ಕಂ || ಶ್ರೀ ವೀರಂಗಿದೆ ಚರಮಂ
ಭಾವಿಸೆ ಪಸದನಮೆನುತ್ತೆ ತತ್ಕೌಶಲಮಂ
ಭಾವಕತೆಯಿಂದೆ ಮೆಱೆದಂ
ದೇವೇಂದ್ರಂ ಪಂಚಪರಮಗುರುಪದವಿನತಂ || ೧

ವ || ಅಂತು ನಿಖಿಳಭುವನಾತಿಕೌತುಕಕರಂಡಮಾದ ಮಂಡನಮಂ ತ್ರಿಜಗನ್ಮಂಡನಂಗೆ ಮಂಡನಮನಳವಡಿಪುದುಮನಂತರಂ ನಿಳಿಂಪ ಶಿಲ್ಪಿರಚಿತಮುಂ ವಿಚಿತ್ರ ರತ್ನನಿಚಯ ಖಚಿತಮುಂ ಸ್ಫುರತ್ಪ್ರಭಾವಿಭಾಸಮಾನಮುಂ ಚಂದ್ರಪ್ರಭಾಭಿಧಾನಮುಮಪ್ಪ ಯಾಪ್ಯ ಯಾನಮಂ ದೇದೀಪ್ಯಮಾನಾನೂನ ಭಕ್ತಭಾವದಿಂ ದೇವರ್ಕಳವಟಯಿಸೆ –

ಕಂ || ಭುವನತ್ರಯಹರ್ಮ್ಯಾಗ್ರ
ಪ್ರವರ ಪ್ರಥಮೋಪಬದ್ಧ ಸೋಪಾನಮನೇ
ಱುವ ತೆಱದಿನೇಱಿದಂ ಜಿನ
ರವಿ ಸಿವಿಗೆಯನಿಂದ್ರದತ್ತ ಹಸ್ತಾಳಂಬಂ || ೨

ಆ ಸಮಯದೊಳನಿಮಿಷಭೇ
ರೀಸಮುದಯ ಸಮುಚಿತಪ್ರಣಾದಂ ಸಕಳಾ
ಶಾಸಮಿತಿಯನಂಬರಮುಮ
ನೋಸರಿಸದೆ ತುಂಬಿತಂದದೇಂ ವ್ಯಾಪಕಮೋ || ೩

ವ || ಆಗಳ್ ನಿಜಪ್ರತಿಪತ್ತಿಯನತಿಕ್ರಮಿಸದಾ ಭವ್ಯೋತ್ಪಳ ಶಶಾಂಕನಳಂಕರಿಸಿರ್ದಮ –

ಮ || ಶಿಬಿಕಾರತ್ನಮನಾಂತರೇೞಡಿವರಂ ಭೂಪೇಂದ್ರರಲ್ಲಿಂ ಬೞಿ
ಕ್ಕೆ ಬಲಾಢ್ಯರ್ ಖಚರೇಂದ್ರರೇೞಡಿವರಂ ಸಧ್ಯಾನದಿಂದಾಂತರ
ತ್ತ ಬೞಿಕ್ಕುತ್ಸವದಿಂ ಸುರಾಸುರಚಯಂ ಬಂದಾಂತುದಲ್ಲಿಂದವ
ತ್ತ ಬೞಿಕ್ಕಿಂಬಿನೊಳಾಂತು ಮೇಲೆ ನಡೆದರ್ ದೇವೇಂದ್ರರಾನಂದದಿಂ || ೪

ವ || ಅಂತು ಗಗನಾಂಭೋನಿಧಾನಂ ವಿರಾಜಮಾನವಿಮಾನಫೇನಿಳಮಾಗೆ ಮಹಾ ವಿಭೂತಿಯಿಂ ನಡೆದು –

ಸ್ರ || ನಾನಾಭೂಜಪ್ರವಾಳಪ್ರಸವರಸವದುದ್ಯತ್ಫಳಾನೀಕಶೋಭಾ
ದಾನಕ್ಕತ್ಯಂತಲೀಲಾಶ್ರಿತ ಶುಕ ಪಿಕ ಮತ್ತಾಳಿಮಾಳಾವಿಶಾಳ
ಧ್ವಾನಕ್ಕಾಯತ್ತ ಸರ್ವರ್ತುಗೆ ಸುರಪಥದಿಂ ನಾಥಷಂಡಾಭಿಧಾನೋ
ದ್ಯಾನಕ್ಕಾನಂದದಿಂದಂದವತರಿಸಿದರಿಂದ್ರರ್ ಧೃತಶ್ರೀಜಿನೇಂದ್ರರ್ || ೫

ವ || ಅಂತು ಪರಮಪಾವನತಪೋವನಪ್ರಭಾವನೋಚಿತಮೆನಿಸಿದಾ ವನದ ಮಧ್ಯಾವನಿಗೆ ಭಾವನಾದಿದೇವನಿಗೆ ಭಾವನಾದಿದೇವನಿಕಾಯ ಜಯ ಜೀವನಂದಾರಾವನಿವಹಮಾ ವಗಂ ತೀವೆ ದೆಸೆಯಂ ದೇವನಾಯಕರವತರಿಸೆ ತದೀಯ ಬಂಧುರ ಸ್ಕಂಧಧಾರಿತ ಶಿಬಿಕೆಯಿನಿೞಿದು ಪುಳೋಮಜಾಪ್ರಸಾರಿತ ದುಕೂಲಪ್ರಚ್ಛದಾಚ್ಛಾದಿತಮಾದ ಮೇದಿನಿ ತನಗಂ ನುತಪಾದಪಲ್ಲವೋಲ್ಲಸಿತ ರಾಗಾಭೋಗದಿನಪೂರ್ವ ದಿವ್ಯಾಂಬರಾಚ್ಛಾದಿ ತಮಾದುದೆಂಬ ಶಂಕೆಯಂ ಭೋಂಕೆನೆ ಮಾಡೆ –

