ಕಂ || ಶ್ರೀವಿನಯಾದಿ ಗುಣಪ್ರಭ
ವಾವನಿಯೆನಿಸಿದುದು ಬಗೆಯೆ ನಿಜಚರಿತಮೆನಿ
ಪ್ಪೀ ವಿಖ್ಯಾತಿಗೆ ಸಂದಂ
ಪಾವನಮತಿ ಪಂಚಪರಮಗುರುಪದವಿನತಂ || ೧

ವ || ಅಂತಾ ವಿಶಾಖಭೂತಿಭೂತಳೇಶ್ವರಂ ವಿನತ ವಿಶ್ವನಂದಿಯುವರಾಜ ಸಮೇತಂ
ಸಾತಿಶಯ ಲಕ್ಷ್ಮೀಭೋಗಭಾಗಿಯಾಗಿರ್ಪುದುಂ-

ಉ || ನಂದನದಂದದಿಂದೆಸೆವಿನಂ ಬನಮಂ ಮನದೞ್ಕಱಿಂದೆ ಸಂ
ಕ್ರಂದನಸನ್ನಿಭಂ ತ್ರಿದಿವಸನ್ನಿಭ ತತ್ಪುರಪಾರ್ಶ್ವದೊಳ್ ಯಶೋ
ನಂದಿತ ವಿಶ್ವನಂದಿವಿಭು ಮಾಡಿಸಿದಂ ನಿಜಕೇಳಿಗೆಂದುಮಾ
ನಂದನಮಂದಗಂಧವಹ ಚೈತ್ರವಿಚಿತ್ರ ನಿವಾಸಮಪ್ಪುದಂ || ೨

ವ || ಅಲ್ಲಿ-

ಉ || ಆವಗಮಬ್ಜಜಂ ಮಣಿಕರಂಡಕಮಾಲೆಯನಿಲ್ಲಿ ನೇ ಱಿದಂ
ತೀವಿ ರಸಂಗಳಾಱುಮನೆನಿಪ್ಪುವು ಬಿಣ್ಗೊನೆ ಕೊಂಬುಗೊಂಬಿನೊಳ್
ತೀವಿರೆ ತೆಂಗು ತಾೞು ಬದರಿ ದಾಡಿಮಮಮ್ಮಡೆ ಮಾತುಳಂಗವಿ
ಮ್ಮಾವರನೇಱಿಲಿಂಚಡಕೆ ಬಾೞೆ ಬೆೞಲ್ ಹಲಸೀೞೆ ಕಮ್ಮರಂ || ೩

ಕಂ || ಕೆಂಬಿತ್ತನುಗಿಯುತುಂ ದಾ
ಡಿಂಬದ ಬೀಡೆಯೊಳೆ ಸಿಲ್ಕಿ ತುಂಡಂ ಕೀರ್ಕೀ
ರೆಂಬ ಮಱಿಗಿಳಿಗಳೊಳ್ ಮುಖ
ಚುಂಬನ ಸೀತ್ಕೃತಮನಬಲೆಯರ್ ಕಲುತಿರ್ಪರ್ || ೪

ಬಿಡದೆಱಗಿ ಕೊಂಬುಕೊಂಬಿನೊ
ಳೆಡೆಗಿ ಱಿದರಗಿಳಿಯ ಗಱಿಯ ತುಂಡದ ಪುದುವಿಂ
ಪಡೆವುದು ಪಣ್ತಾಲಮಿದೆನೆ
ಬೆಡಂಗನವಿರಳಿತ ಫಲಪರೀತಂ ಚೂತಂ || ೫

ವ || ಮತ್ತಮತಿಪಾವನದೊಳಾವನದೊಳ್-

ಉ || ಪಲ್ಲವದಿಂದೆ ರಂಜಿಪ ಕುಜಂ ಪೆಱತಾವುದೊ ಭಾವಿಪಂದು ಕಂ
ಕೆಲ್ಲಿವೊಲೆಂದು ಮೆಚ್ಚಿಯದಱೊಳ್ದಳಿರಂ ಕಡುಚೆಲ್ವುವೆತ್ತ ಸ
ತ್ಫುಲ್ಲಶರಕ್ಕೆ ಮಿಕ್ಕ ಗಱಿಯಾಗೆ ವಿನಿರ್ಮಿಸಿ ಕರ್ವ್ದುವಿಲ್ಗದೇಂ
ನಿಲ್ಲದೆ ಕಂತು ಮಾಡಿದನೊ ತೋಮರದುಪ್ಪರವಟ್ಟದೊಪ್ಪಮಂ || ೬

ವ || ಮತ್ತಂ-

ಕಂ || ವಕುಳಂ ಸಪರಿಳಮಪ್ರಸ
ವಕುಳಂ ಸೌರಭಸಮಾಗತ ಭ್ರಮರಾರಾ
ವಕುಳಂ ಸೊಗಯಿಸಿದತ್ತೆಸೆ
ವಕುಳಂಬಿತ ವಿಟಪಮವನಿಸಂಸ್ಥಾವಕುಳಂ || ೭

