ಶ್ರೀರಮಣಂ ನಿಜನಿಖಿಳಕ
ಳಾರಸಿಕತೆಯಿಂದೆ ಭಾವಕರ್ಕಳ ಹೃದಯಾಂ
ಭೋರುಹಮನಲರ್ಚಿದನವ
ದಾರಿತರಿಪು ಪಂಚಪರಮಗುರುಪದವಿನತಂ || ೧

ಆ ನಂದನಂಗೆ ಪಿರಿದ
ಪ್ಪಾನಂದಮನೀಯಲಾರ್ಪ ವಲ್ಲಭೆಯಾದಳ್
ಮಾನಿನಿ ಮದನಪತಾಕೆ ಕ
ಳಾನಿಧಿ ತಾನೆನಿಸಿದಾ ಪ್ರಿಯಂಕರಿಯೆಂಬಳ್ || ೨

ವ || ಮತ್ತಮಾ ನಂದಿವರ್ಧನಮಹಾರಾಜಂ ನೀತಿವಿದನುಂ ಕವಚಹರನುಂ ಸುವಚೋವರನುಂ ಆದ ಸುಕವಿನಿಕರಶುಕನಂದನದೊಳ್ ನಿಜನಂದನನೊಳ್ ನಂದನನೊಳ್ ಸಕಳರಾಜ್ಯಧುರಂಧತೆಯಂ ನಿಯೋಜಿಸಿ-

ಕಂ || ಮನಜಿಜಕೇಳೀಸೌಖ್ಯಮ
ನನುಭವಿಸಿದನನುಪಮಾನ ಶೃಂಗಾರರಸಾ
ವನಿಯೆನಿಸಿದ ವೀರವತೀ
ವನಿತೆಯೊಳನುದಿನಮನೂನ ವಿಭವವಿಳಾಸಂ || ೩

ಆ ಪೃಥ್ವಿವೀಶಂ ಪ್ರಾಸಾ
ದೋಪರಿಮ ಸ್ಥಳದೊಳೊರ್ಮೆ ಕುಳ್ಳಿರ್ದು ಜಗ
ದ್ವ್ಯಾಪಿ ಯಶೋನಿಧಿ ನಿಖಿಳ ದಿ
ಶಾಪಟಳ ವಿಳೋಕನ್ಯೆಕರತನಿರ್ಪಿನೆಗಂ || ೪

ಗಗನಪಯೋನಿಧಿಯೊಳು ಮಿಗೆ
ಸೊಗಯಿಪ ನೊರೆವಿಂಡಿದೆನಿಪ ಪಾಂಡುರವರ್ಣಂ
ಮುಗಿಲೊಗೆದು ವಿಚಿತ್ರತರಂ
ಜಗದೀಶನ ಬಗೆಗೆ ಪಡೆದುದತಿ ಕೌತುಕಮಂ || ೫

ಮಲ್ಲಿಕಾಮಾಲೆ || ನೋಡೆ ನೋಡೆ ತದಂಬುದಂ ಕ್ಷಣಮಾತ್ರದೊಳ್ ಕರಗಿತ್ತದಂ
ನೋಡುತಿರ್ದ ವಸುಂಧರಾರಮಣಂಗೆ ಭಾವದೊಳಾವಗಂ
ಮೂಡಿದತ್ತು ವಪುರ್ವಿಳಾಸವಯೋವಿಭೂತಿಗಳಿನ್ನವೆಂ
ಬೀಡಿತಂ ಸಫಳಂ ವಿರಕ್ತಿ ವಿಮುಕ್ತಿಸಂಗಮಕಾರಣಂ || ೬

ಕಂ || ಆಸನ್ನಭವ್ಯತಾಗುಣ
ಭಾಸಿತನೆನಿಸಿದ ಬುಧಂಗೆ ಸಂಸಾರಂ ಸಂ
ತ್ರಾಸಕರಮೆನಿಸದದು ಸುಖ
ವಾಸಂ ತನಗೆಂಬ ಬಗೆಯನೇಂ ಮಾಡುಗುಮೇ || ೭

ವ || ಅಂತು ವೈರಾಗ್ಯವರ್ಧನನಾದ ನಂದಿವರ್ಧನಂ ವಿನಯವಚನಾಮೃತಸ್ಯಂದನಂಗೆ ನಂದ ನಂಗೆ ವಿಭವಪ್ರಾಜ್ಯಮಂ ನಿಜರಾಜ್ಯಮನಿತ್ತು ವಿಗತತಂದ್ರನಂ ಪಿಹಿತಾಸ್ರವ ಮುನೀಂದ್ರನಂ ಪೊರ್ದಿ ಜಗದ್ವರ್ಯಮಂ ದೈಗಂಬರ್ಯಮಂ ತಳೆದು –

ಕಂ || ಅಪಗತ ಬಾಹ್ಯಾಭ್ಯಂತರ
ವಿಪುಳ ಪರಿಗ್ರಹ ದುರಾಗ್ರಹ ಗ್ರಹನುದ್ಯ
ತ್ತಪದೊಳ್ ನೆಗೞುತ್ತಿರ್ದಂ
ಸ್ವಪರಮತವಿಭಾವನಾಪಟು ಪ್ರತಿಭಾನಂ || ೮

