ಕಂ || ಶ್ರೀಕೇಳೀನಿಲಯಂ ರ
ಮ್ಯಾಕೃತಿ ದಿವಸಾನುಸಾರದಿಂ ಪುದಿದೊಡವಂ
ಸ್ವೀಕರಿಸಿದನಮಳಿನಕಮ
ಳಾಕರಮೆನೆ ಜೈನಜನಮನೋಹರಚರಿತಂ || ೧

ವ || ಅಂತನುಕ್ರಮೋಪಚಿತಬಾಲಲೀಲಾಪೀಯೂಷವರ್ಷದಿಂ ಪಿತೃಜನಸುಹೃಜ್ಜನೋದಾರ ಶರೀರಕೇದಾರಂಗಳೊಳ್ ಪುಲಕಸಸ್ಯಸಮೃದ್ಧಿಯಂ ಮಾಡುತುಂ ಬಳೆಯೆವಳೆಯೆ –

ಕಂ || ಕಿಡುತಂದುದು ಮನದಱಿಯಮೆ
ನುಡಿಯ ತೊದಳ್ ಪಿಂಗಿ ಪೋಯ್ತು ತಳರ್ವಡಿಯೊಳ್ ಬ
ಲ್ಪಡರ್ದುದು ಬಳ್ವಳಿಕೆಗೆ ತನು
ವೆಡೆಗೊಟ್ಟುದು ನಾಡೆ ಶೈಶವಾತಿಕ್ರಮದೊಳ್ || ೨

ವ || ಅ ಸಮಯದೊಳ್-

ಕಂ || ಜನನೀಸ್ತನ್ಯಾಮೃತಸೇ
ವನೆ ಮಾಣ್ದ ಬೞಿಕ್ಕಮಖಿಳವಿದ್ಯಾಮೃತಸೇ
ವನೆಯೊಳೆ ಯೋಜಿಪುದುಚಿತಂ
ತನಯನನೆಂದವನಿಪಾಲಕಂ ಬಗೆದಂದಂ || ೩

ವಿದ್ಯೋಪವಿದ್ಯೆಗಳನತಿ
ಹೃದ್ಯಂಗಳನಾತ್ಮಜಂಗೆ ಶಿಕ್ಷಿಸುವಂತಾ
ತೋದ್ಯರವಮುಣ್ಮೆ ತತ್ತ
ದ್ವಿದ್ಯರನಪ್ಪೈಸಿದಂ ನೃಪಂ ಶುಭದಿನದೊಳ್ || ೪

ವ || ಅನಂತರಮಾಕ್ಷತ್ರಪುತ್ರಂ ಸಿತಪಕ್ಷದತ್ರಿಪುತ್ರನಂತೆ ಕಳಾಕಳಾಪೋಪಚಯಮನಪ್ಪುಕೆಯ್ದಿರೆ ಕತಿಪಯವಾಸರಾಪಸರಣದೊಳ್ –

ಕಂ || ಅಮಲಸ್ವಭಾವನೊಳ್ ನಿ
ತ್ಯಮಹತ್ವನೊಳತುಳರಾಜವಿದ್ಯಗಳನಿತುಂ
ಕ್ರಮದೆ ಸಮನಿಸಿದುವಾತನೊ
ಳಮಳಿನತಾರಾಳಿ ಗಗನದೊಳ್ ನೆಲಸುವವೊಲ್ || ೫

ವ || ಅನ್ತುಪಾರ್ಜಿತೋಪರ್ಜಿವಿದ್ಯಾವಿಳಾಸನಾಗಿರ್ಪಿನಂ –

ಮ || ಸ್ರ || ಲಲನಾಸಂಮೋಹಲಗ್ನೋದಯಮಸಮಶರಾನೇಕಪೋದ್ದೀಪನಂ ದೇ
ಹಲತಾವಲ್ಲೀವಸಂತಂ ವಿಭವಶರಧಿಚಂದ್ರೋದ್ಗಮಂ ಶೌರ್ಯಸೂರ್ಯೋ
ಪಲಭಾಸ್ವತ್ಸಂಪದಂ ತನ್ನೃಪತನಯನೊಳಂದೊಂದಿ ಚಿತ್ತಕ್ಕೆ ಮಾಡಿ
ತ್ತೊಲವಂ ತಾರುಣ್ಯಮಾಸಾಧಿತಬಹಳಿಮಲಾವಣ್ಯಶೋಭಾವರೇಣ್ಯಂ || ೬

ಮ || ವಿ || ಕಳಧೌತಚ್ಛವಿ ಕುಂದಕುಟ್ಮಲರದಂ ಬಾಲಪ್ರವಾಳೋಷ್ಠನು
ತ್ಪಳಪತ್ರಾಂಬಕನಷ್ಟಮೀಂದುನಿಟಿಳಂ ಶೇಷೋಲ್ಲಸದ್ಬಾಹು ಕಾ
ದಳಕಾಂಡೋರು ಗವೇಂದ್ರಕಂಧರನಿಭದ್ವಿಣ್ಮಧ್ಯನಿಂದಿಂದಿರೋ
ಜ್ಜ್ವಳಕೇಶಂ ಧರಣೀಶಸೂನು ತಳೆದಂ ಸಾಶ್ಚರ್ಯಸೌಂದರ್ಯಮಂ || ೭

