ವ || ಅಂತು ವಿಹಿತವಿಶಿಷ್ಟೋಪವಾಸಂ ಪಾರಣಾವಾಸರದೊಳ್ ಕಾಯಸ್ಥಿತಿ ನಿಮಿತ್ತಂ ಚರ್ಯಾಮಾರ್ಗದೊಳ್ ಬರುತ್ತುಮಿರೆ ತದ್ವೃತ್ತಾಂತಮಂ ಸಸಂಭ್ರಮದ್ವಾರಪುರುಷರಿ ನವಧಾರಿಸಿ –

ಕಂ || ಚಂದನೆ ಮುನಿಯಂ ನಿಲಿಸುವೆ
ನೆಂದತಿ ಮುದದಿಂದೆ ಪರಿವ ಪದದೊಳ್ ಪದದೊಳ್
ಸಂಧಿಸಿದಾ ಸಂಕಲೆ ಪಱಿ
ದೊಂದಿನಿತುಂ ತೋಱದಂತಡಂಗಿದುದೆಳೆಯೊಳ್ || ೫೬

ವ || ಅಂತು ಜಗನ್ನಾಥ ಸನ್ನಿಧಿಗಮನ ಸಾಮರ್ಥ್ಯದಿಂ ಸತಿಯ ಸಂಕಲೆ ಭೋಂಕನೆ ಪಱಿದು ಪಾಱೆ ಲೀಲೆಯಿನಿದಿರ್ಗೊಂಡು ಸನ್ಮತಿಸ್ವಾಮಿಯಂ ಸಮಯಸಮುಚಿತ ಕ್ರಮದಿಂ ನಿಲಿಸಿ ನಿಜನಿವಾಸಕ್ಕೆ ಬಿಜಯಂಗೆಯ್ಸಿ ಪೂತೋಚ್ಚಾಸನದೊಳಿರಿಸಿ –

ಚಂ || ಪದಯುಗಳಂಗಳಂ ತೊಳೆದು ಪೂಜಿಸಿ ಬಂದಿಸಿ ಕಾಂತೆ ಕಾಯ ವಾಕ್
ಹೃದಯವಿಶುದ್ಧಿಯಿಂದೆ ನಿರವದ್ಯಮನನ್ನಮನೀಯೆ ತದ್ಗುಣಾ
ಸ್ಪದನದನಾಂತು ತನ್ನುದರದೊಳ್ ನಿನಗಕ್ಷಯಮಕ್ಕೆ ದಾನಮೆಂ
ದುದಿತ ದಯಾಧ್ವಜಂ ಪರಸಿ ಪೋಪುದುಮಾ ಪದದೊಳ್ ಸುರಾಧ್ವದಿಂ || ೫೭

ಕಂ || ವಸುಕುಸುಮವರ್ಷಣಂ ಮಂ
ದಸಮೀರಣಮನಿಮಿಷಪ್ರಶಂಸೋಕ್ತಿ ಸುರೋ
ಲ್ಲಸಿತ ಪಟಹಸ್ವನಂ ನಿಮಿ
ರ್ದೆಸೆದುವು ಚಂದನೆಯ ಮನೆಯ ಮಿಸುಪಂಗಣದೊಳ್ || ೫೮

ವ || ಅಂತು ಪೌರಾಶ್ಚರ್ಯಕಾರಿಯಾದ ಚಂಚತ್ಪಂಚಾಶ್ಚರ್ಯಪ್ರಪಂಚಮುಮನಕ್ಷೀಣದರ್ಶನ ಪ್ರಕಾಶನಮುಮಂ ಪ್ರತ್ಯಕ್ಷಮೀಕ್ಷಿಸಿ ವೃಷಭದತ್ತಂ ವಿಸ್ಮಯಾಯತ್ತ ಚಿತ್ತನಾಗಿ ಚಂದನೆಯಿರ್ದ ಮಂದಿರಕ್ಕೆ ಮಂದಗತಿಯಿಂ ಬಂದು ತದ್ವೃತ್ತಾಂತ ಪೂರ್ವಾಪರಾಂತಮಂ ಸವಿಸ್ತರ ಮಱಿದು ಕೃತಾಪರಾಧೆಯಪ್ಪ ತನ್ನ ಸತಿಯನಾ ಸನ್ನುತೆಯ ಪದಪಯೋಜಕ್ಕೆಱಗಿಸಿ ಮೆಱೆವ ವಸ್ತ್ರಾಭರಣರಾಜಿಯಿಂ ಪೂಜಿಸಿ ತದನಂತರಂ ತತ್ಕಾಂತೆಯಂ ತಾನೆ ಮುಂದಿಟ್ಟೊಡೆ ಗೊಂಡ ಮಹಾವಿಭೂತಿಯಿಂ ನಡೆದು ನಂದನಾವಿಯೋಗ ದುಃಸಹದುಃಖನಾಟಕ ನಾಗಿರ್ದ ಚೇಟಕರಾಜಂಗೆ ಸಮರ್ಪಿಸಿ ಸಂತಸಮಂ ನಿಮಿರ್ಚಿದನನ್ನೆಗಮಿತ್ತಲ್ –

