ವ || ಆ ಮಹೋದಾರ ಪ್ರಾಕಾರಮಂ ಪರಿವೇಷ್ಟಿಸಿ-

ಕಂ || ಶ್ರೀತರುಣೀ ಕೇಳಿಗೃಹಂ
ಭೂತಳವಿಭ್ರಾಜಿತಂ ಲಸಜ್ಜೀವನ ವಿ
ಖ್ಯಾತಂ ತಾನೆಸೆವುದು ಪರಿ
ಖಾತಂ ಪ್ರಭುಪುರುಷನಂದದಿಂದನವರತಂ || ೫೧

ಮ || ವರಯೋಷಿಜ್ಜನಮಂ ಪುರುಂ ಪುರಮನೊಳ್ಪೊಂಗೋಂಟೆ ಪೊಂಗೋಂಟೆಯಂ
ತರುಷಂಡಂ ತರುಷಂಡಮಂ ಬಹುತಟಾಕಂಗಳ್ ತಟಾಕಂಗಳಂ
ಪರಿಕಾಲ್ಗಳ್ ಪರಿಕಾಲ್ಗಲಂ ಬೆಳೆದ ಕೆಯ್ಗಳ್ ಕೆಯ್ಗಳಂ ಸುತ್ತಿ ಪಾ
ಮರಿಯರ್ ತಳ್ತೊಳಕೆಯ್ಯೆ ಚೆಲ್ವನೊಳಕೊಂಡಿರ್ಕುಂ ತದುರ್ವೀತಳಂ || ೫೨

ಕಂ || ಫಳಿತ ಪನಸಾಮ್ರ ಸನ್ಮಾ
ತುಳಂಗ ದಾಡಿಮ ತಮಾಳ ಪಾಟಳ ಕದಳೀ
ತಿಳಕಾಶೋಕಾನೋಹಕ
ಕುಳಂಗಳಿಂದೆಸೆವುದದಱ ಬಹಿರುದ್ಯಾನಂ || ೫೩

ವ || ಅಂತುಮಲ್ಲದೆಯುಂ-

ದಿಕ್ಕಾಮಿನಿಯರ್ ಕಂಡಂ
ದಕ್ಕುಂ ಕಣ್ಣೆಂಜಲೆಂದು ಧಾತ್ರಿಪುರಶ್ರೀ
ಗಿಕ್ಕಿದ ಪಚ್ಚೆಯ ಜವನಿಕೆ
ಯಕ್ಕುಮಿದೆನಿಸಿದುದು ಬಳಸಿದುಪವನಷಂಡಂ || ೫೪

ಚಂ || ಸರಸಫಳಾಳಿಭಾರಮನುರಾಗಸಮನ್ವಿತ ಕೀರಮಾತ್ತ ಬಂ
ಧುರಂ ಪಿಕವಾರಮುದ್ಘಮಧುಲಿಟ್ಟರಿವಾರಮಶೇಷ ಸತ್ಕವೀ
ಶ್ವರನುತಿಸಾರಮಾಶ್ರಿತ ವಿಯೋಗಿ ಕುಠಾರಮನಾರತಂ ಮನೋ
ಹರಮೆನಿಕುಂ ವಿಶಾಲ ಸಹಕಾರಮಹೀರುಹಮಾವನಾಂತದೊಳ್ || ೫೫

ನೆನೆದು ತನತ್ತು ಪರ್ವುಗೆಗೆ ಮುನ್ನೆಡೆಗೊಟ್ಟುಪಕಾರಮಂ ದಿನೇ
ಶನ ಘನತೀವ್ರರಶ್ಮಿನಿಚಯಂಗಳಿನಾದಮೆ ಬೆಂದ ತನ್ನಭೋಂ
ಗನೆಯತಿತಾಪಮಂ ಕಿಡಿಸಲೆಂದು ಸುಧಾಕಳಶಂಗಳಂ ವನಾಂ
ಗನೆ ಕೊಡುವಂತೆ ಕಣ್ಗೆಸೆವುವಲ್ಲಿ ಫಳಾವಳಿ ನಾಳಿಕೇರದಾ || ೫೬

ವಿರಹಿಗೆ ಶೋಕಭಾರಮನಪಾರಮನಿತ್ತುಮಶೋಕನಾಮಮಂ
ಧರಿಯಿಪ ಪಾಂಗಿದಾವ ತರುಗುಂಟು ವಿಯೋಗಿಜನಸ್ಥರಾಗಮಂ
ನೆರದತಿರಾಗಮಂ ತಳೆದ ಪಲ್ಲವಮಾವಮರಕ್ಕದುಂಟೆನು
ತ್ತುರುಮುದದಿಂದೆ ಕಂತು ಪರಿಕೀರ್ತಿಪಶೋಕಮಹೀಜಮೊಪ್ಪುಗುಂ || ೫೭

