ವ || ಆದೊಡಂ-

ಕಂ || ಘನಸಹಜತೇಜನಾದೊಡ
ಮಿನನಾಪ್ತನಿದಾಘನಧಿಕ ತೇಜೋಮಯನ
ಪ್ಪಿನಿತನವಧರಿಪೆನಕ್ಕುಮೆ
ಮನದೊಳ್ ಸನ್ಮೈತ್ರಿಗೆಳಸುವಂ ಚಕ್ರಧರಂ || ೩೧

ಇಂದುವುಮಿರುಳುಂ ದಿನಮಣಿ
ಯುಂ ದಿನಮುಂ ಮಣಿಯುಮೆಸೆವ ಕೇವಣಮುಂ ತಾ
ಮೊಂದಿದವೊಲಕ್ಕುಮನುಬಂ
ಧಂ ದೃಢಮಾದಂದು ಖಚರಪತಿಗಂ ನಿಮಗಂ || ೩೨

ವ || ಎಂದು ನಿಜರಾಜಕೀಯ ಪ್ರಧಾನ ಸಂಮತಮುಮಾತ್ಮೀಯ ನಿಷೃಷ್ಟಾರ್ಥ ದೂತ್ಯೋಚಿತ ಮುಮಾಗೆ ಸಾಮ್ಯೋಪವಚನಂಗಳಂ ಮೆಱೆದು ಕಿಱಿದು ಪೊೞ್ತಱೊಳುತ್ತರಂಬಡೆಯದ ತಚ್ಚರನವಜ್ಞಾತಾಯಮಾನನಾಗಿ ನಿಜಪತಿಯಥಾಜ್ಞಾಪಿತ ಪ್ರತಾಪಮುಖರನಿಂತೆಂದಂ-

ಕಂ || ತನಗೀವೆನೆಂದು ನಿಜನಂ
ದನೆಯಂ ಜ್ವಲನಜಟಿ ನಿಮಗೆ ವಂಚಿಸಿ ತಂದಿ
ತ್ತನೆನಿಪ್ಪ ವಾರ್ತೆಯಂ ಕೇ
ಳ್ದು ನಿಸರ್ಗಪಟು ಪ್ರತಾಪ ಮಹಿಮೋದ್ದಾಮಂ || ೩೩

ಮ || ಪದೆಪಿಂ ದೂತನ ಮಾತುಗೇಳ್ದು ವಧುವಂ ತಂದೀಯೆ ಮುನ್ನೆನ್ನ ಚಿ
ತ್ತದೊಳಿರ್ದಂದೆ ನಂಟುಮಾಡಿ ಸಿರಿಯಿಂದೆನ್ನೊಳ್ ಸಮಂ ಮಾೞ್ಪೆನೀ
ಯದೆ ನಿಂದಂದು ಸುರಮ್ಯರಾಜ್ಯಮನೆ ಬೇರಿಂ ಕೀೞ್ವೆನೆಂದೆತ್ತಿ ಬಂ
ದಿದೆ ಬಿಟ್ಟಿರ್ದನವಂಧ್ಯಕೋಪನಳಕಾಧೀಶಂ ರಥಾವರ್ತದೊಳ್ || ೩೪

ಕಂ || ಸಲಿಸೆ ನಿಜಾಜ್ಞೆಯನೀಕೋ
ಮಲೆಯನೆ ವಿನಯಕ್ಕೆ ಮೆಚ್ಚಿ ಕಳಿಪುಗುಮಾಜ್ಞಾ
ಫಳಮೈಶ್ವರ್ಯಂ ಶ್ಲಾಘ್ಯಮೆ
ವಿಳಾಸಿನೀ ಸ್ವರ್ಣವಸ್ತುವಾಹನನಿವಹಂ || ೩೫

ಮ || ಸಿರಿನಿಂದಳ್ ಮನೆಗಟ್ಟಿ ಪೇರುರದೊಳುರ್ವೀಕಾಂತೆ ತೋಳಿಂದಗ
ಲ್ದಿರಳೋತಿಚ್ಚೆಗೆ ವರ್ತಿಪರ್ ವಿವಿಧವಿದ್ಯಾದೇವಿಯರ್ ಬೇಱೆ ಖೇ
ಚರ ಶುದ್ಧಾಂತಮನಂತಮಂ ಸರಕೆ ಪೆಂಡಿರ್ ಪೇೞದೆಮ್ಮೀ ವಿಯ
ಚ್ಚರಪಾಲಂ ನಿಮಗಿತ್ತನೆಂಬ ಚಲದಿಂದೀಕನ್ನೆಯಂ ಬೇಡಿದಂ || ೩೬

