ಕವಿವಿಚಾರ

ಚಂದ್ರಪ್ರಭ ಪುರಾಣಂ ಕರ್ತೃ ಅಗ್ಗಳ. ರೂಪಸ್ತವನ ಮಣಿಪ್ರವಾಳ ಮತ್ತು ಜಿನಾಸ್ಥಾನ ಸ್ತವನ ಎಂಬುವನ್ನು ಈತ ರಚಿಸಿದ್ದಾನೆಂದು ಪಾರ್ಶ್ವಕವಿ ಹೇಳಿದ್ದಾನೆ. “ಅವು ಸ್ತೋತ್ರ ರೂಪದ ಲಘುಕವಿತೆಗಳೆಂದು ಕಾಣುತ್ತವೆ” ಎಂದು ಡಿ.ಎಲ್. ನರಸಿಂಹಾಚಾರ್ ಅವರು ಊಹಿಸಿದ್ದಾರೆ. ಚಂದ್ರಪ್ರಭಪುರಾಣದ-

ವಾಸ್ತವ ಗುಣಸ್ತವದೆ ಶಸ್ತರೂಪಸ್ತವದೆ
ಪೊಗೞ್ವೞ್ತಿವರೆ ತನಗೆ ಮಗುಳ್ದನಿಂತರಮನೆಗೆ || ೧೦೧ ರಗಳೆ

ಎನ್ನುವ ಮಾತು ಪಾರ್ಶ್ವಕವಿಯ ಪಾರ್ಶ್ವನಾಥ ಪುರಾಣದ-

ವಾಸ್ತವ ಭಕ್ತಿಯುತಂ ರೂ
ಪಸ್ತವನ ಮಣಿಪ್ರವಾಳಮಂ ಜಿನನಾಸ್ಥಾ
ನಸ್ತವನಮನೊದವಿಸಿ ಭುವ
ನಸ್ತುತನಾದನಗ್ಗಳಂಗಮಗ್ಗಳರೊಳರೇ || ೬೨ ||

ಎನ್ನುವ ಮಾತಿಗೆ ಆಕರವಾಗಿರುವಂತೆ ಕಾಣುತ್ತದೆ. ಆದುದರಿಂದ ಕವಿಚರಿತ್ರೆಕಾರರಾದ ಆರ್. ನರಸಿಂಹಾಚಾರ್ ಅವರ “ಇದು ಬೇರೆ ಕೃತಿಯೋ ಚಂದ್ರಪ್ರಭಪುರಾಣದಲ್ಲಿ ವರ್ಣಿಸಿರುವ ಭಾಗಕ್ಕೆ ಈ ಶೀರ್ಷಿಕೆ ಅನ್ವಯಿಸುತ್ತದೆಯೋ ತಿಳಿಯದು.” ಎನ್ನುವ ಅಭಿಪ್ರಾಯಕ್ಕೆ ಪೋಷಕವಾಗಿದೆ.

ಅಗ್ಗಳನ ತಂದೆ ಶಾಂತೀಶ. ತಾಯಿ ವಾಚಾಂಬಿಕೆ. ಗುರು ಶ್ರುತಕೀರ್ತಿ. ಅಗ್ಗಳನು ತನ್ನನ್ನು “ಜಿನಮತಶ್ರೀಕೋಶ ವೇಶ್ಮಾರ್ಗಳಂ” ಎಂದು ಹೇಳಿಕೊಂಡಿದ್ದಾನೆ. ಮೂಲಸಂಘ ದೇಶೀಗಣ ಪುಸ್ತಕಗಚ್ಛ ಕೊಂಡಕುಂದಾನ್ವಯಕ್ಕೆ ಸೇರಿದವನಾಗಿದ್ದಾನೆ. ಚಂದ್ರಪ್ರಭ ಪುರಾಣವನ್ನು-

ಏಕಾದಶ ಶತಮುಂ
ತ್ತೇಕಾದಶಮಾಗೆ ಶಕನೃಪಾಬ್ದಂ ಸೌಮ್ಯ
ಪ್ರಾಕಟವರ್ಷದೆ ಚೈತ್ರಸಿ
ತೈಕಾದಶಿಯಂದು ನೆಗೞ್ದುದೀ ಕೃತಿರತ್ನಂ || ೧೬೮೭ ||

ಎಂದಿರುವುದರಿಂದ ಶಕಸಂವತ್ಸರದ ೧೧೧೧ ಎಂದರೆ ಕ್ರಿ.ಶ. ೧೧೮೯ರಲ್ಲಿ ರಚಿಸಿರುವುದಾಗಿ ತಿಳಿದುಬರುತ್ತದೆ. ಇದು ವಿದ್ವತ್ಸಮ್ಮತವಾಗಿದೆ. ಚಂದ್ರಪ್ರಭ ಪುರಾಣದ ಕರ್ತೃತ್ವ ಮತ್ತು ಪ್ರೇರಣೆಯನ್ನು ಬೀಳಗಿಯ ಶಾಸನ-

ಶ್ರುತಕೀರ್ತಿದೇವನತ್ಯೂ
ರ್ಜಿತಕೀರ್ತಿಕನಾತ್ಮ ಶಿಷ್ಯನಿಂದಗ್ಗಳನಿಂ
ದತಿಶಯಕಾವ್ಯಮಾರ್ಗದೆ
ನುತ ಚಂದ್ರಪ್ರಭಪುರಾಣಮಂ ಪೇೞಿಸಿದಂ ||

ಎಂದು ದಾಖಲಿಸಿದೆ. ಚಂದ್ರಪ್ರಭಪುರಾಣ ೧-೨೪, ೨೫ ಪದ್ಯಗಳಲ್ಲಿ ಈ ಶ್ರುತಕೀರ್ತಿಯ ಸ್ತುತಿ ಇದೆ.

ಅಗ್ಗಳ ತನ್ನ ಆರಾಧ್ಯದೈವವನ್ನು ಕುರಿತು “ಸುರರಾಜಾರ್ಚಿತನಿಂಗಳೇಶ್ವರಪುರ ಶ್ರೀತೀರ್ಥ ಚಂದ್ರಪ್ರಭಂ ಪರಮೇಶಂ” ಎಂದು ಹೇಳಿರುವುದರಿಂದ ಈತನ ಸ್ಥಳ ಬಿಜಾಪುರ ಜಿಲ್ಲೆಯ ಇಂಗಳೇಶ್ವರ. ಪ್ರಾಕ್ತನಪರಮಾಚಾರ್ಯ ಶ್ರೌತಸೇತು ಬಲ ಕಾರಣವಾಗಿ ಚಂದ್ರಪ್ರಭ ಪುರಾಣವನ್ನು ರಚಿಸಿದ್ದೇನೆ. ಕವಿತಾಭಿಮಾನವಾಗಲಿ, ಅವಿರಳವೇಳಾಪಸರಣ ಲೀಲೆಯಾಗಲಿ ಅಲ್ಲವೆನ್ನುವುದು ಅವನ ಮಾತು. ಉಭಯಕವಿತಾ ವಿಶಾರದನ್ (೧-೫೫) ಜೈನಮನೋಹರಚರಿತನ್ (೨-೧) ಎಂದು ಹೇಳಿಕೊಂಡಿದ್ದಾನೆ. ಅಗ್ಗಳಗಣ್ಣಂ ತೋರ್ಪನಗ್ಗಳಂ ನೃಪಸಭೆಯೊಳ್ (೧-೫೭) ಎಂದು ಹೇಳಿಕೊಂಡಿರುವುದರಿಂದ ರಾಜಪೂಜಿತನಾಗಿದ್ದನೆಂದು ತಿಳಿದುಬರುತ್ತದೆ.

ಈತನನ್ನು ಕುರಿತು ಅಗ್ಗಳನ ವಕ್ರತೆ, ಅಗ್ಗದಗ್ಗಳಂ, ರಂಜಿಪಗ್ಗಳಯ್ಯ, ಅಗ್ಗಳಂಗಮಗ್ಗಳರೊಳರೇ, ಕವಿಕುಳಕಳಭ ಯೂಥಾಧಿನಾಥಂ ಎನ್ನುವ ಪ್ರಶಂಸೆಯಿದೆ. ಬ್ರಹ್ಮಶಿವ ತನ್ನನ್ನು ಅಗ್ಗಳದೇವನ ಕೆಳೆಯಂ ಎಂದು ತಿಳಿಸಿದ್ದಾನೆ.

