ಶ್ರೀದನುಜಾರಿಯ ಪರಿಣಯ
ನೋದಯಮಂ ಮೆಱೆಯಲೆಂದು ಖಗಪತಿ ಸದನ
ಕ್ಕಾದರದೆ ಪೋಗಲುದ್ಯತ
ನಾದಂ ವಿಭು ಪಂಚಪರಮಗುರುಪದವಿನತಂ || ೧

ವ || ಅಂತಾ ಪೋದನಪುರವರಾಧೀಶ್ವರಂ ಸಂಭ್ರಮಕೃತಪ್ರಸಾಧನಂ ಪೂರ್ವ ನಿರ್ವರ್ತಿತ ಜಿನರಾಜಪೂಜಾವ್ಯಾಪಾರಾಪಾರಸೌಖ್ಯಕರಮುಖ್ಯಮಂಗಳನಖಿಳರಾಜ್ಞೀಜನ ಪ್ರಧಾನ ಜನ ಕುಮಾರಜನ ಪರಿಜನ ಬಂಧುಜನಸಹಸ್ರಂಬೆರಸು ಬಂದು ವರನಂ ಪರಸಿ ಸೇಸಿಕ್ಕಿ ಮುಂದಿಟ್ಟು ನಡೆಯೆ-

ಕಂ || ವಿವಿಧಾತೋದ್ಯರುತಿಪ್ರತಿ
ರವಮಿಷದಿಂ ಕುಳಕುಭೃತ್ಕುಳಂ ಗೋತ್ರಕುಭೃ
ನ್ನಿವಹಕ್ಕಿದುಚಿತಮೆನೆ ಪರಸೆ
ವಿವಾಹಗೃಹಕ್ಕೆ ನಡೆದನಾಗಳುಪೇಂದ್ರಂ || ೨

ವ || ಅಲ್ಲಿ ಸುರಜಾಪಶಕಲಂಗಳೊಳ್ ತಡಂಗಲಿಸಿ ಮಿಳ್ಳಿಪ ತಟಿಲ್ಲತೆಗಳೆನಿಸಿ ಮಣಿಕನಕ ಭಾಜನಂಗಳೊಳ್ ಪಟ್ಟಸೂತ್ರದ ನೇತ್ರದ ಚೀನದ ಮಹಾಚೀನದ ದೇವಾಂಗದ ಮಂಗಳ ಜವಳಿಗಳನಾಂತು ಬರ್ಪ ಕಾಂತೆಯರೆ ಚಿತ್ರಪಟಚಿಹ್ನಾವಳಂಬಿತ ವಿಜಯ ಕೇತನಂಗ ಳಾಗೆಯುಂ ಕರ್ಬಿನ ಕೋಲ್ಗಳುಮಲರಬ್ರಾಸಿಗಮುಮನಾಂತು ಬರ್ಪ ಕುಲಯುವತಿ ಲೋಕಮೆ ನಿಜಧನುರ್ಧರ ಲೋಕಮಾಗೆಯುಂ ಮಣಿಪಟಳಿಕಾಕಳಿತ ಮಾತುಳುಂಗ ನಾರಂಗರಂಭಾದಿ ಮಂಗಳಫಲಪ್ರಸೂನ ಭಾರದಿಂ ಭುಜಲತೆಯನಳಂಕರಿಸಿ ಬರ್ಪ ಗಣಿಕಾಚಯಮೆ ಸುರಭಿಸಮಯಮಾಗೆಯುಂ ಧವಳಾವಹಿತ ಮಂಗಳಗಾಯಿನೀ ಕುಳಮೆ ಕಳಕಂಠಕುಳಮಾಗೆಯುಂ ಎತ್ತಿದ ಮುತ್ತಿನ ಸತ್ತಿಗೆಯ ನೆಱೆದಿಂಗಳಾಗೆಯುಂ ಬಳಸಿ ಪೊಳೆವ ದುಗುಲದ ಕಾಂಡಪಟಮೆ ಚಂದ್ರಿಕಾಪಟಳಮಾಗೆಯುಂ ಮನೋಜರಾಜನೆ ಜಗದ್ವಿಜಯ ಕೇಳೀಕುತೂಹಲದಿನೆತ್ತಿನಡೆದಪನೆನಿಸಿ ನಡೆತಂದು ತದ್ವಿವಾಹಮಂಡಪಮಂ ಪುಗುವನ್ನೆಗಂ-

ಉ || ಪೂವಲಿಗೆಯ್ವ ರಂಗವಲಿಯಿಕ್ಕುವ ಕಾಲ್ಪಳಿಗೊಳ್ವ ಬಾಯಿನಂ
ದೀವುವ ಲಾಜೆಯಂ ಸಮೆವ ಬಣ್ಣವುರಂಗಳನೊಪ್ಪೆ ಮಾೞ್ಪ ನಾ
ನಾವಿಧ ಮಂಗಳಾಚರಣ ದಕ್ಷೆಯರಿಂ ಪತಿಪತ್ನಿಯರ್ಕಳಿಂ
ತೀವಿ ಜನಾವಳೋಕ ಹೃದಯಾಸ್ಪದಮಾಯ್ತು ವಿವಾಹಮಂಡಪಂ || ೩

