ಕಂ || ಶ್ರೀ ತೀರ್ಥಕರನ ನಿರವಧಿ
ಕೌತುಕಕರಮೆನಿಪ ಸಮವಸರಣದ ಸಿರಿಯಂ
ಪ್ರೀತಿಯೊಳೆ ಪೊಗೞ್ದನಿಂದ್ರಂ
ಪೂತಮನಂ ಪಂಚಪರಮಗುರುಪದವಿನತಂ || ೧

ವ || ಅಂತು ನಿತಾಂತಕಾಂತಮಾದ ಪರಮಪ್ರಮೋದಕರಣಮಂ ಭವ್ಯವರ ಪುಂಡರೀಕ ಶರಣಮಂ ಲೋಕತ್ರಯಲಕ್ಷ್ಮೀ ಲಲಿತಮೌಕ್ತಿಕಾಭರಣಮಂ ದುರಂತ ದುರಿತ ತಿಮಿರ ಸಹಸ್ರಕಿರಣಮಂ ಮಹಾವೀರ ಸಮವಸರಣಮಂ ಪಲವುಸೂೞುಮಲಘುಭಕ್ತಿ ಭಾವದಿಂ ನೋಡಿ ನೋಡಿ ಮೆಚ್ಚಿ ಬಿಚ್ಚಳಿಪ ನಿರ್ಮಳ ಧರ್ಮರಸಿಕನಾ ಸೌಧಮೇಂದ್ರ ನೊರ್ಮೆ ಪೆರ್ಮೆವೆತ್ತ ಸನ್ಮತೀಶ್ವರನ ಸಮೀಪದ ನಿಜೋಚಿತ ವರಿಷ್ಠಕೋಷ್ಠದೊಳ್ ಗರಿಷ್ಠ ವಿನಯವೈಭವದಿಂ ಕುಳ್ಳಿರ್ದು –

ಕಂ || ಪರಮಜ್ಞಾನನಿಧಾನನ
ಸುರುಚಿರ ವದನಾರವಿಂದದಿಂ ಪೊಣ್ಮುವ ಭಾ
ಸುರ ದಿವ್ಯರವಮನತ್ಯಾ
ದರದಿಂದಂ ಕೇಳ್ವ ವಾಂಛೆ ವರ್ತಿಸೆ ಮನದೊಳ್ || ೨

ಸ್ರ || ಆ ನಾಕೇಶಂ ಜಿನೇಶಂಗನಘಗುಣಗಭೀರಂಗೆ ವೀರಂಗೆ ದಿವ್ಯ
ಧ್ವಾನಂ ತಾನಾಗದೇಕಿರ್ದುದೊ ತಡೆದೆನುತುಂ ವಿಸ್ಮಯಾಯತ್ತ ಚಿತ್ತಂ
ಸ್ವಾನೂನೈಕಾವಧಿಜ್ಞಾನದೆ ಗಣಧರ ಸದ್ಗೌತಮಾಖ್ಯಂ ತದುದ್ಯ
ಧ್ವಾನಾರ್ಥಂ ಗ್ರಾಹಕಂ ಬಾರದೆ ಗಡ ತಡೆದತ್ತೆಂಬುದಂ ಕಂಡನಾಗಳ್ || ೩

ವ || ಅಂತು ಸರ್ವಜ್ಞದಿವ್ಯಭಾಷಾಷಮುತ್ಪತ್ತಿ ಹೇತುಭೂತನಂ ಗೌತಮಾಖ್ಯಾತನಂ ನಿಜಾವಧಿಪ್ರಯೋಗದಿಂ ಬೇಗದಿನಱಿದು –

ಚಂ || ನವತುಳಸೀದಳಾಂಕ ಶಿಖಿ ಮಟ್ಟಿಯಲಾಂಛನಮೊಳ್ಪುವೆತ್ತ ಜ
ನ್ನವಿರಮುದಂಶುಕುಂಡಳಯುಗಂ ಕುಶಜಾತಪವಿತ್ರಮಾತ್ತ ಧೌ
ತವಸನಮುದ್ಘಮೌಂಜಿ ಮೃಗಕುಂದಿಯೆರೞ್ಪೊಸ ಕೇವಣಂಗಳೆಂ
ಬಿವು ಕಡುರಯ್ಯಮಾದ ವಟುವೇಷಮನಾಂತನಂತರಂ ವೃಷಂ || ೪

ವ || ಅಂತು –

ಕಂ || ಕಪಟವಟುವೇಷಮಂ ಪದೆ
ದು ಪಡೆದು ನಡೆದವನಿತಳಕೆ ತಿಳಕಮಿದೆನೆ ಶೋ
ಭಿಪ ಗೌತಮಪುರವರಮಂ
ವಿಪುಳಯಶಂ ನಿಮಿಷಮಾತ್ರದಿಂ ಪುಗುತಂದಂ || ೫

ವ || ಅಂತು ಪೊಕ್ಕು ನಿಕ್ಕುವಂ ಪುರಮಧ್ಯದೊಳೆಸೆವಧ್ಯಯನಶಾಲೆಯನೆಯ್ದಿ ಪಂಚಶತಚ್ಛಾತ್ರ ಸಂಚಯಕ್ಕೆ ಚಂಚದರ್ಥಶಾಸ್ತ್ರಪ್ರಪಂಚಮನವಂಚಕತೆಯಿಂ ಕಾಂಚನಮಯಾಸನದೊಳಿರ್ದು ವಕ್ಖಣಿಪ ವಿದ್ವನ್ಮುಖ್ಯನಂ ಗೌತಮಾಖ್ಯನಂ ವೇದೋಕ್ತ ಮಾರ್ಗಾಚರಣಪಾತ್ರನಂ ಗೌತಮ ಗೋತ್ರಪವಿತ್ರನಂ ಧರಾಮರಾನೀಕವನವಸಂತನಂ ಭುವನಾತಿಕೌತುಕ ಪ್ರತಿಭಾ ನಿಶಾಂತನಂ ಕಂಡು ಮನದೆಗೊಂಡು ಶಾಳಾಂತರಾಳಮಂ ಪೊಕ್ಕು ಮಾಣವಕಂ ಸ್ಥೂಣಾವಷ್ಟಬ್ಧನಾಗಿ –

