ಕಂ || ಶ್ರೀಪತಿನಿರ್ಮಲಭಕ್ತಿ
ವ್ಯಾಪಿತಮನನೆಯ್ದೆವಂದನಾ ಮುನಿಮುಖ್ಯ
ಶ್ರೀಪಾದೋಪಾಂತಮನವ
ನೀಪಾಲಂ ಜೈನಜನಮನೋಹರಚರಿತಂ || ೧

ವಿಸ್ತೀರ್ಣಮೆನಿಪ ನೀಲ
ಪ್ರಸ್ತರದೊಳ್ ಮುನಿಪನಿರ್ದನಪಗತಜೀಮೂ
ತಸ್ತೋಮಮಾಗಿ ವಿಮಳನ
ಭಸ್ತಳದೊಳ್ ತೊಳಪ ಚಂದ್ರನಂದದಿನಾಗಳ್ || ೨

ವ || ಅಂತಿರ್ದನಂ ತ್ರಿಪ್ರದಕ್ಷಿಣಂಗೆಯ್ದು ವಿವಿಧಪೂಜಾಪುರಸ್ಸರಂ ಗುರುಭಕ್ತಿಯಿಂ ವಂದಿಸಿ ತದಾಶೀರ್ವಚನಾಮೃತಭರಿತಕರ್ಣಕುಹರನುಂ ಪಾದಪ್ರದೇಶನಿಷಣ್ಣನುಮಾಗೆ –

ಕಂ || ಪಿರಿದುಂ ಜಿನೇಂದ್ರದಿವಿಜೇಂ
ದ್ರರಿರ್ವರಿಂದೆಸೆವ ಸಮವಸರಣಸ್ಥಳಿಯೊಳ್
ಸರಿಯಾದುದಾಪ್ರದೇಶಂ
ಪರಮಮುನೀಶಕ್ಷಿತೀಶರಿಂ ತತ್ಷಣದೊಳ್ || ೩

ಕ್ಷಿತಿಪತಿಯ ಕರಸರೋಜ
ದ್ವಿತಯಮನಡಿಗಡಿಗೆ ಮುಕುಲತೆಯನೈದಿಸಿ ತ
ದ್ಯತಿಪತಿ ನಿಜಕುವಲಯಬಂ
ಧುತೆಯಂ ಪ್ರಕಟಿಸಿದನಾ ಸಭಾಭ್ಯಂತರದೊಳ್ || ೪

ಆಗಳ್ ಮುನಿನಾಯಕನಂ
ಭೂಗಧಿಪತಿ ಭವ್ಯತುಮುಲಜಯಜಯನಿನದಾ
ವೇಗಂ ಮಾಣ್ದಿನಿಸುಂ ತೆಱ
ಪಾಗಿರೆ ಬೆಸಗೊಂಡು ಜೀವತತ್ತ್ವಸ್ಥಿತಿಯಂ || ೫

ವ || ಅಪಗತಸಂಶಯನಾಗಿ ಮತ್ತಮಿಂತೆಂದಂ

ಕಂ || ವಿಗತಾಲೋಕಂ ಶಿವಪದ
ವಿಗಳಿತಮೆನಿಸಿದ ಜನಕ್ಕೆ ಕೃತಸನ್ಮಾರ್ಗಾ
ನುಗತೋಪದೇಶದಿಂದೀ
ಜಗದೊಳ್ ನೀನಾದೆ ನಾಥ ಕಣ್ಣುಂ ಗತಿಯುಂ || ೬

ದೇವ ನಿರವಧಿಗುಣಾತಿಶ
ಯಾವಧಿಲೋಚನನ ನಿನ್ನ ಕಾಣ್ಕೆಗೆ ಪೊಱಗಾ
ದಾ ವಸ್ತು ಭುವನದೊಳ್ ಪರಿ
ಭಾವಿಸೆ ವಂಧ್ಯಾಸ್ತನಂಧಯೋಪಮಮಲ್ತೇ || ೭

ವ || ಅದು ಕಾರಣದಿಂ –

ಕಂ || ಮನದೊಳೆನಗೀಶ ಮತ್ಪ್ರಾ
ಕ್ತನಜನ್ಮಾವಳಿಯನೆಯ್ದೆ ಕೇಳ್ವೞ್ತಿಕರಂ
ಜನಿಯಿಸಿದಪುದದನುಸಿರ್ವುದು
ವಿನೇಯಕುಮುದಪ್ರಮೋದಕರತುಹಿನಕರಾ || ೮

ಎನೆ ಜನ್ಮಪರಂಪರೆಯಂ
ಮುನಿಪತಿ ಪೇೞಲ್ಕೆ ತೊಡಗೆ ಮಧುರಧ್ವನಿಯಿಂ
ಮನದವಧಾನಪರಂಪರೆ
ಯನಶೇಷಂ ತಾಳ್ದಿದತ್ತು ಭವ್ಯವ್ಯೂಹಂ || ೯