ಕಂ || ಕಣ್ಗಳ್ಗೆ ಗೊತ್ತು ಮನಕೆ ಸ
ರಣ್ಗಾಡಿಗೆ ಗಡಿಯೆನಿಪ್ಪ ಕುವರನ ರೂಪೊ
ಳ್ವೆಣ್ಗಳನೀಕ್ಷಣಮಾತ್ರದೆ
ನಾಣ್ಗಿಡಿಸಿದುದಾದಮೆಸೆವ ಪೊಸಜವ್ವನದೊಳ್ || ೮

ಜನಕನೊಳನುರೂಪತೆಯಂ
ತನೂಭವಂ ತಾಳ್ದಿದಂ ತಮಸ್ಸಂಹೃತಿಯಿಂ
ಘನತೇಜದಿನುನ್ನತಿಯಿಂ
ಕನತ್ಪ್ರದೀಪೋಪಜಾತದೀಪಾಕೃತಿಯಿಂ || ೯

ಶ್ರೀ ವಕ್ಷಸ್ಸ್ಥಳದೊಳ್ ವಾ
ಕ್ಶ್ರೀವಕ್ತದೊಳತುಳಭುಜದೊಳೂರ್ಜಿತವಿಜಯ
ಶ್ರೀ ವಿಸ್ತಾರಿಸೆ ನೆಗೞ್ದಂ
ಶ್ರೀವರ್ಮಂ ಶ್ರೀಮಯಂ ಯಶಶ್ಶ್ರೀನಿಳಯಂ || ೧೦

ಅನಿತೊಂದು ಸಿರಿಯ ಮೈಮೆಯೊ
ಳಿನಿತೌದ್ಧತ್ಯಕ್ಕೆ ಸಲ್ಲದಾನೃಪತನಯಂ
ವಿನಯೇನ ವಿನಾ ಕಾ ಶ್ರೀ
ಯೆನಿಪುಕ್ತಿಗೆ ಟೀಕುವರೆದ ತೆಱದಿಂ ನಡೆದಂ || ೧೧

ವ || ಅದಲ್ಲದೆಯುಂ –

ಮ || ವಿ || ಪಿತೃಸಂದೇಶದಿನಾ ಮಹೋನ್ನತಿಯುತಂ ಸಾದ್ರಾಂತರಂಗಂ ನಿರಾ
ಕೃತಭೂತಾಪಭರಂ ಕುಮಾರನಧಿಕೋತ್ಸಾಹಾವಗಾಹಂ ಪ್ರಭಾ
ವತಿಯೆಂಬಗ್ಗದ ಕನ್ನೆಯಂ ಮದುವೆನಿಂದಂ ಸಾರ್ವಭೌಮಾನ್ವಯೋ
ದ್ಗತೆಯಂ ನೂತ್ನಘನಾಘನಂ ಪಡೆವವೊಲ್ ಸೌದಾಮಿನೀಸಂಗಮಂ || ೧೨

ವ || ಅನಂತರಮೊಂದು ದಿವಸಂ ಪರಿಣತಭಾರ್ಯನುಮಾಶ್ಚರ್ಯಸೌಂದರ್ಯನುಮುಪಾರೂಢ ತಾರುಣ್ಯನುಮಾಸಾದಿತಕಳಾನೈಪುಣ್ಯನುಮಾದ ಕುಮಾರನಂ ನಿಜಪದಸರೋಜಸೇವಾ ಸಮಾಗತಮನನನಾಸ್ಥಾನಸ್ಥಿತಂ ಶ್ರೀಷೇಣ ಮಹಾರಾಜಂ ದೂರದೊಳ್ ಕಂಡು –

ಮ || ವಿ || ಚತುರಂತಕ್ಷಿತಿಭಾರಮಂ ತಳೆಯಲಾಂ ಸಾರ್ದಿರ್ದೊಡಂ ರಾಜ್ಯಮೋ
ಹಿತನಾಗಿರ್ದಪನಿಂದುಮೆಂದು ನಖರಚ್ಛಾಯಾಕದಂಬಂಗಳಿಂ
ಸುತಬಾಹಾಪರಿಘಂ ಸಮಂತು ನಗುವಂತಿರ್ದಪ್ಪುದಿನ್ನೆನ್ನ ಭೂ
ಪತಿವೃತ್ತಂ ದೊರೆಯಲ್ಲದೆಂಬ ಬಗೆಯಂ ತಂದಂ ನಿಜಸ್ವಾಂತದೊಳ್ || ೧೩

ವ || ಎಂದು ಬಗೆಯುತ್ತಿರ್ಪಿನಮೆಯ್ದೆವಂದು ಪೊಡೆಮಡಲೊಡಂ-

ಕಂ || ಕಟ್ಟುವುದು ರಾಜ್ಯಪದವೀ
ಪಟ್ಟಮನೀಯೆಡೆಯೊಳೆಂದು ಕಂಕಣರವದಿಂ
ನೆಟ್ಟನೆ ಪೇೞ್ದಾಯೆಡೆಯಂ
ಮುಟ್ಟಿಯೆ ತೋರ್ಪಂತೆ ನೊಸಲೊಳೆಸೆದುವು ಕೈಗಳ್ || ೧೪

