ಕಂ || ಶ್ರೀಕಾಂತಂ ಕೞಿಯಲೊಡಂ
ಭೂಕಾಂತೆಯನಾತನಾತ್ಮಜಂಗೊಪ್ಪಿಸಿ ನಿ
ರ್ವ್ಯಾಕುಳನೇಂ ನಲಿದನೊ ಬುಧ
ಲೋಕನುತಂ ಪಂಚಪರಮಗುರುಪದವಿನತಂ || ೧

ವ || ಅನಂತರಂ ಸೀರಪಾಣಿ ಭೂರಿವೈರಾಗ್ಯಧಾರಿ ಧಾರಿಣೀಪತಿಸಹಸ್ರಂಬೆರಸು ಪೋಗಿ ಪಿಹಿತಾಶ್ರವ ಯತೀಶ್ವರನಂ ತ್ರಿಪ್ರದಕ್ಷಿಣಂಗೆಯ್ದು ಭಕ್ತಿಭಾರಾವನತಮಸ್ತಕನತಿಪ್ರಶಸ್ತ ಜಿನದೀಕ್ಷೆಯಂ ತಳೆದು-

ಕಂ || ಬಿಡೆ ಬಹಿರಂತರ್ಗ್ರಂಥದ
ತೊಡರ್ಪು ರತ್ನತ್ರಯಪ್ರಗುಣಸೋಪಾನಂ
ಬಿಡಿದಷ್ಟಮ ಭೂಮಿತಳ
ಕ್ಕಡರ್ದಂ ಲಘುಕರ್ಮಿಗೂರ್ಧ್ವಗತಿ ದುರ್ಲಭಮೇ || ೨

ಘನಮಿಥ್ಯಾತ್ವೋದಯ ಯೋ
ಧನೋದಿತಂ ಧರ್ಮಗುಣ ಪರಿಚ್ಯುತಮಖಿಳಾ
ವನಿಪಟಳಮನುರ್ಚಿ ಜನಾ
ರ್ದನ ಜಿಹ್ಮಗಮೆಯ್ದಿದತ್ತು ಸಪ್ತಮಧರೆಯಂ || ೩

ವ || ಅಂತಾತ್ರಿಷೃಷ್ಠನುಂ ತೀವ್ರತರಮೋಹನೀಯ ನಿರ್ಭರಪ್ರೇರಣೆಯಿನೇೞನೆಯ ನರಕ ಬಿಲದೊಳ್ ಬಿೞ್ದು ನಾನಾವಿಧ ಸುದುಸ್ಸಹ ಮಹಾದಃಖಮಂ ಮೂವತ್ತುಮೂಱು ಸಾಗರೋಪಮಂಬರಮನುಭವಿಸಿ ಜೀವಿತಾವಸಾನದೊಳೀ ಭರತಭೂತಳದ ಸಿಂಹ ಗಿರಿಕಂದರದೊಳ್-

ಕಂ || ಮೊದಲನುಭಾಗಮನಾಶ್ರಯಿ
ಸಿದ ಮೊದಲ ಕಷಾಯದಧಿಕ ರಂಜನೆಯೊಳ್ ಪ
ತ್ತಿದ ಕೃಷ್ಣ ಲೇಶ್ಯೆಯಿಂ ಬಂ
ದುದಯಿಸಿದಂ ತಾಂ ಮಹೋಗ್ರ ಸಿಂಹಾಕೃತಿಯಿಂ || ೪

ಅದು ಹಿಂಸಾನಂದಮೆ ಪೆ
ತ್ತುದು ಮೂರ್ತಿಯನೆನಿಸಿ ರೌದ್ರತರಮಾಯ್ತೇವೇ
ೞ್ದುದೊ ನೆನೆದ ಮನಕ್ಕಂ ನೋ
ಡಿದ ದಿಟ್ಟಿಗಮತಿಭಯಂಕರಂ ಮೃಗರಾಜಂ || ೫

