ವ || ಆಗಳ್ –

ಕಂ || ದ್ಯುಚರ ಖಚರಾವನೀಚರ
ನಿಚಯಂ ನಿಚಿತಪ್ರಮೋದಭರದಿಂ ಪುರದೊಳ್
ಸುಚತುರ ಗೀತಾತೋದ್ಯ
ಪ್ರಚುರಂ ನರ್ತಿಸುತುಮಿರ್ದುದತಿಕೌತುಕದಿಂ || ೫೬

ಉ || ಗೊಂದಳದಿಂದೆ ನರ್ತಿಸುವಶೇಷಜನಂಗಳ ಭಂಗಿ ಲೀಲೆಯಂ
ಮುಂದಿಡೆ ಭಕ್ತಿಬೋಧಿತಮನಂ ಜಿನರಾಜನ ಮುಂದೆ ತಾನುಮಾ
ನಂದದ ನರ್ತನಕ್ಕೆ ಬಗೆದಂದು ಪುರಂದರನಂದು ವಿಕ್ರಿಯಾ
ನಂದಿತ ಶಕ್ತಿಸಂಘಟಿತ ನಾಟಕಪೇಟಕಮಂ ನಿಮಿರ್ಚಿದಂ || ೫೭

ವ || ಅಂತಾ ಕಳಾಕಾಂತಂ ಸರಸನರ್ತನವೈಚಿತ್ಯ್ರವಿಶಾರದಂ ನೀರದರಥಂ ಪ್ರಥಿತರಸಭಾ ವಾಭಿನಯಾದ್ಯೇಕಾದಶ ನಾಟ್ಯಂಗಳೊಳ್ ನೆಱೆದು ನಾಟಕಾದಿ ದಶರೂಪಕಂಗಳೊಳ್ ಬೆಡಂಗುವಡೆದ ಸಮವಕಾರರೂಪಕಮನುಜ್ಜುಗಿಸಿ ತತ್ಸಾಮಗ್ರೀ ಸಮಗ್ರನುಂ ತತ್ಸಮಯ ಸಮುಚಿತ ನೇಪಥ್ಯಮಂ ಸಮುಪಚರಿತಾಮಂದ ನಾಂದೀ ಪ್ರಸ್ತಾವ ಚಾರುಭಾರತೀಕಾ ಚಾರನುಂ ಯವನಿಕಾಪಸರಣಸಂಗತರಂಗಪ್ರವೇಶನುಂ ಋಜ್ವಾಗತ ಸ್ಥಾನದತ್ತ ಪ್ರಸೂನಾಂಜಳಿನಿಕ್ಷೇಪನುಂ ಮಂಗಳಪದಪಠನ ಪ್ರಾಪ್ತಪ್ರಸ್ತಾವನನುಂ ವಿಹಿತಪೂರ್ವ ರಂಗಪ್ರಸಂಗನುಂ ಸಮಾಸಾದಿತ ಭಾರತೀವೃತ್ತಕನುಂ ಯುಕ್ತ ಗೀತಾತೋದ್ಯಲಲಿತ ನೃತ್ಯನಿಯತನುಂ ಅಂಗಿಕವಾಚಿಕಾಹಾರ್ಯಕಸಾತ್ವಿಕಾಭಿಮುಖ್ಯ ಚತುರಭಿನಯಚತುರನುಂ ವಿಭಾವಾನುಭಾವ ಸಾತ್ವಿಕಭಾವ ವ್ಯಭಿಚಾರಿಭಾವಾಭಿನಯಪರಿಪುಷ್ಪ ರಸವಿಶಿಷ್ಟ ಸ್ಥಾಯಿಭಾವನುಂ ಮತ್ತು ಗೃಹೀತಾರಭಟೀವೃತ್ತಿ ವಿಸ್ತಾರಿತ ತಾಂಡವಾಡಂಬರನುಂ ನಿಜಾನುಗತ ಸಮುತ್ಸವಾರಬ್ಧ ನಾನಾಮರೀಚಿ ವಿಚಿತ್ರನರ್ತನನುಮಾಗಿ –

ಕಂ || ಸಕಳಜನನಯನಹೃದಯ
ಪ್ರಕರಮನೋರಂತೆ ತಣಿಪಿದಂ ಜಿನಸಭೆಯೊಳ್
ಸುಕೃತನಿದಾನಂ ಸಂಗೀ
ತಕ ವಿಕಸನದಿಂದ್ರಮಿಂದ್ರನುದಿತಾನಂದಂ || ೫೮

ನಿರುಪಮನಾಟ್ಕರಸಾಮೃತ
ವರವರ್ಷಂ ಹರ್ಷರಸತರಂಗಿಣಿಯಂ ಭೋ
ರ್ಗರೆಯೆ ಪರಿಯಿಸಿದುದನಿಮಿಷ
ಪರಿವೃಢ ದೃಢಭಕ್ತಿಭಾರವಾರಿದಜನಿತಂ || ೫೯

ವ || ಅಂತು ಸಮಾಪ್ತ ಸಂಗೀತಕಸಪರ್ಯನಾ ಶಚೀಕಾಂತನನಂತರಂ ತ್ರಿಭುವನಸ್ವಾಮಿ ಸಮುದ್ದಾಮ ನಾಮಕರಣೋತ್ಸವೋದ್ಯುಕ್ತಚಿತ್ತನಾಗಿ –

ಚಂ || ಪುರುಪರಮೇಶ್ವರಂ ಭರತಚಕ್ತಿಗೆ ಭಾವಿಜಿನೇಂದ್ರಸಂಖ್ಯೆಯಂ
ಪರಿವಿಡಿಯಿಂದಮಂತವರ ನಾಮಮುಮಂ ಸಕಳಜ್ಞನಂದು ವಿ
ಸ್ತರದೊಳೆ ಪೇೞ್ದನಾ ಪೆಸರ್ಗಳುಂ ಗತಿತೀರ್ಥಕರ್ಗಾದುವೀ ದಯಾ
ಶರಧಿಗೆ ವೀರನೆಂಬ ಚರಮಾಖ್ಯೆಯೆ ಮುಖ್ಯವಿಧೇಯಮಲ್ಲದೇ || ೬೦

