ವ || ಆ ಮಹಾಮಹೀಧರದ ನಿಕಟದಲ್ಲಿ –

ಕಂ || ಘಟಕುಚದ ಬರ್ಹಿಕಚದ ವಿ
ಕಟ ಯೌವನಭರದ ವರಕೃಶೋದರದ ಮದೋ
ತ್ಕಟದ ಶಬರಿಯರಿನೆಸೆವುದು
ಕುಟುಜವನಂ ಕುಟಜಕುಟಜವನಮೃಗಭವನಂ || ೫೧

ಅವನೀಶ್ವರ ನೀಂ ಪೆಱಗೀ
ಭವಕ್ಕೆ ಮೂಱನೆಯ ಭವದೊಳಾಕುಟಜ ಮಹಾ
ಟವಿಯಲ್ಲಿ ಖದಿರಸಾರಾ
ಖ್ಯೆವಲಂ ಸಮನಿಸಿದ ಶಬರನಾಯಕನಾದೈ || ೫೨

ಆ ಭಿಲ್ಲವಲ್ಲಭಂ ಹಿಂ
ಸಾಭಿರತಂ ಮದ್ಯಮಾಂಸಮಧು ಸಂತತಸೇ
ವಾಭಿರತಂ ಬಹುವಿಷಯಸು
ಖಾಭಿರತಂ ದುರಿತಮೂರ್ತಿ ಜೀವಿಸುತಿರ್ದಂ || ೫೩

ಉತ್ಸವ || ಒರ್ಮೆ ತತ್ಕಿರಾತರಾಜನಾವನಾಂತರಾಳದೊಳ್
ದುರ್ಮತಾಂಧಃಕಾರಸೂರನಂ ನಿರಸ್ತಮಾರನಂ
ನಿರ್ಮಳತ್ರಿಗುಪ್ತಿಗುಪ್ತನಂ ಸಮಾಧಿಗುಪ್ತನಂ
ಪೆರ್ಮೆವೆತ್ತ ಜೈನಯೋಗಿಯಂ ಗುಣೋಪಯೋಗಿಯಂ || ೫೪

ಕಂ || ಕಂಡುಪಶಾಂತಸ್ವಾಂತಂ
ದಂಡಿತದುರಿತಂಗೆ ವಿನಯದಿಂದೆಱಗಿ ಮನಂ
ಗೊಂಡಾ ಯತಿಪತಿಯೊಳ್ ಕೆ
ಯ್ಕೊಂಡನವಂ ಕಾಕಮಾಂಸವಿರತಿವ್ರತಮಂ || ೫೫

ಎಸೆವಾ ವ್ರತಮಂ ಪ್ರತಿಪಾ
ಳಿಸುತ್ತುಮಿರ್ದಂಗದೊರ್ಮೆ ಕರ್ಮದ ಬಸದಿಂ
ನಸಿಗುತ್ತಂ ಪತ್ತಿ ವಿವ
ರ್ಧಿಸುತಿರ್ದುದು ಬಂಧುಜನದ ಮನದುಮ್ಮಳಮಂ || ೫೬

ವ || ಆಗಳಾತನ ಪುರಾತನಕಿರಾತನಾಯಕರೆಯ್ತಂದು ಕಡುಗುತ್ತದಿಂ ಬಡಪಟ್ಟನೊಡಲಂ ಬಿಡದೆ ನೋಡಿ ನಡನಡನಡುಗಿ ಕಾಗೆಯಡಗಂ ತಡೆಯದೆ ಕೊಡಲೊಡಂ ಕಿಡುಗುಮೀ ಕಡಿದಪ್ಪ ರೋಗಮೆಂದು ನುಡಿವುದುಮಾ ಜಡರ ನುಡಿಯಂ ಶಬರರೊಡೆಯನವ ಧಾರಿಸಿ-

ಕಂ || ಪಿರಿಯರ ಪಕ್ಕದೊಳಾಂ ಮುಂ
ಧರಿಯಿಸಿದೆಂ ಕಾಕಮಾಂಸವಿರತಿವ್ರತಮಂ
ಪರಿಹರಿಸುವೆನಲ್ಲೆನದಂ
ಹರಣಂಗಳ್ ಬಿಟ್ಟು ಪೋಪೊಡಂ ಕೇಳೆನಿದಂ || ೫೭

ವ || ಎಂದು ನಿಜಕೃತ ಪ್ರತಿಜ್ಞೆಯಂ ಪ್ರತಿಪಾಳಿಪ್ಪ ಪುಳಿಂದಪುಂಗವನನೊಡಂಬಡಿಸಲ್ ನೆಱೆಯದಾತನ ಮೈದುನನಪ್ಪ ಸೂರಪುರದ ಸೂರವೀರನಲ್ಲಿಗಾ ವೃತ್ತಾಂತಮಂ ಪೇೞ್ದಟ್ಟಿ ದೊಡಾತನತಿತ್ವರಿತಗತಿಯಿಂ ಬರುತ್ತುಮಿರ್ಪಾಗಳ್-