ಕಂ || ಪಟುಪಟಹರಟನಮಾಶಾ
ತಟಮಂ ತರ್ಕೈಸೆ ಮಂಜುಮಾಕಂದ ಮಹಾ
ವಿಟಪಿಯ ಮೊದಲ ವಿಶಾಲ
ಸ್ಫಟಿಕಶಿಳಾತಳಕೆ ವಿಜಯಿ ಬಿಜಯಂಗೆಯ್ದಂ || ೬

ಪಿಡಿದ ಜವನಿಕೆಯ ಮಱೆಯೊಳ್
ತೊಡವುಮನುಡುಗೆಯುಮನಂಗದಿಂ ಪಿಂಗಿಸಿ ಮುಂ
ಬಡಗಮೊಗದಿಂದೆ ಮೂಜಗ
ದೊಡೆಯಂ ಕುಳ್ಳಿರ್ದನೆಸೆಯೆ ಸುಸ್ಥಾಸನದಿಂ || ೭

ವ || ಅಂತಾ ಕಲ್ಯಾಣಭಾಸನಂ ನಿಬಿಡನಿಬದ್ಧ ಪಲ್ಯಂಕಾಸನನಾಗಿ –

ಕಂ || ಭಾಸುರಮೆನಿಸಿದ ಮಾರ್ಗಶಿ
ರಾಸಿತದಶಮೀದಿನಾಪರಾಹ್ಣದೊಳಿಂದೂ
ದ್ಭಾಸಿನಿಯುತ್ತರೆ ಸಮನಿಸೆ
ಪಾಸಟಿಯಿಲ್ಲೆನಿಪ ಶುಭಮುಹೂರ್ತೋದಯದೊಳ್ || ೮

ಸನ್ನುತಗುಣನಿಳಯಂ ಸಿ
ದ್ಧಂ ನಮಯೆಂದಖಳಸಂಗ ವಿರತಿ ಸಮೇತಂ
ತನ್ನ ಶಿರೋರುಹತತಿಯಂ
ತನ್ನಯೆ ಕರತಳದೆ ಕಿೞ್ತು ತಳೆದಂ ತಪಮಂ || ೯

ಉ || ಆ ಕಮನೀಯಕುಂತಳಕಳಾಪಮನುತ್ತಮರತ್ನಪಾತ್ರದಿಂ
ನಾಕನಿವಾಸಿಗಳ್ ತಳೆದು ಮಂಗಳವಾದ್ಯರವಂಗಳುಣ್ಮೆ ನಿ
ರ್ವ್ಯಾಕುಳಮುಯ್ದು ಪಂಚಮಪಯೋಧಿಯ ಮಧ್ಯದೊಳಿಕ್ಕಿ ನೀಳರ
ತ್ನಾಕರಲಕ್ಷ್ಮಿಯಂ ತದಮೃತಾಬ್ಧಿಗೆ ಪೆತ್ತರುದಾತ್ತ ವೈಭವರ್ || ೧೦

ಶಾ || ಆಮೋದಾನುಗತ ಭ್ರಮದ್ಭ್ರಮರಮಾಳಾಮಂಜುಳಂ ಕೌಸುಮ
ಸ್ತೋಮಾಸಾರಮಪಾರಮಂದು ನಭದಿಂದಂ ಬಂದುದಾದಂ ಮರು
ದ್ಭಾಮಾಮಂಗಳ ಗೀತಜಾತಕಳನಾದಂ ಕೂಡೆ ಪೊಣ್ಮಿತ್ತು ಸು
ತ್ರಾಮಂ ಪೂಜಿಸಿದಂ ಸುವಸ್ತುಚಯದಿಂ ಶ್ರೀ ವೀರಪಾದಂಗಳಂ || ೧೧

ಉ || ಇಂತು ಬಳಾರಿ ಚಾರು ಪರಿನಿಷ್ಕ್ರಮಣೋತ್ಸವಮಂ ಪದದ್ವಯಾ
ಕ್ರಾಂತ ಜಗತ್ತ್ರಯಂಗೆಸೆವ ಸನ್ಮತಿ ಸಮ್ಮನಿನಾಯಕಂಗೆ ಚೈ
ರಂತನ ತೀರ್ಥಕೃತ್ಸಮಯಶಂಗೆ ವಿನಿರ್ಮಿಸಿ ನಿರ್ಮಳಾಂತರಂ
ಗಂ ತಳರ್ದಂ ದಿವಕ್ಕೆ ವಿಹಿತಾನತಿ ತಾನತಿ ಹರ್ಷಿತಾಶಯಂ || ೧೨

ವ || ಇತ್ತಲ್ –

ಕಂ || ಆರ್ಯನುತಂಗಾಯ್ತು ಮನಃ
ಪರ್ಯಯಬೋಧಂ ವಿಶುದ್ಧ ಸಪ್ತರ್ಧಿಗುಣಾ
ಶ್ಚರ್ಯಂ ಜನಿಯಿಸಿತೆಸೆದುದು
ಧೈರ್ಯಂ ಸಮನಿಸಿತು ಸಕಳಸಂಯಮಸಾರಂ || ೧೩

