ಶಾ || ಶ್ರೀಪಾದದ್ವಿತಯಪ್ರದಕ್ಷಿಣಕೃತಿವ್ಯಾಸಕ್ತಗೀರ್ವಾಣಕಾಂ
ತಾಪಾಂಗತಪ್ರತಿಬಿಂಬಕೋಟಿಘಟಿತಸ್ಮೇರಸ್ಥಳೇಂದೀವರ
ಶ್ರೀಪೂರ್ಣಂ ಹಿಮವನ್ನಗೇಂದ್ರಮೈನೆ ಕಣ್ಗಿಂಬಾದ ಚಾಂದ್ರಪ್ರಭಂ
ರೂಪಂ ದಿವ್ಯವಚೋಮರುನ್ನದಿಯಿನೆಮ್ಮೊಳ್ ಮಾೞ್ಕೆ ನೈರ್ಮಲ್ಯಮಂ || ೧

ಉ || ಆವೃತಘಾತ್ಯಘಾತಿದುರಿತಾತ್ಯಯದೊಳ್ ಚರಮಾಂಗಮಾತ್ರಕರ್
ಜೀವಘನಸ್ವರೂಪಮೊಗೆತರ್ಪುದುಮಷ್ಟಮಭೂಮಿವಿಷ್ಟರ
ಸ್ತಾವಧಿಸೌಖ್ಯಮುಖ್ಯರುಪಶಿಷ್ಟಗುಣಾಷ್ಟಕರಾದನಶ್ವರ
ಶ್ರೀವನಿತೇಶರೀಗೆಮಗೆ ಸಿದ್ಧರತೀಂದ್ರಿಯಸೌಖ್ಯಸಿದ್ಧಿಯಂ || ೨

ಶಾ || ಧೈರ್ಯಂ ಘೋರತಪಃಪರೀಷಹಸಮೂಹಪ್ರಾಪ್ತಿಯೊಳ್ ಸಂದ ತಾ
ತ್ಪರ್ಯಂ ಪಂಚವಿಧಾಮಳಾಚರಣಷಟ್ತ್ರಿಂಶದ್ಗುಣಶ್ರೇಣಿಯೊಳ್
ಕಾರ್ಯಂ ಶಿಷ್ಯವಿನೇಯಶಿಕ್ಷೆಯೊಳೊಡಂಬಟ್ಟೊಪ್ಪೆ ಸಂಶೋಭಿಪಾ
ಚಾರ್ಯರ್ ತಾಮೆಮಗೀಗೆ ಸಪ್ತಪರಮಸ್ಥಾನೋದಯೋಪಾಯಮಂ || ೩

ಮ || ಹಾ || ನಯನಿಕ್ಷೇಪಪ್ರಮಾಣಂಗಳೊಳೆ ಪಡೆದನೈಕಾಂತಸಿದ್ಧಿಪ್ರತಿಜ್ಞಾ
ಜಯಮಂ ತದ್ವಿಜ್ಞರೊಳ್ ಮುಂ ಬೞಿಕೆ ತಿಳಿಪಿ ಭವ್ಯರ್ಗೆ ಸದ್ಧರ್ಮಕರ್ಮಾ
ಶ್ರಯತತ್ತ್ವಾತತ್ತ್ವಭೇದಂಗಳನೊಡರಿಸಿ ವಾಕ್ಛ್ರೀಯಶಶ್ಶ್ರೀಸಮಾಕೃ
ಷ್ಟಿಯನಾದಂ ಸಂದರಂತರ್ಮುಖತೆಗಭಿಮುಖಂ ಮಾೞ್ಕುಪಾಧ್ಯಾಯರೆಮ್ಮಂ || ೪

ಶಾ || ಶೀಲಂ ಪಾಲಿತಷಟ್ಪ್ರಕಾರಮೆನಿಸಿರ್ದಾವಶ್ಯಕಕ್ಕಾಯ್ತು ನಿ
ತ್ಯಾಲಂಬಂ ನಿರವದ್ಯಮಾಯ್ತು ಚರಿತಂ ಸಾವದ್ಯಮಂ ಪೊರ್ದದೆಂ
ದೀಲೋಕಂ ಪೊಗೞ್ವಪ್ರಮತ್ತಗುಣಸಂಸ್ಥಾನಕ್ಕೆ ಪಕ್ಕಾದ ಬೋ
ಧಾಲೋಕರ್ ದಯೆಗೆಯ್ಗೆ ಸಾಧುಗಳಘಪ್ರಧ್ವಂಸನಪ್ರೌಢಿಯಂ || ೫

ಕಂ || ಪರಿಹೃತದೋಷಂ ಸಗುಣಂ
ಪರಾರ್ಥ್ಯಮುತ್ಪ್ರಭವಮತರ್ಕ್ಯಸಾಮರ್ಥ್ಯಮಳಂ
ಕರಿಸಿರ್ಕೆ ಪಂಚಗುರುಪಂ
ಚರತ್ನಮಾಳಿಕೆ ಮದೀಯಮತಿಮಾನಿನಿಯಂ || ೬

|| ಮಾಳಿನೀ ವೃತ್ತಂ ||

ಪ್ರಣತನಿಚಯಚೇತಶ್ಚಾತಕಕ್ಕೀಗೆ ಬೇಗಂ
ತಣಿವನಮಲವಾಣೀವೃಷ್ಟಿಯಿಂದಪ್ರಮತ್ತಂ
ಗುಣಗಣಸಮುದಾತ್ತಂ ಸತ್ತಪೋವೃತ್ತಿವಿತ್ತಂ
ಗಣಧರವಿಭುದತ್ತಂ ಶುದ್ಧಬೋಧಪ್ರವೃತ್ತಂ || ೭

ಮ || ವಿ || ಜಿತಕರ್ಮಂ ಸಮುಪಾತ್ತತತ್ತ್ವಚಯಮರ್ಮಂ ಶುದ್ಧರತ್ನತ್ರಯೀ
ಧೃತಭರ್ಮಂ ಕುಮತಾವಳೀಶಿಶಿರಘರ್ಮಂ ಸಾಧುಸಂದೋಹಸಂ
ವೃತವರ್ಮಂ ವಿನಮದ್ವಿನೇಯಜನಶರ್ಮಂ ಮೋಕ್ಷಲಕ್ಷ್ಮೀಪ್ರಿಯೋ
ಚಿತನರ್ಮಂ ನಮಗಾರ್ಮಮಕ್ಕೆ ಜಿನಧರ್ಮಂ ಜನ್ಮಪಾರಂಬರಂ || ೮

