ಕಂ || ಶ್ರೀಮದಮರಾಧಿಪತಿ ಸಕ
ಳಾಮಳಬೋಧಾಧಿಪತಿಯ ತನುಸಂಗತಿಯಿಂ
ದೇಮಾತೊ ಪೂತನಾದಂ
ಭೂಮಿನುತಂ ಪಂಚಪರಮಗುರುಪದವಿನತಂ || ೧

ಆಕೃತಿಯ ಕೋಮಳಾವಯ
ವಾಕೃತಿಯ ವಿಳಾಸದೇೞ್ಗೆಯಂ ನೋಡಿದನಾ
ನಾಕೇಶಂ ಸುರುಚಿರನಾ
ನಾಕೇಶಂ ಕೆದಱೆ ತೂಗುತುಂ ಮಸ್ತಕಮಂ || ೨

ವ || ಅಂತಾ ಪುರದರಂ ಪರಮನ ನಿರತಿಶಯರೂಪಸೌಂದರ್ಯಸಂಪತ್ತಿಯಂ ಸಹಸ್ರಲೋಚನಂಗಳಿಂ ನೀಡುಂ ನೋಡು ನಿರವಧಿಪ್ರೀತಿಕೌತುಕಾವದಾಚೇತೋನಿಕೇತನನಾಗಿ ಹಳಕಳಕುಳಿಶಜಳಜಸ್ವಸ್ತಿಕಾದಿ ಪ್ರಶಸ್ತಲಕ್ಷಣಲಕ್ಷಿತಂಗಳಪ್ಪ ತದೀಯ ಪದಪದ್ಮಯುಗಳ ಪದ್ಮರಾಗಮಣಿಗಳಿಂದಮೋರೊರ್ಮೆ ನಿಜಮೌಳಿಮಂಡನಮಾಂಗಳ್ಯಮುಮನೋ ರೊರ್ಮೆ ವಿಶಾಳಭಾಳಭೂಷಣವಿಶೇಷಮುಮನೋರೊರ್ಮೆ ಹೃದಯಪದಕಪದವಿಯು ಮನೊದವಿಸುತ್ತುಮಿಂತು ನಾಡೆಯುಂ ನಲಿದು –

ಕಂ || ದೇವಾಂಗಸ್ಪರ್ಶೋಚಿತ
ದೇವಾಂಗಾಮೂಲ್ಯವಸನದಿಂ ಛಾದಿಸಿದೈ
ರಾವಣವಾರಣರಮಣ ಮ
ಹಾವಿಪುಳ ಸ್ಕಂಧದೇಶದೊಳ್ ದಿವಿಜೇಶಂ || ೩

ವ || ಜಗತ್ತ್ರಯಪವಿತ್ರನಂ ಪ್ರಿಯಕಾರಿಣೀಪುತ್ರನಂ ಕುಂಕುಮಪಂಕಿಗಳ ನಿಜಾಂಕಪಂಕಜಾಸನದೊಳಿರಿಸಿ ತನ್ನ ಬೆನ್ನಂ ಸನ್ನುತ ಸಮುನ್ನತ ಘನಸ್ತನಭರಂಗಳವುಂಕಿ ಸೋಂಕುವಿನಮಿಂದ್ರಾಣಿಯುಮಂ ಕುಳ್ಳಿರಿಸಿದಾಗಳ್ –

ಕಂ || ಆನಂದದಿಂದೆ ನೆಗೞ್ದೀ
ಶಾನೇಂದ್ರಂ ರತ್ನದಂಡಮಂಡಿತಮಂ ಮು
ಕ್ತಾನಿರ್ಮಿತಲಂಬೂಷಮ
ನಾ ನಿಖಿಳಾಧಿಪತಿಗೆತ್ತಿದಂ ಸತ್ತಿಗೆಯಂ || ೪

ಚಮರರುಹಂಗಳನಧಿಕ
ಪ್ರಮೋದಭರದಿಂದಮಿಕ್ಕಿದರ್ ತೀರ್ಥಕರಂ
ಗಮಳಂಗಳನೆಸೆವ ಸನ
ತ್ಕುಮಾರ ಮಾಹೇಂದ್ರಕಲ್ಪದಿಂದ್ರರ ತಂದ್ರರ್ || ೫

ಸಾಮಾನಿಕಾಮರರ್ ಸ
ತ್ಪ್ರೇಮದೆ ವಿವಿಧಾಯುಧಂಗಳಂ ತಳೆದು ಜಗ
ತ್ಸ್ವಾಮಿಯನಳಂಕರಿಸಿದರು
ತ್ಸಾಮೋದ್ಭವಪತಿಯ ಸುತ್ತಲುಂ ಕರಮೆಸೆದರ್ || ೬

ಶ್ರೀಕರಮಂ ಭೃಂಗಾರಾ
ನೀಕಮನುತ್ಸವದೆ ವೈಜಯಂತೀಪ್ರಮುಖಾ
ಶಾಕನ್ಯಕೆಯರ್ ಪೊತ್ತರ್
ಲೋಕತ್ರಯಪತಿಯ ಮುಂದೆ ವಿಭ್ರಮವತಿಯರ್ || ೩

ರಥೋದ್ಧತೆ || ಪಾಳಿಕೇತನಕುಳಂಗಳಂ ಮರು
ತ್ಪಾಳಿಚಾರು ಕರಪಲ್ಲವಂಗಳಿಂ
ಲೀಳೆಯಿಂ ತಳೆದು ರಂಜಿಸಿತ್ತು ತ
ದ್ಬಾಳಕೋತ್ತಮನ ಮುಂದೆ ಸುತ್ತಲುಂ || ೮

ಕಂ || ಭಂಗಿವಡೆವಿನೆಗಮೋದಿನ
ಪಾಂಗೆಸೆವಾರಭಟಿಯಲ್ಲಿ ತತ್ಸಕಳ ಜಗ
ನ್ಮಂಗಳನ ಮುಂದೆ ಮುದದಿಂ
ಮಂಗಳಪಾಠಕತೆವೆತ್ತರರೆಬರಮರ್ತ್ಯರ್ || ೯

