ಕಂ || ಮಡದಿ ನಡೆದಳ್ ಮನಃಪ್ರಿಯ
ನೆಡೆವರಮವರವರ ನಯನರುಚಿ ತನುರುಚಿಯೊಳ್
ತೊಡರ್ದುಬರೆ ಪೊಸವೊನಲ್ಗಳ
ಗಡಣದಿನಪ್ಪತಿಯನೆಯ್ದುವಮರಾಪಗೆ ವೋಲ್ || ೪೬

ವ || ಅಂತು ನಡೆತಂದು-

ಕಂ || ಮಾಲೆಗೆ ಬೞಿವೞಿ ತನ್ನೃಪ
ಮಾಲೆಯ ಕಣ್ಮಲರಮಾಲೆಯೆನೆ ಮಾಲೆಯನಾ
ಬಾಲೆ ಭವಬದ್ಧ ನಿಜರುಚಿ
ಮಾಲಾನ್ವಿತಮಮಿತತೇಜನೊಳ್ ಗಡಣಿಸಿದಳ್ || ೪೭

ವ || ಅಂತು ನಿಜನಿಜ ಭವಪ್ರರೂಢ ಬ್ರತಲತಿಕೆಗೆ ಸಾಫಲ್ಯಮುಂ ಸ್ವಯಂಪ್ರಭಾಭೀಷ್ಟ ರತ್ನಾಕರಕ್ಕೆ ರಾಕಾನಿಶಾಕರ ಸಂಗಮಮುಂ ಪುರಸ್ಕೃತ ಸುತಾಗತಾರ್ಕಕೀರ್ತಿ ಭೂಪತಿ ಮಹೋತ್ಸವ ಪ್ರಾಸಾದ ಶಿಖರಕ್ಕೆ ಕಳಶಾರೋಪಣಮುಂ ಅನುರೂಪಘಟನಾ ವಿಶಾರದ ವಿಧಿವಿನಿರ್ಮಾಣರಸ ಚಿತ್ರರಚನೆಗೆ ವಿಳೋಚನೋನ್ಮೀಳನಮುಂ ಎನಿಸಿ ನಿಜ ಮಾತು ಳಾತ್ಮಜಂಗೆ ಮಾಲೆಸೂಡಲೊಡಮನಂತರಂ ನೆರೆದ ರಾಜಮಂಡಳಂ ಪೂರ್ವಸಂಧ್ಯಾ ವಿಯುಕ್ತ ರಾಜಮಂಡಳದಂತೆ ಕಾಂತಿಗೆಟ್ಟಧೋಮುಖರಾಗಿ ಪೋಪುದುಂ ಪದ್ಮನಾಭಂ ಜಿನಾಭಿಷವಪೂಜಾ ಪುರಸ್ಸರಂ-

ಕಂ || ಎಸೆಯೆ ಕುಲೋಚಿತ ಪರಿಣಯ
ನಸಮ್ಮದಂ ಸುತೆಯನಿತ್ತು ಜಾಮಾತೃಗೆ ಸಂ
ತಸದನ್ತನೆಯ್ದಿದಂ ಭಾ
ವಿಸೆ ಕೃತಕೃತ್ಯತೆ ಗೃಹಾಶ್ರಮಕ್ಕಿದುವೆ ವಲಂ || ೪೮

ನಿಜಸುತೆ ಸುತಾರೆಯಂ ಶ್ರೀ
ವಿಜಯಂಗೆ ಪರಸ್ಫರಾನುರಾಗಂ ಮಿಗೆ ಕೊ
ಟ್ಟು ಜನಾರ್ದನನೋಲವಂ ಜ್ವಳ
ನಜಟಿ ಮಹಾರಾಜತನಯನುಂ ದ್ವಿಗುಣಿಸಿದಂ || ೪೯

ವ || ಅಂತು ಚಕ್ರವರ್ತಿಯುಮರ್ಕಕೀರ್ತಿಯುಮೋರೊರ್ವರ ತನೂಜೆಯರನೋರೊರ್ವರ ತನೂಭವರೊಳವರವರ ಮೆರ್ಚಿದಿಚ್ಚೆಯೊಳೆ ಮದುವೆಮಾಡಿ ಪೂರ್ವ ಸಂಬಂಧಾನು ಬಂಧಪ್ರೇಮವಿರ್ಮಡಿಸೆ ಮಂಗಳೋಚಿತ ಚತುರ್ಥೀಮಹೋತ್ಸವಾನಂತರಮಪತ್ಯದ್ವಯ ಪರಿತೋಷ ಪೂರ್ತಿಯಾದರ್ಕಕೀರ್ತಿಸಮುಚಿತಸದೈನ್ಯ ಪುನರುಕ್ತ ವಚನಶತದಿಂ ಸೌಂದರ್ಯ ಸೌಭಾಗ್ಯಾವತಾರೆಯಂ ಸುತಾರೆಯಂ ಸಮರ್ಪಿಸಿ ನಿರುಪಮಿತ ತೇಜನಪ್ಪಮಿ ತತೇಜನುಮಂ ತಾರಾಹಾರಪ್ರಭಾಪ್ರಸರಾಪಹಸಿತ ಜ್ಯೋತಿಃಪ್ರಭೆಯಪ್ಪ ಜ್ಯೋತಿಃ ಪ್ರಭೆಯುಮನೊಡಗೊಂಡು ಬೀಯಗನಂ ಬೀೞ್ಕೊಂಡು ವಿಭವ ವಿಭ್ರಾಜಿತ ರಜತ ಶಿಖರೀಶಿಖರಕ್ಕೆ ಪೋಗೆ-

