ಚಂ || ಜಯಜಯ ಭವ್ಯಸೇವ್ಯ ಭುವನತ್ರಯವಲ್ಲಭ ದೇವದೇವ ನಿ
ರ್ಭಯ ನಿರವದ್ಯ ನಿರ್ಮಳ ನಿರಾಮಯ ನಿರ್ಮದ ನಿರ್ವಿಕಾರ ನಿ
ರ್ವ್ಯಯಪದ ನಿಶ್ಚಿತಾಖಿಳಪದಾರ್ಥ ನಿರಂಜನ ನಿರ್ಜಿತಾಶ ನಿ
ನ್ನಯ ಪದಪಂಕಜಕ್ಕೆಱಗುವಂಗರಿದುಂಟೆ ಜಗಂಗಳೊಳ್ ಜಿನಾ || ೫೬

ಕಂ || ಜಿನ ನಿನತು ಮತದೊಳೆಸಗಿದ
ಜನತೆಗೆ ಜನಿಯಿಸುಗುಮಖಿಳಮಭ್ಯುದಯಂ ನೆ
ಟ್ಟನೆ ನಿಶ್ಶ್ರೇಯಸಮದಱಂ
ಜನಹಿತಮಿತವಚನ ನಿನ್ನಚರಣಂ ಶರಣಂ || ೫೭

ವ || ಎಂದನೇಕ ಸ್ತೋತ್ರಪವಿತ್ರಂಗಳಿಂ ಸ್ತುತಿಯಿಸಿ –

ಕಂ || ತದನಂತರಮಲ್ಲಿಂ ತಳ
ರ್ದುದಾತ್ತಗುಣರೆನಿಪರಿಂಜಯಾಮಿತಗುಣನಾ
ಮದಿನೊಪ್ಪಿರ್ದ ಮುನೀಂದ್ರರ
ಪದಪದ್ಮ ಮನಮಳಭಕ್ತಿಯಿಂದಾ ದಿವಿಜಂ || ೫೮

ವಿವಿಧಾರ್ಚನೆಗಳಿನರ್ಚಿಸಿ
ಸುವಿಶುದ್ಧ ತಪೋನಿಧಾನರಂ ಬಂದಿಸಿ ನಿ
ಮ್ಮ ವಚಶ್ರುತಿಯಿಂದೆನಗಿನಿ
ತು ವಿಭವಮಾಯ್ತಾಪ್ತವಚನದಿಂದಾಗದುದೇಂ || ೫೯

ವ || ಎಂದು ಮತ್ತಮಿಂತೆಂದಂ –

ಕಂ || ಭವವಾರಿರಾಶಿಯೊಳ್ ಕ
ರ್ಮವಶದಿನೞ್ದಿರ್ದ ಜಂತುಸಂತಾನಮನು
ತ್ಸವದೆತ್ತುವ ದಕ್ಷತೆ ನಿಮ
ಗೆ ವಲಂ ನಿಜಮೇನದನ್ಯಸಾಧಾರಣಮೇ || ೬೦

ಕೇಸರಿ ರೌದ್ರಾತ್ಮಕದಾ
ವಾಸಂ ಚಿಃ ಪೇಸುಪಥದ ನೆಲೆ ಕಾನನಮೆಂ
ದೋಸರಿಸದೆ ತಿಳಿಪಿ ಭವ
ದ್ದಾಸನನೆನ್ನಂ ಮಹೊನ್ನತಿಯನೆಯ್ದಿಸಿದಿರ್ || ೬೧

ಎಂದಾ ಮುನೀಂದ್ರರಂತಾ
ನಂದಾನಂದದೊಳೆ ಪೊಗೞ್ದು ತತ್ಪದಯುಗಮಂ
ಬಂದಿಸಿ ನಿಜಾಸ್ಪದಕ್ಕೆ
ಯ್ತಂದು ಸುಖಾಮೃತದೆ ತಣಿಯುತಿರ್ದಂ ದಿವಿಜಂ || ೬೨

ವ || ಅಂತಾ ಸಿಂಹಚರಸುಪರ್ವಂ ಸ್ವರ್ಬಹುಳಸುಖಮನನುಭವಿಸಿ ಜಿನಾಮಹಾಮಹಿಮೆಗಳಿಂ ನಿಜಾಯುವಂ ತವಿಸಿ ನಿಖಿಳಶೋಭಾಕರಂಡದ ಧಾತಕೀಷಂಡದ ವಿಚಿತ್ರ ರತ್ನಕಂದರದ ಮೂಡಣಮಂದರದ ಸಕಳಸಂಪತ್ತಿಗೇಹದ ಪೂರ್ವವಿದೇಹದ ಜಳವಿಹಗಕಳಧ್ವನಿಯ ಸೀತಾತರಂಗಿಣಿಯ ಸುಕವಿಸಂಸ್ತವಾಧಾರದ ಬಡಗಣ ತೀರದ ಸಮಸ್ತ ವಸ್ತು ವಿಷಯದ ಕಚ್ಛಮಹಾವಿಷಯದ ಜಿನಭವನಭೂಷಿತಮೂರ್ಧದಪರಾರ್ಧ್ಯ ವಿಜಯಾರ್ಧದ ವಿದ್ಯಾಧರವಿಳಾಸಕ್ಷೋಣಿಯ ತದೀಯದಕ್ಷಿಣಶ್ರೇಣಿಯ ಕನತ್ಕನಕಗೋಪುರದ ಕನಕ ಪುರದೀಶ್ವರನುಂ ವಿಯಚ್ಛರನುಮಪ್ಪ –

ಕಂ || ಕನಕಪ್ರಭಂಗಮೆಸೆವಾ
ತನ ವಲ್ಲಭೆ ಕನಕಮಾಲೆಗಂ ತತ್ಪಂ ಚಾ
ನನಚರಸುರವರನೊಲವಿಂ
ಕನಕಧ್ವಜನೆಂಬ ಪೆಸರ ನಂದನನಾದಂ || ೬೩

