ಅತಿನಿಶಿತದರ್ಭಸೂಚೀ
ಹತಿಗಳ್ಕಿದ ತೆಱದಿನುಗ್ರಕರನತುಳ ವನ
ಸ್ಪತಿಸಂಕೀರ್ಣವೆನಪ್ಪೀ
ವಿತತಾಟವಿಯಲ್ಲಿ ಸಲಿಸನೆಂದುಂ ಕರಮಂ || ೫೧

ಬಿಗಿದಡರೆ ಸುತ್ತಿ ಮರನಂ
ಮೊಗಂಗಳಂ ನೆಗಪಿ ಸುಯ್ವ ಶ್ವಯುನಿಕರದ ಮೇ
ಗೊಗೆವ ನಿಡುಸುಯ್ಯ ಕಡುವೆಂ
ಕೆಗಳಿಂ ಕಳಿಪುವವು ಕಪಿಗಳದಱೊಳ್ ಹಿಮಮಂ || ೫೨

ವ || ಮತ್ತಮಾ ಮಹಾವನಂ ಯೌವನದಂತೆ ಮದನೋತ್ಕಳಿತಾ ಕಮನೀಯಮುಂ ಚಿತ್ರಕಾಯ ಶೋಭಾಪ್ರಾಯಮುಂ ಕಾಂತಾಕದಂಬದಂತೆ ಲೋಹಿತಚಂದನಾಲಂಕೃತಮುಂ ತಮಾಲ ಪತ್ರಶೋಭಿತಮುಂ ಸನ್ನದ್ಧಸಪ್ತಿಯಂತೆ ಖಲೀನಶಾಖಾಮುಖಮಂ ಉಪಕಂಠಚಳಚ್ಚಾಮರಮುಂ ತಾಳಪಾತವಿಧಿಯಂತೆ ಶಮ್ಯಾರಮ್ಯಮುಂ ತಳೋಪಲಾತಮುಂ ರಣಾಂಗಣದಂತೆ ಚಮೂರಚಿತಪ್ರಹರಣವಿಶೀರ್ಣರೂಪಮುಂ ದಂತಿದಾನವವಿಲೀನಶಿಲೀಮುಖಮಂ ಪಾಂಡವಪ್ರಕರದಂತಾತ್ತಭೀಮನಕುಲದ್ರುಪದಮುಂ ಅರ್ಜುನೋರ್ಜಿತಮುಂ ನಾಕಿನಿಳಯದಂತೆ ಅನೂನಾಪ್ಸರೋಗಣಪ್ರಣೂತಮುಮತರ್ಕ್ಯಗೋಚರಮುಂ ಅಸಂಯುತಹಸ್ತಸಮುದಯದಂತೆ ಆತ್ತಕಪಿಸ್ಥಮುಂ ತಾಮ್ರಚೂಡಾವಲೀಢಮುಂ ಕ್ಷೇತ್ರಾ ಕರ್ಷದಂತೆ ಪೋತ್ರಿಪೋತ್ರಾಹತಧರಣಿತಳಮುಂ ಗೃಹೀತಗೋಲಾಂಗೂಲಮುಂ ಗಗನಮಂಡಲದಂತೆ ಋಕ್ಷಾಕೀರ್ಣಮುಂ ಕುಟಜಕುಳವಿಭ್ರಾಜಿತಮುಂ ಜಾಂಬೂನದ ಪ್ರದೇಶದಂತೆಅಷ್ಟಾದೋತ್ಪತ್ತಿಸ್ಥಾನಮುಂ ಅಪರಿಮಿತಕುಶಪ್ರಸರಮುಂ ಸಭಾಸದನದಂತೆ ವೇತ್ರಾಸನಾಧಿಷ್ಠಿತರಾಜರಾಜಿತಮುಂ ಸ್ವರಸಮುದಯದಂತೆ ನಿಷಾದನಿಷೇವ್ಯಮುಂ ಆರಾಧಕನಂತಕ್ಷಮಾಲಾಗಣಿತಜಪೋಪೇತಮುಂ ರಾಜ್ಞೀನಿವಾಸದಂತೆ ಜರತ್ಕಂಚುಕಿಶ ತೋದಂಚಿತಮುಂ ನಾಟಕಪ್ರಕರದಂತೇಹಾಮೃಗೋಪಗೂಹಿತಮುಂ ಅಭಿನಯದಂತ ನೇಕಾಹಾರ್ಯಕನಿವಿಷ್ಟಮುಂ ಭೈರವಾವಳಿಯಂತೆ ರುರುಪರಿಚಿತಮುಂ ಪಿತಾಮಹಾನನಂದತೆ ಸಾಮಜಪದಾಭಿರಾಮಮುಂ ಸ್ಥಾಣುನಿವಸನಮಾಗಿಯುಂ ಅಪರ್ಣಾನ್ವಿತಮಲ್ತು ಬಹುಳಸತ್ವೋಪೇತಮಾಗಿಯುಂ ತಮೋವಿರಹಿತಮಲ್ತು ಮಯೂರಾಧಿರೂಢಮಾಗಿಯುಂ ವಿಶಾಖಾಕರಮಲ್ತು ಆತ್ತಸಾರಸ್ವತಾತಿಶಯಮಾಗಿಯುಂ ವಿವೇಕಾಕರಮಲ್ತು ನಿರಂತರಚ್ಛಾಯಾಶೇಷಮಾಗಿಯುಂ ಕೃತಾಂತರೂಪಮಲ್ತು ಅಂತುಮಲ್ಲದೆಯುಂ-

ಉ || ಪಾತ್ರವಿಕೀರ್ಣಮಾತತಸುತಾಳಧರಂ ವಿವಿಧಾವನದ್ಧವಾ
ಸೂತ್ರಿತವಂಶಕಾರನಿಕರಂ ಕಳಕಂಠಸಮೂಹಸಂಶ್ರಿತಂ
ಚಿತ್ರಿತರೂಪಶೋಭೆಗೆಡೆಯಾದುದು ಭಾವಿಸಿ ನೋಡೆ ನಾಡೆ ತೂ
ರ್ಯತ್ರಯಸಂಪ್ರದಾಯಮೆನೆ ಕಾನನಮಾವೃತದಿಕ್ಕುಳಾನನಂ || ೫೩