ಕಂ || ಸುತೆಯನಗಲ್ದಳಮಂ ಸೊಸೆ
ಸುತಾರೆ ನಿಜಶೀಲ ಗುಣದೆ ಮಱೆಯಿಸುತಿರೆ ಹ
ರ್ಷಿತೆಯಾದ ವಲ್ಲಭೆಯೊಳ
ಚ್ಯುತನತನುವಿನೋದ ಕೇಳಿಯಂ ಸಲಿಸುತ್ತುಂ || ೫೦

ಸುಖದೆ ಪಲಕಾಲಮವಿರತ
ನಿಖಿಳೇಂದ್ರಿಯ ವಿಷಯಸಾರ ಸೌಖ್ಯಾನುಭವೋ
ನ್ಮುಖನರಸುಗೆಯ್ಯುತುಂ ದ್ಯುಚ
ರ ಖೇಚರೋರ್ವೀಚರಾದಿವರನೆಸೆದಿರ್ದಂ || ೫೧

ವ || ಅಂತು ಚತುರಶೀತಿತಸಹಸ್ರ ಸಂವತ್ಸರಂಗಳಂ ಲೀಲೆಯಿಂ ಕಳಿಪುವಿನಮೊರ್ಮೆ-

ಕಂ || ಪರಿದು ಪೊಡಗೆಡೆಯೆ ದಿವಸಾಂ
ತರಥಂ ಕೆಳಗಿರ್ದುದೊಂದು ಮೇಗೊಗೆದುದಿದೊಂ
ದು ರಥಾಂಗಮೆನಿಸಿದುವು ಮೆ
ಯ್ಗರೆವಿನಮಂಡಳಮುಮೊಗೆವ ಶಶಿಮಂಡಳಮುಂ || ೫೨

ವ || ತದನಂತರಂ-

ಕಂ || ಇದು ಹಿಮಕರ ವಿಕಸಿತ ಕುಮು
ದದ ತಾರಕ ವಿಕಚ ಕುಂದಕುಸುಮೌಘದ ಬಂ
ಡುದಿರ್ದೊದವಿ ಭುವನಂ ತೀ
ವಿದುವಾವಗಮೆನಸಿಸಿ ಬೆಳಗಿದುದು ಬೆಳ್ದಿಂಗಳ್ || ೫೩

ವ || ಅಂತು ಕಣ್ಗೊಳಿಸಿ ಬೆಳಪ ಬೆಳ್ದಿಂಗಳೊಳ್ ತಣ್ಗದಿರ ತಾಯ್ವನೆಯೆನೆ ಮನಂಗೊಳಿಸಿದ ಧವಳಿಸಿದ ಸೆಜ್ಜೆವನೆಯೊಳುಜ್ವಳಿಪ ದೀಪಿಕಾಕಳಾಪದೊಡನುದ್ದೀಪ್ತಮಾದ ಮದನಾನುರಾಗ ಮದದಿನಾತ್ಮೀಯ ಪ್ರಾಣೇಶ್ವರಿಯ ಕೂಡೆ ನಿರವಧಿರತಿಸುಧಾಸ್ರವಂತಿಕಾಪೂರದೊಳ್ ನೀಡುಮೋಲಾಡಿ-

ಚಂ || ಮಿಸುಗುವುರೋಜಚಕ್ರ ಭುಜಪಾಶ ನಖಾಸಿಗಳಳ್ಳವಿಳ್ಳೆಯಾ
ಗಿಸೆ ತನುವಂ ಕಚಾಕಚಿಮಯಸ್ಮರಸಂಗರದೊಳ್ ಬೞಲ್ದು ಮೂ
ರ್ಛಿಸಿದವೊಲಿರ್ದನಂದು ವನಜೇಕ್ಷಣನಾಕ್ಷಣಮೆಯ್ದೆ ನಿದ್ರೆ ಮು
ದ್ರಿಸೆ ಮನಮಂ ಸ್ವಯಂಪ್ರಭೆಯ ಪೀನಪಯೋಧರಕುಂಭಕೂಟದೊಳ್ || ೫೪

ವ || ಅಂತು ನಿಜವಲ್ಲಬೆಯ ತೋಳ ತೊಡರೊಳ್ ತೊಡಂಕಿರ್ದ ಜನಾರ್ದನನಂ ದೀರ್ಘ ನಿದ್ರಾಂಗನಾದೂತಿಯಪ್ಪ ನಿದ್ರೆ ಪೊರ್ದಿ ನಿಜೋಚಿತ ದೂರ್ತಿಭಾವಚಾತುರ್ಯ ದಿನಾತ್ಮಾನುವರ್ತಿಯಂ ಮಾೞ್ಪುದುಂ ವಿಜಯನುಂ ವಿವಿಧವಿನೋದನೋದಿತ ನಿಶೀಥನಾತ್ಮೀಯ ಶಯ್ಯಾನಿಕೇತನದೊಳಿನಿಸು ಕಣ್ಗೆಯ್ದಿರ್ಪಿನಂ ತ್ರಿಯಾಮಾವಿರಾಮ ಸಮಯದೊಳ್-

