ಮನಸಿಜಫಣಿವಲ್ಮೀಕಮಿ
ದೆನಿಪ ನಿತಂಬದೊಳುದಗ್ರಮಣಿರಶನಾರ
ಶ್ಮಿನಿಕರಸುರಚಾಪಂ ಪೊ
ಣ್ಮಿ ನಿಮಿರ್ಚದಿದೇಕೆ ಮನ್ಮನಶ್ಶಿಖಗೊಲವಂ || ೫೬

ಕಾಮನ ಕೃತಕಾದ್ರಿಗಳೆನಿ
ಪೀ ಮೊಲೆಗಳ ಮೇಲೆ ವಿಮಲನಿರ್ಝರಪೂರೋ
ದ್ದಾಮತೆಯಂ ನವಮೌಕ್ತಿಕ
ದಾಮದಿನೊಡರಿಸದ ತೆಱನಿದೇನಿಂದುಮುಖೀ || ೫೭

ಸರಸೀರುಹನಾಳಮನಾ
ವರಿಸಿದ ಶೈವಾಲಮೆನೆ ಹರಿದ್ರತ್ನಮಯ
ಸ್ಫುರಿತಕಟಕಂ ಪ್ರಕೋಷ್ಠದೊ
ಳರುಣಾಧರೆ ತೊಳಗಿ ಬೆಳಗದಿರ್ಪುದಿದೇನೋ || ೫೮

ಎರಡುಂ ಕರ್ಣದೊಳಂ ಪೊಳೆ
ವ ರತ್ನಮಯಪತ್ರದಿಂದಮಿನಬಿಂಬಯುಗಾಂ
ತರಿತಮೆನಿಪಿಂದುಬಿಂಬದ
ಪರಿಜಂ ಪರಿಭವಿಸದೇಕೆ ನಿನ್ನಯ ವದನಂ || ೫೯

ತರದೆ ಪೆಱೆ ತನ್ನ ಕಱೆಯಂ
ಶಿರದೊಳ್ ತಾಳ್ದಿರ್ದುದೆನಿಸೆ ನಿಜನಿಟಿಲಂ ತ
ಳ್ತುರುಳಿಗುರುಳ್ಗಳನಾತ್ಮೋ
ಪರಿದೇಶದೊಳಾಂತುದಿಲ್ಲದೇಕಾರಣದಿಂ || ೬೦

ಮದನಪರಿವಾದಿನೀನಾ
ದದಿನಗ್ಗಳಮೆನಿಪ ನಿನ್ನ ನುಣ್ನುಡಿ ಪೊಱಪೊ
ಣ್ಮದೋಡೇಕಾಯತ್ತಮದಾ
ಗದೆ ಕಳರವಲಕ್ಷ್ಮಿ ಸಮದಕೋಕಿಲಕುಲದೊಳ್ || ೬೧

ಉ || ಆಮ್ಮ ಱೆದೊರ್ಮೆಯುಂ ನಿನಗೆಯಪ್ರಿಯಮಂ ನೆಗೞೆಂ ಮನಕ್ಕಿನಿ
ತ್ತುಮ್ಮೞಮಾದುದಾರಿನಿದು ದೇವಿ ನಿವೇದಿಪುದೆಂದು ಜೀವಿತೇ
ಶಮ್ಮಿಗೆ ತನ್ನನಾಗ್ರಹಿಸೆ ಸೊಲ್ಲಿಸಲೊಲ್ಲದೆ ನಾಣ್ಚಿ ನೋಡಿದಳ್
ತಾಮ್ಮನದನ್ನಳಪ್ಪ ಕಳಭಾಷಿಣಿಯಂ ನಯನತ್ರಿಭಾಗದಿಂ || ೬೨

ವ || ಅಂತಶ್ರುಮಿಶ್ರಕಟಾಕ್ಷದಿಂದೀಕ್ಷಿಸುವುದುಮೆಲ್ಲಮಾಕೆಯ ಮನಮನಱಿದು ಪುತ್ರದೋಹಳ ಕಾರಣಮಂ ಧಾರಿಣೀಪತಿಗೆ ಸವಿಸ್ತರಂ ಬಿನ್ನವಿಸೆ ಕೇಳ್ದರಸನುಂ ತಕ್ಕ್ಷಣೋಪಗತತನೂಭ ವಾಲಾಭಚಿಂತಾಪಾರತಂತ್ರತೆಯಿಂ ಮ್ಲಾನಮನನುಂ ದೀನಾನನನುಮಾಗಿ –

|| ಪೃಥ್ವೀವೃತ್ತಂ ||

ಸರೋಜಸಖನಿಲ್ಲದಂಬರಮನಾದಮುದ್ದ್ಯೋತಿಸಲ್
ಸರೋಜರಿಪುವಂಚೆಯಿಲ್ಲದ ಸರೋವರೋದ್ದೇಶಮಂ
ಸರೋರುಹಮೆ ಭೂಷಿಸಲ್ನೆರೆಗುಮನ್ಯನಾವಂ ದಿಟಂ
ತೆರಳ್ಚುಗುಮಪತ್ಯಮಿಲ್ಲದ ಕುಲಕ್ಕೆ ಸಂಪತ್ತಿಯಂ || ೬೩