ವ || ಮತ್ತಮದು ಮನದ ಬಿನದಕ್ಕೆ ವನಮೃಗಮನುಗಿಬಗಿಮಾಡಿ ಬಿಡುವೆಡೆಯೊಳೊಡನೊಡನೆ ಪೊರೆದು ಮುಸುಕಿದ ಪೊಸನೆತ್ತರ ಮುಸುಱೆಯುಂ ಕೆಮ್ಮುಗಿಲ ತೆಳ್ವೊರೆಯ ಮಱೆಯೊಳ್ ಮಿಱುಪ ಸಂಜೆವೆಱೆಯ ಮುಱುಕಮಂ ಮೆಱೆದುಮತಿಕುಟಿಳ ಕಿಂಶುಕಮುಕುಳ ಮಂಜರಿಯನೆ ಜನಿಯಿಸಿ ರಂಜಿಸುವ ನಿಶಿತಖರನ ಖರಮಂಜರಿಗಳೊಳಂ ಮದ ಕಳಭ ಕಪೋಳವಿದಳನದೊಳ್ ಪುದಿದ ಮದಪಂಕ ಪರಿಮಳಮನೆಳಸಿ ಬಿರುದಿನ ಕರಿಯ ದಂಡೆಯೆನೆ ಮಂಡಳಿಸಿದಳಿಗಳಿಂ ನೀಲಮಯ ಕಿಂಕಿಣಿಯ ಸಂಕುಳಮನಾಂತುವೆನಿಸಿ ಸಕಳಮೃಗರಾಜ ರಾಜ್ಯಲಕ್ಷ್ಮೀವಿಳಾಸಭವನಮೂಲಸ್ತಂಭಮೆಂಬಿನೆಗಮಿಂಬಾಗಿ ಬೀರಸಿರಿಯ ಸೆಳೆಮಂಚದ ಪದಂಗಳೆನಿಸಿ ಬೆಡಂಗನಂಗೀಕರಿಸಿ ಸುರುಚಿರಮಾದ ಪದಂಗಳೊಳಂ ಸೆಱೆಗೊಂಡು ಕಾವ ಪೆರ್ವಾವನಿಸಿ ಮೇಲೆ ಲಾಂಗೂಲಮಾವರಿಸೆ ವೀರಲಕ್ಷ್ಮಿಯ ಕಡಾರದೊಳೋರನ್ನಮಾಗಿ ಸಕಳ ಸತ್ವಸಂಹಾರ ಭೈರವನ ವೀರಪಾನ ದಾಸವಘಟಂಗಳೆನಿಸಿ ಬಹುವಿಧ ವ್ಯಾಧನೊಡ್ಡಣದ ಸಂಕದಡ್ಡಣಮಿವೆಂಬಿನೆಗಮೊಡ್ಡಿ ಕಡೆದಂತಿರೆಡ್ಡ ಮಾದ ಪೃಥುಳ ನಿಸ್ತಲ ಕಟೀಮಂಡಳಂಗಳೊಳಂ ಅಖಿಳ ಮೃಗಪಟಳಮಂ ಪಿಡಿಯಲೊಡರಿಸಿ ಸಮೆದ ಶಮನ ಶಬರನ ಬೀಸುಂಬಲೆಯ ಪಾಸಮೆನಿಸಿ ಬಳ್ವಳಿಪ ಬಹುಳ ಹಿಂಸಾವಿಷಮವಿಷವಲ್ಲಿಯ ಬಳೆದ ಬಾೞ್ಗುಡಿಯೆನೆ ಬೆಡಂಗುವಡೆದ ಲೋಳ ಲಾಂಗೂಲಲತೆಯೊಳಂ ರೌದ್ರರಸ ಸರಸಿಯೊಳ್ ಪೊಳೆವ ಗುರುಕಟೀಕಂಜಕಂದಳದಿನು ದಯಿಸಿದಸಿಯ ಬಿಸದಂಡಮೆನಿಸಿ ಬೀರಸಿರಿಯ ಸಿರಿಗನ್ನಡಿಯ ಪಿಡಿಗೆ ಪಡಿಯಾದ ಪಿಡಿಯ ನಡುವಿನೊಳಂ ಜಂಗಮನಗಂಗಳೆನಿಸುವ ಮತಂಗಜಂಗಳ್ಗೆ ಬಱಿಸಿಡಿಲ ತೆಱದಿನೆಱಗಿ ಪೊಡೆವ ಕಡುಪಿನೊಳೊಡೆದ ಬಿದುಗಳಿಂದೊಗೆದ ಮುತ್ತುಗಳ್ವೆರಸು ಪತ್ತಿದ ನೆತ್ತರಿಂ ಪನಿಪುಲ್ವೊರೆದಶೋಕ ಕಿಸಲಯಂಗಳೆನಿಸಿ ಕೆಂಪಡರ್ದ ಕೇಸರಂಗಳೊಳಂ ಸುರತರಂಗಿಣಿಯ ತೆರೆಗಳೆಡೆಗಿಱಿದು ತೊಡರ್ದ ಮೃಡನ ಕೆಂಜೆಡೆಯ ಜೂಟಮಿದ ಱೊಡನೆ ಪಡಿಯಕ್ಕುಮೆನೆ ಮನಂಗೊಳಿಸುವುತ್ತುಂಗ ಕಂಠಕಂದಳಿಯೊಳಂ ಅಖಿಳ ಮೃಗಸಮುದಯಾಮಿಷಾಹುತಿಯನನವರತಂ ಬೆಳ್ಪ ಕಾಳಯಜನ ಜ್ವಳನಕುಂಡಮೆನೆ ತೆಱೆದ ಬಾಯೊಳಂ ಅಂತರ್ಜ್ವಲತ್ಕ್ರೋಧ ಹುತವಹನ ನಾಲಗೆಯೆನಿಸಿ ನಿಮಿರ್ದು ಮಿಳ್ಳಿಸುವ ನಾಲಗೆಯೊಳಂ ಪೇರಾನೆವೆಟ್ಟುಗಳ ನೆತ್ತಿಯ ಮುತ್ತುಗಣಿಯನಗುೞ್ವ ವಜ್ರದ ಗುದ್ದಲಿಗಳೆನಿಸಿ ವನಮೃಗಂಗಳೊಡಲನೊಡೆಯೆ ಭೇದಿಸುವ ವಿಷಕಂಠಕಂಗಳೆಂಬಿನ ಮಳುಂಬಮಾದ ದಂಷ್ಟ್ರಾಂಕುರಂಗಳೊಳಂ ಅಳವಿಗೞಿವಿನಮೋರಂತೆ ಪೀರ್ದ ವನ ಚರಪ್ರಾಣಿಗಳ ಶೋಣಿತದ ಪೊನಲೆ ತನುವನಾವಗಂ ತೀವಿ ಪೊಱಪೊಣ್ಮಿದಪುದೆನಿಪ ಕಡುಗೆಂಪನಪ್ಪುಗೆಯ್ದು ವಿಪುಳ ನಾಸಿಕಾನಾಳಮೆಂಬ ತಿದಿಯ ಗಾಳಿ ಕಿಟ್ಟಿ ಕಿಡಿಸಿಡಿಯೆ ಕಡುಗಾಯ್ದು ಕೋಪಕಾಳಾಯಸದ ಬಟ್ಟುಗಳಿವೆನಿಸಿ ಕೆಂಗದಿರನುಗುೞ್ವ ಕಣ್ಗಳೊಳಮಗ್ಗ ಳಿಸಿದವಿರತ ಕ್ರೂರವೃತಿಯಿಂ ಮೂರ್ತಿವೆತ್ತ ಮಿೞ್ತುವೆನೆ ಭಯಂಕರಮಾದುದಂತು ಮಲ್ಲದೆಯುಂ-