ಚಂ || ಪಲತೆಱದಿಂ ಪ್ರಳಾಪಿಪವರೋಧ ವಧೂಜನದುಚ್ಚರೋದನೋ
ಚ್ಚಲರವಮುಂ ಪಲುಂಬಿ ಪರಿಚಾರಕನಾರಿಯರೋವದಾವಗಂ
ಮೊಲೆಗಳ ಮೇಲನಪ್ಪಳಿಪ ಸೊಪ್ಪುಳುಮುರ್ವಿದ ವೀರ ಕಿಂಕರಾ
ವಲಿಯ ಮೃತಪ್ರತಿಜ್ಞೆಯುಲಿಪುಂ ನೃಪಧಾಮದೊಳಾದುವೊರ್ಮೊದಲ್ || ೫೫

ವ || ಆಗಳ್-

ಕಂ || ಅದಿರೆ ತನು ಕದಡೆ ಮತಿ ಬಗೆ
ಬೆದಱೆ ರಮಾರಮಣನಗ್ರಜನ್ಮನ ಕಿವಿಗೆ
ಯ್ದಿದುದು ಸಸಂಭ್ರಮ ಸಕರುಣ
ಸದೈನ್ಯ ಸೋದ್ವೇಗ ಸಭಯ ಹಾಹಾವಿರವಂ || ೫೬

ಭವನ ಮರಾಳಂ ನೂಪುರ
ರವಂಗಳಿರೆ ಮೊೞಗುಗೇಳ್ದವೊಲ್ ಸುಪ್ರಾತೋ
ತ್ಸವ ಗೀತಿಗಳಿರೆ ಹಾಹಾ
ರವಮಂ ಬಳನಿನಿಸುಗೇಳ್ದು ತಳವೆಳಗಾದಂ || ೫೭

ವ || ಆಗಳಿದೇನಿದೇನೆನುತ್ತು ಮತಿಸಂಭ್ರಮದಿನೆೞ್ದಿದಿರೊಳಿರ್ದ ಪಡಿಯಱನಂ ತದ್ವೃತ್ತಕಮ ನಾರಯ್ದುಬರಲಟ್ಟಿ ತಾನುಮತಿತ್ವರಿತಗತಿಯಿನರಮನೆಯಂ ಪೊಱಮಟ್ಟು ನಡೆಯುತ್ತು ಮಲ್ಲಲ್ಲಿ ನೆರೆದು ಗುಜಿಗುಜಿಗೊಂಡು ಕೊರ್ಗುದಿಗೊಳ್ವ ಪುರಜನಮುಮಂ ನೆರೆಪೊರೆಯ ಸಿರಿವಂತರ ಮನೆಗೆ ಪರಿಯಿಡಲ್ಕಡಹಡಿಸಿ ಮಿಡುಕುತಿರ್ಪ ಮಿಂಡರ ತಂಡಂಗಳುಮಂ ಬೀದಿವೀದಿಗಳೊಳಾರುಮಂ ಸುೞಿಯಲೀಯದೆ ಬಗ್ಗಿಸುತ್ತೆ ಬಲಿದು ಕಾಪುಗೊಂಡು ಬಳಸಿದ ತಳಾಱನಾಯಕರುಮಂ ತಂತಮ್ಮ ಮುಂದೆ ಸಂದಣಿಸಿ ಪಲ್ಲಣಿಸಲವ್ವಳಿಪ ರಾವುತರ್ವೆರಸು ಸನ್ನದ್ಧರಾದ ಸಾಹಣಿಗಳುಮಂ ಸೂೞಿಂ ಸಾಲೆಗೆ ನಡೆಯದಿರ್ದೆಡೆಯೊಳೆ ಬಲಿದು ಕಾಲ್ಗಾಪಿನಣಿವೆರಸು ನಿಂದ ಜಾವದ ಮದಗಜಂಗಳುಮಂ ಪಸಾಯಿತ ರಿದಿರ್ಗೆವಂದು ಬಿನ್ನವಿಸಿ ಬಿನ್ನವಿನ್ನನೋಸರಿಸಿ ಕಡೆಗಡೆಯೊಳೋಡಿವರ್ಪ ವಾರ್ತಾಪ್ರೇಷಿ ಪ್ರತೀಹಾರರುಮಂ ಓಳಿಗೊಂಡು ಮಂದಯ್ಸಿನಿಂದ ಬಲವಕ್ಕದೆಡವಕ್ಕದಂಗರಕ್ಕರ ನೆರವಿ ಯುಮನೀಕ್ಷಿಸುತ್ತುಮಂತರಂಗದೊಳ್ ಬಳೆವ ಬಹುವಿಧಾಮಂಗಳ ವಿಕಲ್ಪಷಲತಾ ಫಳಂಗಳೆನಿಸಿ ರಾಜಾಂಗಣದೊಳತಿ ವಿಕಳಮಾಗೆ-

ಮ || ಬಸಿಱಂ ಮಾಣದೆ ಮೋದಿಕೊಳ್ವ ದೆಸೆಗಳ್ ಗೋಳೆಂಬಿನಂ ವಿಪ್ರಳಾ
ಪಿಸುವತ್ಯಾಕುಳದಿಂ ಪೊರಳ್ವ ಪುಡಿಯಂ ಬಾಯ್ವೂೞ್ವಿನಂ ಪೊಯ್ದುಕೊ
ಳ್ವುಸಿರ್ದೋರಂತೆ ಪಲುಂಬಿ ಪಂಬಲಿಪ ದಾಸೀವೃಂದದಾಕ್ರಂದದೊಳ್
ನಸುಗೇಳುತ್ತೆ ನಿಜಾನುಜನ್ಮನ ಗುಣ ಪ್ರಖ್ಯಾತನಾಮಂಗಳಂ || ೫೮