ಮಲ್ಲಿಕಾಮಾಲೆ || ಘೋರವೀರತಪೋವಿಶೇಷ ವಿಧಾನದಿಂದೆಸೆವಾ ಮಹಾ
ವೀರಯೋಗಿಗೆ ಪೋಗಿ ಪನ್ನೆರಡಬ್ದಮುದ್ಘ ಯಶೋಧರಂ
ಸ್ಫಾರವೈಭವದಿಂ ಬುಧಾವಳಿಯಿಂ ವಧೂಜನದಿಂ ಜಗ
ತ್ಸಾರಮಾದುದನೆಯ್ದಿದಂ ವರಜೃಂಭಿಕಾಪುರಮಂ ಜಿನಂ || ೫೯

ವ || ಅಂತೆಯ್ದಿ ತದುದ್ದಾಮ ಗ್ರಾಮಸೀಮ ಭೂಮಿಯೊಳ್ ಪರಿದು ಪಿರಿದುಮೆಸವ ರಿಜುಕೊಲೆಯೆಂಬ ಮಹಾತರಂಗಿಣಿಯ ತೀರದಲ್ಲಿ –

ಕಂ || ಒದವಿರ್ದ ಶಾಲವೃಕ್ಷದ
ಮೊದಲೊಳ್ ಪಜ್ಜಳಿಪ ಜಂತುರಹಿತ ಶಿಳಾಪ
ಟ್ಟದ ಮೇಲೆ ಮೂಡಮೊಗದಿಂ
ತ್ರಿದಶಾರ್ಚಿತಪಾದಪಂಕಜಂ ನಿಂದಿರ್ದಂ || ೬೦

ಎರಡುಂ ಮಡಂಗಳೆಡೆನಾ
ಲ್ವೆರಲೆರಡುಂ ತೊಳಗುವುಂಗುಟಂಗಳ ಮಧ್ಯಂ
ಪರಿಕಿಪೊಡೊರ್ಗೇಣ್ ತೆಱಪಾ
ಗಿರೆ ನಿಂದನಕಂಪನುಚಿತ ಋಜ್ವಾಗತದೊಳ್ || ೬೧

ನಯನಯುಗಂ ನಾಸಾಗ್ರ
ಪ್ರಯುಕ್ತಮವ್ಯಕ್ತವರ್ತನಂ ಪ್ರಾಣಾಪಾ
ನಯುಗಂ ಸುಶ್ಲಿಷ್ಟಂ ಶೋ
ಭೆಯನಾಂತುದು ಯೋಗನಿಷ್ಠನೋಷ್ಠದ್ವಿತಯಂ || ೬೨

ಅವಯವಮನಿತಱೊಳಂ ವಿಕೃ
ತಿ ವಲಂ ಪರಮಾಣುಮಾತ್ರಮೇಂ ನೋೞ್ಪೊಡೆ ತೋ
ಱುವುದಲ್ಲೆನಿಪ್ಪ ಯೋಗಿ
ಪ್ರವರನ ನಿಲವೀಯದಾರ್ಗೆ ಪೆರ್ಚಿದ ನಲವಂ || ೬೩

ವ || ಅಂತು ನಿತಾಂತಕಾಂತ ಶಾಂತರಸಪ್ರಸರಪ್ರಪೂರ್ಣ ಗಂಗಾತರಂಗಿಣೀಪ್ರಭವ ಪ್ರಾಳೇಯಶೈಳೇಂದ್ರಮೆನಿಸಿ ಪ್ರತಿಮಾಯೋಗನಿಯೋಗಯೋಗೀಂದ್ರನಿರ್ದ ತತ್ಪುಣ್ಯಾರಣ್ಯದಲ್ಲಿ –