ಶಾ || ಪ್ರಾಳೇಯಾಮಳಿನಾಂಗಿ ತುಂಗಮಹಿಷೇಂದ್ರಾರೂಢೆಯಾತ್ಮಾಷ್ಟದೋ
ರ್ಮಾಳಾಳಂಕೃತೆ ಚಕ್ರಶೂಲಶರಚಾಪೋತ್ಕೇತುಚಂಚತ್ಕಶಾ
ಭೀಳಾಸಿಸ್ಫುಟಖೇಟಕಾನ್ವಿತೆ ಚಳದ್ಭಾಳಾಕ್ಷಿ ಸಂಪ್ರೀತಿಯಿಂ
ಜ್ವಾಳಾಮಾಳಿನಿ ಮಾೞ್ಕೆ ಮತ್ಕೃತಿಗೆ ನಿರ್ವಿಘ್ನೋಕ್ತಿನಿರ್ವಾಹಮಂ || ೯

ಚಂ || ಮರಕತಕಾಂತಿಯಂ ತಳೆದ ಮೆಯ್ವೆಳಗಿಂ ನೊಸಲೊಳ್ ಪೊದೞ್ದು ತಾ
ವರೆಯೆಸಳ್ಬೊಟ್ಟಿನೆಂತೆಸೆವ ಕಣ್ಮಲರಿಂ ವರದಪ್ರಫುಲ್ಲಪಂ
ಕರುಹಕಶಾಂಕುಶಾಂಕಿತಚತುರ್ಭುಜದಿಂದೆಸೆವಂ ಕಪೋತವಿ
ಷ್ಕಿರರಥನೞ್ಕಱಿಂ ವಿಜಯಕ್ಷನೊಡರ್ಚುಗಮೋಘರಕ್ಷೆಯಂ || ೧೦

ಮ || ಸ್ರ || ಅಪಹಿಂಸಂ ಸಪ್ತಭಂಗ್ಯನ್ವಿತಮಪವನರೋಧೋದ್ಗತಂ ತ್ಯಕ್ತತಾಲ್ವೋ
ಷ್ಠಪುಟವ್ಯಾಪಾರಮಪ್ರಸ್ಖಲನಮಖಿಲಭಾಷಾತ್ಮಕಂ ನಿಶ್ಚಿತಾಶೇ
ಷಪದಾರ್ಥಂ ವ್ಯಾಪ್ತಕಾಲತ್ರಯಮತಿಸದೃಶಾಸನ್ನದೂರಂ ಸುತತ್ತ್ವಾ
ಭ್ಯುಪಯುಕ್ತಂ ಮಾೞ್ಕೆ ಜೈನಂ ವಚನಮಮಳವಾಕ್ಪ್ರೌಢಿಯಂ ನಮ್ಮೊಳೆಂದುಂ || ೧೧

ಮ || ವಿ || ದುರಿತವ್ರಾತಲತಾಕೃಪಾಣಿ ವಿಸರದ್ದುರ್ಬೋಧರೋಧಸ್ವಿನೀ
ತರಣದ್ರೋಣಿ ಸಮುನ್ನತಾಕ್ಷಯಪದಪ್ರಾಸಾದನಿಶ್ರೇಣಿ ಬಂ
ಧುರಸಾಹಿತ್ಯಸುರತ್ನರೋಹಣಮಹೇಂದ್ರಕ್ಷೋಣಿ ತಾಳ್ದಿರ್ಕೆ ವಿ
ಸ್ತರದಿಂ ವಾಣಿ ಮದೀಯಮಾನಿತಮುಖಶ್ರೀಯೊಳ್ ಸಖೀಲೀಲೆಯಂ || ೧೨

ಕಂ || ಮಳವಿಳಯನರೆನಿಸಿದ ಕೇ
ವಳಿಗಳ ಶುದ್ಧಾನುಬದ್ಧಕೇವಳಿಗಳ ನಿ
ಶ್ಚಳಿತಶ್ರುತಕೇವಳಿಗಳ
ಚಳನಂ ನಮಗಚಳಸುಖಮನೀಗನವರತಂ || ೧೩

ನೆಲೆ ನಾಲ್ವೆರಲಧಿಕಂ ನಿ
ಶ್ಚಲತಪದಿಂದಾರ್ಗಮೆಂಬುದರ್ಕಾಚತುರಂ
ಗುಲಚಾರಣಋದ್ಧಿಯೆ ಮೂ
ದಲೆಯೆನಿಪಂ ವರ್ಯಕುಂಡಕುಂದಾಚಾರ್ಯಂ || ೧೪

ತ್ರಿಭುವನಮಂಗಲತೋರಣ
ನಿಭಮಂ ಪ್ರವಚನಮನೆಯ್ದಿ ರೈಸ್ತಂಭಸಮ
ಪ್ರಭರಂತರ್ನಿಭೃತೋನ್ನತ
ವಿಭವರ್ ಭೂತಬಲಿಪುಷ್ಪದಂತಾಚಾರ್ಯರ್ || ೧೫

ಅನಿಶಂ ಪ್ರಸನ್ನತಾಯುತ
ರನೂನಸದಸತ್ಪದಾರ್ಥದರ್ಶನನಿಪುಣರ್
ಜಿನಶಾಸನಲಕ್ಷ್ಮಿಗೆ ಲೋ
ಚನಯುಗಳರ್ ವೀರಸೇನಜಿನಸೇನಾಖ್ಯರ್ || ೧೬

ಪ್ರಥಿತಾಕಳಂಕಹಿಮವ
ತ್ಪೃಥಿವೀಧರಜಾತಭಾರತೀನುತಭಾಗೀ
ರಥಿಯನೊಳಪೊಕ್ಕು ಕಳೆದುದು
ಪೃಥುಮಿಥ್ಯಾತ್ವೋಪತಾಪಮಂ ಸಕಳಜನಂ || ೧೭

ಆಚರಿಕೆ ಗೃಧ್ರಪಿಂಛಮ
ಹಾಚಾರ್ಯಂಘ್ರಿನಖಭಾನುರುಚಿಯರ್ಹದ್ಬ
ಲ್ಯಾಚಾರ್ಯಪದನಖರಶಶಿ
ರೋಚಿ ಮದೇನಸ್ತಮಸ್ತಮೋನಿರಸನಮಂ || ೧೮

