ಕಂ || ಶ್ರೀವಿಜಯಾಂಕನ ಪಕ್ಕದ
ಸೌವರ್ಣಾಸನಮನೊಸೆದಳಂಕರಿಸಿದನಾ
ಶ್ರೀವತ್ಸಾಂಕಂ ಗಾಂಭೀ
ರ್ಯಾವಸಥಂ ಪಂಚಪರಮಗುರು ಪದವಿನತಂ || ೧

ವ || ಆಗಳಧಿರಾಜ ಪ್ರಸಾದನಾದರಾಹೂತಂ ವಿಯಚ್ಚರದೂತಂ ಪೊಡೆವಡುತ್ತುಂ ತದೀಯದೃಷ್ಟಿ ನಿರ್ದಿಷ್ಟ ಸಮುಚಿತ ವಿಷ್ಟರೋಪವಿಷ್ಟನಾಗಿ-

ಕಂ || ಅನಿಮಿಷನಕ್ಕುಮಿವಂ ಖಚ
ರನಲ್ಲನೆಂಬಿನೆಗಮಾಗಳೆಮೆಯಿಕ್ಕದಲಂ
ಪಿನೊಳವನಿಪಯೊಡ್ಡೋಲಗ
ಮನೆ ನೀಡುಂ ನೋಡುತಿರ್ದನಾ ಖಚರಚರಂ || ೨

ವ || ಅಂತು ತನಗೆ ದೃಷ್ಟಾಪೂರ್ವಮೆನಿಸಿ ಸೊಗಯಿಪ ಸುರಮ್ಯ ರಾಜನಾಸ್ಥಾನಮನಶೇಷ ಲಕ್ಷ್ಮೀನಿಧಾನಮಂ ನೋಡಿ ಸಮಯೋಚಿತ ವಚೋವಿಳಾಸ ಪ್ರಕಾಶಮುಖರನಾಗಿ-

ಕಂ || ನರಪಾಳಮೌಳಿಮಾಳಾ
ಪರಸ್ಪರಪ್ರೋತರತ್ನ ರುಗ್ಜಾಳದಿನಂ
ಬರಮಿದಪೂರ್ವ ದಿವ್ಯಾಂ
ಬರಮಾದುದು ಭವನಲಕ್ಷ್ಮಿಗೇವೊಗ ೞ್ವೆನಿದಂ || ೩

ಬಳಸಿರ್ದೆಳೆವೆಂಡಿರ ಕ
ಣ್ಬೆಳಗಿಂಗಗಿದೋಡಿ ಪೊಕ್ಕಪುದು ಕೞ್ತಲೆ ಭೂ
ತಳಮನಿದೆ ತಳಿದ ಮೃಗಮದ
ಜಳಕ್ಕೆ ಬಂದೆಱಗುವಳಿಕದಂಬದ ನೆವದಿಂ || ೪

ಅಳಿಮಾಳೆ ಬಳಸದೀ ಪೂ
ವಲಿಯಲರ್ಗಳ್ಗುರುಳ ಚಿನ್ನಪೂವಿನ ಚೆಲ್ವಂ
ನೆಲವೆಣ್ಗೆ ಪಡೆದಿದೇಂ ಕ
ಣ್ಮಲರನಲರ್ಚಿದುವೊ ಮಣಿಮಯಾಂಗಣತಳದೊಳ್ || ೫

ಕಂ || ಬಿಡುಮುತ್ತಿನ ಕಡೆಯಂ ಕೇ
ಸಡಿವೆಳಗಿಂ ಮುಸುಕಿ ಚರಣನಖರುಚಿಯಿಂದೇಂ
ಪಡೆದಪರೊ ಬೇಱೆ ಮುತ್ತಿನ
ಕಡೆಯಂ ರಾಜಾಂಗಣಕ್ಕೆ ಬರ್ಪೆಳವೆಂಡಿರ್ || ೬

