ಕವಿವಿಚಾರ

 

ವರ್ಧಮಾನ ಪುರಾಣಂ, ಶ್ರೀಪದಾಶೀತಿ ಎನ್ನುವ ಕೃತಿಗಳ ಕರ್ತೃ ಆಚಣ್ಣ. ಕ್ರಿ.ಶ. ೧೧೮೧ರಲ್ಲಿ ರಚಿತವಾದ ಷಿಕಾರಿಪುರದ ೧೧೯, ೧೨೩ನೆಯ ಶಾಸನಗಳನ್ನು, ಕ್ರಿ.ಶ. ೧೨೨೦ರಲ್ಲಿ ರಚಿತವಾದ ಅರಸಿಕೆರೆಯ ೭೭ನೆಯ ಶಾಸನವನ್ನು ಈತ ರಚಿಸಿರಬಹುದಾದ ಸಾಧ್ಯತೆಗಳಿವೆ.

ಆಚಣ್ಣನ ತಂದೆ ಕಲಚುರ್ಯ ದೊರೆ ಅಹವಮಲ್ಲನ ಮಹಾಪ್ರಧಾನನಾದ ಬನವಸೆ ನಾಡ ಅಧಿಪತಿಯಾದ ಭಾರದ್ವಾಜ ಗೋತ್ರದ ಕೇಶಿರಾಜ. ಈತನಿಗೆ ಕೇಶವರಾಜನೆಂದೂ ಹೆಸರುಂಟು. ಆಚಣ್ಣನ ತಾಯಿ ಮಲ್ಲಾಂಬಿಕೆ. ವಾಣೀವಲ್ಲಭನೆಂಬ ಬಿರುದು ಈತನಿಗಿದ್ದಿತು. ಪುರಿಕರನಗರಾಧೀಶನೂ ಅರ್ಹತ್ಸೇವಾಸಕ್ತಾಶಯನೂ ಆದ ಶಂಖ ಈತನ ತಮ್ಮ. ವಸುಧೈಕ ಬಾಂಧವನೆನ್ನುವ ಪ್ರಶಂಸೆಗೆ ಪಾತ್ರನಾದ ದಂಡನಾಥ ರೇಚರಸ ಆಚಣ್ಣನ ಆಶ್ರಯದಾತ. ಕ್ರಿ.೧೨೨೦ರ ಅರಸಿಕೆರೆ ೬೯ನೆಯ ಶಾಸನ. ಕ್ರಿ.ಶ. ೧೧೮೧ರ ಷಿಕಾರಿಪುರದ ೧೧೯ನೆಯ ಶಾಸನ ಮತ್ತು ೧೨೩ನೆಯ ಶಾಸನಗಳಲ್ಲಿ ಈತನ ಬಗ್ಗೆ ವಿವರಗಳಿವೆ. ಕಲಚುರ್ಯರ ಪತನವಾದ ಮೇಲೆ ಕ್ರಿ.ಶ. ೧೧೭೩-೧೨೨೦ರಲ್ಲಿ ಅಳಿದ ವೀರಬಲ್ಲಾಳನಲ್ಲಿ ರೇಚರಸನು ಆಶ್ರಯ ಪಡೆದಂತೆ ಕಾಣುತ್ತದೆ. ಕ್ರಿ.ಶ. ೧೨೨೦ರಲ್ಲಿ ರೇಚರಸನು ಅರಸಿಕೆರೆಯ ಸಹಸ್ರಕೂಟ ಜಿನಾಲಯವನ್ನು ಕಟ್ಟಿಸಿದನು. ಶ್ರವಣಬೆಳಗೊಳ ಸಮೀಪದ ಜಿನನಾಥಪುರದಲ್ಲಿ ಶಾಂತಿನಾಥ ತೀರ್ಥಂಕರ ವಿಗ್ರಹವನ್ನು ಪ್ರತಿಷ್ಠಾಪಿಸಿದನೆಂದು ತಿಳಿದುಬರುತ್ತದೆ.

ಆಚಣ್ಣನ ತಂದೆ ಕೇಶಿರಾಜನಿಗೆ ಶ್ರೀಮದಾಹವಮಲ್ಲ ಮಹೀಪಾಲಕನು “ದಕ್ಷಿಣ ದಿಗ್ಭಾಗದ ಭಂಡಾರವಾಡದೇಶಮಂ ಬಪ್ಪನೆನೆ ದುಷ್ಟನಿಗ್ರಹ ಶಿಷ್ಟ ಪ್ರತಿಪಾಳನಂ ಮಾಳ್ಪುದೆಂದು ಬನವಸೆ ನಾಡಂ ಕುಡಲ್” ಮಹಾಪ್ರಸಾದವೆಂದು ಪಡೆದನೆನ್ನುವ ವಿಚಾರ ಷಿಕಾರಿಪುರದ ೧೧೯ನೆಯ ಶಾಸನದಿಂದ ತಿಳಿದುಬರುತ್ತದೆ. ರೇಚರಸನ ಅಪೇಕ್ಷೆಯಂತೆ ಕೇಶಿಯಣ್ಣನು ವರ್ಧಮಾನ ಪುರಾಣವನ್ನು ತಿಕ್ಕಣ, ಚಾವಣರೊಡನೆ ಬರೆಯಲು ಉಪಕ್ರಮಿಸಿದನೆಂದೂ ಅದು ದೈವನಿಯೋಗದಿಂದ ನಿಂತು ಹೋಯಿತೆಂದೂ ಆ ಕಾವ್ಯವನ್ನು ಆಚಣ್ಣನು ಬರೆಯುವಂತೆ ಕೋರಿದರೆಂದೂ ತಿಳಿದುಬರುತ್ತದೆ. ಆಚಣ್ಣನು ವಿಭುದ ಚಾಮನೊಡನೆ ಸೇರಿ ವರ್ಧಮಾನ ಪುರಾಣವನ್ನು ಬರೆಯತೊಡಗಿ ಪೂರೈಸಿದನೆಂದೂ ತಿಳಿದುಬರುತ್ತದೆ. ಇದರಿಂದ ಕೇಶಿರಾಜನು ಕಾವ್ಯವನ್ನು ರಚಿಸುವಲ್ಲಿ ಶಕ್ತನಾಗಿದ್ದಾನೆಂದು ತಿಳಿದುಬರುತ್ತದೆ. ಪಾರ್ಶ್ವಪಂಡಿತನು ಪಾರ್ಶ್ವಪುರಾಣದಲ್ಲಿ-

ಅಂಹಮನಪಹರಿಸುವ ಗುಣ
ಸಂಹತಿಯಂ ತಳೆದ ಕೇಶಿಯಣ್ಣಂ ಬುಧಬೃಂ
ದಂ ಪೊಗೞಿ ಸುಕೃತಸಿಂಹಂ
ಸಿಂಹಾಪ್ರಾಯೋಪಗಮನಮಂ ವಿರಚಿಸಿದಂ || ೬೪ ||

ಎಂದು ಹೇಳಿರುವುದರಿಂದ ಕೇಶಿಯಣ್ಣನು ಸಿಂಹಪ್ರಾಯೋಪಗಮನ ಎನ್ನುವ ಕೃತಿಯನ್ನು ರಚಿಸಿರುವುದಾಗಿ ತಿಳಿದುಬರುತ್ತದೆ. ಇದು ಯಾವ ಭಾಷೆಯಲ್ಲಿ ರಚಿತವಾಗಿದೆ ತಿಳಿಯದು. ವಸ್ತು ವರ್ಧಮಾನ ಪುರಾಣವಾಗಿರಬಹುದು. ಈ ಕೇಶಿಯಣ್ಣ ಆಚಣ್ಣನ ತಂದೆಯಾಗಿರಬಹುದೆಂದು ಊಹಿಸಲು ಅವಕಾಶವಿದೆ.

ವರ್ಧಮಾನಪುರಾಣದ ಆಶ್ವಾಸಾಂತ್ಯ ಗದ್ಯಗಳಲ್ಲಿ ‘ಶ್ರೀನಂದಿಯೋಗೀಂದ್ರ’ನ ಪ್ರಸಾದದಿಂದ ಆಚಣ್ಣನು ಕಾವ್ಯ ರಚನೆ ಮಾಡಿದುದಾಗಿ ತಿಳಿದುಬರುತ್ತದೆ. ಪಾಶ್ವನಾರ್ಥ ಪುರಾಣದಲ್ಲಿ-

ನಿಯತಂ ಯೋಗೀಂದ್ರರೇಕೇಂದ್ರಿಯಮನೆನಸುಂ ಬಾಧಿಸಲ್ಕಾಗದೆಂಬು
ಕ್ರಿಯನೆಲ್ಲಾ ಶಿಷ್ಯವರ್ಗಕ್ಕನುಪಮ ದಯೆಯಿಂ ಶಿಕ್ಷಿಪರ್ ತಾಮೆ ಪಂಚೇಂ
ದ್ರಿಯಮಂ ನಿರ್ವಂದದಿಂ ನಿಗ್ರಹಿಸಿಯುಮತುಳಸ್ವಾಂತರಾಂತರ್ ಕರಂ ಶಾಂ
ತಿಯನಾ ಶ್ರೀನಂದಿಯೋಗೀಶ್ವರವರ ಚಿರತ್ರಂ ಧಾತ್ರೀವಿಚಿತ್ರಂ || ೪೧ ||

ಶ್ರೀನಂದಿಮುನೀಂದ್ರಂ
ದ್ಜ್ಞಾನತಪೋವಿಭವದಿಂದೆ ಭಟ್ಟಾರಕನೆಂ
ಬೀನಾಮಕ್ಕನುಗುಣಮೆನೆ
ನಾನಾನೃಪಪೂಜ್ಯನೆನಿಸಿ ಬೆಗೞ್ದಂ ಜಗದೊಳ್ || ೪೨ ||

ಎಂದು ಸ್ತುತಿಪಾತ್ರನಾಗಿರುವ ಶ್ರೀನಂದಿಮುನೀಂದ್ರನು ಆಚಣ್ಣನ ಗುರುವಾಗಿರುವ ಸಾಧ್ಯತೆಯಿದೆ. ಶ್ರೀ ನಂದಿಮುನೀಂದ್ರನು ಕ್ರಿ. ೧೧೮೯ರಲ್ಲಿದ್ದನೆಂದು ಮದ್ರಾಸ್ ಪ್ರಾಚ್ಯಕೋಶಾಲಯದ ಶಾಸನವೊಂದರ ಆಧಾರದಿಂದ ತಿಳಿದು ಬರುತ್ತದೆ ಎಂದು ಆರ್ ನರಸಿಂಹಾಚಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಆಚಣ್ಣನು ವರ್ಧಮಾನಪುರಾಣದ ರಚನಾಕಾಲವನ್ನು ಹೇಳಿಲ್ಲ. ಕವಿಚರಿತೆಕಾರರು ಆಚಣ್ಣನ ಕಾಲವನ್ನು ಕ್ರಿ.ಶ. ೧೧೯೫ ಇದ್ದಿರಬಹುದು ಎಂದಿದ್ದಾರೆ. ಎ. ವೆಂಕಟಸುಬ್ಬಯ್ಯನವರು ಕ್ರಿ.ಶ. ೧೨೦೬-೧೨೧೦ರಲ್ಲಿ ಬರೆದಿರ ಬಹುದೆಂದು ತಿಳಿಸಿದ್ದಾರೆ. ಎಂ. ಮರಿಯಪ್ಪಭಟ್ಟರು ಮತ್ತು ಗೋವಿಂದರಾಯರು ಕ್ರಿ.ಶ. ೧೧೯೦-೧೨೨೨ರ ಗಡುವನ್ನು ಗುರುತಿಸಿದ್ದಾರೆ. ಕೆ.ಜಿ. ಕುಂದಣಗಾರರು ಕ್ರಿ.ಶ. ೧೨೧೦ ಆಗುತ್ತದೆ ಎಂದಿದ್ದಾರೆ. ಆ.ನೇ. ಉಪಾಧ್ಯೆಯವರು ೧೧೯೦ರಲ್ಲಿ ಆಚಣ್ಣ ಇದ್ದನೆಂದರೆ, ತ.ಸು. ಶಾಮರಾಯರು ಈತನ ಕಾಲ ಸು. ೧೨೦೦ ಎಂದಿದ್ದಾರೆ. ಆರ್. ನರಸಿಂಹಾಚಾರ್ ಅವರ ಕಾಲ ಸೂಚನೆ ಕ್ರಿ.ಶ. ೧೧೯೫ರಲ್ಲಿ ಆಚಣ್ಣ ಇದ್ದ ಎನ್ನುವುದು ಸೂಕ್ತವಾಗಿದೆ.

ಶ್ರೀಪದಾಶೀತಿ ಎನ್ನುವ ಕೃತಿಯನ್ನು ಆಚಣ್ಣ ರಚಿಸಿದ್ದಾನೆ. ಆ.ನೇ. ಉಪಾಧ್ಯೆ ಅವರು “ತುಂಬ ಚಿಕ್ಕದೂ ಸರಳವೂ ಸ್ಪಷ್ಟವೂ ಆದ ಶೈಲಿಯನ್ನುಳ್ಳ ಪ್ರಸ್ತುತ ಕೃತಿಯೇ ಆಚಣ್ಣನ ಮೊದಲ ಕಾವ್ಯ ಪ್ರಯತ್ನ” ಎಂದಿದ್ದಾರೆ. ಶ್ರೀಪದಾಶೀತಿಯಲ್ಲಿ ೯೪ ಪದ್ಯಗಳಿವೆ ಎಂದಿದ್ದರೂ ಅಚ್ಚಾಗಿರುವ ‘ಶ್ರೀಪದಾಶೀತಿ’ಯಲ್ಲಿ ೯೨ ಪದ್ಯಗಳಿವೆ. ೯೧ನೆಯ ಪದ್ಯ ಮಹಾಸಗ್ಧರಾ ವೃತ್ತವಾಗಿದ್ದು ಉಳಿದ ೯೧ ಪದ್ಯಗಳು ಕಂದಪದ್ಯಗಳಾಗಿವೆ.

ಶ್ರೀಪದಾಶೀತಿಯಲ್ಲಿ ಅರ್ಹಂತ, ಸಿದ್ಧ, ಸಾಧು, ಉಪಾಧ್ಯಾಯ ಮತ್ತು ಆಚಾರ್ಯರನ್ನು ಸ್ತುತಿಸಿದ್ದಾನೆ. ಮೊದಲ ೧೬ ಪದ್ಯಗಳಲ್ಲಿ ಅಕ್ಷರಾತ್ಮಕ ಪಂಚಪದಗಳ ಸ್ವರೂಪ, ಲಕ್ಷಣ ಪಂಚಪರಮೇಷ್ಠಿಗಳ ಲಕ್ಷಣ ಹೇಳಲ್ಪಟ್ಟಿದೆ. ಇಲ್ಲಿಂದ ಮುಂದಕ್ಕೆ ಕೃತಿಯ ಅಂತ್ಯದವರೆಗೂ ಪಂಚಪರಮೇಷ್ಠಿಗಳ ಸ್ತವನ, ಕೈವಲ್ಯದ ಮಹತ್ತ್ವವನ್ನು ಬಣ್ಣಿಸಿದೆ. ಸಿದ್ಧರನ್ನು ಅಧಿಕವಾಗಿ ಶ್ರೀಪದಾಶೀತಿ ಕೈವಲ್ಯಮುಕುರ ಮಂಗಳಕಲಶ ಆಗಿದೆ.