ವ || ಅದೆಂತೆಂದೊಡೆ ಪುಷ್ಕರಾರ್ಧದ ಮೂಡಣ ಮಂದರದಪರವಿದೇಹದ ಸೀತಾನದಿಯ ಬಡಗಣ ತಡಿಯೊಳ್ ಸುಗಂಧಿಯೆಂಬ ವಿಷಯಮುಂಟದಱೊಳ್ ಕರಪೀಡನಂ ಧೇನುಕುಚದೊಳ್ ಬಂಧನಂ ಕಚದೊಳ್ ವಿರೋಧಂ ಪಂಜರದೊಳ್ ಗಳಿತದಾನತೆ ಕುಂಜರದೊಳ್ ಅವಗ್ರಹಂ ನಿತ್ಯವ್ರತದೊಳ್ ಆಸವಾಸಕ್ತಿ ಮಧುವ್ರತದೊಳ್ ಕಲ್ಯಾಣ ಹೀನತೆಯನಗಾರಕೇವಳಿಯೊಳ್ ಗಳಗ್ರಾಹಿತ್ವಮೇಕಾವಳಿಯೊಳ್ ಕಂಟಕವಕ್ರಿಮಂ ಬದರದೊಳ್ ಅಧಃಕೃತಸನಾಭಿತೆಯುದರದೊಳ್ ಅಧರತೆಯೋಷ್ಠದೊಳ್ ದಂಡ ಭ್ರಮಂ ಕುಲಾಲಚಕ್ರದೊಳ್ ಜಡಸ್ಥಿತಿ ನಕ್ರದೊಳ್ ಪ್ರಹರಣಶ್ರಮಂ ಖುರಳಿಯೊಳ್ ಮುಖರತೆ ಪುರಳಿಯೊಳ್ ಚಾಪಲತಾಯೋಗಂ ಜೀವೆಯೊಳ್ ಪ್ರತಾರಣಂ ನಾವೆಯೊಳ್ ರುಕ್ಸಮಾಕುಲತೆ ಮಣಿಯೊಳ್ ಮಹಾಮಾತ್ರವರ್ತನಂ ಸೃಣಿಯೊಳಲ್ಲದಿಲ್ಲಮೆಲ್ಲಿಯುಂ –

ಕಂ || ಸರ್ವರ್ತುಕಮೆ ಬನಂ ನೆಲ
ನುರ್ವರೆಯೆ ಕೊಳಂ ಸಮಂತು ಪೂಗೊಳನೆ ಬೞಿ
ಕ್ಕುರ್ವೀಧ್ರಂ ರೋಹಣಮೆ ಗ
ಡಾರ್ವರ್ಣಿಸಲಱಿವರಣ್ಣ ತಜ್ಜನಪದಮಂ || ೧೦

ಚಂ || ಪರಿಣತಗಂಧಶಾಲಿವನಗಂಧದಿನುಲ್ಲಸಿತಾಂಬುಜಾಕರೋ
ತ್ಕರನವಗಂಧದಿಂ ಪ್ರಚುರಚಂದನನಂದನಗಂಧದಿಂ ದಿಶಾ
ಪರಿಧಿಯನೆಯ್ದೆ ಬಾಸಣಿಸುತಿರ್ಪುದು ಸಾರ್ಥತೆಯಂ ನಿಜಾಖ್ಯೆಯೊಳ್
ನೆರಪಿ ಸುಗಂಧಿಮಂಡಲಮಿಳಾರಮಣೀರಮಣೀಯಕುಂಡಲಂ || ೧೧

ಕಂ || ಕಳ್ಪದ್ರುಮಾನ್ವಿತಂಗಳ್
ನೋೞ್ಪೊಡೆ ಕುರುಧರೆಗಳೆಂಬ ಪುರುಡೊದವಿದವೋಲ್
ಮಾೞ್ಪುದು ಜನಕ್ಕೆ ಮುದಮಂ
ಬೇೞ್ಪುದನೋರಂತೆ ಬೆಳೆದುದವನೀವಳಯಂ || ೧೨

ಆ ಮಹಿಮಹಿಳೆಗೆ ಲೀಲಾ
ತಾಮರಸಮಿದೆನಿಸಿ ರುಚಿರಮಣಿತೋರಣಮಾ
ಲಾಮಯಗೋಪುರಲಕ್ಷ್ಮೀ
ಧಾಮಂ ಸುರಪುರಸಮಾಹ್ವಯಂ ಪುರಮೆಸೆಗುಂ || ೧೩

ವ || ತತ್ಪುರೀಪರಿಸರದೊಳ್ –

ಶಾ || ಆವಾಸಂ ಮದನಂಗೆ ಜನ್ಮಭವನಂ ಚೈತ್ರಕ್ಕೆ ಲಾಸ್ಯೈಕಲೀ
ಲಾವೇಶ್ಮಂ ರತಿಗಾಸವಾವಸಥಮುನ್ಮತ್ತಾಳಿಗೆಂಬಂದದಿಂ
ಮಾವಿಂ ಮಾಧವಿಯಿಂ ತಮಾಲಲತೆಯಿಂ ಪುನ್ನಾಗದಿಂ ನಂದನ
ಶ್ರೀ ವಿಸ್ತಾರಮನಾಂತುದುಚ್ಛೃತದಳಚ್ಛಾಯಾತ್ತಪೀತಾತಪಂ || ೧೪

ವ || ಅಲ್ಲಿ –

ಚಂ || ತನಿತು ತೊಣಂಬೆವಿಟ್ಟುದಿರ್ದ ಪಣ್ಗಳನೞ್ತಿಯೆ ಮೆಲ್ದು ಸೋರ್ವತೆಂ
ಗಿನ ತಿಳಿನೀರನೀಂಟ ಲತೆಯಿಂದುಗುತಂದಲರೊಳ್ ಮಲಂಗಿ ಮೆ
ಲ್ಲನೆ ತೊನೆಯುತ್ತುಮಿರ್ಪೆಲೆಯ ತಣ್ಣೆಲರಿಂ ಬೆಮರಾಱಿಪೌರನಂ
ದನದೊಳಗಿಂತಯತ್ನಸುಖಮಂ ಪಥಿಕರ್ ಪಡೆವರ್ ನಿರಂತರಂ || ೧೫

ವ || ಅದಲ್ಲದೆಯುಂ –

ಕಂ || ಬೇಱೊಂದಮರಾವತಿವೋಲ್
ತೋಱುವುದತುಳಾಪ್ಸರಃಪ್ರತಾನದಿನೊಲವಂ
ಬೀಱುವ ನಂದನದಿಂ ಬಗೆ
ಗೇಱುವ ವಿಬುಧಾಲಯಂಗಳಿಂದಾ ನಗರಂ || ೧೬