ಮ || ಕರಿಯುಂ ಕೇಸರಿಯುಂ ಕುಂರಂಗಕುಳಮುಂ ಶಾರ್ದೂಲಮುಂ ಮಿಕ್ಕ ಮುಂ
ಗುರಿಯುಂ ತೀವ್ರವಿಷಾಹಿಯುಂ ಚಟುಳ ಕಾಕಾನೀಕಮುಂ ಘೂಕಮುಂ
ಸ್ಫುರದಾತ್ಮೀಯ ವಿರೋಧವರ್ಧನಮನಾದಂ ಬಿಟ್ಟು ಮಿತ್ರತ್ವದೊಳ್
ಪೊರೆದಲ್ಲಲ್ಲಿಗೆ ಲೀಲೆಯಿಂ ನಲಿವುವತ್ಯಾಶ್ಚರ್ಯಮಪ್ಪನ್ನೆಗಂ || ೬೪

ವ || ಅಂತು ಪರಮ ಕೌತುಕಕಾರಿಯಾದ ಚಾರುಚತುರಯೋಗದೊಳಿರ್ದ ಯೋಗೀಶ್ವರಂ ಕ್ಷಾಯಿಕಸಮ್ಯಕ್ತ್ವಾದಿ ಪ್ರಸಿದ್ಧಸಿದ್ಧಗುಣಂಗಳೆಂಟುಮಂ ತತ್ಕಳಾಪ ಪ್ರಾಪಣೇಚ್ಛೆಯಿಂ ಪರಿಭಾವಿ ಸುತ್ತುಂ ಉತ್ತಮಧ್ಯಾನಾಧೀನಮಾನಸನಾಗಿ –

ಕಂ || ಭುವನಸ್ತುತನಾಜ್ಞಾಪಾ
ಯವಿಚಯಮೆಂಬೆರಡುಮಂ ವಿಪಾಕ ಸುಸಂಸ್ಥಾ
ನವಿಚಯಮೆಂಬೆರಡುಮನುದಿ
ತ ವಿಶೋಧಿ ವಿಶೇಷಭಾವದಿಂ ಭಾವಿಸಿದಂ || ೬೫

ವ || ಮತ್ತಮನಿತ್ಯತಾದ್ಯನುಪ್ರೇಕ್ಷೆಗಳನೀರಾಱುಮಂ ಧ್ಯಾನಿಸುತ್ತುಮಿಂತು ನಿರ್ಮಳಧ್ಯಾನಾನಂತರಂ ವಿಶದಲೇಶ್ಯಾವಿಶುದ್ಧನಧಃಪ್ರವೃತ್ತಾದಿ ಕರಣತ್ರಯದಿನನಂತಾನುಬಂಧಿಗಳನುೞಿದ ಪನ್ನಿತ್ತೆಱದ ಕಷಾಯಂಗಳೊಳ್ ವಿಸಂಯೋಜಿಸಿ ಸಮನಂತರಮಿನಿತ್ತು ಬೇಗಂ ವಿಶ್ರಮಿಸಿ ಪ್ರಥಮಕಥಿತಕ್ರಮದಿಂ ದರ್ಶನಮೋಹನೀಯತ್ರಯಕ್ಕೆ ಲಯಮನಿತ್ತು –

ಕಂ || ಇಂತೇೞುಂ ಪ್ರಕೃತಿಗಳಂ
ಶಾಂತರಸಾಂಬೋಧಿ ಕಿಡಿಸಿ ತಕ್ಷಯದಿಂದ
ತ್ಯಂತಂ ಕ್ಷಾಯಿಕ ಸಮ್ಯ
ಕ್ತ್ವಂ ತಮ್ಮನಿಪತಿಗೆ ಸಮನಿಸಿತ್ತಾ ಪದದೊಳ್ || ೬೬

