ವ || ಎಂಬುದುಮಾ ನುಡಿಗೆ ಸಂತಸಂಬಟ್ಟು –

ಕಂ || ಎನಗೀ ಮಹಾತ್ಮರಂದದಿ
ರನುಗ್ರಹಂಗೆಯ್ವ ಪರಮಗುರುಗಳ್ ಪೆಱರಾರ್
ಎನುತುಂ ನಲಿದೀಕ್ಷಿಸಿದುದು
ಮುನಿರಾಜನ ವದನವನಜಮಂ ಮೃಗರಾಜಂ || ೫೬

ವ || ಅಂತಧಿಕ ಭಕ್ತಿಯುಕ್ತಪ್ರಮೋದದಿಂ ನೋಡಿ –

ಕಂ || ಮನಮೊಸೆದು ಪೊಗೞ್ವ ದಿವ್ಯಾ
ರ್ಚನೆಗಳಿನರ್ಚಿಸುವ ಬಗೆದುದಂ ಬೆಸಗೊಳುತಿ
ರ್ಪನಿಕರ್ತೆ ಯೋಗ್ಯಮಲ್ಲದ
ತನುವಾಯ್ತೆನಗೆಂದು ಪಿರಿದುಮುಮ್ಮಳಿಸುತ್ತುಂ || ೫೭

ಇರಲೊಡಮಿಂಗಿತಮಂ ಮುನಿ
ವರರೀಕ್ಷಿಸಿ ತಿಳಿದು ಕೆಲವು ಜನ್ಮದೊಳೆ ಜಗ
ದ್ಗುರುವಾಗಲಿರ್ದ ಜೀವಂ
ದುರಘದೆ ನುಡಿಯಲ್ಕಮಱಿಯದಿರ್ದುದೆನುತ್ತುಂ || ೫೮

ಕಾರುಣ್ಯದೃಷ್ಟಿಯಿಂ ಕಂ
ಠೀರವಮಂ ನೋಡಿ ಕಡೆಯದಾಗಾಮಿ ಭವಾ
ಕಾರಮುಮನವಧಿದೃಷ್ಟಿಯಿ
ನಾರಯ್ದತಿವಿಶದಮಾಗೆ ನೋಡಿದರಾಗಳ್ || ೫೯

ವ || ಅಂತು ನೋೞ್ಪುದುಂ ವರ್ತಮಾನಸಿಂಹಪರ್ಯಾಯವಿಶೇಷಮುಂ ಪುರೂರವ ಪರ್ಯಂತಮಾದತೀತಜನ್ಮಪರ್ಯಾಯಕೋಟಿಗಳುಂ ಮಿಥ್ಯಾತ್ಮಂ ವಿಷಜಳಧಿಯ ತೆರೆದುಱುಗಲೆನಿಸಿ ಪೊಱಪೊಣ್ಮಿದಸಂಖ್ಯಾತ ಲೋಕಮಾತ್ರ ದುಃಪರಿಣಾಮಂಗಳುಂ ಕರ್ಮುಗಿಲೊಡ್ಡಿನಿಂ ಕಱಂಗಿದ ಕಾರಿರುಳ ಘೋರಾಂಧಕಾರದೊಳ್ ಓರೊರ್ಮೆ ವಸ್ತು ವೈಚಿತ್ಯ್ರದಿಂ ಪೊಳೆವ ಮಿಂಚಿನಂತೆ ಮೋಹೋದಯದಿಂ ಕಳ್ತಲಿಸುವಂತರಂಗದಾರ್ತ ರೌದ್ರ ಪರಿಣಾಮಮಾಳಾಸಹಸ್ರದೆಡೆಯೆಡೆಯೊಳೇನಾನುಂ ಕಾರಣದಿನೊಗೆದ ಕೆಲಕೆಲವು ಶುಭ ಪರಿಣಾಮಂಗಳುಂ ತೀರ್ಥಕರ ಪುಣ್ಯನಾಮಾವಧಿಯಪ್ಪನಾಗತ ಜನ್ಮಪರ್ಯಯಂಗಳುಂ ಲಬ್ಧಿವಶದಿನುದಯಿಸುವ ಜಿನಭಕ್ತಿದಯಾರಮಣಿಯೇಱುಂಜವ್ವನದ ಚೆಲ್ವುಗಳೆನಿಸುವುತ್ತರೋತ್ತರ ಪ್ರಶಸ್ತಪರಿಣಾಮಂಗಳುಂ ಘಾತಿಕ್ಷಯದಿನಪ್ಪ ಪರಮಾರ್ಹಂತ್ಯ ಲಕ್ಷ್ಮಿಯುಂ ನಿಜಾವಧಿಬೋಧಮಣಿದರ್ಪಣದೊಳೊರ್ಮೊದಲೆ ಪೊಳೆಯೆ ಪರಿಭಾವಿಸಿ –

ಕಂ || ಆವಾದ ನೀಚಯೋನಿಯ
ನಾವಾದ ದುರಂತ ದುಃಖಮಂ ಮಿಥ್ಯಾತ್ವಂ
ಜೀವಕ್ಕೆ ಮಾಡದಿರ್ದಪು
ದಾವಾವೊಳ್ಪುಗಳನಾಗಿಸದು ಸಮ್ಯಕ್ತ್ವಂ || ೬೦

ಎಂದು ಬಗೆಯುತ್ತುಮವರಿಂ
ತೆಂದರ್ ಭುವನೈಕಪಾವನಂ ಭವ್ಯಜನಾ
ನಂದಕರಮೆನಿಪ ಸಮ್ಯ
ಕ್ತ್ವಂ ದೊರೆಕೊಂಡವರೆ ಧನ್ಯರಲ್ತೆ ಮೃಗೇಂದ್ರಾ || ೬೧