ಶ್ರೀಪದಾಶೀತಿಯ

ಜಿನಸಮಯಸಮುದ್ಧರಣಂ
ಜಿನಮತಸಿದ್ಧಾಂತವಾರ್ಧಿವರ್ಧನ ಚಂದ್ರಂ
ಜಿನರಂತೆ ಭವ್ಯಸೇವ್ಯಂ
ಜಿನಮುನಿಯಾಚಣ್ಣನಮಳಗುಣಗಣನಿಳಯಂ || ೯೨ ||

ಎನ್ನುವ ಪದ್ಯದಿಂದ ಆಚಣ್ಣನು ಜಿನಮುನಿಯಾದ ಸಂಗತಿ ತಿಳಿಯುತ್ತದೆ.

ವರ್ಧಮಾನನ ಭವಾವಳಿಗಳು

ದಿಗಂಬರ ಸಂಪ್ರದಾಯದಲ್ಲಿ ವರ್ಧಮಾನ ತೀರ್ಥಂಕರನ ಜೀವಿತಕ್ಕೆ ಸಂಬಂಧಿಸಿದಂತೆ ೩೩ ಭವಾವಳಿಗಳನ್ನು ವಿವರಿಸಲಾಗಿದ್ದು ಅವು ಹೀಗಿದೆ-

ದೂರವರ್ತಿಭವ: ೧. ಪುರೂರವ-ಬೇಡರ ಜಾತಿಯವ, ೨. ಸೌಧರ್ಮ ಸ್ವರ್ಗಹದಲ್ಲಿ ದೇವ, ೩. ಭರತನ ಪುತ್ರ ಮರೀಚೆ, ೪. ಬ್ರಹ್ಮಸ್ವರ್ಗದಲ್ಲಿ ದೇವ, ೫. ಕಪಿಳಬ್ರಾಹ್ಮಣನ ಪುತ್ರ, ೬. ಸೌಧರ್ಮಸ್ವರ್ಗದಲ್ಲಿ ದೇವ, ೭. ಭಾರದ್ವಾಜಬ್ರಾಹ್ಮಣನ ಪುತ್ರ, ೮. ಸೌಧರ್ಮ ಸ್ವರ್ಗದಲ್ಲಿ ದೇವ, ೯. ಅಗ್ನಿಭೂತಿ ಬ್ರಾಹ್ಮಣನ ಪುತ್ರ, ೧೦. ಏಳುಸಾಗರೋಪಮವುಳ್ಳದೇವ, ಬ್ರಾಹ್ಮಣನ ಪುತ್ರ, ೧೪. ಮಾಹೇಂದ್ರ ಸ್ವರ್ಗದಲ್ಲಿ ದೇವ.

ಅನಂತರ ಅನೇಕಾನೇಕ ತ್ರಸ, ಸ್ಥಾವರಯೋಗಗಳಲ್ಲಿ ಅಸಂಖ್ಯಾತವರ್ಷಗಳವರೆಗೆ ಪರಿಭ್ರಮಣೆ.

ವರ್ತಮಾನದಿಂದ ಹಿಂದಿನ ಭವಾವಳಿ : ೧೮ ಶಾಂಡಿಲ್ಯ ಹೆಸರಿನ ಬ್ರಾಹ್ಮಣಪುತ್ರ, ೧೭. ಮಾಹೇಂದ್ರಸ್ವರ್ಗದಲ್ಲಿ ದೇವ ೧೬. ವಿಶ್ವನಂದಿ ಹೆಸರಿನ ದೇವ ೧೫. ಮಹಾಶುಕ್ರ ಸ್ವರ್ಗದಲ್ಲಿ ದೇವ ೧೪. ತ್ರಿಪಿಷ್ಪ-ನಾರಾಯಣ-ಅರ್ಧಚಕ್ರಿಭವ ೧೩. ಏಳನೇನಾರಕದ ನರಕಿ ೧೨. ಸಿಂಹ ೧೧. ಪ್ರಥಮಕಲ್ಪದಲ್ಲಿ ನಾರಕಿ ೧೦. ಸಿಂಹಕಾಲಲಬ್ಧಿ ದೊರೆಕೊಂಡ ಜನ್ಮ-ಚಾರಣಗಳಿಂದ ಧರ್ಮಬೋಧೆ ೯. ಪ್ರಥಮಕಲ್ಪದಲ್ಲಿ ಸಿಂಹಕೇತುದೇವ ೮. ಕನಕೋಜ್ವಲ (ಕನಕಧ್ವಜ) ವಿದ್ಯಾಧರ ೭. ಏಳನೇಸ್ವರ್ಗದಲ್ಲಿ ದೇವಾನಂದನೆಂಬ ದೇವ ೬. ಹರಿಷೇಣ ರಾಜಪುತ್ರ ೫. ಮಹಾಶುಕ್ಲ ಸ್ವರ್ಗದಲ್ಲಿ ಪ್ರೀತಿಂಕರದೇವ ೪. ಪ್ರಿಯಮಿತ್ರ ರಾಜಪುತ್ರ ಚಕ್ರವರ್ತಿ ಭವ ೩. ಸಹಸ್ರಾರಸ್ವರ್ಗದಲ್ಲಿ ಸೂರ್ಯಪ್ರಭದೇವ ೨. ನಂದನನೆಂಬ ರಾಜಪುತ್ರ ೧. ಅಚ್ಯುತ ಸ್ವರ್ಗದಲ್ಲಿ ಅಹಮಿಂದ್ರ.

ವರ್ತಮಾನದಲ್ಲಿ ೨೪ನೆಯ ತೀರ್ಥಂಕರ

ವರ್ಧಮಾನ ತೀರ್ಥಂಕರನನ್ನು ಕುರಿತು ಪ್ರಾಕೃತ, ಸಂಸ್ಕೃತ ಮತ್ತು ಅಪಭ್ರಂಶ ಭಾಷೆಗಳಲ್ಲಿ ಸಾಹಿತ್ಯ ರಚನೆಯಾಗಿದೆ. ಸಂಸ್ಕೃತ ಭಾಷೆಯಲ್ಲಿ ಜಿನಸೇನ ಮತ್ತು ಗುಣಭದ್ರರಿಂದ ರಚಿತವಾದ ಮಹಾಪುರಾಣ ದಿಗಂಬರ ಸಂಪ್ರದಾಯದ ಸಾಹಿತ್ಯಕಾರರಿಗೆ ಆಕರ. ಮಹಾಪುರಾಣ ಭಾಗವಾದ ಜಿನಸೇನಕೃತ ಪೂರ್ವಪುರಾಣದಲ್ಲಿ ಆದಿನಾಥತೀರ್ಥಂಕರನ ಚರಿತ್ರೆ ಇದೆ. ಗುಣಭದ್ರ (ಕ್ರಿ.ಶ.೮೨೦) ವಿರಚಿತ ಉತ್ತರಪುರಾಣದಲ್ಲಿ ಅಜಿತನಾಥತೀರ್ಥಂಕರನಿಂದ ಹಿಡಿದು ವರ್ಧಮಾನ ತೀರ್ಥಂಕರನವರೆಗೆ ೨೩ ತೀರ್ಥಂಕರರ ಚರಿತ್ರೆ ಇದೆ. ಜಿನಸೇನರು ಮಹಾಪುರಾಣವನ್ನು ಪುರಾಣವೂ ಹೌದು ಮಹಾಕಾವ್ಯವೂ ಹೌದು, ಇದೊಂದು ಪುರಾಣ ಮಹಾಕಾವ್ಯವೆಂದು ತಿಳಿಸಿದ್ದಾರೆ. ಉತ್ತರಪುರಾಣದ ೨೬ ರಿಂದ ೨೯ ಪರ್ವಗಳಲ್ಲಿ ೧೮೧೮ ಶ್ಲೋಕಗಳಲ್ಲಿ ಮಹಾವೀರ ಚರಿತ್ರೆ ವರ್ಣಿತವಾಗಿದೆ. ಉತ್ತರಪುರಾಣದ ವರ್ಧಮಾನ ಚರಿತೆಯನ್ನು ಅನುಸರಿಸಿ ಅಸಗಕವಿ (ಕ್ರಿ.ಶ. ೯೧೦) ಸಂಸ್ಕೃತಭಾಷೆಯಲ್ಲಿ ವರ್ಧಮಾನ ಪುರಾಣವನ್ನು ರಚಿಸಿದ್ದಾನೆ. ನಾಗವರ್ಮನು ಕನ್ನಡದ ವರ್ಧಮಾನ ಪುರಾಣವನ್ನು ಇಂದ್ರಭೂತಿ ವರ್ಣಿಸಿದ ಉತ್ತರಪುರಾಣ, ಅಸಗನ ವರ್ಧಮಾನಪುರಾಣ ಮತ್ತು ಹಲವಾರು ಪೂರ್ವಕವಿಗಳ ಸಾಹಿತ್ಯವನ್ನು ಆಧರಿಸಿರುವುದು ಕಂಡುಬರುತ್ತದೆ. ನಾಗವರ್ಮನ ಕೃತಿಯನ್ನು ಅವಲಂಬಿಸಿ ಆಚಣ್ಣ (ಕ್ರಿ.ಶ. ೧೨೦೦) ವರ್ಧಮಾನ ಪುರಾಣವನ್ನು ರಚಿಸಿದ್ದಾನೆ. ಅನಂತರ ಬಂದ ಪದ್ಮಕವಿ (ಕ್ರಿ.ಶ. ೧೫೨೮) ಜಿನಸೇನ ದೇಶವ್ರತಿ (ಕ್ರಿ.ಶ. ೧೬೦೦) ಗಳು ಸಾಂಗತ್ಯದಲ್ಲಿ ವರ್ಧಮಾನ ಚರಿತೆಯನ್ನು ರಚಿಸಿದ್ದಾರೆ.

ಕಥಾಸಾರ

ಮಗಧರಾಜ್ಯದ ದೊರೆ ವಿಶ್ವಭೂತಿ. ಆತನ ರಾಮಿ ಜೈನಿ. ವಿಶ್ವಭೂತಿಯ ತಮ್ಮ ವಿಶಾಖಭೂತಿ ಯುವರಾಜನಾಗಿದ್ದನು. ರಾಜನಿಗೆ ವಿಶ್ವನಂದಿಯೆಂಬ ಮಗನಿದ್ದನು. ಯುವರಾಜ ವಿಶಾಖಭೂತಿಗೆ ವಿಶಾಖನಂದಿಯೆನ್ನುವ ಮಗ ಜನಿಸಿದನು.

ಒಡ್ಡೋಲಗದಲ್ಲಿ ವಿಶ್ವಭೂತಿ ಇರುವಾಗ ಮುದುಕನಾದ ಪಡಿಯರನನ್ನು ಕಂಡ ವೈರಾಗ್ಯ ಮೂಡಿತು. ಹಾಗಾಗಿ ತಮ್ಮನಾದ ವಿಶಾಖಭೂತಿಗೆ ಪಟ್ಟಕಟ್ಟಿದನು. ಮಗ ವಿಶ್ವನಂದಿಗೆ ಯುವರಾಜ ಪದವಿಯನ್ನಿತ್ತನು. ಶ್ರೀಧರವ್ರತಿಗಳಲ್ಲಿ ದೀಕ್ಷೆಪಡೆದು ತಪೋನಿರತನಾದನು. ವಿಶ್ವನಂದಿ ಯುದ್ಧಕ್ಕೆ ಹೋಗಿ ಅವಿಧೇಯನಾದ ಕಾಮರೂಪದ ದೊರೆಯನ್ನು ಸೋಲಿಸಿದನು. ಅಷ್ಟರಲ್ಲಿ ವಿಶಾಖನಂದಿಯ ವಿಶ್ವನಂದಿಯ ಪ್ರಮದವನವನ್ನು ಆಕ್ರಮಿಸಿಕೊಂಡನು. ವಿಶ್ವನಂದಿಯು ಯುದ್ಧಕ್ಕಿಳಿದಾಗ ವಿಶಾಖನಂದಿ ಸೋತು ಶರಣಾಗತನಾದನು. ವಿಶ್ವನಂದಿಗೆ ವೈರಾಗ್ಯ ಮೂಡಿತು. ವಿಶ್ವನಂದಿ ಮತ್ತು ವಿಶಾಖನಂದಿ ಒಟ್ಟಿಗೆ ಜಿನದೀಕ್ಷೆ ಸತ್ತು ಶತಾರಕಲ್ಪದಲ್ಲಿ ದೇವತೆಗಳಾಗಿ ಜನಿಸಿದರು.

ವಿಶ್ವನಂದಿ ಏಕವಿಹಾರಿತ್ವಪ್ರತಿಜ್ಞೆಯಿಂದ ಉತ್ತರಮಧುರೆಗೆ ಬಂದನು. ಆಗ ಈದ ಹಸುವೊಂದು ಅವನನ್ನು ತಿವಿದು ಗತಾಸುವಾಗಿದ್ದನು. ವಿಶಾಖನಂದಿ ಅಲ್ಲಿಗೆ ಬಂದು ಅವನನ್ನು ಮುಂದಿನ ಜನ್ಮದಲ್ಲಿ ಕೊಲ್ಲುವ ಅವಕಾಶ ನನಗೆ ಸಿಗಲಿ ಎಂದು ಸಂಕಲ್ಪಮಾಡಿ ಸತ್ತನು. ಬಳಿಕ ಶತಾರಕಲ್ಪದಲ್ಲಿ ಸುರನಾಗಿ ಜನಿಸಿ ವಿಶಾಖಭೂತಿಚರಸುರವರನೊಡನೆ ಸ್ನೇಹದಿಂದದ್ದು ಸುಖವನ್ನು ಅನುಭವಿಸುತ್ತಿದ್ದನು.

ಸುರಮ್ಯದೇಶದ ಪೌದನಪುರದ ರಾಜ ಪ್ರಜಾಪತಿ. ಆತನು ರಾಣಿ ಜಯಾವತಿ ಮತ್ತು ಮೃಗಾವತಿಯೊಡನೆ ಸುಖಭೋಗ ಅನುಭವಿಸುತ್ತಿದ್ದನು. ವಿಶಾಖಭೂತಿಚರ ಜಯಾವತಿಯ ಗರ್ಭದಲ್ಲಿ ವಿಜಯನೆಂಬ ಹೆಸರಿನ ಪ್ರಥಮ ಬಲದೇವನಾಗಿ ಜನಿಸಿದನು. ವಿಶ್ವನಂದಿಚರ ಮೃಗಾವತಿಯಲ್ಲಿ ತ್ರಿಪೃಷ್ಟನೆಂಬ ಹೆಸರಿನ ಪ್ರಥಮ ವಾಸುದೇವನಾಗಿ ಜನಿಸಿದನು. ಇವರು ಸಕಲ ವಿದ್ಯಾಪಾರಂಗತರಾಗಿ ಬೆಳೆಯುತ್ತ ಇದ್ದರು. ಒಂದು ದಿನ ರಾಜಸಭೆಯನ್ನು ಪ್ರವೇಶಿಸಿದ ವಸಂತನೆಂಬ ನಿಮಿತ್ತಜ್ಞ ಕಿರಿಯವನಾದ ತ್ರಿಪೃಷ್ಟನು ಭರತತ್ರಿಖಂಡದ ಚಕ್ರವರ್ತಿಯಾಗುವನೆಂದು ಭವಿಷ್ಯ ನುಡಿದನು.