ವ || ಎಂದು ಮುನ್ನಂ ತನ್ನ ಮನದೊಳೆ ಬಗೆದು ಬೞಿಯಮದನೆ ಸಿದ್ಧಾರ್ಥ ಪಾರ್ಥಿವ ಪ್ರಮುಖ ನಿಖಿಳಸಭೆಗಭಿವರ್ಣಿಸಿ ಚತುರಮರಾರ್ಚಿತ ಚತುರ್ವಿಂಶತಿತೀರ್ಥಕರ ವರ್ಯಂಗೆ ಪರ್ಯಾಯಪ್ರಾಪ್ತಮುಂ ಭುವನತ್ರಯವ್ಯಾಪ್ತಮುಂ ನಿಶ್ಶೇಷದೋಷ ನಿವಾರಣಮುಂ ನಿಖಿಳಮಂಗಳಕಾರಣಮುಂ ವಿದಗ್ಧಜನಶ್ರವ್ಯಮುಂ ಮಜ್ಜನ ಮಂಡನಾದಿ ಬಾಳೋಚಿತೋಪಚಾರವ್ಯಾಪಾರಮನನಾರತಮತೀವಯತ್ನದಿಂ ವಿಧಿಯಿಸಲೆಂದು ವಿದಗ್ಧವಿಬುಧವನಿತಾಜನಮನನಿಮಿಷರಾಜಂ ನಿಯೋಜಿಸಿ ಸಕಳಾಮರೇಂದ್ರ ಸಮಿತಿಸಮನ್ವಿತಂ ಮುಹುರ್ಮುಹುಃ ಪ್ರಣಾಮಾಭಿರಾಮಂ ಶ್ರೀ ವೀರಚಾರು ಚರಣಾರ ವಿಂದದ್ವಂದ್ವಮುಮುನೞ್ಕಿಱಿಂ ಮೆಲ್ಲನಲ್ಲಿಂ ತಳರ್ದು ನಿರ್ವರ್ತಿತ ದ್ವಿತೀಯ ಕಲ್ಯಾಣಮಹೋತ್ಸವಂ ನಿಜನಿವಾಸಕ್ಕೆ ಪೋದನನ್ನೆಗಮಿತ್ತಲ್ –

ಚಂ || ನಮಗೆ ಜಿನೇಂದ್ರನಾನತಶತೇಂದ್ರನಗಾಧ ಸುಬೋಧಸಂಪದಂ
ಸಮವಸೃತೀಶನಾದನೆಸೆವಾತ್ಮಜನೀವರವೀರನಂತಱಿಂ
ದಮೆ ಸಫಲಂ ವಲಂ ಬಗೆಯೆ ನಮ್ಮಯ ಜನ್ಮಮೆನುತ್ತುಮಾ ಯಶೋ
ರಮಣನ ತಾತಮಾತೃಯುಗಳಂ ತಳೆದತ್ತು ಮನಃಪ್ರಮೋದಮಂ || ೬೧

ಕಂ || ಪರಿಜನ ಪುರಜನ ಗುರುಜನ
ಸುರಜನ ಬಂಧುಜನ ಬುಧಜನಂಗಳ ಹರ್ಷಂ
ಬೆರಸು ಸಿರಿವೆರಸು ಧರ್ಮಂ
ಬೆರಸು ಜಸಂಬೆರಸು ಬಾಲಕಂ ವರ್ಧಿಸಿದಂ || ೬೨

ವ || ಅಂತು ವರ್ಧಿಸುವ ಜಗತ್ಪರಾರ್ಥ್ಯನಂ ಸಿದ್ದಾರ್ಥಿಪಾರ್ಥಿವೋತ್ತಮಂ ಕಂಡು ಮನದೆಗೊಂಡು ನಿಖಿಳೋದ್ಧವರ್ಧನಕಾರಕಂಗೆ ನಿಜದಾರಕಂಗೆ ನಿರತಿಶಯಪ್ರಭಾವ ಜನ್ಮಭೂಮಿಗೆ ವೀರಸ್ವಾಮಿಗೆ ವರ್ಧಮಾನನೆಂಬ ಸದರ್ಥಾಧೀನಮಂ ದ್ವಿತೀಯಾಭಿಧಾನಮಂ ಮಹಾವಿಭವದಿಂ ನಿಖಿಳಚೈತ್ಯಮಂದಿರ ಮಹಾಪೂಜಾಪುರಸ್ಸರಂ ನಿಜ ಭಾಂಧವ ಪ್ರಧಾನಜನ ಸನ್ನಿಧಾನದೊಳ್ ಸಂಕೀರ್ತನಂಗೆಯ್ಯೆ ನಿಖಿಳಮಂಗಳನಿಳಯಂ ಬಳೆಯುತ್ತುಮಿರ್ದು –

ತ್ರೋಟಕ || ಅವರೋಧವಧೂಜನಪಾಣಿಪಯೋ
ಜವನಾಂತವಿಹಾರಿ ಮರಾಳವತಂ
ಸವಿಳಾಸವತೀನಯನದ್ವಯ ಕೈ
ರವಶೀತರು ರಂಜಿಸಿದಂ ಜಿನಪಂ || ೬೩

ವ || ಮತ್ತಮಾ ಮಹಾಮಹಿಮಂ ಸಹಜಸಮುತ್ಪನ್ನ ಸನ್ನುತಮತಿ ಶ್ರುತಾವಧಿಬೋಧದೀಧಿತಿ ದಿವಾಕರಂ ದಿವಾಕರಸಮಪ್ರಭಂ ಗುರುನಿರಪೇಕ್ಷನಕ್ಷರಾದಿ ಸಕಳ ವಿದ್ಯಾವಿಶಾರದಂ ಶಾರದಶಶಾಂಕವಳಯದಂತೆ ಕುವಳಯಾನಂದಮನೊದವಿಸುತ್ತುಮಿರ್ದನಿರ್ಪುದುಮೊರ್ಮೆ –