ವ || ಆ ಸಮ್ಯಕ್ತ್ವಮಂ ಸಪ್ತಪ್ರಕೃತಿಗಳಾಗಲೀಯವವಱೊಳ್ ಮಿಥ್ಯಾತ್ಮ ಸಮ್ಯಗ್ಮಿಥ್ಯಾತ್ವ ಮಸ್ಯಕ್ತ್ವ ಪ್ರಕೃತಿಗಳೆಂಬ ದರ್ಶನಮೋಹನೀಯತ್ರಯದ ಮೊದಲ ಮಿಥ್ಯಾತ್ಮಕರ್ಮಶಕ್ತಿಯಂ ಪೇೞ್ವೊಡೆ ಪಂಚೇಂದ್ರಿಯವಿಷಯಸೇವಾಚತುರನಪ್ಪ ನಿಶಿತಮತಿಗಂ ಮರಿಚಮಂ ಮಧುರಮೆಂಬ ಕಳಮತಂಡುಳಮಂ ಕೃಪೆಯೆಂಬ ದುಃಖಪ್ರತೀತಿಯಂ ರಸನೇಂದ್ರಿಯದೊಳ್ ಪುಟ್ಟಿಸುವ ವಿಷಮವಿಷಧರವಿಷದಂತೆ ಸಕಳಕಳಾ ಪ್ರವೀಣರಪ್ಪ ಪಟುಮತಿ ಗಳುನ್ಮಾರ್ಗಮನುಪಾದೇಯಮೆಂಬ ಸನ್ಮಾರ್ಗಮಂ ಹೇಯಮೆಂಬ ವಿಪರೀತ ಪ್ರತೀತಿಯಂ ತತ್ವವಿಚಾರದೊಳ್ ಪುಟ್ಟಿಸುವುದು ಮತ್ತಮನಳಜ್ವಾಳೆಯುಮಂ ಜಳಪ್ರವಾಹ ಮುಮಂ ಕಂಡಂದೆ ಕೆಳರ್ವಪಸ್ಮಾರದಂತೆ ಮಹಾ ತಪೋಧನರ ತಪಸ್ಸಮೃದ್ಧಿಯುಮಂ ನಿರ್ಮಳ ಧರ್ಮತೀರ್ಥಪ್ರವರ್ತನಮುಮಂ ಕಂಡೊಡುದ್ರೇಕಿಸುವುದಂತುಮಲ್ಲದೆಯುಂ –

ಕಂ || ಸಾರತರ ಮೋಕ್ಷಮಾರ್ಗ ವಿ
ಚಾರಮನಣಮಾಗಲೀಯದತಿಕಷ್ಟತರಂ
ದಾರುಣ ದೋಷವಿಷಾವನಿ
ಜಾರಾಮಕ್ಷೇತ್ರಸನ್ನಿಭಂ ಮಿಥ್ಯಾತ್ವಂ || ೬೨

ವ || ಅಂತನಂತ ಸಂಸಾರ ದುಃಖಮೂಳಮುಂ ಮೋಕ್ಷಮಾರ್ಗದಿಂ ಪ್ರತಿಕೂಲಮುಂ ಎನಿಸಿ ಭವಭವದೊಳ್ ಹಿತಾಹಿತ ವಿವೇಕಮನಾಗಲೀಯದ ಮಿಥ್ಯಾತ್ವ ಮಹಾಮದಿರಾ ಮದಮಂ ನೆರಂಬಡೆದು –

ಕಂ || ಆವರಣದ ತೀವ್ರೋದಯ
ಮಾವಗಮಾವರಿಸೆ ನಿದ್ರೆತಿಳಿಯದ ಮರುಳಂ
ತಾವುದುಮನಱಿಯದಿರ್ಕುಂ
ಸ್ಥಾವರಯೋನಿಯೊಳನಂತ ಜೀವನಿಕಾಯಂ || ೬೩

ಮಱೆದೊಱಗಿದ ಮರುಳಿನಿಸೆ
ೞ್ಚಱುವಂತೇನಾನುಮೊಂದು ನೆವದಿಂದಲ್ಲಿಂ
ಪೊಱಮಟ್ಟು ಜೀವನುಂ ಪಲ
ತೆಱದಿಂ ತ್ರಸಮಾಗಿ ಪುಟ್ಟಿ ನಮೆಯುತ್ತಿರ್ಕುಂ || ೬೪

ವ || ಮತ್ತಂ ಬಹಿರಂತರಂಗ ನಿಮಿತ್ತಾಂತರದಿನೊರ್ಮೊರ್ಮೆ ಮನುಷ್ಯಗತಿವಡೆದೊಡಂ ಮೂಕಾಂಧಬಧಿರ ಪಿಶಾಚ ಚೇಷ್ಟೆಗಳೊಂದಾದಂತೆ –

ಕಂ || ಬೆಸಗೊಳಲಱಿಯವು ಸುಪಥದ
ದೆಸೆಗಾಣವು ಪೇೞೆ ಕೇಳಲಱಿಯವು ತಮ್ಮು
ದ್ದೆಸಕೆ ವಿಪರೀತಮಂ ಚ
ರ್ಚಿಸುವುವು ಮಿಥ್ಯಾತ್ವದುದಯದಿಂ ಜೀವಂಗಳ್ || ೬೫