ಭೃತವಂಶನಾಗಿಯುಂ ವ್ಯಪ
ಗತರಾಗಾಸಕ್ತ ಸಿಂಹನಂದ್ಯಾಚಾರ್ಯ
ವ್ರತಿಪತಿ ಸತ್ತತ್ವಸಮ
ನ್ವಿತನಾಗಿಯುಮಾತ್ತತತ್ತ್ವಚಯಚಾತುರ್ಯಂ || ೧೯

ಸಮನಿಕೆ ಮನ್ಮಾನಸದೊಳ್
ಸಮಂತಭದ್ರಾಂಘ್ರಿನಖರಕಾಂತಿಜಳಂ ಮ
ತ್ತಮಳಿನಕವಿಪರಮೇಷ್ಠಿ
ಕ್ರಮಕಮಳಂ ಪೂಜ್ಯಪಾದಪದನಖಕುಮುದಂ || ೨೦

ಮ || ವಿ || ಅಯಮಾರ್ಗಾಶ್ರಯನಂ ಪ್ರಭೂತದಯನಂ ದೂರೀಕೃತಸ್ವಾಂತಭೂ
ಭಯನಂ ಲಬ್ದಕಷಾಯವೈರಿಜಯನಂ ವಿಜ್ಞಾತನಿಶ್ಶೇಷವಾ
ಙ್ಮಯನಂ ಸ್ವೀಕೃತಸತ್ತಪಃಚಯನಂ ಶ್ರೀಕುಂಡಕುಂದೋಜ್ಜ್ವಳಾ
ನ್ವಯನಂ ವಂದಿಪೆನೞ್ತಿಯಿಂದೆ ಕುಳಚಂದ್ರಖ್ಯಾತಯೋಗೀಂದ್ರನಂ || ೨೧

ಉ || ಶಾಂತರಸೈಕಮೂರ್ತಿ ಪರಮಾಗಮವಾರಿಧಿಪಾರವರ್ತಿ ಚೈ
ರಂತನಯೋಗಿನಾಯಕಯಶಸ್ಸಮಕೀರ್ತಿ ಮನೋಜರಾಜವಿ
ಕ್ರಾಂತವನಾಸಿತಾರ್ತಿಯೆನೆ ವಿಶ್ವವಸುಂಧರೆ ಮಾಘಣಂದಿಸೈ
ದ್ಧಾಂತಿಕಚಕ್ರವರ್ತಿ ನೆಗೞ್ದಂ ಧರಣೀಶ್ವರವೃಂದವಂದಿತಂ || ೨೨

ಕಂ || ಶ್ರೀಕನಕನಂದಿಮುನಿವಿ
ದ್ಯಾಕೀರ್ತಿನಮಂ ಫಣೀಶ್ವರಂ ಬಹುತರಜಿ
ಹ್ವಾಕರನಾಗಿಯುಮಱಿಯದೆ
ಮೂಕತೆಯಂ ತಳೆದು ನಾಣ್ಚಿ ರಸೆಗಿೞಿದಿರ್ಪಂ || ೨೩

ಶಾ || ಭಾವಂ ಭಾಸುರತತ್ತ್ವಗರ್ಭಮಯನಂ ಚಾರಿತ್ರಗರ್ಭಂ ವಚ
ಶ್ಶ್ರೀ ವಿಶ್ವೋರ್ಜಿತಶಾಸ್ತ್ರಗರ್ಭಮಮಳಾಳೋಕಂ ದಯಾಗರ್ಭಮೆಂ
ಬೀವಿಖ್ಯಾತಿ ಸಮಸ್ತದಿಕ್ಪ್ರಸರಗರ್ಭಂ ನೋೞ್ಪೊಡೆಂಬನ್ನೆಗಂ
ತ್ರೈವಿದ್ಯಶ್ರುತಕೀರ್ತಿದೇವನೆಸೆದಂ ಸ್ಯಾದ್ವಾದಸಾರೋದಯಂ || ೨೪

ಮ || ವಿ || ಷಡಭಿಜ್ಞಂ ಕ್ಷಣಿಕಂ ಜಡಾತ್ಮನೆನಿಪಂ ನೈಯಾಯಿಕಂ ವೃತ್ರವಿ
ದ್ವಿಡಮಾತ್ಯಂ ಸಲೆ ಶೂನ್ಯವಾದಿ ಶಬರೋಕ್ತ್ಯಾಸಕ್ತಮೀಮಾಂಸಕಂ
ನಡೆವಂ ಕಾಪಿಳವೃತ್ತಿಯಂ ಬಿಡದೆ ಸಾಂಖ್ಯಂ ನೋೞ್ಪೊಡೆಂದೆಲ್ಲದೊ
ಳ್ಪಡರ್ವನ್ನಂ ಶ್ರುತಕೀರ್ತಿದೇವನೊಳ್ ನಿಂದಳ್ ವಾಣಿಯೇಂ ಜಾಣೆಯೋ || ೨೫

ಚ || ಅತಿಮೃದುಪುಷ್ಪಚಾಪದಳಿನೀಗುಣಟಂಕೃತಿರಾವಮಾಗಮಾ
ಮೃತಪರಿಪೂರ್ಣಕರ್ಣಯುಗನಂ ಸಲೆ ಕೇಳಿಸದಾತ್ತಸಪ್ತಸ
ಪ್ತತಿಪವಿವರ್ಮನಂ ನಡವು ಪುಷ್ಪಶರೋತ್ಕರಮೆಂದು ಮನ್ಮಥಂ
ಮತಿಗಿಡುವಂ ಗೆಲಲ್ ಪಡೆಯದಾ ನಯಸೇನಮುಮುಕ್ಷಮುಖ್ಯನಂ || ೨೬

ಉ || ಶಾಂತರಸಾತ್ಮನಾರ್ದಹೃದಯಂ ಸುದಿಗಂಬರವರ್ತನಂ ಗತ
ಭ್ರಾಂತಿಯಬಂಧಕಂ ಸತತಮೋಕ್ಷಪದೇಚ್ಛು ಮಹಾತಪಸ್ವಿ ಮ
ತ್ತಂತೆ ವಿತೃಷ್ಣನೆಂಬಸಮಶೀಲತೆಯಂ ತಳೆದಿರ್ದುಮೇನೊ ಸೈ
ದ್ಧಾಂತಿಕಚಕ್ರವರ್ತಿ ಮುನಿಚಂದ್ರಮುನೀಂದ್ರನೆ ವಂದ್ಯನುರ್ವಿಯೊಳ್ || ೨೭

