ಕಂ || ಶ್ರೀ ಸೌಭಾಗ್ಯದ ಭಾಗ್ಯದ
ಭಾಸುರ ತೇಜದ ವಿರಾಜದೌದಾರ್ಯದ ಲೀ
ಲಾಸದನಂ ರಂಜಿಸಿದಂ
ಕೇಸರಿರಿಪು ಪಂಚಪರಮಗುರುಪದವಿನತಂ ||

ವ || ಅನಂತರಂ ಸಮಗ್ರಸಮರಕೇಳೀಲೋತೆಯಿಂ ಜಳಜಾಕ್ಷಂ ಕರೆದು ಕದನಪ್ರಯಾಣಭೇರಿಯಂ ಪೊಯಿಸವೇೞ್ದಾಗಳ್-

ಉ || ಆಗಸದಂತರಾಳಮನಳುಂಬಮಿದೆಂಬಿನಮೆಯ್ದೆ ತೀವಿ ದಿ
ಗ್ಭಾಗಮನಾವಗಂ ಬಿಡದವುಂಕಿ ನಿರಂಕುಶವೃತ್ತಿಯಿಂ ಮಹಾ
ಭೋಗತೆವತ್ತು ನಾದಮಯವಾದುದು ಲೋಕಮಿದೆಂಬ ಸಂಕೆಯಂ
ಬೇಗದಿನಾಗಿಸಿತ್ತು ರಣಭೇರಿಯ ಭೂರಿ ಗಭೀರನಿಸ್ವನಂ || ೨

ಕಂ || ಎತ್ತಿದ ಪೞಯಿಗೆ ಜಕ್ಕುಲಿ
ಸುತ್ತಿರೆ ನಕ್ಕಪುದು ಗಗನಮಾಶಾಮುಖದಿಂ
ಸುತ್ತಲುಮೆನೆ ಸೂ ೞೈಸಿದು
ವೆತ್ತಂ ಪೊಱಮಡುವ ನೃಪರ ಜಯದುಂದುಭಿಗಳ್ || ೩

ವ || ತದನಂತರಮಂತರಾಯಾಪಾಯ ದುರ್ನಯನಿಕಾಯನಿವಾರಣಸಮರ್ಥ ತೀರ್ಥಂಕರ ಪೂಜಾವಿಧಾನ ಸಿದ್ಧಾಶೇಷಾಕ್ಷತಪೂರ್ವಕಂ ಶುಭಮುಹೂರ್ತದೊಳ್ ಗಗನಗಾಮಿನೀ ಪ್ರಮುಖ ವಿವಿಧವಿದ್ಯಾಯತ್ತ ಚೈತ್ರರಾಜಪುತ್ರರ್ವೆರಸು ಪುಣ್ಯ ಸುವಾಸಿನೀ ಪ್ರಮುಖ ಮೌಹೂರ್ತಿಕ ಪುರೋಹಿತ ವಿಕೀರ್ಣ ಶೇಷಾಕ್ಷತಾಶೀರ್ವಚನ ಪುರಸ್ಸರಮನುಕೂಲಿತ ಸಮಸ್ತ ಶಕುನಬಲ ದೈವಬಲ ಮನೋಬಲಂ ಪ್ರಜಾಪತಿನೃಪತಿ ನಿಜರಾಜಭವನದಿಂ ತಳರ್ದು ಪೊಱಮಡುವಲ್ಲಿ-

ಮ || ಸ್ರ || ದ್ರುಮರಾಜೀರಾಜಿತಂ ಜಂಗಮಮಿದುದಯಶೈಳ ತದಗ್ರಾಧಿರೂಢಂ
ಹಿಮರೋಚಿರ್ಮಂಡಳಾಳಂಕೃತಮಿದಭಿನವಂ ಲಕ್ಷ್ಮಮೆಂಬನ್ನಮಾರೂ
ಢಮದೇಭಂ ಕೇತುಮಾಳಾವಿಳಮೆಸೆಯೆ ತದುತ್ತಾನಪೂರ್ವಾಸನೋದ್ಭಾ
ಸಿ ಮನಂಗೊಂಡೊಪ್ಪಿದಂ ಮುತ್ತಿನ ಕೊಡೆಯ ನೆೞಲ್ದಾಣದೊಳ್ ಕೃಷ್ಣನಾಗಳ್ || ೪