ಕಂ || ನಿಯತಾಗಮಾರ್ಥದೊಳ್ ಸಂ
ಶಯಮೊಂದೆಡೆಯಲ್ಲಿ ತೋಱೆ ಸಂಜಯವಿಜಯಾ
ಹ್ವಯ ಚಾರಣಯುಗಳಂ ನಿ
ರ್ಣಯಾರ್ಥಮೆಯ್ತಂದು ತೀರ್ಥಕರದಾರಕನಂ || ೬೪

ಬಲವರೆ ತತ್ಸನ್ನಿಧಿಯೊಳ್
ತೊಲಗಿದುದು ಪದಾರ್ಥಸಂಶಯಂ ಪರ್ವಿದ ಕ
ೞ್ತಲೆ ದಿನಕರಸನ್ನಿಧಿಯೊಳ್
ತೊಲಗುವವೊಲದೇಂ ಸದರ್ಥನೋ ತೀರ್ಥಕರಂ || ೬೫

ವ || ಅಂತು ಸಂಶಯಂ ನಿಜಾಶಯದಿನಾಗಳೆ ಪೋಗಿ ಯೋಗೀಶ್ವರಯುಗಳಂ ಅಗಣಿತ ಪ್ರಮೋದದಿಂ ಸನ್ಮತಿಸಮುತ್ಪತ್ತಿಗೆ ನಿಮಿತ್ತಮಾದ ವೀರವರ್ಧಮಾನಾಭಿಧಾನನಪ್ಪ ಚಿನ್ಮಯ ಸನ್ಮೂರ್ತಿಗೆ ಸನ್ಮತಿ ಎಂಬ ತೃತೀಯ ನಾಮಧೇಯಮನಮೇಯೋತ್ಸವದಿ ನಿಟ್ಟು ವಿಶಿಷ್ಟಗುಣಸಂಪನ್ನನಂ ತನ್ನಾಮಲಾಂಛಿತ ಸ್ತುತಿಶತಂಗಳಿಂದ ಸ್ತುತಿಯಿಸಿ ಬೀೞ್ಕೊಂಡು ಪೋಪುದುಮಲ್ಲದೆಯುಂ ಮತ್ತಮೊರ್ಮೆ –

ಕಂ || ಸುರರಾಜಂ ತನ್ನಯ ಭಾ
ಸುರಸಭೆಯೊಳ್ ವೀರಜಿನಕುಮಾರಕನಂತಾರ್
ಧರೆಯೊಳ್ ನಿರ್ಭಯರವನೀ
ಶ್ವರನಂದನರೆಂದು ಕೀರ್ತಿಸುತ್ತಿರೆ ಭರದಿಂ || ೬೬

ಸಂಗಮಕನೆಂಬ ದೇವಂ
ತಾಂ ಗಡ ಕೇಳುತ್ತುಮಿರ್ದು ಭಯರಾಹಿತ್ಯಂ
ಸಂಗಳಿಕುಮೆ ಬಾಳಕಗಿದ
ಸಂಗತಮಾದೊಡಮಿದಂ ಪರೀಕ್ಷಿಸಲಕ್ಕುಂ || ೬೭

ವ || ಎಂದು ಬಗೆದು ಬೇಗದಿನಾದೇವಂ ದಿವದಿನವನಿಗವತರಿಸಿ ಕುಂಡಪುರದ ಬಹಿರುದ್ಯಾನ ಸ್ಥಾನಮಂ ಪೊಕ್ಕು ತದಂತರಾಳ ಮಹಾವಿಶಾಳ ವಟವಿಟಪಿಯ ಸಮುತ್ತುಂಗಾಯತ ಶಾಖಾನೀಕದೊಳ್ ಕಾಕಪಕ್ಷಧರ ಧರಾಧೀಶ್ವರಕುಮಾರಕ ಸಮೂಹಮುಂ ಸಮವಯಸ್ಕ ಸುರದಾರಕ ಸಂದೋಹಮುಂ ಬೆರಸೀಪ್ರಸ್ತಾವಂ ತಪ್ಪಿದೊಡೆ ಮುಂದಿನ್ನೆಂದುಮೀ ಪರಮಪುರಷನಂ ಪೊರ್ದಲಾಱೆನೆಂದು ಬಾಳಕೇಳೀಲೋಳತಾಲಲನೆಯಸರಂ ಬಡೆದು ತನ್ಮನಂಬಿಡಿದಿರ್ದಳೆಂಬಿನಮಳುಂಬಮಾದ ವಿನೋದರಸದ ಬಸದಿಂ ಮರಗೊಂಬನಾಡುತ್ತಿರ್ದ ವೀರಜಿನಕುಮಾರನಂ ದೂರದೊಳೆ ಭೋಂಕೆನೆ ಕಂಡು –

ಮ || ಪೆಡೆಗಳ್ ಸಾಸಿರಮಕ್ಷಿಯುಂ ರಸನೆಯುಂ ಪ್ರತ್ಯೇಕಮಿರ್ಛಾಸಿರಂ
ಪೆಡೆಗಳ್ಗಂ ಮಣಿ ಸಾಸಿರಂ ನೆಗೆವ ಧೂಮಜ್ವಾಲೆಗಳ್ ಬಿೞ್ದ ಪೆ
ರ್ಗಿಡಿಗಳ್ ಪೊಣ್ಮುವ ಫೂತ್ಕ್ರಿಯಾರಭಸಮಾದಂ ಭೀತಿಯಂ ಮಾಡೆ ನಿ
ಟ್ಟೊಡಲಂ ನೆಟ್ಟನೆ ನಾಗರಾಜನಿಳೆಯಿಂದೆೞ್ದಂದಮಂ ತಾಳ್ದಿದಂ || ೬೮

