ಮ || ಬಸಿಱಂ ಪೆತ್ತ ತೃಷಾಕ್ಷುಧೇಷು ಕವಿದೆತ್ತಂ ನೆತ್ತಿಯೊಳ್ ಕೂಡೆ ಕೀ
ಲಿಸಿ ಭಾಸ್ವತ್ಕರ ತೋಮರಾಳಿ ತನುವಂ ತೀವ್ರಾನಿಳೋಗ್ರಾಸಿ ಭೇ
ದಿಸೆ ಬೆಳ್ಕುತ್ತೆ ವಿಶೀರ್ಣ ಧೈರ್ಯಕವಚರ್ ತತ್ತಾಪಮಂ ನೋಡಿ ಸೈ
ರಿಸದಂತಂತೊಳಸೋರ್ದರೇಂ ಪಸರಮೇ ಕರ್ಮಾಸುಹೃದ್ಭಂಜನಂ || ೪೧

ಕಂ || ತಗುಳೆ ತೃಷೆ ನೀರ್ಗೆ ಮಡುವಂ
ಪುಗುವರ್ವಿಸೆ ಪಸಿವು ಪಣ್ಗೆ ಮರನೇಱುವ ಚೇ
ಷ್ಟೆಗಳಿಂ ಪ್ರಕಟಿಸಿದರವರ್
ಮಿಗೆ ಮುಂ ಬೆಂಕೊಂಡ ಕರ್ಮವೈರಿಯ ಭಯಮಂ ೪೨

ಇಂತದಯುಕ್ತಂ ಯತಿಗ
ಳ್ಗೆಂತುಮೆನಿಪ್ಪಳಿಪತನಕೆ ಕೋರಯಿಸದೆ ಮೆ
ಯ್ಯಂತುಟಿಕೆ ನಾಣ್ಜಿ ಬಹುವೇ
ಷಾಂತರಮಂ ತಳೆದು ಪರೆಯೆ ತನ್ಮುನಿ ನಿವಹಂ || ೪೩

ಕಂ || ತದವಸ್ಥೆಯಿಂ ಮರೀಚಿಯು
ಮದೃಢಮನಂ ವಿಗಳಿತಾರ್ಹತಬ್ರತಮಾರ್ಗಂ
ಪದುಳಿಕೆಯನುೞಿದು ಕೌಪೀ
ನ ದಂಡ ಮೌಂಜೀ ಶಿಖಾದಿ ವೇಷಮನಾಂತಂ || ೪೪

ವ || ಅಂತಾತಂ ಪಲವುಂ ದೇಶಾಂತರಮಂ ತಿರಿದು ಮಗುೞ್ದುಮಪವರ್ಗಶ್ರೀಕಾಂತನ ತದ್ವೃಷಭೇಶನನಂತಜ್ಞಾನೋದಯ ಪ್ರಭಾವೋತ್ಸವದೊಳ್ ಸಮವಸರಣಕ್ಕೆ ಬಂದುಚಿತ ಮನುಷ್ಯ ಕ್ಷೇತ್ರದಲ್ಲಿ ಕುಳ್ಳಿರ್ಪಿನೆಗಂ ಸಮಯೋಚಿತಮಾಗಿರೆ ಭರತಮಹೀಶ್ವರನಂದು ಗಣಧರ ಸ್ವಾಮಿಗಳಂ-

ಕಂ || ಇಂತೀ ನೆರೆದ ಸಮಸ್ತ ಸ
ಭಾಂತರದೊಳ್ ಭವ್ಯರೀ ಪುರುಸ್ವಾಮಿಯವೋ
ಲಂ ತೀರ್ಥವಿಧಾಯಕರ
ಪ್ಪಂತಪ್ಪವರೊಳರೆ ಪೇೞಿಮೆನೆ ತನ್ಮುನಿಪಂ || ೪೫

ಪರಿಕಿಪೊಡೆ ನಿನ್ನ ಮಗನೀ
ಮರೀಚಿ ಬಹುವಿಧಭವಾಬ್ಧಿಯಂ ಕ್ರಮದಿಂದಂ
ತರಿಯಿಸಿ ಗಳಿತಾಖಿಳಕ
ರ್ಮರಜಸನಿಂ ಕಡೆಯ ತೀರ್ಥಕರನಾದಪ್ಪಂ || ೪೬

ಎಂಬುದುಮಾ ನುಡಿ ಕಿವಿಯಂ
ತುಂಬೆ ಸಹರ್ಷಂ ಮರೀಚಿ ದುಸ್ತರಸಂಸಾ
ರಾಂಬುಧಿಯನಂದೆ ದಾಂಟಿದೆ
ನೆಂಬ ಮನೋಬಲಮನಾದಮಾಗಳೆ ತಳೆದಂ || ೪೭