ಕಂ || ಜವನೆ ಮೃಗವೈರಿಯಾದಂ
ತೆವೊಲೆಱಗುವ ಸಿಡಿಲೆ ಸಿಂಗಮಾದಂತೆವೊಲೆ
ತ್ತುವ ಮಿೞ್ತುವೆ ಹರಿಯಾದಂ
ತೆವೊಲಾಂತುದು ವಿವಿಧವಧವಿನೋದಾದ್ಭುತಮಂ || ೬

ಚಂ || ಮೃಗವುಗುರೇ ಱಿನಿಂ ಕೆದಱಿ ಕೆಂಪಿನೊಳೊಂದಿದ ಬೆನ್ನಬಾರ ಮಾ
ಲೆಗಳೊಳೆ ಕಾನನಂ ಜವನ ಬಾಣಸದಮತಿರೆ ಕುಂಭಕೂಟದಿಂ
ದೊಗೆದುಗುತರ್ಪ ಮುತ್ತುಗಳ ಕಾಳ ಘನೋಪಳ ವರ್ಷಮಂ ಧರಿ
ತ್ರಿಗೆ ಕುಡೆ ಕೊಲ್ವುದಿಂತು ಬಿನದಕ್ಕೆ ಮದಾಂಧ ಕರೀಂದ್ರಯೂಥಮಂ || ೭

ಉ || ಅಂತು ನಿಸರ್ಗ ನಿರ್ದಯ ಭಯಂಕರವೃತ್ತಿಯಿನಾ ಮೃಗೇಂದ್ರನ
ಶ್ರಾಂತವಧೋನ್ಮುಖಂ ಕೞಿಸಿ ತನ್ನ ಚಿರಾಯುವನುಗ್ರದುಷ್ಕೃತಾ
ಕ್ರಾಂತನನಂತರಂ ಪ್ರಥಮನಾರಕ ಭೂಮಿಯನೆಯ್ದಿದುಖಪಂ
ಕಾಂತರದೊಳ್ ಪೊದೞ್ದೊಳಱುತುಂ ತವೆ ತನ್ನಿಯತಾಯುತಾರ್ಣವಂ || ೮

ಕಂ || ನೆಗೞ್ದೀ ಭರತಾವನಿಯೊಳ್
ಸೊಗಯಿಪ ಸಿಂಧುಸ್ರವಂತಿಕಾಟದ ವರಾ
ಹಗಿರೀಂದ್ರದ ಕಂದರದೊಳ್
ಮಗುೞ್ದುಂ ಮೃಗರಾಜರೂಪದಿಂದುದಯಿಸಿದಂ || ೯

ದೊರೆವತ್ತಾ ಮೃಗರಾಜನ
ವರ ರಾಜ್ಯಶ್ರೀಗೆ ಸಿಬಿರಮಾದತ್ತಂತಾ
ಗಿರಿ ಸತ್ಕುಂಜರ ಸದ್ವಾ
ಜಿರಾಜಿತಂ ರುಚಿರ ರಾಜವಾಸೋಪಚಿತಂ || ೧೦

ಸ್ರ || ಮಾರಾಮಾರಾಮ ರಂಗತ್ಕಮಳ ಕಮಳವನ್ಮಾನ ಸನ್ಮಾನಸಂಪ
ತ್ಸಾರಂ ಸಾರಂಗಯೋಷಿತ್ಸುರತಸುರತರೋನ್ಮಾನಭೋಗಂ ನಭೋಗಂ
ಧಾರೂಢಾರೂಢಮಸ್ತೋಕದಳಕದಳ ಗುಂಜಾಕರಂ ಜಾಕರಂ ಮಂ
ದಾರೋದಾರೋರುಕುಂಜಂ ವಿಷಮವಿಷಮಹಾಪನ್ನಗೇಂದ್ರಂ ನಗೇಂದ್ರಂ || ೧೧

