ಕಂ || ಶ್ರೀಯ ಜಯಶ್ರೀಯ ವಚಃ
ಶ್ರೀಯ ಯಶಃಶ್ರೀಯ ನಲ್ಮೆ ಸತತಂ ತನಗೇ
ಕಾಯತ್ತಮಾಗೆ ನೆಗೞ್ದಂ
ನ್ಯಾಯಧನಂ ಪಂಚಪರಮಗುರುಪದವಿನತಂ || ೧

ವ || ಒಂದು ದೆವಸಂ ಜ್ವಲನಜಟಿಮಹಾರಾಜಂ ಚಾರುಚಾರಣಮುನಿ ಸನ್ನಿಧಾನದೊಳ್ ಸಂಸಾರಾಸಾರತೆಯಂ ಸವಿಸ್ತರಮಱಿದು ಪರಮವೈರಾಗ್ಯದೊಳ್ ನೆಱೆದು ಸತ್ಪೂಜ್ಯರಾಜ್ಯ ಮನತರ್ಕ್ಯಕೀರ್ತಿಯಪ್ಪರ್ಕಕೀರ್ತಿ ಕುಮಾರನೊಳ್ ನಿಱಿಸಿ ನಿರ್ವೇದಗೀರ್ವಾಣಲಕ್ಷ್ಮೀ ಸಮಾಗಮಾಪೇಕ್ಷೆಯಿಂ ದೀಕ್ಷಾವಯಸ್ಯಾಯತ್ತವೃತ್ತನಾದನೆಂಬುದಂ ಪ್ರಜಾನುತಂ ಪ್ರಜಾಪತಿಮಹಾರಾಜಂ ಚರರ ಬಿನ್ನಪದಿನವಧರಿಸಿ-

ಕಂ || ಪದೆದು ನಿವೃತ್ತಿಗೆ ತಱಿಸಂ
ದುದಕ್ಕೆ ಬೆಱಗಾದನುಚಿತವೃತ್ತಕ್ಕೆ ಸಸ
ಮ್ಮದನಾದಂ ತನ್ನಿಂ ಮುಂ
ಚಿದುದಕ್ಕೆ ವಿಷಣ್ಣನಾದನೇಂ ಗುಣರತನೋ || ೨

ವ || ಆಗಳ್-

ಕಂ || ಈ ಪೞೆಯ ಶ್ರೀಗೆ ಮಹಾ
ಹಾಪದ್ಮಾಳಿಗೆ ಸದಾಶ್ವಚರಿತೆಗೆ ಮಾತಂ
ಗೋಪಾತ್ತೆಗೆ ರಥ್ಯಾಶ್ರೀತೆ
ಗೋಪರೆ ವಿಷಯಾಂಧರಂತೆ ಧೀರೋದಾತ್ತರ್ || ೩

ಪದೆದು ನಿಜಜನಕನನುಭವಿ
ಸಿದ ರಾಜ್ಯಶ್ರೀವಧೂಟಿಯೊಳ್ ನೆರಯಿಸಿ ಮಾ
ಣ್ದುದೆ ಮಸಗಿ ತಮ್ಮೊಳಿಱಿಯಿಸಿ
ದುದು ತೃಷ್ಣಾಮದಿರೆ ಮದದಿನವನೀಶ್ವರರಂ || ೪

ನರೆವೆಸರೊಳ್ನೊರೆ ಮೇಗೊಗೆ
ತರೆ ಮಸಗಿ ಜರಾನದೀರಯಂ ಕವಿದೆಡೆಯೊಳ್
ಧರಿಯಿಪ ಮಹಾವ್ರತ ಪ್ಲವ
ಮಿರೆ ಬಱುದೊಱೆವೋಗಿ ಮಱೆದು ಸಾವುದೆ ಚದುರಂ || ೫

ವ || ಎಂದು ತಮ್ಮೊಳೆ ಬಗೆದನಂತರಮಭಿನವಾಸಕ್ತವಿರತಿ ತರುಣೀಪ್ರಣಯ ಭರದಿಂ ಪುರಾನುಬದ್ಧ ಪ್ರವೃದ್ಧ ರಾಜ್ಯಲಕ್ಷ್ಮೀ ಪುರಸ್ಸರಾಂತಃಪುರಮನುೞಿವ ಬವಸೆಯಿಂ ನಿಜತ ನೂಜರಂ ಕರೆದು ಸಮುಚಿತೋದಾರ ಗಂಭೀರಭಣಿತೆಯಿನಿಂತೆಂದಂ-

ಚಂ || ಮನುಕುಲಮಿಂದು ಪುಣ್ಯಮಯಮಾದುದಕಂಟಕಮಾದುದಿಂದು ಮೇ
ದಿನಿ ನಿಜರಾಜ್ಯಮಿಂದು ಸಕಳಾಂಗಸುಸಂಭೃತಮಾಯ್ತಧರ್ಮಮಿಂ
ದನವರತ ಪ್ರಭಾವನೆಯೊಳೊಂದಿದುದಿಷ್ಟವಿಶಿಷ್ಟರಿಂದು ತ
ಣ್ಣನೆ ತಣಿದರ್ ಭವದ್ವಿಧತನೂಜರಿನಾರ್ ಕೃತಕೃತ್ಯರೆನ್ನವೋಲ್ || ೬