ಪೂರ್ವಕವಿ ಸ್ತವಾವಸರದಲ್ಲಿ ಅಗ್ಗಳನು ಪಂಪ, ಪೊನ್ನ, ರನ್ನರು ರಚಿಸಿದ ಕಾವ್ಯತ್ರಯಕ್ಕೆ ಜಗತ್ತ್ರಯ ಬೆಲೆಯಾಗಿ ಹೋಯಿತು ಎನ್ನುವಲ್ಲಿ ವಿನಯವನ್ನೂ, ನಾನು ಹೇಳಿದ ಚಂದ್ರಪ್ರಭೋದಯ ವಿಸ್ತಾರಿಯೆನಿಪ್ಪ ಕಾವ್ಯಮಿದಮೋಲ್ಯತ್ವಕ್ಕೆ ಪಕ್ಕಾಗದೇ ಎನ್ನುವಲ್ಲಿ ಸ್ವಾಭಿಮಾನವನ್ನೂ ಮೆರೆದಿದ್ದಾನೆ.

ಜನ್ನ, ಆಚಣ್ಣ, ದೇವಕವಿ, ಪಾರ್ಶ್ವ, ಆಂಡಯ್ಯ, ಕಮಲಭವ, ಬಾಹುಬಲಿ ಮೊದಲಾದವರು ಈತನನ್ನು ನೆನೆದಿದ್ದಾರೆ. ಮಲ್ಲಿಕಾರ್ಜುನನ ಸೂಕ್ತಿ ಸುಧಾರ್ಣವಂ, ಮಲ್ಲಕವಿಯ ಕಾವ್ಯಸಾರಂ ವಾದಿ ವಿದ್ಯಾನಂದನ ಕಾವ್ಯಸಾರಂ, ಸಾಳ್ವನ ರಸರತ್ನಾಕರ, ಭಟ್ಟಾಕಳಂಕನ ಶಬ್ದಾನು ಶಾಸನ, ಹಿರಣ್ಯಗರ್ಭನ ವಿಶ್ವಕೃತಿಪರೀಕ್ಷಣದಲ್ಲಿ ಚಂದ್ರಪ್ರಭ ಪುರಾಣದ ಪದ್ಯಗಳು ಉದಾಹರಿಸಲ್ಪಟ್ಟಿವೆ.

ವೀರನಂದಿ ತನ್ನ ಚಂದ್ರಪ್ರಭ ಚರಿತವನ್ನು ಉಪಸಂಹರಿಸುವಾಗ-

ಯಃ ಶ್ರೀವರ್ಮನೃಪೋ ಬಭೂವ ವಿಬುಧಃ ಸೌಧರ್ಮಕಲ್ಪೇ ತತ
ಸ್ತಸ್ಮಾಚ್ಚಾಜಿತಸೇನ ಚಕ್ರಭೃದಭೂದ್ಯಶ್ಚಾಚ್ಚು ತೇಂದ್ರಸ್ತತಃ
ಯಶ್ಚಾಜಾಯತಾ ಪದ್ಮನಾಭನೃಪತಿರ್ಯೋ ವೈಜಯಂತೇಶ್ವರೋ
ಯಃ ಸ್ಯಾತ್ತೀರ್ಥಕರಃ ಸಪ್ತಮಭವೇ ಚಂದ್ರಪ್ರಭಃ ಪಾತುನಃ ||

ಎಂದು ಹೇಳಿದ್ದಾನೆ. ಇಲ್ಲಿ ಇಡೀ ಚಂದ್ರಪ್ರಭ ಚರಿತ್ರೆ ಸಂಗ್ರಹವಾಗಿದೆ. ಶ್ರೀವರ್ಮ, ಶ್ರೀಧರ, ಅಜಿತಸೇನ, ಅಚ್ಯುತೇಂದ್ರ, ಪದ್ಮನಾಭ, ವೈಜಯಂತೇಶ್ವರ, ಅಹಮಿಂದ್ರ ಹೀಗೆ ಏಳು ಜನ್ಮಗಳನ್ನು ತಳೆದ ಒಂದು ಜೀವ ಚಂದ್ರಪ್ರಭಜಿನನ ಜನ್ಮದಲ್ಲಿ ಮೋಕ್ಷವನ್ನು ಪಡೆಯುತ್ತದೆ. ವೀರನಂದಿ ೧೮ ಸರ್ಗಗಳಲ್ಲಿ ಈ ವಸ್ತುವನ್ನು ನಿರ್ವಹಿಸಿದ್ದಾನೆ. ಈ ಕೃತಿಯನ್ನು ಕ್ರಿ.ಶ. ೧೦೨೫ ರಲ್ಲಿ ಪಾರ್ಶ್ವನಾಥ ಚರಿತವನ್ನು ರಚಿಸಿದ ವಾದಿರಾಜ-

ಚಂದ್ರಪ್ರಭಾಭಿ ಸಂಬದ್ಧಾ ರಸಪುಷ್ಟಾ ಮನಪ್ರಿಯಂ
ಕುಮುದ್ವತೀವನೋಧತ್ತೇ ಭಾರತೀವೀರನಂದಿನಃ ||

ಎಂದು ಕೊಂಡಾಡಿದ್ದಾನೆ.

ಕಥಾಸಾರ

ಕನಕಪ್ರಭ ಮತ್ತು ಸುವರ್ಣಮಾಲೆಯರ ಮಗ ಪದ್ಮಪ್ರಭ. ಕೆಸರಿನಲ್ಲಿ ಬಿದ್ದ ಗೂಳಿಯೊಂದನ್ನು ನೋಡಿ ಕನಕಪ್ರಭನಿಗೆ ವೈರಾಗ್ಯ ಮೂಡಿತು. ಮಗ ಪದ್ಮಪ್ರಭನಿಗೆ ಪಟ್ಟ ಕಟ್ಟಿ ಸಂನ್ಯಾಸದೀಕ್ಷೆ ಪಡೆದನು. ಕಾಲಾನುಕ್ರಮದಲ್ಲಿ ತನ್ನ ಮಗ ಸುವರ್ಣನಾಭನಿಗೆ ಪಟ್ಟ ಕಟ್ಟಿ ಕನಕಪ್ರಭ ಸಂನ್ಯಾಸ ದೀಕ್ಷೆ ಪಡೆದನು. ಸುವರ್ಣನಾಭನ ಮಗ ಶ್ರೀಷೇಣ. ಶ್ರೀಷೇಣ ಮತ್ತು ಶ್ರೀಕಾಂತೆಯರ ಮಗ ಶ್ರೀವರ್ಮ. ಮಳೆಗಾಲದ ಕಾಮನಬಿಲ್ಲಿನ ಅನಿಶ್ಚಿತತೆಯನ್ನು ಕಂಡು ಶ್ರೀವರ್ಮ ತನ್ನ ಮಗ ಶ್ರೀಕಾಂತನಿಗೆ ಪಟ್ಟ ಕಟ್ಟಿ ಸಂನ್ಯಾಸದೀಕ್ಷೆ ಪಡೆದನು. ಶ್ರೀವರ್ಮ ಸತ್ತು ಸಂದರ್ಭದಲ್ಲಿ ತಾನು ಧರಿಸಿದ ಹೂವಿನ ಮಾಲೆ ಬಾಡಿದುದನ್ನು ಕಂಡು ತನ್ನ ಆಯುರವಸಾನವನ್ನು ಅರಿತನು. ಪಂಚಪರಮೇಷ್ಠಿಗಳನ್ನು ಧ್ಯಾನಿಸುತ್ತ ಸತ್ತು ಕೋಸಲದೇಶದ ಅಜಿತಂಜಯನ ಮಗ ಅಜಿಸೇನನಾಗಿ ಜನಿಸಿದನು. ಒಂದು ದಿವಸ ಅಜಿತಸೇನ ಒಡ್ಡೋಲಗದಲ್ಲಿದ್ದನು. ಆಗ ಅವನ ಜನ್ಮಾಂತರ ವೈರಿ ಚಂಡರುಚಿ ಸಭೆಯನ್ನು ಸಂಮೋಹನಗೊಳಿಸಿ ಅಜಿತಸೇನನ್ನು ಎತ್ತಿಕೊಂಡು ಆಕಾಶಕ್ಕೆ ಹಾರಿದನು. ಅಷ್ಟರಲ್ಲಿ ಚಾರಣಋಷಿಯೊಬ್ಬ ಬಂದು ದುಃಖತಪ್ತರಾಗಿದ್ದ ಅಜಿತಸೇನನ ತಾಯಿ ತಂದೆಗಳಿಗೆ ದುಃಖಿಸಬೇಡಿ ನಿಮ್ಮ ಮಗ ಕ್ಷೇಮವಾಗಿ ಹಿಂದಿರುಗುತ್ತಾನೆಯೆಂದನು.