ಕಂ || ನವಕನಿವಂ ಬಂದಂ ಮಾ
ಣವಕಂ ತಾನೆತ್ತಣಿಂದಮೆಂದಾ ವಿಪ್ರ
ಪ್ರವರನ ಸಭೆ ಸುಭಗನೊಳೋ
ದುವುದುಂ ಮಾಣ್ದಿನಿತು ಬೇಗಮೀಕ್ಷಿಸುತಾಗಳ್ || ೬

ಗುರುಚರಣಪ್ರಣತಿಯನಾ
ದರದಿಂದಂ ಬಂದು ಮಾಡನಭಯಂ ಸಭೆಯಂ
ಪರಿವೀಕ್ಷಿಸಿದಪನಿವನೇಂ
ಮರುಳೋ ಮೇಣಖಿಳ ಶಾಸ್ತ್ರಸಮಿತಿಯ ತಿರುಳೋ || ೭

ವ || ಎಂದು ವಿಸ್ಮಯಭಾಜನಮಾದ ತತ್ಸಭಾಜನಂ ಗುರುಹೂಂಕಾರ ಪ್ರೇರಿತಂ ಪುನರಧ್ಯಯನ ವಿಧಾನಾವಧಾನಮಾಗೆ –

ಕಂ || ಮೃದುಮಧುರ ಗಭೀರಧ್ವಾ
ನದ ಸದುಪನ್ಯಾಸದಿಂದಮನುಗತಮಪ್ಪ
ರ್ಥದ ಸರಸವ್ಯಾಖ್ಯಾನಂ
ಹೃದಯಂಗಮಮಾಯ್ತು ವಿಬುಧಗೌತಮ ವಿಹಿತಂ || ೮

ಆ ವ್ಯಾಖ್ಯಾನಮನಂತಾ
ನವ್ಯಂ ಚುಬುಕೆಂದವಜ್ಞೆಯಿಂ ದಕ್ಷಿಣಹ
ಸ್ತ ವ್ಯಾಪಾರದೆ ತೋಱಿದ
ನವ್ಯಗ್ರಮನಂ ಮನೀಷಪಟುಕಂ ವಟುಕಂ || ೯

ವ || ಅಂತಾ ಚಪಳಂ ಲಪನಕರತಳವಿಕೃತಿಸಂಜ್ಞೆಗಳಿಂ ಗೌತಮಾಖ್ಯಾನಮನವಜ್ಞೆಗೆಯ್ದು ಮತ್ತಂ ವಚನನಿಚಯದಿಂ ನಿರ್ಲೋಟಿಪ ಪಾಟವಮನವಳಂಬಿಸಿ-

ಕಂ || ಏವಂ ನ ಭವತ್ಯರ್ಥ
ಸ್ತಾವದಮುಪ್ಯೋಕ್ತ ವಾಕ್ಯನಿವಹಸ್ಯಯೆನು
ತ್ತಾವಟು ಪೆಱತೊಂದರ್ಥಮ
ನಾವಿರ್ಭಾವಿಸಿದನತಿಶಯೋಪನ್ಯಾಸಂ || ೧೦

ವ || ಅಂತು ಪರಕೀಯ ಸಿದ್ಧಾಂತ ಸಮರ್ಥನ ಸಮರ್ಥ ಹೇತುಜಾತಮನಸಿದ್ಧ ವಿರುದ್ಧಾದಿ ಗಳಿನಾದಂ ದೂಷಿಸಿ ಪರವಾದಿ ವನಜಾಕರಹಿಮಕರನೆನೆ ಶೋಭಿಸುವ ವೇಷಧಾರಿಯಂ ಸೂರಿಕುಂಜರಂ ನಿವಾರಿಸಿ –

ಕಂ || ಎಲೆ ತಮ್ಮ ಗಿಳಿಯ ಚಪಳತೆ
ನೆಲೆವೆತ್ತುದು ನಿನ್ನೊಳಿನ್ನೆಗಂ ನಿನಗಿನಿತಂ
ಕಲಿಸಿದ ಕೋವಿದನಾವೊಂ
ಜಲಕ್ಕನಱಿಪೆಂಬುದುಂ ಮುಗುಳ್ನಗೆ ನಗುತುಂ || ೧೧

ಮ || ಸ್ರ || ಪರಮಶ್ರೀವೀರಭಟ್ಟಾರಕನಮಿತ ದಯಾಧಾರಕಂ ವಿಶ್ವವಿದ್ಯಾ
ಭರಣಂ ನಿಶ್ಶೇಷ ಭವ್ಯೋದ್ಧರಣನಖಿಲ ಲೋಕೈಕಪೂತಂ ಪ್ರಣೂತಂ
ಸ್ಮರದೂರಂ ನಿರ್ವಿಕಾರಂ ಸಮವಸರಣಕಾಂತಂ ಯಶಶ್ರೀನಿಶಾಂತಂ
ನಿರವದ್ಯಂ ಹೃದ್ಯನಸ್ಮದ್ಗುರು ಗುಣಗುರು ನಮ್ರಾಮರೇಂದ್ರಂ ಜಿನೇಂದ್ರಂ || ೧೨

ಕಂ || ಎನೆ ಕಹಕಹ ರುತಿಯಿಂ ನ
ಕ್ಕು ನಮ್ಮ ಸಿದ್ಧಾರ್ಥನಾತ್ಮಜಂ ಸನ್ಮತಿ ನ
ಚ್ಚಿನ ಗುರುವೆ ನಿನಗಾಃ ನೆ
ಟ್ಟನಿಂದ್ರಜಾಲಿಗನ ವಿದ್ಯೆಯಂ ಕಲ್ತಾತಂ || ೧೩