ವ || ಅಂತಾ ಮುಮುಕ್ಷುಜಗಚ್ಚಕ್ಷು ದೀಕ್ಷಾಗ್ರಹಣಗೃಹೀತ ವರಿಷ್ಠ ಷಷ್ಠೋಪವಾಸ ಪ್ರತಿಜ್ಞಾಪಾರಗಂ ಪರಮೈಶ್ವರ್ಯದಾನಸಮರ್ಥ ದಾನತೀರ್ಥಪ್ರವರ್ತನಾರ್ಥಂ ಚತುರ್ಥ ದಿನದೊಳ್ ಮುನಿಭೋಜನ ಸಮುಚಿತ ವೇಳೆಯೊಳ್ ಪರಮಸಂಯಮರಮಾ ರಮಣೀಯ ಸ್ವರ್ಣಕರ್ಣಂಕುಂಡಳಂ ಸಜ್ಜನನಿವಸನಾನುಕೂಲಮೆನಿಪ ಕೂಲಪುರಮಂ ಪೊಕ್ಕಾಶಕ್ರವಂದಿತನನಾಂದೋಳಿತ ಬಾಹುಯುಗಳನುಂ ಅನತಿದ್ರುತವಿಳಂಬಿತಗಮನನುಂ ಅವಿಕೃತಸಕಳಾವಯವನುಂ ಅನಭಿಲಕ್ಷ್ಮಿತದಾತೃದರ್ಶನನುಂ ಅನವೇಕ್ಷಿತದಿಶಾನೀಕನುಂ ಅನುಪಹತ ಜೀವಜಾಳನುಂ ಅಪರಿತ್ಯಕ್ತ ಯುಗಾಂತರ ನಿರೀಕ್ಷಣನುಂ ಅನಾದೃತ ನಿಜಾಂಗನುಮಸಂಸ್ಕಾರವಿಶೇಷಪೋಷಿತದೇಹನುಂ ಅನವಧಾರಿತರಾಗಿಜನ ವಿನೋದ ವಾಕ್ಯನುಂ ಅದೀನವದನಾರವಿಂದನುಂ ಅಪಾದಪರಿಘಟ್ಟಿದ ಧರಣೀತಳನುಂ ಅಪರಿ ಸ್ಪೃಷ್ಟ ಪರಕೀಯಕಾಯನುಂ ಅನವಳೋಕಿತ ಗೃಹಾಂತರಾಳನುಂ ಆಗಿ ಸ್ಥಳಕಮಳ ವಿಳಾಸಮಂ ಚರಣಕಮಳಯುಗಳಂ ಬೀಱೆ ರಾಜಮಾರ್ಗದೊಳ್ ಬರ್ಪಾಗಳ್ –

ಕಂ || ಕೂಲಾಭಿಧಾನಧರಣೀ
ಪಾಲಂಗನುಕೂಲವೃತ್ತಿ ಪಡಿಯಱನೋರ್ವಂ
ಲೀಲೆಯೊಳೆ ಪರಿದು ಪೇೞ್ದಂ
ಶೀಲಗುಣಾವನಿಯ ಬರವನಂದಾಸುರಪಂ || ೧೪

ವ || ಅಂತು ಪೇೞೆ –

ಕಂ || ಭೂತಳಪತಿ ಪದೆದು ಶುಚಿ
ರ್ಭೂತಂ ದಿವ್ಯಾರ್ಚನಾಸಮೇತಂ ಭವ್ಯ
ವ್ರಾತಪರೀತಂ ಪರಮವಿ
ಭೂತಿಯಿನಂದಾ ತಪೋಧನಂಗಿದಿರ್ವಂದಂ || ೧೫

ಬಂದು ಬಲವಂದು ಪೂಜಿಸಿ
ಬಂದಿಸಿ ತತ್ಪದಪಯೋಜಮಂ ನಿಲ್ಲಿಂ ನೀ
ಮೆಂದೊಸೆದು ನಿಲಿಸಿದಂ ಶ್ರೀ
ನಂದಿತಪೋನಿಧಿಯನಧಿಕವಾಣೀಕಾಂತಂ || ೧೬

ಸುರಭೂಜಂ ಚಿಂತಾಮಣಿ
ಪರುಷದ ಕಣಿ ಕಾಮಧೇನು ನವನಿಧಿಪತಿ ಸಿ
ದ್ಧರಸಂ ತನಗಿದಿರ್ವಂದವೊ
ಲರಸಂ ಸ್ಮರಹರನ ಬರವಿನೊಳ್ ಕರಮೊಸೆದಂ || ೧೭

ವ || ಅನಂತರಂ –

ಕಂ || ಬಿಜಯಂಗೆಯ್ಸಿದನುದ್ಯ
ಧ್ವಜವಿಳಸತ್ಪೂರ್ಣಕಳಶವಂದನಮಾಳಾ
ವ್ರಜಪರಿರಂಜಿತವೆನಿಸಿದ
ನಿಜಧಾಮಕ್ಕಾಮಹಾನುಭಾವಸ್ತುತನಂ || ೧೮

ವ || ಅಂತು ಬಿಜಯಂಗೆಯ್ಸಿ –

ಮ || ಉಚಿತೋಚ್ಚಾಸನದಲ್ಲಿ ಕುಳ್ಳಿರಿಸಿ ಪಾದಕ್ಷಾಳನಂಗೆಯ್ದು ಮಂ
ತ್ರಚಯೋಚ್ಚಾರಣಪೂರ್ವಕಂ ಸಲಿಲದಿಂ ಸದ್ಗಂಧದಿಂದಕ್ಕಿಯಿಂ
ಪ್ರಚುರಾಮೋದಲತಾಂತದಿಂ ಚರುಕದಿಂ ಸದ್ದೀಪದಿಂ ಧೂಪದಿಂ
ನಿಚಿತೋದ್ಯತ್ಫಲದಿಂದಮರ್ಚಿಸಿದನಾಭೂಪಂ ಜಗದ್ದೀಪನಂ || ೧೯

ಕಂ || ಇಂದೀ ಮದೀಯ ಜನ್ಮಂ
ಸಂದೆಯಮೇಂ ಸಫಳಮಾಯ್ತು ಜಗದಾರಾಧ್ಯಂ
ಬಂದಂ ಮಂದಿರಕೆಂದಾ
ನಂದದೊಳೊಂದಿದನುದಾತ್ತ ಕವಿಜನಮಿತ್ರಂ || ೨೦

ವ || ಅಂತಾ ಸಂವೀತ ಧೌತದುಕೂಲಂ ಕೂಲಾವನಿಪಾಲಂ ಪ್ರತಿಗ್ರಹಾದಿ ನವವಿಧ ನವಪುಣ್ಯ ಪ್ರಾವೀಣ್ಯನುಂ ಅತಿ ಪ್ರವೃದ್ಧಶ್ರದ್ಧಾದಿ ಸಮಸ್ತ ಗುಣವರೇಣ್ಯನುಮಾಗಿ –

ಕಂ || ಪರಮಪವಿತ್ರನ ಕರಸರ
ಸಿರುಹಪುಟಾಂತರದೊಳಖಿಳ ಕರಣಪವಿತ್ರಂ
ನಿರವದ್ಯಮನತಿಮುದದಿಂ
ಪರಮಾನ್ನಮನಿಕ್ಕಿದಂ ತ್ರಿವಾರಮುದಾರಂ || ೨೧

