ಕಂ || ಶ್ರೀಮಚ್ಚಾರಣ ಚಾರು ವ
ಚೋಮೃತದಿಂ ಮೞ್ಗೆ ಬಳೆದ ಮಿಥ್ಯಾತ್ವದವಂ
ಕ್ಷೇಮಂಬಡೆದೆಸೆದುದು ನೆಗ
ೞ್ದಾ ಮೃಗಪತಿ ಪಂಚಪರಮಗುರುಪದವಿನತಂ || ೧

ವ || ಅಂತು ಪರಮಾತ್ಮಪದಮನನಂತಜ್ಞಾನಾದಿ ಗುಣಗಣಭ್ರಾಜಿತಮಂ ಭ್ರಾಂತಿಸದೆ ಲಬ್ಧಿವಶದಿಂ ತಿಳಿದಡಿಗಡಿಗೆ ರಾಗಿಸುತ್ತಿರ್ಪಾಗಳ್ –

ಚಂ || ಬಿಗಿಪು ಸಡಿಲ್ವ ಭೋಂಕೆನೆ ಕೞಳ್ವ ಪುರಾತನ ಪಾಪಬಂಧದೊ
ಡ್ಡುಗಳುಮನೆಯ್ದೆ ತಳ್ತಿಡಿದು ಪತ್ತುವ ನೂತನಪುಣ್ಯರೇಣುರಾ
ಶಿಗಳುಮನಾ ಮೃಗಾಧಿಪನ ದರ್ಶನಶುದ್ಧಿಯಮಂ ಮುನೀಂದ್ರನಾ
ವಗಮನುರಾಗದಿಂದವಧಿದೃಷ್ಟಿಯಿನೀಕ್ಷಿಸುತಿರ್ದರಿರ್ಪಿನಂ || ೨

ಕಂ || ಚಿರಕಾಲಂ ಬಂಧನದೊಳ್
ಮರುಳಾಗಿರ್ದನ ಮರುಳ್ತನಂ ತಿಳಿದವೊಲೋ
ಸರಿಸಿರೆ ಮಿಥ್ಯಾತ್ವಂ ಕೇ
ಸರಿ ಬಂಧನ ಬಿಡುವುಪಾಯಮಂ ಚಿಂತಿಸುತುಂ || ೩

ವ || ಮುನೀಂದ್ರವದನಾರವಿಂದಮಂ ನೋಡಿ –

ಚಂ || ಕನಸಿನೊಳಂ ಮದೇಭಚಯಮಂ ಸಿಡಿಲಂತಿರೆ ಪೊಯ್ದು ಕೊಲ್ವ ಕಾ
ಯ್ಪಿನ ಗಜಕುಂಭರಕ್ತ ಪಿಶಿತೋತ್ಕರದಿಂ ತಣಿದುಂ ಮೃಗಂಗಳಂ
ಬಿನದದೆ ಕೊಲ್ವರೌದ್ರತೆಯ ಕಾರಣದಿಂದೆನಗಾದ ಪಾಪಬಂ
ಧನದ ತೊಡರ್ಪಿದೆಂತು ಪಱಿಗುಂ ದಯೆಯಿಂ ಬೆಸಸಿಂ ಮುನೀಶ್ವರಾ || ೪

ಕಂ || ಎಂದಿಂತು ವಿಳೋಚನಮುಖ
ದಿಂದಂ ಬಿನ್ನವಿಸಿ ತತ್ಪದೋಜ್ವಳ ನಖರು
ಕ್ಸಂದೋಹ ವಜ್ರಪಂಜರ
ಮಂ ದುರಿತಕ್ಕಂಜಿ ಪುಗುವ ತೆಱದಿಂದಾಗಳ್ || ೫

ವ || ಸರ್ವಾಂಗಪ್ರಣತಮಾಗಿರ್ಪಿನಂ –

ಚಂ || ವನಚರನೆತ್ತ ಮದ್ಯಮಧುಮಾಂಸನಿವೃತ್ತಿಯದೆತ್ತ ತೀರ್ಥನಾ
ಥನ ಸುತನಪ್ಪ ಚಕ್ರಿಯತನೂಭವನೆತ್ತ ಕುಮಾರ್ಗಮೆತ್ತ ಸ
ನ್ಮುನಿಪತಿಯೆತ್ತ ಕೋಪದೊದವೆತ್ತತಿರೌದ್ರಮನಂ ಮೃಗಾರಿಯೆ
ತ್ತಿನಿತುಪಶಾಂತಿಯೆತ್ತ ತನುಭೃತ್ಪರಿಣಾಮಮಿದೇಂ ವಿಚಿತ್ರಮೋ || ೬

ಕಂ || ಮುನಿವೃಷಭರಱಿದು ಪಂಚಾ
ಸ್ಯನಳವುಮಂ ಕೆಲವು ದೆವಸದಾಯುಷ್ಯಮುಮಂ
ಮನದ ವಿರಕ್ತಿಯುಮಂ ಸಹ
ಳನಿವೃತ್ತಿಗೆ ಪದನಿದಪ್ಪುದೆಂದಿಂತೆಂದರ್ || ೭

ಎಲೆ ಭವ್ಯಸಿಂಹ ನಿನಗಿಭ
ಕುಲಂಗಳತಿಭಯದಿ ನೋಡುತಿರ್ಪುವವಂ ನೋ
ಡಲೆವೇಡ ನಿನ್ನನಾಗಳ್
ಮಲೆವಿಂದ್ರಿಯಗಜದ ದರ್ಪಮಂ ಕಿಡಿಸೀಗಳ್ || ೮