ವ || ಅಂತು ವಿಕ್ರಿಯಾವಿಡಂಬನವಿಧೀಯಮಾನ ಪೀನಭೋಗಮಂ ನಭೋಗಮಂ ಬೇಗದಿಂ ಪಡೆದು ತಡೆಯದೆ ವಿನಯಜನವತ್ಸಳನಿರ್ದ ತತ್ಸಮುನ್ನತ ನ್ಯಗ್ರೋಧಮಹೀರುಹಮಂ ಮಂಥದಂಡದಾಮದಂದಿಂ ಸುತ್ತಿ ಸುತ್ತಲುಂ ಫಣಾಮಂಡಳಮಂ ಪಸರಿಸಿ ಮಸಗಿ ಮೊರೆದು ದೆಸೆಗಳಂ ಕಿವುಡುವಡಿಸುತ್ತುಂ ಶಾಖಾಶಿಖರಶೋಭಿತ ಶಿಶುಗಳಂ ನಟ್ಟದಿಟ್ಟಿ ಯಿನವ್ವಳಿಸಿ ನೋಡುತ್ತುಮಿಂತು ರೌದ್ರವೀರಾದ್ಭುತರಸಂಗಳೆ ಮೂರ್ತಿವೆತ್ತುವೆನಿಸಿ ಸುಸಂಗಮಂ ಮಹಾವಿಷಮವಿಷಧರತಾಸಂಗಮನಾಗಿ ಶಿಶುಕ್ರೀಡಾವಿಚ್ಛೇದಕಾರಿಯಾಗೆ –

ಕಂ || ಸಹಚರ ಬಾಳಕಜಾಳಕ
ಮಹೀನನಾಗಿರ್ದಹೀನನಂ ಕಂಡು ಭಯಾ
ವಹಹೃದಯಂ ದೀನಮುಖಂ
ಬಹುರೋದನಮಾದುದಾತ್ತಕಂಪಸ್ವೇದಂ || ೬೯

ಉ || ಬಂದುದು ಮಿೞ್ತು ಬಾರಿಸುವರಾರಿದನಕ್ಕಟ ಕೆಟ್ಟೆವೆಂದು ಕ
ಣ್ಣಿಂದುಗುತರ್ಪ ಬಾಷ್ಪಜಲಪೂರದೆ ಮೆಯ್ವಿಡೆ ನಾಂದು ಕೊಂಬುಗೊಂ
ಬಿಂದವನೀತಳಕ್ಕೆ ಮಿಲ್ಲ ತಲ್ಲಣದಿಂದಮೆ ಪಾಯ್ದುಪೋದುದಾ
ಮಂದರಧೈರ್ಯನೊರ್ವನೆ ಕುಜಾಗ್ರಹದೊಳಿರ್ದನಕಂಪನಂ ಜಿನಂ || ೭೦

ವ || ಅಂತು ದರಸ್ಮೇರಮುಖಾರವಿಂದನಾ ವೀರಂ ಧೀರೋದಾತ್ತನುತ್ತುಂಗ ನಿಶ್ರೇಣಿಯಂ ಮೆಟ್ಟಿ ಮಹಾಹರ್ಮ್ಯಶಿಖರದಿನಿಳಾತಳಕ್ಕೆ ಬರ್ಪಂತೆ ದರ್ಪಿಷ್ಠ ಕಳ್ಪಜಕಳ್ಪಿತ ಸರ್ಪರಾಜ ರಾಜತ್ಫಣಾನೀಕಾನೇಕ ಶೋಣಮಾಣಿಕ್ಯ ಮಯೂಖಮಂಜರಿಗಳೊಳ್ ನಿಜ ವಿರಾಜ ಮಾನ ಮೃದುಪದ ಪದ್ಮರಾಗರಶ್ಮಿಗಳ್ಬೆರಸಿ ದೆಸೆಗಳೊಳೆಳೆವಿಸಿಲ ಬಳಗದಂತೆ ಪಸರಿಸುವಿನಮಾ ಭಯಂಕರನಸುರನ ಶಿರಂಗಳಂ ತರದೆ ಮೆಟ್ಟಿ ಮೆಲ್ಲನೆ ಮಹೀತಳಕ್ಕೆ ಮಹಾಮಹಿಮನವತರಿಸೆ ಸುಸಂಗಮಂ ಪರಮಾಶ್ಚರ್ಯಪ್ರಮೋದರಸಸಂಗಮಾಂತ ರಂಗನಾಗಿ –

ಕಂ || ತಳೆದು ನಿಜಮೂರ್ತಿಯಂ ತ
ಚ್ಚಳನಂಗಳನಮಳ ವಸ್ತುವಿಂ ಪೂಜಿಸಿ ನಿ
ಶ್ಚಳನಂ ಪೊಗೞ್ದಂ ವಸುಧಾ
ವಳಯದೊಳಿಂತಪ್ಪ ವೀರರಾರೆಂದು ಸುರಂ || ೭೧

ವ || ಅಂತು ಪೊಗೞ್ದು ನಿಜಾಗಮನವೃತ್ತಾಂತಮಂ ಮಹೀಕಾಂತಪ್ರಮುಖ ನಿಖಿಳ ಜನಕ್ಕೆ ಜಲಕ್ಕನಱಿಯೆ ಪೇೞ್ದು ತಮ್ಮಂ ಮಿಗುವ ವೀರರಾರುಮಿಲ್ಲೆನಿಪ ವೀರವಲ್ಲಭಂಗೆ ಮಹಾ ವೀರನೆಂದು ಚತುರ್ಥಾಭಿಧಾನಮನರ್ಥ್ವಮನಿಟ್ಟು ಪೊಡೆವಟ್ಟು ಪೋದನಿಂತು –

ಮ || ಸ್ರ || ಸುರರಾಜಂ ವೀರನೆಂದಾ ಜನಪತಿ ಜನಕಂ ವರ್ಧಮಾನೇಶನೆಂದಾ
ದರದಿಂದಂ ಚಾರಣರ್ ಸನ್ಮತಿ ಜನಪತಿಯೆಂದಾವಗಂ ವಿಕ್ರಿಯಾಡಂ
ಬರದಿಂದಂ ಸರ್ಪರಾಜಕೃತಿವಡೆದ ದಿವೌಕಂ ಮಹಾವೀರನೆಂದಾ
ಪರಮೇಶಂಗಿತ್ತ ನಾಲ್ಕಾಖ್ಯೆಗಳೆಸೆವುವಶೇಷಾರ್ಥಿತಾರ್ಥಪ್ರದಂಗಳ್ || ೭೨