ಯುವತಿಯರ ಮುಡಿಗಳೊಳ್ ಧೂ
ಪವರ್ತಿಕಾ ಧೂಮಲೇಖೆವಿಡಿದಿವು ಮೊರೆಯು
ತ್ತಿವೆ ಕೇಳಿಸಿದಪುವಂಗೋ
ದ್ಭವಶಿಕ್ಷಿತ ವಂಶವಾದ್ಯಮಂ ಸಭೆಗಳಿಗಳ್ || ೭

ನೆಗೆವ ಪೊಗೆ ಗುಡಿಗಳಿಂದೇಂ
ಸೊಗಯಿಸುತಿರ್ದಪುವೊ ಸುತ್ತಲುಂ ಕೞ್ತಲೆಯಂ
ಮಿಗೆ ಕುಡಿದೞ್ಕಿಸಲಾಱದೆ
ಮಗುೞ್ಚಿವೆ ಕಾಱಿದಪುವೆನಿಸಿ ಕೆಯ್ದೀವಿಗೆಗಳ್ || ೮

ಪ್ರತಿಬಿಂಬಚ್ಛಲದಿಂ ನೃಪ
ಸುತರಾ ಭುಜಪಂಜರಂಗಳಂ ಸಾರ್ದುದಿಳಾ
ಪತಿ ನಿಜರಾಜನ ದೀಪ
ಪ್ರತತಿ ಚಳಚ್ಚಾಮರಾನಿಳಾಹತಿ ಭಯದಿಂ || ೯

ವ || ಎಂದಿಂತು ವಿವಿಧ ಸಾಹಿತ್ಯ ಸೂಕ್ತಿಗಳಿಂ ಸಭೆಯ ಶೋಭೆಯಮಂ ಸಾಮ್ರಾಜ್ಯದುನ್ನತಿ ಯುಮನೆಡೆವಿಡದೆ ಬೆರಲ್ಮಿಡಿದು ಬಿಚ್ಚಳಿಸಲ್ ತಗುಳ್ದಿಂದುವಂ ನಿಸ್ತವನ ಲಜ್ಜಾಭಿನಯ ವಿಜೃಂಭಿತ ಮುಖಾಂಭೋಜಂ ಪ್ರಜಾಪತಿ ಮಹಾರಾಜನನಿತಱೊಳೆ ನಿಲಿ ಪೂರ್ವ ಪ್ರಕತಮಂ ಪುರೋಹಿತ ಪ್ರಧಾನಪರ್ಯಾಳೋಚಿತ ನಿಶ್ಚಿತಮನಾತ್ಮಸುತವಿವಾಹ ಕಲ್ಯಾಣಕಾರ್ಯಮನಾ ಖಚರದೂತನೊಳ್ ಸವಿಸ್ತರಂ ನುಡಿದೊಡಂಬಟ್ಟು ಮೌಹೂರ್ತಿ ಕರಂ ಬರಿಸಿ ಪೂಜಾಪುರಸ್ಸರಂ ಬೆಸಗೊಂಡು ವೈವಾಹಿಕ ವಿಶುದ್ಧಲಗ್ನಮಂ ಕಯ್ಕೊಂಡು ಪರಮೋತ್ಸವದಿನಿಂದುವನಪೂರ್ವದಿವ್ಯಾಂಬರ ವಿಭೂಷಣಾದಿ ಪ್ರಸಾದದಾನಮಂ ಪ್ರಾರ್ಥಿಸಿ ಕೆಯ್ಕೊಳಿಸಿ ಬೀೞ್ಕೊಳಿಸುವುದುಂ ಆತನಾ ನೃಪನ ಬಹುಮಾನಕ್ಕೆ ಪರಿತುಷ್ಟನಾಗಿ-

ಕಂ || ಗಗನದೊಳೆ ಪಾಱುವತಿಲಘು
ಗೆ ಗುರುತ್ವಮನೆನಗೆ ಮಾಡಿ ಪೆಂಪಂ ಮೆಱೆದಯ್
ಮಿಗೆ ಮನ್ನಿಸಿ ಪೋಗಲ್ಕಂ
ಘ್ರಿಗಳೆೞ್ದಪುವಿಲ್ಲ ನಿನ್ನಪಕ್ಕದಿನದಱಿಂ || ೧೦

