ಕಂ || ಆ ವೈಶ್ರವಣಂ ನಿರ್ಮಿಪ
ರೈವೃಷ್ಟಿಯೊಳಾದ ಪೆರ್ಮೆಯಂ ನೂರ್ಮಡಿಪಂ
ತಾ ವರ ದಿವಿಜಸ್ತ್ರೀರ
ತ್ನಾವಳಿ ದಿವದಿಂದಮಿೞಿದುದಿಳೆಗುಜ್ವಳಿತಂ || ೫೧

ರಗಳೆ || ಭಾವಿಜಿನ ಜನನಿಗನುನಯದೆ ಪರಿತುಷ್ಟಿಯಂ
ಭಾವಿಪೊಡೆ ಬಹುತರಂ ಸುಕೃತೈಕ ಸೃಷ್ಟಿಯಂ ||

ಮಾಡಲಾಯ್ತೆಮಗೆಂಬ ಸಂತೋಷಭಾರದಿಂ
ಕೂಡಿ ಸುರಯುವತಿ ಸಂತತಿ ಮಂದಚಾರದಿಂ ||

ಕುಂಡಪುರವರಕೆ ಬಂದಮಳಿನ ಸ್ವಾಂತೆಯಂ
ಕಂಡು ಸಿದ್ಧಾರ್ಥನ ಮನೋನಯನಕಾಂತೆಯಂ ||

ಬಲವಂದು ಪೊಡವಟ್ಟು ನಿಂದು ವೃತ್ತಾಂತಮಂ
ಸುಲಲಿತೆಗೆ ಬಿನ್ನಪಂಗೆಯ್ದಾ ನಿಶಾಂತಮಂ ||

ಬೇಗದಿನಳಂಕರಿಸಿ ತಂತಮ್ಮ ಕೃತ್ಯದೊಳ್
ರಾಗದಿಂ ವರ್ತಿಸಿದರಿಂತತಿಸ್ತುತ್ಯದೊಳ್ ||

ಜಿನಜನನಿಗೆಸೆವ ಬೆಳ್ಗೊಡೆವಿಡಿದು ಕೆಲಕೆಲರ್
ಜನನುತೆಗೆ ಚಾಮರಂಗಳನಿಕ್ಕಿ ಕೆಲಕೆಲರ್ ||

ನೃಪವನಿತೆಗಂಗರಾಗಂಬೂಸಿ ಕೆಲಕೆಲರ್
ವಿಪುಳಗುಣೆಯಂ ಮಜ್ಜನಂಬುಗಿಸಿ ಕೆಲಕೆಲರ್ ||

ಭುವನದೀಪಿಕೆಗಾರತಿಯನೆತ್ತಿ ಕೆಲಕೆಲರ್
ಕವಿನುತೆಗೆ ಬುದ್ದವಣಮಂ ಮೊೞಗಿ ಕೆಲಕೆಲರ್ ||

ಸತಿಗೆ ಮಣಿಪಾದುಕೆಗಳಂ ಸಾರ್ಚಿ ಕೆಲಕೆಲರ್
ಕೃತಪುಣ್ಯೆಗಾದರದಿ ಕೈಗೊಟ್ಟ ಕೆಲಕೆಲರ್ ||

ನಿರುಪಮೆಯ ಮುಂದೆ ನೆಲನುಗ್ಘಡಿಸಿ ಕೆಲಕೆಲರ್
ವರಮತಿಗೆ ದಿವ್ಯಾಂಬರಮನುಡಿಸಿ ಕೆಲಕೆಲರ್ ||

ತರುಣಿಗೆ ಸುರಾಭರಣಮಂ ತುಡಿಸಿ ಕೆಲಕೆಲರ್
ಸುರುಚಿರೆಗೆ ಪೂಮಾಲೆಯಂ ಮುಡಿಸಿ ಕೆಲಕೆಲರ್ ||

ವಿನಯವತಿಗನಘ ಪೂಜೆಯನೆಸಗಿ ಕೆಲಕೆಲರ್
ಮುನಿಸಂಸ್ತುತೆಗೆ ಬೋನಮಂ ಸಮೆದು ಕೆಲಕೆಲರ್ ||

ಕೋಮಳೆಗೆ ಶಂಖಮಂ ಪೂರೈಸಿ ಕೆಲಕೆಲರ್
ಭೂಮಹಿತೆಗಾರೋಗಿಸಲ್ಲಿಕ್ಕಿ ಕೆಲಕೆಲರ್ ||

ಕಾಮಿನಿಗೆ ಕೈಘಟ್ಟಿಯಂ ಕೊಟ್ಟು ಕೆಲಕೆಲರ್
ಕಾಮಾಕ್ಷಿಗಿತ್ತು ತಾಂಬೂಲಮಂ ಕೆಲಕೆಲರ್ ||

ವಿಧುವದನೆಗಾಂತು ಮಣಿಮುಕುರಮಂ ಕೆಲಕೆಲರ್
ಬುಧನುತೆಗೆ ತಾಳ್ದಿ ಪದೆದಡಪಮಂ ಕೆಲಕೆಲರ್ ||

ಕಮಳವದನೆಗೆ ನೀಡಿ ದವಕೆಯಂ ಕೆಲಕೆಲರ್
ಕುಮುದದಳನಯನಯುಗೆಗಡಿಗುಟ್ಟ ಕೆಲಕೆಲರ್ ||

ಪಿಕರವೆಗೆ ಮೃದುತಳಮಂ ಪಾಸಿ ಕೆಲಕೆಲರ್
ಸುಕುಮಾರೆಗಾಚರಿಸಿ ಬೇೞ್ಪುದಂ ಕೆಲಕೆಲರ್ ||

ಲಲಿತಾಂಗಿಗೆಸೆವ ಗದ್ದುಗೆಯಿಕ್ಕಿ ಕೆಲಕೆಲರ್
ಕುಲವಧುಗೆ ಮೆಱೆದು ಗಾನಂಗಂ ಕೆಲಕೆಲರ್ ||

ಶ್ರೀನಿಭೆಯ ಮುಂದೆ ವಾದ್ಯಮನೆಸಗಿ ಕೆಲಕೆಲರ್
ಮಾನಿನಿಯ ಮುಂದೆ ನೃತ್ಯಮನಾಡಿ ಕೆಲಕೆಲರ್ ||

ದೇವಿಗೆ ವಿನೋದಂಗಳಂ ತೋಱಿ ಕೆಲಕೆಲರ್
ಪಾವನೆಗೆ ಬೆಸಗೆಯ್ದರಿಂತಮರಿಯರ್ ಕೆಲರ್ || ೫೨

ಕಂ || ಅನಿಮಿಷಭುವನದ ಕುಸುಮವ
ಸನ ಮಣಿಗಣಭೂಷಣಾನುಲೇಪವಳೆ ಮ
ತ್ತನುಭವಿಪ ವಸ್ತು ತನಗೆನೆ
ಜಿನಜನನಿಗೆ ದೊರೆಯೆನಿಪ್ಪ ಜನನಿಯರೊಳರೇ || ೫೩