ವ || ಮತ್ತಮದು ವಿವಿಧ ಮಣಿವಿತಾನ ವಿರಚಿತ ಚಿತ್ರಪತ್ರಪುತ್ರಿಕಾ ಪ್ರತಿಬಿಂಬಚರ್ಚೆಗಳ್ ರಂಗವಲ್ಲಿಯ ಚೆಲ್ವನಿತ್ತಪುವು ಮತ್ತೇಕೆ ಕೆಮ್ಮನೆ ನಿಮ್ಮ ಕೈವೆಸದ ಗಸಣೆ ಎಂದು ತಡೆಯಿಕ್ಕ ಲೊಡರಿಸುವ ಬಾಲೆಯರ್ಗೆ ಪೇೞ್ವಂತೆ ನೀರ್ದಳಿದ ಕತ್ತುರಿಯ ಕಂಪಿಂಗೆ ಮುಸುಱಿ ಮೊರೆವಳಿಗಳಿಂ ಕೞ್ತಲೆಯ ತಾಯ್ವನೆಯೆನಿಪ್ಪ ಹರಿನೀಳಘಟಿತಕುಟ್ಟಿಮದೊಳಂ ವಯೋವರ್ಣ ಸ್ವಭಾವ ಚೇಷ್ಟೆಗಳಿನನುರೂಪಮಾಗೆ ಬರೆದ ಜಾತಿವಿದ್ದಂಗಳೆ ನಿಜಪ್ರದೇಶ ಶುದ್ಧಿಯೊಳಂ ತನ್ಮಯಮಾದ ಚಿತ್ರಿಕನ ಭಾವಶುದ್ಧಿಯೊಳಂ ಜೀವಂಬಡೆದು ಸುೞಿದಪ್ಪು ವೆನಿಸಿ ಮಾರ್ಪೊಳೆವ ಪರಿಜನಪ್ರತಿಕೃತಿಗಳಿಂ ಕಣ್ಗೊಳಿಪ ನಿರ್ಮಳ ಸ್ಪಟಿಕಭಿತ್ತಿಗಳೊಳಂ ಆತ್ಮೀಯ ಮಣಿವಿತಾನರಚನೆಯಂ ನಭೋಮಣಿಯ ಮಣಿವಿತಾನರಚನೆಯೊಳ್ ಪಡಿಯಿಟ್ಟು ನೋಡಲ್ಕೆ ನೀಳ್ಕಿ ನೆಗೆದಂತಿರತ್ಯುನ್ನತಂಗಳಾಗಿ ಪಂಚರತ್ನರುಚಿರಂಗಳುಂ ಪಂಚಾವಯವ ಚಂಚುರಂಗಳುಮಪ್ಪ ಕಾಂಚನಸ್ತಂಭ ಮಾಳೆಗಳೊಳಂ ಪಂಚಾಂಡಕ ಚತುರ್ವೃತ್ತಿ ಚತರುರಶೀತಿಸ್ಥಾನದೊಳುಚಿತ ನಿರ್ಗಮಕ್ಷಪಣೆಗಳನಳವಡಿಸಿ ಸುತ್ತುಗತ್ತರಿಗೆ ವರೆಗೊಯ್ದ ಕರುವೆಸನಿದೆನಿಸಿ ಸುವ್ಯಕ್ತಮಾದ ನಿಮ್ಮೋನ್ನತ ಪ್ರಸಾರಿತ ನಿಕುಂಜಿತಪ್ರದೇಶ ಶುದ್ಧಿಯುಂ ತೊಡೆವ ಬೆರಸುವ ತೆರಳ್ಚುವಿಡುವರ್ಣದ ತೆಳ್ವರ್ಣದದರ್ದ್ಧೋದಕದ ಬಹುವಿಧದ ವರ್ಣಕ್ರಮಮುಂ ಛವಿಯಿಡುವ ಕೊರ್ವಂ ಕಟ್ಟುವ ಹೊಗರೆತ್ತುವ ಪಲವುಂ ತೆಱದಣ್ಕೆಯುಂ ವಿವಿಧ ಕಂಪನಸ್ವೇದ ರೋಮೋದ್ಗಮಾವೇಗ ಜೃಂಭಣ ಭ್ರೂಕಟಾಕ್ಷ ವಿಕ್ಷೇಪಣಾದಿ ಸಕಳ ಭಾವಾನುಕರಣಕ್ಕುದಾಹರಣಮಾದ ರಸಭಾವಪೋಷಮುಂ ನಿರವಧಿ ಚಮತ್ಕಾರಮಂ ಪಡೆಯೆ ನೋಡೆ ನೋಡುವ ನುಡಿಯೆ ನುಡಿಯಿಸುವ ಬಗೆಯನೊದವಿಪ ಸಜೀವಭಾವಮುಮಂ ಪೆಸಗೊಳ್ವ ಕರೆವ ಸಂಭ್ರಮಿಪ ಕೆಯ್ತಮಂ ಪುಟ್ಟಿಸುವ ಜಾತಿ ವಿದ್ಧಮುಮಂ ಅತಿಶಯಿಸಿ ಬರೆದ ಸಚಿತ್ರರಚನೆಯಮದರ್ಕ್ಕೆ ದೊರೆಯಲ್ಲಿದೆನೆ ವಿನಿರ್ಮಿಸಿದ ಸುಯ್ಯಾಣವೆಸದ ಕತ್ತರಿವೆಸದ ಕತ್ತರಿವೆಸದ ಮಣಿವೆಸದ ಮೇಲ್ಗಟ್ಟಿನೊಳಂ ಮಂಡಪಶ್ರೀಯ ಕಂಠಿಕಾಮಾಳೆಗಳೆನಿಪ್ಪ ವಿವಿಧಮಣಿತೋರಣಂಗಳೊಳಂ ಅಂಬರ ಸರೋವರದ ಕೆರೆತುಱುಗಲಿಂ ತೀವಿ ನಿಮಿರ್ದು ಮಿಳ್ಳಿಸುವ ಪಲತೆಱದ ಪೞಯಿಗೆಗಳೊಳಂ ಶಾರದತರಂಗಿಣಿಯ ಪೂರದೊಳ್ ಪೊಳೆವ ಪುೞಿನದ ವಿಳಾಸಮಂ ತಾಳ್ದಿ ನೀಳಾತ್ಮಕುಟ್ಟಿಮದ ಮಧ್ಯರಂಗದೊಳ್ ರಾಜಹಂಸಯುಗ್ಮ ಸಂಗಮನ ರಮಣೀಯ ಮಾಗಿ ಮನಸಿಜನ ಸಾಮ್ರಾಜ್ಯಪೀಠಿಕೆಯೆದೆನಿಸಿ ಕಣ್ಗೊಳಿಪ ಪೞಿಕಿನ ವಿಶಾಳ ವೇದಿಕೆಯೊಳಂ ಬಳಸಿಯುಂ ಬೆಳಪ ನೀರಾಜನ ಪ್ರದೀಪಿಕಾ ಪ್ರತಿಬಿಂಬರಾಜಿಯಿಂ ಮನೋಜ ಪೂಜಾಮಹೋತ್ಸವದೊಳ್ ಉಜ್ಜಳಿಪ ದೀಪಮಾಳೆಗಳಿವೆನೆ ಮನಂಗೊಳಿಪ ಭೃಂಗಾರ ಮಣಿಕಳಶ ಭಾರಂಗಳೊಳಂ ಭಾರಂಗಳೊಳಂ ಕುಸುಮಸರನ ಪಸುರ್ಗಣೆಯ ಪೊದೆಗೆ ಪುರುಡಿಸುವ ಜಾಗದ ನೆಲೆಯ ಹಡಲಿಗೆಗಳೊಳಂ ಉಚಿತ ಪ್ರದೇಶದೊಳ್ ನಿರ್ಮಳ ದುಕೂಳ ಪ್ರಚ್ಛದಾಚ್ಛನ್ನ ಮನಸಿಶಯ ಪರ್ಯಂಕಮಂಡಳಮಿದೆನಿಸಿ ಪಾಸಿದ ದಳಿಂಬದೊಳಂ ಸಜ್ಜಿತಮನೋಜವಿಜಯರಥಮೆಂಬಂತಿರರ್ಚಿಸಿರ್ದೈರಣೆಯೊಳಂ ಜಗದಾರಾಧ್ಯನಪ್ಪ ಚಕ್ರಧರನ ಪರಿಣಯನ ಪರಮೋತ್ಸವಕ್ಕೆ ನೆರೆದುಬರ್ಪ ನಾಗಕುಲದ ಪೆಡೆವಣಿಯ ರಾಜಿಯೆನೆ ರಾಜಿಸುವ ನೀರಾಜನ ಪ್ರದೀಪ ಪಡದೊಳಂ ಅವನೀ ವಿಳಾಸಿನಿಯ ರನ್ನದ ಕನ್ನವುರಮಿಂತಿವೆನಿಪ ಬಣ್ಣವುರದ ಪರಿಯಣಂಗಳೊಳಂ ಮತ್ತಂ ಪಲವು ತೆಱದ ಬಾಯಿನಂಗಳ ಫಳಾವಳಿಗಳಿಕ್ಷುದಂಡಂಗಳ ಮಂಗಳದ್ರವ್ಯಂಗಳ ತಿಳ ಯುವ ಪ್ರಭೃತಿ ಧಾನ್ಯಪಾತ್ರಂಗಳ ಸಿರಿಗನ್ನಡಿಯ ತಳಿರ್ಗಳಶದ ವಿಳಾಸದೊಳಮಸದಳಮಾಗಿ-

