ವ || ಆಗಳದಱ ಚಾಷಚ್ಛದಚ್ಛಾಯಾನುಕಾರಿಯಪ್ಪ ಮಸೃಣವರ್ಣಪ್ರಸರಮೇಳಾಪಚೈಚಿತ್ಯ್ರಮಂ ಚಿತ್ರಕಳಾವಿಶಾರದಂ ಪರಿಭಾವಿಸುತ್ತುಮಿರ್ಪನ್ನೆಗಂ;

ಕಂ || ನರರ ಸಿರಿ ಕರಗುವಂತಿರೆ
ನರರ ವಯೋಲಕ್ಷ್ಮಿ ಕರಗುವಂತಿರೆ ಮತ್ತಂ
ನರರಾಯು ಕರಗುವಂತಿರೆ
ಕರಗಿದುದದು ನೋಡೆ ನೋಡೆ ಗಗನಾಂತರದೊಳ್ || ೫೧

ವ || ಅಂತಾ ಋಜುರೋಹಿತಂ ತಿರೋಹಿತಮಾಗೆ ವೈರಾಗ್ಯರಸಾವಗಾಹಿತಮತಿ ಮಹೀಪತಿ ಸಂಸೃತಿಯ ಅನಿತ್ಯತೆಗಿದುವೆ ನಿದರ್ಶನಮೆಂದು ಆತ್ಮಗತದೊಳಿಂತೆಂದಂ –

ಕಂ || ಕತಿಪಯನಿಮೇಷಮಾತ್ರ
ಸ್ಥಿತಿ ಸಾಂಸಾರಿಕವಿಳಾಸಮದನೆ ವಲಂ ಶಾ
ಶ್ವತಮೆಂದೆ ಬಗೆದು ರಾಗಾಂ
ಧತೆಯಿಂ ಗತಿಗಿಡುವರೇಂ ವಿಚಿತ್ರಮೊ ಕರ್ಮಂ || ೫೨

ಮ || ವಿ || ತರುಣೀಲೋಚನಲೋಲಮಾಯುವಚಲಸ್ರೋತಸ್ವಿನೀಸಂಚಲಂ
ಸಿರಿ ಹಸ್ತಿಶ್ರವಣಾಂಚಳಾಸ್ಥಿರತರಂ ತಾರುಣ್ಯಮಾಕಾಲಿಕೀ
ಸ್ಫುರಿತಾತಿಕ್ಷಣಿಕಂ ಶರೀರಿಮೆನಿಪೀಮಾನುಷ್ಯಮಂ ದೂಷ್ಯಮಂ
ಚಿರಮೆಂದಾಟಿಪನಾವನಾತನೆ ವಲಂ ನಿಶ್ಚೇತನಂ ಲೋಕದೊಳ್ || ೫೩

|| ತ್ರಿಪದಿ ||

ಕೇಡನಾಗೆಂದಾಗಂ ಕಿಡೆಂದು ವಿಪರೀತಂ
ಮಾಡಿಯೆ ನೆಗೞ್ದು ಜಡಜಂತು ಮೂಡಿ ಮು
ೞ್ಕಾಡುಗುಂ ಜನ್ಮಜಡಧಿಯೊಳ್ || ೫೪

ಕಂ || ಒಕ್ಕಮಳಮಳಯಜಾಂಬುವ
ನಕ್ಕಟ ಪಲ್ವಲಸಮುಲ್ಬಣಾಂಬುವನೀಂಟ
ಲ್ಕಕ್ಕುಮೆ ನಿರ್ವೃತಿಯಂ ಪೆಱ
ಗಿಕ್ಕಿ ಬುಧಂ ತೊಡರಲಕ್ಕುಮೇ ಸಂಸೃತಿಯೊಳ್ || ೫೫

ಆನಿದಱವನೆನ್ನದಿದೆಂ
ಬೀ ನುಡಿಯಿಂದಾದಣುಪ್ರಮಾಣದ ಸುಖಕ
ಜ್ಞಾನದೆ ಜೀವಂ ದುಃಖಮ
ನೇನೆಯ್ದಿದಪುದೊ ಮಹಾಮಹೀಧರಸಮಮಂ || ೫೬

ಜಳಬುದ್ಬುದಮಂ ಕರ್ಬೊ
ನ್ನೊಳೆ ಕಟ್ಟಿಪೆನೆಂಬ ಮರುಳಗುರುವಾಗದಿರಂ
ವಿಳಯಸ್ವಭಾವಮಂ ಸಲೆ
ತಳೆದೊಡಲಂ ನಿಟ್ಟೆಮಾಡಲುಜ್ಜುಗಿಪಾತಂ || ೫೭

ವ || ಅದುಕಾರಣದಿಂ –

ಕಂ || ಕಲ್ಲಿಂ ಕಾಂಚನಮಂ ತಡ
ಮಿಲ್ಲದೆ ಸತ್ಕ್ರಿಯೆಯ ಬಲದೆ ತೆಗೆವಂತೆ ಕರಂ
ಪೊಲ್ಲಮೆನಿಪ್ಪೊಡಲಿಂ ಕೇ
ಡಿಲ್ಲದ ಪುಣ್ಯಮನುಪಾರ್ಜಿಪಾತಂ ಚತುರಂ || ೫೮