ವ || ಮತ್ತಮದು ಭೋಗಭೂಮಿತಳದಂತೆ ಸುಖನಿಧಾನಮುಂ ಕೃಷ್ಣಪಕ್ಷದಂತೆ ಹಿಮಗು ಹಾನಿವಾಸಮುಂ ಸುಭಗಗಣಿಕಾಜನದಂತೆ ಬಹು ವಿಟಪಾಳಿತರೂಪಚಿತಮುಂ ಸಂಧ್ಯಾಪ್ರದೀಪದಂತೆ ಕಪಿಶತಾರೂಢಮುಂ ಕ್ರೀಡಾಕ್ರಾಂತ ಕಾಂತಾಜನದಂತೆ ಚಳದಳ ಕಾನನ ಕಮನೀಯಮುಂ ಅಮರ್ತ್ಯಭವನದಂತೆ ಸುಪರ್ವವಂಶ ಪ್ರಭವಮುಂ ವನಾಶ್ರಿತ ಪರಿವ್ರಾಜಕನಂತೆ ಬಹುಕಂದರ ಸಾನುಭೂತಿಯುಂ ಕುಪಿತ ಕಾಮಿನೀ ಪ್ರಸಾದಪಟು ಶಠನಾಯಕನಂತೆ ವಿವಿಧಕುಶಪಥಾಕೀರ್ಣಮುಂ ಮತ್ತಂ ವನಾಂತರುದಿತ ಬ್ರಾಹ್ಮೀ ಪ್ರತತಿಯಾಗಿಯುಂ ಮಹೋತ್ಸವಾಶ್ರಿತಮುಂ ಸಿಂಧುರಹಿತಮಾಗಿಯುಂ ಗಿರಿನದೀಸಹಸ್ರ ಶೋಭಿತಮುಂ ಸನಾಗಕಾಂತಮಾಗಿಯುಮಸನಾಗಕಾಂತಮುಂ ವನ್ಯಾಧಾರಮಾಗಿಯು ಮವನ್ಯಾಧಾರಮುಂ ವಟಾಕೀರ್ಣಮಾಗಿಯುಮವಟಾಕೀರ್ಣಮುಂ ಎನಿಸಿ ಬಹುವಿಧಾಶ್ಚರ್ಯ ಶೋಭೆಯಂ ತಳೆದು ರಂಜಿಸುತಿರ್ಪಲ್ಲಿ-

ಕಂ || ಘನವಿಟಪ ಕೋಟಿಯೊಳ್ ಸಿ
ಲ್ಕಿ ನಿಂದ ತಾರಗೆಗಳೆಲರಿನುದಿರ್ದಪುವಿಳೆಗೆಂ
ಬಿನೆಗಂ ಪರಸ್ಪರಾಸ್ಫಾ
ಳನ ಭರದಿಂ ಬಿರಿದ ಬಿದಿರ ಮುತ್ತುಗಳುಗುಗುಂ || ೧೨

ಸಲೆ ತಲೆಗೊಟ್ಟೋಡುವ ಕೋ
ಟಲೆಗಾಱದೆ ತದ್ಗಿರೀಂದ್ರಮಂ ಸಾರ್ದು ತಮಂ
ಮಲೆವುದು ಹರಿನೀಳಮಣಿ
ಚ್ಛಲದಿಂ ರವಿಗಿಂತುಟಧಿಕನಾಶ್ರಯದ ಬಲಂ || ೧೩

ನವಮಣಿ ಮರೀಚಿಮಂಜರಿ
ಕವಿದು ಪೊನಲ್ವರಿದುದೆಂಬಿನಂ ಸಂಭೃತ ರ
ತ್ನ ವಿಚಿತ್ರ ಸಾನುತಳದೊಳ್
ಕವಲ್ತು ಜಲಜಲಿಸಿ ಪರಿವ ಬರಿವೊನಲೆಸೆಗುಂ || ೧೪

ಮ || ಸ್ರ || ರವಿರೋಚೀರುದ್ಧರೋದೋಜ್ಜ್ವಳಮವಿರಳತಾರ್ಕೋಪಳಾರ್ಚಿಃಕಣೋಪಷ್ಣೀ
ಭವದಂಭಃಕ್ರೀಡೆಯಿಂ ಮೆಯ್ವೊರೆದ ಮದದ ತೀನೋಡೆ ನೀಡುಂ ಮನಂಮೆ
ಚ್ಚುವಿನಂ ಪೊಕ್ಕಾಡಿ ಕಾಡಾನೆಗಳಿರೆ ಸತತಂ ರಂಜಿಸುತ್ತಿರ್ಪದಶ್ರಾಂ
ತ ವಿನಿರ್ಯದ್ದಾನಗಂಧೋದ್ಗಿರಣರಿಣದೀ ಜಾಳಮುತ್ತಾಳಕೂಳಂ || ೧೫

ಕಂ || ಬಿಡದುದಯಾಸ್ತಮಯಂಗಳೊ
ಳಡರ್ವಿ ೞಿವಿನಕಿರಣಮದಱ ಗಿಡುಮರದೆಡೆಯೊಳ್
ತೊಡರ್ದು ಪಱಿದಿೞಿದುವೆಂಬಿನ
ಮೊಡರಿಸುವುದು ಬಗೆಗೆ ಮಾಣಿಕದ ಕೆಂಗದಿರ್ಗಳ್ || ೧೬

ಇಸೆ ಹರಿಣಶಶಮವುಂಟೆಂ
ಬ ಸಂದೆಗಕ್ಕಾಕುಭೃತ್ತಟದ ಶಬರರ್ ತೆ
ತ್ತಿಸಿದಂಬಿನ ಗಱಿಯಿಂ ಕಱೆ
ಸಸಿಗಾಯ್ತಲ್ಲದೆ ಕಳಂಕಿಯೇ ವಿಧು ನಿಜದಿಂ || ೧೭

