ಕಂ || ಶ್ರೀಧರನಭ್ಯುದಯಕರಂ
ಸೌಧೋತ್ಸಂಗಾಭಿ ಶೋಭಿತಂ ಗೆಲೆವಂದಂ
ಭೂಧರವರಸಾನುಗತಾಂ
ಭೋಧರಮಂ ಪಂಚಪರಮಗುರುಪದವಿನತಂ || ೧

ವ || ಅಗಳಾ ಪಂಕಜೇಕ್ಷಣನ ದೃಗ್ದೀಪವರ್ತಿಗೆ ಮನೋಭವಮಹೋತ್ಸವ ನಿಧಾನಮೆನಿಸಿ ತತ್ಕನ್ಯಕಾರತ್ನಮನುಮಿತಪೂರ್ವಕಂ ಪುರೋವರ್ತಿಯಾಗೆ-

ಕಂ || ಎಱಗೆ ನನೆಗಣೆಯ ಸರಿ ಬೆಳ
ದೆಱಗೆ ಮನೋರಥ ಸಹಸ್ರಸಸ್ಯಂ ಕಾಯ್ದಿಂ
ದೆಱಗೆ ಮನೋಜಮದದ್ವಿಪ
ಮೆಱಗಿದುದಚ್ಯುತನ ದೃಷ್ಟಿ ತತ್ಕನ್ಯಕೆಯೊಳ್ || ೨

ವ || ಅಂತಭಿಮತಾಪೂರ್ವ ರೂಪಲಾಭ ವಿಲೋಭದಿಂ ಪರಿವ ಕಣ್ಗಳಿಂ ಮುನ್ನಮೋಪಳೊಳ್ ನೆರವ ತವಕದಿಂ ಪೊಱಮಡುವ ಮದನಸಂಘಟ್ಟನದಿನದಿರ್ವಂತೆಯೆರ್ದೆ ಬೆದಱಿ ಗೂಡುವಾಯೆಯುಂ ಗೂಡುವಾಯ್ವ ಮೆಲ್ಲೆರ್ದೆಯ ತಲ್ಲಣಕ್ಕೆ ಬೆಱಗಾದ ತೆಱದಿನಖಿಲಾಂಗಸ್ಪಂದಮಮಂದಮಾಗೆಯುಂ ಮಱೆದ ಬೆಱಗಾದ ತನುವನನುವಿಸಿ ಮನಃಪ್ರಿಯೆಯ ಪಕ್ಕಕ್ಕೆ ನಡೆಯೆಂದು ನೂಂಕುವಂತಿರೆಡೆವಿಡದೆ ನಡುಕಮೊಡರಿಸೆಯುಂ ಅನುವಿಸುವ ಕಂಪನದ ಭರದಿನಖಿಳಾವಯವಮೊರ್ಮೊದಲೆ ಬೆಚ್ಚರಮೆೞ್ಚಱುವ ತೆಱದೆ ಮೆಯ್ನವಿರ್ಗಳಾವಗಂ ನೆಗೆಯೆಯುಂ ನೆಗೆವ ಮೆಯ್ನವಿರ ಸಂದಣಿಯ ಬೞಿಯೊಳಿಡೆ ವಡೆದಂತರಂಗದಿಂ ಪೊಱಮಡುವ ಲಜ್ಜಾರಸಮಿದೆಂಬಿನಂ ಬೆಮರಬಿಂದುಗಳ್ ತುರುಗಿ ತಲೆದೋಱೆಯುಂ ಬೆಮರ ಬಿಂದುಗಳೆ ಸಕಳಾವಯವದೊಳಮುಣ್ಮಿದುದನತಿಶೈಸುವಂತೆ ಕಯ್ಗೞಿಯೆ ಕಣ್ಬನಿಗಳೊಗೆಯೆಯುಂ ಅಬ್ಜನಾಭಂ ಸಂಭ್ರಮೌತ್ಸುಕ್ಯ ಹರ್ಷಜಡಿಮಾ ಪಹೃತಹೃದಯನುಂ ಅವಿದಿತ ವಿಸಂಸ್ಥುಳ ವಿಕಾರಘಟನಾ ಪಟೀಯ ಸ್ಮರಪರಾಯತ್ತ ವೃತ್ತಿಯುಮಾಗೆ-

ಕಂ || ಮನದೊಲವಿಂ ಪ್ರಾಣಪ್ರಿಯೆ
ಯನಿದಿರ್ಗೊಳಲ್ ಪರಿವ ತೆಱದೆ ನಿಮಿರ್ದುವು ಸುಯ್ಗಳ್
ತನತನಗೆ ಸೋಂಕುವುತ್ಸುಕ
ತನದಿಂ ನಿಮಿರ್ವಂತೆ ಪೊಣ್ಮಿದುವು ಮೆಯ್ನವಿರ್ಗಳ್ || ೩

ವ || ಮತ್ತಂ-

ಕಂ || ಅಡಸಿದ ಧೈರ್ಯಾರ್ಗಳಮೊಳ
ಗುಡಿವಿನೆಗಂ ತೀವಿ ತೆಗೆದು ಮನ್ಮಥನಾರ್ದೆ
ಚ್ಚೊಡೆ ಭೋಂಕನಗಿದು ನೃಪನೆರ್ದೆ
ಪಡಿದೆಱೆದಂತಾಯ್ತು ಕಾಂತೆ ಬಗೆವುಗುವಾಗಳ್ || ೪

