ವ || ಅನಂತರಂ-

ಮ || ಅದಱೊಳ್ ಸಂತತಮಾ ಖಳಂ ಪ್ರಮದದಿಂ ಮುಕ್ತಾಮೃಣಾಣೋರುಹಾ
ರದ ಕಲ್ಹಾರದ ಕರ್ಣಪೂರದ ಲಸದ್ವಾರಾಮಗನಾಗೀತ ಪೂ
ರದ ಕರ್ಪೂರದ ಚಾರುಚಂದನದ ಕಸ್ತೂರೀಕದಂಬಾನುಲೇ
ಪದ ತಾಂಬೂಲದ ಕಾಮಿನೀರತದ ಭೋಗಾಭೋಗದಿಂದಿರ್ಪಿನಂ || ೪೧

ವ || ಅತ್ತಲಾ ವಿಶ್ವನಂದಿ ಯುವರಾಜಮೃಗರಾಜಂ-

ಮ || ಸ್ರ || ಅನತೋರ್ವೀಪಾಳರಂ ಕಾಳೆಗದೊಳೆ ವಿರಥರ್ ಮಾಡಿ ಸದ್ವಸ್ತು ಸದ್ವಾ
ಹನ ಸತ್ಕನ್ಯಾನಿಕಾಯಂಗಳನೆ ತಳೆದು ದೋರ್ದಂಡದೊಳ್ ವೀರಸದ್ಗೋ
ಮಿನಿಯಂ ತಾಂ ಸುಸ್ಥೆಯಪ್ಪಂತಿರಿಸಿ ಮಗುೞ್ದು ಸದ್ರಾಗದಿಂ ಬಂದು ವಿಶ್ವಾ
ವನಿವಿಖ್ಯಾತಂ ಸ್ವಕೀಯೋರ್ಜಿತಪುರವರಮಂ ಪೊಕ್ಕನುದ್ಯದ್ಭಟಾರ್ಕಂ || ೪೨

ವ || ಆ ಪ್ರಸ್ತಾವದೊಳ್-

ಶಾ || ಪೌರಸ್ಮೇರಮುಖಾರವಿಂದ ವನಿತಾಸಂದೋಹಮೆಯ್ತಂದು ತ
ನ್ಮಾರಾಕಾರನನತ್ಯುದಾರನನಿಳಾಲೋಕೈಕ ಸದ್ವೀರನಂ
ಪಾರಾವಾರಗಭೀರನಂ ಸಮುಚಿತಪ್ರೋದ್ಭಾಸಿ ಶೃಂಗಾರನಂ
ಚಾರೂದ್ಯನ್ನಯನಾಂಶುಚಂದ್ರಿಕೆಗಳಿಂ ನೀರಾಜಿಸುತ್ತೆತ್ತಲುಂ || ೪೩

ವ || ಅಂತು ಪುರವರದೊಳುರುತರ ಕೌತುಕಾತಿಪ್ರಮೋದಂಗಳನುತ್ಪಾದಿಸುತ್ತುಂ ಬಂದು ಪ್ರಶಂಸಾಲಾಲಸ ಭುವನಮಂ ಭೂಪತಿಭವನಮಂ ಪೊಕ್ಕು-

ಮ || ಸ್ರ || ಪರಪೃಥ್ವೀಪಾಳರಂ ಸಾಧಿಸಿ ಪಡೆದ ಸಮಸ್ತಪ್ರಶಸ್ತಾರ್ಥ ವಾಹೋ
ತ್ಕರಮಂ ಮುಂದಿಟ್ಟು ಕಂಠಾಭರಣಕಿರಣ ಸತ್ಪುಷ್ಪದಾಮಂಗಳಿಂದಂ
ಚರಣಾಂಭೋಜಾತಮಂ ಪೂಜಿಸಿದ ತನಯನಂ ತತ್ಪಿತೃವ್ಯಂ ಧರಾಧೀ
ಶ್ವರನಾಶೀರ್ವಾಕ್ಸಮೇತಂ ತೆಗೆದು ಬಿಗಿದು ತೞ್ಕೈಸಿದಂ ಪ್ರೀತಿಯಿಂದಂ || ೪೪

ವ || ತದನಂತರಂ-

ಚಂ || ಮಗನೆ ಮದನ್ವಯಕ್ಕೆ ಮಣಿದರ್ಪಣನೈ ಮದುದಗ್ರ ಪುಣ್ಯವಾ
ರ್ಧಿಗೆ ಮೃಗಲಕ್ಷ್ಮನೈ ಮದಭಿವಾಂಛಿತ ಕಾರ್ಯವನಕ್ಕೆ ಚೈತ್ರನೈ
ನೆಗೞ್ದಮದಂಬಕದ್ವಯ ಕಳಾಪಿಗೆ ಚಾಪಳಮೇಘಜಾಳನೈ
ಜಗದಧಿಕಪ್ರತಾಪ ನಿನಗಾರ್ ದೊರೆ ಮಾನವರೀ ಧರಿತ್ರಿಯೊಳ್ || ೪೫