ವ || ಆ ಮಹಾಟವೀಮಧ್ಯದೊಳೊಂದು ಪುಲ್ವಟ್ಟೆವಿಡಿದು ನಡೆಯ ಮುಂದೊಂದು ವಿರಳತರ ತರುಪ್ರದೇಶದೊಳ್ –

ಚಂ || ಹೊಸಹೊದೆಗಟ್ಟುವಂಬುಗಳ ಕುಪ್ಪಿಯನಾವರಿಪಾರ್ದ್ರಜಾಳಮಂ
ಪಸರಿಪ ಸಂಡುಗೋಲನುಡಿಗಟ್ಟುವ ಪೀಲಿಗಳಿಂ ತರಂಗಮಂ
ಪೊಸೆಯಿಪ ಬೆತ್ತಗಣ್ಣಿವಲೆಯಂ ಸಮಕಟ್ಟುವ ಬೆಟ್ಟುಗೂಂಟಮಂ
ಬಸಿವ ಪುಳಿಂದಸಂಕುಳದ ಪೆರ್ಕಣದಿಂದೆಸೆದತ್ತು ಪಕ್ಕಣಂ || ೫೪

ಕಂ || ಪರಿಕಿಸೆ ವೃಕ್ಷಾರೋಹಣ
ವರಾಹಚರ್ವಿತಕವೇಣುದಾರಿತಕಂಗಳ್
ಕರಮೆಸೆಯೆ ಕಾಮಶಾಸ್ತ್ರದ
ದೊರೆಯಾದುದು ಶಬರಶಿಶುಗಳುಜ್ಜುಗಮದಱೊಳ್ || ೫೫

ವ || ಮತ್ತಂ ತತ್ಸಮೀಪದ ವಿಶಾಲತಾಲಷಂಡದೊಳ್ –

ಮ || ವಿ || ಸ್ಮರಸಮ್ಮೋಹನಧೂಪಧೂಮಕಳಿಕಾಸಂದೋಹಮೋ ಚಿತ್ತಜೋ
ದ್ಭವವಶ್ಯಾಂಜನಮಂಜರೀನಿಕಾರಮೋ ಕಾಮತ್ರಿಲೋಕೀಜಯಾ
ಕರಶಾತಾಸಿಲತಾಳಿಯೋ ಬಗೆವೊಡೆಂಬಂತಿರ್ದುದಿಂದ್ವಂಕಕ
ರ್ಬುರಕಾಯಂ ಶಬರೀಚಯಂ ನೆರೆದು ಪಾನಕ್ರೀಡೆಯೊಳ್ ನಾಡೆಯುಂ || ೫೬

ವ || ಮತ್ತೊಂದೆಡೆಯೊಳೊರ್ವಂ ಮೃಗಯಾನಿಮಿತ್ತದಿಂ ಬರುತ್ತುಂ –

ಮ || ಸ್ರ || ವಿಕರಾಳಾಳೋಕನೀಷಜ್ಜಳಗತನಳಿನೀಶ್ಯಾಮನುದ್ಭ್ರಾಮ್ಯದೇಕಾ
ಸ್ತ್ರಕರಾಗ್ರಂ ವೇಣುಬಾಣಾಸನವಿನಿಹಿತಕಕ್ಷಂ ಸಕೌಳೇಯಕಸ್ತ್ರೀ
ನಿಕರಂ ಹ್ರಸ್ವಾಸಿಧೇನುಸ್ಥಗಿತಜಘನನಂದೊಪ್ಪಿದಂ ದ್ವೀಪಿಲಾಂಗೂ
ಲಕೃತೋಷ್ಣೀಷಂ ಶಿರೋಳಂಕೃತವರವಿಕಸತ್ಕಿಂಕಿರಾತಂ ಕಿರಾತಂ || ೫೭

ಮ || ವಿ || ಚಕಿತೇಣೀನಯನಾಂಶುವಿಂ ಶ್ರವಣಪೂರೇಂದೀವರಂ ಪುಂಡರೀ
ಕಕನಚ್ಛಾಯೆಯನೀಯೆ ಬಿಂಬರುಚಿರೋಷ್ಠದ್ಯೋತಿಯಿಂ ವೇಣುಮೌ
ಕ್ತಿಕಹಾರಂ ಗುರುಗುಂಜಿಯೆಕ್ಕಸರಮಂ ಕೀೞ್ಮಾಡೆ ಸಂದಳ್ ಪುಳಿಂ
ದಿ ಕುಚಶ್ರೋಣಿಗಳೆಕ್ಕೆಯಿಂದೆ ತನಿಗೆತ್ತುತ್ತೊಪ್ಪೆ ಪಿಂದೋಪನಂ || ೫೮

ವ || ಅಂತು ಪೋಪಲ್ಲಿ –

ಕಂ || ಇದಿರೊಳ್ ಗರ್ಜಿಸಿ ಪುಲಿ ನಿಲೆ
ಬೆದಱಿ ಕರಂ ಶಬರಿ ಬರಿಯನಪ್ಪಲೊಡಂ ರೋ
ಷದಿನಲರ್ದುದೊಂದು ಕಣ್ ರಾ
ಗದೆ ಮುಗುಳ್ದುದದೊಂದು ಕಣ್ ವನೇಚರಪತಿಯಾ || ೫೯

ವ || ಅದಲ್ಲದೆಯುಮೊಂದು ಪಲ್ವಲಪ್ರಾಂತದೊಳ್ ಕಾಂತಾರಕಳಭಪ್ರಾಯ ಪೋತ್ರಿಸಂತಾನದೊಳಗೆ –

ಮ || ವಿ || ಬರಿಗಂಡಂ ಪಿಣಿಲೇಱೆ ರೋಮಮುಡಿದಿರ್ಬೆನ್ನಾಗೆ ಮುಂಗಾಲಗ
ಲ್ತರೆ ಬಿರ್ಕುರ್ವೆ ಮೊಗಂ ಕರಂ ಪೆಗಲ ಬಿಣ್ಪಿಂ ಜೋಲ್ವಬಾಲಂ ಮುೞುಂ
ಕಿರೆ ಬಂಬಲ್ಗಡಿವಂ ಪೊದೞ್ದಗಸೆವೂಗೊಂಬೊಪ್ಪೆ ಕೋೞ್ಕುಟ್ಟಿ ಪೆ
ರ್ನೊರೆ ಸೂಸುತ್ತಿರೆ ಭೀಕರಂ ಸೊಗಯಿಸಿತ್ತುತ್ತೇಕರಂ ಸೂಕರಂ || ೬೦

