ಪಾರಿಭಾಷಿಕಪದಕೋಶ

ಅಘಾತಿ : ಜೀವದ ಅನಂತಜ್ಞಾನಾದಿ ಗುಣಗಳಿಗೆ ಬಾಧಕವಾಗುವ ನಾಲ್ಕು ಕರ್ಮಗಳು : ವೇದನೀಯ, ಆಯು, ನಾಮ ಮತ್ತು ಗೋತ್ರ.

ಅಣಿಮಾ : ತಪಸ್ಸಿನಿಂದ ದೊರಕುವ ಅಣಿಮೆ, ಮಹಿಮೆ, ಗರಿಮೆ, ಲಘಿಮೆ, ಪ್ರಾಪ್ತಿ, ಪ್ರಾಕಾಮ್ಯ, ಈಶತ್ವ, ವಶಿತ್ವ, ಎಂಬ ಎಂಟುಸಿದ್ಧಿಗಳಲ್ಲಿ ಒಂದು; ಅತ್ಯಂತ ಸೂಕ್ಷ್ಮವಾದ ರೂಪವನ್ನು ಹೊಂದಬಲ್ಲ ಶಕ್ತಿ.

ಅಧಃಪ್ರವೃತ್ತಕರಣ : ಕರಣವೆಂದರೆ ಪರಿಣಾಮ. ನಾನಾ ಜೀವಾಪೇಕ್ಷೆಯಿಂದ ಉತ್ತರ ಪರಿಣಾಮಗಳು ಪೂರ್ವಪರಿಣಾಮಗಳೊಡನೆ ಸಾದೃಶ್ಯವನ್ನು ಹೊಂದುವುದಕ್ಕೆ ಅಧಃಪ್ರವೃತ್ತಕರಣವೆಂದು ಹೆಸರು. ಭಿನ್ನ ಸಮಯದಲ್ಲಿರುವ ಜೀವಗಳ ಪರಿಣಾಮಗಳು ಪೂರ್ವಪರಿಣಾಮಗಳೊಡನೆ ಸಾದೃಶ್ಯ ಹೊಂದದೆ ನವೀನವಾಗಿರುವುದಕ್ಕೆ ಅಪೂರ್ವಕರಣವೆಂದು ಹೆಸರು. ನಾನಜೀವಗಳ ಪರಿಣಾಮಗಳು ಪ್ರತಿಸಮಯದಲ್ಲಿಯೂ ಪರಸ್ಪರ      ಸದೃಶ್ಯವಾಗಿರುವುದಕ್ಕೆ ಅನಿವೃತ್ತಿಕರಣವೆಂದು ಹೆಸರು. ಇವು ಮೂರು ೭. ೮. ೯ನೆಯ ಗುಣಸ್ಥಾನಗಳ ಕ್ರಮವಾದ ಹೆಸರುಗಳಾಗಿವೆ.

ಅನಂತಚತುಷ್ಟಯ: ತೀರ್ಥಂಕರನಿಗೆ ಲಭಿಸುವ ಅನಂತಜ್ಞಾನ, ಅನಂತ ದರ್ಶನ, ಅನಂತಸುಖ ಮತ್ತು ಅನಂತವೀರ್ಯ ಎಂಬ ನಾಲ್ಕು ಗುಣಗಳು.

ಅನುತ್ತರೆ : ಲೋಕಾಕಾರದ ತುದಿಯ ನೆಲೆಯಲ್ಲಿರುವ ವಿಜಯ, ವೈಜಯಂತ, ಜಯಂತ,       ಅಪರಾಜಿತ ಮತ್ತು ಸರ್ವಾರ್ಥಸಿದ್ಧಿಯೆಂಬ ಐದು ವಿಮಾನಗಳು.

ಅನುಬದ್ಧಕೇವಳಿ : ಗೌತಮ ಗಣಧರ, ಸುಧರ್ಮಾಚಾರ್ಯ ಮತ್ತು ಜಂಬೂಸ್ವಾಮಿ ಎಂಬ ಮೂವರು ಕೇವಲಜ್ಞಾನಿಗಳು.

ಅನುಯೋಗಚತುಷ್ಟಯ : ಜೈನಾಗಮದ ನಾಲ್ಕು ವಿಭಾಗಗಳು; ಪ್ರಥಮಾನುಯೋಗ, ಕರಣಾನುಯೋಗ, ಚರಣಾನುಯೋಗ ಮತ್ತು ದ್ರವ್ಯಾನುಯೋಗ.

ಅನೇಕಾಂತ : ಪ್ರತಿಯೊಂದು ವಸ್ತು ತನ್ನ ದ್ರವ್ಯ, ಕ್ಷೇತ್ರ, ಕಾಲ, ಭಾವಗಳಿಗೆ ಅನುಸಾರವಾಗಿ ಅಸ್ತಿ (ಭಾವರೂಪ), ನಾಸ್ತಿ (ಅಭಾವರೂಪ), ನಿತ್ಯ, ಅನಿತ್ಯ, ಏಕ, ಅನೇಕ ಹೀಗೆ ಬೇರೆಬೇರೆಯಾಗಿ ಇರುವುದೆಂದು ವಿವರಿಸುವ ಜಿನವಾಣಿಗೆ ಅನೇಕಾಂತವೆಂಬ ಹೆಸರು. ವಸ್ತುವಿನ ಸಮಸ್ತಧರ್ಮಗಳನ್ನು ಒಟ್ಟಿಗೆ ನಿರೂಪಿಸುವ ಏಕಾಂತವಾದಕ್ಕೆ ಪ್ರಮಾಣವಾದವೆಂದೂ, ಒಂದು ನಯದಿಂದ ಒಂದೊಂದೇ ಧರ್ಮವನ್ನು ನಿರೂಪಿಸುವುದು ಸ್ಯಾದ್ವಾದವೆಂದೂ ಹೆಸರು.

ಅಪ್ರಮತ್ತ ಗುಣಸ್ಥಾನ : ’ಜೀವ’ ಕ್ರಮಕ್ರಮವಾಗಿ ಮೋಕ್ಷಕ್ಕೆ ಏರುವ ಹಂತಗಳನ್ನು ಸೂಚಿಸುವ ೧೪ ಗುಣಸ್ಥಾನಗಳಲ್ಲಿ ಇದು ಏಳನೆಯ ಗುಣಸ್ಥಾನ. ಅನ್ಯಕಷಾಯಗಳ ಉದಯವಾಗದೆ, ಕೇವಲ ಸಂಜ್ವಲನಕಷಾಯ ಹಾಗು ಹಾಸ್ಯಾದಿ ನೋಕಷಾಯಗಳ ಮಂದವಾದ ಉದಯವಿರುವ ಸ್ಥಿತಿ, ಈ ಗುಣಸ್ಥಾನ.

ಅಭಿಯೋಗ್ಯ : ಇಂದ್ರನ ಪರಿವಾರದೇವತೆಗಳಲ್ಲಿ ಒಂದು ವರ್ಗ. ಸೇವಕರಿಗೆ ಮತ್ತು ಭೃತ್ಯರಿಗೆ ಸಮಾನರಾದ ದೇವತೆಗಳು.