ವ || ಅಂತು ಸರ್ವಾವಧಿಬೋಧನಿಧಿಗಳಪ್ಪ ಗಣಧರಸ್ವಾಮಿಗಳ ಸತ್ಯಸೂಕ್ತಿಸುಧೆಯಂ ಶ್ರವಣಯುಗಳಾಂಜಲೀಪುಟದಿನೀಂಟಿ ಸೂೞ್ಸೂೞೊಳುದಯಿಪ ದುರಿತಕ್ರಮ ಸಂಕ್ಲೇಶ ವಿಶೋಧಿಮಯ ಪರಿಣಾಮಮಂ ನದಿಪುವಂತಂತರಿತ ಪರಮಾಪವರ್ಗಮಾರ್ಗಾಚರಿತ ನಪ್ಪ ಮರೀಚಿ ಸಮವಸರಣ ವಿವಿಧ ವೈಚಿತ್ರ್ಯಮುಮಂ ತತ್ಪ್ರಭಾವಮುಮಂ ಪರಮಾನಂದ ಸ್ತಬ್ಧಗಾತ್ರನಾಗಿ ನೀಡುಂ ನೋಡುತ್ತುಮಿರ್ದು ಸಮನಂತರಂ ಸಮವಸೃತಿ ಸಮಾಶ್ರಯದಿಂ ತಳರ್ದು ಸದುಪಾಶ್ರಯದಿನುೞಿದ ಪಳಿಕಿನಂತೆ ಬೆಳುಕನಾಗಿ ಸಹಜೋಚಿತ ರುಚಿಯೆ ನಿಲೆ ಪೂರ್ವವಾಸನಾಯತ್ತ ವೃತ್ತಿಯಿಂ ವಿಪರೀತ ಪರಿಣತೆಯನಾಂತು-

ಕಂ || ಎಂತಖಿಳಾಗಮಮಂ ಪೇ
ೞ್ದೆಂತೆಮ್ಮ ಪಿತಾಮಹಂ ಜಗಕ್ಕೀಶ್ವರನಾ
ದಂ ತತ್ಪ್ರಭುತೆಯನಾಂ ಶಾ
ಸ್ತ್ರಾಂತರಮಂ ಪೇೞ್ದು ಪಡೆವೆನೆಂಬಿದನೊಣರ್ದಂ || ೪೮

ಬಗೆವಂದಾ ಕಾಲದೊಳಾ
ಭಗವಜ್ಜಿನಪತಿಯ ಕೆಲದೊಳಾ ಗಣಭೃತ್ಸ್ವಾ
ಮಿಗಳುಕ್ತಿಯಿನಾದಱಿವುಂ
ಜಗುೞ್ದುದು ಗಡದೇನತರ್ಕ್ಯಮೋ ಕರ್ಮಬಳಂ || ೪೯