ಮನಮಂ ಜಿನೇಂದ್ರಪದದೊಳ್
ತನುವಂ ಪ್ರಾಯೋಪಗಮನದೊಳ್ ನಯಮಿಸಿ ಮು
ನ್ನಿನ ನಿನ್ನ ರೌದ್ರಭಾವಮ
ನನಾಕುಳಂ ತೊಱೆಯೆ ಪಾಪಬಂಧಂ ಕಿಡುಗುಂ || ೯

ಪರಮಜಿನಸ್ಮರಣಮೆ ಭವ
ಹರಣಮದೀ ಘೋರತಪದೊಳೊಡಗೂಡಲೊಡಂ
ದುರಿತೇಂಧನಮಂ ಚೆಚ್ಚರ
ಮುರಿಪುಗುಮುಗ್ರಾಗ್ನಿ ಗಾಳಿಯೊಳಗೂಡಿದವೋಲ್ || ೧೦

ವ || ಅದಱಿನೀಗಳ್ ಜಿನಸ್ಮರಣಪೂರ್ವಕಂ ಪ್ರಾಯೋಪಗಮನಮೆಂಬ ನೋಂಪಿಯೆನಗೆ ಕರಣೀಯಮದಂ ನೋಂಪೊಡೆ ದುಸ್ಸಹಪರೀಷಹಂಗಳ್ ಬಿಡದಡಸಿ ಪೀಡಿಸುತ್ತಿರೆಯುಂ ನಿಜಾಯುರವಸಾನಂಬರಂ ಸ್ವಂಪರವೈಯ್ಯಾಪೃತ್ಯ ನಿರಪೇಕ್ಷೆಯಿಂ ನಿಷ್ಕಂಪಿತಶರೀರನಾಗಿ ಧೈರ್ಯಂಗಿಡದಿರಲ್ವೇೞ್ಕುಮೆಂಬುದುಂ –

ಕಂ || ಇಲ್ಲಿಂದರಿದುಳ್ಳೊಡಮಾ
ನೊಲ್ಲೆನೆ ಲೀಲೆಯೊಳೆ ನೋಂಪೆನೀ ಪಾಪಮದಿಂ
ತಲ್ಲದೆ ಪೋಕುಮೆ ದರವುರ
ಮಲ್ಲದ ರುಜೆ ತುಚ್ಛವೈದ್ಯರಿಂ ತೀರ್ದಪುದೇ || ೧೧

ವ || ಮಹಾಪ್ರಸಾದಮೆಂದು ಕೆಯ್ಕೊಳ್ವುದುಂ ಅಪ್ರತ್ಯಾಖ್ಯಾನವಾಸನಾವಶದಿನಪ್ರಶಸ್ತ ವಿಷಯಕ್ಕೆ ಪರಿವ ಮನಮಂ ನಿಯಮಿಸುವುಪಾಯಮನಿಂತೆಂದು ಬೆಸಸಿದರ್ –

ಕಂ || ಜಿನಸಭೆಯ ಜಿನವಿಭೂತಿಯ
ಜಿನದೇಹಪ್ರಭೆಯ ಜಿನಗುಣಾವಳಿಯೊಳ್ಪಂ
ನೆನೆ ಮದದೊಳ್ ನೆನೆಯದೆ ಮು
ನ್ನಿನ ದುರ್ವಿಷಯೋಪಭೋಗರಾಗಾದಿಗಳಂ || ೧೨

ವ || ಅದೆಂತೆನೆ-

ಕಂ || ಧರೆಯಿಂ ಗಗನಕ್ಕಯ್ಸಾ
ಸಿರ ಬಿಲ್ಲಂತರದಿನೊಗೆದು ಘಾತಿಕ್ಷಯದಿಂ
ಪರಮೇಶ್ವರನೆಸೆದಿರ್ದಮ
ಸುರವಿರಚಿತ ಸಮವಸರಣಭೂಮಂಡಳದೊಳ್ || ೧೩

ಮ || ಸ್ರ || ವಿನುತಪ್ರಾಸಾದಚೈತ್ಯಕ್ಷಿತಿಜಳವಿಳಸತ್ ಖಾತಿಕಾಲೇಖವಲ್ಲೀ
ವನಮುದ್ಯಾನಂ ಧ್ವಜೋರ್ವೀತಳಮಮರಕುಜ ಕ್ಷೋಣಿ ಸಂಗೀತಹರ್ಮ್ಯಾ
ವನಿ ಲಕ್ಷ್ಮೀಮಂಡಪಂ ಶೋಭಿಸೆ ಗಣವೃತಪೀಠತ್ರಯಾಗ್ರಸ್ಥ ಸಿಂಹಾ
ಸನದೊಳ್ ಚಂದ್ರಾರ್ಕಕೋಟಿಪ್ರಭನೆಸಗುಮಶೇಷೇಂದ್ರವಂದ್ಯಂ ಜಿನೇಂದ್ರಂ ||

ಕಂ || ಉರಗವಿಷಮಮೃತಜೀವಾ
ಕ್ಷರಮಂತ್ರಧ್ಯಾನದಿಂದಮುಪಶಮಿಸುವವೋಲ್
ದುರಘಮುಪಶಮಿಸುಗುಂ ಶಾಂ
ತರಸಾಮೃತಮಯನನರ್ಹನಂ ನೆನೆಯಲೊಡಂ || ೧೫