ಅಷ್ಟಮಭೂಮಿ : ಸಿದ್ಧರು ವಾಸಮಾಡುವ ಲೋಕಭಾಗ. ‘ಸವಾರ್ಥಸಿದ್ಧಿ’ಗೆ ಹನ್ನೆರಡು ಯೋಜನೆ ಮೇಲೆ, ಮನುಷ್ಯಕ್ಷೇತ್ರದಷ್ಟೆ ವಿಶಾಲವಾಗಿರುವ ಭೂಮಿ. ಈಷತ್ ಪ್ರಾಗ್ಭಾರವೆಂದೂ ಇದಕ್ಕೆ ಹೆಸರುಂಟು. ಜನ್ಮ, ವಾರ್ಧಕ್ಯ, ಮರಣ, ಭಯ, ಸಂಯೋಗ, ವಿಯೋಗ, ದುಃಖ, ರೋದನ ಮೊದಲಾದ ಯಾವುದೇ ವಿಕಾರವಿಲ್ಲದೆ ನಿರಂತರವಾದ ಅತೀಂದ್ರಿಯಸುಖ ಹಾಗು ಅನಂತಜ್ಞಾನಗಳಿರುವ ಭೂಮಿ.

ಅಷ್ಟಾಹ್ನಿಕಪೂಜೆ : ಅಷ್ಟಮಿಯಿಂದ ಹುಣ್ಣಿಮೆಯವರೆಗೆ ಶ್ರಾವಕರು ಮಾಡುವ ಎಂಟು ದಿನಗಳ ಜಿನಪೂಜೆ.

ಆತ್ಮರಕ್ಷಕ :ಇಂದ್ರನಾದವನಿಗೆ ಇರುವ ಪರಿವಾರದೇವತೆಗಳಲ್ಲಿ ಒಂದು ವರ್ಗ. ಅರಸನಿಗೆ     ಮೈಗಾವಲಾಗಿ ಖಡ್ಗಧಾರಿಗಳಾಗಿ ನಿಲ್ಲುವ ಅಂಗರಕ್ಷಕರಂತೆ ಇಂದ್ರನ ಸಮೀಪದಲ್ಲಿರುವ ದೇವತೆಗಳು. ಇಂದ್ರನಿಗೆ ಶತ್ರುಬಾಧೆಯಿಲ್ಲವಾದುದರಿಂದ ಇವರು ಇರುವುದು ಆತನ ವೈಭವ ಪ್ರದರ್ಶನಕ್ಕೆ ಮಾತ್ರ.

ಆರುಅವಶ್ಯಕಗಳು : ೧. ಸಾಮಾಜಿಕ-ಎಲ್ಲ ಜೀವಗಳಲ್ಲಿಯೂ ಸಮತ್ವ ಭಾವನೆ. ೨. ಚತುರ್ವಿಂಶತಿಸ್ತವನ-ಇಪ್ಪತ್ತುನಾಲ್ಕು ತೀರ್ಥಂಕರರ ಸ್ತವನ. ೩. ವಂದನಾ-ಪಂಚಪರಮೇಷ್ಠಿವಂದನ. ೪. ಪರಿಕ್ರಮಣ-ಪ್ರತಿಕ್ರಮಣ, ಹತ್ತಿದ ದೋಷಗಳಿಗಾಗಿ ಪಶ್ಚಾತ್ತಾಪ. ೫. ಪ್ರತ್ಯಾಖ್ಯಾನ-ಮುಂದೆ ಇಂಥ ಪಾಪಕರ್ಮಗಳನ್ನು ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡುವುದು. ೬. ಕಾಯೋತ್ಸರ್ಗ-ದೇಹಾಭಿಮಾನವನ್ನು ಬಿಟ್ಟು ಆತ್ಮಧ್ಯಾನದಲ್ಲಿರುವುದು.

ಇಪ್ಪತ್ತೆಂಟುಮೂಲಗುಣಗಳು : ಪಂಚಮಹಾವ್ರತಗಳು (೫), ಪಂಚಸಮಿತಿಗಳು (೫), ಪಂಚೇಂದ್ರಿಯ ನಿಗ್ರಹ (೫), ಷಡಾವಶ್ಯಕಗಳು (೬), ಸ್ನಾನಾಭಾವ (೧), ಭೂಮಿಶಯನ (೧), ನಗ್ನತ್ವ (೧), ಕೇಶೋತ್ಪಾಟನ (೧), ಏಕಾಶನ (೧), ದಂತಧಾವನಾಭಾವ (೧), ಸ್ಥಿತಾಶನ (೧).

ಈರ್ಯಾಪರಿಶುದ್ಧಿ : ನಡೆಯುವಾಗ ಜೀವಹಿಂಸಾದಿ ದೋಷಗಳನ್ನು ನಿವಾರಿಸುವುದಕ್ಕಾಗಿ ನೆಲವನ್ನು ನಾಲ್ಕು ಮೊಳಗಳಷ್ಟು ಮುಂದೆ ಸೂಕ್ಷ್ಮವಾಗಿ ನೋಡುತ್ತ ಎಚ್ಚರಿಕೆಯಿಂದ ನಡೆಯುವುದು.

ಈಷತ್ ಪ್ರಾಗ್ಭಾರ : ಅಷ್ಟಮಭೂಮಿ.

ಉಪಪಾದನಿಕೇತನ : ಸ್ವರ್ಗದಲ್ಲಿ ಇಂದ್ರ ಮೊದಲಾದ ದೇವತೆಗಳು ಪೂರ್ಣ ಯೌವನವಂತರಾಗಿಯೂ, ಅಲಂಕಾರಸಹಿತರಾಗಿಯೂ ಹಾಸಿಗೆಯ ಮೇಲೆ ಮೈದಾಳುವುದಕ್ಕೆ ಉಪಪಾದನವೆಂದು ಹೆಸರು, ಹೀಗೆ ಅವರು ಹುಟ್ಟುವ ನಿವಾಸಕ್ಕೆ ಉಪಪಾದನಿಕೇತನವೆಂದು ಹೆಸರು.

ಏಕವಿಹಾರಿ : ತಪೋವೃದ್ಧನೂ, ಜ್ಞಾನವೃದ್ಧನೂ ಆಚಾರವಂತನೂ, ಆಗಮಕುಶಲನೂ ಆಗಿರುವ ವಿಶಿಷ್ಟಸಾಧುವಿಗೆ ಏಕಾಕಿಯಾಗಿ ವಿಹರಿಸಲು ಜಿನೇಶ್ವರನು ಸಮ್ಮತಿಸುತ್ತಾನೆ. ಹೀಗೆ ಒಬ್ಬಂಟಿಗನಾಗಿ ಸಂಚರಿಸುವ ಸಾಧುವಿಗೆ ಏಕವಿಹಾರಿಯೆಂದು ಹೆಸರು.

ಏಳುಬೆಸನಗಳು : ಈ ಏಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ವಾಕ್ಪಾರುಷ್ಯ, ಅರ್ಥದೂಷಣ, ದಂಡಪಾರುಷ್ಯ ಇವು ಮೂರು ಕೋಪದಿಂದ ಬಂದುವಾಗಿವೆ. ಮತ್ತೊಂದು ಕಾಮಜನ್ಯ. ಇವು ಮೃಗಯಾ, ದ್ಯೂತ, ಪಾನ, ಸ್ತ್ರೀವ್ಯಸನಗಳಾಗಿವೆ.

ಏಳುರಾಜಪ್ರಕೃತಿಗಳು : ೧. ಸ್ವಾಮಿ-ರಾಜನಿಗೆ ಇರಬೇಕಾದ ಸದ್ಗುಣಗಳಿಂದ ಕೂಡಿರುವವನು. ೨. ಅಮಾತ್ಯ-ಮಂತ್ರಿಸಂಪತ್ತು. ೩. ಜನಪದ-ಒಳ್ಳೆಯ ಪ್ರಜಾಸಂಪತ್ತು. ೪. ದುರ್ಗ-ರಾಜ್ಯರಕ್ಷಣೆಗೆ ತಕ್ಕಂತಹ ದುರ್ಗಸಂಪತ್ತು ೫. ದಂಡ-ಒಳ್ಳೆಯ ಸೈನ್ಯ. ೬. ಕೋಶ- ಧರ್ಮದಿಂದ ಗಳಿಸಿದ ಅರ್ಥಸಂಪತ್ತು ೭. ಮಿತ್ರ-ಒಳ್ಳೆಯ ಸ್ನೇಹಿತರು.