ಪ್ರಜಾಪತಿಯ ಒಡ್ಡೋಲಗಕ್ಕೆ ದೇಶ ಸಚಿವ ಬಂದು ಅಡವಿಯಲ್ಲಿ ಸಿಂಹದ ಉಪದ್ರವವನ್ನು ತಿಳಿಸಿದನು. ಕೂಡಲೇ ತ್ರಿಪೃಷ್ಯ ಹೋಗಿ ಸಿಂಹವನ್ನು ಕೊಂದು ಹಿಂದಿರುಗುವಾಗ ಯಾರಿಂದಲೂ ಅಲುಗಾಡಿಸಲಾಗದ ತೋಟಕಶಿಲೆಯನ್ನು ಕಂಡು ಮೇಲೆತ್ತಿ ಅಣ್ಣೆ ಕಲ್ಲಾಡಿದನು. ಕೆಲವು ದಿವಸದ ಅನಂತರ ಇಂದುವೆನ್ನುವ ದೂತ ಪ್ರಜಾಪತಿರಾಜನ ಆಸ್ಥಾನಕ್ಕೆ ಬಂದು ರತ್ನನೂಪುರ ಪುರದ ರಾಜ ಜ್ವಲನಜಟಿ ಆತನ ರಾಣಿವಾಯುವೇಗೆ. ಅವರಿಗೆ ಆರ್ಕಕೀರ್ತಿಯೆಂಬ ಮಗ ಮತ್ತು ಸ್ವಯಂ ಪ್ರಭೆಯೆಂಬ ಮಗಳಿದ್ದಾರೆ. ನಿನ್ನ ಮಗ ತ್ರಿಪೃಷ್ಟನು ಸ್ವಯಂಪ್ರಭೆಗೆ ಬಗ್ಗೆ ತ್ರಿಪೃಷ್ಟ ಮತ್ತು ಇಂದು ಪರಸ್ಪರ ಸಮಾಲೋಚಿಸಿದ್ದರು. ಆಗ ಅವರಿಗೆ ರಾಜಸ್ಥಾನದಿಂದ ಕರೆ ಬಂದಿತು. ಪ್ರಜಾಪತಿ ಮಹಾರಾಜ ಲಗ್ನವನ್ನು ನಿಶ್ಚಯಿಸಿ ಲಗ್ನಪತ್ರಿಕೆಯೊಡನೆ ದಿವ್ಯಾಂಬರ ಭೂಷಣಗಳನ್ನು ಪ್ರಜಾಪತಿಗೆ ಕಳಿಸಿದನು. ಮದುವೆಯ ದಿಬ್ಬಣ ಬಂದಿತು. ಕುಲಾಚಾರದಂತೆ ಜ್ವಲನಜಟಿಯು ಸ್ವಯಂಪ್ರಭೆಯನ್ನು ತ್ರಿಪೃಷ್ಟನಿಗೆ ಧಾರೆಯೆರೆದನು. ಎಲ್ಲರೂ ಸಂತೋಷಭರಿತರಾದರು. ಇದನ್ನು ಪ್ರತಿಭಟಿಸಿ ವಿದ್ಯಾಧರಚಕ್ರವರ್ತಿ ಆಶ್ವಗ್ರೀವ ಯುದ್ಧಕ್ಕೆ ಬಂದನು. ತ್ರಿಪೃಷ್ಟನು ಮಾವ ಜ್ವಲನಜಟಿ ಕೊಟ್ಟ ಅವಲೋಕಿನಿ ಮುಂತಾದ ವಿದ್ಯೆಗಳನ್ನು ಪಡೆದನು. ಯುದ್ಧದಲ್ಲಿ ಅಶ್ವಗ್ರೀವ ಪ್ರಯೋಗಿಸಿದ ಚಕ್ರವು ತ್ರಿಪೃಷ್ಟನನ್ನು ಬಲವಂದು ನಿಂತಿತು. ಅದನ್ನು ಪ್ರಯೋಗಿಸಿ ಅಶ್ವಗ್ರೀವನ ತಲೆಯನ್ನು ಕತ್ತರಿಸಿದನು. ಪೂರ್ವಭವದಲ್ಲಿ ವಿಶ್ವನಂದಿ ಮಾಡಿದ್ದ ಪ್ರತಿಜ್ಞೆ ಈಗ ನೆರವೇರಿದಂತಾಯಿತು. ಕಾಲಾನಂತರ ಜ್ವಲನಜಟಿ ಮತ್ತು ಪ್ರಜಾಪತಿ ಮಹಾರಾಜ ತಪಸ್ಸಿಗೆ ಹೋದರು.

ತ್ರಿಪೃಷ್ಟನು ಅಣ್ಣನನ್ನು ತಂದೆಯೆಂದು ಭಾವಿಸಿದನು. ಕೆಲವು ಕಾಲದ ಮೇಲೆ ತ್ರಿಪೃಷ್ಟನಿಗೆ ರಾಣಿ ಸ್ವಯಂಪ್ರಭೆಯಲ್ಲಿ ಶ್ರೀವಿಜಯನೆಂಬ ಮಗ ಜ್ಯೋತಿಃಪ್ರಭೆಯೆಂಬ ಮಗಳು ಹುಟ್ಟಿದರು. ವಯಸ್ಸಿಗೆ ಬಂದಾಗ ಸ್ವಯಂವರದ ಮೂಲಕ ಜ್ಯೋತಿಃಪ್ರಭೆಯು ಆರ್ಕಕೀರ್ತಿಯ ಮಗ ಅಮಿತತೇಜನನ್ನು ವರಿಸಿದಳು. ಅದೇ ಸಮಯದಲ್ಲಿ ಅರ್ಕಕೀರ್ತಿಯ ಮಗಳು ಸುತಾರೆ ತ್ರಿಪೃಷ್ಟನ ಮಗ ಶ್ರೀ ವಿಜಯನನ್ನು ವರಿಸಿದಳು. ತ್ರಿಪೃಷ್ಟನು ನಿದ್ರೆಯಲ್ಲಿಯೇ ಕಾಲವಶನಾಗಲು ಬಲದೇವನು ವೈರಾಗ್ಯಪರನಾಗಿ ಪಿಹಿತಾಸ್ರವದಲ್ಲಿ ಜಿನದೀಕ್ಷೆ ಪಡೆದು ತಪೋಮಗ್ನನಾದನು.

ಮರಣಹೊಂದಿದ ತ್ರಿಪೃಷ್ಟನ ಜೀವ ತನ್ನ ದುಷ್ಕರ್ಮದ ಫಲವಾಗಿ ಏಳನೆಯ ನರಕಕ್ಕೆ ಬಿದ್ದು ಮೂವತ್ತುಮೂರು ಸಾಗರಗಳಷ್ಟು ದೀರ್ಘಕಾಲ ಮಹಾದುಃಖವನ್ನನ್ನುಭವಿಸಿತು. ಅನಂತರ ಭರತಖಂಡದ ಸಿಂಹಗಿರಿಯ ತಪ್ಪಲಿನಲ್ಲಿ ಸಿಂಹವಾಗಿ ಜನಿಸಿತು. ಭಯಂಕರ ವ್ಯಾಪಾರದಿಂದ ಬಾಳಿ ಮರುಹುಟ್ಟಿನಲ್ಲಿ ಸಿಂಹವಾಗಿಯೇ ಜನಿಸಿತು. ಅದರ ಮೋಹನೀಯ ಕರ್ಮ ಉಪಶಮಿಸಿತು. ಆಗ ಆಕಾಶದಿಂದ ಇಬ್ಬರು ಚಾರಣ ಮುನಿಗಳು ಕೆಳಗಿಳಿದು ಬಂದರು. ತಮ್ಮನ್ನೇ ನೆಟ್ಟ ದೃಷ್ಟಿಯಿಂದ ನೋಡುತ್ತಿದ್ದ ಸಿಂಹಕ್ಕೆ ಅದರ ಪೂರ್ವವೃತ್ತಾಂತವನ್ನು ಅರಿಂಜಯ ಮುನಿಗಳು ಹೇಳಿದರು.

ಒಂದು ಕಾಲದಲ್ಲಿ ನೀನು ಪುರೂರವನೆಂಬ ಬೇಡರ ದೊರೆಯಾಗಿದ್ದೆ. ಆಗ ಪುಂಡರೀಕಿಣೀ ಪುರದ ವ್ಯಾಪಾರಿ ಧರ್ಮಸ್ವಾಮಿಯ ತಂಡದ ಮೇಲೆ ದಾಳಿ ಮಾಡಿದೆ. ಅವರ ತಂಡದಲ್ಲಿದ್ದ ಸಾಗಸೇನರೆಂಬ ಮುನಿಗಳು ನಿನ್ನ ಕಡೆಗೆ ಬಂದರು. ಪ್ರಾಣಿಹಿಂಸೆಯಾದೀತೆಂದು ಬಾಗಿ ಬರುತ್ತಿದ್ದ ಅವರನ್ನು ನೀನು ವಿಚಿತ್ರಮೃಗವೆಂದು ಭಾವಿಸಿ ಬಾಣ ಬಿಡುವಷ್ಟರಲ್ಲಿ ನಿನ್ನ ಹೆಂಡತಿ ತಡೆದಳು. ಮರುನಿಮಿಷ ನೀನು ಅವರನ್ನು ಕಂಡೆ. ನಿನಗೆ ಭಕ್ತಿ ಹುಟ್ಟಿತು. ಅವರ ಬೋಧೆಯಿಂದ ನೀನು ಮಧುಮಾಂಸವಿರತಿ ವ್ರತವನ್ನು ಕೈಕೊಂಡೆ. ಅದರ ಫಲವಾಗಿ ನೀನು ಸತ್ತು ದೇವತೆಯಾಗಿ ಹುಟ್ಟಿದೆ. ಸಕಲಸುಖ ಅನುಭವಿಸಿ ಪ್ರಥಮ ತೀರ್ಥಂಕರನ ಮೊಮ್ಮಗನಾಗಿ ಹುಟ್ಟಿದೆ. ಭರತ ಚಕ್ರಿ ಮತ್ತು ಅನಂತಸೇನೆಗೆ ಜನಿಸಿದ ನಿನಗೆ ಮರೀಚಿಯೆಂದು ನಾಮಕರಣ ಮಾಡಿದರು. ಸಂನ್ಯಸನವನ್ನು ಸ್ವೀಕರಿಸಿದೆ. ಆದರೆ ಹಸಿವು ಬಾಯಾರಿಕೆಯನ್ನು ತಾಳಲಾರದೆ ಅರ್ಹಂತ ವ್ರತವನ್ನು ತ್ಯಜಿಸಿ ಕೌಪೀನ ದಂಡಗಳೊಡನೆ ದೇಶಾಂತರ ಹೊರಟೆ. ವೃಷಭನಾಥನು ಜಿನನಾಗುವ ವೇಳೆಗೆ ನೀನು ಅಲ್ಲಿಗೆ ಹಿಂತಿರುಗಿ ಬಂದೆ. ಆಗ ನೀನು ಕಡೆಯ ತೀರ್ಥಂಕರನಾಗುವ ವಿಚಾರ ಜಿನವಾಣಿಯಿಂದ ತಿಳಿಯಿತು. ಇದರಿಂದ ನೀನು ಆನಂದಗೊಂಡೆಯಾದರೂ ಪ್ರತಿಷ್ಠೆಗಾಗಿ ಮಿಥ್ಯಾಧರ್ಮವನ್ನು ಬೋಧಿಸಿದೆ. ಜೀವಿತಾಂತ್ಯದಲ್ಲಿ ದೇವತೆಯಾಗಿ ಹುಟ್ಟಿದೆ. ಅನಂತರ ಹಲವಾರು ಜನ್ಮಗಳನ್ನೆತ್ತಿ ಪ್ರಥಮವಾಸುದೇವನಾದ ತ್ರಿಪೃಷ್ಟನಾಗಿ ಜನಿಸಿದೆ. ನೀನು ರತಿಕ್ರೀಡೆಯಲ್ಲಿ ತೊಡಗಿರುವಾಗ ನಿನ್ನ ಹೆಂಡತಿಯನ್ನು ಕಾಮಿಸಿದ ಅಶ್ವಗ್ರೀವವನ್ನು ನೆನೆದು ಕ್ರೋಧಗೊಂಡೆ. ಆ ಕಾರಣ ನೀನು ನಿದ್ರೆಯಲ್ಲಿರುವಾಗಲೇ ಮೃತ್ಯುವಿಗೆ ತುತ್ತಾಗಿ ಏಳನೆಯ ನರಕಕ್ಕೆಳಿದೆ. ಅಲ್ಲಿಂದ ಮುಕ್ತನಾಗಿ ಸಿಂಹಜನ್ಮವನ್ನು ತಾಳಿದೆ. ಪ್ರಾಣಿಹತ್ಯೆಯ ಪಾಪದಿಂದ ನರಕಕ್ಕಿಳಿದು ಮತ್ತೆ ಈಗ ಸಿಂಹವಾಗಿರುವೆ. ನಾವು ಈವತ್ತು ತೀರ್ಥಂಕರನ ಆಸ್ಥಾನದಲ್ಲಿ ಈ ವಿಚಾರವನ್ನು ತಿಳಿದು ತೀರ್ಥಂಕರನಾಗಲಿರುವ ನಿನಗೆ ಜ್ಞಾನಭೋದೆ ಮಾಡಲು ಇಲ್ಲಿಗೆ ಬಂದಿದ್ದೇವೆಯೆಂದರು. ತನ್ನ ಭವಾವಳಿಯನ್ನು ಅರಿತ ಸಿಂಹವು ಅರಿಂಜಯರಲ್ಲಿ ಧರ್ಮಭೋಧೆ ಪಡೆದು ಸಲ್ಲೇಖನ ವ್ರತವನ್ನಾಚರಿಸಿತು. ತೀರ್ಥಂಕರ ಚರಣಗಳಲ್ಲಿ ನೆಟ್ಟ ದೃಷ್ಟಿಯಿಟ್ಟು ದೇಹತ್ಯಾಗ ಮಾಡಿತು. ಮರುನಿಮಿಷದಲ್ಲಿ ಸೌಧರ್ಮ ಕಲ್ಪದಲ್ಲಿ ದೇವತೆಯಾಗಿ ಹುಟ್ಟಿತು. ಭವಪ್ರತ್ಯಯ ಜ್ಞಾನದಿಂದ ತಾನು ಯಾರೆಂಬುದನ್ನು ಅರಿತ ದೇವತೆ ತ್ರಿಪ್ರದಕ್ಷಿಣ ಪೂರ್ವಕ ಪರಮಜಿನಾರ್ಚನೆ ಮಾಡಿ ಅರಿಂಜಯಾಮಿತಗುಣರೆಂಬ ಚಾರಣಯುಗಳವನ್ನು ಕಂಡು ಅರ್ಚಿಸಿ ಅವರ ಉಪಕಾರ ಸ್ಮರಣೆ ಮಾಡಿ ತನ್ನ ವಿಮಾನಕ್ಕೆ ತೆರಳಿ ಅನಂತಸುಖವನ್ನು ಅನುಭವಿಸುತ್ತ ಆಯುರವಸಾನದಲ್ಲಿ ಮೂಡಣಮಂದರದ ಪೂರ್ವವಿದೇಹದ ಕಚ್ಛಮಹಾವಿಷಯದ ಕನಕಪುರಾಧೀಶ್ವರನಾದ ಕನಕಪ್ರಭ ಮತ್ತು ಆತನ ರಾಣಿ ಕನಕಮಾಲೆಗೆ ಕನಕಧ್ವಜನೆಂಬ ಮಗನಾಗಿ ಜನಿಸಿದನು.