ವ || ಎನುತುಮಧಿರಾಜವಿಷ್ಟರ ನಿಘೃಷ್ಟಪೀಠೋಪವಿಷ್ಟರಂ ಜ್ವಳನಜಟಿಯಂ ಕಟಾಕ್ಷಿಸಿ ಬಹುಪರಿಚಯೋಪಾಲಂಭಜಾಪಳದಿನಿಂತೆಂದಂ-

ಕಂ || ಜಗದೊಳಗೆ ಜಸಂಬಡೆವರ್
ಮಗಂದಿರಿವರಿವರನಕಟ ವಿಷವಲ್ಲಿಯನೇ
ಕೆ ಗಡಂ ತೊಡರ್ಚಿ ಕಿಡಿಸಲ್
ಬಗೆದೈ ಸುಡುಗಾಡ ನಿನಗಮೇನಿದು ಹಿತಮೇ || ೩೭

ಮೇಲಱಿಯದೀ ಮಗಂಗೀ
ಬಾಲೆಯನೀವುದೆ ಖಗೇಂದ್ರ ನೆಱದುದನಱಿದುಂ
ಕಾಲೋರಗನೆಂಜಲಿಸಿದ
ಪಾಲಂ ಕುಡಿಯಿಪುದೆ ಮೆಱೆದುಮಱಿಯದ ಶಿಶುವಂ || ೩೮

ವ || ಎಂದಿಂತು ಹಿತವಚಚ್ಛಲದಿಂ ತನ್ನುಮಂ ತಮ್ಮನುಮನಬಳತೆಯಿನಿಳಿಪಿ ನಿಜರಾಜ ತೇಜದಿಂ ಜ್ವಲನಜಟಿಯನುರವಣಿಸಿ ನುಡಿವ ಖೇಚರಚರನನಾಕ್ರಮಿಸಿ-

ಕಂ || ಎಂಬೊ ಕಡಿದಪರೆ ದೂತನು
ಮಂ ಬೂತುಮನೆಂದು ಬಾಯ್ಗೆವಂದಂದಿನು
ದ್ದಂ ಬಗುೞ್ವೆಯೆನಿಸಿತು ಮಱುಗಿದೊ
ಡಂ ಬರ್ಕುಮೆ ಪುಣ್ಯಫಲಮಪುಣ್ಯಂಗೆಂತುಂ || ೩೯

ವ || ಎಂದು ನಿರ್ಭರಾವಿರ್ಭೂತ ಕ್ರೋಧಭರದಿನುರವಣಿಸಿ ಬವರಕ್ಕೊಡರ್ಚಲನುಗೆಯ್ವ ಹಳಧರಂಗುತ್ತರಂಗುಡದೆ ತನಗಭಿಮುಖದೊಳಿರ್ದ ಜನಾರ್ದನಂಗಿಂತೆಂದಂ-

ಕಂ || ಅತಿಕುಟಿಳಪ್ರಕೃತಿಯ ಪರಿ
ಣತ ದುಃಖಾಕರದ ಯುವತಿಜನದಾಮಿಷದೊಳ್
ರತನಾಗಿ ಬಡಿಶಪಲಕಬ
ಳ ತೃಷ್ಣೆಯಿಂ ಪರಿವ ಶಫಳಮಂ ನೆನಯಿಪುದೇ || ೪೦

ವ || ಎನುತ್ತುಮನಿತಱೊಳೆ ಮಾಣದೆ ಸಗರ್ವಧಾರ್ಷ್ಟ್ಯೋಪಚಾರಚಾಪಳಂ ಪ್ರಜಾಪತಿ ಮಹೀಪತಿಗಮಿಂತೆಂದಂ-

ಕಂ || ಎಳಗಱು ಭಯಮಱಿವುದೆ ಮ
ಕ್ಕಳಿವರ್ ಮುಂದಱಿವರೆ ಭವದ್ವಿಧರಿರ್ದುಂ
ಗಳ ಪುರುಳಿಲ್ಲದ ಪೆಣ್ಣಿಂ
ಕುಳಕ್ಕೆ ಕೇಡಪ್ಪೊಡರಸ ಕಡೆಗಣಿಸುವುಲೇ || ೪೧