ಕಂ || ಸಮಳಿನಮಳಿಕುಳಮೆಂದಾ
ದಮೆ ತತ್ಸಂಗತಿಯನು ೞಿದು ಸುಮನಸ್ಸಂತಾ
ನಮನೆಯ್ದಿ ಸತತಮತ್ಯು
ತ್ತಮರಂದದಿನೆಸೆವುವಲ್ಲಿ ಚಂಪಕನಿಕರಂ || ೫೮

ವ || ಮತ್ತಮಾ ನಗರಿಯೊಳ್-

ಕಂ || ಬಿಸುಗದಿರನ ಬೆಂಕೆಗೆ ಸೈ
ರಿಸದೆ ನಭೋಂಗಣದಿನಿ ಱಿದು ತಾರಗೆಗಳ್ ಪುಂ
ಜಿಸಿದಾ ಮಣಿಗಾಱವಸರದ
ಪೊಸಮುತ್ತಿನ ನೆವದಿನಿರ್ಪ್ಪುವಿರುಳಪ್ಪಿನೆಗಂ || ೫೯

ಪರಿಹರಿಸಿ ಜಡಾಕೃತಿಯಂ
ಪುರಲಕ್ಷ್ಮಿಗೆ ಮೆಱೆದು ತನ್ನ ಸಿರಿಯಂ ರತ್ನಾ
ಕರಮೋತಿರ್ದಪುದೆನೆ ರ
ತ್ನರಾಶಿಯಿಂ ವಿಪಣಿವೀಥಿ ಸೊಗಯಿಸಿ ತೋರ್ಕುಂ || ೬೦

ಪಳಿಕಿನ ಕುಟ್ಟಿದೊಳ್ ನಖ
ವಿಳೋಕಮಂ ಕಾಣದಱಸಿ ಕರೆದಪುವು ತದಾಂ
ಗುಳಿಗಳೆನಿಸಿದುದು ಸತಿಯರ
ಪಳಂಚಿನುಂಗುರದ ವಿರುತಿ ಪುರವೀಥಿಗಳೊಳ್ || ೬೧

ವಿವರಂಗಳಿಂದಮೊಗೆವಗು
ರುವ ಪೊಗೆ ನಾರಜಕೆ ಮೇಲೆ ಮುಸುಱಿದ ಭೃಂಗೀ
ನಿವಹದ ಗಱಿ ಗಱಿಗೆಣೆಯೆನೆ
ಗವಾಕ್ಷಮಂಗಜನ ದೊಣೆಗೆ ತೊಣೆಯೆನಿಸಿರ್ಕುಂ || ೬೨

ನನೆಗೆಱಪತುಂಬಿ ಗಱಿಯೆನೆ
ಕೊನೆವೆಳಗಿಂ ನಿಮಿರ್ವ ಬಳ್ಳಿವೆಳಗುರ್ದ್ದಿದ ಕಾ
ಲೆನೆ ಗಱಿಗಟ್ಟುವುದತನುಗೆ
ನನೆಗಟ್ಟುವ ನೆವದೆ ಪುಷ್ಪಲಾವೀನಿವಹಂ || ೬೩

ಚಂ || ಮುಗುಳ್ಗಳ ಮಾಲೆ ಸುಯ್ಯ ನಱುಗಂಪಿನೊಳಿರ್ಮಡಿ ಗಂಮನಾಗೆ ಸೆ
ಳ್ಳುಗುರ್ವೆಳಗಿಂದರಲ್ಗಳ ದಳಂ ದಳವೇಱೆ ಮದಾಳಿ ಮೆಲ್ಲಮೆ
ಲ್ಲಗೆ ಸುತಿಗೂಡೆ ಕಂಕಣದ ನುಣ್ಣರದೊಳ್ ಮನೆಗಟ್ಟೆ ಕಂತು ಕಾ
ಮಿಗಳಮನಂಗಳೊಳ್ ಗಡಣದಿಂದಲರ್ಗಟ್ಟುವುದುದಂಗನಾಜನಂ || ೬೪

ಚಳಮಣಿಹಾರದೊಳ್ ತೊಡರ್ದು ತೂಗಿ ಮಗುೞ್ಚುವ ಕಂದು ಕಂತುಗಿಂ
ದೊಳದ ವಿನೋದಮಂ ಕುಡೆ ಮನೋಜನಿಷಾದಿಯ ಕುಂಭಿಕುಂಭದೊಳ್
ತೊಳಗುವ ಪೂವಿನಡ್ಡಣಮನೇ ೞಿಸೆ ಮೌಕ್ತಿಕಕುಂಡಳಂ ಕುಚಂ
ಗಳೊಳೊಲೆದಾಡೆ ಲೀಲೆಯೊಳೆ ಘಟ್ಟಿಮಗುೞ್ಚುವುದಂಗನಾಜನಂ || ೬೫