ವ || ಅಂತು ಪೊಡಮಟ್ಟು ಸಮುಚಿತಾಸನದೊಳ್ ಕುಳ್ಳಿರ್ದ ತನಯನಾನನಮನವನೀವಲ್ಲಭಂ ಮಂದೀಭೂತಮೋಹರಸಾನುಬಂಧಿಗಳಪ್ಪ ದೃಷ್ಟಿಗಳಿಂ ನೋಡಿ ಸಮಂತು ನಿಜ ಮನೋಗತಮನಿಂತೆಂದಂ-

ಚಂ || ನೆಱೆದಧಿರಾಜಸೌಖ್ಯಹಿಮವಾಹಿನಿಯಂ ಸಮಸಂದಲಂಪಿನಿಂ
ಪೊಱಮಡದಿನ್ನೆಗಂ ನೆಲಸಿ ನೀರ್ ಸೆಱೆಗೊಂಡವೊಲಿರ್ದುದರ್ಕೆ ಮೈ
ಬಱತವೊಲಾಗಿ ಪಾವನತಪೋವನಸಂಚರಣಕ್ಕೆ ತಾನೆ ಮ
ತ್ತೆಱಕಮನಾಂತುದೀಗಳನಿವಾರಣಮೆನ್ನಯ ಚಿತ್ತವಾರಣಂ || ೧೫

ವ || ಅದುಕಾರಣದಿಂ-

ಕಂ || ಜರೆ ಬಿಱುಗಾಳಿಯ ತೆಱದಿಂ
ದಿರದೆಯ್ದೆ ಮದೀಯಕಾಯತೃಣಕುಟಿಯಂ ಜ
ರ್ಝರಿತಂ ಮಾಡದ ಮುನ್ನಮೆ
ಪರಮತಪೋಭರಮನಾಂಪ ಬಗೆಯಂ ಬಗೆದೆಂ || ೧೬

ಪ್ರವಚನಪರಿಪಠನಕ್ಷಮ
ತೆ ವಾಣಿಯಂ ತೀರ್ಥಯಾನದಕ್ಷತೆ ಪದಮಂ
ಕಿವಿಯಂ ಜಿನವರಚರಿತ
ಶ್ರವಣಪಟುತೆ ಪಿಂಗದನ್ನಮಾರ್ಜಿಪೆನಱನಂ || ೧೭

ವ || ಅದಲ್ಲದೆಯುಂ –

|| ಪಿರಿಯಕ್ಕರಂ ||

ತೊಱೆಯಲೆಂದಿರ್ಪ ರಾಜ್ಯಮನಾಳುತಿರ್ದುಂ ಮಱೆಯಯಲೆಂದಿರ್ದ ಬಂಧು ಸಮೂಹಮಂ
ನೆಱಪಲೆಂದಿರ್ದ ಸತ್ತಪೋವೃತ್ತಿಯಂ ಮಱೆದಂತೆ ರಾಗವಿಹ್ವಳತೆಯಿಂದಂ
ತೊಱೆಯದೆ ಮಱೆಯದೆ ನೆಱಪದಾಯುಷ್ಯಂ ಪಱಿಪಡುವಾಗಳೆ ಬೆರ್ಚಿದಂತೆ
ಮಱುಗುವ ಮರುಳಿಂಗಾರಯ್ವ ವಿಭವಂ ಮಱುಭವಂ ನಾಡೆಯುಂ ವ್ಯರ್ಥಮಲ್ತೇ || ೧೮

ವ || ಅದಱಿನವಿರಳವಾತೂಳಿಕಾಭ್ರಮಣಪರಿಗತತೂಳಿಕಾತಳಮಪ್ಪ ಮನಕ್ಕೆಂತಾನುಂ ಕಾಲ
ಲಬ್ಧಿವಶದಿಂ ನಿವೃತ್ತಿಪರಿಣತಿಯೊಳ್ ಪರಿಣಮಿಸಿದ ಸುಸ್ಥತೆಯಂ ವ್ಯರ್ಥಮಾಡದೆ
ತಪೋವನಾಭಿಮುಖನಾದೆನ್ನ ಪರಿನಿಷ್ಕ್ರಮಣದೊಳ್ ಪರಿಪಂಥಿಭಾವಮಂ ಪೊರ್ದ
ದೊಡಂಬಡುವುದೆ ಮಿಗೆ ವಿನಯಮದಲ್ಲದೆಯುಂ –

ಚಂ || ಪ್ರಣಯವಚೋವಿಲಾಸಮಣಮಲ್ತು ದಿಟಕ್ಕೆ ವಿಚಾರಿಪಂದು ದ
ಕ್ಷಿಣಭುಜಮಲ್ತೆ ನೀನೆನಗೆ ನಿನ್ನಯ ಸತ್ತ್ವಸಮೃದ್ಧಿಯಪ್ಪಿನಂ
ಮಣಿಯದೆ ಪೊತ್ತುದಿನ್ನೆವರಮೀ ಪುಸಿಗೈಯದಱೊಂದು ಖೇದಮಂ
ಕ್ಷಣದೊಳೆ ತೂಳ್ದಿ ತಾಳ್ದುವುದು ಪಿಂಗದೆ ಪುತ್ರ ಸಮಸ್ತಧಾತ್ರಿಯಂ || ೧೯