ಕುಗತಿಯನೆಯ್ದೆ ನಿವಾರಿಪ
ಸುಗತಿಯನವಯವದಿನೀವ ಶಾಶ್ವತಪದಮಂ
ಬಗೆದಂತೆ ಮಾೞ್ಪ ಮೈಮೆಗೆ
ಜಗದೊಳ್ ಜಿನಭಕ್ತಿ ತಾನೆ ತಾಯ್ವನೆಯಲ್ತೇ || ೧೬

ಎತ್ತಾನುಮೊರ್ಮೆ ನಸುದೋ
ಱುತ್ತುಂ ಜಿನಭಕ್ತಿ ಮಾಣ್ದುದಾದೊಡಮಾ ಭ
ವ್ಯೋತ್ತಮನಘಮುರಿತಾಗಿದ
ಬಿತ್ತಿಂಗೆಣೆಯಕ್ಕುಮೆಂದೊಡೇವಣ್ಣಿಪುದೋ || ೧೭

ವ || ಅದುಕಾರಣದಿಂ-

ಕಂ || ಪರಮಜ್ಞಾನಾನಂದ
ಸ್ವರೂಪನಂ ವೀತರಾಗನಂ ಸಕಳಜಗ
ದ್ಗುರುವಂ ಜಿನೇಂದ್ರನಂ ಭಾ
ಸ್ಕರಕೋಟಿಪ್ರಭನನಾಗಳುಂ ನೆನೆ ಮನದೊಳ್ || ೧೮

ತ್ರಿದಶದಿನಂ ತೀವಲೊಡಂ
ತ್ರಿದಶತ್ವಮನೆಯ್ದಿ ನೀನೆ ಬಂದು ಸಮಸ್ತ
ತ್ರಿದಶೇಂದ್ರವಂದಿತ ಶ್ರೀ
ಪದನಂ ಪ್ರತ್ಯಕ್ಷಮಾಗೆ ನಲಿದೀಕ್ಷಿಸುವೈ || ೧೯

ಆ ದೊರೆಯ ಜಿನವಿಭೂತಿಯ
ನಾದರದಿಂ ನೋೞ್ಪ ನಿನಗೆ ಪತ್ತನೆಯ ಭವ
ಕ್ಕಾದಪುದು ತೀರ್ಥಕರಪು
ಣ್ಯೋದಯಮತಿಸೇವ್ಯಮತಿವಿಚಿತ್ರಾಭ್ಯುದಯಂ || ೨೦

ವ || ಎನಲೊಡಮಾ ಬೋಧನಿಧಿಗಳ ವಚನಮಮೋಘಮೆಂದು ನಿಶ್ಚಯಿಸಿ –

ಕಂ || ಆಗಳೆ ತನಗಿದಿರ್ವಂದವೊ
ಲಾಗಿರೆ ಸರ್ವಜ್ಞಲಕ್ಷ್ಮಿ ಜನಿಯಿಸಿದ ಮನೋ
ರಾಗದ ಪೆರ್ಚಂ ನೆಱೆ ಪೊಗ
ೞ್ವಾಗಳವಾಗ್ಮನಸಗೋಚರಂ ಮೃಗಪತಿಯಾ || ೨೧

ಮೃಗರಾಜಂಗಾನಂದಾ
ಶ್ರುಗಳೊಗೆದುವು ತೊಳೆದು ಕಳೆವ ತೆಱದಿಂ ಕೊಲ್ವು
ಜ್ಜುಗದೆ ಕಡು ಮುನಿದು ಮುನ್ನಂ
ಮೃಗಂಗಳಂ ನೋಡೆ ನೆರೆದ ದುರಿತಾಂಜನಮಂ || ೨೨

ವ || ಅಂತು ರಾಜಪ್ರಸಾದದಿಂ ಮೇಲೆ ಸಾಮ್ರಾಜ್ಯಪಟ್ಟಮಪ್ಪಂತೆ ಸುವರ್ನಲಾಭದಿಂ ಮೇಲೆ ಚಿಂತಾಮಣಿಯ ಕಣಿ ದೊರೆಕೊಳ್ವಂತೆ ಸರ್ವಜ್ಞ ದರ್ಶನೋತ್ಸವದಿಂ ಮೇಲೆ ತನಗೆ ಪರಮಾರ್ಹಂತ್ಯಮಪ್ಪುದನಱಿದು ರಾಗರಸದೊಳೋಲಾಡುತ್ತುಂ ಅಕಾರಣ ಬಂಧುಗಳಪ್ಪ ಚಾರಣರಂ ನೋಡಿ ಪರಮೋಪಕಾರಸ್ಮರಣದಿನಡಿಗಡಿಗೆ ಪೊಡೆವಡು ವುದುಂ –

ಕಂ || ದಯೆಯುಂ ಕ್ಷಮೆಯುಂ ಬ್ರತಶು
ದ್ಧಿಯುಮಗಲದೆ ನಿನ್ನ ಹೃದಯದೊಳ್ ನೆಲಸಿ ಸಮೃ
ದ್ಧಿಯನೆಯ್ದುತಿರ್ಕೆ ದುಷ್ಕೃತ
ಚಯಮದು ಹೀನಬಳಮಾಗುತಿರ್ಕನವರತಂ || ೨೩

ನಿನಗೀಗಳಾದ ಸದ್ದ
ರ್ಶನರತ್ನಂ ಮುನ್ನಿನಂತೆ ಮಸುಳದೆ ನಯದಿಂ
ದನುದಿನಮುಜ್ವಳಿಸುಗೆ ಪಾ
ವನತರ ಪರಮಾವಗಾಢರುಚಿಯಪ್ಪಿನೆಗಂ || ೨೪