ಆ ನಂದನಂಗೆ ಸಕಳಜ
ನಾನಂದಕರಂಗೆ ವಿನುತ ರೂಪವಿಳಾಸ
ಶ್ರೀನಂದನಂಗೆ ಮಾನಿನಿ
ಭೂನುತೆ ಕನಕಪ್ರಭಾಖ್ಯೆ ವಲ್ಲಭೆಯಾದಳ್ || ೬೪

ಉ || ಆ ಕನಕಧ್ವಜಂಗಮೆಸೆವಾ ಕನಕಪ್ರಭೆಗಂ ಜಗಜ್ಜನಾ
ನೀಕ ನುತಂ ಸುತಂ ಕನಕಪೂರ್ವರಥಂ ಪೃಥುಪುಣ್ಯನಾದನಂ
ತಾ ಕಮನೀಯ ಪುತ್ರವರ ಪೌತ್ರಯುಗಂಬೆರಸಾ ಖಗೇಶ್ವರಂ
ಶ್ರೀಕನಕಪ್ರಭಂ ಸುಖದೆ ವರ್ತಿಸಿದಂ ಚಿರಮುದ್ಘರಾಜ್ಯದೊಳ್ || ೬೫

ಒಂದಿ ದಿನಂ ಮನೋಜನ ವಿರಾಜಿಪ ಕೆಯ್ದುವಿದೆಂಬಿನಂ ಮಹಾ
ನಂದದಿನಾಂತು ಮಂಡನಮನೀಕ್ಷಿಸುತುಂ ಮುಕುರುಂದದೊಳ್ ನಿಜಾ
ಸ್ಯೇದುವನಾವಗಂ ವರವಿರಕ್ತಿ ನಿಯೋಜಿಸೆ ಬಂದ ದೂತಿಯೆಂ
ಬಂದದ ಶುಕ್ಲಕೇಶಲತೆಯಂ ಕನಕಪ್ರಭನೊಲ್ದು ನೋಡಿದಂ || ೬೬

ವ || ಅಂತು ನೀಡುಂ ನೋಡಿ –

ಕಂ || ವಿರಸಾವಸಾನಮಾಯಾ
ಸರಚಿತಮಚಿರ ಪ್ರವೃತ್ತಮುಪಚಿತ ಬಾಧಾ
ಪರಿಕರಮಸಾರಭೂತಂ
ಪರಿಕಿಪೊಡಿಂದ್ರಿಯಸುಖಂ ವಿಷಾದಾಭಿಮುಖಂ || ೬೭

ಉ || ಎಂದು ವಿರಾಗಭಾವಮನೆ ಭಾವಿಸಿ ಭಾವಕಲೋಕಬಾಂಧವಂ
ಸಂದ ಖಗೇಶ್ವರಂ ಕನಕಕೇತುಗೆ ರಾಜ್ಯಮನಿತ್ತು ಮೇದಿನೀ
ವಂದಿತಪಾದಪದ್ಮ ಸುಮತಿಬ್ರತಿ ಸನ್ನಿಧಿಯೊಳ್ ಜಗತ್ರಯಾ
ನಿಂದಿತಲಕ್ಷ್ಮಿಯಂ ಜಿನರ ದೀಕ್ಷೆಯನುತ್ಸವದಿಂದೆ ತಾಳ್ದಿದಂ || ೬೮

ವ || ಇತ್ತಲಾ ಕನಕಧ್ವಜಂ ನಿತಂಬಿನೀನಿಕರಮಕರಧ್ವಜಂ ರಿಪುವಿಪಿನ ಧೂಮಧ್ವಜನುಮೆನಿಸಿ ಖಗೇಶ್ವರವಿಭೂತಿಯಂ ತಳೆದು ವಿವಿಧವಿನೋದಪರಂಪರೆಗಳಿಂ ಸಫಳೀಕೃತರಾತ್ರಿಂದಿವ ನಿವಹನಾಗಿ ವರ್ತಿಸುತ್ತುಮಿರ್ದು –

ಚಂ || ಮಿಸುಪ ವಸಂತದೊಳ್ ಕಿಸಲಯ ಪ್ರಸವೋದ್ಘ ಫಳಂಗಳಿಂ ವಿರಾ
ಜಿಸುವ ವನಾಂತರಾಳದೊಳಗೊರ್ಮೆ ಸನರ್ಮ ಸುಹೃಜ್ಜನಂ ವಿಹಾ
ರಿಸುತುಮದೊಂದು ಚಾರುಪುಳಿನಸ್ಥಳದಗ್ರದೊಳಿರ್ದನಂ ದಯಾ
ವಸಥನನೊಲ್ದು ಸುಬ್ರತಮುಮುಕ್ಷುವನೀಕ್ಷಿಸಿ ತತ್ಖಗೇಶ್ವರಂ || ೬೯

ವ || ಕರಂ ಸಂಭ್ರಮದಿಂ ಸಮುತ್ಸವಾಂತಃಕರಣಂ ಯಮಿಕುಳಾಭರಣನಲ್ಲಿಗೆ ಪೋಗಿ ಕೃತ ಪ್ರದಕ್ಷಿಣಂ ತದೀಯ ಪದಪದ್ಮಂಗಳಂ ದಿವ್ಯಾರ್ಚನೆಗಳಿನರ್ಚಿಸಿ ವಿದಿತ ವಂದನಂ ತದಾಶೀರ್ವಚಃಪೀಯೂಷಪೂರ್ಣಕರ್ಣಕುಹರನಾಗಿ ಪುರೋಧರಿತ್ರಿಯೊಳ್ ಕುಳ್ಳಿರ್ದು –