ವ || ಮತ್ತಮಿತ್ರಮಾ ನಂದನಜನೇಶ್ವರಂ ವಿಶ್ವಜನತಾನಂದನಂದನನುಂ ಭೋಗೈಶ್ವರ್ಯ ಸಂಕ್ರಂದನನುಮಾಗಿ ನಂದನೆಂಬ ಪ್ರಿಯನಂದನನಂ ಪಡೆದು ಪ್ರಿಯಂಕರೀ ಮಹಾದೇವಿಯುಂ ತಾನುಂ ಅನ್ಯೂನ ಭೋಗೋಪಭೋಗಾನುಭೂತಿಯಿಂ ಪ್ರೀತಿವೆತ್ತು ನಿಜಾಜ್ಞಾನಿಯಮಿತಾನೇಕಮಂಡಳಿಕ ನಿಕಾಯನಾಗಿ ರಾಗದಿಂ ವರ್ತಿಸುತ್ತುಮಿರೆ –

ಮಾಳಿನೀ || ಅಳಿಶುಕಪಿಕರಾಗಾರಾವರಾಜದ್ದಿಗಂತಂ
ಮಳಯಪವನಪಾತೋದ್ಭೂತ ನಾನಾಲತಾಂತಂ
ಬಳವದತನುಚಕ್ರಾಧೀಶ ವಿಕ್ರಾಂತಕಾಂತಂ
ಬಳೆದುದಿಳೆಗೆ ಲೀಲಾಕಾರಿ ಸಂತಂ ವಸಂತಂ || ೯

ಚಂ || ಅಸುಕೆ ಮುಸುಂಕೆಕೆಂದಳಿರ್ಗಳಿಂ ವಕುಳಂ ಮುಕುಳಂಗಳಿಂ ವಿರಾ
ಜಿಸೆ ಫಳನಮ್ರಮಾಮ್ರತತಿ ಕಮ್ರತೆವೆತ್ತಿರೆ ಸುತ್ತಲುಂ ಪ್ರಕಾ
ಶಿಸೆ ಪೊಸಜೊನ್ನದುನ್ನತಿಗೆ ಕಂತುಗೆ ಸಂತಸಮಾಗೆ ಬೇಗೆ ದ
ಳ್ಳಿಸೆ ಪಥಿಕಾಳಿಗಿಂತಿಳೆಗೆ ಪೆತ್ತುದು ಚೈತ್ರಮತೀವ ಚಿತ್ರಮಂ || ೧೦

ವ || ಅಂತು ಜಗತ್ಕಾಂತಮುಂ ವಿದಗ್ಧವಿಶ್ರಾಂತಮುಮಾದ ವಸಂತಸಮಯದೊಳ್ ಬಹಳ ಶೋಭಾನಿಧಾನಮಾದ ಬಹಿರುದ್ಯಾನದಲ್ಲಿ-

ಕಂ || ಸವಿರಾಗಂ ಸುಮನೋವೈ
ಭವಂ ಸನಿರ್ಮಳದಿಗಂಬರಂ ಸಫಳ ಭವಂ
ಭುವನೋತ್ತಮಂ ವಸಂತೋ
ತ್ಸವ ಸದೃಶಂ ಪ್ರೋಷ್ಠಿಲಂ ಮುನೀಂದ್ರಶ್ರೇಷ್ಠಂ || ೧೧

ಸಕಳ ಸುರಾಸುರ ನರಮಾ
ನಕಂಜಸಂತಾನ ತುಹಿನಕರನಂ ಸ್ಮರನಂ
ತ್ರಿಕರಣಶುದ್ಧಿ ಸಮೃದ್ಧಿ
ಪ್ರಕಾಶ ಪೇಶಲ ತಪೋಗ್ನಿಯಿಂದಳುರ್ದದಟಂ || ೧೨

ಬಿಜಯಂಗೆಯ್ದಿರೆ ವನಪಾ
ಳಜನದ ಬಿನ್ನಪದಿನಱಿದು ಬಂದಿಸಲೆಂದಾ
ಸುಜನಾಗ್ರಣಿ ನಂದನ ಭೂ
ಭುಜಂ ಮಹಾವಿಭವದಿಂದಮಂದೆಯ್ತಂದಂ || ೧೩

ವ || ಆಗಳ್ –

ಚಂ || ಯತಿಪತಿಸನ್ನಿಧಾನದೊಳೆ ದೀಕ್ಷೆಯನಾಂತಪನಿಂದು ನಮ್ಮಸ
ತ್ಪತಿ ಸೊಬಗಂ ಸುರೂಪನಿರವೆಂತುಗೆ ಪೇೞ್ ನಮಗೆಂದು ತತ್ಪುರೀ
ಸತಿಯೊಡನಾ ಮನೋಹರ ವನಾಂಗನೆ ವಿಹ್ವಳೆ ಸಂಭ್ರಮೋಕ್ತಿಯಿಂ
ಕತಿಯಿಸುವಂತೆ ಪೊಣ್ಮಿದುದು ಕೋಕಿಳ ಕೀರ ಮದಾಳಿ ನಿಸ್ವನಂ || ೧೪

ವ || ಅಂತು ವಿವಿಧ ವಿಹಗ ವಿರುತಿ ವಾಚಾಳಿತಮುಂ ಮಂದಮಂದ ವಿಹರತ್ಸುರಭಿಗಂಧಿ ಗಂಧವಹಾಂದೋಳಿತಮುಮೆನಿಸಿ ಸೊಗಯಿಪವುಪವನಾವನಿಯನನುನಯದಿಂ ಪೊಕ್ಕು –

ಕಂ || ತಾರಗೆಗಳ ನಡುವಿರ್ದಾ
ತಾರಾಪತಿಯಂತೆ ಯತಿಜನಂಗಳ ನಡುವಿ
ರ್ದಾ ರಂಜಿತ ಯತಿಪತಿಯಂ
ಭೂರಿಯಶಂ ನೋಡಿ ನಾಡೆಯುಂ ಮುಯ್ವಾಂತು || ೧೫