ವ || ಅದಲ್ಲದೆಯುಮಾಮಳಕರಸದಿಂ ಕಷಾಯಿತಾಸ್ಯನಾದಂಗೆ ನೀರುಂ ಕ್ಷೀರ ರುಚಿಯಾಗಿ ತೋರ್ಪಂತೆ ಸಮ್ಯಗ್ಮಿಥ್ಯಾತ್ವಾಧೀನಮಾನಸಂಗೆ ಯುಕ್ತಿಯಲ್ಲದುದುಂ ಯುಕ್ತಿಯಾಗಿ ತೋರ್ಪುದದು ಕಾರಣದಿಂ –

ಕಂ || ಭ್ರಮೆಗೊಂಡು ಪಲಬರುಂ ಮೋ
ಕ್ಷಮನೆಯ್ದಿಪ ಪರಮ ತತ್ವಮಂ ತತ್ವಾಭಾ
ಸಮುಮಂ ಸಮನೆನುತಿರ್ಪರ್
ಸಮಾನಮೆಂಬಂತೆ ರತ್ನಮಂ ಕಾಚಮುಮಂ ೬೬

ತೆರೆಮಸಗಿ ಕದಡುಗುಂ ನಿ
ಸ್ತರಂಗ ನಿರ್ಮಳ ತಡಾಗಮನಿಲನಿನೆಂತಂ
ತಿರೆ ಸಮ್ಯಕ್ತ್ವಪ್ರಕೃತಿ
ಸ್ಫುರಿತದೆ ಚಳಮಳಿನಮೆನಿಸುಗುಂ ಸಮ್ಯಕ್ತ್ವಂ || ೬೭

ವ || ಮತ್ತಮತಿದಾರುಣಂಗಳಪ್ಪನಂತಾನುಬಂಧಿಕ್ರೋಧಮಾನಮಾಯಾಲೋಭಂಗಳ್ ಸಮ್ಯಗ್ದರ್ಶನ ವಿರೋಧಿಗಳಪ್ಪುವದೆಂತೆನೆ –

ಕಂ || ಮುನಿದೊಡೆ ಕೊಂಡುಂ ತಣಿಯದೆ
ಕನಲ್ವ ಭವಬ್ಧ ವೈರಮಂ ತಾಳ್ದಿದವರ್
ಜಿನಮತಮಂ ಕ್ಷಮೆಯ ತವ
ರ್ಮನೆಯಂ ಕಾರುಣ್ಯಜಲಧಿಯಂ ಮೆಚ್ಚುವರೇ || ೬೮

ಅವಿನಯದ ಮೊತ್ತಮೊದಲೆನಿ
ಸುವ ಮಿಥ್ಯಾಜ್ಞಾನ ಗರ್ವದಿಂ ಕರ್ಕಶರ
ಪ್ಪವರ್ಗೆಂತುಮಸಹ್ಯಂ ಮಾ
ರ್ದವಬೀಜಂ ವಿನಯಮೂಲಮರ್ಹನ್ಮಾಗಂ || ೬೯

ವ || ಅದಲ್ಲದೆಯುಂ ನೀಂ ಮರೀಚಿಯಾದಂದು –

ಕಂ || ನಿನಗೆಸೆವ ಕುಮತಿ ಕುಶ್ರುತ
ಜನಿತ ಮದಂ ಮರುಳ ಕೆಯ್ಯ ಮಸೆದಲಗಿನವೋಲ್
ನಿನಗಂ ಪೆಱರ್ಗಂ ಬಾಧೆಯ
ನನೇಕ ವಿಧದಿಂದಮೀಯೆ ನಮೆಯುತ್ತಿರ್ದೈ || ೭೦

ಮೃದುಶಠವಚನದ ಬಕವೇ
ಷದ ಮಱೆಯೊಳ್ ಸವಿಯಮಱೆಯ ವಿಷದುಗ್ರತೆಯಂ
ದದಿನಿರ್ಪವಗುಣದವರ್ಗಾ
ಗದು ಸತ್ಯಾಧಿಷ್ಠಿತಂ ಜಿನೇಶ್ವರಮಾರ್ಗಂ || ೭೧

ಇದು ಯೋಗ್ಯಮಯೋಗ್ಯಮಿದೆ
ನ್ನದೆ ವಿಷಯದಲಂಪು ನಿಮಿರೆ ಗತಿಹಾನಿಗಮ
ೞ್ಕದೆ ನಡೆವ ಕಾತರಂಗಾ
ಗದು ಸಕಳ ತ್ಯಾಗಸಾಧಕಂ ಜೈನಮತಂ || ೭೨

ವ || ಇಂತು ಮೋಕ್ಷಮಾರ್ಗಪ್ರತಿಕೂಲಂಗಳಪ್ಪ –

ಕಂ || ಇವು ಸಪ್ತಪ್ರಕೃತಿಗಳಿಂ
ತಿವಱುಪಶಮದಿಂ ಕ್ಷಯೋಪಶಮದಿಂ ಕ್ಷಯದಿಂ
ಪವಣಿಲ್ಲದ ಭವಸಮಿತಿಗೆ
ಪವಣಂ ಮಾಡುತ್ತುಮುದಯಿಪುದು ಸಮ್ಯಕ್ತ್ವಂ || ೭೩

ಎಂದು ಬೆಸಸುವುದುಮತ್ಯಾ
ನಂದದಿನಾಲಿಸಿ ವಿಚಾರಿಸುತ್ತಿರೆಯಿರೆ ಮು
ನ್ನೆಂದುಂ ಭವಭವದೊಳ್ ಬೞಿ
ಸಂದ ಕುಮಾರ್ಗಾನುಬಂಧಮಂ ತೊಱೆಯುತ್ತುಂ || ೭೪