ಚಂ || ತೊದಳಿಸಿ ತಮ್ಮ ನೇಯೆನುತೆ ಬಾಯ್ನುಡಿ ಮಾಣ್ದರೆಮುಚ್ಚಿ ಕಿತ್ತುಸಿರ್
ಕೆದಱುತುಮಾರಱಿ ಮೆಯ್ಗರೆಯೆ ಕಣ್ಮಲರ್ಗಳ್ ಪೊಸನೀರ ಮೀಂಗಳಂ
ದದಿನಿದಿರೇ ಕಂಪಿಸುತೆ ಮೆಯ್ಮರವಟ್ಟು ಕೞಲ್ದು ನೇಣಜಂ
ತ್ರದವೊಲಮರ್ಕೆಗೆಟ್ಟೞಲೆ ಲಾಂಗಲಿ ಮೂರ್ಛೆಗೆ ಸಂದು ನೀಡಱಿಂ || ೫೯

ಕಂ || ಪರಿಜನಸಂಭ್ರಮಕೃತಹಿಮ
ಕರಣದಿನೆೞ್ಜಱುತುಮಕಟಿದೇನಂ ನೆಗೞ್ದೈ
ಪುರುಷೋತ್ತಮ ಮಱಯಿಸಿ ಪಿಡಿ
ದರನಿಱಿವುದೆ ಪೇೞೆನುತ್ತುಮೆಯ್ತರ್ಪಿನೆಗಂ || ೬೦

ಮ || ವಿಕಳಾಕ್ರೋಶ ವಿಶೀರ್ಣಕಂಠಕುಹರಾನ್ತಘೋರ್ಷ ಮುಕ್ತಾಸ್ಯಮು
ಜ್ಚಕುಜಾಲಂಬ ನವೋದಹಾರ ಚರಣವ್ಯಾಸಕ್ತ ನೇತ್ರಂ ವಿರ್ಕೀ
ರ್ಣ ಕರಾಸ್ಫಾಳ ಪದೋಜ್ಝಿತ ತ್ರಿವಳಿ ಸೌಭಾಗ್ಯೋದರಂ ವ್ಯಗ್ರಕಂ
ಚುಕಿ ಸಂಧಾರಿತ ಗಾತ್ರಮಿರ್ದುದಿದಿರೊಳ್ ವಿಭ್ರಾಂತಮಂತಃಪುರಂ || ೬೧

ವ || ಅದಲ್ಲದೆಯುಮಡಿಗಡಿಗೆ ಪೊಡವಿಯೊಳ್ ಪೊಡೆದುಕೊಳ್ವ ರಭಸದೊಳ್ ಪೊರೆದ ಪುಡಿಯನೊಡನೊಡನೆ ಬೆಮರಿಬಿಂದುಗಳ್ ನಾಂದೆ ಮಂದಯ್ಸಿದೞ್ಗೆಸೞೊಳಿಡಿದು ಜೆಡೆಗೊಂಡು ನಗೆಮೊಗಮನಾಗಳಾಗಳೆ ಕಱಂಗಿಸಿದ ಮಸಿಯ ಕುಂಚಿಗಳೆನಿಸಿ ನೊಸಲಂ ಮುಸುಂಕಿದಳಕವಲ್ಲರಿಗಳೊಳಂ ದೂವೆಯೊಳ್ ಬಿೞ್ದ ಪಾವಿನಂದದಿಂ ಮಿಡು ಮಿಡು ಮಿಡುಂಕಿ ಪುಡಿಯೊಳ್ ಪೊರಳ್ವರಭಸದೊಳ್ ಪೊರೆದು ಪಕ್ಕದೊಳಿರ್ಕೆಗೊಂಡು ತರುಣಫಣಿರಮಣಿಯಂ ಬಿಡದೆ ಪಿಡಿದುರುಳೆ ಬರೆಸೆೞೆವ ಸೋಗೆಯಂತೆ ಗೋಣ್ ತೆಗೆಯೆ ಬಿಟ್ಟು ಲಂಬಿಸುವ ಸೋರ್ಮುಡಿಯೊಳಂ ಆಗಳಾಗಳುದಯಿಸುವ ವೈಧವ್ಯ ಸಂಧ್ಯಾಮುಖದೊಳಳವೞಿದುರೋರುಹ ರಥಾಂಗದಂಪತಿಯ ವದನದಿಂ ತಪ್ಪಿಬಿೞ್ದಿ ಬಿಸಕಬಳಮಾಳೆಯೆನೆ ದೂಳಿಯೊಳೆೞಲ್ವ ಮೇಲುದಿನ ದುಗುಲದ ಸೆಱಂಗಿನೊಳಂ ಆತ್ಮಾಂತರಂಗದೊಳ್ ಪದುಳಮಿರ್ಪ ವಲ್ಲಭನಿಧಾನಮಂ ಬಂಚಿಸಿ ಕೃತಾಂತಸಾಧಕಂ ನೆಗಪಿ ಕೊಂಡುಯ್ಯೆ ಕಲ್ಲನೆ ಕನಲ್ದು ನೆಲದೊಳಪ್ಪಳಿಸಿಕೊಳ್ವ ಭುಜಭುಜಂಗಮಾಗಳಾನನ ದಿನುಚ್ಚಳಿಪ ಗರಳಶೀಕರಪ್ರಕರಮೆನೆ ಕರದಿನಲ್ಲುಗುವ ಭಗ್ನಕರವಳಯ ಸಂಕುಳಂಗ ಳೊಳಮೆಂತಾನುಮೀ ಮುಗ್ಧ ಬಾಳಕಿಯರಳವಗೊಳಗಾದವಿನ್ನಿವರನೆನ್ನಬಿನದಕ್ಕೆ ತಕ್ಕ ದೀವಮಂ ಮಾೞ್ಪೆನೆಂಬ ಚಲದಿಂ ಲಕ್ಷ್ಮಿಯೆಂಬ ಶಬರಿ ಬರೆತೆಗೆದು ಬಿಗಿದ ಬಲೆಯ ನೇಣ್ಗಳೆಂಬಂತಂತರ್ನ್ನಿಘೂರ್ಣೀತಾಪೂರ್ಣಮನ್ಯುವೇಗದೊಳ್ ಬೀಗಿಬಿರಿವಂತ ಗಗ್ಗರಿಪ ಕೊರಲೊಳುಬ್ಬರಿಸಿ ಪೊರೆದ ಸೆರೆಗಳೊಳಂ ನಿಜಚಪಳಮುಗ್ಧಭಾವಮನೆ ಕೊಂಡಾಡಿ ಮುದ್ದುಮಾಡುಪೋಪವಂ ಕಳಿದೊಡೊಡನೞಿದ ವಿಳೋಚನ ವಿಳಾಸ ಲಕ್ಷ್ಮಿಗಾಸನ್ನ ಬಾಂಧವ ಪ್ರೀತಿಯಂ ನೇತ್ರಪುತ್ರಿಕೆಗಳಿತ್ತ ಸದ್ಯಸ್ತಿಳೋದಕ ಪ್ರಸರಮೆನೆ ಕುಚಕೂಟದೊಳ್ ಕಱೆವ ಕಜ್ಜಳ ಮಳೀಮಸಾನಳ್ಪಬಾಷ್ಪಜಳದೊಳಂ ಮುನಿದಂತಿರೊರ್ಮೊದಲೆ ಲೋಕಾಂತರಕ್ಕೆ ಪೋದ ನಿಜಜೀವಿತೇಶ್ವರನ ಬೞಿಸಲ್ವ ಬವಸೆಯಿಂ ಪೋಬೞಿಯನಱಸಿ ಪರಿವಂತೆ ನಿಮಿರ್ವ ಬಿಸುಸುಯ್ಗಳೊಳಂ ಅಳವಿಗೞಿದ ಕರುಣರಸ ತರಂಗಿಣಿಯ ಪೂರದೊಳ್‌ಮೂಡಿ ಮುೞ್ಕಾಡುವ ತತ್ಸ್ವಯಂಪ್ರಭಾಪ್ರಭೃತಿ ಶುದ್ಧಾಂತಕಾಂತೆಯರ ನಡುವೆ ಚಂಪಕಪ್ರತತಿಗಳ ಮಧ್ಯದೊಳಿರ್ದ ಷಟ್ಚರಣಸಂಚಯದಂತೆ ಕೆಡೆದಿರ್ದ ನಿಜಾನುಜನ್ಮನ ಕಳೇವರದ ಕಾಲಮೊದಲೊಳ್ ಮೊೞ್ಗಿ-