ಮ || ಸ್ರ || ಹರಿನೀಲಾಟ್ಟಾಳಜಾಲಾಳಕೆ ವಿಶದಗವಾಕ್ಷಾಕ್ಷೆ ಚಂಚತ್ಪತಾಕಾ
ಕರೆ ವೃತ್ತೋತ್ತುಂಗಚೈತ್ಯಾಯತನಕುಚೆ ಕೃತಾಗಾರಪಾರಾವತೇಂದೀ
ವರಕರ್ಣೋತ್ತಂಸೆಯುತ್ತೋರಣಪರಿಖಚಿತಾದರ್ಶಬಿಂಬಾಸ್ಯೆ ವೇಲ್ಲ
ತ್ಪರಿಖಾಂಬುಕ್ಷೌಮೆ ಪಾಂಥಪ್ರತತಿಗೊದವಿಕುಂ ತತ್ಪುರೀಲಕ್ಷ್ಮಿ ಚೆಲ್ವಂ || ೧೭

ಕಂ || ಬಗೆಯೆ ಬಹುಭೂಮಿಕಂ ಮಾ
ನಗುಣೋನ್ನತಿಸಂಯುತಂ ಮಹಾಭೋಗಂ ತ
ನ್ನಗರಜನಾವಳಿಯುಂ ಹ
ರ್ಮ್ಯಗೃಹಾಳಿಯುಮೆಂದೊಡೊಳ್ಪನೇವಣ್ಣಿಪುದೋ || ೧೮

ಆ ಪುರಪತಿ ಸಿರಿಯಿಂದಳ
ಕಾಪುರಪತಿಗಸಮವಿಭವವಿಳಸನಲೀಲಾ
ವ್ಯಾಪಾರದಿಂದೆ ಭೋಗವ
ತೀಪುರಪತಿಗಧಿಕನೆನಿಸುವಂ ಶ್ರೀಷೇಣಂ || ೧೯

ನೇರ್ವಟ್ಟಾನರನಾಥನೆ
ಕೂರ್ವಾಳೊಳಳಂಕೆಗೊಮಡ ಧಾರಾಜಲದೊಳ್
ಬೇರ್ವರಿದಿರೆ ಮನದೆಱಕಂ
ನೀರ್ವಾನಸೆಯಂತೆ ವಿಜಯವಧು ನೆಲಸಿರ್ಪಳ್ || ೨೦

ಚಂ || ತಳಮನಹೀಂದ್ರರುಂದ್ರಫಣಮೆಂದು ಧನುರ್ಗುಣವೇಗತಾಡನಾ
ಕಳಿತವಿಕೀರ್ಣಕೋಷ್ಠಮನೆ ಕೂರ್ಮವಿನಿಷ್ಠುರಪೃಷ್ಠಭಾಗಮೆಂ
ದಳಘುತರಾಂಸಮಂ ದಿಗಿಭಕುಂಭಮಿದೆಂದು ಧರಿತ್ರಿ ಬಂದು ನಿ
ಶ್ಚಳತೆಯಿನಿರ್ಪಳಲ್ತೆ ಭುಜಮಂಡಳದೊಳ್ ವಸುಧಾಧಿನಾಥನಾ || ೨೧

ಕಂ || ಚತುರಂಗಸೈನಿಕಂ ಭೂ
ಪತಿಪರಿಕರಮೆನಿಪುದನಿತು ಸಪ್ತಾಂಗಮನಾ
ಕ್ಷಿತಿಪಾಲಕನೇಕಾಂಗದಿ
ನತುಳಯಶಂ ಗೆಲ್ದು ತನಗೆ ಮಾೞ್ಪುದಱಿಂದಂ || ೨೨

ಪರಿಕಿಪೊಡತಿವೃದ್ಧಂ ನಿ
ಷ್ಠುರವೃತ್ತಿ ಸದಾನುವರ್ತಿ ನೀತಿಯುತಂ ಭಾ
ಸುರತೇಜಂ ಕಂಚುಕಿಯಂ
ತಿರೆ ನಿಶ್ಚಲೆಮಾಡಿತಾ ನೃಪಶ್ರೀವಧುವಂ || ೨೩

ಪ್ರಿಯದಿಂದೊಂದೆಡೆಯಿರವಂ
ಬಯಸಿದ ಶೌರ್ಯಾದಿಸಕಲಪಾರ್ಥಿವಗುಣಸಂ
ಚಯದಭ್ಯರ್ಥನದಿಂದಾ
ಶ್ರಯರೂಪನನಾಮಹೀಶನಂ ಬಿದಿ ಪಡೆದಂ || ೨೪

ವ || ಎನಿಪಂ ಅಂತುಮಲ್ಲದೆಯುಂ –

ಕಂ || ಸತತಂ ನಿಜದೇಹದಿನ
ವ್ಯತಿರಿಕ್ತಯೆನಿಪ್ಪ ಹೃದಯವಲ್ಲಭೆಯೊಳ್ ತತ್
ಕ್ಷಿತಿಪಂ ಶ್ರೀಕಾಂತೆಯೊಳೊಂ
ದಿ ತೋಱುವಂ ಕಳೆಯೊಳೊಂದಿದಿಂದುವ ತೆಱದಿಂ || ೨೫

ಉ || ಆ ವಧು ಯೌವನೋದಯರಸಾಯನಸಿದ್ಧಿ ಮನೋವಿಮೋಹಸಂ
ಭಾವನವಿದ್ಯೆ ಕಂಜಭವಕೌತುಕಸೃಷ್ಟಿ ಮನೋಜಸಿದ್ಧಸಂ
ಜೀವನೆ ನೇತ್ರಪಾತ್ರನಟನಸ್ಥಳಿ ವಿಶ್ವಜಗದ್ವಿಲಾಸಜ
ನ್ಮಾವನಿ ಯೋಷಿದಾತ್ಮಗುಣನಾಮಮೆನಿಪ್ಪಳದೇಂ ಸುರೂಪೆಯೋ || ೨೬

