕಿ ಭವ್ಯರ
ಕ್ಷಾಮಣಿ ಘಾತಿಜಾತತಿಮಿರೌಘನಭೋಮಣಿ ಸಾಧುಸಂಘಚಿಂ
ತಾಮಣಿಯಿಂದು ಬಂದೆನಗೆ ಚಂದ್ರಜಿನೇಶ್ವರನಾದನಲ್ತೆ ಚೂ
ಡಾಮಣಿಯೆಂದಗಂ ಮುದಮನಾಳ್ದವೊಲಾಂತುದಪೂರ್ವಶೋಭೆಯಂ || ೫೪

ವ || ಅಂತುಮದಲ್ಲದೆಯುಂ-

ಮ || ವಿ || ತ್ರಿದಶೇಂದ್ರಾದ್ರಿಯೊಳಾದುದೀ ವಿಭುಗೆ ಮುಂ ದ್ವೈತೀಯಕಲ್ಯಾಣಮಂ
ತೆ ದಲಾದಪ್ಪುದದೆನ್ನೊಳಂ ಕುಳಿಶಿಯಿಂ ನಿರ್ವಾಣಕಲ್ಯಾಣಮಿಂ
ಸದೃಶಂ ಪೂತತೆಯಿಂದಮಾ ಗಿರಿಯೊಳಾನೆನ್ನೊಳ್ ತದುರ್ವೀಧ್ರಮಾ
ವುದು ಮತ್ತೆಂದುಲಿವಂತುಟಾಯ್ತು ಗಿರಿ ತನ್ಮಾಯೂರಕೋಳಾಹಳಂ || ೫೫

ಕಂ || ನಾನಾಜೈನಗೃಹಾಧಿ
ಸ್ಥಾನಂ ವಿಂಶತಿಜಿನೇಶಪರಿನಿರ್ವಾಣ
ಸ್ಥಾನಂ ವಿಚಿತ್ರಕೂಟವಿ
ತಾನಂ ಸಮ್ಮೇದಮಸಮಶೋಭಾಧಾನಂ || ೫೬