ಮ || ಕ್ರಮಸಂಲಬ್ಧ ಸಮೃದ್ಧರಾಜ್ಯ ಸುಖಮಂ ವಿದ್ವತ್ಸುಹೃತ್ಸಜ್ಜನ
ಪ್ರಮುಖಂ ಭೋಗಿಸಿದೆಂ ಸಮಂತು ಪಡೆದೆಂ ನಿಮ್ಮನ್ನರಂ ನಂದನೋ
ತ್ತಮರಂ ನೋಡಿದೆನನ್ಯದುರ್ಲಭ ಭವತ್ಸಾಮರ್ಥ್ಯಮಂ ಬೇೞ್ಪದೆ
ಲ್ಲಮುಮಾಯ್ತಿಂ ಕರಣೀಯಮೇನೆನಗದಂ ಪೇೞಿಂ ಯಥಾಪ್ರಾಪ್ತಮಂ || ೭

ವ || ಎಂದು ಮತ್ತಂ-

ಕಂ || ಎಮಗಮವಶ್ಯಂ ಕೃತ್ಯಂ
ನಿಮಗಂ ಪರಮಾರ್ಥಕಾರಿತವ್ಯಂ ಸುಜನೋ
ತ್ತಮರ್ಗಮನುಮೋದಮೆನಲಿಂ
ಸಮಯೋಚಿತಮಾಗೆ ನೆಗೞ್ವದಾವುದೊ ಪೇೞಿಂ || ೮

ವ || ಎಂದ ಜನಕನ ಋಜುಪ್ರಾಯಮುಂ ನಿಭೃತಾಭಿಪ್ರಾಯಮುಮಪ್ಪ ನುಡಿಗಳ್ ವಿದಿತಮೆನಿಸೆ ವಿನಯಾಭಿರಾಮಂ ರಾಮಂ ದಾಮೋದರಪುರಸ್ಸರಂ ಕೆಯ್ಮುಗಿದು-

ಕಂ || ಆಮಱಿವೆಮೆ ಭವದೀಯನಿ
ಯಾಮ ಪಥಾನುಗ ವಿಧೇಯ ಕಾರ್ಯಮನಿನಿತಂ
ನಾಮಱಿಪಲೆ ಬಲ್ಲೆವು ನಿಮ
ಗಾಮೆಂತುಂ ವಿನಯನೀಯರೆಂಬುದನೆಂದುಂ || ೯

ವ || ಎಂದು ಸಮಯ ಸಾಂಪ್ರತ ಪ್ರಶ್ರಯ ಪ್ರಕಾಶ ಭಾಷಿತನಯರಾದ ತನಯರಂ ಯಥೋ ಚಿತಾಚರಿತ ಚತುರಶೇಖರಂ ಪ್ರಜಾಪತಿನೃಪತಿ ನಯದಿನನುನಯಿಸುತ್ತುಂ-

ಕಂ || ಸತಿಯರೊಳೆ ಯೌವನಕ್ಕಾ
ಶ್ರಿತ ಬುಧರೊಳೆ ನೆರಪಿದೊಡಮೆಗೆಂತಾಯ್ತು ಯಥೋ
ಚಿತಮಂತೀ ತನುಗನಣು
ವ್ರತದೊಳ್ ಸಲವಾಗೆ ಸಫಳಮಾದಪುದೆಸಕಂ || ೧೦

ಬಿಡಿಸಿದಿರೆನ್ನಿಂ ರಾಜ್ಯದ
ತೊಡರಂ ಕೆಯ್ಕೊಂಡು ನೀಮೆ ಬಱಿದಿಂ ಮನದೊಳ್
ತೊಡರ್ದಿರ್ದಾ ಸಂಕಲೆ ಪಱಿ
ಪಡೆಯುಂ ಸೆಱೆವನೆಯೊಳಿರ್ಪನಂ ನೆನೆಯಿಪೆನೇ || ೧೧

ಜೀವಿಗೆ ಬಾಲ್ಯ ಯುವತ್ವ
ಸ್ಥಾವಿರ ಮರಣಂಗಳನ್ವನುಪ್ರಾಪ್ಯಂಗಳ್
ಭಾವಿಪೊಡಾಂ ಸಂಪ್ರಾಪ್ತ
ಸ್ಥಾವಿರನಿಂ ಪ್ರಾಪ್ಯಮಪ್ಪುದಾವುದೊ ಪೇೞಿಂ || ೧೨

ಲೋಕದವರ್ ಪುತ್ರರ್ ಪರ
ಲೋಕಪ್ರಾಪ್ತಿಗೆ ಸಹಾಯರೆಂಬುದು ಸಾರ್ಥ
ಸ್ವೀಕೃತಮಕ್ಕುಂ ನೀವೆಮ
ಗೀಕಾರ್ಯದೊಳೊಪ್ಪೆ ಮಾಡಿದಂದನುಮತಿಯಂ || ೧೩

ವ || ಎಂದು ಮತ್ತಂ ಪಲತೆಱದುಚಿತ ನಯನೀತಿ ನಿದರ್ಶನಂಗಳಿಂ ತನೂಭವ ಪ್ರಭೃತಿ ಬಾಂಧವರನೆಂತಾನುಮೊಡಂಬಡಿಸಿ-

ಕಂ || ಬಿಸುಟಭಿಮಾನಮನಾ ನೃಪ
ತಿ ಸತಿಯರಂ ಸುತರನಾಪ್ತರಂ ತೊಱೆದಂ ಮೆ
ಚ್ಚಿಸಿ ಮುಕ್ತಿಯೊಡನಿರಲ್ವರಿ
ಸಿ ಸಮೀರಿತಚಿತ್ತನೊಲ್ದೊಡಿದು ಕೌತುಕಮೇ || ೧೪