ವ || ಎಂದು ತನ್ನೊಳ್ ಬಗೆದು ಬೞಿಯಮರಸನರಸಿಯಂ ಸಂತೈಸಲೆಂದಿಂತೆಂದಂ –

ಕಂ || ಇದು ದೈವಸಾಧ್ಯಮೆನಿಸಿ
ರ್ದುದಱೊಳ್ ನಿನಗಿನಿತು ದೇವಿ ಬಗೆವೊಡಯುಕ್ತಂ
ಹೃದಯಶರೀರೇಂದ್ರಿಯಶೋ
ಷದಾಯಕಂ ತಾನೆನಿಪ್ಪ ಶೋಕೋದ್ರೇಕಂ || ೬೪

ಉ || ಈ ತೆಱದಿಂದೆ ನೀನಿರೆ ಸಮಂತೆನಗಂ ದೊರೆಕೊಳ್ಗುಮಲ್ತೆ ದುಃ
ಖಾತಿಶಯಂ ಬೞಿಕ್ಕದುವೆ ಮಾೞ್ಕುಮಶೇಷಜನಕ್ಕಮೆಯ್ದೆ ಚಿಂ
ತಾತರಳತ್ವಮಂ ತೊಱೆವುದಂತದಱಿಂ ತರಳಾಯತಾಕ್ಷಿ ನಿ
ರ್ಹೇತುಕಮಪ್ಪ ಖೇದಮನಿದಲ್ತು ಕೃಪಾವತಿಯರ್ಗೆ ಚೇಷ್ಟಿತಂ || ೬೫

ಕಂ || ಪರಿಣಾಮವಶದೆ ಜನ್ಮಾಂ
ತರದೊಳ್ ಶುಭಮಶುಭಮೆಂಬ ಕರ್ಮಂಗಳೊಳಾರ್
ದೊರೆಕೊಳಿಸಿದರಾವುದನಾ
ದೊರೆಯದೆ ಫಲಮಕ್ಕುಮವರ್ಗೆ ಪೆಱತಾದಪುದೇ || ೬೬

ವ || ಅದಱಿನಿಷ್ಟಾನಿಷ್ಟಂಗಳಾತ್ಮಶುಭಾಶುಭಕರ್ಮಾಯತ್ತಂಗಳದಱೊಳ್ ಮನೋರಾಗಕ್ಕಂ ಹೃದ್ರೋಗಕ್ಕಮವಕಾಶಮಿಲ್ಲಮದಲ್ಲದೆಯುಂ –

ಕಂ || ಆರಯೆ ದುರ್ಘಟಮೆನ್ನ ಮ
ನೋರಥಮೆಂದಲಸಗಮನೆ ಮನದೊಳ್ ಪಿರಿದುಂ
ದೂರಿಸಲದೇಕೆ ಬಿದಿ ಕೈ
ವಾರಿಸಿದೊಡೆ ತೀರದಿರ್ಪುದಾವುದುಮುಂಟೇ || ೬೭

ವ || ಅಂತುಮಲ್ಲದೆಯುಂ –

ಉ || ವಿಷ್ಟಪಮೊರ್ಮೆಯುಂ ತಮಗೆ ಹಸ್ತತಲಾಮಲಕಂಬೊಲೆಯ್ದೆ ವಿ
ಸ್ಪಷ್ಟಮೆನಿಪ್ಪ ಬೋಧಯುತರಿಂ ತಿಳಿದಿಲ್ಲಿಗೆ ತಕ್ಕುದೇನುಮಂ
ಚೇಷ್ಟಿಪಮನ್ನೆಗಂ ಮನದೊಳುಮ್ಮೞಿಸಲ್ಕಣಮಾಗದೆಂದು ವಾ
ಗ್ವೃಷ್ಟಿಯಿನಾ ಲತಾಂಗಿಯ ಮನೋಲತೆಗಿತ್ತನಪೂರ್ವತುಷ್ಟಿಯಂ || ೬೮

ವ || ಅಂತುಮೆಂತಾನುಮಾಕಾಂತೆಯಂ ಸಂತೈಸಿ ಕೆಲವು ದಿವಸಂ ಸಲುತ್ತುಮಿರೆಯಿರೆ –

ಉ || ಪೌರವನಾಂತರಾಳದೊಳಗೊರ್ಮೆ ವಸಂತವಿಲಾಸಕೌತುಕ
ಪ್ರೇರಿತಮಾನಸಂ ತೊಳಗುತಿರ್ದು ವಿಯತ್ತಳದಿಂ ತಮಾಲಧಾ
ತ್ರೀರುಹಮೂಲಭೂತಲಕೆ ವರ್ಪನನಾಗಳನಂತಸಂಜ್ಞನಂ
ಚಾರಣಯೋಗಿಯಂ ನೃಪತಿ ಕಂಡನಖಂಡಸುಖೈಕಭಾಗಿಯಂ || ೬೯

ವ || ಕಂಡೆಯ್ದೆವೋಗಿ –

ಕಂ || ಅತುಳತಪಶ್ಶ್ರೀಕನನು
ನ್ನತರಾಜ್ಯಶ್ರೀಕನವಧಿದರ್ಶನನಂ ಸ
ನ್ನುತಶುದ್ಧದರ್ಶನಂ ತ
ದ್ವ್ರತಿಪತಿಯಂ ನೃಪತಿ ಭಕ್ತಿಯಿಂ ವಂದಿಸಿದಂ || ೭೦