ಕಂ || ಒಸಗೆಯ ಮುಂಗುಡಿ ಚೆಲ್ವಿನ
ಪಸರಂ ಮಂಗಳದ ಬೆಳಸು ರಾಗದ ಮಡು ಸಂ
ತಸದ ಸಿರಿ ಸಿರಿಯ ಮೆಯ್ಸಿರಿ
ಪಸುರ್ವಂದರ್ ನೃಪನ ಕಣ್ಗದೇಂ ರಂಜಿಸಿತೋ || ೪

ವ || ಅಂತು ಸೊಗಯಿಸುವ ಪರಿಣಯನ ಮಣಿಮಂಡಪಮನಾತ್ಮ ಪ್ರತಿಬಿಂಬದಿಂ ಹೃದಯಂ ಬೊಕ್ಕನೆನಿಸಿ ಪುಗುತರ್ಪ ಮನುಕುಲಮನೋಜನಂ ಜ್ವಳನಜಟಿಮಹಾರಾಜಂ ಮಹಾ ವಿಭೂತಿವಿಹಿತ ನಿಜಕುಲೋಚಿತಾಚಾರ ಜಿನರಾಜಪೂಜಾವಿಧಾನಮಂಗಳನತಿ ಸಂಭ್ರಮ ದಿನಿದಿರ್ಗೊಂಡು ತಾನೆ ಕೆಯ್ಗೊಟ್ಟು ತಂದು ಶರದಾಕಾಶಮಂಡಳದ ಶಶಿಮಂಡಳಕ್ಕೆ ಮಾಱಂಡಳಮಾಗಿ ಹರಿನೀಳಕುಟ್ಟಿಮದೊಳಿಟ್ಟಣಮಾದ ಪೞಿಕಿನ ಪಟ್ಟವಣೆಯ ಪಸೆಯೊಳಿರಿಸಿ ಪರಮೋತ್ಸವದಿನರ್ಘ್ಯಪಾದ್ಯಾದಿ ಸಮುಚಿತ ಸಪರ್ಯೋಪಚಾರಮಂ ಪ್ರವರ್ತಿಸುತ್ತುಮಿರ್ದನತ್ತಲನ್ನೆಗಂ ಮುನ್ನಮಾತ್ಮೀಯ ನಿವಾಸದಲ್ಲಿ-

