ಕಂ || ಶ್ರೀ ಕಮಳಾಧರ ದಿವ್ಯರ
ವಾಕರ್ಣನಮಂತರಂಗಕಮಳಾಕರಮಂ
ವ್ಯಾಕೋಚಿಸೆ ನಲಿದುದು ಸಭೆ
ಸಾಕಲ್ಯದೆ ಪಂಚಪರಮಗುರುಪದವಿನತಂ || ೧

ವ || ಮತ್ತಂ ನೀನೆಯ್ದೆವಂದ ನರಕಲೋಕಪ್ರಪಂಚಮಂ ದುಷ್ಪರಿಣಾಮಫಳಪ್ರಬೋಧನಾರ್ಥಂ ಭವ್ಯಸಭೆಗೆ ಬೆಸಸುವುದುಂ ಕೇಳ್ದು ಬಂದೆವದೆಂತೆಂದೊಡೀ ಮಹೀತಳದ ಕೆಳಗಣ ಭವನವ್ಯಂತರನಿವಾಸಾಧಃಸ್ಥಿತ ಪ್ರಥಮನರಕದಿಂ ಮೊದಲ್ಗೊಂಡು –

ಕಂ || ಒಂದೊಂದು ರಜ್ಜುವಿಂ ಕೆಳ
ಗೊಂದೊಂದಿರ್ದಪುವು ನಾರಕರ ಪಾಪರಜಂ
ಮಂದಯ್ಸಿ ಬಲಿದು ನೆಲನಾ
ದಂದದೆ ದುಸ್ಪರ್ಶವಿಷಮ ನರಕಾವನಿಗಳ್ || ೨

ವ || ಆ ಭೂಮಿಗಳಿಂದ್ರಗೋಪಾದಿ ನಾಮದಂತನಾದಿಸಿದ್ಧಂಗಳಪ್ಪ ರತ್ನಪ್ರಭಾದಿ ನಾಮಂಗಳಂ ತಾಳ್ದಿದುವವಱೊಳ್ –

ಕಂ || ಅಗೆಮೂಡುವಂದದಿಂ ತೆ
ರ್ಕೆಗೊಂಡು ಕಿಱುಮೊನೆಯ ಸೆಲೆಗಳಿಡಿಕಿಱಿದಿರೆ ನೆ
ಟ್ಟಗೆ ಪಾಪದಗೆಯ ನೆಲೆವಡ
ಲಗೆಗಳಿವೆನಿಸುವುವು ನರಕಬಿಲಪಟಲಂಗಳ್ || ೩

ವ || ಅವೆಲ್ಲಂ ನಾಲ್ವತ್ತೊಂಬತ್ತು ಪಟಲಮಕ್ಕುಂ ಅಲ್ಲಿ ರತ್ನಪ್ರಭೆಯ ಪದಿಮೂಱು ಪಟಲ ದೊಳಂ ಮೂವತ್ತು ಲಕ್ಕೆ ಶರ್ಕರಾಪ್ರಭೆಯ ಪನ್ನೊಂದು ಪಟಲದೊಳಮಿಪ್ಪತ್ತಯ್ದು ಲಕ್ಕೆ ವಾಳುಕಾಪ್ರಭೆಯ ನವಪಟಲದೊಳಂ ಪದಿನೈದು ಲಕ್ಕೆ ಪಂಕಪ್ರಭೆಯ ಪಟಲ ಸಪ್ತಕದೊಳಂ ಪತ್ತುಲಕ್ಕೆ ಧೂಮಪ್ರಭೆಯಯ್ದು ಪಟಲದೊಳಂ ಮೂಱು ಲಕ್ಕೆ ತಮಃ ಪ್ರಭೆಯ ಮೂಱು ಪಟಲದೊಳಮಯ್ದುಗುಂದಿದೊಂದು ಲಕ್ಕೆ ಮಹಾತಪಃ ಪ್ರಭೆಯೊಂದು ಪಟಲದೊಳಮಯ್ದು ಬಿಲಂಗಳಕ್ಕುಂ ಅವೆಲ್ಲಂ ಇಂದ್ರಕ ಶ್ರೇಢೀಬದ್ಧಪ್ರಕೀರ್ಣಕವಿಕಳ್ಪದಿಂ ತ್ರಿವಿಧಮಾಗಿರ್ಪುವು ಅವಱಗಲಂಗಳಸಂಖ್ಯಾತ ಯೋಜನಂಗಳ್ ಕೆಲವು ಸಂಖ್ಯಾತ ಯೋಜನಂಗಳ್ ಪಟಳಮಧ್ಯದೊಳಿಂದ್ರಕಂಗಳಿರ್ಪುವು ಅವಱಿಣ್ದಿಸೆಯೊಳಂ ತರ ತರದಿಂ ಶ್ರೆಢೀಬದ್ಧಂಗಳಿರ್ಪುವು ಅವಱೆಡೆಯೆಡೆಯೊಳ್ ಪೂವಲಿಗೆದಱಿದಂದದಿಂ ಪ್ರಕೀರ್ಣಕಂಗಳಿರ್ಪುವು ರತ್ನಪ್ರಭೆಯಿಂದಂ ಧೂಮಪ್ರಭಾತ್ರಿಚರಣ ಭಾಗಂಬರಮಿರ್ದು ಬಿಲಂಗಳೊಳಗೆ ಮಂದರಮಹೀರಧರಪ್ರಮಾಣದಾಲಿಗೋಡುವ ಲೋಹಪಿಂಡಮಂ ಕೊಂಡೊಯ್ದೆತ್ತಾನುಮಿೞಿಪಿದೊಡಮಾಕ್ಷಣದೊಳೆ ಕರಗಿಸಲಾರ್ಪ ಘರ್ಮಮೊರ್ಮೆ ಮಾಣದೆ ಧಗದ್ಧಗಿಸುತ್ತುಮಿರ್ಪುದಲ್ಲಿಂದತ್ತ ಮಹಾತಮಃಪ್ರಭೆವರಮಿರ್ದು ಬಿಲಂಗಳೊಳಗೆ ತದ್ಗಿರೀಂದ್ರ ಸದೃಶಮಪ್ಪ ಕಡುಗಾಯ್ದು ಕೆಂಗಲಿಸಿದ ಲೋಹದಬಟ್ಟನುಯ್ದಿೞಿಪಲೊಡಂ ನೆಲನನೆಯ್ದೆ ಮುಟ್ಟದ ಮುನ್ನಂ ಮುರಿಂಟಿಸಲಾರ್ಪ ಹಿಮಮೆಂದುಂ ಕುಂದದತ್ಯದ್ಭುತ ಮಾಗಿರ್ಕುಮಂತನಿತು ಬಿಲಂಗಳೊಳವಱ ಮೇಗಣಟ್ಟುಗಳೊಳ್ –