ವ || ಎಂದಿಂತು ಬಗೆಗೆವಂದಂತೆ ಸಭೆಯೊಳಭಯಂ ನಿರರ್ಗಳಂ ಗಳಪುವಣಕಕ್ಕೆ ಕೆಳರ್ದು ಭೋಂಕೆನಿರ್ದೆಡೆಯಿಂ ಕರಿಯ ಸಿರಕ್ಕೆ ಲಂಘಿಸುವ ಸಿಂಗದ ಮಸಕಮಂ ಪಡೆದ ಕಡುಪಿನೊಳ್ ಪೊಣ್ಮಿದ ಸಮುದ್ಭೂತಾವೇಶವಶದಿನಾತ್ಮಪ್ರದೇಶದೊಳ್ ತೊಡರ್ದು ನಿಮಿರ್ದುವೆನೆ ವೈರಿವೃತ್ತಾಂತಾಯಸ್ಕಾಂತಪಾತದಿಂ ಕಾಳಕಾಳಾಯಸದೊಳೊಗೆದ ರೋಮಜಾಳಮುಂ ಪಗೆಯನುಱದೆ ಬಱುಗೆಯ್ಯೊಳಾಜಿಗೆ ಕಡಂಗಿ ಪೊಱಮಡುವ ಕಡುಗಲಿತನಮನಱಿದು ವಲ್ಲಭಪ್ರಣಯದಿಂ ಬೀರಸಿರಿ ವಿಗುರ್ವಿಸಿದ ಸಂನಣದ ವಜ್ರದ ಸಿರ್ಪುಗಳಿವೆನಿಸಿ ಮೆಯ್ನವಿರ್ಗಳಿಡುಕುರೊಳು ತುಱುಗಿ ತೋಱುವ ಬೆಮರ ಬಿಂದುಗಳುಂ ಅಂತಃಪ್ರದೀಪ್ತ ಕೋಪಾಗ್ನಿತಾಪದಿಂ ನಸುವೊಂಗಿ ಕಾಯ್ದುವೆಂಬಂತೆ ಕೆಂಕಮಾದ ಘರ್ಮೋದಬಿಂದುದಂತುರ ಕಪೋಳಫಳಕಂಗಳುಂ ಸಮರಗಮನೋತ್ಸ ವೋತ್ಥಿತ ಪತಾಕೆಯಂತ್ರಿಪತಾಕೆಯನಮರೆ ನಿಯಮಿಸಿದ ನೇಣ್ಗಳೆನೆ ಬಿಗಿದು ಗಂಟಿಕ್ಕಿದ ಪುರ್ವುಗಳುಂ ಪೊಸಪೂರದೊತ್ತಿನೊಳ್ ಸುೞಿವ ಕಿಱುವಱುಗುಲೆನಿಸಿ ತುಱುಗೆಮೆಯ ತೆರ್ಕೆಯೊಳ್ ಕೊಳಂಗೊಳ್ವ ಕಣ್ಣೀರೊಡನೆ ಘೂರ್ನಿಸುವ ತರಳತಾರಕಂಗಳುಂ ಪೂರ್ಣೋದಭಾಜನ ದೊಳುರಿವ ಗಂಧಕದ ಸೊಡರ ಕುಡಿಯೆನಿಸಿ ಬಹಳ ಬಾಷ್ಪಾಯ ಮಾನ ನಯನಪುಟಕೋಟಿಯೊಳ್ ಮಿಱುಗುವರುಣಿತಾಪಾಂಗ ಕಳಿಕೆಯುಂ ಚರಪುರುಷ ವಚನವರುಷದಿಂ ಕವಿದ ಕೋಪರಸತರಂಗಿಣಿಯ ತೆರೆಗಳಲೆಪದಿಂದಲುಗುವಂತೆ ನಡುಗುವೊಡಲುಂ ಬಿಡದೆ ಕಡುಗಾಯ್ದ ವೀರರಸದೊಳಬ್ಬರಿಪ ಪರುಷವಚನಾವಲೋ ಹನುಂ ದರವಿಘಟಿತೋಷ್ಠಪುಟವದನಮೂಷೆಯಿಂ ನೆಱೆಯೆ ಪೊಱಮಡಿಸಲಿಕ್ಕಿದ ವಕ್ತ್ರನಾಳದ ತಿದಿಯ ಗಾಳಿಯೆನೆ ಕಂಪನೋತ್ಫುಲ್ಲನಾಸಾಪುಟಂ ಕೆದಱುವ ಕದುಷ್ಣ ನಿಶ್ವಾಸ ವಿಸರಮುಮಗುರ್ವುವಡೆಯೆ ಪರಿಪಚ್ಯಮಾನ ಸಂಗರಸಮುತ್ಸಾಹ ಫಲಮನಾ ಸ್ವಾದಿಪಂತಿರೌಡೊತ್ತುವ ನಾಳೆ ಕಾಳೆಗದೊಳೆಮ್ಮೆಮ್ಮ ಕಲಿತೆನಕ್ಕೆ ನೀನೆ ಸಕ್ಕಿಯೆಂದು ತೊಡೆವೊಯ್ದು ನುಡಿವಂತೆ ಧಾತ್ರಿಯಂ ತೊಟ್ಟನಪ್ಪಳಿಸುವಂತರಂಗಸಂಗತಾವೇಗ ಭಾವಮೆ ರಣಪ್ರಯಾಣಲಾಲಸೆಯನನುವಿಸೆ ಶರೀರಮಾ ನೆಗಪಿದಂತಿರಸವಸದೆ ಬಱಿದೆ ಸಿಡಿದೇೞ್ವ ರಭಸಮೊಗೆವಿನಂ ಜಗದೀಶಪರಿಷತ್ತರಂಗಿಣಿಯನುನ್ಮುದ್ರ ರೌದ್ರರಸ ವೀರರಸ ಪೂರಂಗಳೊರ್ಮೊದಲೆ ಮೇರೆಯಂ ಮೀಱುವಿನಮೊತ್ತರಿಸೆ-