ವ || ಎಂದವರ್ ಪರಸಿ ಗಮನೋದ್ಯುಕ್ತಚಿತ್ತರಾಗಿ ನಿಂದಿರ್ದು ತಮ್ಮಗಲ್ಕೆಗೆ ಸೈರಿಸಲಾಱದೆ ಖೇದಿಸುವ ಮೃಗಪತಿಯ ಚೇಷ್ಟೆಯಂ ಕಂಡು ತತ್ಸಮೀಪಕ್ಕೆ ಬಂದು ಪಂಚೇಂದ್ರಿಯ ಗ್ರಹಪೀಡಾವಿನಾಶನಾರ್ಥ ಮಿಕ್ಕಿದ ರಕ್ಕೆವಣಿಗಳಂತೆಯುಂ ಪಂಚಮಹಾಕಲ್ಯಾಣಫಳಮಂ ದಯೆಗೆಯ್ಕೆಲೆಂದು ತಳಿದ ಪುಣ್ಯಂಗಳ ಬೀಜಂಗಳಂತೆಯುಂ ನಖಮಣಿಗಳತಿರಮಣೀಯಂಗಳಾಗೆ ಕಾರುಣ್ಯದಿಂ ತದೀಯ ಮಸ್ತಕಮಂ ನಿಜಶ್ರೀಹಸ್ತದಿಂ ಮುಟ್ಟಿ –

ಕಂ || ನಿನಗಮೆಮಗಂ ಪುನರ್ದ
ರ್ಶನಮಾದಪುದೊಂದೆತಿಂಗಳಿಂಗೆಲೆ ಪಂಚಾ
ನನ ನೀಂ ಸುರನಾಗಿ ಜಿನೇಂ
ದ್ರನನರ್ಚಿಸಲೆಂದು ಬರ್ಪುದುಂ ತತ್ಸಭೆಯೊಳ್ || ೨೫

ವ || ಎಂದು ಸಂತಸಂಬಡಿಸಿ ಗಗನಕ್ಕೊಗೆದು ಬಿಜಯಂಗೆಯ್ದಾಗಳ್ –

ಕಂ || ಅವರ ಪದನಖರ ವಜ್ರ
ಚ್ಛವಿಗಳ್ ಚರಣಾರುಣಾಬ್ಜರುಚಿಗಳ್ ಕಂಠೀ
ರವನ ಮನದೊಳಗೆ ನೆಲಸಿ
ರ್ದುವು ತೇಜಃಪದ್ಮಲೇಶ್ಮೆಗಳ್ ನೆಲಸುವವೋಲ್ || ೨೬

ವ || ಮತ್ತಮವರ ಧರ್ಮೋಪದೇಶಕೌಶಲಮುಂ ಪರಾನುಗ್ರಹಾಗ್ರಹಮುಂ ಮನದೊಳ್ ತಣ್ಮಲೆಯೆ –

ಕಂ || ಕಿವಿಗಿಂಪನೀವ ಬಗೆಗು
ತ್ಸವಮಂ ಪುಟ್ಟಿಸುವ ಸಂಶಯಮನೆಂತುಂ ತೂ
ಳ್ದುವ ಹಿತಮನಾವಗಂ ಮಾ
ಡುವ ಮಾತಿನ ಬಲ್ಮೆ ಕೌತುಕಂ ಮುನಿಪತಿಯಾ || ೨೭

ಕರುಣದಿನಿಂತೀ ಗಹನಾಂ
ತರದೊಳಗೆನ್ನನಱಸಿ ಬಂದೆನಗಱಿವಂ
ತಿರೆ ಧರ್ಮಮನಱಿಪಿ ಸಮು
ದ್ಧರಿಸಿದರಲ್ಲದೊಡೆ ಮಗುೞೆ ನರಕಂಬುಗೆನೇ || ೨೮

ವ || ಎಂದು ಕಿಱಿದುಬೇಗಂ ನೆನೆಯುತ್ತುಮಿರ್ದು –

ಕಂ || ಅವರ ಪದಸ್ಪರ್ಶನದಿಂ
ಪವಿತ್ರಮಾಗಿರ್ದ ತಚ್ಛಿಲಾಪಟ್ಟದೊಳು
ತ್ಸವದಿಂ ಪಟ್ಟಿರ್ದುದು ತಳೆ
ದವಿಚಳಮಪ್ಪೇಕಪಾರ್ಶ್ವನಿಯಮಸ್ಥಿತಿಯಂ || ೨೯

ವ || ಅಂತು ಪಟ್ಟಿರ್ದು –

ಕಂ || ಅನವರತಂ ಮೃಗಮಾಂಸಾ
ಶನದಿಂದಮೆ ಕೊರ್ಬಿದಶುಭಮಶುಚಿತ್ವದ ಭಾ
ಜನಮೆನಿಪವಲಕ್ಷಣಮೀ
ತನುವೆಂದಡಿಗಡಿಗೆ ಪೇಸುತಿರ್ದುದು ಮನದೊಳ್ || ೩೦

ತನಗೆ ವಿಷಯಾಮಿಷದ ವಾ
ಸನೆ ಕಿಱಿದೊರ್ಮೊರ್ಮೆ ಕನಸಿನೊಳ್ ತೋಱದೊಡಂ
ಮನಮಂ ತೊಳೆಯುತ್ತಿರ್ದುದು
ಜಿನಚರಣಸ್ಮರಣಮೆಂಬ ತೀರ್ಥೋದಕದಿಂ || ೩೧