ಕಂ || ಜ್ಞಾತವ್ಯಂ ತನಗೆನಿಸಿದ
ಭೂತಳಸಾರಮನುಪಾಸಕಾಚಾರಮನಾ
ಖ್ಯಾತ ಯತಿಗಳೊಳೆ ತಿಳಿದು ಗೃ
ಹೀತ ಬ್ರತನಾದನಿದು ವಿಚಾರಕ್ಕೆ ಫಲಂ || ೭೦

ವ || ಅಂತನಣುಫಲಾಣುಬ್ರತಧಾರಿಯಾಗಿ ಧಾರಣೀಶ್ವರಂ ಮುನೀಶ್ವರನಂ ಬೀೞ್ಕೊಂಡು ನಿಜನಿವಾಸಕ್ಕೆ ಪೋಗಿ –

ಕಂ || ಲೀಲೆಯೊಳೆ ದಾನ ಪೂಜಾ
ಶೀಲಾನಶನಂಗಳೆಂಬ ಧರ್ಮಂಗಳನಾ
ಭುಲಲನಾಪತಿ ಸತತಂ
ಪಾಲಿಸಿದಂ ಭವ್ಯಭಾನುವಾಣೀಕಾಂತಂ || ೭೧

ವ || ಒರ್ಮೆ ಪೆರ್ಮೆವೆತ್ತ ನಿಜ ಭರ್ಮನಿರ್ಮಿತ ಹರ್ಮ್ಯೋಪರಿಮ ಭೂಮಿಕೆಯೊಳಾ ಮಹಾವಿಯಚ್ಚರೇಶ್ವರಂ ವಿನೋದಾನುಕೂಲ ಮೂಲ ಕತಿಪಯ ಪರಿಜನ ಪರಿವೃತನಾಗಿ ದಿಗವಳೋಕನಾಕಳಿತ ಕೌತುಕೇಕ್ಷಣನಿರ್ಪುದುಮಾ ಕ್ಷಣದೊಳ್ –

ಕಂ || ಗಗನಾಂತರದೊಳ್ ಸಲೆ ಪೆ
ರ್ಮುಗಿಲೊಂದು ವಿಚಿತ್ರಕೂಟಕೋಟಿಕ್ರಮದಿಂ
ನೆಗೆದುದು ಬಳೆದುದು ಬೇಗದೆ
ಮುಗಿದುದು ಕರಗಿದುದು ನರರ ಸಿರಿಗನುರೂಪಂ || ೭೨

ಅದನೆಮೆಯಿಕ್ಕದೆ ಈಕ್ಷಿಸಿ
ವಿದಗ್ಧತಾವೃತ್ತಿ ವಿದಿತ ವಸ್ತುಸ್ಥಿತಿಕಂ
ಹೃದಯದೊಳೊದವಿದ ವೈರಾ
ಗ್ಯದ ಸಂಪತ್ತಿಗೆ ಖಗೇಶ್ವರಂ ನೆಲೆಯಾದಂ || ೭೩

ದಂಡಧರನೆಂಬ ಸೊರ್ಕಿದ
ಶುಂಡಾಳದ ದಂತದಂತರಾಳದೊಳಿರ್ಪೀ
ಭಂಡಮೆನಿಪ್ಪೊಡಲಂ ಕೆ
ಯ್ಕೊಂಡುಂ ಗಡ ಜೀವನಾವಗಂ ಮುಯ್ವಾಂಪಂ || ೭೪

ವ || ಎಂದು ಸಂಸಾರಶರೀರಾಸಾರತೆಗೆ ಧಾರಾಧರಂ ಕಾರಣಮಾಗೆ ಧಾರಿಣೀಶ್ವರನವಧಾರಿಸಿ –

ಚಂ || ಕನಕರಥಂಗೆ ರಾಜ್ಯಭರಮಂ ಭರದಿಂದಮೆ ಕೊಟ್ಟು ಸುವ್ರತಾ
ವನಿನುತ ಯೋಗಿನಾಯಕನ ಪಾದಪಯೋರುಹ ಸನ್ನಿಧಾನದೊಳ್
ಜಿನಪತಿದೀಕ್ಷೆಯಂ ಪರಮ ಪಾವನಮಂ ಭುವನೈಕವಂದ್ಯಮಂ
ಮನದನುರಾಗದಿಂ ತಳೆದು ಸಂಯಮವಾರಿಧಿಯಾದನಾ ನೃಪಂ || ೭೫

ವ || ಅಂತು ದುರ್ಧರ ತಪೋನುಷ್ಠಾನನಿಷ್ಠೆಯಿಂ ನಿಜಾಯುಃಪಾರಮನೆಯ್ದಿದ ಕನಕಧ್ವಜ ಮುನಿವರಂ ಕನತ್ಕಾಪಿತ್ಥಕಲ್ಪದೊಳ್ ದೇವಾನಂದನೆಂಬ ವೃಂದಾರಕನಾಗಿ ಪುಟ್ಟಿ –

ಕಂ || ಪದಿನಾಲ್ಕುಸಾಗರೋಪಮ
ಮದುಪರಮಾಯುಃ ಪ್ರಮಾಣಮನಿತೆಸಹಸ್ರಾ
ಬ್ದದೊಳೊರ್ಮೆ ನೆನೆವನುಣಿಸಂ
ಮುದಮೊದವಿರೆ ಸುಯ್ವನೇೞು ತಿಂಗಳ್ಗಮರಂ || ೭೬

ಆ ಕಾಪಿತ್ಥದ ಸುಖಮನ
ನಾಕುಳಮನನೇಕ ಸಾಗರೋಪಮಯುತಮಂ
ನಾಕಜನನುಭವಿಸಿದನ
ಸ್ತೋಕಮನಾಸ್ಥಿತಿಯಗತಿಯಪಾರಂಬರೆಗಂ || ೭೭