ಕಂ || ಆ ಪೇರಡವಿಯೊಳೊರ್ವಳ್
ರೂಪವತಿಯನೇಕ ಭೂಷಣಾನ್ವಿತೆ ರಸೆಯಂ
ವ್ಯಾಪಿಪ ಬಹುಪ್ರಳಾಪ ಕ
ಳಾಪದಿನೞುತಿರ್ದಳಿರ್ಪುದುಂ ತದ್ರವಮಂ || ೫೮

ವ || ಕೇಳ್ದು ಪೆಣ್ಬುಯ್ಯಲಂ ವಿಚಾರಿಸದೆ ಪುರುಷಂ ಪೋಗಲಾಗದೆಂದು ತತ್ಸಮೀಪಮನೆಯ್ದಿ ವಟವಿಟಪಿಯ ಮೊದಲೊಳಿರ್ದಳಂ ಕಂಡು –

ಕಂ || ನೀನಾರ್ಗೇಕೞ್ತಪೆಯೆಲೆ
ಮಾನಿನಿ ಪೇೞೆಂದು ಶಬರವರನತಿದಯೆಯಿಂ
ತಾನವಳಂ ಬೆಸಗೊಳೆ ನೆಗ
ೞ್ದಾ ನಾರಿ ಮನೋನುರಾಗದಿಂದಿಂತೆಂದಳ್ || ೫೯

ಉ || ಯಕ್ಷಿಯೆ ನಾಂ ವಲಂ ಖದಿರಸಾರನನಕ್ಕಟ ಕಾಕಮಾಂಸಮಂ
ಭಕ್ಷಿಸೆನೆಂಬ ಸದ್ವ್ರತದೆ ಸತ್ತೆನಗಂ ಪತಿಯಾಗಲಿರ್ದನಂ
ಭಕ್ಷಿಸಲೆಂದು ಮಾಡಿ ನರಕಂಬುಗಿಸಲ್ ಬರುತಿರ್ಪ ನಿನ್ನನಾ
ನೀಕ್ಷಿಸಿ ಸೂರವೀರ ಪಿರದಪ್ಪೞಲಂ ತಳೆದೀಗಳೞ್ತಪೆಂ || ೬೦

ವ || ಎಂಬದುಮಾ ದೇವತೆಯ ವಾಕ್ಯತತಿಯನಾಕರ್ಣಿಸಿ ವಿಸ್ಮಿತಾಂತರಂಗಂ ತದ್ವ್ರತಭಂಗಮಂ ಸಂಗಳಿಸುವೆನಲ್ಲೆನೆಂದು ತಲ್ಲಲನೆಗೆ ಭಿಲ್ಲವಲ್ಲಭಂ ನಂಬೆ ನುಡಿದು ನಡೆದು ಶಬರ ಖದಿರಸಾರನಂ ಸಾರ್ದು ತತ್ಪರಿಣತಿಯಂ ಪರೀಕ್ಷಿಸಲೆಂದು ಕಾಕಪಿಶಿತಮಸಿತಮಾಗೆ ಬೇಗದಿಂ ರೋಗಮಂ ನೀಗಿ ರಾಗದಿಂ ಬಾೞ್ವೆಯದಱಿನದನೊಲ್ಲೆನೆಂದೆಮ್ಮೆಲ್ಲರಂ ಕೊಲ್ಲದೆ ಮೆಲ್ಲೆಂದು ಮೆಲ್ಲನೆ ನುಡಿದೊಡೆ ನೋಡಿ ಬೇಡರರಸಂ ನೀಡುಮೀಡಾಡಿ ಕಾಡೊಡೆಯನಂ ಜಡಿದು ನುಡಿದಂತುಂ ಸಾವೆನಲ್ಲದೆ ಕಾವುದಂ ಮಾಣೆನಾಂ ವ್ರತಮನೆಂಬುದುಂ ಭಾವನ ಪಾವನಶೀಲಪ್ರಭಾವಕ್ಕೆ ಮೆಚ್ಚಿ –

ಕಂ || ನಿನಗಿಂ ಮೂಱೆದಿನಂ ಜೀ
ವನಮೊಳ್ಳಿತು ಗೆಯ್ದೆ ದೇವಗತಿಯೊಳ್ ತೊದಳೇಂ
ಜನಿಯಿಸಿದಪೆ ಬರುತುಂ ಕೇ
ಳ್ದೆನಿಂತಿದಂ ಭಾವ ಯಕ್ಷಿದೇವಿಯ ದೆಸೆಯಿಂ || ೬೧

ವ || ಎಂದು-

ಕಂ || ಆಕರ್ಣಿತ ವೃತ್ತಕಮಂ
ಸಾಕಲ್ಯದೆ ಪೇೞೆ ಕೇಳ್ದು ಸಕಳ ವ್ರತಮಂ
ಸ್ವೀಕರಿಸಿ ಕಾಯಮಂ ಬಿ
ಟ್ಟಾ ಕುಶಲಂ ಪ್ರಥಮಕಲ್ಪದೊಳ್ ಜನಿಯಿಸಿದಂ || ೬೨