ಕಂ || ತಲೆಕೆಳಗಾಗಿರ್ಪುವು ಬಾ
ವಲಂತೆ ವೀಭತ್ಸ ಕುತ್ಸಿತಾಕಾರಂಗಳ್
ಮಲಿನಂಗಳ್ ನಿಜಮುಖ ನಿ
ರ್ಗಲಿತ ಮಹಾಪೂತಿಗಂಧಭರಿತಾವನಿಗಳ್ || ೪

ಖರ ಜಂಬುಕೋಷ್ಟ ವೃಕ ಸೂ
ಕರ ಶುನಕ ಚಮೂರ ವಾನರಾದ್ಯಾನನದೊಳ್
ದೊರೆಯೆನಿಪಾಕೃತಿಗಳ ದು
ಸ್ತರ ಯೋನಿಮುಖಂಗಳೆಯ್ದೆ ಸಂಛನ್ನಂಗಳ್ || ೫

ಅವು ವಿಷದುರುಳಿಗಳಂ ಕಾ
ಱುವಂದದಿಂ ಧರೆಗೆ ತಮಮನುಗುೞ್ವಂದದಿನಿ
ರ್ಪುವು ನವನಾರಕತತಿಮುಖ
ವಿವರಂಗಳನಿೞಿದು ಬೇೞುತಿರ್ಪವಸರದೊಳ್ || ೬

ದಾರುಣಲೇಶ್ಯೆಗಳಿಂ ಬ
ಹ್ವಾರಂಭ ಪರಿಗ್ರಹತ್ವದಿಂದೊದವಿದ ದು
ರ್ವಾರ ದುರಿತಪ್ರಭಾವಂ
ಘೋರ ಮಹಾನರಕಯೋನಿಯೊಳ್ ಪುಟ್ಟಿಸುಗುಂ || ೭

ಅತಿರೌದ್ರರಾಜಿಲೋಲರ್
ಗತಧರ್ಮ ದಯಾಗುಣರ್ ಸದಾ ವೈರಸಮ
ನ್ವಿತರಾರ್ಗಮೆಱಗದತ್ಯು
ದ್ಧತರೆನಿಪ ದುರಾತ್ಮರುಗ್ರನರಕದೊಳಾಳ್ಗುಂ || ೮

ಎನಿತು ಧನಲಾಭಮಾದೊಡ
ಮನವರತಂ ಮನದ ಬಡತನಂ ಪೋಗದೆ ಕೆ
ಮ್ಮನೆ ಕುದಿವ ತೀವ್ರತೃಷ್ಣೆಯ
ಮನುಜರ್ ವೈತರಣಿಯೊಳಗೆ ಪುಗುವರವಶ್ಯಂ || ೯

ಕನಸಿನೊಳಮಳಿಪಲಾಗದು
ಮುನಿದಂಗಂ ಮುನಿಯಲಾಗದೆಂಬಾರ್ಹತಮಂ
ಜನಹಿತಮಂ ದುರ್ವ್ಯಸನಿಗ
ಳೆನಸುಂ ಸೈರಿಸದೆ ಪೞಿದಧೋಗತಿಗಿೞಿಗುಂ || ೧೦

ಬ್ರತಗುಣ ಚಾರಿತ್ರಯಶೋ
ಲತೆಗಳನೊರ್ಮೊದಲೆ ಸುಡುವ ದಾವಾಗ್ನಿಯೆನಿ
ಪ್ಪತಿಪಾತಕಮನ್ಯಸ್ತ್ರೀ
ರತಿಲೋಲತೆ ನರಕಗತಿಯ ಪೆರ್ವಟ್ಟೆ ವಲಂ || ೧೧

ಪೆಱರಂ ಪೞಿದುತ್ಸಾಹಿಪ
ಪೆಱರಂ ಪರಿಭವಿಸಿ ಸುಖಮನೆಯ್ದುವ ಮನದೊಳ್
ಪೆಱರುನ್ನತಿಯಂ ಸೈರಿಸ
ದಱಗುಲಿಗಳ್ ನರಕದುಃಖಭಾಜನರಪ್ಪರ್| ೧೨

ಮ || ಸಮಸಂದಿಂದ್ರಿಯ ದರ್ಪದಿಂ ಪ್ರಬಳಮೋಹಾವೇಶದಿಂ ಕ್ರೂರಭಾ
ವಮನೆಯ್ದುತ್ತುಮಸಂಜ್ಞಿಗಳ್ ಸರಿಸೃಪಂಗಳ್ ಪಕ್ಷಿಜಾಳಂ ಭುಜಂ
ಗಮಯೂರಂ ಗಜವೈರಿಗಳ್ ವನಿತೆಯರ್ಕಳ್ ಮರ್ತ್ಯ ಮತ್ಸ್ಯೋತ್ಕರಂ
ಕ್ರಮದಿಂ ಪುಟ್ಟುಗುಮಾದ್ಯ ಭೂಮಿಯಿನಧೋಧೋಭೂಮಿಸೀಮಂಬರಂ || ೧೩

ಕಂ || ಮದದಿಂ ಮೆಯ್ಯಱಿಯದೆ ಮಾ
ಣದಿಲ್ಲಿ ದುರ್ವಿಷಯಸುಖಮನನುಭವಿಸಿದವರ್
ಮದಮುಡುಗಿ ನಡುಗುತುಂ ನರ
ಕದೊಳೆಯ್ದುವ ದುಃಖಕೋಟಿಗಳ್ ವಿಷಮಂಗಳ್ || ೧೪