ವ || ಎಂದಾನಂದದಿಂ ಪೊಗೞ್ದು ನಂದನನಂದು ತಂದು ತನ್ನ ಪಾದಾರವಿಂದ ದ್ವಂದ್ವದೊಳ್ ಎಱಗಿಸೆ ತಱುಗಿ ಮೆಱೆವ ಭೂಮಿರೂಢಕಾಮರೂಪಪ್ರಮುಖಭೂಪರಂ ಗಳಿತಾವಳೇಪರಂ ಭೂರಿಕಾರುಣ್ಯವೀಕ್ಷಣದಿನೀಕ್ಷಿಸಿ ಮಹಾವಿಭವವಿಭುತ್ವಭೂಷಿತ ನಾಗಳವರನಭಯದಾನಮಾನಿತರ್ಮಾಡಿ ನಿಜನಿಜನಗರಿಗಳ್ಗೆ ಕಳಿಪಿ ಕುಳಪತಾಕನಂ ಯುವರಾಜಪ್ರವೇಕನಂ ಸಮುಚಿತಪ್ರತಿಪತ್ತಿಪೂರ್ವಕಂ ನಿಜನಿಳಯಮನಳಂಕರಿಸೆಂದು ಬೀೞ್ಕೊಳಲೊಡಂ-

ಉ || ವಾಸವಲೀಲೆಯಿಂ ನಿಜನಿವಾಸಮನಾ ವಿಭು ಪೊಕ್ಕು ಕೇಳ್ದು ವಿ
ಶ್ವಾಸಿಗಳೆಲ್ಲರಂ ಮಡಿಪಿ ವೀಕ್ಷಿಸೆ ಮಂದಿ ವಿಶಾಖನಂದಿ ಶೋ
ಭಾಸಮುಪೇತಮಪ್ಪ ಬನಮಂ ತನಗಾಗಿಸಿ ರಾಗದಿಂದೆ ಕೇ
ಳೀಸಖಸಂಗತಂ ತಳರದಿರ್ದಪನೆಂದುಸಿರ್ವಾಪ್ತರುಕ್ತಿಯಂ || ೪೬

ಕಂ || ತೊಟ್ಟನೆ ಕೋಪಜ್ವಲನಂ
ಪುಟ್ಟೆ ಭುಗಿಲ್ ಭುಗಿಲೆನುತ್ತೆ ಮನದೊಳ್ ಕುವರಂ
ಕಟ್ಟಾಳ್ ಕಡುಕೆಯ್ದೆಯ್ದಿದ
ನೊಟ್ಟಜೆಯಿಂ ಬನಕೆ ಜನಕೆ ಜನಿಯಿಸೆ ರಾಗಂ || ೪೭

ವ || ಅಂತು ಮಸಗಿದಂತಕನಂತೆ ಪಾರದಾರುಮಂ ಭೋರೆನೆ ಪರಿದು ಪರಿವೇಷ್ಟಿಸಿ ಬನಮನನುದಿನಂ ಕಾದಿರ್ಪ ದರ್ಪಿಷ್ಠ ಚಟುಳಭಟರ ಮೂರ್ಧಂಬಿಡಿದುಪಾಱೆ ಕರತಳ ಕರಾಳಕರವಾಳದಿಂ ತಱಿದು ತುಱುಗಿ ಮೆಱೆವ ಬನಮನೊಳಪೊಕ್ಕು ರಕ್ಕಸನಂತೆ ಘಿಱ್ಚನೆಯ್ತರ್ಪ ವಿಶ್ವನಂದಿಯಂ ಮಂದೀಕೃತ ಮುಖಮಯೂಖಂ ವಿಶಾಖನಂದಿ ಮಂದ ಭಾಗಧೇಯನಂದು ಮುಂದೆ ಭೋಂಕೆನೆ ಕಂಡು-

ಕಂ || ಸಿಂಗದ ಶಿಶುವಂ ಕಂಡ ಕು
ರಂಗದ ಮಱಿಯಂತೆ ಬೆದಱಿ ದೆಸೆಗೆಟ್ಟು ಕರಂ
ಬೆಮಗೊಟ್ಟೋಡಿದನವನು
ತ್ತುಂಗ ಕರಂಗಳ ಮರಂಗಳೆಡೆದೆಱಪುಗಳೊಳ್ || ೪೮