ಮ || ಇರೆ ಲೀಲೋನ್ನಮಿತಾಂಕುಶೋಜ್ಜ್ವಳಭುಜಾಗ್ರಂ ಲೋಕಪಾಳೇಂದು ಭಾ
ಸುರ ಹರ್ಮ್ಯಾಚಳಕೂಟದಂತೆ ನಿಜದೇಹಚ್ಛಾಯ ಸಂವೀತನಂ
ಬರಸಿಂಧುಪ್ಲವಧೌತ ನೀಳನಗದಂತಾರುಢಗಂದೇಭಮೊ
ಪ್ಪಿರೆ ಬಂದಂ ಬಳನಪ್ರತರ್ಕ್ಯಬಳನಸ್ತಾರಾತಿ ಭೂಭೃದ್ಬಳಂ || ೫

ಕಂ || ಗಾಲಿಗಳೋಲೆಗಳಾಗೆ ಹ
ಯಾಳಿ ವಿಲೋಳಾಳಕಾಳಿಯಾಗೆ ತದಾಜಿ
ಶ್ರೀಲಪನಮಾದ ತೇರ್ಗೆ ಯ
ಶೋಲೋಲಂ ಜ್ವಳನಜಟಿ ಶಿರೋಮಣಿಯಾದಂ || ೬

ಚಂ || ಬಗೆಗೊಳಲೋಜೆಗೆಯ್ಯುವ ಕೆಲಕ್ಕೆ ನಿವರ್ತಿಪವುಂಕಿ ದಾಂಟಿಪೋ
ಜೆಗೆ ತುರಗಂ ತ್ರಿಸಂಧಿ ವಿನವತ್ಪದಮನ್ವಿತಲೋಹ ಮುಕ್ತಿವಾ
ಗೆಗೆ ಬಸದಾಗಿ ಪೇೞ್ದ ಲಯದೊಳ್ ಬರೆ ಬಂದನಸಿಪ್ರಭಾವೃತಾ
ಶುಗ ಪಥನರ್ಕಕೀರ್ತಿ ಜಯವಾಜಿಯನೊಡ್ಡಿನ ಮುಂದೆ ತೋಱುತುಂ || ೭

ಕಂ || ಬರೆ ಹರಿಬಳ ಕರಿಯುಗಳಂ
ತರಣಿ ಮೃಗಾಂಕಾಧಿರೂಢ ಪಾದಂಗಳವೋಲ್
ಸುರನಗಮೆ ತಳರ್ದು ನಡೆವಂ
ತಿರೆ ನಡೆದುದು ಪೌದನಾಧಿರಾಜಗಜೇಂದ್ರಂ || ೮

ವ || ಅಂತುಭಯಪಾರ್ಶ್ವ ಸನ್ನದ್ಧ ಸಿಂಧುವರವರೂಥ ತುರಗಾಧಿರೂಢ ನಿಜತನೂಭವ ಬಾಂಧವ ಪ್ರಧಾನ ಪರಿವೃತಂ ಮಹಾರಾಜಂ ರಾಜನಿಳಯದಿಂ ತಳರ್ದು ನಡೆಯೆ-

ಮ || ಸ್ರ || ಅದೆ ಫೂತ್ಕಾರೋಚ್ಚಳಚ್ಛೀಕರ ತಿಮಿತ ಚಮೂರೇಣು ದಿಗ್ಭಿತ್ತಿಯಂ ಮೆ
ತ್ತಿದುದೆತ್ತಂ ಮುಂಬುಗೊಂಡಂಬರಮನಿತುಮನುದ್ಯತ್ಪತಾಕಾಂಬರಂ ನುಂ
ಗಿದುದಂಘ್ರಿಕ್ಷೇಪದಿಂದಂ ಕುಸಿದು ಕುರುಳಿಗೊಂಡುರ್ವಿ ದಾನಾಂಬುವಿಂ ತೀ
ವಿದುದೆಂಬನ್ನಂ ಜಗನ್ಮಂಡಳವೆಡೆಗಿಡೆ ಬಂದತ್ತು ಮತ್ತೇಭವೃಂದಂ || ೯

ಚಂ || ಖುರಹತಿಯಿಂ ಕೞಲ್ದದಿರ್ವ ಭೂರಜದಿಂ ಪುಡಿಯೇಱೆ ನಾಗಮಂ
ದಿರಮೊಗೆತರ್ಪ ಧೂಳಿಗೆ ವಿಯಚ್ಚರವೃತ್ತಿಯನೊಪ್ಪುಗೊಟ್ಟು ಖೇ
ಚರರೊಳಸೋರೆ ದಿಕ್ಪತಿಗಳೆಂದುದನೇಗೋಳೆ ಹೇಷಿತ ಪ್ರತಿ
ಸ್ವರಮಿಷದಿಂ ಕಡಂಗಿ ನಡೆತಂದುವು ವಾಜಿಗಳೀಹಿತಾಜಿಗಳ್ || ೧೦