ವ || ಅದೆಂತೆನೆ-

ಕಂ || ಮೊದಲಚ್ಚಿಗಮನದೇವೇ
ೞ್ವುದೊ ಗರ್ದುಗಿನಕಾಯನೊಳಗು ಪೊಱಗಾಗಿ ಮಗು
ೞ್ಚಿದ ತೆಱದಿನಿರ್ದ ದುಸ್ಪ
ರ್ಶದ ಯೋನಿಗಳೊಳಗೆ ನೆಲಸುವುವು ಜೀವಂಗಳ್ || ೧೫

ವ || ಅಂತು ನೆಲಸಿದಂತರ್ಮುಹೂರ್ತದೊಳ್ ಆಹಾರಶರೀರೇಂದ್ರಿಯೋಚ್ಛ್ವಾಸ ಭಾಷಾ ಮನಃ ಪರ್ಯಾಪ್ತಿಗಳ್ ನೆಱೆವುದುಂ ರೋಮರೋಮಂದಪ್ಪದೆ ಸರ್ವಾಂಗಮಂ ವೃಶ್ಚಿಕಸಹಸ್ರಂಗಳೊಡನೆ ಮಿಡಿದಂತಪ್ಪ ಬೇನೆಗಮನಂತಗುಣಮೆನಿಪ ದೇಹ ವ್ಯಥೆಯ ನೊದವಿಸುತ್ತುಂ ಉದಯಿಸುವ ಹಾಳಾಹಳಸಮಾನ ತೀವ್ರಾನುಭಾಗದ ದುರಿತಭಾರದಿಂ ಬೀೞ್ವಂತೆ ದೊಕ್ಕನೆ ಬಿೞ್ದು ಗಗನಾಗ್ರದಿಂ ಶಿಲಾತಳದೊಳ್ ಬಿೞ್ದಲೋಹದ ಗುಂಡಿನಂತೆ ಪುಟನೆಗೆದು ಪಲಸಿನಪಣ್ಣನನುಕರಿಪ ಮೊನೆದುಱುಗಲ ವಜ್ರದಶಿಲೆಯೊಳಪ್ಪಳಿಸಿ ಮಗುೞೆ ಬಿರ್ದು ಜರ್ಜರಿತಗಾತ್ರರಾಗಿ ಬಾಯೞಿದೊಳಱಿ ಪೊರಳುತ್ತುಮೆೞ್ದು ನಿಂದಿರ್ದು ದೆಸೆಗಳಂ ನೋೞ್ಪಾಗಳ್ –

ಕಂ || ಪೊಡೆವ ಬಱಸಿಡಿಲ ತೆಱದಿಂ
ಕಡಂಗಿ ಗರ್ಜಿಪ ಪುರಾಣನಾರಕನಿವಹಂ
ತಡೆಯದೆ ನುಂಗುವವೋಲ್ ಕ
ಣ್ಕಿಡಿಯಂ ಕಂಡಮುಮನುಗುೞೆ ಮುಳಿದೀಕ್ಷಿಸುತುಂ || ೧೬

ಪರಿತಂದು ಗಂಟಲಂ ಮುರಿ
ಮುರಿ ಸೀೞ್‌ಸೀೞೆಂಬ ನುಡಿಗೆ ಭಯದಿಂ ನಡುಗು
ತ್ತಿರೆಯಿರೆ ಮನದೊಳ್ ದಿಗಿಲೆಂ
ದುರಿ ನೆಗೆವವೊಲುದಯಿಕುಂ ವಿಭಂಗಜ್ಞಾನಂ || ೧೭

ವ || ಅಂತು ತಮಗಂ ಪೆಱರ್ಗಂ ದುರಂತಸಂತಾಪನಿಮಿತ್ತಮಾಗೆ ಪುಟ್ಟಿದ ವಿಭಂಗಜ್ಞಾನದಿಂ ನರಕಲೋಕ ವೃತ್ತಾಂತಮನಱಿದು –

ಮ || ಜಿನಧರ್ಮಕ್ಕೆ ದಯಾರಸಾಬ್ಧಿಗೆ ವೃಥಾ ವಿದ್ವೇಷಮಂ ಮಾೞ್ಪ ಮು
ನ್ನಿನ ದುರ್ಭಾವದಿನಾದ ಪಾಪಾದ ಫಲಂ ನಿಷ್ಕಾರಣಂ ದ್ವೇಷದು
ರ್ವಿನಮಂ ನಾರಕಕೋಟಿಯೊಳ್ ಪಡೆವುದುಂ ನಾಯ್‌ನಾಯ್ಗಳೊಳ್‌ಪೋರ್ವವೋಲ್
ಮುನಿದಾರ್ದೊರ್ವರನೊರ್ವರೆಯ್ದೆ ಕಡಿಖಂಡಂ ಮಾಡುತುಂ ದಂಡಿಪರ್ || ೧೮

ವ || ಅದಲ್ಲದೆಯುಂ –

ಕಂ || ಉರಿವನಳಂಗಾಜ್ಯಾಹುತಿ
ದೊರೆಕೊಂಡವೊಲುಂತೆ ತಮ್ಮೊಳಿಱಿವವರ್ಗಸುರಾ
ಮರಸಮಿತಿ ಪೂರ್ವವೈರ
ಸ್ಮರಣಮನೆೞ್ಚಱಿಸೆ ಕೋಪಶಿಖಿ ದಳ್ಳಿಸುಗುಂ || ೧೯

ವ || ಮತ್ತಂ ಕೞ್ತಲಿಸುವ ರಾತ್ರಿಯೊಳ್ ಕಾಣ್ಬ ಗೂಗೆಗಳಂತೆ ವಿಭಂಗಜ್ಞಾನದಿನವರವರ ಪೂರ್ವಭವದೋಷಾವಿದ್ಧಮಪ್ಪ ಚೇಷ್ಟೆಗಳನಱಿವುತ್ತುಂ ತಮ್ಮ ದೋಷಮಂ ತಾವೆಣಿಸದೆ ಕಳ್ಳರ್ ಕಳ್ಳರಂ ಪಾಂಬರ್ ಪಾಂಬರಂ ಮುನಿದು ಮೂದಲಿಸುವಂತೆ ಮೂದಲಿಸುತ್ತುಂ-

ಕಂ || ಇವಱಿಂದಿವು ಸವಿಯೆನುತುಂ
ಸವಿನೋೞ್ಪೈ ಪಲವು ತೆಱದ ಮೃಗದಡಗನಿವಾ
ವುವು ಸವಿ ಪೇೞೆಂದೆನುತದ
ನವಯವಗಳಂ ಕೊಯ್ದು ಗಿಡಿವರವನಾನನದೊಳ್ || ೨೦