ತಿಳಕಂ ವರವನಲಕ್ಷ್ಮೀ
ತಿಳಕಂ ದತ್ತ ಪ್ರಿಯಾಸಮನ್ವಿತ ಜನ ಸ
ತ್ಪುಳಕಂ ಸುಮನಃ ಕಳಮಂ
ಜುಳಕಂ ತಾನಾದುದತನುಕೀರ್ತ್ಯುಜ್ಜ್ವಳಕಂ || ೮

ಪಾದರಿಪೂಗಂಪಿಂಗೆಱ
ಪಾದರಿಪಳಿಗಳ ಕುಳೆಕ್ಕೆ ನಿರವಧಿರಾಗೋ
ತ್ಪಾದಪಟುವಾಯ್ತು ವಿಳಸ
ತ್ಪಾದಪಜಾತಿಯೊಳದೊಂದೆ ಸುಂದರಮಲ್ತೇ || ೯

ಮ || ಸ್ರ || ಅಲರ್ದೊಪ್ಪಂಬೆತ್ತುದೆತ್ತಂ ಕೊಸಗು ಮಿಗೆ ತಮಾಳಂ ತಳಿರ್ತಾವಗಂ ಕ
ೞ್ತಲಿಸುತ್ತಿರ್ದತ್ತು ಮುತ್ತಂ ಮುಗುಳಬಳಗಮಂ ಪೇಱಿ ತೋರುತ್ತು ಸತ್ಕು
ಟ್ಮಲಮಂ ಕೆಯ್ಕೊಂಡುದಾದಂ ಸರಳತರು ಶಿರೀಷಾಳಿ ಚೆಲ್ವಾಯ್ತು ಪೂಗೊಂ
ಚಲನಾಂತೇಂ ಕಣ್ಗೆವಂದಿರ್ದುದೊ ನೃಪತನಯೋದ್ಯಾನಮಾಶ್ವರ್ಯತಾನಂ || ೧೦

ಉ || ಪೆರ್ಮೊಲೆಗಳ್ ರಥಾಂಗಮಿಥುನಂಗಳನಾನನಮಂಬುಜಾತಮಂ
ನಿರ್ಮಳಿನಾಂಗರೋಚಿ ಜಳಮಂ ಲುಳಿತಾಳಕಮುನ್ಮದಾಳಿಯಂ
ಭರ್ಮವಿಭೂಷಣದ್ಯುತಿ ಪರಾಗಮನಾದಮೆ ಪೋಲೆ ಸುತ್ತಿ ಬ
ರ್ಪರ್ಮ್ಮೃಗನೇತ್ರೆಯರ್ ಸರಸಿಗಳ್ ಸುೞಿವಂತೆ ವನಂತಾರಾಳದೊಳ್ || ೧೧

ವ || ಅಂತುಮಲ್ಲದೆಯುಂ-

ಮ || ಕಳಹಂಸಂಗಳ ಯಾನಮಂ ನೆಗೞ್ದಯಾನಂ ಕೋಕಿಳಧ್ವಾನಮಂ
ವಿಳಸದ್ಧ್ವಾನಮನೂನ ಬರ್ಹಿಗಳ ಬರ್ಹಾನೀಕಮಂ ಸತ್ಕಚಾ
ವಳಿ ಕಂಕೆಲ್ಲಿ ದಳಂಗಳಂ ಪದತಳಂ ಪ್ರೋದ್ಯಲ್ಲತಾಜಾಳಮಂ
ಲಳಿತಾಂಗಂ ನೆಱೆ ಪೋಲೆ ತದ್ವನದವೋಲ್ ಕಣ್ಗೊಪ್ಪುವರ್ ಕಾಂತೆಯರ್ || ೧೨

ವ || ಮತ್ತಮಲ್ಲಿ-

ಮ || ತರುಣೀಧ್ಯೆರ್ಯಧರಿತ್ರಿ ಬಾಯ್ವಿಡುವಿನಂ ಮಾರಾಂಗನಾರಾಗ ಸಾ
ಗರಪೂರಂ ಕದಡೇ ೞ್ವಿನಂ ಮದವತೀ ಮಾನಾವಳೇಪಾಚಳಂ
ಬಿರಿವನ್ನಂ ಬಧಿರೀಭವತ್ಪಥಿಕಲೋಕಂ ಬಾಳಚೂತೋದ್ಗತಾಂ
ಕುರಕೋಣಕ್ಷುಭಿತಂ ಪೊದೞ್ದುದು ಪಿಕವ್ಯಾಹಾರ ಭೇರೀರವಂ || ೧೩

ಚಂ || ಅಳಿನಿಯ ಚುಂಬನಂಗಳಿನರಲ್ವಲರಂ ಗಿಳಿವೆಣ್ಣ ನಲ್ಮೆಯಿಂ
ಬಳೆಯಿಪ ಪಣ್ಗಳಂ ಲತೆಗಳಪ್ಪಿನೊಳಿರ್ಪ ಮರಂಗಳಂ ಪಿಕಾ
ವಳಿಯ ನಖಾಂಕಮಂ ಮೆಱೆವ ಕೋರಕಮಂ ನಡೆನೋಡಿ ಲೋಚನಾಂ
ಜಳಿಪುಟದಿಂ ವನಕ್ಕೆ ಮಿಗೆ ನೀರೆಱೆವರ್ ಪಥಿಕರ್ ನಿರಂತರಂ || ೧೪