ಕಂ || ಜಡಿವ ಪಡಿಯಱರ ಕಳಕಳ
ಮೊಡನೊಗೆತರೆ ಬೆಸನನೆೞ್ದು ಬೇಡುವ ಚರನಂ
ಕಿಡೆ ನುಡಿವ ಹರಿಬವೆತ್ತುವ
ಕಡಂಗಿ ಮೂದಲಿಪ ರಭಸಮೇನುಣ್ಮಿದುದೋ || ೪೨

ವ || ಅಂತು ನಿರ್ಭರಕ್ಷುಭಿತ ಸಾಗರತರಂಗಪಟಳಮೆನೆ ಕೆಳರ್ದು ಘಳುಫಳುಸಿ ಘೂರ್ಣಿಪ ನೃಪಾಳಸಂಕುಳದೊಳಪಹೃತಪ್ರತಿನೃಪಶತಾಯುಧಂ ಶತಾಯುಧನೆೞ್ದು ಚರವಚನ ಚಾಪಳಾ ಟೋಪಸಂಭೃತಸ್ಮಿತ ಮುಖಾರವಿಂದನಂ ಮುಕುಂದನನಿಂತೆಂದಂ-

ಕಂ || ಇವನಂ ಗಳಹಿಸಿ ನಗುತಿ
ರ್ಪ ವಿನೋದಂ ಸಾಲ್ವುದರಸ ಭವದೀಯ ಭಟಾ
ಹವ ನವನಾಟಕಮಂ ನೋ
ಡುವ ಬಿನದಕ್ಕಿನಿತನೀವುದಿನ್ನವಸರಮಂ || ೪೩

ಭಗಣಮುಗೆ ಬಾಣಹತಿಯಿಂ
ಗಗನಮೆ ಬೞ್ದಪುದು ಪಱಿದು ಪಱಿದೆನೆ ಬಿದುವಿಂ
ದುಗುವ ಬಿಡುಮುತ್ತಳ್ವೆರ
ಸು ಗಜಂಗಳ್ ಕೆಡೆಯೆ ಖಚರಸೈನ್ಯಮನಿಸುವೆಂ || ೪೪

ವ || ಎಂಬುದುಮದರ್ಕನುರೂಪಮಾಗಿ ನಿರ್ಜಿತಾರಾತಿಸೇನನಪ್ಪ ಜಯಸೇನನಿಂತೆಂದಂ-

ಕಂ || ಸುರಪಥದೊಳೊಡ್ಡಿದಹಿತನ
ಶಿರಮಂ ಪರಿದೆಯ್ದಿ ಕೊಳ್ವ ನಿನಗಾನಿದಿರೊಳ್
ತರತರದೆ ಕೆಡೆವ ಖಚರರ
ವರೂಥದಿಂ ಪಡೆವೆನಡರೆ ನಿಶ್ರೇಣಿಕೆಯಂ || ೪೫

ವ || ಎಂಬುದುಮಾ ನುಡಿಯ ಬೞಿವಿಡಿದು ವೀರಾಭಿರಾಮಂ ಭೀಮನಿಂತೆಂದಂ-

ಕಂ || ಬರಿವಿಡಿದು ಪಕ್ಕಮೆನೆ ತುಱು
ಗಿರೆ ಕಣೆಗಳ್ ತುಂಡದಂತೆ ಕಕ್ಕಡೆ ಪೊಱಪೊ
ಣ್ಮಿರೆ ನೆತ್ತಿಯೊಳೆಱಪ ಖಗೋ
ತ್ಕರದೊಳ್ ತಡವಾಗೆ ಕೆಡಪುವೆಂ ಖಗಭಟರಂ || ೪೬