ಐದುಇಂದ್ರಿಯಗಳು : ಕಣ್ಣು, ಕಿವಿ, ಮೂಗು, ನಾಲಗೆ, ಮೆಯ್.

ಐದುಪಾಪಗಳು : ಕೊಲೆ, ಪುಸಿ, ಕಳವು, ಪರದಾರ, ಪರಿಗ್ರಹ.

ಐದುಮಹಾವ್ರತಗಳು :೧. ಅಹಿಂಸಾ-ಮನೋ ವಾಕ್ ಕಾಯಗಳಿಂದಾದ ಪ್ರಾಣಿಗೂ ಹಿಂಸೆ ಮಾಡದಿರುವುದು. ೨. ಸತ್ಯ-ಯಾವಾಗಲೂ ನಿಜವನ್ನೇ ಹೇಳುವುದು. ೩. ಅಸ್ತೇಯ- ಕದಿಯದಿರುವುದು, ತನಗಾಗಿ ಕೊಟ್ಟದ್ದು ಹೊರತು ಬೇರೆ ವಸ್ತುಗಳನ್ನು ತೆಗೆದುಕೊಳ್ಳದಿರುವುದು. ೪. ಬ್ರಹ್ಮ-ಬ್ರಹ್ಮಚರ್ಯ; ಮನೋ ವಾಕ್ ಕಾಯಗಳಿಂದ ಸ್ತ್ರೀಸಂಗ, ಪುರುಷಸಂಗ ಮಾಡದಿರುವುದು. ೫. ಆಕಿಂಚನ್ಯ-ಅಪರಿಗ್ರಹ; ಪ್ರಾಪಂಚಿಕ ವಿಷಯಗಳಲ್ಲಿ ಸ್ವಲ್ಪವೂ ಮನಸ್ಸು ಕೊಡದೆ ಅವನ್ನು ತ್ಯಾಗ ಮಾಡುವುದು.

ಐದುಸಮಿತಿಗಳು : ೧. ಈರ್ಯಾ-ಸೂರ್ಯೋದಯವಾದ ಬಳಿಕ ಜೀವಿಗಳ ಹಿಂಸೆಯು ನಡೆಯದಂತೆ ತನ್ನ ಮುಂದಿನ ಒಂದುಮಾರು ದಾರಿಯನ್ನು ಚೆನ್ನಾಗಿ ನೋಡುತ್ತ ನಡೆಯುವುದು. ೨. ಭಾಷಾ-ತನಗೂ ಪರರಿಗೂ ಹಿತಕರವೂ ಮಿತವೂ ನಿರ್ದೋಷವೂ ಆದ ಪ್ರಿಯವಚನವನ್ನು ಹೇಳುವುದು. ೩. ಏಷಣಾ-ದಾತೃಗಳು ವಿಧಿಪೂರ್ವಕವಾಗಿ ಕೊಡುವ ಆಹಾರವನ್ನು ಹರ್ಷ ವಿಷಾದಗಳಿಲ್ಲದೆ, ರುಚಿ ಅರುಚಿಯೆನ್ನದೆ ಶಾಂತತ್ವದಿಂದ ಸ್ವೀಕರಿಸುವುದು. ೪. ಆದಾನನಿಕ್ಷೇಪಣ-ಪುಸ್ತಕ ಕಮಂಡಲು ಮೊದಲಾದ ಉಪಕರಣಗಳನ್ನು ಜೀವಹಿಂಸೆಯಾಗದಂತೆ ಒಂದು ಸ್ಥಲದಲ್ಲಿಡುವುದು ಮತ್ತು ಪಿಂಛದಿಂದ ಸ್ವಚ್ಛ ಮಾಡಿ ತೆಗೆದುಕೊಳ್ಳುವುದು. ೫. ವ್ಯುತ್ಸರ್ಗ-ತ್ರಸ ಸ್ಥಾವರ ಜೀವಗಳಿಗೆ ಪೀಡೆಯಾಗದಂತೆ ಜಂತುರಹಿತವಾದ ಗಟ್ಟಿನೆಲದ ಮೇಲೆ ಮಲಮೂತ್ರವಿಸರ್ಜನೆ ಮತ್ತು ಪ್ರಾಸುಕಜಲದಿಂದ ಶೌಚಕ್ರಿಯೆ ಮಾಡಿಕೊಳ್ಳುವುದು.

ಕಷಾಯ : ಕರ್ಮಫಲವನ್ನು ಬೆಳೆಸುವ ದೋಷಗಳು. ಕ್ರೋಧ, ಮಾನ, ಮಾಯಾ ಮತ್ತು ಲೋಭ ಎಂದು ಇವು ನಾಲ್ಕು. ಪ್ರತ್ಯಾಖ್ಯಾನ ಹಾಗೂ ಅಪ್ರತ್ಯಾಖ್ಯಾನ ಭೇದದಿಂದ ಇವು ಎಂಟಾಗುತ್ತವೆ.

ಕಾಯೋತ್ಸರ್ಗ : ಕೈ ಇಳಿಬಿಟ್ಟುಕೊಂಡು ದೇಹವನ್ನು ನೇರವಾಗಿ ಹಾಗು ನಿಶ್ಚಲವಾಗಿರಿಸಿಕೊಂಡು ನಿಲ್ಲುವುದು. ತಪಸ್ಸಿಗೆ ಉತ್ತಮವಾದ ಆಸನಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಖಡ್ಗಾಸನವೆಂದೂ ಹೆಸರಿದೆ.

ಕಿಲ್ಬಿಷಿಕ : ಕಿಲ್ಬಿಷವೆಂದರೆ ಪಾಪ. ಕಿಲ್ಬಿಷವುಳ್ಳ ದೇವತೆಗಳಿಗೆ ಕಿಲ್ಬಿಷಿಕರೆಂದು ಹೆಸರು. ಮನುಷ್ಯಲೋಕದಲ್ಲಿ ಚಾಂಡಾಲ ಮೊದಲಾದ ಪ್ರಜೆಗಳಂತೆ ಸ್ವರ್ಗದಲ್ಲಿ ಸ್ವಲ್ಪಪುಣ್ಯ ಬಲದಿಂದಾದ ಋದ್ಧಿಯಿಂದ ಇರುವವರು.

ಘಾತಿ : ಆತ್ಮನ ಗುಣಕ್ಕೆ ಘಾತಕವಾದ ಕರ್ಮ. ಜ್ಞಾನಾವರಣೀಯ. ದರ್ಶನಾವರಣೀಯ, ಮೋಹನೀಯ ಮತ್ತು ಅಂತರಾಯ ಎಂದು ಇವು ನಾಲ್ಕು ಬಗೆಯಾಗಿವೆ.

ಚತುರ್ದಶಗುಣ : ವರ್ಣ, ಅಲಂಕಾರ, ಸ್ವರ, ಪದ, ಸಮಾಸ, ಉಚ್ಛ್ವಾಸ, ಸಭಾ, ಆದೇಶ, ತಾಳ, ಲಯ, ಯತಿ, ಫಣಿಸ್ಥಾನ, ದೇಶ, ಕಾಲಜ್ಞತೆ.