ಚಂ || ಅಗುರುವ ಧೂಪಧೂಮದೊದವಿಂ ದೆಸೆಗಾಣದೆ ಪೊಕ್ಕು ಪೌರಕಾ
ಮಿಗಳ ಕಪೋಳ ಕಂಠ ಕಟಕಂಟಕಜಾಳದೊಳೞ್ಕಿದಂತೆ ಮೆ
ಲ್ಲಗೆ ನಡೆದಪ್ಪುದಳ್ಗೊನೆಗಳಿಂ ಸುರಿವಂಗಣನಾರಿಕೇಳದಾ
ರೆಗಳೆ ನವೇಂದುಕಾಂತದವಳಂಬನಯಷ್ಪಿಗಳಾಗೆ ತೆಂಬೆಲರ್ || ೬೬

ಮ || ಸ್ರ || ಪ್ರತಿಹರ್ಮ್ಯಂ ಕಾಂತಕಾಂತಾರತಿಕಲಹದೊಳಾಂದೋಳಕೇಳಿಕ್ರಿಯಾ ಸಂ
ಗತಿಯೊಳ್ ಸಂಗೀತ ರಂಗಾಂತರದೊಳಮೃತರೋಚಿಃ ಕರಾಳಂಬನಂ ಸು
ತ್ತಿ ತೊಳಲ್ದಲ್ಲಿ ಪೊೞ್ತಂ ಕಳೆವುದು ಗಣಿಕಾದ್ವಾರಘಂಟಾರವವ್ಯಾ
ಹತನಿದ್ರಂ ದಕ್ಷಿಣಾಶಾವಿರಹಿ ರಜನಿಯೊಳ್ ಮಂದಚಾರಂ ಸಮೀರಂ || ೬೭

ಉ || ಕೋಮಳ ಚಂದ್ರಕವ್ಯಜನಚಿಹ್ನಮಧಿಷ್ಠಿತ ದರ್ಪಣಪ್ರಭಾ
ಕೌಮುದಿ ಮಂಚಕಾಂಘ್ರಿಮಣಿಪೀಠವಿಳಂಬಿತ ಹಾರತಾರಕಂ
ಕಾಮುಕಲೋಚನೋತ್ಪಳ ವಿಳಾಸಮನೀವುದು ತದ್ವಿಳಾಸಿನೀ
ಧಾಮದೊಳಾಗಳುಂ ಧವಳತಳ್ಪತಳಾಮಳ ಚಂದ್ರಮಂಡಳಂ || ೬೮

ಮ || ಸ್ರ || ಅಳಕಾಸಕ್ತ್ಯೈಕಹಸ್ತಂ ಪಿಕ ಶುಕ ಪರಿಹಾಸ ಪ್ರಫುಲ್ಲೈಕಗಂಡ
ಸ್ಥಳಮಾದರ್ಶಾರ್ಪಿತೈಕೇಕ್ಷಣಮುಚಿತಸಖೀವಾಗ್ವಿರೇರ್ಸೈಕ ಕರ್ಣ
ಕಳವೀಣಾಳಂಬಿತೈಕಸ್ತನಮೆಸೆವುದು ಕಾಂತಾಜನಂ ರತ್ನಪೀಠಂ
ಗಳೊಳೇಕೈಕಾಂಗ ಲೀಲಾಬಲಮನೆ ರತಿನಾಥಂಗೆ ತೋರ್ಪಂದದಿಂದಂ || ೬೯

ದ್ರುತಿವಿಳಂಬಿತ || ಸಕಳಸಂ ನಿಜ ವಂದನೆಯಿಂದೆ ವ
ರ್ದ್ಧಿಕುವಿಳಾಜನಕೆಂಬ ಮಹತ್ವದಿಂ
ಸಕಳಸಂ ಮಣಿಭರ್ಮಮಯಂ ವಿರಾ
ಜಿಕುಮನಾರತಮಾರ್ಹತಮಂದಿರಂ || ೭೦

ಚಂ || ಪದಗತಿ ಪಾಠದಕ್ಕರಮನುಗ್ಘಡಿಪಂತಿರೆ ತೂಕದೋಲೆ ಗೀ
ತದ ಲಯಮಾನಮಂ ಪವಣಿಪಂತಿರೆ ಭಾವರಸಂ ನಿಜಾಂತರಂ
ಗದ ಮಧುರತ್ವಮಂ ಪ್ರಕಟಿಪಂತಿರೆ ರಂಜಿಸಿ ನೃತ್ಯ ಗೀತ ವಾ
ದ್ಯದ ಸುಖಮೇಕರೂಪಮಯಮಾಯ್ತೆನೆ ನರ್ತಿಪರಲ್ಲಿ ಕಾಂತೆಯರ್ || ೭೧