ವ || ಎಂದು ನಿಜಪ್ರತಿಪತ್ತಿಯಂ ಪ್ರಕಟಿಸಿ ನುಡಿದು ಬೀೞ್ಕೊಂಡು ಬಲಗೆಲದೊಳಿರ್ದ ಬಲದೇವಂಗೆ ನಿಜಮುಖಾವಳೋಕನಿಷ್ಠನಂ ತ್ರಿಪೃಷ್ಠನನಿಂದು ಮಂದಸ್ಮಿತಮುಖೇಂದು ಮೆಲ್ಲನೆ ತೋಱಿ-

ಕಂ || ಅನುಬಂಧಿಸಿ ಗುಣದಿಂ ಮ
ನ್ಮನಮಂ ಸೆ ಱೆವಿಡಿದನೆನ್ನ ತಂದೀವಬಳಾ
ಜನರತ್ನಮೆಯ್ದೆ ಕೆಯ್ಸಾ
ರ್ವಿನಮೆನ್ನಂ ನಂಬದಿರ್ಕುಮೀ ನಿನ್ನನುಜಂ || ೧೧

ವ || ಎನುತುಮೆೞ್ದು ತನ್ನ ನುಡಿದ ಸಮುಚಿತ ಸ್ನೇಹಧರ್ಮ ನರ್ಮೋಕ್ತಿಗೆ ತತ್ಸಭಾಜನದ ಹರ್ಷಹಾಸಮೆ ನಿಜಪ್ರಯಾಣಮಂಗಳಪಟಹರಭಸಮಾಗೆ ಸಭೆಯಿಂ ತಳರ್ದು-

ಚಂ || ಪೊಳೆಯೆ ಕಟಾಕ್ಷಮಾ ಮಗುೞ್ದು ನೋೞ್ಪನೆ ಪಿಂದೆ ದುಕೂಲಚೇಲಮಾ
ಮಿಳಿರ್ದುದೆ ಕಂಕಣಂಗಳವೆ ಘಣ್‌ಫಣಿಲೆಂದಪುವಿನ್ನುಮಾ ಮುಗಿ
ಲ್ಗಳ ಮಱೆಯೊಳ್ ತಟಿಲ್ಲತೆವೊಲಾ ಪೊಳೆದಪ್ಪನೆ ನೋಡಿಮೆಂದು ಗೋಣ್
ಬಳೆವಿನಮೀಕ್ಷಿಸುತ್ತುಮಿರೆ ತತ್ಸಭೆ ಪೋದನವಂ ಘನಾಧೃದೊಳ್ || ೧೨

ವ || ಅನಂತರಂ ಪ್ರಜಾಪತಿ ನೃಪತಿ ನಿಜಸಭೆಯಂ ವಿಸರ್ಜಿಸಿ ಸೆಜ್ಜೆವನೆಗೆ ಬಿಜಯಂಗೆಯ್ಯೆ-

ಕಂ || ಗುರುಜಘನಭಾರೆಯೆನಿಸಿದ
ತರುಣಿಯಿನಾಕ್ರಾಂತ ಹೃದಯನಾದುದನಱಿಪು
ತ್ತಿರೆ ಮಂಥರಗತಿ ನಿಜಮಂ
ದಿರಕ್ಕೆ ವಂದಂ ಮುಕುಂದನಸವಸದಿಂದಂ || ೧೩

ವ || ತದನಂತರಂ-

ಕಂ || ಇನಿಯವಳೊಲವಿನ ವೃತ್ತಕ
ಮಿನಿಸಂ ನೃಪನಾರ್ತ್ತಿಯಂ ನಿವರ್ತಿಸಿ ಮಗುೞ್ದುಂ
ಮನಸಿಜತಾಪಕ್ಕುದ್ದೀ
ಪನಮಾದುದಕಾಲವರ್ಷಪಾತದ ತೆಱದಿಂ || ೧೪

ವ || ಆಗಳಳವಿಗೞಿದ ವಲ್ಲಭಾಸಮಾಗಮೌತ್ಸುಕ್ಯ ತೃಷ್ಣಾವೇಗಮಂತರಂಗದೊಳ್ ತಗುಳ್ದು ಮನೋಜಸಂಜ್ವರಮನುದ್ದಮುರಿಪೆ-