ವ || ಅಂತು ಕರಮೆ ಕೌತುಕಮೊದವೆ ಪರಮಗುರು ಭುಜಿಷ್ಠಭಾವಚತುರಮರಸಮಿತಿ ಶತಮಖಸಮನ್ವಿತಂ ಗಗನವಳಯಮಂ ವ್ಯಾಪಿಸಿನಡೆದು ಸುದರ್ಶನಂ ಸುದರ್ಶನನಗೇಂದ್ರ ಮನೆಯ್ದಿದಾಗಳ್ –

ಚಂ || ವನಸರಸೀವಿಹಾರಚತುರಂ ಸುರಭೀಕೃತಸರ್ವದಿಕ್ತಟಂ
ಘನಪಥವರ್ತಿ ಮಂದಗಮನಂ ಭ್ರಮರೋತ್ಸವಕಾರಿ ತಾಪಲೋ
ಪನಗುಣಧಾರಿ ತದ್ಭವ ಸಮೀರಣಮಂದಿದಿರ್ವಂದು ತೀಡಿತಂ
ದನಿಮಿಷರಂ ಮನಂಗೊಳಿಸಿದತ್ತು ಸುರೇಂದ್ರಗಜೇಂದ್ರಸನ್ನಿಭಂ || ೧೦

ಮ || ಅನಿಶಂ ನಾಲ್ದೆಸೆಯಲ್ಲಿ ನಾಲ್ಕೆಸೆವುವರ್ಹನ್ಯದಿರಂ ಬೇಱೆವೇ
ಱೆನೆ ವಿಭ್ರಾಜಿಪ ಭದ್ರಶಾಳಸಮಭಿಖ್ಯಂ ನಂದನಂ ಸಂದ ಸೌ
ಮನಸಂ ಪಾಂಡುಕಮೆಂಬ ರೂಢಿವಡೆದಾ ನಾಲ್ಕುಂ ಬನಂ ಸುತ್ತೆ ಚೆ
ಲ್ವನದೇಂ ತಾಳ್ದಿದುದೋ ನಿಳಿಂಪಗಜರಾಜತ್ಕಂದರಂ ಮಂದರಂ || ೧೧

ಕಂ || ಯೋಜನಲಕ್ಷೋನ್ನತಿ ತಾ
ರಾಜಾಳಸದಾ ಪ್ರದಕ್ಷಿಣೀಕೃತ ದೇವೋ
ರ್ವೀಜಸ್ಥಿತಿ ತನ್ನೊಳ್ ವಿ
ಭ್ರಾಜಿಸೆ ಸುರಸಮಿತಿಗಿತ್ತುದದು ಸಮ್ಮದಮಂ || ೧೨

ವ || ಅಂತು ಕಣ್ಗೆವಂದ ಮಂದರಾಚಳೇಂದ್ರಮಂ ವೃಂದಾರಕವೃಂದಮಮಂದಾನಂದ ದಿಂದಮೆಯ್ದೆ –

ಕಂ || ಪಾಂಡುಕವನಮಂ ಶಿಖಿಕೃತ
ತಾಂಡವಮಂ ಕಂಡು ತೀರ್ಥಂಕರವರಸವನೋ
ನ್ಮಂಡಿತಮಂ ಬಲವಂದುದ
ಖಂಡಿತ ಶೋಭಾನವದ್ಯಮಂ ತದ್ವನಮಂ || ೧೩

ವ || ತದನಂತರಂ ಪಾವನಮನಾ ವನಮನೊಳಪೊಕ್ಕು ಪೂರ್ವೋತ್ತರದಿಗ್ಭಾಗದೊಳ್ ತೊಳಗಿ ತೋರ್ಪ ಪಾಂಡುಕಶಿಳಾತಳದ ಸನ್ನಿಧಿಗೆ ತನ್ನಿಳಿಂಪನಾಯಕಂ ನಡೆದು –

ಕಂ || ಅದಱಗ್ರಭಾಗದೊಳ್ ಚೆ
ಲ್ವೊದವಿದ ಗಜವೈರಿಪೀಠಮಿರೆ ನೋಡಿ ತದ
ಗ್ರದೊಳಾ ಹರಿ ಬಿಜಯಂಗೆ
ಯ್ಸಿದನಿನನಂ ನೆಗೞೆ ಜಯಜಯ ಪ್ರಧ್ವಾನಂ || ೧೪

ಪೂರ್ವಾಭಿಮುಖಂ ಜಿನಶಿಶು
ಕರ್ವುರ ನಿಜದೇಹದೀಧಿತಿವ್ಯಾಪ್ತದಿಶಂ
ಸರ್ವಸ್ತುತನಾಗಳ್ ಕನ
ಕೋರ್ವೀಧರ ಶಿಖರದಂತೆ ಮಿಗೆ ಸೊಗಯಿಸಿದಂ || ೧೫

ಚಂ || ಸುರಪತಿ ರಾಗದಿಂ ಬೆಸಸೆ ವಾಯುಕುಮಾರಕನಲ್ಲಿ ಮೆಲ್ಲನೋ
ಸರಿಸದೆ ಬಂದು ಬೀಸಿ ಕಸವಂ ಕಳೆದಂ ಮೊದಲೊಳ್ ಬೞಿಕ್ಕವಾ
ದರದೆ ಲಸದ್ಬಳಾಹಕಕುಮಾರಕಜಾಳಕಮೋಳಿಯಿಂದೆ ಭೋ
ರ್ಗರೆದಮೃತಾಂಬುವಂ ಪರಿಮಳಾನ್ವಿತಮಂ ತಳಿದತ್ತು ಸುತ್ತಲುಂ || ೧೬