ಕಂ || ದುರಿತಾಸಹಿಷ್ಣು ಸುತಪ
ಶ್ಚರಿಷ್ಣು ಭವ್ಯಪ್ರಮೋದವರ್ಧಿಷ್ಣು ರತೀ
ಶ್ವರಜಿಷ್ಣು ಗುಣಗಣಾಲಂ
ಕರಿಷ್ಣುವೆನೆ ನೆಗೞ್ದನುದಯಚಂದ್ರಮುನೀಂದ್ರಂ || ೨೮

ಸ್ರ || ದೇಶಂ ಧರ್ಮೋಪದೇಶಂ ಶ್ರುತಬಲಮೆ ಬಲಂ ಕೋಶಮುದ್ಬೋಧ ಕೋಶಂ
ಸೌಶೀಲ್ಯಂ ಸತ್ಸಹಾಯಂ ಸಚಿವನುಪಶಮಂ ಜೈನಮಾರ್ಗಂ ಸುದುರ್ಗಮ
ಭೂ ಶಸ್ತ್ರಾಗಾರಮಾದತ್ತೆನೆ ತನಗೆ ಜಗತ್ಸಿದ್ಧರಾದ್ಧಾಂತಚಕ್ರಾ
ಧೀಶಂ ಸಪ್ತಾಂಗಸಾಮ್ರಾಜ್ಯದಿನಿಳೆಗೆಸೆದಂ ವೀರನಂದಿವ್ರತೀಂದ್ರಂ || ೨೯

ಮಾದ್ಯದ್ವಾದ್ಯುತ್ಕರತ್ರಾಸಕಮಖಿಲಕಲಾಪ್ರೌಢಿ ದೂರೀಭವತ್ಸಾ
ವದ್ಯಂ ಚಾರಿತ್ರಮುರ್ವೀಪತಿತತಿವಿನುತಂ ಸತ್ತಪೋವೃತ್ತಿ ಚೇತ
ಸ್ಸದ್ಯಪ್ರೀತಿಪ್ರದಂ ಪಾವನತರನಿಜಸನ್ಮೂರ್ತಿಯೆಂಬನ್ನೆಗಂ ತ್ರೈ
ವಿದ್ಯೇಶಂ ಮಾಘಣಂದಿವ್ರತಿ ಪೆಸರ್ವಡೆದಂ ವರ್ಣ್ಯನೀಕಪ್ರವೇಕಂ || ೩೦

ಮ || ವಿ || ಕ್ಷಿತಿನಾಥವ್ರಜಪೂಜ್ಯಪಾದತೆ ನಿಜಾಚಾರಪ್ರತೀತಾಕಳಂ
ಕತೆ ವಿದ್ವನ್ನುತವೀರಸೇನತೆ ನಿಜಂ ತಾನೆಂದೊಡಿಂ ಶಾಬ್ದನೇ
ತೃತೆ ಷಟ್ತರ್ಕವಿತರ್ಕಭೇತ್ತೈತೆಯಹಾರಾಧ್ವಾಂತತತ್ತ್ವಪ್ರಮಾ
ತೃತೆಯೇಂ ಚೋದ್ಯಮೆ ವರ್ಧಮಾನಮುನಿಗೊಳ್ ವಿದ್ಯಾತ್ರಯಾಧೀಶನೊಳ್ || ೩೧

ಕಂ || ಅತಿಸೂಕ್ಷ್ಮ ತತ್ತ್ವಮಂ ಕಾ
ಣ್ಬತನುವನೊಟ್ಟಯಿಸಿ ಕಟ್ಟುವೀದರ್ಶನಶು
ದ್ಧತೆಗಂ ದೃಢಗುಣಸುಸಮ
ರ್ಥತೆಗಂ ಸಲೆ ದೇವಚಂದ್ರಯತಿಪತಿ ನೋಂತಂ || ೩೨

ಶಾ || ಆತ್ರೇಯದ್ಯುತಿಯಂ ಪಳಂಚಲೆದು ಕುಂದಚ್ಛಾಯೆಯಂ ಮಿಕ್ಕು ನ
ಕ್ಷತ್ರಜ್ಯೋತಿಯನೈದೆ ತೂಳ್ದಿ ಹಿಮವಚ್ಛೈಳಾಂಶುವಂ ಮೀಱಿದಿ
ಗ್ಧಾತ್ರೀವ್ಯೋಮವಿಭಾಗಗಾಮಿಯೆನಿಸಿತ್ತುಚ್ಛೃಂಖಳಂ ದಾಮನಂ
ದಿತ್ರೈವಿದ್ಯಮುನೀಂದ್ರನಿರ್ಮಳಯಶಶ್ಶ್ರೀಶುಭತಾವಿಭ್ರಮಂ || ೩೩

ಕಂ || ವಿತತಗುಣಮಾರ್ಗಣಾಸ
ಕ್ತತೆಯಿಂದನವರತಮೋಕ್ಷಸಂಧಾನಮನ
ಸ್ಕತೆಯಿಂ ಧಾರ್ಮಿಕವೃತ್ತಿಯಿ
ನತಿಶಯಿಪಂ ನೇಮಿಚಂದ್ರಸೈದ್ಧಾಂತೀಶಂ || ೩೪

ರತಿವನಿತೆಗೆ ವಿಧವತೆಯಂ
ಶ್ರುತದೇವಿಗೆ ಚತುರವೃತ್ತಿಯಂ ಮಾೞ್ಪ ತಪ
ಶ್ಶ್ರುತಮೆರಡುಂ ನಿರುಪಮಮೀ
ಕ್ಷಿತಿಯೊಳ್ ಶ್ರುತಕೀರ್ತಿದೇವಭಟ್ಟಾರಕರಾ || ೩೫

ಗುರುಕುಲಮಂ ಬೆಳಗುವ ಭಾ
ಸುರದೀಪಂ ಚರಿತಮೆಂಬುದಂ ಪೇೞವೆ ಬಂ
ಧುರಪಾತ್ರಸ್ನೇಹಗುಣೋ
ತ್ಕರಮೆಂಬಿವು ಮಾಘನಂದಿಭಟ್ಟಾರಕರಾ || ೩೬