ವ || ಅಂತಿಕ್ಕುವುದುಮಾಗಳಾಯೋಗಿಜನಕಾಂತಂ ನಿರಂತರಾಯನಿರ್ವರ್ತಿತಾತ್ಮೀಯ ಕಾಯಸ್ಥಿತಿಕನಾಗಿ ಕೆಯ್ಯೆತ್ತಿಕೊಂಡು –

ಕಂ || ದಾನಮಿದಕ್ಷಯಮಕ್ಕೆಂ
ದಾ ನಿರುಪಮ ಚಾರುಚರಿತನಪಗತದುರಿತಂ
ಸೂನೃತವಚನಂ ಪರಸಿ ದ
ಯಾನಿಧಿ ತನ್ನಿಳಯದಿಂದೆ ಬಿಜಯಂಗೆಯ್ದಂ || ೨೨

ವ || ಆಗಳಾ ಕೂಲಭೂಪಾಳನಾಲಯಾಜಿರದೊಳ್ –

ಕಂ || ಅಲರ್ಗಳಸರಿ ಪೊಂಗಳಮೞೆ
ಯೆಲರ್ಗಳ ತೀಟಂ ಸುರಾನಕದ ದನಿ ದಿವಿಜಾ
ವಳಿಯ ಪೊಗೞ್ತೆಗಳೆಂಬೀ
ಲಲಿತಾಶ್ಚರ್ಯಂಗಳಾದಮೊದವಿದುವಯ್ದುಂ || ೨೩

ವ || ಅತ್ತಲಾ ಮುಮುಕ್ಷುಮುಖ್ಯಂ-

ಕಂ || ಗ್ರಾಮ ನಗರ ಗಿರ ಕಂದರ
ಭೀಮಾರಣ್ಯಪ್ರದೇಶದೊಳ್ ವಿಹರಿಸಿದಂ
ಕಾಮಾರಣ್ಯಹುತಾಶಂ
ಭೂಮಹಿತಂ ಭೂಮಿಹಿತಚರಿತ್ರೋದಾತ್ತಂ || ೨೪

ಯಮಿಗೆ ಸಮನಿಸಿತಖಿಳಸ
ತ್ವಮೈತ್ರಿ ಸಂಕ್ಲಿಶ್ಯಮಾನದೊಳ್ ಕಾರುಣ್ಯಂ
ವಿಮಳಗುಣದೊಳ್ ಪ್ರಮೋದಂ
ಸಮಂತು ದುರ್ವಿನಯಜನದೊಳೌದಾಸೀನ್ಯಂ || ೨೫

ಯತಿಪತಿಗೆ ಸಿಂಹನಿಷ್ಕ್ರೀ
ಡಿತಮಾಚಾಮ್ಲಪ್ರವರ್ಧನಂ ಮೊದಲಾದೂ
ರ್ಜಿತ ನಿರಶನಭೇದಂಗಳೊ
ಳತಿಶಯದ ನೆಗೞ್ತೆ ಪೆತ್ತುದಪವಿಘ್ನತೆಯಂ || ೨೬

ಕ್ಷಿತಿವಳಯ ವಂದಿತಂ ಸ
ನ್ನುತಮೆನಿಸಿರ್ದುಗ್ರ ದೀಪ್ತ ತಪ್ತ ಮಹಾ ಘೋ
ರ ತಪೋವಿಶೇಷವಿಧಿಯೊಳ್
ರತಿಪತಿಯ ವಿರೋಧಿ ಯತ್ನಪರತೆಯನಾಂತಂ || ೨೭

ಪದಿನೆಣ್ಫಾಸಿರ ಶೀಲದೊ
ಳೊದವಿದುದೆಣ್ಬತ್ತುನಾಲ್ಕು ಲಕ್ಕೆ ಗುಣದೊಳೊ
ಪ್ಪಿದುದು ಯತಿರಾಜರಾಜನ
ಹೃದಯಂ ಸದಯಂ ಪ್ರಭೂತಮಹಿಮಾಭ್ಯುದಯಂ || ೨೮

ಪಂಚಮಹಾವ್ರತವಾರಿಧಿ
ಪಂಚದಶಮಿತಪ್ರಮಾದ ವಿಚ್ಛೇದಕರಂ
ಪಂಚವಿಧಸಮಿತಿಯುಕ್ತಂ
ಪಂಚಭವಂಗಳ ವಿಡಂಬಮಂ ಸ್ತಂಭಿಸಿದಂ || ೨೯

ವ || ಒಂದು ದೆವಸಮಾ ಮುನಿರಾಜಂ ವಿರಾಜಮಾನ ವಿವಿಧೋತ್ತುಂಗ ಮತ್ತವಾರಣಮೆನಿಪ ವಾರಣಾಸೀಪುರೋಪಾಂತದ ವಿಕಸದತಿಮುಕ್ತಕ ಪ್ರಸವ ಪರಿಮಳಪದರಸರದಿಂ ನಿಸದಮೆ ಸೆವತಿಮುಕ್ತಕಸಂಜ್ಞಾಸಮೇತ ಪರೇತವನದ ಪಾರ್ಶ್ವದಲ್ಲಿ –

ಮಾಳಿನಿ || ತಪನನಪರಪಾರಾವಾರಮಂ ಸಾರೆ ವೀರಂ
ವ್ಯಪಗತಪದ ವಿಕ್ಷೇಪಕ್ರಿಯಂ ಶಕ್ರವಂದ್ಯಂ
ಸ್ವಪರಹಿತಚರಿತ್ರಂ ನಿಃಪ್ರಕಂಪಾಂಗನಿರ್ದಂ
ಕ್ಷಪೆಯೊಳಘವಿಹೀನಂ ಹೇಮಶೈಲೋಪಮಾನಂ || ೩೦