ನಿಯತಂ ಪಡಿಯಱ ಬೆಸನಾ
ದಿಯಾಗೆ ಬೆಸನೆನಿತನಿತ್ತುಮಂ ಸಲೆ ಸುರಕಾಂ
ತೆಯರೆ ತನಗೆಸಪರೆನೆ ತ
ತ್ಪ್ರಿಯಕಾರಿಣಿಯಂತೆ ಕಾಂತೆಯರ್ನೋಂತವರಾರ್ || ೫೪

ಚಂ || ಸುದತಿಗೆ ಗರ್ಭಶೋಧನೆಯನುತ್ತಮವಸ್ತುಗಳಿಂದೆ ಮಾಡೆ ತ
ತ್ತ್ರಿದಶವಧೂಜನಂ ಮಿಗೆ ವಿರಾಜಿಸಿದತ್ತು ತದಂಗಯಷ್ಟಿ ಪು
ಣ್ಯದ ಪೊಸಪುಂಜಮಾಳ್ಪಿನ ತವರ್ಮನೆ ಚೆಲ್ವಿನ ಜನ್ಮಭೂಮಿಯ
ಭ್ಯುದಯದಗಾರಮುತ್ಸವದ ಸಾರಮನಂಗನ ಮಂಗಳಾಲಯಂ || ೫೫

ಕಂ || ಪಳಿಕಿಂದ ಸಮೆದ ಪೊಸಪು
ತ್ಥಳಿಯಂ ಪೀಯೂಷಜಳದೆ ತೊಳೆದಂತೆ ಮನಂ
ಗೊಳಿಸಿರ್ದಮಳಿನ ಗರ್ಭೆಯ
ತೊಳತೊಳತೊಳಗುವ ಲತಾಂಗಮಂಗಜವಿಭವಂ || ೫೬

ವ || ಅಂತು ನಿಖಿಳ ಭುವನಾಶ್ಚರ್ಯಮಾದ ಸುರಯುವತಿಕೃತ ಪರಿಚರ್ಯೆಯಿಂದಮಿಂದೀವ ರಾಕ್ಷಿಗೊಂದು ದಿನದಂದದಿಂದಮಱುದಿಂಗಳ್ ನೆಱೆಯೆ –

ಕಂ || ನವಸರಸ ಫಳೋದಯಮಿ
ನ್ನವಿಳಂಬಿತಮೆನಿಸಿ ತೋರ್ಪ ಕಳ್ಪಲತಿಕೆ ಪು
ಪ್ಪವತಿ ದಲಪ್ಪಂದದೆ ನೃಪ
ಯುವತಿ ಜಗಜ್ಜನನಿ ಪುಷ್ಪವತಿ ತಾನಾದಳ್ || ೫೭

ವ || ಅನಂತರಂ ಚತುರ್ಥದಿನದೊಳನಿಮಿಷವನಿತಾಜನಾನುರಾಗಾನೀತಸ್ಫೀತಶಾತಕುಂಭ ಕುಂಭಸಂಭೃತ ಸಮಸ್ತ ತೀರ್ಥಪಾನೀಯಸ್ನಾನಪವಿತ್ರಗಾತ್ರೆಯಾಗಿ –

ಮ || ಸುರಭೂಜಾತ ವಿಕೀರ್ಣಮಪ್ಪ ಧವಳಂ ದಿವ್ಯಾಂಬರಂ ಮುತ್ತಿನಾ
ಭರಣಂ ಚಂದನದಣ್ಪು ಕಂಪಲರ್ದ ಮಲ್ಲೀದಾಮಮೆಂಬೀ ಮನೋ
ಹರ ವಸ್ತೂತ್ಕರದಿಂದೆ ಬೆಳ್ವಸದನಂಗೊಂಡೊಪ್ಪಿದಳ್ ದೇವಿ ಬಿ
ತ್ತರದಿಂ ಮೂರ್ತಿಯನಾಂತ ಕಂತುವಿನ ಚಂಚತ್ಕೀರ್ತಿಯೆಂಬಂದದಿಂ || ೫೮

ವ || ಅಂತು ಕುಸುಮಕೋದಂಡನ ಮಿಸುಪ ಸಾಮ್ರಾಜ್ಯಲಕ್ಷ್ಮೀವಿಡಂಬನಮೆನಿಪ ಶೃಂಗಾರ ಸಾರಮನಪ್ಪುಕೆಯ್ದು ವಿಚಿತ್ರರತ್ನನಿಚಯರಚಿತಮುಂ ವಿಶಾಳಕಾಳಾಗುರುಧೂಪ ಧೂಮಾ ಮೋದಿತಾಂತರ್ಭಾಗಮುಂ ಶೋಣಮಾಣಿಕ್ಯದೀಪಕಳಿಕಾಕಳಾಪ ನಿವಾರಿತಾಂಧ ಕಾರಮುಂ ಮಂಜುಗುಂಜನ್ಮಧುಕರಪಟಳಮಿಳಿತ ಸುರಭಿಕುಸುಮ ಮಳಯರುಹ ಕಸ್ತೂರಿ ಕಾಮಸೃಣಘುಸೃಣಾಭಿರಾಮಮುಂ ಕ್ಷೀರನೀರಾಕರೋದಾರ ಡಿಂಡೀರ ಪಿಂಡಪಾಂಡು ರಾನೂನ ಚೀನಚೇಳಾಕಳಿತ ವಿಳಸದ್ವಿತಾನಮುಂ ಧವಳಾತಿಕೋಮಳ ಪ್ರಚ್ಛದಾಚ್ಛಾದಿತ ಸಪ್ರಶಂಸ ಹಂಸತಳ್ಪಾನಳ್ಪಶೋಭಾನಿಬದ್ಧ ಮಣಿಮಯ ಮಂಚಕಾಂಚಿತಮುಂ ಕರ್ಪೂರ ಪೂರ ಪೂಗೀಭಾಗಧವಳತಾಂಬೂಳಿಕಾದಳಾವಳೀಕಳಿತಕನತ್ಕನಕಭಾಜನಭ್ರಾಜಿತ ಮುಮೆನಿಸಿ ರಮ್ಯಮಾದ ಶಯ್ಯಾಸದನಕ್ಕೆ ಸಕಳಲೋಕ ಪರಮ ಮಾಂಗಳ್ಯಸಾರಸರ್ವಸ್ವಂ ಬರ್ಪಂತೆ ಸುರಸುಂದರೀ ಕರಸರೋರುಹಾಳಂಬನೆಯಾಗಿ ಭುವನಾಂಬಿಕೆ ಮಂದಮ ರಾಳಯಾನದಿಂ ಬಿಜಯಂಗೆಯ್ದು ಭೋಗೈಶ್ವರ್ಯಸಹಸ್ರೇಕ್ಷಣನುಂ ನಿಖಿಳಕಳಾಭೀ ಕ್ಷಣನುಮೆನಿಪ ನಿಜಜೀವಿತೇಶ್ವರನ ಕೂಡೆ ನಿರವಧಿ ಸುಖಾನುಭೂತಿ ಪ್ರೀತಚಿತ್ತೆಯಾಗಿ ಪವಡಿಸಿರ್ದು ಬೆಳಗಪ್ಪಜಾವದೊಳ್ –