ಛದ್ಮಸ್ಥಕಾಲ : ಸರ್ವಜ್ಞನಾಗುವುದಕ್ಕೆ ಮುಂಚಿನ ಅವಸ್ಥೆ, ಹನ್ನೆರಡನೆಯ ಗುಣಸ್ಥಾನದಲ್ಲಿರುವ ಸ್ಥಿತಿ, ದರ್ಶನಾವರಣ ಮತ್ತು ಜ್ಞಾನಾವರಣಗಳಿಂದ ಇನ್ನೂ ಮುಕ್ತನಾಗದಿರುವ ಕಾಲ.

ಜ್ಯೋತಿಷ್ಕ : ದೇವತೆಗಳ ನಾಲ್ಕು ವರ್ಗಗಳಲ್ಲಿ ಒಂದು. ಸೂರ್ಯ, ಚಂದ್ರ, ಗೃಹ, ನಕ್ಷತ್ರ ಮೊದಲಾದುವುಗಳಲ್ಲಿ ಇರುವವರು ಜ್ಯೋತಿಷ್ಕ ದೇವತೆಗಳು.

ತ್ರಾಯಸ್ತ್ರಿಂಶ : ದೇವೇಂದ್ರರಿಗೆ ಪುರೋಹಿತ, ಮಂತ್ರಿ ಮತ್ತು ಅಮಾತ್ಯರಂತೆ ಇರುವ ಮೂವತ್ತುಮೂರು ದೇವತೆಗಳು ‘‘ಮೂವತ್ತು ಮೂವರು’’ ಎಂಬರ್ಥದಲ್ಲಿಯೆ ಇವರು ತ್ರಾಯಸ್ತ್ರಿಂಶ ದೇವತೆಗಳು.

ತ್ರಿಗುಪ್ತಿ : ಮನಸ್ಸು ಮೈ ಮಾತುಗಳನ್ನು ನಿಗ್ರಹಿಸಿ, ಅವು ಧರ್ಮಧ್ಯಾನದಲ್ಲಿ ನಿರತವಾಗಿರುವಂತೆ ಮಾಡುವುದು ಗುಪ್ತಿ. ಇದು ಮನೋಗುಪ್ತಿ, ವಾಗ್ಗುಪ್ತಿ ಮತ್ತು ಕಾಯಗುಪ್ತಿ ಎಂದು ಮೂರು ವಿಧವಾಗಿದೆ.

ತ್ರೈವಿದ್ಯ : ಷಟ್ಖಂಡಾಗಮದ ಮೊದಲ ಮೂರು ಖಂಡಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದವನು. ‘‘ತ್ರೈವಿದ್ಯದೇವ’’ ನೆಂಬ ಪ್ರಶಸ್ತಿಯು ಮಾಘಣಂದಿ, ಅಕಲಂಕದೇವ, ರಾಮಚಂದ್ರ ಮತ್ತು ಶ್ರುತಕೀರ್ತಿ ಎಂಬ ನಾಲ್ವರಿಗೆ ಮಾತ್ರ ಮೀಸಲಾಗಿದೆ.

ದಾನಗಳು : ಆಹಾರದಾನ, ಅಭಯದಾನ, ಶಾಸ್ತ್ರದಾನ, ಭೈಷಜ್ಯದಾನ.

ದುರ್ಗಗಳು : ಗಿರಿದುರ್ಗ-ಬೆಟ್ಟಗಳಿಂದ ಆವೃತವಾದ ಸ್ಥಳ, ವನದುರ್ಗ-ಕಾಡುಗಳಿಂದ ಆವೃತವಾದ ಸ್ಥಳ, ಜಲದುರ್ಗ-ನೀರಿನಿಂದ ಆವೃತವಾದ ಸ್ಥಳ.

ಧರ್ಮಗಳು : ಪೂಜೆ, ಶೀಲ, ಉಪವಾಸ.

ನಯಗಳು : ಸಾಮ, ಭೇದ, ದಾನ, ದಂಡ.

ನವವಿಧಪುಣ್ಯ : ಚರಿಗೆಗೆ ಬಂದ ಮುನಿಗಳನ್ನು ಸತ್ಕರಿಸುವ ಒಂಬತ್ತು ಕ್ರಮಗಳು. ಮೂರು ಪ್ರದಕ್ಷಿಣೆ, ಪಾದ ಪ್ರಕ್ಷಾಲನ, ಉನ್ನತ ಪೀಠಪ್ರದಾನ, ಅರ್ಚನ, ನಮಸ್ಕಾರ, ವಚನಶುದ್ಧಿ, ಕಾಯಶುದ್ಧಿ, ಮನಃಶುದ್ಧಿ ಮತ್ತು ಏಷಣಾಶುದ್ಧಿ ಎಂಬ ಈ ಒಂಬತ್ತು ನವವಿಧ ಪುಣ್ಯ,

ನಾಟ್ಯಾಂಗ : ಉತ್ಕ್ಷೇಪಣ, ಆಕುಂಚನ, ಪ್ರಸಾರಣ, ಮನೋಭ್ರಮಣ, ಜಾವನ, ಸ್ಯಂದನ, ನಮನೋನ್ನಮನ, ಸ್ಥಿತಾಚಳಿತ, ಪ್ರಚಳಿತ, ಕ್ರಾಂತ, ಅಪಕ್ರಾಂತ, ಕ್ಷಿಪ್ತಕ, ಪತಾಕ, ತ್ರಿಪಾತಕ, ಕರ್ತರೀಮುಖ, ಅರ್ಧಚಂದ್ರ, ಕಳಾ, ಶುಕತುಂಡ.

ನಿರಾಕಾರ (ಅನಶನ) : ಉಪವಾಸವಿಧಿಯಲ್ಲಿ ಸಾಕಾರ ಮತ್ತು ನಿರಾಕಾರ ಎಂದು ಎರಡು ಬಗೆ. ಫಲಾಪೇಕ್ಷೆಯಿಂದ ನಿರ್ದಿಷ್ಟವಾದ ಅವಧಿಯವರೆಗೆ ಕೈಕೊಳ್ಳುವ ನೋಂಪಿ ಅಥವಾ ವ್ರತದ ಉಪವಾಸ ಸಾಕಾರ. ಅನಿರ್ದಿಷ್ಟ ಅವಧಿಯ ಹಾಗು ಯಾವುದೆ ನಿರ್ದಿಷ್ಟ ಫಲಾಪೇಕ್ಷೆಯಿಲ್ಲದೆ ಮಾಡುವ ತಪಸ್ಸಿನ ಅಂಗವಾದ ಉಪವಾಸ ನಿರಾಕಾರ. ಇವುಗಳನ್ನು ಸಾಕಾಂಕ್ಷ-ನಿರಾಕಾಂಕ್ಷ ಎಂದೂ ಹೇಳುವುದುಂಟು.

ನೀತಿಗಳು : ಭೃತ್ಯಪೋಷಣ, ಪ್ರಜಾಪಾಳನ, ಧರ್ಮರಕ್ಷಣ, ಆತ್ಮಪ್ರಯತ್ನ.

ಪಂಚಾತಿಚಾರ : ಧರ್ಮಾಚರಣೆಯಲ್ಲಿ ಐದು ಬಗೆಯ ದೋಷಗಳು. ೧. ಆಗಮದಲ್ಲಿ ಶಂಕೆ, ೨. ಭೋಗಾಪೇಕ್ಷೆ, ೩. ಶರೀರದ ನಿರ್ವಿಚಿಕಿತ್ಸೆ, ೪. ನಿರ್ದೋಷಿಯ ಪ್ರಶಂಸೆಯಲ್ಲಿ ಅನ್ಯದೃಷ್ಟಿ ಪ್ರಶಂಸೆ, ೫. ಸದೋಷಿಯ ಹೊಗಳಿಕೆಯಲ್ಲಿ ಅನ್ಯದೃಷ್ಟಿಯ ಸ್ತೋತ್ರ.