ವ || ಅನಂತರಂ ತನ್ನಹೀಶನುನ್ಮೂಳಿತ ಮನ್ಮಥ ಮಹಾಮದೇಭದಂತನಂ ವಿನಯವಿಚಕ್ಷಣಂ ತ್ರಿಪದಕ್ಷಿಣಂಗೆಯ್ದು-

ಕಂ || ಜಳಗಂಧಾಕ್ಷತ ಕುಸುಮಾ
ವಳಿ ವರಚರು ಧೂಪ ದೀಪ ಫಳಕುಳದಿಂದಂ
ಮಳಕುಳ ವಿಳಯನ ಯತಿಪನ
ಚಳನಮನವಿಚಳಿತ ಭಕ್ತಿಯಿಂ ಪೂಜಸಿದಂ || ೧೬

ಬೞಿಕಮಳಕಂಗಳಳಿಕುಳ
ವಿಳಾಸಮಂ ಯಮಿನ ಚಳನ ನಳಿನಯುಗಳದೊಳ್
ತಳೆದಿರೆ ಬಂದಿಸಿ ತದ್ಭೂ
ತಳಪತಿ ತತ್ಸನ್ನಿಧಾನದೊಳ್ ಕುಳ್ಳಿರ್ದಂ | ೧೭

ವ || ಅಂತು ತದೀಯ ಪಾವನಮೃದುಪದಸ್ಪರ್ಶನದಿಂ ಪವಿತ್ರಮಾದ ಧಾತ್ರೀತಳಮನಳಂಕರಿಸಿ ಕರಕಮಳಯುಗಳಮಂ ಮುಗಿದು ಕೃತಪ್ರಶ್ನಂ ಗುರುನಿರೂಪಿತ ಚತುರ್ಗತಿ ಸ್ವರೂಪ ಮುಮಂ ಪುರೂರವ ಮರೀಚಿ ಮೊದಲಾದ ತನ್ನ ಮುನ್ನಿನ ಜನ್ಮಕಳಾಪಮುಮಂ ಸವಿಸ್ತರಮಱಿದು –

ಕಂ || ಜನನ ಜರಾಮರಣಂಗಳ್
ನನುಭವಿಸುತ್ತುಂ ಚತುರ್ಗತಿಯೊಳ್ ದುಃಖಾ
ವನಿಯೆನಿಪ ಜೀವನಕಟಾ
ಕನಸಿನೊಳಂ ಸ್ವಾತ್ಮಸೌಖ್ಯಮಂ ಪಡೆದಪನೇ || ೧೮

ಅವಿವೇಕಮೆಂಬ ಘೋರಾ
ರ್ಣವದ ಮಹಾವರ್ತಗರ್ತದೊಳ್ ಬಿೞ್ದ ಸುಭೃ
ನ್ನಿ ವಹಕ್ಕೆ ತಾನದೆತ್ತಣ
ದೊ ವಿಚಾರಿಸೆ ನಿರುಪಮಾನ ಪರಮಸ್ವಾಸ್ಥ್ಯಂ || ೧೯

ಭೂದೇವ ಪ್ರತಿಪಾದಿತ
ವೇದೋದಯದಂತೆ ತನ್ನ ಬಸದಾಗಲೊಡಂ
ವೇದೋದಯಮಘಕೃತಮಂ
ದೇದೊರೆಯನುಮಂ ತೊಳಲ್ಬುಗುಂ ಸಂಸೃತಿಯೊಳ್ || ೨೦

ಭಾವಿಸೆ ಸಂಸೃತಿಯೊಳ್ ಸಲೆ
ಜೀವಂ ದುಷ್ಕರ್ಮನಿಕರ ನಿರ್ಮಿತಮಂ ನಾ
ನಾವಿಧ ದುಸ್ಸಹದುಃಖಮ
ನಾವಗಮನುಭವಿಕುಮನಘ ಜಿನಮತಬಾಹ್ಯಂ || ೨೧

ವ || ಎಂದಾ ಮಹಾನುಭಾವಂ ತನ್ನೊಳೆ ಪರಿಭಾವಿಸುತ್ತುಮತ್ತನಾ ಯೋಗ್ಯ ವೈರಾಗ್ಯಮಾರ್ತಂ ಡಮಂಡಳಮಂಡಿತಾಂತರಂಗ ರೋದೋರಂಗನಾಗಿ –

ಉತ್ಸವ || ನಂದನೆಂಬ ನಾಮದಿಂದಮೊಪ್ಪುತಿರ್ಪ ತನ್ನ ಸ
ನ್ನಂದನಂಗೆ ಸಂದ ಭೂತಳಾಧಿಪತ್ಯಮಂ ಮಹಾ
ನಂದದಿಂದಮಿತ್ತು ತತ್ತಪಸ್ವಿಸನ್ನಿಧಾನದೊಳ್
ನಂದನಾವನೀಶನಾಂತನಂದು ಜೈನದೀಕ್ಷೆಯಂ || ೨೨