ವ || ಮತ್ತಮತ್ಯಂತಭಕ್ತಿಭಾವದಿಂ ಸಂಪ್ರಾಪ್ತ ಸದ್ಧರ್ಮಕಥಾಶ್ರವಣಂ ವೈಶ್ರವಣಂ ಮುನ್ನಮೆ ತನ್ನಾಕಿನಾಯಕಂ ಬೆಸಸೆ ಮಿಸುಪ ತುಚ್ಛ ತಚ್ಛಿಳಾಪಟ್ಟಮೆ ಕುಟ್ಟಿಮಮಾಗೆ ಶೋಣಮಾಣಿಕ್ಯ ಸ್ಥೂಣಶ್ರೇಣಿಶೋಭಿತಮುಂ ಹರಿನ್ಮಣಿ ಶಿಳಾಕಳಿತ ತುಲಾ ದಂಡಮಂಡಿತಮುಂ ಅತಿವ್ಯಕ್ತಮುಕ್ತಾನೀಕ ಸೌಕುಮಾರ್ಯಚ್ಛಾದ್ಯಹೃದ್ಯಯಂ ನಾನಾನೂನ ನೂತ್ನರತ್ನ ರಾಜಿತಭ್ರಾಜಿತ ವಿಚಿತ್ರಭಿತ್ತಿಭಾಗಮುಂ ನಿಜಶಿರಃ ಲಿಖಿತ ಲೇಖಲೋಕಾನೇಕವಿಧ ಧ್ವಜವ್ರಜವಿರಾಜಮಾನಮುಂ ನಯನಾನಂದಸ್ಯಂದಿ ವಂದನಮಾಳಾವಳೀವಿಳಸಿತಮುಂ ಮಣಿಭರ್ಮನಿರ್ಮಿತೋತ್ತುಂಗ ಭೃಂಗಾರಾದ್ಯಷ್ಟ ಮಂಗಳ ಸಂಗತಮುಂ ನವೀನ ದೇವಾಂಗದುಕೂಲಾದಿ ದಿವ್ಯವಸನ ಪ್ರಸರರಚಿತ ರುಚಿರ ವಿತತವಿತಾನಮುಂ ಪರಮಗುರು ಸವನಸಮುಚಿತ ವಿವಿಧೋಪಕರಣ ಪ್ರಶಸ್ತವಸ್ತು ವಿಸ್ತೀರ್ಣಮುಮೆನಿಸಿ ನಿಸದಮೆಸೆಯೆ ವಿರಚಿಸಿದ ಭುವನತ್ರಯಮಂಡನಾಭಿಷೇಕ ಮಂಡಪದಲ್ಲಿ –

ಕಂ || ಹರಿ ಹರಿಪದ ಸದನಂ ಭಾ
ಸುರ ಸುರಸಭೆ ಮೆಚ್ಚೆ ಜಿನನ ಜನನಾಭಿಷವಾ
ಚರಣೋಚಿತ ನಿಚಿತಾಳಂ
ಕರಣಮನಾಂತಂ ಸಮಸ್ತ ವಿಬುಧಾಭರಣಂ || ೧೭

ಹರಿಚಂದನ ಘನಚರ್ಚಾ
ಪರಿಷ್ಕೃತಾಂಗಂ ಶಶಾಂಕನಾಂಗತರಂಗೋ
ತ್ಕರಧವಲಧೌತದಿವ್ಯಾಂ
ಬರಾಂತರೀಯಂ ಪ್ರಮೋದಪುಳಕಿತಕಾಯಂ || ೧೮

ತರಳತರಮೌಕ್ತಿಕೋತ್ಕರ
ವಿರಾಜಿತ ಬ್ರಹ್ಮಸೂತ್ರನುದ್ಗತ ಭಾಭಾ
ಸುರರತ್ನರುಕ್ಮ ವಿರಚಿತ
ಸುರುಚಿರ ಕಟಕಾಂಗುಳೀಯಕರಕರಶಾಖಂ || ೧೯

ಅತಿಬಹಳಪರಿಮಳಾಮೋ
ದಿತ ಸಕಳದಿಗಂತರಾಳ ಕಳ್ಪಕುಜಾತ
ಪ್ರತಿ ನವವಿಕಸಿತಸುಮನ
ಸ್ತರಿರಚನಾರುಚಿರಶೇಖರಂ ಕರಮೆಸೆದಂ || ೨೦

ವ || ಅನಂತರಮಾಘನವಾಹನಂ ಘನವಾಹನಾಯುಧ ವಧೂಸಮೇತರುಂ ಸಮಯಸಮುಚಿ ತಾಳಂಕರಣೋಪೇತರುಂ ಪರಮಪ್ರಮೋದರಸವಶೀಕೃತಚೇತರುಮಪ್ಪ ಸುರೇಶ ಹುತಾಶ ಕೀನಾಶ ನಿರುತಿ ವರುಣ ಸಮೀರಣ ವೈಶ್ರವಣ ಫಣಿಭೂಷಣ ಫಣಿರಮಣ ತಾರಾರಮಣರೆಂಬ ದಿಶಾರಮಣರಂ ಬೇಗದಿಂ ಬರಿಸಿ ದಶದಿಸೆಯೊಳಮಿರಿಸಿ ಬೞಿಯಮೊಳಗಣ ಚತುರ್ದಿಶೆಗಳೊಳ ವಾರಣಾಚ್ಯುತೇಂದ್ರ ಪ್ರಮುಖರಪ್ಪ ಕಳ್ಪಾಮರರುಮಂ ಚಮರವೈರೋಚನಪ್ರಮುರಪ್ಪ ಭವನಾಮರರುಮಂ ಚಂದ್ರಾದಿತ್ಯ ಪ್ರಮುಖರಪ್ಪ ಜ್ಯೋತಿಷ್ಕಾಮರರುಮಂ ಸತ್ಪುರುಷಮಹಾಪುರುಷ ಪ್ರಮುಖರಪ್ಪ ವ್ಯಂತರಾಮರರುಮನಿರಿಸಿ ತಾನುಮೀಶಾನೇಂದ್ರನುಂ ದಕ್ಷಿಣೋತ್ತರಾಭಿಮುಖರಾಗಿ –