ವ || ಅಂತು ತತಕ್‌ಆಲಸರ್ವಥೈಕಾಂತರೂಪ ಕುನಯಶತಪ್ರಪಂಚ ಮಿಥ್ಯಾದರ್ಶನ ಪ್ರವರ್ತನ ಪ್ರಥಮನಾಯಕನಪ್ಪ ಮರೀಚಿ ನಂದುವ ಸೊಡರ ಕುಡಿವೆಳಗಿನಂತನಂತರ ತಮೋರೂಪ ಪರಿಣಾಮಿಯಪ್ಪ ನಿಜಪಟುಪ್ರಜ್ಞಾಪ್ರಕಾಶಬಳದಿಂ ಕುಶಾಸ್ರ್ರವಿಶೇಷವಿಧಾನತತ್ಪರನಾಗಿ ಸ್ವಸಂವೇದನ ಸುವ್ಯಕ್ತನುಂ ಕರ್ಮಕೃತಗಿ ವಶಾರಬ್ಧಕಾಯ ಪರಿಮಾಣನುಂ ಜ್ಞಾನ ದರ್ಶನಸ್ವಭಾವನುಮಪ್ಪ ಜೀವನಮೂರ್ತತ್ವೈಕಹೇತುವಿನೇಕಾಂತ ಸರ್ವಗತನುಮಜ್ಞಾನ ದರ್ಶನ ಸ್ವಭಾವನುಮೆಂದುಂ ನಿಜಗುಣಾಭಿನ್ನ ಭಿನ್ನಲಕ್ಷಣ ಕ್ಷಣಕ್ಷಣೋತ್ಪತ್ತಿವ್ಯಯ ದ್ರವ್ಯಪರ್ಯಾಯ ಪರಿಕಳಿತ ಸಮಸ್ತದ್ರವ್ಯ ನಿತ್ಯಪ್ರವಾಹ ಪರಿಮಿತಾಕಾರಮಪ್ಪ ಲೋಕಮಂ ಸತ್ವರಜಸ್ತಮೋಮಯಗುಣಂಗಳ ಸಾಮ್ಯಾವಸ್ತೆಯಪ್ಪ ಮೂಲಪ್ರಕೃತಿಯೆಂದುಂ ಕ್ಷೇತ್ರ ವಿಶೇಷಗತ ಜೀವಾಯುರುತ್ಸೇಧಹಾನಿವೃದ್ಧಿ ಪ್ರವರ್ತನ ಕಾರಣಕಾಲವ್ಯವಹಾರನಯಮನೆ ಪಿಡಿದು ನಿತ್ಯದ್ರವ್ಯರೂಪಮಪ್ಪ ಭುವನಕ್ಕಾತ್ಯಂತಿಕೋತ್ಪತ್ತಿ ಪ್ರಳಯಂಗಳೊಳವೆಂದುಂ ತದುತ್ಪತ್ತಿ ಪ್ರಳಯಂಗಳಂ ಮತ್ತೆ ಮೂಲಪ್ರಕೃತಿಸ್ವರೂಪದಾವಿರ್ಭಾವ ತಿರೋಭಾವಗಳೆಂ ದುಂ ತದಾವಿರ್ಭಾವಭೇದದೊಳವಿಕಾರಮುಂ ಅಮೂರ್ತಮುಮಪ್ಪಾತ್ಮ ದ್ರವ್ಯದಿನನಂತ ಮುಮಖಂಡಮುಮಪ್ಪ ಪವನಪಥದುತ್ಪತ್ತಿಯಂ ತದಂಶದ್ರವ್ಯಮಾದಿಯಾಗಿ ಮೂರ್ತ ದ್ರವ್ಯಪರ್ಯಾಯಂಗಳಪ್ಪ ಪವನಪಾವಕ ಪಾಥಃ ಪೃಥಿವಿಗಳಂ ಕ್ರಮದಿನೊಂದಱೊಳೊಂದು ಪುಟ್ಟಿದುವೆಂದುಂ ತತ್ತಿರೋಭಾವ ಭೇದದೊಳ್ ಪೃಥ್ವಿಯಪ್ಪುತೇಜೋವಾಯುಗಳಪ್ಪ ಮೂರ್ತವಿಶೇಷಂಗಳಂ ತತ್ತದ್ಗುಣಂ ಗಂಧರಸಸ್ವರೂಪಸ್ಪರ್ಶತನ್ಮಾತ್ರೆಗಳೊಳ ೞಿವುವೆಂದುಂ ಅಮೂರ್ತಮುಮಿತರದ್ರವ್ಯಾವಕಾಶಮುಮಪ್ಪಾಕಾಶಮುಂ ಮೂರ್ತದ್ರವ್ಯ ಶಬ್ದದೊಳಡಂಗುವುದೆಂದು ಭಿನ್ನರಸಮಪ್ಪನಂತಾನಂತ ಜೀವದೊಳಿವಿನಿತುಂ ಮುೞುಗಿ ಸಕಳವ್ಯವಹಾರಾಭಾವಮಪ್ಪುದೆಂದುಂ ಮತ್ತಮೇಕದೇಶದೊಳ್ ತತ್ವಾಭಾಸಮಾಗೆ ಕಿಱಿದು ಪೋಲ್ವೆವೆರಸು ಶಬ್ದಸ್ಪರ್ಶರೂಪ ರಸಗಂಧಗಗನಪವನಾನಳಜಳಾವನಿ ಶ್ರವಣತ್ವಚವಿಳೋ ಚನರಸನಾಘ್ರಾಣ ವಾಕ್‌ಪಾಣಿ ಪಾದಪಾಯೂಪಸ್ಥಾಮನೋಮಹದಹಂಕಾರ ಬುದ್ಧಿ ಪರಿಮಿತ ಚತುರ್ವಿಂಶತಿ ಸ್ವರೂಪಮಪ್ಪ ತತ್ಪ್ರಕೃತಿಯಗಲ್ಕೆಯಿನಿಪ್ಪತ್ತಯ್ದನೆಯ ತತ್ಮಪ್ಪ ಜೀವಸ್ವರೂಪದೊಳ್ ನಿಲ್ವುದೆ ಮೋಕ್ಷಮೆಂದುಂ ಪಂಗ್ವಂಧನ್ಯಾಯದಿಂ ಪ್ರಕೃತಿ ಪುರುಷ ಸಂಯೋಗದೊಳ್ ಸಂಸೃತಿವ್ಯವಹಾರಮೆಂದುಂ ಇವರ್ಕೆ ತಕ್ಕ ಕುದೃಷ್ಟಾಂತಂಗಳಂ ಘಟಿಯಿಸಿ ಸಂಖ್ಯಾಪ್ರಧಾನಮಾಗೆ ಸಾಂಖ್ಯಮೆಂಬ ತರ್ಕಸೂತ್ರಮಂ ಬರೆದು ಕಪಿಳಾದಿ ಶಿಷ್ಯರ್ಗುಪದೇಶಿಸಿ ಪರಿವ್ರಾಜಕವೇಷದಿನಶೇಷದೇಶದೊಳೆಲ್ಲಂ ಪ್ರವರ್ತಿಸುತ್ತುಂ-

ಕಂ || ಕ್ಷಿತಿಯೊಳ್ ನಿಜವಾಣೀ ವಿಷ
ಲತೆಯಂ ಬಳೆಯಿಸಿ ನಿಜಾಯುರವಸಾನದೊಳಾ
ಹತಮತಿ ಬಾಹ್ಯನಿವೃತ್ತಿಸು
ಕೃತಫಳದಿಂ ಬ್ರಹ್ಮಕಲ್ಪದೊಳ್ ಜನಿಯಿಸಿದಂ || ೫೦