ವ || ಬೇಱೊಂದೆಡೆಯೊಳ್ –

ಮ || ಸ್ರ || ಗುರುನಿದ್ರಾಭಂಗಜಭ್ರೂಕುಟಿವಿಕಟಲಲಾಟಂ ಜಪಾಪಾಟಳಾಪಾಂ
ಗರುಚಂ ವೇಶಂತಶಯ್ಯಾಪರಿಮಿಳಿತಲಸತ್ಕರ್ದಮಾರ್ದ್ರಂ ಬೃಹತ್ಕಂ
ಧರಕಂಡೂಬಂಧನೋಲ್ಲೇಖನಮಳಿನಿತಶಾಖಿಪ್ರತಾನಪ್ರಕಾಂಡಂ
ನೆರೆದಿರ್ದತ್ತೊಂದು ನಾನಲ್ವಿಡಿದು ಮಹಿಷವೃಂದಂ ಯಥಾಸ್ವೇಚ್ಛೆಯಿಂದಂ || ೬೧

ವ || ಆ ಮಹಾಮಹಿಷಮಂಡಲಮಿರ್ದುದಲ್ಲದೆಯುಂ –

ಮ || ಸ್ರ || ನೆರೆದೇೞ್ತಂದತ್ತು ತೀವ್ರಾನಿಳಭಯವಶದಿಂದಲ್ಲಿಗಾ ನೀಳಮೇಘೋ
ತ್ಕರಮೆಂಬಂತಿರ್ದುದಾ ಬೃಂಹಿತರುತಿ ಮೊೞಗಂ ಪಿಂಗಳಾಪಾಂಗರುಗ್ಮಂ
ಜರಿಯುದ್ಯದ್ವಿದ್ಯುತೋದ್ಯೋತಮನವಿರಳದಾನಂ ಗಳದ್ವರ್ಷಮಂ ಪೋ
ಲ್ತಿರೆ ವೇಲ್ಲತ್ಸಲ್ಲಕೀಸಂಕುಲವೆನಿಪೆಡೆಯೊಳ್ ಹಸ್ತಿಯೂಧಂ ವನೋತ್ಥಂ || ೬೨

ಕಂ || ಅದು ಬಗೆಯೆ ಮಹಾಪ್ರಾಸಾ
ದದಂತೆ ಭದ್ರೋಪಲಕ್ಷಿತಂ ಗ್ರಹಕುಳದಂ
ತದು ಮಂದಬಂಧುರಂ ಮ
ತ್ತದು ಸಕಲಶಶಾಂಕನಂತೆ ಮೃಗಸಂಸ್ಥಗಿತಂ || ೬೩

ವ || ಅಂತಳುಂಬಮಾದ ಮದಸ್ತಂಬೇರಮಕದಂಬದೊಳ್ –

ಚಂ || ಪಸಿದೊಡೆ ಸಲ್ಲಕೀಕಿಸಲಯಂಗಳನೊಯ್ಯನೆ ನೀಡಿ ಮೆಯ್ಯ ತೀನ್
ಮಸೆದೊಡೆ ಕೋಡೊಳಿಟ್ಟೊರಸಿ ನೀರ್ಗೆಳಸಿರ್ದೊಡೆ ತಂದು ನೀರನೂ
ಡಿಸಿ ನಸೆಯಿಚ್ಚೆಯಾದೊಡೊಡಗೂಡಿ ಬೞಲ್ದೊಡೆ ಕರ್ಣವಾತಮಂ
ಪಸರಿಸಿ ತನ್ನ ಕೈಪಿಡಿಯವೊಲ್ ಪಿಡಿಯಂ ಪಿಡಿದಿರ್ದುದೊಂದಿಭಂ || ೬೪

ಲಳಿತವಿಷಾಣಕೋಟಿಗಳಿನೀಡಿಱಿದಾಗಳೆ ತಾಳವಟ್ಟಮಂ
ಸೆಳೆದು ತುಡುಂಕಿ ಮತ್ತೆ ಮೊಲೆಯಂ ನಲವಿಂ ಕಡೆವಾಯ ಪಲ್ಲವಂ
ಗಳನೆಳೆಕೊಂಡು ಸೂಸೆ ಪೆಱಗಾಲೆಡೆಯಿಂ ನುಸುಳ್ಬೋಡಿ ಕಾಡಿ ಸಂ
ಗಳಿಸಿತದೊಂದು ಪಲ್ಲಮಱಿ ತಾಯ್ವಿಡಿಗಂತುಮನಂತಸೌಖ್ಯಮಂ || ೬೫