ಕಂ || ತುಂಗತರಂಗಳನುತ್ಪೀ
ಠಂಗಳನಾನಂದದಿಂದಳಂಕರಿಸಿದರು
ತ್ತುಂಗಗುಣಂಗಭಿಷವ ಸ
ನ್ಮಂಗಳಮಂ ಸಂಗಳಿಪ್ಪ ಸಂಭ್ರಮದಿಂದಂ || ೨

ಪ್ರಣವೋಚ್ಚಾರಣಪೂರ್ವ
ಪ್ರಣೀತ ನಾಂದೀಸ್ತವಂಗಳಂ ಪೃಥುಕೃತ ಸ
ತ್ಪ್ರಣವನರತಿ ಗಂಭೀರ
ಪ್ರಣಾದದಿಂದೋದಿದರ್ ಮರುದ್ಗಣರಮಣರ್ || ೨೨

ಘನಪಟಳದ ನಿನದಮುಮಂ
ವನಧಿಯ ನಿನದಮುಮನೊಂದುಮಾಡಿದ ತೆಱದಿಂ
ದನವಧಿ ಸುರದುಂದುಭಿರವ
ಮನುಗತ ಜಯಜಯ ನಿನಾದಮೊದವಿದುದಾಗಳ್ || ೨೩

ಚಂ || ಸುರತರುಪಲ್ಲವಂ ಸುರಕುಜಪ್ರಸವಂ ಸುರಭೂಜಚರ್ಚೆ ಭಾ
ಸುರ ಬಿಸಸೂತ್ರಮೆಂಬಿವಱಿನೊಪ್ಪಿ ವಿನಿರ್ಮಳ ತೀರ್ಥವಾರಿ ಸ
ದ್ಭರಿತೆಮೆನಿಪ್ಪ ಹೇಮಮಯಕುಂಭಚತುಷ್ಟಯಮಂ ಪ್ರಮೋದದಿಂ
ದಿರಿಸಿದನಂದು ಕಣ್ಗೆಸೆಯೆ ಕೋಣಚತುಷ್ಟಯದಲ್ಲಿ ವಾಸವಂ || ೨೪

ಕಂ || ಭೂರಿತರ ಕಾಂತಿಸಂತತಿ
ರಾರಾಜಿತ ವಿತತದೀಪಕಳಿಕಾಕುಳದಿಂ
ನೀರಾಜಿಸಿದಂ ಹರಿ ಜಿನ
ದಾರಕನಂ ಭವ್ಯನಿಕರನಿಸ್ತಾರಕನಂ || ೨೫

ಮಿಗೆ ಭವ್ಯ ಸಸ್ಯಸಂಪ
ತ್ತಿಗೆ ಕಾರಣಮೆನಿಪ ಮುಗಿಲ ಬಳಗಮಿವೆಂಬಂ
ತೊಗೆದುವು ಹರಿತಾಂ ನಿರವಿಸೆ
ನೆಗೞ್ದಗುರ ಮಗಮಗಿಸಿ ಸೊಗಯಿಪ ಕರ್ವೊಗೆಗಳ್ || ೨೬

ಸುಮನೋಕ್ಷತ ಚಂದನಯುತ
ಕಮನೀಯ ಜಳಂಗಳಿಂದಮಿಂದ್ರರ್ ಕೊಟ್ಟ
ರ್ಘ್ಯಮನರ್ಘಗುಣನಮುಂದೊ
ಪ್ಪಮನಾಂತುದು ವಿನಯವಿನತ ತಾರಾವಳಿವೋಲ್ || ೨೭

ಮ || ಸ್ರ || ಸುಮನೋದಾಮಂಗಳಂ ಕೋಮಳಫಳಕುಳಮಂ ದೂರ್ವೆಯಂ ದರ್ಭಮಂ ಗಂ
ಧಮನಾದಂ ಶೋಭೆವೆತ್ತಕ್ಷತಮನೆಸೆವಸಾನ್ನಾಯ್ಯಮಂ ಮತ್ತಮತ್ಯು
ತ್ತಮ ಪೂಜಾಯೋಗ್ಯ ವಸ್ತೂತ್ಕರಮನಮರಕಾಂತಾ ಸಮೇತಂ ಶಚೀದೇ
ವಿ ಮರುನ್ನಾಥಂಗೆ ನೀಡುತ್ತಿರೆ ಸೊಗಯಿಸಿತಾ ಸಂಭ್ರಮಂ ಕಣ್ಗಳುಂಬಂ || ೨೮

ಚಂ || ಪೆಱಉದಕಂಗಳೀ ತ್ರಿಜಗದೀಶನ ಮಜ್ಜನದುಜ್ಜುಗಕ್ಕದೇಂ
ನೆಱೆವುದೆ ಪಂಚಮಾಂಬುನಿಧಿಸಂಚಿತ ನಿರ್ಮಳಭೂರಿವಾರಿಗಳ್
ನೆಱೆವವೊಲೆಂದು ವಜ್ರಿ ಬೆಸಸುತ್ತಿರೆಯಲ್ಲಿವರಂ ಸುರೋತ್ಕರಂ
ಮೆಱೆದುದು ಪಂತಿಗಟ್ಟಿಯೆರಡುಂ ದೆಸೆಯೊಳ್ ಸಮುಪಾತ್ತಸಂಭ್ರಮಂ || ೨೯