ಇರುಳುಂ ಪಗಲುಂ ಬಹುವಿಧ
ಪರೀಷಹಂ ಬಿಡದೆ ಪೀಡಿಸುತ್ತಿರೆ ತಿಂಗ
ಳ್ವರಮೊಂದೆ ಮಗ್ಗುಲೊಳ್ ಕೇ
ಸರಿ ಕರುವಿಟ್ಟಂತಿರಿರ್ದುದಚಳಿತ ಧೈರ್ಯಂ || ೩೨

ವ || ಅಂತಿರ್ಪಾಗಳ್ –

ಕಂ || ದನಿಗೆಯ್ಯದು ಮಿಸುಕದಿದೇ
ಕೆನುತುಂ ಮೃಗಧೂರ್ತಸಮಿತಿ ಸಾರ್ತರೆ ಪಂಚಾ
ನನನಿರ್ದುದು ಪಂಚತ್ವಮ
ನನಾಕುಳಂ ಪೊರ್ದಿದಂತೆ ನಿಷ್ಕಂಪತೆಯಿಂ || ೩೩

ವ || ಅದಂ ಕಂಡು ಕೌತುಕದಿಂ ನೋಡಲೆಂದು –

ಕಂ || ಕುಂಜರಘಟೆ ಸಾರ್ತಂದೊಡಿ
ವಂಜುಗುಮೆಂದಂಜಿ ಕಣ್ಗಳಂ ತೆಱೆಯದೆ ಸಿಂ
ಹಂ ಜಾನಿಸುತಿರೆ ಜಿನಪತಿ
ಯಂ ಜಗುೞ್ದೋಡಿದುವು ದುರಿತಕುಂಜರಘಟೆಗಳ್ || ೩೪

ಚಂ || ಉಗಿಬಗಿಮಾೞ್ಪ ದಂಶ ಮಶಕಂಗಳ ಕೋಳ್ಗೆ ಮಹಾಕ್ಷುಧಾಗ್ನಿಯೇ
ೞ್ಗೆಗೆ ಬಿಸಿಲ ೞ್ವೆ ಪೆರ್ಚುವ ಪಿಪಾಸೆಗೆ ಚುಱ್ಱೆನುತಿರ್ಪ ಕಲ್ಲ ಬೆಂ
ಕೆಗೆ ಬಿಡದೊಂದುಮಗ್ಗುಲಿರವಿಂಗಿನಿತೞ್ಕದೆ ತತ್ವಚಿಂತೆ ಕೆ
ಯ್ಮಿಗೆ ಹೃದಯಂ ಕುಳಿರ್ಕೊಳುತುಮಿರ್ದುದಿದೇಂಧೃತಿಯೋ ಮೃಗೇಂದ್ರನಾ || ೩೫

ವ || ಮತ್ತಮಾ ಭವ್ಯೋತ್ತಮನಪ್ಪ ಸಿಂಹಂ ತನ್ನ ಸಮ್ಯಕ್ತ್ವಗ್ರಹಣಕಾಲದೊಳರಿಂಜಯ ಮುನೀಂದ್ರೋಪದಿಷ್ಟ ಪರಮಾಗಮಯುಕ್ತಿ ವ್ಯಕ್ತಿಗಳಪೂರ್ವ ಸೂರ್ಯಾಂಶುಜಾಳದಂತೆ ಕರ್ಣಗವಾಕ್ಷಜಾಳದಿಂ ಪೊಕ್ಕು ಮನದೋವರಿಯೊಳಿರ್ದ ಮಿಥ್ಯಾತ್ವತಿಮಿರಮಂ ತೂಳ್ದಿ ದಂದು ಮೊದಲ್ಗೊಂಡಹರ್ನಿಶಂ ತೊಲಗದೆ ಸಂಶಯಲವಮೆಂಬ ನಸುಗೞ್ತಲೆಯುಮಂ ತಲೆದೋಱಲೀಯದೆ ತೊಳಗಿ ಬೆಳಗುತ್ತುಂ ಪರಮ ರಸಾಯನದಂತೆ ಸಮ್ಯಗ್ಧರ್ಶನಂ ಸರ್ವಾಂಗ ಶಕ್ತಿಯಂ ಕೊರ್ವಿಸುತ್ತಿರೆ ಸನ್ಮಾರ್ಗ ಲಾಭಜನಿತ ಸಂತೋಷಾಮೃತಮಂ ಸೇವಿಸುತ್ತುಂ ನಿರಾಯಾಸ ಪ್ರಾಯೋಪಗಮನಮಂ ನೋಂತು ನಿಜಾಯುರವಸಾನ ಸಮಯದೊಳ್ ಆತ್ಮಪ್ರದೇಶಂಗಳೆಲ್ಲಮುಡುಗಿ ಬರುತ್ತಿರ್ಪುದಂ ಕಂಡು –

ಕಂ || ಪಂಚಾಣುವ್ರತಮಂ ಶ್ರೀ
ಪಂಚಪದಂಗಳನರಿಂಜಯವ್ರತಿಪದಮಂ
ಸಂಚಳಿಸದೆ ಭಾವಿಸಿದುದು
ಪಂಚತ್ವಮನೆಯ್ದುವೆಡೆಯೊಳಂ ಪಂಚಾಸ್ಯಂ || ೩೬