ವ || ಆಗಳ್ –

ಕಂ || ಮಿಸಿಸಿದಪಂ ಕರುಣಾಮೃತ
ವಿಸರದಿನವನಿಪನನೆಂಬವೋಲ್ ಕಾಯೋತ್ಸ
ರ್ಗಸಮಾಪ್ತಿಯೊಳೀಕ್ಷಣರುಚಿ
ಪಸರಿಸೆ ಮುನಿ ನೋಡಿ ಪರಸಿದಂ ಮೃದುರವದಿಂ || ೭೧

ವ || ಅಂತು ಪರಸಿ ಕುಳ್ಳಿರೆ ತನ್ಮುನೀಂದ್ರಪಾದಪಾರ್ಶ್ವದೊಳ್ ಮುಕುಳಿತ ಕರಸರೋಜನುಂ ಪ್ರಶ್ರಯಾವನತಶಿರಸ್ಸರೋಜನುಮಾಗಿ ಕುಳ್ಳಿರ್ದು –

ಕಂ || ಅರಸಂ ಮುನಿಪತಿಪಾದಾಂ
ಬುರುಹಕ್ಕತಿವಿಶದದಶನರುಚಿನಿಚಯಪರಂ
ಪರೆಯಿಂ ಚಂದನಚರ್ಚಾ
ವಿರಚನೆಯಂ ಮಾೞ್ಪ ತೆಱದಿನಂದಿಂತೆಂದಂ || ೭೨

ಅಱನಂ ಪೆರ್ಚಿಸುವಱಿವಂ
ನೆಱಪುವ ದುಃಖಮನದಿರ್ಪುವುತ್ಸವಮಂ ಕ
ಣ್ದೆಱೆಯಿಪ ನಿಮ್ಮಯ ದರ್ಶನ
ಕಱಿದೆಂ ಕಾರಣಮನೆನ್ನ ಪುಣ್ಯಮೆ ಪೆಱತೇಂ || ೭೩

ಭಾವಿಭವದ್ಭೂತಮೆನಿ
ಪ್ಪಾವಸ್ತುಗೆ ನೀಂ ಪ್ರಮಾಣನಱಿಯಿಪುದದಱಿಂ
ದೇವ ಭವಸ್ಥಿತಿಯಂ ಪರಿ
ಭಾವಿಸಿಯುಂ ವಿರತಿಭಾವಮೆನಗಾಗದುದೇಂ || ೭೪

ಎನೆ ಮುನಿಪತಿ ತನ್ಮಹಿಪತಿ
ಮನೋಗತಮನಱಿದು ಬೞಿಕಮಿಂತೆಂದಂ ನಂ
ದನಲಾಭವಾಂಛೆ ನಿನಗು
ಳ್ಳಿನೆಗಂ ಸಮನಿಸದಣಂ ವಿರತಿಪರಿಣಾಮಂ || ೭೫

ಸುತಜನ್ಮಕ್ಕಂ ಪಿರಿದುಂ
ಪ್ರತಿಬಂಧಕಮೊಂದು ಪೂರ್ವಜನ್ಮಾಂತರಸಂ
ಗತಮುಂಟದನುಸಿರ್ದಪ್ಪೆಂ
ಕ್ಷಿತಿಪತಿ ಕೇಳ್ ಮುನ್ನೆ ನಿನ್ನ ವಧುವೀಪುರದೊಳ್ || ೭೬

ವ || ದೇವಾಂಗದನೆಂಬ ವಣಿಗ್ವರಂಗಂ ಆತನ ಕುಟುಂಬಿನಿ ಶ್ರೀನಿತಂಬಿನಿಗಂ ಸುನಂದೆಯೆಂಬ ಮಗಳಾಗಿ ಪುಟ್ಟಿ ನಿರ್ಭರಪ್ರಥಮಗರ್ಭಭಾರಪರಿಕ್ಲೇಶಾಯಾಸಿತಸ್ವಾಂತೆಯುಮಂಗವೈ ರಸ್ಯಾಕ್ರಾಂತೆಯುಮಾಗಿರ್ದ ವೈಶ್ಯಕಾಂತೆಯನೊರ್ವಳಂ ಕಂಡು –

ಕಂ || ಮನದೊಳತಿಭೀತಿಯಂ ಭೋಂ
ಕನೆ ತಳೆದಾಭೀರುವಾವ ಜನ್ಮದೊಳಂ ಮ
ತ್ತೆನಗೆ ನವವಯಸದೊಳ್ ತಾಂ
ಜನಿಯಿಸದಿರ್ಕೆಮ ವಿಷಾದಗರ್ಭಂ ಗರ್ಭಂ || ೭೭

ವ || ಎಂದು ನಿಧಾನಂಗೆಯ್ದು ನಿಜಾಯುರ್ವ್ಯಪಾಯದೊಳಾಚರಿತಾಣುವ್ರತ ಫಲದಿಂದಂ –

ಕಂ || ಸೌಧರ್ಮದೊಳಮರತ್ವ
ಶ್ರೀಧಾರಿಣಿಯಾಗಿ ಮತ್ತೆ ಬಂದೀಗಳ್ ದು
ರ್ಯೋಧನಸುತೆಯುಂ ಭವದವ
ರೋಧಜನಾಗ್ರಣಿಯುಮಾದಳದುಕಾರಣದಿಂ || ೭೮