ಮೊಱೆಯೞಿವ ಮದ್ಯಪಾನಮ
ನಱನೆಂದುಂ ಮಧುವನಂಟು ತಲೆಯೊಳ್ ತಳಿಯಿ
ಪ್ಪಱಗುಲಿಗಳ ತಲೆಯಿಂದಿೞಿ
ಯೆಱೆವರ್ ತಳ್ತಳಿಸಿ ಕುದಿವ ಲೋಹದ್ರವಮಂ || ೨೧

ಎಲವೆಲವೊ ನೀನಗಲ್ದೊಡೆ
ನಿಲಲಾಱದ ಪಾಂಬೆ ಬಂದಳೀಯಿರ್ದಳೆ ಬಾ
ನಲಿದು ನೆರೆಯೆಂದು ಕಡುಗಾ
ಯ್ದಲೋಹಪುತ್ರಿಕೆಯನಾಗ್ರಹದಿನಪ್ಪಿಸುವರ್ || ೨೨

ವ || ಅಂತಪ್ಪಿಸುವುದುಂ ಮೆಯ್ ಬೇಯೆ ಕುದಿದು ನೊರೆಗೊಂಡು ರಸರುಧಿರ ಬಿಂದುಗಳುಚ್ಚಳಿಸೆ ಮುನ್ನುಂ ಪರಕಾಂತಾರತರೇಕಾಂತದೊಳ್ ಘರ್ಮಬಿಂದುಗಳೊಳಗೆಯೇ ಹಮ್ಮದಂ ಬೋಗಿರ್ಪುದನನುಕರಿಸುವಂತೆ ಮುಚ್ಚೆವೋಗಿ ಕಿಱಿದುಬೇಗದಿನೆೞ್ಚತ್ತು ಸಂತಾಪದಿಂ ನೀರಡಸಿ ನಿಲಲಾಱದೆ ದೆಸೆದೆಸೆಗಳನಾರಯ್ದು ನೋೞ್ಪಾಗಳ್ –

ಕಂ || ಪೆಱರಂ ಮಱುಗಿಪ ತಾಮುಂ
ಮಱುಗುವ ಕಷ್ಟರ ಕಷಾಯ ಕಾಲುಷ್ಯಮದೀ
ತೆಱನೆಂದು ಪೇೞ್ವವೋಲ್ ಸು
ತ್ತಿಱಿದುಲಿಗುಂ ಕುದಿದು ಪರಿಯುತುಂ ವಿಷನದಿಗಳ್ || ೨೩

ವ || ಅದಲ್ಲದೆಯುಂ ಕುತ್ಸಿಕ ವಿಷಯಸೇವೆಯಿಂ ಮಧ್ಯಲೋಕವರ್ತಿಗಳ ಚೈತನ್ಯದೊಳಾದ ನಾನಾವರ್ಣ ಕುಷ್ಟರೋಗಂಗಳೆನಿಸುವತ್ಯಶುಭಂಗಳಪ್ಪ ವೀರ ಭೀಭತ್ಸ ಹಾಸ್ಯ ರೌದ್ರ ರಸಂಗಳುಂ ಅತ್ಯುತ್ಕಟಂಗಳಾಗೆ ಪೊಱಪಾಯ್ದು ಪೊನಲ್ವರಿದು ನೀಚಗತಿ ಪರಿಣತಂಗಳಾಗಿ ನರಕಭೂಮಿಗವತರಿಸಿ ಕಾೞ್ಪುರಂ ಮಸಗಿದಂತಿರ್ಪ ಜಳಚರವಿದಾರಿತ ನಾರಕಶರೀರ ಧಾತು ಸಮ್ಮಿಶ್ರಿತ ನಾನಾವರ್ಣ ವಿಷಜಳಪ್ರವಾಹದ ವೈತರಣಿಯಂ ಕಂಡು ನೀರ್ಗುಡಿ ಯಲೆಂದು ಪೋಗಿ –

ಕಂ || ಪುಗಲೊಡಮಲ್ಲಿಯ ಮಕರಾ
ದಿಗಳುಗಿಬಗಿಮಾೞ್ಕುಮಾಸೆಯಿಂ ವಿಷಜಳಮಂ
ಮೊಗೆದು ಕುಡಿಯಲೊಡಮೆರ್ದೆ ಕರ
ಗುಗುಮರಿದಾಯ್ತೆಂದು ನಾರಕರ್ ಪೆಳಱುವಿನಂ || ೨೪

ವ || ಮತ್ತಮಾನದಿಯ ತಡಿವಿಡಿದಿರ್ದ ಬನದ ನೆೞಲನಾಸೆವಟ್ಟು ಪೋಪಾಗಳ್ –

ಕಂ || ಕುಲಟಾ ಯೌವನವನದೊಳ್
ವಿಳಾಸಮಂ ಮೆಱೆದು ಭೋಗಿಪವರ್ಗಗಳ ಪಾಪಂ
ಫಲಿಯಿಸಿದುದೆನಿಸುಗುಂ ಪೊ
ರ್ದಲೊಡಂ ಸಿೞ್ವಿಱಿವ ಖಂಡಿತಪಸಿಪತ್ರವನಂ || ೨೫

ನನೆಗಣಿ ನಡುಗುಂ ಕಾಮಿಗ
ಳನೆಂಬ ಮಾತಿಲ್ಲಿ ಪುಸಿ ಪರಸ್ತ್ರೀರತರಂ
ನನೆಯ ಮೊನೆಯಂಬು ಮಲರಲ
ಗಿನಂಬುಮಾ ಬನದೊಳುರ್ಚಿ ನೋಯಿಪುದು ದಿಟಂ || ೨೬

ವ| ಅದಲ್ಲದೆಯುಂ –

ಕಂ || ಒಳಗೊಳಗೆ ಕಳ್ದರಂ ಪುಸಿ
ಗೆಳೆಯಿಂದೊಳಗೊಳಗೆ ಸುೞಿದು ಪರವನಿತಾಸಂ
ಕುಳದೊಳ್ ನೆರೆದರನವರಘ
ಮೊಳಮೊಳಗಿ ಱಿಗುಂ ವಿಚಿತ್ರರೋಗಚ್ಛಲದಿಂ || ೨೭