ಚಂಡರುಯುಚಿ ಅಜಿತಸೇನನನ್ನು ಏನು ಮಾಡಬೇಕೆಂದು ತಿಳಿಯದೆ ಮನೋರಮವೆಂಬ ಸರೋವರಕ್ಕೆ ಎಸೆದನು. ಅಜಿತಸೇನ ಈಜಿ ದಡ ಸೇರಿ ವಂಶಧರಪರ್ವತಕ್ಕೆ ಬಂದನು. ಅಲ್ಲಿ ಜಟ್ಟಿಯೊಬ್ಬ ಎದುರಾದನು. ಅವನನ್ನು ಮಲ್ಲಯುದ್ಧದಲ್ಲಿ ಅಜಿತಸೇನ ಸೋಲಿಸಿದನು. ಚಂಡರುಚಿಯು ಅಜಿತಸೇನನ ಶಕ್ತಿಪರೀಕ್ಷೆಗಾಗಿ ಹೀಗೆ ಮಾಡಿದೆನೆಂದು ಹೇಳಿ ಪೂರ್ವಸಂಗತಿಯನ್ನು ವಿವರಿಸಿದನು-

ಅಜಿತಸೇನನು ಶ್ರೀವರ್ಮ ಭವದಲ್ಲಿದ್ದಾಗ ಸೂರ್ಯನಾದ ತನಗೆ ಮೋಸ ಮಾಡಿ ಧನವನ್ನು ಅಪಹರಿಸಿದ್ದ ಶಶಿಯನ್ನು ಕೊಂದು ಧನವನ್ನು ಕೊಡಿಸಿದುದನ್ನು ತಿಳಿಸಿದನು. ಶಶಿ ಹಲವು ಜನ್ಮವನ್ನೆತ್ತಿ ಚಂಡರುಚಿಯಾದನೆಂದೂ ಆ ಭವದಲ್ಲಿ ಸೂರ್ಯನಾಗಿದ್ದ ತಾನು ಈಗ ಹಿರಣ್ಯಕನಾಗಿದ್ದೇನೆಂದೂ ತಿಳಿಸಿದನು. ನಾನು ನಿನಗೆ ಮಿತ್ರನಾಗಿದ್ದೇನೆ. ನೀನು ಅಪೇಕ್ಷಿಸಿದಾಗ ಸಹಾಯ ಮಾಡುವೆನೆಂದು ತಿಳಿಸಿದನು. ಮುಂದೆ ಅಜಿತಸೇನನು ವಿಪುಲನಗರವನ್ನು ಪ್ರವೇಶಿಸಿದನು.

ವಿಪುಲನಗರದ ರಾಜಕುಮಾರಿ ಶಶಿಪ್ರಭೆಯನ್ನು ಮಹೇಂದ್ರನೆಂಬ ದೊರೆ ವಿವಾಹವಾಗಬಯಸಿದನು. ಅದು ನೆರವೇರಲಿಲ್ಲ. ಆಗ ಆ ಊರಿನ ಮೇಲೆ ದಂಡೆತ್ತಿ ಬಂದನು. ಜನರೆಲ್ಲ ಚೆಲ್ಲಾಪಿಲ್ಲಿಯಾದರು. ಅಜಿತಸೇನನು ಯುದ್ಧದಲ್ಲಿ ಮಹೇಂದ್ರನನ್ನು ಕೊಂದನು. ಶಶಿಪ್ರಭೆಯ ತಂದೆ ಜಯವರ್ಮನು ಅಜಿತಸೇನನೊಡನೆ ಶಶಿಪ್ರಭೆಯ ವಿವಾಹ ಮಾಡಲು ಸನ್ನದ್ಧನಾದನು. ಅಷ್ಟರಲ್ಲಿ ಆದಿತ್ಯಪುರದ ದೊರೆ ಧರಣೀಧ್ವಜ ಶಶಿಪ್ರಜ್ಞೆಯನ್ನು ಮದುವೆಯಾಬಯಸಿ ದಂಡೆತ್ತಿ ಬಂದನು. ಅಜಿತಸೇನನು ಹಿರಣ್ಯಕನನ್ನು ನೆನೆದು ಅವನ ಸಹಾಯದಿಂದ ಶತ್ರುಗಳನ್ನು ನಿಗ್ರಹಿಸಿ ಧರಣೀಧ್ವಜನನ್ನು ಕೊಂದನು. ಅಜಿತಸೇನ ಶಶಿಪ್ರಭೆಯರ ವಿವಾಹ ನೇರವೇರಿತು. ಕೆಲವು ಕಾಲದ ಮೇಲೆ ದಂಪತಿಗಳ ಕೋಸಲದೇಶಕ್ಕೆ ಹಿಂದಿರುಗಿದರು. ಒಂದು ದಿವಸ ಅಜಿತಂ ಜಯನ ಆಯುಧಾಗಾರದಲ್ಲಿ ಚಕ್ರರತ್ನ ಉದಯಿಸಿತು.

ಅಜಿತಂಜಯನು ಅಜಿತಸೇನನಿಗೆ ಪಟ್ಟಿ ಕಟ್ಟಿ ತಪಸ್ಸಿಗೆ ಸಂದನು. ಚಕ್ರರತ್ನದೊಡನೆ ಅಜಿತಂಜಯ ದಿಗ್ವಿಜಯಕ್ಕೆ ಹೊರಟನು. ಹಿಮವತ್ಪರ್ವತದಿಂದ ಹಿಡಿದು ಸಾಗರದವರೆಗಿದ್ದ ರಾಜ್ಯಗಳನ್ನು ಗೆದ್ದನು. ಕಡಲತಡಿಯಲ್ಲಿ ಕಾಂಚನಸ್ತಂಭವನ್ನು ನೆಡಿಸಿದನು. ಪ್ರಭಾಸಾಮರರನ್ನು ವಿಜಯಕುಮಾರನನ್ನು ಸೋಲಿಸಿದನು. ತನ್ನ ಪತ್ನಿ ಶಶಿಪ್ರಭೆಯೊಡನೆ ಸುಖಸಂತೋಷದಿಂದ ಇದ್ದು ವನವಿಹಾರ, ಪುಷ್ಪಾಪಚಯ, ಜಲಕೇಳಿ, ಕೌಮುದೀವಿಹಾರಗಳಲ್ಲಿರುವಾಗ ಒಂದು ದಿವಸ ಕಂದಿದ ಚಂದ್ರಮಂಡಲವನ್ನು ಕಂಡು ವೈರಾಗ್ಯಭಾವ ಹೊಂದಿದನು. ತನ್ನ ಮಗ ಜಿತಶತ್ರುವಿಗೆ ರಾಜ್ಯಭಾರ ವಹಿಸಿ ತಪಸ್ಸು ಮಾಡಿ ಅಚ್ಯುತಕಲ್ಪದಲ್ಲಿ ದೇವತೆಯಾಗಿ ಹುಟ್ಟಿ ಸುಖಭೋಗವನ್ನು ಸವಿದನು. ತಂದೆಯ ಅನಂತರ ಪದ್ಮನಾಭ ರಾಜ್ಯಭಾರವನ್ನು ವಹಿಸಿಕೊಂಡನು. ಒಂದು ದಿವಸ ಊರಿನ ಹೊರವಲಯದಲ್ಲಿ ಪ್ರತಿಮಾಯೋಗದಲ್ಲಿದ್ದ ಶ್ರೀಧರಯತಿಯಿಂದ ತನ್ನ ಪೂರ್ವಭವವನ್ನು ಅರಿತನು. ಶ್ರೀಧರಯತಿಯು ತನ್ನ ಮಾತು ನಿಜವೆನ್ನಲು ಊರಿಗೆ ಸಲಗವೊಂದು ಪ್ರವೇಶಿಸುವುದೇ ಸಾಕ್ಷಿಯೆಂದನು. ಅವನು ಹೇಳಿದಂತೆ ಊರಿಗೆ ಬಂದು ದಾಂಧಲೆ ಮಾಡಿದ ಆನೆಯನ್ನು ಪದ್ಮಪ್ರಭ ಕಟ್ಟಿ ಹಾಕಿದನು. ಆನೆಯ ಒಡೆಯ ಪೃಥ್ವೀಪಾಲನ ದೂತ ಪದ್ಮನಾಭನ ಆಸ್ಥಾನಕ್ಕೆ ಬಂದು ಆನೆಯನ್ನು ಹಿಂದಿರುಗಿಸುವಂತೆ ಕೇಳಿದನು. ಪದ್ಮನಾಭ ಒಪ್ಪದಿರಲು ಪೃಥ್ವೀಪಾಲ ದಂಡೆತ್ತಿ ಬಂದನು. ಅವನ ತಲೆಯನ್ನು ಪದ್ಮನಾಭ ಕತ್ತರಿಸಿದನು. ಆ ತಲೆಯನ್ನು ಕಂಡು ವೈರಾಗ್ಯಭಾವವನ್ನು ಹೊಂದಿದನು. ಶ್ರೀಧರಮುನಿಯಿಂದ ದೀಕ್ಷೆ ಪಡೆದು ತಪೋನಿರತನಾದನು. ಸತ್ತು ಸರ್ವಾರ್ಥಸಿದ್ಧಿಯೆಂಬ ಲೋಕದಲ್ಲಿ ಆಹಮಿಂದ್ರನಾಗಿ ಜನಿಸಿದನು.