ವ || ಅಂತು ಕಂತುಶರಪಟಳಪಾತದಿಂದೊಡೆದು ಶೂನ್ಯಮಾದ ಹೃದಯಮಂ ಸಂತೈಸಿ ಧೈರ್ಯಧನಸನಾಥಂ ಮಾಡೆ ರವಣಮಾದ ಜೂದುಗಾಱನಂತೆ ಮಗುೞ್ದು ಮಗುೞ್ದು ಮಭ್ಯಾಸವಶದಿನಿನಿಯವಳ ಕೂಟಮನೆ ಬಯಸಿ ಕಣ್ಗಳ ಸಹಾಯಮಂ ಸಾರೆ ತನ್ಮನದ ಮನೋರಥಮನೆಯ್ದಿಸಲ್ ಧುರಂಧರಂಗಳಾದುವೆನಿಸಿ-

ಕಂ || ವಿಕಸಿತಮುಖಾಬ್ಜದೊಳ್ ಶಿಥಿ
ಳಕಬರಿಕಾಳಿಂದಿಯೊಳ್ ಚಳೇಕ್ಷಣರುಚಿ ಚಂ
ದ್ರಿಕೆಯೊಳಳಿಗಳ ಝಷಂಗಳ
ಚಕೋರಿಗಳ ತೆಱದೆ ನಲಿದುವರಸನ ಕಣ್ಗಳ್ ೫

ಅಂಬುಧಿಯ ಕಂಬುಕಂದಳ
ಮಂ ಬಳಸುವ ಮೀಂಗಳೆನಿಸಿ ಪೊಳೆದುವು ಲಾವ
ಣ್ಯಾಂಬುಧಿಯೆನಿಪಿನಿಯಳ ಗಳ
ಕಂಬುವನಿನಿಸೆಳಸಿ ಬಳಸಿ ಕೃಷ್ಣನ ಕಣ್ಗಳ್ || ೬

ವ || ಅಂತುಮಲ್ಲದೆಯುಂ-

ಕಂ || ಅವಿರಳ ಲಾವಣ್ಯಜಲ
ಪ್ಲವದೆಳವಾಳೆಗಳಿವೆನಿಸಿ ನಲ್ಲವಳ ಬೆಮ
ರ್ತವಯವದೊಳ್ ಪರಿಮಱಿಯಾ
ಡುವಂತೆ ಪರಿದುವು ವಿಳೋಕನಂ ನೃಪವರನಾ || ೭

ಪಸುರ್ವಾಸೆಬಟ್ಟೆಯಿಂದು
ದ್ದೆಸಮಱಿಯದೆ ನಡೆದು ಕುಚನಗಾಂತರದೊಳ್ ಪೊ
ಕ್ಕು ಸಿಲಿಂಕೆ ನೃಪನಮನಮಾ
ರ್ದಿಸುತುಂ ನಾಣ್ಗಿಡಿಸಿ ಪಿಡಿದನಂಗಜಾ ಚೋರಂ || ೮

ವ || ಮತ್ತಂ-

ಅದಿರೆ ವಳಿತ್ರಯಸೋಪಾ
ನದೊಳೋವದುರುಳ್ಜಿ ನಿಮ್ಮನಾಭಿಸರೋಮ
ಧ್ಯದೊಳಾೞೆ ಪುಡುಕುನೀರ
ೞ್ದಿದನಬ್ಜೇಕ್ಷಣನ ಚಿತ್ತಮಂ ಚಿತ್ತಭವಂ || ೯

ವ || ಅಂತು ಮನ್ಮಥೇಚ್ಛಾವಿಧಾನಭಾಜನನುಂ ಅವಿದಿತಾಂತರ್ಬಹಿಃ ನಿಜಕರಣ ಬಹು ವಿಕಾರನುಂ ಅಭಾವಿತಾನ್ಯ ಸದ್ಭಾವನುಂ ಈಕ್ಷಣೈಕಾವಳಂಬಿತ ಜೀವನನುಮಾಗಿ ಕಮಳಲೋಚನನಿನಿಸಾನುಮಿರ್ಪನಂ ಮನೋಹರಿ ಸಮಯ ಸಮುಚಿತ ವಚೋಲಹರಿಯಾಗಿ ಪರಿವವಳ ಸತ್ಕಟಾಕ್ಷಕಾಂತಿವಲ್ಲರಿಗಳಿಂ ಕಂಕೆಲ್ಲಿವಲ್ಲಿಯನಪೂರ್ವ ಪುಷ್ಪಲಕ್ಷ್ಮಿಗೆ ನೆಲೆ ಮಾೞ್ಪ ಖಚರರಾಜಪುತ್ರಿಯಂ ಪರಿವೃತ್ತವದನೆಯಪ್ಪಿನಮಭಿಮತ ಚಟೂಕ್ತಿಯಿಂ ಮೆಚ್ಚಿಸುತ್ತುಮಿಂತೆಂದಳ್-

ಕಂ || ಪುದಿದು ಭವದಂಗರುಚಿಕೌ
ಮುದಿ ಬಳಸಿರೆ ಪೋಲ್ತು ಶಶಿವಿಮಾನಮನೀ ತೋ
ರ್ಪುದೆ ಗಗನತಳಮನೆಡೆಗೊಂ
ಡು ದೇವಿ ನಿನ್ನೋಪನಿರ್ಪ ಬಿನದದ ಮಾಡಂ || ೧೦