ಇನ್ನೆವರಂ ಸುತಜನ್ಮವಿ
ಪನ್ನತೆ ಭವದೀಯಸತಿಯೊಳಾಯ್ತುದಯಿಸಿದ
ಪ್ಪಂ ನಿಜಕುಲದೀಪಕನಿ
ನ್ನುನ್ನತಮತಿ ರಿಪುಲತಾಲವಿತ್ರಂ ಪುತ್ರಂ || ೭೯

ಆತನ ಭುಜಶಿಖರದೊಳೀ
ಭೂತಳಮಂ ನಿಱಿಸಿ ಬೞಿಕ ನೀಂ ಜಿನದೀಕ್ಷಾ
ಪೂತತನುಮಾಗಿ ಮೋಕ್ಷಪು
ರಾತಿಥಿಯಾದಪ್ಪೆ ಘಾತ್ಯಘಾತಿಚ್ಯುತಿಯಿಂ || ೮೦

ವ || ಎಂದಾ ಮಹರ್ಷಿ ಪೇೞೆ ಕೇಳ್ದು ನಿಜಚಿಂತಾಪಹಾರಿಚಂದನನಂದನನಭ್ಯುದಯಮವಶ್ಯಮೆಂದು ಆನಂದಮನೆಯ್ದಿ ಬೀೞ್ಕೊಂಡರಮನೆಗೆ ವಂದು ಅರಸಿಗಮಱಿಪಿ ಬೞಿಯಮಿರ್ವರುಂ ಮನದೆ ಸಮೀಹಿತಾವಾಪ್ತಿನಿಮಿತ್ತಂ ಸಕಲಜಗದೇಕಕಲ್ಪವೃಕ್ಷಮಪ್ಪ ಧರ್ಮಮನೊ ಡರ್ಚಲುದ್ಯುಕ್ತರಾಗಿ –

ಮ || ಸ್ರ || ಪಗಲುಂ ಬೆಳ್ದಿಂಗಳಂ ಬೀಱುವ ಸೊದೆವೆಳಗಂ ತಾಳ್ದು ನೀಳ್ಪಿಂದಮೆತ್ತಂ
ಮುಗಿಲಂ ಪೊತ್ತಿರ್ಪ ಕೂಟಪ್ರಕರದಿನಿವು ದಲ್ ಜೈನಜನ್ಮಾಭಿಷೇಕ
ಸ್ಥಗಿತಕ್ಷೀರಾಂಬುಫೇನಪ್ರಕರದೆ ಕಡುವೆಳ್ಪೇಱಿದಿಂದ್ರಾದ್ರಿಯೆಂಬ
ನ್ನೆಗಮೊಪ್ಪಂಬೆತ್ತುವಂ ಮಾಡಿಸಿದರತುಲಚೈತ್ಯಂಗಳಂ ಭಕ್ತಿಯಿಂದಂ || ೮೧

ವ || ಅದಲ್ಲದೆಯುಂ –

ಶಾ || ದಾನಕ್ಕುತ್ತಮಪಾತ್ರಸಂತತಿ ಮಹಾಪೂಜಾವಿಧಾನಕ್ಕೆ ಚೈ
ತ್ಯಾನೀಕಂ ನಿಜಶೀಲವರ್ತನೆಗೆ ಸಾಗಾರವ್ರತವ್ರಾತಮ
ನ್ಯೂನೋಪಕ್ರಮಿತೋಪವಾಸವಿಸರಕ್ಕಾಪುಣ್ಯತಿಥ್ಯುತ್ಕರಂ
ತಾಣೆಯ್ದಿತ್ತಣಮಿಲ್ಲದೇಂ ನಿರತರೋ ಭೂಕಾಂತನುಂ ಕಾಂತೆಯುಂ || ೮೨

ವ || ಅಂತನೇಕಸತ್ಕ್ರಿಯಾನಿಯತರಾಗಿರ್ಪಿನಮೊಂದುದೆವಸಂ –

ಚಂ || ಋತುಸಮಯೋಪಯುಕ್ತೆ ಸತಿನೂತ್ನವಸಂತಋತುಪ್ರಮೋದಸಂ
ಗತವನಲಕ್ಷ್ಮಿಯಂತೆ ನಯನೋತ್ಸವಮಂ ದಯೆಗೆಯ್ದು ಮಾಧವೀ
ವಿತತಿಯ ಬಳ್ವಳಪ್ಪ ಸೆಳೆಯಂ ಪಿಡಿದಂಗಜಲಾಸ್ಯಲೀಲೆಯಂ
ಕ್ಷಿತಿಪನ ಚಿತ್ತವೃತ್ತಿಗುಪದೇಶಿಪ ಲಾಸಕಿಯಂತೆ ತೋಱಿದಳ್ || ೮೩

ವ || ಅನಂತರಂ ಚತುರ್ಥಸ್ನಾನದೊಳ್ ಧವಳಮಂಗಳಾಲಂಕೃತೆಯಾಗಿ ನಿಜಮನಃಪ್ರಿಯನ ಸೂೞ್ಗೆ ವಂದು ಸುಖದಿನಿರೆ –

ಕಂ || ಅಮಳೋತ್ಪಳಿನಿಗೆ ಮಧ್ಯದೊ
ಳಮೃತದ್ಯುತಿಬಿಂಬಭಾಸುರಪ್ರತಿಬಿಂಬಂ
ಸಮನಿಪವೋಲುದರದೊಳಾ
ರಮಣಿಗೆ ನೆಲಸಿತ್ತು ಹರ್ಷಗರ್ಭಂ ಗರ್ಭಂ || ೮೪