ಮ || ಸ || ಜ್ವರ ದಾಹ ಶ್ವಾಸ ಕಾಸ ಬ್ರಣ ಪಿಟಕ ಶಿರೋರೋಗ ಸರ್ವಾಂಗಶೂಲಾ
ದಿ ರುಜಾಸಂದೋಹಪೀಡಾಭರದಿನೊಳಱುತುಂ ಸುತ್ತಲುಂ ಬೇನೆಯಿಂದಂ
ಬಿರಿಯುತ್ತುಂ ನಾರಕರ್ಕಳ್ ಬಿರಿಕಿನೆಡೆಗಳಂ ಶಸ್ತ್ರದಿಂ ಸೀೞ್ವುದುಂ ಗೋ
ಳ್ಗರೆಯುತ್ತುಂ ಕೂಗಿಡುತ್ತುಂ ಮೊಱಿಯಿಡುತುಮತಿಕ್ಲೇಶದಿ ಬರ್ದುಕಿರ್ಪರ್ || ೨೮

ವ || ಮತ್ತಮಾ ನಾರಕನಿಕಾಯಕ್ಕೆ –

ಕಂ || ಧಾರಿಣಿಯನೆಯ್ದೆ ನುಂಗುವ
ವಾರಾಶಿಯನೆಯ್ದೆ ಪೀರ್ವ ತವಕದ ಪಸಿವುಂ
ನೀರೞ್ಕೆಯುಮೆಂದುಂ ಕಿಡ
ವೋರೊರ್ಮೆಯುಮನ್ನಪಾನಲವಮಂ ಪಡೆಯರ್ || ೨೯

ಪಸಿದು ಲವಲವಿಸೆ ಬಿಸಿಱಂ
ಪೊಸೆಯುತ್ತುಂ ಬಿೞ್ದು ನೆಲದ ಮಣ್ಣಂ ಕಾರ್ವರ್
ಬಸಮೞಿಯುತಿರ್ಪರವರಾ
ರ್ಜಿಸಿದುತ್ಕಟಮಪ್ಪ ಪಾಪಮೇನಿನಿವಿರಿದೋ || ೩೦

ಆ ವಿಷಮೃತ್ತಿಕೆಯಂ ತಂ
ದೀ ವಸುಧೆಯೊಳೆತ್ತಲಾನುಮಿಕ್ಕಿದೊಡೞಿಗುಂ
ಗಾವುದರಱೊಳಗಿರ್ದನಿತುಂ
ಸ್ಥಾವರಜಂಗಮಮೆನಿಪ್ಪ ಜೀವನಿಕಾಯಂ || ೩೧

ವ || ಮತ್ತಮಾ ದುಃಖಜೀವಿಗಳ್ –

ಕಂ || ಉದಧಿಗೆಣೆಯಿನಿಸಿದಾಯು
ಷ್ಯದ ಕಡೆವರಮೆಯ್ದೆ ಘಟ್ಟಿಗಾಳೆಗದವರಂ
ದದಿನಶುಭಕರ್ಮದಾವೇ
ಶದಿನೊರ್ವರನೊರ್ವರಿೞಿದು ನಮೆಯುತ್ತಿರ್ಪರ್ || ೩೨

ನರಕದ ವಿಚಿತ್ರ ದುಃಖೋ
ತ್ಕರಮಂ ತಾವುಣುತುಮಿದಿರುಮಂ ಬಾಧಿಸುವರ್
ಪೊರೆದ ದವಾಗ್ನಿಯಿನಡವಿಯ
ಮರಂಗಳುರಿಯುತ್ತುಮೊಂದನೊಂದುರಿಪುವವೋಲ್ || ೩೩

ಪರಿವಿಡಿಯಿನೊಂದು ಮೂಱಾ
ಯುರಬ್ಧಿ ಬೞಿಕೇೞು ಪತ್ತು ಪದಿನೇೞಿಪ್ಪ
ತ್ತೆರಡಕ್ಕುಮಾಱನೆಯ ಧರೆ
ವರೆಗಂ ಮೂವತ್ತುಮೂಱು ಚರಮಾವನಿಯೊಳ್ || ೩೪

ಮೊದಲವರ ಶರೀರೋದಯ
ಮದೇೞೆ ಬಿಲ್ ನೂಱು ಹಸ್ತಮಾಱಂಗುಲಮಂ
ತದಱಿಂ ದ್ವಿಗುಣ ಕ್ರಮಮ
ಪ್ಪುದು ಕಡೆವರಮಲ್ಲಿ ಪಂಚಶತ ಧನುವಕ್ಕುಂ || ೩೫

ಸೆರೆಗಳ್ ಪರ್ವಿರೆ ತುಱಿಯುಂ
ಕೆರಕುಂ ದುಷ್ಟ ಬ್ರಣಂಗಳುಂ ಕುಂದದವಂ
ದಿರ ತನುಗಳ್ ಪಾಪದಫಲ
ದ ರಾಶಿಗಳ್ ಲಚ್ಚಿಸಿರ್ದ ತೆಱದಿಂದಿರ್ಕುಂ || ೩೬

ಮಿದಿಯದ ಕೊಳೆ ಮಣ್ಣಿಂದಱಿ
ಯದವರ್ ಚೆಚ್ಚರಮವಜ್ಞೆಯಿಂ ನೋಡದೆ ಮಾ
ಡಿದ ರೂಪಿನಂತೆ ನೇರ್ಪಿ
ಲ್ಲದ ವಿಕಟಾಕೃತಿಯ ಹುಂಡಸಂಸ್ಥಾನಂಗಳ್ || ೩೭

ಒಳಗಣ ದುರ್ಗಂಧಮದ
ಗ್ಗಳಿಸಿರೆ ಮೆಯ್ ತಾನೆ ಪೇಸಿ ಬಹುಮುಖದಿಂದಾ
ಗಳುಮುಗುೞ್ವ ಮಾೞ್ಕೆಯಿಂ ಪು
ಣ್ಗಳ ಬಾಯಿಂ ಪಡಿಕೆನಾರ್ಪರಸಿಗೆಗಳೊಸರ್ಗುಂ || ೩೮