ಎನೆ ಮುರಿದೀಕ್ಷಿದಳ್ ಲೋ
ಚನಾಂಶು ಚಂದ್ರಿಕೆಯೊಳೊದವಿದಾನಂದಸುಧಾ
ವನನಿಧಿಯೊಳ್ ನೆಲೆಗೊಂಡ
ಬ್ಜನಾಭನರ್ಣವಶಯತ್ವಮಂ ಪ್ರಕಟಿಪಿನಂ || ೧೧

ಕರಿಯಾಲಿವಿಡಿದು ಪೊಳೆಯು
ತ್ತಿರೆ ಕಣ್ಗಳ ಪಾಪೆ ಪಱುಗೊಲಿಕ್ಕುವ ತೆಱದಿಂ
ಪರಿದುವು ಲಾವಣ್ಯದ ಕಾ
ೞ್ಪರಮೆನೆ ತೆರೆಮಸಗಿ ವಧುವ ಧವಳಕಟಾಕ್ಷಂ || ೧೨

ವ || ಅಂತು ಶಶಿವಿಶದರಮ್ಯಹರ್ಮ್ಯಾವಳೋಕನ ಕುತೂಹಳಂಗಳೊಳಾತ್ಮೀಯಲೋಚನ ಚಕೋರಂಗಳವಿದಿತಪ್ರಾಪ್ತ ಪೀತಾಂಬರಾಂಗವಲ್ಲಿ ವಾಗುರೆಯೊಳಾಗಳೆ ಸಿಲುಂಕಿನಿಲ್ವುದು ಮನಂತರಮಪತ್ರಪಾಪ್ರಕೃತಿಯಪ್ಪಿವಳ ಮನಮಂ ಮನಮಱಿಯದವರಲ್ಲಿಗವಿಚಾರ ಮುಯ್ವುದು ನಿಮಗಯುಕ್ತಮೆಂದು ಕಣ್ಪೊಣರನಡ್ಡಯ್ವ ತೆಱದೆ ಪೊಱಡುವ ಕಣ್ಬನಿಯುಂ ಕಣ್ಗಳ ಬೞಿಯೊಳುತ್ತವಳಿಸಿ ಪರಿವಚಿತ್ತಮಂ ನಿಲಿಸಲೆಯ್ದುವಂತೆ ನಿಮಿರ್ವ ಸುಯ್ಗಳುಂ ನಿಡುಸುಯ್ವಪೂತ್ಕಾರ ರಭಸಮಂ ಮಱೆಯಿಸಲೊಡರ್ಚುವಂತೆ ಢಕ್ಕೆವಾಜಿಸುವ ಮೆಲ್ಲೆರ್ದೆಯುಂ ಮೆಲ್ಲೆರ್ದೆಯ ನಡುಕಮಂ ಮಾಣಿಸಲ್ ಸಂಭ್ರಮಿಸುವಂತಿರಾಕಂಪಿ ಪವಯವಂಗಳುಂ ಅವಯವಂಗಳಾ ಕಂಪಮನಾಚ್ಛಾದಿಸುವ ತೆಱದಿ ತುರುಗಿ ನೆಗೆದ ಪುಳಕಂಗಳುಂ ಮುನ್ನಮುತ್ಪುಳಕ ಸಂಕುಳಚ್ಛಲದಿನಾಲಿಂಗನೇಚ್ಛೆಯೊಳ್ ನಿಮಿರ್ವ ಗಾತ್ರಮಂ ತಳರಲೀಯದೆ ತಱುಂಬುವಂತಿರಗ್ಗಳಿಸಿದುತ್ಕಟಸ್ತಬ್ಧ ಭಾವಮುಂ ಅತಿಸ್ತಬ್ಧ ಚೇಷ್ಟಮಾದ ತನುವನಿರ್ಪಿನೊಳ್ ಪೊರೆದು ಸಂತೈಸುವಂತೆ ಮೆಯ್ವೊರೆದ ಬೆಮರ ಬಿಂದುಗಳ ಮೊತ್ತಮುಂ ಮತ್ತಮಂತರಂಗ ಶಬಳಿತೌತ್ಸುಕ್ಯ ಸಾಧ್ವಸ ವ್ರೀಡಾಜಡಿಮಾದಿ ವಿವಿಧ ಭಾವಮುಂ ಉದೀರ್ಣ ರಾಗಾರ್ಣವ ಕ್ಷುಭಿತ ಕಲ್ಲೋಳಜಾಳಮೆಂಬಿನಂ ವಿಜೃಂಭಿಸಿದುವಂತುಮಲ್ಲದೆಯುಂ-

ಚಂ || ಅದಿರೆ ನಿಜೇಶನುಂ ನಿಜವಿಳೋಚನ ಸಾಯಕದಿಂ ನಿಜಾಂತರಮ
ಗದ ಕುಸುಮಾಸ್ತ್ರನೆಚ್ಚೊದೆದು ಪುಟ್ಟಿಸಿ ರಾಗದಿನುರ್ವಿ ಧಿಂಕುವಾ
ಱಿದಪನೆನಿಪ್ಪಿನಂ ಸ್ಮರಜಸಾಧ್ವಸದಿಂ ಧಿಗಿಲೆಂದು ಗೂಡುವಾ
ಯ್ದುದು ನೃಪಕನ್ನೆಗಾಗಳೆರ್ದೆ ನೋಡಲೊಡಂ ಮನುವಂಶಮೇರುವಂ || ೧೩