ವ || ಅಂತು ತಲ್ಲಣಿಸಿ ನಿಲ್ಲಜನೆಲ್ಲಿಯುಂ ನಿಲ್ಲದೆ ವಲ್ಲೀವೇಲ್ಲಿತಪಲ್ಲವೋಲ್ಲಸಿತ ಕಂಕೆಲ್ಲಿ ಸಲ್ಲಕೀ ಸಂಪುಲ್ಲಮಲ್ಲಿಕಾಸಲ್ಲಲಿತವನದೊಳೋಡುತ್ತುಂ ಪ್ರಹರಣಪ್ರಹತನಿಖಿಳ ಪರಿಜನ ನೆಲ್ಲಿಯುಮಡಂಗಲೆಡೆವಡೆಯದೆ ವಾಯುವೇಗದಿಂ ಪರಿಯೆ ಪರಿಕಿಸಿ ಪರಧನಹರಣನ ಹರಣಮಂ ಹರಿಯಿಪ ಪರಿಣತೆಯಿನುರವಣಿಸಿ ಬೆನ್ನೊಳೆಪರಿದು ಬಿಡದೆ ಜಡಿದಡಸಿ ಪೊಡೆವಪದದೊಳ್ ಕರ್ಕಶಮಪ್ಪೇನಾನುಮಂ ನೆಕ್ಕನೆತಾಗಿ ತರ್ಕಿಱಿದಂತೆ ಮುರ್ಕುವೋದ ಭಯಂಕರದಕರದ ಕರವಾಳುಮಂ ಪರಿಕಿಸಿ ಪರಿಹರಿಸಿ ಸರಸೀಪರಿಸರದೊಳ್ ನಟ್ಟುಮುಗಿಲಂ ಮೆಟ್ಟುವಂತೆ ಮುಂತಿರ್ದ ಕಲ್ಲತೋರಗಂಬಮಂ ಸ್ತಂಬೇರಮಮಂಬು ಜಮಂ ಕೀೞ್ವಂತೆ ಕೞ್ತು ಕಿೞ್ತಲೆಯನಟ್ಟುವುದಯಾದಿತ್ಯಪ್ರಕಾಶದಂದದಿನಟ್ಟಿಮುಟ್ಟಿ ಪೊಯ್ಯೆಪೊಯ್ಕೆ-

ಕಂ || ಎಸೆವ ತಟಿಲ್ಲತೆ ಮೇಘ
ಪ್ರಸರದೊಳಂತಿಂತು ಪೊಳೆದಡಂಗುವ ತೆಱದಿಂ
ಮಿಸುಪ ವನಾಂತರದೊಳ್ ವಂ
ಚಿಸಿ ಪೊಯ್ದಂ ಪೊಳೆದು ತತ್ಖಳಂ ಮಿಗೆಪೋದಂ || ೪೯

ವ || ಅಂತು ಮಿಕ್ಕುಪೋಗಿ ಬೞಲೆ ವಿಗ್ರಹಂ ಕೞಲೆ ಕಣ್ಗಳಿಂ ಜಲಲವಂಗಳ್ ತೊೞಲ ಲಾಱದೞಲನೆಯ್ದಿದ ಪೊೞಲೊಡೆಯನ ಮಗಂ ಪುೞಿಲನಾವರಿಪ ನೆೞಲನೊಳಕೊಂಡ ಬೆೞಲಮರನಂ ಘಳಿಲನೆಕಂಡು ತಳವೆಳಗಾಗಿ ಮಱಿಗೊಂಡಿರ್ಪುದುಂ-

ಮ || ಬೆೞಲಂ ಬೇಗದಿನೆಯ್ದೆ ಬೇರ್ವೆರಸಿ ಕಿೞ್ತಾಧೂರ್ತನಂ ಪೊಯ್ಯಲ
ವ್ವಳಿಪಾಗಳ್ ತನುಕಂಪಮುಬ್ಬರಿಸೆ ಹೀನದ್ದಾನ ದೀನಾನನಂ
ಗಳಿತೋದ್ಯನ್ಮದನಾಗಿ ತತ್ಪದಯೋಜಾತಂಗಳೊಳ್ ನೀಂ ದಯಾ
ಜಳಧೀ ರಕ್ಷಿಸು ರಕ್ಷಿಸೆಂದು ಕೆಡೆದಂ ನಿಂದಾರೆ ಬಂದಾ ಜನಂ || ೫೦