ಕಂ || ನೆಗೆದೊಗೆವಗುರುವ ಧೂಪದ
ಪೊಗೆಯಂ ಮಣಿದೀಪದೀಪ್ತಿಯಂ ಬೀಱಿ ವಿಳಾ
ಸಗೃಹಂ ತಾಪಮನಿತ್ತುದು
ಪುಗೆ ನೃಪತಿಗನಂಗವಹ್ನಿಕುಂಡದ ತೆಱದಿಂ || ೧೫

ಒಳಗಡೆವೊತ್ತುವ ಮದನಾ
ನಳನಂ ಚಮರೀಜ ಧಾರಿಣೀ ಚಾಳಿತ ಕೋ
ಮಳ ತಾಳವೃಂತ ಮಂದಾ
ನಿಳಮುರಿಪಿದುದೊದವಿ ನೃಪನ ನಿಡುಸುಯ್ಯೆಲರಿಂ || ೧೬

ಗವಸಣಿಗೆಗಳೆದು ಕುಡೆ ನೋ
ಡಿ ವೀಣೆಗಾ ನೃಪತಿ ನೀಡಲಣ್ಮನೆ ಕರಪ
ಲ್ಲವಮಂ ಪೆರೆಗಳೆದ ಮನೋ
ಜ ವಿಷೋರಗಮೆಂದು ಬಗೆದನಕ್ಕುಂ ಮನದೊಳ್ || ೧೭

ಅವತಂಸ ಕುಮುದದೊಳ್ ಜಿನು
ಗುವಳಿಗೆ ಕಿವಿಯಿತ್ತನುಸಿರಲಿನಿಯಳ ಮಾತಂ
ಕಿವಿವುರ್ಚಿದಪುದೆಗೆತ್ತ
ಣ್ಮುವ ನಲ್ಲಂ ಕೇಳಲೆಂತುಮಳಿನಿಸ್ವನಮಂ || ೧೮

ಆ ಕೃಷ್ಣನ ಕಣ್ಗಳೊಳಿರು
ಳೇಕಾಂತದೆ ಖಚರಕನ್ಯೆ ತೊಳಲುತ್ತಿರೆ ದೋ
ಷೈಕಾಭಿನಿವೇಶಿನಿ ನಿ
ದ್ರಾಕಾಮಿನಿ ಪುಗಳೆ ಮಱೆದುಮಿದು ತಕ್ಕುದೆ ದಲ್ || ೧೯

ಏಗೆಯ್ದೊಡಮಾ ನೃಪತಿಗೆ
ಪೋಗದು ಪೊೞ್ತೆನಿಸಿ ಪೋದುವಂತೆ ದಿನಂಗಳ್
ಸಾಗರದೊಳ್ ನಿಂದಿರ್ಪವೊ
ಲಾಗಿರ್ಪತ್ತೇಱಿದಂಗೆ ಪರಿವ ಬಹಿತ್ರಂ || ೨೦

ವ || ಮತ್ತಂ-

ಉ || ಗಾನೋದ್ಯೋಗದೆ ಪೋಗಿ ಮೌನದೆ ವಲಂ ಜಾನಿಪ್ಪನೆೞ್ತಂದು ತಾ
ರಾನಾಥೇಕ್ಷಣ ಕಾಂಕ್ಷಣಂ ನಯನಮಂ ಪ್ರಚ್ಚಾದಿಪಂ ಕೆಯ್ಗಳಿಂ
ತಾನೀಡಾಡಲೆ ಸಾರ್ದು ಮೆಯ್ಯನಿರದೆೞ್ದಾಮಂಚದಿಂ ಪೋಪನಿಂ
ತೇನಂ ಪೇೞ್ವುದೊ ಮಾಣದಾ ಕುವರನಂ ಕಾಡಿತ್ತು ಕಾಮಗ್ರಹಂ || ೨೧