ಕಂ || ಕುವಳಯಮಂ ಮೃದುಕರಪಾ
ತವಿಳಾಸದಿನೆಯ್ದೆ ನೀನಲರ್ಚಿ ನಿಮಿರ್ಚೀ
ಭುವನಾಂತರಾಳದೊಳ್ ತನು
ಭವ ನಿನ್ನಯ ರಾಜನಾಮಮಂ ಸಾರ್ಥಕಮಂ || ೨೦

ಅಸಮವಿಭೂತಿಗಳನುಪಾ
ರ್ಜಿಸುವೊಡೆ ಜನಮಂ ಸ್ವಕೀಯಮಂ ಮಾೞ್ಪುದು ಕೋ
ಪಿಸದಂತವರ್ಕೆ ಪರಿಭಾ
ವಿಸೆ ಜನದನುರಾಗಮದೆ ನಿಬಂಧನೆಯಲ್ತೇ || ೨೧

ಪೊರ್ದುವುದವ್ಯಗ್ರತೆಯಿಂ
ದಿರ್ದರಸನನಖಿಲವಿಭವಮಂತಾಯಿರವುಂ
ಪೊರ್ದುವುದು ತನಗೆ ವಶಮಾ
ಗಿರ್ದೊಡೆ ಪರಿವಾರಮಾರಯಲ್ ಸರ್ವಸ್ವಂ || ೨೨

ಅನುರಕ್ತತೆಯಂ ನಿಜಪರಿ
ಜನದೊಳ್ ಮಾೞ್ಪೀಕೃತಜ್ಞತೆಯೆ ಮಾೞ್ಕುಂ ಮ
ತ್ತೆನಿತು ಗುಣಮುಳ್ಳೊಡಂ ಸ
ಮ್ಮನಿಸದಣಂ ತಜ್ಜನಂ ಕೃತಘ್ನನನೆಂದುಂ || ೨೩

ಕೃತಮಱಿವೊಡೆ ಸದ್ಗುರುಶಿ
ಕ್ಷಿತನಪ್ಪವನಱಿಗುಮಂತಱಿಂ ಸತತಂ ಸಂ
ಗತಿ ಗುರುವಿನೊಳಾದೊಡೆ ನರ
ಪತಿ ಸುರಪತಿಲೀಲೆಯಂ ಸಮಂತೈದಿದಪಂ || ೨೪

ವ || ಎಂದು ಶಿಕ್ಷಾಪುರಸ್ಸರಂ ಸಕಲಸಾಮ್ರಾಜ್ಯಶ್ರೀಯಂ ಶ್ರೀಷೇಣಭೂಪತಿ ನಿಜತನೂಜನೊಳ್ ನಿಯೋಜಿಸಿ ಸಮಸ್ತಸಾಮಂತಮಂತ್ರಿಸಂದೋಹಮಂ ಪಟ್ಟಬಂಧೋತ್ಸವಮಂ ಮಾಡಲ್ವೇೞ್ದು ಸಹಪಾಂಸುಕ್ರೀಡಿತರಪ್ಪ ಪಲಂಬರರಸುಗಳ್ವೆರಸು ಪುರಮಂ ಪೊಱಮಟ್ಟು ಪೋಗಿ ಶ್ರೀಪ್ರಭವಮುನಿಪ್ರಭುವ ಪಾದಮೂಲದೊಳ್ ನಿಷ್ಕೃತದಿಗಂಬರಶ್ರೀಕನಾಗಿ ನಿಖಿಲಕರ್ಮ ನಿರ್ಮುಕ್ತಿಯಿಂ ಪ್ರಾಪ್ತ ಸಪ್ತಪರಮಸ್ಥಾನನಾದನಿತ್ತಲ್ –

ಮ || ವಿ || ಗುರುಶಿಕ್ಷಾವಚನಂಗಳಂ ಹೃದಯದೊಳ್ ಮಾಂಗಲ್ಯಗೀತಾಮೃತ
ಸ್ವರಮಂ ಕರ್ಣದೊಳಾಂತು ರತ್ನಮಯಪಟ್ಟೋದ್ಯತ್ಪ್ರಭಾಮಂಜರೀ
ಭರಮಂ ಭಾಳದೊಳಿಂದ್ರಶೈಳಮಣಿಶೃಂಗೋತ್ತುಂಗಮಂ ಮೌಳಿಯಂ
ಶಿರದೊಳ್ ತಾಳ್ದಿದನುತ್ತರೋತ್ತರತೆಯಿಂ ಶ್ರೀವರ್ಮಭೂಮೀಶ್ವರಂ || | ೨೫

ವ || ಅನಂತರಂ –

ಕಂ || ಸಮನಿಸಿ ಮನದೊಳ್ ರತ್ಯು
ತ್ಸವಮಂ ಕರಜಾತಹತಿಗೆ ಮೆಯ್ಯಾನಿಸಿದಂ
ಕ್ರಮದೆ ಬೞಿಕ್ಕಂ ಪ್ರಜೆಯಂ
ಪ್ರಮದೆಯನೆಂತಂತೆ ನಯವಿದಂಗರಿದುಂಟೇ || ೨೬