ವ || ಎನೆ ವಿರೋಧಿಸಮುದಯಪುರಂಜಯಂ ಶತ್ರುಂಜಯನೆೞ್ದು ನಿಂದಿರ್ದು-

ಕಂ || ಅರಿಮಾರಣಕ್ಕೆ ದಹನೋ
ದರದೊಳ್ ಕೀಲಿಸಿದ ಪಾಪೆಯೆನೆ ಹಯರುಧಿರಾಂ
ತರದೊಳ್ ಪೂೞ್ವೆಂ ಸಾದಿಗ
ಳರೂಪನುಱೆ ಮುಱಿದು ಸಂಧಿಸಂಧಿಯೊಳಂಬಂ || ೪೭

ವ || ಎಂದು ನುಡಿದ ವೀರಪ್ರಧಾನ ನಾಯಕರ ನುಡಿಯ ಬೞಿವಿಡಿದು ನಿರ್ನಿಗಡ ವೀರ ಗ್ರಹಾವೇಶ ವಿವಶಮಖಿಳಭಟಪ್ರಕಾಂಡಮಂಡಳಂ ನಿರತಿಶಯ ನಿಜನಿಜ ಭುಜಬಳ ಪ್ರಥನ ಪ್ರತಿಜ್ಞಾ ಮುಖರನಾಗಿ-

ಚಂ || ತ್ರಿದಿವಕ್ಕೇಱಿದೊಡಂಚಿಯಂ ಬೆರಸು ಜೋದರ್ ಪಾಱೆ ಪೊಕ್ಕೆಚ್ಚು ಕೊ
ಲ್ಲದೆ ಕಾಲ್ಗಾಪಿನ ನಾಯಕರ್ ಕರದೆ ಗೇಣೊಳ್ ನೇಲ್ವಿನಂ ಕುತ್ತಿ ಕೊ
ಲ್ಲದೆ ಮಾಱಾಂತಿಭಮೞ್ಗಿ ಪಾೞ್ಮನೆಯವೋಲ್ ಬೀೞ್ವನ್ನೆಗಂ ಪೊಯ್ದು ಕೊ
ಲ್ಲದೆ ಬಲ್ಬಲ್ಮೆಗೆ ಗೇಣ ಬಿನ್ನಣಕೆ ತೋಳ್ಬಲ್ಪಿಂಗೆ ಮುಯ್ವಾಂಪುದೇ || ೪೮

ನೆಱೆಬಳೆವೋಗಿ ಮೇಗೊಗೆವ ತೋೞ್ಕಳ ಸೆರ್ಕೆಗಳರ್ಕಬಿಂಬಮಂ
ಮಱೆಯಿಸಿ ಮುತ್ತುಗಳ್ವೆರಸು ಸೂಸುವ ಕೋಳ್ಮಿದುಳಿಂ ದಿಶಾಮುಖಂ
ಕಿಱೆಪೆಣೆದಿರ್ದ ಕೆಯ್ಗಡಿಯ ಸಂದಣಿಯಿಂದರಿವೈನತೇಯನಾಂ
ತಿಱಿದಹಿಲೋಕದಂತಿರೆ ಪಡಲ್ವಡಿಪೆಂ ರಿಪುದಂತಿಯೂಧಮಂ || ೪೯

ಕಂ || ಉಡಿಯದ ಪಾೞ್ವನೆಯಿಲ್ಲಂ
ಪಿಡಿದುರ್ಚುವ ತೆಱದಿನುರ್ಚಿ ರಿಪುಗಜರದಮಂ
ಸಿಡಿಲಡಸಿ ಪೊಡೆದ ಜಂತ್ರದ
ಪುಡುಕೆವೊಲಿರೆ ಪೊಡೆವೆನಹಿತ ರಥಸಂಕುಳಮಂ || ೫೦

ತೆಗೆದೆಚ್ಚು ಮೇಗಣಿಂ ಮೇ
ಗೆಗಗನಚರತುರಗಚಯಮನಿನಬಿಂಬದೊಳೋ
ಳಿಗೆವರೆ ಕೀಲಿಸಿ ಮಾೞ್ಪೆಂ
ಜಗದೊಳಿಮಂಗೊಳವು ತುರಗಮೆಂಬಿದನೆ ದಿಟಂ || ೫೧

ದ್ವ್ಯಕ್ಷರಿ || ಕಲಿ ಕೊಂಕಲ್ಯೇಕಕ್ಕುಂ
ಕೆಲಕ್ಕೆ ಕೋಲಿಕ್ಕೆ ಲಕ್ಕೆ ಲೆಕ್ಕಕ್ಕೆಲ್ಲಂ
ಕಲಿ ಕೊಲಲೆ ಕಲಲ್ಕಕ್ಕುಂ
ಕುಲಕಕ್ಕುಂ ಕಲಿ ಕಲಂಕಿ ಕೊಂಕೆ ಕಲಂಕಂ || ೫೨