ಸ್ಫುರಯಿಪ ಚಕ್ರಚೀತ್ಕೃತಿಯರಾತಿಯ ಕೆಯ್ಯ ಕರಾಳಚಕ್ರಮಂ
ಕರೆವವೊಲಾಗೆ ಮಿಳ್ಳಿಪ ಪತಾಕೆ ವಿರೋಧಿಯ ದುರ್ಯಶೋರಜಂ
ಬೊರೆದ ವಿಯದ್ಗೃಹಕ್ಕೆ ಮಿಗೆ ಶುದ್ಧಿಯನೀವವೊಲಾಗೆ ವಾಜಿನಿ
ಷ್ಠುರಖುರಚೂರ್ಣಿತಾವನಿತಳಂ ತಳರ್ದತ್ತು ವರೂಥಸಂಕುಳಂ || ೧೧

ಕಂ || ಮಿಸುಪಸಿಧೇನು ಮೀನನಿವಹಂ ಪೊಳೆವಡ್ಡಣದೊಡ್ಡಣಂ ವಿರಾ
ಜಿಸುವುರು ಕೂರ್ಮಕೋಟಿಯೆಸೆವಾಯತ ಕುಂತಕುಳಂ ಜಳಾಹಿ ಮಿ
ಳ್ಳಿಸುವ ತನುತ್ರದೀಧಿತಿ ಮಹೋದಕಮಾಗೆ ಪದಾತಿಜಾತಮೆಂ
ಬಸದೃಶ ವಾರಿರಾಶಿ ಕವಿತಂದುದು ಚಾಪತರಂಗಸಂಕುಳಂ || ೧೨

ವ || ಅಂತು ನೆರೆದು ಬರ್ಪನಂತ ಚತುರಂಗಸೇನೆವೆರಸು ಪುರಮಂ ಪುರಂಧ್ರೀಚಂಚಳವಿಳೋಚನ ಚಂಚರೀಕ ಸಂಚಯದ್ವಿಗುಣಿತ ಪಿಂಛಾತಪತ್ರ ಸಮುದಯಂ ಪೊಱಮಟ್ಟು ನಡೆಯೆ-

ಕಂ || ಎಳೆಯೆ ಕೆಳರ್ದಾತ್ಮಚರಬಳ
ದೊಳಾಂಪ ಖಗಬಳಮನಱಸಿ ನುಂಗಲ್ ಮುಂಗೋ
ಳೊಳೆ ನಿಜದಳ ಭರಮಂ ಪೇ
ೞ್ದಳೆನಿಸಿ ನೆಗೆದುದು ಚಮೂರಜಂ ಘನಪಥದೊಳ್ || ೧೩

ಉ || ದೂರದ ಬೆಟ್ಟುಗಳ್ ದಿಟದೆ ನುಣ್ಣಿದುವಾದುವು ಪೂೞ್ದವೆಯ್ದೆ ಮು
ನ್ನೀರನಡುರ್ತು ಪೀರ್ದುಗುೞ್ವ ಪೆರ್ಗುೞಿಗಳ್ ದಿನಕೃದ್ವಿಮಾನಮಾ
ಕಾರಮಡಂಗೆ ಪುತ್ತಡರ್ದು ಮುಚ್ಚಿದುದೆಂಬಿನೆಗಂ ವಿಕೀರ್ಣ ಸೇ
ನಾರಜಮುರ್ವಿ ಪರ್ವಿದುದು ನಿರ್ವಿವರಂ ಭುವನಾಂತರಾಳಮಂ || ೧೪

ಕಂ || ಪಡೆಯ ಪದಹತಿಯೊಳುರ್ವಿದ
ಪುಡಿ ನೆಗೆದೊಗೆದಿಭಕಠಾಗ್ರಶೀಕರದಿಂ ನಾಂ
ದೆಡೆಯೊಳ್ ಕಱೆಗೊಂಡಿಡಿದಿರೆ
ಪಡೆದುದು ಶಶನಿಬಿಂಬಶಂಕೆಯಂ ರವಿಬಿಂಬಂ || ೧೫