ವ || ತದನಂತರಂ –

ಉ || ಭೂಲಲನಾಸಲ್ಲಪನಮಂಡಳಮೆಂಬಿನಗಂ ವಿರಾಜಿಪಾ
ಮಾಲವದೇಶದೊಳ್ ಸೊಗಯಿಪುಜ್ಜಯಿನೀ ಪುರದೊಳ್ ವಿಪಕ್ಷ ನಿ
ರ್ಮೂಲನ ದಕ್ಷನುಜ್ವಳಯಶೋರಮಣೀಪತಿ ವಜ್ರಸೇನ ಭೂ
ಪಾಲವರಂಗಮಾತನ ಪುರಂಧ್ರಿ ಸುಶೀಲೆಗಮಾ ಮರುದ್ವರಂ || ೭೮

ಕಂ || ಹರಿಷೇಣನೆಂಬ ಪೆಸರಿಂ
ಕರಮೆಸೆವ ತನೂಜನಾಗಿ ತತ್ತದಭಿಜ್ಞೋ
ತ್ಕರಮಂ ಮೆಚ್ಚಿಸಿದಂ ಸ
ಚ್ಚರಿತಂ ಭಾಸುರ ಕಳಾಕಳಾಪಜ್ಞತೆಯಿಂ || ೭೯

ಧರೆಯಂ ಪಾಲಿಸಿ ರಿಪುಭೂ
ಪರನಲೆದು ಶುದ್ಧಕೀರ್ತಿಯಂ ವಿಶ್ವದಿಗಂ
ತರದೊಳ್ ಪಸರಿಸಿದಂ ಸುರ
ತರುದಾನಂ ವಜ್ರಸೇನನಪ್ರತಿಮಾನಂ || ೮೦

ವ || ಅಂತು ಪಲಕಾಲಂ ಪ್ರಾಜ್ಯರಾಜ್ಯಸುಖದೊಳ್ ನಲಿದೊರ್ಮೆ ಪೆರ್ಮೆವೆತ್ತ ಮುಮುಕ್ಷು ಮುಖ್ಯನಂ ಶ್ರುತಸಾಗರಾಖ್ಯನಂ ಕಂಡು –

ಕಂ || ಮನದೊಲವಿಂ ಬಂದಿಸಿ ತ
ನ್ಮುನಿಪತಿಯಂ ಸುಪ್ರಚಂಚ ಪಂಚಪರಾವ
ರ್ತನ ವರ್ತನಮಂ ಕೇಳ್ದಾ
ಜನಪತಿ ವೈರಾಗ್ಯರಸಮನವಲಂಬಿಸಿದಂ || ೮೧

ವ || ಅಂತು ವಿರಕ್ತಿಯುಕ್ತನಾಗಿ ಹರಿಷೇಣಯುವರಾಜಂಗೆ ರಾಜಿಸುವ ನಿಜಾಧಿರಾಜ ಪದಮ ನಿತ್ತು ತತ್ತಪೋನಿಧಿಯ ಸಮಕ್ಷದೊಳ್ ದೀಕ್ಷೆಯಂ ತಳೆದು ಪರಮಾಗಮಪ್ರವೀಣನುಂ ಸಂಪ್ರಾಪ್ತ ಸಂಯಮತ್ರಾಣಮಾದನಿತ್ತಲಾ ಹರಿಷೇಣಕ್ಷೋಣೀಪಾಳನುಂ –

ಕಂ || ಅನತರಱಗಿಸಿ ನಿಜಪದ
ವಿನತರನನುರಾಗದಿಂದೆ ರಕ್ಷಿಸಿ ಜಗದೊಳ್
ಘನತರ ಕೀರ್ತಿಯನಾಂತಂ
ಜಿನತರುಣಿಮತೈಕಮಾನಸಂ ಮಾನಿ ನೃಪಂ || ೮೨

ವ || ಒಂದು ದೆವಸಮಾನರೇಂದ್ರಚಂದ್ರಮನಮಂದಸೌಂದರ್ಯ ಮಂದಿರಮಾದ ಬಹಿರುದ್ಯಾನದ ನಿರ್ಜಂತುಕಸ್ಥಾನದೊಳ್ ಬಿಜಯಂಗೆಯ್ದಿರ್ದ ಸುಪ್ರತಿಷ್ಠ ಯತಿಶ್ರೇಷ್ಠನಂ ಪರಮ ತಪೋವರಿಷ್ಠನಂ ಸಂಯಮಿಸಮುದಾಯಸಮೇತನಂ ಸಮಸ್ತ ಭೂತಳಖ್ಯಾತನಂ ವನಪಾಳ ವಿಜ್ಞಾಪನದಿನಱಿದು ಪರಮ ಪ್ರಮೋದದಿಂ ಪೋಗಿ –

ಕಂ || ಮೂಮೆ ಬಲಗೊಂಡು ತನ್ಮುನಿ
ಕೋಮಳ ಪದಕಮಳಯುಗಳಮಂ ಪೂಜಿಸಿ ಸು
ತ್ರಾಮನಿಭಂ ಬಂದಿಸಿಯು
ದ್ದಾಮಾಶೀರ್ಜ್ಜುಷ್ಟನಾದನಂದುಪವಿಷ್ಟಂ || ೮೩

ವ || ಅನಂತರಂ ಕೃತಪರ್ಯನುಯೋಗನಾಭೂಗಧೀಶ್ವರಂ ಯೋಗೀಶ್ವರೋಪದೇಶದಿಂ ಜೀವಾದಿ ತತ್ವಸ್ಥಿತಿಯಮಂ ಚತುರ್ಗತಿಲತಾಕೃತಿಯುಮಂ ಸವಿಸ್ತರಮಱಿದು ವಿರಾಗ ವೃತ್ತಿಯೊಳ್ ನೆಱೆದು ವಿಷಯಾಮಿಷಾಭಿಲಾಷೆಯಂ ತೊಱೆದು ಪರಿಗ್ರಹಪಾಶಮಂ ಪಱಿದು ವಿನೂತಜಾತರೂಪತೆಯನಾಂತು ಮೆಱೆದು –