ಕಂ || ಸುಮನಃಶರಮಿವು ಕನ್ಯಾ
ಭಿಮಾನದಾಜ್ಞೆಗೆ ಪಳಂಚಲಣ್ಮದೆ ಸುತ್ತುಂ
ಭ್ರಮಿಯಿಸಿದಪುವೆನೆ ಸತಿಯರ್
ಕುಮಾರಿಗರ್ಚಿಸಿದ ಶರದೆ ನೆಯ್ಯೇಱಿಸಿದರ್ || ೫

ವ || ತದನಂತರಂ-

ಚಂ || ಇರೆ ಪರಿವೇಷ ಮಧ್ಯದ ಸುಧಾಕರಲೇಖೆವೊಲಾಗಳೊಪ್ಪಿ ಭಂ
ಗುರತನು ತನ್ವಿ ಸುತ್ತಿ ಕಡೆಯಿಕ್ಕಿದ ರತ್ನಚತುಷ್ಕದಿಂ ವಿಯ
ಚ್ಚರಸುತೆ ಮಜ್ಜನಂಬುಗಿಸಿದರ್ ಕುಲಕಾಂತೆಯರಾನಕಸ್ವನಾಂ
ತರಿತವಚೋವಕರ್ಣನ ಪರಸ್ಪರ ಹಾಸವಿಘೂರ್ಣಿತಾಸ್ಯೆಯರ್ || ೬

ಕಂ || ಕಾಳಿಂದಿಯ ಪೊನಲೊಳ್ ಝಷ
ಮಾಳೆ ತೆಱಂಬೊಳೆವ ತೆಱದೆ ಪೊಳೆಯೆ ನಖಂ ಕೇ
ಶಾಳಿಯೊಳಗುಲಿಯೆ ಕಂಕಣ
ಮಾಳಿಕೆ ತಲೆವಿಕ್ಕಿದಳ್ ಪೆಱಳ್ ಬಾಳಕಿಯಾ

ಕಂ || ಪುದಿದಲರ್ಗಣೆಯಿಂ ತೀ
ವಿದ ಮದನನ ತವದೊಣೆಯಿದೆನಿಸಿ ಕೇತಕಿ ಪ
ತ್ರದ ಕುತ್ತುಂಗಱಿಯಿಂ ಮುಡಿ
ಸುದತಿಗೆ ಬಂದೊರ್ವಳಬಲೆ ಪೂಮುಡಿಯಿಸಿದಳ್ || ೮

ಕರತಳಮರೀಚಿ ವದನಾಂ
ಬುರುಹಕ್ಕೆಳವಿಸಿಲ ಸಿರಿಯನೋಲಗಿಸೆ ವಿಯ
ಚ್ಚರಿ ತಿರ್ದಿ ಕಟ್ಟಿದಳ್ ತೊಡೆ
ದುರುಳಿಗುರುಳ್ಗಳನದೊರ್ವಳಳಿಕುಂತಳೆಯಾ || ೯