ವ || ಅಂತು ಜನಿಯಿಸಿ ತತ್ಕಲ್ಪದನಲ್ಪಸುಖಮಂ ದ್ವಿಸಾಗರೋಪಮಾಯುರವಸಾನಂಬರ ಮುಂಡು ತದ್ದೇವನಪ್ಪ ನೀನಿಲ್ಲಿ ಬಂದು –

ಕಂ || ಭೂಮೀಶ್ವರ ಕುಣಿಕಂಗಂ
ಶ್ರೀಮತಿಗಂ ಶ್ರೇಣಿಕಾಖ್ಯಸುತನಾದೈ ಮ
ತ್ತೇಮಾತೊ ವಿಷಯಕಾಂಕ್ಷೋ
ದ್ದಾಮತೆಯಿಂ ಪ್ರಥಮನರಕಮಂ ನೀಂ ಪುಗುವೈ || ೬೩

ಕ್ಷಾಯಿಕಸಮ್ಯಕ್ತ್ವಂ ನಿ
ಶ್ರೇಯಸಕರಮಾದುದಿಲ್ಲಿ ನಿನಗದಱಿಂ ಬ
ರ್ಪೀಯುತ್ಸರ್ಪೀಣಿಯೊಳ್ ನಿರ
ಯಾಯಾತಂ ಪ್ರಥಮತೀರ್ಥಕರವರನಪ್ಪಯ್ || ೬೪

ವ || ಎಂದು ಗೌತಮಸ್ವಾಮಿ ಬೆಸಸೆ ನಿರಯನಿಪತನ ಭೀತಿಯಂ ತೀರ್ಥಕರತ್ವ ಪ್ರಾಪ್ತಿ ಪ್ರೀತಿಯಿಂ ಪ್ರಶಮಿಸಿ ಜಿನಮುನಿಗಳಂ ಬೀೞ್ಕೊಂಡು ಸಮವಸರಣದಿಂ ಧರಣಿಗವತರಿಸಿ ನಿಜರಾಜಧಾನಿಯಂ ಮಹಾವಿಭವದಿಂ ಪೊಕ್ಕಂ ಇತ್ತಲಾ ದೇವದೇವೋತ್ತಮಂ ಗೌತಮ ಪ್ರಮುಖೈಕಾದಶಗುಣಧರರುಂ ಶತತ್ರಯಪೂರ್ವಧರರುಂ ತ್ರಿಶತಾಧಿಕಸಹಸ್ರಾವಧಿ ಜ್ಞಾನಿಗಳುಂ ಸಪ್ತಶತಕೇವಳಿಳುಂ ನವಶತ ವಿಕ್ರಿಯರ್ಧಿಪ್ರಾಪ್ತರುಂ ಚತುಶ್ಶತವಾದಿ ಗಳುಂ ನವಶತ ಶಿಕ್ಷಕರುಂ ಚಂದನಾರ್ಯಿಕಾಪ್ರಮುಖ ಷಟ್ತ್ರಂಶತ್ಸಹಸ್ರ ಗುಣವದ್ಗಣಿನಿ ಯರುಂ ಏಕಲಕ್ಷ ಶ್ರಾವಕರುಂ ತ್ರಿಲಕ್ಷ ಶ್ರಾವಕಿಯರುಂ ಅಸಂಖ್ಯಾತ ದೇವದೇವೀನಿ ಕಾಯಮುಂ ಸುರಸಮಿತಿಯುಂ ತಿರ್ಯಗ್ವರ್ಗಮುಂ ಬೆರಸು –

ಕಂ || ಬರಿಸಂಗಳ್ ಮೂವತ್ತೋ
ಸರಿಸುವಿನಂ ಭವ್ಯಬಂಧು ಧರ್ಮಕ್ಷೇತ್ರೋ
ತ್ಕರದೊಳ್ ವಿಹಾರಮಂ ಬಿ
ತ್ತರಿಸಿದನಾನತಶಿವಂಕರಂ ತೀರ್ಥಕರಂ || ೬೫

ವ || ಅಂತು ವಿಹಾರಿಸುತ್ತುಂ ಚತುರ್ಥಕಾಲದೊಳ್ ತ್ರಿಸಂವತ್ಸರಂಗಳುಮಷ್ಟಮಾಸಂಗಳುಂ ಪಂಚದಶದಿನಂಗಳುಮವಶಿಷ್ಟಂಗಳಾದುವೆಂಬಂದು-

ಕಂ || ಪಾವಾಪುರವರದ ಬಹಿ
ರ್ಭೂವಿಳಸಿತ ವಿತತವನಕೆ ಸುರುಚಿರಸರಸೀ
ಪಾವನ ವನಕೆ ಜಿನೇಂದ್ರಂ
ಶ್ರೀವೀರಂ ಮಾರವಿಜಯಿ ಬಿಜಯಂಗೆಯ್ದಂ || ೬೬

ವ || ಅಂತು ಬಿಜಯಂಗೆಯ್ದು ವಿಸರ್ಜಿತ ಸಮವಸರಣೋಪಾಶ್ರಿತಜನಸಮುದಯನುಂ ದಿನದ್ವಯಪರಿತ್ಯಕ್ತವಿಹರಣಕ್ರಿಯನುಮಾಗಿ ಸಹಸ್ರಯತಿವರವೃಷಭ ಸಮನ್ವಿತಮಲ್ಲಿಯೊಂದು ಸಮುಲ್ಲಸಿತ ನಿರ್ಜಂತುಕ ವಿಶಾಳಶಿಳಾಪಟ್ಟಕದ ಮೇಲೆ –