ವ || ಅದಲ್ಲದೆಯುಂ-

ಉ || ಪೂಗೊಳದಿಂ ಪುೞಿಲ್ಗೆ ಪುೞಿಲಿಂ ಜಳಯಂತ್ರಗೃಹಕ್ಕೆ ಯಂತ್ರಧಾ
ರಾಗೃಹದಿಂ ಬನಕ್ಕೆ ಬನದಿಂ ಲತಿಕಾ ಭವನಕ್ಕೆ ಬರ್ಪನು
ದ್ವೇಗದಿನೆಲ್ಲಿಯುಂ ನಲಿಸಲಾಱದೆ ಮೆಯ್ಯನಹರ್ನಿಶಂ ನೃಪಂ
ಪೂಗಣೆದೊಟ್ಟು ಕಂತು ಬೞಿಸಂಧಿಸೆ ಸುತ್ತಲುಮೋಡುತಿರ್ಪವೋಲ್ || ೨೨

ವ || ಅಂತು ಕಂತುಸಂತಾಪಚಿಂತಾವ್ಯತಿಕರದೊಳ್ ಪರಿಣಯನಲಗ್ನಾಂತರಾಳ ಕತಿಪಯ ದಿನಂಗಳೆ ದಿನಸಹಸ್ರಾಯಮಾನಂಗಳಾಗಿ ಪೋಗೆ-

ಕಂ || ಘನತೃಷ್ಣಾತುರನುತ್ಕಂ
ಠನಭಿನವೋದ್ಗತ ಪಯೋಧರಾಗಮನಮನಾ
ಜನಪತಿ ಪಾರ್ದು ವಿಯತ್ಪಥ
ಮನೆ ನೋಡುತಿರ್ದನಾಸೆಯಿಂ ಚಾದಗೆವೋಲ್ || ೨೩

ವ || ಅಂತು ಗಗನಮಾರ್ಗದೊಳ್ ವಿಯಚ್ಚರ ಕುಮಾರಿಗವತರಿಸಲವಳೋಕನಾಳೋಕ ವೀಚೀಚ್ಛಲದಿಂ ಮೃದುಮೃಣಾಳನಾಳಲೀಲಾನಿಶ್ಶ್ರೇಣಿಕೆಯನವಟೈಸುತಿರ್ಪ ವಾಸುದೇವನ ವಿಳೋಚನ ಚಂಚರೀಕಕ್ಕಪೂರ್ವ ಸುರಭಿಸಮಯಾಗಮನಮೆನಿಸಿ-

ಮ || ಗಗನಾಗ್ರೋತ್ಕರ ಪಾಳಿಕೇತನ ವಿಮಾನಚ್ಛತ್ರ ಪಿಂಛಾತಪ
ತ್ರಗಣಚ್ಛಾಯೆ ವಿಲೀಯಮಾನ ದಿವಸಶ್ರೀಯಂ ವಿಭೂಷಾಮರೀ
ಚಿಗಳಿಂ ಪುಟ್ಟಿಸಿ ಧಾತ್ರಿಯಂ ಬೆಳಗುತುಂ ಬಂದಂ ಖಗೇಂದ್ರಂ ಸ್ವಗೋ
ತ್ರ ಗುರುಜ್ಞಾತಿಪರೀತನಾತ್ಮಸುತೆಯಂ ಮುಂದಿಟ್ಟು ಮೇಘಾಧ್ವದಿಂ || ೨೪

ವ || ಅಂತುಮಲ್ಲದೆಯುಂ-

ಚಂ || ಎಳವಿಸಿಲಂ ವಿಯಚ್ಚರ ಕುಮಾರ ಸಹಸ್ರಕಿರೀಟರತ್ನಸಂ
ಕುಳ ರುಚಿ ಬೇಱೆ ಬಿತ್ತರಿಪಿನಂ ನವಚಂದ್ರಿಕೆಯಂ ವಿಯಚ್ಚರೀ
ಚಳನಯನಾಂಶು ಮುಂದಿಡುವಿನಂ ನಭದಿಂದೊಗೆತಂದನಂದು ಕ
ಣ್ಗೊಳೆ ಖಗರಾಜನುರ್ವಿಗೆ ವಿಡಂಬಿಸುತುಂ ಖಗರಾಜಲೀಲೆಯಂ || ೨೫