ಕಂ || ಹಾಹಾ ಮನುಕುಲ ಮಂಡನ
ಹಾಹಾ ಸುರ ಖಚರ ಮನುಜ ಚೂಡಾರತ್ನಾ
ಹಾಹಾ ಗುರುಜನವತ್ಸಳ
ಹಾಹಾ ಬುಧಬಂಧು ವಂದಿಕಳ್ಪಮಹೀಜಾ || ೬೨

ಮನದೊಳ್ ನೀಂ ಮುಳಿದರನೞಿ
ವನೊಸೆದರಂ ಕಾವನೆಂಬ ನಚ್ಚಿನ ಜವನಂ
ನಿನಗಮಸಿಯೇಱಿನವನಾ
ದನೆ ತಮ್ಮನೆ ಪಿಡಿವ ಕೆಯ್ದುವುಂ ಪಾವಾಯ್ತೇ || ೬೩

ಬಳನಂ ರಾಜ್ಯೋಚಿತ ಸುಖ
ದೊಳೆಲ್ಲಿಯುಂ ಪಿಂದುಗೆಯ್ಯಲಱಿಯದನೆಯದೇಂ
ಗಳ ಪರಲೋಕದ ಸುಖಮ
ಗ್ಗಳಮೇಂ ಬೞಿಪಿಂದೆ ಪಿಂದುಗೆಯ್ವುದು ಗುಣಮೇ || ೬೪

ವ || ಎಂದು ಮಾಣದೆ-

ಚಂ || ಗರುಡಿಯೊಳಾರೊಳಿನ್ನಳವಿ ಮಾಡುವೆನಾರೊಡನೇಱಿ ತೋಱುವೆಂ
ಕರಿತುರಗಂಗಳಂ ನಗುವೆನಾರೊಡನಾರೊಡನಣ್ಣಮೆಚ್ಚಿದಂ
ತಿರೆ ಮನದಿಚ್ಚೆಯಂ ನುಡಿವೆನಾರೊಡನಾಡುವೆನಕ್ಕಟಾ ಸಹೋ
ದರನನನಾಥನಂ ಬಿಸುಟು ಕೆಮ್ಮನೆ ತಮ್ಮನೆ ಪೋಗಲಕ್ಕುಮೇ || ೬೫