ವ || ಆ ಮಾಹಮಹೀಧರದದಿತ್ಯಕದೊಳೊಂದತ್ಯಂತಪಾವನಪ್ರದೇಶದೊಳ್‌ ವಿಸರ್ಜಿತವಿಹರ ಣವಿಧಾನನುಮೇಕಮಾಸಪರ್ಯಂತಪರ್ಯಂಕಾಸನಸ್ಥಿತನುಮುತ್ತರಾಭಿಮುಖನುಮನೇಕ ಗಣಧರಮಿನಿವರಸಭಪರಿವೃತನುಮಾಗಿ ಯೋಗನಿರೋಧದಿಂದಿರ್ದು ಚಂದ್ರಪ್ರಭ ಜಿನೇಂದ್ರಂ ಶುಕಧ್ಯಾನಸಾಮಾನ್ಯದಿಂ ತೃತೀಯಮುಂ ಪರಮಶುಕ್ಲಾಪೇಕ್ಲಾಪೇಕ್ಷೆಯಿಂ ಪ್ರಥಮ ಮುಮಪ್ಪ ಸೂಕ್ಷ್ಮ ಕ್ರಿಯಾಪ್ರತಿದಿಧ್ಯಾನಮನೊಳಕೆಯ್ದಂತರ್ಮುಹೂರ್ತದಿಂ ಚರಮಾಂಗತ್ರಿ ಗುಣಬಾಹುಲ್ಯದಿನೇಕಸಮಯದೊಳ್ ಚತುರ್ದಶರಜ್ಜೂತ್ಸೇಧಜೀವಪ್ರದೇಶವಿಸರ್ಪಣ ಮಪ್ಪ ದಂಡಸಮುದ್ಭೂತಮುಮಂ ದ್ವಿತೀಯಸಮಯದೊಳ್‌ ಪ್ರಾಕ್‌ಪ್ರಣೀತಬಾಹುಲ್ಯಾ ಯಾಮದಿಂ ಯಮಳಕವಾಟಾಕೃತಿಜೀವಪ್ರದೇಶವಿಸರ್ಪಣಮಪ್ಪ ಕವಾಟಸಮುದ್ಬೂತ ಮುಮಂ ತೃತೀಯಸಮಯದೊಳ್‌ ವಾಯುತ್ರಯಾವಶೇಷಲೋಕಾಕಾಶಜೀವಪ್ರದೇಶ ಪವರ್ತನಮಪ್ಪ ಪ್ರತರಸಮುದ್ಭೂತಮುಮಂ ಚತುರ್ಥಸಮಯದೊಳ್‌ ಸಕಳಲೋಕ ವ್ಯಾಪ್ತಿ ಜೀವಪ್ರದೇಶಪ್ರವರ್ತನಮಪ್ಪ ಲೋಕಪೂರಣಸಮುದ್ಭೂತಮುಮಂ ನೆಱಪಿ ಮತ್ತಂ ಪ್ಯುತ್ಕ್ರಮಪ್ರವರ್ತಿತತತ್ತದುಪಸಂಹೃತಿಕ್ರಿಯೆಯಂ ಘಾತಿತಾಘಾತಿಸ್ಥಿತ್ಯಂನುಭಾಗಪ ರಿಪ್ರಾಪ್ತಪೂರ್ವಕಾಯಪ್ರಮಾಣಾತ್ಮಪ್ರದೇಶನಾಯಸ್ಸ್ಥಿತಿಯೊಳುೞಿದ ಘಾತಿಸ್ಥಿತಿಯಂ ಸಮೀಕರಿಸಿ ಬೞಿಯಮಂತಮುಃಹೂರ್ತದಿಂ ಬಾದರಮನೋವಚನೋಚ್ಛ್ವಾ ಸಂ ಬಾದ ರಕಾಯಯೋಗಸೂಕ್ಷ್ಮ ಮನೋತ್ಸಾಸುಗಳುಮಂ ನಿರೋಧಿಸಿ ಸೂಕ್ಷ್ಮಕಾಯ ಯೋಗ ನಾಗಿ ಸಮನಂತರಂ ನೀಲೋದಂಗೆಯ್ದು ಲಘ್ವಕ್ಷರಪಂಚಕೋಚ್ಚರಣ ಸಮಯಸಮಿತಾ ಯೋಗಕೇವಳಿಗುಣಸಂಸ್ಥಾನಸ್ಥಿತಂ ಸಮುಚ್ಛಿನ್ನಪ್ರಾಣಾಪಾನ ಸಮಾನಪ್ರಚಾರಸರ್ವಕಾಯ ವಾಙ್ಮನೋಯೋಗಪರಿಸ್ಪಂದಕ್ರಿಯಾವ್ಯಾಪಾರಮಪ್ಪ ಸಮುಚ್ಛಿನ್ನಕ್ರಿಯಾನಿವೃತ್ತಿಯೆಂಬ ಚತುರ್ಥಪರಮಶುಕ್ಲಧ್ಯಾನದೊಳೆ ನಿಂದು ಸಂಶುದ್ಧಸರ್ವಾ ಶ್ರವಂ ಸಂಪೂರ್ಣಸಕಲಶೀಲ ಗುಣಸಮಾಜಂ ನಿಜೋಪರತಿಸಮಯ ದೊಳನ್ಯತರವೇದನೀಯದೇವಗತಿ ತತ್ಪ್ರಯೋಗ್ಯಾನುಪೂರ್ವಶರೀರಬಂಧನಸಂಘಾತ ವರ್ಣರಸಪ್ರತ್ಯೇಕಪಂಚಕಸಂಹನನಸಂಸ್ಥಾನಷಟ್ಕಗಂಧ ದ್ವಿತೀಯಾಂಗೋಪಾಂಗದ್ವಿತೀಯ ವಿಹಾಯೋಗತಿಸ್ಪರ್ಶಾಷ್ಟಕಾ ಗುರುಲಘುಚತುಷ್ಕಶುಭಾ ಶುಭ ಸ್ಥಿರಾಸ್ಥಿರ ಸುಸ್ವರ ದುಸ್ವರ ಸುಭಗದುರ್ಭಗ ಪ್ರತ್ಯೇಕಶರೀರಯಶಸ್ಕೀರ್ತ್ಯನಾದೇಯ ನಿರ್ಮಾಣಪರ್ಯಾಪ್ತ ನೀಚೈರ್ಗೋತ್ರಂಗಳೆಂಬೞ್ಪತ್ತೆರಡುಂ ಪ್ರಕೃತಿಗಳಂ ನಿರವಶೇಷಂ ಮಾಡಿ ನಿಜಚರಮಸಮಯದೊಳವಶಿಷ್ಟಾನ್ಯತರವೇದ್ಯ ಮನುಷ್ಯಾರ್ಯುಗತಿ ತತ್ಪ್ರಯೋಗ್ಯಾ ನುಪೂರ್ವ ಪಂಚೇಂದ್ರಿಯಜಾತಿತ್ರಸನಾಮಶುಭಗಾಧೇಯಪರ್ಯಾಪ್ತಬಾದರಯಶಸ್ಕೀರ್ತ್ಯು ಚ್ಚೈರ್ಗೋತ್ರತೀರ್ಥಕರನಾಮಂಗಳೆಂಬ ಪದಿಮೂಱುಂ ಪ್ರಕೃತಿಗಳುಮನುನ್ಮೂಳಿಸಿದಂ ಇಂತು-

ಮ || ವಿ || ಪರಮಧ್ಯಾನಮಣಿಪ್ರದೀಪದಿನಘೌಘಧ್ವಾಂತಮೞ್ಕಾಡೆ ಸಾ
ರ್ತರೆ ವಿಸ್ಪಷ್ಟಗುಣಾಷ್ಟಕಂ ವಿಗತಕಿಟ್ಟಪ್ರಸ್ತರಸ್ವರ್ಣಭಾ
ಸುರಸಂಶುದ್ಧನಿಜಸ್ವರೂಪನಭವಂ ಚಂದ್ರಪ್ರಭಸ್ವಾಮಿ ಮು
ಕ್ತಿರಮಾಸಂಗಮಸೌಖ್ಯಮಂ ನೆಱೆಯೆ ಪೆತ್ತಂ ನಿತ್ಯಮಂ ಸ್ತುತ್ಯಮಂ || ೫೭

ಕಂ || ತಾಂ ತನ್ನಂ ತನ್ನಿಂದಾ
ದಂ ತನಗೆಡೆಮಾಡೆ ಪುಟ್ಟಿ ತನ್ನತ್ತಣಿನೆಂ
ಟುಂ ತನ್ನಯ ಗುಣಮವಿಚಳಿ
ತಂ ತನ್ನೊಳ್ ನೆಲಸೆ ನೆಲಸಿದಂ ನಿರ್ವೃತಿಯೊಳ್ || ೫೮