ವ || ಮತ್ತಂ-

ಕಂ || ಉದಧಿಗೆ ಮೇರುಗೆ ಗಾಂಭೀ
ರ್ಯದೊಳುನ್ನತಿಕೆಯೊಳವೆಡಱುಗುಂ ತದ್ರಾಜಾ
ಸ್ಪದದಗೞುಂ ಮದಿಲುಮವಿ
ಲ್ಲದಂದು ಸಜ್ಜನತೆಗೆಂತು ನೆಲೆಯಾದಪುದೋ || ೭೨

ಪ್ರತಿಹಾರನೇತ್ರಪುತ್ರಿಕ
ಮತಿವಿಪುಳ ಕವಾಟಪಕ್ಷ್ಮ ಮೆಸೆವುದು ರಾಜಾ
ಯತನಕ್ಕೆ ನೊಸಲ ಕಣ್ಣೆನಿ
ಸಿ ತೇಜಮಂ ತೆಱೆಯೆ ಮೆಱೆವ ಪೂರ್ವದ್ವಾರಂ || ೭೩

ಮ || ಸ್ರ || ಕ್ರಮವಿಕ್ಷೇಪ ಕ್ವಣನ್ನೂಪುರ ವಿರವ ಪುರಸ್ಸಾರಿ ಸಜ್ಜಸ್ಮರಂ ಸ್ಮೇ
ರ ಮುಖೇಂದುದ್ಯೋತಜಾತದ್ಯುತಿ ಮಿಲಿತ ಪದಾಲಕ್ತ ರಕ್ತೀಭವಚ್ಚಾಂ
ದ್ರಮಸಗ್ರಾವಾಂಗಣಂ ಭಂಗುರತರಳ ಕಟಾಕ್ಷಾಂಚಳೋದೀರ್ಣ ವಿದ್ಯು
ದ್ಭ್ರಮವಿಭ್ರಾಮ್ಯನ್ಮರಾಳಂ ಸುೞಿವುದು ನೃಪತಿಪ್ರೇಷ್ಯ ಯೋಷಿತ್ಕದಂಬಂ || ೭೪

ಕಂ || ಎಳವುಲ್ಗೆತ್ತು ಹರಿನ್ಮಣಿ
ವಳಯಾಂಶುಗೆ ಸಾರ್ದ ದೀವದೆರಲೆಗೆ ಶಶಿಮಂ
ಡಳದೆರಲೆಯ ಪದವಿಯನಾಕುಳ
ವಳಿತ ಕಟಾಕ್ಷರುಚಿಯಿನಬಲೆಯರೀವರ್ || ೭೫

ಅರಸಿಯರ ವಿತತಭವನೋ
ತ್ಕರಂಗಳಂತದಱ ಬಳಸಿಯೋಲಗಿಸಲ್ ಬಂ
ದುರು ಶೈಳಂಗಳವೋಲಿರೆ
ಗಿರೀಂದ್ರಮೆಂಬಂತಿರಿರ್ದುದಾ ನೃಪಭವನಂ || ೭೬

ಅಭಿಮಾನಿ ಸತ್ಯಭಾಷಣ
ನಭಿಯಾತಿವಿಭೀಷಣಂ ಯಶೋಭೂಷಣನ
ಸ್ತಭಯಂ ನಯವಿಕ್ರಮಿ ವಿ
ಶ್ವಭೂತಿ ವಿಶ್ವಂಭರಾಧಿಪತಿಯದನಾಳ್ವಂ || ೭೭

ದಿವಸೇಂದ್ರನಂತೆ ಸತತಂ
ಭುವನವ್ಯಾಪ್ತಪ್ರತಾಪನಂಭೋನಿಧಿಯಂ
ತವಿಕಳಗಾಂಭೀಯುತಂ
ಕುವಳಯಸಖನಂತೆ ಮತ್ತೆ ಸನ್ನುತವೃತ್ತಂ || ೭೮

ದಳಿತ ಲಸತ್ಕುಂದದ್ಯುತಿ
ಯಳಂಕೃತಾಶೇಷಭುವನಮಾ ನೃಪನ ಯಶಂ
ಬಳಯಿಪುದರಿನೃಪವನಿತೋ
ಜ್ಜ್ವಳಮುಖಚಂದ್ರಂಗೆ ಮಳಿನತೆಯನಿದುಚಿತ್ರಂ || ೭೯

ವಿತತಾಶಾಚಕ್ರಮನ
ದ್ವಿತೀಯತೇಜದೊಳೆ ಸತತಮಾಕ್ರಮಿಪಾಭೂ
ಪತಿಯೊಳ್ ಸಹಸ್ರತೇಜ!
ಪ್ರತಾನದಿಂ ವ್ಯಾಪಿಪರ್ಕನೆಣೆಯೆನಿಸುವನೇ || ೮೦