ಪೃಥ್ವಿ || ಮಹಾಬ್ರತವಿಭೂಷಿತಂ ಸಮಿತಿ ಸಂಗತಂ ಗುಪ್ತಿ ಸ
ದ್ಗೃಹಂ ಸದವನಪ್ರಿಯಂ ದೃಢಮನಷ್ಷಡಾವಶ್ಯಕಂ
ಸಹಿಷ್ಣು ಸಮಯಪ್ರಕಾಶನಸಮಗ್ರನಂ ಹಸ್ತಮೋ
ಪಹಂ ಮಹಿಮೆವೆತ್ತನಿಂತು ಹರಿಷೇಣಯೋಗೀಶ್ವರಂ || ೮೪

ವ || ಆ ಮಹಾನುಭಾವಂ ಭಾವಿತಾತ್ಮನಾಗಿ ನೆಗೞ್ದು ಸಲ್ಲೇಖನೆಯಿಂ ಸಮಾಧಿವಡೆದು ಮಹಾಶುಕ್ಲಕಲ್ಪದ ಪರಮಪ್ರೀತಿವರ್ಧಮಪ್ಪ ಪ್ರೀತಿವರ್ಧನ ವಿಮಾನದೊಳ್ –

ಕಂ || ಪ್ರೀತಿಂಕರನೆಂಬ ಸಮಾ
ಖ್ಯಾತಿಯ ದಿವಿಜೋತ್ತಮಂ ಮಹರ್ದ್ಧಿಕನಾದಂ
ಭೂತಳನುತ ಜಿನಪತಿ ಮತ
ಕೌತುಕಕರ ಪರಮತಪಕಿದಾವುದೊ ಗಹನಂ || ೮೫

ಮ || ಸುರನಾರೀ ನಯನಾರ್ತಿಕೌತುಕಕರ ಶ್ರೀರೂಪಸೌಂದರ್ಯಮಂ
ದಿರನುದ್ಯತ್ಸಹಜಾಂಬರಾಭರಣ ಮಾಲ್ಯಂ ಲಬ್ಧ ನಾನಾ ವಿನೋ
ದರಸಂ ದಿಬ್ಯ ಸಮಸ್ತಭೋಗನಿಯುತಂ ತಾನಾಗಿ ಸಂಸಾರ ನಿ
ರ್ಭರಸೌಖ್ಯಂ ಬಡೆದಂ ದಶಾರ್ಣವಮಿತಾಯುಷ್ಯಾವಸಾನಂ ಬರಂ || ೮೬

ವ || ಅಂತಾ ದೇವಂ ದೇವಲೋಕದನೇಕ ಭೋಗಂಗಳಂ ಭೋಗಿಸಿ ಕುಪಿತ ಕೃತಾಂತಾಕ್ರಾಂತ ನಪ್ಪುದುಂ ನಿಜಾಯುವಿನೊಡನೆ ಕನಕಚ್ಛಾಯಕಾಯಂ ಭೋಂಕೆನೆ ಕರಗಿ ದಿವದಿನವತರಿಸಿ ಕೌತುಕಾಕಾರಿಯಾದ ಧಾತಕೀಷಂಡದ ರೂಢಿಗೆ ಸಂದ ಮೂಡಣಮಂದರದ ಸರ್ವ ಸಂಪದ್ಗೇಹಮಾದ ಪೂರ್ವವಿದೇಹದ ನಿಷ್ಕಳಂಕಜನ ವಿಷಯಮಾದ ಪುಷ್ಕಲಾವತೀ ವಿಷಯದ ಪುಂಡ್ರೇಕ್ಷುವಣದಿನೆಸೆವ ಪುಂಡರೀಕಿಣೀಪುರದ ಸುಮಿತ್ರ ಧಾತ್ರೀಪಾಳಂಗಂ ಆತನ ಚಿತ್ತನೇತ್ರಪ್ರಿಯೆ ಸುಮಿತ್ರೆಗಂ ಪ್ರಿಯಮಿತ್ರನೆಂಬ ಪೆಸರಿನೆಸೆವ ಸುಪುತ್ರನಾಗಿ –

ಕಂ || ಕರಿತುರಗಾರೋಹಣದೊಳ್
ಶರಾಸನಾದ್ಯಾಯುಧ ಪ್ರವೀಣತೆಯೊಳ್ ಭಾ
ಸುರ ಶಾಸ್ತ್ರಾಭ್ಯಾಸದೊಳೆ
ನ್ನರುಮಂ ಮೆಚ್ಚಿಸುವನಾ ಕುಮಾರನುದಾರಂ || ೮೭

ವ || ಒಂದು ದೆವಸಂ –

ಕಂ || ಕ್ಷೇಮಂಕರಜಿನಪನ ಸು
ತ್ರಾಮಾರ್ಚಿತ ಸಮವಸರಣಮೆಯ್ತರೆ ಪರಮ
ಪ್ರೇಮದೆ ಬಂದಿಪ ಬಗೆಯಿಂ
ಭೂಮೀಶಂ ಸವಿಭವಂ ಸುಮಿತ್ರಂ ನಡೆದಂ || ೮೮

ವ || ಅಂತು ನಡೆದು ವಿನಯಜನ ಶರಣಮಂ ಭವಭವಹರಣಮಂ ಸಮವಸರಣಮಂ ಪೊಕ್ಕು ಭುವನತ್ರಯಸ್ವಾಮಿಯಂ ತ್ರಿಃಪ್ರದಕ್ಷಿಣಂಗೆಯ್ದು ನವ್ಯದಿವ್ಯಾರ್ಚನೆಗಳಿನರ್ಚಿಸಿ ಕೃತಸ್ತುತಿಶತಂ ವಿತತಗುಣಗಣಧರನಂ ಬಂದಿಸಿ ನಿಜೋಚಿತ ಕೋಷ್ಠದೊಳ್ ಕುಳ್ಳಿರ್ದು