ವ || ಅದಲ್ಲದೆಯುಂ ಮುಂದೆಡೆಯೊಳ್ ಉತ್ತಾಳತಾಳಚೂಳದಿಂ ಬಿೞ್ದೊಡೆದು ಪಸರಿಸುವ ಪಣ್ಣರಸದಿಂ ತಳಂಗಳಂ ತೊಯ್ದು ನಕ್ಕುವ ಗೋಳಾಂಗೂಳಂಗಳುಂ ಒಂದೊಂದೆಡೆಯ ಮುಳ್ಗಿಡುಗಳೊಳ್ ತೊಡರ್ದ ಮೆಯ್ನವಿರ್ ಪಱಿಗುಮೆಂದು ಮಿಡುಕಲೊಲ್ಲದಲ್ಲಿಯೆನಿಂದು ಬಿಲ್ಲರ್ಗೆ ತಮ್ಮಿಂ ತಾಮೆ ಪಡುಮಿಗಂಗುಡುವ ಚಮರೀಮೃಗಂಗಳುಂ ಒಂದೊಂದೆಡೆಯೊಳ್ ಮರದ ಮಱೆಗಳೊಳ್ ಬೞಿದಪ್ಪಿದ ಮಱಿಯನಱಸಿ ಮಱುಕದಿಂ ಸೂರ್ೞ್ಪ ಖಡ್ಗಧೇನುಗಳ ತೊರೆದ ಮೊಲೆಯಿಂದಂಬಿರಿವಿಡಿದು ಸುರಿವ ಪಾಲ್ಗೆ ಪಜ್ಜೆವಿಡಿದು ಪರಿವರಣ್ಯಮಾರ್ಜಾರಪೋತಕಂಗಳುಂ ಒಂದೊಂದೆಡೆಯೊಳೊಗೆವದಾವಶಿಖಿಯ ಪೊಗೆಗೆ ಪೀರ್ವ ಜತುಕನಿಕರಂಗಳುಂ ಒಂದೊಂದೆಡೆಯೊಳಡವಿ ಯಾನೆಗಳಡಿಗೊಂಬುಗೊಂಡತದುಕಿನ ಮರದ ಮುಱಿಗಣ್ಣೊಳೊಗೆದ ಪಗಿನೊಳಗ್ಗಿವೆಗಡಿಂ ಕಾಲ್ದೊಡರ್ದು ಮಿಡುಕಿ ಕಳವಳಿಪ ಕಳವಿಂಕಸಂಕುಳಂಗಳುಂ ಒಂದೊಂದೆಡೆಯೊಳುಣ್ಮುವ ಮೆಯ್ಯ ಸುಯ್ಯ ಕಡುಗಂಪಿಂಗೆ ಕವ್ವರೆಗೊಂಡು ಮುಸುಱಿಮೊಱೆವ ತುಂಬಿಯ ಬಂಬಲ್ಗೇವಯ್ಸಿ ಬೆಳೆದ ಮೆಳೆಗಳೆಡೆಯೊಳ್ ನುಸುಳ್ದಡಂಗಿ ಪೋಪ ಕತ್ತುರಿಮಿಗದಮೊತ್ತಂಗಳುಂ ಅಗುರ್ವುವಡೆಯೆ ನೃಪತನೂಜಂ ವಿಪಿನಚರವಿವಿಧಸತ್ವಂಗಳಂಗಚೇಷ್ಟಾಭಾವಂಗಳಂ ಭಾವಿಸಿ ವಿಸ್ಮಯಂಬಡುತ್ತುಂ ಪೋಗೆವೋಗೆ ಪುರೋಭಾಗದೊಳ್ –

ಮ || ಸ್ರ || ಶರಭಗ್ರಸ್ತೋತ್ಥಕಂಠೀರವಕಟುರಟನೋತ್ಥಪ್ರತಿಧ್ವಾನವದ್ಗ
ಹ್ವರದುಶ್ಶ್ರಾವಶ್ರವಂ ನಿಷ್ಠುರಗರಳರಸಾರ್ದ್ರಸ್ಫುರಜ್ಜಿಹ್ವದರ್ವೀ
ಕರದುರ್ದರ್ಶಂ ಸಮುತ್ಕಂಟಕವಿಟಪಿಲತಾವರುದತ್ಯಂತವೃತ್ಯು
ತ್ಕರದುರ್ವೇಶಂ ಮನಕ್ಕದ್ಭುತರಸದೊದವಂ ತಂದುದಂದೊಂದಗೇಂದ್ರಂ || ೬೬

ವ || ಅಂತು ತೋಱುತಿರ್ದ ವಂಶಧರಮೆಂಬ ಗಿರಿವರಮಂ ಕಂಡೆಯ್ದೆವರ್ಪಾಗಳ್ –

ಕಂ || ಆ ಕುವರನ ಬಂದೊಸಗೆಯೊ
ಳೋಕುೞಿಯಾಡಿದಪುದಚಲಮೆನೆ ಸೊಗಯಿಸಿದೆ
ತ್ತಾಕೀರ್ಣಧಾತುನಿರ್ಝರ
ಶೀಕರತತಿ ನೆಗೆದು ನಗದ ನಾಲ್ಕುಂ ದೆಸೆಯೊಳ್ || ೬೭

ವ || ಮತ್ತಂ –

ಕಂ || ಈಗಳೆ ಸಮನಿಸಿದಪ್ಪುದು
ರಾಗಂ ನಿನಗೆನ್ನೊಳೆಂದು ನೃಪತನಯನನಂ
ತಾ ಗಿರಿ ಕರೆವಂತಾದುದು
ಕೇಗುವ ಸೋಗೆಗಳ ತಾರಕೇಕಾರವದಿಂ || ೬೮

ವ || ಆಗಳಾ ಪರ್ವತಮನೇಱಿ ದುರ್ಗದುರ್ಗಮಮಾರ್ಗಮಂ ನೋೞ್ಪೆನೆಂದು ಬಗೆದಂದು-

ಕಂ || ಗುರುವಂಶಮತುಳದಂತಂ
ಪರಿವೃತಘನಸತ್ವಮುನ್ನತಂ ತಾನೆನಿಪಾ
ಗಿರಿಪತಿಯಂ ನೃಪತಿಸುತಂ
ಕರಿಪತಿಯಂ ಲೀಲೆಯಿಂದಮೇಱುವ ತೆಱದಿಂ || ೬೯

ವ || ಏಱಿ ತದಧಿತ್ಯಕದೊಳ್ ನಿಂದು ನೋೞ್ಪನ್ನೆಗಂ –

ಉ || ಬಿಟ್ಟ ಕುರುಳ್ ಪೊದೞ್ದ ಕಿಸುಗಣ್ ಮೀಸೆ ಬಾಂಗೆತೂಂ
ತಿಟ್ಟವೊಲಪ್ಪ ಮೆಯ್ ಮಿಳಿರ್ವ ನಾಲಗೆಯುರ್ಬಿದ ಪುರ್ವು ಕರ್ವುನ
ಕ್ಕಿಟ್ಟಳಮಪ್ಪ ಕರ್ಕಶತೆಯೆತ್ತಿದ ಕೆಚ್ಚಿನ ಡಂಗೆ ಭೀತಿಯಂ
ಪುಟ್ಟಿಸೆ ಬಂದು ಕಟ್ಟಿದಿರೊಳಿರ್ದನದೊರ್ವನಡುರ್ತು ಜಟ್ಟಿಗಂ || ೭೦