ಪಗೆಗೆಳು : ಸಾಪತ್ನ, ವಾಸ್ತುಜ, ಸ್ತ್ರೀಜ, ವಾಗ್ಭೂತಮರಾಜ.

ಪದಗತಗಳು : ನಾಮಾಖ್ಯಾತ ಉಪಸರ್ಗ, ನಿಪಾತ, ತದ್ಧಿತ, ಸಮಾಸ, ಕೃತ್ಯಾಪೇತ, ವ್ಯಾಕರಣ, ಸಿದ್ಧಾಂತ.

ಪರೀಷಹ : ತಪಶ್ಚರಣಕ್ಕೆ ಬಾಧಕವಾದ ೨೨ ಬಗೆಯ ತೊಂದರೆಗಳು ೧. ಹಸಿವು,    ೨. ಬಾಯಾರಿಕೆ, ೩. ಚಳಿ, ೪. ಉಷ್ಣ, ೫. ಸೊಳ್ಳೆ-ಚಿಕ್ಕಾಡಿ ಮೊದಲಾದುವುಗಳು ಕಚ್ಚುವುದು. ೬. ಬೆತ್ತಲೆಯಿರುವುದರಿಂದಾಗುವ ತೊಂದರೆ, ೭. ಅರತಿ, ೮. ಸ್ತ್ರೀವಿರಹ, ೯. ಸಂಚಾರಬಾಧೆ, ೧೦. ಶಯ್ಯಾಬಾಧೆ, ೧೧. ಆಸನಬಾಧೆ, ೧೨. ಬೈಗುಳು, ೧೩. ಯಾಚನೆಯಲ್ಲಾಗುವ ತೊಂದರೆ, ೧೪. ಹೊಡೆತ, ೧೫. ಭಿಕ್ಷೆ ದೊರೆಯದಿರುವ ಖೇದ, ೧೬. ತಪಸ್ಸಿಗೆ ತಕ್ಕ ಫಲಕಾಣದಿರುವಿಕೆ, ೧೭. ರೋಗ, ೧೮. ಮುಳ್ಳುಕಲ್ಲುಗಳ ಬಾಧೆ, ೧೯. ಅಹಂಕಾರ, ೨೦. ಅಜ್ಞಾನದ ಕೊರಗು, ೨೧. ಸ್ನಾನವಿಲ್ಲದುದರಿಂದಾಗುವ ಬಾಧೆ, ೨೨. ಜನರಿಂದ ಪುರಸ್ಕಾರವಾಗದಿರುವಿಕೆ.

ಪಾರಿಷದ : ಇಂದ್ರನ ಸಭೆಯಲ್ಲಿ ಇರುವ ದೇವತೆಗಳು ಅರಸರ ಆಸ್ಥಾನದಲ್ಲಿರುವ ಸಂಧಾನಕಾರಿ ಪುರುಷರಿಗೆ ಸಮಾನರಾಗಿದ್ದು ಇವರು ದೇವೇಂದ್ರನಿಗೆ ತುಂಬ ಮೆಚ್ಚಿಗೆಯವರಾಗಿರುತ್ತಾರೆ.

ಪೂರ್ವ : ಎಂಬತ್ತುನಾಲ್ಕು ಲಕ್ಷ ವರ್ಷದ ಅವಧಿಗೆ ಒಂದು ಪೂರ್ವಾಂಗವೆಂದು ಹೆಸರು. ೮೪ ಲಕ್ಷ ಪೂರ್ವಾಂಗಗಳಾದರೆ ಒಂದು ‘ಪೂರ್ವ’ವೆಂಬ ಕಾಲಾವಧಿಯಾಗುತ್ತದೆ.

ಪ್ರತಿಮಾನಿಯೋಗ : ವಿಗ್ರಹದಂತೆ ನಿಶ್ಚಲವಾಗಿ ನಿಂತು ತಪಸ್ಸು ಮಾಡುವ ಕ್ರಮ.

ಪ್ರತೀಕಾರಗಳು : ಭೂರಿ, ಕರ್ಮಣಾ, ಆರಂಭೋಪಾಯ, ಪುರುಷದ್ರವ್ಯ ಸಂಪತ್, ದೇಶಕಾಲ ವಿಭಾಗ, ವಿನಿಪಾತ ಪ್ರತೀಕಾರ, ಉಚ್ಚಾಟನ, ಬಂಧನ, ಕರ್ಮಣಾಮಪನಯನ.

ಬಾಹ್ಯಪ್ರಕೃತಿಗಳು : ರಾಷ್ಟ್ರಪಾಲ, ಅಂತಪಾಲ, ಪ್ರತ್ಯಂತವಾಸಿ.

ಭವನಗಳು : ಏಕಶಾಲ, ದ್ವಿಶಾಲ, ತ್ರಿಶಾಲ, ಚತುಶ್ಶಾಲ, ಪಂಚತಳ, ಮಹಾಕೂಟ, ಕೂಟಸ್ವಸ್ತಿಕ, ಗುಲ್ಮೋತ್ಪಳ, ನಂದ್ಯಾವರ್ತ, ಶ್ರೀಭದ್ರಕಾಲ.

ಭಾವನಾಮರ : ಭವನವಾಸಿ, ವ್ಯಂತರ, ಜ್ಯೋತಿಷ್ಕ ಮತ್ತು ಕಲ್ಪವಾಸಿ ಎಂಬ ನಾಲ್ಕು ಬಗೆಯದೇವತಾವರ್ಗಗಳಲ್ಲಿ ಒಂದು.

ಭೃತ್ಯರು : ಕರ್ಮಣ್ಯ, ಮಂತ್ರ, ಲಾಭದಾಯಕ, ಸಂಗ್ರಾಮಿಕ.

ಮಲ್ಲಯುದ್ಧ : ಲಂಘನ, ವಲ್ಗನ, ಪ್ಲವನ, ವಿಕ್ರಮ, ಭ್ರಮರಿ, ಕರಣ, ಸಮಲತಾ, ಬಹುಕಳಿ, ಕತ್ತರಿ.

ಮೂರುಕ್ಲೇಶಗುಪ್ತಿಗಳು : ೧. ಮನ-ಸುಖದುಃಖಗಳಿಗೆ ಅಮಿತವಾಗಿ ವಶನಾಗದೆ ಸಮತಾಭಾವವನ್ನು ಸರ್ವರಲ್ಲಿಯೂ ತೋರಿ ತನ್ನ ಆತ್ಮಕಲ್ಯಾಣವನ್ನು ನೆನೆಯುವುದು. ೨. ವಾಕ್-ಮೌನದಿಂದಿರುವುದು ಅಥವಾ ಮಿತವಾಗಿ ಮಾತನಾಡುವುದು. ೩. ಕಾಯ-ಆಗಮಗಳಲ್ಲಿ ಆಪ್ತರು ಹೇಳಿರುವ ಆಚರಣೆಗಳನ್ನು ಆಚರಿಸುವುದು.

ಮೂಲೋತ್ತರಗುಣ :ಆಚಾರ್ಯರಿಗೆ ಇರಬೇಕಾದ ಮೂವತ್ತಾರು ಗುಣಗಳು : ೧೨ ತಪಸ್ಸು, ೬ ಅವಶ್ಯಕಗಳು, ೫ ಆಚಾರಗಳು, ೧೦ ಧರ್ಮಗಳು, ೩ ಗುಪ್ತಿಗಳು.

ವಾನೇಯ : ವ್ಯಂತರ ದೇವತೆಗಳು, ನಾಲ್ಕು ಬಗೆಯ ದೇವತೆಗಳಲ್ಲಿ ಒಂದು ವರ್ಗ, ಕಿನ್ನರ    ಮೊದಲಾಗಿ ಇವರಲ್ಲಿ ಎಂಟು ಪ್ರಕಾರಗಳುಂಟು.