ಅರಿಬಾಂಧವದಾನಾರ್ಥಂ
ವರಕೋಶದಿನೆಸೆವ ಖಳ್ಗರತ್ನಂಗಳನಾ
ದರದಿಂ ತೆಗೆದು ನರೇಂದ್ರಂ
ನಿರುತಂ ಕೋಪಪ್ರಸಾದ ಸಿದ್ಧಿಯನಾಂಪಂ || ೮೧

ಆತನಮಳಾಂಕಮಾಲೆಯ
ನೋತಚ್ಚರಸಿಯರೆ ಪಾಡೆ ಕೇಳ್ವವಸರದೊಳ್
ಮಾತೇನಿಂದ್ರಂ ತದ್ಗೃಹ
ಜಾತಪ್ರತಿನಿನದತತಿಗೆ ಕರಮೆ ಕನಲ್ವಂ || ೮೨

ಚಂ || ಅಮಳತರ ಸ್ವಭಾವನಕಳಂಕಚರಿತ್ರವಿರಾಜಿತಂ ಜಿನೇಂ
ದ್ರಮತಸರೋಜಿನೀ ವಿನುತ ಕೇಳಿಮರಾಳನಶೇಷಸಂಸ್ತತೋ
ತ್ತಮ ಮಹಿಮಾವಳಂಬನವದಾತಯಶೋನಿಧಿ ವೀತಮತ್ಸರಂ
ವಿಮಳಗುಣಾಂಬುರಾಶಿಯೆಸೆದಂ ನಿಸದಂ ಕುಸುಮಾಸ್ತ್ರಸನ್ನಿಭಂ || ೮೩

ಕಂ || ಪ್ರಜೆಗಳ ಪೆರ್ಚುಗೆಗೆಂದಖಿ
ಳಜನಾರ್ಥಿತಫಳದ ನಯಸುರದ್ರುಮಮಂ ವಿ
ಶ್ವಜಗನ್ನುತನಮಳಿನ ಬು
ದ್ಧಿಜಳದೆ ಬಳೆಯಿಸಿದನೇನುದಾರನೊ ಭೂಪಂ || ೮೪

ಆ ವಿಶ್ವಭೂತಿ ಭೂಪನ
ದೇವಿ ವಲಂ ಜೈನೆಯೆಂಬಳಾವಧು ವಿಬುಧ
ವ್ಯಾವರ್ಣನೀಯರೂಪ ಗು
ಣಾವಳಿಗಳ ಸಿರಿಯ ಸೊಬಗಿನಾಗರಮೆನಿಪಳ್ || ೮೫

ಚಂ || ನಗೆಯಲರ್ದಿರ್ದ ಪೂವೆಸೆವ ಕಣ್ಬೆಳಗಂತದು ಜೊನ್ನಮಾವಗಂ
ಸೊಗಯಿಪ ಕಮ್ಮನಪ್ಪುಸಿರೆ ತೆಂಕಣತಣ್ಣೆಲರಿಂಚರಂ ಕರಂ
ಬಗೆಗೊಳಿಸಿರ್ದ ಕೋಗಿಲೆಯ ನುಣ್ದನಿಯಾಗೆ ಜಗಜ್ಜಯಕ್ಕೆ ತಾಂ
ಮಿಗೆ ನೆರಮೆಂಬನಾ ಸತಿಯ ಜವ್ವನಮೆಂಬ ವಸಂತಮಂ ಸ್ಮರಂ || ೮೬

ಕಂ || ಆ ಲಲನೆಯ ರೂಪದು ಜನ
ತಾಲೋಚನಮಧುಪತತಿಗೆ ಮಂದಾರದ ಪೂ
ಮಾಲೆಯವೋಲನವರತಂ
ಲೀಲೆಯನಾಗಿಸುವುದೆಂದೊಡಾರ್ ಪೊಗೞದವರ್ || ೮೭

ಕಂ || ತನಗಿಂದ್ರಾಣಿಯೆ ಸರಿ ಗೋ
ಮಿನಿಯೆ ಸಮಾನಂ ಸರಸ್ವತೀದೇವಿಯೆ ನೆ
ಟ್ಟನೆ ಪಡಿ ರತಿರಮಣಿಯೆ ತೊಣೆ
ಯೆನೆ ರೂಢಿಯನಾಂತ ವಧುವನಿನ್ನೇವೊಗೞ್ವೆಂ || ೮೮

ರತಿಪತಿಯುಂ ರತಿಯುಂ ಸುರ
ಪತಿಯುಂ ತತಸತಿಯುಮಿರ್ಪವೊಲಂತಾ ಭೂ
ಪತಿಯುಂ ತತ್ಸುದತಿಯುಮು
ನ್ನತಿವಡೆದತಿಶಯಸುಖಾನ್ವಿತರ್ ಚಿರಮಿರ್ಪರ್ || ೮೯