ವ || ಅನಂತರಮಂತರ್ಮುಹೂರ್ತಪರ್ಯಂತಂ ಪ್ರಮತ್ತಾಪ್ರಮತ್ತ ಪರಾವರ್ತನ ಸಹಸ್ರಂಗಳಂ ಕಳಿಪಿ ಕ್ಷಪಕಶ್ರೇಣಿಪ್ರಾಯೋಗ್ಯಾಧಃಪ್ರವೃತ್ತಿಕರನತಾತಿಶಯಾ ಪ್ರಮತ್ತಗುಣಸ್ಥಾನದೊಳ್ ಸ್ಥಿತಿಬಂಧಾಪಸರಣಂಗೆಯದಿನಿತಾನುಂ ಬೇಗದಿನಪೂರ್ವಕರಣ ಕ್ಷಪಕಗುಣಸ್ಥಾನಮಂ ಪೊರ್ದಿ ಪೃಥಕ್ತ್ವ ವಿತರ್ಕವಿಚಾರಮೆಂಬ ಮೊದಲ ಶುಕ್ಲಧ್ಯಾನಮಂ ಧ್ಯಾನಿಸುತ್ತುಮಾಯುಃ ಕರ್ಮಮುೞಿಯುೞಿದಖಿಳಕರ್ಮಂಗಳಂ ಸ್ಥಿತ್ಯನುಭಾಗಕಾಂಡಕ ಘಾತಗುಣಸಂಕ್ರಮಣ ಪ್ರದೇಶಗುಣಶ್ರೇಣೀನಿರ್ಜರೆಗಳಿನುಕ್ರಮದಿಂ ಕಿಡಿಸುತ್ತುಂ ಅನಿವೃತ್ತಿಕರಣ ಕ್ಷಪಕಗುಣಸ್ಥಾನ ಮನೆಯ್ದಿಯಂತರ್ಮುಹೂರ್ತದೊಳ್ ನಿದ್ರಾನಿದ್ರಾ ಪ್ರಚಳಾಪ್ರಚಳಾ ಸ್ತ್ಯಾನಗೃದ್ಧಿ ನರಕತಿರ್ಯಗ್ಗತಿ ತತ್ಪ್ರಾಯೋಗ್ಯಾನುಪೂರ್ವ್ಯೇಕೇಂದ್ರಿಯ ವಿಕಳೇಂದ್ರಿಯ ಜಾತ್ಯಾತಪೋ ದ್ಯೋತ ಸ್ಥಾವರ ಸಾಧಾರಣ ಸೂಕ್ಷ್ಮಂಗಳೆಂಬಾ –

ಕಂ || ಪದಿನಾಱುಂ ಪ್ರಕೃತಿಗಳಂ
ಸದಮಳ ಚರಿತಾವಭಾಸಿ ಮುನಿಯಿನಿತುೞಿವಿ
ಲ್ಲದೆ ತೆಱದಿಂದಮೆ ಪೆಱದೇಂ
ವಿದಳಿಸಿಯಂತರ್ಮುಹೂರ್ತದಿಂದಂ ಮತ್ತಂ || ೬೭

ವ || ವಿಶುದ್ಧ ಪರಿಣಾಮ ಪರತಂತ್ರನಪ್ರತ್ಯಾಖ್ಯಾನಪ್ರತ್ಯಾಖ್ಯಾನಮೆಂಬೆಂಟು ಕಷಾಯಂಗಳುಮಂ ನಪುಂಸಕವೇದ ಸ್ತ್ರೀವೇದ ಹಾಸ್ಯ ರತ್ಯರತಿ ಶೋಕ ಭಯ ಜುಗುಪ್ಸಾಭಿದಾನ ನೋಕಷಾಯ ಪುರುಷವೇದ ಸಂಜ್ವಲನ ಕ್ರೋಧಮಾನಮಾಯಾಕಷಾಯಂಗಳುಮಂ ಬೇಱೆವೇಱೆ ಪರಿವಿಡಿಯಿಂ ಕಿಡಿಸಿ ಬಾದರಲೋಭಸಂಜ್ವಲನಮುಮನದಿರ್ಪಿ ಸಾಮಾಯಿಕಚ್ಛೇದೋಪ ಸ್ಥಾಪನಾವಿಶುದ್ಧಿ ಸಂಯಮ ಸಮೇತಾನಿವೃತ್ತಿಕರಣ ಕ್ಷಪಕಗುಣಸ್ಥಾನಮಂ ದಾಂಟಿ ಸೂಕ್ಷ್ಮ ಸಾಂಪರಾಯ ಸಂಯಮಸಮನ್ವಿತಂ ಸೂಕ್ಷ್ಮಸಾಂಪರಾಯಕ್ಷಪಕನಾಗಿ ಸೂಕ್ಷ್ಮ ಲೋಭ ಕಷಾಯಪ್ರಕೃತಿಯುಮಂ ನಷ್ಟಂ ಮಾಡಿಯಷ್ಟವಿಂಶತಿ ವಿಕಳ್ಪಮೋಹನೀಯ ಮಹಾವೈರಿಬಲಮನಿಂತು ಗೆಲ್ದು ವೀತರಾಗಯಥಾಖ್ಯಾತಚಾರಿತ್ರ ಚರಿತ್ರಮಪ್ಪ ಕ್ಷೀಣ ಕಷಾಯ ವೀತರಾಗಚ್ಛದ್ಮಸ್ಥ ಸಂಯಮಗುಣಸ್ಥಾನಮಂ ಪಡೆದೇಕತ್ವ ವಿತರ್ಕವಿಚಾರ ಮೆಂಬೆರಡನೆಯ ಶುಕ್ಲಧ್ಯಾನದಿಂ ಬಹಳಪ್ರದೇಶ ನಿರ್ಜರೆಗಳಂ ಮಾಡುತ್ತುಮಾಗುಣಸ್ಥಾನ ದುಪಾಂತ್ಯಸಮಯದೊಳ್ ನಿದ್ರಾಪ್ರಚಳೆಗಳಂ ಕಿಡಿಸಿ –