ಕಂ || ಇರ್ದನಂತರಂ ಪ್ರತಿನಿನಾದಿತವಿಯದ್ವಿವರಮಪ್ಪ ಘೋರಘರ್ಘರಧ್ವನಿಯಿನಿಂತೆಂದಂ –

ಉ || ಈ ಗಿರಿ ಮದ್ಭುಜಾಪರಿಘಪಾಲಿತಮಾವನುಮಿಲ್ಲಿ ಪೊಕ್ಕವಂ
ಬೇಗದೆ ಪೊಕ್ಕವಂ ಯಮನಿವಾಸಮನಂತದಱಿಂದಮಾಮರು
ದ್ಭೋಗಿವಿಯಚ್ಚರರ್ ಮಱೆದುಮೆನ್ನಯ ಬೆಟ್ಟದ ಮೇಲೆ ಬಟ್ಟೆಯಂ
ಪೋಗರದರ್ಕೆ ಸಕ್ಕಿಯಿದಱಕ್ಷತಪಲ್ಲವಪುಷ್ಪಸಂಕುಳಂ || ೭೧

ಕಂ || ಅತಿಬಳತುಹಿನಗನಿರ್ಝರ
ತತಿಯೆನಿಸಿದ ಮದ್ಗಿರೀಂದ್ರಮಂ ಚಂಡಕರ
ದ್ಯುತಿಪುಗದು ಪೊಕ್ಕೊಡಂ ತಿ
ಗ್ಮತೆಯಂ ಬಿಡುವುದದು ಮತ್ಪ್ರತಾಪದಿನಲ್ತೇ || ೭೨

ಏನೆಂದು ಪೊಕ್ಕೆಯದಱಿಂ
ದೀ ನಗಮಂ ನಾವಿಚಾರಿತಂ ಕೃತ್ಯಮೆನಿ
ಪ್ಪೀ ನುಡಿ ನಿನ್ನಯ ಕಿವಿಯಂ
ತಾನೆಂದುಂ ತಾಗದಕ್ಕುಮಕ್ಕಟ ಪೆಱದೇಂ || ೭೩

ವ || ಅದಲ್ಲದೆಯಂ-

ಉ || ಮೀಱೆ ಮದಾಜ್ಞೆಯಂ ಗಿರಿಯನೇಱಿದ ನಿನ್ನಯ ನೆತ್ತಿಗೀಗಳಿಂ
ತೇಱಿಸಿ ಜೀವಮಂ ಜವನ ಲೆಕ್ಕದೊಳೇಱಿಸಿ ಮತ್ತೆ ನಿನ್ನನಾ
ನೇಱಿಪೆನೆನ್ನ ತೋಳ್ಗೆ ಬೞಿಯಂ ನೆರೆಗೆಲ್ಲಮನಲ್ಲದಂದು ಬ
ಲ್ಪೇಱದೆನುತ್ತವಂ ತಿರಿಪಿದಂ ನಿಜನಿಷ್ಠುರಕಾಷ್ಠದಂಡಮಂ || ೭೪

ವ || ಆಗಳವನ ಗರ್ವಗರ್ಭಂಗಳಪ್ಪ ನಿರ್ಭರೋಕ್ತಿಗಳಂ ಕೇಳ್ದು ಕುಮಾರಂ ಪರ್ಜನ್ಯಗರ್ಜನಮಂ ಕೇಳ್ದು ಕೇಸರಿಕುಮಾರನಂತು ಕೆಳರ್ದು –

ಮ || ವಿ || ವಿಗತಾರ್ಥಂಗಳೆನಿಪ್ಪ ಮಾತುಗಳೊಳಾರಂ ಬೆರ್ಚಿಸಲ್ಬಂದೆ ಬೇ
ಡ ಗಡಾ ಸಾಯದೆಪೋಗು ಪೋಗದೊಡೆ ಮೇಣ್ ಮೇಲ್ವಾಯ್ದುನೋಡೀಗ
ಳಿಂತೆ ಗಜಾರಾತಿಯನಾಂತ ದಂತಿಗೆಣೆಯಾಗಾಂ ಮಾಡಿ ನಿನ್ನಂ ಬೞಿ
ಕ್ಕಗಮಂ ವ್ಯಾಧವಧೂಜನಕ್ಕೆ ವನಕೇಳೀಶೈಲಮಂ ಮಾಡುವೆಂ || ೭೫

ಕಂ || ಎನೆ ಕೈದುವಿಡಿಯೆನಾಂ ನಿನ
ಗನಾಯುಧಂಗೆಂದು ಕೈಯ ಪಾವಂ ವಿನತಾ
ತನಯಂ ಬಿಸುಡುವವೋಲ್ ತೊ
ಟ್ಟನೆ ಬಿಸುಟಂ ಪಿಡಿದ ಬಡಿಯನಂತಾದಡಿಯಂ || ೭೬

ವ || ಅಂತು ಬಿಸುಟ್ಟು ಮಲ್ಲಯುದ್ಧಸನ್ನದ್ಧರಾಗಿರ್ವರುಂ ಭುಜಾಸ್ಫಾಲನಂ ಮಾಡಲೊಡಂ –

ಕಂ || ಕುವರನ ಬಾಹಾಸ್ಫಾಲನ
ರವಮುರ್ಬಿಸೆಯಗಿದು ಪಾಡಿಬಿಡದೊದಱುತ್ತಿ
ರ್ದವೊಲಾದುದು ತದ್ಗಹ್ವರ
ನಿವಹನಪ್ರಭವಾತಿಭೀಷಣಂ ಪ್ರತಿಘೋಷಂ || ೭೭