ಚಂ || ಅಮಲತರಪ್ರದೀಪಕಲಿಕಾಕೃತಿಯಿಂ ಸ್ವಪರಪ್ರಕಾಶನ
ಕ್ಷಮಮೆನಿಸಿರ್ದ ತಮ್ಮ ಮತಿಯಿಂ ಜಿನರಾಜಚರಿತ್ರಮಂ ಪವಿ
ತ್ರಮನೊಲವಿಂದೆ ಪೇೞ್ದುಭಯಲೋಕಶುಭಾಸ್ಪದರಾದ ಪಂಡಿತೋ
ತ್ತಮರ ಗುಣಂ ಗುಣಾಕೃತಿಯಿನಿರ್ಕೆ ಮದೀಯಮನೋಮೃಣಾಳದೊಳ್ || ೩೭

ಅತಿಮಧುರೋಕ್ತಿಯುಕ್ತನಮಲಂ ವಿದಿತಾಖಿಲಮಾರ್ಗನಪ್ಪ ವಿ
ಶ್ರುತಕವಿರಾಜಹಂಸನಱಿವಂತೆವೊಲೇನಱಿಯಲ್ಕೆ ಯೋಗ್ಯನೇ
ಚತುರಕವಿಪ್ರತಾನರಚಿತಾಧ್ವಕೃತಿಪ್ರಕರೈಕಪಾತ್ರಸಂ
ಸ್ಥಿತಗುಣದೋಷದುಗ್ಧಜಳಭೇದನಮಂ ಕವಿನಾಮಧಾರಕಂ || ೩೮

ಕಂ || ಸುಳಲಿತಕವಿಕೃತಿಗಮಳಿನ
ನೆಳಸುವವೋಲ್ ಮಲಿನನೆಳಸನತಿವಿಶದಹಿಮೋ
ಪಳಮೊಸರ್ವವೊಲಿಂದುಕರಾ
ವಳಿಗೆತೃಣಗ್ರಾಹಿನೀಳಮಣಿಯೊಸರ್ದಪುದೇ || ೩೯

ಇದು ಜತುಮುದ್ರಾಮುದ್ರಿತ
ಮಿದು ನಿಬಿಡಸ್ಯೂತಮಿದು ಮಹೌಗ್ರಹಧೃತಮಿಂ
ತಿದು ಲೋಹಪಿನದ್ದಮೆನಿ
ಪ್ಪುದು ಪರಕೃತಿನುತಿಯೊಳಖಿಳಖಳಜನವಕ್ತ್ರಂ || ೪೦

ಪೊಗೞ್ವ ಬಗೆಯುಳ್ಳೊಡಂ ನಾ
ಲಗೆ ಪೊಡರದು ಖಳರ್ಗೆ ಮದವಿಶೇಷದಿನುಸಿರಲ್
ಬಗೆವೊಡಮಕಾಲದೆಸಕದಿ
ನಗಲದವೊಲ್ ಪರಭೃತಕ್ಕೆ ಮೂಕೀಭಾವಂ || ೪೧

ಪರಿಕಿಪೊಡವಿಚಾರಿ ಸಿತೇ
ತರಗತಿಯಾದಂ ಪ್ರಭಂಜನಪ್ರಿಯನತಿನಿ
ಷ್ಠುರಜಿಹ್ವನುಷರ್ಬುಧನಂ
ತಿರೆ ದುರ್ಬುಧನಾರೊಳೊಂದಿ ಪಡೆಯಂ ನೋವಂ || ೪೨

ಕುಕವಿಯನಲೆದಂಜಿಪ ಜಾಣ್
ಸುಕವಿಯೊಳೇನುಂಟೆ ದುರ್ಜನಾಳಿಗೆ ಶಕುಳ
ಪ್ರಕರಮನೆರ್ದೆಗಿಡಪುಗ್ರತೆ
ಬಕನಿಕರಕ್ಕುಂಟೆ ತಿಮಿತಿಮಿಂಗಿಲಗಿಲದೊಳ್ || ೪೩

ಕಂ || ಖರಶಾಣಕಷಣದಿಂ ಮಣಿ
ಗುರುತೇಜೋವೃತ್ತಿ ನೆಗೞ್ವವೋಲಕ್ಕುಂ ನಿ
ಷ್ಠುರವಾಕ್ಟಾಷಾಣಪರಿ
ಸ್ಫುರಿತಂ ಕೃತಿರತ್ನದೊಳ್ ಸಮುಜ್ಜ್ವಲಭಾವಂ || ೪೪

ಮ || ವಿ || ಪರಿಪೀಡಾಮುಖದುಷ್ಟದುರ್ಜನನಿಕಾಯಾತಂಕದಿಂ ಸದ್ಗುಣಾ
ಕರಮಂ ಸದ್ರಸಭಾವಮಂ ಸಮೆವುದಂ ಮಾಣಲ್ಕದೇಕಾಯ್ತೊ ಬಂ
ಧುರಮಂ ಕಾವ್ಯಬಂಧಮಂ ಬಗೆಯೆ ಯೂಕಾಭೀತಿಯಿಂದಂಬರಂ
ಪರಿಹರ್ತವ್ಯಮೆ ಮೇಣಜೀರ್ಣಭಯದಿಂ ಪ್ರಾಜ್ಯಾಜ್ಯಮೇಂ ತ್ಯಾಜ್ಯಮೇ || ೪೫

ಕಂ || ಪರುಸದೊರೆಗಳ್ ಸುವರ್ಣ
ಕ್ಕೊರೆಪಕ್ಕೆಡೆಯಾಗಿ ತೋರ್ಪವೋಲ್ ಕವಿಗಂ ಬಂ
ಧುರಕಾವ್ಯರಚನೆ ತದ್ಗುಣ
ಪರೀಕ್ಷೆ ನಿರಪೇಕ್ಷಮೆನಿಸೆ ನೆಱೆದಿರವೇಡಾ || ೪೬

ಅತಿಶಯಪದಾರ್ಥನಿಕರ
ಪ್ರತೀತಿಯಂ ಪಡೆವ ಪಾದವಿನ್ಯಾಸಂ ಭೂ
ನುತಮಾಗದಲ್ತೆ ನಿರ್ದೋ
ಷತೆಯಿಂದಲ್ಲದೆ ಸಮಂತು ಕವಿಗಂ ರವಿಗಂ || ೪೭