ನಿರ್ದುಷ್ಟ ಶ್ರವ್ಯ ದಿವ್ಯ ಭಾಷಾಕರ್ಣನದಿಂ ತನಗೆ ಹೇಯೋಪಾದೇಯ ತತ್ವಮತ್ಯಂತಂ ವಿದಿತಮಾಗೆ ನಿಸ್ಸಾರ ಸಂಸಾರ ಶರೀರ ವೈರಾಗ್ಯಪರಾಯಣನಾಗಿ –

ಕಂ || ಪ್ರಿಯಮಿತ್ರಂಗೆ ಸಮಸ್ತೋ
ರ್ವಿಯ ರಾಜ್ಯಮನಿತ್ತು ಪರಮಪಾವನ ಜಿನದೀ
ಕ್ಷೆಯನಾಂತಂ ವೈರಾಗ್ಯೋ
ದಯಕ್ಕೆ ಭಾವಿಸುವವಂಗಮಿದೆ ಫಲಮಲ್ತೇ || ೮೯

ವ || ಇತ್ತಲ್ –

ಕಂ || ಗುರುವಿತ್ತ ರಾಜ್ಯಭರಮಂ
ಧರಿಯಿಸಿ ನಯ ವಿಕ್ರಮಂಗಳಿಂ ರಂಜಿಸಿದಂ
ಶರದಮಳ ಶಶಾಂಕಚ್ಛವಿ
ಗುರು ಕೀರ್ತಿವ್ಯಾಪ್ತ ದಿಕ್ಕನಾಪ್ರಿಯಮಿತ್ರಂ || ೯೦

ಚಂ || ಜನಿಯಿಸೆ ತನ್ನ ಪುಣ್ಯ ಪರಿಪಾಕದೆ ಭಾನುವ ಬಿಂಬಮಿಂತಿದೆಂ
ಬಿನಮೆಸೆವಾಯುಧಾಲಯದೊಳುತ್ಕಿರಣಂ ವರಚಕ್ರರತ್ನಮಾ
ಜನಪತಿ ದಿಗ್ಜಯಕ್ಕೆ ನಡೆದಾದಮೆ ಸಾಧಿಸಿದಂ ಷಡಂಶಭಾ
ಸುರಮನನುಕ್ರಮಂ ಧರಣಿಚಕ್ರಮನಪ್ರತಿಮಾನ ವಿಕ್ರಮಂ || ೯೧

ವ || ಅಂತಾ ಪ್ರಿಯಮಿತ್ರ ಚಕ್ರೇಶ್ವರಂ ತನಗೆ ಚತುರ್ದಶ ರತ್ನಂಗಳುಂ ನವನಿಧಿಗಳುಂ ಚತುರಶೀತಿಲಕ್ಷ ಭದ್ರಗಜಂಗಳುಂ ತಾವತ್ಪ್ರಮಿತ ರಥಂಗಳುಂ ಅಷ್ಟಾದಶ ಕೋಟಿ ಘೋಟಕಂಗಳುಂ ಚತುರಶೀತಿಕೋಟಿ ಪದಾತಿಗಳುಂ ಷಣ್ಣವತಿಸಹಸ್ರಾಂತಃ ಪುರಕಾಂತೆಯರುಂ ದ್ವಾತ್ರಿಂಶತ್ಸಹಸ್ರಗಣಬದ್ಧದೇವರುಂ ತತ್ಸಂಖ್ಯಾಪ್ರಮಿತ ಮೂರ್ಧಾಭಿಷಿಕ್ತ ಮಕುಟಬದ್ಧರುಂ ಮತ್ತಮನೇಕಪರಿಕರಂಗಳುಂ ಅಳವಟ್ಟೆಸೆಯೆ ದಶಾಂಗಭೋಗಾವ ಭಾಸಿತನುಂ ಪಂಚಶತಶರಾಸನೋತ್ಸೇಧದೇಹನುಂ ಪುಬ್ಬಕೋಟಿಸಂವತ್ಸರಪ್ರಮಿತಪರ ಮಾಯುಷ್ಯನುಮೆನಿಸಿ ನಿರಂತರಮೆಣ್ಬತ್ತು ಮೂಱುಲಕ್ಕೆ ಪುರ್ವಮತ್ಯಂತಲೀಲೆಯಿನರ ಸುಗೆಯ್ಯುತ್ತುಮಿರ್ದು –

ಕಂ || ಒಂದು ದಿನಂ ಮಣಿಮಯ ಮುಕು
ರುಂದದೊಳಾತ್ಮೀಯಕಾಯ ಶೃಂಗಾರಮನಾ
ನಂದದೆ ನೋಡುತ್ತಿರೆ ನರೆ
ಯೊಂದರಸಂಗಾಯ್ತು ಕಣ್ಬೊಲಂ ಮಸ್ತಕದೊಳ್ || ೯೨

ವ || ಅಂತು ಜರೋದಯಾಕಳಿತಮುಂ ಕರ್ಣಮೂಳೋಚ್ಚಳಿತಮುಂ ಅಪರವಯೋವಳಿ ತಮುಂ ಬುದ್ದಿವಿಶುದ್ಧಿಗಳಿತಮುಂ ಕರಣಪಾಟವಚಳಿತಮುಂ ದೌರ್ವಲ್ಯ ಫಳಿತಮುಂ ಮೃಣಾಳೋಜ್ವಳಿತಮುಮೆನಿಪ ಪಳಿತಂ ಪೞಿ ತನ್ನಂ ಪೊರ್ದದೆನಿಪ ಜನಪಶಿಖಾಮಣಿಯ ಲೋಚನಗೋಚರಮಾಗೆ