ಉ || ಇಂದುಗೆ ಪಾರಿಜಾತವೊಡವುಟ್ಟಿದವೋಲೊಡವುಟ್ಟಿದಂ ಮಹಾ
ನಂದದೆ ವಿಶ್ವಭೂತಿಗೆ ವಿವೇಕವಿಭೂತಿ ವಿಶಾಖಭೂತಿಯೆಂ
ಬಂ ದಿನಪಪ್ರತಾಪನಬಳಾಜನಲೋಚನೆ ರಮ್ಯರೂಪನ
ಸ್ಪಂದಿತ ಧೈರ್ಯಸಂಪದನರಾತಿನೃಪಾಳಕಜಾಳ ಕಂಪದಂ || ೯೦

ಚಂ || ಎಸೆವ ವಿಶಾಖಭೂತಿಗೆ ನಿಜಾವರಜಂಗೆ ಸಮಸ್ತಧಾತ್ರಿ ಕೀ
ರ್ತಿಸೆ ಯುವರಾಜಸಂಪದಮನಿತ್ತು ಪೊದೞ್ದಧಿರಾಜಲಕ್ಷ್ಮಿಯೊಳ್
ನಿಸದಮೆ ವಿಶ್ವಭೂತಿ ವಸುಧಾಪತಿ ತಾನೊಲವಿಂದಮಿರ್ದು ಭೋ
ಗಿಸಿದನಶೇಷಭೋಗಮನುಪಾರ್ಜಿಸಿದಂ ನಿರವದ್ಯಕೀರ್ತಿಯಂ || ೯೧

ಕಂ || ಆ ವಿಶ್ವಭೂತಿಗಂ ಜೈ
ನೀವನಿತೆಗಮಂದು ವಿಶ್ವನಂದಿಕುಮಾರಂ
ಭಾವಭವಭಾಸುರಾಂಗಂ
ಭೂವಿನುತಗಭೀರನಾದನಾತ್ಮಜನಾದಂ || ೯೨

ಕಂ || ಮತ್ತಂ ವಿಶಾಖಭೂತಿಗ
ಮುತ್ತುಂಗಸ್ತನನಿತಂಬಿಂಬದ್ವಯೆ ಲೋ
ಕೋತ್ತಮೆ ಸುಂದರಿಗಂ ಪೆಸ
ರ್ವೆತ್ತಿರ್ದ ವಿಶಾಖನಂದಿ ನಂದನನಾದಂ || ೯೩

ಮಲ್ಲಿಕಾಮಾಲೆ || ವಿಶ್ವನಂದಿ ವಿಶಾಖನಂದಿಗಳಿರ್ವರುಂ ಗತಶೈಶವರ್
ವಿಶ್ವವಿಶ್ರುತಶಾಸ್ತ್ರ ಶಸ್ತ್ರಕಳಾಕಳಾಪವಿಶಾರದರ್
ವಿಶ್ವಭೂತಳನೂತ ನೂತನ ಯೌವನೋದಯರಿತ್ತರಾ
ವಿಶ್ವಭೂತಿ ವಿಶಾಖಭೂತಿಗಳಾಶಯಕ್ಕನುರಾಗಮಂ || ೯೪

ಕಂ || ವಿನಯಾಳಂಕರಣಂ ಪಾ
ವನಚರಿತಂ ನೀತಿನಿಪುಣನಪರಿಮಿತ ಯಶಂ
ಘನತೇಜಂ ಶೌರ್ಯಾಂಬುಧಿ
ಯೆನೆ ನೆಗೞ್ದಂ ವಿಶ್ವನಂದಿ ನಂದಿತಭುವನಂ || ೯೫

ವ || ಒಂದು ದಿವಸಮಾ ವಿಶ್ವಭೂತಿ ವಿಶ್ವಂಭರಾಧೀಶ್ವರಂ ಸುರೇಶ್ವರನಂತೆ ವಿತತ ವಿಭವ
ವಿಭ್ರಾಜಿತಂ ನಿಜಸಭಾಸದನಮನಳಂಕರಿಸಿರ್ದು-

ಚಂ || ಪಡಿಯಱನೊರ್ವನುರ್ವಿದ ಜರಾರುಜೆಯಿಂ ಶ್ಲಥ ಜೀರ್ಣಮಪ್ಪೊಡಲ್
ಕೆಡೆವವೊಲಾಗೆ ಬಾಗಿ ಮಿಗೆ ಕೆಮ್ಮಿ ಬೞಲ್ದಡಿಗೊರ್ಮೆ ನಿಂದು ಬಿ
ೞ್ದೆಡೆಯಿದು ತನ್ನ ಮುನ್ನೆಸೆವ ಜವ್ವನಮೆಂದಱಸುತ್ತುಮಿರ್ಪವೋಲ್
ನಡುಗುತುಮಾನತೋನ್ನತಮುಖಂ ಬರುತಿರ್ಪುದುಮಾಗಳಾತನಂ || ೯೬