ಉ || ಜೀಯೆನೆ ಬಲ್ಲವರ್ ನೆಱೆಯೆ ಸತ್ಕೃತಿವೇೞದೆ ಪೇೞ್ ಘೃಣಾಕ್ಷರ
ಪ್ರಾಯದೆ ಶಬ್ದಮೊಂದೆರಡು ಮತ್ತೆ ವಿಚಾರಿಸಿ ನೋಡೆ ಕಾಕತಾ
ಳೀಯದೆ ವಾಚ್ಯಮೊಂದೆರಡು ಕೂಡೆ ನಿಘರ್ಷಿಪೊಡಂಧಲಾವುಕ
ನ್ಯಾಯದೆ ಭಾವಮೊಂದೆರಡು ಲೇಸೆನೆ ಪೇೞ್ದುಱದಿರ್ಪುದೊಪ್ಪಮೇ || ೪೮

ಚಂ || ಇದು ಪಿರಿದುಂ ಬುಧಾವಳಿಗೆ ಕರ್ಣರಸಾಯನಮಾತ್ತಚಿತ್ತಸ
ಮ್ಮದಜನಕಂ ಮುದಶ್ರುಜಲಕರ್ತೃ ಲಸತ್ಪುಳಕಪ್ರಭೇದನ
ಪ್ರದಗುರು ಮಸ್ತಕಪ್ರಚುರಕಂಪನಶಿಕ್ಷಕನೆಂಬಿನಂ ಪ್ರಯ
ತ್ನದೆ ಕೃತಿವೇೞ್ವುದಲ್ಲದೊಡೆ ತತ್ಕೃತಿ ಧಿಕ್ಕೃತಿಯಿಂ ನಿಮಿರ್ಚದೇ || ೪೯

ಕವಿಕುಳಸೇವ್ಯಮಾನಕವಿತಾಳಹಂಸೆಗೆ ಕೇಳಿಲೀಲೆ ಸಂ
ಭವಿಪೊಡನಾಮಲಂ ಜಿನಕಥಾರಸವಶಾನಸದಲ್ಲಿ ಕೂಡೆ ಸಂ
ಭವಿಕುಮದಲ್ಲದಂತೆ ದೊರೆಕೊಳ್ಗುಮೆ ದುಷ್ಕೃತಸೈರಿಭಪ್ರಜಾ
ವಿವರಮೆನಿಪ್ಪ ರಾಜವಿಟಚೋರಕಥೋಲ್ಬಣಪಲ್ವಲಂಗಳೊಳ್ || ೫೦

ಮ || ವಿ || ಕಿವಿಯಂ ಜಕ್ಕುಲಿಪಂತೆ ನುಣ್ಪಡರ್ದ ಶಬ್ದಂ ಶಬ್ದಸಂದರ್ಭದೊಳ್
ಸವಿಯಂ ಮುಂದಿಡುವರ್ಥಮರ್ಥದೊಳೊಡಂಬಟ್ಟೊಳ್ಪನೋರಂತೆ ಬೀ
ಱುವ ಭಾವಂ ಸಲೆ ಭಾವದಿಂದೊದವಿ ಚಿತ್ತಂ ಕೂಡೆ ತೇಂಕಾಡೆ ಪೊ
ಣ್ಮುವ ನಾನಾರಸಮಿರ್ಪ ವಸ್ತುಕೃತಿಯಂ ಪೇೞ್ದಗ್ಗಳಂ ಮೆಚ್ಚಿಪಂ || ೫೧

ಸುರರಾಜಾರ್ಚಿತನಿಂಗಳೇಶ್ವರಪುರಶ್ರೀತೀರ್ಥಚಂದ್ರಪ್ರಭಂ
ಪರಮೇಶಂ ಶ್ರುತಕೀರ್ತಿದೇವಮುನಿಪಂ ತ್ರೈವಿದ್ಯಚಕ್ರಾಧಿಪಂ
ಗುರು ಭವ್ಯರ್ ಪ್ರಿಯಬಾಂಧವರ್ ತನಗೆನಿಪ್ಪನ್ಯೂನಮಂ ಪುಣ್ಯದೇ
ೞ್ತರಮಂ ತಾಳ್ದಿದನಗ್ಗಳಂ ಜಿನಮತಶ್ರೀಕೋಶವೇಶ್ಮಾರ್ಗಳಂ || ೫೨

ಕಂ || ಗುಣಿಮೂಲಸಂಘದೇಶೀ
ಗಣ ಪುಸ್ತಕಗಚ್ಛ ಕೊಂಡಕುಂದಾನ್ವಯದೊಳ್
ಗಣನೆವಡೆದೆಸೆವ ವಿನಯಾ
ಗ್ರಣಿ ವಿಮಲತರಸ್ವಭಾವನಗ್ಗಳದೇವಂ || ೫೩

ಶಾಂತೀಶನಂದನಂಗುಪ
ಶಾಂತತೆ ವಾಚಾಂಬಿಕಾತನೂಜಂಗೆ ಜಗ
ತ್ಕಾಂತವಚಶ್ಚರತೆಯೆಂ
ದಿಂತಿವು ಭಾವಿಸುವೊಡಗ್ಗಳಂಗೆ ನಿಸರ್ಗಂ || ೫೪

ಉಭಯಕವಿತಾವಿಶಾರದ
ನುಭಯಭವಾತ್ಯಕ್ತಹೇತುಚರಿತಂ ನೋೞ್ಪಂ
ದುಭಯಕುಲಶುದ್ಧತಾಯುತ
ನುಭಯನಯಾಯತ್ತಚಿತ್ತನಗ್ಗಳದೇವಂ || ೫೫

ನಾರೀನಯನೋತ್ಪಲಹೃ
ನ್ನೀರೇಜಮನೊಡನಲರ್ಚಿ ಶಶಿಸೂರ್ಯಸಮಾ
ಹಾರದಿನಾದವೊಲತುಳಾ
ಕಾರಂ ಸೌಭಾಗ್ಯಸಾರಮಾಯ್ತಗ್ಗಳನಾ || ೫೬

ಗಳಪರ್ ಪವಣ ಱಿಯದೆ ಬೆಸ
ಗೊಳೆ ಸೆಣಸಿಂ ಲೋಕದೊಳಗೆ ವರ್ತಿಪ ವಿಲಸ
ತ್ಕಳಗಳೆನಿತನಿತಱೊಳಮ
ಗ್ಗಳಗಣ್ಣಂ ತೋರ್ಪನಗ್ಗಳಂ ನೃಪಸಭೆಯೊಳ್ || ೫೭

ಪ್ರಕಟತರಂ ಶಬ್ದಂ ಶಾ
ಬ್ದಿಕಸಮ್ಮತಮರ್ಥಮರ್ಥದೃಷ್ಟಿ ಮನಃಕೌ
ತುಕಜನಕಂ ಭಾವಂ ಭಾ
ವುಕಭಾವ್ಯಂ ಕಾವ್ಯತತಿಯೊಳಗ್ಗಳ ನಿನ್ನಾ || ೫೮