ಕಂ || ಅಪ್ರತಿಮ ಗುಣಾಂಬುಧಿ ಸುದೃ
ಢ ಪ್ರತಿಮಾಯೋಗದಿಂದೆ ನಿಂದಂ ತ್ರೈಳೋ
ಕ್ಯಪ್ರಭು ತತ್ಸನ್ಮತಿ ಕೃ
ತ್ಸ್ನಪ್ರಾಣಿಲಸದ್ದಯಾಕರಂ ತೀರ್ಥಕರಂ || ೬೭

ವ || ಅಂತು ನಿಂದ ಸೂಕ್ಷ್ಮಕ್ರಿಯಾಪ್ರತೀಕನಾಗಿ ಮೂಲಶರೀರಪ್ರಮಾಣಾವಸ್ಥಿತಾತ್ಮಪ್ರದೇಶಂ ಬೞಿಯಮಂತರ್ಮುಹೂರ್ತದಿಂ ಬಾದರಮನೋವಚನೋಚ್ಛ್ವಾಸಂ ಬಾದರಕಾಯೋಗ ಸೂಕ್ಷ್ಮಮನೋವಚನೋಚ್ಛ್ವಾಸಂಗಳುಮಂ ನಿರೋಧಿಸಿ ಸೂಕ್ಷ್ಮಕಾಯಯೋಗನಾಗಿ ಸಮನಂತರಂ ತನ್ನಿರೋಧಂಗೆಯ್ದಯೋಗಿ ಕೇವಳಿಗುಣಸ್ಥಾನಸ್ಥಿತಂ ಸಮುಚ್ಛಿನ್ನಪ್ರಾಣೋ ಪಾನಪ್ರಚಾರನಾಗಿ ಸಮುಚ್ಛಿನ್ನಕ್ರಿಯಾನಿವೃತ್ತಿಯೆಂಬ ಚತುರ್ಥಪರಮಶುಕ್ಲಧ್ಯಾನದೊಳ್ ನಿಂದು ಸಂರುದ್ಧಸರ್ವಾಸ್ರವಂ ಸಂಪೂರ್ಣ ಸಕಳ ಶೀಳಗುಣಸಮಾಜಂ ನಿಜೋಪಾಂತ ಸಮಯದೊಳನ್ಯತರವೇದನೀಯ ದೇವಗತಿತತ್ಪ್ರಾಯೋಗ್ಯಾನುಪೂರ್ವ ಶರೀರಬಂಧನ ಸಂಘಾತವರ್ಣರಸಪ್ರತ್ಯೇಕ ಪಂಚಕ ಸಂಹನನ ಸಂಸ್ಥಾನಷಟ್ಕಗಂಧ ದ್ವಿತಯ ವಿಹಾಯಾಂ ಗೋಪಾಂಗ ದ್ವಿತಯ ವಿಹಾಯೋಗತಿ ದ್ವಿತಯ ಸ್ಪಷ್ಟಕಾಗುರುಲಘು ಚತುಷ್ಕ ಶುಭಾಶುಭ ಸ್ಥಿರಾಸ್ಥಿರ ಸುಸ್ವರದುಸ್ವರ ದುರ್ಭಗಪ್ರತ್ಯೇಕ ಶರೀರಾಯಶಸ್ಕೀರ್ತ್ಯನಾದೇಯ ನಿರ್ಮಾಣ ಪರ್ಯಾಪ್ತ ನೀಚೈರ್ಗೋತ್ರಂಗಳೆಂಬ ದ್ವಾಸಪ್ತತಿಪ್ರಕೃತಿಗಳಂ ನಿರವಶೇಷಂ ಮಾಡಿ ನಿಜಚರಮಸಮಯದೊಳವಶಿಷ್ಟಾನ್ಯತರ ವೇದ್ಯ ಮನುಷ್ಯಾಯುರ್ಗತಿ ತತ್ಪ್ರಾಯೋಗ್ಯಾನು ಪೂರ್ವ ಪಂಚೇಂದ್ರಿಯ ಜಾತಿ ತ್ರಸನಾಮ ಸುಭಗಾಧೇಯ ಪರ್ಯಾಪ್ತ ಬಾದರಯಶ ಸ್ಕೀರ್ತ್ಯುಚ್ಚೈರ್ಗೋತ್ರ ತೀರ್ಥವರನಾಮಂಗಳೆಂಬ ತ್ರಯೋದಶಪ್ರಕೃತಿಗಳುಮನುನ್ಮೂಲಿಸಿದನಿಂತು –