ವ || ಅಂತು ಸಂವೇಗಾದಿ ಗುಣಸಮಗ್ರ ಸಮ್ಯಕ್ತ್ವರತ್ನತ್ರಯಕ್ಕೆ ನಿಜಮನಃಪೂರ್ವಕಂ ಪಿಂಗಿಸಿದ ಬಾಹ್ಯಾಭ್ಯಂತರಪರಿಗ್ರಹನಿವೃತ್ತಿಯಂ ಸಸಾಕ್ಷಿಕಂ ಮಾಡುವಂತೆ-

ಮಂ || ಪೊರೆದಾಳ್ದಂಗರಿಭಂಜನೋದ್ಯಮದೊಳೆಂದುಂ ನಾಮೆ ಮುಂದಿರ್ದು ಪಿಂ
ಗಿರೆ ಕರ್ಮಾರಿವಿಭೇದದೊಳ್ ಹರಿಬವೆಂದೆೞ್ತಂದ ಸದ್ಧರ್ಮತ
ತ್ಪರರೇೞ್ನೂರ್ವರಿಳೇಶ್ವರರ್ವೆರಸು ತದ್ಭೂಪಾಳಕಶ್ರೇಣಿ ಶೇ
ಖರನಾಂತಂ ಪಿಹಿತಾಸ್ರವಬ್ರತಿಪದಾಬ್ಜೋಪಾಂತದೊಳ್ ದೀಕ್ಷೆಯಂ || ೧೫

ವ || ಅಂತು ತದ್ಭವ ಭವಿಷ್ಯತ್ಸಕಳ ಕರ್ಮನಿರ್ಮೂಳನಂ ಪ್ರಜಾಪತಿ ಬ್ರತಿಪತಿ ಸುದುಸ್ಸಹ ಮಹಾತಪೋ ವಿಶೇಷನಿಯಮಂಗಳೊಳ್ ನೆಗೞಲ್ ತಗುೞ್ದನನ್ನೆಗಂ-

ಕಂ || ತಂದೆಯ ಪದವಿಯೊಳನುನಯ
ದಿಂದಣ್ಣನನಿರಿಸಿ ಪಿತೃಸಮೋ ಜ್ಯೇಷ್ಠಯೆನಿ
ಪ್ಪೊಂದಂದಂ ಪಾಳಿಸುತೆ ಮು
ಕುಂದಂ ಪಾಳಿಸಿದನಖಿಳ ಭೂಮಂಡಳಮಂ || ೧೬

ವ || ಅಂತು ನಿಜಕುಕ್ರಮಾಗತ ಸುರಮ್ಯರಮ್ಯರಾಜ್ಯಧಿಪತ್ಯದೊಳತುಳಗುಣಭದ್ರ ಭಳಭದ್ರ ನುಮಾತ್ಮ ಪ್ರತಾಪಸಂಪದಾಸಾದಿತ ತ್ರಿಖಂಡಭೂಚಕ್ರ ಚಕ್ರಧರ ಪದವಿಯೊಳ್ ತಾನುಂ ಸುಖದಿನರಸುಗೆಯುತ್ತುಮಿರೆಯಿರೆ-

ಕಂ || ನೀತಿಯೊಳೊಗೆದುವು ಲಾಭ
ಖ್ಯಾತಿಗಳೆಂತಂತೆ ಪುಟ್ಟಿದರ್ ಶ್ರೀವಿಜಯ
ಜ್ಯೋತಿಃಪ್ರಭೆಗಳ್ ಖಗಪತಿ
ಜಾತೆಯೊಳಬ್ಜೇಕ್ಷಣಂಗೆ ಮುದಮೊದವುವಿನಂ || ೧೭

ಶ್ರೀ ವಿಜಯಶ್ರೀ ವಿದ್ಯಾ
ಶ್ರೀವಿನಯಶ್ರೀಗಳೊಡನೆ ಬಳೆಯೆ ಕುಮಾರಂ
ಶ್ರೀವಿಜಯಂ ಬಳೆದನರಿ
ಶ್ರೀವಿಜಯಂ ಬಳವಿಗೆಯ್ದುವಿನ ಗುಣನಿಳಯಂ || ೧೮

ಜ್ಞಾತಿಗಳ ಕರತಳಾಂಭೋ
ಜಾತಂಗಳೊಳೆಯ್ದೆ ತೊಳಗಿ ಕೆಯ್ಗನ್ನಡಿವೋಲ್
ಜ್ಯೋತಿಃಪ್ರಭೆ ಬಳೆದಳತಿ
ಪ್ರೀತಿಯಿನೀಕ್ಷಿಸುವ ಜನದ ಕಣ್ಗಳ ನೆೞಲೊಳ್ || ೧೯

ಇದು ನವಯೌವನರಸಚಿ
ತ್ರದ ತಿಟ್ಟಮಿದಂಗಭವನ ರಾಜ್ಯದ ಕರುಮಾ
ಡದ ವಾಸ್ತುಸೂತ್ರಮೆಂಬಂ
ದದಿನೆಸೆದುದು ನಿಸದಮವಳ ಕೊಡಗೂಸುತನಂ || ೨೦