ಕನಕಧ್ವಜನು ಆಕಾಶದಲ್ಲಿ ಮೋಡ ಕರಗಿದುದನ್ನು ಕಂಡು ವಿರಾಗಪರನಾದನು. ತಪಸ್ಸು ಮಾಡಿ ಆಯುಷ್ಯ ಕಳೆದು ಕನತ್ಯಾಪಿಷ್ಟ ಕಲ್ಪದಲ್ಲಿ ದೇವಾನಂದನೆಂಬ ದೇವನಾಗಿ ಹುಟ್ಟಿದನು. ಮರುಭವನದಲ್ಲಿ ಮಾಳವ ದೇಶದ ಉಜ್ಜಯಿನಿಯಲ್ಲಿ ರಾಜ ವಜ್ರಸೇನ ಮತ್ತು ಆತನ ರಾಣಿ ಸುಶೀಲೆಗೆ ಹರಿಷೇಣನೆಂಬ ಮಗನಾದನು. ವಜ್ರಸೇನನ ಅನಂತರ ಹರಿಷೇಣ ದುಷ್ಟನಿಗ್ರಹ ಶಿಷ್ಟ ಪರಿಪಾಲನೆ ಮಾಡಿ ಸುಪ್ರತಿಷ್ಠಯತಿಯಿಂದ ದೀಕ್ಷೆ ಪಡೆದು ಆಯುರವಸಾನದಲ್ಲಿ ಸಲ್ಲೇಖನದಿಂದ ಸಮಾಧಿ ಹೊಂದಿ ಶುಕ್ಲಕಲ್ಪದ ಪ್ರೀತಿವರ್ಧನವಿಮಾನದಲ್ಲಿ ಪ್ರೀತಿಂಕರನೆಂಬ ದೇವನಾದನು. ಸುಖಭೋಗಗಳನ್ನನನುಭವಿಸಿ ಆಯುರವಸಾನದಲ್ಲಿ ವಿದೇಹದ ಪುಷ್ಕರಾವತೀ ವಿಷಯದ ಪುಂಡರಕೀಣಿಪುರದ ರಾಜ ಸುಮಿತ್ರ ಮತ್ತು ರಾಣಿ ಸುಮಿತ್ರೆಗೆ ಪ್ರಿಯಮಿತ್ರನೆಂಬ ಮಗನಾಗಿ ಜನಿಸಿದನು. ಕಾಲಾನಂತರ ಸುಮಿತ್ರನಿಗೆ ವೈರಾಗ್ಯ ಮೂಡಿ ಪ್ರಿಯಮಿತ್ರನಿಗೆ ರಾಜ್ಯಭಾರ ವಹಿಸಿದನು. ಪ್ರಿಯಮಿತ್ರನ ರಾಜ್ಯಭಾರದಲ್ಲಿ ಚಕ್ರರತ್ನ ಉಯಿಸಿತು. ಅದರ ಸಹಾಯದಿಂದ ದಿಗ್ವಿಜಯವನ್ನು ಸಾಧಿಸಿದನು. ಪ್ರಿಯಮಿತ್ರನಿಗೆ ಕನ್ನಡಿಯಲ್ಲಿ ನರೆ ಕಂಡು ವೈರಾಗ್ಯ ಮೂಡಿತು. ನಿರತಿಚಾರಚರಣದಿಂದ ಆಯುಷ್ಯವನ್ನು ಕಳೆದು ಸಹಸ್ರಾರು ಕಲ್ಪದಲ್ಲಿ ರುಚತಾಖ್ಯ ವಿಮಾನದಲ್ಲಿ ಸೂರ್ಯಪ್ರಭನೆಂಬ ದೇವನಾಗಿ ಜನಿಸಿದನು. ಆಯುರವಸಾನದಲ್ಲಿ ಜಂಬೂದ್ವೀಪದ ಭರತ ಖಂಡದ ನಂದಿವರ್ಧನ ಮಹಾರಾಜನಿಗೆ ನಂದನನೆಂಬ ಮಗನಾದನು.

ನಂದನಕುಮಾರನ ಪತ್ನಿ ಪ್ರಿಯಂಕರಿ. ನಂದಿವರ್ಧನ ಮಹಾರಾಜನು ತನ್ನ ಮಗನಿಗೆ ರಾಜ್ಯಭಾರ ವಹಿಸಿ ವೀರಮತಿಯೊಡನೆ ಸುಖದಿಂದಿರುವಾಗ ಆಕಾಶದಲ್ಲಿ ಮೋಡ ಚದುರಿದುದನ್ನು ಕಂಡು ನಿರ್ವೇಗಪರನಾಗಿ ಪಿಹಿತಾಸ್ರವ ಮುನಿಪತಿಯಲ್ಲಿ ದೀಕ್ಷೆ ಪಡೆದು ಉಗ್ರತಪಸ್ಸನ್ನಾಚರಿಸಿ ದೇಹತ್ಯಾಗ ಮಾಡಿದನು. ನಂದನೆಂಬ ಮಗನನ್ನು ನಂದನನರಪತಿ ಪ್ರಿಯಂಕರೀ ರಾಣಿಯಲ್ಲಿ ಪಡೆದು ಸುಖವಾಗಿದ್ದನು. ಒಂದು ದಿನ ಬಹಿರುದ್ಯಾನಕ್ಕೆ ಬಂದ ಯತಿಶ್ರೇಷ್ಠರಿಂದ ಚತುರ್ಗತಿ ಸ್ವರೂಪವನ್ನು, ತನ್ನ ಮುನ್ನಿನಭವಾವಳಿಗಳನ್ನು ತಿಳಿದು ಸಂಸಾರದಲ್ಲಿ ನಿರ್ವೇಗ ಹೊಂದಿ ಮಗ ನಂದನಿಗೆ ರಾಜ್ಯಭಾರ ವಹಿಸಿ ಪ್ರಾಯೋಪಗಮನವಿಧಿಯಿಂದ ತಪಸ್ಸನ್ನಾಚರಿಸಿ ಆಯುರವಸಾನದಲ್ಲಿ ಶರೀರತ್ಯಾಗ ಮಾಡಿ ಷೋಡರ ಕಲ್ಪದಲ್ಲಿ ಪುಷ್ಪೋತ್ತರವೆಂಬ ವಿಮಾನದಲ್ಲಿ ಇಂದ್ರನಾದನು.

ಜಂಬೂದ್ವೀಪದ ಭರತಾವನಿಯಲ್ಲಿ ವಿದೇಹದ ರಾಜಧಾನಿ ಕುಂಡಪುರ. ಅದರ ರಾಜ ಸಿದ್ಧಾರ್ಥ, ರಾಣಿ ಪ್ರಿಯಕಾರಿಣಿ. ತೀರ್ಥಂಕರನು ತಮ್ಮ ಮಗನಾಗಿ ಹುಟ್ಟಬೇಕೆಂಬ ಬಯಕೆ ಅವರದು. ಆಗ ತೀರ್ಥಂಕರನಾಗಲಿರುವ ಜೀವ ಪುಷ್ಪೋತ್ತರ ವಿಮಾನದಲ್ಲಿ ಅಚ್ಯುತೇಂದ್ರನೆಂಬ ದೇವತೆಯಾಗಿತ್ತು. ಆರು ತಿಂಗಳಲ್ಲಿ ಆ ದೇವತೆಯ ಆಯಸ್ಸು ಮುಗಿಯುವುದೆನ್ನುವಾಗ ಸೌಧರ್ಮ ಕಲ್ಪದಲ್ಲಿದ್ದ ದೇವೇಂದ್ರನಿಗೆ ಆಸನ ಕಂಪವಾಯಿತು. ಅವಧಿಜ್ಞಾನದಿಂದ ಭವಿಷ್ಯತ್ತೀರ್ಥಂಕರನ ಜನನವನ್ನು ತಿಳಿದು ಇಂದ್ರನು ಬಂದು ನಮಸ್ಕರಿಸಿದನು. ಇಂದ್ರನ ಅಪ್ಪಣೆಯಂತೆ ಕುಂಡಪುರದಲ್ಲಿ ಕುಬೇರನು ಮೂರುದಿನಗಳ ಕಾಲ ರತ್ನವೃಷ್ಟಿಯನ್ನು ಮಾಡಿದನು.

ಜಿನಜನನಿಯಾಗಲಿರುವ ಪ್ರಿಯಕಾರಿಣಿಯ ಗರ್ಭಶೋಧನೆಗಾಗಿ ಇಂದ್ರನು ಶ್ರೀಹ್ರೀ ಮೊದಲಾದ ದೇವತೆಯರನ್ನು ಭೂಲೋಕಕ್ಕೆ ಕಳಿಸಿದನು. ಗರ್ಭಶೋಧನೆಯ ಅನಂತರ ಪ್ರಿಯಕಾರಿಣಿಯ ದೇಹ ಪುಣ್ಯಪುತ್ಥಳಿಯಂತೆ ತೊಳಗಿ ಬೆಳಗುತ್ತಿತ್ತು. ಆರು ತಿಂಗಳು ಕಳೆದ ಮೇಲೆ ಪ್ರಿಯಕಾರಿಣಿ ಪುಷ್ಪವತಿಯಾದಳು. ಚತುರ್ದಿನ ಕಳೆದ ಮೇಲೆ ದಿವ್ಯವಸ್ತ್ರಾಭರಣಗಳನ್ನು ಧರಿಸಿ ಶೋಭಿಸಿದಳು. ರಾತ್ರಿಯ ಸ್ವಪ್ನದಲ್ಲಿ ಮದಗಜ, ವೃಷಭ, ಸಿಂಹ, ಲಕ್ಷ್ಮಿ, ಪುಷ್ಪದ್ವಯ, ವಿಧು, ಸೂರ್ಯ, ಝಷಯುಗ, ಘಟಯುಗ, ಸರಸಿ, ಸಮುದ್ರ, ಸಿಂಹಾಸನ, ನಿಳಿಂಪ ವಿಮಾನವನ್ನೂ ಆಲಯವನ್ನೂ ರತ್ನರಾಶಿಯನ್ನೂ ಶಿಖಿಶಿಯನ್ನೂ ಕಂಡು ಬೆಳಿಗ್ಗೆ ಜೀವಿತೇಶನಿಗೆ ನಿರವಿಸಿದಳು. ಅದರ ವಿವರ ಹೇಳಿದ ದೊರೆ ಆಕೆಯ ಗರ್ಭದಲ್ಲಿ ತೀರ್ಥಂಕರ ಜನಿಸುವನೆಂದನು. ಆ ವೇಳೆಯಲ್ಲಿ ಅಚ್ಯುತಕಲ್ಪದಲ್ಲಿದ್ದ ಅಚ್ಯುತೇಂದ್ರನಜೀವ ಪ್ರಿಯಕಾರಿಣಿಯ ಗರ್ಭವನ್ನು ಪ್ರವೇಶಿಸಿತು. ಸ್ಫಟಿಕದಕಲಶದಲ್ಲಿಟ್ಟಿದ್ದ ರತ್ನದ ದೀಪದಂತೆ ಆಜೀವ ತೊಳಗಿ ಬೆಳಗುತ್ತ ಬೆಳೆಯುತ್ತಿದ್ದಿತು. ದೇವೇಂದ್ರನು ಶಚಿಯೊಡನೆ ಭೂಮಿಗೆ ಬಂದು ರಾಜರಾಣಿಯರಿಗೆ ಮೂರು ಸಾರಿ ಪ್ರದಕ್ಷಿಣೆ ಮಾಡಿ ಗರ್ಭಾವತರಣವೆಂಬ ಕಲ್ಯಾಣವನ್ನು ನೆರವೇರಿಸಿದನು.

ಜಿನಜನನವಾಯಿತು. ದೇವದುಂದುಭಿ ಮೊಳಗಿದವು. ಇಂದ್ರನ ಆಸನ ಕಂಪಿಸಿತು. ಆಗ ಇಂದ್ರಿಂದ್ರಾಣಿಯರು ಭೂಮಿಗೆ ಬಂದರು. ಶಚಿಯು ಜಿನಜನನಿಗೆ ಮಾಯಾನಿದ್ರೆಯನ್ನು ಬರಿಸಿ ಜಿನಶಿಶುವನ್ನು ಸೂತಿಕಾಗೃಹದಿಂದ ಹೊರಗೆ ತಂದಳು. ಪಾಂಡುಕಶಿಲೆಯ ಮೇಲೆ ಜಿನಶಿಶುವಿನ ಜನನಾಭಿಷೇಕ ವಿಜೃಂಭಣೆಯಿಂದ ನಡೆಯಿತು. ಜಿನಜನ್ಮಾಭಿಷೇಕವಾದ ಮೇಲೆ ಇಂದ್ರ ಇಂದ್ರಾಣಿಯರು ಕುಂಡಿನಪುರಕ್ಕೆ ಬಂದರು. ಶಚಿಯು ಜಿನಜನನಿ ಪ್ರಿಯಕಾರಿಣಿಯ ಮಗ್ಗುಲಲ್ಲಿ ಮಗುವನ್ನಿಟ್ಟಳು. ಮಾಯಾ ಶಿಶು ಮಾಯವಾಯಿತು. ದೇವೇಂದ್ರನ ಆಜ್ಞೆಯಂತೆ ಆ ನಗರದಲ್ಲಿ ಭವ್ಯವಾದ ಮಂಟಪವೊಂದು ರಚಿತವಾಗಿತ್ತು. ಮಾಯಾನಿದ್ರೆಯಿಂದ ಎಚ್ಚೆತ್ತು ರಾಣಿಯು ರಾಜನೊಡೆನೆ ಬಂದು ಅಲ್ಲಿದ್ದ ಸಿಂಹಾಸನದ ಮೇಲೆ ಕುಳಿತಳು. ದೇವೇಂದ್ರನು ತನ್ನ ವಿಕ್ರಿಯಾಶಕ್ತಿಯಿಂದ ಅದ್ಭುತವಾದ ನರ್ತನವನ್ನು ಮಾಡಿದನು. ಜಿನಶಿಶುವಿಗೆ ವೀರನೆಂದು ನಾಮಕರಣ ಮಾಡಿ ತನ್ನ ಪರಿವಾರದೊಡೆನೆ ಸೌಧರ್ಮಕಲ್ಪಕ್ಕೆ ಹಿಂದಿರುಗಿದನು.