ವ || ಆ ಸಮಯದೊಳ್-

ಮ || ಒಡೆಯರ್ ಪಿಂಗಿದಗೇಹದಲ್ಲಿ ಶುನಕಂ ಪೊಕ್ಕಂದದಿಂದೀ ಬನ
ಕ್ಕೊಡೆಯಂ ರೂಢಿಯಂ ವಿಶ್ವನಂದಿಯುವರಾಜಂ ಕಾಳೆಗಕ್ಕೆಂದು ತಾಂ
ಗಡ ಪೋಗಿರ್ದೊಡೆ ಪಿಂತೆಪೊಕ್ಕನಿದನೀ ಕಷ್ವಂಗೆ ದುಷ್ಟಂಗ ಕೇ
ಡಡಸಲ್ ತಕ್ಕುದೆನುತ್ತುಮೊಲ್ದುನುಡಿದತ್ತಲ್ಲಲ್ಲಿ ನೋೞ್ಪಾಜನಂ || ೫೧

ಕಂ || ಕರದ ಪಿರಿದಪ್ಪತರುವಿಂ
ತರುವಲಿಯಂ ತದೆದುಮೊದೆದುಮಂತಕವದನಾಂ
ತರದೊಳ್ ತೂಂತದೆ ಟಕ್ಕಿಂ
ಪೊರೆದವೊಲಿಂತೇಕೆ ನಿಂದನೆಂದರ್ ಕೆಲಬರ್ || ೫೨

ಅನ್ನೆಯದಿಂ ನಡೆದವನಂ
ತನ್ನಯ ಬನಮಂ ಕಡಂಗಿಕೊಂಡವನಂ ಸಾ
ವನ್ನಂ ಪಲತೆಱದಿಂದಂ
ಬನ್ನಂಬಡಿಸುವುದೆ ಕಾರ್ಯಮೆಂದರ್ ಕೆಲಬರ್ || ೫೩

ವ || ಅಂತು ಪೌರಕಳಕಳಂ ಕರಮೆ ಕೊರ್ವೆ-

ಕಂ || ಅವನ ವಿಳೋಚನಘನದಿಂ
ಕವಿತರ್ಪ ಪಯಃಪ್ರಪೂರದಿಂದಂ ಕರುಣಾ
ರವದಿಂದಂ ನಂದಿದುಂ
ದು ವಿಶ್ವನಂದಿಯ ಮನಸ್ಥಕೋಪಜ್ವಲನಂ || ೫೪

ಪೃಥ್ವೀ || ಪೊಡರ್ಪುಗಿಡೆ ದೈನ್ಯದಿಂ ನಿಜಪದಾಬ್ಜದೊಳ್ ಬಿೞ್ದು ಬಾ
ಯ್ವಿಡುತ್ತಮಿರೆ ನೋಡಿ ಪೇಡಿಯನದೆಂತು ಕೊಂದಪ್ಪೆನೆಂ
ದಡಂಗಿಸಿದನಾತ್ಮಕೋಪಮನಗಣ್ಯಕಾರುಣ್ಯದೊಳ್
ತೊಡಂಕೆ ಮನಮಾಗಳಾ ವಿಜಯವಿಶ್ವನಂದ್ಯಾಹ್ವಯಂ || ೫೫

ವ || ಅಂತು ಕರುಣಾರಸತರಂಗಿಣೀತರಂಗಾಯಮಾಣಮಾನಸನಾಗಿ ನಿಜಚರಣ ನಿಕಟ ನಿಪತದ್ಗಾತ್ರನನಸ್ಪಂದನೇತ್ರದಿಂ ಕಿ ಱಿದು ಪೊೞ್ತು ನೋಡುತ್ತುಮಿರ್ದು-

ಉ || ನೋಡದೆ ಮತ್ಪಿತೃವ್ಯನ ಜಗನ್ನುತ ಭವ್ಯನ ಮಾೞ್ಪ ಮೋಹಮಂ
ಬೇಡದ ಕಾಡಬಳ್ಳಿ ಮರನೆಂಬಿವನಾದಮೆ ನೋಡಿ ನಾಡೆಯುಂ
ಮಾಡಿದೆನಾತನಾತ್ಮಜನೊಳಿಂತಭಿಮಾನದ ಹಾನಿಯಂ ವಲಂ
ನೋಡುವೆನೆಂತೊ ತನ್ಮುಖಮನೆಂದತಿ ಲಜ್ಜಿತನಾದನೂರ್ಜಿತಂ || ೫೬

ವ|| ಅಂತು ಚೇತೋನಿಕೇತನದೊಳ್ ಲಜ್ಜೆ ಪಜ್ಜಳಿಸೆ-

ಚಂ || ಕರದ ಕಪಿತ್ಥಮಂ ಬಿಸುಟು ಮೆಲ್ಲನೆ ತಲ್ಲಣಿಸುತ್ತುಮಿರ್ದ ಕಾ
ಪುರುಷನ ಶೀರ್ಷಮಂ ನೆಗಪಿಯಂಜದಿರಂದಿರೆಂಬ ತನ್ನ ಬಂ
ಧುರತರವಾಕ್ಸುಧಾರಸದಿನಾತನನಾಱಿಸಿ ವಿಶ್ವನಂದಿ ಮಂ
ದರಧರಣೀಧರಸ್ಥಿರಗುಣಂ ತಳೆದಂ ಜನದಿಂ ಪೊಗೞ್ತೆಯಂ || ೫೭