ಇನ್ನುಂ ಬಾಳಕನೈ ನೀಂ
ನಿನ್ನೊಡನುದ್ಗ್ರಹಮನನುಚಿತಂ ಖಾದಿನೊಳಾ
ನಿನ್ನ ಗುರು ವರ್ಧಮಾನಮ
ಬನ್ನಂಬಡುವಂತೆ ಮಾಡುವೆಂ ನಡೆ ಪೋಪಂ || ೧೪

ವ || ಎಂದಾ ಗೌರಮಬುಧೋತ್ತಮನಿಂದ್ರಭೂತಿಖ್ಯಾತಾಪರನಾಮಧೇಯನಾತ್ಮೀಯ ಸನ್ನುತಾ ಸನ್ನಭವ್ಯತಾಗುಣಪ್ರೇರಿತಮಾನಸಂ ದುರಭಿಮಾನಸಂಪತ್ತಿ ಸಂಗತರಪ್ಪಗ್ನಿಭೂತಿ ವಾಯುಭೂತಿಗಳೆಂಬ ತನ್ನ ತಮ್ಮಂದಿರುಂ ತಾನುಮಾ ನವೀನ ಮಾಯಾಮಾಣವಕನೊಡನೆ ತಡೆಯದೆ ಕಡಂಗಿ ಪೊಱಮಟ್ಟು ನಡೆಯೆ –

ಕಂ || ತತ್ಸನ್ಮತಿಜಿನಪದ ಬುಧ
ವತ್ಸಳನ ಸಮಸ್ತ ಸದ್ಗುಣಾಭರಣನ ಭಾ
ಸ್ವತ್ಸಮವಸೃತಿಯನಖಿಳ ಜ
ಗತ್ಸಾರಮನಾದ್ವಿಜೋತ್ತಮಂ ಪುಗುತಂದಂ || ೧೫

ವ || ಅಂತು ಪುಗುತಂದು –

ಕಂ || ಕೋಪಾವಳೇಪ ಯುಗಮಂ
ಲೋಪಿಸಿದುದು ಬಿಡದೆ ಬಳೆದ ಮಿಥ್ಯಾತ್ವಮಹಾ
ತಾಪಮುಮಂ ತೂಳ್ದಿದುದವ
ರ್ಗಾ ಪದದೊಳ್ ನಿರುಪಮಾನ ಮಾನಸ್ತಂಭಂ || ೧೬

ಮಲ್ಲಿಕಾಮಾಲೆ || ಇಂದ್ರಭೂತಯ ವಹ್ನಿಭೂತಿಯ ವಾಯುಭೂತಿಯ ಚೇತದೊಳ್
ಸಾಂದ್ರಮಾದ ಮಹಾಮದೋತ್ಕಟ ರೋಗಮಾಗಳೆ ಪೋಗೆ ದೇ
ವೇಂದ್ರನಗ್ಗದ ತನ್ನ ಸನ್ನತ ಮೂರ್ತಿಯಂ ತಳೆದೊಪ್ಪಿದಂ
ರುಂದ್ರಮಪ್ಪ ಯಶೋಧಿಯಂ ತಳೆದತ್ತಶೇಷ ಸಭಾಜನಂ || ೧೭

ವ || ಅನಂತರಮಾ ಪೂತಚೇತೋನಿಕೇತನಂ ಗೌತಮಂ ಪರಮಪ್ರೀತಿಯಿಂ ನೂತ್ನರತ್ನರಚಿತ ವಿಶಾಳಶಾಳವೇದೀವಳಯ ವಿಳಸತ್ಪ್ರಾಸಾದ ಚೈತ್ಯಾವಾಸಾವದಾತ ಖಾತಿಕಾಸಮುತ್ಫುಲ್ಲ ವಲ್ಲೀವನಸಮುದ್ಯದುದ್ಯಾನ ಧ್ವಜವ್ರಜಾನಳ್ಪಕಳ್ಪಭುಜರಾಜದುತ್ತುಂಗ ಸಂಗೀತ ದಾಮೋದ್ದಾಮವಷ್ಟಕೋಷ್ಠಾಧಾರತೋರಣ ಪ್ರಶಸ್ತವಸ್ತುವಿಸ್ತಾರಗೋಪುರಸ್ತೂಪಧೂ ಪಘಟಮಂಡಳೀಮಂಡಿತ ಶ್ರೀ ಮಂಡಪ ಮಧ್ಯಾಧ್ಯಾಸಿತ ವಿಚಿತ್ರ ಪೀಠತ್ರಯಾಗ್ರಮಂ ನಿರತಿಶಯ ಶೋಭಾಸಮಗ್ರಮನಳಂಕರಿಸಿ ಕರಮೆಸೆವ ವಿಶದಾನಂತಗುಣಜನ್ಮ ಭೂಮಿಯಂ ಶ್ರೀ ವರ್ಧಮಾನಸ್ವಾಮಿಯಂ ಕಂಡು ಮೂಮೆ ಬಲಗೊಂಡು ಸರ್ವಾಂಗ ಪ್ರಣತಪ್ರಣುತಿ ಪ್ರಯತ್ನ ವದನವಾರಿಜಂ ನಿಟಿಳತಟಕುಟ್ಮಳಿತ ಕರವಾರಿಜನಾಗಿ ನಿಂದಿರ್ದು –

ಚಂ || ಜಯಜಯ ವರ್ಧಮಾನ ಪರಮೇಶ್ವರ ನಿನ್ನಯ ಪಾದಪಂಕಜ
ದ್ವಯಮನಮರ್ತ್ಯರತ್ನಮಕುಟದ್ಯುತಿ ಚುಂಬಿತಮಂ ನಿತಾಂತಮಾ
ಶ್ರಯಿಸಿದ ಜಂತುಸಂತತಿ ಪರಸ್ಪರ ವೈರಮುಮಂ ಭಯಪ್ರವೃ
ತ್ತಿಯುಮನನೂನಮಾನಮುಮನಾಗಳೆ ಪೋಗಿಕುಮಿಂದ್ರವಂದಿತಾ || ೧೮