ವ || ಅದಲ್ಲದೆಯುಂ –

ಕಂ || ಅಱಿಯದೆ ಬಹ್ವಾರಂಭದೊ
ಳುಱೆ ಬೆಂದೆಂ ತೊಡರ್ದು ಮುನ್ನವದೆ ಸಾಲದೆ ಮ
ತ್ತಱಿದುಂ ತೊಡರ್ದೊಡೆ ನಾಡೆಯು
ಮಱುವರುಳೆಂದಱಿವರೆನ್ನನುೞಿವರ್ ಬೞಿಯಂ || ೫೯

ವ || ಎಂದು ಪರಿಚ್ಛೇದಿಸಿ –

ಮ || ಸ್ರ || ಜನನಾಥಂ ಗೋತ್ರಮಿತ್ರಾಧಿಕೃತಸಚಿವಸಾಮಂತಶುದ್ಧಾಂತಕಾಂತಾ
ಜನಕಾತ್ಮೋದ್ಯೋಗಮಂ ಪೇೞ್ದಿರದೆ ಬಿಡಿಸಿ ತನ್ಮೋಹಮಂ ರಾಜ್ಯಮಂ ನಂ
ದನನೊಳ್ ಶ್ರೀಕಾಂತನೊಳ್ ಯೋಜಿಸಿ ತಳರ್ದು ತಪೋಲಕ್ಷ್ಮಿಯಂ ತಾಳ್ದಿದಂ ಪಾ
ವನಮಂ ಶ್ರೀಶ್ರೀಪ್ರಭಾಚಾರ್ಯರ ಪದಕಮಲೋಪಾಂತದೊಳ್ ಶಾಂತಚಿತ್ತಂ || ೬೦

ವ || ಅಂತಖಂಡಿತವೈರಾಗ್ಯಮಂಡಿತಂ ಶ್ರೀವರ್ಮಮಂಡಲೇಶ್ವರಂ ದುರ್ದರತಪೋಮಹಾತ ಪಕ್ಷಪಿತಜೀವನಂ ಜೀವಿತಾನ್ತ್ಯದೊಳ್ ಸಮಾಧಿವಿಧಿಯಿನವತೀರ್ಣಶರೀರಭಾರನಾಗಿ ಸಕಲಸಂಸಾರಸುಖಕಾರ್ಮಮೆನಿಪ ಸೌಧರ್ಮಕಲ್ಪದ ಶ್ರೀಪ್ರಭವಿಮಾನದುಪಪಾತನಿಕೇತನದೊಳ್ –

ಚಂ || ಶರದದ ಬೆಳ್ಮುಗಿಲ್ಘೊಱೆಯಿನುಣ್ಮುವ ನಿರ್ಮಳಮೌಕ್ತಿಕಕ್ಕೆ ತಾಂ
ದೊರೆಯೆನೆ ಪುಟ್ಟಿದಂ ಧವಳತಳ್ಪಯುಗಾಂತರದೊಳ್ ನಮೇರುಶೇ
ಖರಧರನಾತ್ತನೂತ್ನವಯಸಂ ಮಣಿಕುಂಡಲಮೌಳಿಮೇಖಳಾ
ಭರಣವಿರಾಜಿತಂ ತರುಣಕಂಚುಕಿಕಂಚುಕಚಂಚುರಾಂಬರಂ || ೬೧

ವ || ಅಂತು ಪುಟ್ಟಲೊಡಂ –

ಕಂ || ನೆಱೆದಾತನ ಪುಣ್ಯಮೆ ಕ
ಣ್ದೆಱೆದಂತಿಱೆ ತೆಱೆದುವಾ ವಿಮಾನದ ಪಡಿಗಳ್
ನಱುಗಂಪು ಪೊಣ್ಮಿ ಸಗ್ಗದ
ಮಿಱುಪಿನಿಯರ ಮನಮುಮೊಡನೆ ಪಡಿದೆಱೆವಿನೆಗಂ || ೬೨