ವಾಯುತ್ರಿತಯ : ಲೋಕದ ಹೊರಭಾಗದಲ್ಲಿ ಅದನ್ನು ಸುತ್ತುಗಟ್ಟಿರುವ ಘನೋದಧಿ, ಘನವಾತ ಮತ್ತು ತನುವಾತ ಎಂಬ ಮೂರುಗಾಳಿಗಳು.

ಶಕ್ತಿತ್ರಯಗಳು : ಪ್ರಭು, ಮಂತ್ರ, ಉತ್ಸಾಹ.

ಶ್ರುತಕೇವಳಿ : ವಿಷ್ಣುನಂದಿ, ನಂದಿಮಿತ್ರ, ಅಪರಾಜಿತ, ಗೋವರ್ಧನ ಮತ್ತು ಭದ್ರಬಾಹು-ಈ   ಐವರು ಶ್ರುತಕೇವಲಿಗಳು.

ಷಾಡ್ಗುಣ್ಯ : ರಾಜ್ಯರಕ್ಷಣೆಗೆ ರಾಜನಲ್ಲಿರಬೇಕಾದ ಆರು ಗುಣಗಳು. ೧. ಸಂಧಿ-ಸಂಧಾನ. ೨. ವಿಗ್ರಹ-ಶತ್ರುತ್ವವನ್ನು ಹೊಂದುವುದು. ೩. ಯಾನ-ಯುದ್ಧಕ್ಕಾಗಿ ಹೋಗುವುದು, ೪. ಆಸನ-ಶತ್ರುವಿಗೆ ಭಯವನ್ನುಂಟು ಮಾಡಲು ಯಾತ್ರೆ ಹೊರಟು ಸ್ವಸ್ಥಾನದಲ್ಲಿಯೇ ನಿಲ್ಲುವುದು. ೫. ಸಂಶ್ರಯ-ದುರ್ಗವನ್ನಾಗಲಿ, ಮತ್ತೊಬ್ಬ ರಾಜನನ್ನಾಗಲಿ ಆಶ್ರಯಿಸುವುದು. ೬. ದ್ವೈದೀಭಾವ-ಸಂಧಿ ಮಾಡಿಕೊಂಡೂ ಯುದ್ಧದ ಯೋಜನೆಯಲ್ಲಿರುವುದು.

ಸಪ್ತಭಂಗಿ : ಯಾವುದೆ ಪದಾರ್ಥದಲ್ಲಿಯಾದರೂ ಅದರ ದ್ರವ್ಯ, ಕ್ಷೇತ್ರ, ಕಾಲ ಮತ್ತು ಭಾವ      ಈ ದೃಷ್ಟಿಯಿಂದ ಪರಸ್ಪರ ವಿರುದ್ಧವಾದ ಧರ್ಮಗಳು ಇರುವುದನ್ನು, ಒಂದೊಂದಾಗಿ ವಿವರಿಸುವ ಏಳು ಬಗೆಯ ತರ್ಕಕ್ರಮ. ಸ್ಯಾದಸ್ತಿ, ಸ್ಯಾನ್ನಾಸ್ತಿ, ಸ್ಯಾದಸ್ತಿನಾಸ್ತಿ, ಸ್ಯಾದವಕ್ತವ್ಯ, ಸ್ಯಾದಸ್ತ್ಯವಕ್ತವ್ಯ, ಸ್ಯಾನ್ನಾಸ್ತ್ಯವಕ್ತವ್ಯ, ಸ್ಯಾದಸ್ತಿನಾಸ್ತ್ಯವಕ್ತವ್ಯ-ಎಂಬ ಈ ಏಳು ಭಂಗಿಗಳುಳ್ಳ ವಾದ, ಇದಕ್ಕೆ ಸ್ಯಾದ್ಯಾದವೆಂದು ಹೆಸರು.

ಸಮುದ್ಘಾತ : ಇನ್ನೂ ಸ್ವಲ್ಪ ಪ್ರಮಾಣದಲ್ಲಿ ಉಳಿದಿರುವ ಕರ್ಮಾಂಶವನ್ನು ಕಳೆದುಕೊಳ್ಳುವುದಕ್ಕಾಗಿ ಕೇವಲಿಯು ತನ್ನ ಆತ್ಮಪ್ರದೇಶವನ್ನು ವಿಸ್ತರಿಸುವುದು. ಮದಿರೆಯಲ್ಲಿ ನೊರೆ ಇಂಗಿ    ಅದು ಪುನಃ ಶಾಂತವಾಗುವ ಹಾಗೆ ಸಮುದ್ಘಾತದಲ್ಲಿ ದೇಹಸ್ಥವಾದ ಆತ್ಮಪ್ರದೇಶವು ಹೊರಗೆ ಹರಡಿ ಕರ್ಮರಜವನ್ನು ಕೊಡಹಿಕೊಂಡು, ಪುನಃ ದೇಹದೊಳಗೆ ಸಮಾವೇಶವಾಗುತ್ತದೆ. ಸಮುದ್ಘಾತವು ದಂಡ, ಕವಾಟ, ಪ್ರತರ ಮತ್ತು ಲೋಕಪೂರಣವೆಂದು ನಾಲ್ಕು ಬಗೆಯಾಗಿದೆ. ದೇಹದ ಮೂರು ಮಡಿಯಷ್ಟು ವಿಸ್ತರಿಸಿ ಜೀವಪ್ರದೇಶವನ್ನು ೧೪ ರಜ್ಜುಗಳಷ್ಟು ಉದ್ಧವಾದ ದಂಡದಂತೆ ಹರಡುವುದು ದಂಡಸುದ್ಘಾತ. ಹೀಗೆ ಉದ್ದವಾದ ಜೀವಪ್ರದೇಶವನ್ನು ಪೂರ್ವಪಶ್ಚಿಮ ವಾತವಲಯದವರೆಗೆ ವಿಸ್ತೀರ್ಣಗೊಳಿಸುವುದು ಕವಾಟಸುಮುದ್ರ ವಾತವಲಯದಲ್ಲಿದ್ದ ಕ್ಷೇತ್ರವನ್ನು ಬಿಟ್ಟು ಸಂಪೂರ್ಣ ಲೋಕವನ್ನು ಆವರಿಸು ಜೀವಪ್ರದೇಶವನ್ನು ಹರಡುವುದು ಪ್ರತರಸಮುದ್ಘಾತ, ಸರ್ವಲೋಕಗಳ ಪ್ರಮಾಣ ಜೀವಪ್ರದೇಶವನ್ನು ಹಿಗ್ಗಲಿಸಿ ಹರಡುವುದು ಲೋಕಪೂರಣ ಸಮುದ್ಘಾತ.

ಸ್ವರಗತಗಳು : ಸರಸ್ವತಿ, ಗ್ರಾಮ, ಶ್ರುತಿ, ಮೂರ್ಚನೆ, ಆನನ, ಸ್ಥಾನ, ವೃತ್ತಿ, ಸಾಧಾರಣ, ಜಾತಿ, ವರ್ಣ, ಅಲಂಕಾರ.