ವ || ಮತ್ತಂ ನನೆಗಣೆಗಳ ಬೆಡಂಗನಂಗುಳಿಗಳಿನೆಳೆದುಕೊಂಡವೆಂನಂ ನಖಮಯೂಖದಿಂ ನಕ್ಕಪುವೆಂದು ನಡೆನೋಡಿ ಕಡುಪಿಂ ಕಿಸುಗಣ್ಚಿದಿಕ್ಷುಜಾಪನ ಕೋಪರಸ ನಿಷಿಕ್ತಾರಕ್ತ ಲೋಕನಾಂಚಳದ ಸೋಂಕಿಂ ಕೆಂಕಮಾದುದೆಂಬ ಸಂಕೆಗೆಡೆಯಾಗಿ ರಾಗರಸದಾಗರಮಪ್ಪ ವಲ್ಲಭನ ಮನಮನಾಗಳಾಗಳೆ ತೊೞ್ತುೞಿದು ೞಿದು ಬಂದಳೆನಿಸಿ ಪದನಿಕ್ಕಿದ ಲಾಕ್ಷಾರ ಸದಿನಂಘ್ರಿತಳಮನಡಿಯೂಡಿಯುಂ ಪದನಖಮಯೂಖಲೇಖಾಚ್ಛಲದಿನಂಗುಳಿ ಪ್ರಣಾಳಿಕೆಗಳೊಳ್ ತಿಳಿವಾಲ ಪೊನಲಂಬಿಟ್ಟು ಬಿನದದಂಚೆಗಳನಿಂಚರದ ಪದಿರೊಳ್ ಕರೆವ ಪದಪಯೋಜಲಕ್ಷ್ಮಿಯ ಮೃದುನಿನದಮೆನಿಸಿ ಮಂಜ ಮಂಜೀರಕದ ಮಂಜು ಸಿಂಜಿತದಿನಂಗಜಮತಂಗಜಕ್ಕೆ ಮದಡಿಂಡಿಮದ ನೂಪುರಮನಂಘ್ರಿಸಂಗತಿಯಿನತಿ ಶಯಿಸಿಯುಂ ಮೇಲೆ ಮಿಸುಗುವುಡೆನೂಲ ಪಸುರ್ವರಲ ರಶ್ಮಿಗಳಿನೆಳೆವಸುರನೊಳಕೆಯ್ದು ದುಗುಲದುಡೆಯಿನೊಳ್ದೊಡೆಯೆಂಬ ಹೊಂಬಾೞೆಯ ಕಂಭಕ್ಕೆ ಕೋಮಳ ದಳವಿಳಾ ಸಮಂಪಡೆದುಂ ಘನಕುಚಮೆಂಬ ಮನಸಿಜನ ಕೃತಕಾಚಳದಿನಿೞಿದು ನಾಭಿಕೂಪಮಂ ತೆಕ್ಕನೆ ತೀವಿ ಕಾೞ್ಪುರಂಬರಿವ ಲಾವಣ್ಯರಸದ ಬರಿವೊನಲಂ ಕಟ್ಟೆಗಟ್ಟಿ ಕಡೆಗೋಡಿವಿಟ್ಟಂ ತಿರೆೞಲೆವಿಟ್ಟು ಮುತ್ತಿನ ಲಂಬಳಿಗೆಯಿಂ ಬೆಡಂಗುವಡೆಯೆ ಕಟ್ಟಿದ ಕಾಂಚಿಯಂ ಕಾಂಚೀ ಪದದೊಳಂಗಜಂಗೆ ಸಾಮ್ರಾಜ್ಯಪಟ್ಟಮಂ ಕಟ್ಟಿಯುಂ ಬಳಸಿ ಪೊಳೆವ ಮಣಿವಳಯ ಮಾಳಿಯಿಂ ಸುತ್ತುವೆತ್ತು ಹಸ್ತನ್ಯಸ್ತ ಮಂಗಳಮಾತುಳುಂಗದೊಳಮರ್ಕೆವಡೆದು ನಿಜರಮಣನ ಮನೋಮಥನಕ್ಕೆ ಮನ್ಮಥನೆ ನಿಯಂತ್ರಿಸಿದ ಮಂಥದಂಡಮೆನಿಸಿ ವಿಭ್ರಮಂ ಪಡೆಯೆ ಭುಜದಂಡಮನಳಂಕರಿಸಿಯುಂ ಕಡಲ ನಡುವೆ ನವತುಷಾರಶೀಕರ ಶಿಶಿರಶುಕ್ತಿಕಾ ಗರ್ಭವಾಸದೊಳಿನ್ನೆಗಂ ಕೂಡಿ ಬಂದವಿಂತೀ ಪುರಂಧ್ರಿಯ ನವೀನ ಯೌವನೋಷ್ಮಾಯ ಮಾಣ ಪೀನಕುಚಕದುಷ್ಣ ಸಂಸ್ಪರ್ಶನಕ್ಕೆ ನಿಜಕರಂಗಳಂ ಪಸರಿಸಿದಪುವೆನಿಸಿ ಕಾಂತಿಯಿಂ ಕವಲ್ವರಿವ ಮುಕ್ತಾಮಣಿಗಳ ಮಯೂಖದಿಂ ಮಂಜರಿತಮಾಗೆ ಹಾರಲತೆಗೆ ಕಂಠ ಕಂದಳಿಯೊಳನುಬಂಧಮಂ ಪಡೆದುಂ ಕೊಗ್ಗಿಯೊಳಿಡಿದ ಕತ್ತುರಿಯ ಪರಿಮಳಕ್ಕೆಳಸಿ ಕರ್ಣಪೂರದೊಳ್ ಬಳಸುವಳಿಗಳೊಳ್ ತಡಂಗಲಸಿ ಮಂಡಳಿಸುವ ಕಟಾಕ್ಷಕಿರಣ ಮಂಜರಿಗೆ ಮಱುವಕ್ಕಮಾಗೆ ನೀಲಮುತ್ತಿನೋಲೆಯಂ ತುಡಿಸಿಯುಂ ಚೆನ್ನನಪ್ಪ ಚಿನ್ನ ಪೂವಿಂ ಚೆಲ್ವುವೆತ್ತು ಸುತ್ತಿ ಕೞ್ತಲಿಸುವಳಕಲತೆಗಳ ಘನಚ್ಛಾಯೆಯಿಂ ಕಮನೀಯಮಾದ ಲಾವಣ್ಯಲಹರೀಮಯ ಲಲಾಟತಟಿನಿಗಳಿಶಾಬ ಚುಂಬಿತ ಸಿತಾಂಬುಜ ಶ್ರೀಯನೀಯೆ ಯುಂ ಪೊಡರ್ವ ಸಂಕೆಯಿಂ ಮೃಗಾಂಕಮಂಡಳಕ್ಕೆ ಮಾಱಡಕಮಾದ ಮಳಯಜ ತಿಳಕದಿನಶೇಷಮಂಡನಶ್ರೀಗೆ ಕಣ್ದೆಱವಿವಡೆದುಂ ಖಚರ ಸಹಚರೀ ಪರಿವಾರಮೆಲ್ಲಂ ತಮ್ಮ ಪರಿಕರ್ಮ ಕೌಶಲಮಂ ಮೆಱೆದು ನೆಱೆಯೆ ಪಸದನಂಗೆಯ್ಯೆ-