ವ || ಅನಂತರಮಾ ಶಿಖರಿಶಿಖರಮೆ ಕಳನಾಗಿಯುಂ ವನದೇವತಾಪೇಟಕಮೆ ನೋಟಕರಾಗಿಯುಂ ಪಳುಕಿನ ಕೋಡುಗಲ್ಗಳೊಳ್ ಪೊಳೆವ ತಮ್ಮ ನೆೞಲೆ ನೆರೆದ ಮಲ್ಲರ ನೆರವಿಯಾಗಿಯುಂ ನಿಕುಂಜೋಪಾಂತಜರ್ಝರನಿರ್ಝರಧ್ವನಿಯೆ ಮಲ್ಲದಾಳಮಾಗಿಯುಂ ಕಳಂಬೊಕ್ಕು ನಿರಿಸುಗೆಯ್ದು ನಖಹತಿ ದಶನಹತಿ ಪಾದಪಾತಂ ಮುಷ್ಟಿಪಾತಮೆಂಬ ದೋಷಂಗಳಂ ಪೊರ್ದದ ನಾಲ್ಕುಂ ಸ್ಥಾನದೊಳಂ ಮೂಱುಂ ಲಗ್ಗದೊಳಂ ಐದುಂ ಡೊಕ್ಕರದೊಳಂ ಎಣ್ಬತ್ತುನಾಲ್ಕು ಬಿನ್ನಣದೊಳಂ ಪಲತೆಱದ ಪಾತಂಗಳೊಳಂ ನೆಱೆದು –

ಚಂ || ಎಸೆವ ಮುಹಗ್ಗಳಂ ಠಡಕಿ ಕಕ್ಖವಡಂ ಮುಹಡಂ ತುಳಾಡಿ ಸಂ
ದಸುವಿಡಿವಟ್ಟಸಂ ಗುಣವಳುಂಬಗೆ ಪಾಸಗೆವನ್ನಿಮುಟ್ಟಿ ಚ
ಟ್ಟುಸಿರಣವಟ್ಟಿ ಬಾಹುದಣೆ ಖಮ್ಮರಿ ಕತ್ತರಿ ಖೋಡವಂಕುಶಂ
ಸಸಿಕುವೆನಿಪ್ಪ ಜೆಟ್ಟಿಗನ ನಚ್ಚಿನ ಬಿನ್ನಣಮೊಪ್ಪೆ ಕಾದಿದರ್ || ೭೮

ಕಂ || ಕರಿಯೊಳ್ ಕರಿ ಗಿರಿಯೊಳ್ ಗಿರಿ
ಹರಿಯೊಳ್ ಹರಿ ಪೋರ್ವ ತೆಱದೆ ಪೋರ್ದರ್ ತಮ್ಮೊಳ್
ಭರದಿಂ ವನದೇವತೆಯರ
ನೆರವಿಯ ಕಣ್ಬಸಿವು ನಿಸದಮೋಸರಿಸುವಿನಂ || ೭೯

ಉ || ಮಿಕ್ಕುದು ವಜ್ರಪಾತಮುಮನೆಂಬಿನಮುಬ್ಬಸಮಾದ ತೋರಹ
ತ್ತಕ್ಕೆ ತಗುಳ್ದು ಪತ್ತಿಸುವ ಮಾನಸಗೋಳಮೆನಿಪ್ಪ ಡೊಕ್ಕರ
ಕ್ಕಿಕ್ಕಿದ ವಜ್ರಲೇಪಮೆನೆ ಪತ್ತುವ ಲಗ್ಗೆಗೆ ಮಾರಿಯೊಳ್ ಮೊಗಂ
ಬೊಕ್ಕವೊಲಾಗೆ ಬೆರ್ಚಿದನವಂ ಕುವರಂಗೆನಸುಂ ನಿಯುದ್ಧದೊಳ್ || ೮೦

ವ || ಅಂತು ಬೆರ್ಚಿ ಬೆಗಡುಗೊಂಡು –

ಉ || ಭೋಂಕನೆ ತಾಂ ನಭಕ್ಕೊಗೆದು ಭಾಸುರರತ್ನಕಿರೀಟಮುಂ ಫಣಾ
ಸಂಕುಳಮುಂ ಚಳನ್ಮಕರಕುಂಡಳಮುಂ ಕಟಿಸೂತ್ರಮುಂ ಕನ
ತ್ಕಂಕಣಮುಂ ಕರಂ ಸೊಗಯಿಪನ್ನೆಗಮಾಗಳೆ ತೋಱಿ ತನ್ನ ರೂ
ಪಂ ಕಱೆದಂ ಬೞಿಕ್ಕಳವಿದಪ್ಪಿನ ಹರ್ಷದೆ ಪುಷ್ಪವರ್ಷಮಂ || ೮೧

ವ || ಅದಂ ಕಂಡು ಕುಮಾರಂ ನೀನಾರ್ಗೇನೆಂಬೆಯೆಂದು ಬೆಸಗೊಳ್ವುದುಮಾತನಿಂತೆಂದಂ ಆಂ ಭವನಾಮರನೆಂ ಹಿರಣ್ಯನೆಂಬೆನಿಂದು ವಂದನಾಭಕ್ತಿಯಿಂ ಮಂದರಕ್ಕೆ ಪೋಗಿ ಬರುತ್ತುಮಿಲ್ಲಿ ನಿನ್ನಂ ಕಂಡು –

ಉ || ಆಂ ಭರದಿಂದೆ ನಿನ್ನಯ ಭುಜಾಬಲದೆೞ್ತರಮಂ ಪರೀಕ್ಷಿಸಲ್
ಡಂಭದಿನೊಂದು ರೂಹುದಳೆದಿನ್ನೆವರಂ ಪೊಣರ್ದಿಕ್ಕುವಟ್ಟು ಕಂ
ಡೆಂ ಭವದೀಯಸಾಹಸಮನೀಗಳದಂ ನೆನೆವಂದು ನಾಡೆ ಮ
ತ್ತಂ ಭಯಮುತ್ತು ಕುಂದಿದಪುದೆನ್ನಮನಂ ಸುಭಟೈಕಮಂಡನಾ || ೮೨