ಉ || ತಿಂಗಳ ತಣ್ಣನಪ್ಪ ಕದಿರ್ದೊಂಗಲೊಳಭ್ಯಸಿಸಿತ್ತೊ ಕಾಮಬಾ
ಣಂಗಳೊಳಾದಮೋದಿದುದೊ ಬಂದ ಬಸಂತದ ಕಮ್ಮನಪ್ಪೆಲರ್
ತಾಂ ಗುರುವಾಗೆ ಕಲ್ತುದೊ ವಿಳಾಸವತೀನಯನತ್ರಿಭಾಗದೊಳ್
ಸಂಗಳಿಸಿತ್ತೊ ಮೋಹನಮನಗ್ಗಳ ನಿನ್ನಯ ವಾಕ್ಪ್ರಗುಂಭನಂ || ೫೯

ಕಂ || ಎಂದು ವಿನೇಯವಿಪಶ್ಚಿ
ದ್ವೃಂದಂ ಕೇವಣಿಸುವಾಕ್ಸುವರ್ಣದೊಳೊಲವಿಂ
ಸಂದ ಜಿನಚರಿತರತ್ನಮ
ನೆಂದೊಡೆ ತದನುಜ್ಞೆಯಿಂದಮಾಂ ಬಗೆದಂದೆಂ || ೬೦

ಒಗೆದಲ್ಪಮತಿಯ ಬಲದಿಂ
ದಗಣಿತಜಿನನಾಥಸತ್ಕಥಾಕಥನಕ್ಕು
ಜ್ಜಗಿಸಿದೆನಾಂ ತವೆ ಪೀರಲ್
ಬಗೆದಂತೆ ಮೃಣಾಳನಾಳದಿಂ ವಾರಿಧಿಯಂ || ೬೧

ಕಿಱಿದೇಂ ಪಿರಿದೇಂ ಮತಿ ಮತಿ
ಯಱಿಯಮೆ ಪಶುಗಂ ಫಣೀಶ್ವರಂಗಂ ಜಿನನಂ
ಕುಱಿತುಸಿರೆ ಸೈಪು ಸರಿಯ
ಲ್ತೆಱಗಿದೊಡದಱಿಂದೆ ಪೇೞದಂ ಮರುಳಲ್ತೇ | ೬೨

ಕವಿತಾಭಿಮಾನದಿಂ ಮೇ
ಣವಿರಳವೇಳಾಪಸರಣಲೀಲೆಯಿನಲ್ತೀ
ಭವಹರಚರಿತರ ಪುಣ್ಯಾ
ಸ್ರವಕಾರಣಮೆಂದೆ ಪೇೞಲುದ್ಯತನಾದೆಂ || ೬೩

ಮ || ಸ || ಗಣಭೃದ್ವಿಸ್ಮಾಪಕಂ ತೀರ್ಥಕರಪರಮದೇವಪ್ರಭಾವಂ ದಲೆಂದೀ
ಗಣಿದಂ ಮಚ್ಚಿತ್ತದೊಳ್ ತಳ್ತಿರೆಯಿರೆಯುಮದಂ ಮೀಱಿ ಭಕ್ತಿಪ್ರಿಯಾ ಪ್ರೇ
ರಣದಿಂ ತದ್ವರ್ಣನೋಪಕ್ರಮದೊಳೆಳಸಿದೆಂ ಭ್ರಾಂತನೆಂ ನೋೞ್ಪೊಡೆಂತುಮ
ಪ್ರಣಯಿನ್ಯಾಸಕ್ತಿಯುಕ್ತಂ ಗಗನಗಹನಸದ್ಯುಕ್ತಿಯವ್ಯಕ್ತಮಲ್ತೇ | ೬೪

ಉ || ಆರಯೆ ಸೂರ್ಯನಂತೆ ನಭಮಂ ಬೆಳಪೊಂದಳವಿ‌ಲ್ಲದಿರ್ದೊಡಂ
ತಾರಗೆಯಲ್ಲಿ ಸಂಭವಿಸಿ ತನ್ನನೆ ತಾಂ ಬೆಳಪಂದದಿಂದೆ ಮ
ದ್ಭಾರತಿಗಾದ್ಯಸೂರಿವಚದಂತೆ ಜಿನಸ್ತುತಿದಕ್ಷವೃತ್ತಿ ಕೈ
ಸಾರದೊಡಂ ಪವಿತ್ರಮಿದೆನಿಪ್ಪುದು ತನ್ನನೆ ತತ್ಪ್ರಸಂಗದಿಂ || ೬೫

ಮ || ವಿ || ನಯದಿಂ ಪಂಪನೊಱಲ್ದು ನಿರ್ಮಿಸಿದ ಪೊನ್ನಂ ಪ್ರೀತಿಯಿಂ ಪೇೞ್ದ ಭ
ಕ್ತಿಯಿನಾ ರತ್ನಕವೀಶ್ವರಂ ಸಮೆದ ತತ್ಕಾವ್ಯತ್ರಯಕ್ಕಂ ಜಗ
ತ್ತ್ರಯಮುಂ ಮುಂ ಬೆಲೆಯಾಗಿ ಪೋಯ್ತೆನೆ ಬೞಿಕ್ಕಾಂ ಪೇೞ್ದ ಚಂದ್ರಪ್ರ
ಭೋದಯವಿಸ್ತಾರಿಯೆನಿಪ್ಪ ಕಾವ್ಯಮಿದಮೂಲ್ಯತ್ವಕ್ಕೆ ಪಕ್ಕಾಗದೇ || ೬೬

ವ || ಆದೊಡಂ –

ಕಂ || ಆ ಚಂದ್ರಪ್ರಭಜಿನನ ಮ
ಹಾಚರಿತಪಯೋಧಿಪಾರಯಾನಕ್ಕಾನಾ
ಲೋಚಿಸಿದೆಂ ಪ್ರಾಕ್ತನಪರ
ಮಾಚಾರ್ಯಶ್ರೌತಸೇತುಬಲದಿಂದೀಗಳ್ || ೬೭