ಗತಪ್ರತ್ಯಾಗತ ಶ್ಲೋಕ || ಕುಂದಿನಿಂದೆಚ್ಚನದು ಬಂ
ಟಂದುಮಲ್ಲದೆ ನಿಂದುದೆಂ
ದೆಂದು ನಿಂದೆಲ್ಲಮದಟಂ
ಬಂದು ನಚ್ಚದೆ ನಿಂದಿಕುಂ || ೫೩

ವ || ಎಂದು ತಂತಮ್ಮ ಕಲಿತನದ ಬಲ್ಪಿನಗ್ಗಳಿಕೆಯಂ ಪೂಣ್ದು ಕಳಕಳಿಸಿ ಘೂರ್ಣಿಸುವ ಸಕಳರಾಜಲೋಕಮಂ ಸಸ್ಮಯಂತಸ್ಮಿತ ಪ್ರಫುಲ್ಲಗಲ್ಲನುಮುತ್ತರಳಿತ ಭ್ರೂತರಂಗನುಮಾಗಿ ತಚ್ಚರನಿಂತೆಂದಂ-

ಮ || ಪಲರುಂ ಚಕ್ರಿಯೊಳಿಂತೆ ನಿಮ್ಮ ತೆಱದಿಂ ಮುಂ ಕಾದುವುದ್ಯೋಗದ
ಣ್ಣಲೆಗಳ್ ಮೆಚ್ಚಿಸಿ ಕಾದಲೆಂದು ಕಳದೊಳ್ ಮಾಱಂಕಮಂ ಬೇಡಿ ಬಂ
ದುಲಿವರ್ ಪ್ರೇಷ್ಯವಧೂಜನೀ ಕೃತ ನಿಜಸ್ತ್ರೀನೂಪುರಾಳಾಪಮಾಂ
ಸಲಿತಾತ್ಮ ಕ್ರಮಶೃಂಕಳಾ ಕಳಕಳರ್ ಭೂಪಾಳರಾಸ್ಥಾನದೊಳ್ || ೫೪

ವ || ಎಂದ ದೂತನಂ ನಿಜಾಶಯ ಪ್ರಾಜ್ಯ ಶರನಿಧಿ ಸಮುನ್ನಮತ್ಪ್ರತಾಪ ತಪನೋದಯೋದಿ ತಾಂತಸ್ಮಿತ ವದನಾರವಿಂದಂ ಮುಕುಂದನಿಂತೆಂದಂ-

ಕಂ || ಬಯಸಿ ರಣಮರಣಮಂ ನಿ
ನ್ನಯ ಪತಿ ಮಱುಗುವೊಡೆ ಕುಡುವೆನಾವಂತುಟನಾ
ಜಿಯನಕಟ ಖಗೇಶಂ ದು
ರ್ನಯ ವೃತ್ತಿಯಿನೞಿದನೆನಿಪುದದು ಕಲಿತನಮೋ || ೫೫

ವ || ಎಂದು ನುಡಿದ ಗಾಂಭೀರ್ಯರತ್ನಾಕರಂಗದ್ವಿತೀಯ ಸ್ವಕೀಯ ಸಾಹಸ ಸ್ವಸಾತ್ಕೃತ ಸಮರಚಾರನರ್ಕಕೀರ್ತಿ ಕುಮಾರನಿಂತೆಂದು-

ಶಾ || ನೀಮುಂ ತಾಮುಮಿದಿರ್ಚಿ ಕಯ್ದುವಿಡಿವನ್ನಂ ನಿಲ್ವ ಸಂಗ್ರಾಮಮಿ
ಲ್ಲಾಮಾತಿರ್ಕೆ ಕಡಂಗುವೀ ಭಟವರಿಷ್ಠ ಪ್ರಷ್ಠರುಂ ಪ್ರಾಪ್ತಸಂ
ಗ್ರಾಮೋಗ್ರಾಂಗಣ ರಂಗದೊಳ್ ರಿಪುಕಬಂಧಾರಬ್ಧ ನೃತ್ಯೇಕ್ಷಣಾ
ದಾಮರ್ ವಿಸ್ತೃತಸಂಗರವ್ಯತಿಕರರ್ ನಿಲ್ವಂತುಟಂ ಮಾಡುವೆಂ || ೫೬

ವ || ಎನುತ್ತುಂ ಪರಿವರ್ತಿತ ವಿಳೋಕನಾಕ್ರಾಂತ ದೂತವದನನಾಗಿ-

ಕಂ || ಜಾಱಿಂ ಗಳ ನಮ್ಮರಸಂ
ಪಾಱುವ ಬಹುರೂಪವಿಕೃತಮಂ ಪಲತೆಱದಿಂ
ತೋಱುವ ಹಗರಣಮಿವರೊಳ್
ಮಾಱಾಂತೊಡನೊಡನಾಡೆ ನಗೆಗೆಡೆಯಕ್ಕುಂ || ೫೭