ದುಗುಲದ ಪಲ್ಲವದುಡೆನೂ
ಲ ಗಂಟೆಗಳ ಪುದಿವನಾಂತು ಬಾಲ್ಯಶ್ರೀಕೇ
ಳಿಗೃಹಾಗ್ರ ತೋರಣದ ಶಾ
ಖೆಗಳೆನಿಸಿದುವಮಳ ಕೋಮಳೋರುಗಳವಳಾ || ೨೧

ಸ್ತನಜಘನಮೊದವದನ್ನೆಗ
ಮನುಭವಿಸುವೆವಿದಱ ಚೆಲ್ವನೆಂದೆಳಸಿದವೋಲ್
ಜನನಯನಮಳಿಗಣಾವೃತ
ಮನಿೞಿಸಿದುದು ಕುಮುದಲತೆಯನೊಳ್ನಡುವವಳಾ || ೨೨

ಇದು ಚೆಲ್ವಿನ ನಿಧಿಯೆನೆ ತಳೆ
ವುದವಳುರಸ್ಥಳಮಶೇಷ ನಿಜಶೋಭಾಸಂ
ಪದಮನೆಡೆಗೊಂಡು ಕುಚಮೊದ
ವಿದಂದು ಮೆಱೆದಪೆನೆ ಬೞಿಕಮೆಂಬೀ ತೆಱದಿಂ || ೨೩

ಬಳೆದುವುರೋಂತಃಕುಚಕಂ
ದಳದಿಂದೆಡೆಗುಡುಗಳಾದ ಕೊರಲಂತಯ್ತಿ
ನ್ನೆಳಗೌಂಗನಡರ್ದ ಲತೆಯಂ
ಯಿೞಿಸುಗುಮೆನೆ ನೋೞ್ಪರೆಸೆದುವಾಕೆಯ ತೋಳ್ಗಳ್ || ೨೪

ಕವಿದು ಮಧುಪಾಳಿ ಕುಡಿವಾ
ಸವಪಾತ್ರಂ ತಾನುವೆಣೆ ಗಡೆನಗೆನುತಾ ರೂ
ಪವತಿಯ ಮೀಸಲ್ವಾಯ್ ನಗು
ವವೊಲೆಸೆವುದು ರಾಗದೊದವಿನಿಂ ಬಂದುಗೆಯಂ || ೨೫

ಇವು ಲಕ್ಷ್ಯವಿಸರಮೆಂದಾ
ಸವಿಕೃತಿವಿರಹಿತ ಮನೋಜಸರದನುಗಳೆನಿ
ಪ್ಪುವಕೃತ್ರಿಮ ಶೋಭಾವೈ
ಭವಂಗಳಕ್ಷಿಭ್ರುವಂಗಳಾ ಕೋಮಳೆಯಾ || ೨೬

ಬಳೆದುದು ನಿಜನಖರೋಚಿ
ರ್ಜಳಮಂ ಪದವದಱೊಳಾಕೆ ತಿರ್ದದೆಯುಂ ಕುಂ
ತಳ ನವತಮಾಳ ವನಮೇಂ
ಬಳಯಿಸಿತೊ ಜನಾವಳೋಕರುಚಿ ಜಳವರ್ಷಂ || ೨೭

ವ || ಅಂತು ಸಂತೋಷಿತಾಶೇಷ ಜನಾಶಯಮಾದ ಶೈಶವಮೋಸರಿಸೆ-

ಕಂ || ಮಱುಕದ ಮುಂಗುಡಿ ಸೊಬಗಿನ
ನೆಱವು ಮನೋಭವನ ಬೀರಸಿರಿ ಚೆಲ್ವಿನ ಕ
ಣ್ದೆಱವಿ ತಲೆದೋಱಿದುದು ಜಗ
ಮೆಱಗುವಿನಮವಳ್ಗೆ ಮದನನಾಳ್ಕೆಯ ಹರೆಯಂ || ೨೮

ಮ || ದರಹಾಸಮೃತ ಕೈತವಂ ನುಡಿಗಳೊಳ್ ಭೂಷಾವಳಿಕ್ಷೇಪ ತ
ತ್ಪರಲೀಲಾಂಗ ನಿವೇದನಂ ಕರದೊಳೀಷದ್ಭ್ರೂಲತಾ ನೃತ್ಯ ಸಂ
ಚರಣಂ ಲೋಚನದೊಳ್ ಮದೋಪಚಿತ ದಾರ್ಷ್ಟ್ಯಂ ಚಿತ್ತದೊಳ್ ಪೆರ್ಚಿ ಮೆ
ಯ್ವೊರೆದತ್ತಾಕೆಗಮಾ ಜಯೋದ್ಯತ ಮನೋಜಾಗ್ರೇಸರಂ ಯೌವನಂ || ೨೯

ಚಂ || ನೆಲೆಮೊಲೆ ಹಾರಮಂ ಕೆಲಕೆ ನೂಂಕಿದುದೆಯ್ದೆ ವಿಳೋಳಲೋಚನಾಂ
ಚಲಮವತಂಸಮಂ ಮಸುಳಿಸಿತ್ತು ಗತಿಸ್ಫುರಿತಂ ನಿತಂಬಮಂ
ಡಲಕಟಿಸೂತ್ರಮಂ ಪಱಿದು ಸೂಸಿದುದಾಕೆಗೆ ತನ್ನ ಚೆಲ್ವನ
ಗ್ಗಲಿಸುವ ಯೌವನಾಭಿನವಲಕ್ಷ್ಮಿಗವೇಂ ಮಱೆಯಾದುವೆಂಬಿನಂ || ೩೦