ವ || ಅಂತು ಬರ್ಪಲ್ಲಿ-

ಕಂ || ಗಗನದೊಳಚ್ಚರಿಯೆನೆ ನೆಗೆ
ದೊಗೆದುದು ಕೆಂಧೂಳಿ ಖಚರಿಯರ ಸೋರ್ಮುಡಿಯಿಂ
ದುಗುವಿರವಂತಿಯ ಸಂಪಗೆ
ಯ ಗೊಜ್ಜಗೆಯ ಸುರಯಿಯರಲ ರಜದುರ್ವಿನದಿಂ || ೨೬

ಚಂ || ಪೊಳೆಯೆ ಕಟಾಕ್ಷ ರಶ್ಮಿ ಕುಡುಮಿಂಚಿನವೋಲ್ ಸುರಚಾಪಲಕ್ಷ್ಮಿವೋಲ್
ಬಳಸೆ ವಿಭೂಷಣಾಂಶುಲತೆ ತಂದಲಬಿಂದುವೊಲುಣ್ಮಿ ತೆಳ್ವೆಮ
ರ್ಗಳಿಯಿಸೆ ಮೇಘಮಾಳೆವೊಲದೇನೆಸೆದತ್ತೊ ನಭಃಪ್ರಯಾಣದೊಳ್
ಚಳದಳಕಾಳಿ ಮೇಚಕಿತ ದಿಗ್ವಳಯಂ ಖಚರಾಂಗನಾಜನಂ || ೨೭

ಚಂ || ಪೊಳೆವಲರ್ಗಂಗಳುಂ ಕಚಭರಂಗಳುಮುಚ್ಚಕುಚಂಗಳುಂ ಕುರು
ಳ್ಗಳುಮೊಡನೋಳಿಗೊಂಡಿರೆ ಚಕೋರ ಮಯೂರ ರಥಾಂಗ ಭೃಂಗಮಂ
ಡಳಿ ನಲಿವಾಱಿದಪ್ಪುವು ತರಂತರದಿಂದೆನಿಸಿತ್ತು ಕಣ್ಗೆ ಗೊಂ
ದಳಿಸಿ ಬರುತ್ತಮಿರ್ಪ ಖಚರೀಜನಮಾಳೆ ನಭೋಂತರಾಳದೊಳ್ || ೨೮

ವ || ಮತ್ತಮಲ್ಲಿ-

ಕಂ || ತೆರೆಮುಗಿಲ ಮಱೆಗೆ ನಲ್ಲಂ
ಬರೆ ತೆಗೆದೆಳಸುವುದು ಮೊಗೆವ ಸುಯ್ಯೆಲರ್ಗಳಿನಾ
ನೆರೆದ ಮುಗಿಲ್ ಕರಗೆ ವಿಯ
ಚ್ಚರಿಗೇಂ ಕಲಿಸಿದುದೊ ಲಜ್ಜೆಯೊಳ್ ಕರಗುವುದಂ || ೨೯

ಖಗರಾಜನ ಬರವಂ ಕಂ
ಡೂಗೆತಂದುವು ಗಗನಲಕ್ಷ್ಮಿಗಾನಂದಭರಾ
ಶ್ರುಗಳೆನಿಸಲಾಯ್ತು ಖೇಚರಿ
ಯರುರುಸ್ತನ ತಾಡಿತಾಭ್ರ ಮುಕ್ತಾಸಾರಂ || ೩೦

ವ || ಅಂತು ವಿವಿಧ ವಿದ್ಯಾಧರಾವಳೀ ವಿಳಾಸಾಡಂಬರದಿನಂಬರಂ ಭೂಭವನ ವಿರಚಿತ ವಿಚಿತ್ರ ಚಿತ್ರಾಂಬರಮೆನಿಸಿ ಕಣ್ಗೊಳಿಸೆ ಬಂದು-