ವ || ಅದುಮಲ್ಲದೆಯುಂ –

ಮ || ವಿ || ಕರಿಸೇನಾಕರಲೂನವೈರಿವನದುರ್ಗವ್ರಾತನಶ್ವಾವಳೀ
ಖುರಟಂಕಾಹತಿಪಾತಿತಾರಿಗಿರಿದುರ್ಗವ್ರಾತನನ್ಯೋನ್ಯಸೈ
ನ್ಯರಜೋವ್ರಾತಸಮೀಕೃತಾನ್ಯಜಳದುರ್ಗವ್ರಾತನುತ್ತಾನತೂ
ರ್ಯರವಾಕಂಪಿತಶತ್ರುದಿಗ್ವಿಜಯಯಾತ್ರಾಕ್ರೀಡೆಯಂ ಮಾಡುವಂ || ೨೭

ತುರಗಾರೋಹಣದಿಂದಮೊರ್ಮೆ ಗಜಶಿಕ್ಷಾಲೀಲೆಯಿಂದೊರ್ಮೆ ಕಾ
ವ್ಯರಸಾಸ್ವಾನದಿನೊರ್ಮೆ ವೈಣಿಕಕೃತಪ್ರಸ್ತಾವದಿಂದೊರ್ಮೆ ಗ
ರ್ಘರಿಕಾಸ್ವಾದನದಿಂದದೊರ್ಮೆ ವನವಾರಿಕ್ರೀಡೆಯಿಂದೊರ್ಮೆ ಚಿ
ತ್ರರುಚಿಪ್ರೀತಿಗಳಿಂದೆ ಪೊೞ್ತುಗಳೆವಂ ಶ್ರೀಗೋಮಿನೀವಲ್ಲಭಂ || ೨೮

ವ || ಅಂತಂಗೀಕೃತಕಳಾವರ್ಗನುಂ ಕೃತಾರ್ಥೀಕೃತವಂದಿವರ್ಗನುಂ ವಶೀಕೃತವಧೂವರ್ಗನುಂ ಪ್ರಸನ್ನೀಕೃತಗುರುವರ್ಗನುಂ ತರಳೀಕೃತಾಶಾವರ್ಗನುಂ ದೂರೀಕೃತಾರಿಷಡ್ವರ್ಗನುಂ ಸಮೀಕೃತತ್ರಿವರ್ಗನುಂ ದೃಢೀಕೃತತಳವರ್ಗನುಂ ನಮೀಕೃತಸಾಮಂತವರ್ಗನುಮಾಗಿ ಪ್ರಭಾವತಿಮಹಾದೇವಿವೆರಸು ಇಷ್ಟವಿಷಯಕಾಮಭೋಗಾನುಭವನಿರತಂ ಪಲಕಾಲಮರಸುಗೆಯುತುಮಿರೆ –

ಮ || ಸ್ರ || ಜಳದೌಘಶ್ಯಾಮಧೂಮಪ್ರತತಿ ಚಳತಟಿನ್ಮಾಳಿಕಾಲೋಲಕೀಲಾ
ವಳಿ ಸಂಜಾತೇಂದ್ರಗೋಪಪ್ರಸರವಿಸರದರ್ಚಿಃಕಣಂ ಪಶ್ಚಿಮಾಶಾ
ನಿಳಪಾತೋಜ್ಜೃಂಭಿತಂ ಬಂದುದು ವಿರಹಿತರುವ್ರಾತಮಂ ಪರ್ವುವುಗ್ರಾ
ನಳನೆಂಬಂತಬ್ದಕಾಲಂ ಸ್ತನಿತಧಗಧಗಧ್ವಾನರೌದ್ರಾಯಮಾಣಂ || ೨೯

ವ || ಆಗಳ್ –

|| ಮಾಳಿನೀವೃತ್ತಂ ||

ವರುಣಮಕರಹಸ್ತೋಚ್ಛೀಕರಾರ್ದ್ರಂ ಪ್ರತೀಚೀ
ಶರಧಿವಿಮಳಫೇನಾಪಾಂಡುವಸ್ತಾದ್ರಿಕುಂಜ
ಸ್ಫುರಿತಕುಟಜಕುಂದಾಮೋದನಿಷ್ಯಂದಿ ತಿಂಡಿ
ತ್ತಿರದೆ ಮುದಿತವಿಶ್ವಂ ನಾಭಸಂ ಮಾತರಿಶ್ವ || ೩೦

ಮ || ಸ್ರ || ಘನವಹ್ನಿಜ್ವಾಲಧೂಮಾಳಿಯೊ ಗಗನಗಂಗಾತಟೋದ್ಯತ್ತಮಾಳೀ
ವನಮೋ ವಿದ್ಯನ್ನಟೀಕರ್ಬುರಜವನಿಕೆಯೋ ಚಾರುಮೇಘಾಗಮಶ್ರೀ
ವನಿತಾಪಿಂಛಾತಪತ್ರಪ್ರಕರಮೊ ವಿಯದುತ್ತುಂಗಮಾತಂಗಭೂಷಾ
ಜಿನಪಕ್ಷತ್ರಾಣಮೋ ಮೇಣೆನೆ ನೆಗೆದುದಳಿಶ್ಯಾಮಳಂ ಮೇಘಜಾಳಂ || ೩೧