|| ರಗಳೆ ||

ಆ ಸಮಯದೊಳರಲ್ಗಳ್ ಸುರಿಯುತ್ತಿರೆ
ಬೀಸಿದುದೆಲರುತ್ಸವಮೊಱೆಯುತ್ತಿರೆ ||

ತೆಱೆದತ್ತುಪಗೃಹನಿವಹದ ಪಡಿಗಳ್
ತುಱುಗಿದುವೆತ್ತಂ ಜೈನರ ಗುಡಿಗಳ್ ||

ಹರಿನೀಳಸ್ಥಳಿಯೊಳ್ ಬಣ್ಣವುರಂ
ಪರಿವೆತ್ತುದು ಬಗೆ ಮರುಳ್ವನ್ನೆವರಂ ||

ಹರಿಚಂದನವಂದನಮಾಲಿಕೆಗಳ್
ಪರಿವೇಷ್ಠಿಸೆ ಮೆಱೆದುವು ಶಾಲಿಕೆಗಳ್ ||

ಕೆದಱಿದ ಪೂವಲಿಗೆಱಗಿತು ಸುತ್ತುಂ
ಮಡಮಧುಪಾವಳಿ ಗಾವರಿಸುತ್ತುಂ ||

ಮುತ್ತಿನ ಕಡೆ ಭಿತ್ತಿಯ ಕಡೆಗಡೆಯೆನೆ
ಸುತ್ತಿಱಿದುದು ಮಣಿಗೃಹದೆಡೆಯೆಡೆಯನೆ ||

ಸೂಸುವ ನವಪಟವಾಸದ ಚೂರ್ಣಂ
ಮಾಸರಮಾದುದು ದಿಕ್ಷರಿಪೂರ್ಣಂ ||

ಮಂಗಳಗೀತಿಯ ನಿನದೊಳಾದಂ
ಸಂಗಳಿಸಿದುದು ಮೃದಂಗನಿನಾದಂ ||

ಬಿಡದಚ್ಚರಸಿಯರಂತಾಲಯಮಂ
ಪಿಡಿದಭಿನಯಿಸಿದರೆಸೆವಭಿನಯಮಂ ||

ಸುರವಂದಿವ್ರಜಜಯಜೀಯರವಂ
ಪರಿಪೂರಿಸಿದತ್ತಾಶಾಂಬರವಂ ||

ವಿಕರಣಸಂಭವದೇವೀಪ್ರಕರಂ
ಸಕಳೋಪಕರಣನಿಕರಾತ್ತಕರಂ ||

ಬಂದಿದಿರೊಳ್ ನಿಂದುದು ನಲವಿಂದಂ
ಸಂದಣಿಸಿರ್ದುದು ದೇವೀವೃಂದಂ ||

ಕನ್ನಡಿಯಡಪದ ಡವಕೆಯ ಚೆನ್ನೆಯ
ರೇನ್ನಡೆದೆಯ್ತಂದರೊ ಸುರಕನ್ನೆಯ ||

ರುಲ್ಬಣರಾಗದಿನೆಱಗಿದುದನಿತುಂ
ಕಿಲ್ಬಿಷಿಕಪ್ರಕರಂ ಜೀಯೆನುತುಂ ||

ವಿವಿಧಾರ್ಘ್ಯಕರರ್ ಕಾಣ್ಬುಜ್ಜುಗದಿಂ
ಭವನಮಹತ್ತರದೇವರ್ ಕ್ರಮದಿಂ ||

ಬರೆ ಸುರಪತಿ ಕಂಡಿನಿತು ಮಹಕ್ಕಂ
ಪಿರಿದುಂ ಬೆಕ್ಕಸಮುತ್ತು ಬೞಿಕ್ಕಂ || ೬೩

ಚಂ || ಪೆಣೆದೆರ್ದೆಯಲ್ಲಿ ತಣ್ಮಲೆವ ಸಂತಸವೆತ್ತಣದೀವಿಮಾನವೆ
ತ್ತಣದಿದಿರೊಳ್ ನಿಗುಂಬಿಪಮರಾಳಿಯೆತ್ತಣದೆಯ್ದೆ ತೋರ್ಪ ಪೆ
ಕ್ಕಣದ ವಿಳಾಸವೆತ್ತಣರು ಲೋಕವಿದೆತ್ತಣದಾನುಮೀಗಳೆ
ತ್ತಣನೆನುತುಂ ವಿಚಾರಿಸಿದನೇಂ ಭವಸಂಧಿವಿಮೋಹದಂದಮೋ || ೬೪

ವ || ತದನಂತರಂ –

ಕಂ || ತೊಟ್ಟನಿರುಳ್ ನಡೆವಂ ಪೊಲ
ಗೆಟ್ಟಲ್ಲಿಯೆ ನೇಸಱೊಗೆವವೊಲ್ ಕಲ್ಲೆರ್ದೆಯೊಳ್
ಪುಟ್ಟಿ ಭವಪ್ರತ್ಯಯಮೊಡ
ವುಟ್ಟಿರ್ದಱಿಯಮೆಯನಳಱೆ ದಿವಿಜಂಗಾಗಳ್ || ೬೫

ವ || ಅಂತು ಪಲಕಾಲಮೇನಾನುಮಂ ಮಾಡಿ ಮಱೆದವಂಗೆ ನೆನವಿ ಪುಟ್ಟುವಂತೆ ಪುಟ್ಟಿದ ಭವಪ್ರತ್ಯಯಜ್ಞಾನಪ್ರಭಾವದಿಂದಂ –