ಉ || ಸನ್ನುತ ಸನ್ಮತೀಶ್ವರ ಜಗತ್ತ್ರಯವಲ್ಲಭ ಸಾರಸೌಖ್ಯಸಂ
ಪನ್ನ ದಯಾಸಮುದ್ರ ದುರಘಾಂತಕ ಶಾಂತರಸಪ್ರಪೂರ್ಣ ಲೋ
ಕೋನ್ನತ ಪಾವನಾಚರಣ ಭಾವಜಭಂಜನ ದೇವ ಕೇವಲಂ
ನಿನ್ನ ಪದಾರವಿಂದಯುಗಳಂ ಶರಣಕ್ಕೆಮಗಿಂದ್ರವಂದಿತಾ || ೧೯

ಚಂ || ಅಪಗತದೋಷನಪ್ಪ ಜಿನ ನೀನುಮಶೇಷ ಪದಾರ್ಥಮಂ ಪ್ರಕಾ
ಶಿಪ ಭವದೀಯಬೋಧಮುಮತೀವ ಹಿತಂ ಭುವನತ್ರಯಕ್ಕೆ ಭಾ
ವಿಪೊಡೆನೆ ಪೆಂಪುವೆತ್ತ ಭವದುಕ್ತಿಯುಮಕ್ಷಯ ಸೌಖ್ಯದೊಳ್ ನಿಯೋ
ಜಿಪ ಜಿನಮಾರ್ಗಮುಂ ವರದಮಕ್ಕೆಮಗಾವಗಮಿಂದ್ರವಂದಿತಾ || ೨೦

ವ || ಎಂದು ಸುತ್ರಾಮಸೂತ್ರಿನ ವಿಚಿತ್ರಸ್ತೋತ್ರಪಾತ್ರನಂ ಜಗತ್ರಯ ಪವಿತ್ರನಂ ಕೇವಲಜ್ಞಾನ ನೇತ್ರನನನೇಕ ಸ್ತೋತ್ರಂಗಳಿಂ ಸ್ತುತಿಯಿಸಿ –

ಕಂ || ಪರುಷಂ ಪೊರ್ದಿದ ತತ್ಸಿ
ದ್ಧರಸಂ ರಸಿಯಿಸಿದ ಲೋಹದೊಂದಂದಮನೇಂ
ಧರಿಯಿಸಿದನೊ ಜಿನತನುರುಚಿ
ಪರಿಗತವಪು ಶುದ್ಧಹೃದಯದೀಪ್ರಂ ವಿಪ್ರಂ || ೨೧

ವ || ಅನಂತರಂ –

ಕಂ || ಆ ಪರಮಜಿನನ ಪದಪೀ
ಠೋಪಾಂತದೊಳಸ್ತ ನಿಖಿಳಸಂಗಂ ಸಕಳೋ
ರ್ವೀ ಪಾವನಮಂ ಜಿನದೀ
ಕ್ಷಾಪದಮಂ ತಳೆದನನುಜ ಸಹಿತಂ ಮಹಿತಂ || ೨೨

ತಳೆಯಲೊಡಂ ದೀಕ್ಷೆಯನಾ
ಗಳೆ ಸಪ್ತರ್ಧಿಗಳ ಸಂಪದಂ ಸಮನಿಸಿತು
ಜ್ವಳಿತ ಚತುರ್ಜ್ಞಾನಂಗಳ
ವಿಳಾಸಮಳವಟ್ಟುದಾ ವಿಶಿಷ್ಟವ್ರತಿಯೊಳ್ || ೨೩

ಸಮಿತಿಸಮಳಂಕೃತಂ ಪಂ
ಚಮಹಾವ್ರತ ಸಂಚಯಾಂಚಿತಂ ಶೀಲಗುಣೋ
ತ್ತಮನಮಳಿನ ಗುಪ್ತಿಯುತಂ
ಯಮಿನಾಯಕನಿಂದ್ರವೃಂದವಂದಿತನಾದಂ || ೨೪

ವ || ಅಂತು ಮುಮುಕ್ಷುಮುಖ್ಯಪ್ರವೃತ್ತಿಯಂ ಪೆತ್ತು –

ಉ || ಚೇತನದಂದಮಂ ದುರಿತದಂದಮನೀ ಜಗದಂದಮಂ ಸುಧೀ
ನೂತನಯಪ್ರಮಾಣಚಯದಂದಮುಮಂ ಬೆಸಸೀಶ ನೀನೆನು
ತ್ತಾತದಬೋಧಸಿಂಧುವ ಜಗತ್ರಯಬಂಧುವ ಮುಂದೆ ನಿಂದು ತ
ದ್ಗೌತಮಯೋಗಿ ಕೆಯ್ಮುಗಿದು ತಾಂ ಬೆಸಗೊಂಡನತೀವ ಭಕ್ತಿಯಿಂ || ೨೫

ಕಂ || ಷಷ್ಟಿಸಹಸ್ರ ಪ್ರಶ್ನವಿ
ಶಿಷ್ಟ ವಚೋನಿಚಯ ನರ್ತಕೀ ನರ್ತನಮಾ
ವಿಷ್ಟಪನುತ ಗಣಧರನು
ತ್ಕೃಷ್ಟಾನನರಂಗಸಂಗಮೆಸೆದುದು ನಿಸದಂ || ೨೬

ವ || ಅಂತಾಯೋಗಿವರ್ಯಂ ಪರ್ಯನುಯೋಗಭಾಗಯಾಗೆ –

ಚಂ || ಪವನನಿರೋಧಮಿಲ್ಲದ ಗಳೋಷ್ಠಪುಟಾದಿ ನಿಮಿತ್ತಮಿಲ್ಲದು
ದ್ಭವಿಸುವ ದೋಷಮಿಲ್ಲದ ಸಮಸ್ತಜನಂಗಳ ವಾಂಛಿತಾರ್ಥಮಂ
ಸುವಿಶದಮಾಗೆ ಪೇೞ್ವ ಭುವನಾಖಿಳಭಾಷೆಗಳಾವಗಂ ತನ
ತ್ತವಯವಮಾದ ನಾದಮೊಗೆದತ್ತಭವಂಗೆ ಗಭೀರತಾಯುತಂ || ೨೭