ವ || ಮತ್ತಂ –

ಕಂ || ವಸುಧಾಜನಮನವರತಂ
ಸ್ವಸಮೀಹಿತ ಸಕಲ ಹಿತಮನೆಸಗುವ ಜಿನನೊಳ್
ವಸುಧೈಕಬಾಂಧವಾಖ್ಯೆಯ
ನಸಮೋತ್ಸವದಿಂದೆ ಕೀರ್ತಿಸಿತ್ತಭಿನುತಮಂ || ೭೩

ಕಳಹಂಸಗಮನಮುಂ ಕರಿ
ಕಳಭಾಲಸಗಮನಮುಂ ತ್ರಿಳೋಕಶಿಖರ
ಸ್ಥಳಗಮನ ಸಮುದ್ಯುಕ್ತನ
ವಿಳಸಿತ ಗಮನಕ್ಕೆ ಸಮನದೆಂತಾದಪುದೋ || ೭೪

ಕಂ || ನಗೆ ತನಗೆ ಮುಂದೆ ಮೋಹಾ
ರಿವರ್ಗಮಂ ಮುಱಿದ ಕಾಲದೊಳ್ ಪರಮನ ಪೊ
ರ್ದುಗೆ ಘಟಿಯಿಸದೀಗಳೆ ಲೀ
ಲೆಗೆ ಸಂದಪೆನೆಂಬ ತೆಱದೆ ಮೆಱೆದುದು ಜಿನನೊಳ್ || ೭೫

ಮೃದುಮಧುರ ಗಭೀರ ಧ್ವಾ
ನದ ನುಡಿಗಳ್ ಕೂಸುತನದೊಳಂ ಕೇಳ್ವಜನ
ಕ್ಕೊದವಿಸಿದುವು ಪರಮಾನಂ
ದದ ಭಾರಮನೇನುದಾರನೋ ವೀರಜಿನಂ || ೭೬

ವಾಸವನೆ ತನಗೆ ನಚ್ಚಿನ
ದಾಸಂ ವಾಸವನ ವನಿತೆ ತನಗನವರತಂ
ದಾಸಿ ದಲೆನೆ ಮನುಜರದೇಂ
ಪಾಸಟಿಯೆ ಜಿನಾರ್ಭಕಂಗೆ ಸಕಳಾವನಿಯೊಳ್ || ೭೭

ಉ || ಆಭರಣಾನುಲೇಪ ವಸನ ಪ್ರಸವಾದಿಗಳಂ ನಿಳಿಂಪ ಲೋ
ಕಾಭಿನವಂಗಳಂ ಹರಿ ನಿರಂತರಮುತ್ಸವದಿಂದಮಟ್ಟುವಂ
ಶೋಭಿಪ ತತ್ಪುರಂದರ ಪುರಂಧ್ರಿಯುಮಾತೆಱದಿಂದಮಟ್ಟುವಳ್
ತ್ರೈಭುವನಾಧಿಪಂಗೆ ಸುರಲೋಕ ಸುವಸ್ತುವ ಭೋಗಮಾಗಳುಂ || ೭೮

ವ || ಅಂತಾ ಜಗದೀಶನ ಶೈಶವಂ ಸದುಪದೇಶದಂತೆ ಪರಮಹಿತಪ್ರಕಾಶಮಾಗೆ ತದತಿಕ್ರಮ ಸಮಯದೊಳ್ –

ಕಂ || ದರಹಾಸಕೌಸುಮಂ ಬಂ
ಧುರ ರೋಚಿಃಪಲ್ಲವಂ ಲಸದ್ಭ್ರೂಲತಿಕಂ
ವರಕರಶಾಖಂ ಸಫಲಂ
ಕರಮೆಸೆದುದು ಯೌವನವನಮವನತಜಗನಾ || ೭೯

ಭುವನನುತ ನಿತ್ಯ ನಿಸ್ವೇ
ದ ವೃತ್ತಿತನು ಸಕಳ ಮಳವಿಹೀನತೆ ಸುಪಯೋ
ಧವಳರುಧಿರತ್ವಮಾದ್ಯ
ಪ್ರವಿಮಳ ಸಂಸ್ಥಾನಮಾದ್ಯವರಸಂಹನನಂ || ೮೦

ಅನುಪಮ ಸೌಂದರ್ಯಂ ಮ
ತ್ತನವಧಿ ಸೌಗಂಧ್ಯಮಸಮ ಸೌಲಕ್ಷಣ್ಯಂ
ವಿನುತಪ್ರಿಯ ಹಿತವಚನತೆ
ಯನಂತ ಬಳಮೆಂದು ಪತ್ತು ಸಹಜಾತಿಶಯಂ || ೮೧

ಕಂ || ನಿಸದಂ ತನಗೆಸೆಗುಮರ
ತ್ನಿಸಪ್ತಕೋತ್ಸೇಧಮಮಳ ಕಾಂಚನವರ್ಣ
ಪ್ರಸರಂ ದ್ವಾಸಪ್ತತಿವ
ರ್ಷಸಂಖ್ಯ ಸಜ್ಜೀವಿತಂ ಜರಾರಾಹಿತ್ಯಂ || ೮೨

ಉತ್ಸವ || ವಿವಿಧವೀವಿಷಾಣ ಕಾಷ್ಠಕಂಟಕಾನಳಾನಿಳ
ಪ್ರವಿತತಾಯುಧಾತಪಾತ ಶೀತಜಾತ ಬಾಧೆಯುಂ
ಪವನ ಪಿತ್ತ ಪೀನಸಾದಿ ಸಂಭವಾಮಯಂಗಳುಂ
ಭುವನವಲ್ಲಭಾಂಗ ಸಂಗತಂಗಳಾಗದೊರ್ಮೆಯುಂ || ೮೩