ವ || ತದನಂತರಂ-

ಕಂ || ಆದಿರ್ದಾನಕರವದಿಂದೊಡೆ
ದ ದಿಶಾಭಿತ್ತಿಗಳನಮರೆ ಮೆತ್ತಲ್ಕುಯ್ವಂ
ದದಿನನುಕೂಳಾನಿಳಮು
ಯ್ದುದು ಮದಜಳದೊಡನೆ ಬೆರಸಿ ತದ್ಬಳರಜಮಂ || ೧೬

ನೆಲನ ದಿಶಾವಳಿಯ ನಭೋ
ವಲಯಮುಮಿಲ್ಲೆನಿಸಲಾದ ರಜಮೊದವಲೊಡಂ
ಬಲಮ ಧರಾವಳಯ ದಿಶಾ
ವಲಯ ನಭೋವಳಯಮಿಲ್ಲೆನಲ್ಕಾಯ್ತಾಗಳ್ || ೧೭

ಅಂತೆಳೆಯುಂ ದಿಶೆಯುಂ ನಭ
ಮುಂ ತನ್ಮಯಮಾಗೆ ನಡೆವ ಪಡೆವೆರಸೆೞ್ತಂ
ದಂತಾ ನೃಪತಿ ರಥಾವ
ರ್ತಾಂತಿಕದೊಳ್ ಬೀಡುವಿಟ್ಟನನ್ನೆಗಮಿತ್ತಲ್ || ೧೮

ಚರನ ನುಡಿಗೇಳ್ದು ಕೋಪದಿ
ನುರಿದೆೞ್ದಂ ಭ್ರುಕುಟಿಧೂಮ್ರನರುಣಾಪಾಂಗ
ಸ್ಫರಿತ ಸ್ಫಳಿಂಗನಂಬರ
ಚರರಾಜನಕಾಲಕಲ್ಪಶಿಖಿಯೆಂಬಿನೆಗಂ || ೧೯

ವ || ಅಂತಗ್ಗಳಂ ಕೆಳರ್ದು ಚರವದನದತ್ತ ಲೋಚನನರಾತಿವಿಕ್ರಮ ವಿಹಾಸಿ ಸಸ್ಮಯ ಪುನಃ ಪುನಃ ಪ್ರಶ್ನಮುಖರನಾಹವ ಮಹೋತ್ಸವೌತ್ಸುಕ್ಯದಿಂದಂ-

ಕಂ || ಎಂತೆಂತೋ ದಿಟಮೆೞ್ತಂ
ದಂತಾಂಪರೆ ತಾಮೆ ನಮ್ಮ ಪೌದನದವರಿ
ನ್ನಿಂತೀ ಬಿನದಮುಮಂ ನೋ
ೞ್ಪಂ ತಡಮೇಕೆಂದು ಕರೆದು ಸೇನಾಪತಿಯಂ || ೨೦

ತಲೆ ಬೞಿವೞಿಯಾಗಿರೆ ಕೊಡು
ವ ಲಲನೆಯಂ ಬಱಿದೆ ಕಳಿಪದವನರ್ತ್ಥಿಯನಿಂ
ಸಲಿಸುವೆನೀಗಳ್ ನಡೆಯಿಸು
ಬಲಮಂ ನೀನೆಂದು ಖಚರಪತಿ ಬೆಸಸುವುದುಂ || ೨೧

ಭುಗಿಲೆನೆ ನೆಗೆದಳ್ವಿದ ತ
ತ್ಖಗಾಧಿರಾಜ ಪ್ರಚಂಡ ಕೋಪಾಗ್ನಿ ಜ್ವಾ
ಳೆಗಳಿಂ ರವಿಮಂಡಳ ಮೇ
ಱೆಗಾಯ್ದುದೆನಿಸಿದುದು ಸಾರ್ದು ಚರಮಾಚಳಮಂ || ೨೨

ಗರುಡಾಂಕನ ಬಾರಿಗೆ ಸಂ
ಗರಮಧ್ಯ ಸ್ಥಳಿಗೆ ನಡೆವ ಖಗಪತಿಗಮರ್ವಂ
ತಿರೆ ಕಾಲಧಾರಿಕಂ ತೊ
ಟ್ಟರಕ್ತಪಟಮೆನಿಸಲಾರ್ತುದಂಬರಮಾಗಳ್ || ೨೩