ವ || ಅಂತು ಜನಿಯಿಸಿ ಸುರಲೋಕಸುಖಮನನುಭವಿಸಿ ದಶಸಾಗರೋಪಮಾಯುರವ ಸಾನದೊಳ್ ಮತ್ತಮೀ ಭರತಭೂತಳಕ್ಕೆ ವಂದಯೋಧ್ಯಾನಾಮನಗರಿಯೊಳ್ ಕಪಿಳ ವಿಪುಳಾಮರಂಗಂ ತತ್ಕಾಂತೆ ಕಾಪಿಲ್ಯೆಗಮಾ ಕುಟಿಳಮತಿ ಜಟಿಳನೆಂಬ ಮಗನಾಗಿ ಪೂರ್ವಭವವಾಸನೆಯಿಂ ಶೈಶವದೊಳಂ ಪರಿವ್ರಾಜಕನಾಗಿ ಜೀವಿತಾವಸಾನದೊಳ್ ಕಾಯಕ್ಲೇಶ ಪ್ರಧಾನಂ ಪ್ರಥಮಕಲ್ಪದೊಳ್ ಪುಟ್ಟಿ-

ಕಂ || ಏಕಾರ್ಣವೋಪಮಾಯುವ
ನಾ ಕಲ್ಪದನಲ್ಪಸುಖಮನುಭವಿಸುತುಮಾ
ನಾಕಭವಂ ಕಳಿಪಿ ಕರಂ
ವ್ಯಾಕುಳಮತಿ ಬಂದು ಮತ್ತಮೀ ಭೂತಳದೊಳ್ || ೫೧

ವ || ಸ್ಥೂಣಾಗಾರಮೆಂಬ ಪುರವರದೊಳ್ ಭಾರದ್ವಾಜದ್ವಿಜಂಗಮಾತನ ಮನಃಕಾಂತೆ ಪುಷ್ಪದಂತೆಗಂ ಪುಷ್ಪಮಿತ್ರನೆಂಬ ಮಗನಾಗಿ ಜನ್ಮಾತರವಾಸನೆಯಿನುಪನಯನಾನಂತರಂ ಪರಿವ್ರಾಜಕ ದೀಕ್ಷಿತನಾಗಿ ನೆಗೞ್ದು ಪಂಚತ್ವಪ್ರಾಪ್ತಿಯಿಂ ಮತ್ತಮಾ ಮೊದಲ ಕಲ್ಪದೊಳು ತ್ಪತ್ತಿವೆತ್ತು ತನ್ಮಿತಾಯುರವಸಾನದೊಳೀ ಭರತಭೂತಳದ ಸ್ವೇತಕಾಭಿಧಾನಪುರದೊಳ್ ಅಗ್ನಿಭೂತಿಗಂ ಗೌತಮಿಗಂ ಅಗ್ನಿಸಖನೆಂಬ ಪೆರ್ಮಗನಾಗಿ-

ಕಂ || ಉಪವೀತಂ ಪರಿಚಿತವೇ
ದ ಪುರಾಣ ನ್ಯಾಯ ನೀತಿಶಾಸ್ರ್ರಂ ವೈರಾ
ಗ್ಯ ಪುರೋಗಮನಂ ಮಸ್ಕರಿ
ತಪದೊಳ್ ವರ್ತಿಸಿ ಕೃತಾಂತಕಬಳಿತಕಾಯಂ || ೫೨

ಜನಿಯಿಸಿ ಸನತ್ಕುಮಾರದೊ
ಳನುಭವಿಸಿ ಯಥೇಷ್ಟ ಸೌಖ್ಯಮಂ ಸಪ್ತಪಯೋ
ಧಿನಿಬದ್ಧಮಾಯು ತವೆ ಭೋಂ
ಕೆನೆ ಬಂದೀ ಭರತಧರೆಯ ಮಂದಿರಪುರದೊಳ್ || ೫೩

ಸುತನಾಗಿ ಗೌತಮಂಗಂ
ಪತಿಹಿತೆ ಕೌಶಿಕೆಗಮಗ್ನಿಮಿತ್ರಾಹ್ವಯದಿಂ
ಕ್ಷಿತಿಯೊಳ್ ವರ್ತಿಸಿ ಪೂರ್ವ
ಸ್ಥಿತಿಯ ಪರಿವ್ರಾಜಕತ್ವಮಂ ಕೆಯ್ಕೊಂಡಂ || ೫೪

ವ || ಅಂತು ತಳೆದ ತನ್ನಿಯಮದೊಳೆ ನಿಜಾಯುವಂ ಕಳಿಪಿ ಮಾಹೇಂದ್ರಕಲ್ಪದೊಳನಲ್ಲ ಸೌಖ್ಯನಪ್ಪ ಸುರಮುಖ್ಯನಾಗಿ ತನ್ನಿಯತ್ತ ಸಪ್ತಸಾಗರೋಪಮಾಯುರವಸಾನದೊಳ್ ಮಗುೞ್ದುಮಾ ಮಂದಿರಪುರದೊಳ್ ಶಾಲಂಕಾಯನನಾಮಧೇಯ ಪಾರ್ವಂಗಮಾತನ ಸುದತಿ ಮಂದಿರೆಗಂ ಭಾರದ್ವಾಜನೆಂಬ ತನೂಜನಾಗಿ ಸಮಧಿಗತ ಸಕಳಶ್ರುತಿ ಸ್ಮೃತಿಪುರಾಣ ಪ್ರಪಂಚಂ ಪ್ರಾಕ್ತನವಾಸನಾವಶದಿಂ ಪರಿಗೃಹೀತ ಪರಿವ್ರಾಜನಾಗಿ ತನ್ನಿಯಮಗಮಿತಾ ಯುಷಂ ಮಗುೞ್ದುಂ ಮಾಹೇಂದ್ರತ್ರಿದಿವದೊಳ್ ದಿವಿಜನಾಗಿ-