ವ || ಅಂತು ರಾತ್ರಿ ಪ್ರತಿಮಾಯೋಗದೊಳಾ ಯೋಗಿಜನಪುಂಗವಂ ನಿಲ್ವುದುಂ ಆ ಪ್ರಸ್ತಾವದೊಳ್ –

ಉ || ಸಂದ ಗವೇಂದ್ರನಂ ಭುಜಗಭೂಷಣನೇ ಱಿ ಬರುತ್ತು ತತ್ತಪೋ
ನಂದಿತನಂ ಜಿನೇಂದುವನಭೀಕ್ಷಿಸಿ ಪಾಣಿಪಯೋಜಯುಗ್ಮಮಂ
ತಂದು ನೊಸಲ್ಗೆ ತಾಂ ಮುಗಿದು ಭಕ್ತಿಭರಾನತಮೂರ್ಧನಾಗೆ ಪೂ
ರ್ಣೇಂದುನಿಭಾಸ್ಯೆಯಂದು ಗಿರಿನಂದನೆ ವಿಸ್ಮಯದಿಂದೆ ನೋಡಿದಳ್ || ೩೧

ಕಂ || ರತಿಪತಿಗೆತ್ತಣಿನೀ ನ
ಗ್ನತೆ ಸಮಿನಿಸಿದತ್ತೆನುತ್ತೆ ಮಾನಸದೊಳ್ ವಿ
ಸ್ಮಿತೆಯಾದಳ್ ಪಾರ್ವತಿ ಯತಿ
ಪತಿಯ ಚಮತ್ಕೃತಿಯನೀವ ರೂಪಿಂಗೆ ಕರಂ || ೩೨

ವ || ಅನಂತರಮಾಕಾಂತೆ ನಿಜಕಾಂತಂಗಿಂತೆಂದಳ್ –

ಕಂ || ಬಲ್ಲಿದರುಂ ನಿವಗಧಿಕರು
ಮಿಲ್ಲ ವಿಚಾರಿಪೊಡೆ ಸಕಳ ಭುವನಂಗಳೊಳೆಂ
ದೆಲ್ಲರುಮೆಂಬರ್ ದೇವ ಜ
ಗಲ್ಲೋಚನ ನಿನ್ನೆನೆಱಗಿಪೀತನದಾವೊಂ || ೩೩

ಮಣಿವಿಭೂಷಣ || ಎಂದ ತನ್ನ ವಧುಗಾ ವಿಧುಶೇಖರನಾಗಳಿಂ
ತೆಂದನೊರ್ಮೆದಲೆ ಮೂಜಗಕುನ್ನತನಪ್ಪನಾ
ನಂದದಿಂದೆನಿಸುವೀ ವಿಭುಗಪ್ರತಿಮಾನಯೋ
ಗೇಂದುಗಾನೆಱಗೆ ಮಾನಿನಿ ವಿಸ್ಮಯಮಾದುದೇ || ೩೪

ವ || ಅದಲ್ಲದೆಯುಂ –

ಕಂ || ನಿಖಿಳಜಗಂಗಳೊಳಧಿಕನು
ಮಖಂಡಶೌರ್ಯನುಮಸಾರಸಂಸಾರ ಪರಾ
ಙ್ಮುಖನುಂ ನಿರುಪಮ ನಿರ್ಮಳ
ಸುಖಸಾರನುಮೆನಿಪ ವೀರನಂ ನೀನಱಿಯಾ || ೩೫

ವ || ಎಂದು ಚಂದ್ರಶೇಖರಂ ಭುವನತ್ರಯಶೇಖರನನುರು ಮುದದಿಂ ಪರಿಕೀರ್ತಿಸುತ್ತು ಮಿರ್ಪುದುಂ –

ಕಂ || ನಿನ್ನ ಪೊಗೞ್ತೆಗೆ ಪಕ್ಕಾ
ದನ್ನನ ಸನ್ಮತಿಯ ಶಕ್ತಿಯುನ್ನತಿಯಂ ನೋ
ೞ್ಪೆಂ ನೆಟ್ಟನೆ ತೋರ್ಪುದೆಲೇ
ಪನ್ನಗಭೂಷಣ ಮದಿಷ್ಟಮಂ ಸಲಿಪುದಿದಂ || ೩೬

ವ || ಎಂದು ನುಡಿದ ಮಡದಿಯ ನುಡಿಯಂ ಮೃಡನವಧರಿಸಿ ಮುಗ್ಧಭಾಗಕ್ಕೆ ಮುಗುಳ್ನಗೆ ನಗುತ್ತುಂ ತದೀಯಾವಾರ್ಯ ಧೈರ್ಯಮಂ ಸಾಶ್ಚರ್ಯಮಪ್ಪಂತು ನೀಱೆಗೆ ತೋಱಿಸುವ ಬವಸೆಯಿಂ ಸ್ವವಶವರ್ತಿಗಳಪ್ಪ ಧೂರ್ತ ಪಿಶಾಚನಿಶಾಚರರ್ಗೆ ವಾಚಂಯಮ ವರ್ಯನ ಧೈರ್ಯಾಚಳಮಂ ವಿವಿಧೋಲ್ಬಣ ವೈಕುರ್ವಣ ವಿಡಂಬನ ಶಂಖಪಾತದಿಂ ತೂರ್ಣಂ ಚೂರ್ಣೀಕರಿಸಿಮೆಂದು ಬೆಸಸಿದಾಗಳ್ –

ದ್ರುತವಿಳಂಬಿತ || ಮರುಳ ತಂಡದಿನಂಬರಮಂಡಳಂ
ಧರಣಿಮಂಡಳಮೆಂಬಿವು ದಿಕ್ಚಯಂ
ಬೆರಸು ಬೇಗದೆ ತೀವಿದುವಟ್ಟಹಾ
ಸರಸವಾರಿಧಿ ಮೀಱೆರೆ ಮೇರೆಯಂ || ೩೭