ವ || ಅಂತತಿಕ್ರಾಂತ ಕರಣವರ್ಣಾಚರಣಮುಂ ಸರಸ್ವತಿ ಸಮಳಂಕಾರ ಸಾತ್ಕಾರಲಾಂಛಿತ ಮುಂ ಅಪಗತಾಕುಳಮುಂ ಅಪುನರುಕ್ತಮುಂ ಏಕಯೋಜನಾಂತರಾವಸ್ಥಿತ ಸಮಸ್ತ ಜನಸಂತಾನಸ್ವಾಂತಸುವ್ಯಕ್ತಮುಂ ಅತ್ಯಂತ ಮೃದುಮಧುರತಾಯುಕ್ತಮುಂ ಗಣಧರ ಕುಳಿಶಧರ ಚಕ್ರಧರ ಪ್ರಶ್ನ ವ್ಯತಿರೇಕಾನಿಃಶ್ರುತಮುಮಪ್ಪ ದಿವ್ಯರಾವಂ ಶ್ರಾವಣ ಬಹುಳಪಕ್ಷ ಪಕ್ಷತಿಯೊಳ್ ನೆಗೞ್ವುದುಂ ಅದಂ ಮುದದಿನವಧಾರಿಸಿ-

ಚಂ || ಚತುರನುಯೋಗಮಾಗಿರೆ ತದರ್ಥಮನಾ ವಿಭು ಗೌತಮಂ ಸುಸಂ
ಸ್ಕೃತವಚನಂಗಳಿಂ ಸಮೆದು ಸನ್ಮತಿತೀರ್ಥಕರಂಗೆ ವಿಶ್ವವಿ
ಶ್ರುತಗಣನಾಥನಾಗಿ ಮಹಿಮೋನ್ನತಿವೆತ್ತು ವಿನೇಯಸಸ್ಯಸಂ
ತತಿಯನಲರ್ಚುತಿರ್ದನತಿನಿರ್ಮಳಧರ್ಮಸುಧಾಸಮೃದ್ಧಿಯಿಂ || ೨೮

ಕೆಲರೊಲವಿಂದೆ ದರ್ಶನವಿಶುದ್ಧಿ ಮಹಾವ್ರತಶುದ್ಧಿಯೆಂಬಿವಂ
ಕೆಲರೊಲವಿಂದೆ ದರ್ಶನವಿಶುದ್ಧಿಯಣುವ್ರತಶುದ್ಧಿಯೆಂಬಿವಂ
ಕೆಲರೊಲವಿಂದೆ ದರ್ಶನವಿಶುದ್ಧಿಯನೊಂದನೆ ಪೆತ್ತರಾ ಜಗ
ತ್ತಿಲಕನ ವರ್ಧಮಾನಜಿನರಾಜನ ಸಂದ ಸಭಾಂತರಾಳದೊಳ್ || ೨೯

ವ || ಇಂತು ಗೌತಮಗಣಾಗ್ರಣಿ ಪ್ರಮುಖ ಚತುರ ಚಾತುರ್ವರ್ಣ್ಯ ಸಂಘಸಂಗತನಾ ಮಹಾವೀರ ವೀತರಾಗಂ ಸುಮನೋವೃಷ್ಟಿ ಸಿಂಹವಿಷ್ಟರಂ ಪ್ರಭಾವಿತಾನ ದಿವ್ಯಧ್ಯಾನ ಸೌರಭೇರೀ ಚಾರುಚಾಮರಾಶೋಕ ಪುಂಡರೀಕತ್ರಿತಯಾತಿಖ್ಯಾತ ಪ್ರಾತಿಹಾರ್ಯನಿಕಾಯ ಮಾಯತ್ತಮಾಗೆ ಮತ್ತಂ ಶತಗವ್ಯೂತಿಮಾತ್ರ ಕ್ಷೇತ್ರಸುಭಿಕ್ಷತೆಯುಂ ಸರ್ವೋಪಸರ್ಗಾ ಭಾವಮುಂ ನಿಖಿಳಜೀವಜಾಳ ಹಿಂಸಾನಿವೃತ್ತಿಯುಂ ಅಂತರಿಕ್ಷಾವಸ್ಥಾನಮುಂ ಚತುರಾಸ್ಯ ಸ್ವರೂಪಾವಭಾಸಮುಂ ಸಮಸ್ತ ವಿದ್ಯಾಧಿಪತ್ಯಮುಂ ಅವ್ಯವಹರಣರಾಹಿತ್ಯಮುಂ ಅಪಗತಚ್ಛಾಯತ್ವಮುಂ ಸಮಪ್ರಸಿದ್ಧನಖಕೇಶತ್ವಮುಂ ಅಪರಿಸ್ಪಂದಪಕ್ಷ್ಮ ಪಾಳಿತ್ವ ಮುಮೆಂಬ ಘಾತಿವಿಘಾತೋಪಜಾತವಿಶದದಶವಿಧಾತಿಶಯದೊಳ್ ಕೂಡಿ ಸಂತತಾ ನಂತಚತುಷ್ಟಯ ಸ್ವಭಾವಪ್ರಭಾವಮನವಳಂಬಿಸಿ –

ಕಂ || ಶ್ರೀ ವರ್ಧಮಾನ ಸನ್ಮತಿ
ದೇವ ಮಹಾವೀರ ವೀರಮುಖ್ಯ ಸಮಸ್ತೋ
ರ್ವೀವಳಯ ವಿನುತ ದಶಶತ
ಪಾವನನಾಮಂಗಳಂ ಜಿನಂ ತಳೆದೆಸೆದಂ || ೩೦