ಗಱಿ ಕಿೞ್ತ ಕೀತಬಾವಲ
ತೆಱದಿಂ ಬೀಭತ್ಸಮಪ್ಪೊಡಲ್ಗೆ ಕೆಲರ್ ಬೇ
ಸಱುತುಂ ನೆನೆವರ್ ಮುನ್ನಿನ
ಪೆಱರಂಗನೆಯರ್ಗೆ ಮೆಱೆದ ಚೆನ್ನಿಗತನಮಂ || ೩೯

ಸೀರುಡುವಿನ ಕರಡಿಯ ಮಾ
ರ್ಜಾರದ ವಾಯಸದ ದನಿಗಮತಿಕಷ್ಟಂಗಳ್
ನಾರಕರ ದುಃಸ್ವರಂಗಳ
ಘೋರಂಗಳ್ ಕರ್ಣಶೂಲಮಂ ಪುಟ್ಟಿಸುಗುಂ || ೪೦

ನೆನೆದು ಕೆಲರ್ ಮಱುಗುವರೊಡನೆ
ದ ನಿಜಧ್ವನಿ ಭಿನ್ನಕಂಠ ಗರ್ದಭ ಕರಭ
ಧ್ವನಿಗಂ ಕರ್ಕಶಮಾಗಿರೆ
ವನಮೃಗಮಂ ಗೋರಿಗೊಳಿಪ ಮುನ್ನಿನ ದನಿಯಂ || ೪೧

ವ || ಅದಲ್ಲದೆಯುಂ –

ಕಂ || ದಾವಾಗ್ನಿಯನೆೞ್ಚಱಿಪ ಮ
ಹಾವಾಯುವಿನಂತೆ ತಮ್ಮ ಮನದಳಿಪಂ ನಾ
ನಾವಿಧ ದುರಾಗಮೋಕ್ತಿಗ
ಳಾವಗಮೆೞ್ಚಱಿಸೆ ಪೂರ್ವಜನ್ಮಾಂತರದೊಳ್ || ೪೨

ವ || ಮೆಚ್ಚಿದಂತಾಡಿ ದುರಾಚಾರಂ ಪೆಸರ್ಗೊಂಡು ಮೂದಲಿಸುತ್ತುಮಿರೆ ಮುನ್ನಮೋರೊರ್ಮೆ ವಿನೋದದಿಂ ಕೇಳ್ದ ಜೈನಾಗಮೋಕ್ತಿಗಳಂ ನೆನೆದು –

ಕಂ || ಅಮಮ ಜಿನಮತಮೆ ಸಕಳಾ
ಗಮ ತಿಳಕಮೆ ಜೀವಹಿಂಸೆಯಿಂ ದುರ್ಗತಿಯ
ಕ್ಕುಮಮೋಘಮೆಂಬ ಜಿನವಾ
ಕ್ಯಮೆ ದಿಟಮೆಂದೀಗಳಱಿದೆವೆಂಬರ್ ಕೆಲಬರ್ || ೪೩

ವ || ಮತ್ತಮೋರೊರ್ವರ್ –

ಕಂ || ಮಱುಭವಮುಳ್ಳುದು ದಿಟಮೆಂ
ದಱಿವೊಡಮೀ ತೆಱದವಸ್ಥೆ ನರಕದೊಳುಂಟೆಂ
ದಱಿವೊಡಮಾ ಮೃಗಗಣಮಂ
ತಱಿವೆವೆ ಜೈನಾಗಮೋಕ್ತಿಯಂ ಮೀಱುವೆವೇ || ೪೪

ಕೊಲೆಯುಂ ಪುಸಿಯುಂ ಕಳವುಂ
ಕುಲಟಾರತಿಯುಂ ವಿಮೋಹಮುಂ ಪಾತಕಮೆಂ
ದಲಸದೆ ತಿಳಿಪುವ ಮುನಿಸಂ
ಕುಳಕ್ಕೆ ಕಡುಮುಳಿವ ಪಾಪಿಗೆನಗಿದು ಪಿರಿದೇ || ೪೫

ಅಂದು ಜಿನಮತದೊಳೆಸಗಿದೊ
ಡಿಂದೆನಗೀ ದುಃಖಮಾಗಲಱಿಯದು ಹಿಂಸಾ
ನಂದದ ಕಳ್ಗುಡಿವ ಮೃಷಾ
ನಂದದ ದುರ್ಮತದೊಳೆಱಗಿ ನರಕಕ್ಕಿೞಿದೆಂ || ೪೬

ಎಂದೊರ್ವರೊರ್ವರೀತೆಱ
ದಿಂದಂ ನೆನೆದುಂ ಗತಿ ಸ್ವಭಾವದೆ ಮತ್ತಂ
ಕುಂದದೊಗೆವ ಶುಭಲೇಶ್ಶೆಗ
ಳಿಂದಂ ಕಡುಮುಳಿದು ತಮ್ಮೊಳಿಱಿಯುತ್ತಿರ್ಪರ್ || ೪೭