ಕಂ || ಮದಮದಿರ್ದುದು ಕೋಪಂ ಕೊ
ಗ್ಗಿದುದಳಿಪೊಳಸೋರ್ದುದನ್ನೆಯಂ ಬನ್ನಂಬ
ಟ್ಟುದು ಮಾಯೆ ಮಾಯಮಾಯ್ತೇ
ನುದಾರಗುಣಗಣಗರಿಷ್ಠನೋ ವೀರಜಿನಂ || ೮೪

ಮ || ಸ್ರ || ಸುರಲೋಕಾನೇಕ ಭೋಗೋಚಿತ ಪರಿಚಿತ ವಸ್ತೂತ್ಕರಂ ದೇವದೇವೀ
ವರಗೀತಾತೋದ್ಯನೃತ್ಯಾಚರಣಮಮರ ನಾನಾಸಪರ್ಯಾವಿಧಾನಮ
ಪರಿಭಾವಿಪ್ಪಂದಿವೆಲ್ಲಂ ಪರಮಗುರುಗೆ ಚೇತೋವಿಕಾರಂಗಳಂ ಬಿ
ತ್ತರಿಸಲ್ ತಾಮಾರ್ತುವಿಲ್ಲಂಬರಕೆ ಪರಿಕಿಪಂದುಂಟೆ ಪಂಕಪ್ರಲೇಪಂ || ೮೫

ವ || ಅಂತು ನಿರಂತರನಿಖಿಳಭುವನಪ್ರಶಂಸೆವೆತ್ತ ನಾಥವಂಶಲಲಾಮಂ ತ್ರಿಂಶದ್ವರ್ಷಮಿತ ಕುಮಾರಕಾಲಂ ತನಗೆ ಲೀಲೆಯಿಂ ಸಲ್ವುದುಂ ಒರ್ಮೆ ತನ್ನಹಾವೀರಂ ಭರ್ಮನಿರ್ಮಿತ ಹರ್ಮ್ಯೋಪರಿಮಾಭಿರಾಮ ಭೂಮಿಕಾನಿಷಣ್ಣಂ ತನ್ನ ಮುಂದೆ ತಣ್ಣನೆ ತಣಿದು ಕುಳ್ಳಿರ್ದು ತಣ್ಣೆಲರಲಪದಿನಲುಗುವ ಕರ್ಣಪೂರಪಾರಿಜಾತಮಂಜರಿಗಳ ಮದಾಳಿಮಾಳಿಕೆಯ ರುತಿಯಿಂ ಸುತಿಯ ಪವಣನವಟೈಸಿ ಪಾಡಿ ನಿಜಾಂಕಮಾಲಾಮಸೃಣಮಾದ ಗೀತಾಮೃತಾಸಾರಪೂರಮಂ ಕಾೞ್ಪುರಂ ಬರಿಯಿಪ ಸುರಸವೇಷಭಾಷಾ ಸಮುದ್ದಾಮ ರಾಮಣೀಯಕಾಮರಕಾಮಿನೀಜನದ ಮನದಮಹೋತ್ಸವಲತೆಯ ವಿಸರ್ಪಣಕ್ಕಡರ್ಪಾಗಿ ರಾಗದಿಂ ತೀರ್ಥಕರ ಪರಮದೇವನಿರ್ಪುದುಮಾ ಪ್ರಸ್ತಾವದೊಳ್ –

ಕಂ || ಅತುಳ ಪ್ರಮೋದ ಮದದಿಂ
ತೃತೀಯ ಕಲ್ಯಾಣಲಕ್ಷ್ಮಿ ಕಳಿಪಿದದೂತೀ
ಸತಿಯೆನಿಸಿದ ವಿತತ ವಿರ
ಕ್ತತೆ ಜಿನನಂ ಭಜಿಯಿಸಿತ್ತು ವರ ಸನ್ಮತಿಯಂ || ೮೬

ವ || ಅಂತು ವಿನಯಾಭಿನಿಬೋಧಿತ ವಿಕಾಶವಿದಿತ ಸಮಸ್ತವಸ್ತು ವೈಚಿತ್ಯ್ರ ಪಾತ್ರಮಾದ ಪದದೊಳ್ ತೊಟ್ಟನೆ ಪುಟ್ಟೆ ಸಜ್ಜನಸ್ತವನ ಸೌಭಾಗ್ಯಯೋಗ್ಯಮಾದ ವೈರಾಗ್ಯಭಾಗ್ಯವರ್ಧನದೊಳಾ ಬುಧಸ್ವರ್ಧೇನುವೆನಿಸಿದ ವರ್ಧಮಾನಭಾನುವನ್ಯೂನ ಪಾವನಾವಧಿಬೋಧದೀಧಿತಿ ಪುಷ್ಪದೃಷ್ಟಿಯಿಂ ಅತೀತಾತ್ಮೀಯಾಮೇಯ ನರನಾರಕತಿರ್ಯಗಾದಿ ಪರ್ಯಾಯ ನಿಕಾಯಮಂ ನಿರಾಕುಳಂ ನಿರೀಕ್ಷಿಸಿ ವಿಚಕ್ಷಣಾಗ್ರಣಿ ಪರಿಭಾವಿಸಿದನಿಂತು –

ಉಪಜಾತಿ || ಅಸುಭೃತ್ಸತಿ ಕೊಂಡು ಕೊಂಡು ತಾಂ
ಬಿಸುಡುತ್ತಿರ್ಪ ಕಳೇವರಂಗಳಂ
ಪೆಸರ್ಗೊಂಡಿನಿತೆಂದು ನಿಂದು ಲೆ
ಕ್ಕಿಸಲೀ ಲೋಕದೊಳಾರ್ಗೆ ತೀರ್ಗುಮೋ || ೮೭

ಕಂ || ಸರಣಂ ಸಮರಣಮೀಸಂ
ಸರಣಂ ಸುಖಮಿದಱೊಳಾವುದಿರ್ದಪುದದಱಿಂ
ದರಣಮಮರಣಮೆನಿಪ್ಪಾ
ಪರಮಪದಂಬೊಕ್ಕು ಸುಖದಿನಿರ್ಪನೆ ಚದುರಂ | ೮೮