ವ || ಆ ಪರಮಾರ್ಹಂತ್ಯಲಕ್ಷ್ಮೀಕಾಂತಂಗೆ ನಿಖಿಳಗುಣನಿಶಾಂತಂಗೆ ಸಚ್ಚಿದಾನಂದಕಂದಳೀ ಜನ್ಮಭೂಮಿಗೆ ಸನ್ಮತಿಸ್ವಾಮಿಗೆ ಸಮಸ್ತ ಭವ್ಯಜನ ಪೂರ್ವಜನ್ಮೋಪಾರ್ಜಿತೋರ್ಜಿತ ಶ್ರೇಯೋನಿಕಾಯ ಪ್ರೇರಣೆಯಿಂ ಸಮನಿಪ ಸಮುಚಿತ ವಿಹಾರ ಪ್ರಾರಂಭಮಂ ಜಂಭಾರಿ ಭೂರಿ ಪ್ರಭಾವಸ್ವಾವಧಿಬೋಧ ಪ್ರಯೋಗದಿನಱಿದು ಬೇಗಮೆಯ್ತಂದು –

ಕಂ || ಮಂದಾರದ ಪೊಸಮಾಲೆಗ
ಳಿಂದಂ ಜಿನಪಾದಪದ್ಮಮಂ ಪೂಜಿಸಿಯಾ
ನಂದದಿ ಬಿನ್ನವಿಸಿದನಿಂ
ತೆಂದು ಶಚೀರಮಣನಮಳ ಭಕ್ತಿಸಮೇತಂ || ೩೧

ಚಂ || ಕುನಯಘನಾಂಧಕಾರಮನಪಾರಮನೋವದೆ ತೂಳ್ಧಲುಂ ವಿನೇ
ಯನಿಕರ ಚಿತ್ತನೇತ್ರವನಜಕ್ಕೆ ವಿಕಾಸವಿಳಾಸಲಕ್ಷ್ಮಿಯಂ
ಜನಿಯಿಸಲುಂ ಪದಂ ದಲಿದು ದೇವ ಜಗತ್ತ್ರಯನೇತ್ರವೀರ ಪಾ
ವನ ಜಿನಭಾನು ನೀನೆಸಗು ವಿಶ್ವವಸುಂಧರೆಯೊಳ್ ವಿಹಾರಮಂ || ೩೨

ವ || ಎಂದು ಪುರಂದರಂ ವಿನಯದಿಂ ವಿಜ್ಞಾಪನಂಗೆಯ್ಯೆ –

ಕಂ || ವೃಂದಾರಕವೃಂದಾಹತಿ
ದುಂದುಭಿಸಂದೋಹ ಸಾಂದ್ರ ಮಂದ್ರೋಚ್ಚಧ್ವಾ
ನಂ ದೆಸೆಗಳುಮಂ ನಭಮುಮ
ನಂದಾಕ್ರಮಿಸಿತ್ತು ಭವ್ಯಜನಹರ್ಷಕರಂ || ೩೩

ವ || ಮತ್ತಂ ತತ್ತೀರ್ಥಕರ ಪರಮದೇವ ಶ್ರೀವಿಹಾರದೊಳ್ ಸರ್ವತೋಭದ್ರ ಸರ್ವಜ್ಞ ಮನೋಜ್ಞ ಪದ್ಮವನಯಾನಮುಂ ಸರ್ವಾರ್ಥ ಮಾಗಧೀಯ ಭಾಷಾವಿಶೇಷಮುಂ, ಸರ್ವಜನಮನೋನುರಾಗಭೋಗಮುಂ ಸರ್ವಾನುಕೂಲ ಸುರಭಿಗಂಧಿ ಗಂಧವಾಹ ಮಂದಮಂದ ಪ್ರಚಾರಮುಂ ಸರ್ವಪ್ರಯತ್ನ ಮರುತ್ಕುಮಾರ ಸಮ್ಮರ್ಜನಾತಿ ಶುದ್ಧ ಯೋಜನಮಾತ್ರ ಧಾತ್ರೀಭಾಗಮುಂ ಸರ್ವಸಮ್ಮತಸ್ತನಿತಕುಮಾರ ತದ್ಧಾರಿಣೀ ವಿಸ್ತಾರಿತ ಮಳಯರುಹ ಕಾಶ್ಮೀರಗಂಧಬಂಧುರವಾರಿನಿಷೇಕಮುಂ ಸರ್ವರ್ತುಸಮುಚಿತ ನವ ಪ್ರವಾಳಪ್ರಸವ ರಸವತ್ಫಳಮಹೀಜರಾಜಿ ವಿಭ್ರಾಜಿತ ದರ್ಪಣಾಯಮಾನ ರತ್ನಮಯ ಮಹೀವಳಯಮುಂ ಸರ್ವನಯನಾನಂದಸ್ಯಂದಿ ಫಳಭಾರ ನಮ್ರಕಮ್ರಶಾಳಿವ್ರೀಹ್ಯಾದಿ ಸಸ್ಯಸಂಪತ್ತಿಯುಂ ಸರ್ವಜಂತುಸಂತಾನಾಂಗರಂಗ ಸಂಗತಾತ್ಯಂತ ವಿಚಿತ್ರಮೈತ್ರಿಯುಂ ಸರ್ವಪಕ್ಷಿಪ್ರಚಾರ ಧಾರಾಧರ ವಿಗಮವಿಮಳೀಕೃತ ವಿಹಾಯಸಮುಂ ಸರ್ವದಿಶಾವಳ ಯಾಕಳಿತ ತಮೋರಜಃಪಟಳ ವಿಳಯ ವಿಸೃಷ್ಟ ವೈಶದ್ಯಮುಂ ಸರ್ವಗೀರ್ವಾಣನಿಕಾಯಾ ಮೇಯ ಪ್ರೀತಿಪರಸ್ಪರಾಹ್ವಾನಧ್ವಾನಮುಂ ಸರ್ವಭವ್ಯಜನ ಮನಃಸರೋಜಮಾರ್ತಂಡ ಮಂಡಳಾಯಮಾನಮಾನಿತಾಗ್ರೇಸರ ಧರ್ಮಚಕ್ರಮುಂ ಸರ್ವೋರ್ವರಾತಿಪ್ರಶಸ್ತ ಭೃಂಗಾರಾದಿ ಮಂಗಳೋಪಕರಣ ಧರಣ ರಮಣೀಯ ಕರಸರೋಜ ಪುರಂಧ್ರೀ ಪುರಸ್ಸರಣಮುಮೆಂಬ ನಿಳಿಂಪನಿರ್ಮಿತ ಚತುರ್ದಶಾತಿಶಯಂಗಳಖಿಳ ವಿಸ್ಮಯಾಶಯಮ ಕುಶೇಶಯಂಗಳನಲರ್ಚೆ –