ನಡುಗಿ ಬೆಮರ್ಪ ಪೆೞ್ಪಳಿಸಿ ನೋ ೞ್ಪೆರ್ದೆ ಕಂಪಿಪ ತಲ್ಲನಿಪ್ಪ ಕಾಲ್
ತಡತಡಮಾಗೆ ಕೆಯ್ಗುಡುವಳಂ ನಸುನೆಮ್ಮುವ ಮೇಲುದಂ ಕುಚ
ಕ್ಕಡಿಗಡಿಗೇಱೆ ಸಾರ್ಚುವಳವಟ್ಟಿರೆಯುಂ ತೊಡವಂ ಕೞಲ್ಜಿ ಸ
ಯ್ತಿಡುವ ವಿಕಾರಮಾಕೆಗಿದಿರೊಳ್ ಕರೆಗಣ್ಮಿದುದಂಬುಜಾಕ್ಷನಾ || ೧೪

ವ || ಮತ್ತಂ-

ಕಂ || ಪೂಗಣೆಯಿಂ ಬಾದವಣಂ
ಬೋಗಿರೆ ಹೃದಯಂ ನಿರರ್ಗಳಂ ಕವಿದುಪುವಿಂ
ತೀಗಳೆನೆ ತರುಣಿಗೊಗೆದುವು
ಬೇಗದಿಮತಿಸೂೞ ದೀರ್ಘನಿಶ್ವಾಸಂಗಳ್ || ೧೫

ಹೃದಯಮನಿನಿಯಂ ಪುಗುವೆಡೆ
ಗಿದು ಮಱೆಯೆಂದೆತ್ತಿ ಕಳೆವ ತೆಱದಿಂದೀಡಾ
ಡಿದುದು ನಿಡುಸುಯ್ಯೆಲರ್ ಮೇ
ಲುದನಾಕೆಗೆ ಪಿಡಿಯೆಯುಂ ಕುಚಪ್ರಸ್ವೇದಂ || ೧೬

ನಡುವಲರ್ಗಣೆಗಿನಿಸಂ ಮಱೆ
ವಿಡಿದಪಳೆನೆ ಜಗುೞ್ವ ಮೇಲುದಂ ನೆಲೆಮೊಲೆಯೊಳ್
ಬಿಡೆ ಸಂಧಿಸುವ ಬೞಲ್ಕೆಯೆ
ಮಡದಿಯ ಕರಕಂಪನಕ್ಕದೇಂ ನೆರಮಾಯ್ತೋ || ೧೭

ವ || ಅಂತುಮಲ್ಲದೆಯುಂ-

ಮ || ಪ್ರತಿಬಿಂಬಚ್ಛಲದಿಂ ಬೆಮರ್ತ ಕುಚದೊಳ್ ತಳ್ಪೊಯ್ದ ತನ್ನೋಪನಂ
ಸತಿ ನೀಡುಂ ಮಱೆಮಾಡಿ ಚುಂಬಿಸಿದಪಳ್ ಸಾರ್ದೆಂಬಿನಂ ಸುಯ್ಯೊಳೆ
ತ್ತಿ ತೆರಳ್ವಂಶುಕಮಂ ಕುಚಕ್ಕೆ ನವಲಜ್ಜಾನಮ್ರವಕ್ತ್ರಾಬ್ಜೆ ಸಾ
ರ್ಚುತುಮಂದೋಪನ ಕೆಯ್ಗೆ ಸಾರ್ಚಿದಳನಂಗ ಪ್ರಾಜ್ಯ ಸಾಮ್ರಾಜ್ಯಮಂ || ೧೮

ಮ || ಸ್ರ || ಲುಳಿತಾಸ್ಯಸ್ವೇದದಿಂದಂ ಪರೆಯೆ ತಿಳಕಮಾಕಂಪದಿಂ ಜೋಲೆ ಕರ್ಣೋ
ತ್ಪಳಮಾಲಿಪ್ತಾಂಗರಾಗಂ ಮಸುಳೆ ಪುಳಕದಿಂ ಪಿಂಗೆ ಹರ್ಷಾಶ್ರುವಿಂ ಕ
ಜ್ಜಳಲೇಖಾಲಕ್ಷ್ಮಿ ಭೂಪಂಗೆಸೆದಳಬಳೆ ಚೆಲ್ವಿನ್ನೆಗಂ ಮಂಡನ ಶ್ರೀ
ಯೊಳಡಂಗಿರ್ದತ್ತಿದೆಂಬಂತೊಲವಿರೆ ಸತಿಯರ್ಗೇಕಳಂಕಾರ ಭಾರಂ || ೧೯

ವ || ಅಗಳತನು ಸಮ್ಮೋಹನಶಿಳೀಮುಖ ವಿಮೂಢೆಯಾದ ಮುಗ್ಧೆಯಂ ಸಂತಯ್ಸಲು ವಯಸ್ಯೆಯಂತೆ ಸಾರ್ತಂದಮರೆಯುಮುತ್ಕಳಿಕಾದಿಗಳ ಗಡಣದಿಂ ತನ್ನನಿ ೞಿಕೆಯ್ದಗಲ್ಕೆಯಿಂ ತತ್ಕ್ಷಣದೆ ಚೇತೋಭವ ಪ್ರಭವಪರಿಭವಾಕ್ರಾಂತೆಯಾದ ನಿಜವಯಸ್ಯೆಯಂ ಚಿರಪರಿಚಯೋಪರೋಧದಿನಾರಯ್ಯಲೆಳಸಿದಂತಿರೆೞ್ತಂದ ಲಜ್ಜೆಯುಂ ತದನುಚರನಿರತವೃತ್ತಿ ಯಪ್ಪುದಱಿನಿರದೆ ಲಜ್ಜೆಯಬೆಂಬೞಿಯೊಳ್ ಎಳಸಿದವಹಿತ್ಥಮುಂ ಮೊದಲಾಗೆ ಪೆಱವುಮುಚಿತಭಾವಂಗಳಾವರಿಸೆ ತತ್ಕ್ಷಣಂ ತದಧೀನಮಾನಸೆಯಾದಂತೆಗೆಯ್ದು-