ಕಂ || ಸ್ತನಿತಘನಬೃಂಹಿತಂ ದು
ರ್ದಿನಮದಪೂರಂ ಪಯೋದಗಜಘಟೆ ಸುೞಿದ
ತ್ತಿನರುಚಿಪಲ್ಲವಕುಳಕಬ
ಳನಲೀಲೆಯಿನಂತರಿಕ್ಷಕಕ್ಷ್ಯಾಂತರದೊಳ್ || ೩೨

ಉ || ಮುಂ ಬಿಸುಜೋದ್ಭವಂ ಸಮೆದನಂಬುದಮಂ ಪವಮಾನಧೂಮತೇ
ಜೋಂಬುಗಳಿಂದಮೆಂಬ ನುಡಿ ತಥ್ಯಮದಲ್ಲದೊಡುಂತೆ ಕಾರ ಕಾ
ದಂಬಿನಿ ಮಾೞ್ಕುಮೇ ಬಿರಯಿಗಂಗಜವಹ್ನಿ ವಿಜೃಂಭಮಂ ವಿಳೋ
ಳಾಂಬಕವಾರಿಯಂ ತನುನಿಧಾಘಮನುತ್ಕಳಿಕಾಪ್ರಪಂಚಮಂ || ೩೩

ಕಂ || ಇಂಬುಗಿಡಿಸಿದುವು ದೆಸೆಗಳ
ನಂಬರಮಂ ಪೀರ್ದುವಹಿಮಹಿಮಕರಕಿರಣಾ
ಡಂಬರಮಂ ನೊಣೆದುವು ಪಿರಿ
ದುಂ ಬೇಸಱಿಸಿದುವು ಬಿರಯಿಯಂ ಜಳದಂಗಳ್ || ೩೪

ಮ || ವಿ || ಪಿಕಮೌನವ್ರತದುಂದುಭಿಧ್ವನಿ ಬಲಾಕಾದೃಶ್ಯಚೂಡೋದಯಾ
ನಕರಾವಂ ಶಿಖಿನೃತ್ಯವಾದ್ಯರುತಿ ಪೋತಕ್ಯುದ್ಘಗರ್ಭೋತ್ಸವೋ
ತ್ಸುಕವಾದಿತ್ರರವಂ ಮರಾಳಗಮನಾತೋದ್ಯಸ್ವನಂ ಚಾತಕೋ
ದಕಕೇಳೀಕೃತತೂರ್ಯನಾದಮೆಸೆದತ್ತಂಭೋದನಿರ್ಘೋಷಣಂ || ೩೫

ಮ || ಸ್ರ || ಸಕಳಾಬ್ದಾಂಭಸ್ಸಿರಾಮೋಚನಸುನಿಶಿತಶಸ್ತ್ರಂ ಪ್ರಯಾಣೋತ್ಕಹಂಸ
ಪ್ರಕರಪ್ರಸ್ಥಾನಭೇರೀಕನಕಮಯಕನತ್ಕೋಣಮಾಸಾರಲಕ್ಷ್ಮೀ
ಪ್ರಕಟಾಂಭೋದಾವಳೀವಿಶ್ಲಥಕಬರಿಭರಸ್ರಂಸಿದಾಮಂ ಚಳಚ್ಚಾ
ತಕರಾಜ್ಯಶ್ರೀಕಟಾಕ್ಷದ್ಯುತಿಲತಿಕೆ ತಟಿನ್ಮಾಲೆ ಚೆಲ್ವಾದುದಾದಂ || ೩೬

ಕಂ || ಘನಸಮಯಶಬರಕರಗತ
ಕನತ್ತಟಿದ್ದಂಡಪಾತವಿಗಳನ್ನೀಳ
ಸ್ತನಯಿತ್ನುಕುಳತಮಾಳೀ
ವನಪ್ರಸೂನಂಗಳೆನಿಸಿದುವು ಕರಕಂಗಳ್ || ೩೭

ಕಱೆದುವು ಕಾಳಿಮಮಂ ಮುಂ
ಕಱೆದುವು ಮಿಂಚಂ ಬೞಿಕ್ಕೆ ಕರಕೋಪಲಮಂ
ಕಱೆದುವು ಬೞಿಕಂ ಬೞಿಕಂ
ಕಱೆದುವು ನುಣ್ಬನಿಯನೊಗೆದ ಮುಗಿಲೆಳಗಾರೊಳ್ || ೩೮

ಕಾರ್ಮುಗಿಲಿಂ ಜಲಲವತತಿ
ಕಾರ್ಮುಕದಿಂ ಸ್ಮರಶರಂ ವಿಯೋಗಿಗಳ ಮನೋ
ಧರ್ಮದಿನೊಂದಿರ್ದಱಿಯಮೆ
ಯೊರ್ಮೆಯೆ ಬಿಡುತಂದುವೈದೆ ಜಲದಾಗಮದೊಳ್ || ೩೯