ಉ || ನೆಕ್ಕ ಕದಂಪು ಕಂಪಿಪಧರಂ ಮಿಗೆ ಕೆಂಪಡರ್ದಕ್ಷಿ ಬಿಟ್ಟ ಬಾ
ಯಕ್ಕುಳಿಸಿರ್ದ ಪೊಟ್ಟೆ ಪೊಱವಾಯ್ದೆರ್ದೆಯರ್ವಿಪ ಪುರ್ವು ಕೆಂಗದಿರ್
ಮಿಕ್ಕು ಮರಲ್ದ ದಾಡೆ ದಸಿಗಾಲ್ ಮಸಿಮೆಯ್ ಬಿಱುಸಾದ ಕೆಯ್ ಮರು
ಳ್ವಕ್ಕದ ನಿಟ್ಟೊಡಲ್ ಮಸೆದ ಕತ್ತಿಗೆ ಕಣ್ಬೊಲನಾದುವೆತ್ತಲುಂ || ೩೮

ಚಂ || ಒದಱಿ ಕುಕಿಲ್ದು ಬೆಟ್ಟುಗಳ ಕೆಯ್ದುಗಳುರ್ವಿದ ನೀರ ತೋರಗೆಂ
ಡದ ಸರಿಯಂ ಸಮಂತು ಸುರಿದುಗ್ರವಿಷಾಹಿಗಳಂತೆ ತಳ್ತು ಕಂ
ಠದೊಳೆ ತಗುಳ್ಚಿ ಪೆರ್ವುಲಿಯ ಸಿಂಹದ ಜಂಗುಳಿಯಾಗಿ ಪಾಯ್ದು ಮಾ
ಣದೆ ಬಿಱುಗಾಳಿ ದೂಳಿಗಳನಾಗಿಸಿ ಬಾಧಿಸಿದತ್ತು ತದ್ಬಳಂ || ೩೯

ವ || ಅಂತಾ ಮಹಾದ್ಭುತೋದ್ಭೂತ ಭೂತಪ್ರೇತಪಿಶಾಚನಿಶಾಚರನಿಚಯಂ ದೆಸೆದೆಸೆಯೊಳ ಸದಳಂ ಮಸಗಿ ಪಲತೆಱದ ವಿಕ್ರಿಯೆಗಳಂ ವಿಗುರ್ವಿಸಿ ನಿರ್ವಂದದಿಂ ನಿರರ್ಗಳಮುಪಸರ್ಗ ವರ್ಗಮಂ ಭರ್ಗಪರಿವಾರಂ ವಾರಣಾಸಿಯ ಪೌರವಾರಂ ನೆರೆದು ನೀಡುಮೆಸಗಿಯಸು ವಱೆಯಾಗಿ ನಿರರ್ಥಕ ಪ್ರಯಾಸಂಬತ್ತು ಸುಜನಸರೋಜ ಸೂರ್ಯನ ಧೈರ್ಯಾಚಳಮಂ ಚಳಿಯಿಸಲ್ ನೆಱೆಯದೆ ಅಂತರಂಗಭಂಗಭಾರದಿಂ ಜೋಲ್ದ ತೆಱದೆ ಬಱುತು ಪೆಱಗಣ್ಗೆ ಪಿಂಗೆ ಗಂಗಾಧರಂ ನಿರೀಕ್ಷಿಸಿ ನಿಜಾಂಗನೆಗಂದಿಂತೆಂದಂ –

ಕಂ || ತುಂಗತರಾವನಿಧರಮಂ
ಗುಂಗುಱುಕಾಯ್ದವೊಲಿದಾಯ್ತು ಕಡಂಗಿ ಸತಿ ನೀ
ನಂಗಜಗಜಗಜರಿಪುವಂ
ಭಂಗಿಪೆವೀ ಗಣದಿನೆಂಬ ನಮ್ಮುದ್ಯೋಗಂ || ೪೦

ವ || ಎಂದು ವಿಸ್ಮಯಸ್ಮೇರನಯನಾರವಿಂದೆಯಾದ ಸುಂದರಿಗೆ ಮಂದರಾಚಳಸ್ಥಿರನ ಮುನಿ ವರನ ನಿರತಿಶಯ ಧೈರ್ಯಪ್ರಭಾವಮಂ ವ್ಯಾವರ್ಣಿಸಿ ತಾನುಮಾಮಾನಿನಿಯುಮನೂ ನಾರ್ಚನಾನೀಕದಿಂ ಲೋಕಪೂಜ್ಯನಂ ಪೂಜಿಸಿ ಸುವೀರನುಮತಿವೀರನುಮೆಂದು ನಾಮಂಗಳಂ ಪ್ರೇಮದೆ ಜಿನಸ್ವಾಮಿಗಿಟ್ಟು ಪೊಡವಟ್ಟು ಪೋದರಿತ್ತಲ್ –

ಕಂ || ಉಪಸರ್ಗವಿಜಯಿ ಜಿನಪತಿ
ತಪನೋದಯದೊಳ್ ಸಮಾಪ್ತ ಯೋಗನಿಯೋಗಂ
ವಿಪುಳಯಶೋವ್ಯಾಪ್ತದಿಶಮ
ಕ್ಷಪಿತಮಳಂ ವಿಪುಳ ಸಂಯಮಂ ತಳರ್ದಲ್ಲಿಂ || ೪೧

ಚೋಳಾಂಧ್ರ ಮಗಧ ಗೂರ್ಜರ
ಮಾಳವ ಕರ್ಣಾಟ ಲಾಟ ಕರಹಾಟಕ ಪಂ
ಚಾಳಾದಿ ನಿಖಿಳ ಜನಪದ
ಜಾಳದೊಳೆ ವಿಹಾರಿಸುತ್ತುಮಿರ್ಪುದುಮಿತ್ತಲ್ || ೪೨

ವ || ಸಕಳ ಸಂಪದಾಳಂಬಮಾದ ಸಿಂಬಿಯೆಂಬ ಪೆಸರಿನೆಸೆವ ವಿಷಯದೊಳ್ ವಿಷಮ ಸಾಯಕಾಯತ್ತ ಚೂತಾಳಿಯಂ ವೈತಾಳಿಯೆಂಬ ನಗರಿಯನಗಣಿತಲೀಲೆಯನಾಳ್ವ ನಯ ವಿನಯವಿಕ್ರಮಾದಿ ಗುಣಪೇಟಕನೆನಿಪ ಚೇಟಕರಾಜಂಗಮತುಳಸೌಭಾಗ್ಯ ಭದ್ರೆಯೆನಿಸಿದ ಸುಭದ್ರೆಗಂ ಜನಿಯಿಸಿದ ಧನಚಂದರ ಧನದತ್ತೋಪೇಂದ್ರ ಸುದತ್ತ ಸಿಂಹಚಂದ್ರಪತಂಗಾ ಕಂಪನ ಕಾಂಭೋಜ ಪ್ರಭಂಜನ ಪ್ರಭಾಸರೆಂಬ –