ಮ || ಬ್ರತಮಯ್ದುಂ ತನಗೊಚ್ಚತಂ ಸಮಿತಿಯಯ್ದುಂ ತನ್ನೊಳತ್ಯುನ್ನತಂ
ಹಿತಸಂಪಾದನ ಗುಪ್ತಿ ಮೂಱುಮನಿಸಂ ತನ್ನಲ್ಲಿ ಸಂಪನ್ನಮ
ನ್ವಿತಮಾಱುಂ ತೆಱದಿಂದೆ ರೂಢಿವಡೆದಿರ್ದಾವಶ್ಯಕಂ ತನ್ನೊಳಾ
ರ್ಹತ ಯೋಗೀಶ್ವರನಾಂತನಿಂತು ಜಸಮಂ ಚಾರಿತ್ರಚಕ್ರೇಶ್ವರಂ || ೨೩

ಕಂ || ಗತಗೌರವತ್ರಿತಯನು
ಜ್ಝಿತದಂಡತ್ರಿತಯನಸ್ತಶಲ್ಯತ್ರಿತಯಂ
ಚ್ಯುತಮಿಥ್ಯಾತ್ರಿತಯಂ ಸಂ
ಶ್ರಿತ ರತ್ನತ್ರಿತಯನೆಸೆದನಾ ಮುನಿಮುಖ್ಯಂ || ೨೪

ವ || ಅಂತು ವಿಪಶ್ಚಿನ್ನುತ ದುಶ್ವರಣ ಪರಿಣತಂ ಪ್ರಾಜ್ಞ ಮನೋಜ್ಞ ಗುರುಜನಾನುಜ್ಞೆ ಯಿನೇಕವಿಹಾರಿಯುಂ ಉಭಯ ನಯಾಯತ್ತಚಿತ್ತನುಂ ತ್ರಿಕರಣಶುದ್ಧನುಂ ಚತುರ್ವಿಧ ಮಂಗಳೋತ್ತಮ ಚರಣಸ್ಮರಣ ಪರಿಣತಾಂಕಃಕರಣನುಂ ಪಂಚಶರ ಭಯಂಕರನುಂ ಷಡ್ಜೀವನಿಕಾಯ ದಯಾನಿಯತನುಂ ಸಪ್ತಭಯವಿಮುಕ್ತನುಂ ಅಷ್ಟಮದರಹಿತನುಂ ನವವಿಧ ದೇವವ್ರತ ಪ್ರತಿಪಾಳಕನುಂ ದಶಕುಶಲಧರ್ಮಹರ್ಮ್ಮ್ಯನುಂ ಏಕಾದಶಾಂಗ ಶ್ರುತ ಸಂಗತನುಂ ದ್ವಾದಶತಪೋರಮಾರಮಣನುಂ ತ್ರಯೋದಶಾಚಾರ ಚಾರುಭೂಷಣನುಂ ಚತುರ್ದಶ ಮಳವಿಹೀನನುಂ ತ್ರಯೋದಶಾಚಾರ ಚಾರು ಭೂಷಣನುಂ ಚತುರ್ದಶ ಮಳವಿಹೀನನುಂ ಪಂಚದಶ ಪ್ರಮಾದ ವರ್ಜಿತನು ಮಾಗಿ ಸಮುಪಲಬ್ಧಿ ಕೇವಳಿದರ್ಶನಂ ದರ್ಶನವಿಶುದ್ಧಿಪ್ರಭೃತಿ ಸಮುದಿತ ಷೋಡಶಭಾವನೆಗಳಿಂ ಭುವನತ್ರಯಾತಿ ಕೌತುಕ ಸಮರ್ಥತೀರ್ಥಕರಾಗಣ್ಯ ಪುಣ್ಯಹೇತುಭೂತಂಗಳಂ ಭಾವಿತಾತ್ಮನಾವಗಂ ಭಾವಿಸುತ್ತುಂ ವಾಸವಪೂಜ್ಯ ವಾಸುಪೂಜ್ಯತೀರ್ಥಸಂತಾನಮಂ ವಿನಯಜನಫಳಿತ ಸಂತಾನಮಂ ತಾನೆ ಬೆಳಗಿ ಪಲಕಾಲಮನತಿಶಯಚಾರಿತ್ರದೊಳ್ ವರ್ತಿಸಿ –

ಕಂ || ತನ್ನಾಯುವಿನವಸಾನದೊ
ಳುನ್ನತ ವಿಂಧ್ಯಾಚಳಾಗ್ರಗತನತಿಮುದದಿಂ
ಸನ್ನುತಮಂ ಮುಕ್ತಿಪದಾ
ಸನ್ನಂ ಪ್ರಾಯೋಪಗಮನವಿಧಿಯಂ ತಳೆದಂ || ೨೫

ಉದಿತಕ್ಷುತ್ತೃಷ ಶೀತೋ
ಷ್ಣ ದಂಶಮಶಕಾದಿ ಬಹುಪರೀಷಹಮಂ ಧೈ
ರ್ಯದಮೇರು ಸೈರಿಸಿದನೊದ
ವಿದ ಭಾವನೆಯಿಂದಮೊಂದುತಿಂಗಳ್ವರೆಗಂ || ೨೬

ವ || ಅಂತಾ ಶಾಂತಾತ್ಮನಂತರಾಯಮಿಲ್ಲದೆ ನೋಂತು ಪರಿತ್ಯಕ್ತಶರೀರಭಾರನಾಗಿ –

ಕಂ || ಷೋಡಶಕಲ್ಪದೊಳಾದಂ
ರೂಢಿಯ ತಾನೀಶನೆಸೆವ ಪುಷ್ಪೋತ್ತರಮೆಂ
ಬೀಡಿತ ವಿಮಾನದೊಳ್ ವಿಭ
ವಾಡಂಬರನಿಂದ್ರನಾದನಾ ಯೋಗೀಂದ್ರಂ || ೨೭