ಚಂ || ಒಗೆದ ಬೆಮರ್ ಸಖೀಜನದ ಸಂದಣಿಗುಮ್ಮಳಿಪಂತೆ ಗೆಯ್ವರ್
ಯ್ಮಿಗೆ ನಿಡುಸುಯ್ಯೆಲರ್ ಬೆಮರ ಬಿಂದುವನಾಱಿಸಲೂದುವಂತೆ ಗೆ
ಯ್ವುಗೆ ನಯನಾಂಬುಗಳ್ ಕುಸುಮದಾಳಿಗೆ ಪೆೞ್ವಳಿಪಂತೆಗೆಯ್ವ ಮಾ
ೞ್ಕೆಗಳೆ ನಿಜೋತ್ಥ ಮನ್ಮಥವಿಕಾರಮನಿರ್ಮಡಿಸುತ್ತುಮಿರ್ಪಿನಂ || ೨೦

ಅನಿಯತಮಾಳಿಯೊಳ್ ಬಱಿದೆ ಸಾರ್ಚುವ ದೂತಿಯನೇನನಕ್ಕೆ ಕೆ
ಮ್ಮನೆ ಬೆಸಗೊಳ್ವ ಮೇಳದವಳಂ ಪಿಡಿದಬ್ಜದೆ ಪೊಯ್ವ ಕುಳ್ಳಿರು
ತ್ತನುವಿಸಿ ಪೋಪಮೆಂಬ ಮಗುೞ್ದೀಕ್ಷಿಸಿ ಮಾಡಮನೊಲ್ದು ಬಣ್ಣಿಪೀ
ಬಿನದದೆ ಕಾಂತೆ ಕಂತುನಟನಾಡಿಸುವಂದದಿನಾಡುತಿರ್ಪಿನಂ || ೨೧

ಕಂ || ತರಣಿ ವಧೂವರರ ಪರ
ಸ್ಪರ ನಯನಪ್ರೀತಿ ದರ್ಶನೋದ್ದೀಪಿತ ರಾ
ಗರಸೋತ್ಯಂಠಿತನಾದಂ
ತಿರೆಳಸಿದಂ ಮೆಲ್ಲನಂದು ಸಂಧ್ಯಾವಧುವಂ || ೨೨

ಇನನಿಂ ನೀರ ಕರಸ್ಪ
ರ್ಶನದೆ ಬೆಮರ್ಪೀ ವಿಳಾಸವತಿಯರ ಸೋಂಕಿಂ
ದನುರಕ್ತನಾದೆನೆಂಬ
ರ್ತಿ ನಿಮಿರ್ದವೋಲ್ ದಿವಸಲಕ್ಷ್ಮಿಯುಂ ಬಡವಾದಳ್ || ೨೩