ಮ || ವಿ || ಪ್ರಥಮಸ್ವರ್ಗಮಿದೀವಿರಾಜಿಪ ವಿಮಾನಂ ಶ್ರೀಪ್ರಭಂ ಸತ್ತಪಃ
ಪ್ರಥಮಂ ಶ್ರೀಜಿನನಾಥದರ್ಶಿತಮನಾಂ ಮುಂ ಪೊರ್ದಿ ಬಂದಿಲ್ಲಿ ತ
ತ್ಪೃಥುಪುಣ್ಯೋದಯದಿಂದೆ ಪುಟ್ಟಿದೆನಿದೆಲ್ಲಂ ಪ್ರಾಪ್ತಸೇವಾಮನೋ
ರಥಮಸ್ಮತ್ಪರಿವಾರಮೆಂದಱಿದನಾವೃತ್ತಾಂತಮಂ ಸ್ವಾಂತದೊಳ್ || ೬೬

ಉ || ಅನ್ನೆಗಮೆಯ್ದೆವಂದು ಪೊಡಮಟ್ಟು ಮಹತ್ತರದೇವರೀಶ ನೀಂ
ಮುನ್ನಿನ ಜನ್ಮದೊಳ್ ನೆಗೞ್ದ ಜೈನತಪಃಫಲದಿಂದಮೀ ನಿಳಿಂ
ಪೋನ್ನತಸೌಖ್ಯಮಂ ಪಡೆದೆಯಂತದಱಿಂ ಜಿನರಾಜಪೂಜೆಯಂ
ಮುಂ ನೆಗೞಲ್ಕೆ ವೇೞ್ಕುಮದು ಕೃತ್ಸ್ನಸುಖಪ್ರಭವೈಕಕಾರಣಂ || ೬೭

ಕಂ || ಜಿನಪದಯುಗಪ್ರಸಾದದಿ
ನಿನಿತು ಸುರಶ್ರೀಯನೆಯ್ದೆ ತಾಳ್ದಿದೆಯದಱಿಂ
ನಿನಗನ್ವರ್ಥಂ ಶ್ರೀಧರ
ವಿನುತಾಹ್ವಯಮೆಂದು ಪೊಗೞ್ದುದಾ ದಿವಿಜಜನಂ || ೬೮

ವ || ಅನಂತರಮಾ ದೇವಂ ದೇವಾಧಿದೇವಪದರಾಜೀವಸೇವಾಧೀನಮಾನಸಂ ತದ್ವಿಮಾನದಿಂ ಪೊಱಮಟ್ಟು ಆತ್ಮರಕ್ಷಕಾಭಿಯೋಗ್ಯಪ್ರಕೀರ್ಣಸಂಮಾನಿತಾಮರಾದಿಪರಿಜನಪರೀತನುಂ ಅನರ್ಘ್ಯಮೌಳಿಮಣಿಗಣಪ್ರಭಾಪ್ರಸರಪರಿವೇಷಪರಿವೃತೋದ್ದಂಡಪುಂಡರೀಕಪೂರ್ಣಿ ಮಾಚಂದ್ರನುಂ ದೇದೀಪ್ಯಮಾನ ಮಾಣಿಕ್ಯಕುಂಡಲಪ್ರತಿಬಿಂಬಮಾರ್ತಂಡಮಂಡಳ ಮಂಡಿತಾಂಶೂದಯಾಚಲ ಶಿಖಂಡನುಂ ಆ ನಾಭೀವಲಯಪ್ರಲಂಬಮಾನಚಕಚಕಿತ ಮುಕ್ತಾಹಾರಭಾರಮಳಯಜಸ್ಥಾಸಕಸ್ಥಗಿತವಿಸ್ತೀರ್ಣವಕ್ಷಸ್ಸ್ಥಲನುಂ ಅಯನಲೀಲಾಂದೋಳಾಯಿತರತ್ನವಳಯೋನ್ಮುಖಮಯೂಖಲತಿಕಾಪ್ರತಾನಪರಿವೇಷ್ಟಿತಭುಜಾದಂಡಪಾರಿ ಜಾತಕಾಂಡನುಂ ಉತ್ತಪ್ತತಪನೀಯಚ್ಛಾಯಾಪ್ರಾಯಕಾಯಕಾಂತಿಸಂತಾನಸಂಗಮಪಿಶಂಗೀಭೂತಸಹಜಾತನೂತನದುಕೂಲಾಂಚಲನುಂ ಅತಿವಿಶದಚರಣನಖಕಿರಣಶಂಕಾಸ ಮುತ್ಪಾದಕಪಾದಾಲಂಕಾರಶೌಕ್ತಿಕೇಯದೀರ್ಘದೀಧಿತಿಕ್ಷೀರಧಾರಾಪ್ರಕ್ಷಾಳಿತಾಕ್ಷೂಣಹರಿನೀಳ ಮಣಿಕುಟ್ಟಿಮನುಮಾಗಿ ಪಾದಮಾರ್ಗದಿಂ ಪೋಗಿ ಸೌಧರ್ಮಕಲ್ಪದೊಳುಳ್ಳಕೃತಕಚೈತ್ಯಾಲಯಂಗಳಂ ಕಲ್ಪಪಾದಪಪ್ರತಿಪಾದಿತವಿವಿಧಾರ್ಚನಂಗಳಿಂರ್ಚಿಸಿ ಬಂದು ನಿಜಮಂದಿರ ಪುರೋಭಾಗದ ಚಂಚತ್ಪಂಚರತ್ನಮಯಮಂಡಪಮಧ್ಯಾಧಿಷ್ಠಿತನಿಷ್ಟಪ್ತಕಾಂಚನ ಪಂಚಾನನವಿಷ್ಟರದೊಳ್ –