ಉ || ಲೋಲ ವಿಲೋಚನೇಷುಗಳಿನುಚ್ಚಪಯೋಧರಚಕ್ರದಿಂ ಲಸ
ದ್ಭ್ರೂಲತಿಕಾಧನುರ್ಲತಿಕೆಯಿಂ ವಿಳಸದ್ವಿಜ ವಜ್ರದಿಂ ವಿನೀ
ಳಾಲಕಪಾಶದಿಂ ಮಸೃಣದೋಃಪರಿಘಂಗಳಿನಾರ ಕಣ್ಗಮಾ
ಬಾಲೆ ವಿಡಂಬಿಪಳ್ ಜಯನಶಾಲೆಯ ಲೀಲೆಯನಂಗಜನ್ಮನಾ || ೩೧

ಚಂ || ಮಿಗೆ ನಱುಸುಯ್ಯನೋಸರಿಸುಗುಂ ಮಲಯಾನಿಳನಿಂಪುವೆತ್ತಮಾ
ತುಗಳೊಡನೋದುಗುಂ ಸ್ಮರಧನುರ್ಗುಣಟಂಕೃತಿಗಳ್ ಕಟಾಕ್ಷಮಾ
ಳೆಗಳೊಡನಾಡುಗುಂ ತೊಳಪ ತಣ್ಗದಿರೆಂಬಿನಮೆಯ್ದೆ ಲೋಕಮಂ
ಬಗೆಗೊಳಿಸಿತ್ತು ಮೆಯ್ಸಿರಿಯ ಸೊಂಪು ಧರಾರಮಣೀಶಪುತ್ರಿಯಾ || ೩೨

ವ || ಇಂತು ಮನ್ಮಥಮದಪ್ರಮದಕೇಳೀವನಮಾದ ಯೌವನದೊಳ್ ಮನೋಭವಂಗೆ ಭುವನಮಂ ಬಸದಾಗೆ ಬೆಸಕೆಯ್ಯಲ್ ನೆಱೆಯೆ ನೆಱೆದ ನಾನಾವಿಧ ವಿನೋದ ಕೇಳೀ ಕೌತುಕಂಗಳಿಂ ದಿನಂಗಳೊಳ್ ಸೊಬಗುವಡೆವಿನಮಾ ಬಾಲೆ ಲೀಲೆಯಿಂ ಕ್ರೀಡಿಸುತ್ತು ಮೊಂದು ದೆವಸಂ-

ಚಂ || ಗವಸಣಿಪಂದದಿಂ ಪದತಳಾಂಶುವಿನುರ್ವಿಯನೀಕ್ಷಣಂಶುವಿಂ
ಧವಳಿಸುವಂದದಿಂ ದೆಸೆಗಳಂ ಚಿಕುರಾಂಶುವಿನೀಂಟುವಂದದಿಂ
ದಿವಸಮನಂಗಜಾನತ ಜಗತ್ರಯವೆೞ್ತರೆ ಸುತ್ತಲುಂ ಕಳಾ
ಪ್ರವಣ ಸಖೀಜನಂ ಜನಪನೋಲಗದಲ್ಲಿಗೆ ಬಂದಳೊರ್ಮೊದಲ್ || ೩೩

ವ || ಅಂತು ಬಂದು-

ಉ || ಈ ವದನಾಬ್ಜಮೀ ಭುಜಲತಾದ್ವಯಮೀ ಕುಚಚಕ್ರಯುಗ್ಮಮಿ
ನ್ನಾವನ ವಕ್ತ್ರಪಂಕಜಕಿದಾವನ ಕೋಮಳ ಬಾಹುಶಾಖೆಗ
ಳ್ಗಾವನುರಸ್ಥಳೀಪುಳಿನ ಭೂಮಿಗೆ ಸಾರ್ಗುಮೆನುತ್ತೆ ವಿಸ್ಮಿತೋ
ರ್ವೀವರರಾವಗಂ ಬಯಸಿ ನೋಡೆ ನೃಪಾಳಸಭಾಂತರಾಳದೊಳ್ || ೩೪

ಮಾಳೆಯನುರ್ವಿಗೋಲಗಿಸೆ ಸೋರ್ಮುಡಿ ಪಾಣಿತಳಂ ಸ್ಥಳಾಬ್ಜಮಂ
ಮೇಳನ ಲಕ್ಷ್ಮಿಯುಂ ತಳೆಯೆ ಪೆರ್ಮೊಲೆ ಮೇಲುದನಿಕ್ಕಿಮೆಟ್ಟೆ ಮು
ಕ್ತಾಲತೆ ಮುಂದೆ ಕಂದಳಿಸೆ ಕಣ್ಮಲರಂ ಶ್ರವಣಾನತೋತ್ಪಳಂ
ಲಾಲಿಸೆ ಬಾಲೆ ಬಂದೆಱಗಿದಳ್ ನಿಜತಾತನ ಪಾದಪೀಠದೊಳ್ || ೩೫

ಚಂ || ಬರೆ ತೆಗೆದಪ್ಪಿಕೊಂಡು ತೊಡೆಯಂ ಪದೆದೇಱಿಸಿ ಭಾಳದೇಶದೊಳ್
ಪರೆದ ಕುರುಳ್ಗಳಂ ಕರದಿನೋಸರಿಸುತ್ತುಮಕೃತ್ರಿಮ ತ್ರಪಾ
ಭರನಮಿತಾಸ್ಯಮಂ ನೆಗಪುತುಂ ಚಟುಲಾಲನೆಯಿಂದೆ ತಾಯ್ವಿರಂ
ಬರಿಸಿದುದಾವಕಾಐðಮೊ ನಿಜಾತ್ಮಜರೋಲಗಕೆಂದು ಕೇಶವಂ || ೩೬