ಕಂ || ದಿವಿಜನಿವಾಸಂಗಳ ದಿವಿ
ಜವಿಟಪಿಗಳ ದಿವಿಜವನಿತೆಯರ ದಿವಿಜವಿಭಾ
ಗ ವಿಶೇಷಸುಖಮನೊಸೆದನು
ಭವಿಸುತುಮಿರೆ ಪಲವುಕಾಲಮಂತಾ ದಿವಿಜಂ || ೫೫

ಮ || ಸ್ರ || ತ್ರಿದಶೋರ್ವೀಜಂ ವಯೋವಾರ್ಧಿಯ ತಡಿದೆರೆಗಳ್‌ಪಒಯ್ದವೋಲ್‌ನೀಡುಮಳ್ಳಾ
ಡಿದುವುತ್ತಂಸೋದ್ಗಮಂಗಳ್ ಕೊರಗಿದುವು ಕೃತಾಂತಾನಳಜ್ವಾಳೆಗಳ್ ತಾ
ಗಿದವೋಲ್ ವಕ್ತ್ರೇಂದುಧಾಮಂ ಮಸುೞ್ದುದಭಿಸರತ್ಕಾಲಕಾಳಾಂಬುದಂ ಮು
ತ್ತಿದವೋಲ್ ತ್ದೇವಧಾಮಾಧಿಪ ಸುರಭವನಭ್ರಂಶ ಸಂಸೂಚಕಂಗಳ್ || ೫೬

ವ || ಅಂತು ಸಮನಿಸಿದ ನಿಜದಿವಿಜಭವನ ಸ್ಥಿತಿಚ್ಯುತಿ ದುರ್ನಯಂಗಳಂ ಕಂಡು ಭೋಂಕೆನೆ ಬೆಗಡುಗೊಂಡು-

ಚಂ || ಪರಿದು ವಿಮಾನದೋವರಿಗಳೊಳ್ ಪಡಿಗೆತ್ತುೞಿಗಿರ್ಪೆನೋ ಗೃಹಾಂ
ತರದಮಳ್ವಾಸಿನೊಳ್ ಮುಸುಕಿ ಮೆಯ್ಗರೆದಿರ್ಪೆನೊ ತಳ್ತಕಲ್ಪಭೂ
ಮಿರುಹ ನಿಕುಂಜಮಂಜ ರಿಗಳೊಳ್ ತೊಡಕಿರ್ಪೆನೊ ತೊಟ್ಟನೆಯ್ದಿ ನಿಃ
ಕರುಣದೆ ಕಾಯ್ದು ನುಂಗಿದಪನಂತಕನೇರೆಱದಿಂದೆ ವಂಚಿಪೆಂ || ೫೭

ಉ || ಏಗಳ ಗೆಯ್ವೆನಾರ ಮಱೆವೊಕ್ಕು ಬರ್ದುಂಕುವೆನೆತ್ತವೋಪೆನಾರ್
ಕಾಗುಮಿನಿತ್ತು ಸರ್ಗದೊಳಮೆನ್ನನೆ ಕಂಡುದೆ ದೈವವಕ್ಕಟೆಂ
ಬಾಗದಿದೆಂಬರಿಲ್ಲ ಪೆಱರೊರ್ವರುಮೊರ್ಮೆಗೆ ನೀನೆ ರಕ್ಷಿಸ
ಲ್ಕಾಗದೆ ದೇವ ಧಾತ್ರ ಕರುಣಾಕರ ದೀನನನೆನ್ನನಕ್ಕಟಾ || ೫೮

ಕಂ || ಈ ವನಿತಾಕುಳಮೀ ದಿವಿ
ಜಾವನಿಜಾತಾಂಗಮೀ ಕನನ್ಮಣಿಗೃಹಮಿ
ನ್ನಾವನ ಕೆಯ್ಸಾರ್ಗುಮೊ ನಿ
ರ್ದೈವಂಗೆನಗಿಂತಿವೇಕೆ ಗಡ ಸಮನಿಸುಗುಂ || ೫೯

ಉ || ಈ ಸುರಗಾಯಿಕಾಮಧುರಗೀತಿಗಳೀ ಸುರಲಾಸಿಕಾರಸೋ
ಲ್ಲಾಸಿತ ಲಾಸ್ಯಮೀ ಸುರಸಭಾಜನ ಭಾವರಸಪ್ರಸನ್ನಗೋ
ಷ್ಠೀಸುಖಮಿನ್ನದೆಲ್ಲಿ ದೊರೆಕೊಂಡಪುದಕ್ಕಟ ಕೆಟ್ಟೆನೆಂದು ಸಂ
ತ್ರಾಸದಿನಾರ್ದು ಬಾಯೞಿದನಿನ್ನರೆ ತತ್ವವಿಮೂಢರೆನ್ನರುಂ || ೬೦

ವ || ಅಂತು ನಾಕಜಂ ನಾಕಲೋಕಚ್ಯುತಿಗೆ ಸೈರಿಸಲಾಱದೆ ಮಮ್ಮಲ ಮಱುಗಿ ಬಹು ಪ್ರಕಾರದಿಂ ಬಾಯೞಿದೊಳಱಿ ದುರ್ನಿವಾರ ಕೃತಾಂತ ಕಬಳಿತನಾಗಿ-