ಕಂ || ಎಮೆಯಿಕ್ಕದೆ ನೀಡುಂ ನೋ
ಡಿ ಮನದೊಳಿಂತೆಂದನಕಟ ಪಂಚೇಂದ್ರಿಯ ಸೌ
ಖ್ಯಮನಭಿಲಾಷಿಪ ಜೀವಂ
ಭ್ರಮಿಯಿಸುಗುಮಪಾರ ಘೋರ ಜನ್ಮಾಟವಿಯೊಳ್ || ೯೭

ಭೂರಿಕ್ಲೇಶಾನ್ವಿತಮವಿ
ಚಾರಿತ ರಮಣೀಯಮಚಿರವೃತ್ತಿಯನೇಕಾ
ಕಾರ ಘನ ದುಃಖದಾಯಿಯ
ಸಾರಂ ಸಂಸಾರಸೌಖ್ಯಮೆಂತಿದು ಭೋಗ್ಯಂ || ೯೮

ಜನನಜಳನಿಧಿಯೊಳುದಯಿಪ
ಘನತರ ದುಃಖಂಗಳೆಣಿಕೆಯಂ ಮಾೞ್ಪನದಾ
ವನೊ ಸಾಕಲ್ಯದಿನಾಗಸ
ದ ನೀಳಮಂ ಗೞೆಯೊಳಳೆಯಲೇಂ ಬಂದಪುದೇ || ೯೯

ವಿಷಯಾಭಿಲಾಷೆಯೆಂಬೀ
ವಿಷಮ ಮಹಾನದಿಯ ಸುೞಿಯೊಳೊಯ್ದಿಕ್ಕುವ ಕಿ
ಲ್ಮಿಷಪತಿಯಂ ಮೋಹಮಹಾ
ವಿಷಧರನಂ ಗೆಲ್ಲದಂಗಮೆಲ್ಲಿತ್ತೊ ಸುಖಂ || ೧೦೦

ಉರಗನ ದಾಡೆಯೊಳಮೃತಮ
ನುರಿವಗ್ನಿಯೊಳಧಿಕ ಶೈತ್ಯಮಂ ಮೂರ್ಖಸಭಾಂ
ತರದೊಳ್ ವಿವೇಕಮಂ ಭವ
ಶರನಿಧಿಯೊಳ್ ಸಾರಸುಖಮನೇನಱಸುವುದೇ || ೧೦೧

ಶಾ || ಎಂತೆಂತೀಕ್ಷಿಪೊಡಂ ಸಮಂತು ವಿವಿಧ ಕ್ಲೇಶಂಗಳಂ ಜಂತುಗ
ತ್ಯಂತಂ ಸಂತತಮೀವುದಾವ ತೆಱದಿಂದಾರಯ್ವೊಡಂ ಸೌಖ್ಯಲೇ
ಶಂ ತನ್ನೊಳ್ ತಲೆದೋಱಲಾಱದೆನಿಪೀ ನಿಸ್ಸಾರಸಂಸಾರದಿಂ
ಭ್ರಾಂತೇಂ ಪಿಂಗುಗುಮಂಗಜಾರಿಜಿನಪಾದಾಂಭೋಜ ಸೇವಾರತಂ || ೧೦೨

ವ || ಎಂದು ನಿಸ್ಸಾರಸಂಸಾರೋದ್ವಿಗ್ನನುಂ ಭೂರಿವೈರಾಗ್ಯ ಸುಧಾವಾರಿ ನಿಮಗ್ನನುಮಾಗಿ-

ಉ || ತನ್ನ ಸಹೋದರಂಗೆ ಪರಮೋತ್ಸವದಿಂದೆ ವಿಶಾಖಭೂತಿಗಾ
ಸನ್ನುತ ವಿಶ್ವಭೂತಿಯಧಿರಾಜವಿಭೂತಿಯನಿತ್ತು ಮತ್ತೆ ಲೋ
ಕೋನ್ನತ ವಿಶ್ವನಂದಿಗೆ ನಿಜೋರ್ಜಿತಸೂನುಗೆ ಯೌವರಾಜ್ಯಮಂ
ತಾನ್ನಿಖಿಳಪ್ರಧಾನ ಪರಿವಾರ ಸಮನ್ವಿತನಿತ್ತನುತ್ತಮಂ || ೧೦೩

ವ || ಅಂತು ಪಂಡಿತಪುರುಷಪರಿಷತ್ಪೂಜ್ಯಂ ನಿಜರಾಜ್ಯಭಾರದಿಂ ಪಿಂಗಿ-

ಮ || ವರವೈರಾಗ್ಯರಸಪ್ರಪೂರ್ಣಹೃದಯರ್ ಭೂಪೇಂದ್ರರಯ್ನೂರ್ವರಾ
ದರದಿಂದಂ ಬರೆ ತನ್ನ ಕೊಡೆ ವಿಭುಧಸ್ತುತ್ಯಂ ಧರಾಧೀಶ್ವರಂ
ಪುರದಿಂದಂ ಪೊಱಮಟ್ಟನಂದು ವಿಳಸತ್ಪೌರಾಂಗನಾನೀಕ ಭಾ
ಸುರ ನೇತ್ರೋತ್ಪಳಮುಕ್ತ ಕಜ್ಜಳ ಜಳಾರ್ದ್ರೀಭೂತ ವೀಥೀಚಯಂ || ೧೦೪