ಕಂ || ಬೆಸಗೊಳೆ ಲಜ್ಜಾನಮ್ರೆಗೆ
ನಸುನಗೆಯಿಂ ನುಡಿಗೆ ತೆಱಪುಗುಡದಿರೆ ಲಬ್ಧಾ
ವಸರಿ ಸಮಯಾವಗತಿಯೆಂ
ಬಸಖಿ ಯಥೋಚಿತ ವಿದಗ್ಧೆ ವಿಜ್ಞಾಪಿಸಿದಳ್ || ೩೭

ದೇವ ಪೊಸಮಲ್ಲಿಗೆಗಮೊ
ಳ್ಮಾವಿಂಗಂ ಮದುವೆಮಾಡಿದಳ್ ಬನದೊಳ್ಸ
ದ್ಭಾವದೆ ಮಿಥುನದ ಕೆಲದೊಳ್
ನೀವಾರೋಗಿಸಲೆವೇೞ್ಕುಮೆಂದೆರೆದಪ್ಪಳ್ || ೩೮

ವ || ಎಂದು ಸಮಯಾವಗತಿ ನುಡಿದ ಮಲ್ಲಿಗೆಯ ಮಾವಿನ ವಿವಾಹ ವೃತ್ತಾಂತ ಪ್ರಸ್ತಾವನೆಯ ಬೀಜಮಾಗೆ ಬಗೆಯೊಳ್ ಪೆರ್ಚಿದಾತ್ಮೀಯಪುತ್ರೀಪರಿಣಯನ ಕರಣೀಯ ಚಿಂತಾಪರಂ ಪರಾಲತೆಯಿನಾಕ್ರಾಂತನಾಗಿ ಲಕ್ಷ್ಮೀಕಾಂತನುಚಿತಲಾಲನಾ ವಿಕೃತವಿನಯ ಚಟುಳಚತುರ ವಚನನಾತ್ಮಜಿಯನೞ್ಕಱಿಂ ಕಳಿಪಿ ತತ್ಕಕ್ಷಣವಿಸರ್ಜಿತ ಸಕಳರಾಜಲೋಕನುಂ ಪ್ರಗಲ್ಭ ಕುಲವೃದ್ಧಯೋಷಿತ್ ಪ್ರಧಾನ ಪರಿಷತ್ಪರೀತನುಮಾಗಿ ತತ್ಸುತಾಪರಿಣಯನ ಕಾರ್ಯ ಪರ್ಯಾಲೋಚನದೊಳ್-

ಕಂ || ಲತೆಯಂ ಫಳಮಾಳೆಯ ಬಳ
ವಿ ತರುಗೆ ಮಾೞ್ಪಂತೆ ಮಾಡಿದುದು ಚಿಂತಾಕ್ರಾಂ
ತತೆಯನೆಮಗೀ ಮಗಳ ಬಳ
ವಿ ತುದಿಯೊಳೀ ತೆಱನೆ ಪೆತ್ತವರ್ಗೆ ಪೆಣ್ಗೂಸಂ || ೩೯

ವ || ಎಂದು ಮತ್ತಂ-

ಕಂ || ನೀವಱಿ ವೆಡೆಯೊಳ್ ರೂಪವ
ಯೋ ವಿದ್ಯಾ ವಿಭವ ವಂಶಸಂಪತ್ತಿಯೊಳಿಂ
ದೀ ವರನೀಕೆಗೆ ತೊಣೆಯೆನೆ
ಭೂವರರೊಳ್ ನೋಡಿ ಮಾಡುವುದು ಶೋಭನಮಂ || ೪೦

ವ || ಎಂದುಪೇಂದ್ರನುಚಿತವಚನಕ್ಕೆ ಸಕಳಕುಳವೃದ್ಧ ಪಾರ್ಥಿವ ಪುರಸ್ಸರಂ-

ರೂಪಿನೊಳಂ ಗುಣದೊಳಮನು
ರೂಪರ್ ಕನ್ಯಕೆಗೆ ಕುಲದೊಳಂ ವಿಭವದೊಳಂ
ಭೂಪಾಳಾನ್ವಯರಿಂದನು
ರೂಪರ್ ನಿನಗಿಲ್ಲ ಪಿರಿದುಮಾವಱಿವೆಡೆಯೊಳ್ || ೪೧

ಕಂ || ನಮಗಱಸಿ ಮಱುಗುವನಿತೇ
ಕೆ ಮನಂ ಮೆಚ್ಚಿದರನಾಕೆ ವರಿಯಿಸುವಂತು
ದ್ಯಮಿಪಂ ಸ್ವಯಂವರಮನೆಂ
ದು ಮುಕುಂದನನಂದೊಡಂಬಡಿಸಿ ಬಳಭದ್ರಂ || ೪೨

ಬೆಸಸಿ ಚರನಿಕರಮಂ ಸಾ
ಱಿಸಿ ಪಾಂಚಾಳಾಂದ್ರ ಚೋಳ ಮಾಳವ ಮಗಧಾ
ದಿ ಸಮಸ್ತ ದೇಶ ಭೂಮೀ
ಶಸಮಿತಿಗೆಲ್ಲಂ ಸ್ವಯಂವರ ಪ್ರಕ್ರಮಮಂ || ೪೩