ಚಂ || ವಿಷಯಸುಖಂಗಳೊಳ್ ಮನಮನಿಟ್ಟು ನಿರಂತರಮಿನ್ನೆಗಂ ಮಹಾ
ವಿಷಮತರಂಗಳಪ್ಪ ಕರಣಂಗಳಧೀನತೆಯಿಂದೆ ಬಂದು ಕಿ
ಲ್ಮಿಷತತಿಗಾದೆನಾವಸಥಮೀ ವಸುಧೇಶತೆ ಕಷ್ಟಮೆಮದು ಸ
ದ್ವಿಷಯವಿದಂ ವಿರಾಗತೆಗೆ ಸಂದನನಿಂದಿತನಂದಿಳೇಶ್ವರಂ || ೯೩

ವ || ಮತ್ತಂ –

ಮಲ್ಲಿಕಾಮಾಲೆ || ಸಾವ ಪುಟ್ಟುವ ಕುತ್ತಮೊತ್ತುವ ಮುಪ್ಪು ಚಪ್ಪರಿಪೀಯವ
ಸ್ಥಾವಿಶೇಷಮೆ ತನ್ನ ಮೆಯ್ಸಿರಿಯಾದ ಸಂಸೃತಿವಾರ್ಧಿಯೊಳ್
ಜೀವಿಪಾಸೆ ಧನಾಸೆಯೆಂಬಪಗಂಟು ಪಣ್ಣಿದ ಕಣ್ಣಿಯಿಂ
ಜೀವನಂ ಗಡ ಕಟ್ಟೆ ನೆಟ್ಟನೆ ಕರ್ಮಮೞ್ದುಗುಮೊರ್ಮೆಯುಂ || ೯೪

ವ || ಎಂದು ಪರಮವೈರಾಗ್ಯರಸವಶವರ್ತಿಯಾದ ಚಕ್ರವರ್ತಿ ಸರ್ವಮಿತ್ರನೆಂಬ ನಿಜಾಗ್ರಪುತ್ರಂಗೆ ಧಾತ್ರೀಶತೆಯನಿತ್ತು ನಿರ್ವೇಗಪರಾಯಣರಾದ ಸಾಸಿರ್ವರರಸುಗಳ್ವೆರಸು –

ಕಂ || ಕ್ಷೇಮಂಕರತೀರ್ಥಕರನ
ಕೋಮಳ ಪದಕಮಳ ಸನ್ನಿಧಾನದೊಳಾಂತಂ
ಶ್ರೀಮಜ್ಜಿನದೀಕ್ಷೆಯನು
ದ್ದಾಮಗುಣಕ್ಷೇತ್ರನೆನಿಸಿದಾ ಪ್ರಿಯಮಿತ್ರಂ || ೯೫

ವ || ಅಂತಾ ಜಾತರೂಪಾಚಳಸ್ಥೈರ್ಯಂ ಜಾತರೂಪಾದಿಗಳೆಲ್ಲಮನುೞಿದು ಜಾತರೂಪ ಧರನಾಗಿ ಜಾತವಿವೇಕದಿಂ ಲಬ್ಧಪ್ರಶಂಸನಾಗಿ ಪರಮಸಂಯಮಧರನುಂ ವಿಶ್ರುತ ಶ್ರುತಧರನುಮೆನಿಸಿ ನೆಗೞ್ದು ನಿರತೀಚಾರಾಚರಣದಿಂ ನಿಜಾಯುರಂತಮನೆಯ್ದೆ –

ಕಂ || ಸುಕೃತಿನಿಳಯಂ ಸಹಸ್ರಾ
ರ ಕಲ್ಪದೊಳ್ ರುಚಿರಮಾದ ರುಚಾಕಾಖ್ಯವಿಮಾ
ನಕದೊಳ್ ಸೂರ್ಯಪ್ರಭ ಸಂ
ಜ್ಞಿ ಕನನಿಮಿಷಮುಖ್ಯನಾದನಾ ಮುನಿಮುಖ್ಯಂ || ೯೬

ಆ ಸುಮನಂ ಸುಜನೋಜ್ವಳ
ವಾಸೋಮಣಿಭೂಷಣೋಲ್ಲಸನ್ಮಾಲ್ಯಂ ಶೋ
ಭಾಸಂಪನ್ನಂ ಯೌವನ
ಭಾಸಿತನತಿ ಬಹಳ ಸುರಭಿಗಂಧಸಮೇತಂ || ೯೭

ವ || ಮತ್ತಮಾನಿಳಿಂಪಂ ವ್ಯಪಗತಧಾತುದೋಷನುಂ ಸಿತಸಿಂಧುವಾರಕುಸುಮಾಕಾರ ವರ್ಣ ವಿಶೇಷನುಂ ಚತುರರತ್ನಿಸಮುತ್ಸೇಧಶರೀರನುಂ ಶುಭಕರಲೇಶ್ಯಾಧಾರನುಂ ಅಷ್ಟಾದಶ ಸಾಗರೋಪಮಾಯುಷ್ಯಾಧೀನನುಂ ಅವಧಿಬೋಧನಿಧಾನನುಂ ಅಮರಾಂಗನಾಸರಸಮ ಧುರಶ್ರವ್ಯಶಬ್ಧ ಪ್ರವೀಚಾರಸುಖಸಾಗರನುಂ ಅಷ್ಟಾದಶಸಂವತ್ಸರಾಂತಸ್ಮೃತಾಮೃತಾ ಹಾರಾಭ್ಯವಹಾರನುಂ ನವಮಾಸಾಂತರಿತ ನಿರ್ಯತ್ಸುರಭಿನಿಶ್ವಾಸನುಂ ಅಣಿಮಾದಿಗುಣ ನಿವಾಸನುಮಾಗಿ –