ಕಂ || ಉರಿಗೊಡ್ಡಿದರಗಿದೆಂಬಿನ
ವರಗಿಳಿಗಳ ಚಂಚು ತಾಗಲೊಡನೊಡೆದೋರಂ
ತಿರೆ ಸುರಿವ ಪಣ್ಗಳಿಂದಮೆ
ಯರನೇಱಿಲ ಮರಗಳಲ್ಲಿ ಸೊಗಯಿಸಿ ತೋರ್ಕುಂ || ೧೫

ಚಂ || ಸವಿ ತವದಂತು ಬೇರ್ವಿಡಿದು ಪಣ್ಬರೆಗಂ ವನಮೆಯ್ದೆ ಸೇವ್ಯಮಾ
ಯ್ತವನಿಗೆ ಕೂಡೆ ಬೇರ್ಪರಿದ ಸಾಲ್ಮಡಲಿಟ್ಟ ಕರ್ವ್ವು ಪ
ಲ್ಲವಿಸಿದಶೋಕಮುಳ್ಳಲರ್ದ ಮಲ್ಲಿಗೆ ಕಾಯ್ತೆಳದೆಂಗು ಪಣ್ತಬ
ರ್ಕೆವಲಸು ಕಮ್ಮಕಮ್ಮೆಸೆವ ಮೆಯ್ಸಿರಿಯಂ ಸಲೆ ಬೀಱುತಿರ್ಪಿನಂ || ೧೬

ಕಂ ಆ ವನದಂತರ್ಭಾಗದೊ
ಳಾವನದಂ ನೋಡಿ ಪಿಂಗುವವನೆನಿಸಿದ ಶೋ
ಭಾವಿಭವದ ಮಣಿಮಯ ಕೃತ
ಕಾವನಿಧರವರದ ಕೆಲದ ತಿಳಿಗೊಳನೆಸೆಗುಂ || ೧೭

ಅದು ಸುರಭಿ ಕುಮುದ ವಾಸಿತ
ಮುದವಾಸಿತರದ್ವಹಂಗ ಸಮ್ಮದ ಕಲಹಂ
ಮದಕಲಹಂಸದ ನಿಳಯಂ
ಸದನಿಳಯಂತ್ರಿತಪರಾಗ ಪಿಂಜರಕೀರಂ || ೧೮

ಕಂಜಮಲರ್ದೊಪ್ಪಿತಿನ್ನೇ
ಕಂಜನೊ ಹರನೆನಗೆನುತ್ತೆ ವರಮಕರಪತಾ
ಕಂ ಜಡಿದುನುಡಿವವೋಲ್ ಕೋ
ಕಂ ಜಳಜಾಕರದ ಕೆಲದೊಳುಲಿವುವು ನಲವಿಂ || ೧೯

ಅಂಬುಜ ನಿಚಯದೊಳಳಿಯಲ
ರಿಂ ಬಂಡುಗೆ ಪೆಣೆದು ನೆನೆಯಿಪುವು ಬಾಯ್ವಾಯೊಳ್
ತಂಬುಲಮನಿಕ್ಕುತುಂ ಪ್ರಿಯ
ಚುಂಬಿಪುದಂ ಪಥಿಕಜನಕೆ ಪದ್ಮಾಕರದೊಳ್ || ೨೦

ವ || ಮತ್ತಂ-

ಕಂ || ನೀಳಮಣಿಸ್ಥಲಿಯೊಳ್ ನೀ
ಳಾಳಕಮಂ ನೆೞಲೊಳಿನಿಸುಕಾಣದೆ ತಲೆಯಂ
ಬಾಳಕಿಯರಂಟುತುಂ ನೃಪ
ಬಾಳನನಾ ನಗದರತ್ನಗುಹೆಯೊಳ್ ನಗಿಪರ್ || ೨೧

ಕ್ರೀಡಾಸರಸಿಯೊಳಳಿಗಳ್
ಪಾಡುವ ಲಯಗತಿಗೆ ಕೃತಕಗಿರಿಯೊಳ್ ನವಿಲೆ
ಳ್ದಾಡುವುದಂ ಪಥಿಕರ್ ನಡೆ
ನೋಡುವರೆರ್ದೆಢಕ್ಕೆ ವಾಜಿಸುತ್ತಿರ್ಪಿನೆಗಂ || ೨೨

ವ || ಇಂತು ಕೃತಕಕುತ್ಕೀಳ ಕೇಳೀ ಸರಸ್ಸಂತತಿಗಳಿಂ ಸಮಂತು ಶೋಭಾನಿಶಾಂತಮಾದ-

ಕಂ || ವನವನವನತಲತೋಜ್ಜೀ
ವನವನವನವತನು ಸಿಖಿಗಿದೆಂದು ಜಗತ್ಪಾ
ವನವನವನಳಿವಿಳಾಸ ಭ
ವನವನವನಜಾತಪೂರ್ವಮೆನೆ ಮಾಡಿಸಿದಂ || ೨೩