ಮ || ವಿ || ಶರದಿಂದುಪ್ರಭೆಯೊಳ್ ಪ್ರಕಾಶನಮುಮಾಸೇವ್ಯತ್ವಮುಂ ಚೂತಮಂ
ಜರಿಯೊಳ್‌ಸೌರಭಮುಂ ವಿಕಾಸಮುಮುದನ್ವದ್ವೀಚಿಯೊಳ್ ಸ್ವಾಚ್ಛಮುಂ
ಪಿರಿದುಂ ಗೌರವಮುಂ ಬೆಡಂಗಿಡಿದು ತೋರ್ಪೊಂದಂದದಿಂ ನಾಡೆ ಬಂ
ಧುರಮಾಯ್ತಾ ನೃಪಕಾಂತೆಯೊಳ್ ಬಹುಕಲಾನೈಪುಣ್ಯಮುಂ ಪುಣ್ಯಮುಂ || ೨೭

ಕಂ || ಧಾತ್ರೀಶನ ಸಾಂದ್ರಮನ
ಸ್ಸೂತ್ರದೊಳಾಸತಿಯ ಗುಣಗಣೋತ್ತಮ ತತಿಯಮ
ಚಿತ್ರವಿಧದಿಂ ತೊಡರ್ಚಿದ
ಧಾತ್ರಂ ಮುಂ ಮಾಲೆಗಾಱರೊಡನಾಡಿದನೋ || ೨೮

ವ || ಎಂಬಿನಂ ನಿಜಮನಃಪ್ರಸಾದಭೂಮಿಯಾದ ಮಹಾದೇವಿಯುಂ ತಾನುಮೋರೊರ್ಮೆ ವಿಕಚಕೋಕನದಮಕರಂದಶೀಕರನಿಕರಾಕುಲಕೇಳೀಕಾಸಾರಂಗಳೊಳ್ ಕಳಹಂಸಮಿಥುನ ದಂತೆ ಜಲಕ್ರೀಡೆಯನೊಡರ್ಚಿಯುಂ ಓರೊರ್ಮೆ ಸುರಭಿಪರಿಮಳೋದ್ಗಾರಿಸ್ಮೇರಕು ಸುಮಮಂಜರೀನಿಕರಭರವಿನತಲತಿಕಾಗೃಹಂಗಳೊಳ್ ಭ್ರಮರಮಿಥುನದಂತೆ ಪುಷ್ಪಾ ಪಚಯದಿಂ ಭ್ರಮಿಸಿಯುಂ ಓರೊರ್ಮೆ ಮೃದುಳಕದಳೀವನವಳಯಿತೋತ್ತುಂಗಮಣಿ ಶೃಂಗ ಸಂಗತಕೃತಕಕುತ್ಕೀಲಂಗಳೊಳ್ ಕಿನ್ನರಮಿಥುನದಂತೆ ದಿಗವಲೋಕನವಿನೋದದಿಂ ರಮಿಯಿಸಿಯುಂ ಓರೊರ್ಮೆ ರಾಜದ್ರಜತಶೈಲಶಂಕಾಕಾಶಪ್ರಾಂಶುಸೌಧಮೂರ್ಧಂಗಳೊಳ್ ಚಕೋರಮಿಥುನದಂತೆ ಚಾರುಚಂದ್ರಿಕಾಸೇವನೆಯಂ ಸಂಭಾವಿಸಿಯುಂ ಓರೊರ್ಮೆ ಸಮುನ್ನತಶಾತಕುಂಭಸ್ತಂಭ ಸಂಭೃತಾಂದೋಳಲೇಖನವಿಳಾಸಮಿಷದಿಂ ವಿದ್ಯಾಧರ ಮಿಥುನದಂತಾಕಾಶ ಸಂಚಾರಮಂ ವಿಸ್ತಾರಿಸಿಯುಮಿಂತು ವಿವಿಧವಿನೋದಯಾನ ಪಾತ್ರೋತ್ತಾರಿತಾನೇಕವತ್ಸರಸರಿತ್ಸಂದೋಹರಾಗಿರ್ಪಿನಮೊಂದುದಿವಸಮಾ ಶ್ರೀಕಾಂತಾ ಮಹಾದೇವಿಗೆ ದೇವಪೂಜಾವಸಾನದೊಳ್ ಧರ್ಮಕಥಾಪ್ರಸಂಗದಿನಾಹಾರದಾನಮಾ ಹಾತ್ಮ್ಯಪ್ರಸ್ತುತಮಾಗೆ ಸುಶ್ರುತನೆಂಬ ಪುರೋಹಿತನಿಂತೆಂದಂ –

ಕಂ || ಉಪಚಿತವಿಧಿದಾತೃದ್ರ
ವ್ಯಪಾತ್ರಫಲಭೇದದಿಂದಮಯ್ದುತೆಱಂ ಭಾ
ವಿಪೊಡನ್ನದಾನಮದಱೊಳ್
ಪ್ರಪಂಚಿಪೊಡೆ ವಿಧಿಯದೊಂದೆ ನವವಿಧಮಕ್ಕುಂ || ೨೯

ವ || ಅದೆಂತೆಂದೊಡೆ –

ಕಂ || ಇದಿರ್ಗೊಂಡುಚ್ಚದೊಳಿರಿಸುವ
ಪದಯುಗಮಂ ತೊಳೆವ ಪೂಜಿಪೆಱಪಂಗವಚೋ
ಹೃದಯಾನ್ನಶುದ್ಧಿಯಂ ನೆಱೆ
ಪದವಡಿಸುವ ಭೇದದಿಂದೆ ಪರಮಾಗಮದೊಳ್ || ೩೦

ಭಕ್ತಿಜ್ಞಾನಶ್ರದ್ಧಾ
ಶಕ್ತಿತಿತಿಕ್ಷಾದಯಾಮಹೌದಾರ್ಯಸಮಾ
ಯುಕ್ತಂ ಸಪ್ತಗುಣಂ ಜೈ
ನೋಕ್ತಿಯಿನಾ ದಾತೃವೆನಿಪ ಭವ್ಯಂಗಕ್ಕುಂ || ೩೧