ಸುರುಚಿರ ಶಾತಕುಂಭಮಯ ಕುಂಭಚಯಂಗಳನೆತ್ತಿ ನೆತ್ತಿಯೊಳ್
ಕರಶಿಖರಂಗಳೊಳ್ ಕರತಳಂಗಳೊಳಾಂತು ನಿತಾಂತರಾಗದಿಂ
ಸುರತತಿ ದುಗ್ಧವಾರಿಧಿಯ ವಾರಿಗಳಂ ತರೆ ದೇವರಾಜನಾ
ದರದೊಳೆ ಮಾಡಿದಂ ಜಿನವರಂಗೆ ಲಸಜ್ಜನನಾಭಿಷೇಕಮಂ || ೩೦

ಹರಿ ಪರಮಂಗೆ ಭೋರ್ಗರೆದು ಮಾೞ್ಪಭಿಷೇಕದ ಚೆಲ್ವು ಕಣ್ಗೆ ಬಂ
ದುರುತರ ದೇವದುಂದುಭಿರವಂ ಕಿವಿಗುಣ್ಮುವ ದುಗ್ಧವಾರಿ ಶೀ
ಕರತತಿ ಮೆಯ್ಗೆ ಬಾಯ್ಗೆ ಜಯವಾಕ್ಸುಧೆ ನಾಸಿಕೆಗಾಸ್ಫುರತ್ಪಯಃ
ಪರಿಮಳಮೀಯೆ ಸಮ್ಮದಮನೇಂ ನಲಿದತ್ತೊ ಸುರೋತ್ಕರಂ ಕರಂ || ೩೧

ಸ್ರ || ಕ್ಷೀರಾಂಭೋರಾಶಿ ದೇವಾವಳಿ ಮೊಗೆಯೆ ಮಹಾಕುಂಭಸಂದೋಹದಿಂ ನಿ
ರ್ನೀರಂ ತಾನಾಯ್ತು ನಾನಾಮರಸಮಿತಿ ವಿಮಾನಂಗಳಾಪೂರದೊಳ್ ಡಿಂ
ಡೀರಶ್ರೀವೆತ್ತುವೇನದ್ಭುತಮೊ ಹರಿಕೃತಂ ಜೈನಜನ್ಮಾಭಿಷೇಕಂ || ೩೨

ಕಂ || ಇಂಗಡಲ ತಾಯ್ಮಣಲ್ ಬೆ
ಳ್ದಿಂಗಳ ಬಯಲಂತೆ ವಿಶದಮಾಗೆ ಸುರೌಘಂ
ಪೊಂಗೊಡದಿಂದಡಕಿದುದು ಜಿ
ನಂಗಭಿಷವಸಮಯ ಸಮುಚಿತಾಮೃತ ಜಳಮಂ || ೩೩

ಚಂ || ತ್ರಿಭುವನವಲ್ಲಭಂಗೆ ಜನನೋತ್ಸವದೊಳ್ ಹರಿಮಾಡೆ ರೂಢಿವೆ
ತ್ತಭಿಷವಣಪ್ರಪಂಚಮನದಾರ್ ಗಳ ಬಣ್ಣಿಪರೊಂದೆ ಜಿಹ್ವೆಯಿಂ
ಶುಭರಸನಾಸಹಸ್ರಯುಗಮುಳ್ಳ ಫಣೀಶ್ವರನುಂ ಪೊದೞ್ದ ತ
ದ್ವಿಭವವಿಶೇಷಮಂ ನೆಱೆಯೆ ವೀಕ್ಷಿಸಿ ಕೀರ್ತಿಸಲಾರನೆಂಬಿನಂ || ೩೪

ಚಂ || ಎನಿತು ಭುಜಂಗಳಂ ತಳೆದನಿಂದ್ರನೆನಿತ್ತು ಘಟಂಗಳಂ ಸಮಂ
ತನಿಮಿಷಕೋಟಿ ನೀಡಿದುದನಿತ್ತಮೃತಾಬ್ಧಿಯವಾರಿ ತೀರ್ದುವೆಂ
ದನುಮಿಸಲಾವನುಂ ನೆಱೆಯನೆಂಬಿನಮದ್ಭುತಮಾದ ಜನ್ಮಮ
ಜ್ಜನದೊಳೆ ತಜ್ಜಿನಾರ್ಭಕನಕಂಪನನಿರ್ದನದೇಂ ಬಲಾಢ್ಯನೋ || ೩೫

ಮ || ಅದನೇವಣ್ಣಿಪೆನಣ್ಣ ಕಣ್ಣಱಿದು ದೇವಾನೀಕಮಲ್ಲಲ್ಲಿ ತ
ಪ್ಪದೆ ತಂತಮ್ಮ ನಿಯೋಗದೊಳ್ ನೆಗೞ್ದುದುರ್ವೀಮಂಡಳಂ ಮೇರೆದ
ಪ್ಪಿದ ದುಗ್ಧಪ್ಪವದಲ್ಲಿ ಮೆಯ್ಗರೆದುದಾಶಾಭಿತ್ತಿಗಳ್ ವಾದ್ಯನಾ
ದದೆ ನಿರ್ಭಿನ್ನತೆವೆತ್ತುವಿಂತೆಸೆದುದಾ ಜನ್ಮಾಭಿಷೇಕೋತ್ಸವಂ || ೩೬

ಶಾ || ಮೂಱುಂ ಲೋಕದ ಮಂಗಳೊತ್ಕರದ ಸರ್ವಾಸಾರಮೊಂದಾಗಿ ಮೆ
ಯ್ದೋಱಿತ್ತಾವಗಮಿಲ್ಲಿ ತಾನೆನಿಪ ಪೆಂಪಂ ತಾಳ್ದಿ ನೋೞ್ಪರ್ಗದೇಂ
ಬೀಱಿತ್ತೋ ಪರಮಪ್ರಮೋದರಸಮಂ ಸದ್ಭಕ್ತಿಯಂ ಸ್ವಾಂತದೊಳ್
ಪೇಱಿರ್ದಾ ಮಘವಂ ವಿನಿರ್ಮಿಸಿದ ತಜ್ಜನ್ಮಾಭಿಷೇಕೋತ್ಸವಂ || ೩೭