ಸಿದ್ಧಾರ್ಥಮಹಾರಾಜನು ತನ್ನ ಬೆಳವಣಿಗೆಯಿಂದ ಜನರಿಗೆ ಸಂತೋಷವನ್ನು ವರ್ಧಿಸುತ್ತಿದ್ದ ಮಗುವಿಗೆ “ವರ್ಧಮಾನ”ನೆಂದು ಹೆಸರಿಟ್ಟನು. ಸಂಜಯ ವಿಜಯರೆಂಬ ಚಾರಣರಿಗೆ ಇದ್ದ ಆಗಮದ ಸಂದೇಹವು ವರ್ಧಮಾನನನ್ನು ತ್ರಿಪ್ರದಕ್ಷಿಣೆ ಮಾಡುತ್ತಿದ್ದಂತೆಯೇ ನಿವಾರಣೆಯಾಯಿತು. ಅವರು ಆತನನ್ನು “ಸನ್ಮತಿ”ಯೆಂದು ಕರೆದರು. ವರ್ಧಮಾನನು ನಿರ್ಭಯನೆಂದು ಇಂದ್ರನು ಹೇಳಿದನು ಆ ಮಾತನ್ನು ಪರೀಕ್ಷಿಸಲು ಸಂಗಮನೆಂಬ ದೇವತೆ ಭೂಮಿಗೆ ಬಂದನು. ವರ್ಧಮಾನನು ಮಕ್ಕಳೊಡನೆ ಮರಕೋತಿ ಆಟ ಆಡುವಾಗ ಸಂಗಮನು ಸಾವಿರ ಹೆಡೆಯ ಹಾವಾಗಿ ಮರಕ್ಕೆ ಸುತ್ತಿಕೊಂಡನು. ಮಕ್ಕಳೆಲ್ಲ ಹೆದರಿ ಓಡಿದರು. ವರ್ಧಮಾನನು ಹೆದರದೆ ಹಾವಿನ ಹೆಡೆ ಮೆಟ್ಟಿ ಕೆಳಗಿಳಿದು ಬಂದನು. ಆಗ ಸಂಗಮನು ನಿಜವೇಷದಿಂದ ಕಾಣಿಸಿಕೊಂಡು ಮಹಾವೀರನಿಗೆ “ಮಹಾವೀರ” ಎನ್ನುವ ಹೆಸರು ಕೊಟ್ಟನು.

ವೀರಜಿನನಿಗೆ ಯೌವನೋದಯವಾಯಿತು. ಮನಸ್ಸು ಇಂದ್ರಿಯ ಸುಖಗಳತ್ತ ವಾಲಲಿಲ್ಲ. ವೈರಾಗ್ಯಮೂಡಿ ಆತನಿಗೆ ಅವಧಿಜ್ಞಾನ ಲಭಿಸಿತು. ಅದರಿಂದ ತನ್ನ ಭವಾವಳಿಯನ್ನೆಲ್ಲ ತಿಳಿದನು. ಲೋಕಾಂತಿಕದೇವತೆಗಳು ಸ್ವರ್ಗದಿಂದ ಇಳಿದು ಬಂದು ವರ್ಧಮಾನನಿಗೆ ಪರಿನಿಷ್ಕ್ರಮಣ ಕಲ್ಯಾಣಕ್ಕೆ ಸಿದ್ಧನಾಗುವಂತೆ ಪ್ರಾರ್ಥಿಸಿದರು. ವೀರಜಿನನು ತಂದೆ ತಾಯಿಗಳಿಗೆ ಬಂಧುವರ್ಗಕ್ಕೆ ವಿವೇಕವನ್ನು ಹೇಳಿ ತಪೋನುಷ್ಠಾನಕ್ಕೆ ತೆರಳಿದನು. ದೇವಶಿಲ್ಪಿ ನಿರ್ಮಿಸಿದ ಪಲ್ಲಕ್ಕಿಯಲ್ಲಿ ವರ್ಧಮಾನ ಪಯಣಕ್ಕೆ ಸಿದ್ಧನಾದಾಗ ಮಂಗಳವಾದ್ಯಗಳು ಮೊಳಗಿದವು. ಏಳು ಹೆಜ್ಜೆಗಳವರೆಗೆ ರಾಜರು, ಮುಂದಿನ ಏಳುಹೆಜ್ಜೆಗಳವರೆಗೆ ಗಂಧರ್ವರಾಜರು, ಅನಂತರ ಸುರಾಸುರರು ಏಳು ಹೆಜ್ಜೆಗಳಷ್ಟು ದೂರ ಹೊತ್ತುಕೊಂಡು ಹೋದರು. ಮುಂದಿನ ದಾರಿಯನ್ನು ದೇವೇಂದ್ರರುಗಳು ಆಕಾಶಮಾರ್ಗವಾಗಿ ತೆಗೆದುಕೊಂಡು ಹೋಗಿ ನಾಥಷಂಡವೆಂಬ ಉದ್ಯಾನ ವನದಲ್ಲಿಳಿಸಿದರು.

ದೇವವೃಂದವು “ಜಯ ಜಯ ಜೀವ ನಂದ ನಂದ” ಎಂದು ಘೋಷಿಸುತ್ತಿದ್ದರು. ವರ್ಧಮಾನನು ಮಾವಿನ ತೋಪಿನಲ್ಲಿದ್ದ ವಿಸ್ತಾರವಾದ ಸ್ಫಟಿಕದ ಬಂಡೆಗೆ ಬಂದನು. ತೆರೆಯ ಮರೆಯಲ್ಲಿ ಆಭರಣಗಳನ್ನು ವಿಸರ್ಜಿಸಿದನು. ಮಾರ್ಗಶಿರ ಬಹುಳ ದಶಮಿದಿನ ಮಧ್ಯಾಹ್ನದಲ್ಲಿ ಪಲ್ಯಂಕಾಸನದಲ್ಲಿ ಕುಳಿತು “ಸಿದ್ಧಂ ನಮಃ” ಎಂದು ಹೇಳುತ್ತ ಸಮಸ್ತ ಸಂಗ ಪರಿತ್ಯಾಗದೊಡನೆ ತಲೆಯ ಕೂದಲನ್ನು ಕಿತ್ತು ತಪಸಸನ್ನು ಕೈಕೊಂಡನು. ಆ ಕೂದಲನ್ನು ಇಂದ್ರನು ಕ್ಷೀರಸಮುದ್ರದಲ್ಲಿ ಹಾಕಿದನು. ಅನಂತರ ಇಂದ್ರನು ವೀರಜೀನನಿಗೆ ಪರಿನಿಷ್ಕ್ರಮಣಕಲ್ಯಾಣವನ್ನು ನಡೆಸಿದನು.

ಕೆಲವು ದಿನಗಳಾದ ಮೇಲೆ ವೀರಜಿನನಿಗೆ ಮನಃಪರ್ಯಯ ಜ್ಞಾನ ಉದಿಸಿತು. ಆತನು ಸಂಚರಿಸುತ್ತ ಕೂಲಪುರಕ್ಕೆ ಬಂದನು. ಅಲ್ಲಿನ ಮಹಾರಾಜ ವರ್ಧಮಾನನಲ್ಲಿಗೆ ಬಂದು ಅರೆಮನೆಗೆ ಕರೆದುಕೊಂಡು ಹೋಗಿ ಧೂಪ ದೀಪ ನೈವೇದ್ಯಗಳಿಂದ ಪೂಜಿಸಿ ಮೂರುಸಲ ಪರಮಾನ್ನವನ್ನಿಟ್ಟನು. ಅದನ್ನು ಸ್ವೀಕರಿಸಿದ ವೀರಜಿನ “ಈ ದಾನ ಅಕ್ಷಯವಾಗಲಿ” ಎಂದು ಮುಂದೆ ಪ್ರಯಾಣಿಸಿದನು. ಅನಂತರ ಅರಮನೆಯಲ್ಲಿ ಪಂಚಾಶ್ಚರ್ಯಗಳಾದವು.

ಒಂದುದಿನ ವರ್ಧಮಾನಮುನಿ ವಾರಣಾಸೀಪುರದ ಶ್ಮಶಾನಕ್ಕೆ ಬಂದು ಪ್ರತಿಮಾ ಯೋಗದಲ್ಲಿ ನಿಂತನು. ಆಗ ಗಗನಗಾಮಿಯಾಗಿ ಹೋಗುತ್ತಿದ್ದ ಪಾರ್ವತೀ ಪರಮೇಶ್ವರರು ಅವನನ್ನು ಕಂಡರು. ಈಶ್ವರನು ವರ್ಧಮಾನನಿಗೆ ನಮಸ್ಕರಿಸಿದನು. ಆಗ ಪಾರ್ವತಿ ಮಹಾಮಹಿಮನಾದ ನೀನು ಈತನಿಗೆ ನಮಸ್ಕರಿಸುವುದೆಂದರೆ ಏನು ? ಎಂದಳು. ಆಗ ಈಶ್ವರನು ಬ್ರಹ್ಮಾಂಡಕ್ಕೇ ಈತ ಅದ್ವೀತಿಯನೆಂದನು. ಆತನ ಪರಾಕ್ರಮವನ್ನು ನಾನು ನೋಡಬೇಕೆಂದು ಪಾರ್ವತಿ ಹೇಳಲು ಈಶ್ವರನು ತನ್ನ ಮರುಳುಗಳಿಗೆ ವೈಕುರ್ವಣಿವಿದ್ಯೆಯಿಂದ ವೀರಜಿನನನ್ನು ಹೆದರಿಸುವಂತೆ ತಿಳಿಸಿದನು. ಅವು ಹಾಗೆ ಮಾಡಿದಾಗ ವೀರಜಿನ ಹೆದರಲಿಲ್ಲ. ಆಗ ಶಿವ ಶಿವೆಯರು ಆ ಮುನಿಗೆ “ಸುವೀರ” “ಅತಿವೀರ” ಎಂದು ನಾಮಕರಣ ಮಾಡಿ ಕೈಲಾಸಕ್ಕೆ ತೆರಳಿದರು.

ವೀರಜಿನನು ಪಯಣವನ್ನು ಮುಂದುವರಿಸಿ ಸಿಂಬಿದೇಶದ ರಾಜಧಾನಿ ವೈತಾಳಿಗೆ ಬಂದನು. ಅಲ್ಲಿನ ರಾಜ ಚೇಟಕ ಮತ್ತು ಸುಭದ್ರೆಯರ ಮಗಳು ಚಂದನೆ, ಗುಣವತಿಯಾದ ಆಕೆ ಒಂದು ದಿನ ಉಯ್ಯಾಲೆ ಆಡುವಾಗ ಮನೋವೇಗನೆಂಬ ಗಂಧರ್ವ ಅವಳನ್ನು ಅಪಹರಿಸಿದ. ಆತ ಏನುಮಾಡಿದರೂ ಚಂದನೆ ಅವನಿಗೆ ಒಲಿಯಲಿಲ್ಲ. ಕೊಪಗೊಂಡ ಆತ ಅವಳನ್ನು ದಟ್ಟವಾದ ಅರಣ್ಯದಲ್ಲಿ ಬಿಟ್ಟುಹೋದನು. ಬೇಡನೊಬ್ಬ ಚಂದನೆಯನ್ನು ಕಂಡು ಬಲಾತ್ಕರಿಸಿದ. ಅಷ್ಟರಲ್ಲಿ ಅಲ್ಲಿಗೆ ಬಂದ ವೃಷಭದತ್ತನೆಂಬ ವೈಶ್ಯ ಅವಳನ್ನು ಕಿರಾತನಿಂದ ಮುಕ್ತಗೊಳಿಸಿ ಚಂದನೆಯನ್ನು ಕಂಡು ಶೆಟ್ಟಿಯ ಹೆಂಡತಿ ಅಸೂಯೆಗೊಂಡಳು. ಆಕೆಯ ಮೇಲೆ ತಪ್ಪನ್ನು ಹೊರಿಸಿ ಬಂಧನದಲ್ಲಿಟ್ಟಳು. ಒಂದು ದಿನ ವೀರಜಿನನು ಆ ಮಾರ್ಗವಾಗಿ ಬಂದನು. ಚಂದನೆ ಆ ಮುನಿಯನ್ನು ನಿಲ್ಲಿಸಿ ತನ್ನ ಪಾಲಿನ ಆಹಾರವನ್ನು ದಾನವಾಗಿ ಕೊಟ್ಟಳು. ಸ್ವೀಕರಿಸಿದ ಮುನಿಯು “ದಾನವು ಅಕ್ಷಯವಾಗಲಿ”ಯೆಂದನು. ಆಗ ಶೆಟ್ಟಿಯ ಮನೆಯಲ್ಲಿ ಪಂಚಾಶ್ಚರ್ಯಗಳಾದವು. ಇದನ್ನು ಕಂಡ ವೃಷಭದತ್ತನು ಚಂದನೆಯ ಕ್ಷಮೆಕೇಳಿ ಚೇಟಕ ಮಹಾರಾಜನಿಗೆ ಒಪ್ಪಿಸಿದನು.

ವೀರಮುನೀಂದ್ರನು ಹನ್ನೆರಡುವರ್ಷಕಾಲ ಸಂಚರಿಸಿ ಜೃಂಭಕಾಪುರದ ರಿಜು ಕೊಲೆಯೆಂಬ ನದಿಯ ತೀರಕ್ಕೆ ಬಂದನು. ಅಲ್ಲಿನ ವಿಶಾಲವೃಕ್ಷದ ಕೆಳಗೆ ಇದ್ದ ದೊಡ್ಡ ಬಂಡೆಯ ಮೇಲೆ ಪೂರ್ವಾಭಿಮುಖವಾಗಿ ಪ್ರತಿಮಾಯೋಗದಲ್ಲಿ ನಿಂತನು. ಮನಸ್ಸು ಧ್ಯಾನದಲ್ಲಿ ಲೀನವಾಯಿತು. ಕರ್ಮ ಸೋರಿತು. ಸಮ್ಯಕ್ತ್ವ ನೆಲಸಿತು. ವೈಶಾಖ ಶುದ್ಧ ದಶಮಿ ಶುಭದಿನ ಹಸ್ತ ನಕ್ಷತ್ರದಲ್ಲಿ ಕೇವಲಜ್ಞಾನ ಲಭಿಸಿತು. ಅವಧಿಜ್ಞಾನದಿಂದ ಈ ವಿಚಾರವನ್ನು ತಿಳಿದ ಇಂದ್ರನು ಇಂದ್ರಾಣಿಯೊಡನೆ ಬಂದು ವೈಭವದಿಂದ ಚತುರ್ಥಕಲ್ಯಾಣವನ್ನು ನಡೆಸಿ ಸ್ತುತಿಸಿದನು.