ಕಂ || ಮದಗಜಗತಿ ಮದಗಜಮಂ
ಸದಮಳವೃಷೆ ಸದಮಳೋರು ವೃಷನಂ ಮೃಗನೇ
ತ್ರೆ ದಲದಿರದೆ ಮೃಗವೈರಿಯ
ನುದಾತ್ತ ಸೌಭಾಗ್ಯಲಕ್ಷ್ಮಿ ಲಕ್ಷ್ಮೀವಧುವಂ || ೫೯

ಸುಮನೋದಾಮ ಸುಕೋಮಳೆ
ಸುಮನೋದಾಮದ್ವಯಂಗಳಂ ವಿಧುಮುಖಿಯು
ತ್ತಮ ವಿಧವಂ ಕಮಳಾನನೆ
ಕಮಳಪ್ರಿಯನಂ ಝಷಾಕ್ಷಿ ಝಷವರಯುಗಮಂ || ೬೦

ವರಘಟಕುಚೆ ಘಟಯುಗಮಂ
ಸರಸಿರುಹಾಮೋದೆ ಸರಸಿಯಂ ಗುಣರತ್ನಾ
ಕರೆ ರತ್ನಾಕರಮಂ ಸು
ಸ್ಥಿರಸಿಂಹಾಸನೆ ತೊಳಪ್ಪ ಸಿಂಹಾಸನಮಂ || ೬೧

ಮಾನನಿಧಾನೆ ನಿಳಿಂಪ ವಿ
ಮಾನಕಮನಹೀನಮತಿಯಹೀನಾಲಯಮಂ
ಜೈನಮತ ರತ್ನದೀಪಿಕೆ
ನಾನಾವಿಧ ರತ್ನರಾಶಿಯಂ ಪೇಶಲಮಂ || ೬೨

ಮಳಕಾನನ ಶಿಖಿಶಿಖೆ ಪ
ಜ್ಜಳಿಸುವ ಶಿಖಿಶಿಖೆಯನಿಂತು ತರದಿಂ ಸ್ವಪ್ನಂ
ಗಳನೀರೆಂಟಂ ನೃಪಕುಳ
ತಿಳಕನ ಸಿದ್ಧಾರ್ಥನರಸಿ ಕಂಡಳ್ ನಲವಿಂ || ೬೩

ವ || ಅನಂತರಮಾ ಲಲಿತಾಂಗಿ ಲಲಿತ ಲಲಿತಾದಿ ರಾಗಾರಾವರಂಜಿತಗ್ರೀವರಪ್ಪ ಮಂಗಳ ಪಾಠಕರ್ ಬೆಡಂಗುವಡೆದ ರಾಜಾಂಗಣಾಲಯದೊಳ್ ನಲಿದು ಪಲತೆಱದೆ ಪಠಿಯಿಪ ಜಗನ್ಮಂಗಳ ಜಿನೇಂದ್ರಗುಣಸ್ತವನ ಪ್ರಶಸ್ತಾನೇಕ ಹೃದ್ಯಗದ್ಯಪದ್ಯಂಗಳಿನಪಗತನಿದ್ರೆಯಾಗಿ ಪೊದೆದ ಪೊಸದುಗುಲಂ ಕೆಲಕ್ಕೆ ತೊಲಗೆ ಶಾರದನೀರದನಿಕರದಿನಗಲ್ದ ಪೂರ್ಣಚಂದ್ರ ಬಿಂಬದ ಭಂಗಿಯನಂಗೀಕರಿಸಿ ಭೋಂಕೆನೆ ಪಜ್ಜಳಿಪ ತನ್ನ ಸನ್ನುತ ವದನಸುಧಾಕರ ಬಿಂಬದಿನೊಸೆವ ಚಂದ್ರಿಕಾವಿಸ್ತಾರದಂತೆ ತೋರ್ಪಧಿಕ ಸಿತಧವಳ ಲೋಳ ಲೋಚ ನಂಗಳ ಬೆಳಗಿನ ಬಳಗದಿಂ ನಿಳಯಲಕ್ಷ್ಮಿಗೆ ಬೆಳ್ಪಸದನದ ಪೊದೞ್ಕೆಯನಿತ್ತು ತತ್ತನೂದರಿ ಯಾದರದಿಂ ವೈಭಾತಿಕವಿಧಿಗಳಂ ವಿಧಿಯಿಸಿ ಸುರನಿತಂಬಿನೀನಿಕರಸಮುಚಿತ ಶೃಂಗಾರಸಂಗತೆಯಾಗಿ ಭರ್ಮನಿರ್ಮಿತ ಸಭಾಸದನಮಧ್ಯದ ಮಣಿಮಯಾಸನಮನ ಳಂಕರಿಸಿರ್ದ ಸಿದ್ಧಾರ್ಥಪಾರ್ಥಿವ ಚೂಡಾಮಣಿಯಂ ಸೋಂಕಿ ಕುಳ್ಳಿರ್ದು ಜೀವಿತೇಶ್ವರಂಗೆ ತನ್ನ ಕಂಡ ಕನಸುಗಳನನುಕ್ರಮದಿಂ ನಿವೇದಿಸೆ ಕೇಳ್ದು ನೃಪಾಳತಿಳಕಂ ಪುಳಕಕಳಿಕಾವಳೀಲುಳಿತ ತನುಲತಾಲಲಿತನಾಗಿ –

ಮ || ಸ್ರ || ತೊದಳೇನೀ ಸ್ವಪ್ನಸಂದೋಹಮನತಿಮುದದಿಂ ದೇವಿ ನೀನಾವಗಂ ಕಂ
ಡುದಱಿಂ ಶ್ರೀಮಜ್ಜಿನಾಧೀಶ್ವರನಖಿಳಜಗನ್ಮಂಗಳಂ ಕೇವಲಜ್ಞಾ
ನದಯಾಂಭೋರಾಶಿ ವಿಶ್ವಾಮರಪತಿನುತ ಪಾದಾರವಿಂದದ್ವಯಂ ಪು
ಟ್ಟಿದಪಂ ನಿನ್ನೀಪ್ರಸನ್ನೋದರದೊಳನುಪಮಾನಂದ ದಾಮಾಭಿರಾಮಂ || ೬೪