ವ || ಮತ್ತಂ ದ್ರವ್ಯಮೆಂಬುದು ಯೋಗ್ಯಾಯೋಗ್ಯಭೇದದಿಂದಿರ್ತೆಱಂ ಅಲ್ಲಿ ಯೋಗ್ಯಮಾಹಾ ರಾದಿಕಮಯೊಗ್ಯಂ ಕನಕಾದಿಕಂ ಅಲ್ಲದೆಯುಂ –

ಕಂ || ಉತ್ತಮಪಾತ್ರಂ ಸಕಲನಿ
ವೃತ್ತಂ ವಿರತಾವಿರತನೆ ಮಧ್ಯಮಪಾತ್ರಂ
ಮತ್ತಮಸಂಯುತಸಮ್ಯ
ಗ್ವೃತ್ತಮನಂ ತಾಂ ಜಘನ್ಯಪಾತ್ರಮೆನಿಕ್ಕುಂ || ೩೨

ವ || ಫಲಂ ಸ್ವರ್ಗಭೋಗಭೂಮಿಸಂಭವಂ ಅಲ್ಲಿ ಸ್ವರ್ಗಮೆಂಬಿನಂ ಸೌಧರ್ಮೆಶಾನಾದಿಗಳ ವರವಿಮಾನಂಗಳಿಂದ್ರಕಾಶ್ರೇಣಿಬದ್ಧಪ್ರಕೀರ್ಣಕಂಗಳೆಂದು ಮೂದೆಱಂ ಅಲ್ಲಿಯುಪಪಾದ ಭವನದಮಳ್ವಾಸಿನೆಡೆಯೊಳ್ ಸಹಜ ಯೌವನರುಂ ವಿಭೂಷಿತಮಕುಟಕಟಕಮಾಲ್ಯಾಂ ಬರಾದಿಭೂಷಣರಾಗಿ ಪುಟ್ಟುವಮರರ್ಗೆ ದೇವಪ್ರಾಣಾಯುಷ್ಯಪ್ರವಿಚಾರೋಚ್ಛ್ವಾಸನಿ ಶ್ವಾಸಲೇಶ್ಯಭೇದಂಗಳುಮಕ್ಕುಂ ಭೋಗಭೂಮಿಗಳ್ ಜಘನ್ಯಮಧ್ಯಮೋತ್ತಮ ನಾಮಯು ತಂಗಳಧ್ಯರ್ಧದ್ವೀಪದ ಹೈಮವತಹೈರಣ್ಯವತಂಗಳೆಲ್ಲಂ ಜಘನ್ಯಭೋಗಭೂಮಿಗಳಕ್ಕುಂ ಹರಿವರ್ಷರಮ್ಯಕಂಗಳೆಲ್ಲಂ ಮಧ್ಯಮಭೋಗಭೂಮಿಯಕ್ಕುಂ ದೇವೋತ್ತರಕುರುಗಳೆಲ್ಲಂ ಉತ್ತಮಭೋಗಭೂಮಿಗಳಕ್ಕುಂ ಅಲ್ಲಿ –

ಮ || ಸ್ರ || ಇಳೆ ಚಂಚತ್ಪಂಚರತ್ನಾಂಚಿತಮಮಳಸರಿತ್ಸಂಕುಳಂ ಕೈರವಾ
ಕುಳಮುದ್ಯಾನಂ ಕನತ್ಕೋಕಿಳರವಮುಖರಂ ಶೈತ್ಯಸೌರಭ್ಯಮಾಂದ್ಯಾ
ಕಳಿತಂ ವಾತಂ ನಿಶಾಹಶ್ಶಿಶಿರಜಳಧರಗ್ರೀಷ್ಮಕಾಲಂ ವಿಹೀನಂ
ಸಳಿಳಂ ಚಂದ್ರದ್ರವಾಭಂ ತರುಣತೃಣಗಣಂ ಮುಷ್ಟಿಮಾತ್ರಂ ಸುಪತ್ರಂ || ೩೩

ವ || ಮತ್ತಮಲ್ಲಿ –

ಕಂ || ವಸನಾಂಗಾತೋದ್ಯಾಂಗಪ್ರಸವಾಂಗಜ್ಯೋತಿರಂಗದೀಪಾಂಗಾನ್ನಾಂ
ಗಸುರಾಂಗಭಾಜನಾಂಗಾ
ವಸಥಾಂಗವಿಭೂಷಣಾಂಗದಶಕಲ್ಪಕುಜಂ || ೩೪

ವ || ಸೊಗಯಿಸುವುವಲ್ಲದೆಯುಂ –

ಕಂ || ಹುಸಿ ಹಸಿವಾಮಯಮಾಯಿಲ
ಮಸುರಾಹಿಕ್ರೂರಸತ್ವಬಾಧೆಗಲಿವು ವ
ರ್ತಿಸವೆನೆ ಭೋಗಕ್ಷಿತಿಗಳೆ
ನಿಸದಂ ಸಗ್ಗಕ್ಕಮಗ್ಗಳಂ ತಾಮಲ್ತೇ || ೩೫

ಪಿರಿದುಂ ವಿವೇಕದಿಂ ಮೆಯ್
ಸಿರಿಯಿಂದಾಯುಷ್ಯದಿಂ ವಿಳಾಸೋದಯದಿಂ
ಪರಿಣತೆಯಿಂ ತನ್ನೊಳ್ ಸರಿ
ದೊರೆ ಸುರರೇಂ ಭೋಗಭೂತಲಂ ಸುಖಮಯಮೋ || ೩೬

ವ || ಆ ಭೋಗಭೂಮಿಯೊಳ್ ಪಾತ್ರತ್ರಿತಯದಾನಫಲಂಗಳಿಂದೇಕದ್ವಿತ್ರಿಪಲ್ಯೋಪಮಾ ಯುಷ್ಯರುಮೇಕದ್ವಿತ್ರಿದಿವಸಾಂತರಿತಾಮಳಕಾಕ್ಷಬದರಮಾತ್ರಾಹಾರರುಂ ವ್ಯಪಗತ ನೀಹಾರರುಂ ದ್ವಿಚತುಷ್ಷಟ್ಸಹಸ್ರಚಾಪೋತ್ಸೇಧರುಂ ನಿಷ್ಕಷಾಯರುಮಾರ್ಯಾಭಿಧಾನರು ಮಾಗಿ ದಂಪತಿಸ್ವರೂಪದಿಂ ಪುಟ್ಟಿ –