ಕಂ || ತನಯರ್ ಪದಿಂಬರೆಸೆದರ್
ವಿನಯಗುಣಾಭರಣರುತ್ಸವಾಂತಃಕರಣರ್
ಮನಸಿಜಮೂರ್ತಿಗಳಿಂದು
ದ್ಯುನದೀನಿರ್ಮಳಿನ ಕೀರ್ತಿಗಳ್ ಮತ್ತವರಿಂ || ೪೩

ವ || ಬೞಿಕ್ಕೆ ಪುಟ್ಟಿ ನೆಟ್ಟನೆಸೆವ ಪ್ರಿಯಕಾರಣಿಯುಂ ಮೃಗಾವತಿಯುಂ ಸುಪ್ರಭೆಯುಂ ಸುಪ್ರಭಾವತಿಯುಂ ಚೇಳಿನಿಯುಂ ಜ್ಯೇಷ್ಠೆಯುಮೆಂಬ –

ಕಂ || ತನುಜೆಯರಱುವರುಮಭಿಮಾ
ನನಿಧಾನೆಯರನುಪಮಾನೆಯರ್ ಕರಮೆಸೆದರ್
ಮನಸಿಜವಿಜಯಪತಾಕೆಯ
ರನವದ್ಯ ವಿವೇಕೆಯರ್ ದಲವರಿಂ ಮತ್ತಂ ೪೪

ದ್ರುತಪದಂ || ಕಿಱಿಯವಳ್ ಬಹುಕಳಾಜ್ಞತೆಯಿಂದಂ
ಮಿಱುಪ ರೂಪರಮಣೀಯತೆಯಿಂದಂ
ನೆಱೆದ ಜವ್ವನದ ಸಂಗತಿಯಿಂದಂ
ಮೆಱೆವಳಿಂದುಮುಖಿ ಚಂದನೆಯೆಂಬಳ್ || ೪೫

ಕಂ || ಒಂದುದಿನಮಾಕೆ ತನ್ನಯ
ಮಂದಿರದಿಂ ಪಿಂದೆ ಮೆಱೆವ ಬನದೊಳ್ ಮನದೊಳ್
ಸಂದಣಿಸಿದ ಮುದದಿಂ ಮಾ
ಕಂದದೊಳಾಂದೋಳಕೇಳಿಲೀಳೆಯೊಳಿರ್ದಳ್ || ೪೬

ಚಂ || ಚತುರ ಸಖೀಜನಂಗಳ ವಿರಾಜಿಪ ಗೀತರಸಾಮೃತಂಗಳಿಂ
ವಿತತ ವನಾಂತರಾಳಮನೆ ತೆಕ್ಕನೆ ತೀವಿ ನೃಪಾತ್ಮಜಾತೆ ತಾ
ನತಿ ಮುದದಿಂದೆ ಚಂದನೆ ವಲಂ ತಳಿರುಯ್ಯಲನಾಡೆ ನಾಡೆಯುಂ
ರತಿಪತಿ ನೋಡಿ ರಾಗರಸಸಾಗರದೊಳ್ ಜಳಕೇಳಿಯಾಡಿದಂ || ೪೭

ವ || ಆಗಳ್ ಮನೋವೇಗನೆಂಬನೊರ್ವನಂಬರಚರನಂಬರತಳದೊಳ್ ಸ್ವೇಚ್ಛಾವಿಹಾರಭರದಿಂ ಪೋಗುತ್ತುಮಿರ್ದು –

ಕಂ || ಸತಿಯರ ಗೀತರವಾಕ್ಷಿ
ಶ್ರುತಿಗಳ್ ಕವಿತಂದು ಬೇಗದಿಂದಾತ್ಮೀಯ
ಶ್ರುತಿವಲ್ಮೀಕ ವಿವರಮಂ
ಪ್ರತಿವೇಶಿಸೆ ನಿಂದನಾ ಸ್ಮಿತಾಂತಃಕರಣಂ || ೪೮

ವ || ತದುದ್ಯಾನಮಂ ನಯನಾತಿಕೌತುಕಾದಾನಮಂ ಭೋಂಕೆನೆ ಕಂಡು ತದಂತರಾಳಕ್ಕೆವತರಿಸಿ –

ಕಂ || ಅನಿಮಿಷವನಿತೆಗೆ ಚೆಲ್ವಿಂ
ದೆನಸುಂ ಮಿಗಿಲೇಕೆಯೆನಿಪ ತಚ್ಚಂದನೆಯಂ
ವನಜಾನನೆಯಂ ನೃಪನಂ
ದನೆಯಂ ತಳಿರುಯ್ಯಲಾಡುತಿರ್ದಂಗನೆಯಂ || ೪೯

ವ || ಕಂಡತಿಪ್ರಚಂಡ ಕುಸುಮಕೋದಂಡಕಾಂಡಖಂಡಿತಹೃದಯನಾಗಿ ಬೇಗದಿಂ ಮಡದಿಯಂ ಪಿಡಿದುಕೊಂಡು ಗಗನಕ್ಕೊಗೆದು ವಿಮಾನದೊಳಿರಿಸಿ ಹರುಷದಿಂ ಮನೋವೇಗದಿಂ ಪೋಗುತ್ತುಮಾ ಗುಣವತಿಯನೇಗೆಯ್ದುಂ ತನಗೆ ಬಸದಾಗಿಸಲ್ ನೆಱೆಯದಱಗುಲಿ ಮಱುಗಿ ಕೋಪಾಟೋಪದಿಂ ಪೇರಡವಿಯೊಳಾರಮಣಿಯನೀಡಾಡಿ ಪೋಪುದುಂ, ಆಕೆ ಭೀಕರಾಕಾರಮಂ ತಳೆದು ಬಳೆದ ಪೞುವಂ ಬಳಸಿಯುಂ ನೋಡಿ –