ವ || ಅನಂತರಂ ತತ್ಕ್ಷಣದೊಳೊದವಿದ ನಿಜತ್ರಪಾಚ್ಯವನಮಂ ಮುಚ್ಚಲಱಿಯದೇವಯ್ಸಿ ಬೆಳಗಿಂಗೆ ಮುಳಿದು ತನ್ನನಡರೆ ನೋಡುವ ಖಗೇಶ್ವರಾತ್ಮಜೆಯ ಕಡೆಗಣ್ಣಕೆಂಪಿನೊಳ್ ಪುದಿದನೆಂಬಂತೆಯುಂ ಬಿಸಿಲೊಳ್ ಬೆಮರ್ತ ವಿದ್ಯಾಧರಪ್ರಮದೆಯರ ಕದಪುಗಳ ಕುಂಕುಮದ್ರವಮನಾತ್ಮಪ್ರಸಾರಿತ ಕರಂಗಳಿಂ ತೆಗೆದಣ್ಪಿಕ್ಕಿಕೊಂಡನೆಂಬಂತೆಯುಂ ಆಗಳಾ ಗಳಗಲಲಾಱದೆ ನಿಜಕರಂಗಳಿಂ ಬರೆತೆಗೆದು ಪದ್ಮಿನಿಯನಮರ್ದಪ್ಪಿ ತತ್ಪರಾಗಾಂಗ ರಾಗದೊಳ್ ಪೊರೆದನೆಂಬಂತೆಯುಂ ವಿಪಾಕಪರಿಣತಸಾರಂಗರಂಗಮಂ ತಳೆದು ಭೂಭುವನಮನಿತುಮಂ ಪರಿಮುತ್ತುಗೊಳ್ವ ಕೞ್ತಲೆಯ ಭಯದಿಂ ನಭೋಲಕ್ಷ್ಮಿ ಸಕಳಪ್ರಕಾಶಮಂ ಮೊಟ್ಟೆಗಟ್ಟಿ ಪಕ್ಕೆವೆಟ್ಟದಿಟ್ಟೆಡೆಗೆ ಕಳಿಪಿದ ಕಟ್ಟೆವದ ಪೊಟ್ಟಳಮಿಂದೆಬಿನಂ ದ್ಯುಮಣಿ ಚರಮಾಚಳಶಿರೋಮಣಿಯಪ್ಪುದುಂ ಕಲ್ಲಕವಿಯ ಕುಸುಕುಱ ಕೋಣೆ ಗಳೊಳೊತ್ತುಗೊಂಡ ಕೞ್ತಲೆಯ ಮೊತ್ತಕ್ಕೆ ಮಾರ್ತಂಡಂ ಕ್ಷೀಣಮಾದುದು ಪೇೞ್ದು ಪೊಱಮಡಿಸಲ್ ಪರಿವ ಪೇರಿಗರಂತೆ ಕೇಳೀಕಪೋತಂಗಳುತ್ತುಂಗ ಕೃತಕ ಕುತ್ಕೀಳಕೂಟ ಕುಹರಂಗಳಂ ಸಾರೆಯುಂ ಬನದ ಕುಂಜದೊಳ್ ಕೊಂಬುಗೊಂಡ ಕೞ್ತಲೆಯ ಪೊೞ್ತಿನ ಬಲದಿನಿನಕರಾನೀಕಮನವುಂಕಿ ಬೆಂಕೊಂಡಳ ಱೆ ಸೂ ೞೈಪ ಸಣ್ಣ ಗಾಳಿಯಲಿಯೆನಿಸಿ ಗೂಡಿಂಗೆ ಸಾರ್ದುಲಿವ ಪಕ್ಕಿಗಳ ಕಳಕಳಂ ಬಳೆಯೆಯುಂ ತತ್ತಮೋಬಳದ ಮುಂದೂಳ ದಾೞಿಯಾಳ್ಗಳಂತಿರೋಳಿಯೊಳ್ ಕೇಳೀಮಯೂರಂಗಳ್ ಉದ್ದಮೊಗೆದು ಪೊಂಗಡೆಯ ಪಕ್ಕಿವಣೆಗೆ ಪಾಱೆಯುಂ ಇನನುಱಿದು ಪೋಪುದುಂ ಪಾರ್ದು ಪದ್ಮಿನಿಯೊೞಿಪಿ ನೆರೆವಾಸೆಯಿಂ ದೋಷಾಕರನೆ ಬನದಮಱೆಯೊಳೆಳಸಿದಪನೆನಿಸಿ ಖೇಚರೀಚಪಳನೂಪುರ ಕ್ವಣನಪರಿಚಯೋಪವೃತ್ತಿಕರ ಮರಾಳಮಬ್ಜಾಕರಕ್ಕೆ ನಡೆಯಲೊಡರಿಸೆಯುಂ ತಮ್ಮ ಮೆಯ್ವೊರೆದ ರವಿಕಿರಣಕವಚಮೊರ್ಮೊದಲೆ ತೊಲಗೆ ತೆಱಪುಗಂಡು ತೂಳ್ದಿ ಸುತ್ತಿ ಮಱೆಯಟ್ಟುವಂಗಭವನಾಱಡಿಗೆ ಬೆಗಡುಗೊಂಡು ತಲ್ಲಣಿಸಿದಂತೆ ನಲ್ಲಳಂ ಬಿಸುಟು ದೆಸೆಗೆಟ್ಟು ಚಕ್ರವಾಕಂ ಕೋಕನದಸದನಡಿನೆೞ್ದು ಪೋಗೆಯುಂ ಮೃಗಧರಮಯೂಖಂಗ ಳೆತ್ತಾನುಮಿಂತಿವಂ ಕಂಡೊಡಾಗಳಂತೆ ಸಂತಮಸೆ ಸಂತಾನಸಂಕೆಯಿಂ ಪಿಡಿಗುಮೆಂದು ಮ್ಮಳಿಸಿ ತಮ್ಮ ತನಿವಂಡನೂಡಿ ನಡಪಿದ ಮೋಹದಿಂ ಬಸಿಱೊಳಗೆ ಬಯ್ತು ಮುಚ್ಚು ವಂತಿರಳಿವಳಗಮನೊಳಕೊಂಡು ನಳಿನಿಗಲ್ ಮುಗಿಯೆಯುಂ ಪಗಲೊಳೊರ್ಮೆಯುಂ ತಮ್ಮನಂಡಲೆದು ಬಂಬಣ ಬಾಡಿಸಿ ಬಿಡದೆ ಕಸುಗಾಯ್ದು ಕಣ್ಣೊಳುೞ್ಕುವುಷ್ಣಕರನ ಬಿಸುಗದಿರ್ಗಳೆಯ್ದೆ ಮೆಯ್ದೆಗೆದುವೊ ಬನದೊಳಿರ್ದುವೊ ಮತ್ತ ಮತ್ತಮೆಂಬುದಂ ಮೆಲ್ಲನೀಕ್ಷಿಸಲುಂ ಮಿಳ್ಮಿಳಿಸಿ ಕಣ್ದೆಱೆವ ತೆಱದೆ ಸಂಪಗೆಯ ಮಲ್ಲಿಗೆಯ ಮುಗುಳ್ಗಳುಳ್ಳಲರೆಯುಂ ಉಲ್ಲಸಿತ ಸಾಂಧ್ಯಶೋಣಿಮಚ್ಛಲದೆ ಬಳಸಿದಂಗಭವ ಹುತವಹ ಶಿಖಾವಳಿಗೆ ಸುಗಿದು ಸುರ್ಕುವಂತಿರೆ ಶಿರೀಷಮಾಳತೀಪ್ರಭೃತಿ ತರುಲತಾಗುಚ್ಛಸಂಪುಟಂಗಳಮರ್ದು ಸಂಕೋಚಿಸೆಯುಂ ಉದ್ದೃಪ್ತ ಶೃಂಗಾರರಸಮಯಮುಮವಿರಾಮಕಾಮುಕ ಕದಂಬ ಕೋತ್ಕಳಿಕಾ ವಿಕಾಸಮಯಮುಂ ಆದ ಸಂಧ್ಯಾಸಮಯದೊಳ್ ತದುದ್ಯಾನವಿಷಯ ಮೌತ್ಸುಕ್ಯವಿಷಯಮುಮಾವೇಗವಿಷಯಮುಮುನ್ಮಾದವಿಷಯಮುಂ ವಿಮೋಹ ವಿಷಯಮುಮಾಗಿ ನಿಜಮಾನಸಾಂತರಾಳಮಂ ಭೋಂಕೆನೆ ಕಲಂಕಿ ನೆಲೆಗಿಡಿಸೆ-