ಮ || ತ್ರಿದಶಸ್ತ್ರೀನಯನೋತ್ಪಳೇಂದು ಸುರನಾರೀವಕ್ತ್ರನೀರೇಜ ಷ
ಟ್ಟದನ ಸ್ವಪ್ನವಧೂಘನಸ್ತನತಟ ಪ್ರೋತ್ತಾರಹಾರಂ ಮರು
ತ್ಸುದತೀ ಪೀನನಿತಂಬಬಿಂಬ ಕಳಕಾಂಚೀದಾಮನುದ್ಧಾಮ ಸಂ
ಪದನಾಕಳ್ಪಜನಿಂತನಲ್ಪಸುಖದೊಳ್ ತಾಂ ಮೂಡಿ ಮುೞ್ಕಾಡಿದಂ || ೯೮

ವ || ಅಂತಾ ದೇವಂಗೆ ಭಾವಭವಾಯತ್ತ ನಿರತಿಶಯ ಸುಖಸುಧಾಸೇವೆಯಿಂ ದೇವಾಯುಷ್ಯಾವ ಸಾನಮಾಗೆ –

ಕಂ || ವರ ಜಂಬೂದ್ವೀಪದ ಭಾ
ಸುರ ಭರತದ ಪೂರ್ವದೇಶಮೆಂಬೀ ಪೆಸರಿಂ
ಕರಮೆಸೆವ ದೇಶದೊಳ್ ಸು
ಸ್ಥಿರದಿಂ ಸಿತಕಚ್ಛಮೆಂಬ ಪುರಿ ರಂಜಿಸುಗುಂ || ೯೯

ಆ ರಾಜಧಾನಿಯೊಳ್ ಸಲೆ
ರಾರಾಜಿಪನವನತಾವನೀಪತಿಶತಚೂ
ಡಾರತ್ನೀಕೃತ ನಿಜಚರ
ಣಾರುಣಮಣಿ ಸಂದ ನಂದಿವರ್ಧನನೆಂಬಂ || ೧೦೦

ವೀರವತಿಯೆಂಬಳಂತಾ
ವೀರಾರಿವಿದಾರಿ ಧಾರಿಣೀರಮಣನ ಕಾಂ
ತಾರತ್ನಂ ಸ್ಮರಕರತರ
ವಾರಿ ಮನೋಹಾರಿಯಾಕೆಯೊಂದಾಕಾರಂ || ೧೦೧

ಆ ಜಂಪತಿಗಳ್ಗೆ ಕಳಾ
ರಾಜಿತಮತಿಗಳ್ಗೆ ತತ್ಸಹಸ್ರಾರದ ವಿ
ಭ್ರಾಜಿತ ಸುರವರನುರುತರ
ತೇಜಂ ನಂದನಸಮಾಖ್ಯನಂದನನಾದಂ || ೧೦೨

ನಂದನನನೊಂದೆನಾಲಗೆ
ಯಿಂದಂ ಬಂದಪುದೆ ಪೊಗೞಲುಂ ನಾಲಗೆಗಳ್
ಸಂದಣಿಸಿದ ವದನದ ಫಣಿ
ಸಂದೋಹಾಧೀಶ್ವರಂಗಮರಿದೆಂಬಿನೆಗಂ || ೧೦೩

ತ್ರಿವಿಧಿ || ನಂದನನಾಮದ ನಂದನನಂತಪ್ಪ
ನಂದನಂ ಜನಿಕೆ ತಮಗೆಂದು ಧರೆಯೊಳಾ
ನಂದದಿಂ ಬಯಸದವರಿಲ್ಲಾ || ೧೦೪

ಉ || ಆತಂ ನುತನ ಯೌವನೋದಯವಿರಾಜನ್ಮೂರ್ತಿ ಸತ್ಕೀರ್ತಿ ಸಂ
ಜಾತ ಶ್ವೇತದಿಶಾತಟಂ ವಿದಿತನಾನಾಶಸ್ತ್ರಶಾಸ್ತ್ರೋತ್ಕರಂ
ಚೇತೋಜಾತನಿಭಂ ಶುಭೈಕನಿಳಯಂ ಶೃಂಗಾರಸಾರಂ ದಯಾ
ನ್ವೀತಂ ಭೂತಳದಲ್ಲಿ ಪೆಂಪುವಡೆದಂ ಭವ್ಯಾದಿ ಭಾಳೇಕ್ಷಣಂ || ೧೦೫

ಚಂ || ವನನಿಧಿವೇಷ್ಠಿತಾವನಿಯೊಳಾವನಿವಂಗೆ ವಿಚಾರಿಪಂದು ಮಾಂ
ತನದಿನುದಾರದಿಂ ವಿಭವದಿಂ ನಯದಿಂ ಜಯದಿಂ ವಿವೇಕದಿಂ
ವಿನಯದಿನುತ್ತಮಾಚರಣದಿಂ ದೊರೆಯಪ್ಪವನೆಂದು ಕೂರ್ತು ತ
ನ್ನನೆ ಸಲೆ ಧಾತ್ರಿ ಕೀರ್ತಿಸೆ ವಿರಾಜಿಸಿದಂ ವಸುಧೈಕಬಾಂಧವಂ || ೧೦೬

ಗದ್ಯಂ

ಇದು ನಿಖಿಳಭುವನಜನವಿನೂತ ಸ್ಫೀತಮಹಿಮಾವದಾತ ವೀತರಾಗ ಸರ್ವಜ್ಞತಾ ಸಮೇತ
ಖ್ಯಾತಜಿನಸಮಯ ಕಮಳಿನೀ ಕಳಹಂಸಾಯಮಾನ ಮಾನಿತ
ಶ್ರೀ ನಂದಿಯೋಗೀಂದ್ರಪ್ರಸಾದ ವಾಚಾಮಹಿತ
ಕೇಶವರಾಜಾನಂದ ನಂದನ ವಾಣೀವಲ್ಲಭ ವಿಸ್ತಾರಿತಮಪ್ಪ
ವಸುಧೈಕಬಾಂಧವ ಶ್ರೀವರ್ಧಮಾನ ಪುರಾಣದೊಳ್
ನಂದನ ಕುಮಾರಕೋದಯವರ್ಣನಂ
ದ್ವಾದಶಾಶ್ವಾಸಂ