ವ || ಅಂತು ನಿರಂತರಂ ಕಂತುಕಾಂತಸ್ವಾಂತ ಸಂತರ್ಪಣ ಸಮರ್ಥಮುಂ, ಸರ್ವರ್ತು ಸಾರಸರ್ವಸ್ವಸಾರ್ಥಮುಂ ನಿರತಿಶಯ ಪರಿಮಳಾಕಳಿತ ಶೀತಳೀಭೂತ ಮಂದಮಂದ ವಿಚಳನ್ಮಳಯಾನಿಳನಿಳಯಮುಂ ವ್ಯಾಪ್ತಗಗನ ದಿಗವನೀವಳಯಮುಮೆನಿಸಿ ವಿರಚಿಸಿ ಸುಖಾವಳಂಬನಮಾದ ಬನದೊಳನುದಿನಂ ವಿಶ್ವನಂದಿಕುಮಾರಂ ಮಾರವೈಭವಂ ಸ್ಮೇರವದನಾರವಿಂದೋದಾರ ವಿದಗ್ಧನಾರೀಜನ ಸಮನ್ವಿತಂ ಸಂಸಾರಸಾರ ಸುಖಕ್ಷೀರ ನೀರಾಕರ ತರಂಗಿತಾಂತರಂಗನಾಗಿ ರಾಗದಿಂದಿರ್ಪಿನಮೊಂದು ದೆವಸಂ-

ಚಂ || ಒದವಿದ ಗರ್ವದಿಂದೆಱಗದೊರ್ವನೆ ದೋರ್ವಳಶಾಳಿ ಕಾಮರೂ
ಪದ ಧರಣೀಶನಿರ್ದೊಡವನಂ ಜವನಾನನಕಾನನಾಂತರಾ
ಳದೊಳಿರದಿಕ್ಕಿ ಮಿಕ್ಕ ನಿಜವಿಕ್ರಮಲಕ್ಷ್ಮಿಗೆ ಭೂತಳಸ್ತುತಾ
ಭ್ಯುದಯಮನೀವೆನೆಂಬ ಬಗೆಯಂ ಬಗೆದಂ ಜಗತೀತಳೇಶ್ವರಂ || ೨೪

ವ || ಅಂತು ರೋಷಾವೇಶಮಂ ತಳೆದು ಬಳವದ್ವಿರೋಧಿ ನಗರೀ ನಿರೋಧಯೋಧನಾವ ರೋಧ ವಧೂವೈಧವ್ಯಮೆ ವಿಧಾನತವ್ಯಮೆಂದು ಮಂತ್ರಿಸಂತತಿಯೊಳ್ ನಿತಾಂತಂ ನಿಶ್ಚಯಿಸಿ ನಿಶ್ಚಳಪರಾಕ್ರಮಭಾಜನಂ ವಿಶ್ವನಂದಿ ಯುವರಾಜನಂ ಬರಿಸಿ ವಿಶಾಖ ಭೂತಿ ಭೂತಳೇಶ್ವರಂ ವಿನಯವಿನತನಂ ನಿಜನಿಕಟಾವಿಕಟ ಮಣಿಮಯಾಸನದೊಳ್ ಕುಳ್ಳಿರಿಸಿ-

ಚಂ || ಮಗನೆ ಮದಾಜ್ಞೆಯಂ ಕೊಳೆದಪುಲ್ಗೆ ವಲಂ ಸರಿಗಂಡು ತನ್ನ ಮಿ
ಕ್ಕೊಗೆದ ಮಹಾಮದಂ ಮದಿರೆಯಂದದೆ ಸೊರ್ಕಿಸೆ ಶೌರ್ಯದುನ್ನತಿ
ಕ್ಕೆಗೆ ಮಿಗೆ ಕಾಮರೂಪದ ನೃಪಂ ಬೆಱತಿರ್ದಪನೆಂದು ಪೇೞೆ ಚಾ
ರಗಣಮಗಣ್ಯರೋಷರಸದೊಳ್ ಮುೞುಗಿತ್ತು ಮದೀಯ ಮಾನಸಂ || ೨೫

ಕಂ || ಅದು ಕಾರಣದಿಂ ರಣದಿಂ
ತದುದ್ಧತನ ದುಷ್ಟಚೇಷ್ಟೆಯಂ ಮೞ್ಗಿಸಿ ಬ
ರ್ಪುದೆ ಕಾರ್ಯಮೆನೆಗೆ ಕಾದಿ
ರ್ಪುದೆ ಕಾರ್ಯಂ ಪೆಱಗೆ ನಿನಗಮೀ ಪುರವರಮಂ || ೨೬