ವ || ಅಂತು ಭೂರಿಭೀರಸಾಕ್ರಾಂತಸ್ವಾಂತನಾದ ದುಷ್ಟದಾಯಾದಂಗಭಯಪ್ರದಾಯಕನಾಗಿ
ತನ್ನೊಳಿಂತೆಂದಂ-

ಚಂ || ಮರಗಿಡುಬಳ್ಳಿಗಳ್ ನೆಗೞ್ದ ಬಂಧೂಜನಂಗಳೊಳಿಂತು ವೈರವಂ
ನಿರವಧಿದುಃಖಕಾರಣಮನಾಗಿಸಲಾರ್ತುವಿವೆಂದೊಡುರ್ವರಾ
ಭರಪರಿಪೂಜ್ಯರಾಜ್ಯರಮೆ ಮಾಡದೆ ಮಾಣ್ಗುಮೆ ಚಿಃ ನಿರರ್ಥಮಿ
ನ್ನಿರಲಣಮಾಂಪೆನಾಂ ಪರಮಪಾವನ ದೀಕ್ಷೆಯನಾತ್ಮ ರಕ್ಷೆಯಂ || ೫೮

ವ || ಎಂದು ತಪೋನುಷ್ಠಾನದತ್ತ ಚಿತ್ತನಾಗಿಬೇಗದಿಂ ರಾಗದ್ವೇಷ ದೋಷ ದೂಷಿತಮುಂ ಬಹುವಿಧಾಯಾಸವಾಸಿತಮುಮೆನಿಪ ಗೃಹಸ್ಥಾವಸ್ಥಾನಮಂ ಸಾರಾಸಾರವಿಚಾರ ವಿಶಾರದಂ ಪತ್ತುವಿಟ್ಟು ವಿಮನೋವಿಷಾದವಿಷಮವನಮಂ ಸುಟ್ಟು ವಿಶಾಖನಂದಿ ಗಂದು ನಾಡೆಯುಂ ಕ್ಷಮೆಯಂ ಕೊಟ್ಟು ಮುಕ್ತಿಕಾಂತೆಗೆ ಕಣ್ಣಿಟ್ಟು ತದ್ವಿಶಾಳಕೇಳೀವನಮಂ ಬಿಟ್ಟು ನಿಖಿಲಭುವನಪಾವನತಪೋವನಾಭಿಮುಖನಾಗಿ ಪೋಗುತ್ತುಮಿರೆ ತತ್ಪ್ರಪಂಚಮಂ ಕೇಳ್ದು ಜಳಧರಪಟಳಪಟುರಟನಮಂ ಕೇಳ್ದ ಕಳಹಂಸನಂತೆ-

ಮ || ಕ್ಷಿತಿಕಾಂತಂ ಚಕಿತಾಂತರಂಗನತಿವೇಗಂ ಬಂದು ತಾಂ ಬಂಧುಜಾ
ನ್ವಿತನಂದಾ ಯುವರಾಜರಾಜಿತ ಪದಾಂಭೋಜಾತದೊಳ್ಮೊ ೞ್ಗಿ ಸ
ನ್ನುತಶೌರ್ಯಾಂಬುಧಿ ನೀನಿದೇಕೆ ಮಗನೇ ಬಿಟ್ಟೆನ್ನೆನನ್ಯಾಯಸಂ
ಗತನಪ್ಪೀತನ ದೂಸಱಿಂದೆ ತಳೆವೋ ಸ್ವಾಪೇಕ್ಷೆಯಂ ದೀಕ್ಷೆಯಂ || ೫೯

ವ || ಅದಲ್ಲದೆಯುಂ-

ಮ || ಧರಣೀಭಾರಮನಾರೊ ಪೊತ್ತಪರಿದಂ ನೀಂ ಪೋಗಿ ಭಾಸ್ವತ್ತಪೋ
ಭರಮಂ ತಾಳ್ದಿದೊಡಿನ್ನೆಗಂ ಕಿಡದೆ ಬಂದೀಪ್ರಾಜ್ಯರಾಜ್ಯಂ ವಿನ
ಶ್ವರಮಕ್ಕುಂ ಸ್ಥಿರಮಕ್ಕುಮೇ ಪದೆದಿದಂ ಕೆಯ್ಕೊಂಡು ನಮ್ಮನ್ವಯಂ
ಚಿರರಾಜ್ಯೋದಯವಾದುದೆಂಬ ಜಸಮಂ ನೀಂ ಪರ್ವಿಸೀಯುರ್ವಿಯೊಳ್ || ೬೦