ಚಂ || ಕುರು ಕರಹಾಟ ಲಾಟ ಖಚ ಗೂರ್ಜರ ಮಾಳವ ಚೋಳಮುಖ್ಯ ಬಂ
ಧುರವಿಷಯಂಗಳೊಳ್ ಪರಮಧರ್ಮಸುಧಾರಸಮಂ ನಿರಂತರಂ
ನಿರುಪಮವೈಭವಂ ಕಱೆಯುತುಂ ವರವೀರಜಿನೇಶ್ವರಂ ಸಮು
ದ್ಧರಿಸಿದನಿಂತು ತೀರ್ಥಮನನಂತ ಗುಣಾಂಬುಧಿ ಸದ್ವಿಹಾರದಿಂ || ೩೪

ಕಂ || ಎಸೆವಾ ಜಿನರಾಜನ ಸಮ
ವಸರಣಮಾಶ್ಚರ್ಯಕರಣಮದು ಕೂಡೆ ವಿಹಾ
ರಿಸುತುಂ ಬಂದುದು ರಾಜಗೃ
ಹಸಮೀಪದ ವಿಪುಳಗಿರಿಗೆ ವಿಮಳೋತ್ಸವದಿಂ || ೩೫

ಆ || ಆಗಳ್ –

ಉ || ಕಂಪಿನ ಸೊಂಪಾನಾಂತೆಸೆಯೆ ತೀಡುವ ತಣ್ಣೆಲರಿಂ ಸಮಂತು ಚೆ
ಲ್ವಂ ಪಡೆದಿರ್ದ ದಿಗ್ಗಗನದಿಂ ಸುರಭೇರಿಯ ಭೂರಿನಾದದಿಂ
ದಂ ಪರಿತಂದು ಬಿನ್ನವಿಪ ಮಾನವರಿಂ ಮಗಧಾಧಿಪಂಗೆ ನೈ
ಳಿಂಪ ವಿನೂತ ಸನ್ಮತಿ ಸಮಾಗತಿಯಾಯ್ತು ಹಿತಂ ಸುನಿಶ್ಚಿತಂ || ೩೬

ವ || ಅನಂತರಂ –

ಮ || ಸ್ರ || ವಸುಧೇಶಂ ಶ್ರೇಣಿಕಂ ಚೇಳಿನಿವೆರಸು ಮಹಾನಂದದಿಂ ಭವ್ಯಸಂದೋ
ಹಸಮೇತಂ ಬಂದು ಭಾಸ್ವತ್ಸಮವಸರಣಮಂ ಪೊಕ್ಕು ತಚ್ಛೋಭೆಯಂ ವ
ರ್ಣಿಸಿ ವರ್ಣಿಸ್ತುತ್ಯನಂ ಸನ್ನುತಮತಿ ಬಲವಂದರ್ಚನಾ ದ್ರವ್ಯದಿಂದ
ರ್ಚಿಸಿ ತಚ್ಛ್ರೀಪಾದಪೀಠಾಂತಮನವನತಿಯಂಮಾಡಿ ಸರ್ವಾಂಗದಿಂದಂ || ೩೭

ವ || ನಿಂದಿರ್ದು ಭಾಳಸ್ಥಳಾಳಂಕೃತ ಕರಕಮಳಮುಕುಳನಾಗಿ –

ಕಂ || ಶ್ರೀಗೆ ವಚಃಶ್ರೀಗೆ ಜಯ
ಶ್ರೀಗಮೃತಶ್ರೀಗೆ ನೀನೆ ಶರಣೆಂಬ ಮಹಾ
ಭಾಗಂ ಭಾಜನನಕ್ಕುಂ
ಬೇಗದೆ ತೊದಳಾವುದಿಲ್ಲ ವರವೀರಜಿನಾ || ೩೮

ಅರಿದಾರ್ಗಂ ಗೆಲಲೆನಿಸುವ
ದುರಿತಮಹಾಭಟರ ಸೇನೆಯಂ ನೀನೆ ದಿಟಂ
ಶರಣೆಂಬ ನರಂ ನೆರೆಗುಂ
ಹರಿಗುಂ ನಿರ್ವಾಣಪುರಕೆ ವರವೀರಜಿನಾ || ೩೯

ಸಂಸಾರಮಹಾಂಬುಧಿಯಂ
ನೀಂ ಸರಣೆಂಬವನೊಳೊಂದು ಕುಡುತೆಯ ಕೊನೆಗಂ
ಸಂಸಯಮೇಂ ನೆಱೆಯದ ತೆಱ
ದಿಂ ಸಂತೋಷಿಸುಗುಮಲ್ತೆ ವರವೀರಜನಾ || ೪೦

ಸ್ಮರನಂ ಘಸ್ಮರನಂ ಕೇಳ್
ಮರನಂ ಸುಡುವಂತೆ ಸುಟ್ಟು ನೀಂ ಶರಣೆಂಬಾ
ಪುರುಷಂ ಪರುಷಾಘದಿನೋ
ಸರಿಕುಂ ಪಡೆಗುಂ ವಿಮುಕ್ತಿಯಂ ವೀರಜಿನಾ || ೪೧

ಇನಿಸಂ ಮುನಿಸಂ ಜನದೊಳ್
ಮನದೊಳ್ ತಳೆದಂದು ದಂದುಗಂ ಭವಭವದೊಳ್
ತನಗಕ್ಕುಮೆಂದು ನೀಂ ಶರ
ಣೆನುತಿರ್ಪವನುೞಿಗುಮಂತದಂ ವೀರಜಿನಾ || ೪೨