ಚಂದ್ರಪುರದ ರಾಜ ಮಹಾಸೇನನ ಪಟ್ಟಮಹಿಷಿ ಲಕ್ಷ್ಮಣಾದೇವಿಯ ಗರ್ಭದಲ್ಲಿ ಅಹಮಿಂದ್ರನು ತೀರ್ಥಂಕರನಾಗಿ ಜನಿಸುವುದನ್ನು ಇಂದ್ರ ತಿಳಿದನು. ಚಂದ್ರಪುರದಲ್ಲಿ ಕುಬೇರನಿಂದ ಚಿನ್ನದ ಮಳೆ ಸುರಿಸಿದನು. ದೇವತಾಸ್ತ್ರೀಯರನ್ನು ಲಕ್ಷ್ಮಣಾದೇವಿಯ ಉಪಚಾರಕ್ಕೆ ನಿಯೋಜಿಸಿದನು. ಗರ್ಭಾವತರಣ ಕಲ್ಯಾಣವನ್ನು ನೆರವೇರಿಸಿದನು. ಮಗು ಜನಿಸಿದಾಗ ಜನ್ಮಾಭಿಷೇಕ ಕಲ್ಯಾಣವನ್ನು ನಡೆಸಿ ಜಾತಕರ್ಮವನ್ನು ಮಾಡಿ ಚಂದ್ರಪ್ರಭನೆಂದು ಹೆಸರಿಟ್ಟು ಆನಂದನೃತ್ಯವನ್ನಾಡಿದನು.

ಚಂದ್ರಪ್ರಭನು ಬಾಲಲೀಲೆಗಳಿಂದ ಬೆಳೆದು ಯೌವನಕ್ಕೆ ಬಂದಾಗ ತಾಯಿ ತಂದೆಯರ ಅಪೇಕ್ಷೆಯ ಪೂರೈಕೆಗಾಗಿ ಕಮಲಪ್ರಭೆಯನ್ನು ವಿವಾಹವಾದನು. ಪಟ್ಟಾಭಿಷೇಕವಾದ ಮೇಲೆ ಅವನಿಗೆ ವರಚಂದ್ರನೆಂಬ ಮಗ ಹುಟ್ಟಿದನು. ಹೀಗಿರುವಾಗ ಒಂದು ದಿವಸ ಒಡ್ಡೋಲಗಕ್ಕೆ ಬಂದ ಹೆಣ್ಣು ಹಣ್ಣು ಮುದುಕನೊಬ್ಬನು ಇಂದು ನಿನಗೆ ಯಮನಿಂದ ಬಾಧೆಯಂದನು. ಆ ಮುದುಕ ಬೇರೆ ಯಾರೂ ಆಗಿರದೆ ಇಂದ್ರನಿಂದ ಕಳಿಸಲ್ಪಟ್ಟ ಧರ್ಮರುಚಿಯೆಂಬುವವನು ಎನ್ನುವುದನ್ನು ಚಂದ್ರಪ್ರಭ ತಿಳಿದನು. ವೈರಾಗ್ಯವನ್ನು ಸ್ವೀಕರಿಸಿದನು. ಎಂಟುಜನ ಲೋಕಾಂತಿಕ ದೇವತೆಗಳು ಅವನಿಗೆ ಪ್ರತಿಬೋಧೆ ಮಾಡಿದರು. ಆಗ ಇಂದ್ರನು ಪರಿನಿಷ್ಕ್ರಮಣ ಕಲ್ಯಾಣವನ್ನು ನೆರವೇರಿಸಿ ತನ್ನ ಲೋಕಕ್ಕೆ ಹೋದನು.

ಚಂದ್ರಪ್ರಭನು ದೀಕ್ಷೋಪವಾಸ ಮಾಡಿ ನಳಿನಪುರವನ್ನು ಪ್ರವೇಶಿಸಿದನು. ಅಲ್ಲಿನ ದೊರೆ ಸೋಮದತ್ತ ಅವನ ಸೇವೆ ಮಾಡಿದನು. ಆಗ ಅಲ್ಲಿ ಪಮಚಾಶ್ಚರ್ಯಗಳಾದವು. ಚಂದ್ರಪ್ರಭನು ಅರಣ್ಯಕ್ಕೆ ಹಿಂದಿರುಗಿ ಪ್ರತಿಮಾಯೋಗದಲ್ಲಿ ನಿಂತು ಅನೇಕ ಋದ್ಧಿಗಳನ್ನು ಪಡೆದನು. ಪಲ್ಯಂಕಾಸನದಲ್ಲಿ ಕುಳಿತು ತಪಸ್ಸು ಮಾಡುವಾಗ ಆತನಿಗೆ ಕೇವಲಜ್ಞಾನ ಉಂಟಾಯಿತು. ಆಗ ಇಂದ್ರನು ಕೇವಲಜ್ಞಾನ ಕಲ್ಯಾಣವನ್ನು ನೆರವೇರಿಸಿದನು.

ಚಂದ್ರಪ್ರಭನು ಸೌರಾಷ್ಟ್ರಾದಿ ದೇಶಗಳಲ್ಲಿ ಧರ್ಮ ವಿಹಾರ ಮಾಡುತ್ತ ಸಮ್ಮೇದಶೈಲಕಕ್ಕೆ ಬಂದನು. ಅಲ್ಲಿ ಒಂದು ತಿಂಗಳು ತಪಸ್ಸು ಮಾಡಿ ಮುಕ್ತಿಯನ್ನು ಪಡೆದನು. ಇಂದ್ರಾದಿ ದೇವತೆಗಳು ಪರಿನಿಷ್ಕ್ರಣಕಲ್ಯಾಣವನ್ನು ನಡೆಸಿ ತಮ್ಮ ಲೋಕಕ್ಕೆ ನಡೆದರು.

ಕಾವ್ಯಸಮೀಕ್ಷೆ

ಕನ್ನಡ ಭಾಷೆಯ ಉಪಲಬ್ಧ ಚಂದ್ರಪ್ರಭಚರಿತ್ರೆಗಳಲ್ಲಿ ಚಾವುಂಡರಾಯನ ತ್ರಿಷಷ್ಟಿ ಶಲಾಕಾಪುರುಷಚರಿತದ ಚಂದ್ರಪ್ಪಭಚರಿತೆ ಮೊದಲನೆಯದು. ಇದು ಗುಣಭದ್ರನ ಉತ್ತರಪುರಾಣದ ಸಂಗ್ರಹಾನುವಾದ. ಎರಡನೆಯದು ಅಗ್ಗಳನ ಚಂದ್ರಪ್ರಭಚಂಪು. ಇದು ವೀರಣಂದಿಯ ಸಂಸ್ಕೃತ ಚಂದ್ರಪ್ರಭಚರಿತೆಯನ್ನು ಅನುಸರಿಸಿದೆ. ಜಾತಕತಿಲಕದ ಕರ್ತೃ ಶ್ರೀಧರಾಚಾರ್ಯ (ಕ್ರಿ.ಶ. ೧೦೪೯) ಚಂದ್ರಪ್ರಭ ಚರಿತೆಯನ್ನು ಬರೆದಿರುವುದಾಗಿ ತಿಳಿದುಬರುತ್ತದೆ. ಇದುವರೆಗೂ ದೊರೆತಿಲ್ಲ. ಆದುದರಿಂದ ಈ ಕೃತಿಯ ಪ್ರಭಾವ ಅಗ್ಗಳನ ಮೇಲೆ ಆಗಿದೆಯೋ ಇಲ್ಲವೋ ತಿಳಿಯದು.