ಕಂ || ಭೂವಳಯದೊಳ್ ಕುಮಾರ್ಗಮ
ನಾವಿರ್ಭಾವಿಸಿದ ಪಾಪದಿಂ ಚಿರಕಾಲಂ
ಸ್ಥಾವರ ಯೋನಿಗಳೊಳ್ ತ
ದ್ದೇವಂ ಭ್ರಮಿಯಿಸಿದನಾತನುಂ ನೀನೆ ವಲಂ || ೬೧

ಸ್ವಹಿತಮನಱಿಯದೆ ಕರ್ಮ
ಪ್ರಹತಂ ತಾನಾಗಿ ಘೋರ ಸಂಸಾರ ಮಹಾ
ಗಹನದೊಳಹರ್ನಿಶಂ ದು
ಸ್ಸಹ ದುಃಖಮನಕಟ ದೇಹಿ ಬಿಡದನುಭವಿಕುಂ || ೬೨

ಜಿನಮತಕೆ ಬಾಹ್ಯಮೆನಿಸಿದ
ಕುನಯಾಶ್ರಯ ಕುಶ್ರುತಂಗಳಂ ವಿರಚಿಸಿ ಭೂ
ಜನಮಂ ಕುತತ್ವಕುಳಭಾ
ಜನಮಂ ನೀಂ ಮಾಡಿ ದುಃಖಭಾಜನನಾದೈ || ೬೩

ವ || ಅಂತಸಂಖ್ಯಾತಕಾಲಂ ತ್ರಸಸ್ಥಾವರ ಪರ್ಯಾಯ ನಿಕಾಯಮಂ ಪೊತ್ತು ನಮೆದು-

ಕಂ || ವರರಾಜಗೃಹ ಸಮಾಹ್ವಯ
ಪುರದೊಳ್ ಶಾಂಡಿಲ್ಯಬಾಡವಂಗಂ ತತ್ಸುಂ
ದರಿ ಪಾರಾಶರಿಗಂ ಸ್ಥಾ
ವರನೆಂಬೀ ಪೆಸರಿನೆಸೆವ ನಂದನನಾದಂ || ೬೪

ಆತಂ ಪ್ರತಿಜ್ಞಾತಿಶಯೋ
ಪೇತಂ ಭಿಕ್ಷುಪ್ರಧಾನವೃತ್ತಿಯನಾಂತಂ
ಭೂತಳದೊಳ್ ಸಲೆ ನೆಗೞ್ದು ಪ
ರೇತ ವಿಭೂದ್ಭಟ ನಿಶಾಟಖಾದಿತನಾದಂ || ೬೫

ವ || ಅಂತು ಸಂಪ್ರಾಸ್ತಮರಣಂ ಮುಂ ಪೇೞ್ದ ಮಾಹೇಂದ್ರಕಲ್ಪದೊಳ್ ನಿಳಿಂಪನಾಗಿ ಜನಿಯಿಸಿ ನಿಯತಾಯುರವಸಾನಂಬರಂ ದಿವ್ಯಸುಖಮನನುಭವಿಸಿ ಪರಿತ್ಯಕ್ತ ಸುರಶರೀರನಾಗಿ-

ಕಂ || ಮಗಧಾಹ್ವಯ ವಿಷಯದ ರಾ
ಜಗೃಹದ ವಿಭು ವಿಶ್ವಭೂತಿಗಂ ಜೈನಿಗಮಾ
ಸೊಗಯಿಪ ಮಾಹೇಂದ್ರನೆ ನೀಂ
ಮಗನಾದೈ ವಿಶ್ವನಂದಿವೆಸರೆಸೆವಿನೆಗಂ || ೬೬

ಆ ವಿಶ್ವನಂದಿಯುಂ ಜಿನ
ಪಾವನ ದೀಕ್ಷೆಯನೆ ತಳೆದು ನಡೆದೊಡಲಂ ಬಿ
ಟ್ಟಾವಗಮೆಸೆವ ಶತಾರಾ
ಖ್ಯಾವಹ ದಿವದೊಳ್ ತೊಳಪ್ಪ ಸುರವರನಾದೈ || ೬೭

ವ || ಅಂತು ಕಂತುಕಾಂತಕಾಯನಪ್ಪ ಸಾಮಾನಿಕಾಮರನಾಗಿ ರಾಗದಿಂ ದಿವ್ಯ ಕಾಂತಾ ಕದಂಬದೊಡನೆ ತತ್ಕಳ್ಪಾನಳ್ಪ ಸುಖಸುಧಾರಸಮನಾಯುರವಸಾನಂಬರಂ ಪೀರ್ದು ಬಂದು-

ಕಂ || ಭಾಸುರ ಸುರಮ್ಯವಿಷಯ ವಿ
ಳಾಸಿನಿಗೆ ಮೊಗಂಬೊಲಿರ್ಪ ಪೌದನಪುರದೊಳ್
ವಾಸವವಿಳಾಸಿ ರಿಪುಸಂ
ತ್ರಾಸಿ ದಲೆಸೆದಂ ಪ್ರಜಾಪತಿ ಕ್ಷಿತಿಪಾಳಂ || ೬೮