ಹಯಕಂಠನುರಃಕಮಳಾ
ಲಯದಿಂ ಸಿರಿ ಸಂಜೆವೊೞ್ತು ಬರೆ ಮುಷಿತಸುಖೋ
ದಯೆಯಾಗಿ ಪುಗಿಸಿ ತದ್‌ಭೀ
ತಿಯಿಂದೆ ಮುಚ್ಚುವವೊಲಾಯ್ತು ನಳಿನನಿಕೋಚಂ || ೨೪

ರವಿ ಬಯ್ಗೆವೊೞ್ತಲಂಪಿ
ಕ್ಕುವ ಕುಂಕುಮರಜದ ಪೊಟ್ಟಳಕ್ಕೊತ್ತಿದನೆಂ
ಬವೊಲರಗಿನ ಮುದ್ರೆಯನೆಸೆ
ದುವು ಮಧುಯುತ ಮುಕುಳಿತಾಂಬುಜಂಗಳೊಳಳಿಗಳ್ || ೨೫

ಅೞಿಪದುಪಶಾನ್ತನೆಮ್ಮಿನ
ನುೞಿದಂ ಪದ್ಮಿನಿಯನೆಮಗಮಿದೆ ನಯಮೆಂಬಂ
ತೞಿಪದೆ ರಥಾಂಗಮಿನಿಯಳ
ನುೞಿದುದು ಸನ್ಮಾರ್ಗವರ್ತಿಗಿಂತಿದುವೆ ಫಳಂ || ೨೬

ವ || ಅಂತು ಸಮನಿಸಿದ ಸಾಯಂತನ ಸಮಯದೊಳ್ ಸಚಿವಸಮುಚಿತ ವಚೋ ನಿಷೇಧಿತ ತದಾನೀಂತನ ವಿನಿಷ್ಕ್ರಮೋತ್ಕಂಠನಶ್ವಕಂಠಂ ಕಾಲೋಚಿತಾಚರಣಪರನಿರ್ಪಿನಂ-

ಕಂ || ರವಿಬಿಂಬ ಶಿರೋಮಣಿ ಪಾ
ಱಿ ವಾರ್ಧಿಯೊಳ್ ಬೀೞೆ ಖಚರವಿಳಯಕ್ಕೆೞ್ದಾ
ಡುವ ಕಾಳರಾತ್ರಿಯೊಳ್ಗುರು
ಳಿವೆ ಕೆದಱಿದವೆನಿಸಿ ನೆಗೆದುವಳಿಶಬಳತಮಂ || ೨೭

ವ || ಅದಲ್ಲದೆಯುಂ-

ಕಂ || ಇದು ರಜನೀವದನಾಳಕ
ಮಿದು ಗಗನ ಶ್ರೀಲಲಾಮ ಮೃಗಮದಮಿದು ದಿ
ಕ್ಸುದತೀ ಶ್ಲಥಕಚಭರಮೆಂ
ಬುದನೆನಿಸಿದುದಖಿಳ ದಸ್ಯುಕಾಂತಂಧ್ವಾಂತಂ ೨೮

ವ || ಮತ್ತಂ-

ಕಂ || ಇದು ಕೃತಕ ಕಜ್ಜಳವ್ರಜ
ಮಿದು ಪಾವಕಧೂಮ ನಿವಹಮಿದಕಾಲನವಾಂ
ಬುದ ಪಟಳಮುರ್ವಿಯಂ ಪ
ರ್ವಿದತ್ತಿದುತ್ಪಾತಮೆನಿಸಿದುದು ಸಂತಮಸಂ || ೨೯

ಅವಿರಳ ತಿಮಿರಾರ್ದ್ರ ಮೃಗೋ
ದ್ಭವ ಸಿಕ್ತನಭೋಂಗಣಕ್ಕೆ ರಾಜಾಗಮನೋ
ತ್ಸವದೊಳ್ ಬಿತ್ತರಿಸಿದ ರಂ
ಗವಲಿಯ ಮುತ್ತುಗಳಿವೆನಿಸಿದುವು ತಾರಗೆಗಳ್ || ೩೦

ವ || ಮತ್ತಮಾಗಳ್-

ಕಂ || ಕವಿದು ನಿಜಾಂಶುಬಳಂ ನೂಂ
ಕುವ ತಿಮಿರಬಳಂ ತೆರಳ್ದು ಪೆಱತೆಗೆವ ರಣೋ
ತ್ಸವಮಂ ನೋಡಲ್ಕೆೞ್ತಂ
ದವೊಲೇಱಿದನುದಯ ಶಿಖರಮಂ ಮೃಗಲಕ್ಷ್ಮಂ || ೩೧