ಚಂದ್ರಪ್ರಭಜಿನನ
ಹಾಚರಿತಪಯೋಧಿಪಾರಯಾನಕ್ಕಾನಾ
ಲೋಚಿಸಿದೆಂ ಪ್ರಾಕ್ತನ ಪರ
ಮಾಚಾರ್ಯಶ್ರೌತಸೇತು ಬಲದಿಂದೀಗಳ್ || ೬೭ ||

ಎಂದು ಹೇಳಿಕೊಂಡಿದ್ದಾನೆ. ಇಲ್ಲಿ ಆತ ತನ್ನ ಕೃತಿಗೆ ನಿರ್ದಿಷ್ಟ ಆಕರವನ್ನು ಹೇಳಿಲ್ಲ. ಆದರೆ-

ದೇಶಂ ಧರ್ಮೋಪದೇಶಂ ಶ್ರುತಬಲಮೆ ಬಲಂ ಕೋಶಮುದ್ಬೋಧಕೋಶಂ
ಸೌಶೀಲ್ಯಂ ಸತ್ಸಹಾಯಂ ಸಚಿವನುಪಶಮಂ ಜೈನಮಾರ್ಗಂ ಸುದುರ್ಗಂ
ಭೂಶಸ್ತ್ರಾಗಾರಮಾದತ್ತೆನೆ ತನಗೆ ಜಗತ್ಸಿದ್ಧಾಂತರಾದ್ಧಾಂತಚಕ್ರಾ
ಧೀಶಂ ಸಪ್ತಾಂಗಸಾಮ್ರಾಜ್ಯದಿನಿಳೆಗೆಸೆದಂ ವೀರನಂದಿವ್ರತೀಂದ್ರಂ || ೨೯ ||

ಎನ್ನುವ ಪದ್ಯದಲ್ಲಿ ತನ್ನ ಕೃತಿಗೆ ಆಕರವಾದ ಚಂದ್ರಪ್ರಭಚರಿತೆಯ ಕರ್ತೃ ವೀರಣಂದಿಯನ್ನು ಸ್ಮರಿಸಿರುವಂತೆ ಕಾಣುತ್ತದೆ.

ಅಗ್ಗಳನ ಚಂದ್ರಪ್ರಭಚರಿತ್ರೆಗೆ ವೀರಣಂದಿಯ ಚಂದ್ರಪ್ರಭಚರಿತಮ್ ಮೂಲವೆಂದು ಡಾ || ಡಿ.ಎಲ್. ನರಸಿಂಹಾಚಾಯರ್ ರವರು ಪ್ರತಿಪಾದಿಸಿದ್ದಾರೆ. ಈ ಅಧ್ಯಯನವನ್ನು ಪ್ರಧಾನ ಗುರುದತ್ತರು ಮುಂದುವರೆಸಿದ್ದಾರೆ. ಡಾ || ಡಿ.ಎಲ್. ನರಸಿಂಹಾಚಾರ್ ರವರು ಈ ಸಂದರ್ಭದಲ್ಲಿ ಹೇಳುವ ಮಾತುಗಳು ಹೀಗಿವೆ-

“ಕಥಾಸಂವಿಧಾನದಲ್ಲೂ ಆನುಪೂರ್ವಿಯಲ್ಲೂ ವರ್ಣನೆಗಳಲ್ಲೂ ಅಗ್ಗಳನ ಕಾವ್ಯ ವೀರನಂದಿ ಕೃತಿಯನ್ನು ತುಂಬ ಹೋಲುತ್ತದೆ. ಕಥಾರಂಭ ಎರಡರಲ್ಲೂ ಪದ್ಮನಾಭಭವದ ವೃತ್ತಾಂತದಿಂದ ಆಗಿದೆ ; ಇತರ ಕಥೆಗಳೂ ಉಪಕಥೆಗಳೂ ಒಂದೇ ಕ್ರಮದಲ್ಲಿ ಬಂದಿವೆ. ವರ್ಣನೆಗಳು ಕೂಡ ಎರಡರಲ್ಲೂ ಸಮಾನಸಂದರ್ಭಗಳಲ್ಲಿ ನಿಯೋಜಿತವಾಗಿದೆ. ವೀರನಂದಿಯ ಕಾವ್ಯದಲ್ಲಿ ೧೮ ಸರ್ಗಗಳಿದ್ದರೆ ಅಗ್ಗಳನಲ್ಲಿ ೧೬ ಆಶ್ವಾಸಗಳಿವೆ. ಈ ಬಾಹ್ಯಾಂಶಗಳಲ್ಲಿಯೇ ಅಲ್ಲದೆ ಆಂತರಿಕವಾದ ವಿವರಗಳಲ್ಲಿ ಸಾಮ್ಯ ಬಹಳವಾಗಿ ಇದೆ. ವೀರನಂದಿಯ ಪದ್ಯಗಳನ್ನು ಅಗ್ಗಳ ಕನ್ನಡಕ್ಕೆ ಭಾಷಾಂತರಿಸುತ್ತ ಮುಂದುವರಿದಿರುವುದು ಕಾಣುತ್ತದೆ. ಇದಕ್ಕೆ ಕೆಲವು ನಿದರ್ಶನಗಳನ್ನು ಹೇಳಬಹುದು” ಎಂದು ಹಲವು ಉದಾಹರಣೆಗಳನ್ನು ಕೊಟ್ಟಿದ್ದಾರೆ. ಆದರೆ ಚಂದ್ರಪ್ರಭಚರಿತ್ರೆಯಲ್ಲಿ ಅಗ್ಗಳನು ವೀರಣಂದಿಯ ಚಂದ್ರಪ್ರಭಚರಿತದೊಂದಿಗೆ ಗುಣಭದ್ರನ ಉತ್ತರಪುರಾಣದ ಚಂದ್ರಪ್ರಭಚರಿತ್ರೆಯ ಭಾಗವನ್ನು ನೋಡಿದ್ದನೆಂದು ಭಾವಿಸಲು ಕಾರಣಗಳಿವೆ. ಉದಾಹರಣೆಗೆ-

“ಗ್ರಾಮಾಃ ಕುಕ್ಕುಟ ಸಂಪಾತ್ಯಾಃ” ಉತ್ತರ ಪುರಾಣ. (ಶ್ಲೋಕ ೧೫) ಎನ್ನುವುದು ಚಂದ್ರಿಕೆಪಾತಂ ದಲೆನಿಪ್ಪಂತರದೊಳ್ ನಿಂದೂರ್ಗಳ್ (ಚಂದ್ರಪ್ರಭಪುರಾಣಮ್ ೧-೯೬) ಎಂದು ಅನುವಾದವಾಗಿದೆ. ಇದು ವೀರಣಂದಿಯ ಚಂದ್ರಪ್ರಭಚರಿತದಲ್ಲಿಲ್ಲದಿರುವುದು ಗಮನಾರ್ಹ.

ಗುಣಭದ್ರರ ಉತ್ತರಪುರಾಣ ಮತ್ತು ವೀರನಂದಿ ಪರಂಪರೆಯ ಕೃತಿಗಳಿಗೆ ಇರುವ ವ್ಯತ್ಯಾಸವನ್ನು ಸ್ಥೂಲವಾಗಿ ಹೀಗೆ ಗುರುತಿಸಬಹುದು-