ಕಂ || ಆನಂದನನಿಭವಿಭವೋ
ದ್ಯಾನದೊಳಿರವೆತ್ತ ಸುತ್ತಲುಂ ಜೀರೆಂಬೀ
ಕಾನನದೊಳಿರ್ಪುದೆತ್ತ ಮ
ದೇನಃಪರಿಪಾಕಮಿಂತಿದಲ್ಲದೆ ಪೆಱತೇಂ || ೫೦

ಎಂದಾ ನರಪತಿನಂದನೆ
ಚಂದನೆ ವಂದನೆಯನನಘ ಜಿನಚರಣಾಬ್ಜ
ಕ್ಕಂದಾನಂದದೆ ಮನದೊಳ
ನಿಂದಿತೆ ಮಾಡುತ್ತುಮಿರ್ದಳಿರ್ಪುದುಮೊರ್ವಂ || ೫೧

ವ || ಕಿರಾತಕಾತರನಾ ತರುಣಿಯಂ ಕಂಡು ಮನದೆಗೊಂಡು ವಿಧುಲೇಖೆಯಂ ವಿಧುಂತುದಂ ಪಿಡಿವಂತೆ ಪಿಡಿದಿರ್ಪುದುಮಾ ಪ್ರಸ್ತಾವದೊಳ್ –

ಕಂ || ವತ್ಸಾಭಿಧಾನವಿಷಯದ
ತತ್ಸಂಪತ್ತಿಯನೆ ತಳೆದ ಕೌಶಾಂಬಿಯೊಳ
ರ್ಹತ್ಸಮಯವರ್ತಿ ಸಜ್ಜನ
ವತ್ಸಳನೆನಿಸಿರ್ದ ವೃಷಭದತ್ತಾಭಿಖ್ಯಂ || ೫೨

ವ || ಆ ವೈಶ್ಯೋತ್ತಮಂ ವನದ್ರವ್ಯಾಹರಣಪರಿಣತಿಯಿನಾ ದುರಂತಕಾಂತಾರಾಂತರಾಳದೊಳ್ ತೊಳಲ್ತರುತುಂ ಕ್ರಿಯಾಪದಪ್ರಾಗ್ದೇಶದಂತುಪಸರ್ಗಾಕ್ರಾಂತೆಯಾಗಿರ್ದ ನಿಶಾಟನಿಕಟ ಕಾಂತೆಯಂ ತೊಟ್ಟನೆ ಕಟ್ಟಿದಿರೊಳ್ ಕಂಡು ದಯಾಮಂಡಿತಮಾನಸನಪ್ಪುದಱಿಂ ಮೃದುಸದುಪದೇಶ ಪೇಶಲಂಗಳಪ್ಪ ವಚನನಿಚಯಂಗಳಿನಾ ನಿರೋಧಕನನಬಾಧಕನಪ್ಪಂತು ಬೋಧಿಸಿ ದೀನಾರಮನೇನಾನುಮನಿತ್ತು ತತ್ತರುಣಿಯ ಸೆಱೆಯಂ ಪೆಱಪಿಂಗಿಸಿ ನಿಜಪುರೀ ವರಕ್ಕೊಡಗೊಂಡು ಪೋಗಿ –

ಕಂ || ನಿನತುಮಗಳಪ್ಪಳೀಕೆಯ
ನನುನಯದಿಂದೆಲಗೆ ಸಲಹು ಮನ್ನಿಸು ನೀನೆಂ
ದನವದ್ಯವೃತ್ತನಿತ್ತಂ
ತನತ್ತು ವಲ್ಲಭೆಗೆ ಶೀಲವತಿಯಂ ಸತಿಯಂ | ೫೩

ವ || ಅಂತು ವೈಶ್ಯವದನದರ್ಪಣಂ ಸಮರ್ಪಿಸಿ ಪೋಗೆ ಚಂದನೆಯ ಚಂದಮಂ ಸೆಟ್ಟಿತಿ ದಿಟ್ಟಿಸಿ ನೋಡಿ –

ಉ || ಎತ್ತಣಿನಕ್ಕೆ ಬಂದಳಿವಳಪ್ಪೊಡೆ ನೆಟ್ಟನೆ ಗಾಡಿಕಾರ್ತಿಕ
ಣ್ಕೆತ್ತಿ ಮದೀಶನಂ ತನಗೆ ಮೆಲ್ಲನೆ ವಲ್ಲಭನಾಗೆ ಮಾೞ್ಕುಮು
ದ್ವೃತ್ತತೆಯಿಂದಮೇಕೆ ನಮಗೀಕೆಯ ಕುತ್ತಮೆನುತ್ತೆ ಚಿತ್ತದೊಳ್
ವೃತ್ತಪಯೋಧರದ್ವಿತಯೆ ಚಿಂತಿಸಿ ಕುಂಡಳದೊಂದುಪಾಯಮಂ || ೫೪

ವ || ಅಂತು ಲಬ್ಧೋಪಾಯೆಯಪ್ಪ ವಣಿಗೀಶಜಾಯೆ ಚಂದನೆಯನೇನಾನುಮೊಂದು ಪೊಲ್ಲಮೆ ಯನಿಲ್ಲದುದನುದ್ಭವಿಸಿ ನೆವದಿಂ ಶೃಂಖಳಾಬಂಧನೆಯಂ ಮಾಡಿ ತಲೆವಾಗಿಲ ಕೆಲದ ಪುಲುಮನೆಯೊಳಿರಿಸಿ ಕೊಚ್ಚನಿಕ್ಕಿ ನಡಸುತ್ತುಮಿರ್ದಳಿರ್ಪುದುಂ –

ತ್ರಿವದಿ || ವೀರಭಟ್ಟಾರಕಂ ಕಾರುಣ್ಯಜಲಧಿ ವಿ
ಹಾರಿಸಿ ಸಕಳಜನಪದಂಗಳೊಘ
ಹಾರಿ ತತ್ಪುರಕೆ ನಡೆತಂದಂ || ೫೫