ವ || ಅದಲ್ಲದೆಯುಂ –

ಉ || ಇಂದಮರೇಂದ್ರವಂದ್ಯನ ಸಭಾಂತರಮಂ ಪುಗುವೆಂ ನಿರಂಜನಾ
ನಂದನನಾ ಜಿನೇಂದ್ರನನಲಂಪಿನೊಳರ್ಚಿಸುವೆಂ ವಿಶೋಧಿಯಿಂ
ಬಂದಿಪೆನೆನ್ನ ಕಣ್ತಣಿಯೆ ನೋಡುವೆನೀದಿನಮೆನ್ನಭೀಷ್ಟಮಾ
ಯ್ತೆಂದನುರಾಗಮಂ ತಳೆದುದೇಂ ಮತಿನಿಶ್ಚಳನೋ ಮೃಗೇಂದ್ರನಾ || ೩೭

ಕಂ || ಇದು ನೀಚಗತಿಯ ಸಂಕ್ಲೇ
ಶದೊಳೆಂದುಂ ಪುಗದುಪಾಯಮೆನಗೆಂದರ್ಹ
ತ್ಪದಯುಗಮಂ ನೆನೆಯುತ್ತುಮೆ
ಮುದದಿಂ ಬಿಟ್ಟುದು ಶರೀರಮಂ ಮೃಗರಾಜಂ || ೩೮

ವ || ಅಂತು ದರ್ಶನಾವರಣೀಯದೊಳ್ ಸ್ತ್ಯಾನಗೃದ್ಧಿತ್ರಯಮುಂ ಮೋಹನೀಯದೊಳ್ ಮಿಥ್ಯಾತ್ಮತ್ರಯಮುಮನಂತಾನುಬಂಧಿ ಚತುಷ್ಟಯಮುಂ ನಪುಂಸಕ ವೇದಮುಂ ಸ್ತ್ರೀವೇದಮುಂ ಆಯುಷ್ಯದೊಳ್ ನರಕತಿರ್ಯಗಾಯುಷ್ಯಮುಂ ನಾಮಕರ್ಮದೊಳ್ ನರಕದ್ವಿಕಮುಂ ತಿರ್ಯಗ್ದ್ವಿಕಮುಂ ಮೊದಲಿಂದ್ರಿಯ ಚತುಷ್ಕಮುಂ ಕಡೆಯಯ್ದುಂ ಸಂಸ್ಥಾನಮುಂ ಕಡೆಯಯ್ದುಂ ಸಂಹನನಮುಂ ಉದ್ಯೋತಮುಂ ಅಪ್ರಶಸ್ತ ವಿಹಾಯೋಗತಿಯುಂ ಸ್ಥಾವರಮುಂ ಸೂಕ್ಷ್ಮತ್ರಯಮುಂ ದುರ್ಭಗತ್ರಯಮುಂ ಗೋತ್ರಕರ್ಮದೊಳ್ ನೀಚೈರ್ಗೋತ್ರಮುಮೆಂಬ ನಾಲ್ವತ್ತೊಂದು ಪ್ರಕೃತಿಗಳ ಬಂಧಾನು ಬಂಧಮನೆಂದಿಂಗಮೊಲ್ಲೆನೆಂದು ತೊಱೆದು ಕಳೆದು ಮುಳ್ಳನೆ ೞೆದೀಡಾಡುವಂದದಿಂ ಕ್ರೂರಾಕಾರಮಪ್ಪ ಸಿಂಹಪರ್ಯಾಯಮನೀಡಾಡಿ ಕಳೆದು ಪರಮೈಶ್ಚರ್ಯ ಭಕ್ತಿಯ ಮೆಯ್ಮೆಯಿಂ ಪ್ರಥಮಕಲ್ಪಪ್ರಾಪ್ತಮಾದುದಾ ದೇವಗತಿಗೆಯ್ದಿದಂದಮೆಂತಿರ್ದುದೆಂದೊಡೆ –

ಕಂ || ಸೆಱೆಯಿಕ್ಕಿ ನೀಚಯೋನಿಯೊ
ಳಱೆ ದಂಡಿಸುವಶುಭಕರ್ಮರಿಪುಗಳ ಕೋಪಂ
ಪಱಿಪಡಿಸಿ ಶುಭಾಸ್ರವಮೆಂ
ಬಱಿಕೆಯ ಶೇಷಾಕ್ಷತಂಗಳಂ ತಳಿಯುತ್ತುಂ || ೩೯

ಭವಭಯಹರನಂ ಕಾಣಿಸ
ಲವಯವದೊಡಗೊಂಡು ಪೋಪ ಜಿನಭಕ್ತಿಮಹೋ
ತ್ಸವದಿನಳಂಕಾರಂಗೆ
ಯ್ಯುವೆಡೆಗೆ ಮುನ್ನುಯ್ದುದೆಂಬ ತೆಱನಂ ಪೋಲ್ಕುಂ || ೪೦

ಮ || ಪಲವುಂ ರತ್ನಗೃಹಂಗಳಿಂ ಸುರಕುಜಾರಾಮಂಗಳಿಂ ನಿತ್ಯನಿ
ರ್ಮಳ ರತ್ನಾತ್ಮಕ ಜೈನಸದ್ಮಚಯದಿಂದಾಸನ್ನಭವ್ಯಾಮರಾ
ವಳಿಯಿಂ ಧರ್ಮಕಥಾಪ್ರಸಂಗಧರನಾಗಿರ್ಪಿಂದ್ರನಾಸ್ಥಾನದಿಂ
ಲಲಿತೈಶ್ವರ್ಯದ ದೇವಕೋಟಿಗಳಿನಾ ಕಲ್ಪಂ ಕರಂ ರಂಜಿಕುಂ || ೪೧