ಉತ್ತರಪುರಾಣದಲ್ಲಿ ಶ್ರೀಷೇಣಭವದಿಂದ ಚಂದ್ರಪ್ರಭಚರಿತ್ರೆ ಪ್ರಾರಂಭವಾಗುತ್ತದೆ. ವೀರನಂದಿಯ ಕೃತಿಯಲ್ಲಿ ಕನಕಪ್ರಭಭವದಿಂದ ಆರಂಭವಾಗಿ ಹಿಂದಿನ ಭವದ ವಿವರಗಳನ್ನು ಶ್ರೀಧರಮುನಿ ತಿಳಿಸುತ್ತಾನೆ. ಕನಕಪ್ರಭನ ವೈರಾಗ್ಯಕ್ಕೆ ಕಾರಣವಾದ ಮುದಿಯೆತ್ತು ಕೆಸರಿಗೆ ಬಿದ್ದು ಸತ್ತ ಪ್ರಸಂಗ ಉತ್ತರ ಪುರಾಣದಲ್ಲಿಲ್ಲ. ಶ್ರೀಕಾಂತೆಗೆ ಮಕ್ಕಳಾಗದಿರಲು ಹಿಂದಿನ ಜನ್ಮದಲ್ಲಿ ದೇವಾಂಗನ ಮಗಳು ಸುನಂದೆ ಗರ್ಭಿಣಿಯಾಗಿ ತೊಂದರೆಪಡುತ್ತಿದ್ದುದನ್ನು ಕಂಡು ಮುಂದೆ ಯಾವ ಜನ್ಮದಲ್ಲಿಯೂ ಯವ್ವನದಲ್ಲಿ ತನಗೆ ಮಕ್ಕಳಾಗದಿರಲಿ ಎಂದು ಸಂಕಲ್ಪಿಸಿ ಆಯುರಂತ್ಯದಲ್ಲಿ ಪಂಚಾಣುವ್ರತದ ಫಲದಿಂದ ಪ್ರಥಮಸ್ವರ್ಗದಲ್ಲಿ ಶ್ರೀಧಾರಿಣಿ ಎನ್ನುವವಳಾಗಿ ಹುಟ್ಟಿ ಅಲ್ಲಿಂದ ದುರ್ಯೋಧನನ ಮಗಳಾಗಿ ಹುಟ್ಟಿ ಸುರ್ಣನಾಭನಿಗೆ ಹೆಂಡತಿಯಾದಳು ಎನ್ನುವ ಪ್ರಸಂಗ ವೀರನಂದಿ ಪರಂಪರೆಯ ಕೃತಿಗಳಲ್ಲಿ ಮಾತ್ರ ಇದೆ. ಅಜಿತಂಜಯನ ಮಗ ಅಜಿತಸೇನನ್ನು ಚಂಡರುಚಿ ಎನ್ನುವ ರಾಕ್ಷಸನು ಮಾಯೆಯಿಂದ ತೆಗೆದುಕೊಂಡು ಹೋಗಿ ಕಾಡಿನ ಮಧ್ಯೆ ಸರೋವರದಲ್ಲಿ ಎಸೆದುದು, ಆತ ಪರುಷಾಟವಿಯನ್ನು ಹೊಕ್ಕುದು, ಅಲ್ಲಿಂದ ವಂಶಧರವೆಂಬಗಿರಿಗೆ ಬಂದು ಅಲ್ಲಿ ಹಿರಣ್ಯ ಎನ್ನುವ ಭವನದೇವನನ್ನು ಕಂಡುದು, ಅಲ್ಲಿ ಆತ ಸೂರ್ಯ ಮತ್ತು ಶಶಿಯರ ಮೂಲಕ ಹಿಂದಿನಜನ್ಮದಲ್ಲಿ ಮೂಡಿದ ದ್ವೇಷವನ್ನು ವಿವರಿಸಿದುದು, ಈ ದಿವಸ ಶಶಿರುಚಿಯು ಚಂಡರುಚಿಯಾಗಿ ಈತನನ್ನು ತಂದು ಸರೋವರಕ್ಕೆ ಎಸೆದುದು ಮೊದಲಾದ ಪ್ರಸಂಗಗಳು ಉತ್ತರಪುರಾಣದಲ್ಲಿಲ್ಲ. ಅಜಿತಸೇನ ಮತ್ತು ಅರಿಂಜಯನಾಡಿನ ಜಯವರ್ಮನ ಮಗಳು ಶಶಿಪ್ರಭೆ. ಮಹೇಂದ್ರನಿಂದ ಶಶಿಪ್ರಭೆಗಾಗಿ ಬೇಡಿಕೆ. ಮೊದಲು ಜಯವರ್ಮ ಒಪ್ಪಿದುದು, ಶಕುನಿಗನ ಆದೇಶದಂತೆ ಮಹೇಂದ್ರನಿಗೆ ಮಗಳನ್ನು ಕೊಡಲು ಜಯವರ್ಮ ತಿರಸ್ಕರಿಸಿದುದು, ಆತ ದಂಡೆತ್ತಿ ಬಂದುದು, ಮಹೇಂದ್ರನನ್ನು ಅಜಿತಸೇನ ಗೆದ್ದುದು, ಅಜಿತಸೇನ ಮತ್ತು ಧರಣೀಧ್ವಜರ ಕಾಳಗಗಳು ವೀರನಂದಿಯಲ್ಲಿ ಮಾತ್ರ ಇವೆ. ಚಕ್ರೋದಯವಾದ ಮೇಲೆ ಅಜಿತಸೇನನ ದಿಗ್ವಿಜಯ ಉತ್ತರಪುರಾಣದಲ್ಲಿ ಸಂಗ್ರಹವಾಗಿದ್ದರೆ ಇಲ್ಲಿ ದೀರ್ಘವಾಗಿದೆ. ಜಲಕೇಳಿ, ವನಕೇಳಿ, ವೇಶ್ಯಾವಾಟಿ ಪ್ರಸಂಗಗಳು ಉತ್ತರಪುರಾಣದಲ್ಲಿಲ್ಲ. ಉತ್ತರಪುರಾಣದಲ್ಲಿ ಅಜಿತಸೇನನ ವೈರಾಗ್ಯಕ್ಕೆ ಭವಸಂಬಂಧಿ ಕಾರಣ ಎಂದಿದ್ದರೆ ವೀರನಂದಿಯಲ್ಲಿ ಹಗಲಿನಲ್ಲಿ ಕಂದಿದ ಚಂದ್ರ ದರ್ಶನ ಎಂದಿದೆ. ಪದ್ಮನಾಭನು ರಾಜ್ಯವಾಳುವಾಗ ಬಂದ ವನಕೇಳಿ ಗಜಪ್ರಸಂಗ ವೀರನಂದಿಯಲ್ಲಿ ಮಾತ್ರ ಇದೆ. ಪದ್ಮನಾಭನ ವೈರಾಗ್ಯಕ್ಕೆ ಕಾರಣ ಪೃಥ್ವೀಪಾಲನ ಕತ್ತರಿಸಿದ ತಲೆಯನ್ನು ನೋಡಿದ್ದು ಎನ್ನುವ ಅಂಶ ಉತ್ತರಪುರಾಣದಲ್ಲಿಲ್ಲ. ವೀರನಂದಿಯಲ್ಲಿ ಬರುವ ಕಮಲಪ್ರಭೆಯ ಪ್ರಸ್ತಾಪ ಉತ್ತರಪುರಾಣದಲ್ಲಿಲ್ಲ. ಚಂದ್ರಪ್ರಭನ ವೈರಾಗ್ಯಕ್ಕೆ ಧರ್ಮರುಚಿಯು ಪ್ರೇರಕನಾದನು ಎಂದು ವೀರನಂದಿಯಲ್ಲಿದ್ದರೆ ಉತ್ತರ ಪುರಾಣದಲ್ಲಿ ಅಲಂಕಾರಗೃಹದಲ್ಲಿ ಕನ್ನಡಿಯನ್ನು ನೋಡುವಾಗ ಮುಖಕಮಲದಲ್ಲಿದ್ದ ಯಾವುದೋ ವಸ್ತುವನ್ನು ವೈರಾಗ್ಯಹೇತುವನ್ನಾಗಿ ನಿರ್ಧರಿಸಿದನು ಎಂದಿದೆ.

ಉತ್ತರಪುರಾಣ ಮತ್ತು ವೀರನಂದಿ ಸಂಪ್ರದಾಯದ ಕೃತಿಗಳ ಪರಿಶೀಲನೆಯಿಂದ ಚಂದ್ರಪ್ರಭನ ಕಥೆ ತನ್ನ ಪೌರಾಣಿಕ ಸೂತ್ರವನ್ನು ಕಳೆದುಕೊಂಡು ವೀರನಂದಿಯ ಕಾಲಕ್ಕೆ ಮಹಾಕಾವ್ಯದ ಹಾದಿಯನ್ನು ಹಿಡಿದಿರುವುದನ್ನು ಕಾಣುತ್ತೇವೆ. ವೀರನಂದಿ ತನ್ನ ಚಂದ್ರಪ್ರಭಚರಿತದಲ್ಲಿ ತೀರ್ಥಂಕರ ಚರಿತೆಗಳ ಲಕ್ಷಣವಾದ ಕಾಲವರ್ಣನೆ, ಮನುಗಳ ಉತ್ಪತ್ತಿ, ವಂಶಗಳ ಉತ್ಪತ್ತಿ, ಚಂದ್ರಪ್ರಭ ತೀರ್ಥಂಕರ ರಾಜ್ಯಭಾರ, ಅವನ ಅರ್ಹಂತ್ಯಾವಸ್ಥೆ, ನಿರ್ವಾಣ, ಯುಗಪರಿವರ್ತನೆಗಳ ಜೊತೆಗೆ ಮಹಾಕಾವ್ಯದ ೧೮ ಲಕ್ಷಣಗಳಾದ ಸಮುದ್ರ, ಪರ್ವತ, ಪುರ, ನಾಯಕಾಭ್ಯುದಯ, ವಿವಾಹ, ಕುಮಾರೋದಯ, ಚಂದ್ರೋದಯ, ಸೂರ್ಯೋದಯ, ಋತು, ವನವಿಹಾರ, ಜಲಕ್ರೀಡೆ, ಮಧುಪಾನ, ಸಂಭೋಗ, ವಿಪ್ರಲಂಭ, ಮಂತ್ರ, ದುತಾಂಗ, ಯಾತ್ರಾಂಗವರ್ಣನೆಗಳಲ್ಲಿ ಮಧುಪಾನವರ್ಣನೆ ಒಂದನ್ನುಳಿದು ಎಲ್ಲ ವರ್ಣನೆಗಳನ್ನೂ ಸೇರಿಸಿದ್ದಾನೆ.