ವ || ತದನಂತರಂ-

ಕಂ || ಖಗಬಳರುಧಿರದೆ ಕೆಂಪಡ
ರ್ದ ಗಗನಮಚ್ಯುತನ ಕೀರ್ತಿಯಿಂ ಧವಳಿಪುದಂ
ಜಗಮನುಮಾನಿಪಿನಂ ಸಂ
ಜೆಗೆಂಪು ಮೆಯ್ಗರೆಯೆ ಬೆಳಗಿದುದು ಬೆಳ್ದಿಂಗಳ್ || ೩೨

ವ || ಅಂತು ಬೆಳ್ಳಂಗೆಡೆದ ಬೆಳ್ದಿಂಗಳೊಳ್ ಶಾರ್ಙ್ಗಧರನುಮಶ್ವಕಂಧರನುಂ ತಂತಮ್ಮ ರಾಜಮಂದಿರದೊಳುಪಚಿತ ಪ್ರಸ್ತುತ ಸುಭಟಗೋಷ್ಠೀ ನಿರ್ವೃಂದದಿಂದರ್ಧರಾತ್ರಂಬರ ಮೋಲಗದೊಳಿರ್ದು ಅನಂತರಂ ಸಂಗರಾಜಿತ ವೀರಶಯ್ಯೆಯೊಳುಷಃಸಮಾಗಮೋತ್ಕಂಠ ರಿರ್ಪಿನಂ-

ಚಂ || ಎಸಳ್ವಡಿಗೆತ್ತ ತಾವರೆಗಳೋವರಿಯೊಳ್ ಸುಖನಿದ್ರೆಯಿಂದೆ ಜೋಂ
ಪಿಸುವಳಿಯಂ ಪ್ರಭಾತಶುಭಗೀತಿಯನಾಣತಿಗೆಯ್ಯುತುಂ ಯಥಾ
ವಸರ ನಿಬದ್ಧಮಂಗಳಮನೋದಿಸುತುಂ ಗೃಹಕೀರಮಂ ಪ್ರಚಾ
ರಿಸಿದುದು ಕಾಲಭೂಪನ ನಿಯೋಗದ ಸೂಳೆವಳಂಬೊಲೊಂದೆಲರ್ || ೩೩

ಮ || ಸ್ರ || ಸ್ವವಿಧೇಯಾಸಕ್ತಚಿತ್ತರ್ ತಮತಮಗತಿ ಸಂಭ್ರಾಂತರೆೞ್ದರ್ ನರರ್ ಮೂ
ರಿವಿಡುತ್ತುಂ ನಿಂದು ಮೆಯ್ಯಂ ಬಿದಿರ್ದೆಳಸಿದುದಶ್ವಾಳಿ ಮೇಪಿಂಗೆ ತೂಗಾ
ಡುವ ಯಾಮಾನೇಕಮಂ ಮಿಳ್ಮಿಳಿಸಿ ಸೊವಡನಾರಯ್ದುದಶ್ರಾಂತ ವಿಶ್ರಾ
ಣವಿನೋದಶ್ರಾಂತ ವೀರಪ್ರಣಯ ಸುೞಿಯೆ ಸುಪ್ರಾತಚಾರಂ ಸಮೀರಂ || ೩೪

ಕಂ || ಇದು ಹರಿಯ ಸಮರ ಲಕ್ಷ್ಮಿಯ
ಮದುವೆಯೊಳೆಡೆವಿಡಿದ ಕಾಂಡಪಟಮೆನಿಸಿದ ಕೌ
ಮುದಿ ತೆಗೆವಿನಂ ಮಗುೞ್ದುದೆನಿ
ಸಿದತ್ತು ಮುನ್ನೀರೊಳಿಂದು ಘಟಿಕಾಪಾತ್ರಂ || ೩೫

ಧುರಮೀಗಳ್ ಖೇಚರಭೂ
ಚರರ್ಗಾದಪುದಲ್ಲಿ ಪಾಯ್ವ ಕೂರಂಬುಗಳಿ
ಲ್ಲಿರೆ ತಾಗುಗುಮೆಂದುಳ್ಳ
ೞ್ಕಿ ರೂಪುಗರೆವಂತಡಂಗಿದುವು ತಾರಗೆಗಳ್ || ೩೬