ವ || ಅನಂತರಂ –

ಕಂ || ಮಿಸುಗುವ ವರ್ಣಾನ್ನದೆ ದೀ
ಪಸಮೂಹದೆ ತತ್ಫಳಪ್ರತಾನದೆ ರಾರಾ
ಜಿಸೆ ಜಿನಶಿಶುವಂ ನೀರಾ
ಜಿಸಿ ಸಂತಸದಂತನೆಯ್ದಿದಂ ಸುರರಾಜಂ || ೩೮

ಉ || ಮಂಗಳಗೀತವಾದ್ಯನಿನದಂಗಳಶೇಷದಿಶಾತಟಂಗಳೊಳ್
ಪೊಂಗಿರೆ ಪೊಂಗೊಡಂಗಳನನೇಕ ಸುಗಂಧ ವಿಮಿಶ್ರಿತಾಂಬು ಪೂ
ರ್ಣಂಗಳನಾಂತು ಪೀವರ ಭುಜಾವಳಿಯಿಂದಭಿಷೇಕಮಂ ಜಿನೇಂ
ದ್ರಂಗೆ ಸುರೇಂದ್ರನಂದು ನೆಲೆವೆರ್ಚಿದ ಸಮ್ಮದದಿಂ ನಿಮಿರ್ಚಿದಂ || ೩೯

ಕಂ || ಪರಮಜಿನತನುವಿನಿರ್ಗತ
ಪರಿಮಳದೊಳ್ ಬೆರಸಿ ಕಂಪು ನೂರ್ಮಡಿಸೆ ಮನೋ
ಹರಮಾದ ಗಂಧಜಳಮಂ
ಧರಿಯಿಸಿದುದು ಶಿರದೊಳೆಸೆದು ಸುರನಿಕುರುಂಬಂ || ೪೦

ಸಂಪನ್ನಭಕ್ತಿಯುಕ್ತ ನಿ
ಳಿಂಪವಧೂವಿತತಿ ವಿಮಳಗಂಧೋದಕದಿಂ
ಸಿಂಪಿಣಿಯನೆಸಗಿ ನಿಜತನು
ವಂ ಪುಳಕಕುಳಕ್ಕೆ ಮಾಡಿದತ್ತಾಶ್ರಯಮಂ || ೪೧

ಚಂ || ವರಸುಖಕಾರಿಯಂ ಮಳವಿದಾರಿಯನಾಜಿಗಂಧವಾರಿಯಂ
ಪಿರಿದನುರಾಗದಿಂ ಚತುರಮರ್ತ್ಯಚಯಂ ನಿಜದೇಹಯಷ್ಟಿಯೊಳ್
ಕರತಳದಿಂದೆ ಕೊಂಡು ತಳೆದಿಂದು ಕೃತಾರ್ಥರೆವಾದೆವೆಂದು ಸಂ
ಸರಣದ ತಾಪಮೆಂ ಕಳೆದೆವೆಂದೆ ವಲಂ ನಲಿದತ್ತು ಸುತ್ತಲುಂ || ೪೨

ಕಂ || ಶಚಿ ಪರಮನ ತನುಜಲಕಣ
ನಿಚಯಮನಾತ್ಮೀಯಪಾಣಿಪಲ್ಲದ ಧೃತದಿಂ
ಶುಚಿತಮ ಮೃದುತಮ ದೇವಾಂ
ಗಚೇಳದಿಂ ತೊಡೆದು ತುಡಿಸಿದಳ್ ತುಡುಗೆಗಳಂ || ೪೩

ಮ || ನಿರಳಂಕಾರವಿರಾಜಮಾನ ಜಿನನಂಗಶ್ರೀಯ ಸಂಸಂಗದಿಂ
ಪಿರಿದುಂ ಶೋಭೆಗೆ ಸಂದುವಂದು ಶಚಿ ತಂದಾನಂದದಿಂದಿಕ್ಕಿದಾ
ಭರಣಂಗಳ್ ಚರಣಂಗಳೊಳ್ ಕಟಿಯೊಳಾ ಹಸ್ತಂಗಳೊಳ್ ಮಸ್ತದೊಳ್
ಕೊರಲೊಳ್ ಕರ್ಣಯುಗಂಗಳೊಳ್ ಬೆರಲೊಳುದ್ಯದ್ರತ್ನವೈರಾಜಿಗಳ್ || ೪೪

ಕಂ || ಅಂಜನರಹಿತನ ಲೋಚನ
ಕಂಜಮನಾ ಕಂಜವದನೆ ಮುದದಿಂ ಸೊಗಯಿ
ಪ್ಪಂಜನರೇಖೆಗಳಿಂದಂ
ರಂಜಿಸಿ ಭಂಜಿಸಿದಳಾತ್ಮದುರಿತಾಂಜನಮಂ || ೪೫

ಎಸೆವಾ ಶಿಶುವಿನ ನೊಸಲೊಳ್
ಬಿಸಜಾನನೆ ನಿಸದಮೆಸೆದು ಪೊಸಕಜ್ಜಳದಿಂ
ಪೊಸಯಿಸಿ ಮಿಸುಗುವ ತಿಳಕಮ
ನಸದಳಮೊಳಕೊಂಡಳಿಂದ್ರಸತಿ ಸಂತಸಮಂ || ೪೬

ವ || ಆ ಪ್ರಸ್ತಾವದೊಳ್ –

ಚಂ || ಅಮಳಜಳಂಗಳಿಂ ಸುರಭಿಗಂಧದಿನಕ್ಷತದಿಂ ಪ್ರಸೂನದಿಂ
ದಮೃತಮಯಾನ್ನದಿಂ ಜ್ವಲಿತದೀಪಕಳಾಪದಿನುದ್ಘಧೂಪದಿಂ
ವಿಮಳ ಫಳಂಗಳಿಂ ಚಮರಜಾದಿ ಸಮಸ್ತ ಸುವಸ್ತುವಿಂ ಜಿನ
ಕ್ರಮಕಮಳಂಗಳಂ ಪದೆದು ಪೂಜಿಸಿ ರಾಜಿಸಿದಂ ಸುರೇಶ್ವರಂ || ೪೭