ಮ || ವಿ || ಅಧೃಢಾಗಾರವಿಪನ್ನ ಖಿನ್ನಗೃಹಿಣೀನಿಶ್ವಾಸದಿಂ ಕೂಡೆ ತೂ
ಱಿದುವಾವಾಸಪರಿಕ್ರಿಯಾಕುಲವಧೂವಕ್ಷೋಜದೊಳ್ ಬಿೞ್ದು ಸೇ
ಱಿದುವುತ್ಕಂಠವಿಯೋಗಿನೀಜನತೃಷಾತ್ಯುಷ್ಣಾಂಗಸಂಸಂಗದಾ
ಱಿದುವಾದಂ ನವನೀಲನೀರಧರಮುಕ್ತವ್ಯಕ್ತವಾರ್ಬಿಂದುಗಳ್ || ೪೦

ಮ || ಸ್ರ || ಪುರಮಂತರ್ದ್ವೀಪಮೆಂಬಂತಿರೆ ವಿಪಿನಚರಾನೇಕಪಾನೀಕಮಂಭಃ
ಕರಿಯೂಧಂ ತಾನಿದೆಂಬಂತಿರೆ ನಗನಿಕರಂ ಪಕ್ಷಕುತ್ಕೀಳಮೆಂಬಂ
ತಿರೆ ಮತ್ತಂ ಲೋಕಮೇಕಾರ್ಣವಮೆನಿಸಿದುದೆಂಬಂತಿರೆತ್ತತ್ತಲುಂ ಕಾ
ೞ್ಪುರಮಾದಂ ಕೊರ್ವೆ ಬಿರ್ದಂ ಕಱೆದುದುಬಹಳಾಸಾರಮಂ ನೀರದೌಘಂ || ೪೧

ಕಂ || ಮಿಳಿರ್ವ ಗುಡಿ ಮಿಂಚು ಸುರಧನು
ತಳಿರ್ದೋರಣವಾಲಿ ರಂಗವಲಿ ಬದ್ದವಣಂ
ಜಳದರವಮಾಗೆ ಜಯಮಂ
ಗಳಸೂಚಕಮಾದುದತನುಗಾ ಘನಸಮಯಂ || ೪೨

ವ || ಮತ್ತಮದು ಸಮುಚಿತನೀಲಕಂಠವಿಳಾಸಮಾಗಿಯುಂ ವೀತಕೇತಕಮಲ್ತು ವಿಧೃತಮದನ ಜನಕತ್ವಮಾಗಿಯುಂ ಕಮಲೋತ್ಸವಕಾರಿಯಲ್ತು ಅಂಗೀಕೃತಕುಟಜಶೋಭಾಪ್ರಭಾವಮಾಗಿಯುಂ ಸಂಶೋಷಿತಜಡಾಕರಮಲ್ತು ಸಮುಚ್ಛ್ರಿತಾನೇಕಮೇಘಡಂಬರಚಾರು ತಾವಳಂಬಿಯಾಗಿಯುಂ ಪ್ರಕಟೀಕೃತರಾಜಲೀಲೋದಯಮಲ್ತು ಪ್ರಕರ್ಷಾನೇಕವರ್ಷಾನು ಗತಮಾಗಿಯುಂ ಅಚಪಳಾಚರಣಪರಿಣತಮಲ್ತು ಅತಿಕ್ರಾಂತವೈಶಾಖವೃತ್ತಿಯಾಗಿಯುಂ ಅಬರ್ಹಿಲೀಲಾರ್ಹಮಲ್ತು ಅಂತುಮಲ್ಲದೆಯಂ –

ಕಂ || ಉಪಶಾಂತರಜೋವಿಕೃತಿಯಿ
ನುಪಾತ್ತ ಕಾಳಿಮಪಯೋಧರಾಸ್ಯತೆಯಿಂ ಮ
ತ್ತುಪಚಿತಜಡವೃತ್ತಿಯಿನೆ
ಯ್ದೆ ಪೋಲ್ತುದಭ್ರಾಗಮಂ ಸಗರ್ಭಾಂಗನೆಯಂ || ೪೩

ಚಂ || ವಿಳಸಿತಕಂದಳಂ ವಿನಿಪತತ್ಕರಕಂ ಕ್ಷುಭಿತೋರುವಾಹಿನೀ
ಕುಳನಿನದಂ ಗಳಚ್ಛರಸಮಗ್ರಮುದಗ್ರಸುಪರ್ವಚಾಪಮಂ
ಡಳಲಲಿತಾಂಬರಂ ವಿಹರಿದಶ್ವಸಮುತ್ಕರಮಂದಗುರ್ವನೇಂ
ತಳದುದೊ ಪೋಲ್ತು ಯುದ್ಧಸಮಯಕ್ರಮಮಂ ಜಳದಾಗಮಕ್ರಮಂ || ೪೪

ವ || ಆಸಮಯದೊಳ್ –

ಕಂ || ಮಲ್ಲಿಗೆಯಂಬೇವುವು ಗಿರಿ
ಮಲ್ಲಿಗೆಯಂಬುಳ್ಳೊಡೆನಗೆ ಬೆಳ್ಗರ್ಬಿನ ಮೆ
ಲ್ಬಿಲ್ಲೇವುದೊಗೆದ ಕಾಮನ
ಬಿಲ್ಲುಳ್ಳೊಡೆನುತ್ತೆ ಕಂಡು ಮುಯ್ಯಾಂತಿರ್ಪಂ || ೪೫