ವ || ಅಂತು ತನ್ನಗಲ್ಕೆಯಂ ನಿಕ್ಕುವಂ ಸೈರಿಸದ ಪೌರಜನದ ಮನದ ಬಳಗಂ ಬೞಿಸಲುತ್ತುಮಿರೆ
ಪರಿತ್ಯಕ್ತ ಪರಿಗ್ರಹಂ ಪರಮಾನಂದದಿಂ ಪೋಗಿ-

ಮಾಳಿನಿ || ಬ್ರತಸಮಿತಿ ಸುಗುಪ್ತಿ ಶ್ರೀಧರ ಶ್ರೀಧವಾಖ್ಯ
ಬ್ರತಿಪತಿ ಪದಪದ್ಮದ್ವಂದ್ವಮಂ ಭಕ್ತಿಯಿಂದಂ
ಕ್ಷಿತಿಪತಿಕೃತಪುಣ್ಯಂ ಪೊರ್ದಿ ಜೈನೇಂದ್ದೀಕ್ಷಾ
ವಿತತವಿಭವದೊಳ್ಪಂ ಪೆತ್ತನುತ್ಕೃಷ್ಟಚಿತ್ತಂ || ೧೦೫

ವ || ಅಂತಾ ವಿಶ್ವಭೂತಿಭೂತಳಾಧಿಪಂ ಭೂತಳಪ್ರಣೂತ ಜಿನಮತಪ್ರಣೀತ ಮಹಾತ
ಪೋನುಷ್ಠಾನ ಪ್ರಾಜ್ಯರಾಜ್ಯಭಾರದೊಡೆಯನಾದನಿತ್ತಲ್ ವಿಶಾಖಭೂತಿಮಹಾರಾಜಂ-

ಮ || ಜನತಾಜಂಗಮಪಾರಿಜಾತನನವದ್ಯಾಚಾರಪೂತಂ ಲಸ
ದ್ವನಿತಾ ಸಂಕುಳಚಿತ್ತಜಾತನವನೀಚಕ್ರಪ್ರಣೂತಂ ಪದಾ
ವನತಾಶೇಷ ವಿರೋಧಿಜಾತನಭಿಮಾನಾಯತ್ತ ಚಿತ್ತಂ ದಯಾ
ಘನತಾಕೇತನನಾದನಾರ್ಹತಮತಾಂಭೋರಾಶಿ ತಾರಾಧಿಪಂ || ೧೦೬

ಚಂ || ಎಱಗಿಸಿ ತನ್ನ ಚಾರುಚರಣಾಂಬುರುಹದ್ವಿತಯಕ್ಕೆ ಮಿಕ್ಕ ನಾ
ಡೆಱೆಯರನೆಲ್ಲರಂ ವಿಬುಧವಂದಿಜನಂಗಳ ವಾಂಛಿತಾರ್ಥಮಂ
ಕಱೆದು ಶರನ್ನಿಶಾಕರಕರೋತ್ಕರದಂತೆ ಕರಂ ತೊಳಪ್ಪ ತ
ನ್ನಱಿಕೆಯ ಕೀರ್ತಿಯಿಂ ಬೆಳಗಿದಂ ಜಗಮಂ ವಸುಧೈಕಬಾಂಧವಂ || ೧೦೭

ಗದ್ಯಂ
ಇದು ನಿಖಿಳಭುವನಜನವಿನೂತ ಸ್ಫೀತಮಹಿಮಾವದಾತ ವೀತರಾಗ ಸರ್ವಜ್ಞ ಸಮೇತ
ಖ್ಯಾತಜಿನಸಮಯಕಮಳಿನೀಕಳಹಂಸಾಯಮಾನ ಮಾನಿತ
ಶ್ರೀನಂದಿಯೋಗೀಂದ್ರಪ್ರಸಾದ ವಾಚಾಮಹಿತ
ಕೇಶವರಾಜಾನಂದನಂದನ ವಾಣೀವಲ್ಲಭ ವಿಸ್ತಾರಿತಮಪ್ಪ
ವುಸಧೈಕಬಾಂಧವ ಶ್ರೀವರ್ಧಮಾನಪುರಾಣದೊಳ್
ವಿಶಾಖಭೂತಿರಾಜ್ಯಲೀಲೋದಯ ವರ್ಣನಂ
ಪ್ರಥಮಾಶ್ವಾಸಂ