ಮ || ಸ್ರ || ಅತನುಕ್ರೀಡಾರಥಂ ಪೂಡಿದುದು ಕಳಶಮಿಟ್ಟಿತ್ತು ಕಂದರ್ಪಲೀಲಾ
ಯತನಂ ಪುಷ್ಪಾಸ್ತ್ರಕೇಳೀವನಲತೆ ಮುಗುಳ್ವೇಱಿತ್ತು ನಿರ್ವಾಣರೇಖಾಂ
ಕಿತಮಾಯ್ತುರ್ವೀ ಮನೋಮೋಹನ ಮದನ ಪಟೀಚಿತ್ರಮೆಂಬಂತಿರಾವಿ
ಷ್ಕೃತ ನಾನಾಮಂಗಳಾಳಂಕರಣ ವಿಭವದಿಂ ಕಾಂತೆ ಕಣ್ಗೆಡ್ಡಮಾದಳ್ || ೧೦

ಕಂ || ಜನದೃಙ್ಮೀನಂಗಳ್ ಬೆಂ
ಡುನೆಗೆದುವೆಳಸೊರ್ಕು ಸೊರ್ಕಿ ಭೂಷಣ ಕಿರಣಾ
ಭಿನವ ಪ್ಲವದಿಂ ತೆರೆಮಸ
ಗಿ ನೆಗೆದ ಲಾವಣ್ಯಪೂರದೊಳ್ ಖಗಸುತೆಯಾ || ೧೧

ಪಿಡಿದೀಕ್ಷಿಸುವುತ್ಸಂಗದೊ
ಳಿಡುವೞ್ತಿಯಿನೆತ್ತುವೊರ್ವರೊರ್ವರ ಕೆಯ್ಯೊಳ್
ಕುಡುವ ನಿಜಬಂಧುವರ್ಗದ
ನಡುವೆಸೆದಳ್ ಕನ್ನೆ ತೊಳಗಿ ಕೆಯ್ಗನ್ನಡಿಯೋಲ್ || ೧೨

ವ || ಆಗಳಿತ್ತಲ್ ಪುರೋಹಿತಂ ಬಂದು ದೇವ ಲಗ್ನಮತ್ಯಾಸನ್ನ ಎಂದು ಬಿನ್ನವಿಪುದುಂ ಜ್ವಲನಜಟಿಮಹಾರಾಜನುತ್ಸವೋದ್ಗತ ರೊಮೋದ್ಗಮ ಮುದ್ರಿತ ಭುಜಂ ಭೋಂಕನೆೞ್ದು ಪಂಕಜಾಕ್ಷನನಶೇಷಗೋತ್ರಗುರುಜನಸಮೇತಮೊಡಗೊಂಡು ಬಂದು ತತ್ಕಕ್ಷಣದೊಳ್ ಕುಳಾಚಾರಚತುರೆಯಪ್ಪ ಖಚರಿಯರ್ ಮೆಟ್ಟಕ್ಕಿವೊಯ್ದು ಮದನ ಮದಗಜಕ್ಕೆ ಪಿಡಿದ ಮೊಗವಡಮೆನಿಸಿ ಕನ್ನೆಗೆ ಪಿಡಿದ ಕಾಂಡಪಟದ ಮಱೆಯೊಳಭಿಮುಖನಾಗಿರಿಸಿ ಬದ್ದವಣ ಪುಣ್ಯಪಾಠಕರ ಕಳಕಳಮಂ ನಿಲಿಸಿ ಗಣಕಗಣದ ಪುಣ್ಯಾಹಧ್ವನಿಯನಿನಿಸಾ ನುಮಾಲಿಸುತ್ತುಮಿರೆ-

ಕಂ || ಮೌಹೂರ್ತಿಕದತ್ತಂ ಪು
ಣ್ಯಾಹಂ ಮಂತ್ರಾಕ್ಷರಂಗಳಿಂ ತನ್ಮಿಥುನ
ಸ್ನೇಹಾಳೋಕಾಂತಃ ಪ್ರ
ತ್ಯೂಹಂ ತೊಲಗಿದುದು ಕಾಂಡಪಟಿಕಾಚ್ಛಲದಿಂ || ೧೩

ವ || ತದನಂತರಂ-

ಕಂ || ಭೂರಮಣನ ಕರದೊಳ್ ಕೆ
ಯ್ನೀರಕ್ಕಿಯ ನೆವದೆ ತಮ್ಮ ಚಿತ್ತದೊಳಾದ ಪ
ರೀರಂಭದಗೆಗೆ ಖಗಪತಿ
ನೀರೆಱೆದಪನೆನಿಸಿ ಪರಸಿ ಕೆಯ್ನೀರೆಱೆದಂ || ೧೪

ಲಳನೆಯರಬಲೆಯ ಲಜ್ಜಾ
ವಿಳಸದ್ದೃಗ್ನಿಮ್ನಗೆಯನಾ ಕುಭೃದ್ವರಚೂಡಾ
ಸ್ಥಳಿಗೆ ಪರಿಯಿಸಿದರೊತ್ತಂ
ಬಳದಿಂದದು ಕಂತುಯಂತ್ರಸೂತ್ರಿತಮಕ್ಕುಂ || ೧೫

ಓರೊರ್ವರೊಳನುಬಂಧಮ
ದೋರೊರ್ವರ ಗುಣದಿನಪ್ಪುದಂ ಸೂಚಿಸೆ ಕೆ
ಯ್ಯಾರೆ ವಧೂವರರಿರ್ವರು
ಮೋರೊರ್ವರ್ಗಮರೆ ಕಟ್ಟಿದರ್ ಕಂಕಣಮಂ || ೧೬