ವ || ಎಂದು ನಿಜನಂದನನ ನುಡಿಗಳನನುತ್ತರಾವಜ್ಞೆಯಿಂ ಪಿಂದುಗೆಯ್ದು ತನಗೆ ಮಗುೞ್ದು ಮಾತ್ಮಪರಿವೃಢ ಪ್ರತಾಪಮನತಿಶಯಿಸಿ ಜೂಬು ಮಾೞ್ಪ ಚರನಂ ಜ್ವಳನಜಟಿ ಕಟಾಕ್ಷಿಸಿ-

ಕಂ || ಆವಱಿಯದನ್ನನಶ್ವ
ಗ್ರೀವಂ ಬೇಱೊರ್ವನಾಗಳಾದನೆ ಗಳ ಗ
ರ್ಜಾವಷ್ಟಂಭದಿನೆನಿತಂ
ಜಾವಳಿಸುವೆಯೆಲವೊ ದೂತನೋ ನೀಂ ಬೂತೋ || ೫೮

ಮ || ಅನಯಂ ಪುಟ್ಟದೆಯುಂ ಪವಣ್ಗಿಡದೆಯುಂ ತಂತಮ್ಮ ತೇಜಃಪ್ರಭಾ
ವನೆ ಮೆಯ್ದೋಱದೆಯುಂ ರಣಪ್ರಣಯವೈರಂ ಸ್ವೈರದಿಂದಿಂತೆ ಪೋ
ಯ್ತಿನಿತುಂ ಕಾಲಮದಲ್ಲದೇಂ ಗಳ ದಿಟಕ್ಕಿಂತೊರ್ವರೊರ್ವರ್ಗೆಯೋ
ಧನದೊಳ್ ಕೆಯ್ದೆಗೆವನ್ನರಿರ್ದಪರೆ ಪೇೞ್ ವಿದ್ಯಾಧರಶ್ರೇಢಿಯೊಳ್ || ೫೯

ವ || ಎಂದು ಕೆಳರ್ದುರವಣಿಪ ಬೀಯಗನಂ ಬೀಯಗಂ ಸಮಯೋಚಿತೋಕ್ತಿ ಯಿಂ ನಿಲಿಸಿ ಪೌದನಾಧಿಪತಿ ನಿಸರ್ಗೋದಾತ್ತ ಗಂಭೀರಭಣಿತೆಯಿನಿಂತೆಂದಂ-

ಕಂ || ಕಿಱುಗುಳರೆ ಚಲಕ್ಕೆ ಪೂಣಿ
ಗರುಱರೊರುವನುಂತೆ ತೋಳ್ವಲಕ್ಕೀತಂಗಳ್
ಮಱೆದು ನೆಗೞ್ದೊಡಮಿವಂ ಬಿಡ
ಱಿದಿದನುಚಿತಮೆನೆ ನೆಗೞ್ದು ಪೆಱತೆಗೆದಪರೇ || ೬೦

ಕಂ || ಅದಱಿಮಿದನುಚಿತಮೆನಿಸದೆ
ತುದಿವರಮೆಯ್ದುವುದೊಡರ್ಚಿದುಜ್ಜುಗಮನೆ ಪೂ
ಣ್ದುದು ವಿಫಳಮೆನಿಸದೇ ನೀ
ತಿದಪ್ಪದಿಂ ನೆಗೞ್ಗೆ ಬಲ್ಲವೋಲ್ ನಿನ್ನರಸಂ || ೬೧

ವ || ಎಂದು ತನ್ನುಮಂ ತ್ರಿಪೃಷ್ಠನುಮಂ ತೋಱಿ ನುಡಿದು ಚರನಂ ಕರೆದು ಬೀೞ್ಕೊಡಿಸಿ ಕಳಿಪುವೆಡೆಯೊಳ್ ಎಡೆಯುರ್ಚಿ ನಿಜಭುಜಾದಂಡಕಂಡೂಹರಣ ನಿಘರ್ಷಣ ಕುತೂಹಳಂ ಹಳಧರನೆೞ್ದು ನಿಂದಿರ್ದು-

ಕಂ || ಆಮಱಿಯೆಮೞಿದ ವಕ್ರವ
ಚೋಮಾರ್ಗಮನಟ್ಟೆಗೆಲವೋ ತಲೆ ಬೀಣ್ಣಿತ್ತೆಂ
ಬೀ ಮಱುಕದಿಂದಮೆಂತತಿ
ನೇಮಂ ನಡೆತಂದನಂತೆ ನಿಲೆ ರಣಮುಖದೊಳ್ || ೬೨