ಮ || ಇದೆ ಗಂಧದ್ವಿರದೋತ್ಕರಂ ಕಳಿಪಿದಂ ಗೌಡಂ ಜವೋದ್ರಿಕ್ತಮಿಂ
ತಿದೆ ವಾಜಿವ್ರಜಮಟ್ಟಿದಂ ನಿನಗೆ ಭೀತಂ ಮಾಗಧಂ ದೇವ ನೋ
ೞ್ಪುದು ಕೆಯ್ಕೊಳ್ವುದು ಭೀರುಗಳ್ಗಭಯಮಂ ನೀನೀಯದಿಂತಿರ್ಪುದೊ
ಪ್ಪದೆಲೋ ಕೇಶವ ಪೇೞೆನುತ್ತೊದಱಿದಂ ಬಾಯ್ವಿಟ್ಟು ಸೀರಧ್ವಜಂ || ೬೬

ಉ || ವಾರಿಯ ನಿನ್ನ ಲೆಂಕರದೆ ಸತ್ತಪರಕ್ಕಟ ಮಾಣಿಸೆಂ ಗಳಾ
ಬಾರಿಸು ನಿನ್ನ ನಂಟರದೆ ಪೊಲ್ಲದುಗೆಯ್ದಪರಯ್ಯ ನಿನ್ನ ಕೆ
ಯ್ವಾರದ ಪೆಂಡಿರಂ ನಿಲಿಸು ಬಿಟ್ಟಪರಿಂತಿದೆ ನೋಡ ಜೀವಮಂ
ಕಾರಣಮಿಲ್ಲದಂತುಸಿರದಿರ್ಪುದು ತಕ್ಕುದಿದಲ್ತು ತಮ್ಮನೇ || ೬೬

ವ || ಎಂದು ಮತ್ತಂ ತನ್ನತಮ್ಮನ ಸೈರಣೆಯ ಸಲ್ಗೆಯಂ ಜವಲೆಯೊಲವಿನ ಗುಣಂಗಳಂ ನೆನೆನೆನೆದು ಬಗೆಬಗಿದೊಡಲೊಡೆವಂತಾಗೆ ನಿಲಲಾಱದೆ ನೆಱನನಱಿಯದಂತು ನೋಯಿಸುವ ತನ್ನ ನುಡಿಗೊಡನೊಡನೆ ಬಿರಿವ ಪರಿಜನಂಗಳಂ ಕಡಲ್ವರಿವ ಕಣ್ಣೀರ ಪೂರದೊಳ್ ಮುೞುಗಿದೆಮೆವೊಱೆಯನಾನಲಾಱದಳವೞಿದ ಕಣ್ಗಳಿಂ ಕರುಣರಸಮನೆ ರೂಪುಗೊಳಿಸಿ ತೋಱುವಂತಿರತಿಕೃಪಣ ಭಾವದಿಂ ನೋಡಿ-

ಚಂ || ಕೆಳೆಯ ಪಸಾಯಿತರ್ಕಳಿರ ನಚ್ಚಿನ ಲೆಂಕರಿರಾ ನೆಗೞ್ತೆಯಾ
ಳ್ಗಳಿರ ಮಹಾಧಿಪತ್ಯದ ಚಮೂಪರಿರಾ ಪೆಸರ್ವೆತ್ತ ನಿಮ್ಮನಿ
ಮ್ಮಳವಕಟೆತ್ತವೋಯ್ತು ಮನುವಂಶ ಮಹಾನಿಧಿ ಸೂಱೆವೋಗೆ ದು
ರ್ವಳ ಮನರಾಗಿ ಮಿಳ್ಮಿಳನೆ ನೋಡುತುಮಿರ್ಪುದೆ ಲೋಗರಂದದಿಂ || ೬೮

ಪೊಗಳ್ದೊಡಮೀವ ಬೇಡಿದೊಡಮೀವ ಕನಲ್ದೊಡಮೀವ ಮೇಳದಿಂ
ತೆಗಳ್ದೊಡಮೀವ ನಿಮ್ಮರಸನೇಕೆ ಗಳಾ ಮುನಿದೆನ್ನುಮಂ ಬಿಡಲ್
ಬಗೆದನಿದಲ್ತೆ ನಿಮ್ಮ ಸಮಯಂ ತಿಳಿಪಿಂ ಮೊಗಮಿತ್ತು ನೋಡಿಸಿಂ
ನಗಿಸಿಮೆನುತ್ತೆ ಗೋಲಿಡಿಸಿದಂ ಮಿಗೆ ಮೇಳದ ವಂದಿವೃಂದಮಂ || ೬೯

ಮಸಕದಿನೆಯ್ದಿ ಕೇಸರಿಯನಿಕ್ಕಿದ ತಕ್ಕನದಾರ್ಗೆ ಮೆಚ್ಚಿ ಬ
ಣ್ಣಸಿದಪಿರೆತ್ತಿ ಪರ್ವತಮನಾಂತಳವಂ ಪೊಗೞ್ದಿನ್ನದಾರನು
ರ್ಬಿಸಿದಪಿರಶ್ವಕಂಠಮಥನಾಂಕಿತ ಸೂಕ್ತಿಯನಾರಮುಂತೆ ಕೇ
ಳಿಸಿದಪಿರಿನ್ನೆನುತ್ತೞಿಸಿದಂ ಪರಿಪಾಠಕ ಕೀರಜಾಳಮಂ || ೭೦