ನಗನಿಕಟದೊಳಱಿಯದೆ ಮುಗಿ
ಲ ಗಡಣದಿಂ ಪೊಕ್ಕು ಸಿಲ್ಕಿ ಪೊಲೆಗೆಟ್ಟೆಳೆಮಿಂ
ಚುಗಳೆನಿಪುವು ಬಾಳತಮಾ
ಳ ಗಹನದೊಳ್ ಸುೞಿವ ಶಬರಿಯರ ಕಡೆಗಣ್ಗಳ್ || ೧೮

ಕುಂದದ ಮುಗುಳ್ಗಳುಮಸುಗೆಯ
ಕೆಂದಳಿರ್ಗಳುಮಬ್ಜದಲರ್ಗಳುಂ ಬೆರಸು ತೊೞ
ಲ್ತಂದಪುವು ತಮಾಳಲತೆಗ
ಳೆಂದಮರರ್ ನೋಡೆ ಚರಿಯಿಪರ್ ವನಚರಿಯರ್ || ೧೯

ವ || ಅಂತು ಬಹುವಿಧ ವಿಚಿತ್ರ ವಿಭವಭಾವಮನಪ್ಪುಕೆಯ್ದು ತನಗೆ ರಾಜಧಾನಿಯಾದ ತದ್ಗಿರೀಂದ್ರ ಕಂದರದ ರತ್ನಗಹ್ವರ ಮಹಾರಾಜಮಂದಿರದೊಳ್ ಸಕಳ ಮೃಗರಾಜ ರಾಜ್ಯಾಧಿಪತ್ಯಮಂ ತಳೆದು ತನ್ನ ಮುನ್ನಿನ ಜನ್ಮಂಗಳ ವಾರಣಾರಿ ನಾರಕ ಪರ್ಯಾಯ ಪರಿಕಳಿತ ಭೂರಿಕ್ರೂರಭಾವಮಾವಗಮೀ ಪರ್ಯಾಯದೊಳ್ ನೆರೆದು ನೆಲೆವೆತ್ತುದೆನಿಪ ಘನತರ ಹಿಂಸಾನಂದದೊಳೊಂದಿ ಮೆಚ್ಚಿದಿಚ್ಚೆಯಿಂ ಪಲಕಾಲಂ ವರ್ತಿಸುತ್ತುಮಿರ್ದು ಕಾಲಲಬ್ಧಿಯಿಂದಿನಮುಖಾಭಿಮುಖ ತಿಮಿರದಂದದಿನನಾದಿ ಮೋಹನೀಯಮುಪಶ ಮೋನ್ಮುಖಮಾಗೆಯುಂ ಶರತ್ಸಮಯ ಸರಃಪಂಕದಂತೆ ಕಷಾಯನಿಕಾಯಮಪಾಯಾಭಿ ಮುಖಮಾಗೆಯುಂ ಯೋಗ್ಯಮಾದ ನಿಜಮನೋಮಾರ್ಗದಿಂ ನಿಸರ್ಗ ಸಾಧುಜನಾಭಿ ಗಮ್ಮನಾಗಿ ತದ್ಗುಹಾಮಂದಿರಾಜಿರತಳ್ಪತಳಮನಲಂಕರಿಸಲೆಂದು-

ಕಂ || ಒಂದು ದಿನಂ ಮೃಗಪತಿ ಗುಹೆ
ಯಿಂದಂ ಪೊಱಮಟ್ಟು ತನಗೆ ದಕ್ಷಿಣನಯನ
ಸ್ಪಂದಂ ಬಿಡದಮರ್ದೊಡಿದೇ
ನೆಂದೊಯ್ಯನೆ ನಿಂದು ದೆಸೆಗಳಂ ನೋೞ್ಪಾಗಳ್ || ೨೦

ಬಿಸಿಲ ಕಡುಗಾಯ್ಪು ಭೋಂಕೆನೆ
ಮಸುೞ್ದಿರೆ ವಿಪುಳೋಪಶಾಂತಿಯಂ ಕ್ರೂರಮೃಗ
ಪ್ರಸರಂ ಪಡೆದಿರೆ ವಿಸ್ಮಯ
ಮೆಸೆವಿನೆಗಂ ನಲಿಯೆ ಬಿಚ್ಚತಂ ವನ್ಯಮೃಗಂ || ೨೧

ನಡುಪಗಲಿದೊಂದು ದೆಸೆಯೊಳ್
ಕಡುವೆಳಗೇಕಾದುದೆಂದು ಕೌತುಕದಿಂದಂ
ನಡೆನೋಡುತಿರೆ ಮೃಗೇಂದ್ರಂ
ಬಡಗಣಿನೊಗೆದತ್ತದೊಂದು ದೀಪ್ತಿ ಪ್ರಸರಂ || ೨೨

ಘನತೇಜಂ ಮಧ್ಯಂದಿನ
ದಿನಂ ಪಗಲ್ಬಯಲೊಳಿರ್ದ ಸೊಡರ್ವೋಲ್ ಮಸುೞ್ದಿ
ರ್ಪಿನೆಗಂ ನಿಜಾಂಗರುಚಿ ತೆ
ಕ್ಕನೆ ತೀವಿರೆ ಸಕಲ ಗಗನದಿಙ್ಮಂಡಳಮಂ || ೨೩