ಕಂ || ಭೂಕಾಂತೆಗೆಱಗಿದಂ ಖಗ
ಲೋಕಾಗ್ರಣಿ ನಿಜವಿಯೋಗ ಸಮುದಿತ ಘನಕಾ
ರ್ಷ್ಣ್ಯಾಕೃತಿಯನುೞಿದು ಗಗನ
ಶ್ರೀಕಾಂತೆಯನಿಂತುಟಲ್ತೆ ಪಾಱುಗಳಂದಂ || ೩೧

ಖಗಪತಿ ಸಾರ್ತರೆ ಪೌದನ
ನಗರೀ ಪಾರ್ಶ್ವಕ್ಕೆ ತನ್ನನುೞಿದಾಗಳದೇಂ
ಸೊಗಯಿಸದೆ ಬಿನ್ನನಿರ್ದುದು
ಗಗನಶ್ರೀ ಪೆಱಗೆ ಸರ್ವಶೂನ್ಯಾಕೃತಿಯಿಂ || ೩೨

ವ || ಅಂತೆನಿಸಿದ ಗಗನಮಾರ್ಗದಿಂ ಜ್ವಳನಜಟಿ ಮಹಾರಾಜಂ ತನೂಜೆವೆರಸಶೇಷಾಂತಃಪುರ ಪ್ರಧಾನ ಪರಿಜನ ಸುಹೃಜ್ಜನ ಪರೀತಂ ಪರಿಣಯನ ಲಗ್ನಮಂ ಮುಂದಿಟ್ಟು ಪೌದನ ಪುರಮನೆಯ್ದೆವರೆ ಬರ್ಪನಿಬ್ಬಣದ ಬರವಂ ಪುರಃಪ್ರೇಷಿತ ತದೀಯ ದೂತವಿಜ್ಞಾಪನದಿಂ ಕೇಳ್ದು ತದಾಕರ್ಣನೋದ್ಘಾಟಿತ ಕರ್ಣದ್ವಾರದೊಳ್ ಮುನ್ನಂ ಮಹೋತ್ಸವಮೊದವೆ ಘೂರ್ಣಮಾನಲೋಚನಾಂಚಳದಿಂ ಗುಡಿಗಟ್ಟಿ ಪುಳಕೋದ್ಗಮದಿನಿದಿರ್ಗೊಳ್ವ ಘನ ಪ್ರಮೋದ ವೃತ್ತಿಯಂ ದ್ವಿಗುಣಿಸಿ ಪರಮೋತ್ಸಾಹಾವಗಾಹ ಸಭಾಂತಸ್ಸ್ವಾಂತಂ ಪ್ರಜಾಪತಿ ಮಹೀಕಾಂತನಾತ್ಮೀಯ ಪುರಶ್ರೀಯಂ ವಿಶಿಷ್ಟ ಶೋಭೆಯಿನಳಂಕರಿಸವೇೞೆ-

ಕಂ || ವಸುಧೆಗದೇಂ ಗಂಧಾಕ್ಷತೆ
ಕುಸುಮಾರ್ಚನಮಾಯ್ತೊ ತಳಿಯೆ ಕುಂಕುಮಜಳಮಂ
ಪೊಸಮುತ್ತಿನ ಕಡೆಯಂ ವಿರ
ಚಿಸಿ ಪೂವಲಿಗೆದಱೆ ಪುರಜನಂ ಮನೆಮನೆಯೊಳ್ || ೩೩

ಬಳೆದಿರ್ದ ಬಳ್ಳಿಮಾಡಂ
ಗಳೆ ದಾಂಗುಡಿವಿಟ್ಟುವೆನಿಸಿ ಕಟ್ಟಿದ ಗುಡಿಗಳ್
ಮಿಳಿರ್ದೆಸೆದುವು ನಭದೊಳ್ ಗೊಂ
ದಳಿಸಿ ತೆಱಂಬೊಳೆವ ನಿ ಱಿಮುಗಿಲ್ಗಳ ಪುದುವಿಂ || ೩೪

ತೆರೆಮಸಗಿದುದೊಂದು ವಿಯ
ಚ್ಚರ ರಾಜೋದಯದೊಳೊದವಿ ತತ್ಪುರರತ್ನಾ
ಕರಮೆತ್ತೆತ್ತಂ ಪವನೋ
ತ್ತರಳಿತಮಣಿತೋರಣಪ್ರತಾನಚ್ಚಲದಿಂ || ೩೫