ಚಂ || ಇರದಡರುತ್ತುಮಾರ್ಹತಸುರದ್ರುಮಮಂ ಖಳಮೋಹವಾಯುವಿಂ
ಮುರಿವ ಮರಳ್ವ ಜೋಲ್ವಿೞಿವ ಸಿಂಹಮನೋಲತಿಕಾಗ್ರಮಂ ನಿರಂ
ತರ ಶುಭಧಾಮಮಪ್ಪವಧಿಲೋಚನದಿಂ ನಡೆನೋಡಿ ತನ್ಮುನೀ
ಶ್ವರರನುಕಂಪೆಯಿಂ ನೆಗಪಿ ತಮ್ಮ ವಚಸ್ಸುಕುಮಾರ ಹಸ್ತದಿಂ || ೭೫

ಕಂ || ನಯಸೂತ್ರದಿನಲ್ಲಲ್ಲಿಗೆ
ನಿಯಮಿಸುತುಂ ನವಪದಾರ್ಥಿ ಕೋಮಳಶಾಖಾ
ಚಯದೊಳ್ ಪರ್ವಿಸುತುಂ ಮು
ಕ್ತಿಯ ಪಥಮರಿದಾರ್ಗಮಱಿಯಲೆಂದಿಂತೆಂದರ್ || ೭೬

ಚಂ || ಬಯಸಿ ನಿದಾನಮಂ ಸುಕೃತಮಿಲ್ಲದವರ್ ಭರದಿಂ ತದಗ್ರಭೂ
ಮಿಯನಗುೞುತ್ತುಮಿರ್ದು ನಿಧಿಗಾಣ್ಬೆಡೆಯೊಳ್ ಮರುಳಾಗಿ ಪೋಪ ಮಾ
ೞ್ಕೆಯಿನಪವರ್ಗಮಾರ್ಗದೊಲವಿಂ ಪಲರುಂ ಪಿರಿದೋದಿ ತತ್ವನಿ
ರ್ಣಯಜನಕೋಕ್ತಿಯಲ್ಲಿ ಜಡರಪ್ಪರಿದೇನಘಶಕ್ತಿ ಚಿತ್ರಮೋ || ೭೭

ವ || ಅದಲ್ಲದೆಯುಂ –

ಕಂ || ಜಿನದೀಕ್ಷೆಗೊಳ್ಗುಮಹಮಿಂ
ದ್ರನಾಗಿ ಪುಟ್ಟುಗುಮನಂತಭವದೊಳ್ ಜೀವಂ
ಮನದೊಳ್ ಸಮ್ಯಗ್ದರ್ಶನ
ಮನೊರ್ಮೆಯುಂ ಪೊರ್ದದಿನ್ನವಘಟಿತಮೊಳವೇ || ೭೮

ಅದು ದೂರಭವ್ಯನೊಳ್ ಕೂ
ಡದದೆಂತುಮಭವ್ಯ ಜೀವನೊಳ್ ಘಟಿಯಿಸದಂ
ತದು ದುರ್ಲಭಮದು ಭವಭಯ
ಭಿದುರಮದಾಸನ್ನಭವ್ಯನೊಳ್ ಸಮನಿಸಗುಗುಂ ||

ವ || ಅದೆಂತೆಂದೊಡೆನಿತು ಬೆಳಗಾದೊಡಂ ಕಾಣದ ಜಾತ್ಯಂಧದನಂತೆ ಪರಮಾಗಮಶ್ರವಣ ಮೆನಿತಾದೊಡಮಭವ್ಯಜೀವಂ ಸನ್ಮಾರ್ಗಮಂ ತಿಳಿಯಲಱಿಯಂ ಕಣ್ಬೇನೆ ಮಾಣ್ದಂದು ಕಾಣ್ಬಕ್ಷಿ ರೋಗಿಯಂತೆ ದೂರಭವ್ಯಂ ಕರ್ಮೋಪಶಮಮಾದಾಗಳಱಿಗುಂ ಬೆಳಗುವಡೆಯ ಲೊಡಂ ಕಾಣ್ಬ ನಿರ್ಮಳದೃಷ್ಟಿಯಂತೆ ಧರ್ಮೋಪದೇಶಮಾಗಲೊಡಮಾಸನ್ನಭವ್ಯಂ ತಿಳಿಗುಂ ಅಪ್ತಾಗಮ ತಪೋಲಕ್ಷಣಮಂ ತಿಳಿದು ನಂಬುವ ಪರಿಣಾಮಂ ಸಮ್ಯಕ್ತ್ವ ಮಕ್ಕುಮದೆಂತೆನೆ –

ಕಂ || ಸಕಳಾರ್ಥವೇದಿ ಕಾಮಾಂ
ತನಷಯಸೌಖ್ಯರಾಶಿ ಮೋಕ್ಷಪಥದ್ಯೋ
ತಕ ದಿವ್ಯವಾಕ್ಯನಿಂದ್ರ
ಪ್ರಕಾರಾರ್ಚಿತ ಪಾದಪೀಠನಾಪ್ತನೆನಿಕ್ಕುಂ || ೮೦

ಪರಿಕಿಸುವೊಡೆ ಪೂರ್ವಾಪರ
ವಿರೋಧರಹಿತಂ ದಯಾಕರಂ ಜಾತಿಜರಾ
ಮರಣ ವಿನಾಶಕರಂ ವೀ
ತರಾಗ ಸರ್ವಜ್ಞವಚನಮಾಗಮಮೆನಿಕುಂ || ೮೧