ವ || ಎಂಬುದುಮದಂ ಕೇಳ್ದು ಯುವರಾಜಕಂಠೀರವಂ ವೀರವಂ ಮೆಱೆವಪದನಿದಾದುದೆಂದು ರಾಗರಸಪ್ರವಾಹಾವಗಾಹಮಾನ ಮಾನಸನಾಗಿ ಮುಕುಳಿತ ಕರಕಮಳಯಮಳನಿಂತೆಂದು ಬಿನ್ನಪಂಗೆಯ್ದಂ-

ಶಾರ್ಙ್ಗ || ದೇವ ನೀಂ ನಡೆವಲ್ಲಿವರಂ ಪೇೞೆನ್ನನೊ ನಿನ್ನಯ ವೈರಿಯಾರ್
ಕಾವೊಡಂ ಕಡಿಕೆಯ್ದಿದಿರಾಂತಂದಾತನನಾಜಿಯೊಳಂತಕಂ
ಗೀವೆನೋವದೆ ಭೀತಿಯೊಳೆಯ್ತಂದಾನತನಾದೊಡೆ ಕಾದು ತಂ
ದಾವಗಂ ನಿನಗೊಪ್ಪಿಸುವೆಂ ಕೂರ್ತೀಯೆನಗೀ ಬೆಸನೊಂದುಮಂ || ೨೭

ವ || ಎಂದು ಪೂಣ್ದು ವಿಶ್ವನಂದಿಯಂದು ತಂದೆಯೊಳ್ ನಿರ್ವಂದದಿಂದೆ ಬೆಸನಂ ಬೇಡಿ ಪಡೆದು ಬೀೞ್ಕೊಂಡು ಮೌಹೂರ್ತಿಕಪ್ರಕಾಂಡ ಪ್ರದತ್ತ ಶುಭಾಯತ್ತ ಮುಹೂರ್ತದೊಳ್ ಜಿನರಾಜಪಾದಪಯೋಜಪೂಜಾನಿಬದ್ಧ ಸಿದ್ಧಶೇಷಾಕ್ಷತ ನಿಕರ ತಾರತಾರಕಿತ ನಿಜೋತ್ತಮಾಂಗನಭೋರಂಗನುಂ ಸನ್ನಾಹ ಭೇರೀಭೂರಿಘೋಷ ಹೇಷಾಶ್ಲೇಷ ಬಧಿರಿತಾಶಾಂತರಂಗನುಮಾಗಿ ಮಹಾವಿಭೂತಿಯಿಂ ಪೊೞಲಂ ಪೊಱಮಟ್ಟು-

ಚಂ || ಕುದುರೆಗಳಾಳ್ಗನೆಗಳುದಗ್ರ ರಥಂಗಳಿನಿತ್ತಿನಿತ್ತಿವೆಂ
ದೊದವಿದ ರಾಗದಿಂದೆ ಗಣಿಯಿಪ್ಪನದಾವನೆನಿಪ್ಪ ಭೂರಿ ಭಾ
ರದ ಚತುರಂಗಸೇನೆವೆರಸಾ ನರನಾಥತನೂಭವಂ ಪ್ರತಾ
ಪದ ನಿಧಿಯೆಯ್ದಿದಂ ತ್ರಿದಿವಕಾಶಮನಾ ರಿಪುವಿರ್ದ ದೇಶಮಂ || ೨೮

ಚಂ || ಮದವದರಾತಿಮಂಡಳಿಕ ಮಂಡಳಮಂಡನ ದುರ್ಗವರ್ಗಮೊ
ರ್ಮೊದಲೊಳೆ ಧಂ ಧಗದ್ಧಗಿಧಗದ್ದಗಿಯೆಂದುರಿವಂತು ಸುಟ್ಟು ಬೇ
ಗದೆ ನೆಱೆ ಸೂಱೆಗೊಂಡು ವರವಾಹನ ವಸ್ತುಸಮೂಹಮಂ ಸಮಂ
ತೊದವಿದ ತದಬಳಂ ವಿಳಯಮಂ ವಿಷಯಕ್ಕಿರದಿತ್ತುದೆತ್ತಲುಂ || ೨೯

ವ || ಆ ಪ್ರಸ್ತಾವದೊಳ್-

ಕಂ || ಚರಜಾಳಂ ಜಂಘಾಳಂ
ಪರಿದಾವಿಷಯಕ್ಕೆ ಸಮನಿಸಿದ ವಿಪ್ಲವದು
ಬ್ಬರಮಂ ತತ್ಪತಿಗಱಿಪಿದು
ದರಾತಿನಿರ್ಭೀತ ಬಹುಪದಾತಿಕ ಕೃತಮಂ || ೩೦