ವ || ಎಂದಾ ನರೇಂದ್ರಚಂದ್ರಮಂ ಜಗದೀಡಿತೆ ಕಂಡ ಷೋಡಶಪ್ರಶಸ್ತ ಸ್ವಪ್ನ ಸಮಿತಿಗೆ ಸಕಲ ಲೋಕಯಕನಾಥನುತ್ಪತ್ತಿಯನೆ ಫಲಮಾಗಿ ಪೇೞ್ದು ಭುವನತ್ರಯಗುರುಗೆ ಗುರು ಗಳಾಗಲ್ವೇಡಿರ್ದ ತಮ್ಮುತಿರ್ಬರ ಜನ್ಮಮಂ ಸಫಳಮಾಗೆ ಬಗೆದನನ್ನೆಗಂ –

ಕಂ || ಮುಂ ಪೇೞ್ದಚ್ಯುತ ದಿವಿಜೇಂ
ದ್ರಂ ಪುಷ್ಪೋತ್ತರ ವಿಮಾನವಾಸಿ ನಿಜಾಯು
ಷ್ಯಂ ಪಿಂಗೆ ಬಂದು ಪೊಕ್ಕನ
ಲಂಪಿಂ ಪ್ರಿಯಕಾರಿಣೀ ವಧೂದರವರದೊಳ್ || ೬೫

ವ || ಅಂತು ನಿತಾಂತಕಾನ್ತಮೆನಿಪ ಶುಕ್ತಿಕಾಪುಟದೊಳನರ್ಘ್ಯ ಮುಕ್ತಾಫಳಂ ನೆಲಸುವಂತೆ ತನ್ಮಹಾತಿಶಯ ವಿಶುದ್ಧ ಗರ್ಭಾವಾಸದೊಳಾ ಸಮಸ್ತಗುಣನಿವಾಸಂ ನೆಲಸಿ ಬಳೆಯೆ ವಳೆಯೆ –

ಚಂ || ಜಗದಬಳಾಜನಕ್ಕೆ ಮಿಗೆ ವರ್ತಿಪ ಗರ್ಭದ ಚಿಹ್ನಜಾಳದೊಳ್
ಬಗೆವಡೆದೊಂದುಮಾಸತಿಯ ಭಾಸುರಮಪ್ಪಲತಾಂಗದಲ್ಲಿ ಪೊ
ರ್ದುಗೆವಡೆದಿರ್ದುದಿಲ್ಲ ವಿಕೃತಿ ವ್ಯತಿರಿಕ್ತ ಮಹಾನುಭಾವನಿ
ರ್ಕೆಗೆ ನೆಲೆಯಾದ ಭಾಗ್ಯವತಿಗೆತ್ತಣದಯ್ಯ ವಿಕಾರಸಂಭವಂ || ೬೬

ಉ || ಮೋಹಲತಾಲವಿತ್ರನಿರೆ ಗರ್ಭದೊಳೀವಧುವಿಂಗೆ ತೋರ್ಕುಮೇ
ದೋಹಲತಾಪ್ರವೃತ್ತಿ ತೊದಳೇನಯಶೋಧರಭಾರ ದೂರನಂ
ದೇಹದೊಳಾಂತ ಕಾಂತೆಗೆ ಕೃಶೋದರಭಾರಮದೆಂತೆನುತ್ತುಮಂ
ದಾ ಹರಿಣಾಕ್ಷಿಯಂ ಪೊಗೞ್ದುದೀಕ್ಷಿಸಿ ತಮ್ಮೊಳಮರ್ತ್ಯಯೌವನಂ || ೬೭

ಕಂ || ಪಳಿಕಿನ ಕಳಶದೊಳಿರಿಸಿದ
ವಿಳಸನ್ಮಣಿದೀಪಕಳಿಕೆಯಂತೆ ಜಗನ್ಮಂ
ಗಳನಿಳಯಂ ಗತವಿಳಯಂ
ಬೆಳಗಿದನಾ ಕಮಳಮುಖಿಯ ವಿಮಳೋದರದೊಳ್ || ೬೮

ಇಂದ್ರಾಣೀ ಸಹಿತಂ ಬಂ
ದಿಂದ್ರಂ ಸುರಸಮಿತಿಸಂಯುತಂ ತದ್ಭೂಪಾ
ಳೇಂದ್ರನುಮಂ ರಾಜ್ಞಿಯುಮಂ
ರುಂದ್ರಯಶಂ ತ್ರಿಃಪ್ರದಕ್ಷಿಣಂಗೆಯ್ದೊಲವಿಂ || ೬೯

ಮ || ಸುರಲೋಕಂಗಳೊಳುತ್ತಮಂಗಳಿವಱಿಂ ಬೇಱಿಲ್ಲೆನಿಪ್ಪಂಶುಕಾ
ಭರಣಾದಿ ಪ್ರಿಯವಸ್ತುಸಂತತಿಗಳಿಂ ತತ್ಪೂಜೆಯಂ ಮಾಡಿ ನಿ
ರ್ಭರವಾಃಕೋಟಿಗಳಿಂ ಪ್ರಶಂಸಿಸಿ ವಿನಮ್ರಂ ಕಮ್ರ ಕಲ್ಯಾಣಮಂ
ಭರದಿಂದಾದ್ಯಮನಿಂತು ಬಿತ್ತರಿಸಿದಂ ಸ್ಯಾದ್ವಾದವಿದ್ಯಾಪ್ರಿಯಂ || ೭೦

ವ || ಅಂತಾ ಪುರುಹೂತಂ ಪ್ರೀತಿಯಿಂ ಪ್ರಥಮಕಲ್ಯಾಣವಿಭೂತಿಯಂ ಭೂತಳಕ್ಕೆ ಕೌತುಕಮಾಗೆ ವಿಧಿಯಿಸಿ ನಿಜನಿವಾಸಕ್ಕೆ ಪೋಪುದುಮಿತ್ತಲ್ –

ಕಂ || ಆ ಜನನಿಗೆ ಜನಿಯಿಸಿದುದು
ವೈಜನನಂ ಸಕಳಭುವನಭವನೋತ್ಸವಲ
ಕ್ಷ್ಮೀಜನನಂ ವಿಬುಧಶ್ರೇ
ಯೋಜನನಂ ಜೈನಸಮಯಲೀಲಾಜನನಣ || ೭೧