ವ || ಅನಂತರಮನಘಸ್ತವನೋನ್ಮುಖಂ ಶತಮುಖಂ ತದಭಿಮುಖಂ ನಿಕಳ ಸುರಸಮಾಜ ಪ್ರಮುಖಂ ಸುಮುಖನಾತ್ಮೀಯನಿಟಿಳತಟಘಟಿತಕರಕಮಲಕುಟ್ಮಳನಾಗಿ

ಪೂರ್ವವಿಳಂಬಿತಂ || ಜಯಜಯಾಪಕರಘನೌಘವಿಭಾವಸೋ
ಜಯಜಯೋದ್ಯತಖರ್ವ ವಪುರ್ವಸೋ
ಜಯಜಯಾಶ್ರಿತವಾಂಛಿತ ಕೃದ್ವಸೋ
ಜಯಜಯಾಮಿತ ಸೌಖ್ಯ ಜನಾವ ಮಾಂ || ೧

ಜಯಜಯಾಖಿಳಲೋಕಶಿಖಾಮಣೇ
ಜಯಜಯಾಮಿತ ಚಿಂತಿತ ಕೃನ್ಮಣೇ
ಜಯಜಯಾತ್ಮ ಕುಲಾಬ್ಜ ನಭೋಮಣೇ
ಜಯಜಯೇಶ ಮಮಾಂಶು ವಿಧೇಶಹಿಂ || ೨

ಜಯಜಯಾಂಗ ಭವಾವನಿಭೃತ್ಪವೇ
ಜಯಜಯೋದ್ಧತ ಮೋಹತಮೋರವೇ
ಜಯಜಯಾನುಪಮಾನ ಮಹಾಕವೇ
ಜಯಜಯಾಭವ ಮೇ ಭವವಾಕ್ಷಿಪೇಃ || ೩

ಜಯಜಯಾಮಳಬೋಧ ಪಯೋನಿಧೇ
ಜಯಜಯೋತ್ಸವಕೃನ್ನಿಜಸನ್ನಿಧೇ
ಜಯಜಯಾನತವಿಶ್ವತಪೋನಿಧೇ
ಜಯಜಯೇನಕುರುಷ್ಟ ಮದೀಪ್ಸಿತಂ || ೪

ಜಯಜಯಾಮೃತಮಾಕೃತ ಸಂಗತೇ
ಜಯಜಯಾರ್ಜಿತ ಸದ್ಗುಣತೆಸಂಹತೇ
ಜಯಜಯೋಜ್ಜ್ವಳಕೀರ್ತಿ ರಮಾಪತೇ
ಜಯಜಯೋದ್ಧುರ ಮಾಂ ಜಿನ ಸಂಸೃತೇಃ || ೫

ವ || ಎಂದನೇಕ ಪವಿತ್ರಸ್ತೋತ್ರಂಗಳಿಂ ಸ್ತುತಿಯಿಸಿ ಮಘವನಘಹರನನುರದೊಳುರುಮುದದಿನ ಮುರ್ಚಿ ಬಿಚ್ಚತಂ ನಲಿವ ನಿಳಿಂಪನಿಕರಮಂ ಮರಲ್ಚಿ ಮೇರುವಿಂ ಮೇರೂಪಮಮಾದೈ ರಾವಣ ವಾರಣಾಧಿಪತಿಯ ಚಾರುತರಸ್ಕಂಧದೇಶಕ್ಕೆ ಬಂದು ದಕ್ಷಿಣಾಭಿಮುಖನಾಗಿ ಮುನ್ನಿನಂತೆ ಸನ್ಮಾರ್ಗಪ್ರಭಾವಕಂ ಸನ್ಮಾರ್ಗಂಬಿಡಿದು ನಡೆವಾಗಳ್ –

ಕಂ || ಬಹುಳತರ ಶಂಖಘಂಟಾ
ಕಹಳಾಢಕ್ಕಾಮೃದಂಗ ದುಂದುಭಿರವಮುಂ
ಬಹುಜಯಜಯರವಮುಂ ದಿ
ಕ್ಕುಹರಮನಾವರಿಸಿದತ್ತು ಸವಿಯತ್ತಳಮಂ || ೪೮

ವ || ಅಂತು ಸುರಸವೃತ್ತಿಯಿಂ ಸುರಸಮಿತಿವೆರಸು ಸುರರಾಜಂ ಸುರಸರಣಿಯೊಳ್ ನಡೆದು ಧರಣಿತಳಕ್ಕವತರಿಸಿ ಭುವನತ್ರಯಗುರುವಿನ ಬರವಿನೊಸಗೆಯೊಳ್ ನಿಸದಮೆನಿಪ ಪಸದನಂಗೊಂಡು ಸಕಳವಸುಮತೀವಳಯವಿಳಾಸಿನೀಕನತ್ಕನಕಕುಂಡಳಮೆನಿಸಿ ಮನಸಿಶಯನ ಜಯನ ಮಂದಿರಸೌಂದರ್ಯಮನೊಳಕೊಂಡ ಕುಂಡಪುರಮಂ ಪರಮ ಪುರುಷಪುರಸ್ಸರಂ ಪುರಂದರಂ ಉರುತರಪ್ರಮೋದದಿಂ ಪೊಕ್ಕು ಸುರವರೂಥಿನೀ ಸನಾಥಂ ಮಾಡಿ ನಡೆವಾಗಳ್ –