ವ || ಅಂತು ನೆಲಸಿ –

|| ಮಾಲಿನೀವೃತ್ತಂ ||

ಮಸುಳೆ ತಿವಳಿ ಕರ್ಪಂ ಬಾಸೆ ಪೆತ್ತೊಪ್ಪೆ ಲೀಲಾ
ಲಸಿಕೆ ಮನದೊಳಾದಂ ಪುಟ್ಟೆ ನೇರ್ವಟ್ಟ ಕೊರ್ವಿಮ
ಬಸಿಱೆಸೆಯೆ ಮೊಗಂ ಬೆಳ್ಪೇಱೆ ಪೀನಸ್ತನಾಗ್ರ
ಕ್ಕಸಿತಲಸಿತಭಾವ್ಯಂ ಪೆರ್ಚೆ ಪೆರ್ಚಿತ್ತು ಗರ್ಭಂ || ೮೫

ವ || ಮತ್ತಂ –

ಕಂ || ಸ್ತನಮುಖದಿಂ ಪೋದಪ್ಪುದು
ತನೂಭವಾಲಾಭಚಿಂತೆಯಿಂ ಕಂದಿದ ತ
ದ್ವನಿತೆಯ ಹೃದಯದ ಕಾಳಿಕೆ
ಯೆನೆ ಸೊಗಯಿಸಿದತ್ತು ಮೇಚಕತೆ ಚೂಚುಕದೊಳ್ || ೮೬

ಉದರದೊಳಿರ್ದ ತನೂಜನ
ಸದಮಲಗುಣಗಣದ ಭರದೆ ಸಮನಿಸಿದತ್ತೆಂ
ಬುದನೆನಿಸಿ ಚಂದ್ರಸುಂದರ
ವದನೆಯ ಮೃದುಗತಿಯೊಳೊಂದಿತ್ತತಿಮಾಂದ್ಯಂ || ೮೭

ಚಂ || ಅಸಿತಪಯೋಧರಾನನಮುಪಾತ್ತವಿಜೃಂಭಮುಖಾಂಬುಜಂ ಸಮು
ಲ್ಲಸಿತಜಡತ್ವಮುಚ್ಛ್ವಸಿತಬಂಧುರಗಂಧಸಮೀರಣಂ ಮನ
ಕ್ಕೆಸೆದುದು ಕಾರುಮಂ ಪೊಸಬಸಂತನುಮಂ ನೆಱೆ ಪೋಲ್ತು ನಾಡೆ ಭಾ
ವಿಸೆ ಮದವನ್ಮರಾಳಮ್ಯದುಯಾನೆಯ ನಿರ್ಭರಗರ್ಭವಿಭ್ರಮಂ || ೮೮

ತರಳಮನಾಂತ ಚಂದನದಳಂಕೃತಿ ಭಾವಮನಾಂತ ವಸ್ತು ವಿ
ಸ್ತರಕೃತಿ ತತ್ವನಿಶ್ಚಯಮನಾಂತ ಲಸನ್ನುತಿ ಗಂಧಮಂ ಮನೋ
ಹರತೆಯಿನಾಂತ ಚಂದನಘನಧೃತಿಯೆಂಬ ವಿಲಾಸಮಂ ಸಮು
ದ್ಧರಿಪವೊಲಾಂತಳಾಸತಿ ಮಹೋತ್ಸವಗರ್ಭಮನಂದು ಗರ್ಭಮಂ || ೮೯

ವ || ಆ ಸಮಯದೊಳ್ –

ಚಂ || ಅಲಸಿಕೆ ಪೆರ್ಚದಂತಿರೆ ವಿಪಂಚಿಯ ನುಣ್ಚರಮೊಂದೆ ಪಾಡಿ ಕೋ
ಮಲಮೆನೆ ಚಿತ್ರಮಂ ಬರೆದು ತೋಱಿ ಪದಂಬಡೆದೆಯ್ದೆ ಮೇಳದೊಳ್
ನೆಲಸಿದ ಮಾತನಾಡಿ ಪೊಸನಾಟಕಮಂ ರಸವೃತ್ತಿಯಾದ ನಾಳ್
ಕೞಿಪಿನಮಾಡಿ ತತ್ಸತಿಯನೋಲಗಿಸಿತ್ತೊಲವಿಂ ಸಖೀಜನಂ || ೯೦

ಕಂ || ಸ್ಪಷ್ಟಂ ಗರ್ಭಾರ್ಭಕನಿಂ
ದಷ್ಟಮತೀರ್ಥಾದಿನಾಥನಾದಪನೆಂಬೊಂ
ದಷ್ಟಾಹ್ನಿಕಜಿನಪೂಜಾ
ಸೃಷ್ಟಿಯೊಳಾವಧುವ ಬಯಕೆ ಬಳೆದತ್ತಾಗಳ್ || ೯೧

ಸಮನಿಸಿತು ಪಂಚಕಲ್ಯಾ
ಣಮಹೋತ್ಸವವರ್ಣನಂಗಳಂ ಕೇಳ್ವಿಷ್ಟಂ
ರಮಣಿಗೆ ತದ್ಭಾವಿಜಿನೋ
ತ್ತಮನಿಂ ಬಸಿಱಲ್ಲಿ ಬಯಕೆ ಪೆಱತಾದಪುದೇ || ೯೨