ವ || ಮತ್ತಮತಿ ವಿಕಳನಾಗಿ-

ಚಂ || ಸರಸತಿ ನಿನ್ನ ಭಾಗ್ಯವರೆಯಾದುದೆ ಹಾ ನಿನತೋಲೆವಾಗ್ಯವೋ
ಸರಿಸಿದುದೇ ಧರಿತ್ರಿ ಸಿರಿ ನಿನ್ನಯ ಮೆಯ್ಸಿರಿ ಸೂಱೆವೋಯ್ತೆ ಮೆ
ಯ್ಗರೆದುದೆ ವೀರಲಕ್ಷ್ಮಿ ನಿನತೆಯ್ದೆತನಂ ಬಿದಿ ಮೇರೆದಪ್ಪ ನಿ
ಷ್ಕರುಣದೆ ನಿಮ್ಮ ಬಾೞ್ಮೊದಲನಕ್ಕಟ ವಂಚಿಸಿ ಕೊಂಡುವೋದನೇ || ೭೧

ಸೊಗಯಿಪ ನಿನ್ನ ನುಣ್ಚರದ ಗೀತಕೆ ಮೆಚ್ಚುವರಾರೊ ಭೃಂಗ ಕಂ
ತುಗೆ ಬರವೀವ ನಿನ್ನ ಬರವಿಂಗಿದಿರ್ವರ್ಪವರಾರೊ ಚೂತ ದೇ
ಸೆಗೆ ನೆಲೆಯಾದ ನಿನ್ನಯ ಮುಗುಳ್ನಗೆಯಂ ಬಗೆಗೊಳ್ವರಾರೊ ಮ
ಲ್ಲಿಗೆ ಮಱಪಿಕ್ಕಿ ನಿಮ್ಮರಸನಂ ಜವನೊಯ್ದುದನಿತ್ತ ಕೇಳಿರೇ || ೭೨

ವ || ಎಂದು ಪಲತೆಱದೆ ಬಱಿದೆ ಬಾಯೞಿದು ಕಳವಳದಿನವರವರ್ಗೆ ಮಱುಗಿ ಪುಯ್ಯಲ್ಚಿಯುಂ ಬಯಲ್ಲೆ ಬಾಯ್ವಿಟ್ಟು ಪಂಬಲಿಸಿಯುಂ ತಣ್ಬೊಲದ ಕೇಳೀವನದ ತರುಲತಾವಿಹಂಗಮಂಗಳ್ಗೆ ಪೇೞ್ದು ಪಳವಿಸಿಯುಂ ಅೞ್ವ ಬಳಭದ್ರನಂ ಪ್ರಗಲ್ಭಪುರಜನ ಪುರೋಹಿತ ಪ್ರಧಾನರೆಯ್ದೆವೆಂದು ಪಲತೆಱದಿಂ ಸಂಸಾರದಸಾರತೆಯುಮನನಿತ್ಯತೆ ಯುಮಂ ಪ್ರತಿಬೋಧಿಸುವ ಬಗೆಯಿನಿಂತೆದರ್-

ಕಂ || ದಿಟ ಮುಂ ನಿಮ್ಮನ್ನರ್ಗಿಂ
ತುಟಾಗಲಾಗದು ದಲಾದೊಡಂ ಹತವಿಧಿಯ
ರ್ಘಟಿತ ಘಟನಾ ಘಟಿತನತಿ
ಕುಟಿಳತರಂ ಕಡೆಯೊಳಾರ್ಗಮಿನ್ನನೆ ಜಗದೊಳ್ || ೭೩

ವ || ಮತ್ತಂ-

ಕಂ || ತಮಗಿಲ್ಲದೊಡಮೆಯಂ ಮು
ನ್ನಮೆ ಬಿಡುವ ವಿವೇಕಮಿಲ್ಲದೊಡಮದು ನೀಡುಂ
ತಮಗಲ್ಲದೆ ಪೋದಿಂಬೞಿ
ಕಮಾದೊಡಂ ಬಿಟ್ಟು ಕಾಣವೇೞ್ಪದು ಚದುರಂ || ೭೪

ಭಾವಿಸೆ ಗತಿ ನಾಲ್ಕಱೊಳಂ
ಸಾವುದು ದಿಟಮೆಂದು ಸಾವು ಮುಟ್ಟಿದೊಡಾರುಂ
ಕಾವವರಿಲ್ಲೆಂದೊರ್ವನೆ
ಜೀವಂ ಸಾವೆಡೆಗೆ ನಂಟರಿಲ್ಲೆಂದಱಿ ನೀಂ || ೭೫

ಪೆಱವಱೊಳಾದುಬ್ಬೆಗಮಂ
ಮಱಯಿಸುವುದು ನಿದ್ರೆ ದೇಹಿಗದು ನಿನ್ನನುಜಂ
ಗಱೆಯೇಱಾಯ್ತೆನೆ ನಂಬುವ
ತೆಱನಾವುದೊ ಹಿತಮಿದೆಂದು ಸಂಸ್ಕೃತಿ ಸುಖಮಂ || ೭೬

ಕೀನಾಶಂ ಮುಳಿದ ಬೞಿ
ಕ್ಕೀನಾಶಂ ತಪ್ಪದಾರ್ಗಮೆಂದಱಿಪುವವೋ
ಲೀ ನಮ್ಮರಸನ ವಿಷಯ ವಿ
ಳೀನಂ ತಾನಾದನೇಕೆ ನಮಗೀಶೋಕಂ || ೭೭

ಅದಱಿಂದಧ್ರುವಮಶರಣ
ಮಿದು ದುಃಖಮಯಂ ವಿಚಾರಿಪೊಡೆ ಸಂಸ್ಕೃತಿಯೆಂ
ಬುದುಮಂ ಧರ್ಮಮೆ ಸುಖಕರ
ಮಿದೆ ಶರಣಂ ಜೀವಿಗೆಂಬುದುಮನೇನಱಿಯೈ || ೭೮