ವ || ಎಂದು ಬಹುವಿಧ ಲಾಲನಾಲಾಲಿತಂಗಳುಂ ಪರಮಸ್ನೇಹಾವಗಾಹಿತಂಗಳುಮಾದ ಪಲತೆಱದ ವಚನಂಗಳನುಚ್ಚರಿಸುತ್ತುಮುಚ್ಚಳಿಪ ವಿಳೋಚನಜಳಂಗಳಿಂ ಕ್ರಮ ಕಮಳಯುಗಳಮಂ ಕ್ಷಾಳಿಸುವ ಪಿತೃವ್ಯನಂ ಭವ್ಯವರಪುಂಡರೀಕಂ ಪುಂಡರೀಕಹಸ್ತೋಪ ಮಮೆನಿಪ ನಿಜಪ್ರಶಸ್ತಹಸ್ತದಿಂ ನೆಗಂಪಿ ಕೆಯ್ಗಳಂ ಮುಗಿದು-

ಮ || ಧರೆಯೊಳ್ ಬಲ್ಲಿದರಪ್ಪ ವೈರಿನೃಪರಂ ನಿಮ್ಮಾಜ್ಞೆಯಿಂ ಗೆಲ್ದು ಮ
ತ್ತರಿದಾರ್ಗಂ ಗೆಲಲೆಂಬ ಕರ್ಮಬಲಮಂ ನಿರ್ಮೂಲನಂ ಗೆಯ್ಯದೋ
ಸರಿಸಿರ್ದಂದು ಮದೀಯ ವಿಕ್ರಮಕೆ ಬನ್ನಂ ಬಾರದೇ ದೇವ ಭೀ
ಕರ ಕರ್ಮಾರಿಯನಿಕ್ಕಿ ಮಿಕ್ಕಜಯಮಂ ಕೆಯ್ಕೊಳ್ವೆನಾನಂತಱಿಂ || ೬೧

ವ || ಅಂತುಮಲ್ಲದೊಡಮಿನ್ನುಮೊಂದನವಧರಿಪುದೆಂದು ಮತ್ತಮಿಂತೆಂದಂ-

ಕಂ || ಪರಮಜಿನವಚನದಿಂ ಸಂ
ಸರಣಾಸಾರತೆಯನಱಿವ ನಿಮಗೀಗಳ್‌ತಾಂ
ದೊರೆಕೊಂಡ ವಿರಕ್ತತೆಯಂ
ಪರಿಹರಿಸುವುದೆಂಬುದುಚಿತಮೇ ಪೇ ೞಿಮಿದಂ || ೬೨

ವ || ಅದುಕಾರಣದಿಂ-

ಕಂ || ಎನಗೆ ಹಿತೈಷಿಗಳಪ್ಪೊಡೆ
ನೆನೆಯದಿರಿಂ ಪೆಱತನೊಂದುಮಂ ದೇವ ಜರಾ
ಜನನಮೃತಿನಾಶಕರಮಂ
ಜಿನದೀಕ್ಷಾಭರಮನಾಗಿಪೊಂದನೆ ನೆನೆಯಿಂ || ೬೩

ವ || ಎಂದು ಮಱುಮಾತಿಂಗೆಡೆಗುಡದ ನುಡಿಯಂ ನುಡಿದು ಸಂಸಾರಸಾಗರ ಸಮುತ್ತರಣ ತರಣಿಯುಂ ನಿಜಗುಣತಾಮರಸತರಣಿಯುಮೆನಿಪ ಪರಮ ತಪಸ್ಸರಣಿಯಂ ಕೈವಲ್ಯ ಧರಣಿಯನೆಯ್ದುವುದ್ಯೋಗಮನೆಂತಾನುಮೊಡಂಬಡಿಸಿ ಸಮುಚಿತ ಕ್ಷಮಿತವ್ಯ ಕಥನಪೂರ್ವಕಂ ನಡೆವಾಗಳ್-

ಮ || ಸ್ರ || ಅಸಕೃದ್ಭೋಗೋಪಭೋಗಂಗಳನತಿಮುದದಿಂ ಭೋಗಿಪೀಪ್ರಾಯದೊಳ್ ವ
ರ್ಜಿಸಿ ರಾಜ್ಯಶ್ರೀಯನೀಯದಂದೆ ಸಿಸುವೆಸೆದಂ ತಾಳ್ದಿ ವೈರಾಗ್ಯಮಂ ಭಾ
ವಿಸೆ ಮತ್ತಾನಿನ್ನುಮೀರಾಜ್ಯದೊಳೆ ಗತವಯಸ್ಕಂ ವಲಂ ಲೀಲೆಯಿಂ ಲಾ
ಲಸನಾಗಿರ್ದಂದು ಲೋಕಂ ಪೞಿಗುಮೞಿಗುಮೊಳ್ಪಕ್ರಮಂ ಮಿಕ್ಕುಬರ್ಕುಂ ||