ವ || ಅಂತು ತನೂಭವಪ್ರಭವಸೂಚಕಂಗಳಪ್ಪ ದೋಹಳಂಗಳಂಗನೆಗೆ ನೆಗೞೆ ನಿಜನಾಥ ಕಲ್ಪಿತಪುಂಸವನ ಸೀಮಂತೋನ್ನಯನಾದಿಮಂಗಳಂಗಳನೊಳಕೆಯ್ದುಂತರ್ವತ್ನೀತ್ವದಿಂ ನವಮಾಸಂ ನೆರೆಯೆ ಸುಖಪ್ರಸೂತಿಸಮಯದೊಳ್ –

ಕಂ || ಪುಟ್ಟಿದನಾಕೆಗೆ ಮಗನೊಡ
ಪುಟ್ಟೆ ಮಹಾಭಾಗಧೇಯಲಕ್ಷಣನಿಕರಂ
ಪುಟ್ಟೆ ಧರಾಭಾರಕೆ ನೆರ
ಪುಟ್ಟಿದುದೆಮಗೆಂಬ ನಲವು ದಿಗ್ದಂತಿಗಳೊಳ್ || ೯೩

ವ || ಅನಂತರಂ –

|| ಅನವದ್ಯವೃತ್ತಂ ||

ತಿಳಿದುದೆಯ್ದೆ ಜಲಾಶಯಮಾಕಾಶಂ ವಿಶದತ್ವಮನಾವಗಂ
ತಳೆದುದೂರ್ಜಿತಧೂಮಸಮಾಜಂ ದಕ್ಷಿಣವರ್ತನದಿಂದೆ ಪ
ಜ್ಜಳಿಸುತಿರ್ದುದು ವಹ್ನಿಸಮಸ್ತಂ ವ್ಯಸ್ತರಜಸ್ತತಿಯಾಯ್ತಿಳಾ
ವಳಯಮುತ್ತಮಸೌರಭಮೂದಿತ್ತಣ್ಣನೆ ಪಣ್ಣನೆ ತಣ್ಣೆಲರ್ || ೯೪

ವ || ಆಗಳಾ ನೃಪಸುತೇಂದೂದಯಕ್ಷೋಭಿತಸೌರರಾಗಸಾಗರನಿರ್ಘೋಷಾಯಮಾಣಯು ಗಪದುತ್ಥಿತಮಂಗಳಮೃದಂಗಢಕ್ಕಾಭೇರೀಶಂಖಕಾಹಳಾರವದೊಡನೆ –

ಚಂ || ಕರಪರಿವೃತ್ತಿಯಿಂದೊಗೆಯೆ ಕಾಂಚನಕಂಕಣದೀಂಚರಂ ಪರಿ
ಸ್ಫುರಿತದಿನೊರ್ಮೊದಲ್ ನೆಗೞೆ ಕಾಂಚಿಯ ನುಣ್ಚರಮೆಯ್ದೆ ಪಾದಸಂ
ಚರಣದಿನುಣ್ಮೆ ನೂಪುರದ ಮೆಲ್ಸರಮಂದು ನೃಪೇಂದ್ರಮಂದಿರಾ
ಜಿರದೊಳಗೆತ್ತಲುಂ ನಲಿದು ನರ್ತಿಸಿದತ್ತು ವಿಲಾಸಿನೀಜನಂ || ೯೫

ವ || ಆ ಸಮಯದೊಳ್ –

ಉ || ರಾಗದ ಬಳ್ಳಬಳ್ಳಿಯೆನೆ ರನ್ನದ ವಂದನಮಾಲೆಗಳ್ ಬೆಡಂ
ಗಾಗೆ ವಿಯನ್ಮಹೀರುಹದ ಪೂಗುಡಿಯೊಲ್ ಗುಡಿಗಳ್ ಪೊದೞ್ದು ಚೆ
ಲ್ವಾಗೆ ಸಮಂತಿಳಾತಳದ ತಾರಗೆಯಂತುಪಹಾರಮಾದ ಚೆಂ
ಬೂಗಳಳುಂಬಮಾಗೆ ನಯನೋತ್ಸವಮಾದುದು ತತ್ಪುರೋತ್ಸವಂ || ೯೬