ಇಂದ್ರನಿಗೆ ಸಮವಸರಣ ಮಂಟಪದಲ್ಲಿದ್ದ ತೀರ್ಥಂಕರನ ದಿವ್ಯವಾಣಿಯನ್ನು ಕೇಳುವ ಬಯಕೆಯಾಯಿತು. ಗೌತಮಪುರಕ್ಕೆ ಕಪಟವೇಷದಿಂದ ಹೋಗಿ ಗೌತಮಗಣಧರನನ್ನು ಕರೆತಂದನು. ವಾದದಲ್ಲಿ ವೀರಜಿನನನ್ನು ಸೋಲಿಸಲು ಬಂದ ಗೌತಮಗಣಧರ ಸೋತು ಗತಾಹಂಕರಾನಾದನು. ವೀರಜಿನನ ವಾಣಿಯ ಅಕ್ಷಯಸುಖವನ್ನು ಬೇಡಿದನು. ಮರು ನಿಮಿಷದಲ್ಲಿಯೇ ಗೌತಮಗಣಧರನಿಗೆ ಸಪ್ತರ್ಧಿಗಳಸಂಪತ್ತು ಚತುರ್ಜ್ಞಾನಗಳವಿಲಾಸ ಕರಗತವಾಯಿತು. ಅವನ ಪ್ರಾರ್ಥನೆಗಣುಗುಣವಾಗಿ ಶ್ರಾವಣ ಬಹುಳ ಪಾಡ್ಯಮಿಯಂದು ತೀರ್ಥಂಕರನ ದಿವ್ಯವಾಣಿ ಹೊರಹೊಮ್ಮಿತು. ಅದನ್ನು ಗೌತಮಗಣಧರನು ಗ್ರಹಿಸಿ ಸಂಸ್ಕೃತದಲ್ಲಿ ರಚಿಸಿದನು. ಭಕ್ತರ ಇಷ್ಟಾರ್ಥ ಸಂದಿತು.

ಜಿನನ ವಿಹಾರ ಪ್ರಾರಂಭವಾಯಿತು. ಜಿನನು ರಾಜಗೃಹವನ್ನು ಸಮೀಪಿಸುತ್ತಿದ್ದಂತೆ ಮಗಧದರಾಜ ಶ್ರೇಣಿಕನು ರಾಣಿ ಚೇಳಿನಿಯೊಡನೆ ಸಮವಸರಣ ಮಂಟಪವನ್ನು ಪ್ರವೇಶಿಸಿದನು. ವೀರಜಿನನನ್ನು ಪೂಜಿಸಿದನು. ತನ್ನ ಪೂರ್ವಭವವನ್ನು ತಿಳಿಸುವಂತೆ ಪ್ರಾರ್ಥಿಸಿದನು. ಜಿನನು ಹೇಳತೊಡಗಿದನು-

ವಿಂಧ್ಯಪರ್ವತದಲ್ಲಿ ಅರಣ್ಯದಲ್ಲಿ ಖದಿರಸಾರನೆಂಬ ಬೇಡ ಮದ್ಯಮಾಂಸವನ್ನು ಸೇವಿಸುತ್ತ ಪ್ರಾಣಿಹಿಂಸೆ ಮಾಡುತ್ತ ಇದ್ದನು. ಅವನಿಗೆ ತ್ರಿಗುಪ್ತಿಯೆಂಬ ಮುನಿ ಧರ್ಮಬೋಧೆ ಮಾಡಿ ಕಾಗೆಯ ಮಾಂಸವನ್ನು ತಿನ್ನದ ವ್ರತವನ್ನು ಕೊಟ್ಟನು. ಅದನ್ನು ಆಚರಿಸುತ್ತಿದ್ದ ಬೇಡನಿಗೆ ನಸೆಗುತ್ತವೆಂಬ ರೋಗ ಪ್ರಾಪ್ತವಾಯಿತು. ಕಾಗೆಯ ಮಾಂಸ ಅದಕ್ಕೆ ಅತ್ಯುತ್ತಮ ಔಷಧಿ. ಖದಿರಸಾರನ ಮೈದುನ ಸೂರವೀರ ಕಾಗೆಮಾಂಸವನ್ನು ತಿನ್ನದ ವ್ರತವನ್ನು ತನ್ನ ಭಾವನಿಂದ ಬಿಡಿಸಲು ಬರುತ್ತಿದ್ದನು. ದಾರಿಯಲ್ಲಿ ಆಳುತ್ತಿದ್ದ ಯಕ್ಷಿಯೊಬ್ಬಳು ಅವನನ್ನು ತಡೆದಳು. ಕಾಕಮಾಂಸ ವಿರತಿವ್ರತದಿಂದ ಖದಿರಸಾರ ಮುಂದಿನ ಜನ್ಮದಲ್ಲಿ ನನ್ನ ಪತಿಯಾಗುತ್ತಾನೆ. ಅದು ಕೆಟ್ಟರೆ ತಾನು ಅದರಿಂದ ವಂಚಿತಳಾಗುವೆಯೆಂದಳು. ಸೂರವೀರನು ಆಕೆಯ ಅಭೀಷ್ಟವನ್ನು ಸಲ್ಲಿಸುವುದಾಗಿ ಹೇಳಿ ತನ್ನ ಭಾವ ಖದಿರಸಾರನ ಬಳಿಗೆಬಂದನು. ಖದಿರಸಾರ ತನ್ನ ವ್ರತವನ್ನು ಬಿಡದೆ ಸತ್ತು ದೇವತೆಯಾಗಿ ಅನುಭವಿಸಿದನು. ಅನಂತರ ರಾಜ ಕುಣಿಕ ಮತ್ತು ಆತನ ಹೆಂಡತಿ ಶ್ರೀಮತಿಗೆ ಶ್ರೇಣಿಕನೆನ್ನುವ ಮಗನಾಗಿ ಹುಟ್ಟಿದನು. ಈ ವಿಚಾರವನ್ನು ತಿಳಿಸಿದ ಜಿನನು ಮುಂದಿನ ಹಲವಾರು ಜನ್ಮಗಳಾದ ಮೇಲೆ ಉತ್ಸರ್ಪಿಣಿಕಾಲದಲ್ಲಿ ಶ್ರೇಣಿಕನು ಪ್ರಥಮತೀರ್ಥಂಕರ ನಾಗುವನೆಂಬುದನ್ನು ತಿಳಿಸಿದನು.

ವರ್ಧಮಾನ ಜಿನನು ಪರಿವಾರ ಸಮೇತನಾಗಿ ಮೂವತ್ತು ವರ್ಷ ಕಾಲ ಧರ್ಮಕ್ಷೇತ್ರಗಳಲ್ಲಿ ವಿಹರಿಸಿದನು. ತನ್ನ ಆಯಸ್ಸು ಮೂರುವರ್ಷ ಎಂಟುತಿಂಗಳು ಹದಿನೈದುದಿವಸವಿರುವಾಗ ಪಾವಾಪುರದ ಹೊರವಲಯಕ್ಕೆ ಬಂದನು. ಅಲ್ಲಿನ ವಿಶಾಲವಾದ ಒಂದು ಬಂಡೆಯ ಮೇಲೆ ಪ್ರತಿಮಾಯೋಗದಲ್ಲಿ ನಿಂತು ಆರ್ಷಗುಣಗಳನ್ನು ತನ್ನದನ್ನಾಗಿ ಮಾಡಿಕೊಂಡನು. ಕಾರ್ತಿಕ ಮಾಸ ಸಿತಪಕ್ಷದ ಚತುರ್ದಶಿಯಂದು ಬೆಳಗಿನ ಜಾವದಲ್ಲಿ ಮೋಕ್ಷ ಲಕ್ಷ್ಮೀನಿಧಿಯಾದನು. ದೇವೇಂದ್ರನು ಚುತರ್ನಿಕಾಯದೇವತೆಗಳೊಡನೆ ಅಲ್ಲಿಗೆ ಬಂದು ಮೋಕ್ಷಕಲ್ಯಾಣ ಮಹಾಪೂಜೆಯನ್ನು ಮಾಡಿದನು. ಅಂದಿನಿಂದ ಕಾರ್ತಿಕ ಶುದ್ಧ ಚತುರ್ದಶಿಯಂದು ದೀಪೋತ್ಸವವನ್ನು ಆಚರಿಸಲು ತೊಡಗಿದರು. ತೀರ್ಥಂಕರನು ನಿಂತ ನೆಲವನ್ನು ದೇವತೆಗಳು ಭಕ್ತಿಯಿಂದ ಪೂಜಿಸಿ ತಮ್ಮ ತಮ್ಮ ಸ್ಥಳಗಳಿಗೆ ಹಿಂದಿರುಗಿದರು. ಗೌತಮಯತಿಯು ತೀರ್ಥಂಕರನ ಸ್ಥಾನದಲ್ಲಿ ಧರ್ಮಬೋಧೆ ಮಾಡುತ್ತ ಹನ್ನೆರಡು ವರ್ಷ ಕಳೆದು ಮೋಕ್ಷಲಕ್ಷ್ಮೀರಮಣನಾದನು.

ವೀರ, ವರ್ಧಮಾನ, ಸನ್ಮತಿ, ಮಹಾವೀರನೆನ್ನುವ ಹೆಸರುಗಳಿಂದ ಪ್ರಸಿದ್ಧನಾದ ವರ್ಧಮಾನನನ್ನು-

ವಸುಧಾಜನಮನವರತಂ
ಸ್ವಸಮೀಹಿತ ಸಕಲಹಿಮನೆಸಗುವ ಜಿನನೊಳ್
ವಸುಧೈಕಬಾಂಧವಾಖ್ಯೆಯ
ನಸಮೋತ್ಸವದಿಂದೆ ಕೀರ್ತಿಸಿತ್ತಭಿನುತಮಂ || ೧೪೭೩ ||

ಎಂದು ಹೇಳುವಲ್ಲಿ ವಸುಧೈಕಬಾಂಧವನಾದ ರೇಚಣನನ್ನು ವರ್ಧಮಾನನೊಡನೆ ಸಮೀಕರಿಸಿರುವುದು ಕಂಡಬರುತ್ತದೆ.

ಕಾವ್ಯಸಮೀಕ್ಷೆ

ಆಚಣ್ಣನಿಗಿಂತ ಪೂರ್ವದಲ್ಲಿ ಪ್ರಾಕೃತ, ಸಂಸ್ಕೃತ, ಅಪಭ್ರಂಶ ಭಾಷೆಗಳಲ್ಲಿ ವರ್ಧಮಾನಸಾಹಿತ್ಯ ವಿಪುಲವಾಗಿ ರಚಿತವಾಗಿದೆ. ಆಚಣ್ಣನು ಉತ್ತರಪುರಾಣ, ಅಸಗನ ವರ್ಧಮಾನಪುರಾಣ ಮತ್ತು ನಾಗವರ್ಮನ ವರ್ಧಮಾನ ಪುರಾಣಗಳನ್ನು ತನ್ನ ಕೃತಿಗೆ ಆಕರವನ್ನಾಗಿ ಮಾಡಿಕೊಂಡಿರುವುದನ್ನು ಕಾಣಬಹುದಾಗಿದೆ. ವರ್ಧಮಾನನ ಭವಾವಳಿಗಳನ್ನು ನಿರೂಪಿಸುವಾಗ ಈ ಅಂಶವನ್ನು ಗಮನಿಸಬಹುದಾಗಿದ್ದು ಅದು ಹೀಗಿದೆ-

ಹರಿಯಾದೈ ದೇವನಾದೈ ಖಚರರಮಣನಾದೈ ಮರುನ್ಮುಖ್ಯನಾದೈ
ಹರಿಷೇಣಾಭಿಖ್ಯನಾದೈ ತ್ರಿದಿವಜನಿತನಾದೈ ಸುಚಕ್ರೇಶನಾದೈ
ಸುರನಾದೈ ನಂದನಾದೈ ಕ್ಷಿತಿತಳಪತಿಯಾದೈ ನಿಳಿಂಪೇಶನಾದೈ
ವರವೀರಸ್ವಾಮಿಯಾದೈ ಬೞಿಕ ಶಿವಗತಿಶ್ರೀಶನಾದೈ ಮಹಾತ್ಮಾ || ೧೬೭೭ ||

ಎನ್ನುವ ಆನುಪೂರ್ವಿಯನ್ನು ಉತ್ತರಪುರಾಣ, ಅಸಗನ ವರ್ಧಮಾನ ಪುರಾಣ, ನಾಗವರ್ಮನ ವರ್ಧಮಾನ ಪುರಾಣಗಳಲ್ಲಿರುವಂತೆಯೇ ಆಚಣ್ಣನು ನಿರ್ವಹಿಸಿದ್ದಾನೆ.

ಉತ್ತರ ಪುರಾಣ ಮತ್ತು ಅಸಗನನ್ನು ನಾಗವರ್ಮ ಆಧರಿಸಿರುವುದರಿಂದ ಆಚಣ್ಣನಲ್ಲಿಯೂ ಈ ಕೃತಿಗಳ ಪ್ರಭಾವ ಕಂಡುಬರುತ್ತದೆ. ನಾಗವರ್ಮನನ್ನು ಹೆಜ್ಜೆ ಹೆಜ್ಜೆಗೂ ಆಚಣ್ಣ ಅನುಸರಿಸಿದ್ದಾನೆ. ನಾಗವರ್ಮನ ವರ್ಧಮಾನ ಪುರಾಣದ ೭-೪೨ನೆಯ ಪದ್ಯ-

ಪದಿನಾಲ್ಕು ಸಾಗರೋಪಮ
ಮದು ಪರಮಾಯುಃಪ್ರಮಾಣಮನಿತೆ ಸಹಸ್ರಾ
ಬ್ದದೊಳೊರ್ಮೆ ನೆನೆವನುಣಿಸಂ
ಮುದಮೊದವಿರೆ ಸುಯ್ವನೇೞುತಿಂಗಳ್ಗಮರಂ ||

ಎನ್ನುವುದು ಯಾವ ಬದಲಾವಣೆ ಇಲ್ಲದೆ ಆಚಣ್ಣನಲ್ಲಿ ೧೨-೭೬ನೆಯ ಪದ್ಯವಾಗಿದೆ. ಪಂಪ ಮತ್ತು ರನ್ನರಿಂದ ಪ್ರಭಾವಿತವಾದ ನಾಗವರ್ಮನ ವರ್ಧಮಾನ ಪುರಾಣದ ೫-೧೧ನೆಯ ಪದ್ಯ-

ಹಾ ಮನುವಂಶರೋಹಣಮಹಾಮಣಿ ಹಾ ಮಹನೀಯ ರಾಜವೃಂ
ದಾಮಕರಂದ ಹಾ ನಯವಿಭೂಷಣ ಹಾ ಗುಣಧಾಮ ಹಾ ವಿದ
ಗ್ಥಾಮಣಿ ಹಾ ಮಹಾಂಸಹಯಕಂಧರ ಗಂಧಗಜೇಂದ್ರ ಕೇಸರೀ ||

ಎನ್ನುವುದು ಆಚಣ್ಣನ-

ಹಾ ಹಾ ಮನುಕುಲಮಂಡನ
ಹಾ ಹಾ ಸುರಖಚರಮನುಜಚೂಡಾರತ್ನಾ
ಹಾ ಹಾ ಗುರುಜನವತ್ಸಳ
ಹಾ ಹಾ ಬುಧಬಂಧುವಂದಿಕಳ್ಪಮಹೀಜಾ || ೬೨ ||

ಎನ್ನುವ ಪದ್ಯದ ಮೇಲೆ ಪ್ರಭಾವ ಬೀರಿರುವುದನ್ನು ಕಾಣಬಹುದು. ಹೀಗೆಯೇ ಆಚಣ್ಣನ ಕಾವ್ಯದ ಉದ್ದಕ್ಕೂ ನಾಗವರ್ಮನ ಪ್ರಭಾವವಿದೆ.