ಉ || ಧ್ಯಾನಮಣಿಪ್ರದೀಪದಿನಘಾತಿ ಮಳೌಘಮಹಾಂಧಕಾರ ಸಂ
ತಾನಮನೆಯ್ದೆ ತೂಳ್ದಿ ನೆಗೞ್ದಷ್ಟಗುಣಂಗಳ ಪುಷ್ಟಿ ತನ್ನೊಳ
ನ್ಯೂನಮದಾಗೆ ಬೇಗದೆ ಜಗತ್ತ್ರಿತಯಾಗ್ರಮನೆಯ್ದಿ ಮೋಕ್ಷಲ
ಕ್ಷ್ಮೀನಿಧಿಯಾದನಾ ಪರಮಪಾವನ ಸನ್ಮತಿತೀರ್ಥನಾಯಕಂ || ೬೮

ಮ || ಎನಿತೊಂದುಂಟು ಗುಣಂ ಪ್ರಕೃಷ್ಟಮನಿತುಂ ಸಂಪತ್ತಿಯಂ ಪೆತ್ತುವಾ
ತ್ಮನೊಳೆಂಬೀ ವಿಳಸನ್ಮಹಾಮಹಿಮೆಯಂ ಕೆಯ್ಕೊಂಡು ಲೋಕತ್ರಯಾ
ಗ್ರನಿವಾಸೀದ್ಧ ವಿಶುದ್ಧ ಸಿದ್ಧಗಣಮಧ್ಯೋದ್ಭಾಸಿಯಾದಂ ನಿರಂ
ಜನನುದ್ಯದ್ಭವಭಂಜನಂ ನಿರುಪಮ ಶ್ರೀವರ್ಧಮಾನಂ ಜಿನಂ || ೬೯

ಕಂ || ವಿಳಸಿತಕಾರ್ತಿಕಮಾಸಾ
ಕಳಿತಂ ಸಿತಪಕ್ಷವರ ಚತುರ್ದಶಿಯೊಳ್ ತಾಂ
ಬೆಳಗಪ್ಪ ಜಾವದೊಳ್ ನಿ
ರ್ಮಳಮುಕ್ತಿಶ್ರೀಗೆ ವೀರಜಿನನಿನನಾದಂ || ೭೦

ಮ || ಸ್ರ || ನೆರೆದಂ ನಿರ್ವಾಣಲಕ್ಷ್ಮೀಲಲನೆಯೊಳನಘಂ ವೀರಭಟ್ಟಾರಕಂ ಬಂ
ಧುರ ಬೋಧಾನಂದರೂಪಂ ಪರಮವರದನೀ ಪ್ರಾಂತಕಲ್ಯಾಣಪೂಜಾ
ಭರಮಂ ತ್ರೈಲೋಕ್ಯಲೀಲಾಕರಮನೆಸಗುವೆಂ ಬೇಗದಿಯೆಂದು ಪುಣ್ಯಾ
ಚರಣಂ ಚಾತುರ್ವಿಕಾಯಾಮರಸಮಿತಿ ಸಮನ್ವೀತನೆಯ್ತಂದನಿಂದ್ರಂ || ೭೨

ಉ || ಆವೆಡೆಯಲ್ಲಿ ನಿಂದು ನಿಖಿಳಾಘ ಮಹಾಭಟರಂ ಜಿನೇಂದ್ರನಂ
ದೋವದೆ ಗೆಲ್ದನಾ ವಸುಮತೀತಳಮಂ ಪರಮಪ್ರಮೋದದಿಂ
ದೇವಕದಂಬಕಂ ಬೆರಸು ಮುಂ ಬಲವಂದು ಪುಲೋಮಜಾ ಪ್ರಿಯಂ
ಪಾವನಮಪ್ಪ ವಸ್ತುಗಳಿನರ್ಚಿಸಿದಂ ವಸುಧೈಕಬಾಂಧವಂ || ೭೩

ನಾಡೆ ಬೆಡಂಗುವೆತ್ತ ಮಣಿಭಾಜನದೀಪಕಳಾಪದಿಂ ಸಮಂ
ತೀಡಿತಮಪ್ಪ ತದ್ಧರೆಯನೊಲ್ದು ನಿವಾಳಿಸಿದತ್ತು ರಾತ್ರಿಯೊಳ್
ಪಾಡುತುಮಾಡುತುಂ ಬಲಗೊಳುತ್ತುಮಮರ್ತ್ಯಚಯಂ ಪ್ರಮೋದದೊಳ್
ಕೂಡಿ ದಲಾದುದಂದು ಮೊದಲಾಗಿ ಧರಿತ್ರಿಗೆ ದೀಪಿಕೋತ್ಸವಂ || ೭೪

ವ || ಅನಂತರಮಾ ಶತಮಖಂ ಚತುರ್ನಿಕಾಯ ಸುರಸಮಿತಿ ಸಮೇತಂ ಕರಕಮಳಕುಟ್ಮಳಾಳಂಕೃತ ನಿಟಿಳತಟನಾಗಿ –

ಚಂ || ನಿರತಿಶಯಾಂಗಸಂಗತ ಮರೀಚಿ ದುರಾಚರಿತಾಂಧಕಾರಮಂ
ಪರಿಹರಿಸಿತ್ತು ದೇವ ಭವದೀಯ ವಚೋರಮೆ ವಾಂಛಿತಾರ್ಥಮಂ
ನೆರದ ಸಭಾಜನಕ್ಕೆ ಕಱೆದತ್ತು ನಿರಾವರಣಾವಬೋಧಮಾ
ವರಿಸಿದುದೆಲ್ಲಮಂ ನಿನತು ಮಾಂತನಮೆಂತುಟೊ ಕಂತುಭಂಜನಾ || ೭೫