ತೊದಳೇಂ ನೀಂ ಶರಣೆಂಬೀ
ಪದಮಂ ಮದಮಂ ಬಿಸುಟ್ಟು ಜಪಿಯಿಪ ಬುಧನಾ
ಸದಯಂ ಹೃದಯಂ ಸದಯಾ
ಭ್ಯುದಯಾಸ್ಪದಮಾಗದಿರ್ಕುಮೇ ವೀರಜಿನಾ || ೪೩

ಅಘವಂ ಮಘವಂ ನೆಟ್ಟನೆ
ವಿಘಟಿಸಲೆಂದಭವವಿಭವದಿಂದಂ ನಿನ್ನಂ
ಸಘೃಣಿ ಸಲೆ ಪೂಜಿಪಂ ಪ್ರಾ
ಲಘುಗುಣ ನೀಂ ಶರಣೆನುತ್ತೆ ವರವೀರಜಿನಾ || ೪೪

ಭೃತಮಂ ಬ್ರತಮಂ ಪಾಳಿಪ
ಮತಿಯುಂ ಧೃತಿಯುಂ ಸಮಂತು ನೀಂ ಶರಣೆಂಬಾ
ಕೃತಿಯೊಳ್ ಕ್ಷಿತಿಯೊಳ್ ಪುಣ್ಯಾ
ಕೃತಿಯೊಳ್ ಸತತಂ ವಿರಾಜಿಕುಂ ವೀರಜಿನಾ || ೪೫

ಎಂದು ವಿವಿಧಸ್ತವಾವಳಿ
ಯಿಂದಂ ಸನ್ಮತಿ ಜಿನೇಂದ್ರನಂ ಸ್ತುತಿಯಿಸೆ ಭೂ
ವಂದಿತನಂ ಗೌತಮನಂ
ಬಂದಿಸಿದಂ ಬಂದು ಗಣಧರಾಗ್ರೇಸರನಂ || ೪೬

ವ || ಅಂತು ಬಂದಿಸಿ ಬೞಿಯಂ ನಿಜೋಚಿತ ಕೋಷ್ಠದೊಳಾ ನೃಪಾಳಶ್ರೇಷ್ಠಂ ಕುಳ್ಳಿರ್ದು ವಿನಯ ವಿಹಿತಪ್ರಶ್ನಂ ತತ್ವಶ್ರವಣದತ್ತಚಿತ್ತನಾಗಿ ಪೀಯೂಷಪ್ರವಾಹಾಯಮಾನ ಗಂಭೀರೋದಾರ ಸುವ್ಯಕ್ತ ಸೂಕ್ತಿ ಪ್ರಸರದಿಂ ಪ್ರಸನ್ನ ಗಣಧರದೇವಂ ಬೆಸಸಿದಂ ಚಂಚತ್ಪಂ ಚಾಸ್ತಿಕಾಯ ಷಡ್ದ್ರವ್ಯ ಸಪ್ತತತ್ವ ನವಪದಾರ್ಥಸಾರ್ಥಮುಮಂ ಪ್ರತಿನಿಯತಾವಸ್ಥಿತ ತ್ರಿಳೋಕತ್ರಿಕಾಲ ಪ್ರಪಂಚಮುಮಂ ತ್ರಿಷಷ್ಟಿಶಲಾಕಾಪುರುಷಪುರಾಣಕಥಾಕಳಾಪಮುಮಂ ಸಾಗಾರಾನಗಾರ ಭೇದಭಿನ್ನಾಚಾರ ವಿಸ್ತಾರಮುಮಂ ಮತ್ತಮತ್ಯಂತ ಹೇಯರೂಪಾಸಾರ ಸಂಸಾರವೃತ್ತಿಯುಮಂ ಸಾಕ್ಷಾದುಪಾದೇಯರೂಪ ಪರಮಪವಿತ್ರ ರತ್ನತ್ರಯಮಾಹಾತ್ಮ್ಯ ಸಂಪತ್ತಿಯುಮಂ ಸವಿಸ್ತರಮಱಿದು-

ಕಂ || ಅಧಿಕೋತ್ಸವಪೀಯೂಷಾಂ
ಬುಧಿಯೊಳ್ ತನ್ನಂತರಂಗಮೋಲಾಡೆ ಗುಣಾಂ
ಬುಧಿ ಮಗಧಮಂಡಳೇಶಂ
ವಿಧುವಿಶದಯಶೋವಿಭಾಸಿ ತಣ್ಣನೆ ತಣಿದಂ || ೪೭

ವ || ಅನಂತರಂ –

ಕಂ || ನರಪಂ ಕರಪಂಕಜಮಂ
ವರಪಂಡಿತ ಪುಂಡರೀಕ ಕೀರ್ತಿತಯಶನಾ
ದರದಿಂ ಭರದಿಂ ಮುಗಿದಘ
ಹರನಂ ನಿಜಗತ ಭವಂಗಳಂ ಬೆಸಗೊಂಡಂ || ೪೮

ಬೆಸಗೊಳೆ ದಶನಮರೀಚಿ
ಪ್ರಸರಂ ಪೊಸಜೊನ್ನದಂತೆ ಪಜ್ಜಳಿಸಿ ವಿಕಾ
ಶಿಸುತಿರೆ ನೃಪಹೃತ್ಕುಮುದಮ
ನಸದೃಶಯಶನಿಂತು ಬೆಸಸಲುದ್ಯತನಾದಂ || ೪೯

ವಿಂಧ್ಯಂ ನಗಮಗಣಿತ ಸೌ
ಗಂಧ್ಯಂ ನಿಜಪದ್ಮರಾಗರುಚಿರಚಿತ ಮಹಾ
ಸಾಂಧ್ಯಂ ಶಬರಕ್ರೀಡಾ
ವಂಧ್ಯಮದೀಭರತಭೂಗೆ ಭೂಷಣಮೆಸೆಗುಂ || ೫೦