ವ || ಆಗಳರಸಂ ಸುಹೃನ್ಮಹೀಪಾಲಪೂರ್ಣಪಾತ್ರಾಹರಣಪರಿಣತಪ್ರಧಾನಪ್ರತೀಹಾರಪ್ರಕರ ಪಾದಪಾತಪ್ರಚಳಿತಪ್ರಘಣತಳಮುಂ ಇತಸ್ತತಃಪ್ರಸರ್ಪನ್ಮಂಗಳೋಪಕರಣಸಂಪಾದ ನವ್ಯಗ್ರನಾನಾಪರಿಜನೋಪಜನಿತಸಮ್ಮರ್ದಸ್ಖಲಿತಗಮನಕುಬ್ಜವಾಮನಕಿರಾತಸಂಘಾತಮುಂ ಉತ್ಸವೋನ್ಮತ್ತಧಾತ್ರೇಯಿಕಾನಿಕಾಯವಿಕೀರ್ಣಪಿಷ್ಟಾತಕಚೂರ್ಣಸಂಜಾತ ಪಿಂಜರವರ್ಣ ಪಲಿತಶ್ಮಶ್ರುಕೂರ್ಚೋಪವಿದ್ಧವೃದ್ಧಕಂಚುಕಿಸಂಚಯಮುಂ ಅನೂನರತ್ನಕಂಠಿಕಾಸಮುದ ಯೋದ್ಗೀಯಮಾನಮಂಗಳಕೈಶಿಕನಾದಾಕರ್ಣನೋತ್ತಾನೈಕಕರ್ಣಸ್ಪಂದಿತಾಂಗಗೃಹಕುರಂಗ ಶಾಬಸಂದೋಹಮುಂ ಉನ್ಮುಚ್ಯಮಾನಕೇಳೀಕೀರಪಾರಾವತಶಾರಿಕಾಜಾಲಹಲೋಡ್ಡಯನನದದಂಬರಾಲೋಕನೋದ್ಗ್ರೀವಪರಿಚಾರಿಕಾಪೇಟಘಟಿತಸಂಕಟಮುಂ ಅಪತ್ಯೋದಯಮುಹೂರ್ತಫಲಪ್ರಭಾವಭಾವನಾಜಾತವಿಸ್ಮಯಾಂದೋಳಿತಶಿರಸ್ಸರೋರುಹಾನನೇಕ ಕಾರ್ತಾಂತಿಕಸಂತಾನಸಂಛನ್ನ ಮುಮಪ್ಪಂತಃಪುರಮಂ ನಿವಾರಿತಾಶೇಷ ಪರಿಜನಂ ಪೊಕ್ಕು ಬಾಲಕವದನದರ್ಶನೋತ್ಸುಕನಿರ್ಪಾಗಳ್ –

ಚಂ || ಪರಿಚಿತಭೂತಿರೇಖಮುಖದರ್ಶಿತಸರ್ಷಪಪುಂಜಮಂಜನೋ
ಪರಚಿತಖಡ್ಗ ಖೇಟಕಸಮುದ್ಭಟವಿದ್ಧಪಿನದ್ಧಭಿತ್ತಿ ಚಂ
ಚುರಪಿಚುಮಂದಪಲ್ಲವಸಮುಲ್ಲಸಿತಂ ಮುಸಲೋರುಸೀರಡಂ
ಬರಯುತಮೇಂ ಮನಕ್ಕೊಲವನಿತ್ತುದೊ ಬಾಗಿಲರಿಷ್ಟಸದ್ಮದಾ || ೯೭

ವ || ಅನಂತರಂ ತತ್ಕ್ಷಣಸಂಧುಕ್ಷ್ಯಮಾಣರಕ್ಷಾಧೂಪಧೂಮೋದ್ದಾಮಮುಂ ಪ್ರಸೂತಿಕ್ರಿಯಾ ಪರಿಣತಾಂತಃಪುರಪರಿಚರಾತಿಸಂತಾನನಿರಂತರಮುಂ ಚಂಚತ್ಕಾಂಚನಸ್ಥಾನದೀಪಿಕಾಗ್ರನಿರ್ವ್ಯಗ್ರದೇದೀಪ್ಯ ಮಾನದೀಪಪ್ರಭಾಭಿಭೂತತಮಸ್ತೋಮಮುಮಪ್ಪ ಗರ್ಭಗೃಹಮನಭ್ಯುಕ್ಷಿತೋಜ್ವ್ವಲನಾಗಿ ಪೊಕ್ಕಾಗಳ್ –

ಕಂ || ಐಂದ್ರೀನಿಕಟದ ನವದಿವ
ಸೇಂದ್ರನವೊಲ್ ಮಾತೃನಿಕಟದರ್ಭಕನಾದಂ
ಸಾಂದ್ರಾನಂದಮನಾಭೂ
ಪೇಂದ್ರನ ಹೃನ್ನಯನಜಲರುಹಕ್ಕೊದವಿಸಿದಂ || ೯೮

ಜನನಿಯ ಶರೀರದೊಳ್ ತೆ
ಕ್ಕನೆ ತೀವಿದ ರಾಗರಸದೊಳೋಲಾಡಿಯೆ ಗ
ರ್ಭನಿವಾಸದಲ್ಲಿ ಬಳೆವಂ
ತೆ ನವಪ್ರಸವಾರುಣಾಂಗನೆಸೆದಂ ತನಯಂ || ೯೯

ನಾಳಂ ಸೊಗಯಿಪ ನಾಭೀ
ನಾಳಂ ಮೃದುಚರಣಕರತಳಂ ಕೋಮಳಪ
ತ್ರಾಳಿಯಿದೆನೆ ನೆನೆಯಿಸಿದಂ
ಬಾಳಕನಿಂದಿರೆಯ ಕೈಯ ಕೆಂದಾವರೆಯಂ || ೧೦೦

ವೀಣಾರಂಜಿತಮಂಜು
ಕ್ವಾಣಮನಿೞಿಕೆಯ್ದುದಲ್ಲಿನಿತ್ತೆಂಬಿನೆಗಂ
ಕ್ಷೋಣೀಶನ ಕಿವಿಯಂ ಸವಿ
ಗಾಣಿಸಿದುದು ಬಾಲರೋದನೋದಿತನಾದಂ || ೧೦೧