ನಿರಯನಿಪಾತಮಂ ನಿಯಮದಿಂದೆ ನಿವಾರಿಪ ಭೂರಿಶಕ್ತಿ ಭೂ
ಚರಖಚರಾಧಿರಾಜಪದದೊಳ್ ತೊದಳೇಂ ನಿಲಿಪೊಂದು ಬಲ್ಪು ಸಂ
ಸರಣಸಮುದ್ರದಿಂ ತೆಗೆದು ಮುಕ್ತಿನಿವಾಸಮನೆಯ್ದಿಪಾರ್ಪು ಬಾ
ಪ್ಪುರೆ ನಿಜಪಾದಪದ್ಮಯುಗ ಭಕ್ತಿಗಿದೊಚ್ಚತಮಲ್ತೆ ಧೀರಧೀ || ೭೬

ಮ || ಸ್ರ || ಹರಿಯಾದೈ ದೇವನಾದೈ ಖಚರರಮಣನಾದೈ ಮರುನ್ಮುಖ್ಯನಾದೈ
ಹರಿಷೇಣಾಭಿಖ್ಯನಾದೈ ತ್ರಿದಿವಜನಿತನಾದೈ ಸುಚಕ್ರೇಶನಾದೈ
ಸುರನಾದೈ ನಂದನಾದೈ ಕ್ಷಿತಿತಳಪತಿಯಾದೈ ನಿಳಿಂಪೇಶನಾದೈ
ವರವೀರಸ್ವಾಮಿಯಾದೈ ಬೞಿಕ ಶಿವಗತಿಶ್ರೀತನಾದೈ ಮಹಾತ್ಮಾ || ೭೭

ಚಂ || ಜನನ ಜರಾ ರುಜಾ ಮರಣ ದುಃಸಹ ಘೋರದುರಂತದುಃಖ ಭಾ
ಜನಮೆನಿಸಿರ್ದ ಜೀವತತಿ ದೇವ ಭವತ್ಪದಪದ್ಮಯುಗ್ಮಮಂ
ನೆನೆಯಲೊಡಂ ಸದಭ್ಯುದಯಸೌಖ್ಯಮುಮಂ ನಿರುಪದ್ರವಾತಿಪಾ
ವನತರ ನಿತ್ಯಮೋಕ್ಷಪದ ಸೌಖ್ಯಮುಮಂ ಪಡೆಗುಂ ಗುಣಾಂಬುಧೀ || ೭೮

ಒಸೆಯದೆಯುಂ ಪದಾನತರ್ಗೆ ಸೌಖ್ಯಸಮೃದ್ಧಿಯನೀವೆ ದೇವ ನೀಂ
ಬೆಸೆಯದೆಯುಂ ಪದಾನತರ್ಗೆ ದುಃಖಸಹಸ್ರಮನಾವಗಂ ವಿಸ
ಜೀಸುವೆ ಮನೋವಿಕಾರಭರಮಿಲ್ಲದೆಯುಂ ವರಮುಕ್ತಿಲಕ್ಷ್ಮಿಗೊ
ಪ್ಪಿಸಿದೆ ನಿಜಾತ್ಮನಂ ನಿನತು ವೃತ್ತಿ ವಿಚಿತ್ರತರಂ ಧರಿತ್ರಿಯೊಳ್ || ೭೯

ಅಪಗತದೋಷರೋಷಪರತೋಷತೆಯಿಂದೆ ಜಗತ್ತ್ರಯಕ್ಕೆ ನೀ
ನುಪಕೃತಿಯಿಂ ನಿಜಾಮಳವಚೋಮೃತ ಕೋಮಳದೃಷ್ಟಿಯಿಂದೆ ವಿ
ಷ್ಟಪಪತಿವಂದ್ಯ ಸಂದೆಯಮದೇಂ ಮೊದಲೊಳ್ ದಯೆಗೆಯ್ದು ದೇವ ಮ
ತ್ತಪವಪುವಾಗಿ ಬೇಗದೊಳೆ ಸಾಧಿಸಿದೈ ಜಿನ ಸಿದ್ಧಿಲಕ್ಷ್ಮಿಯಂ || ೮೦

ಮ || ನಿಜಮಾರ್ಗಂ ನಿಜಮಾರ್ಗಭೋಧಿತ ಲಸಜ್ಜೀವಸ್ವರೂಪಂ ದಲಾ
ನಿಜಮಂ ಮಾನಿಜನಂಗಳಲ್ಲದವರೋವಂತಿರ್ದುದಿಂ ತೀರ್ದುದೆಂ
ದು ಜಡವ್ಯಾಹೃತಿಯಿಂ ಗಡಂ ಗಳಪುವರ್ ಚಿದ್ರೂಪ ತದ್ರೂಪಮಂ
ಸುಜನರ್ ತ್ವನ್ಮತವರ್ತಿಗಳ್ ಜಿನ ಯಥಾರ್ಥೋದ್ಭಾಸಿಯಂ ಭಾಷಿಪರ್ || ೮೧