ಧರೆ ತತ್ಖೇಚರರಾಜನ
ಬರವಿಂಗಿದಿರೆೞ್ದಳೆನಿಸಿದುದು ಪುದಿದು ನಭಂ
ಮೆರೆದು ಪುರಪುರಂಧ್ರೀಬ್ರಜ
ಕರಪಂಕಜ ಪುಟವಿಕೀರ್ಣಪಟವಾಸರಜಂ || ೩೬

ವ || ಅನಂತರಮಾ ನೃಪಂ ಪ್ರಧಾನ ಸೇನಾಪತಿ ಪುರೋಹಿತ ಕುಮಾರವರ್ಗಂಬೆರಸು ಕೆಯ್ಗೆಯ್ದು ರಾಗದಿನಿದಿರ್ಗೊಳಲು ತಾತ್ಕಾಲಿಕ ಕುಲೋಚಿತಾಚಾರ ಪ್ರಶಸ್ತವಸ್ತೂಪಾಯನ ಸ್ತಬಕಿತ ಹಸ್ತಾಂಬುಜ ನಿಜಾಂತಃಪುರ ಸುವಾಸಿನೀ ಸಹಸ್ರಪುರಸ್ಸರಂ ಪೊಱಮಟ್ಟು ನಡೆಯೆ-

ಕಂ || ಇವೆ ಪುಟ್ಟಿಪುವಸ್ಮತ್ಪ್ರತಿ
ರವಮಂ ಪ್ರತಿಪಕ್ಷಮೆಮಗಿವೆಂದೋವದೆ ಪೊ
ಯ್ವವೊಲೆಯ್ದೆ ದಿಙ್ಮುಖಂಗಳ
ನವುಂಕಿ ತಳ್ಪೊಯ್ದುವಾನಕ ಧ್ವಾನಂಗಳ್ || ೩೭

ಪೊಗೞಲ್ ತದ್ವೈಭವಮಂ
ಗಗನಶ್ರೀದೇವಿ ತಳೆದ ವೈಕುರ್ವಣ ಜಿ
ಹ್ವೆಗಳೆನೆ ಮಿಳ್ಳಿಸಿದುವು ಪೞ
ಯಿಗೆಗಳ್ ಮೃದುಪವನ ರಟರಟತ್ಕೃತಿಪಟುಗಳ್ || ೩೮

ಚಂ || ಪೊಡರ್ವಳಕಾಳಿ ಹೂಡಿದ ಹಯಾಳಿ ತೆಱಂಬೊಳವೋಲೆ ಗಾಲಿ ಪೂ
ಮುಡಿ ಚಳಕೇತುವಾಗೆ ಮದವೇಱಿದ ಸಾರಥಿಯಾಗೆ ವಿಭ್ರಮಂ
ಬಡೆದ ನಿಜಾಸ್ಯಪಙ್ತಿಗಳಿನಿಟ್ಟೆಡೆಯಾಗಿರೆ ಪಣ್ಯವೀಧಿಯೊಳ್
ನಡೆದುದು ಪೆಂಡವಾಸಮತನುಧ್ವಜಿನೀ ರಥಯೂಥಮೆಂಬಿನಂ || ೩೯

ತೊಳಗುವ ದರ್ಪಣಂ ನನೆಯಬಾಸಿಗಮಕ್ಷತರಾಜಿ ದೂರ್ವೆ ಮಂ
ಗಳಕಳಶಂಗಳೊಪ್ಪಿರೆ ಕರಂಗಳೊಳಾತ್ಮ ಕಪೋಳವೀಕ್ಷಣಂ
ಗಳ ಸುಲಿಪಲ್ಲ ಪುರ್ವಿನ ಕುಚಂಗಳ ಭಂಗಿಯನುರ್ವಿಗೆಲ್ಲಮಂ
ತಳೆದೊಳಗಿಕ್ಕಿ ತೋಱುವವೊಲಂದೆಸೆದತ್ತು ವಿಳಾಸಿನೀಜನಂ || ೪೦