ವ || ಅಂತು ಪರಪೂರ್ಣಪ್ರಸವಸಮಯಂ ಸಮಯವಿಸ್ತಾರಿಕೆಗೆ ಸಮನಿಸುವುದುಂ –

ಉ || ಚೈತ್ರ ಸಿತ ತ್ರಯೋದಶಿಯೊಳುತ್ತರೆ ಸಾರ್ತರೆ ಸನ್ಮುಹೂರ್ತದೊಳ್
ಪುತ್ರನಳೞ್ತಿಯಿಂ ಪಡೆದಳಾಪ್ರಿಯಾಕಾರಿಣಿ ಚಾರುಗಾತ್ರನಂ
ಗೋತ್ರಪವಿತ್ರನಂ ಭುವನಮಿತ್ರನನಾತತಕರ್ಮ ಕಂದಳಿ
ದಾತ್ರನನುದ್ಘಬೋಧ ಸುಖಪಾತ್ರನನಂಬುಜಪತ್ರನೇತ್ರನಂ || ೭೨

ವ || ಆಗಳುದಯಿಸಿದ ಬಾಳಕಂ ರಜೋರಹಿತನೆಂಬ ಸೂಚಿಪಂದದಿಂ ಸಕಳ ವಸುಧಾತಳಂ ರಜೋರಹಿತಮಾದುದು ಆ ಕುಮಾರಕಂ ಪ್ರಸನ್ನಕರಹೃದಯನೆಂಬುದಂ ಸೂಚಿಪಂದದಿಂ ಸಕಳ ವಸುಧಾತಳಂ ರಜೋರಹಿತಮಾದುದು ಆ ಕುಮಾರಕಂ ಪ್ರಸನ್ನಕರಹೃದಯನೆಂಬುದಂ ಪೇೞ್ವಂತೆ ನಿಖಿಳ ದಿಶಾವಳಯಂ ಪ್ರಸನ್ನಕರಮಾದುದು ಆ ಭಾಸ್ವದರ್ಭಕಂ ವ್ಯಪಗತಕಾಲುಷ್ಕ ನೆಂಬುದಂ ನಿವೇದಿಸುವಂತೆ ಸಮಸ್ತ ಜಲಾಶಯನಿಕಾಯಂ ವ್ಯಪಗತಕಾಲುಷ್ಕಮಾದುದು ಆ ಸ್ತನಂಧಯಂ ವಿಶದಸ್ವಭಾವನೆಂಬುದಂ ಪ್ರಕಾಶಿಸುವಂತೆ ಗಗನವಳಯಂ ವಿಶದಸ್ವಭಾವ ಮಾದುದು ಆ ನೂತನಜಾತಕಂ ಪರಮಾತಿಶಯ ಶೀತಳಗುಣೋಪೇತನೆಂಬುದಂ ಅಱಿಪುವಂತೆ ಸುರಭಿವಾತಂ ಶೀತಳಗುಣೋಪೇತಮಾದುದು ಆ ಶಿಶುಶಶಾಂಕಂ ಭುವನತ್ರಯದೊಳ್ ಪಜ್ಜಳಿಪನೆಂಬುದಂ ಪ್ರಕಟಿಪಂದದಿಂ ವಿಶ್ವವೈಶ್ವಾನರಂ ದಕ್ಷಿಣಾರ್ಚಿಯಿಂ ಪಜ್ಜಳಿಸಿದುದು ಅಂತುಮಲ್ಲದೆಯುಂ –

ಚಂ || ನಿಜನಿಜವೈರಮಂ ಸಕಳಸತ್ವಕದಂಬಕಮೆತ್ತನೋೞ್ಪೊಡಂ
ತ್ಯಜಿಯಿಸಿ ಲೀಲೆಯಿಂದೆ ನಲಿದಾಡಿದುವಾಪುರದಲ್ಲಿ ಸುತ್ತಲುಂ
ಧ್ವಜನಿವಹಂಗಳುಂ ವಿವಿಧವಂದನಮಾಲೆಗಳುಂ ಪೊದೞ್ದುವಾ
ತ್ರಿಜಗಧೀಶನದ್ಭವಿಸೆ ಸಮ್ಮದವಾಯ್ತು ಜನಕ್ಕೆ ನಿಕ್ಕುವಂ || ೭೩

ಘುಸೃಣರಸಂಗಳಿಂ ಮೃಗಮದದ್ರವದಿಂ ನವಚಂದನಾಂಬುವಿಂ
ದೆಸೆವ ಗೃಹಾಂಗಣಾವಳಿಗಳೊಳ್ ಚಳಯಂಗುಡುತಿರ್ಪ ಮೌಕ್ತಿಕ
ಪ್ರಸರದೆ ಕೂಡೆ ರಂಗವಲಿಯಂ ನಲಿದಿಕ್ಕುತುಮಿರ್ಪ ಸುತ್ತಲುಂ
ಕುಸುಮಚಯಂಗಳಂ ಕೆದಱುತಿರ್ಪಬಳಾಳಿಯ ಲೀಲೆ ಕೌತುಕಂ || ೭೪

ಮ || ಜಿನನಾಥೋದಯದಲ್ಲಿ ಪಲ್ಲವಿಸಿದತ್ತಾಶ್ಚರ್ಯಮಪ್ಪನ್ನೆಗಂ
ಜನನಾಥಾವಸಥಾಜಿರೆ ಕ್ಷಿತಿತಳಂ ಸದ್ರಾಗದಿಂದೆಂಬಿನಂ
ಘನಕಾಶ್ಮೀರದ ನೀರಿನಿಂದೆ ಚಳಯಂಬೆತ್ತೆತ್ತಲುಂ ಲೋಕಲೋ
ಚನಕಂ ತನ್ಮನಕಂ ಪ್ರಸಕ್ತಿಜನಕಂ ಮಾಡಿತ್ತು ಸಂತೋಷಮಂ || ೭೫

ಚಂ || ಅರಮನೆಯಲ್ಲಿ ಪೊಣ್ಮಿದುದು ಮಂಗಳತೂರ್ಯ ಸಮುತ್ಥಿತಂ ದಿಶಾ
ಕರಿವರ ಕರ್ಣಕೋಟರ ಮಹಾಭರಿತಂ ಸ್ಫುರಿತಂ ಘನಸ್ವನಂ
ಸರಭಸವಂದಿವೃಂದ ಜಯಜೀಯನಿನಾದ ವಿವರ್ಧಿತಂ ಮನೋ
ಹರಸುರಗಾಯಿನೀ ಮಧುರಗಾನ ರವಾನುಗತಂ ಜಗನ್ನುತಂ || ೭೬

ಕಂ || ಸಮಯೋಚಿತ ಪರಿಚರ್ಯೆಯ
ನಮಳಿನಜಿನಜನನಿಗೆಸಗುಮಮರಪ್ರಮದಾ
ಸಮಿತಿಯ ಸಂಭ್ರಮಗಮನಂ
ಕಮನಂ ತಾನಾದುದಂದು ನೃಪಮಂದಿರದೊಳ್ || ೭೭