ಭವಸಂತಾಪವಿಲೋಪಮಂ ನಿಯಮದಿಂದಿಚ್ಛೈಪವಂ ನಿಚ್ಚಮು
ತ್ಸವದಿಂ ತ್ವಚ್ಚರಣೋಚ್ಚಭಕ್ತಿರಮೆಯಾ ಪರ್ಚ್ಚಂ ಚಿರಂ ನಚ್ಚಿ ಮೆ
ಚ್ಚಿ ವಲಂ ವರ್ತಿಕೆ ತತ್ಪ್ರಸಾದಮವನಂ ತದ್ದುಃಖದಿಂ ಪಿಂಗಿಕುಂ
ರವಿಪಾದಂ ಬೆಳಪಲ್ಲಿ ನಿಲ್ಕುಮೆ ತಮಂ ಶ್ರೀವೀರಧೀರಾಗ್ರಣೀ | ೮೨

ವ || ಎಂದನೇಕ ಪ್ರಶಸ್ತ ಸಂಸ್ತವಂಗಳಿಂ ಸ್ತುತಿಯಿಸಿ ಗೀರ್ವಾಣರಮಣಂ ನಿರ್ವರ್ತಿತ ಸರ್ವಜ್ಞ ಪರಿನಿರ್ವಾಣಕಲ್ಯಾಣಮಾಂಗಲ್ಯನಾಗಿ ನಾಕಲೋಕಕ್ಕೆ ಪೋದನಗಣ್ಯ ಭಕ್ತಿವರೇಣ್ಯಂ ಚಾತುರ್ವರ್ಣ್ಯಸಂಘಂ ತದುರ್ವೀತಳ ಮನಗುರ್ವಿನರ್ಚನೆಗಳಿನರ್ಚಿಸಿ ಪರಮಪ್ರಮೋದಪ್ರದ ಪ್ರದಕ್ಷಿಣೀಕರಣ ಪರಿಣತಂ ರೂಪಸ್ತವ ವಸ್ತುಸ್ತವ ಗುಣಸ್ತವನಿವಹಾನೂನ ಧ್ವಾನಬಧಿರಿತಾಶಾವಳಯಮಾಗಿ –

ಕಂ || ಪರಿನಿರ್ವಾಣಕ್ರಿಯೆಯಂ
ಪರಮೋತ್ಸವದಿಂದೆ ತೀರ್ಚಿ ಸಕಳವಿನೇಯೋ
ತ್ಕರಮಂದು ನಯದೆ ನಿಜನಿಜ
ಧರೆಗಳ್ಗಲ್ಲಿಂದೆ ತಳರ್ದು ಪೋಯ್ತು ಕೃತಾರ್ಥಂ || ೮೩

ವ || ಅನಂತರಂ –

ಕಂ || ಯುವರಾಜಂಗಧಿರಾಜ
ತ್ವವಿಭವಮಪ್ಪಂತೆ ಕೇವಲತ್ವಂ ಘಾತಿ
ಪ್ರವಿನಾಶದೆ ಗೌತಮಯತಿ
ಧವಂಗೆ ಸಮನಿಸಿತು ಸಕಳಭುವನವಿನೂತಂ || ೮೪

ದ್ವಾದಶವರ್ಷಂಬರಮೆಸೆ
ವಾ ದಿವಿಜಸ್ತುತಜಿನಂ ವಿಹಾರಿಸಿ ಧರೆಯೊಳ್
ಭೇದಿಸಿಯಘಾತಿ ಮಳಮಯ
ನಾದಂ ಪ್ರವ್ಯಕ್ತಮುಕ್ತಿಲಕ್ಷ್ಮೀರಮಣಂ || ೮೫

ವ || ಅಲ್ಲಿಂ ಬೞಿಕ್ಕೆ –

ಕಂ || ಅನುಬದ್ಧಕೇವಳಿಗಳಾ
ಗಿ ನೆಗೞ್ದರೆಸೆವಾ ಸುಧರ್ಮಜಂಬೂನಾಮರ್
ಘನಯಶರವರಿಂ ಬೞಿಕೊ
ರ್ವನುಮಿಲ್ಲೀಕ್ಷೇತ್ರದಲ್ಲಿ ಲಬ್ಧಾರ್ಹಂತ್ಯಂ || ೮೬

ಶ್ರುತಕೇವಳಿತ್ವದಿಂ ಕ್ಷಿತಿ
ನುತಿವಡೆದರ್ ವಿಷ್ಣುನಂದಿಯಮಧರನಪರಾ
ಜಿತಯತಿ ಗೋವರ್ಧನಮುನಿ
ಪತಿ ಜನನುತ ಭದ್ರಬಾಹುವೆಂದಿವರಯ್ವರ್ || ೮೭

ಯಮಿಗಳ್ ವಿಶಾಖದತ್ತ
ಪ್ರಮುಖರ್ ದಶಪೂರ್ವಧಾರಿಗಳ್ ತೊಳಗಿದರು
ತ್ತಮಜಯಪಾಳಪ್ರಭೃತಿಗ
ಳಮಳಿನರೇಕಾದಶಾಂಗಧಾರಿಗಳೆಸೆದರ್ || ೮೮