ವ || ತದನಂತರಂ-

ಕಂ || ಎಲೆ ಚಕ್ರರತ್ನಮಾಯುಧ
ನಿಲಯಮನುೞಿದತ್ತಲೇಕೆ ಪೋಯ್ತೆನುತೆ ಖಗಾ
ವಲಿ ಸಂಭ್ರಮಿಪಿನಮುದಯಾ
ಚಲ ಶಿಖರಮನೆಳಸಿದುದು ದಿವಾಕರಬಿಂಬಂ || ೩೭

ವ || ಅಂತು ನೇಸಱ್ ಮೂಡಲೊಡಮಭ್ಯರ್ಚಿತ ಭಗವದರ್ಹದಭಿಷವಸುಗಂಧಿ ಗಂಧೋದಕ ನಿಚಯಕವಚಿತ ಶರೀರನುಮಖಿಳವಂದಾರುಸಮುದಯ ಸಮರ್ಪಿತ ಸಕಳ ಭಾಂಡಾಗಾರನುಂ ವರ್ಮಿತ ವಿಜಯಸಿಂಧುರ ಬಂಧುರಸ್ಕಂಧಕೂಟಾಳಂಕಾರನುಮಾಗಿ-

ಕಂ || ಬರೆ ಬಳನುಮರ್ಕಕೀರ್ತಿಯು
ಮೆರೞ್ಕೆಲಂಬಿಡಿದು ಜನಕನುಂ ಮಾವನುಮೆ
ೞ್ತರೆ ಪಿಂದೆ ಶತಾಯುಧಮು
ಖ್ಯರಿಳೇಶರ್ ಮುಂದೆ ನಡೆಯೆ ನಡೆದನುಪೇಂದ್ರಂ || ೩೮

ವ || ಆಗಳ್-

ಕಂ || ದಾನವವೈರಿಯ ಸಂಗರ
ಯಾನವಿಡಂಬನಮನೀಕ್ಷಿಸಲ್ ಕರೆವವೊಲಾ
ಶಾನಾಥರನೆನಲೆಸೆದುದು
ನಾನಾನಕನಿಕರ ನಿಚಿತ ಪೀನಧ್ವಾನಂ || ೩೯

ವ || ಅಂತು ನಡೆದು ಕಂಟಕೋಪಳಾವಟವಿಟಪಿ ವಿರಹಿತ ಸಮಪ್ರದೇಶದೊಳ್ ಬಹುವಿಧ ವ್ಯೂಹರಚನೆಯಿನೊಡ್ಡಂ ಬಲಿದು ನಿಲ್ವಿನಮತ್ತಲ್-

ಕಂ || ಅರದಚಯಂ ದ್ವಿರದಚಯಂ
ತುರಗಚಯಂ ಪತ್ತಿಚಯಮದೆತ್ತಂ ಗಗನೋ
ದರಮಂ ತೀವಿದುದಳಕಾ
ಪುರದಿಂ ತೂಂಬುರ್ಚಿದಂತೆ ಕವಿದವಿರಳಿತಂ || ೪೦