ಚಂ || ನಿಸದಮೆನಿಪ್ಪ ಪುಟ್ಟೆಸೆವ ಜವ್ವನದಿಂದೆಮನಕ್ಕೆ ನಿಚ್ಚಲುಂ
ಪೊಸತೆನಿಸಿರ್ದ ರೂಪೊಲವನೋಸರಿಸಲ್ಕಣಮೀರ್ಯದಿರ್ಪಿನಂ
ಪಸರಿಪ ಕಾಮರಾಗರಸವಾರಿಧಿಯೊಳ್ ನಲವಿಂದೆ ದಂಪತಿ
ಪ್ರಸರಮೆ ನಾಡೆ ಮೂಡಿ ಮುೞುಗಾಡುವುದೀಡಿತಭೋಗಭೂಮಿಯೊಳ್ || ೩೭

ವ || ಮತ್ತಂ –

ಮ || ಸ್ರ || ಭವನಾಂಗಂ ಕಲ್ಪಭೂಜಂ ಸಮೆದ ಬಹುವಿಧೋತ್ತುಂಗಹರ್ಮ್ಯಾವಳೀಗ
ರ್ಭವಿಲಾಸಾವಾಸದೊಳ್ ಬಾೞ್ಮೊದಲಿದು ಬಸನಕ್ಕೆಂಬಿನಂ ಚೆಲ್ವುವೆತ್ತೊ
ಪ್ಪುವ ಶಯ್ಯೋದ್ದೇಶದೊಳ್ ಪೆರ್ಚಿದ ಸಮರತಲೀಲಾವಿನೋದಂಗಳಿಂದು
ತ್ಸವಮಂ ತಾಳ್ದುತ್ತುಮಿರ್ಪುಜ್ಜುಗಮೆ ಬವಸೆ ತದ್ಭೂಮಿಜರ್ಗೆಲ್ಲಮೆಂದುಂ || ೩೮

ವ || ಅಂತನಲ್ಪಕಂದರ್ಪಸುಖಸಮಾಸ್ವಾದನತತ್ಪರತೆಯಿಂದಿರ್ದು ನವಮಾಸಾವಶೇಷಾಯು ಕ್ಷಯರಾಗೆ ನೆಲಸಿರ್ದ ಗರ್ಭಂ ತದವಸಾನದೊಳ್ ಪುಟ್ಟಲೊಡಂ ಪಿತೃದ್ವಂದ್ವಂ ಕ್ಷುತಜೃಂ ಭಣವ್ಯಾಜದಿಂ ಪರಾಸುಗಳಕ್ಕುಮೆಂದು ಪೇೞೆ ಕೇಳ್ದು ಸುಶ್ರುತನಂ ತಾಂಬೂಲದಾನ ಪುರಸ್ಸರಂ ವಿಸರ್ಜಿಸಿ –

ಕಂ || ಗೞಗೞನಮೃತವಿಷಂಗಳ
ಮೞೆಯೊರ್ಮೆಯೆ ಕರೆದ ತೆಱದೆ ತನುಜೋದಯಮುಂ
ಬೞಿಯೊಳೆ ಜನನೀಜನಕ
ರ್ಗೞಿವುಂ ಸಮನಿಸಿದುದಿಂತಿದೇಂ ವಿಸ್ಮಯಮೋ || ೩೯

ವ || ಎಂದಾತ್ಮಗತದೊಳೆ ಬಗೆಯುತಿರ್ದನಂತರಂ ಕೆಲದೊಳಿರ್ದ ಕಳಭಾಷಿಣಿಯೆಂಬ ಕೆಳದಿಯ ಮೊಗಮಂ ನೋಡಿ –

ಕಂ || ಫಳಪಾಕಾಂತತೆಯೋಷಧಿ
ಗಳ ತೆಱದಿಂದೆಯ್ದೆ ಸಮನಿಸಿತ್ತಕ್ಕಟ ಸಂ
ಗಳಿಸದೆ ತನಯನ ಲೀಲಾ
ವಿಳೋಕನಪ್ರಭವಸೌಖ್ಯಮಾ ದಂಪತಿಯೊಳ್ || ೪೦

ಮ || ಸ್ರ || ಅವರೊಳ್ ಸಂಸಾರಸೌಖ್ಯಕ್ಕಿದುವೆ ಮೊದಲೆನಿಪ್ಪಾತ್ಮಜಾಲಿಂಗನಂ ಪೊ
ರ್ದುವುದಲ್ತೆಂದಂದದೆಂದುಂ ತವದ ತರುಣಿಮಂ ಬೇೞ್ಪುದಂ ಮಾೞ್ಪ ಕಲ್ಪ
ದ್ರುವಿತಾನಂ ವೀತವಿಶ್ವಾಮಯತೆಯುಚಿತಪಲ್ಯೋಪಮಂ ಜೀವನಂ ವ್ಯೋ
ಮವಿಭಾಗವ್ಯಾಪ್ತಿಯಪ್ಪುನ್ನತತನುವಿನಿತುಂ ನಿಶ್ಚಯಂ ವ್ಯರ್ಥಮಲ್ತೇ || ೪೧

ಕಂ || ಬೇಟಕ್ಕೆ ತವದ ಕೂಟಂ
ಕೂಟಕ್ಕೆ ತನೂಜರಾ ತನೂಜರೊಳಂ ಮು
ದ್ದಾಟಂ ಫಲಮದೆ ತಮ್ಮೊಳ್
ನಾಟದು ಗಡ ಪೆಱವು ಸುಖಲವಂಗಳೊಳೇನೋ || ೪೨