ಸಮನಿಸೆ ಫಾಲ್ಗುನಸಿತಸ
ಪ್ತಮಿಯಪರಾಹ್ಣಂ ಶುಭಪ್ರದಂ ಜ್ಯೇಷ್ಠೆ ತದು
ತ್ತಮಸಮಯದೊಳಪಗತಸಕ
ಳಮಳಂ ತ್ರೈಲೋಕ್ಯಶಿಖರಿಶೇಖರನಾದಂ || ೫೯

ನೆಗೞ್ದೀಷತ್ಪ್ರಾಗ್ಭಾರಂ
ಜಗತಿ ಗುಣಾಷ್ಟಕಮದಷ್ಟಮಂಗಳಮಾ ವಾ
ಯುಗಣಂ ಮಂಡಪಮಾಗಿರೆ
ಜಗನ್ನುತಂ ಮದುವೆನೆರೆದನಮೃತಶ್ರೀಯೊಳ್ || ೬೦

ಮನುಜಕ್ಷೇತ್ರದವೊಲ್ ಯೋ
ಜನಲಕ್ಷಂ ತನಗಮಗಲದೊಳ್ ನಾಲ್ವತ್ತ
ಯ್ದೆನೆ ತೋರಮೆಂಟು ಯೋ
ಜನಮೆನೆ ಸಮವೃತ್ತಂ ಕ್ರಮೋನ್ನತಂ ಶುಚಿತೇಜಂ || ೬೧

ಓರಂತೆಸೆವುದು ಲೋಕಾ
ಕಾರಶ್ರೀಗೆತ್ತಿ ನಿಂದ ಧವಳಚ್ಛತ್ರಾ
ಕಾರಮನಾಂತೀಷತ್ಪ್ರಾ
ಗ್ಭಾರಶಿಳಾವಳಯಮತುಳಶೋಭಾನಿಳಯಂ || ೬೨

ವ || ಅಂತುಷ್ಟಮಭೂಮಿಯೆನಿಸುವ ಲೋಕಶಿಖರದೊಳ್ ನಾಲ್ವತ್ತಯ್ದು ಲಕ್ಷಯೋಜನ ಸವೃ ತ್ತಮುಂ ಸಮಸ್ಥಾನಮುಂ ಸುಗಂಧಮುಂ ಸಮಗುಣಮುಂ ಅತಿಪ್ರಸಿದ್ಧಮುಂ ವಿಶುದ್ಧ ಮುಮಾಗಿರ್ದ ಸಿದ್ಧಶಿಲೆಯ ಮೇಗಣ ವಾಯುತೃತಯಭಾಗದೊಳ್ ಕಿಂಚಿನ್ಯೂನಚರಮ ಶರೀರಮಾತ್ರಜೀವಘನಾಕಾರಾನುಂ ಕ್ಷಾಯಿಕಾಸಮ್ಯಕ್ತ್ವಾನನ್ತಜ್ಞಾನದರ್ಶನಾನಂತವೀರ್ಯ ಸೂಕ್ಷ್ಮತ್ವಾವಗಾಹ ಗುರುಲಘುಕಾವ್ಯಾಬಾಧಾಷ್ಟಗುಣಮಣಿನಿಧಾನನುಂ ನಿಶ್ಚಳನುಂ ನಿರಾ ಕಾರನುಂ ನಿತ್ಯನುಂ ನಿರಂತರಸುಖನುಂ ನಿರಂಜನನುಮಾಗಿ ಸಿದ್ಧಪದವಿಯೊಳ್ ನಿಂದನ ನ್ನೆಗಮಿತ್ತಲ್

[1]-

ಶಾ || ಜ್ಯೋತಿಷ್ಕಾವಳಿ ಭಾವನಪ್ರತತಿ ವಾನೇಯವ್ರಜಂ ಕಲ್ಪಜ
ವ್ರಾತಂ ಯಾನವಿಮಾನಸೈನಿಕವಧೂವರ್ಗಾನ್ವಿತಂ ಪ್ರೋಚ್ಚಳ
ತ್ಕೇತುಚ್ಛತ್ರಕದಂಬಚುಂಬಿತನಭೋಭಾಗಂ ಸ್ಫರುದ್ಭೂಷಣೋ
ದ್ದ್ಯೋತಂ ಬಂದುದು ಮಾೞ್ಪ ಕೌತುಕದಿನಾ ನಿರ್ವಾಣಕಲ್ಯಾಣಮಂ || ೬೩

ಉ || ಅಂಬರಮಾವಗಂ ನೆರೆದು ತಿಂಬಿದ ದೇವನಿಕಾಯದಿಂದೆ ಚಿ
ತ್ರಂಬರೆದಂಬರಕ್ಕೆ ದೊರೆಯಾದುದು ದುಂದುಭಿರಾವದಿಂ ಪ್ರಪೂ
ರ್ಣಾಂಬುಧಿಘೋಷಮಾದ ತೆಱದಿಂದೆಸೆದೆಣ್ದೆಸೆಯಿರ್ದುದೇಂ ಮಹಾ
ಡಂಬರಮಾಯ್ತೊ ಬರ್ಪ ಬರವಂದು ಸಮಸ್ತಸುರೇಂದ್ರಬೃಂದದಾ || ೬೪