ವ || ಅದಲ್ಲದೆಯುಂ ಪೂಡಿ ಪರಿವ ಪದದೊಳ್ ಪೊಚ್ಚಪೊಸತೆನಿಪಚ್ಚುಗಳ್ ನಿರ್ನಿಮಿತ್ತಂ ನೆರ್ಕ್ಕೆನುಡಿಯೆ ಕೆಲಕ್ಕೆ ಕೆಡೆದುರುಳ್ವ ತೇರನೇರಿದುವಪ್ಪ ರಥಾಂಗಂಗಳ್ ನಿಜೆಶ್ವರ ಕರಪಲ್ಲವೋಲ್ಲಸಿತ ರಥಾಂಗವಿಘಟನಮಂ ಸೂಚಿಸೆಯುಂ ನಿಲ್ಲದಲ್ಲುಗುವ ವಾಜಿರಾಜಿಗಳ ವಿಳೋಚನಜಳಪ್ಲವಂಗಳ್ ಆತ್ಮೀಯವಲ್ಲಭ ಪ್ರಬಳವಿದ್ಯಾಗರ್ವಗಳನಮಂ ನಿರೂಪಿ ಸೆಯುಂ ಚಿಹ್ನಚೇಳಾಂಚಿತಂಗಳಪ್ಪ ಬಿರುದಿನ ಚಮರಂಗಳ್ವೆರಸು ತೊಟ್ಟನುಡಿದು ಕೆಡೆವ ವಿಜಯಗಜವೈಜಯಂತಿಕೆಗಳ ಶಿಖರಕಳಸಂಗಳ್ ನಿಜೇಶ್ವರ ಶಿರೋಭರಪತನ ಪ್ರವಣತ್ವ ಮಂ ಪುಟ್ಟಿಸೆಯುಂ ಮಹಾಭಟರ ಕಟೀತಟಂಗಳೊಳ್ ಕಟ್ಟಿ ನೆಟ್ಟನೆ ಮಿಱುಗುವೊಱೆಗಳಿಂ ಪೊಱಗಣ್ಗೆ ತಾಮೆ ಬಿಗಿದು ಪಾಱಿ ಖಣಖಣತ್ಕೃಋತಿಗೆಯ್ವ ಖೞ್ಗಧೇನುಗಳಾತ್ಮೀಯ ಪರಿವೃಢ ಪ್ರಾಣನಿರ್ಯಾಣಮಂ ಮಾಣದಱಿಪಯುಂ ಮತ್ತಂ ರುಧಿರಬಿಂದುಸ್ಯಂದಿಗಳೆಡೆ ಯೆಡೆಯೊಳೊಗೆಯೆ ಮದಕರೀಂದ್ರ ಸಂದೋಹದಚ್ಚೆಗಳಿನುಚ್ಚಳಿಸಿ ಕೞಲ್ವ ಜಳಕಣಂಗಳುಂ ನಿಖಿಳ ತುರಗಬಳದ ವಳಿಯಿಪ ವಾಳಜಾಳದ ಕೊನೆಗಳಿಂದ ಬಿಡದೆ ಸಿಡಿವಕ್ಕಿಗಳ ಗಡಣಮಂ ಪಡೆದು ಪಗಲೊಳ್ ಪಗಿಲ್ತುತೋರ್ಪ ತಾರಕಂಗಳುಂ ಪ್ರಥಿತರಥಿನೀನಾಥರ ಬಲದ ಮುಯ್ವುಗಳೊಳ್ ಜಲಕ್ಕನೊಗೆದು ನಾಂದ ಕವಚದ ಕಡೆವಿಡಿದು ಪಟ್ಟನೆ ಪನಿವ ಬೆಮರಬಿಂದುಗಳುಂ ನೋಡೆನೋಡೆ ಕರಮೆ ಕಱಂಗಿದ ಸೇನಾಜನದ ದೀನಾನನದ ಕರ್ಪಿನೊಡನೆ ಕವಲ್ತು ಕೞ್ತಲಿಪ ದಿಶಾವಳಿಯ ಧೂಮಸ್ತೋಮಮು ಮಲ್ಲಲ್ಲಿ ತಲೆವಱಿದ ಪೞಯಿಗೆಗಳ ದಂಡದೊಳೆಱಗಿ ದಿಶಾವಳಯ ಧೂಮಸ್ತೋಮಮು ಮಲ್ಲಲ್ಲಿ ತಲೆವಱಿದ ಪೞಯಿಗೆಗಳ ಸಂಛನ್ನಲಾಂಛನ ಧ್ವಜವ್ರಜದ ಪುತ್ತಳಿಗಳೆತ್ತಂ ಸಚಿತ್ತಂಗಳಾದುವೆನಿಸಿ ರೋದಿಸುವ ನಾದಂಗಳುಂ ದೆಸೆದೆಸೆಯೊಳಸದಳಂ ಮಸಗಿ ಮಾಣದೂಳ್ವ ಬಳ್ಳುಗಳ ಬಳಗದಳವಿಗೞಿದ ಕರ್ಕಶ ರವಂಗಳೊಡನೆ ಸಿಱಿಸಿ ಱಿಪೊಱ ಮಡುವ ದನಿಯ ಪಲತೆಱದ ಪಱೆಗಳುಂ ಬಿಡದಡಿಗಡಿಗೊಡರಿಸುತ್ತುಮಿರ್ಪ ಪೊಡವಿಯ ನಡುಕಮುಮೆಂಬ ವಿವಿಧವಿಳಯೋತ್ಪಾಕ ವಿಕೃತಿಗಳೆ ಬಹಳ ಚತುರಂಗ ಮೂರ್ತಿಗಳಾದುವೆಂಬಂತಿರತಿಭಯಂಕರಮಾಗಿರ್ಪ ನಿಜಬಳದ ನಡುವೆ-