ಉ || ಕೂಡುವ ಪಾರಿವಂಗಳುಲಿ ಕೇಳಿನಗಂಗಳೊಳುಣ್ಮೆ ಕೇಳ್ದಲಂ
ಪೋಡೆ ಕೊಳಂಗಳೊಳ್ ನೆರೆದು ಕಣ್ಗೆಯಲಾಟಿಪ ಹಂಸಯುಗ್ಮಮಂ
ನೋಡಿ ನವೋದಬಿಂದುಭರಮಂಥರದೃಷ್ಟಿಮರಳ್ದು ನಲ್ಲನಂ
ನೋಡಿದಳುರ್ವಿ ನೋಡೆ ಪೊರೆಯೇ ಱಿದ ತನ್ನಯ ಮುಯ್ವನಂಗಜಂ || ೨೪

ರಥೋದ್ಧತೆ || ಅನ್ನೆಗಂ ತಡೆದಮಾಟದರ್ತ್ಥಿಯಿಂ
ದಿನ್ನೆಗಂ ಬನದೊಳಾಡುತಿರ್ಪ ಪೊ
ೞ್ತನ್ನಿದಲ್ತು ನಡೆ ಪೋಪಮೆಂದು ತ
ನ್ನಂ ನಿಜಪ್ರಿಯ ಸಖೀಕದಂಬಕಂ || ೨೫

ಕಂ || ಅನುವಿಸೆಯುಮಿನಿಯನವಯವ
ಮನಡರ್ದು ತೊಡರ್ದಾತ್ಮ ದೃಷ್ಟಿಯಂ ತೆಗೆಯಲ್ ಕಾ
ಮಿನಿ ನೆಱೆಯಳೆ ತರುವನಡ
ರ್ದು ನಿಮಿರ್ದಲತೆಯಂ ಬೞಿಕ್ಕೆ ಬರ್ಕುಮೆ ತೆಗೆಯಲ್ || ೨೬

ಪೃಥ್ವಿ || ಅನಂತವಿಮುಖಾಬ್ಜದಿಂ ದಳಮೃಣಾಳಿಕಾನಾಳಮೆಂ
ಬಿನಂ ಬೞಿಯೊಳಬ್ಜವೀಕ್ಷಣ ದೃಷ್ಟಿಗಳ್ ನೀಳ್ದು ಬ
ರ್ಪಿನುಂ ತಿರಿಪಿದಳ್ ಮುಖಾಂಬುಜಮನೊಯ್ಯನೆಂತಾನುಮಾ
ತನೂದರಿವಳತ್ ಕಟಾಕ್ಷರುಚಿ ಸುತ್ತೆ ದಿಗ್ಛಿತ್ತಿಯಂ || ೨೭

ವ || ಅಂತು ಸಹಚರೀನಿಕರದ ನಿರಂತರೋಪರೋಧದಿನಸವಸಂ ಮಗುೞ್ದ ನಿಜ ಮನೋ ರಮಣನಂಗಯಷ್ಟಿಯೊಳು ನಟ್ಟದಿಟ್ಟಿಯಂ ಬರೆತೆಗೆದು ಬೞಲ್ದಂತೆಯುಂ ಬೞಿಯೊಳೆಳಸಿ ಬಳಸುವ ಸರೋಜಲೋಚನನ ದೃಷ್ಟಿಪಾತದೊಳ್ ತೊಡರ್ದು ತೊಡೆಗಳೊಳ್ ತೊಡಂಕಿದಂತೆಯುಂ ಮದನನಾಜ್ಞೆಯಂ ಮೀಱಿ ಪೋಗದಿರೆಂದು ಚಪ್ಪರಿಸುವಂ ತಿರಡಿಗಡಿಗೆ ಜಡಿವ ಕೋಗಿಲೆಯ ದನಿಯನನುಕರಿಸುವಾತ್ಮೀಯ ಪ್ರತಿಪದನ್ಯಸನಸಿಂಜಾನ ಮಂಜೀರಕೋತ್ಕಳಕಳಕ್ಕೆ ಸೈರಿಸದೆ ನಿಲಿಸುವಂತೆಯುಂ ಕರಮೆ ಮಂಥರಿತಮಂದಗತಿಯೊಳೆಂ ತಾನುಂ ತದುದ್ಯಾನ ಪ್ರತೀಹಾರ ಧಾರಿಣಿಯನೆಯ್ದಿ ತತ್ಪ್ರದೇಶದೊಳೆ ವನಪಾಳಕಂಗಂ ಮನೋಹರಿಗಂ ಮೆಚ್ಚಿದಂದದಿನುಡಲ್ಕೊಟ್ಟು ನಿಲಿಸಿ ನಿಜ ಖಚರಸಹಚರೀ ಸಮುದಯ ಸಮೇತಂ ಸ್ವಯಂಪ್ರಭೆ ನಿಜಶಿಖರ ರಾಜಭವನಕ್ಕೆ ಪೋಗೆ-