ವ || ಅಂತು ಬರ್ಪಲ್ಲಿ-

ಕಂ || ಕಳಶಮನಂಸದ ಕೆಲದೊಳ್
ಜಳರುಹಗಂಧಾಂಬುಪೂರ್ಣಮಂ ಕರತಳದಿಂ
ತಳೆದಮರರಮಣಿ ನಿಜಕುಚ
ಕಳಶದೆ ಚೆಲ್ವಿಂಗೆ ಮಾಡಿದಳ್‌ ಸಂಗಡಮಂ || ೬೫

ಅಳವಡೆ ಕೇಸರರಸಮಂ
ಪಳಿಕಿನ ಶುಕ್ತಿಕೆಯೊಳಾಂತ ಕಾಂತೆ ಕರಂ ಕ
ಣ್ಗೊಳಿಸಿದಳುದಯದ ಕೆಂಪಡ
ರ್ದೆಳವೆಱೆಯಂ ತಳದೊಳಿಕ್ಕಿ ತೋಱುವ ತೆಱದಿಂ || ೬೬

ಭರತಸಿತಾಕ್ಷತಕುಳಮಂ
ಪರಿಯಣಮಂ ತಳೆದು ಬರ್ಪ ಸುರವಧುವಗೆವೊ
ಯ್ದಿರಿಸಿಟ್ಟ ಪುಣ್ಯಬೀಜಾಂ
ಕುರಪಾತ್ರಮನಾಂತ ಲಕ್ಷ್ಮಿಯಂ ನೆನೆಯಿಸಿದಳ್ || ೬೭

ಮುರಿಪಿದ ಕರಂಬಬಾಸಿಗ
ದೆರಡುಂ ಕಡೆಯಂ ವಿಳಾಸವತಿ ಪಿಡಿದೆರಡುಂ
ಕರದಿನನುಕರಿಸಿದಳ್‌ ಸುರ
ಕರಾಸನಶ್ರೀಯನಾಳ್ದ ಗಗನಶ್ರೀಯಂ || ೬೮

ಅನಿಮಿಷಕಾಂತೆ ಸುಧಾಶನ
ವಿನಿಹಿತಮಂ ಪೊನ್ನ ಬೋನಮಂ ಪೊತ್ತು ಬರು
ತ್ತೆನಸುಂ ಪೋಲ್ತೆಸೆದಳ್‌ ಭೋ
ಜನಾಂಗಮಂ ಕಲ್ಪಲತೆಯನಾ ವ್ಯತಿಕರದೊಳ್ || ೬೯

ನಂದನಮಣಿದೀಪೋತ್ಕರ
ದಿಂದೆಸೆವಾರತಿಯನಾಂತು ಬರ್ಪಮರಿ ಮನ
ಕ್ಕಂದೊಪ್ಪಿದಳಲರ್ಗೊಂಚಲೊ
ಳೊಂದಿದ ಬಂಧೂಕಲತಿಕೆಯಂದದಿನೊರ್ವಳ್‌ || ೭೦

ಮಿಳಿರ್ದು ಸಿತಾಗರುಧಾಮಾ
ವಳಿ ಮೊಗದಿಂದೊಗೆವ ಧೂಪಘಟಮದೊರ್ವಳ್
ತಳೆದಮರಿ ತಮಾಳದ ತಳಿ
ರ್ಗಳಸಮನಂದಾಂತ ಸಂದೆಗಕ್ಕೆಡೆಯಾದಳ್ || ೭೧

ಪರಿನಿರ್ವಾಣೋತ್ಸವತ
ತ್ಪರತೆಯಿನೇೞ್ತರ್ಪ ಸಮಯದೊಳ್ ಪುಣ್ಯಪರಂ
ಪರೆ ಕೆಯ್ಯೊಳ್ ಫಳಯಿಸಿದಂ
ತಿರೆ ಫಳಮಂ ತಳೆದು ತತ್ತಳೋದರಿಯೆಸೆದಳ್‌ || ೭೨

ವ || ಅಂತನೂನದೇವನಿಕಾಯಂಬೆರಸಮರರಾಜಂ ಬಂದು ಸಮ್ಮೇದಮೇದಿನೀಧರಶಿಖರ ದೊಳವತರಿಸಿ-

ಕಂ || ಜಯಜಯಜಯ ದುರಿತಾಂತಕ
ಜಯಜಯಜಯ ವಿಮಳಬೋಧ ಜಯಜಯಜಯ ನಿ
ರ್ವ್ಯಯ ಲಕ್ಷ್ಮೀಪತಿ ಜಯ ಜಯ
ಜಯ ಚಂದ್ರಪ್ರಭಜಿನೇಂದ್ರ ವಿಫಟಿತತಂದ್ರಾ || ೭೩

ವ || ಎಂದಭಿವಂದಿಸುತ್ತುಂ ಗೀರ್ವಾಣನಾಯಕಂ ಸರ್ವಜ್ಞಪರಿನಿರ್ವಾಣ ಕ್ಷೇತ್ರಮನತಿಪವಿತ್ರ ಮಂ ತ್ರಿಪದಕ್ಷಿಣಂಗೆಯ್ದು ಬೞಿಯಂ ಸಮಸ್ತಪ್ರಶಸ್ತವಸ್ತುಗಳಿಂ ತತ್ಪ್ರದೇಶಪೂಜೆಯಂ ವಿರಾಜಿಪಂತು ಮಾಡೆ-