ವ || ತದನಂತರಂ-

ಕಂ || ಭಂಗಿಸೆ ನಿಜಭುಜಲತೆ ತ
ನ್ವಂಗಿಯ ಕೆಯ್ವಿಡಿದು ಬಾಳಬಿಸದೊಳ್ತಿರುವಿ
ಟ್ಟಂಗಜನ ಚಾಪಲತೆಯಂ
ಮಂಗಳವೇದಿಕೆಯ ಪಸೆಗೆ ಹರಿ ನಡೆತಂದಂ || ೧೭

ವ || ಅಂತು ಬಂದು ತದ್ವಿವಾಹವೇದಿಕಾ ಪ್ರಾಗ್ಭಾಗದೊಳಧಿವಾಸಿಸಿರ್ದ ಮಣಿಖಚಿತ ಮಂದರಕೂಟಮಂ ಬಲಗೊಂಡು ಪರಮಜಿನೇಂದ್ರ ವಂದನಾಪುರಸ್ಸರಂ ಶ್ರೀ ರೋಹಿತ ಪ್ರಯೋಜಿತ ವಿಧಿವಿಹಿತ ವಂಶೋಚಿತಾಶೇಷ ವೈವಾಹಿಕವಿಧಾನಂ ವಧೂಸಹಿತ ಮುತ್ತುಂಗ ರತ್ನಾಸನದ ಪಸೆಯನಳಂಕರಿಸಿ-

ಕಂ || ಪಿಕನಿಸ್ವನೆವಧು ತಳ್ತೆಡ
ದ ಕೆಲದೊಳಿರೆ ವಾಮಬಾಹುಶಾಖಾ ನವಕೋ
ರಕ ಮಂಜರಿಯೆನೆ ನೃಪನೊಂ
ದೆ ಕೊಂಬು ಕೆಯ್ವಂದ ಚೂತಶಾಖೆವೊಲಿರ್ದಂ || ೧೮

ವ || ಆ ಸಮಯದೊಳ್-

ಕಂ || ನವಮದನ ವಿಕಾರ ಸ್ವೇ
ದವಾರಿಬಿಂದುಪ್ರವರ್ಷಮಂ ಮಱೆಯಿಸಲಾ
ಯ್ವವರ್ಗಂದು ಪರಸುತುಂ ಮೇ
ಲೆ ವನಿತೆಯರ್ ಸುರಿವ ಮೌಕ್ತಿಕಾಕ್ಷತ ವರ್ಷಂ || ೧೯

ವ || ತದನಂತರಂ ಖಚರರಾಜನುಂ ಪ್ರಜಾಪತಿ ಮಹಾರಾಜನುಂ ಮಹೋತ್ಸವದಿನಖಿಳ ವಿದ್ವತ್ಸಭಾಜನಸಮಾಜಮನಗ್ರಪೂಜಾಪುರಸ್ಸರಂ ಮಣಿಕನಕವಸ್ತ್ರಾದಿ ವಸ್ತುಗಳಿಂ ಪೂಜಿಸಿ ಷೋಡಶಯಾಚಕರಂ ಕರೆದು ನೆರಪಿ-

ಕಂ || ದಿವಿಜಕುಜಂಗಳ್ ಪುಟ್ಟಿದು
ವಿವು ಬೇಱೆ ದಶಾಧಿಕಂಗಳೆನಿಸಿ ಮಹಾಚ್ಛೋ
ತ್ಸವದಿಂ ಸಂಕಳ್ವಾತೀ
ತ ವಸ್ತುಗಳನಿತ್ತರಾ ಖಗೇಂದ್ರನರೇಂದ್ರ್ || ೨೦

ವ || ಅಂತು ವಿವಿಧ ವಿಶ್ರಾಣನ ವಿನೋದರ್ ವಿಳಾಸಗಮಿತ ಮಂಗಳದಿನ ಚತುಷ್ಟಯರ್ ಜಿನಾಭಿಷವಪೂಜಾ ಪುರಸ್ಸರಂ ಪ್ರಥಿತಸಮುಚಿತ ಮಹೋತ್ಸವರನಂತರ ದಿವಸದೊಳ್ ನಿಜನಿಜ ಮಹಾವಿಭವ ವಿಳಾಸಪ್ರಕಟನ ಕುತೂಹಳರಶೇಷಪರಿಜನ ಸುಹೃಜ್ಜನ ಸಮೇತರ್ ಖಚರರಾಜನಂ ಪ್ರಜಾಪತಿಮಹಾರಾಜನುಮೊಡ್ಡೋಲಗದೊಳಿರೆ-

ಕಂ || ತಪನೀಯ ವೇತ್ರಲಲಿತಾ
ಪ್ರಪದೀನ ದುಕೂಲಕುಂಚುಕಂ ಪ್ರತಿಹಾರಾ
ಧಿಪನೆಱಗಿದಂ ಕುಭೃತ್ಪತಿ
ಗುಪಾತ್ತಚಪಳಂ ಸಿತಾಭ್ರಮೆನೆ ಬಂದಿದಿರೊಳ್ || ೨೧

ವ || ಅಂತು ಪೊಡೆವಟ್ಟು ದೇವ ವಿದ್ಯಾಧರಚಕ್ರಧರನ ಬೆಸದಿಂ ಬಂದೆನೆಂದೊರ್ವ ಚರಮ ಹತ್ತರಂ ಬಾಗಿಲೊಳಿರ್ದಪಂ ಎಂದು ಬಿನ್ನವಿಸೆ ಲಬ್ಧಾನುಜ್ಞನೊಡಗೊಂಡು ತಂದು ಕಾಣಿಸೆ ಪೊಡೆವಡುತ್ತುಮುಚಿತ ಪ್ರದೇಶ ನಿಹಿತಾಸನದೊಳ್ ಕುಳ್ಳಿರ್ದು-