ಚಂ || ಎಸೆವ ಜಿನೇಂದ್ರಬಿಂಬಮನಳುಂಬಮಿದೆಂಬಿನಮೞ್ತಿಯಿಂ ಪ್ರತಿ
ಷ್ಠಿಸಿ ಮನವಾಱೆ ಮಾಡಿ ಸವನೋತ್ಸವಮಂ ಕ್ರಮದಿಂ ಬೞಿಕ್ಕಮ
ರ್ಚಿಸಿ ನೆಱೆದೆಂಟುಮರ್ಚನೆಗಳಿಂ ರಸವೃತ್ತಿಯ ನೃತ್ತಮಂ ಪ್ರವ
ರ್ತಿಸಿ ಮಗುೞ್ದಾಪ್ರಕಾರದಿನನುಷ್ಠಿಸಿದಂ ದಿವಸಾಷ್ಟಕಂಬರಂ || ೬೯

ವ || ಅಂತಷ್ಟಾಹ್ನಿಕಮಹಾಮಹಮನರ್ಹತ್ಪರಮೇಶ್ವರಂಗೆ ಮಾಡಿ ಬೞಿಕಮಣಿಮಾದಿಗುಣ ಸಂಪನ್ನನುಂ ಜರಾರೋಗಸ್ವಪ್ನಸಂತಾಪಾಕ್ಷಿಪಕ್ಷಪಾತವ್ಯಪೇತನುಂ ಸಪ್ತಾರತ್ನಿ ಪ್ರಮಾಣ ದೇಹೋತ್ಸೇಧನುಂ ಸಾಗರೋಪಮದ್ವಿತಯಸಮ್ಮಿತಾಯುಷ್ಕನುಂ ದ್ವಿಸಹಸ್ರಹಾಯನಾಂ ತರಕೃತಾಮೃತಾಶನನುಂ ಏಕೈಕಮಾಸಪ್ರಭವದಭಿವದಭಿನವಸುರಭಿನಿಶ್ವಾಸೋಚ್ಛಾಸ್ವನುಂ ಕಾಯಪ್ರವಿಚಾರಚತುಸ್ಸಹಸ್ರಪ್ರಿಯಪ್ರಮಾಧೀಶ್ವರನುಂ ಅತರ್ಕ್ಯವಿಭವವಿಳಸಿತನುಮಾಗಿ –

ಚಂ || ಉರಮಮರ್ದಪ್ಪಿ ಚಪ್ಪಲರ್ದ ಪೆರ್ಮೊಲೆಯಿಂ ವದನಂ ಸುಧಾಮಯಾ
ಧರಪರಿಸೇವೆಯಿಂ ತೊಡೆ ತೊಡಂಕಿದ ನುಣ್ದೊಡೆಯಿಂ ಮನಂ ನಿರಂ
ತರಸುರತಪ್ರಪಂಚಸುಖದಿಂ ಪೆಱಪಿಂಗದಿನಿತ್ತು ಮೆಂಬಿನಂ
ಸುರನುಪಭೋಗಮಂ ತ್ರಿದಶವಾರವಧೂಜನದೊಳ್ ನಿಮಿರ್ಚಿದಂ || ೭೦

ವ || ಮತ್ತಂ –

ಚಂ || ಸೊಗಯಿಪ ಪೊಂಕು ಲಾಲಿಸುವ ಲಲ್ಲೆ ಮರಲ್ಚುವ ಮಾತು ಚಿತ್ತಮಂ
ತೆಗೆವ ತೆಗೞ್ತೆ ಮೋಹಿಪ ವಿನೋದಮರಲ್ಚುವಪಾಂಗವೀಕ್ಷಣಂ
ಪೊಗೞಿಪ ಪೊರ್ದುವಾಸೆ ಬಸದಾಗಿಪ ಬಟ್ಟೆನಿಪೀವಿಭಾವಚೇ
ಷ್ಟೆಗಳಿನದೇನಲಂಪನೆರ್ದೆಗಿತ್ತರೊ ಸಗ್ಗದ ಪೆಂಡಿರಾತನಾ || ೭೧

ಅಮರ್ದುಣಿಸಗ್ಗದಚ್ಚರಸಿಯರ್ ವಧುವರ್ ನಿಳಯಂ ಪರಾರ್ಥ್ಯರ
ತ್ನಮಯವಿಮಾನಮಾಳ್ಗಳಮರರ್ ಹರಿನೀಳತಳಂ ಧರಾತಳಂ
ಪ್ರಮದವನಂ ಸುರದ್ರುಮವನಂ ಬಿನದಂ ನವದಿವ್ಯನಾಟಕೋ
ದ್ಯಮಮೆನೆ ಬಣ್ಣಿಪಂಗೆ ಸುಖಸಂಪದಮೇಂ ಗಳ ಮೊಗ್ಗೆ ಸಗ್ಗದಾ || ೭೨