ಅವರಿಂ ಬೞಿಕ್ಕೆ ಸಿದ್ಧಾಂ
ತವಿದ್ಯೆಯೀ ಧರಣಿತಳದೊಳೆಡೆವಱಿಯದೆ ಪ
ಲ್ಲವಿಸಿತ್ತು ಭೂತಬಲ್ಯಾ
ದಿ ವೀರಸೇನಾಂತಕಾಂತಯತಿತತಿಯಿಂದಂ || ೮೯

ಉ || ಶ್ರೀ ವಸುಧೈಕಬಾಂಧವನ ಬಂಧುರ ಭಕ್ತಿಗೆ ಮೆಚ್ಚಿಕೇಶಿರಾ
ಜಾವನಿದೇವನಾ ವಿಬುಧ ಚಾಮಸಮನ್ವಿತನಂದು ಪೇೞುತುಂ
ದೈವನಿಯೋಗದಿಂದೆ ಗಡ ನಿಂದುದನೀ ವರವೀರಕಾವ್ಯಮಂ
ಭಾವಿಸಿಯಾಚಿರಾಜವಿಭು ಪೂರಿಸಿದಂ ಜಿನಭಕ್ತಿಸೂಕ್ತಿಯಿಂ || ೯೦

ಚಂ || ವರ ವಸುಧೈಕಬಾಂಧವನ ಬಂಧುರಭಾಗ್ಯನ ದಂಡನಾಥ ರೇ
ಚರಸನ ಮಾನಸಪ್ರಿಯಮೆನಿಪ್ಪ ಜಗನ್ನುತ ವರ್ಧಮಾನ ಸ
ಚ್ಚರಿತಮನಿಂತಿದಂ ನಯದೆ ಭಾವಿಸಿ ಭಾವಿಸಿ ನೋಡಿ ಬಿಟ್ಟು ಮ
ಚ್ಚರಮನತಿಪ್ರಮೋದದೊಳೆ ತಿರ್ದುಗೆ ಕಾವ್ಯಕಳಾವಿಶಾರದರ್ || ೯೧

ಸ್ರ || ಶ್ರೀ ವಾಣೀವಲ್ಲಭಾಖ್ಯಾನಮನತಿಮುದದಿಂ ಪೆತ್ತು ವರ್ತಿಪ್ಪ ಧಾತ್ರೀ
ದೇವಂ ಸಂದಾಚಿರಾಜಂ ಪುರಿಕರನಗರಾಧೀಶ ಶಂಖಾಗ್ರಜಾರ್ಹ
ತ್ಸೇವಾಸಕ್ತಾಶಯಂ ಬಿತ್ತರಿಸಿದ ವಿಬುಧಶ್ರವ್ಯಮೀ ವೀರಕಾವ್ಯಂ
ಭೂವಿಖ್ಯಾತಾವದಾತಂ ಸಕಳಸಭೆಗಳೊಳ್ ವರ್ತಿಕಾಚಂದ್ರತಾರಂ || ೯೨

ಮ || ಎಸೆವೀ ವೀರಜಿನೇಂದ್ರ ಚಾರುಚರಿತಂ ಸದ್ಭಕ್ತಿಯಿಂ ಸಂತತಂ
ಪೆಸರ್ಗೊಳ್ವೋದಿಸುವೋದುವಾದರಿಪ ಯೋಗ್ಯರ್ಗೀವ ಭಾವಿಪ್ಪ ಪೂ
ಜಿಸುವಾದಂ ಬರೆಯಿಪ್ಪ ತಾಂ ಬರೆವ ಸದ್ವ್ಯಾಖ್ಯಾನಮಂ ಮಾೞ್ಪ ಭ
ವ್ಯಸಮೂಹಕ್ಕಿರದೀಗುಮಭ್ಯುದಯಮಂ ನಿಶ್ಶ್ರೇಯಸಶ್ರೀಯುಮಂ || ೯೩

ಗದ್ಯಂ

ಇದು ನಿಖಿಳಭುವನ ಜನವಿನೂತ ಸ್ಫೀತಮಹಿಮಾವದಾತ ವೀತರಾಗ ಸರ್ವಜ್ಞತಾ ಸಮೇತ
ಖ್ಯಾತಜಿನಸಮಯಕಮಳಿನೀ ಕಳಹಂಸಾಯಮಾನ ಮಾನಿತ ಶ್ರೀ
ನಂದಿಯೋಗೀಂದ್ರಪ್ರಸಾದ ವಾಚಾಮಹಿತ
ಕೇಶವರಾಜಾನಂದನಂದನ ವಾಣೀವಲ್ಲಭ ವಿಸ್ತಾರಿತಮಪ್ಪ
ವಸುಧೈಕಬಾಂಧವ ಶ್ರೀವರ್ಧಮಾನ ಪುರಾಣದೊಳ್ ವೀರಸ್ವಾಮಿ
ನಿರ್ವಾಣಭೂಮಿಗಮನವರ್ಣನಂ
ಷೋಡಶಾಶ್ವಾಸಂ