ಹತ್ತುಮುನಿಧರ್ಮಗಳು : ಉತ್ತಮಕ್ಷಮಾ-ಕೋಪವನ್ನು ಪೂರ್ಣವಾಗಿ ತೊರೆದು ಯಾವ ಕೇಡು ಮಾಡಿದರೂ ಸಹಿಸಿಕೊಳ್ಳುವುದು. ೨. ಮಾರ್ದವ-ಅಹಂಕಾರವನ್ನು ಮೆಟ್ಟಿ ವಿನಯವನ್ನು ಬೆಳಸುವುದು. ೩. ಆರ್ಜವ-ಮರೆಮೋಸಗಳನ್ನು ಬಿಟ್ಟು            ಸರಳತೆಯಿಂದಿರುವುದು. ೪. ಸತ್ಯ-ನಿಜವನ್ನೆ ಆಡುವುದು. ೫. ಶೌಚ-ಕೆಟ್ಟ ಆಲೋಚನೆ, ಕೆಟ್ಟಮಾತು, ಕೆಟ್ಟ ಕೆಲಸಗಳಿಲ್ಲದೆ ಶುಚಿಯಾಗಿರುವುದು. ೬. ಸಂಯಮ-ಇಂದ್ರಿಯನಿಗ್ರಹ ಮತ್ತು ಪ್ರಾಣಿದಯ. ೭. ತಪಸ್ಸು-ಉತ್ತಮವಾದ ತಪಸ್ಸು ಮಾಡುವುದು. ೮. ತ್ಯಾಗ-ಪ್ರಾಪಂಚಿಕ ವಿಷಯಗಳಲ್ಲಿ ಆಸಕ್ತಿಯನ್ನು ತೊರೆಯುವುದು. ೯. ಆಕಿಂಚನ್ಯ- ತನ್ನದಲ್ಲದ ಯಾವುದನ್ನೂ ತೆಗೆದುಕೊಳ್ಳದಿರುವುದು. ೧೦. ಬ್ರಹ್ಮಚರ್ಯ- ಮನೋವಾಕ್ಕಾಯಗಳಿಂದ ಸ್ತ್ರೀವಿಷಯವನ್ನು ಬಿಡುವುದು.

ಹದಿನಾಲ್ಕು ಪುಬ್ಬಗಳು : ೧. ಉತ್ಪಾದ-ಉತ್ಪತ್ತಿಯ ಸಮಗ್ರ ತಿಳಿವಳಿಕೆ. ೨. ಅಗ್ರಾಯಿಣಿ- ಜೀವ ಪರ್ಯಾಯಗಳ ವಿವರವುಳ್ಳುದು. ೩. ವೀರ್ಯಾನುಪ್ರವಾದ-ಅನಂತವೀರ್ಯಗುಣದ ವಿವರಣೆ ಮಾಡುವ ಅನುವದಿಸುವ ಶಕ್ತಿ. ೪. ಆಸ್ತಿನಾಸ್ತಿಪ್ರವಾದ-ಆಸ್ತಿಕ್ಯ ನಾಸ್ತಿಕ್ಯಗಳ ಸ್ಪಷ್ಟ ಜ್ಞಾನ. ೫. ಆತ್ಮಪ್ರವಾದ-ಆತ್ಮದ ಪೂರ್ಣ ಕಲ್ಪನೆ. ೬. ಸತ್ಯಪ್ರವಾದ-ಸತ್ಯದ ತಿಳಿವಳಿಕೆ. ೭. ಜ್ಞಾನಪ್ರವಾದ-ಸಮ್ಯಕ್ ಜ್ಞಾನದ ಸಂಪೂರ್ಣ ತಿಳಿವಳಿಕೆ. ೮. ಕರ್ಮಪ್ರಸಾದ-ಕರ್ಮದ ಸಂಪೂರ್ಣ ತಿಳಿವಳಿಕೆ. ೯. ಪ್ರತ್ಯಾಖ್ಯಾನ-ತಿರಸ್ಕಾರದ ಕಲ್ಪನೆ. ೧೦. ವಿದ್ಯಾನುವಾದ-ವಿದ್ಯೆಯನ್ನು ಅನುವಾದ ಮಾಡುವ ಸಾಮರ್ಥ್ಯ. ೧೧. ಕಲ್ಯಾಣನಾಮಧೇಯ-ಆತ್ಮಹಿತದ ಕಲ್ಪನೆ. ೧೨. ಪ್ರಾಣವಾದ-ಪ್ರಾಣದ ಕಲ್ಪನೆ. ೧೩. ಕ್ರಿಯಾವಿಶಾಲ-ಕ್ರಿಯೆಯ ಸ್ವರೂಪ. ೧೪. ಲೋಕಬಿಂದುಸಾರ-ಲೋಕದ ತಿಳಿವಳಿಗೆ.

ಹನ್ನೆರಡುಅಂಗಗಳು : ೧. ಆಚಾರ-ಚಾರಿತ್ರ್ಯ ಯಾವ ರೀತಿ ಇರಬೇಕೆಂದು ಹೇಳುವ ಶಾಸ್ತ್ರ ವಿಭಾಗ. ೨. ಸೂತ್ರಕೃತ-ಶಾಸ್ತ್ರವನ್ನು ರಚಿಸುವಿಕೆ. ೩. ಸ್ಥಾನ-ಸ್ಥಳ ವಿಶೇಷಗಳ ಕಲ್ಪನೆಯ ವಿವರವುಳ್ಳದು; ಲೋಕಾಲೋಕಗಳ ವರ್ಣನೆಯುಳ್ಳುದು. ೪. ಸಮವಾಯ-ಶಾಸ್ತ್ರಗಳ ಅಂಗೋಪಾಂಗಗಳ ನಿತ್ಯಸಂಬಂಧಜ್ಞಾನ. ೫. ವ್ಯಾಖ್ಯಾನಪ್ರಜ್ಞಪ್ತಿ- ಶಾಸ್ತ್ರ ವಚನಗಳಿಗೆ ವಿವರಣ ಮಾಡುವ ಶಕ್ತಿ. ೬. ಜ್ಞಾತೃಧರ್ಮಕಥಾ-ಸಮ್ಯಕ್ ಜ್ಞಾನಿಗಳ ಕಥೆಯ ವಿವರ. ೭. ಉಪಾಸಕಾಧ್ಯಯನ-ಉಪಾಸನೆಯನ್ನು ವಿವರಿಸುವ ಶಾಸ್ತ್ರವಿಭಾಗ. ೮. ಅಂತಕೃದ್ಧಶಾ-ಕರ್ಮದ ಕೊನೆಯ ಅವಸ್ಥೆಗಳನ್ನು ವಿವರಿಸುವ ಶಾಸ್ತ್ರವಿಭಾಗ. ೯. ಅನುತ್ತರೌಪಪಾತಿಕ-ಅನಂತರ ಹುಟ್ಟುವ ಅವಸ್ಥೆಯ ವಿವರ. ೧೦. ಪ್ರಶ್ನವ್ಯಾಕರಣ- ಪ್ರಶ್ನೆ ಮಾಡುವುದು, ವ್ಯಾಕರಣಗಳ ವಿವರವುಳ್ಳದು. ೧೧. ವಿಪಾಕಸೂತ್ರ-ಪುಣ್ಯ ಹಾಗೂ ಪಾಪಗಳ ವರ್ಣನೆಯುಳ್ಳುದು. ೧೨. ದೃಷ್ಟಿವಾದ-ಪರಿಕರ್ಮ, ಸೂತ್ರ, ಪ್ರಥಮಾನುಯೋಗ, ಪೂರ್ವಗತ ಮತ್ತು ಚೂಲಿಕಾ ಎಂಬ ಐದು ಖಂಡಗಳಿವೆ.