ಚಂ || ತಣಿಯದು ಕಲ್ಪಭೂಜತತಿಯಿತ್ತು ಸುರಾಸುರಕೋಟಿ ತಂದಣಂ
ತಣಿಯದು ಕೈಗೆ ನೀಡಿ ತಣಿಯಳ್ ಶಚಿ ಪೂಜಿಸಿ ನಾಕಿನಾಯಕಂ
ತಣಿಯನಶೇಷಪುಷ್ಪಫಳಚಂದನವಸ್ತ್ರವಿಭೂಷಣಾರ್ಚನಾ
ಗಣಮನದೇಂ ಜಿನೇಂದ್ರಪರಿನಿರ್ವೃತಿಪೂಜೆಯಗುರ್ವುವೆತ್ತುದೋ || ೭೪

ವ || ಆ ನಿರ್ವಾಣಕಲ್ಯಾಣಪೂಜಾಕರಣಾನಂತರಂ-

ಕಂ || ರಸಭಾವಾಭಿನಯಂ ನೋ
ೞ್ಪ ಸಮಸ್ತಸ್ವರ್ಗಿಜನದ ಕಣ್ಗಂ ಮನಕಂ
ಪೊಸತಾಗೆ ರಾಗದಿಂ ನಟಿ
ಯಿಸಿದಂ ಪುರುಹೂತನಾತ್ಮಕುತಪಸಮೇತಂ || ೭೫

ಮ || ಸ್ರ || ಕೃತಕೃತ್ಯಂ ಬುದ್ಧಬೋಧ್ಯಂ ಬಗೆಮೊಡೆ ದಿಟದಿಂ ಸಿದ್ಧಸಾಧ್ಯಂ ದಲೆಂಬು
ನ್ನತಿಯಂ ಕೈಕೊಂಡು ಮುಂ ಮಾಡಿದ ಪರಮತಪಂ ಮತ್ತೆ ತಾಂ ಪೆತ್ತ ಬೋಧೋ
ದ್ಗತಿಯೀಗಳ್ ಸಾರ್ದಶಾಶ್ವತ್ಪದಮಱಿಪಲೆ ಸಾಲ್ದಿರ್ದುವಿನ್ನಪ್ಪುದಿನ್ನು
ನ್ನತಿಯೇನೆಂದಿಂದ್ರನಿಂದುಪ್ರಭನ ಮಹಿಮೆಗಂ ವಿಸ್ಮಿತ ಸ್ವಾಂತನಾದಂ || ೭೬

ವ || ಆಗಿ ಮತ್ತಂ-

ಸ್ರ || ಶ್ರೀಮನ್ಮಂದಾರಧಾರಾನಿಕರಪರಿವೃತಂ ದಿವ್ಯವಾಗ್ವಿಸ್ತರಾಂಶು
ಸ್ತೋಮಪ್ರದ್ಯೋತಿತಾಶಾಂಬರಪಥನಮಳಜ್ಞಾನಪೀಯೂಷಗರ್ಭಂ
ವ್ಯಾಮೃಷ್ಟಾಂಹಸ್ತಮಂ ಸಂಭೃತಕುಮುದವನಂ ಮಾೞ್ಕೆ ಚಂದ್ರಪ್ರಭಂ ಪ್ರೋ
ದ್ದಾಮಶ್ರೀಪಾದಸೇವೋತ್ಸವಮನೆ ಜಿನಪಂ ಹೃಚ್ಚಕೋರಕ್ಕೆ ನಮ್ಮಾ || ೭೭

ವ || ಎಂದು ಬೞಿಯಂ ಗಣಧರಪಾದಾರವಿಂದಂಗಳಂ ವಂದನಾರ್ಚನಾವಿಧಾನದಿನಾರಾಧಿಸಿ ತೀರ್ಥಭೂತಮಂ ಸಮ್ಮೇದಪರ್ವತಮಂ ಪ್ರದಕ್ಷಿಣೀಕರಿಸಿ ಪೋಪವಸರದೊಳರ್ಹದಾಗ ಮದಿನಱಿದವಸರ್ಪಣದ ಕಡೆಯಕಾಲದೊಳಪ್ಪ ತೀರ್ಥಕರಬಿಂಬಂಗಳಂ ತದ್ವರ್ಣೋ ತ್ಸೇಧಲಕ್ಷಣೋಪಲಕ್ಷಿತಂಗಳುಂ ರತ್ನಮಯಂಗಳುಮಾಗೆ ಭರತಸಗರಚಕ್ರಿಗಳ್ ಮುನ್ನಮೆ
ಮಾಡಿಸಿದುವಂ ತತ್ಪರ್ವತಾಪತ್ಯಕದ ಚೈತ್ಯಾಗಾರಂಗಳೊಳ್ ಕಂಡು ಶತಮುಖಪುಣ್ಯಾರ್ಜ
ನೋನ್ಮುಖನಭಿಮುಖನಾಗಿ-

|| ಶ್ಲೋಕಂ ||
ಶ್ರೀನಿಕೇತಾಯಿತಾತ್ಮಾಂಘ್ರಿನೀರಜಂ ನೀರಜೋವ್ರಜಂ
ಆದ್ಯಂತಶೂನ್ಯಮಾದ್ಯಂತಂ ವಂದೇಹಂ ವೃಷಭಂ ವಿಭುಂ || ೧