ಕಂ || ಸತಿ ವೀರಜನನಿಯೆನಿಪೊಡೆ
ಸುತನಂ ನಿನ್ನನ್ನನಂ ದಿಟಂ ಪೆತ್ತಂದ
ನ್ವಿತಮಕ್ಕುಮಲ್ಲದಂದಾ
ನುತಿಯಿಂದೆ ಸುಲೋಚನಾಖ್ಯೆಯೆನಿಪನಿತೆ ವಲಂ || ೮೩

ಇನಿವಿರಿದು ಪರಾಕ್ರಮಮು
ಳ್ಳ ನಿನಗೆ ತೀಱದ ಪದಾರ್ಥಮಿಲ್ಲೆಂಬುದನಾಂ
ನೆನೆನೆನೆದು ಲಜ್ಜೆಯಿಂ ಬೇ
ಡೆನಲ ಱಿದಪೆನಿಲ್ಲ ನಿನ್ನನಿನ್ನುಂ ಬರವಂ || ೮೪

ಆದೊಡಮೇಂ ಯತ್ನೋಚಿತ
ಮಾದೆಡೆಯೊಳ್ ನೆನೆವುದೆನ್ನನಸಹಾಯಸಮು
ತ್ವಾದಿತಮೆನಿಸಿದ ಕಾರ್ಯಮ
ದೇದೊರೆಯಂಗಂ ಸಮಂತು ಸಿದ್ಧಿಸದಲ್ತೇ || ೮೫

ಮತ್ತಂ ತೃತೀಯಜನ್ಮದ
ವೃತ್ತಕಮೊಂದುಂಟು ನಿನಗದಂ ಪೇೞ್ದಪೆನಾಂ
ಚಿತ್ತೈಸಿ ಕೇಳ್ ಸುಗಂಧಿಳ
ವರ್ತಿಳವೀಶ್ರೀಪುರಾಹ್ವಯಂ ಪುರಮದಱೊಳ್ || ೮೬

ವ || ನೀಂ ಶ್ರೀವರ್ಮನೆಂಬರಸನಾದೆಯಲ್ಲಿ –

ಕಂ || ಪೊಱವೊೞಲೊಳಿರ್ಪರಿರ್ವರ್
ನೆಱೆದೊಕ್ಕಲ್ತನದ ಪೆರ್ಮೆಯೊಕ್ಕಲಿಗರ್ ಪೇ
ರಱಿಕೆಯ ಶಶಿ ಸೂರ್ಯಾಖ್ಯರ್
ಪಱಿನಂಟರ್ ತಮತದೊಂದು ಕೇಱಿಯ ಮನೆಯೊಳ್ || ೮೭

ವ || ಇರ್ದೊಂದು ದೆವಸಂ ಸೂರ್ಯನಾಮಂ ಬೇಱೂರ್ಗೆ ಪೋಗೆ ಭೇದಿಸಿ ಶಶಿಕೃಷೀವಲಂ ಅವನ ಪೂೞ್ದೊಡಮೆಯಂ ಕಂಡೆತ್ತಿಕೊಂಡೊಡಾತನಱಿದು ಬಂದು ನಿನಗೆ ಪೇೞೆ –

ಕಂ || ಶಶಿಯಂ ಘಾತಿಸಿ ಸೂರ್ಯಂ
ಗಶೇಷಧನಮಂ ಬೞಿಕ್ಕೆ ನೀನಿತ್ತೊಡೆ ತ
ಚ್ಛಶಿ ಪಲವು ಯೋನಿಯೊಳ್ ನಿಂ
ದಶಾಂತಮತಿ ಚಂಡರುಚಿನಿಶಾಚರನಾದಂ || ೮೮

ಕೃತಸುಕೃತವೇಷದಿಂದೀ
ಗತಿಯೊಳ್ ಸೂರ್ಯಚರನಾಂ ಹಿರಣ್ಯನೆನಾದೆಂ
ಪ್ರತಿಕೂಲನಾದನವನೂ
ರ್ಜಿತ ನಿನಗಾಂ ಮಿತ್ರನಾದೆನದುಕಾರಣದಿಂ || ೮೯

ಸಾತಿಶಯಸತ್ವನಿಧಿ ನೀ
ನಾತಂಗೊಳಗಾಗಿ ಬಂದೆಯಿಲ್ಲಿವರಂ ಶೌ
ರ್ಯೇತರನಂದದೆ ಕರ್ಮಮ
ದೇತೆಱದೊಳಮೂಡಿದಲ್ಲದುಪಶಮಿಸುಗುಮೇ || ೯೦

ವ || ಎಂದು ಪೇೞ್ದಾಭವನಾಮರನದೃಶ್ಯವಾಗಿ ಪೋಗೆ ಕುಮಾರನುಂ ತದ್ದೇಶಪ್ರಭಾವದಿಂ ಕಾಂತಾರಪಾರಮನೆಯ್ದಿ ನಗರನಂದನಾನಾಕೇದಾರಪ್ರತಾನಪ್ರಾಯಮಪ್ಪ ಜನಪದಮಂ ಕಂಡು –

ಉ || ಆ ನೃಪಪಾರ್ಶ್ವಮೆತ್ತಸುರನೆತ್ತ ಸರೋವರಪಾತಮೆತ್ತರ
ಣ್ಯಾನಿಯದೆತ್ತ ಪರ್ವತಮುಮೆತ್ತ ಹಿರಣ್ಯನ ಕಾಣ್ಕೆಯೆತ್ತ ಮ
ತ್ತೀನೆಲನೆತ್ತ ಮತ್ಕೃತಪುರಾತನಪುಣ್ಯದ ಪಾಂಗನೇನನಿ
ನ್ನೇನೆನಲಕ್ಕುಮೆಂದಿನಿಸು ವಿಸ್ಮಯಮುತ್ತು ಬರುತ್ತುಮಿರ್ಪಿನಂ || ೯೧