ಕಂ || ದಿಟದಿಂದೊಲ್ದವರಂ ಲಂ
ಪಟತೆಯಿನಮರ್ದಪ್ಪಿ ನೆರೆವ ನೆರೆವನಿತು ಸುಖಂ
ಘಟಿಯಿಸದು ತಮ್ಮೊಳೆನಿಸುವ
ಮಿಟಮಿಟಸಗ್ಗಂಗಳೋಳಿಯೇ ಸೌಧರ್ಮಂ || ೭೩

ವ || ಅದಲ್ಲದೆಯುಮೋರೊರ್ಮೆ ನಿಜವಿಮಾನದುಪವನಂಗಳೊಳಗಣೋಲಗಸಾಲೆಯೊಳನೇಕ ನಾಕಿನಿಕರಪರಿವೃತನಾಗಿರ್ಪಲ್ಲಿ –

ಚಂ || ಜಲಜಲಿಸುತ್ತು ಮಿರ್ಪ ಮಣಿಭಿತ್ತಿಗಳೊಳ್ ನಿಜಮೂರ್ತಿಯೆತ್ತಲುಂ
ನೆಲಸಿ ಜಲಕ್ಕನಾಗಿರೆ ನಿರೀಕ್ಷಿಸಿ ಲೀಲೆಯಿನೋಲಗಕ್ಕೆ ವ
ರ್ಪಲಘುವಿತಂಬೆಯರ್ ಸುರಪುರಂಧ್ರಿಯರೆತ್ತಣಿನೆಂದು ನಿಟ್ಟಿಪಾ
ಕುಲತೆಯನೊಂದೆ ಕಂಡು ದಿವಿಜಂ ತಳೆವಂ ದರಹಾಸಲಕ್ಷ್ಮಿಯಂ || ೭೪

ಕಂ || ಮಱಪಿಕ್ಕಿ ನೋಡುವಮರಿಯ
ತುಱುಗೆಮೆಗಣ್ಬೆಳಗು ಬಳೆಯೆ ಚಾಮರದೆಲರಿಂ
ನೆಱೆ ಮಿಳಿರ್ದು ಮಿಱುಪ ದುಗುಲದ
ಸೆಱಗೆಂದೆಂದಂದು ತೆಗೆಯಲಾತಂ ಬಗೆದಂ || ೭೫

ಸಂಕೇತಸಮಯಮಂ ನಲ
ವಿಂ ಕಿವಿಯೊಳ್ ಪಚ್ಚುವಚ್ಚರಸಿಯಧರಮಯೂ
ಖಂ ಕರ್ಣಪೂರಪಲ್ಲವ
ಶಂಕೆಯನೊದವಿಸೆ ಸುರೋತ್ತಮಂ ಸೊಗಯಿಸಿದಂ || ೭೬

ವ || ಮತ್ತಂ ಕ್ರೀಡಾಸ್ವಭಾವೆಯರಪ್ಪ ಪಲರುಂ ದೇವಿಯರ್ವೆರಸು ವಾಹನಾಮರವಿಕ್ರಿಯಾ ಶಕ್ತಿಸಂಜನಿತವಾಜಿಸಾಮಾಜಾದ್ಯನೇಕಯಾನಂಗಳನೇಱಿಪೋಗಿ –

ಮ || ಸ್ರ || ಸುಮನೋಭೂಭೃದ್ದರೀಸುಂದರತರವನದೊಳ್ ನಿರ್ಮಳಾಂಭಸ್ಸ್ವಯಂಭೂ
ರಮಣಾಕೂಪಾರದೊಳ್ ಲೋಚನಹೃದಯಸುಧಾಸ್ಯಂದಿನಂದೀಶ್ವರದ್ವೀ
ಪಮಹಾಚೈತ್ಯಾಳಿಯೊಳ್ ಪಾವನತರನವಸಂಗೀತಕಕ್ರೀಡೆಯಂ ಮಾ
ಡಿ ಮನಃಪ್ರಹ್ಲಾದಮಂ ತಾಳ್ದುವನನವರತಂ ಶ್ರೀಧರಂ ಕೇಳಿಶೀಳಂ || ೭೭