ಪರಪೀಡೆಯ ನುಡಿಗಂ ಕೊ
ಕ್ಕರಿಪ ಕಷಾಯಾಸ್ತ್ರಮುರ್ಚದಂತಿರೆ ಮನಮಂ
ಪರಿರಿಕ್ಷಿಸುತಿರ್ಪ ದಯಾ
ಪರತೆಯೆ ತಪಮದೆ ಚರಿತ್ರಮದೆ ಸದ್ಧರ್ಮಂ || ೮೨

ಆರಾಧ್ಯನುಮಾಗಮಮುಂ
ಚಾರಿತ್ರಮುಮೆಂತು ನೋೞ್ಪೊಡಂ ಪರಮದಯಾ
ಧಾರಂ ಗಡ ಮಾಧ್ಯಸ್ಥ್ಯದಿ
ನಾರಯ್ವೊಡೆ ಮೋಕ್ಷಮಾರ್ಗದಿಂ ಪೆರತುಂಟೇ || ೮೩

ಜಳರೇಖಾಶದೃಶಂ ಸಂ
ಜ್ವಳನ ಕ್ರೋಧಾಂಶಮೊರ್ಮೆ ತೋಱಿದೊಡಂ ನಿ
ರ್ಮಳದಯಗೆ ಭಂಗಮೆನುತುಂ
ತಿಳಿಪುರ ಜಿನಮತಮೆ ಲೋಕಪಾವನಮಲ್ತೇ || ೮೪

ಪರಮಗುರುವಚನ ದೀಪ್ತಿ
ಸ್ಫರಿತದ ಬಲದಿಂ ಸುಯುಕ್ತಿಲೋಚನದಿಂ ನೋ
ೞ್ಪರ ಮನದೊಳಾದ ವಸ್ತು
ಸ್ವರೂಪ ಯಾಥಾತ್ಮ್ಯನಿಶ್ವಯಂ ಸಮ್ಯಕ್ತ್ವಂ || ೮೫

ಸ್ಥಿರತೆಯೊಳಮಱಿವಿನೊಳಮೊ
ರ್ವರನೊರ್ವರ್ ಮಿಗುವ ಪುರುಷರುಳ್ಳುದಱಿಂದೆ
ಲ್ಲರುಮಂ ಮಿಗುವನುಮೊಳನಾ
ಪರಮಾತ್ಮನೆ ದೈವಮೆಂಬ ಬಗೆ ಸಮ್ಯಕ್ತ್ವಂ || ೮೬

ಸಕಳ ವಿಮೋಹ ಕ್ಷಯದಿಂದ
ಸಕಳ ಜಗದ್ವಂದ್ಯ ವೀತರಾಗತೆ ಜಿನರೊಳ್
ಸಕಳಾವರಣ ಕ್ಷಯದಿಂದ
ಸಕಳಜ್ಞತೆಯೆಸೆಗುಮೆಂಬ ಬಗೆ ಸಮ್ತಕ್ತ್ವಂ || ೮೭

ಮನದೊಳ್ ವಿಚಾರಮುಳ್ಳವ
ರ್ಗನಂತ ಸುಖಮಯಮನಂತಬೋಧಮಯಂ ನೆ
ಟ್ಟನೆ ದೋಷರಹಿತನೆನಿಸಿದ
ಜಿನೇಶ್ವರನೆ ದೈವಮೆಂಬ ಬಗೆ ಸಮ್ಯಕ್ತ್ವಂ || ೮೮

ಎನಿತುಂಟು ಮೋಹಪಾಶಮ
ದನಿತುಂ ಬಿಡೆ ಮೋಕ್ಷಮದಱಿನಳಿಪೆಂಬುದನೆ
ಳ್ಳನಿತುಮನೊಲ್ಲದು ಮುಕ್ತಿಗೆ
ಜಿನಮಾರ್ಗಮೆ ಮಾರ್ಗಮೆಂಬ ಬಗೆ ಸಮ್ಯಕ್ತ್ವಂ || ೮೯

ಇದು ಪಾಪಾಸ್ರವಕಾರಣ
ಮಿದು ಪುಣ್ಯಾಸ್ರವನಿಮಿತ್ತಮಿಂತಿದು ಮೋಕ್ಷ
ಪ್ರದಮೆಂದು ಜೀವಪರಿಣಾ
ಮದ ತೆಱನಂ ದಿಟದಿನಱಿವ ಬಗೆ ಸಮ್ಯಕ್ತ್ವಂ || ೯೦

ಮನದಪಪಳಿಕೆಗೆ ಕಂಟಕ
ಮೆನಿಪ ಬಹಿರ್ವಿಷಯ ವಿಷಮದೇವುದು ಚಿತ್ಸಂ
ಜನಿತ ಸ್ವಾಸ್ಥ್ಯಸುಧಾರಸ
ಮನುಪಮಮೆಂದದನೆ ಮೆಚ್ಚುವುದು ಸಮ್ಯಕ್ತ್ವಂ || ೯೧

ಮಾನಧನಮೆನಿಪ ಸಮ್ಮ
ಜ್ಞಾನಿಗೆ ತಕ್ಕುದು ನಿಜೋಪಶುಮಜನಿತಸ್ವಾ
ಧೀನಸುಖಂ ಪರವಿಷಯಾ
ಧೀನಸುಖಂ ಕಷ್ಟಮೆಂಬ ಬಗೆ ಸಮ್ಯಕ್ತ್ವಂ || ೯೨