ವ || ಆ ಮಹಾಮಂಡಲೆಶ್ವರಂಗಂ ತನ್ಮಾನಸಮರಾಳಿಕೆ ಮೃಗಾವತೀದೇವಿಗಂ ತ್ರಿಪಿಷ್ಠನೆಂಬ ನಾಮಧೇಯಮನಾಂತು ಮೊದಲ ವಾಸುದೇವನಾಗಿ ಪುಟ್ಟಿ ನೆಟ್ಟನೆ ರೂಢಿವಡೆದು ವರ್ತಿಸುತ್ತುಮಿರ್ದು ನಿನ್ನ ವಲ್ಲಭೆಗಳಿಪಿ ಮೇಲೆತ್ತಿಬಂದ ವಿಶಾಖನಂದಿಚರನುಂ ವಿದ್ಯಾಧರ ಚಕ್ರಧರನುಮಪ್ಪಶ್ವಗ್ರೀವನಂ ಪ್ರತಿವಾಸುದೇವನಂ ಕೊಂದು-

ಕುಂ || ಅಳವಟ್ಟ ಪಿರಿಯ ಸಿರಿ ನ
ಲ್ಲಳ ನಡೆವಳಿಯೊಳ್ಪು ದೇಹದ ಋಜುತೆ ಮುದಮಂ
ಬಳಯಿಪ ಸದ್ಗೋಷ್ಠಿ ಮನಂ
ಗೊಳುತಿರೆ ಪಲಕಾಲಮರಸುಗೆಯ್ಯುತ್ತಿರ್ದೈ || ೬೯

ಒದವಿದ ಭಾಗ್ಯದ ಸೌಭಾ
ಗ್ಯದೋಪಳುಂ ನೀನುಮೊರ್ಮೆ ನಿಜಪುಣ್ಯ ಫಳ
ಕ್ಕಿದೆ ಸೀಮೆಯೆನಿಪ ಸಂಭೋ
ಗದ ರಾಗದ ಪರಮಕೋಟಿಗೆಯ್ದಿದ ದೆವಸಂ || ೭೦

ಮ || ಸ್ಮರರಾಗಾಸವಧಾರೆವೋಲ್ ನಿಜರಮಾಪಾಂಗಾಂಶುಗಳ್ ಸೊರ್ಕಿಸು
ತ್ತಿರೆ ನಿನ್ನಂ ಕಡುಸೋಲ್ತು ತದ್ರಮಣಿಯಂ ನೋಡುತ್ತುಮಿಂತೀ ಮನೋ
ಹರಿಯಂ ತಾನುಪಭೋಗಿಸಲ್ ಬಯಸಿದಂ ಕಾಮಾಂಧನೆಂದಶ್ವಕಂ
ಧರನಂ ಕರ್ಮವಿಪಾಕದಿಂ ನೆನೆದು ಮತ್ತಂ ಕ್ರೋಧಮಂ ತಾಳ್ದಿದೈ || ೭೧

ವ || ಅಂತು ತಾಳ್ದಿ-

ಕಂ || ನೆರೆದಾಸ್ಥಾನದ ನಡುವಣ
ಹರಿಪೀಠದೊಳೀಕೆವೆರಸು ಕುಳ್ಳಿರ್ದಿದಿರೊಳ್
ಪರಿಭವಿಸಿ ನೋಡಿ ದಂಡಿಸು
ತಿರದತಿವೇಗದೊಳೆ ಕೆಮ್ಮನವನಂ ಕೊಂದೆಂ || ೭೨

ವ || ಎಂದು ಬಗೆಯುತ್ತುಂ ಶಯ್ಯಾತಳದೊಳಿರ್ದಲ್ಲಿ-

ಕಂ || ಪರನೃಪಕುಳಾಂತಕಂ ವೀ
ರರಸಾರ್ಣವನೆಂದು ಕೇಳ್ದಧೋಗತಿ ನಿನಗೊ
ಲ್ದೆರೆದಟ್ಟಿದ ದೂದವಿಪೋಲ್
ಬರೆ ಮೆಲ್ಲನೆ ನಿದ್ರೆ ಸಪ್ತಮಾವನಿಗಿೞಿದೈ || ೭೩

ಆ ನರಕ ವಿಷಧಿಯಿಂದೆಂ
ತಾನುಂ ಪೊಱಮಟ್ಟು ಸಿಂಹನಾದೈ ಮತ್ತಂ
ನಾನಾಮೃಗಂಗಳಂ ಹಿಂ
ಸಾನಂದದಿನೞಿದು ಮೊದಲನರಕಕ್ಕಿೞಿದೈ || ೭೪

ಅಲ್ಲಿಯ ಜನ್ಮಕ್ಲೇಶಮ
ನಲ್ಲಿಯ ನಾರಕರ ರೌದ್ರ ಪರಿಣಾಮಮನಂ
ತಲ್ಲಿಯ ದುರಂತ ದುಃಖಮ
ನಿಲ್ಲಿರ್ದವಧರಿಪೊಡಂ ಭಯಂಕರಮಲ್ತೇ || ೭೫