ಚಂ || ಕೆಲದೊಳೆ ಕಿೞ್ತು ಸಾರ್ಚಿದ ಕೃಪಾಣದ ಕರ್ಪು ನಿಜಾಂಗನಾಂಗದ
ಗ್ಗಲಿಪ ಬೆಳರ್ಪು ಬಾಲಕನ ಕೋಮಲದೇಹದ ಕೆಂಪು ನಾಡೆಯುಂ
ನಲವನಿಳಾಧಿಪಂಗೆ ನೆಲೆವೆರ್ಚಿಸಿದತ್ತು ಗೃಹಾಧಿದೇವತಾ
ವಿಲಸದಪಾಂಗದೊಳ್ ನೆರೆದು ಮೂದೆಱದೊಪ್ಪುವ ಬಣ್ಣದಂದದಿಂ || ೧೦೨

ವ || ಅಂತು ಸಂತೋಷಬಾಷ್ಪವಿಸರದಿಂ ಮೀಯಿಸುವಂತೆಯುಂ ದಿಟ್ಟಿವೆಳಗಿನಿಂ ನಿವಳಿಸು ವಂತೆಯುಂ ಕಣ್ಣೊಳಗಿಟ್ಟು ಮುಚ್ಚುವಂತೆಯುಂ ಬಗೆಯೊಳೆ ತೆಗೆದಪ್ಪುವಂತೆಯುಂ ಅಕ್ಷೂಣಲಕ್ಷಣಲಕ್ಷಿತಂಗಳಪ್ಪ ಪುತ್ರನಂಗೆ ಪ್ರತ್ಯನಂಗ ಪ್ರತ್ಯಂಗಂಗಳಂ ನೀಡುಂ ಭಾವಿಸಿ ನೋಡಿ ಸಂಸಾರಸುಖದ ಪರಮಕೋಟಿಯನೆಯ್ದಿದಂತಾಗಿ ಮುಖ್ಯಮಂಗಳಮನರ್ಹತ್ಪರಮೇಶ್ವರಂಗೆ ಮಹಾಮಹಮಂ ಮಾಡಲ್ವೇೞ್ದು ಜಾತಕರ್ಮೋತ್ಸವಮನೊರ್ಚಿ ಬೞಿಯಂ ದಶಮದಿನದೊಳ್ ಅತ್ಯುದ್ದಾಮಮಂ ಶ್ರೀವರ್ಮನಾಮಮನಿಟ್ಟು –

ಚಂ || ಅೞಿಪಿ ನಿರಾಕುಳಂ ತನಗೆ ಕೀರ್ತಿಯನಾತ್ಮಭವಂಗೆ ನಲ್ಮೆಯಿಂ
ದುೞಿಪೆ ನಿಜಾತಪತ್ರಹರಿವಿಷ್ಟರಚಾಮರಮೆಂಬಿವಂ ಬೞಿ
ಕ್ಕುೞಿದುದನಿತ್ತುಮೊಂದುೞಿದುದಿಲ್ಲೆನೆ ಕೊಟ್ಟನಿಳಾದಿನಾಥನಾ
ರ್ಗುೞಿಯದೆ ಬೇೞ್ಪ ಬೇಡದವರ್ಗಂ ಸಲೆ ಕೀೞ್ಪಡೆ ಕಲ್ಪಭೂರುಹಂ || ೧೦೩

ವ || ತನ್ಮಹೋತ್ಸವಾನಂತರದೊಳ್ –

ಮ || ಸ್ರ || ಸುರರಾಜೋದ್ಯನದೊಳ್ ಕಲ್ಪಕುಜದ ಸಿರಿ ದುಗ್ಧಾಬ್ಧಿಯೊಳ್ ನೂತ್ನರತ್ನಾಂ
ಕುರಮಾ ಗೋತ್ರಾದ್ರಿಯೊಳ್ ಸಿಂಗದ ಸಿಸು ಬಳೆವೊಂದಂದದಿಂದಾರ್ಪುತೇಜ
ಸ್ಸ್ಫುರಿತಂ ವಿಕ್ರಾಂತಮೆಂಬೀಗುಣಮೊಡವೆಳೆಯುತ್ತಿರ್ಪಿನಂ ನಂದನಂ ತ
ದ್ಧರಣೀಶಾವಾಸದೊಳ್ ಶೋಭಿಸುತ್ತಿರೆ ಬಳೆದಂ ಭಾರತೀ ಭಾಳನೇತ್ರಂ || ೧೦೪

|| ಗದ್ಯಂ ||

ಇದು ಪರಮಪುರುನ್ನಾಥಕುಲಕುಭೃತ್ಸಮುದ್ಭೂತಪ್ರವಚನಸರಿತ್ಸರಿನ್ನಾಥ
ಶ್ರುತಕೀರ್ತಿತ್ರೈವಿದ್ಯಾಚಕ್ರವರ್ತಿ ಪದಪದ್ಮನಿಧಾನದೀಪವರ್ತಿ
ಶ್ರೀಮದಗ್ಗಳದೇವ
ವಿರಚಿತಮಪ್ಪ
ಚಂದ್ರಪ್ರಭಪುರಾಣದೊಳ್
ಶ್ರೀವರ್ಮೋದಯಪ್ರಮೋದವರ್ಣನಂ
ತೃತೀಯಾಶ್ವಾಸಂ