ತಡೆಯದೆ ಸಿದ್ಧಾರ್ಥನೃಪಂ
ನಡೆತಂದು ಸುತಾನನೇಂದುವಂ ನೋಡಿ ಸುಖಂ
ಬಡೆದಂ ತನ್ನಯ ಮನದೊಳ್
ಬಡವಂ ನಿಧಿಗಂಡಮಾೞ್ಕೆಯಿಂ ವಿಶದಯಶಂ || ೭೮

ಚಂ || ಪರಮ ಜಿನೇಂದ್ರಮಂದಿರಚಯಂಗಳೊಳೊಪ್ಪುವನೇಕ ಪೂಜೆಯಂ
ಪಿರಿದನುರಾಗದಿಂ ಮೊದಲೊಳಾಗಿಸಿ ವಾಂಛಿತವಸ್ತು ವೃಂದಮಂ
ನೆರೆದ ಸಮಸ್ತ ಸದ್ವಿಬುಧವಂದಿಜನಾವಳಿಗಿತ್ತು ಬಂಧುಗ
ಳ್ವೆರಸು ಜಿನಾರ್ಭಕಂಗೆ ವಿಭುಮಾಡಿದನೀಡಿತ ಜಾತಕರ್ಮಮಂ || ೭೯

ವ || ಆ ಸಮಯದೊಳ್ –

ಕಂ || ವಾದನಮಿಲ್ಲದೆಯುಂ ಮಿಗೆ
ನಾದಂಗೆಯ್ದುವು ಸುರಾನಕಾನೀಕಂಗಳ್
ಬಾದೇಂ ಸುರವಿಷ್ಟರತತಿ
ಗಾದುದು ಕಂಪನಮಕಾರಣಂ ಭೂರಿತರಂ || ೮೦

ಸಕಳನಿಳಿಂಪನಿಕಾಯದ
ಮಕುಟಂಗಳ್ ವಿನಮಿತಂಗಳಾದುವು ಸುರಭೂ
ಜಕುಳಂಗಳ್ ಸುರಿದುವು ಸುರ
ಭಿಕುಸುಮದಾಸಾರಸಾರಮಂ ಧಾರಿಣಿಯೊಳ್ || ೮೧

ವ || ಇಂತಿವು ಮೊದಲಾದ ಪಲವುಮಾಶ್ಚರ್ಯಂಗಳ್ ನೆಗೞೆ ಸೌಧಮೇಂದ್ರಂ ನಿಜಾವಧಿ ಬೋಧಪ್ರಯೋಗದಿಂ ಯೋಗಿವೃಂದಾರಕವೃಂದವಂದ್ಯ ಪಾದಾರವಿಂದದ್ವಂದ್ವ ಭಗವಜ್ಜಿ ನೇಂದ್ರಚಂದ್ರನುದಯಮನಱಿದು ಹರ್ಷೋತ್ಕರ್ಷಸುಧಾರಸಮರುತ್ತರಂಗಿಣೀ ತರಂಗಿತಾಂತರಂಗಂ ಸಮುಲ್ಲಸಿತ ಕಲ್ಯಾಣಪರಂಪರಾಪರಿಪ್ರಾಪಣೇಚ್ಛೆಯಿಂ ನಿರತಿಶಯ ನಿಖಿಳ ಕಲ್ಯಾಣನಿಳಯಂಗೆ ನಿರ್ಭರಭಕ್ತಿಯಿಂ ದ್ವಿತೀಯಕಲ್ಯಾಣ ಮಹೋತ್ಸವ ವಿಧ್ಯುತ್ಸು ರತೆಯಿನುತ್ಸುಕಾತಿಶಯನಾಗಿರ್ಪುದುಂ –

ಮ || ಭವನೇಂದ್ರರ್ಗೆ ಪೊದೞ್ದ ಶಂಖನಿನದಂ ತದ್ವ್ಯಂತರೇಂದ್ರರ್ಗೆ ಪೊ
ಣ್ಮುವ ಭೇರೀನಿನದಂ ಗಜಾರಿನಿನದಂ ಜ್ಯೋತಿಃಕುಲೇಂದ್ರರ್ಗೆ ತ
ದ್ದಿವಿಜೇಂದ್ರರ್ಗೆ ನಿತಾಂತಮುಣ್ಮುವ ಮಹಾಘಂಟಾನಿನಾದಂ ತ್ರಿಳೋ
ಕವಿಭೂತ್ಪತ್ತಿ ವಿಭೂತಿನಾದಮಿದು ಚೇತಃಪ್ರೀತಿಯೆಂದೆಂಬಿನಂ || ೮೨

ಚಂ || ನೆರೆದು ಚತುರ್ನಿಕಾಯ ಸುರರಾತ್ಮವಧೂಜನ ವಾಹನಾಯುಧಾ
ಭರಣ ಪರಿಗ್ರಹಪ್ರಕರಸಂಯುತರಾಗಿ ಜಿನಾಭಿಷೇಕಸಂ
ಸ್ಫುರಿತ ಮಹೋತ್ಸವಕ್ಕೆ ಪಿರಿದಪ್ಪ ವಿಭೂತಿಯಿನಂದು ನಿಂದರಂ
ಬರತಳದಲ್ಲಿ ಬಂದು ಬರವಾರುತುಮಾ ಶಚಿಜೀವಿತೇಶನಾ || ೮೩

ವ || ಮತ್ತಮಾಗಳ್ –

ಕಂ || ಸ್ಮರಿಯಿಸಿದಂ ತನ್ನ ಮದೋ
ದ್ಧುರ ಬಂಧುರ ಗಂಧಸಿಂಧುರಾಮರವರನಂ
ಸುರುಚಿರ ವೈಕುರ್ವಣ ಚಾ
ತುರೀಕೆನಂ ವರವಿಲೋಕನಂ ಸುರರಾಜಂ || ೮೪

ವ || ಅಂತು ನೆನೆದ ಪದದೊಳಪಗತಾಭ್ರವಿಭ್ರಮನಭಸ್ಥಳದಂತೆ ಸುವ್ಯಕ್ತ ಹಸ್ತ ಮೂಲಮುಂ ಹರಿಕುರುವಂಶ ಕಥಾವತಾರದಂತೆ ಮಹಾಕರ್ಣಾರ್ಜುನವಿಗ್ರಹಮುಂ ವಿವಾಹವೇದಿ ಕಾಗ್ರದಂತೆ ಸಾಳಂಕೃತ ಶುಂಭತ್ಕುಂಭಮುಮ ಮಹೋದಾರಗುಣಪ್ರಣಯಪುರುಷನಂತೆ ನಿರಂತರಭೂರಿದಾನ ಪ್ರವರ್ತನಮುಂ ಮಹಾರಣ್ಯ ಪ್ರದೇಶದಂತೆ ಸಮುತ್ತುಂಗ ವಂಶ ವಿಭ್ರಾಜಿತಮುಂ ಸರಸಕವಿನಿಬದ್ಧಕಾವ್ಯದಂತೆ ಸಮವೃತ್ತಪದಾತಿ ರಮ್ಯಮುಂ ವರ್ಷಾಕಾಲಪ್ರಾರಂಭದಂತೆ ಪೃಥುಳಪುಷ್ಕರಬಿಂದುಜಾಳಮುಂ ಪರಮಪಾವನ ತಪೋವನದಂತೆ ಸದ್ವೃತ್ತಮಹಾದಂತಮುಮ ನಿದಾಘಸಮಯಮನಾಘಾಟದಂತೆ ಸದಾವಗ್ರಹಲಕ್ಷಿತ ಮುಮೆನಿಸಿದಭ್ರಶುಭವಿಭ್ರಮಾಭ್ರಮೂವಲ್ಲಭಂ ಬಂಧು –