ವ || ಅಂತೊರ್ವರನೊರ್ವರ್ ಕರಗಸದಿಂ ಸೀೞ್ವ ದೂವೆಗಿಚ್ಚಿನೊಳ್ ಪೂೞ್ವ ಕತ್ತರಿಯಿಂ ದರಿವ ಕಾವಲಿಯೊಳಿಕ್ಕಿ ಕರಿವ ತಿದಿಯುಗಿವ ಬಸಿಱಂ ಬಗಿವ ಕರುಳ ನುರ್ಚುವ ಕೊಳ್ಳಿಯಂ ಚುರ್ಚುವ ಬೆರಲೊಳ್ ಸೂಜಿಯಂ ಬೆಟ್ಟುವ ಪಲ್ಗಳಂ ಕೞಲೆ ಕುಟ್ಟುವ ಗಾಣದೊಳಿಕ್ಕಿ ಪಿೞಿವ ಕೀಸಿ ಸಾಸಿವೆಯಂ ಬೞಿವ ಸತತವಿರಿವ ತತ್ತೞದಱಿವ ಪಲತೆಱದ ದಂಡನೆಗಳುಂ ನರಕಭೂತಳದತ್ಯದ್ಭುತಂಗಳಪ್ಪ ಮಹಾಸೀತೋಷ್ಣಂಗಳುಂ ಸ್ಪರ್ಶನೇಂದ್ರಿಯಮಹರ್ನಿಶಂ ಮಿಡಮಿಡಂ ಮಿಡುಕಿಸುತ್ತಿರೆಯುಂ ಕೋಪದಿಂ ಕಿಡಿಗಿಡಿವೋಗುತ್ತುಮೋರೊರ್ವರನೊರ್ವರ್ ಪಿಡಿದು ಪಿಡಿಖಂಡಂಗೊಯ್ದು ಬಾಯೊಳ್ ಗಿಡಿದು ನಿಗ್ರಹಿಪ ನಾರಕರಾಗ್ರಹಂ ಸಮನಿಸುವ ವಿಷಸದೃಶ ನಿಜನಿಜಶರೀರ ಮಾಂಸಭಕ್ಷಣಮುಂ ಲೋಹದ್ರವಕ್ಷಾರವಾರಿಪಾನಮುಂ ರಸನೇಂದ್ರಿಯಮನಾಗಳುಂ ಮಮ್ಮಲಂ ಮಱುಗಿಸುತ್ತಿರೆಯುಂ ದೆಸೆಗಳೆಲ್ಲಮಂ ಪಡುಕೆಯಿನಿಡಿದಿಡಿದು ತೀವಿದಂತಿರ್ದ ನಾರಕರ ಮೆಯ್ಯ ಪೂತಿಗಂಧಂಗಳುಂ, ಕ್ಷೇತ್ರದುರ್ಗಂಧಂಗಳುಂ ಉಸಿರ ಬೞಿವಿಡಿದೊಳ ಪೊಗುತ್ತುಂ ಘ್ರಾಣೇಂದ್ರಿಯಮನಡಿಗಡಿಗೆ ಬಿಕ್ಕನೆ ಬಿರಿಯಿಸುತ್ತಿರೆಯುಂ ಮುಳಿದಿಱಿಯಲೆಂದು ಬರ್ಪ ನಾರಕರ ಭೀಕರಾಕಾರಂಗಳುಂ ಮೇಲೆಬೀೞ್ವ ಸಿಡಿಲಂತೆ ಬಂದೆಱಗುವ ದುರ್ನಿರೀಕ್ಷ ತೀಕ್ಷ್ಣಾಯುಧಂಗಳ ಪೊಳೆಪುಗಳುಂ ಚಕ್ಷುರಿಂದ್ರಿಯಮಂ ಮಾಣದೆ ಗೂಡುಗೊಳಿಸುತ್ತಿರೆಯುಂ ಗಜರುವ ಗರ್ಜಿಸುವ ಬಯ್ವ ಮೂದಲಿಸುವ ನಿರಯಜನಿವಹ ನಿಸ್ಸಾರ ನಿಷ್ಠುರಾಳಾಪಂಗಳುಂ ಕಿಡಿವಿಡೆ ಪಳಂಚುವಕಯ್ದುಗಳ ಕರ್ಕಶ ಖಣತ್ಕೃತಂಗಳುಂ ಶ್ರೋತ್ರೇಂದ್ರಿಯಮನನವರಮುಗಿಬಗಿ ಮಾಡುತ್ತಿರೆಯುಂ ಮೇಗೆನೆಗೆವಂತೊಡನೆ ಸಂದಣಿಸಿ ಪೊಣ್ಮವು ತೀವ್ರ ರುಜಾಕೋಟಿಗಳುಂ ಪೇೞಲುಂ ಕೇಳಲುಮರಿಯವಪ್ಪ ತಿಪ್ರಖರ ಕ್ಷುತ್ಪಿಪಾಸೆಗಳುಂ ಪೊರಗಣ ಪರಸ್ಪರೋದೀರಿತಕ್ಕೆ ನೆರಮಾಗಿ ಸರ್ವಾಂಗಮ ನೊಳಗೊಳಗೆ ಬಿಡದಳ್ಳಿಱಿದು ಧಳ್ಳಿಸುತ್ತಿರೆಯುಂ ಮತ್ತಮೊರ್ವರನೊರ್ವರಿಱಿಯುತ್ತುಂ ಮುನಿದು ತಗುೞುತ್ತುಂ ಭಯದಿನೋಡುತ್ತುಂ ದೇಹವ್ಯಥೆಗಳಿಂದಮೊಳಱುತ್ತುಂ ಪುಯ್ಯಲಿಡುತ್ತುಂ ದೆಸೆದೆಸೆಗೆ ಬಾಯ್ವಿಡುತ್ತುಂ ಬಸವೞಿದು ಬೀೞುತ್ತುಂ ಬಿಡದೆ ನರಳುತ್ತುಂ ಪುಡಿಯೊಳ್ ಪೊರಳುತ್ತುಮಿರ್ಪರಿಂತು –

ಮ || ಉರಿಯಂ ಕಾಱುತುಮೈಕಿಲಂ ಕೆದಱುತುಂ ತದ್ಭೂಮಿಗಳ್ ಪೀಡಿಸು
ತ್ತಿರೆಯುಂ ಕ್ರೋಧದಿನಾಗಳುಂ ಮಱುಗುತುಂ ಪ್ರಾಣಂಗಳಾವರ್ತಿಸು
ತ್ತಿರೆಯುಂ ನಾರಕಶಸ್ತ್ರಮುರ್ಚುತಿರೆಯುಂ ಕ್ಷುತ್ತೃಣ್ಮಹಾಬಾಧೆ ತ
ಳ್ತಿರೆಯುಂ ಕುತ್ತದ ಮೊತ್ತಮೊತ್ತುತಿರೆಯುಂ ಮತ್ತಂ ಚಿರಂಜೀವಿಪರ್ || ೪೮

ಕಂ || ಚಲದಿಂದನೇಕ ಜೀವಾ
ವಳಿಯಂ ಮುಂ ಬಾೞೆವಾೞೆ ಘಾತಿಸುತುಂ ಮ
ಮ್ಮಲ ಮಱುಗಿಸದಘಬೀಜದ
ಫಲದಿಂ ಚಿರಕಾಲಮೇಕೆ ನಮೆಯದೆ ಮಾಣ್ಬರ್ || ೪೯