ಸವಿಷಮಿದೆಂಬುದನಱಿಯದೆ
ಸವಿಸವಿಯೆಂದನುಭವಿಪ್ಪ ಜೀವಕ್ಕಿಂತೀ
ಭವಸುಖಮಸುಖಮೆ ನಿಖಿಳಮ
ನವಟಯ್ಸುಗುಮಲ್ತೆಬಳವದಘವಿಳಸಿತಮಂ || ೮೯

ಜೀವಿಪ ವಸ್ತುವನರ್ಜಿಪ
ಭಾವನೆ ಮನದಲ್ಲಿ ತಿಣ್ಣಮೆನಿಸುವ ಬಹಿರಾ
ತ್ಮಾವಸ್ಥೆಯ ಜೀವಾವಳಿ
ಭಾವಿಸುಗುಮೆ ಭಾವಿ ನಿತ್ಯಸೌಖ್ಯದ ದೆಸೆಯಂ || ೯೦

ಕಿಡುವೊಡಲೊಡಮೆಗಳೆರಡಱೊ
ಳೆಡೆಯುಡುಗದೆ ತೊಡರ್ದು ತೋರ್ಪಹಂ ಮಮಭಾವಂ
ಕೆಡಪದೆ ಬಿಡುಗುಮೆ ಸಂಸೃತಿ
ಜಡಧಿಯ ಕಡಿದಪ್ಪ ಸುೞಿಯ ಕುೞಿಯೊಳ್ ಖಳನಂ || ೯೧

ವ || ಎಂದು ದುರಂತ ದುಃಖಪರಿಪಾಕಕರಪರಾವರ್ತನಪರಂಪರಾಪರಿಣತಿ ಪರಿಕರಮನಂತಃ ಕರಣದೊಳ್ ಪಿರಿದುಂ ಪರಿಭಾವಿಸುತ್ತುಂ ಅಸಾರ ಸಂಸಾರಪರಾಙ್ಮುಖನುಮಪವರ್ಗ ನಿಸರ್ಗ ನಿರತಿಶಯ ಸೌಖ್ಯಾಭಿಮುಖನುಮಾಗಿ ಭವ್ಯಜನವತ್ಸಳಂ ವಿರಾಗಚಿತ್ಸೇವೆಯೊಳಿರೆ ತತ್ಸಮಯದೊಳ್ –

ಕಂ || ಸುಕೃತನಿಧಾನರ್ ಲೋಕಾಂ
ತಕದೇವರ್ ದೇವದೇವನೊಳ್ ವೈರಾಗ್ಯಂ
ವಿಕಸಿತಮಾದುದನವಧಿ
ಪ್ರಕಾಶದಿಂದಱಿದು ನೆಱೆದು ನಿಜದಿವದಿಂದಂ || ೯೨

ಬಂದೊಲವಿಂದೆ ನಮೇರುವ
ಮಂದಾರದಪಾರಿಜಾತದಲರ್ಗಳ ಸರಿಯಂ
ಸಂದ ಜಿನೇಂದ್ರನ ಜಗದಭಿ
ವಂದಿತ ಚರಣಾರವಿಂದದೊಳ್ ಸುರಿದೆಂದರ್ || ೯೩

ಉ || ದೇವ ದಯಾರಸಂ ಮಿಸುಪ ನಿನ್ನಯ ಮಾನಸದೊಳ್ ವಿರಕ್ತಿರಾ
ಜೀವಮದಿಂದು ಕುಂದದ ವಿಕಾಸ ವಿಳಾಸಮನಾಂತು ಭವ್ಯ ಭೃಂ
ಗಾವಳಿಯಾಗಮಕ್ಕೆ ಮಿಗೆ ಕಾರಣಮಾದುದು ಸದ್ಗುಣಾಶ್ರಯಂ
ಭಾವವಿಶುದ್ಧಿ ಸತ್ಪರಿಮಳಂ ವರಬೋಧ ಪರಾಗರಂಜಿತಂ || ೯೪

ಮ || ಸ್ರ || ಪರಮಶ್ರೀ ಪಾರ್ಶ್ವತೀರ್ಥೇಶ್ವರನಮೃತಪದಪ್ರಾಪ್ತನಾದಿಂಬೞಿಕ್ಕೀ
ಧರೆಯೊಳ್ ಸದ್ಧರ್ಮತೀರ್ಥವ್ಯವಹಿತೆಮೆನಿಸಿರ್ದತ್ತು ತತ್ತೀರ್ಥಮಂ ಬಿ
ತ್ತರಿಸತ್ಯಾನಂದದಿಂದಂ ವಿನುತ ಜನತೆಯಂ ಮುಕ್ತಿಪರ್ಯಂತಮೊಲ್ದು
ದ್ಧರಿಸುದ್ಧೂತಾಘ ನೀನುಂ ತಳೆ ಬೞಿಕಮೃತಪ್ರಾಜ್ಯಸಾಮ್ರಾಜ್ಯದೊಳ್ಪಂ || ೯೫

ಕಂ || ಜಳಧಿಗೆ ಜಳಧಿಯ ಜಳಮಂ
ತಳೆದಂಜುಳಿಯಿಂದಮರ್ಘ್ಯಮೀವಂತೆ ನಿರಾ
ಕುಳ ಸಕಳ ವಿಮಳ ಸಂವಿ
ಜ್ಜಳಧಿಗೆ ಜಿನ ನಿನಗೆ ತಿಳಿಪುವೆಮ್ಮುದ್ಯೋಗಂ || ೯೬

ಪರಮ ಭವದೀಯ ಸುರುಚಿರ
ಪರಿನಿಷ್ಕ್ರಮಣ ಪ್ರಭಾವಮಂ ನೋಡಿ ಕೃತಾ
ರ್ಥರೆವಪ್ಪೆವೆಂದು ಬಂದೆವು
ಬರವೆಮಗುೞಿದೆಂತು ಕಾಂತ ಕರಣೀಯಮೆ ಪೇೞ್ || ೯೭