ವ || ಆಗಳದಂ ಕೇಳ್ದು ಕಾಮರೂಪಭೂಪಂ ಸಾಟೋಪಮುರ್ವಿ ನಿಜದೋರ್ವಳೌರ್ವಾನಳ ನನಳನಳಿತ ಶಿಖಾಜಾಳದೆಸಕಮನಸದಳಂ ಪಸರಿಸಿ ತೋರ್ಪಂತೆ ಕೋಪೋದ್ದೀಪನ ಕಲುಷತೆಯಿಂ ಕೆಂಪಡರ್ದಕಣ್ಗಳಿಂ ದುರ್ನಿರೀಕ್ಷಣ ದಾರುಣಾರುಣವದನವನಜನಾಗಿ ಕದನಕೇಳೀಲೋಳತೆಯಿಂ ಸಭಾಸಮಕ್ಷದೊಳಾಕ್ಷೇಪರೂಕ್ಷವಚನ ರಚನಾ ವಿಚಕ್ಷಣಮಂ ಬಿಡದೆ ಸಡಗರಿಸುವುದನವಧರಿಸಿ ಸಂಪ್ರಾಪ್ತ ಸಮಸ್ತ ನೀತಿಶಾಸ್ತ್ರ ಪ್ರಾವೀಣ್ಯರುಂ ದೀರ್ಘದರ್ಶಿವರೇಣ್ಯರುಂ ಬುದ್ಧಿಸಮೃದ್ಧರುಮನ್ವಯಾಗತ ವಿಶುದ್ಧರುಮಪ್ಪ ಮಂತ್ರಿಗಳಿಂತೆಂದರ್-

ಚಂ || ನಿಜಗತಿ ನೀತಿನೈಪುಣನಪಾರರಥಾಶ್ವಪದಾತಿಕುಂಜರ
ವ್ರಜನಖಿಳಾಯುಧಾತಿಕುಶಲಂ ನತವಿಶ್ವಮಹೀಶಮಂಡಳಂ
ವಿಜಯದಲೆತ್ತಿಬಂದನವನಂ ರಣದೊಳ್ ಗೆಲಲಾಱೆವಂತಱಿಂ
ಪ್ರಜೆಗಳ ರಕ್ಷಣರ್ಥಮಿದಿರ್ವೋಗಿಯೆ ಕಾಣ್ಬುದು ಕಾರ್ಯಮಲ್ಲದೆ || ೩೧

ವ || ಎಂದು ಮತ್ತಮನೇಕ ಯುಕ್ತಿವ್ಯಕ್ತಸೂಕ್ತಿಮಂತ್ರಂಗಳಿಂ ನಿಜಮಹೀಶನ ಮನದವಿಗ್ರಹ
ದುರಾಗ್ರಹಮಂ ನಿಗ್ರಹಿಸುವುದುಮಿದೆ ಕರಣೀಯಮೆಂದು ಮನದೆಗೊಂಡು-

ಮ || ಇವಱಿಂದುತ್ತಮಮಿಲ್ಲೆನಿಪ್ಪ ವಿಳಸನ್ಮಾತಂಗಜಾತಂಗಳಂ
ಜವಸಂಪತ್ತಿಯ ವಾಜಿರಾಜಿಗಳನುದ್ಯತ್ಕಾಂತಿಮನ್ನೂತ್ನರ
ತ್ನವಿಶೇಷಂಗಳನಂಗಜಾಸ್ತ್ರವರವಾರಸ್ತ್ರೀಯರಂ ಮತ್ತಮ
ನ್ಯವಿಶಿಷ್ಟಾರ್ಥಚಯಂಗಳಂ ನೆರಪಿ ಮುಂದಿಟ್ಟಂದು ಬಂದಂ ನೃಪಂ || ೩೨

ವ || ಅಂತು ಬಂದು ಚರಾಚರಸಾರತರವಸ್ತುಗಳಂ ನಿಜಾಪರಾಧ ನಿಷೇಧಾರ್ಥಮಾ ಪಾರ್ಥಿವಂ ವಿಶ್ವನಂದಿಗಿತ್ತು ಮತ್ತಂ ಪ್ರಾಣರಕ್ಷಣಯಾಚನೋಚಿತ ವ್ಯಾಹಾರಪೂರ್ವಕಂ ಪಾದ ಪೀಠೋಪಾಂತಪ್ರದೇಶ ಸರ್ವಾಂಗ ಪ್ರಣತನಾಗಿ ತದೀಯಚೇತೋನಿಕೇತನದಿಂ ಕ್ರೋಧವ್ಯಾಧನಂ ಪೊಱಮಡಿಸಿ ಕಳೆಯೆ-

ಕಂ || ಅಭಯಮನಿತ್ತಂ ಮುನ್ನಿನ
ವಿಭವಮನಿತ್ತಂ ಪ್ರತಾಪಜಳನಿಧಿ ಜಯದುಂ
ದುಭಿರವ ಬಧಿರಿತ ದಿಗವನಿ
ನಭಸ್ಥಳಂ ಕಾಮರೂಪಭೂಪಂಗೆ ನೃಪಂ || ೩೩