ಕಂ || ಅದೆ ಕೃಷ್ಣನ ತನುರುಚಿ ತ
ತ್ಸುದತಿಯ ಪೋಬೞಿಯನಱಸಳೆಳಸಿದುದೆಂಬಂ
ದದೆ ವನವೀಥಿಯನಂದೆಳ
ಸಿದುದವಿರಳಮಂಧಕಾರಮತಿದುರ್ವಾರಂ || ೨೮

ಚರಮಾತಪಮಿಷದಿಂದಳು
ರ್ದುರಿಪಿಯೆ ಬೆಂದಾಱಿ ಕಂದಿದಂದದಿನಖಿಳಾಂ
ಬರಮೇಂ ಕಱಂಗಿದುದೊ ಮೆ
ಯ್ವೊರೆದವಿರಳಮಾಗೆ ಪರೆದು ಪರ್ಬಿದ ತಮದಿಂ || ೨೯

ವ || ಮತ್ತಮಾಗಳಾಗಳಿಂದುವಿನ ನೆವದಿನುದಯಿಸುವ ಮದನಾನಳನ ಕರ್ವೊಗೆಯಿದೆನಿಸಿ ಬಿರಯಿಗಳ ಕಣ್ಗಳೊಳು ಕಣ್ಬನಿಯನೊದವಿಸೆಯುಂ ಸ್ಮರದಹನ ಧೂಮಪಟಳದೊಳ್ ಪುಟ್ಟಿ ಪುಂಶ್ಚಳೀಪ್ರಮೋದ ಬಾಷ್ಪಬಿಂದುಗಳ ತಂದಲಂ ಕಱೆವ ಕಾರ್ಮುಗಿಲ ಮೊತ್ತಮೆನಿಸಿ ಪಥಿಕಸಂಕುಳಮರಾಳ ಮಂಡಳಮನಳಱಿಸೆಯುಮುದಿತ ಸಂಧ್ಯಾ ಪ್ರದೀಪ ಸಂಜನಿತ ಸಿದ್ಧಾಂಜನಮಿದೆನಿಸಿ ಕೌಶಿಕಂಗಳ ಕಣ್ಗಳ ತಿಮಿರಮಂ ಪರಯಿಸೆಯುಂ ಬಿರಯಿಗಳ ಕಣ್ಣೀರಪೂರದೊಳ್ ಬಳೆಯಿಸಿದ ಮನಸಿಜನ ಕೇಳೀತಮಾಳ ಮಂಜರಿ ಯಿದೆನಿಸಿ ವಿಸರದಭಿಸಾರಿಕಾಲೋಚನ ಚಂಚರೀಕನಿಕರಮಂ ನಲಿಯಿಸಿಯುಂ ಉರ್ವರೆಯುಳುರ್ಬ್ಬರಮುರಿದು ನಂದಿದುಷ್ಣಕರನ ಬಿಸುಗದಿರ ಮಸಿಯ ರಾಶಿಯೆನಿಸಿ ನಿಜಸಂಗತಿ ವ್ಯತಿಕರದೊಳಖಿಳ ಲೋಕಮಂ ಕಱಂಗಿಸಿಯುಂ ಅಭಿಮತ ರತೋತ್ಸುಕ ಸ್ವೈರಿಣೀ ಸಂತತಿಗತಂತುಮಯ ನೀಳಚೇಳಮುಮಕಲ್ಕಮಯ ಕಸ್ತೂರಿಕಾಪಂಕಮು ಮಗ್ರಾವಮಯ ಮಹಾನೀಲಮಣಿ ಭೂಪಣಮುಮೆನಿಸಿ ಸಕಳ ಲೋಕಾವಳೋಕಲುಂ ಟಾಕಮುಂ ಅಭಾವೀಕೃತಾಖಿಳ ಭಾವಮುಂ ಅಖಿಳ ವರ್ಣಭೇದ ಭ್ರಂಶಕಮುಮಪ್ಪ ಭೂರಿತಮಂ ತಮಮಶೇಷ ಭುವನೋದರಮನಾವಗಂ ತೀವೆ-

ಕಂ || ಮೃಗಮೆಲ್ಲಂ ಕೃಷ್ಣಮೃಗಂ
ಖಗಮೆಲ್ಲಂ ಕೋಗಿಲೆಯೆ ನದೀನದಮೆಲ್ಲಂ
ಜಗುನೆಯ ಗಿರಿಯೆಲ್ಲಂ ನೀ
ಲಗಿರಿಯೆ ಧಾರಿಣಿಯೊಳೀಗಳೆನಿಸಿದುದಾಗಳ್ || ೩೦