ಚಂ || ಹಿಮಕರಬಿಂಬಮಂ ವಿಗತಲಾಂಛನಮಂ ಕಡೆದಬ್ಜಸಂಭವಂ
ಪ್ರಮರದೆ ಮಾಡಿದಂ ಸುರನ ಸುಂದರರೂಪಮನೆಂಬಿನಂ ಸುಕಾಂ
ತಿಮಯ ನಿಕಾಮ ಕೋಮಳತರಂ ಸಹಜಾಂಬರರತ್ನಭೂಷಣೋ
ದ್ಗಮಮಮರಾಗ್ರಗಣ್ಯನ ತನೂದಯಮಾದುದು ಕೌತುಕಪ್ರದಂ || ೨೮

ವ || ಅಂತಾ ನಿರ್ಮಳಸ್ವಾಂತನಚ್ಚುತಕಲ್ಪದೊಳನಲ್ಪಲೀಲಾರುಂದ್ರಮೆನಿಪಿಂದ್ರಪದವಿಯಂ ಪಡೆದು ತ್ರಾಯಸ್ತ್ರಿಂಶಸಾಮಾನಿಕಾದಿ ವಿವಿಧಭೇದಸುರಪರಿಷತ್ಪರಿವೃತನುಂ ತ್ರಿಹಸ್ತೋತ್ಸೇಧ ಕಮನೀಯಕಾಯನುಂ ದ್ವಾವಿಂಶತಿಸಹಸ್ರಸಂವತ್ಸರಾವಧಿಸ್ಮೃತಾಮೃತಾಮೃತಾಹಾರನುಂ ಏಕಾದಶಮಾಸಾವಸಾನ ನಿರ್ಯತ್ಸುರಭಿನಿಶ್ವಾಸನುಂ ದಿವ್ಯಕಾಂತಾಸಂತತಿ ಸಂತತ ಕಂತುಕ್ರೀಡಾಕ್ರಾಂತಸ್ವಾಂತನುಮಾಗಿ –

ಕಂ || ಆ ವಿಕಸದ್ದಿವಿಜೇಶನ
ನಾವಿಳಮೆನಿಸಿದ ಮನಃಪ್ರವೀಜಾತಸುಖ
ಕ್ಕಾವಗಮಾಸ್ಪದಮಾದಂ
ದ್ವಾವಿಂಶತಿಸಾಗರೋಪಯಾಯುಷ್ಯಯುತಂ || ೨೯

ಪೃಥ್ವೀ || ಸುರೂಪಸುರಸುಂದರೀಜನಮನಸ್ಸರೋಜಾಕರೈ
ಕರಮ್ಯನನಿಶಂ ಜಿನೇಂದ್ರಪದಪದ್ಮ ಸೇವಾರತಂ
ನಿರಾಮಯಭಯಂ ಪ್ರಭಾಸ್ವದವಧಿ ಪ್ರಬೋಧೋದಯಂ
ವಿರಾಜಿಸುತುಮಿಂದ್ರನಿಂತು ಪದೆದಿರ್ದನಿರ್ಪನ್ನೆಗಂ || ೩೦

ವ || ಇತ್ತಲ್ –

ಶಾ || ಜಂಬೂದ್ವೀಪವಿರಾಜಮಾನ ಭರತಾರ್ಯಾಖಂಡದೊಳ್ ಸಂತತಂ
ಜಂಬೂ ಚಂಪಕ ಚೂತ ಮುಖ್ಯ ತರುಜಾತೋದ್ಯಾನ ಸಂತಾನದಿಂ
ಬಿಂಬೋಷ್ಠೀ ನಿಕುರುಂಬದಿಂ ಪುರುಷರತ್ನಾನೀಕದಿಂ ಗೋಮಿನೀ
ಸಂಬಂಧಂಬಡೆದಿರ್ಪುದುಂಟು ವಿಳಸದ್ದೇಶಂ ವಿದೇಹಾಹ್ವಯಂ || ೩೧

ವ || ಅಂತು ಸಕಳ ಸಂಪತ್ತಿಪದಮೆನಿಪ ಜನಪದಂ ಖಳವೃತ್ತಿ ಕೇದಾರಂಗಳೊಳ್ ಕುಟಿಲಭಾವಂ ಭಾಮಿನೀಕುಂತಳಂಗಳೊಳ್ ಮಧುಪ್ರಳಾಪಂ ಜಳಜಾಕರದೊಳ್ ಪಂಕಸ್ಥಿತಿ ಕಳಮಶಾಳಿವನಂಗಳೊಳ್ ಕರಾಭಿಘಾತಂ ಮುರಜಂಗಳೊಳ್ ವಿದ್ರುಮ ಲಕ್ಷ್ಮಿ ವಧೂಮಧುರಾಧರಂಗಳೊಳಲ್ಲದೆ ತನ್ನೊಳ್ ಮತ್ತೆಲ್ಲಿಯುಮಿಲ್ಲೆನಿಪ ಮೆಯ್ಮೆಯಂ ತಳೆದುದಂತುಮಲ್ಲದೆಯುಂ –

ಕಂ || ಅನಪೇತ ಪದ್ಮಮಾಶ್ರಿತ
ಘನತೃಷ್ಣಾಚ್ಛೇದಿ ವಿಮಳಿನದ್ವಿಜಸೇವ್ಯಂ
ಜನಿತ ಪ್ರಸಕ್ತಿ ಸಲೆ ಸ
ಜ್ಜನಮಂ ನೆನೆಯಿಸುವುದದಱ ಸರಸೀನಿಕರಂ || ೩೨