ಇದು ಮೋಕ್ಷಮಾರ್ಗಮಿದು ಮೋ
ಕ್ಷದ ಲಕ್ಷಣಮಿದುವೆ ಮೋಕ್ಷಫಲಮೆಂಬುದನು
ಳ್ಳುದನುಳ್ಳ ಮಾೞ್ಕೆಯಿಂ ತ
ಪ್ಪದೆ ಮನದೊಳ್ ತಿಳಿದು ನಂಬುವುದು ಸಮ್ಯಕ್ತ್ವಂ || ೯೩

ವರಬೋಧಚರಿತ್ರಂಗಳ
ನೆರವಂ ಪಾರದೆಯುಮೇಕಚತ್ವಾರಿಂಶ
ದ್ದುರಿತಂಗಳ ಬಂಧಮನಪ
ಹರಿಪುದಚಿಂತ್ಯಪ್ರಭಾವನಿಧಿ ಸಮ್ಯಕ್ತ್ವಂ || ೯೪

ಪರಮಜಿನೇಶ್ವರರಂ ಸಿ
ದ್ಧರನಾಚಾರ್ಯಾದಿ ದಿವ್ಯಮುನಿಗಳನಱಿದಾ
ದರದಿನಡಿಗಡಿಗೆ ತತ್ವ
ಸ್ವರೂಪಮಂ ನೆನೆದು ನಲಿವ ಬಗೆ ಸಮ್ಯಕ್ತ್ವಂ || ೯೫

ಜಿನಬಿಂಬಾಕೃತಿಯಂ ಲೋ
ಚನದಿಂ ಕಾಣ್ಬಂತೆ ತಿಳಿದು ಸಿದ್ಧಾಕೃತಿಯಂ
ನೆನೆಯಲೊಡಂ ಪ್ರವ್ಯಕ್ತಮಿ
ದೆನೆ ಮನದಿಂ ಕಾಣ್ಬಕಾಣ್ಕೆಯದು ಸಮ್ಯಕ್ತ್ವಂ || ೯೬

ಅನಿಮಿಷವಲ್ಲಭ ಸಿಂಹಾ
ಸನ ಕಂಪನಿಮಿತ್ತ ತೀರ್ಥಕರ ಪುಣ್ಯ ನಿಬಂ
ಧನಮೆನಿಸುವ ಷೋಡಶಭಾ
ವನೆಯೊಳ್ ತಾನಗ್ರಗಣ್ಯಮಿದು ಸಮ್ಯಕ್ತ್ವಂ || ೯೭

ಜಿತಮೂಢತ್ರಯಮಪಸಾ
ರಿತ ಷಡನಾಯತನಮಪಗತಾಷ್ಟಮದಂ ವ
ರ್ಜಿತ ಶಂಕಾದ್ಯಷ್ಟಮಳಂ
ಪ್ರತೀತ ನವಸಪ್ತತತ್ವಮಿದು ಸಮ್ಯಕ್ತ್ವಂ || ೯೮

ಇನಿತುಂ ಮೃಗೇಂದ್ರ ಕೇಳ್ ಪಾ
ವನ ಸಮ್ಯಕ್ತ್ವದೊಳೆ ವರ್ತಿಕುಂ ಶ್ರದ್ಧಾನಂ
ಜಿನಭಕ್ತಿತತ್ವರುಚಿ ದ
ರ್ಶನಮಾತ್ಮ ಜ್ಞಾನಮೆಂಬ ಪರ್ಯಾಯಂಗಳ್ || ೯೯

ವ || ಅದೆಂತೆನೆ –

ಚಂ || ಜಿನಪತಿ ಕಾಳಿಕಾರಹಿತ ಕಾಂಚನದಂತೆ ನಿರಸ್ತಕರ್ಮಬಂ
ಧನನೆಸೆದಿರ್ದನಾಂ ದುರಿತಬಂಧನೆ ಕಾಳಿಕೆ ಪರ್ವಿದುದೊಂದು ಕಾಂ
ಚನದಮೊಲಿರ್ದೆನೀ ದುರಿತಮೀ ತೆಱದಿಂದಮಗಲ್ವುದುಂ ಜಿನೇಂ
ದ್ರನ ದೊರೆಯಪ್ಪೆನೆಂದು ತಿಳಿದಾತನೆ ದರ್ಶನಶುದ್ಧನುತ್ತಮಂ || ೧೦೦

ಕಂ || ನೀನುಮಿದಂ ತಿಳಿ ನಾನಾ
ಯೋನಿಯ ದುಃಖಾಗ್ನಿತಾಪಮಂ ನೀಗುವೊಡಂ
ಜ್ಞಾನಮಯ ಶಾಶ್ವತ ಸ್ವಾ
ಧೀನ ಸುಖಾಮೃತದ ಕಡಲೊಳೋಲಾಡುವೊಡಂ || ೧೦೧

ವ || ಎಂದು ಮತ್ತಂ ರತ್ನತ್ರಯಾತ್ಮಕಮಪ್ಪ ಮೋಕ್ಷಮಾರ್ಗಮುಮಂ ಸಕಳ ಕರ್ಮಬಂಧ ಚ್ಛೇದರೂಪಮಪ್ಪ ಮೋಕ್ಷಮುಮನತೀಂದ್ರಿಯ ಜ್ಞಾನಾನಂದಮಯಮಪ್ಪ ಮೋಕ್ಷ ಫಲಮುಮನನೇಕ ನಯಪ್ರಮಾಣಂಗಳಿಂ ತಿಳಿಪುವಾಗಳಾ ಮುನಿಪತಿಯ ಪರಮಾನಂದಾ ಮೃತಸ್ಯಂದಿಯಪ್ಪ ವಾಗ್ವಿಳಾಸಕಾಮಧೇನು ತನ್ನ ಬೞಿಸಲ್ವ ಮೃಗಪತಿಯ ಮನಮೋ ರೊರ್ಮೆ ವಿಶೋಧಿವಶದಿಂ ನಲಿನಲಿದು ಧಿಂಕಿಟ್ಟು ತಾಯ ಮುಂದೆ ಪರಿವೆಳಗುಱುವಿನಂತೆ ಕಿಱಿದೆಡೆಯಂ ತತ್ವವಿಚಾರಮಾರ್ಗದೊಳ್ ಮುಂದೆ ಮುಂದೆ ಪರಿದು ನಿಂದಾರಯ್ವುತ್ತು ಮಿರೆ ತಾನುಮದನೆಯ್ದಿ ಪೆಱಗಿಕ್ಕಿ ಮೃದುಪದನ್ಯಾಸದಿಂ ಮುಂದೆ ಮುಂದೆ ನಡೆವಾಗಳ್ –