ನರ ತಿರ್ಯಗ್ಯೋನಿಯ ಜೀ
ವರಾಶಿಗಳ ತೀವ್ರದುಃಖಮೆನಿತೊಳವನಿತುಂ
ನೆರೆದೊಡಮೇಂ ನರಕದೊಳೊ
ರ್ವರ ನಿಮಿಷದ ದುಃಖಲವಮುಮಂ ಪೋಲ್ತಪುವೇ || ೫೦

ಚಂ || ನಲಿನಲಿದಾಡಿ ಪಾಪಮನುಪಾರ್ಜಿಸಿ ತತ್ಪರಿಪಾಕದಿಂದೆ ಕೋ
ಟಲೆಗೊಳಗಾಗಿ ಬಾಯ್ವಿಡುವ ಮೂಢಜನಂಗಳ ಕೆಯ್ತಮರ್ತ್ಥಿಯಿಂ
ಜಲಜಲಿಪಗ್ನಿಯಂ ಪಿಡಿದು ಬೆಂದ ಬೞಿಕ್ಕೆ ಕನಲ್ದೊನಲ್ದು ಮ
ಮ್ಮಲ ಮಱುಗುತ್ತೆ ಬಾಯೞಿವ ಬಾಳಕಜಾಳಕದಂದಮಲ್ಲದೇ || ೫೧

ಕಂ || ಇದು ನರಕದುಃಖದೊಂದೇ
ಕದೇಶ ಕಥನಂ ಮೃಗೇಂದ್ರ ನಿಸ್ಸೀಮಮದೆಂ
ಬುದನಱಿಯೈ ಪೆಱತೇಂ ನೀ
ನದೆಲ್ಲಮಂ ಕಂಡುಮುಂಡುಮಱಿವುತ್ತಿರ್ದೈ || ೫೨

ವ || ಎಂಬುದುಮಾ ಸಕಳರ್ದ್ಧಿಸಂಪನ್ನರಪ್ಪ ಬೋಧನಿಧಿಗಳ ಸನ್ನಿಧಿಯ ಸಾಮರ್ಥ್ಯದಿಂ ಮೊದಲೊಳೆ ಜಾತಿಸ್ಮರನಾಗಿ ಕೇಳುತ್ತುಮಿರ್ದುದಱಿನನಿತುಮನವಧಾರಿಸಿ –

ಕಂ || ಮುನಿ ಪೇೞ್ದ ನರಕಗತಿಯೆನ
ಗನುಭೂತಂ ದೃಷ್ಟಮಿವರ್ಗಿದಂ ಪೇೞ್ದ ಮಹಾ
ತ್ಮನೆ ಸರ್ವಜ್ಞಂ ಪೆಱನ ಱಿ
ವನೆ ಸೂಕ್ಷ್ಮಾಂತರಿತ ದೂರವಸ್ತು ಸ್ಥಿತಿಯಂ || ೫೩

ಆ ನರಕಬಿಲದ ಯೋನಿ
ಸ್ಥಾನದ ನಾರಕರ ವಿವಿಧದುಃಖದ ತೆಱನಂ
ನಾನಾಪರಿಣಾಮಮನಿಂ
ತೇನುಂ ಪೊಱಗಾಗದಂತು ಪೇೞ್ವರುಮೊಳರೇ || ೫೪

ವ || ಎಂದು ಪರಿಭಾವಿಸಿ ಮತ್ತಂ ತನ್ನ ಮುನ್ನಿನ ಮರೀಚಿಯಾದಿಯಾದ ಭವದೊಳ್ ತನಗೆ ಸಮನಿಸಿದ ಸನ್ಮಾರ್ಗಮಂ ದೊರೆಕೊಂಡ ನಿಧಿಯನೊಡೆದು ಕಳೆವ ಮರುಳಿನಂತೆ ಗರ್ವದಿನವಜ್ಞೆಗೆಯ್ದು ಕೆಟ್ಟ ಕೇಡುಮಂ ವಿಶ್ವನಂದಿಯಾದಂದು ಕಾರುಣ್ಯರಸದಿಂ ಕವಲ್ತು ಪಲ್ಲವಿಸಿದೊಳ್ಗುಣಂಗಳಂ ತಳಿರ್ತ ಬನಮಂ ಕಾೞ್ಗಿಚ್ಚು ಪರ್ವಿದಂತೆ ಕಿಡಿಸಿದ ಕೋಪದಿನೆಯ್ದಿದಾಪತ್ತುಮುಂ ಪ್ರಥಮವಾಸುದೇವನಾಗಿ ತನ್ನ ನೆರಿಪಿದ ಶುಭಕರ್ಮದಾರುಣ ಸಮೀರಣಂ ತೇಜೋಮಯ ನಿಜಾಯುಃಪ್ರಾಣದೀಪಾಂಕುರಮಂ ಭೋಂಕೆನೆ ಬೀಸುವುದುಂ ಸ್ವಯಂಪ್ರಭೆಯನಗಲ್ದು ಮಹಾತಮಃಪ್ರಭೆಯೊಳೆಯ್ದಿದ ತೀಬ್ರದುಃಖ ಮುಮಂ ವರ್ತಮಾನಭವದೊಳ್ ತನ್ನ ನಖಮುಖಹತಿಯಿಂ ಮಿಡುಮಿಡಂ ಮಿಡುಕೆ ಬಾಯೞಿದೊಳಱಿ ಮರಣಮನೆಯ್ದಿದ ಹರಿಣಾದಿ ವನಮೃಗಂಗಳ ಗೋಳುಂಡೆಯುಮಂ ನೆನೆನೆನೆದು ಕರಮೞಲ್ದು ಕಣ್ಣನೀರ ಪೊನಲೊಳ್ ತೇಂಕುತ್ತುಮಿರೆ ಮುನೀಂದ್ರರಿಂತೆಂದರ್ –

ಕಂ || ಪೋದುದನಿಂತೆಣಿಸಿ ಕರಂ
ಖೇದಿಸುತಿರವೇಡ ಮುಂದೆ ನಿನಗೆಂದುಂ ದುಃ
ಖೋದಯಮಂ ಮಾಣಿಪ ಸೌ
ಖ್ಯೋದಯಮಂ ಮಾೞ್ಪ ಧರ್ಮಮಂ ನೆನೆ ಮನದೊಳ್ || ೫೫