ಕಂ || ಒಂದೊಂದಱೊಳೆಂಟೆಂಟು ರ
ದಂ ದೃಷ್ಟಮೆನಿಪ್ಪ ರಮ್ಯವದನಂಗಳನಾ
ನಂದದೆ ಮೂವತ್ತೆರಡನ
ನಿಂದಿತಮತಿತಾಳ್ದು ನಿಂದುದಿಂದ್ರಗಜೇಂದ್ರಂ || ೮೫

ಒಂದೊಂದೆ ಕೊಂಬಿನೊಳ್ ಮ
ತ್ತೊಂದೊಂದೆ ಕೊಳಂ ಕೊಳಂಗಳೊಂದೊಂದಱೊಳಂ
ಸುಂದರತರ ಬಿಸಿನೀಲತೆ
ಯೊಂದೊಂದಾ ಸಂದ ಬಿಸಿನಿಯೊಂದೊಂದಱೊಳಂ || ೮೬

ಮೂವತ್ತೆರಡೆಸೆದಿರ್ದುವು
ಪೂವೊಂದೊಂದಲರ್ದ ಪೂಗೆ ಮಿಸಪ ದಳಂಗಳ್
ಭಾವಿಸೆ ಮೂವತ್ತೆರಡಂ
ತಾ ವಿಳಸಿತಪದ್ಮದಳಗಳೊಂದಱೊಳಂ || ೮೬

ಉತ್ತಮನರ್ತಕಿಯರ್ ಮೂ
ವತ್ತಿರ್ಬರ್ ಗೀತವಾದ್ಯದನುಗತಿಯಿಂದಂ
ಚಿತ್ತಭವ ವಿಭವ ಲೀಲಾ
ಯತ್ತೆಯರತ್ಯಂತ ರಾಗದಿಂ ನರ್ತಿಸುವರ್ || ೮೮

ವ || ಇಂತಗುರ್ವುವಡೆದ ವಿಕ್ರಿಯಾವಿಡಂಬನದಿಂ ವಿಚಿತ್ರಗಾತ್ರಮನಪ್ಪುಕೆಯ್ದೊಪ್ಪಂಬೆತ್ತ ನಿಜಗಜೇಂದ್ರ ಬಂಧುರಸ್ಕಂಧಪ್ರದೇಶಮಂ ಪೌಳೋಮೀಸಮೇತಂ ಪುರುಹೂತ ನಳಂಕರಿಸಿ –

ಕಂ || ಪಟುಪಟಹರಟನಮಾಶಾ
ತಟಮಂ ತರ್ಕೈಸೆ ಸಗ್ಗದಿಂ ಪೊಱಮಟ್ಟಾ
ಚಟುಳಚತುರಮರಸಮಿತಿಯ
ಕಟಕಮನಾನಂದದಿಂದೆ ತಾಂ ಪುಗುತಂದಂ || ೮೯

ಚಂ || ಸುರವರಕಾಮಿನೀನಯನದೀಧಿತಿ ದೇವನಿಕಾಯನಾಯಕಾ
ಭರಣಮರೀಚಿ ತದ್ಬಹುವಿಧಾಯುಧರೋಚಿ ವಿಮಾನವಾಹನೋ
ತ್ಕರ ಲಸದಂಶುವೆಂಬಿವನಿತಂ ಹರಿದಂಬರಬಿಂಬಮಂ ಪ್ರಭಾ
ಸುರ ಸುರಚಾಪಮಾವರಿಸಿತೆಂಬಭಿಶಂಕೆಯನಿತ್ತುವೆತ್ತಲುಂ || ೯೦

ಕಂ || ನಾದಮಯಂ ನಿರತಿಶಯಾ
ಮೋದಮಯಂ ನಿರವಧಿಪ್ರಕಾಶಮಯಂ ತಾ
ನಾದುದು ಭಾವಿಸಿ ನೋಡೆ ಪ
ಯೋದಪಥಂ ಪ್ರಥಿತಮಾದ ದೇವಾಗಮದೊಳ್ || ೯೧

ವ || ಅಂತು ಮಹಾವಿಭೂತಿಯಿನಾಖಂಡಳನಂಡಿತ ಶೋಭಾಕರಂಡಮಾದ ಕುಂಡಪುರಕ್ಕೆ ವಂದು ಪುಂಡರೀಕಷಂಡಮಂಡಿತಮಾದ ಬಹಿರುದ್ಯಾನದಗ್ರಭಾಗದೊಳಿರ್ದು –

ಕಂ || ಬಿಜಯಂಗೆಯ್ಸಿತರಲ್ಕೆಂ
ದು ಜಗದ್ಗುರುವಂ ಪ್ರಯತ್ನದಿಂದಂ ಶಕ್ರಂ
ನಿಜಸತಿಯಂ ಕಳಿಪಿದನಂ
ಬುಜಮುಖಿಯಂ ದರ್ಶನೈಕರುಚಿಯಂ ಶಚಿಯಂ || ೯೨

ವ || ಅಂತು ಕಳಿಪುವುದುಮಳವಿಗಳಿದ ಹರ್ಷರಸಮನೊಳಕೊಂಡು ಸುರಸರಣಿಯಿಂ ಧರಣಿಗವತರಿಸಿ ಭೂಲೋಕಲಕ್ಷ್ಮಿಗೆ ಮಂಡನಮಾದ ಕುಂಡಪುರದ ಪರಮಶೋಭೆಯಂ ನೀಡುಂ ನೋಡಿ ನಾಡೆಯುಂ ಮನದೆಗೊಂಡು ಕೊಂಡುಕೊನೆಯುತುಂ ಬಂದು ಮಂದರ ಮಹೀಧರದಂದದಿಂ ಪಾಂಡುಕಭದ್ರಶಾಳಾಭಿರಾಮಮಪ್ಪ ಭೂಮಿಪಾಳಧಾಮಮಂ ಪೊಕ್ಕು ಸಮುಚಿತ ಪ್ರಶಸ್ತವಸ್ತುವಿಸ್ತಾರದಿಂ ವಿವಿಧಮಾಂಗಲ್ಯಸಂಪತ್ತಿವೆತ್ತ ವಿನೂತ ಸೂತಿಕಾಸದನಮಂ ತ್ರಿಃಪ್ರದಕ್ಷಿಣಂಗೆಯ್ದೊಳಗಂಪೊಕ್ಕು ಸಕಳಸಾರಸೌಂದರ್ಯ ಸನಾಥಂ ನಾಥವಂಶಜಾತಂ ತನಗೆ ಭೋಂಕೆನೆ ಪ್ರತ್ಯಕ್ಷಮಾಗೆ –