ಕಂ || ಮುನಿವಚನಾಮೃತ ಸೇವೆಯ
ಮುನಿತನುಸೌರಭ ಪವಿತ್ರಪವಮಾನಸ್ಪ
ರ್ಶನದ ಮುನೀಂದ್ರಮುಖಾಳೋ
ಕನದೊಳ್ಪಿಂದಾಯ್ತಪೂರ್ವ ಹರ್ಷೋತ್ಕರ್ಷಂ || ೧೦೨

ವ || ಅಂತಳವಿಗೞಿದ ಹರ್ಷರಸವರ್ಷದಿಂ ಪ್ರತಿಕ್ಷಣಮುದೀರಣಾರೂಪದಿನಶುಭಕರ್ಮ ಶಕ್ತಿಗಳನಂತಗುಣಹೀನಂಗಳಾಗೆ ಸಮನಿಸಿದ ನಿರ್ಮಳಕ್ಷಯೋಪಶಮಲಬ್ಧಿಯೊಳಮಗಣ್ಯ ಪುಣ್ಯಾನುಬಂಧಿಯುಂ ಗುಣಾನುರಾಗದಾಗರಮಾದ ವಿಶೋಧಿಲಬ್ಧಿಯೊಳಂ ಮನಸ್ತಮ ಮನಲೆವ ಸೊಡರ್ಗುಡಿಯಿದೆನಿಸಿದುಪದೇಶಲಬ್ಧಿಯೊಳಂ ಪ್ರಬಳ ಕರ್ಮಸ್ಥಿತಿಯನಂತಃ ಕೋಟೀಕೋಟೀಸಾಗರೋಪಮಪ್ರಮಿತಮುಂ ತೀವ್ರಾನುಭಾಗಮಂತಲತೆಯುಂ ದಾರು ವಿನನಂತೈಕಭಾಗಮುಮಾಗೆ ನಿಯಮಿಸುವಪ್ರತಿಮ ಪ್ರಾಯೋಗ್ಯತಾಲಬ್ಧಿಯೊಳಂ ನೆಱೆದು ಮತ್ತಮತಿ ಸೂಕ್ಷ್ಮತರಮಪ್ಪ –

ಚಂ || ಚರಮಪದಾರ್ಥಮಂ ಬೆಸಗೊಳುತ್ತಿರೆ ನೋಡುವ ಚೇಷ್ಟೆಯಂ ಮುನೀ
ಶ್ವರರದನಂತೆ ತಾಮಱಿಯುತುಂ ದಯೆಯಿಂ ಬೆಸಸುತ್ತುಮಿರ್ದರಾ
ಪರಮಮುನೀಂದ್ರರಿರ್ಪ ಪದದೊಳ್ ತಲೆದೋಱಿದುದೊಲ್ದು ಕೇಳ್ವ ಕೇ
ಸರಿಯುಪಭೋಗದೊಳ್ ಕರಣಲಬ್ಧಿ ಮನಸ್ತಮಮಂ ತೆರಳ್ಚುತುಂ || ೧೦೩

ಕಂ || ಅದು ದರ್ಶನರತ್ನಪ್ರದ
ಮದು ಸುಚರಿತಜನ್ಮಭವನಮಂತದು ಭವ್ಯ
ತ್ವದ ಕಣ್ದೆಱವಿ ವಿವೇಕ
ಕ್ಕದು ಫಲಮದು ಬುಧಜನಪ್ರಣೂತಂ ಖ್ಯಾತಂ || ೧೦೪

ವ || ಅಂತಾಲಬ್ಧಿ ಸಮನಿಸುವ ಸಮಯದೊಳ್ –

ಚಂ || ತನಗಪವರ್ಗಮಾರ್ಗದ ಮುಮುಕ್ಷುನಿಕಾಯದ ಮುಕ್ತರಂದಮಂ
ಮುನಿಪತಿ ಪೇೞೆ ವಾಸ್ತವಮಿದಾಗದೆ ಮಾಣದೆನುತ್ತಮೊಯ್ಯನೊ
ಯ್ಯನೆ ತಿಳಿವಲ್ಲಿ ಲಬ್ಧಿವಶದಿಂದಿದಿರ್ವಂದಿರೆ ಯುಕ್ತಿಗಳ್ ಜಲ
ಕ್ಕನೆ ತಿಳಿಯುತ್ತುಮೆಯ್ದಿದುದನೂನ ವಿಶೋಧಿಯನಾ ಮೃಗಾಧಿಪಂ || ೧೦೫