ಅಜಿತಂ ವಿಜಿತಾಶೇಷವೃಜಿನಂ ಜಿನಪಂ ಸ್ತುವೇ
ದ್ವಿತೀಯಮದ್ವಿತೀಯೋರುವಿಭವಂ ವಿಭವಶ್ರಿಯೇ || ೨

ಸಂಭವಂ ನಿರ್ಜಿತಸ್ವಾಂತಸಂಭವಂ ಭುವನಾಧಿಪಂ
ತೃತೀಯಂ ನೌಮಿ ನೌರೂಪಂ ಭವ್ಯಾನಾಂ ಭವವಾರಿಧೌ || ೩

ಅಭಿನಂದಿನತಾನಂದಮಭಿನಂದೇಭಿನಂದನಂ
ಚತುರ್ಥಂ ತೀರ್ಥನಾಥಾನಾಂ ಮನ್ಮಥೋತ್ಸೇಕಮಾಥಿನಾಂ || ೪

ಸುಮತಿಂ ಸುಮತಿಂ ತ್ಯಕ್ತ್ವಾಪ್ರವ್ರಜ್ಯಾರಾಜ್ಯಮಾಶ್ರಿತಂ
ಪಂಚಮಂ ಗತಿಮುದ್ದಿಶ್ಯ ಪಂಚಮಂ ನೌಮ್ಯಪಂಚಮಂ || ೫

ಸಪ್ರಭಾವಂ ಸ್ತುವೇ ದೇವಂ ಪದ್ಮಪ್ರಭಮುರುಪ್ರಭಂ
ಅಶ್ರಾಂತಶಾಂತಿಶಾರೀರಸೌಷ್ಠವಂ ಷಷ್ಠಮಿಷ್ಟದಂ || ೬

ಸುಪಾರ್ಶ್ವಂ ಪದಪಾರ್ಶ್ವಸ್ಥಸೇವಾಗತಸುರಾಧಿಪಂ
ಸಪ್ತಮಂ ಲುಪ್ರಸಂಸಾರಂ ನಮಾಮ್ಯುದ್ದೃಪ್ತಸದ್ಗುಣಂ || ೭

ಅಷ್ಟಮೀಂ ಪೃಥಿವೀಂ ವೇಷ್ಟುಮಿಚ್ಚುರ್ವಂದೇಹಮಷ್ಟಮಂ
ಚಂದ್ರಪ್ರಭಂ ಪ್ರಭೂತಾಷ್ಟಪ್ರಾತಿಹಾರ್ಯಮನೋಹರಂ || ೮

ಪುಪ್ಟದಂತಮಘದ್ವಾಂತಪುಷ್ಪವಂತಂ ಸ್ತುವೇಭವಂ
ನವಮಂ ನವಮಂದಾರಸ್ಮೇರಪ್ರಸವವರ್ಷಿಣಂ || ೯

ಚತುರ್ಗತಿಭ್ರಮಾಯಸ್ತಜನಶೀತಳವಾಙ್ಮಯಂ
ಶೀತಳಂ ನೌಮಿ ದಶಮಂ ಸಶಮಂ ಶಮನಾಪಹಂ || ೧೦

ಶ್ರೇಯೋಜಿನಂ ಜನಶ್ರೇಯಃಪ್ರದಮಕ್ಷಯಸಂಪದಂ
ಏಕಾದಶಂ ಸಮಾರೂಢಾಶೇಷಪುಣ್ಯದಶಂ ಸ್ತುವೇ || ೧೧

ವಾಸವಾಕಲ್ಪಿತಾಕ್ಷೂಣನಿಜಕಲ್ಯಾಣಪಂಚಕಂ
ವಾಸುಪೂಜ್ಯಂ ಜಗಜ್ಜ್ಯೇಷ್ಠಂ ವಂದೇಹಂ ದ್ವಾದಶಂ ವೃಷಂ || ೧೨