ವ || ಅಂತು ನಿತಾಂತಮೆಂತು ನೋೞ್ಪೊಡಂ ಕಾಂತಮೆನಿಪ ತಜ್ಜನಪದದೊಳ್ –

ಕಂ || ಅಸದೃಶ ವಿಶದ ಮಹತ್ವದಿ
ನೆಸೆವುದು ಭಾಸ್ವತ್ಕಳಾಧರಂ ಬುಧಯುತಮೀ
ಕ್ಷಿಸೆ ನಿಖಿಳವಸ್ತುಧೃತಮಾ
ಗಸಕ್ಕೆ ದೊರೆಯೆನಿಸಿ ಕುಂಡಪುರಮೆಂಬಪುರಂ || ೩೩

ಪರಿಧಿಯ ಶಿಖರಂಗಳ ಪ
ದ್ಮರಾಗರುಚಿ ಪುದಿದ ತತ್ಪುರೀವರದ ಪಯಃ
ಪರಿಖಾವಳಯಂ ಮಿಗೆ ಬಿ
ತ್ತರಿಪುದು ಪಗಲೊಳಮುದಭ್ರ ಸಂಧ್ಯಾಭ್ರಮಮಂ || ೩೪

ಚಂ || ಅವಿಕಳ ಮೌಕ್ತಿಕಾಭರಣ ಭೂಷಣಕಾಂತಿಗಳಿಂ ದಿಗಂತಮಂ
ಧವಳಿಸುತಂತುಮಿಂತುಮತಿಸಮ್ಮದದಿಂ ಮದದಿಂ ಸಮಂಥರೋ
ದ್ಭವಗತಿಯಿಂ ಸಮಂತು ಸುೞಿವುಜ್ವಳಪೂರ್ಣಶಶಾಂಕವಕ್ತ್ರೆಯರ್
ಸುವಿಮಳ ಚಂದ್ರಕಾಪ್ರಸರಮಂ ದಿನದಲ್ಲಿಯುಮಲ್ಲಿ ಬೀಱುವರ್ || ೩೫

ಮ || ಇರುಳೊಳ್ ಕೞ್ತಲೆಯಂ ನಿವಾಸಗತಮಂ ಕಾಂತಾಜನಾನೂನ ಭಾ
ಸುರರತ್ನಾಭರಣಾಂಶುಗಳ್ ಬಿಡದೆ ತೂಳ್ದುತ್ತಿರ್ಪುದಂ ಕಂಡು ತ
ತ್ಪುರದೊಳ್ ದೀಪ್ತಿಗಳಂಧಕಾರಹರಣ ವ್ಯಾಪಾರಮಂ ಬಿಟ್ಟು ಬಿ
ತ್ತರಿಸುತ್ತಿರ್ಪುವು ನೇತ್ರಪಥ್ಯಮೆನಿಸಿರ್ದೊಂದಂಜನೋತ್ಪತ್ತಿಯಂ || ೩೬

ವಿನತಾನೇಕನೃಪಾಳಮೌಳಿ ವಿಳಸನ್ಮಾಣಿಕ್ಯಭಾಭಾರ ಪಾ
ವನ ಬಾಳಾತಪ ಚುಂಬಿತಾಂಘ್ರಿಕಮಳಂ ಧೀವಿಕ್ರಮಾಕ್ರಾಂತ ಶ
ತ್ರುನಿಕಾಯಂ ನಿರವದ್ಯ ಚಾರುಚರಿತಂ ಸಿದ್ಧಾರ್ಥನೆಂಬಂ ಮಹಾ
ಜನಪಂ ತನ್ನಗರೀವರಕ್ಕಧಿಪನಾದಂ ಪುಣ್ಯಸಂಪಾದಕಂ || ೩೭

ಕಂ || ಆತನ ಮತಿಪ್ರಕಾಶಂ
ನೀತಿಯನಾ ನೀತಿ ಧರೆಯನಾ ಧರೆ ಕನಕ
ಬ್ರಾತಮನಾ ಕನಕೌಘಂ
ಖ್ಯಾತ ಸುತೀರ್ಥಂಗಳಂ ಪ್ರವರ್ದ್ಧಿಸುತಿರ್ಕುಂ || ೩೮

ಪಾರ್ಥಿವ ಚೂಡಾರತ್ನಂ
ತೀರ್ಥಕರೇಂದೂದಯಾಚಳಂ ಪ್ರಾಪ್ತಾನೇ
ಕಾರ್ಥಂ ಪರಿಪಾಳಿತ ಬುಧ
ಸಾರ್ಥಂ ಸಿದ್ಧಾರ್ಥನೆಳೆಯೊಳಲ್ತೆ ಕೃತಾರ್ಥಂ || ೩೯

ಅರಿವಂಶವಂಶದಾವಂ
ಸುರುಚಿರ ನಿಜಕುಲಕುಲಾದ್ರಿಮಣಿಶಿಖರಂ ಭೀ
ಕರತರ ತರವಾರಿ ಮನೋ
ಹರ ಹರಹಾಸ ಪ್ರಕೀರ್ತಿಯೆನಿಪಂ ಜನಪಂ || ೪೦

ಪ್ರಿಯಕಾರಿಣಿಯೆಂಬಳ್ ಸ್ಮರ
ಜಯಕಾರಿಣಿ ಪುಣ್ಯಪುಂಜಚಾರಿಣಿ ವಿದ್ವ
ಚ್ಚಯ ಚೇತೋಹಾರಿಣಿ ಶೋ
ಭೆಯ ಧಾರಿಣಿ ಚಾರುಚರಿತೆ ತತ್ಪ್ರಿಯೆಯಾವಳ್ || ೪೧