ಉ || ಸ್ಕಂಧರವೋಲ್ ಜಿನೇಶ್ವರಮುಖೋದ್ಗತವಾಗ್ವಧುಗೊಪ್ಪುವಾ ಶ್ರುತ
ಸ್ಕಂಧಮನೊಂದಿ ತೋಱುವನುಯೋಗಚತುಷ್ಟಯಮೆಂಬ ಕೈಗಳೊಳ್
ಬಂಧುರಮಪ್ಪ ಪೂರ್ವದನುಯೋಗಕರಕ್ಕುಶಕ್ತಿಯಂತೆ ಸಂ
ಬಂಧಿಸಿ ತೋರ್ಪುದೀಕಥೆ ವಿನೇಯಜನೋದ್ಧರಣೈಕಕಾರಣಂ || ೬೮

ವ || ಅದೆಂತೆಂದೊಡೆ –

ಕಂ || ಮಿಗೆವಂದ ಪೆರ್ಮೆಗಂ ಸ್ಥಿರ
ತೆಗಮಾಶ್ರಯಮಾದ ಗಗನಲಕ್ಷ್ಮಿಯ ಮಧ್ಯಾ
ಧಿಗತವಳಿತ್ರಯಮೆನೆ ಸಲೆ
ಸೊಗಯಿಪುದು ಜಗತ್ತ್ರಯಂ ಮರುತ್ತ್ರಯವಿಧೃತಂ ೬೯

ಅದಱೊಳ್ ಮಧ್ಯಮಮೆನಿಸಿಯು
ಮುದಾತ್ತ ನಿಜಶೋಭೆಯಿಂದಮುತ್ತಮಮಾಯ್ತೆಂ
ಬಂದನೆನಿಸಿ ನಾಡೆ ಸೊಗಯಿಸು
ವುದು ತಿರ್ಯಗ್ಲೋಕಮೇಕರಜ್ಜುವಿಶಾಲಂ || ೭೦

ವ || ಅಂತಸಂಖ್ಯಾತದ್ವೀಪಸಮುದ್ರಭದ್ರತಾಮುದ್ರಿತಮಪ್ಪ ಮಧ್ಯಮಲೋಕದೊಳ್ –

ಮ || ವಿ || ಅಣಕಂ ತುಚ್ಛತರಂಗೆ ಮತ್ತೆ ತನಗೀಮುಖ್ಯಾಖ್ಯೆ ತನ್ನಿಂ ಚತು
ರ್ಗುಣವಿಸ್ತಾರವಿಲಾಸಶ್ರುತನೆ ನಾನಿರ್ದಂತಿರಂದುದ್ಗತೋ
ಲ್ಬಣರೋಷಂ ಪರಿಯಿಟ್ಟು ಮುತ್ತಿದವೊಲಿರ್ಕುಂ ಧಾತಕೀಷಂಡಮೀ
ಕ್ಷಣಭದ್ರಂ ಸಸಮುದ್ರಮಂ ಬಳಸಿ ಜಂಬೂದ್ವೀಪವಿನ್ಯಾಸಮಂ || ೭೧

ಧೃತಪೂರ್ವಾಪರಮೇರುಯುಗ್ಮ ಕುಚಯುಗ್ಮಂ ರುಗ್ಮಿಭೂಭೃದ್ದ್ವಯಾ
ಯತನೇತ್ರದ್ವಯಮುದ್ಘಹೈಮ್ಯಕುಹರದ್ವಂದ್ವದ್ವಿಪದ್ವಂದ್ವಸಂ
ಚಿತಗಂಗಾದ್ವಯವಾಳ್ಪದ (?) ದ್ವಯಮದೇಂ ಮಾಡಿತ್ತೊ ತದ್ದ್ವೀಪಮಾ
ಧೃತವಾಳೋದಕವಾರಿರಾಶಿವಸನಂ ಸ್ತ್ರೀವಿಭ್ರಮಭ್ರಾಂತಿಯಂ || ೭೨

ವ || ಅದಲ್ಲದೆಯುಂ –

ಚಂ || ಬಳಸುವ ಚಂದ್ರಭಾನುಭಗಣಪ್ರತಿಬಿಂಬಕದಂಬಮೆತ್ತಲುಂ
ವಿಳಿಖಿತಸೋಮಸೂರ್ಯನಿಬಿಡಾಕ್ಷರಮಾಳಿಕೆಯಂದದಿಂ ಮನಂ
ಗೊಳಿಸೆ ಜಿನಪ್ರಶಸ್ತಿಯುತಭರ್ಮಚತುರ್ಮುಖಶಾಸನಂಬೊಲು
ಜ್ಜಳಿಪುದು ನಂದನೋಪಚಿತಕಂದರಮಲ್ಲಿಯ ಪೂರ್ವಮಂದರಂ || ೭೩

ವ || ಆನಗೇಂದ್ರದೈಂದ್ರದಿಶಾಭಾಗದೊಳ್ ನಿಷಧನಿಳಗಯುಗಾಂತರಪ್ರದೇಶವಿಳಾಸಮಂ ಭದ್ರತಾಳೋದಕ ಶಾಳತಾಳೋದಕವನಧಿಪ್ರಾಂತಪರ್ಯಂತಾಯತಮುಮಾಗಿ –

ಮ || ಸ್ರ || ಅತಿದೂರಂ ಕಾಲಕಲ್ಪೋಚಿತವಿಕೃತಿ ಖಪುಷ್ಪೋಪಮಂ ಜೈನಧರ್ಮ
ಚ್ಯುತಿ ನಿತ್ಯಂ ಕ್ಷತ್ರಸಾರಸ್ಥಿತಿಯವಿಚಳಿತಂ ಪೂರ್ವಕೋಟ್ಯಾಯತಾಯು
ರ್ಮಿತಿ ವೃತ್ತಂ ಷಡ್ವಿಧೇತಿಪ್ರತತಿನಿಯತಮೈನೂಱು ಬಿಲ್ ಮರ್ತ್ಯಮೂರ್ತ್ಯು
ನ್ನತಿಯೆಂದುಂ ತನ್ನೊಳೆಂಬೀಸ್ತುತಿವಡೆದುದು ಸೌಖ್ಯಾವಗಾಹಂ ವಿದೇಹಂ || ೭೪

ಕಂ || ಜಿನನಾಥರುಮೆಂದುಂ ಚ
ಕ್ರನಾಥರುಂ ಕುಂದರೆನೆ ತದುರ್ವರೆಯವೊಲಾ
ವ ನೆಲಂ ನೋಂತುದೊ ನಿರುಪಮ
ಮೆನಿಪವು ಪವಿತ್ರತೆಗಮನಿತೆ ನಕ್ಷತ್ರತೆಗಂ || ೭೫