ಸುತರಿಲ್ಲದ ಸಿರಿ ತುಹಿನೋ
ದ್ಗತಿಯಿಲ್ಲದ ವಾರಿ ಬೇಟಮಿಲ್ಲದ ಕೂಟಂ
ವ್ರತಮಿಲ್ಲದಱಿವು ಮೃದುಪದ
ಗತಿಯಿಲ್ಲದ ಲಾಸ್ಯಮಿಂತದೇಂ ಮೆಱೆದಪುದೇ || ೪೩

ವ || ಅದುಕಾರಣದಿಂ –

ಉ || ಚುಂಬಿಸಿ ಲೋಳೆವಾಯ್ದೆಱೆಯನೀಕ್ಷಿಸಿ ಮಕ್ಕಳಮುದ್ದುಗೆಯ್ತದೊ
ಳ್ಪಂ ಬಿಡದಪ್ಪಿ ಕೋಮಲತರಾಂಗಮನಾಲಿಸಿ ನುಣ್ದೊದಳ್ ಪೊದ
ೞ್ದಿಂಬಿನಿವಾತನೞ್ಕಱೊಳೆ ವಾಸಿಸಿ ನೆತ್ತಿಯನಿಂತು ಸೌಖ್ಯಮಂ
ತುಂಬಿ ನಿಜಾಖಿಲೇಂದ್ರಿಯದೊಳಂ ತಣಿವೆಯ್ದುವರೇಂ ಕೃತಾರ್ಥರೋ || ೪೪

ಎಂದು ಪುತ್ರದೋಹಳಾಕುಲೀಕೃತಮನೋವೃತ್ತಿಯಾಗಿ ಮತ್ತಮಿಂತೆಂದಳ್ –

ಚಂ || ಮಱೆಯದೆ ಬೆಚ್ಚುನೀರೆಱೆದು ತೊಟ್ಟಿಲೊಳಿಟ್ಟು ಬಸಿರ್ಗೆ ಚೀನದೊ
ರ್ಚೆಱಗನೆ ತಂದು ಸೂನುಗೊಲವಿಂ ಸೊಡರ್ವಕ್ಕಿನ ಬೊಟ್ಟನಿಟ್ಟು ತೂ
ಪಿಱಿದು ಪಲರ್ಮೆಯುಂ ಪರಸಿ ಸೋಗಿಲೊಳಿಟ್ಟುರೆ ನಿಚ್ಚನಿಚ್ಚಮ
ೞ್ಕಱಿನೊಳೆ ಮೆಚ್ಚನಿತ್ತು ತನಿವೆರ್ಚುವ ಸೈಪೆನಗೆಂದು ಸಾರ್ಗುಮೋ || ೪೫

ಕಂ || ಅರಸಂ ಕರತಳತಾಡನ
ಪುರಸ್ಸರಂ ದೇವ ಬನ್ನಿಮೆಂದೊಲವಿಂದೊ
ಡ್ಡಿರೆ ಕೈಯನೊಲ್ಲದೆನ್ನಯ
ಕೊರಲಂ ತೞ್ಕೈಪ ತನಯನೆಂದಾದಪನೋ || ೪೬

ಎತ್ತಿದೊಡೆನ್ನಂಗದೊಳೊಗೆ
ದೆತ್ತುವ ಪುಳಕಕ್ಕೆ ಸೌಕುಮಾರ್ಯದಿನೇವೈ
ಸುತ್ತುಂ ಕೈಯಿಂದಿೞಿಯ
ಲ್ಕತ್ತವಳಿಪ ಸುತನ ಪರಿಯನೆಂದೀಕ್ಷಿಪೆನೋ || ೪೭

ಮಾಂಗಾಯ್ ಕದಪಂ ಚುಂಬಿಸೆ
ಪೊಂಗವಡಿಕೆ ನೊಸಲೊಳಲೆಯೆ ಗೆಜ್ಜೆಗಳುಲಿಪಂ
ಸಂಗಳಿಸೆ ಚಲನದೊಳ್ ಭವ
ನಾಂಗಣದೊಳ್ ಕಂದನೆಂದು ದಟ್ಟಡಿಯಿಡುವಂ || ೪೮

ಅಂಜನಕರ್ಬುರಕಾಯಂ
ರಂಜಿತಕರಪುಷ್ಕರಂ ರದದ್ವಿತಯಯುತಂ
ಗುಂಜತ್ಪದಾಂದುಕಂ ನವ
ಕುಂಜರಮೆನೆ ತನಯನೆಂದು ಕಣ್ಬೊಲನಪ್ಪಂ || ೪೯

ನಂದನನುತ್ಸಂಗದೊಳಿ
ರ್ದೊಂದೈದೆರಡೊಂಬತೆಂದು ತೊದೞಿಸೆವಿನಮೋ
ರೊಂದನೆ ಕುಡುವೆರಲಿಂದಮ
ದೆಂದೆಣಿಸುಗುಮೆನ್ನ ಕೊರಲ ಹಾರದ ಮುತ್ತಂ || ೫೦