ನರಕದ ತಿರ್ಯಗ್ಲೋಕದ
ಸುರನಿಳಯದ ತೆರನನಾವಗಂ ಪೇೞ್ವತಿ ವಿ
ಸ್ತರ ಪರಮಜಿನಾಗಮದೊಳ್
ಪರಿಚಯಮುಳ್ಳುದಱಿನೆಮಗದನಿತುಂ ವಿದಿತಂ || ೭೬

ವ || ಅದಲ್ಲದೆಯುಮಿಂದು ಧರ್ಮಾನುರಾಗದಿಂ ಪೋಗಿ-

ಕಂ || ಪರಮೇಶ್ವರನಂ ಪ್ರಣುತಾ
ಮರೇಂದ್ರ ದನುಜೇಂದ್ರ ದಿವ್ಯಯೋಗೀಂದ್ರ ಸಭಾ
ಪರಿವೇಷ್ಟಿತ ಮಣಿಮಯವಿ
ಷ್ಟರದೊಳ್ ನೆಲಸಿರ್ದ ಭವ್ಯಚಿಂತಾಮಣಿಯಂ || ೭೭

ಕಮಳಾಧರ ಜಿನಪತಿಯಂ
ಸಮಸ್ತ ಘಾತಿಪ್ರಪಂಚ ವಿಧ್ವಂಸಕನಂ
ವಿಮಳಾನಂತಚತುಷ್ಟಯ
ಸಮೃದ್ಧನಂ ಶಾಂತರಸಸುಧಾಂಭೋನಿಧಿಯಂ || ೭೮

ವ || ಕಂಡು ಬಲಗೊಂಡು ಪಲವುಸೂೞ್ ಪೊಡವಟ್ಟು –

ಕಂ || ತನ್ನಿದಿರೊಳ್ ಮಿಥ್ಯಾತಮ
ಮಂ ನಿಲಲೀಯದ ತದೀಯ ಮುಖಚಂದ್ರ ಶ್ರೀ
ಯಂ ನೋಡಿ ರಾಗದಿಂ ಮ
ತ್ತಂ ನಲದಡಿಗಡಿಗೆ ಭಕ್ತಿಯಿಂ ಪೊಡವಡುತಂ || ೭೯

ಜಿನತನುರುಚಿ ಚಂದ್ರಿಕೆಯೊಳ್
ಜಿನೇಂದ್ರ ವಾಕ್ಯಾಮೃತಾಂಬುನಿಧಿಯೊಳ್ ಕಣ್ಣುಂ
ಮನಮುಮವಗಾಹಮಿರೆ ತ
ಣ್ಣನೆ ತಣಿಯುತ್ತಿರ್ದೆಮಿರ್ಪುದುಂ ತತ್ಸಭೆಯೊಳ್ || ೮೦

ವ || ಆ ಸರ್ವಜ್ಞಂಗೆ ಕೆಲರ್ ಕೆಯ್ಗಳಂ ಮುಗಿದು –

ಕಂ || ನಿರವದ್ಯಬೋಧ ಮಹಿಮಾ
ಕರ ಭರತದ ಭಾವಿಚರಮತೀರ್ಥಕರತ್ವಂ
ದೊರೆಕೊಳ್ಗುಮೆಂಬ ರೂಢಿಯ
ಮರೀಚಿ ಬಹಿರಾತ್ಮನೀಗಳೆಂತಾಗಿರ್ದಂ || ೮೧

ಉ || ಎಂದನುರಾಗದಿಂದೆ ಬೆಸಕೊಳ್ವುದುಮಾವಿಳಸಜ್ಜಿನೇಂದು ನೀ
ನಿಂದೆಸೆವೀ ನಗೇಂದ್ರದೊಳಿಭೇಂದ್ರಕುಳಾಂತಕನಾಗಿ ವರ್ತಿಪೊಂ
ದಂದಮುಮಂ ಮಹಾನರಕ ದುಸ್ಸಹ ದುಃಖಮನುಂಡು ನಾಡೆಯುಂ
ಬಂದುದುಮಂ ಬಲಂ ಬೆಸಸಿದಂ ನಿಸದಂ ವಸುಧೈಕಬಾಂಧವಂ || ೮೨

ಗದ್ಯಂ

ಇದು ನಿಖಿಳಭುವನ ಜನವಿನೂತ ಸ್ಫೀತಮಹಿಮಾವದಾತ ವೀತರಾಗ ಸರ್ವಜ್ಞತಾ ಸಮೇತ
ಖ್ಯಾತಜಿನಸಮಯ ಕಮಳಿನೀಕಳಹಂಸಾಯಮಾನ ಮಾನಿತ
ಶ್ರೀ ನಂದಿಯೋಗೀಂದ್ರಪ್ರಸಾದ ವಾಚಾಮಹಿತ
ಕೇಶವರಾಜಾನಂದನಂದನ ವಾಣೀವಲ್ಲಭ ವಿಸ್ತಾರಿತಮಪ್ಪ
ವಸುಧೈಕಬಾಂಧವ ಶ್ರೀವರ್ಧಮಾನ ಪುರಾಣದೊಳ್
ಚಾರಣಮುನಿ ರಾಜಾಗಮನ ಮೃಗರಾಜಭವಾವಳಿ ವರ್ಣನಂ
ದಶಮಾಶ್ವಾಸಂ.