ವ || ಅದಲ್ಲದೆಯುಂ-

ಮ || ವರ ಸರ್ವೌಷಧಿ ಶಕ್ತಿಯುಕ್ತ ನಿಜದೇಹಾನೂನ ಸೌಗಂಧ್ಯ ಬಂ
ಧುರ ಮಂದಾನಿಳ ಸಂಗದಿಂ ತರುಲತಾಗುಲ್ಮಂಗಳೆಲ್ಲಂ ತಳಿ
ರ್ತಿರೆ ತತ್ಸಿಂಹದ ತೀವ್ರತೀವ್ರತರ ಮಿಥ್ಯಾತ್ವಾಮಯಂ ಕುಂದುತುಂ
ಬರೆ ಬಂದರ್ ನಿರವದ್ಯಬೋಧನಿಧಿಗಳ್ ಸನ್ಮಾರ್ಗದಿಂ ಚಾರಣರ್ || ೨೪

ವ || ಅಂತು ಬಂದರಿಂಜಯರುಮಮಿತಗುಣರುಮೆಂಬ ಚಾರಣಮುನೀಂದ್ರರ್ ತತ್ಕಂಠೀರವಾಭಿ ಮುಖದೊಳ್ ಅನತಿದೂರಮಾಗಿರ್ದ ನಿರ್ಜಂತುಕ ಚಂದ್ರಕಾಂತಶಿಳಾತಳಕ್ಕವತರಿಸಿ ಕೆಲದೊಳಿರ್ದ ಪಳಿಕಿನ ಸೆಲೆಗಳೆಲ್ಲಮಂ ಮಾಣಿಕದ ಸೆಲೆಗಳೆನಿಸುತ್ತುಮಿರ್ಕೆಲಂಬಿಡಿದು ನಿಮಿರ್ವ ನಿಜಾರುಣಚರಣತಳಕಿರಣದ ನಡುವೆ ಕಡೆವಿಡಿದು ಸಂದಣಿಸಿದ ಕೆಂದಾ ವರೆಯ ನಡುವಣ ಧವಳಕಮಳವನಶ್ರೀಯುಮಂ ತಡಿವಿಡಿದು ಪವಳದ ಬಳ್ಳಿ ತಳ್ತ ಪಾಲ್ಗಡಲ ಚೆಲ್ವುಮಂ ನಿಜಾಂಗಪ್ರಭೆ ನಿರಾಕರಿಸುತ್ತುಮಿರೆ ಪಲ್ಯಂಕಾಸನದೊಳ್ ಕುಳ್ಳಿರ್ದಾಗಳರಿಂಜಯ ಮುನೀಂದ್ರರ್-

ಕಂ || ಭಯಮುಂ ಮುನಿಸುಂ ವನಮೃಗ
ಚಯದೊಳ್ ತಲೆದೋಱದಂತು ಬೆಳಗುವ ತೇಜೋ
ಮಯಮಂ ನಿಜಾಸ್ಯಮಂ ವಿ
ಸ್ಮಯದಿಂ ನೋಡುವ ಮೃಗೇಶ್ವರಂಗಿತೆದರ್ || ೨೫

ಚಂ || ಎಲೆ ಮೃಗರಾಜ ದರ್ಶನವಿಮೋಹಮಹಾಸವ ಮತ್ತನಾಗಿ ನಿ
ರ್ಮಳ ಜಿನಮಾರ್ಗಮಂ ಪೞಿದು ಮಾಯ್ದ ಕುಚರ್ಚೆಗಳಿಂ ಕುಮಾರ್ಗಮಂ
ಪಲತೆಱದಿಂ ವಿನಿರ್ಮಿಸಿದ ಪಾತಕದಿಂದತಿ ಕಷ್ಟಯೋನಿಯೊಳ್
ನೆಲಸುತುಮಕ್ಕಟಾ ವಿರಹದುಃಖಶತಂಗಳನುಂಡು ಬೞ್ದಿದೈ || ೨೬

ವ || ಅದಂ ಪೇೞ್ವೊಡವಿರಳಿತ ಮಿಥ್ಯಾತ್ವತೀಬ್ರತರತಿಮಿರ ತಿರೋಹಿತದೃಷ್ಟಿಯಾಗಿ ನಿನಗಾದ ಭವಗಹನದೊಳ್ ಪೊಲಗೆಟ್ಟು ತೊೞಲುತ್ತುಂ ಬರ್ಪಲ್ಲಿ-

ಕಂ || ಒದವಿರ್ದೀ ಜಂಬೂದ್ವೀ
ಪದ ಮಂದರಧಾರಿಣೀಧರದ ಪೂರ್ವವಿದೇ
ಹದ ಸೀತಾತಟಿನಿಯ ಬಡ
ಗದೆಸೆಯ ವರಪುಷ್ಕರಾವತೀ ಜನಪದದೊಳ್ || ೨೭

ಸೊಗಯಿಸುವುದು ಮಧುಕರಮೆಂ
ಬ ಗಹನಮಲ್ಲಿಯ ವನೇಚರಾನ್ವಯದೊಳ್ ನೀ
ನೊಗೆದು ಪುರೂರವವೆಸರಿಂ
ಮೃಗೇಂದ್ರ ನೆಗೞುತ್ತುಮಿರ್ದೆಯತಿ ದುರ್ಮತಿಯಂ || ೨೮

ವ || ಅಂತು ವನೇಚರೋಚಿತ ಸಹಜ ನಿರ್ದಯ ನಿಸ್ತ್ರಿಂಶವೃತ್ತಿಯಿಂ ವರ್ತಿಸುತ್ತುಮಿರ್ಪಿನೆಗಂ ಒರ್ಮೆ ಧರ್ಮಸ್ವಾಮಿಯೆಂಬ ಸದರ್ಥಸಾರ್ಥವಾಹಕಂ ವಿತತ ವಿಭವ ಮಂಡಿತ ಪುಂಡರೀಕಿಣೀಪುರದಿಂ ಬರುತ್ತುಂ ಆ ವನಘನತರುಚ್ಛಾಯೆಯೊಳ್ ಬೀಡು ವಿಟ್ಟಿರ್ಪಿನಂ-