ಕಂ || ದಿವಿಜಪತಿ ಮಾೞ್ಪ ಧರ್ಮ
ಶ್ರವಣಂ ಧರ್ಮಾನುರಾಗಮರ್ಹತ್ಪೂಜೋ
ತ್ಸವಮಾಗಳುಮಘಮಂ ತೂ
ೞ್ದುವುದಱಿನಾ ಕಲ್ಪಮಲ್ತೆ ಭವ್ಯಮನೋಜ್ಞಂ || ೪೨

ವ || ಅಂತು ಪೊಗೞ್ತೆವೆತ್ತ ಸೌಧರ್ಮಕಲ್ಪದ ಸಿಂಹಧ್ವಜಮೆಂಬ ವಿಮಾನದುಪಪಾದ ಭವನದೊಳಗೆ ಪುಣ್ಯಪ್ರಭಾವದಿಂ ಕಲ್ಪವೃಕ್ಷಕುಸುಮಂಗಳ ಸುಗಂಧಸ್ನಿಗ್ಧ ಸುಚ್ಛಾಯ ಮಕರಂದ ಸಂದೋಹಮೊಂದೆಡೆಯೊಳ್ ರಾಶಿಗೊಂಡು ಪಾಸಾದಂತೆ ಮನೋಹರ ಮಾಗಿರ್ದ ಮೃದುತಳ್ಪಸಂಪುಟದೊಳಾ ಪುಣ್ಯಜೀವಂ ಬಂದು ನೆಲಸಿ ಷಟ್ಪರ್ಯಾಪ್ತಿಗಳ್ ನೆಱೆವುದುಂ ವಿಕಸಿತಮಾದ ಶಯ್ಯಾಸಂಪುಟಮೆಂಬ ಶುಕ್ತಿಕಾಸಂಪುಟದೊಳಗೆ ಕಾಂಚನ ಚ್ಛವಿಯನೊಳಕೊಂಡು ತೊಳಗಿ ಬೆಳಗುತ್ತುಮಿರ್ದಪೂರ್ವ ಮುಕ್ತಾ ಫಳಮಿದೆಂಬಂತೆ ದಿವ್ಯಾಕಾರಮಂ ತಾಳ್ದಿ ದಿವ್ಯವಸ್ತ್ರಾಭರಣಮಾಲ್ಯಾಳಂಕೃತನಾಗಿ ಕುಳ್ಳಿರ್ಪುದುಂ –

ಕಂ || ತೆಱೆದುವುಪಪಾದ ಭವನದ
ಮಿಱುಗುವ ಮಾಣಿಕದ ಪಡಿಗಳೊಡನೊಡನಾಗಳ್
ಪೊಱಪೊಣ್ಮಿದುದಾ ದೇವನ
ಮೆಱೆವಂಗಪ್ರಭೆಯುಮತನು ತನುಸೌರಂಭಮುಂ || ೪೩

ಕನಕಾಬ್ಜಾಕರಮಲರ್ದ
ತ್ತೆನೆ ಚಂಪಕ ಮಲ್ಲಿಕಾಕುಸುಮವೃಷ್ಟಿ ಸುರಿದ
ತ್ತೆನೆ ಕಂಪಿನ ಪೊಂಪುೞಿವೋ
ಪ ನಿಳಿಂಪನ ಮೆಯ್ವೆಳಗೇಂ ಕರಂ ಮನಂಗೊಳಿಸಿದುದೋ || ೪೪

ವ || ಆ ಶುಭಮುಹೂರ್ತದೊಳ್ –

ಕಂ || ಧವಳಾಕ್ಷತಂಗಳಂ ತಳಿ
ವವೊಲೆಸೆದುದು ಪುಣ್ಯಪುದ್ಗಳಾತ್ಮಕಮಂ ತ
ದ್ದಿವಿಜ ಶ್ರೀಮುಖಮಂ ನೋ
ಡುವ ದೇವೀಜನದ ಪೊಳೆವಪಾಂಗಪ್ರಭೆಗಳ್ | ೪೫

ವ || ಮತ್ತಮಾ ಸಮಯದೊಳ್ –

ಕಂ || ಪರಿವಾರಾಮರರೆಲ್ಲಂ
ಪರಸುತ್ತುಂ ಪೊಡೆವಡುತ್ತುಮಿರೆ ನಭದೊಳ್ ಭೋ
ರ್ಗರೆಯುತ್ತಿರೆ ಸುರದುಂದುಭಿ
ಪರಿಮಳಮಯಮಾಗಿ ತೀಡುತಿರೆ ಗಂಧವಹಂ || ೪೬

ಮಗಮಗಿಪ ನಮೇರುವ ಬಾ
ಸಿಗದಿಂ ಪಜ್ಜಳಿಪ ರತ್ನಭೂಷಣದಿಂ ಚೆ
ಲ್ವಗಲದ ದಿವ್ಯಾಂಬರದಿಂ
ಸೊಗಯಿಸುತಿರೆ ತನ್ನ ಕೋಮಳಾಂಗವಿಳಾಸಂ || ೪೭

ವ || ಅನಿತುಮಂ ಕಂಡು ವಿಸ್ಮಯಂಬಟ್ಟು –

ಮ || ಸ್ರ || ಪದುಳಂ ಕುಳ್ಳಿರ್ದ ನಾನಾರ್ ಪೊಡವಡುವಿವರಾರ್ ಆವುದೀ ಲೋಕಮೀಸ್ಥಾ
ನ್ನೊಲವಿಂ ಧರ್ಮಮನಾಯ್ತು ತತ್ಫಲದಿನೀ ದೇವತ್ವಮೆನ್ನೊಳ್ ಸುನಿ
ಶ್ಚಳಮಿಲೋಕಮಮರ್ತ್ಯಲೋಕಮಿದು ದೇವಸ್ತೋಮಮೀಸರ್ವಕೋ
ಮಳೆಯರ್ ದೇವಿಯರಿಂತಿದೆನ್ನಯ ವಿಮಾನಂ ರಮ್ಯ ಸಿಂಹಧ್ವಜಂ || ೪೯