ಕಂ || ಒದವಿದ ವಿಶೋಧಿಯಿಂದಾ
ದುದು ಮೊದಲೊಳಧಃಪ್ರವೃತ್ತ ಕರಣಂ ಬೞಿಕಾ
ದುದಪೂರ್ವಕರಣಮಮರ್ದೆಸೆ
ದುದು ನೆಗೞ್ದ ನಿವೃತ್ತಿಕರಣಮಲ್ಲಿಂ ಬೞಿಕಂ || ೧೦೬

ವ || ಅಂತುತ್ತರೋತ್ತರ ವಿಶುದ್ಧ್ವತಿಶಯಾಭಿರಾಮಂಗಳಾದ ಕರಣತ್ರಯಂಗಳೊಳ್ ಅಧಃಪ್ರವೃತ್ತ ಕರಣದಿಂ ಸ್ಥಿತಿಬಂಧಾಪಸರಣಸಹಸ್ರಮುಂ ಅಪೂರ್ವಕರಣದಿಂ ಅನೇಕ ಸಹಸ್ರ ಸ್ಥಿತಿ ಬಂಧಾಪಸರಣಸ್ಥಿತ್ಯನುಭಾಗಕಾಂಡಕಘಾತನಸಂಘಾತಮುಂ ಗುಣಸಂಕ್ರಮಣ ಗುಣಶ್ರೇಣಿಗಳುಮಾಗಿ ತದನಂತರಂ ಮಹಾಮೋಹದರ್ಪ ನಿವಾರಣಮುಂ ಗುಣಶ್ರೇಷ್ಠಾದಿ ಕಾರಣಮುಮಪ್ಪ ನಿವೃತ್ತಿಕರಣ ಸಾಮರ್ಥ್ಯಮುಮೆಂಬ ವಜ್ರದಂಡಘಾತದಿಂ ಖಂಡಿವೋದ ಸಂಸರದುರ್ಗವಿವರಮೆನಿಸಿ ಮಿಥ್ಯಾತ್ವೋದಯಮಂತರ್ಮುಹೂರ್ತ ವ್ಯವಹಿತಮಾಗೆ ಸಮ್ಯಗ್‌ಜ್ಞಾನಲಕ್ಷ್ಮೀಸಂಗಮೋಚಿತ ಶುಭಮುಹೂರ್ತಮೆನಿಸಿದಂತರಕಾಲದಂತರ್ಮುಹೂರ್ತದ ಮೊದಲ ಸಮಯದೊಳ್ –

ಕಂ || ಉದಯಿಸಿದುದು ಮೃಗರಾಜನ
ಹೃದಯದೊಳಘತಿಮಿರತರಣಿ ಸಕಳಾಭಿಮತ
ಪ್ರದಚಿಂತಾಮಣಿ ತವಿಲಿ
ಲ್ಲದ ಸಂವೇದಾದಿ ಗುಣದಕಣಿ ಸಮ್ಯಕ್ತ್ವಂ || ೧೦೭

ವ || ಆ ಸಮಯದೊಳ್ –

ಚಂ || ಮುನಿವದನಾಬ್ಜಮಂ ಪದೆದು ನೋೞ್ಪ ತದುಕ್ತಿಯನೊಲ್ದು ಕೇಳ್ವಲಂ
ಪಿನ ಜವಮಾವಗಂ ಮಸುಳ್ವಿನಂ ಪರಮಾತ್ಮಪದಂ ಸುಯುಕ್ತಿ ಲೋ
ಚನಪಥದೊಳ್ ಕರಂ ವಿದಿತಮಾಗಿರೆ ಸಂತಸಮೊರ್ಮೆಗೊರ್ಮೆ ತ
ಣ್ಣನೆ ತಣಿವನ್ನಮುಚ್ಚರಿಸುತಿರ್ದುದು ಚಿತ್ತದೊಳಾ ಮೃಗೇಂದ್ರನಾ || ೧೦೮

ಪರಮದಯಾಕರಂ ನೆಗೞ್ದರಿಂಜಯಯೋಗಿ ಜನಾಗ್ರಗಣ್ಯನಾ
ದರದಿನನುಗ್ರಹಂಗೆಯೆ ಸಮಸ್ತಯಥಾಸ್ಥಿತವಸ್ತುತತ್ವಮಂ
ಸುರುಚಿರ ದೃಷ್ಟಿಪುಷ್ಟಿವಡೆದಷ್ಟಗುಣಂಗಳನಂದೆ ಪೆತ್ತವೋಲ್
ಹರಿ ಕರಮೊಪ್ಪಿದತ್ತು ತಳೆದುತ್ಸವಮಂ ವಸುಧೈಕಬಾಂಧವಂ || ೧೦೯

ಗದ್ಯ

ಇದು ನಿಖಿಳಭುವನಜನವಿನೂತ ಸ್ಫೀತಮಹಿಮಾವದಾತ ವೀತರಾಗ ಸರ್ವಜ್ಞತಾ ಸಮೇತ
ಖ್ಯಾತಜಿನಸಮಯ ಕಮಳಿನೀ ಕಳಹಂಸಾಯಮಾನ ಮಾನಿತ
ಶ್ರೀನಂದಿಯೋಗೀಂದ್ರ ಪ್ರಸಾದ ವಾಚಾಮಹಿತ
ಕೇಶವರಾಜಾನಂದ ನಂದನ ವಾಣೀವಲ್ಲಭ ವಿಸ್ತಾರಿತಮಪ್ಪ
ವಸುಧೈಕಬಾಂಧವ ಶ್ರೀವರ್ಧಮಾನ ಪುರಾಣದೊಳ್
ಸಿಂಹಸಮ್ಯಕ್ತ್ವ ಮಹಾತ್ಮ್ಯವರ್ಣನಂ
ಏಕಾದಶಾಶ್ವಾಸಂ.