ವಿಮಲಂ ವಿಮಲಜ್ಞಾನಭಾನೋದಯಮಹಾಚಲಂ
ನೌಮಿ ತ್ರಯೋದಶಂ ಲೋಕತ್ರಯರಕ್ಷಕಮಕ್ಷಯಂ || ೧೩

ಅನಂತಂ ಸಹಜಾನಂತಚತುಷ್ಣಯವಿ
ಅನೇಕಾಂತರಮಾಕಾಂತಂ ನಮಾಮಿಶಂ || ೧೪

ಧರ್ಮಂ ಧರ್ಮಾಮೃತಾಸಾರಪರ್ಜನ್ಯಂ ನಿರ್ಜಿತೈನಸಂ
ವಂದೇ ಪಂಚದಶಂ ಚಂಚತ್ಪಂಚಮಜ್ಞಾನಸಂಚಿತಂ || ೧೫

ಷೋಡಶಂ ತೀರ್ಥನಾಥಾನಾಂ ಪಂಚಮಂ ಚಕ್ರವರ್ತಿನಾಂ
ಅಗಣ್ಯಪುಣ್ಯಶಾಂತೀಶಂ ವಂದೇಹಮಘಶಾಂತಯೇ || ೧೬

ಕುಂಥುಂ ಕುಂಥ್ವಾದಿಸತ್ವಾನಾಂ ದಯ್ಯೆಕಮಯವರ್ತನಂ
ನೌಮಿ ಸಪ್ತದಶಂ ಪ್ರಾಪ್ತಪರಮಸ್ಥಾನಸಪ್ತಕಂ || ೧೭

ನೌಮಿ ಪಂಚಶರೋಗ್ರಾರಿಶರಾರುಮರಮೆವ್ಯಯಂ
ಅಷ್ಟಾದಶಂ ವಿನಿರ್ಮುಕ್ತತತ್ಸಂಖ್ಯಾದೋಷದೂಪಣಂ || ೧೮

ಮಲ್ಲಿಂ ವಿದ್ರಾವಿತಾನಂಗಮಲ್ಲಂ ತಲ್ಲಂ ದಯಾಂಭಸಂ
ಏಕೋನವಿಂಶಂ ತೀರ್ಥೇಶಂ ಸ್ತುವೇ ಭಕ್ತ್ಯಾತಿಶಕ್ತಯಾ || ೧೯

ಸುವ್ರತಂ ಮೋಕ್ಷಸೌಧಾಗ್ರನಿಶ್ರ್ಶೇಣೀಕೃತಸುವ್ರತಂ
ವಿಂಶಂ ತೀರ್ಥಕರಂ ವಂದೇ ದಯಾರಸಜಲಾಕರಂ || ೨೦

ನಮಿಂ ನಮಿತದೇವೇಂದ್ರಂ ನೌಮಿ ನಿತ್ಯಂ ನಿರತ್ಯಯಂ
ಏಕವಿಂಶಂ ಗಳದ್ರಾಗಂ ಜನ್ಮವಾರಾಶಿಪಾರಗಂ || ೨೧

ಧರ್ಮಚಕ್ರದೃಢಾಯತ್ತನೇಮಿಂ ನೇಮಿಂ ನಮಾಮ್ಯಹಂ
ದ್ವಾವಿಂಶತಿತಮಂ ಧ್ವಸ್ತದ್ವಾವಿಂಶತಿಪರೀಷಹಂ || ೨೨

ದುಷ್ಕರ್ಮಕರ್ಮಠಕ್ರೂರಕಮಠಾಶ್ಚರ್ಯಧೈರ್ಯಕಂ
ಪಾರ್ಶ್ವೇಶ್ವರಂ ತ್ರಯೋವಿಂಶತಮಂ ಸ್ತೌಮೀಶಸತ್ತಮಂ || ೨೩

ಚತುರ್ವಿಂಶಂ ಜಿನಂ ಜನ್ಮಸಿಂಧುಸೇತೂಕೃತವ್ರತಂ
ವರ್ಧಮಾನಮಧಿಜ್ಞಾನವೃದ್ಧಂ ವಂದೇ ಸಮೃದ್ಧಯೇ || ೨೪

|| ವಸಂತತಿಲಕಂ ||
ಪುಣ್ಯಾಮೃತಸ್ತವನಮಗ್ಗಳಸೂರಿಸೂಕ್ತ
ಮತ್ಯಂತಭಕ್ತಿಪರತಂತ್ರಧಿಯಾ ಪಠೇದ್ಯಃ
ಸಪ್ರಾಪ್ನುಯಾದನಘತೀರ್ಥಕೃತಾಂ ಪ್ರಸಾದಾ
ದಾಮುತ್ರಿಕಂ ಚ ಸುಖಮೀಹಿತಮೈಹಿಕಂ ಚ || ೨೫

ವ || ಅಂತತ್ಯಂತಭಕ್ತಿಯಿಂ ಸ್ತುತಿಯಿಸಿ ಮತ್ತಮಿಂತೆಂದಂ:-

ಮ || ವಿ || ಘನಕೈಲಾಸದೊಳತ್ಯುದಾತ್ತವೆನಿಪೀ ಸಮ್ಮೇದದೊಳ್ ಚಂಪೆಯೊಳ್
ವನಲೀಲಾಮಿಳಿತೋರ್ಜಯಂತಗಿರಿಯೊಳ್ ತತ್ಪಾವೆಯೊಳ್ ಧಾತ್ರಿ ಜೀ
ಯೆನೆ ನಿರ್ವಾಣಪದಕ್ಕೆ ಸಂದ ಸಲಲಿರ್ದಾವಿಶ್ವತೀರ್ಥೇಶರೀ
ಗನಘರ್ ಭವ್ಯಜನಕ್ಕೆ ಮಂಗಳಮಹಾಶ್ರೀಯಂ ನಿಜಶ್ರೀಯುಮಂ || ೭೮

ವ || ಎಂದು ಸಕಳಾಮರೇಂದ್ರಬೃಂದಮಂ ನಿಜಮಂದಿರಕ್ಕೆ ಪೋಗಲ್ವೇೞ್ದು-

ಮ || ಸ್ರ || ಕ್ರಮದಿಂ ನಿರ್ವಾಣಕಲ್ಯಾಣಮನೊಡರಿಸಿದಂ ಶ್ರೀಜಿನಸ್ತೋತ್ರಕಲ್ಪ
ದ್ರುಮಮೆಯ್ದಿತ್ತೆಯ್ದೆ ಸಾಫಲ್ಯಮನಭಿಮತಸಂಸಿದ್ಧಿಯಂ ಪೆತ್ತೆನಿಂದೆಂ
ದಮಳಂ ಸದ್ಧರ್ಮಶೀಳಂ ವಿಬುಧಪತಿ ಸಮಂತಗ್ಗಳಂ ಪೆರ್ಚೆ ರಾಗಂ
ಸುಮನೋಲೋಕಕ್ಕೆ ಸಂದಂ ಸುಲಲಿತಕವಿತಾನರ್ತಕೀನೃತ್ಯರಂಗಂ || ೭೯