ಚಂ || ಮಿಸುಗುವ ಜೊನ್ನಮಿಂತು ವನಿತಾಕೃತಿವೆತ್ತುದೊ ಪೇೞ್ ಪಗಲ್ ವಿರಾ
ಜಿಸುಗುಮೆ ಸದ್ಗದಗ್ಗದ ಸತೀನುತರೂಪಮದಿಲ್ಲಿ ಬಂದು ವ
ರ್ತಿಸುವೊಡ ಪಕ್ಷ್ಮಪಾತಮಿದು ತೋರ್ಕುಮೆ ಪೇೞೆನುತುಂ ಲತಾಂಗಿಯಂ
ಪೊಸತು ಜನಂ ನಿರೀಕ್ಷಿಸಿ ವಿಸ್ಮಯದಂತಮೆಯ್ದುಗುಂ || ೪೨

ಕಂ || ಆಕೆಯನಂಗಜವಿಜಯಪ
ತಾಕೆಯನಭಿಮಾನ ದಾನಶೀಲ ಗುಣಾನೀ
ಕೌಕೆಯನನವಧಿ ಪುಣ್ಯ
ಶ್ಲೋಕೆಯನುದ್ಯದ್ವಿವೇಕೆಯಂ ಪೊಗೞದರಾರ್ || ೪೩

ವರವಿಭವಂ ಧರ್ಮಾರ್ಥಾ
ವಿರೋಧಮಂ ಕಾಮಸುಖಮನಾ ಕಾಮಿನಿಯೊಳ್
ಧರಣೀಶಂ ಸಿದ್ಧಾರ್ಥಂ
ಪರಿಭೋಗಿಸುತಿರ್ದನಿರ್ಪುದುಂ ಮತ್ತತ್ತಲ್ || ೪೪

ವ || ಮುಂ ಪೇೞ್ದ ಪುಷ್ಪೋತ್ತರವಿಮಾನಪತಿಯಪ್ಪಚ್ಯುತೇಂದ್ರನಾಯುಷ್ಯಂ ಷಣ್ಮಾಸಾವ ಶೇಷಮಾದುದೆಂಬುದುಂ –

ಕಂ || ಕಂಪಿಸಿದುದು ಸೌಧರ್ಮನಿ
ಳಿಂಪಾಧೀಶ್ವರನ ರತ್ನರಮ್ಯಾಸನಮೇ
ನಂ ಪೇೞ್ವದೊ ತೀರ್ಥಕರ ಶು
ಭಂ ಪಜ್ಜಳಿಪಲ್ಲಿ ಪೊಣ್ಮುವತಿಕೌತುಕಮಂ || ೪೫

ವ || ಆಗಳಾಸ್ಥಾನವಾಸಿ ವಾಸವಂ ನಿಜಾಸನಕಂಪಮಂ ಸಂಪಾದಿಸುವ ಚರಮ ಪರಮ ಪುರುಷಂ ನೆರಪಿದ ಸಮರ್ಥ ತೀರ್ಥಕರನಾಮಕರ್ಮದ ಪೆರ್ಮೆಯಂ ನಿರ್ಮಳಾ ವಧಿಬೋಧ ವೀಕ್ಷಣದಿನೀಕ್ಷಿಸಿ –

ಕಂ || ಭಾವಿ ಜಿನೇಶಂಗಾಗಳೆ
ಭಾವೋದ್ಗತ ಭಕ್ತಿಭಾರದಿಂದೆಱಗೆ ಸಿರಂ
ದೇವೇಂದ್ರಂ ನಿರ್ಭರ ಗ
ರ್ಭಾವತರಣಮಂಗಳೋದ್ಯತಾಶಯನಾದಂ || ೪೬

ವ || ಆಗಿ –

ಮ || ದಿವಿಜೇಂದ್ರಂ ಮನದೞ್ಕಱಿಂ ಬರಿಸೆ ಬಂದಾನಮ್ನನಾದಂಗೆ ವೈ
ಶ್ರವಣಂಗೀದಿನಮಾದಿಯಾಗಿ ಸತತಂ ಸಾರ್ಧತ್ರಿಕೋಟಿ ಸ್ಫುರ
ದ್ರವಿಣಾನೀಕದ ವೃಷ್ಟಿಯಂ ನಿಯಮದಿಂ ನೀಂ ಪೋಗಿ ಸಿದ್ಧಾರ್ಥ ಪಾ
ರ್ಥಿವನಿರ್ಪಾಪುರದೊಳ್ ತ್ರಿಸಂಧ್ಯಮೆಸಗೆಂದಾಜ್ಞಾಪನಂ ಮಾಡಿದಂ || ೪೭

ಕಂ || ಅಂತು ನಿಯೋಜಿಸೆ ಸುರಪತಿ
ಯುಂತುಂ ನಿಜಭಕ್ತನೆನಿಪ ಧನಪತಿ ಮುದದಿಂ
ಸಂತತ ರೈವೃಷ್ಟಿಯನ
ಭ್ಯಂತರದೊಳ್ ಮಾತುತಿರ್ದನಾ ಪುರವರದೊಳ್ || ೪೮