ಚಂ || ಅದಿರ್ದುದು ಪಶ್ಚಿಮಾನಿಳನಗುರ್ವಿಸೆ ಕೆಮ್ಮುಗಿಲುರ್ಬೆ ಪರ್ಬುಗೆ
ಟ್ಟುದು ಕುಡಿಮಿಂಚು ಸಂಚಳಿಸೆ ಸಂಚಳಿಸಿತ್ತು ಘನಾಘನಸ್ವನಂ
ಪೊದೞೆ ಪೊದೞ್ಕೆಗುಂದಿದುದು ವಾಃಕಣಸಂತತಿ ಸೋರೆ ಸೋರ್ದಡಂ
ಗಿದುದೆಳಗಾರೊಳಾ ಸಕಳಚಾತಕಪೋತತೃಷಾವಿಷಾದನಂ || ೪೬

ಮ || ಸ್ರ || ಬಡಪಂ ಬೆಂಬತ್ತೆ ಮೇಪಂ ಮಱೆದು ಬಿಡದೊಡಲ್ ಕೋಡೆ ತನ್ನಿಚ್ಚೆಗೆಟ್ಟಿ
ರ್ದೆಡೆಯೊಳ್ ಬೆಚ್ಚಂತೆ ಬಾಲಂ ನಿಲೆ ನವಿರೊಡೆದುರ್ವೆೞ್ದು ಬೆಂಪೋಗೆ ಕಾಲೊಳ್
ನಡುಕಂ ಮೆಯ್ವೆರ್ಚೆ ಗಂಟಲ್ ಕುಸಿದು ಕಿವಿಯೆೞಲ್ತಂದು ನಿಂದಿರ್ದುದೋರೊಂ
ದೆಡೆಯೊಳ್ ತಾಱಲ್ಗಳೊತ್ತಂಬಿಡಿದು ಮೃಗಮೃಗೀವೃಂದಮೋರಂದದಿಂದಂ || ೪೭

ನೊರೆವುಲ್ಲಂ ಮೇದೆರೞ್ಕಣ್ ತುಮುಳೆ ಕುಡಿದು ಪೂರಾಂಬುಮಂ ಬೀಗಿ ಬೆನ್ನಿಂ
ಬಿರಿವನ್ನಂ ಕೊರ್ವಿ ಮುಂಗಾಲ್ ಗಡಿಯೆನೆ ಕಡುಗೆಚ್ಚಲ್ ಪೊದೞ್ತಂದು ವತ್ಸೋ
ತ್ಕರಕೆಲ್ಲಂ ಬಾಲವಂಬಂ ಕಱೆಯೆ ಬಹಳರೋಮಂಥಫೇನಾವಳೀಪಾಂ
ಡುರವಕ್ತ್ರಂ ಮಾಹಿಷೀಸಂತತಿ ವಿಪಿನಭವೆಂ ಕಣ್ಗಗುರ್ವಾಯ್ತು ಕಾರೊಳ್ || ೪೮

ವ || ಅದಲ್ಲದೆಯುಂ –

ಚಂ || ವಿಯದವಳಂಬಿನೀಳಘನಮಾಳಿಕೆಯಂ ಗಜರಾಜಿಯೆಂದು ದಿ
ಕ್ಚಯಪರಿಪೂರ್ಣಮೇಘರುತಿಯಂ ಪಟಹಧ್ವನಿಯೆಂದು ಮಿಂಚಿನಂ
ಗಿಯ ಪೊಳಪಂ ಭಟಾಸ್ತ್ರರುಚಿಯೆಂದಿರದಂಗಜರಾಜಸೈನ್ಯಭೀ
ತಿಯನೊಳಕೆಯ್ದುದಬ್ದಸಮಯೋತ್ಸವದೊಳ್ ಪಥಿಕಾಂಗನಾಜನಂ || ೪೯

ವ || ಅಂತು ಬಂದ ವರ್ಷರ್ತುವಿರಾಮಸಮಯದೊಳೊಂದು ದೆವಸಂ ಪಲ್ಲವಿತವಲ್ಲೀತರುಗಹ ನಕೇದಾರಹರಿತಾಯಮಾನಮಪ್ಪ ಹರಿತ್ಪ್ರದೇಶಮನೀಶಂ ಮಹಾಪ್ರಾಸಾದದುಪರಿಮತಳದೊಳಿರ್ದು ನೋಡುತಿರ್ಪನ್ನೆಗಂ –

ಚಂ || ಎಸೆವ ನಭಸ್ಸರೋವರದೊಳುಣ್ಮಿ ಕೆಲಕ್ಕೆ ತೆರಳ್ದ ನೀಲಿಕಾ
ಪ್ರಸರಮೊ ಮೇಣಿದಂಬರಮಹಾಂಬುಧಿಪಾರದಪಾರರತ್ನರು
ಗ್ವಿಸರಮೊ ಭಾವಿಪಂದಿದು ವಿಯಚ್ಛುಕಕಂಠದ ವರ್ಣರಾಜಿಯೊಂ
ದೆಸಕಮೊ ತಾನಿದೆಂದೆನಿಸಿತಂದು ಪುರಂದರಚಾಪವಿಭ್ರಮಂ || ೫೦