ಚಂ || ಪ್ರಮುದಿತಭವ್ಯಮಂ ಸುಕವಿಸಂಕುಳಸೇವ್ಯಮನಾಪ್ತತತ್ವವಿ
ತ್ಸಮುದಯಭಾವ್ಯಮಂ ಸಕಳಸತ್ಕೃತಿನವ್ಯಮನೀ ಜಿನಾನ್ವಯ
ಕ್ರಮಯುತಕಾವ್ಯಮಂ ನೆಱೆಯೆ ನಿರ್ಮಿಸಿ ಮಿರ್ಮಳಭಕ್ತಿಭಾವದಿಂ
ದಮಳಿನಕೀರ್ತಿಗಂ ಸುಕೃತಪೂರ್ತಿಗಮಗ್ಗಳನಂತು ನೋಂತರಾರ್ || ೮೦

ಕಂ || ಚಂದ್ರಪ್ರಭಚರಿತಮನಾ
ಚಂದ್ರಾರ್ಕಸ್ಥಾಯಿಯಿಂತಿದೆನೆ ಪೇೞ್ದು ಶರ
ಚ್ಚಂದ್ರೋಜ್ಜ್ವಳಕೀರ್ತಿಗೆ ಸುಕ
ವೀಂದ್ರಂ ನೆಲೆಯಾದನಾದಮಗ್ಗಳದೇವಂ || ೮೧

ಆತ್ರಿಭುವನೈಕಗುರುವ ಚ
ರಿತ್ರಾಬ್ಧಿಯ ಪಾರಮೆಯ್ದಿದಂ ಸ್ವೀಕೃತರ
ತ್ನತ್ರಿತಯನಗ್ಗಳಂ ಸಾಂ
ಯಾತ್ರಿಕನೆನೆ ಸಂದ ಮತಿಬಹಿತ್ರದ ಬಲದಿಂ || ೮೨

ಅಸಹಾಯತೆಯಿಂ ಸಂಸಾ
ರಸಮುದ್ರಮನೀಸಿದಂ ಶಶಿಪ್ರಭನೆಂತಂ
ತಸಹಾಯತೆಯಿಂ ತಚ್ಚರಿ
ತಸಮುದ್ರಮನೀಸಿ ಜಸಮನಗ್ಗಳನಾಂತಂ || ೮೩

ಪರಮೇಶ್ವರಕೀರ್ತಿಸುಧಾ
ಕರಬಿಂಬದೊಳಮರ್ದು ತೋರ್ಪ ಷೋಡಶಕಲೆಯೊಳ್
ದೊರೆಯಾದುವು ಚಂದ್ರಪ್ರಭ
ಪುರಾಣದೊಳ್ ನೆಗೞ್ದ ಷೋಡಶಾಶ್ವಾಸಂಗಳ್ || ೮೪

ಏಕಾದಶಶತಮುಂ ಮ
ತ್ತೇಕಾದಶಮಾಗೆ ಶಕನೃಪಾಬ್ದಂ ಸೌಮ್ಯ
ಪ್ರಾಕಟವರ್ಷದ ಚೈತ್ರಸಿ
ತೈಕಾದಶಿಯಂದು ನೆಗೞ್ದುದೀಕೃತಿರತ್ನಂ || ೮೫

ಗದ್ಯಂ
ಇದು ಪರಮಪುರುನ್ನಾಥಕುಲಕುಭೃತ್ಸಮುದ್ಭೂತಪ್ರವಚನಸರಿತ್ಸರಿನ್ನಾಥ
ಶ್ರುತಕೀರ್ತಿತ್ರೈವಿದ್ಯಚಕ್ರವರ್ತಿ ಪದಪದ್ಮನಿಧಾನದೀಪವರ್ತಿ
ಶ್ರೀಮದಗ್ಗಳದೇವ
ವಿರಚಿತಮಪ್ಪ
ಚಂದ್ರಪ್ರಭಪುರಾಣದೊಳ್‌
ನಿರ್ವಾಣಕಲ್ಯಾಣ ವರ್ಣನಂ
ಷೋಡಶಾಶ್ವಾಸಂ

ಚಂದ್ರಪ್ರಭಪುರಾಣಂ ಸಮಾಪ್ತಂ

 


[1] ಸಮತಳಸಮತೇಜಮಯಂ
ಸಮವೃತ್ತಂ ಸುಖಮಯಂ ವಿಶುದ್ಧವಿಶಾಲಂ
ಸಮಲಕ್ಷ್ಮೀಮಣಿಪೀಠಂ
ಸಮಲೋಕೋತ್ತಂಸಮಾಯ್ತು ಸಿದ್ಧಕ್ಷೇತ್ರಂ ||

೬೨ನೆಯ ಪದ್ಯವಾದ ಮೇಲೆ ಬರುವ ಈ ಪದ್ಯ ಗ್ರಂಥಕರ್ತನದಲ್ಲವೆಂದು ತೋರುತ್ತದೆ.