ವ || ಅಂತಾತ್ಮಿಯಸುಕೃತಾಸಾದಿತಮುಮಂ ಅನತಿಶಯಮುಮಂ ಅನನೂನ ವಿಭವಮುಮಂ ಅಪ್ರತಿಬಂಧಕಮುಮಂ ಅಭಿಮತಾನುಗತಮುಮಪ್ಪ ದೇವಲೋಕಶ್ರೀಯನನುಭವಿಸುತ್ತುಮಿರೆ ನಿಜಾಯುರಬ್ಧಿದ್ವಯಮರ್ಧವತ್ಸರಾವಶೇಷಮಾಗಲೊಡಂ –

|| ಹರಿಣೀವೃತ್ತಂ ||

ತಳೆದ ಸುಮನೋದಾಮಂ ನೀರೋಡಿ ಬಾಡಿದುದಾಗಳಾ
ಗುಳಿಯನೊಳಕೆಯ್ದತ್ತಾಸ್ಯಾಂಭೋರುಹಂ ನಿಜದೇಹದು
ಜ್ಜ್ವಳಿಕೆ ಮಸುಳ್ದೈತಂದಂದೊಂದು ತಂದ್ರತೆ ಚಿತ್ತಮಂ
ಬಳಸಿದುದು ಪೇಱಾವೊಂಗೇನಾಗದಾಯುವ ತೌಗೆಯೊಳ್ || ೭೮

ವ || ಅಂತೆಯ್ದೆವರ್ಪ ಜವನ ಜವದಿನಾಜವಂಜವದಸಾರತೆಯನಱಿದಱುದಿಂಗಳುಮನಾತ್ಮ ತತ್ವಭಾವನೆಯೊಳಂ ಪುಣ್ಯಕಥಾಶ್ರವಣಸಂಭಾವನೆಯೊಳಂ ಜಿನಪೂಜಾಪ್ರಭಾವನೆಯೊಳಂ ಕಳಿಪಿ ಬೞಿಯಂ ಸೌಧರ್ಮೇಂದ್ರಮಂದಿರಾಭ್ಯರ್ಣದ ಕೃತ್ರಿಮಚೈತ್ಯಾಗಾರದೊಳ್ –

ಕಂ || ಪಂಚಗುರುಚರಣಸರಸಿರು
ಹಂ ಚಿತ್ತದೊಳಖಿಳಮಳಹರಂ ನಾಲಗೆಯೊಳ್
ಪಂಚಪದಂ ನೆಲಸಿರೆಯಿರೆ
ಪಂಚತೆಯಂ ನಿಷ್ಪ್ರಪಂಚನೆಯ್ದಿದನಮರಂ || ೭೯

ವ || ಆ ಸಮಯದೊಳ್ –

ಕಂ || ಘೞಿಲನೆ ಬಳಾಕೆಯಾಕೃತಿ
ಮೞಿಗಾಲದೊಳಿರದದೃಶ್ಯಮಪ್ಪಂದದಿನಿ
ತ್ತುೞಿಯದೆ ಕಡೆಗಾಲದೊಳಳ
ವೞಿಯೆ ಸುರಂ ಮಾಯವಾಯ್ತು ದಿವಿಜನದೇಹಂ || ೮೦

ವ || ಅಂತಲ್ಲಿಂದಂ ತಳರ್ದು ಬಂದೀ ದ್ವಿತೀಯದ್ವೀಪದ ಯಾಮ್ಯದಿಶೆಯೊಳೆಸೆವಿಷುಕಾ ಧಾರಿಣೀಧರದ ಮೂಡಣ ಭರತದೊಳ್ ಉಪಹಿತಲೋಭವಶಜನಪರಿಪೂರ್ಣ ನಾನಾನಗರನಂದನವನನದೀರತ್ನ ನಿಕರಾಕರಸರಃಕೇದಾರಸಾರ ಸಂಪದ್ವಿಷಯಮಪ್ಪ ಅಳಕಾವಿಷಯಮೆಂಬ –

ಉ || ದೇಶದೊಳೊಪ್ಪುಗುಂ ನಗರಿ ಕೋಸಳೆಯೆಂದದನಾಳ್ವನುಗ್ರಖ
ಡ್ಗಾಶನಿಪಾತಿತಾನ್ಯಮಹಿಭೃದ್ವ್ರಜನಪ್ಪಜಿತಂಜಯಂ ತದು
ರ್ವೀಶನ ಯೋಷೆ ಸಂದಜಿತಸೇನೆ ಬೞಿಕ್ಕವರ್ಗಾಸುಧಾಶನಿ
ರ್ದೇಶಿತವೇಶ್ಮನಪ್ಪಜಿತಸೇನಸಮಾಹ್ವಯನಾದನಾತ್ಮಜಂ || ೮೧