ಚಂ || ಸುರುಚಿರ ಪಾರಿಜಾತಕುಸುಮಸ್ತಬಕಂಗಳನುಜ್ವಳಾಕ್ಷತೊ
ತ್ಕರ ಹರಿಚಂನದ್ರವಯುತಂಗಳನಂಜುಳಿಯಿಂದೆ ತಾಳ್ದಿ ಬಂ
ದುರುತರ ಭಕ್ತಿಯಿಂ ತ್ರಿಭುವನಪ್ರಭುಗಿತ್ತು ಸದರ್ಘ್ಯಮಂ ನಮ
ಸ್ಕರಿಸುತುಮಿರ್ದುದುತ್ಪುಳಕ ಬಾಷ್ಪಚಯಂ ವರಪೌರಸಂಚಯಂ || ೪೯

ಕಂ || ಲಲನಾಜನಮನಿತಂ ನಿಜ
ವಿಲೋಳ ಲೋಚನಮರೀಚಿನಿಚಯದೆ ರತ್ನಾ
ವಲಿ ದೀಪಕಳಾಪದೆ ಮಂ
ಗಲನಿಳಯನನಂದು ನಿವಳಿಸಿತ್ತತಿಮುದದಿಂ || ೫೦

ವ || ಅಂತು ಪೌರಾನುರಾಗಸಾಗರಂ ಕ್ಷೋಭಿಸುತ್ತುಮಿರೆ ಮಹಾವಿಭೂತಿಯಿಂ ಪೋಗಿ ಭೂತಳೇಶ್ವರನಿಕೇತನಮನುತ್ಕೇತನಮನೊಳಪೊಕ್ಕು ಕರಿವರಾಗ್ರದಿಂ ಧರಾತಳಕ್ಕವತರಿಸಿ ಮುನ್ನಮೆ ತನ್ನ ಬೆಸದಿಂ ಸುರಶಿಲ್ಪಿ ಕಲ್ಪಿಸೆ ಅನಲ್ಪಶೋಭಾಸ್ಥಾನಮಾದಾಸ್ಥಾನಮಹಾ ಮಂಡಪದೆ ಮಧ್ಯರಂಗೋತ್ತುಂಗ ನಾನೂನೂನ ನೂತ್ನರತ್ನ ರಚಿತ ರಂಜಿತ ಕುಂಜರಾರಿ ವಿಷ್ಟರದೊಳಾವಿಬುಧಜನಕಳ್ಪವಿಷ್ಟರಂ ತ್ರಿವಿಷ್ಟಪಸದೀಶ್ವರನನಗಣ್ಯ ಪುಣ್ಯನನಸದೃಶಲಾವಣ್ಯನನಸಮಗುಣವರೇಣ್ಯನನಶೇಷ ಲೋಕಶರಣ್ಯನನೞ್ಕಱಿಂ ಬಿಜಯಂಗೆಯ್ಸುವುದುಂ ಆ ಪ್ರಸ್ತಾವದೊಳ್-

ಕಂ || ಮಾಯಾನಿದ್ರಭರಮುಂ
ಮಾಯಾಶಿಶುವುಂ ಕುಮಾರ್ಗಿಗಳ ತತ್ವದವೋಲ್
ಮಾಯಾಮವಾಗೆ ಜಿನೇಶನ
ತಾಯುಂ ತಂದೆಯುಮತೀವ ಸಂಭ್ರಮದಿಂದಂ || ೫೧

ಪರಿತಂದು ಸಕಳ ಜಗದೀ
ಶ್ವರನಂ ನಿಜತನಯವರನನತ್ಯಾದರದಿಂ
ಪರಿವೀಕ್ಷಿಸಿ ಪರಮಾನಂ
ದರಸಾರ್ಣವದೊಳಗೆ ನೀಡುಮೋಲಾಡಲೊಡಂ || ೫೨

ಆ ಜಿನಪನ ಜನನುತ ಜನ
ನೀಜನಕರನಿರಿಸಿ ರತ್ನಪೀಠದೊಳಿಂದ್ರಂ
ಪೂಜಿಸಿದಂ ದಿವ್ಯಾಂಬರ
ರಾಜಿತ ಭೂಷಾನುಲೇಪ ಮಾಲ್ಯಾದಿಗಳಿಂ || ೫೩

ವ || ಅನಂತರಂ –

ಮ || ಗುರುವಾದಂ ಭುವನತ್ರಯಕ್ಕೆ ಮಿಗೆ ಪೆಂಪಂ ತಾಳ್ದಿದೀದೇವನೀ
ಗುರುವಿಂಗಂ ಗುರುವಾದಿರಿಂತು ಪರಮಾಗಣ್ಯಕ್ಕೆ ಪುಣ್ಯಕ್ಕೆ ನೋಂ
ತರದಾರೀ ಭುವನಾಂತರಾಳದೊಳೆ ನಿಮ್ಮಂತೆಂದು ದೇವೇಂದ್ರನಾ
ದರದಿಂದಂ ಪೊಗೞ್ದಂ ಜಿನೇಂದ್ರನ ಲಸನ್ಮಾತಾಪಿತೃದ್ವಂದ್ವಮಂ || ೫೪

ಉ || ವಂಚಿಸಿ ನಿಮ್ಮನಿಂದು ಭವದೀಯ ತನೂಜನನಸ್ಮದೀಶನಂ
ಕಾಂಚನಭೂಧರಕ್ಕೆ ಪದೆದುಯ್ದು ಸಮಸ್ತಸುರಾನ್ವಿತಂ ಲಸ
ತ್ಪಂಚಮವಾರಿರಾಶಿಜಳದಿಂದಭಿಷೇಚಿಸಿ ಬಂದೆನೆಂದು ಶ
ಕ್ರಂ ಚತುರೋಕ್ತಿಯಿಂದವರ್ಗೆ ಪೇೞ್ದು ಸಮುತ್ಸವಮಂ ನಿಮಿರ್ಚಿದಂ || ೫೫