ಕಂ || ದೂರದೊಳೆ ಕೇಳ್ದು ನಲಿವೆನ
ಗೀ ರಮ್ಯಮಹರ್ದಿಕತ್ವಮಾಯ್ತೆಂದೊಡೆ ಕ
ಣ್ಣಾರೆ ಜಿನೇಶ್ವರನಂ ಕಂ
ಡಾರಾಧಿಸುತಿರ್ಪ ಪುಣ್ಯನಿಧಿಗರಿದುಂಟೇ || ೫೦

ವ || ಎಂದು ಪರಿಭಾವಿಸಿ ದೆಸೆಗಳಂ ನೋೞ್ಪಾಗಳ್ –

ಕಂ || ಜಿನಮತದೊಳ್ಪನೆ ತಾಂ ಮು
ನ್ನಿನ ಭವದೊಳ್ ಮೆಚ್ಚುತಿರ್ದ ಫಲದಿಂ ದಿವಿಜಾಂ
ಗನೆಯರುಮನಿಮಿಷರುಂ ತ
ನ್ನನೆ ಮೆಚ್ಚಿ ಕರಂ ಮರಳ್ದು ನೋಡುತ್ತಿರ್ದರ್ || ೫೧

ವ || ಇರ್ಪಿನಂ –

ಕಂ || ಎನಗಿನಿತೈಶ್ಚರ್ಯಂ ಶ್ರೀ
ಜಿನೇಶ್ವರಸ್ಮೃತಿಯಿನಾ ಮುನೀಶ್ವರರುಪದೇ
ಶನದಿಂದೆ ಸಮನಿಸಿತ್ತದ
ಱಿನಿಂದೆ ತತ್ಪದಪಯೋಜಮಂ ಪೂಜಿಸುವೆಂ || ೫೨

ವ || ಎಂದು ಪರಿಭಾವಿಸಿ ಭವ್ಯಜನಕಮಳಮಾರ್ತಂಡನಾ ಸಿಂಹಧ್ವಜವೈಮಾನಿಕ ಪ್ರಕಾಂಡಂ ಸ್ವಕೀಯ ಸಕಳ ಪುರಜನಪುರಸ್ಸರಂ ಸಮಸ್ತ ಪ್ರಶಸ್ತಾರ್ಚನಾವಸ್ತು ಸಮಿತಿ ಸಮೇತನಾಗಿ ರಾಗದಿನಲ್ಲಿಂ ತಳರ್ದು ನಡೆವಾಗಳ್ –

ಕಂ || ದಿವಿಜಾಂಗನೆಯರ ವಿಳಸಿತ
ಧವಳಾಪಾಂಗ ಪ್ರಭಾಲಸಚ್ಚಂದ್ರಿಕೆ ಪ
ರ್ವೆ ವಿಯತ್ತಳದೊಳ್ ತಳೆದಂ
ಸುವಿಮಳವಪು ಚಂದ್ರಲೀಲೆಯಂ ರುಂದ್ರಯಶಂ || ೫೩

ಮಣಿಮಯ ನಾನಾವಿಧ ಭೂ
ಷಣ ದೀಧಿತಿ ಗಗನವಳಯಮಂ ಬಳಸಿದುದಾ
ಗುಣನಿಧಿಯ ಹೃದಯದಿಂ ತಿಂ
ತಿಣಿಯೆನೆ ಪೊಱಮಟ್ಟ ರಾಗರಸಮೆಂಬಿನೆ ಸಂ || ೫೪

ವ || ಅಂತು ಮಹಾವಿಭವದಿಂ ನಡೆದು ಪರಮಾರ್ಹಂತ್ಯ ಕಮಳಾಧರರೆನಿಸಿದ ಕಮಳಾಧರ ಜಿನೇಂದ್ರನ ದಿವ್ಯಮಂದಿರಮನವ್ಯಗ್ರದಿಂ ಭವ್ಯಾಗ್ರಣಿಪ್ರಣುತಮಂ ಪೊಕ್ಕು ಕೃತತ್ರಿಪಕ್ಷಿಣಂ ಕೇವಲಜ್ಞಾನವೀಕ್ಷಣನ ಪಾದಪೀಠೋಪಾಂತಮಂ ಕಾಂತಾರ್ಚನೆಗಳಿನರ್ಚಿಸಿ ಸರ್ವಾಂಗಲಿಂಗಿತೋರ್ವೀತಳಪುಳಕಿತಾಂಗಂ ತದಭಿಮುಖಂ ನಿಂದಿರ್ದು ನಿಟಿಳತಟ ಘಟಿತ ಕುಟ್ಮಳಿತಕರಸರೋಜನಾಗಿ –

ಕಂ || ಜಯಜಯ ನಿರಾಮಯ ಶ್ರೀ
ಪ್ರಿಯ ಜಯಜಯ ಸಕಳ ಭುವನವಂದಿತ ಪಾದ
ದ್ವಯ ಜಯಜಯ ವರ ಬೋಧೋ
ದಯ ಜಯಜಯ ನಿಖಿಳ ದುರಿತಹರ ಪರಮಜಿನಾ || ೫೫