ವ || ಅದಲ್ಲದೆಯುಂ-

ಮ || ಸ್ರ || ಎನಿತಾನುಂ ಕಾಲಮೊಲ್ದಿಂದ್ರಿಯ ವಿಷಯಸುಖಾಸಕ್ತನಾಗಿರ್ದೊಡು ಜೀ
ವನವಶ್ಯಂ ತೃಪ್ತನಾಗಂ ಬಗೆವೊಡಗಣಿತಾಶಾಲತಾಪಾಶದಿಂ ಬಂ
ಧನಮಂ ತಾನೆಯ್ದಿ ಜನ್ಮಾಟವಿಯೊಳವಿರತಂ ಘೋರದುರ್ವಾರ ನಾನಾ
ಘನ ದುಃಖಜ್ವಾಳ ಕೀಳಾವಳಿಕಬಳಿತನೀಯಂದದಿಂ ಬರ್ದುತಿರ್ಕುಂ || ೬೫

ಕಂ || ಮನದಳಿಪಿಂದನುಚಿತಮೆನಿ
ಪನೇಕವಿಧಪುದ್ಗಳಾನುಭವಮಂ ಬಿಡದಿ
ರ್ಪ್ಪ ನರಂ ಭವಮಂ ಬಿಡದಿ
ರ್ಪ ನರಂ ತಾನೆವಲಮಿಲ್ಲಿ ಸಂದೆಯಮುಂಟೇ || ೬೬

ಕಿಂಪಾಕದ ಪರಿಪಾಕದ
ಸಂಪತ್ತಿಗಮಿದಱ ಪಾಕಸಂಪತ್ತಿ ಕರಂ
ಸೊಂಪಮರ್ದುದೆನಿಪ ಕಿಲ್ಮಿಷ
ಕಿಂಪಾಕಮನಕಟ ಜೀವತತಿಯನುಭವಿಕಂ || ೬೭

ವ || ಎಂದು ಪರಿಭಾವಿಸುವ ವಿಶಾಖಭೂತಿಭೂತಳೇಶ್ವರಂ ವಿರಕ್ತಿಭೂತಿಭೂಷಿತ ಚೇತೋನಿ ಕೇತನನಾಗಿ-

ಕಂ || ಹೊಱಸಂ ವಿಶಾಖನಂದಿಯ
ನಿಱಿಕೆಯ ನಿಜರಾಜ್ಯಪದವಿಯೊಳ್ ಸಕಳ ಜನಂ
ಮಱುಗಿ ಗುಜುಗುಜುಗೊಳುತ್ತಿರೆ
ನಿಱಿಸಿದನಿರದಂದು ಮಂದಭಾಗ್ಯದ ಹೊ ಱಿಯಂ || ೬೮

ವ || ತದನಂತರಮಾ ಜವಂಜವದವಕ್ಕೆ ನಿಕ್ಕುವಮಂಜಿ ವಿರಕ್ತಿವಾರಿಧಾರಾಸಿಕ್ತರಾದ ಸಾಸಿರ್ವ
ರುರ್ವೀಪತಿಗಳ್ವೆರಸು ವಿಶ್ವನಂದಿಕುಮಾರನೊಡನೆ ನಡೆದು-

ಕಂ || ಆತನ ಗುಣಜಾತನ ಸಂ
ಭೂತಯತೀಶ್ವರನ ಚರಣಸನ್ನಿಧಿಯೊಳ್ ವಿ
ಖ್ಯಾತರವರೆಲ್ಲರುಂ ಜಗ
ತೀತಳನುತಮೆನಿಪ ಜಿನರ ದೀಕ್ಷೆಯನಾಂತರ್ || ೬೯

ವ || ಅಂತುನಿರಶನಾದಿ ನಿರುಪಮತಪಮನಾಂತು ನಿರತಿಶಯ ಪರಮಾಗಮ ಪ್ರವೀಣರುಂ ಬ್ರತಸಮಿತಿ ಗುಪ್ತೀಕೃತತ್ರಾಣರುಂ ವಿಜಿತವಿಷಮಬಾಣರುಂ ಷಡಾವಶ್ಯಕಾ ಕ್ಷೀಣರುಂ ದಯಾನಿತಂಬಿನೀ ನಿಜಪ್ರಾಣರುಮೆನಿಸಿ ದುರ್ಧರಾಚರಣಪರಿಣತರ್ ನೆಗೞುತ್ತುಮಿರ್ಪು ದುಮವರೊಳ್-