ಮ || ವಿ || ಶಕಟಾರೋಪಿತಸಂಶ್ರಯೋಪಕರಣ ಸ್ವಾರಿವ್ರಜಾರೂಢಬಾ
ಳಕುಳಂ ಧಾಮನಿಯುಕ್ತಕಂಠವಿಚಳದ್ಗೋಮಂಡಳಂ ಶತ್ರುಸೈ
ನ್ಯಕೃತಾಸ್ಕಂದವಿಳೋಕನೋತ್ಸುಕವಳದ್ಗ್ರೀವಾಂಗನಾಸಂಚಯಂ
ಚಕಿತಂ ತದ್ವಿಷಯಪ್ರಜಾಪ್ರತತಿಯೋಡುತ್ತಿರ್ದುದೆತ್ತೆತ್ತಲುಂ || ೯೨

ವ || ಆಗಳಾ ಜನಸಂಕುಳದೊಳೊರ್ವನನಗ್ರಾಮ್ಯಾಕೃತಿಯನಿದಿರೊಳ್ ಬರ್ಪನಂ ಕಂಡು ತತ್ಪ್ರಜಾ ಪಲಾಯನಕಾರಣಮಂ ಮಾರ್ಗೋಪಕಠಂದೊಳ್ ನಿಂದು ಬೆಸಗೊಳ್ವುದುಮವನುಮಾತನ ಮನುಜಾಸಾಧಾರಣಾಕಾರಮಂ ಕಂಡು ರಾಜಪುತ್ರನೆಂದಱಿದೆಱಗಿ ಪೊಡೆಮಟ್ಟು –

|| ಪೃಥ್ವಿ ||

ನಿರಂತರಿತಶಾಲಿಸಸ್ಯಚಯಶಾಡ್ವಲೋರ್ವೀತಳಂ
ಪರೀತನವಪೂಗನಾಗವನಕರ್ಬುರಾಶೋತ್ಕರಂ
ಸ್ಫುರನ್ಮಣಿಖನಿಪ್ರಭಾಶಬಳಿತಾಂಬರಂ ತೋರ್ಪುದಿಂ
ತರಿಂಜಯಸಮಾಹ್ವಯಂ ಜನಪದಂ ಸುಖೈಕಾಸ್ಪದಂ || ೯೩

ಕಂ || ಈ ಭೂಮಂಡಲಲಕ್ಷ್ಮಿಗೆ
ನಾಭೀಮಂಡಲಮಿದೆನಿಸಿ ಮಧ್ಯದೊಳೆನಸುಂ
ಶೋಭಿಸುವುದು ನಗರಂ ವಿಪು
ಳಾಭಿಖ್ಯಂ ವಿಪುಳಶಾಳಮತುಳಾಟ್ಟಾಳಂ || ೯೪

ಆಳ್ವನದಂ ಜಯವರ್ಮಂ
ತೋಳ್ವಲದಿಂದಾತನಗ್ರಮಹಿಷಿ ಜಯಶ್ರೀ
ಯಾಳ್ವಳ್ ತನ್ಮನಮಂ ಕ
ಣ್ಗೊಳ್ವ ನಿಜಾಕಾರಸಾರವಿಳಸನದಿಂದಂ || ೯೫

ರತಿಗಂ ಮದನಂಗಂ ವಿ
ಶ್ರುತಮೋಹನಶಕ್ತಿ ಪುಟ್ಟಿದಳ್ ಸ
ನ್ಮತಿ ಗುಣವತಿ ರೂಪವತಿ ಶಶಿಪ್ರಭೆಯೆಂಬಳ್ || ೯೬

ಮ || ಸ್ರ || ಮೊದಲೊಳ್ ಲಾವಣ್ಯಸರ್ವಸ್ವದ ತವಿಲನಣಂ ನೋಡದಾ ಕನ್ನೆಯಂಮಾ
ಡಿದನೀಗಳ್ ಸ್ವೇಚ್ಛೆಯಿಂದಿರ್ವವನಿಪತಿಗಳೊಳ್ ಕಾಮಸಂತಾಪಮಂ ಕೂ
ಡಿದನಾದಂ ತತ್ಪಿತೃದ್ವಂದ್ವದ ಮನಕೆ ಸಮಾಕಾರಸಂಪದ್ವರಾಲಾ
ಭದುರಂತೋದ್ವೇಗಮಂ ನೀಡಿದನತಿತರನಿರ್ಬಂಧದಿಂ ಪದ್ಮಸದ್ಮಂ || ೯೭

ವ || ಅದಲ್ಲದೆಯುಂ –

ಕಂ || ಮನದ ವಿವೇಕಂ ಪೀನ
ಸ್ತನದೊಳ್ ನಾಲಗೆಯ ಮಾತು ಕಣ್ದೊಳ್ ಕರತ
ರ್ಜನಮಡರೆ ನಿಮಿರ್ದ ಪುರ್ವಿನ
ಕೊನೆಯೊಳ್ ನೆಲಸಿದುದು ಯೌವನಂ ನೆಲಸಲೊಡಂ || ೯೮

|| ಮಲ್ಲಿಕಾಮಾಲೆ ||

ಹಾಸಕಾಸುಮಮಂಬಕದ್ಯುತಿಚಂದ್ರಿಕಂ ಸಸುಗಂಧನಿ
ಶ್ವಾಸದಕ್ಷಿಣವಾಯು ಮಂಜುಳವನ್ಯಪುಷ್ಟರುತಂ ತದು
ದ್ಘಾಸಿನೂತನಯೌವನೋದಯಮಾಧವಂ ನೆರವೆಂದುಮಾ
ಯ್ತಾಸಮಸ್ತಜಗಜ್ಜಯಕ್ಕಿರವೆಂದು ಪೊಂಗುವನಂಗಜಂ || ೯೯

ಕಂ || ಪೆಡೆಯುಡುಗಿದ ಭೋಗಿನಿಯೆಮೆ
ಮಿಡುಕಂ ಸಂಗಳಿಸದಮರಿ ಗಗನಸ್ಥಳಿಯೊಳ್
ನಡೆ ಮಾಣ್ದ ಖಚರಿಯೆಂಬೀ
ನುಡಿಗೆಡೆಗೊಟ್ಟಳ್ ಲತಾಂಗಿ ನವತರುಣಿಮದೊಳ್ || ೧೦೦