ಈ ವರ್ಣನೆಗಳಲ್ಲಿ ಸ್ವಭಾವೋಕ್ತಿ, ಅತಿಶಯೋಕ್ತಿ, ಉಕ್ತಿ ಚಮತ್ಕಾರಗಳಿವೆ. ಶಬ್ದಾಲಂಕಾರ, ಅರ್ಥಾಲಂಕಾರಗಳು ಎಡೆ ಪಡೆದಿವೆ. ಪರಿಸಂಖ್ಯೆ, ವಿರೋಧಾಭಾಸ ಮತ್ತು ಶ್ಲೇಷೆಗಳನ್ನು ಇಲ್ಲಿ ಕಾಣಬಹುದು. ಉಭಯಭಾಷಾಕವಿಯಾದ ಅಗ್ಗಳನು ಭಾಷೆಯ ಬಳಕೆಯಲ್ಲಿ ತನ್ನ ಸಾಮರ್ಥರ್ಯವನ್ನು ತೋರಿದ್ದಾನೆ. ಕನ್ನಡ, ಸಂಸ್ಕೃತ, ಕನ್ನಡ ಮತ್ತು ಸಂಸ್ಕೃತಗಳ ಹಿತಮಿತವಾದ ಹೊಂದಾಣಿಕೆಯಿದೆ.

ಅಕ್ಕ ನಿಜಪ್ರಿಯಂಗೆ ಮನದನ್ನದೆ ನೀಂ ಬೆಸಕೆಯ್ವುದಾಗಳುಂ
ಮಕ್ಕಳಮಾೞ್ಕೆಯಿಂದಿರದೆ ನೀನೊಡವಂದ ಜನಕ್ಕೆ ಸಂತಸಂ
ಮೊಕ್ಕಳಮಾಗೆ ಮನ್ನಿಪುದು ಮಾವನ ಪೆರ್ಮೆಗಮತ್ತೆಯೊಲ್ಮೆಗಂ
ತಕ್ಕ ನೆಗೞ್ತೆಯಂ ನೆಗೞ್ವುದೀವುದು ಪೆತ್ತೆಮಗೆ ಪ್ರಮೋದಮಂ || ೮೭ ||

ಎನ್ನುವಲ್ಲಿ ಕನ್ನಡಭಾಷೆಯ ಸಮರ್ಥಬಳಕೆ ಹಾಗೂ ಸೊಗಸನ್ನು ಕಾಣಬಹುದು. ರಾಶಿರಾಶಿಯಾಗಿ ಇಂತಹ ಪದ್ಯಗಳು ಚಂದ್ರಪ್ರಭ ಪುರಾಣದಲ್ಲಿವೆ. ಇನ್ನೂ ಒಂದೆರಡು ಉದಾಹರಣೆಗೆ ೭-೭೯, ೭-೯೧ ಪದ್ಯಗಳನ್ನು ನೋಡಬಹುದು.

ಶ್ರೀನಿಕೇತಾಯಿತಾತ್ಮಾಂಘ್ರಿನೀರಜಂ ನೀರಜೋವ್ರಜಂ
ಆದ್ಯಂತಶೂನ್ಯಮಾದ್ಯಂತಂ ವಂದೇಹಂ ವೃಷಭಂ ವಿಭುಂ || ||

ಎಂದು ಪ್ರಾರಂಭವಾಗುವ ೨೪ ತೀರ್ಥಂಕರ ಸ್ತುತಿಯನ್ನು ಸಂಪೂರ್ಣವಾಗಿ ಸಂಸ್ಕೃತದಲ್ಲಿ ಬರೆದಿದ್ದು-

ಪುಣ್ಯಾಮೃತಸ್ತವನಮಗ್ಗಳಸೂರಿಸೂಕ್ತ
ಮತ್ಯಂತ ಭಕ್ತಿಪರತಂತ್ರಧಿಯಾಪಠೇದ್ಯಃ
ಸಪ್ರಾಪ್ನುಯಾದನಘತೀರ್ಥಕೃತಾಂಪ್ರಸಾದಾ
ದಾಮುತ್ರಿಕಂ ಸುಖಮೀಹಿಮೈಹಿಕಂ || ೧೬೭೯ ||

ಎನ್ನುವ ಭಾಗ ಅತ್ಯಮತ ಸರಳವೂ ಸುಂದರವೂ ಮನೋಹರವೂ ಆಗಿದೆ. ಜಿನನ ನಿರಾಭರಣ ಸೌಂದರ್ಯವನ್ನು ಕಣ್ಣಿಗೆ ಕಟ್ಟುವಲ್ಲಿ ಯಶಸ್ವಿಯಾಗಿದೆ.

ಸುಮನೋದಾಮಂಗಳಂ ಸಂಗಳಿಸು ಕನಕಕುಂಭಗಳಂ ತುಂಬು ತೀರ್ಥಾಂ
ಬುವನುದ್ಯದ್ಗಂಧಮಂ ಗಂಧಮನಳವಡಿಸುತ್ಕೃಷ್ಟಮಂ ಕೊಳ್ ಫಲವ್ರಾ
ತಮನಾ ನೈವೇದ್ಯಮಂ ವರ್ಧಿಸು ಸುರಭಿಲಸದ್ಧೂಪಮಂಕೂಡು ದೀಪೋ
ದ್ಗಮಮಂಮಾಡಕ್ಷತಾಕ್ಷಾಳನಮನೊಡರಿಸೆಂದಿಂದ್ರನಿಂದ್ರಾಣಿಗೆಂದಂ || ೧೪೯೭ ||

ಎನ್ನುವ ಪದ್ಯದ ಕನ್ನಡ ಮತ್ತು ಸಂಸ್ಕೃತ ಭಾಷೆಯ ಒಡನಾಟ ಮುದವನ್ನು ನೀಡುತ್ತದೆ.

ಶೃಂಗಾರಾದಿ ರಸಗಳು ಆಯಾ ಸಂದರ್ಭಕ್ಕೆ ಅನುಗುಣವಾಗಿ ಎಡೆಪಡೆದಿದ್ದರೂ ಅವು ಶಾಂತರಸಗಮ್ಯವಾಗಿವೆ. ಇವುಗಳ ನಿರ್ವಹಣೆಗಾಗಿ ಚಂದ್ರಪ್ರಭ ಪುರಾಣದಲ್ಲಿ ವಿವಿಧ ಬಗೆಯ ಛಂದಸ್ಸು ಬಳಕೆಯಾಗಿದೆ. ಖ್ಯಾತಕರ್ನಾಟಕಗಳು, ಮಾಲಿನಿ, ಕಂದ, ಪೃಥ್ವಿ, ಅನವದ್ಯ, ಪಿರಿಯಕ್ಕರ, ತ್ರಿಪದಿ, ರಗಳೆ, ಮಲ್ಲಿಕಾಮಾಲೆ, ಶಿಖರಿಣಿ, ಮಂದಾಕ್ರಾಂತ, ವಸಂತ ತಿಳಕ, ಉತ್ಸಾಹ, ಶ್ಲೋಕ, ಸ್ಕಂಧಕ, ಹರಿಣಿ, ಮಾಲಿನಿ ವೃತ್ತಗಳು ಬಳಕೆಯಾಗಿವೆ. ಇದಲ್ಲದೆ ಗದ್ಯಭಾಗಗಳು ವಿಪುಲವಾಗಿವೆ.

ಪಂಪ, ಪೊನ್ನ, ರನ್ನರ, ಕಾವ್ಯನಿಕಷದಲ್ಲಿ ಚಂದ್ರಪ್ರಭ ಪುರಾಣವನ್ನು ಪರಿಶೀಲಿಸಿರುವ ಡಿ.ಎಲ್. ನರಸಿಂಹಾಚಾರ್ ಅವರು “ಮಿಕ್ಕೆಲ್ಲ ವಿಷಯಗಳಲ್ಲಿ ಅಗ್ಗಳನು ಅಗ್ಗಳನೇ ಆಗಿದ್ದರೂ ಪ್ರತಿಭೆಯಲ್ಲಿ ಮಾತ್ರ ಬಡವ”, “ಅವನದು ಒಳಬೆಳಕು ಸಾಲದ ಹೊರಮಿಂಚಿನ ಕವಿತೆ, ಮಹಾಕವಿಯೆಂಬ ಹೆಸರಿಗೂ ಅವನಿಗೂ ಬಲುದೂರ, ಸಾಕಷ್ಟು ಜಿನಭಕ್ತಿಯಿಂದ ಪ್ರೇರಿತನಾಗಿ ಪುಣ್ಯಕಥೆಯನ್ನು ರಚಿಸಿರುವ ಸಂಪ್ರದಾಯದ ಸತ್ಕವಿಯೆಂದು ಅವನಿಗೆ ಮನ್ನಣೆ ಕೊಡಬಹುದು.” “ಪಾಂಡಿತ್ಯದಲ್ಲಿ ಬುದ್ಧಿ ಚಮತ್ಕಾರದಲ್ಲಿ, ಅಪ್ರಯತ್ನ ವಾಗ್ಗುಂಫದಲ್ಲಿ, ತಿದ್ದಿ ತಿಡಿ ಕಡೆದಂತೆ ಸವರಿರುವ ಪದ್ಯರಚನಾ ಚಾತುರಿಯಲ್ಲಿ ಅಗ್ಗಳನು ಗಣ್ಯನಾದ ಕವಿ” ಎಂದಿದ್ದಾರೆ.