ವ || ಆತನನವದ್ಯರಾಜವಿದ್ಯಾಸಮುದಯವಿಶಾರದನುಂ ಶಾರದಶಶಿಪ್ರಭಾವಿಶದ ಯಶೋದೀಪ್ತಿದಿಗ್ದದಿಕ್ಚಕ್ರನುಂ ಚಕ್ರವರ್ತಿಲಕ್ಷಣೋಪಲಕ್ಷಿತಾಕ್ಷೂಣ ಶೋಭಾಸಂಗತಾಂಗಪತ್ಯಯನುಂ ಅಂಗಪ್ರತ್ಯಂಗಸಂಭವಾಂಗಿಕಾವ್ಯಭಿನಯಚತುಷ್ಟಯಪ್ರಯುಕ್ತ ಶ್ರುತಕಳಾಪರಿಣತನುಂ ಪರಿಣತಪ್ರವಾಳಪಾಟಳಿಮಲೀಲಾಧರನಿಜಾಧರಪಲ್ಲವನುಂ ಪಲ್ಲವಪಾರಿಯಾತ್ರಪ್ರಭೃತಿ ನಾನಾದೇಶಯೋಷಿದ್ಗೀಯಮಾನಸೌಭಾಗ್ಯಗೀತನುಂ ಗೀತವಾದ್ಯವಿದ್ಯಾವಿವೇಕವಿಜಿತ ಚತುರಾನನನುಂ ಚತುರಾನನಸಂಸ್ಕಾರಸಂಯುತೋಪನ್ಯಾಸವಿತ್ರಾಸಿತಪರಮತನುಂ ಪರಮತತ್ತ್ವ ಪರಿಚಿತಗುರುಜನಮನಃಪ್ರಹ್ಲಾದಜನಕನುಂ ಜನಕಪ್ರತಿಷ್ಠಿತಪ್ರಾಜ್ಯಯೌವರಾಜ್ಯಪದವೀಸುಸ್ಥಿತನುಮಾಗಿ –

ಕಂ || ಕುಳಿಶರಥಾಂಗಾಂಕಂ ಕರ
ತಳದೊಳ್ ಕರಮೆಸೆಯೆ ಲಸಿತವೈಭಲಕ್ಷ್ಮೀ
ನಿಳಯಂ ಯುವರಾಜಂ ಕ
ಣ್ಗೊಳಿಸಿದನಿಂದ್ರನೊಳುಪೇಂದ್ರನೊಳ್ ಸರಿವರುತುಂ || ೮೨

ಚಂ || ಮಣಿಮಯಮಂ ವಿಭೂಷಣಸಮುಚ್ಚಯಮಂ ಸಹಜಾತಮಂ ವಪುಃ
ಕಿಣಕರಮಂ ನಿರರ್ಥಮಮರ್ತ್ಯತೆಯೊಳ್ ಸಲೆ ಪೊತ್ತೆನೆಂಬುದೊಂ
ದೆಣಿಕೆ ಮನಕ್ಕೆ ವಂದುದೆನೆ ಮರ್ತ್ಯತೆಯೊಳ್ ತಳೆದಂ ಸಹಾರ್ಥಮಂ
ಗುಣಮಯಮಂ ವಿಭೂಷಣಕದಂಬನಂಗಸುಖಾವಳಂಬಮಂ || ೮೩

ಕಂ || ದಿವಿಜತೆಯ ಮೂರ್ತಿ ಮೆಯ್ಯಿ
ಕ್ಕುವುದುಂ ತಾನೆ ಗಡ ಮಾಣ್ದುದದು ಚೆಲ್ವಲ್ತೆಂ
ದವನ ಮನುಜತೆಯ ತನು ನೋ
ೞ್ಪವರೊಳ್ ಮಾಣಿಸಿದುದಾದಮೆವೆಯಿಕ್ಕುವುದಂ || ೮೪

ವ || ಎನಿಸಿ ಸಕಲಸೌಂದರ್ಯಸಾರಸಂಪನ್ನತೆಯನಪ್ಪುಕೆಯ್ದು –

ಮ || ಸ್ರ || ಸಕಳಾರ್ಥಿವ್ರಾತಚೇತೋಮುದಮನಮಲರೈಧಾರೆಯಿಂ ವೈರಿಭೂಪಾ
ಳಕಜಾಳಸ್ವಾಂತಚಿಂತಾಭರಮನಸಿಲತಾಧಾರೆಯಿಂ ಕಿಲ್ಬಿಷವ್ರಾ
ತಕಳಂಕೋಚ್ಛಿತ್ತಿಯಂ ಸಂತತಜಿನಸವನೋದ್ಯತ್ಪಯೋಧಾರೆಯಿಂ ಮಾ
ಡಿ ಕರಂ ಪ್ರಖ್ಯಾತಿವೆತ್ತಂ ನೃಪತನಯನನೇಕಾಂತವಿದ್ಯಾವಿನೋದಂ || ೮೫

ಗದ್ಯಂ

ಇದು ಪರಮಪುರುನ್ನಾಥಕುಲಕುಭೃತ್ಸಮುದ್ಭೂತಪ್ರವಚನಸರಿತ್ಸರಿನ್ನಾಥ
ಶ್ರುತಕೀರ್ತಿತ್ರೈವಿದ್ಯಾಚಕ್ರವರ್ತಿ ಪದಪದ್ಮ ನಿಧಾನದೀಪವರ್ತಿ
ಶ್ರೀಮದಗ್ಗಳದೇವ
ವಿರಚಿತಮಪ್ಪ
ಚಂದ್ರಪ್ರಭಪುರಾಣದೊಳ್
ಶ್ರೀಧರಾಮರಸ್ವರ್ಗಾವತರಣವರ್ಣನಂ
ಚತುರ್ಥಾಶ್ವಾಸಂ