ವ || ಎಂದು ಮತ್ತಂ ಪೆಱವುಮುಚಿತ ನಯನಿದರ್ಶನಂಗಳಿಂ ತಿಳಿಪಿ ನಿರ್ಮಳಮಾದಂತ ರಂಗದುಪಶಾಂತಿಯಿಂದಂ-

ಕಂ || ಘನಮೋಹಪಂಕಮಂ ತೊಳೆ
ದು ನಿರರ್ಗಳ ಶೋಕಶಿಖಿಯನಾಱಿಸಿ ಕಣ್ಣೀ
ರನಿತುಂ ಬತ್ತಿದುವೆನೆ ಲೋ
ಚನಮೂಗಳೆ ಬಾಷ್ಪರಹಿತಮಾದುವು ಬಳನಾ || ೭೯

ವ || ಮತ್ತಮಂತರಂಗದಿನಡಂಗುವ ವಿಷಯರತಿಯೊಡನೆ ಮೆಯ್ಬಿಸುಪಡಂಗೆಯುಂ ಪೊಡರದುಡುಗುವ ಲೋಚನದೊಡನೆ ನಿಡುಸುಯ್ಗಳುಡುಗೆಯುಂ ಕ್ರಮಕ್ರಮ ದಿನುದಯಿಪ ವಿರಕ್ತಿಯೊಡನಾಕಾರಸೌಷ್ಠವಮುದಯಿಸೆಯುಂ ಬಳನುದಂಚಿತ ವಿಶೋಧಿ ಬಳನಾಗೆ-

ಕಂ || ಹಿತ ಬೋಧಾಕರಮಮಳೀ
ಕೃತ ಹೃತ್ಸರದೊಳ್ ದಯಾದಿ ಗುಣಮಾಳಾಧಿ
ಷ್ಠಿತಮೊಗೆದುದು ವಿರತಿಶ್ರೀ
ಗೆ ತಾನೆ ನೆಲೆಯಾಗಿ ವಿಶದ ಸಮ್ಯಕ್ತ್ವಬ್ಜಂ || ೮೦

ವ || ಅಂತು ಸಮನಿಸಿದ ಸಮ್ಯಕ್ತ್ವರತ್ನಪ್ರದೀಪದಿಂ ಬಹುಳ ಮೋಹತಿಮಿರಂ ಪರೆಯೆ ಪಿರಿದುಂ ವಿಶದಮಾದ ನಿಜದೃಷ್ಟಿಯಿನವಗತಸ್ವಪರವಸ್ತುವಾಸ್ತವನಾಗಿ-

ಕಂ || ತಾನೆ ವಿಕಳಾರ್ತ ಬಂಧುವಿ
ತಾನಮನುಚತೋಕ್ತಿಯಿಂದೆ ಸಂತಯ್ಸುತುಮಾ
ತ್ಮಾನುಜ ತನುಸಂಸ್ಕಾರ ವಿ
ಧಾನಮುಮಂ ತೀರ್ಚಿ ಮುಕ್ತಿವನಿತೋತ್ಕಂಠಂ || ೮೧

ವ || ಸಮಸ್ತ ಪರಿಜನ ಪುರಜನ ಬಂಧುಜನಂಗಳ ಸನ್ನಿಧಾನದೊಳ್ ವಿಗತಶೋಕನಂ ಮಾಡಿ ಕೋಕನಂ ಮೆಲ್ಲನೊಡಂಬಡಿಸಿ-

ಉ || ಶ್ರೀವಿಜಯಂಗೆ ಸಂಗತ ಪರಾಕ್ರಮಶಾಳಿಗೆ ತತ್ಸ್ವಯಂಪ್ರಭಾ
ದೇವಿಯ ನಂದನಂಗೆ ವಿನಯಾದಿ ಲಸದ್ಗುಣಭೂಷಣಂಗೆ ಸಂ
ದಾವಿಜಯಂ ಸ್ವಕೀಯ ರಮಣೀಯತರಾಖಿಳ ರಾಜ್ಯಭಾರಮಂ
ಪಾವನಚಿತ್ತನಿತ್ತು ತಳೆದಂ ಜಸಮಂ ವಸುಧೈಕಬಾಂಧವಂ || ೮೨

ಗದ್ಯಂ
ಇದು ನಿಖಿಳ ಭುವನ ಜನವಿನೂತ ಸ್ಫೀತಮಹಿಮಾವದಾತ ವೀತರಾಗ ಸರ್ವಜ್ಞತಾ ಸಮೇತ
ಖ್ಯಾತಜಿನಸಮಯ ಕಮಳಿನೀಕಳಹಂಸಾಯಮಾನ ಮಾನಿತ
ಶ್ರೀನಂದಿಯೋಗೀಂದ್ರಪ್ರಸಾದ ವಾಚಾಮಹಿತ
ಕೇಶವರಾಜಾನಂದನಂದನ ವಾಣೀವಲ್ಲಭ ವಿಸ್ತಾರಿತಮಪ್ಪ
ವಸುಧೈಕಬಾಂಧವ ಶ್ರೀ ವರ್ಧಮಾನ ಪುರಾಣದೊಳ್
ಸ್ವಯಂವರ ಬಳಾಚ್ಚುತ ವಿಯೋಗವರ್ಣನಂ
ನವಮಾಶ್ವಾಸಂ