ವ || ಆಗಳದಂ ಕೇಳ್ದಶೇಷದೇಶ ಸಾಮಂತ ಮಂಡಳೀಕ ಮಕುಟಬದ್ಧ ಭೂಪಾಳಜಾಳಮೆಲ್ಲಂ ನೆರೆದು ಬರಲೊಡಂ ವಿಶುದ್ಧವಾಸರದೊಳಖಿಳಕುಳವೃದ್ಧ ಪ್ರಧಾನಪುಣ್ಯ ಪುರಂಧ್ರೀ ಪುರೋಹಿತ ಪುರಸ್ಸರಂ ಪುರಂದರನಿಭಂ ಪುರುಷೋತ್ತಮಂ ಉರುತರ ಪ್ರಮೋದದಿಂ ಪರಸಿ ಸೇಸಿಕ್ಕಿ ಶೇಷಾವಿಶೇಷಿತೋತ್ತಂಸಮೌಕ್ತಿಕನಿಕರೆಯಂ ಪತಿಂವರೆಯನಂದು ಮುಂದಿಟ್ಟು ನಡೆಯೆ-

ಕಂ || ಬಾರದ ದಿಕ್ಪಾಳಕರಂ
ಭೋರೆನೆ ಕರೆಯಲ್ಕೆ ಪರಿವವೋಲ್ ದೆಸೆಯಂ ತೂ
ರ್ಯಾರಾವಮೆಯ್ದೆ ನಡೆದಳ್
ನಾರಿ ಸ್ವಯಂವರಕೆ ಗುರುಸುಹೃಜ್ಜನ ಸಹಿತಂ || ೪೪