ಹನ್ನೆರಡುತಪಗಳು : ೧. ಅನಶನ-ಉಪವಾಸ. ೨. ಅವಮೌದಾರ್ಯ-ಉನೋದರತೆ, ನಿರಾಹಾರ ತಪಶ್ಚರ್ಯ. ೩. ವೃತ್ತಿಪರಿಸಂಖ್ಯಾನ-ಊಟಕ್ಕೋಸ್ಕರ ಹೋಗುವ ಮನೆಗಳ ನಿಯಮ ಮೊದಲಾದವನ್ನು ಮಾಡಿಕೊಳ್ಳುವುದು. ೪. ರಸಪರಿತ್ಯಾಗ-ಆರೂರಸಗಳನ್ನು ಇಲ್ಲವೆ ಒಂದೆರಡನ್ನು ಬಿಡುವುದು. ೫. ಏಕಶಯ್ಯಾಸನ-ವಿವಿಕ್ತಶಯ್ಯಾಸನ, ಏಕಾಂತಸ್ಥಾನದಲ್ಲಿರುವುದು ಮತ್ತು ಮಲಗುವುದು. ೬. ಕಾಯಕ್ಲೇಶ- ಶರೀರಕ್ಕೆ ಕಷ್ಟ ಕೊಡುವುದು. ೭. ಪ್ರಾಯಶ್ಚಿತ್ತ-ದೋಷಕ್ಕಾಗಿ ದಂಡ ಕೊಡುವುದು. ೮. ವಿನಯ-ರತ್ನತ್ರಯಕ್ಕೂ ಅದನ್ನು ಧರಿಸಿದವರಿಗೂ ವಿನಯ ತೋರಿಸುವುದು. ೯. ವೈಯಾಪೃತ್ಯ, ಪಾದಸಂವಾಹನ ಮೊದಲಾದವುಗಳಿಂದ ಗುರುಗಳನ್ನೂ ಮುನಿಗಳನ್ನೂ ಸೇವಿಸುವುದು. ೧೦. ಸ್ವಾಧ್ಯಾಯ-ಶಾಸ್ತ್ರಗಳನ್ನು ಓದುವುದು. ೧೧. ಧ್ಯಾನ-ಧ್ಯಾನ ಮಾಡುವುದು; ಇದರಲ್ಲಿ ಆರ್ತ, ರೌದ್ರ, ಧರ್ಮ, ಶುಕ್ಲ ಎಂಬ ನಾಲ್ಕು ಬಗೆಯಿದೆ. ೧೨. ಉತ್ಸರ್ಗ-ವ್ಯುತ್ಸರ್ಗ, ಶರೀರದ ಮೇಲಿನ ಮಮತೆಯನ್ನು ಕಡಿಮೆ ಮಾಡುವುದು.

ಹಸ್ತಾಂಗುಳಿಗಳು : ಸಮ, ಪ್ರಹರಣ, ವಿಶದ, ಶಮ, ಮಧುರ, ಜಸ, ರಸ, ದವ, ವೃಷ್ಟಿ, ಜಿತ, ಶ್ರಮ, ಸ್ವೇದ, ದುಸ್ಥಿರ, ನಖ.

 

ಪರಿಶೀಲನಗ್ರಂಥಗಳು

ಚಂದ್ರಪ್ರಭ ಪುರಾಣಂ, ಸಂಪಾದಕರು : ಎಂ. ಎ. ರಾಮಾನುಜ ಅಯ್ಯಂಗಾರ್, ಕಾವ್ಯ ಕಳಾನಿಧಿ ಗ್ರಂಥಮಾಲೆ, ಮೈಸೂರು, ೧೯೦೧

ಮಾಹಾಕವಿ ಅಗ್ಗಳದೇವ ವಿರಚಿತಂ ಚಂದ್ರಪ್ರಭ ಪುರಾಣಂ, ಸಂಪಾದಕರು : ಆರ್. ವಿ. ಕುಲಕರ್ಣಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೨೦೦೪.

ನಿಟ್ಟೂರು ದೊಡ್ಡಣಾಂಕ ವಿರಚಿತ ಚಂದ್ರಪ್ರಭ ಚರಿತ್ರೆ, ಸಂಪಾದಕರು : ಜಿ. ಜಿ. ಮಂಜುನಾಥನ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೧೯೮೫.

ಪಿರಿಯಪಟ್ಟಣ ದೊಡ್ಡಯ್ಯ ವಿರಚಿತ ಚಂದ್ರಪ್ರಭ ಚರಿತೆ, ಸಂಪಾದಕರು : ಜಿ. ಜಿ. ಮಂಜುನಾಥನ್, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೧೯೮೦.

ಕಾವ್ಯಸಾರ, ಅಭಿನವವಾದಿ ವಿದ್ಯಾನಂದ, ಸಂಪಾದಕರು : ಎಸ್. ಜಿ. ನರಸಿಂಹಾಚಾರ್, ಮಂ. ಆ. ರಾಮಾನುಜಯ್ಯಂಗಾರ್, ಕನ್ನಡ ಕಾವ್ಯಮಂಜರಿ, ಮೈಸೂರು, ೧೮೯೮.

ಸೂಕ್ತಿ ಸುಧಾರ್ಣವಂ, ಮಲ್ಲಿಕಾರ್ಜುನ, ಸಂಪಾದಕರು : ಎನ್. ಅನಂತರಂಗಾಚಾರ್, ಪ್ರಾಚ್ಯ ವಿದ್ಯಾ ಸಂಶೋಧನಾಲಯ, ೧೯೪೭, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವ ವಿದ್ಯಾನಿಲಯ, ಮೈಸೂರು, ೧೯೭೨.

ಕಾವ್ಯಸಾರಂ, ಮಲ್ಲಕವಿ, ಸಂಪಾದಕರು : ಎನ್. ಅನಂತರಂಗಾಚಾರ್, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ೧೯೭೩.

ಅಗ್ಗಳದೇವ, ಲೇಖಕರು : ಡಿ. ಎಲ್. ನರಸಿಂಹಾಚಾರ್, ಪ್ರಬುದ್ಧ ಕರ್ನಾಟಕ, ಸಂಪುಟ ೩೫, ಸಂಚಿಕೆ ೪, ಪುಟ ೨೩-೪೫, ಪೀಠಿಕೆಗಳು-ಲೇಖನಗಳು, ಪುಟ ೨೭೫-೨೯೪, ಡಿ. ವಿ. ಕೆ. ಮೂರ್ತಿ, ಕೃಷ್ಣಮೂರ್ತಿಪುರಂ, ಮೈಸೂರು, ೧೯೭೧.

ಬೀಳಿಗಿಯ ಕೆಲವು ಶಾಸನಗಳು, ಪಂಜೆಯವರ ನೆನಪಿಗಾಗಿ, ಪುಟ ೧೯, ಪುತ್ತೂರು, ೧೯೫೨.

ಅಗ್ಗಳ, ಲೇಖಕರು : ಪ್ರಧಾನ ಗುರುದತ್ತ, ಪುಟ ೬೩೯-೬೯೬, ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಾಹಿತ್ಯ ಚರಿತ್ರೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೧೯೭೭.

ಅಗ್ಗಳದೇವ, ಲೇಖಕರು : ಎಸ್. ಎನ್. ಕೃಷ್ಣಜೋಯಿಸ್, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೧೯೮೭.

ಚಂದ್ರಪ್ರಭ, ಸಂಪಾದಕರು : ಪ್ರೊ. ಎಸ್. ಪ್ರಭಾಕರ್, ಭಗವಾನ್ ೧೦೦೮ ಶ್ರೀ ಚಂದ್ರನಾಥಬಸದಿ ಧಾಮಸಂಪ್ರೋಕ್ಷಣಪೂರ್ವಕ ಪ್ರತಿಷ್ಠಾಮಹೋತ್ಸವ ಸಮಿತಿ, ಶ್ರೀ ಕ್ಷೇತ್ರ ಧರ್ಮಸ್ಥಳ, ೨೦೦೧.