ಕಂ || ದೇವ ಅಳಕಾಪುರೀಶನಿ
ಳಾವಿಶ್ರುತ ಖಚರಚಕ್ರವರ್ತಿ ಮಯೂರ
ಗ್ರೀವಾಗ್ರ ತನಯನಶ್ವ
ಗ್ರೀವಂ ಲೋಕೈಕಮಲ್ಲನಪ್ರತಿಮಲ್ಲಂ || ೨೨

ಮ || ಕರೆದೆನ್ನಂ ಸ್ವಗತಾಗ್ರಹಂ ಬೆಸಸಿದಂ ಪ್ರೋದ್ಯದ್ಭವದ್ಭಾಗಧೇ
ಯರಯಪ್ರೇರಿತನಾದವೊಲ್ ನಿಮಗಮಿನ್ನುಂ ರಾಜ್ಯಲಕ್ಷ್ಮೀಪರಂ
ಪರೆಯುಂ ತತ್ಸಖ ಸಿದ್ಧಿಯುಂ ತನಗಮಾಗಿರ್ಪೞ್ತಿಯಿಂದಂ ವಿಯ
ಚ್ಚರ ಚಕ್ರೇಶ್ವರನಾಜ್ಞೆಯಂ ತಲೆಯೊಳಾಂತೇಗೊಳ್ವುದೇನೆಂಬುದಂ || ೨೩

ಚಂ || ಪಗೆವರನಾರೆ ಸೈರಮೆರೆಗೊಂಡು ತದೀಯ ಕೃಪಾಣ ಕೃಷ್ಣಪ
ನ್ನಗವೆಳಸಿತ್ತು ಕೋಶಕುಹರಕ್ಕೆ ಕರಾಂಬುಜವೀಪ್ಸಿತಾರ್ಥ ವೃ
ಷ್ಟಿಗಳನಿಳಾತಳಂ ತಣಿವಿನಂ ಕಱೆದುತ್ಕವಧೂಕುಚಾಗ್ರಶ
ಯ್ಯೆಗೆ ಮೊಗಸಿತ್ತನಾಕುಳ ಸುಖಂ ಕೃತಕೃತ್ಯರೊಳಲ್ಲದಕ್ಕುಮೆ || ೨೪

ಕಂ || ಬಾಪ್ಪುರೆ ಖಚರೇಶ್ವರ ಮಱೆ
ದೊಪ್ಪಿಸದವರಿಲ್ಲಾಜ್ಞೆಗೆ
ತಪ್ಪುವರಿಲ್ಲೆಲ್ಲಿಯುಂ ನೃಪಾಳರ್ ಜಗದೊಳ್ || ೨೫

ತೆರೆಮಸಗಿದ ಜಗುನೆಯ ಮಡು
ದೊರೆ ತನಗೆನಿಸುವುದು ನೀಲಮಯ ತದ್ರಾಜಾ
ಜಿರಮರಿನೃಪರಟ್ಟೆ ತರಂ
ತರದೆ ಬರುತ್ತಿರ್ಪ ವಾಜಿರಾಜಿಗಳಿಂದಂ || ೨೬

ವರವಸ್ತುಚಯಂ ಬೆರಸಧಿ
ವರನಂ ಕಾಣಲ್ಕೆ ಕುಲಕುಭೃತ್ಪತಿ ಬಂದಂ
ತಿರೆ ತೋರ್ಪುದುಪಾಯನ ರ
ತ್ನರಾಶಿವೆರಸಹಿತರಟ್ಟಿದಿಭ ನಿಕುರುಂಬಂ || ೨೭

ವ || ಮತ್ತಂ-

ಮ || ಕುಲಭೂಭೃತ್ತತಿ ಗೋತ್ರಮುಗ್ರಕಿರಣಂ ಮಿತ್ರಂ ಕಡಲ್ವೇಳೆಗೊಂ
ಡುಲಿಯುತ್ತಿರ್ಪುದು ತಾರಕಾರಮಣನಾದಂ ಕೋಡಿ ಕೊಂಕಿರ್ಪನೆಂ
ದೊಲವಿಂ ಮತ್ಪತಿಯಿಂತಿವರ್ಗೆ ಸಲಿಪಂ ಭೂಭೃತ್ವಮಂ ತೇಜಮಂ
ಸಲೆ ರತ್ನಾಢ್ಯತೆಯಂ ಕಳಾಧರತೆಯಂ ಮಿಕ್ಕರ್ಗೆ ಸೈರಿಪ್ಪನೇ || ೨೮

ಕಂ || ರಾಜವೆಸರ್ಗೆಡಱಿಕಿಡೆ ನಿ
ಸ್ತೇಜಿಸುಗುಂ ತನ್ನನೆಂದು ಧವಳಚ್ಛತ್ರ
ವ್ಯಾಜದಿನೋಲಗಿಸುವನಧಿ
ರಾಜನನಮೃತಾಂಶು ನೀಲಮಣಿಕಳಶಾಂಕಂ || ೨೯

ಉರವಣಿಸಿ ತಮ್ಮನೞಿಗುಂ
ಧುರದೊಳಿದೆಂದಂಜಿ ಹೊಗರ ನೆವದಿಂ ರಿಪುಭೂ
ಪರ ನೊಸಲಕ್ಕರಮಿರ್ಪುವು
ನೆರೆದು ಶರಣ್ಬೊಕ್ಕಿಳಾಧಿಪನ ಕೂರಸಿಯೊಳ್ || ೩೦