ವ || ಅಂತು ನಡೆತಂದು ಮುಖಮಂಡನ ಮಾಳೆಗಳ್ ಮಿಳ್ಳಿಪ ಪೞಯಿಗೆಯ ತಳಿರ ತೋರಣದ ಮಿಳಿರ್ವ ಲಂಬಳದ ಗುಡಿಯ ಗಂಟೆಯ ವಿಚಿತ್ರ ವಿತಾನದ ವಿವಿಧ ರಚನೆಗಳ ಚೆಲ್ವಿನೊಳಂ ಕಡೆಗಡೆಯೊಳಡಕಿಲ್ಗೊಂಡು ನೋಡುವ ಜನಂಗಳಧರ ಬಂದೂಕದ ನಾಸಿಕಾಚಂಪಕದ ನಯನಕುವಳಯದ ಬಣ್ಣಸರದಮಾಳೆಗಳ ಕೇರ್ಗಳೊಳಂ ಒಳಗೆ ಮಧ್ಯವೀಥಿಯಿರ್ಕೆಲದ ರತ್ನವೇದಿಕೆಗಳೊಳೋಳಿಗೊಂಡು ಕುಳ್ಳಿರ್ದ ನಾನಾದೇಶ ಭೂಮೀಶರೊಳರೆಬರ ವಿಕೃತ ವಿಷಯೋಚಿತಾಕಾರ ಭಾಷಾವೇಷ ವಿಸರತೆಯುಮನೆಲ್ಲ ತೆಱದಿಂ ತಮ್ಮೆಗ್ಗನಗ್ಗಂಮಾಡಿ ಬಂದ ಬರವುಮಂ ನೋಡಿ ಱೋಡಿಸಿ ನಗುವ ಧೂರ್ತ ದೇಶೀಯ ಚಪಳ ನೃಪಕುಮಾರ ಸಮುದಯದೊಳಂ ಕೆಲಕೆಲಂಬರನನುರೂಪ ಭಾಷಾ ವೇಷ ವಿಕೃತಿಯುಮಂ ಬರ್ಪ ಕನ್ಯಕೆಯ ವಿಳೋಕಪಥಕ್ಕೆ ಸಲ್ಪ ಕುತೂಹಳದಿನಿರ್ದೆಡೆ ಯಿಂ ಮುಂದಣ್ಗೆ ನಿಮಿರ್ವ ಕೆಯ್ತಮುಮಂ ನೋಡಿ ನೆಗೆವ ನಸುನಗೆಗೆ ವಿಖೃತವೈತಾಳಿಕ ವಚನಮಂ ನಿಮಿತ್ತಂ ಮಾೞ್ಪದಾತ್ತ ಧಾತ್ರೀಪಾಳಜಾಳದೊಳಂ ದುರ್ಲಭ ನಿತಂಬಿನೀ ಲಾಭಲೋಭದಿಂ ಬಂದ ತಮ್ಮ ಬರವಂ ಸ್ವಯಂವರ ಮಹೋತ್ಸವ ವಿಳೋಚನಕ್ಕೇ ಱಿಸಿ ನುಡಿವ ಕೃತಕಾಭಿಮಾನ ಭೂನಾಥನಿವಹದೊಳಂ ನೆರೆದರಸುಗಳ ನಡುವೆ ತಮ್ಮ ಪೆರ್ಮೆಯಂ ಪೆಱಗುಗೆಯ್ದು ಪೆಱರ್ಗೆ ಪೂಮಾಲೆಸೂಡುವುದಂ ಮಿಳ್ಮಿಳನೆ ನೋಡಿ ಪೋಪೀಸ್ವಯಂವರ ಸಮಯಕ್ಕೆ ಬರ್ಪುದೇ ಕಷ್ಟಮೆಂದು ಬಂದ ಬರವಿಂಗೆ ಮನ ದೊಳನುಶಯಂಬಡುವ ಮಾನಧನಧರಾಧಿಪತಿ ಪಟಳದೊಳಂ ಈ ತೆಱದೆ ಮೆಱೆವ ಮೀಱಪಿಗರ ಮುಱುಕಮಾದೊರೆಯ ಭರದ ಜವ್ವನಿಗೆಯನೆಮ್ಮ ಕೆಯ್ಸಾರಲಿತ್ತಪ್ಸುದೆ ಪಿರಿದುಮೆಂದು ಮಱುಗಿ ಮನದೊಳ್ ಮುನಿದು ಕೆಲದ ಕಡುನೀಱರನಡರೆ ನೋೞ್ಪ ಬಡಮನದ ಮಂಡಳಿಕಂಡಳಿಯೊಳಂ ರಮಣೀರತ್ನಲಾಭ ಸಂಭವವಿಕಳ್ಪನಾಹೃದಯ ರಾಗಿ ಕೆಲಸ ಮಾನಸರನೇನಾನುಮಂ ಬಱಿದೆ ಬೆಸೆಗೊಳ್ವ ಮಱೆದು ಮಱುಮಾತು ಗುಡವಱಿದು ನಾಣ್ಚುವುತ್ಕಳಿಕಾ ತರಳಿಮಾಕ್ರಾಂತ ಸಾಮಂತಸಂತತಿಯೊಳಂ ಪಿಡಿದು ಮಿಡಿವಾಳ ವೀಣೆಯ ಕೆಳೆಯ ಕೆಳೆಯೊಳ್ ದಳವೇಱಿ ಲುಳಿಯಿಸಿ ಪಿರಿಯ ದನಿಯೊಳ್ ತಿಸರಿಯ ಸುಸರತನಮಂ ಮುಹರಿಯ ಮಧುರತೆಯುಂ ಬೀಣೆಯ ಬಹುಲಿಕೆಯುಂ ಎಸೆಯೆ ಬಳವಿಯಂ ಬೈಸಿಕೆಗೆ ಬಸದೆಮಾಡಿ ಪಾಡುವೆಕ್ಕಲಗಾಣರ ಸಂಮಾ ವಣೆಯ ಗೀತಲತಿಕೆಗೆ ಸಮುಚಿತೋತ್ತರಂಗಳನಡರ್ಪುಮಾಡಿ ಬಳಯಿಸುತ್ತುಮಬಳಾ ಗಮನ ಸಮಯಂಬರಂ ಪೊೞ್ತುಗಳೆವತಿನಿವೋದ ರಸಿಕರಂಜಕವಿಳಾಸಿರಾಜಕದಂಬ ದೊಳಂ ತಂತಮ್ಮ ತೋಳ್ವಲದ ಚಲದ ಕಲಿತನದ ಬಲ್ಪಿನಂಕಮಾಲೆಯಂ ಕೇಳಿಸಿ ಭುಜಲತಿಕೆಗೆ ರೋಮಾಂಕುರೋದ್ಗಮಮ ನಾಗಿಸುವ ಮಾಗಧರ್ಗೆ ಮೆಚ್ಚುಗೊಟ್ಟು ಪೊಗೞಿಸುವ ವೀರೋದಾರ ಧಾರಿಣೀರಮಣಸಮಿತಿಯೊಳಂ ಪುರಾತನ ಕೃತಸ್ವಯಂವರ ವಿಭವಶೋಭೆಯಂ ಪೊರೆಯ ನರಪತಿಕುಮಾರರ್ಗೆ ಪೇೞ್ದು ವಿಸ್ಮಯಮನೊದವಿಪ ವಯೋಧಿಕ ಪ್ರಗಲ್ಭ ಪೃಥ್ವೀವರ ಪ್ರಕರದೊಳಂ ಅರ್ಗಲಿಸಿದ ವಿವಿಧ ರಸಭಾವ ವಿಭ್ರಮ ವಿಭವಶೋಭೆಯಿನಖಿಳಜನ ಮನಶ್ಚಮತ್ಕೃತಿಯನೊದವಿಪಮೇಯ ರಮಣೀಯಾಶ್ರಯ ಮಂ ಸ್ವಯಂವರ ಜನಾಶ್ರಯಮನತಿಬಹಳಮಂಗಳ ಪಟಹಮಾಳೆಗಳ್ ಮೊೞಗೆ ಪೊಕ್ಕು-

ಚಂ || ತರಳ ಕಿರೀಟಕಾಂತಿ ಸಭೆಗಂಗಜನಿಕ್ಕಿದ ಜಾಲದಂತಿರಾ
ವರಿಸೆ ಕಪೋಳಕಂಟಕಮೆ ನೂಕಿದವೊಲ್ ಪೊಱಮಯ್ವನೋಲೆ ಸಾ
ರ್ತರೆ ಮಣಿಮಾಲೆ ಬಾಲೆಗಿದಿರೇೞ್ವವೊಲಾದೆರ್ದೆಗಡ್ಡ ಮಾಗದೋ
ಸರಿಪವೊಲಾಗೆ ಪಾರ್ಥಿವಕುಳಂ ಮುರಿದೀಕ್ಷಿಸೆ ಸಂಭ್ರಮಾಕುಳಂ || ೪೫