ವ || ಎಂದಾ ವಿಚಿತ್ರ ರತ್ನಾಲೋಕದ ಸುಪ್ರಸಿದ್ಧ ಬ್ರಹ್ಮಲೋಕದ ಸಾರಸ್ವತಸಾರಸ್ವತಂತ್ರರಪ್ಪ ಸಾರಸ್ವತಾದಿತ್ಯವಹ್ನ್ಯರುಣ ಗರ್ದ್ಧತೋಯ ಕುಪಿತಾವ್ಯಾಬಾಧಾರಿಷ್ಟರೆಂಬ ಲೋಕಾಂತಿಕ ದೇವರೆಣ್ಬರುಮಾ ಮಹೋದಾರನಂ ವೀರನಂ ಶುಂಭದ್ಗಂಭೀರೋಚಿತ ವಾಚಾವಿತತಿಯಿಂ ಪ್ರತಿಬೋಧಿಸಿ ನಿಜಕ್ಲುಪ್ತ ಪ್ರತಿಪತ್ತಿಯಂ ಮೆಱೆದು ಮಹಿಮೆಯೊಳ್ ನೆಱೆದನಂ ಬೀೞ್ಕೊಂಡು ಮುದಮನೊಳಕೊಂಡು ನಿಜನಿಳಯಕ್ಕೆ ನಿಳಿಂಪರುಷಿಗಳುಂ ಪೋದರನ್ನೆ ಗಮಿತ್ತಲ್ –

ಕಂ || ನಿಜಜನನೀಜನಕರಬಂ
ಧುಜನದ ಪರಿಜನದ ಮೋಹಲತೆಯ ತೊಡರ್ಪಂ
ತ್ರಿಜಗತ್ಪತಿ ಚತುರವಚೋ
ಭುಜಲತಿಕೆಗಳಿಂದೆ ಬಿಡಿಸಿದಂ ಪರಿವಿಡಿಯಿಂ || ೯೮

ವ || ಅಂತಾ ಗುರುಗುಣಂ ಗುರುಜನಾದಿಗಳನೊಡಂಬಡಿಸಿ ತಪೋನುಷ್ಠಾನವಿಧಾನದತ್ತಾ ವಧಾನನಾಗಿರ್ಪುದುಂ ಮತ್ತಮಾಪ್ರಸ್ತಾವದೊಳ್ –

ಕಂ || ಅವಧಿಪ್ರಯೋಗದಿಂದೆ ನಿ
ರವಧಿಗುಣಾಸ್ಪದನೊಳಾದ ಪರಿನಿಷ್ಕ್ರಮಣಾ
ಧ್ಯವಸಾಯಮನಱಿದು ಶಚೀ
ಧವನವಿಳಂಬಿತಮಮರ್ತ್ಯಸಮಿತಿಸಮೇತಂ || ೯೯

ವ || ಮಹಾವಿಭೂತಿಯಿಂ ಭೂತಳಕ್ಕವತರಿಸಿ ಭೂತಾನುಕಂಪಾಸಂಪನ್ನನಪ್ಪ ಸನ್ಮತೀಶ್ವರನಿರ್ದ ನಯನಾನಂದಕರ ಮಂದಿರಮಂ ಪುಗುತಂದು –

ಮಲ್ಲಿಕಾಮಾಲೆ || ಚಾರುಚಂದನ ಚಂಚದಕ್ಷತಜಾತದಿಂದತಿಪೂತದಿಂ
ಪಾರಿಜಾತದ ಸತ್ಫಳಪ್ರಸವಾಳಿಯಿಂ ಸಮದಾಳಿಯಿಂ
ವೀರನಾಥನ ಸನ್ನುತಾಂಘ್ರಿಯುಗಂಗಳಂ ಸುಖದಂಗಳಂ
ಧೀರನರ್ಚಿಸಿ ತಾಳ್ದಿದಂ ಮಿಗೆ ವಾಸವಂ ಸುವಿಳಾಸಮಂ || ೧೦೦

ವ || ಅಂತು ತದನಂತರಂ ಜಿನಜನನ ಜನಿತಸವನಕ್ಕೆ ಸಮನಿದೆನಿಸಿ –

ಉ || ತೀರ್ಥಜಳಂಗಳಂ ತರಿಸಿ ನಿರ್ಮಳ ಭರ್ಮಘಟಂಗಳಿಂದಮಾ
ತೀರ್ಥಕರಂಗೆ ಸಂಗಳಿಸಿ ಮಂಗಳಮಜ್ಜನಮಂ ಬೞಿಕ್ಕೆ ಪು
ಣ್ಯಾರ್ಥಿ ಬಳಾರಿ ಬಿತ್ತರಿಸಿದಂ ಸುರಲೋಕದ ಸಾರವಸ್ತುವಿಂ
ದರ್ಥಿತದಾಯಕಂಗೆಸೆವ ಮಂಡನಮಂ ವಸುಧೈಕಬಾಂಧವಂ || ೧೦೧

ಗದ್ಯ

ಇದು ನಿಖಿಳ ಭುವನಜನ ವಿನೂತಸ್ಫೀತ ಮಹಿಮಾವದಾತ ವೀತರಾಗ ಸರ್ವಜ್ಞತಾ ಸಮೇತ
ಖ್ಯಾತಜಿನಸಮಯ ಕಮಳಿನೀ ಕಳಹಂಸಾಯಮಾನ ಮಾನಿತ
ಶ್ರೀ ನಂದಿಯೋಗೀಂದ್ರ ಪ್ರಸಾದ ವಾಚಾಮಹಿತ
ಕೇಶವರಾಜಾನಂದ ನಂದನ ವಾಣೀವಲ್ಲಭ ವಿಸ್ತಾರಿತಮಪ್ಪ
ವಸುಧೈಕಬಾಂಧವ ಶ್ರೀ ವರ್ಧಮಾನಪುರಾಣದೊಳ್
ಪರಮನ ಪರಿನಿಷ್ಕ್ರಮಣೋದ್ಯೋಗವರ್ಣನಂ
ಚತುರ್ದಶಾಶ್ವಾಸಂ