ಕಂ || ಇಂದ್ರಾಣಿಯ ನಯನೋತ್ಪಳ
ಕಂ ಧೃತಮಾನಂದವಾರ್ಧಿಗಳಂ ನೆಗೞ್ದರ್ಹ
ಚ್ಚಂದ್ರನ ತನುರುಚಿ ಚಂಚ
ಚ್ಚಂದ್ರಿಕೆ ಪಡೆದತ್ತಲರ್ಕೆಯಂ ಪೆರ್ಚುಗೆಯಂ || ೯೩

ಪ್ರಾಚಿಯ ಪಕ್ಕದ ಶೀತಮ
ರೀಚಿಯವೋಲ್ ತಾಯ ಪಕ್ಕದೊಳ್ ಪಟ್ಟಿರ್ದಾ
ರೋಚಿರ್ಮಯನ ವಿನೂತ
ಶ್ರೀಚರಣಾಂಬುಜಕೆ ವಿನಯವಿನಮಿತೆಯಾದಳ್ || ೯೪

ವ || ಅಂತು ನಿಜವಿಲುಳಿತಾಳಕಮದಾಳಿಮಾಳೆಯಿಂ ಪರಮನ ಚರಣಸರಸಿರುಹ ಮನಳಂಕರಿಸಿ ತದನಂತರಂ –

ಕಂ || ಆ ಶಚಿ ಮಾಯಾನಿದ್ರೆಯ
ನಾ ಶಶಧರವದನೆಗಿತ್ತು ಬಲಗೆಲದೊಳ್ ಮಾ
ಯಾಶಿಶುವನಿರಿಸಿ ಪಾಣಿಕು
ಶೇಶಯಯುಗದಿಂದೆ ನೆಗಪಿದಳ್ ಜಿನಶಿಶುವಂ || ೯೫

ವ || ಅಂತಾ ಕಾಂತೆ ಮಂದಾರಮಸೃಣ ಕಿಸಲಯನಿಕಾಮ ಕೋಮಳಕರ ಪ್ರವಾಳದಿಂದೆತ್ತಿಕೊಂಡು ದೇವಾಂಗನಾ ವದನವಿನಿರ್ಗತ ಜಯಜೀಯನಂದವರ್ಧಸ್ವಾದಿನಾದಂಗಳೊಡನೆ ಪೊಣ್ಮುವನೇಕಸುರಪಟಹಪೇಟಕಾರವಂಗಳಿಂ ದೆಸೆಗಳೆಲ್ಲಂ ಪೂರಿತಂಗಳಾಗೆ ಮೆಲ್ಲನಲ್ಲಿಂ ತಳರ್ದು –

ಕಂ || ವಿಳಸಿತ ಫಲಮಂಜರಿಯಂ
ತಳೆದೊಪ್ಪುವ ಕಲ್ಪಲತೆಗೆ ಪಾಸಟಿಯಾದಳ್
ನಳನಳಿಸುವ ಜಿನಶಿಶುವಂ
ತಳೆದು ತಳತ್ತಳಿಪ ಹರಿಯ ವರವಧುವಾಗಳ್ || ೯೬

ವ || ಅಂತು ಫಳಿತಜಂಗಮಲತೆಯನನುಕರಿಸಿ ಮಹಾವಿಭೂತಿಯಿಂ ಪೋಗಿ ರಾಗದಿಂ ನಿಜಜೀವಿತೇಶ್ವರಂಗೆ ನಾನಾಜನ್ಮಾಚರಿತ ನಿರತಿಶಯ ತಪೋಧನಾದಿ ಸಂಚಿತಾಗಣ್ಯಪುಣ್ಯ ಪುಂಜಮಂ ನೀಡುವಂತೆ ಜಗದಾರಾಧ್ಯನಂ ಮೆಲ್ಲನೆ ನೀಡೆ –

ಕಂ || ತಳೆದಂ ನಿಜಸುರುಚಿರಕರ
ತಳಜಳಜದೊಳನಘನಂ ಕನತ್ತನುಲತೆಯೊಳ್
ತಳೆದಂ ಪುಳಕಾವಳಿಯಂ
ತಳೆದಂ ಹೃದಯದೊಳುದಾರಪದಮಂ ಮುದಮಂ || ೯೭

ಚಂ || ಎಸೆವ ಜಿನೇಂದ್ರಚಂದ್ರನ ಸದಚ್ಛತನುಚ್ಛವಿ ಸಾಂದ್ರಚಂದ್ರಿಕಾ
ಪ್ರಸರಮದೀಕ್ಷಣೋತ್ಪಳಕಮುತ್ಸವವಾರ್ಧಿಗಮಂದಮಂದಮಂ
ಪೊಸಯಿಸೆ ಹರ್ಷಸಂಪದಮನೇಂ ಪರಿತೋಷವಿಶೇಷದಿಂ ಪ್ರಪೋ
ಷಿಸಿದನೊ ಚಿತ್ತಮಂ ವಿಬುಧವಿಶ್ರುತನಾ ವಸುಧೈಕಬಾಂಧವಂ || ೯೮

ಗದ್ಯಂ

ಇದು ನಿಖಿಳಭುವನಜನವಿನೂತ ಸ್ಫೀತಮಹಿಮಾವದಾತ ವೀತರಾಗ ಸರ್ವಜ್ಞತಾ ಸಮೇತ
ಖ್ಯಾತಜಿನಸಮಯ ಕಮಳಿನೀ ಕಳಹಂಸಾಯಮಾನ ಮಾನಿತ
ಶ್ರೀನಂದಿಯೋಗೀಂದ್ರ ಪ್ರಸಾದ ವಾಚಾಮಹಿತ
ಕೇಶವರಾಜಾನಂದ ನಂದನ ವಾಣೀವಲ್ಲಭ ವಿಸ್ತಾರಿತಮಪ್ಪ
ವಸುಧೈಕಬಾಂಧವ ಶ್ರೀವರ್ಧಮಾನ ಪುರಾಣದೊಳ್ ಭಗವಜ್ಜನ್ಮಾಭಿಷೇಕೋದ್ಯೋಗ ವರ್ಣನಂ
ತ್ರಯೋದಶಾಶ್ವಾಸಂ