ವ || ಎಂದು ಭಾವ ಭಾವಿತನೂಭವಾನುಕ್ರಮಪ್ರಭವಭಾವಂಗಳಂ ಭಾವಿಸಿ ಪಲುಂಬಿ ಪಂಬಲಿಸಿಯುಂ ಅಪರಿಪೂರ್ಣಮನೋರಥೆಯುಮಪ್ಪುದಱಿಂ ಸಮಸ್ತಸನಾಭಿಸಂಯುಕ್ತೆಯಾಗಿಯುಮೇಕಾಕಿನಿಯಂತೆಯುಂ ರಾಜಸದನಸಂಸ್ಥೆಯಾಗಿಯುಂ ಶೂನ್ಯಾರಣ್ಯಸಂಸ್ಥೆಯಂತೆಯುಂ ಸಾಮ್ರಾಜ್ಯ ಲೀಲಾಸಮೇತೆಯಾಗಿಯುಂ ವಿಪನ್ನಿಪೀಡಿತೆಯಂತೆಯುಂ ಪತಿ ಪ್ರಸಾದಭೂಮಿಯಾಗಿಯುಂ ಅನಾಥೆಯಂತೆಯುಂ ಸನ್ನಿಹಿತದೈವೆಯಾಗಿಯುಮದೈವೆಯಂತೆಯುಂ ಕುಮುದದಳದೀರ್ಘಲೋಚನೆಯಾಗಿಯುಮಂಧೆಯಂತೆಯುಂ ಪವಿತ್ರ ಪ್ರಾರ್ಥಿವಕುಲಪ್ರಸೂತೆಯಾಗಿಯುಂ ಅಜನ್ಮೆಯಂತೆಯುಂ ತನ್ನಂ ಬಗೆದುಬ್ಬೆಗದಿನಲ್ಲಿಂ ತಳರ್ದು ನಿಜನಿವಾಸಕ್ಕೆ ವಂದು ಮುಂದಣ ಮೌಕ್ತಿಕಮಂಡಪದ ನಡುವಣ ಮರಕ ತಪರ್ಯಂಕದೊಳವಿರಳಾಶ್ರುಬಿಂಸಂದೋಹದಂತುರಿತಪಕ್ಷ್ಮಮಾಲಾಲುಳಿತ ನೇತ್ರೆಯುಂ ಕಪೋಲಮೂಲಕೀಲಿತವಾಮಕರಶತಪತ್ರೆಯುಂ ಆಕ್ರಾಂತಚಿಂತಾಭರಸ್ತಿ ಮಿತಗಾತ್ರೆಯುಂ ಆಶ್ವಾಸನಪರಾಂತಃಪುರವೃದ್ಧಾಂಗನಾನಿಷೇವ್ಯಮಾನೆಯುಂ ಮ್ಲಾನ ವದನಸಖೀಪ್ರಕರಪರಿಚಾರಿಕಾಪರಿಷ್ಕೃತೆಯುಂ ದೂರದೂರೋಪವಿಷ್ಟ ಮೂಕಮುಖ ಕುಬ್ಜವಾಮನಕಿರಾತವರ್ಷಧರಕಂಚುಕಿಪ್ರಪಂಚೆಯುಮಾಗಿರ್ಪಿನೆಗಂ –

ಚಂ || ಪಲವು ವಿಧಂಗಳಿಂ ತುಱುಗಿ ಮೆಟ್ಟುವ ವಾರುವದೊಂದು ವಲ್ಗನ
ಕ್ಕಲುಗೆ ಕದಂಪಿನೊಳ್ ಕನಕಕುಂಡಲವಡ್ಡತರಕ್ಕೆ ವಂದು ನಿ
ಶ್ಚಲಮೆನಿಪಂಘ್ರಿಯೊಂದೆಸೆಯೆ ಸನ್ನೆಯ ಸನ್ನೆಯನೊಂದುಮಾಡೆ ಭೂ
ತಲಪತಿ ಬಂದನುಚ್ಛ್ರಿತಸಿತಾತಪವಾರಣಪುಷ್ಪಿತಾಂಬರಂ || ೫೧

ವ || ಅಂತು ವೈಹಾಳಿಯಿಂದರಸಿಯ ಮನೆಗೆ ಬಂದುಚ್ಚೈಶ್ಶ್ರವದಿನವನಿಗವತರಿಸುವ ಮಹೇಂದ್ರನಂತೆ ತುಂಗತುರಂಗದಿಂದಮಿೞಿತಂದು ಅಂತಃಪುರಪ್ರವೇಶೋಚಿತಪರಿಜನಂ ಜನಪನೊಳಪೊಕ್ಕು –

ಕಂ || ಭೋಂಕನೆ ಕಂಡಿನಿವಿರಿದಾ
ತಂಕಮನರಸಿಯ ಮನಕ್ಕೆ ಮಾಡಿದರಾರೆಂ
ದುಂ ಕಾಣೆನಿನಿತನೆಂದೆರ್ದೆ
ಶಂಕಿಸೆ ನವಸೇವಕಂಬೊಲೊಯ್ಯನೆ ಸಾರ್ದಂ || ೫೨

ವ || ಅಂತೆಯ್ದೆವಂದು ಪರ್ಯಂಕತಲದೊಳ್ ಕುಳ್ಳಿರ್ದು –

ಕಂ || ಜಗದಧಿಪತಿ ಸಮದುಃಖಂ
ಮೃಗನಯನೆಯ ಮನದ ಖೇದಮಂ ಪಚ್ಚುಗೊಳಲ್
ಬಗೆದಂತಾಕುಳಚಿತ್ತಂ
ದೃಗಂಬುವಂ ತೊಡೆದು ಮೆಲ್ಲನಂದಿಂತೆಂದಂ || ೫೩

ಚಂ || ಕರತಲಕಾಂತಿಯಿಂ ವದನಚಂದ್ರಮನೊಳ್ ನವಸಾಂಧ್ಯರಾಗಮಂ
ಸುರಿವ ನಿರಂಜನಾಶ್ರುಕಣದಿಂ ಕುಚದೊಳ್ ಪೊಸಮುತ್ತಿನಾರಮಂ
ಸರಳತರೋಷ್ಣನಿಶ್ವಸಿತಮಾರುತನಿಂದೆ ನಿಜೋತ್ತರೀಯದೊಳ್
ತರಳತೆಯಂ ನಿಯೋಜಿಪ ನೆಗೞ್ತೆಗೆ ಕಾರಣಮೇನೊ ಕಾಮಿನೀ || ೫೪

ವ || ಅದಲ್ಲದೆಯುಂ –

ಕಂ || ಚರಣಾಂಗುಲಿಗಳ್ ಮಣಿನೂ
ಪುರಂಗಳಿಂದೆಸೆದು ತೋಱುತಿರ್ದಪುವಿಲ್ಲೇ
ಕರಸಿ ಪರಾಗಾರುಣಷ
ಟ್ಚರಣಂಗಳ್ ನೆಲಸದಬ್ಜದೆಸೆವೆಸಳ್ಗಳವೋಲ್ || ೫೫