ನೃಪಸಭೆಯಲ್ಲಿ ವಾಚಾಳಿಗಳು ಅಗ್ಗಳನ ಶಕ್ತಿಯನ್ನು ತಿಳಿಯದೆ ಮಾತನಾಡಲು ಲೋಕದಲ್ಲಿ ಎಷ್ಟು ಕಲೆಗಳಿವೆಯೋ ಅಷ್ಟನ್ನೂ ಬಲ್ ಅಗ್ಗಳನು ತನ್ನ ಅಗ್ಗಳಗಣ್ಣನ್ನು ತೋರಿದನು. ಇಂತಹ ಸವಾಲಿನ ಪರಿಸರದಲ್ಲಿ ಮೂಡಿಬಂದ ತನ್ನ ಕಾವ್ಯವನ್ನು ಕುರಿತು-

ಕಿವಿಯಂಜಕ್ಕುಲಿಪಂತೆ ನುಣ್ಪಡರ್ದಶಬ್ದಂ ಶಬ್ದಸಂದರ್ಭದೊಳ್
ಸವಿಯಂಮುಂದಿಡುವರ್ಥದೊಳೊಡಂಬಟ್ಟೊಳ್ಪನೋರಂತೆ ಬೀ
ಱುವ ಭಾವಂ ಸಲೆಭಾವದಿಂದೊವಿ ಚಿತ್ತಂ ಕೂಡೆ ತೇಂಕಾಡೆ ಪೊ
ಣ್ಮುವ ನಾನಾರಸಮಿರ್ಪ ವಸ್ತುಕೃತಿಯಂ ಪೇ ೞ್ದಗ್ಗಳಂ ಮೆಚ್ಚಿಪಂ ||

ಎನ್ನುವ ಸಂಕಲ್ಪ ಈಡೇರಿದೆ. ಶತಶತಮಾನಗಳಿಂದ ವಿದ್ವತ್ಪ್ರಿಯರಿಗೆ ಕಾವ್ಯಾಭ್ಯಾಸಿಗಳ ಪ್ರೀತಿಗೆ ಪಾತ್ರವಾಗಿದೆ.

ಗ್ರಂಥಸಂಪಾದನೆ

ಅಗ್ಗಳನ ಚಂದ್ರಪ್ರಭ ಪುರಾಣವನ್ನು ಎಂ.ಎ. ರಾಮಾನುಜ ಅಯ್ಯಂಗಾರ್ ಅವರು ಕಾವ್ಯಕಳಾನಿಧಿ ಗ್ರಂಥಮಾಲೆಯಲ್ಲಿ ೧೯೦೧ರಲ್ಲಿ ಪ್ರಕಟಿಸಿದರು. ಪರಿಷ್ಕರಣೆಗಾಗಿ ೩ ಹಸ್ತಪ್ರತಿಗಳು ಲಭ್ಯವಾದುವು. ಮೈಸೂರು ಸರ್ಕಾರದ ಓರಿಯಂಟಲ್ ಲೈಬ್ರರಿಯ ಹಸ್ತಪ್ರತಿ ಇಂದು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ಭಂಡಾರದಲ್ಲಿದೆ. ಶ್ರವಣಬೆಳಗೊಳ ಮತ್ತು ಸಾಲಿಗ್ರಾಮದ ಹಸ್ತಪ್ರತಿಗಳು ಇಂದು ಎಲ್ಲಿವೆಯೋ ಗೊತ್ತಿಲ್ಲ. ಈ ೩ ಹಸ್ತಪ್ರತಿಗಳಲ್ಲಿಯೂ ವಿಶೇಷವಾದ ಪಾಠ ಭೇದವಿಲ್ಲ ಎಂದಿದ್ದಾರೆ. ಅವರ ಪರಿಷ್ಕರಣ ಕಾರ್ಯ ಶ್ರೇಷ್ಠ ಮಟ್ಟದ್ದಾಗಿದೆ.

‘ಅಗ್ಗಳ ಲೀಲಾವತಿ’ ಎಂದು ಪ್ರಸಿದ್ಧವಾದ ಈ ಪುರಾಣವನ್ನು ಪ್ರಾಚೀನ ಸಂಕಲನಕಾರರು, ಲಾಕ್ಷಣಿಕರು ಮತ್ತು ವೈಯಾಕರಣಿಗಳು ಮಾನ್ಯಮಾಡಿ ತಮ್ಮ ಗ್ರಂಥಗಳಲ್ಲಿ ಉದ್ಧರಿಸಿದ್ದಾರೆ. ಇದರಿಂದ ಈ ಕೃತಿ ಪಂಡಿತ ವಲಯದಲ್ಲಿ ಎಷ್ಟು ಗಮನಾರ್ಹವಾಗಿತ್ತು ಎಂದು ತಿಳಿದುಬರುತ್ತದೆ. ಇಲ್ಲಿನ ಪಾಠಗಳನ್ನು ಲಕ್ಷಿಸಿದೆ. ಇವುಗಳಲ್ಲಿ ಹೆಚ್ಚಿನ ಪಾಠಭೇದಗಳಿಲ್ಲ. ಇರುವ ಕೆಲವನ್ನು ಪರಿಶೀಲಿಸಿ ಅಂಗೀಕರಿಸಿದೆ.

ಮೂಡಬಿದಿರೆಯ ಶ್ರೀ ದಿಗಂಬರಜೈನಧರ್ಮ ಶಾಲೆಯಲ್ಲಿ ನಿಕ್ಷಿಪ್ತವಾಗಿದ್ದು ಕ್ರಿ.ಶ. ೧೫೭೨ರಲ್ಲಿ ಪ್ರತಿಯಾಗಿರುವ ಅಗ್ಗಳನ ಚಂದ್ರಪ್ರಭ ಪುರಾಣದ ಕೊನೆಯಲ್ಲಿ “ಸ್ವಸ್ತಿಶ್ರೀಮತು ೧೪೯೪ ಸಂದ ಅಂಗೀರಸಂವತ್ಸರದಲು ಶ್ರಾವಣಮಾಸದ ಬಹುಳ ತದಿಗೆ ರವಿವಾರದಲು ೫ ಘಳಿಗೆಯಲು ಮುಗೀತು. ಇದಕ್ಕೆ ಸುಭಮಸ್ತು ನಿರ್ವಿಘ್ನಮಸ್ತು. ಶ್ರೀಸೇನಗಣಾಂಬರ ಸೂರ್ಯರೆನಿಸಿದ ಸಂಯಮಾಚಾರ್ಯರುಮಪ್ಪ ಶ್ರೀಲಕ್ಷ್ಮೀಸೇನಾಚಾರ್ಯರ ಪ್ರಿಯಾಗ್ರಶಿಷ್ಯರಾದ ಕ್ಷೋಣಿಗೆಸೇಡಬಳದ ಇಂದ್ರ ನಾಗಣನ ತತ್ಪುತ್ರ ಇದ್ದಪ್ಪನ ಸೋದರಳಿಯ ಪಾಯಣ್ಣನು ಪ್ರತಿಸಮಾನವಾಗಿ ಬರೆದು ಮುಗಿದುದಕ್ಕೆ ಮುಂಗಳಮಹಾಶ್ರೀ” ಎಂದಿದೆ. ಈ ಹಸ್ತಪ್ರತಿಯನ್ನು ಬಳಸಿಕೊಳ್ಳಲು ಆಗಲಿಲ್ಲ.

ಅಗ್ಗಳನನ್ನು ಆಧರಿಸಿ ನಿಟ್ಟೂರು ದೊಡ್ಡಣಾಂಕನು ಚಂದ್ರಪ್ರಭಚರಿತೆಯನ್ನು ಷಟ್ಪದಿಯಲ್ಲಿ ಪಿರಿಯ ಪಟ್ಟಣದ ದೊಡ್ಡಯ್ಯನು ಸಾಂಗತ್ಯದಲ್ಲಿ ರಚಿಸಿದ್ದಾರೆ. ಈ ಕೃತಿಗಳಿಂದ ಅಗ್ಗಳನ ‘ಚಂದ್ರಪ್ರಭ ಚರಿತಂ’ ನ ಪರಿಷ್ಕರಣೆ ಸಾಧ್ಯವಿದೆ.