ಕಂ || ನೆರೆದಿಱಿದಾ ಬೀಡಂ ವನ
ಚರರೋವದೆ ಕಿಡಿಸೆ ತೀರ್ಥಯಾತ್ರೆಯಿನದಱೊಳ್
ಬರುತಿರ್ದ ಮುನೀಂದ್ರರ್ ಸಾ
ಗರಸೇನಾಭಿಖ್ಯರಪಪಥರ್ ತೊೞಲುತ್ತುಂ || ೨೯

ಒಂದು ನೊಗನಿಕ್ಕುವನಿತಂ
ಮುಂದೀಕ್ಷಿಸಿ ಮೆಲ್ಲನಡಿಯನಿಡುತುಂ ಮುನಿಮಾ
ರ್ಗಂದಪ್ಪದಡವಿಯೊಳ್ ಮಾ
ರ್ಗಂದಪ್ಪಿ ಬರುತ್ತುಮಿರ್ದೊಡಾ ಮುನಿವರರಂ || ೩೦

ದೂರದೊಳೆ ನೋಡಿ ಕಂಡು ಪು
ರೂರವನಿದಪೂರ್ವಮೃಗಮೆನುತ್ತಿಸಲಂಬಂ
ನಾರಿಯೊಳಿಟ್ಟಂ ಚಿಃ ಸಂ
ಸಾರದೊಳಾರಯ್ಯೆ ಕಷ್ಟಮವಿವೇಕಮೆ ದಲ್ || ೩೧

ಅಂತು ತಿರುವಾಯೊಳಿಡೆ ಸರ
ಲಂ ತತ್ಸತಿ ಕಾಳಿಯೆಂಬಳಿಸದಿರು ಮೃಗಮೇ
ನಿಂತಿದಿರಂ ಬರ್ಪುವೆ ಮಾ
ಣಿಂತಿದನೀಕ್ಷಿಸುವಮೆಂದು ಬಾರಿಸುವಿನೆಗಂ || ೩೨

ಬರೆ ತನ್ಮುನಿ ಪೊರೆಗೆ ವನೇ
ಚರನಸವಸದೆಱಗಿದಂ ನಿಜೋತ್ಪಥ ತೀವ್ರಾ
ಚರಿತಮನುೞಿದತಿ ಜಡಮತಿ
ಧರೆಗೆಱಗದೆ ದೀಪವರ್ತಿ ನಿಧಿ ಸನ್ನಿಧಿಯೊಳ್ || ೩೩

ವ || ಅಂತು ಮುನಿರೂಪಮಾತ್ರಾಭಿಜ್ಞಾನದೊಡಂ ಚಂದ್ರಪಾದ ಪ್ರಾಪ್ತಿಯಿಂ ದ್ರವಿಯಿ ಪಿಂದುಕಾಂತದಂತೆ ತದೀಯ ಶ್ರೀಪಾದಪ್ರಾಪ್ತಿಯಿನಾರ್ದ್ರಿತಸ್ವಾಂತನಾಗಿ ಯಥೋಚಿತ ಕಾಲಲಬ್ಧಿಯೆ ಗುರುವಾಗೆ ವಿನಯವಶದಿನೆಱಗಿದ ಪುರೂರವನಂ ಧರ್ಮವೃದ್ಧಿ ಪುರಸ್ಸರಂ ಮುನೀಶ್ವರನನುಗ್ರಹಿಸಿ ಬೞಿಯಂ ಬ್ರತಾಬ್ರತ ಫಳಸ್ವರೂಪಮಂ ತಕ್ಕನಿತನವನಱಿವಂತು ವಿಶದ ವಾಕ್ಯಂಗಳಿಂ ಬೆಸಸೆ-

ಕಂ || ಎರೆದಾಮುನಿವರರಂ ವನ
ಚರನಾಂತಂ ಮದ್ಯ ಮಾಂಸ ಮಧುವಿರತಿಯನಾ
ದರದಿನನಂತರಮೆ ವನಾಂ
ತರದೆಯ್ದಿಸಿದಂ ದಲೊಂದು ಪುರಪದ್ಧತಿಯಂ || ೩೪

ವ || ಅಂತವರೆಂದ ತೆಱದಿನೊಂದೂರ ಬಟ್ಟೆಯಂ ತೋಱೆಕೂಟ್ಟು ತದುನುಜ್ಞೆಯಿಂ ಮಗುೞ್ದು ಬಂದು ನಿರತೀಚಾರವೃತಿಯಿಂ ಪರಿಗೃಹೀತಬ್ರತಮನಾಚರಿಸಿ ನಿವೃತ್ತಿ ಮಾತ್ರಫಲದಿಂ ನಿಜಾಯುರವಸಾನದೊಳ್-

ಕಂ || ಸುರನಾದಂ ಸೌಧರ್ಮಾ
ಮರಕಲ್ಪದೊಳಲ್ಲಿ ಸಾಗರೋಪಮಕಾಲಂ
ಬರಮನುಭವಿಸಿದನನವಧಿ
ತರಸೌಖ್ಯಮನಾ ಪುರೂರವಂ ತ್ರಿದಶವರಂ || ೩೫