ಪುರಾಣಕಾರರು ವಸ್ತುವಿಗೆ ನಿಷ್ಠವಾಗಿರಬೇಕಾಗುತ್ತದೆ. ಯಾವುದೇ ವಿಧವಾದ ಬದಲಾವಣೆಗೆ ಅವಕಾಶವಿರುವುದಿಲ್ಲ. ಹಾಗಾದಲ್ಲಿ ಧರ್ಮಕ್ಕೆ ಅಪಚಾರವನ್ನು ಎಸಗಿದಂತಾಗುತ್ತದೆ. ಆದುದರಿಂದ ಕ್ರಮವಿಪರ್ಯವಾಗದ ಹಾಗೆ ಎಚ್ಚರಿಕೆಯನ್ನು ವಹಿಸಬೇಕಾಗಿರುತ್ತದೆ. ದಿಗಂಬರಜೈನ ಪುರಾಣಕಾರಗಿಗೆ ಜಿನಸೇನ ಗುಣಭದ್ರರು ತಮ್ಮ ಮಹಾಪುರಾಣದಲ್ಲಿ ಒಂದು ಚೌಕಟ್ಟನ್ನು ಹಾಕಿಕೊಟ್ಟರು. ಆ ಚೌಕಟ್ಟಿನ ಪರಿಧಿಯಲ್ಲಿ ಜೈನಪುರಾಣಕಾರರು ವ್ಯವಹಿರಿಸಿರುವುದು ಕಂಡುಬರುತ್ತದೆ.

ಪುರಾಣದ ವಸ್ತುವನ್ನು ಕಾವ್ಯರಚನೆಯ ಸಂದರ್ಭದಲ್ಲಿ ನಿರ್ವಹಿಸುವಲ್ಲಿ ಕಾವ್ಯಾಂಗಗಳಾದ ಅಷ್ಟಾದಶವರ್ಣನೆಗಳನ್ನು ಬಳಸಿಕೊಳ್ಳುವ ಅವಕಾಶವಿರುತ್ತದೆ. ಆ ಸಂದರ್ಭದಲ್ಲಿ ಕವಿಯ ವ್ಯಕ್ತಿವಿಶಿಷ್ಟತೆ ವ್ಯಕ್ತವಾಗುತ್ತದೆ.

ಅಸಗನಲ್ಲಿ ದ್ವಾರಪಾಲಕನ ವೃದ್ಧಾವಸ್ಥೆ ವಿಶ್ವಭೂತಿಯ ವೈರಾಗ್ಯಕ್ಕೆ ಕಾರಣವಾಗುವ ಸಂದರ್ಭ ಹೀಗಿದೆ-

ಸಕಲೇಂದ್ರಿಯಶಕ್ತಿ ಸಂಪದಾಯಾಂ
ಜರಸವಿಪ್ಲುತಯಾ ನಿರಾಕೃತೋಪಿ
ಜಹಾತಿ ತಥಾಪಿ ಜೀವಿತಾಶಾಂ
ಖಲುವೃದ್ದಸ್ಯವಿವರ್ಧ್ವತೇ ಹಿ ಮೋಹಃ (೧೯)

ಆಚಣ್ಣನಲ್ಲಿ ಇದು ವಿಸ್ತಾರಗೊಂಡಿದ್ದು-

ಪಡಿಯಱನೊರ್ವನುರ್ವಿದ ಜರಾರುಜೆಯಿಂ ಶ್ಲಥಜೀರ್ಣಮಪ್ಪೊಡಲ್
ಕೆಡೆವವೊಲಾಗೆ ಬಾಗಿಮಿಗೆ ಕೆಮ್ಮಿ ಬೞಲ್ದಡಿಗೊರ್ಮೆ ನಿಂದು ಬಿ
ೞ್ಪೆಡೆಯಿದು ತನ್ನ ಮುನ್ನೆಸೆವಜವ್ವನಮೆಂದಱ ಸುತ್ತುಮಿರ್ಪವೊಲ್
ನಡುಗುತುಮಾನತೋನ್ನತ ಮುಖಂ ಬರುತಿರ್ಪುದುಮಾಗಳಾತನಂ || ೬೬ ||

ಎಂದಾಗಿದೆ.

ಕಾಮರೂಪರಾಜನಿಗೆ ಲೇಖವಾಹಕನಾಗಿದ್ದ ವಿಶಾಖನಂದಿ ಬರುವುದು ನಾಗವರ್ಮನಲ್ಲಿ-

ಉಡೆದೋಲುಂ ಪಣೆಕಟ್ಟುಂ
ಮಡಮೇಱಿಸಿ ಮೆಟ್ಟಿದೆಕ್ಕವಡಮಂ ಕೆಯ್ಯೊಳ್
ಪಿಡಿದಿರ್ದಕುಂಚಮಂ ತನ
ಗೊಡಂಬಡಂ ಬಡೆಯೆ ಲೇಖವಾಹಾಕೃತಿಯೊಳ್ || ೪೫ ||

ಈ ಭಾವ ಆಚಣನಲ್ಲಿ ಎಡೆಪಡೆದಿದ್ದು ನಾಗವರ್ಮನಿಗೆ ಋಣಿಯಾಗಿರುವುದನ್ನು

ಸಿರದೊಳಮರ್ದೊಲೆ ಕೌಂಕುಳ
ಕರಪಾಳಿಕೆ ಮೆಟಿದೆಕ್ಕಡಂ ತೊಟ್ಟೆಸೆವಾ
ಕರಿಯನಡುಕಟ್ಟಿನಂಗಿಗೆ
ವೆರಸಿದ ತಲ್ಲೇಖವಾಹನುನ್ನತದೇಹಂ || ೧೩ ||

“ಅಂತಪುಂಕಿ ಬೆನ್ನಟ್ಟುವ ಕಿಶೋರಕೇಸರಿಯಂ ಕಂಡ ವನಹರಿಣನಂತೆ” ಎಂದು ನಾಗವರ್ಮ (೨-೩೩ವ)ನಲ್ಲಿ ಬರುವ ಒಂದು ಮಾತನ್ನು ತೆಗೆದುಕೊಂಡು ಆಚಣ್ಣ-

ಸಿಂಗದಶಿಶುವಂ ಕಂಡ ಕು
ರಂಗದ ಮಱಿಯಂತೆ ಬೆದಱಿ ದೆಸೆಗೆಟ್ಟು ಕರಂ
ಬೆಂಗೊಟ್ಟೋಡಿದನವನು
ತ್ತುಂಗಕರಂಗಳ ಮರಂಗಳೆಡೆದೆ ಱಪುಗಳೊಳ್ || ೪೮ ||

ಎನ್ನುವ ಸೊಗಸಾದ ಕಂದಪದ್ಯವನ್ನು ರಚಿಸಿದ್ದಾರೆ.

ಅಸಗ, ನಾಗವರ್ಮ, ಆಚಣ್ಣನ ಕೃತಿಗಳ ಅಧ್ಯಯನವನ್ನು ಸವಿಸ್ತಾರವಾಗಿ ಮಾಡಿರುವ ಡಾ. ವೈ.ಸಿ. ಭಾನುಮತಿಯವರು “ಆಚಣ್ಣ ಕಾವ್ಯನಿರ್ಮಾಣ ಮಾಡುವ ಹೊತ್ತಿಗಾಗಲೆ ವರ್ಧಮಾನ ಪುರಾಣ ಕನ್ನಡದಲ್ಲಿ ಸ್ವರೂಪು ಪಡೆದಿದ್ದರಿಂದ ನಾಗವರ್ಮ ಕಾವ್ಯಕಟ್ಟುವ ಸಂದರ್ಭದಲ್ಲಿ ಎದುರಿಸಿದ ಸವಾಲುಗಳಾವುವೂ ಈತನ ಮುಂದಿರಲಿಲ್ಲ. ಆ ವೇಳೆಗಾಗಲೆ ನಾಗವರ್ಮ ವರ್ಧಮಾನ ಕಥೆಯನ್ನು ಪುರಾಣದ ಚೌಕಟ್ಟಿಗೆ ಅಳವಡಿಸಿದ್ದ ; ಕಥಾಸಂವಿಧಾನ ರೂಪಿಸಿದ್ದ ; ಅಷ್ಟಾದಶವರ್ಣನೆಗಳನ್ನು ಸೇರಿಸಿದ್ದ. ಹೀಗೆ ಸಿದ್ಧವಾಗಿದ್ದ ಅಡುಗೆಯನ್ನು ಕನ್ನಡದ ಜಾಯಮಾನಕ್ಕೆ ತಕ್ಕಂತೆ ಒಪ್ಪ ಓರಣದಿಂದ ಉಣಬಡಿಸಿದ್ದು ಆಚಣ್ಣನ ಸಾಧನೆ” ಎಂದಿದ್ದಾರೆ. (ಕನ್ನಡದಲ್ಲಿ ವರ್ಧಮಾನ ಸಾಹಿತ್ಯ, ಪುಟ. ೪೦೧)

ಆಚಣ್ಣನು ನಾಗವರ್ಮನ್ನು ವಸ್ತುವಿಗೆ ಆಧರಿಸಿದಂತೆಯೆ ಭಾಷೆ ಮತ್ತು ಶೈಲಿಗೆ ಆಧರಿಸಿದ್ದಾನೆನ್ನುವುದು ನಿಜವಾದರೂ ತನ್ನದೇ ಆದ ಛಾಪನ್ನು ಮೂಡಿಸುವಲ್ಲಿ ಸಫಲವಾಗಿದ್ದಾನೆ. ಆಚಣ್ಣನು ನಾಗವರ್ಮನ ಪಡಿಯಚ್ಚಲ್ಲ ಎನ್ನುವುದು ಕೃತಿ ಸಮೀಕ್ಷೆಯಿಂದ ತಿಳಿಯುತ್ತದೆ. ಉಭಯ ಭಾಷಾ ಕವಿಯಾದ ಆಚಣ್ಣ ಸಂಸ್ಕೃತ, ಕನ್ನಡ ಮತ್ತು ಸಂಸ್ಕೃತಕನ್ನಡ ಭಾಷೆಗಳ ಹೊಂದಾಣಿಕೆಯನ್ನು ನಿರ್ವಹಿಸಿದ್ದಾನೆ. ಸಂಸ್ಕೃತ ಭಾಷೆಯ ಪ್ರಯೋಗಕ್ಕೆ-

ಕ್ರಮವಿಕ್ಷೇಪಕ್ವಣನ್ಣೂಪುರವಿರವ ಪುರಸ್ಸಾರಿ ಸಜ್ಜಸ್ಮರಂಸ್ಮೇ
ರಮುಖೇಂದುದ್ಯೋತ ಜಾತದ್ಯುತಿ ಮಿಲಿತ ಪದಾಲಕ್ತ ರಕ್ತೀಭವಶ್ಚಾ
ದ್ರಮ ಸಗ್ರಾವಾಂಗಣಂ ಭಂಗುರತರಳ ಕಟಾಕ್ಷಾಂಚಳೋರ್ದೀರ್ಣವಿದ್ದು
ದ್ಭ್ರಮವಿಭ್ರಾಮ್ಯನ್ನರಾಳಂ ಸುಱಿವುದು ನೃಪತಿಪ್ರೇಷ್ಯಯೋಷಿತ್ಕದಂಬಂ || ೭೪ ||

ಆಚಣ್ಣನ ಕನ್ನಡ ಭಾಷೆಯ ಪ್ರಯೋಗಕ್ಕೆ-

ಎಲೆ ತಮ್ಮ ಗಿಳಿಯ ಚಪಳತೆ
ನೆಲೆವೆತ್ತುದು ನಿನ್ನೊಳಿನ್ನೆಗಂ ನಿನಗಿನಿತಂ
ಕಲಿಸಿದ ಕೋವಿದನಾವೊಂ
ಜಲಕ್ಕನಱಿಪೆಂಬುದು ಮುಗುಳ್ನಗೆ ನಗುತಂ || ೧೬೧೧ ||

ಈತನ ಕನ್ನಡ ಕವಿತಾಶಕ್ತಿಗೆ ೧೩-೫೧ ರಗಳೆ ಅತ್ಯುತ್ತಮ ನಿದರ್ಶನವಾಗಿದೆ.

ಸಂಸ್ಕೃತ ಮತ್ತು ಕನ್ನಡ ಭಾಷೆಗಳ ಸಮ್ಮಿಶ್ರಣದ ಪ್ರಯೋಗಕ್ಕೆ-

ಜಿನಪತಿ ಕಾಳಿಕಾರಹಿತ ಕಾಂಚನದಂತೆ ನಿರಸ್ತಕರ್ಮಬಂ
ಧನನೆಸೆದಿರ್ದನಾಂ ದುರಿತ ಬಂಧದೆ ಕಾಳಿಕೆಪರ್ವಿದೊಂದು ಕಾಂ
ಚನದವೊಲಿರ್ದೆನೀ ದುರಿತಮೀ ತೆಱದಿಂದಮಗಲ್ವುದುಂ ಜಿನೇಂ
ದ್ರನದೊರೆಯಪ್ಪೆನೆಂದು ತಿಳಿದಾತನೆ ದರ್ಶನಶುದ್ಧನುತ್ತಮಂ || ೧೧೧೦೦ ||

ಇವು ನಿದರ್ಶನ ಮಾತ್ರ. ಇಡೀಕೃತಿ ಈ ಬಗೆಯ ರಚನೆಗಳಿಂದ ತುಂಬಿ ಶೋಭಾಯಮಾನವಾಗಿದೆ.

ಆಮಳಕರಸದಿಂ ಕಷಾಯಿತಾಸ್ಯನಾದಂಗೆ ನೀರುಂ ಕ್ಷೀರರುಚಿಯಾಗಿ ತೋರ್ಪಂತೆ (೧೧-೬೫) ಧರೆಗೆ ಱಗದೆ ದೀಪವರ್ತಿನಿಧಿ ಸನ್ನಿಧಿಯೊಳ್ (೧೦-೩೩) ಪೊಸನೀರ ಮೀಂಗಳಂದದಿನಿದಿಱೇಱೆ (೯-೫೮) ತಲೆಕೆಳಗಾಗಿರ್ಪುವು ಬಾವಲಂತೆ (೧೧-೪) ಗರ್ದುಗಿನಕಾಯನೊಳಗು ಪೊಱಗಾಗಿ ಮಗುೞ್ಚಿದ ತೆಱದಿಂ (೧೧-೧೫) ಇಂತಹ ಪ್ರಯೋಗಗಳು ಗ್ರಂಥದುದ್ದಕ್ಕೂ ಕಂಡುಬರುತ್ತವೆ. ಇದರಿಂದ ಓದುಗನಿಗೆ ವಿಷಯಗ್ರಹಣ ಮಾಡಲು ಸಹಾಯವಾಗುತ್ತದೆ.