ವ || ಅನಂತರಮಲ್ಲಿಂ ತಳರ್ದು ಮತ್ತಮನಂತ ಜನತಾಧೀಶರಂ ತನತು ಪದಪ ಯೋಜಕ್ಕೆಱಗಿಸುವ ಬಗೆಯಿನಲ್ಲಲ್ಲಿಗೆ ನಿಜವಿಜಯ ವೈಜಯಂತೀ ವಿರಾಜಮಾನ ವೀರಭಟ ಕೋಟಿಯಂ ಕಳಿಪಿ ಭೀತಿಚಕಿತ ಶರಣಾಯಾತರಂ ಪ್ರೀತಿಪೂರ್ವಕಂ ಕಾಣಿಸಿಕೊಳುತ್ತು ಮಭಯಮಂ ಕೊಡುತ್ತುಮಾವರದನಾಧಿಯಿಂ ಶಾರ್ವರದೆ ನೆರೆದು ಬರ್ಪ ವಿಬುಧ ವಂದಿವೃಂದದ ಮನೋಮುದಮನೊದವಿಸುತ್ತಮಿರ್ದನನ್ನೆಗಮಿತ್ತಲ್-

ಚಂ || ಸಿರಿಯ ತೆರಳ್ಕೆ ಜವ್ವನದ ಪೆರ್ಚುಗೆ ರೂಪವಿಳಾಸದೇೞ್ಗೆ ಸುಂ
ದರಿಯರ ಸೋಲಮಂ ಜನಿಯಿಪೊಳ್ಸೊಬಗಾಳ್ತನದೊಂದಳುರ್ಕೆಯು
ಬ್ಬರದ ಮದಕ್ಕಿವಾಗೆ ಮಿಗೆ ಕಾರಣಮಂದು ವಿಶಾಖನಂದಿ ದು
ಶ್ಚರಿತಮೆ ಮೂರ್ತಿವೆತ್ತುದೆನೆ ವರ್ತಿಸಿದಂ ಗಡ ಮೆಚ್ಚಿದಿಚ್ಚೆಯಿಂ || ೩೪

ಕಂ || ಬಸನಿಗಳ ಗೊಟ್ಟಿತನಗಾ
ಗಿಸೆ ಸಂತಸದೊದವನುತ್ತಮರ ಗೊಟ್ಟಿ ಕರಂ
ಕಸಱಿಸಿದುದೆರ್ದೆಯನೇಂ ಸೊಗ
ಯಿಸುಗುಮೆ ಚೋರಂಗೆ ಚಂದ್ರಿಕಾವಿಸ್ತಾರಂ || ೩೫

ವ || ಮತ್ತಮಾಖಳಂ ಖಿಳಭೂತಳದಂತೆ ನಿಕೃಷ್ಟಯೋಗ್ಯನುಂ ಕಪಿಳಶಾಸನಾವಭಾಷಿತಾತ್ಮ ನಂತೆ ಗುಣವಿರಹಿತನುಂ ಪರೇತವನದಂತೆ ಕಲ್ಮಷರಕ್ಷಾಲಕ್ಷಿತನುಂ ಸೂರ್ಪಕಾರಾತಿಯಂತೆ ವಿಷಮಬಾಣನುಂ ದಗ್ಧವನದಂತೆ ವಿಚಾರಶೂನ್ಯನುಂ ಪರ್ವತ ನಿತಂಬದಂತೆ ಕುಜನಕುಲಪರೀತನುಂ ಪರಚಕ್ರಾಕ್ರಮಣಶೀಲನಂತೆ ಬಹುವಿಷಯಾಸಕ್ತನುಂ ಭಾರತ ಕಥಾಪ್ರಸರದಂತೆ ದುಶ್ಯಾಸನ ಭೀಮಾಚರಣನುಂ ಚರಮಪ್ರಸ್ತಾರಿತವೃತ್ತದಂತೆ ಅತಿಕ್ರಾಂತ ಗುರೂಪದೇಶನುಂ ವ್ರಥಾಜನಿತಜೀಮೂತಜಾತದಂತನಾರ್ದ್ರಹೃದಯನುಮೆನಿಪನಂತು ಮಲ್ಲದೆಯುಂ-

ಕಂ || ಅಹಿವೊಲ್ ಸವಕ್ರಗಮನಂ
ಮಹಿವೊಲ್ ಸತತಂ ರಜೋನ್ವಿತಂ ಗಿರಿಗುಹೆವೋಲ್
ಬಹಳತಮಂ ಹಿಮರುಚಿವೋಲ್
ಗೃಹೀತನಿಶ್ಯೇಷದೋಷನೆನಿಸಿದನಾತಂ || ೩೬

ವ || ಅಂತು ದುಶ್ಯೀಲ ದುರಾಚಾರ ದುರ್ಯಶೋನಂದಿಯಾದ ವಿಶಾಖನಂದಿಯಂದಂದಿಗೆ ಕುವಿಟಪೇಟಕಪ್ರೇರಿತಂ ಸ್ವೈರವಿಹಾರವಿನೋದಾರ್ಥಂ ಪುರವರಾಂತರ್ಬಹಿರ್ಭಾಗ ಪರಿಭ್ರಮಣಪರಿಣತನಾಗಿ ತೊೞಲ್ವೊನೊಂದುದೆವಸಂ-