ಚಂ || ಎಸೆವ ವಿಶಾಖಭೂತಿಯತಿನಾಯಕನಾಯುವಿನಂತ್ಯದಲ್ಲಿ ಸ
ನ್ಯಸನಮನಾಂತು ಶಾಂತಹೃದಯಂ ನಿಜವಿಗ್ರಹಭಾರಮಂ ವಿಸ
ರ್ಜಸಿ ಸಹಜೋಲ್ಲಸದ್ವಸನ ಕೌಸುಮಶೇಖರ ರತ್ನಭೂಷಣ
ಪ್ರಸರ ಶರೀರನುದ್ಭವಿಸಿದಂ ಸುರನಾಗಿ ಶತಾರಕಲ್ಪದೊಳ್ || ೭೦

ಕಂ || ಅನಿಮಿಷವನಿತಾಜನದೊಡ
ನನೇಕ ಭೋಗೋಪಭೋಗಸಂಧೋಹಮನಂ
ದನುಭವಿಸಿದನನುನಯದಿಂ
ದನವದ್ಯ ಜಿನೇಂದ್ರ ತಪಮನೆಸಗಿದ ದೆಸೆಯಿಂ || ೭೧

ವ || ಅಂತಾ ಸಾಮಾನಿಕಾಮರಂ ನಿಕಾಮರಾಮಣೀಯಕಾನೇಕನಾಕಲೋಕವಿನೋದೋತ್ಪಾದಿತ ಸಮಗ್ರಸುಖಸುಧಾಸರಿನ್ನಿಮಗ್ನಮಾನಸಂ ಜೈನಪೂಜಾವಿಧಾನ ದತ್ತಾವಧಾನನಾಗಿರ್ದನಿತ್ತ ಲಾ ವಿಶ್ವನಂದಿಯೋಗೀಶ್ವರಂ ಲೋಕಸ್ತುತಮಪ್ಪೇಕವಿಹಾರಿತ್ವ ಪ್ರತಿಜ್ಞೆಯಂ ಗುಣ ಗುರುಗಳನುಜ್ಞೆಯಿಂ ತಳೆದು ತಳರ್ದು-

ಕಂ || ಒಂದಂ ಗ್ರಾಮದೊಳೈದಂ
ಸಂದ ನಗರದೊಳ್ ಬ ೞಿಕ್ಕೆ ಪತ್ತಂ ವನದೊಳ್
ಸಂದೆಯಮೇಂ ರಾತ್ರಿಯನೀ
ಯಂದದಿ ಕಳಿಪುತ್ತುಮುತ್ತಮಂ ವಿಹರಿಸಿದಂ || ೭೨

ಚಂ || ಕ್ಷಿತಿನುತ ಯೌವರಾಜ್ಯಪದದೊಳ್ ಮುದದಿಂದಮೆ ನಿಂದು ಮುನ್ನಮ
ಪ್ರತಿಮವಿಳಾಸಸದ್ವಿತರಣೋರ್ಜಿತ ವೀರಗುಣಂಗಳಿಂ ಸಮು
ನ್ನತಿವಡೆದಾವಗಂ ಬ ೞಿಕ ಪಾವನಜೈನತಪಃಪ್ರಭಾವಸಂ
ಗತನೆನೆ ಸಂದನೇನಧಿಕನೋ ರಸೆಯೊಳ್ ವಸುಧೈಕಬಾಂಧವಂ || ೭೩

ಗದ್ಯಂ
ಇದು ನಿಖಿಳಭುವನಜನವಿನೂತ ಸ್ಫೀತಮಹಿಮಾವದಾತ ವೀತರಾಗ ಸರ್ವಜ್ಞತಾ ಸಮೇತ
ಖ್ಯಾತಜಿನಸಮಯ ಕಮಳಿನೀ ಕಳಹಂಸಾಯಮಾನ ಮಾನಿತ
ಶ್ರೀನಂದಿಯೋಗೀಂದ್ರಪ್ರಸಾದ ವಾಚಾಮಹಿತ
ಕೇಶವರಾಜಾನಂದನಂದನ ವಾಣೀವಲ್ಲಭ ವಿಸ್ತಾರಿತಮಪ್ಪ
ವಸುಧೈಕಬಾಂಧವ ಶ್ರೀ ವರ್ಧಮಾನ ಪುರಾಣದೊಳ್
ವಿಶ್ವನಂದಿಕುಮಾರ ಮಾರವಿಜಯ ವರ್ಣನಂ
ದ್ವಿತೀಯಾಶ್ವಾಸಂ