ಮ || ಪಿರಿದುಂ ನಿನ್ನಧಿನಾಥನಟ್ಟೆಗೆ ಶಿರೋಭಾರಂ ಸರೋಜಾಕ್ಷ ದೋ
ಷ್ಪರಿಘಕ್ಕುತ್ಕಟ ಯುದ್ಧಕೇಳಿ ರಸಕಂಡೂಭಾರಮಾಕ್ರಾಂತ ಭೂ
ವರವೃಂದಕ್ಕೆ ತಮೋನುಜೀವನ ನಿಬಲದ್ಧೋದ್ವೇಗಭಾರಂ ವಸುಂ
ಧರೆಯನ್ಯಾಯ ಪಥಪ್ರವರ್ತಿ ನಿಚಿತಾಂಹೋಭಾರಮುಂ ಪಿಂಗುಗುಂ || ೬೩

ವ || ಎನುತ್ತುಮಧಿಪತಿಪ್ರಸ್ಥಾನ ಪ್ರತಿಷ್ಠಮಾನನಂ ಮತ್ತಮವನಿಂತೆಂದಂ-

ಕಂ || ಎಲವೆಲವೊ ನೀನೆ ಬೂತೀ
ಕಲಹದೊಳೇಗೊಳಿಸ ಬುದ್ಧಿವೇೞ್ವರ ಮಾತಂ
ಸಲಿಸದವೋಲ್ ನಿನ್ನವನಂ
ಚಲಕ್ಕೆ ನುಡಿದಂತೆ ಗಂಡನಾಗಿಸು ರಣದೊಳ್ || ೬೪

ವ || ಎಂದ ತದ್ಬಳನ ವಚನಕ್ಕೆ ಸಪ್ರಪಂಚಪ್ರಚಂಡ ಸಮುಚಿತೋತ್ತರಮನೀಯುತ್ತುಮಂಬರ ಚರೇಶ್ವರಚರಂ ತದಾಸ್ಥಾನಮಂಡಪಮಂ ಪೊಱಮಟ್ಟು ಭೋಂಕೆನೆ ಗಗನಕ್ಕೊಗೆದು ಪೋದನನ್‌ಎಗಮಿತ್ತಲತ್ಯಂತ ಸ್ನೇಹಭಾವ ಪ್ರೇರಿತಾಂತರಂಗನತುಳಬಳನಿಳಯರಪ್ಪಳಿ ಯಂದಿರ್ಗೆ ವಿದ್ಯಾಧರ ವಿದ್ಯಾಬಳಮುಮಳವಡುವ ಬಗೆಯಂ ಬಗೆದು-

ಚಂ || ಜ್ವಳನಜಟಿಕ್ಷಿತೀಶನವಳೋಕಿನಿ ತಾಂ ಮೊದಲಾದ ವಿದ್ಯೆಯಂ
ಪಲವನುದಾತ್ತನಿತ್ತೊಡೆ ಯಥಾಕ್ರಮದಿಂದವನಾ ಸ್ವಯಂಪ್ರಭಾ
ಲಲನೆಯವಲ್ಲಭಂ ನಯದೆ ಸಾಧಿಸಿದಂ ಬಲಭದ್ರಸಂಯುತಂ
ಸುಲಲಿತಮೂರ್ತಿ ಕೀರ್ತಿರಮಣೀ ವಸುಧೈಕಭಾಂಧವಂ || ೬೫

ಗದ್ಯಂ
ಇದು ನಿಖಿಳಭುವನಜನವಿನೂತ ಸ್ಫೀತಮಹಿಮಾವದಾತ ವೀತರಾಗ ಸರ್ವಜ್ಞತಾ ಸಮೇತ
ಖ್ಯಾತಜಿನಸಮಯ ಕಮಳಿನೀ ಕಳಹಂಸಾಯಮಾನ ಮಾನಿತ
ಶ್ರೀನಂದಿಯೋಗೀಂದ್ರಪ್ರಸಾದ ವಾಚಾಮಹಿತ
ಕೇಶವರಾಜಾನಂದನಂದನ ವಾಣೀವಲ್ಲಭ ವಿಸ್ತಾರಿತಮಪ್ಪ
ವಸುಧೈಕಬಾಂಧವ ಶ್ರೀ ವರ್ಧಮಾನ ಪುರಾಣದೊಳ್
ವಿವಾಹಮಂಗಳ ದೂತಾಳಾಪ ವರ್ಣನಂ
ಸಪ್ತಮಾಶ್ವಾಸಂ