ಕಂ || ವಿನಮನ್ಮ ದಮಧುಕರಸೇ
ವನಮಂ ವರವಿಶ್ವನಂದಿಯಂತರ್ಧನಮಂ
ಘನಮಂ ಬನಮಂ ಕಂಡಂ
ಮನಮಂ ಮೋಹಿಸುವ ಶೋಭೆಯಂ ತಾಳ್ದಿದುದಂ || ೩೭

ವ || ಅಂತು ಭೋಂಕೆನೆ ಕಂಡು ಕೌತುಕಾತಿರೇಕವ್ಯಾಕುಳತೆಯಿಂ ಪತ್ತೆಸಾರ್ದು ವಿಸಟಂಬರಿವ ನಿಜವಿಲೋಚನಂಗಳೊಡನೆ ಮಚ್ಚರಿಸಿದಂತೆ ಮಸಗಿ ಬಳಸಿಗಂ ಪರಿದು ವಸಂತಲಕ್ಷ್ಮೀ ವಯಸ್ಯೆಯಪ್ಪ ವನಲಕ್ಷ್ಮಿಯ ಬೆಡಂಗಿನೊಡನೆ ಗಡಣಮನೊಡರಿಸುವ ಕಾತರಚೇತ ಮನೇತೆಱದೊಳಂ ನಿಯಮಿಸಲ್ ನೆಱೆಯದೆ ತದೀಯಲಾಭಲೋಭಂ ತನ್ನೊಳ್ ತಿಣ್ಣಮಾಗೆ ಮೇಗಱಿಯದೆ ತದುಪಾಯಕೋಟಿಗಳಂ ನೆನೆನೆನೆದು ಕೋಟಲೆಗೊಂಡು ವಿಶಾಖನಂದಿ ವಿಲೂನವೈಶಾಖ ಕಂದಲಿಯಂದದಿಂದಂದು ಕರಮೆ ಕೊರಗಿ-

ಕಂ || ಇನಿವಿರಿಯ ಸಿರಿಯುಮಿನಿವಿರಿ
ಯನಿಚಿತ ಯೌವನಮುಮಿನಿವಿರಿಯ ಭೋಗಮುಮೀ
ವನಮಿಲ್ಲದಂದೆನಗೆ ಜೀ
ವನಮಿಲ್ಲದ ತನುವಿನಂದಮೇನಾಗದೆ ಪೇೞ್ || ೩೮

ವ || ಎಂದು ತನ್ನೊಳೆ ಪರಿಭಾವಿಸಿಯಜೇಯ ಭುಜಪರಾಕ್ರಮನಪ್ಪ ನಿಜದಾಯಾದನಾದಮೆ ದೂರದೇಶಸ್ಥಾಯಿಯಾ ದೀಪದದೊಳೆ ಹೃದಯ ನಯನ ಸುಖಾವಳಂಬನಮಂ ಬನಮನಿದನೆನಗೆ ಬಲಾತ್ಕಾರದಿಂ ಬಸದಾಗಿ ಮಾಡಿಕೊಳ್ವುದೆ ಕಾರ್ಯಮೆಂದು ವಿಪಶ್ಚಿನ್ನಿಂದಿತಂ ನಿಶ್ಚಯಿಸಿ ವೃಶ್ಚಿಕವಿಷಮರೆನಿಪ ದುಶ್ಚರಿತ ಪರಿವಾರಜನಂಗಳಂ ಕೂಡಿಕೊಂಡು ಧೂರ್ತಂ ಸಾರ್ತಂದು ವನರಕ್ಷಾದಕ್ಷರೊಳೇನಾನುಮೊಂದು ನೆವಮನ ವಳಂಬಿಸಿ ಬಂದು ಭಾವಪ್ರಭಾವಮನಾವಗಂ ಮೆಱೆದು ತೆಱಯಿಸಿ ಬನದ ಬಾಗಿಲಂ ಬೇಗದಿಂ ಪೊಕ್ಕು ರಕ್ಕೆಯಾಳ್ಗಳಂ ಲೆಕ್ಕಿಸಿ ನೋಡಿ ಕೆಲಂಬರೆಂಬುದನ ಱಿದು ನಾಡೆಯುಂ ನಲಿದು ಮೆಲ್ಲಮೆಲ್ಲನೆ ತನ್ನ ಬಲಮಂ ಬಲಿದು-

ಕಂ || ಕಾಪಿನ ಕಟ್ಟಾಳ್ಗಳನಾ
ಪಾಪಾತ್ಮಂ ಕಾದಿ ಬಹಳಬಳನಪ್ಪುದಱಿಂ
ಲೋಪಿಸಿದಂ ಬೞಿಕಮವಂ
ವ್ಯಾಪಿಸಿದಂ ಬನಮನುರ್ವರಾ ಪಾವನಮಂ || ೩೯

ಆವನ ಕಣ್ಗೆಸೆಯದೆ ನಿ
ಷ್ಟಾವನಮಾ ವಿಭುವಿಯೋಗ ಪದದೊಳ್ ತೊದೞೇಂ
ಕಾವಲನಿರವಿಂಗಾದುದು
ಸೋವತಮೇ ಪೇೞ್ವುದಣ್ಣ ವಿಧಿವಿಳಸನಮಂ || ೪೦