ಆಚಣ್ಣನ ವರ್ಧಮಾನಪುರಾಣದ ಹಸ್ತಪ್ರತಿಕಾರನು ಹಸ್ತಪ್ರತಿಯ ಅಂಚಿನಲ್ಲಿ ಬರೆದಿರುವ ಅಗುಂದಲೆ, ಅಡ್ಡಣ, ಗೞೆ, ತದೆ, ದಡಿ, ಅವಟೈಸು, ಗೊಂದಳಿಸು, ಪುಡುಕುನೀರ್, ಅಡಹಡಿಸು, ಮೆಟ್ಟಕ್ಕಿ, ಱೋಡಿಸು, ಬೈಸಿಕೆ, ಕಡಾರ, ತವಿಲ್, ದರವುರ ಮುಂತಾದ ದೇಸೀ ಶಬ್ದಗಳು ಗ್ರಂಥದಲ್ಲಿ ಎಡೆಪಡೆದು ಕೃತಿಗೆ ವಿಶಿಷ್ಟತೆಯನ್ನು ತಂದಿವೆ.

ಪ್ರಾಸಯಮಕಾದಿ ಅಲಂಕಾರಗಳು, ಉಪಮಾದಿ ಅರ್ಥಾಲಂಕಾರಗಳು ಈ ಕೃತಿಯಲ್ಲಿ ವಿಪುಲವಾಗಿ ಬಳಕೆಯಾಗಿವೆ. ದ್ವಕ್ಷರಿ (೭-೭೨) ಗತಪ್ರತ್ಯಾಗತ (೭-೩೫) ಮುಂತಾದ ಚಿತ್ರಕಾವ್ಯಗಳನ್ನು ರಚಿಸಿದ್ದಾನೆ.

ಛಂದೋನಿರ್ವಹಣೆಯಲ್ಲಿ ಖ್ಯಾತಕರ್ನಾಟಕಗಳಲ್ಲದೆ ದ್ರುತವಿಳಂಬಿತ, ಮಲ್ಲಿಕಾಮಾಲೆ, ಮಾಳಿನಿ, ಶಾರ್ಙ್ಗ, ಸ್ವಾಗತ, ಪೃಥ್ವೀ, ಹರಿಣಿ ; ರಥೋದ್ಧತೆ, ತರಳೆ, ಉತ್ಸವ, ಉಪಜಾತಿ ಮುಂತಾದ ಅಪೂರ್ವ ವೃತ್ತಗಳ ಬಳಕೆಯನ್ನು ಕಾಣಬಹುದು. ದೇಸೀಛಂದಸ್ಸುಗಳಾದ ರಗಳೆ, ತ್ರಿಪದಿಗಳ ರಚನೆಯೂ ಉಂಟು.

ಸದಳಂಕಾರದಗಾರಮುದ್ಘರಸ ಭಾವಾನೀಕದೋಕಂ ಸದ
ರ್ಥದ ಸಾರ್ಥಂ ವರಶಬ್ದವೃಂದದ ವಿರಾಜನ್ಮಂದಿರಂ ನಾಡೆಯುಂ
ಮೃದುಸಂದರ್ಭಗರ್ಭಮಿಂತಿದೆನಲ್ ಸಾಲ್ದಿರ್ದ ಕಾವ್ಯಂ ಸಭಾ
ಸದರಂತಃಕರಣಕ್ಕದೇಂ ಕಱೆಯದೇ ಸೌಖ್ಯಾಮೃತಾಸಾರಮಂ || ೨೧ ||

ಎನ್ನುವುದು ಆಚಣ್ಣ ಕಂಡ ಕಾವ್ಯಸ್ವರೂಪ. ಈ ಆದರ್ಶಕ್ಕೆ ಅನುಗುಣವಾಗಿ ನಿಲ್ಲುತ್ತದೆ. ಆಚಣ್ಣನು ವರ್ಧಮಾನ ಪುರಾಣ.

ಗ್ರಂಥಸಂಪಾದನೆ

ಆಚಣ್ಣನ ವರ್ಧಮಾನ ಪುರಾಣಂ ಮದರಾಸು ವಿಶ್ವವಿದ್ಯಾನಿಲಯದ ಮೂಲಕ ೧೯೫೨ರಲ್ಲಿ ಪ್ರಕಟವಾಗಿದೆ. ಇದರ ಹಸ್ತಪ್ರತಿ “ಶಕವರ್ಷ ೧೩೫೧ನೆಯ ಕೀಲಕ ಸಂವತ್ಸರದ ಚೈತ್ರ ಶುದ್ಧ ೭” ಎಂದರೆ ಕ್ರಿ.ಶ. ೧೪೩೯ರಲ್ಲಿ ಸಿದ್ಧವಾಗಿದೆ. ಗ್ರಂಥಪಾತಗಳನ್ನು ತುಂಬಿ ಸ್ಖಾಲಿತ್ಯಗಳನ್ನು ಸರಿಪಡಿಸಿ ಏಕೈಕ ಹಸ್ತಪ್ರತಿಯಿಂದ ಸಂಪಾದಿಸಲಾಗಿದೆ. ಸಂಪಾದಕರ ಪಾಂಡಿತ್ಯ ಪರಿಶ್ರಮಗಳು ನಿಚ್ಚಳವಾಗಿ ಕಂಡುಬರುತ್ತವೆ.

ಮೂಡಬಿದಿರೆಯ ಶ್ರೀ ದಿಗಂಬರ ಜೈನ ಧರ್ಮಶಾಲೆಯಲ್ಲಿ ಲಭ್ಯವಾಗಿ ಬಿ.ಎಸ್‌. ಸಣ್ಣಯ್ಯನವರು ಸಂಪಾದಿಸಿರುವ ಎರಡನೆಯ ನಾಗವರ್ಮನ ಪುರಾಣದ ಜೊತೆ ಅಗ್ಗಳನ ಚಂದ್ರಪ್ರಭ ಪುರಾಣ, ಆಚಣ್ಣನ ವರ್ಧಮಾನ ಪುರಾಣ ಮತ್ತು ರನ್ನನ ಅಜಿತನಾಥ ಪುರಾಣಗಳು ಸೇರಿವೆ. ಅಲ್ಲಿರುವ ಆಚಣ್ಣನ ವರ್ಧಮಾನ ಪುರಾಣದ ಪ್ರತಿಯ ವಿವರಗಳು ಹೀಗಿವೆ- “ಶ್ರೀ ಜಯಾಭ್ಯುದಯ ಶಾಲಿವಾಹನ ಶಕವರ್ಷ ೧೪೯೧ನೆಯ ಶುಕ್ಲಸಂವತ್ಸರದ ಅಶ್ವೀಜಮಾಸದ ಕೃಷ್ಣಪಕ್ಷ ದಶಮಿ ಬುಧವಾರದಲ್ಲು ವಟಗ್ರಾಮದ ಮಾಣಿಕಸ್ವಾಮಿಯ ಚೈತ್ಯಾಲಯದಲ್ಲಿ ಲಕ್ಷ್ಮೀಸೇನ ಭಟ್ಟಾರಕದೇವರುಗಳ ಪ್ರಿಯಶಿಷ್ಯರು ಪಾಯಣ್ಣಗಳು ಶ್ರೀವರ್ಧಮಾನ ಪುರಾಣವನ್ನು ಬರದು ಮುಗಿದುದಕ್ಕೆ ಮಹಾಶ್ರೀ” ಎಂದರೆ ಕ್ರಿ.ಶ. ೧೫೬೯ರಲ್ಲಿ ಈ ಹಸ್ತಪ್ರತಿಸಿದ್ಧವಾಗಿದೆ. ಈ ಕಾಗದದ ಹಸ್ತಪ್ರತಿಯನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ.

೧೯೭೪ರಲ್ಲಿ ಧಾರವಾಡದಿಂದ ತಾವು ಸಂಪಾದಿಸಿದ ‘ಆಚಣ್ಣ ಕವಿಯ ವರ್ಧಮಾನ ಪುರಾಣ’ದಲ್ಲಿ ಬಿ.ಬಿ. ಮಹೀಶವಾಡಿಯವರು ತಮಗೆ ಆಚಣ್ಣನ ವರ್ಧಮಾನ ಪುರಾಣದ ಹೊಸ ಹಸ್ತಪ್ರತಿಯೊಂದು ದೊರೆತಿದೆಯೆಂದಿದ್ದಾರೆ. ಆ ಹಸ್ತಪ್ರತಿಯ ವಿವರಗಳು ಲಭ್ಯವಿಲ್ಲ.

ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ಭಂಡಾರದಲ್ಲಿ ಕೆ.ಎ. ೫ ಸಂಖ್ಯೆಯ ಕಾಗದದ ಹಸ್ತಪ್ರತಿ ಇದೆ. ಇದರ ಮೂಲಪ್ರತಿಯ ಬಗ್ಗೆ ವಿವರಗಳಿಲ್ಲ. ಮದರಾಸು ವಿಶ್ವವಿದ್ಯಾನಿಲಯದ ಪರಿಷ್ಕರಣದಲ್ಲಿ ಗ್ರಂಥಪಾತವನ್ನು ತುಂಬಿ ಚೌಕಕಂಸವನ್ನು ಹಾಕಿದೆ. ಇಲ್ಲಿ ಅದೇ ಪಾಠಗಳಿದ್ದರೂ ಚೌಕಕಂಸವಿಲ್ಲ.

ಈ ಹಸ್ತಪ್ರತಿಯ ಪಾಠವೈಶಿಷ್ಟ್ಯಗಳು-

೧. ವ || ಅಂತು ಮಲ್ಲದೆಯುಂ, ಚಂ || ಎಳವಿಸಿಲಂ ವಿಯಚ್ಚರಕುಮಾರ (೫-೨೫) ವಚನ ಮತ್ತು ಪದ್ಯವಿಲ್ಲ.

೨. ಎಂಬುದುಮದರ್ಕನುರೂಪಮಾಗಿ ನಿರ್ಜಿತಾರಾತಿಸೇನನಪ್ಪ ಜಯಸೇನನಿಂತೆಂದ,- ಕಂ || ಸುರಪಥದೊಳೊಡ್ಡಿದಹಿತನ – ಎನ್ನುವ ವಚನ ಮತ್ತು ಪದ್ಯವಿಲ್ಲ.

೩. ಮುದ್ರಿತ ಪ್ರತಿಯಲ್ಲಿ ೮-೫೨ನೆಯ ಪದ್ಯ ಮತ್ತು ವಚನಗಳ ಗ್ರಂಥಪಾತವಾಗಿದ್ದು ಕೆ.ಎ. ೫ ಹಸ್ತಪ್ರತಿಯಲ್ಲಿಯೂ ಗ್ರಂಥಪಾತವಾಗಿದೆ. ಆದುದರಿಂದ ಆರಾಪ್ರತಿ ಮತ್ತು ಕೆ.ಎ. ೫ ಪ್ರತಿಗಳ ಮೂಲ ಒಂದೇ ಎಂದು ಭಾವಿಸಬಹುದಾಗಿದೆ.

೪. ೧೧-೪೭ ವಚನಲದಲ್ಲಿ “ಮಂ ಮಾಣದೆ…ಶ್ರೋತೇಂದ್ರಿಯಮ” ಎನ್ನುವ ಹೆಚ್ಚಿನ ಪಾಠವಿದೆ.

೫. ೧೧-೬೨ ವಚನದಲ್ಲಿ “ತತ್ತ್ವವಿಚಾರದೊಳ್…. ತಪಸ್ಸಿದ್ಧಿಯುಮಂ” ಎನ್ನುವ ಭಾಗ ಕೆ.ಎ. ೫ರಲ್ಲಿಲ್ಲ.

೬. ಇದು ಪ್ರಾಪಾಸ್ರವ ಕಾರಣ (೧೧-೯೦) ಮತ್ತು ಇದು ಮೋಕ್ಷಮಾರ್ಗಮಿದು (೧೧-೯೩) ಪದ್ಯಗಳ ನಡುವೆ ಮನದಪಪಳಿಕೆಗೆ (೧೧-೯೧) ಮಾನಧನಮೆನಿಪ (೧೧-೯೨) ಎನ್ನುವ ಎರಡು ಹೊಸ ಪದ್ಯಗಳು ಲಭಿಸಿವೆ.

೭. (೧೧-೧೦೬) ವಚನದಲ್ಲಿ ಕರಣತ್ರಂಯಗಳೊಳ್…ಗುಣಶ್ರೇಣಿಗಳು ಎನ್ನುವ ಭಾಗ ಕೆ.ಎ. ೫ರಲ್ಲಿಲ್ಲ.

೮. ವಿಶೇಷವೆಂದರೆ ನಾಗವರ್ಮನ ವರ್ಧಮಾನ ಪುರಾಣದ “ಪದಿನಾಲ್ಕು ಸಾಗರೋಪಮ (೭-೪೨) ಪದ್ಯವನ್ನು ಆಚಣ್ಣ (೧೨-೭೬) ಸ್ವೀಕರಿಸಿದ್ದಾನೆ ಎನ್ನುವುದು ವಿದ್ವಾಂಸರ ಅಭಿಪ್ರಾಯ. ಆದರೆ ಕೆ.ಎ. ೫ ಹಸ್ತಪ್ರತಿಯಲ್ಲಿ ಕೈವಾಡವೊ ತಿಳಿದು ಬರುವುದಿಲ್ಲ. ಆದರೆ ಸಂದರ್ಭಕ್ಕನುಗುಣವಾಗಿ ನೋಡಿದಾಗ ಈ ಪದ್ಯ ಇಲ್ಲದಿದ್ದರೂ ನಡೆಯುತ್ತದೆ. ಆದುದರಿಂದ ಇದು ಹಸ್ತಪ್ರತಿಕಾರನ ಕೈವಾಡವೆಂದು ಭಾವಿಸಬಹುದಾಗಿದೆ. ಉಳಿದಂತೆ ಕೆ.ಎ. ೫ರಿಂದ ಸೂಕ್ತ ಪಾಠಗಳನ್ನು ಬಳಸಿಕೊಂಡು ಪರಿಷ್ಕರಿಸಿದೆ.

ಇದುವರೆಗೆ ಆಚಣ್ಣನ ವರ್ಧಮಾನ ಪುರಾಣಕ್ಕೆ ಲಭ್ಯವಿರುವ ೪ ಹಸ್ತಪ್ರತಿಗಳಲ್ಲಿ ೨ ನ್ನು ಬಳಸಿಕೊಂಡಿದೆ. ಉಳಿದೆರಡು ಹಸ್ತಪ್ರತಿಗಳನ್ನು ಬಳಸಿ ಮತ್ತಷ್ಟು ಪರಿಷ್ಕರಿಸುವ ಸಾಧ್ಯತೆ ಇದೆ.