ಅಂತು ನಿವೃತ್ತಿಲತಾಫಲ
ಮಂ ತಣಿಯೆ ತದಮರಸುಖಮನುಂಡು ತದಾಯು
ಷ್ಯಾಂತದೊಳೀ ಭರತಾವನಿ
ಗಂ ತತ್ಸುರನಪ್ಪ ನೀನೆ ಮಗುೞ್ದೆಯ್ತಂದೈ || ೩೬

ವ || ಅಂತು ಬಂದು-

ಉ || ಆವನಿನುಗ್ರಕರ್ಮವಿಪಿನಂ ನೆಱೆ ನುಗಿರ್ದದುದಾವನಿಂ ಸಮ
ಸ್ತಾವನಿ ಧರ್ಮಮಾರ್ಗಮುಮನಾಕುಳಮೆಯ್ದಿದುದಾವನಿಂ ತ್ರಿಳೋ
ಕೀವದನಂ ಶಿಖಾಮಣಿ ವಿಶೇಷವಿಳಾಸಮನಾಂತುದಾ ಮಹಾ
ದೇವನ ದೇವದೇವನ ಜಿನೇಂದ್ರನ ತೀರ್ಥಕರಾಗ್ರಗಣ್ಯನಾ || ೩೭

ಶ್ರೀವೃಷಭೇಂದ್ರನಗ್ರತನಯಂ ಮನುವಂಶನಿಧಾನನಾನತೋ
ಗ್ರಾವನಿಪಾಳಕಂ ಪ್ರಥಮಚಕ್ರಿ ವಿನಿರ್ಮಿತ ವಿಪ್ರವಂಶನಾ
ಜ್ಞಾವನತಾಂಬರೇಚರ ಸುರಪ್ರಕರಂ ಭರತಾವನೀಶನಂ
ತಾ ವಿಭುಗಂ ತದಗ್ರಮಹಿಷೀಪ್ರತಿಪತ್ತಿಯನಂತಸೇನೆಗಂ || ೩೮

ಕಂ || ಉದಯಿಸಿದೆಯಖಿಳ ಧರೆಗತಿ
ಮುದಮೊದವೆ ಮರೀಚಿಯೆಂಬ ಪೆಸರಿಂದಂ ಶ
ಸ್ತ್ರದೊಳಂ ಶಾಸ್ತ್ರದೊಳಂ ಸುತ
ಕದಂಬದೊಳ್ ತಳೆದೆಯನತಿಶಯ ಕೌಶಲಮಂ || ೩೯

ವ || ಅಂತು ಸಹಜಕ್ಷಾತ್ರತೇಜಃಪಟುಮರೀಚಿ ವಿದಿತ ಸಕಳಶಾಸ್ತ್ರಶಸ್ತ್ರ ಜನವಿನುತನಾಗಿ ವರ್ತಿಸುತ್ತುಮರೆ-

ಕಂ || ಪುರುಷೋತ್ತಮಂ ತ್ರಿಬೋಧಾ
ಭರಣಂ ವೈರಾಗ್ಯಬಳದಿನಘರಿಪುವಂ ಸಂ
ಹರಿಸಲ್ ವೃಷಭೇಶ್ವರನತಿ
ಭರದಿಂ ದೀಕ್ಷಾಸಿಧೇನುವಂ ಧರಿಯಿಸಿದಂ || ೪೦

ವ || ಅಗಳ್ ಕಚ್ಛಮಹಾಕಚ್ಛಪ್ರಭೃತಿ ನೃಪಕುಮಾರಕರ್ ತಮತಮಗೆ ಬಿಡೆಕಡಂಗಿ ನೆರೆದೆಯ್ತಂದು ದುರಿತಪರಿಪಂಥಿ ಸಮರವಿಜಯದೊಳ್ ನಿಜಸ್ವಾಮಿಯಂ ಮೆಚ್ಚಿ ಪಚ್ಚುಕತನದಿನಳವಿಯಲ್ಲದ ದುಸ್ಸಹಮಹಾಬ್ರತಾಯುಧಮಂ ತಳೆದು ನೀಲ್ವುದುಮವರೊಡನೆ ಮರೀಚಿಯುಂ ಅನನುರೂಪ ಜಿನರೂಪಮನಾಂತು ನಿಲೆ ನಿಸರ್ಗವೀರವಲ್ಲಭಂ ವೃಷಭಸ್ವಾಮಿ ಮೆಯ್ವತ್ತಿ ದನಂತ ಕರ್ಮಭಟರಂ ಷಣ್ಮಾಸಂಬರಮಿಕ್ಕುವ ತಕ್ಕಿನಿಂ ಕೈಯಿಕ್ಕಿ ನಿಲ್ವುದುಂ ತತ್ಕುಮಾರ ತಾಪಸರ್ ತಾವುಮೊಳಗಱಿಯದೆ ತಱಿಸಂದು ನಿಂದು ನಿರವಧಿಧೈರ್ಯನಿಧಿಯಪ್ಪ ನಾಭಿನಂದನನ ನಿಯಮದವಸಾನಮಂ ಬಲ್ಕಣಿತನದಿಂ ಕೆಲವು ದೆವಸಂಬರಂ ಪಾರ್ದು ತೀರ್ವುದುಂ ಕಾಣದಣಮೆ ಬೇಸತ್ತು-