ಮ || ವಿವಿಧಾನೇಕ ಸುರತ್ನದೀಧಿತಿಚಯಂ ತಾರಾಧ್ಯದೊಳ್ ತಳ್ತ ವಾ
ಸವ ಚಾಪಾಳಿಯಲೀಲೆಯಂ ತಳೆಯೆ ಹೇಮೋದ್ದಾಮದಾಮಂ ದಿಶಾ
ನಿವಹಕ್ಕೀಯೆ ತಟಿಲ್ಲತಾತತಿಯ ನಿತ್ಯಾಲಿಂಗನಾಶಂಕೆಯಂ
ಸವಿಶಾಳಂ ವಸುವೃಷ್ಟಿ ಕುಂಡಪುರದೊಳ್ ಮಾಡಿತ್ತು ವೈಚಿತ್ಯ್ರಮಂ || ೪೯

ಕಂ || ವಸುವೃಷ್ಟಿ ನೆಗೞೆ ಜಗತಿಗೆ
ವಸುಧೆ ವಸುಂಧರೆ ವಸುಮತಿಯೆಂದನ್ವರ್ಥಂ
ಪೆಸರೆಸೆದುವು ಸುರುಚಿರ ವ
ರ್ತಿಸಿದುದು ತತ್ಪುರದ ಪಿರಿಯ ಸಿರಿ ಮನೆಮನೆಯೊಳ್ || ೫೦

ವ || ಅಂತು ಸಂತತಮುತ್ತರಾಶಾಪತಿ ಶಚೀಪತಿಯ ಬೆಸನಂ ಕೆಯ್ಕೊಂಡು ಕುಂಡಪುರದೊಳ್ ನೂತ್ನ ರತ್ನವರ್ಷಮಂ ನಯನಹರ್ಷಾಕರ್ಷಮಂ ಕಱೆಯುತ್ತುಮಿರೆ ಮತ್ತಮಮರ್ತ್ಯ ರಾಜಂ ರಾಗರಸ ವಿಕಸಿತ ಮನಃಸರೋಜನಾಗಿ ಭೂವಳಯ ವಿಳಸಿತೆಯಪ್ಪ ಭಾವಿ ಜಿನಜನನಿಯ ಗರ್ಭಶೋಧನಾದಿ ಸಮಸ್ತ ಪರ್ಯುಪಾಸ್ತಿ ಪ್ರವೀಣೆಯರಪ್ಪ ಹಿಮವದಾದಿ ಮೇದಿನೀಧರ ಶಿಖರ ಶೇಖರಾಯಮಾಣ ಪದ್ಮಾದಿಸರಸ್ಸದ್ಮವಾಸಿನಿಯರಾಗಿರ್ಪ ಶ್ರೀ ಹ್ರೀ ಧೃತಿ ಕೀರ್ತಿ ಬುದ್ಧಿ ಲಕ್ಷ್ಮಿಗಳೆಂಬ ಮೆಱೆವವಱಿಕೆಯಱುವರ್ ದೇವಕಾಂತೆಯರುಮಂ ಮತ್ತಂ ವಿಚಿತ್ರಕೂಟ ಪೇಟಕಮಣಿಗಣಮಯೂಖ ಲೇಖಾರುಚಿರಮೆನಿಪ ರುಚಕಾಚಳದ ಪೂರ್ವಾದಿ ದಿಗ್ವಿಭಾಗಭಾಸಿತೋತ್ತುಂಗ ಶೃಂಗಸಂಗತೆಯರಪ್ಪ ವಿಜಯೆ ವೈಜಯಂತಿ ಜಯಂತಿ ಅಪರಾಜಿತೆ ನಂದೆ ನಂದೋತ್ತರೆ ಆನಂದೆ ನಂದಿವರ್ಧನೆ ಸುಪ್ರತಿಷ್ಠೆ ಸುಪ್ರಣಿಧಿ ಸುಪ್ರಬುದ್ಧೆ ಯಶೋಧರೆ ಲಕ್ಷ್ಮೀಮತಿ ಕೀರ್ತಿಮತಿ ವಸುಂಧರೆ ಚಿತ್ರೆ ಇಳಾದೇವಿ ಸುರಾದೇವಿ ಪೃಥ್ವಿ ಪದ್ಮಾವತಿ ಕಾಂಚನೆ ನವಮಿಕೆ ಸಿತೆ ಭದ್ರೆ ಅಲಂಬೂಷೆ ಚಿತ್ರರೇಖೆ ಪುಂಡರೀಕಿಣಿ ವಾರುಣಿ ಆದರ್ಶೆ ಶ್ರೀ ಹ್ರೀ ಧೃತಿ ಚಿತ್ರೆ ಕನಕಚಿತ್ರೆ ತ್ರಿಶಿರೆ ಸೂತ್ರಾಮಣಿ ವಿಜಯೆ ವೈಜಯಂತಿ ಜಯಂತಿ ಅಪರಾಜಿತೆಯರೆಂಬ ಚತ್ವಾರಿಂಶದಮರ ರಮಣಿಯರುಮಂ ಮತ್ತಂ ವಕ್ಷಾರೋಷ್ಟಾಕಾರ ಕುಂಡಳಾದ್ಯನ್ಯನಗನಿವಾಸಿನಿಯರಪ್ಪ ಮಾಳಿಕೆ ಮಾಳಿನಿ ಕನಕದೇವಿ ಕನಕವೃದ್ಧಿ ಪುಷ್ಪಚೂಳೆ ಚೂಳಾವತಿ ಸುರಾದೇವಿ ತ್ರಿಸರೆ ಮೊದಲಾದ ಪಲರುಮನಿಮಿಷವನಿತೆಯರುಮಂ ಬರಿಸಿ ತತ್ತದುಚಿತ ನಿಯೋಗ ಯೋಜಿತೆಯರಂ ಬೆಸಸಿ ಕಳಿಪಿದಾಗಳ್ –