ಕಂ || ಚರಮಸಮಯದೊಳೆ ಬೋಧಾ
ವರಣಮನಯ್ದಂತರಾಯಮಯ್ದುೞಿದ ದೃಗಾ
ವರಣಮವು ನಾಲ್ಕಿನಿತ್ತುಮ
ನುರುಮಹಿಮಂ ತೂಳ್ದಿ ತಾಳ್ದಿದಂ ಗುಣಗಣಮಂ || ೬೮

ವ || ಆಗಳ್ –

ಸ್ರ || ಘಾತಿವ್ರಾತಾಂಧಕಾರಂ ಪರೆಯೆ ಸಕಳ ಸದ್ಭವ್ಯಸಂದೋಹ ಪಾಥೋ
ಜಾತಕ್ಕುದ್ಯದ್ವಿಕಾಸಂ ಸಮನಿಸೆ ವಿಳಸದ್ಧರ್ಮಚಕ್ರಕ್ಕೆ ಹರ್ಷಂ
ಸ್ಫೀತಂ ತಾನಾಗೆ ಲೋಕತ್ರಿತಯನುತ ಮಹಾವೀರನಾಥೋದಯ ಪ್ರ
ಖ್ಯಾತಾದ್ರೀಂದ್ರಾಗ್ರದೊಳ್ ಪುಟ್ಟಿದುದನುಪಮ ನಿರ್ವಾಣಬೋಧಾರ್ಕಬಿಂಬಂ || ೬೯

ಕಂ || ನವಕೇವಲಲಬ್ಧಿಗಳು
ದ್ಭವಿಸೆ ವಿರಾಜಿಸಿದ ಪರಮ ಪುರುಷನ ಚರಮ
ಪ್ರವಿಮಳವಪು ಕರಮೆಸೆದುದು
ರವೀಂದುಕೋಟಿಪ್ರಭಾಪ್ರಭಾವೋದಯದಿಂ || ೭೦

ವೈಶಾಖಮಾಸ ಸಿತ ದಶ
ಮೀಶುಭದಿನ ಹಸ್ತತಾರೆಗಳ್ ದೊರೆಕೊಳೆ ನಿಃ
ಕಾಶಮನೆಯ್ದಿದುದನಘ ಜಿ
ನೇಶನ ಘನಸಕಳ ವಿಮಳ ಕೇವಳಬೋಧಂ || ೭೧

ಪರಮನ ಪರಮೌದಾರಿಕ
ಶರೀರಮಾ ಕೇವಳಾವಗಮದುದಯದೊಳು
ರ್ವರೆಯಿಂ ಗಗನಕ್ಕಯ್ಸಾ
ಸಿರ ಬಿಲ್ಲಂತರದಿನೊಗೆದು ಸೊಗಯಿಸಿತೆನಸುಂ || ೭೨

ಮತಿಯುಂ ಶ್ರುತಮುಮವಧಿಯುಂ
ವಿತತ ಮನಃಪರ್ಯಯಾವಗಮಮುಂ ಕಿಡೆ ಸ
ನ್ಮತಿಗೆ ಸಮನಿಸಿತು ಕೇವಳ
ಮತೀಂದ್ರಿಯ ಜ್ಞಾನಮಕ್ರಮವ್ಯವಧಾನಂ || ೭೩

ಪೃಥ್ವಿ || ಪ್ರಸನ್ನತೆಯನಾಂತುವಾ ಪದದೊಳಾಸೆಗಳ್ ಪೆತ್ತುದಾ
ಗಸಂ ವಿಶದಭಾವಮಂ ತಿಳಿದು ಶೋಭೆವೆತ್ತಿರ್ದುವೀ
ವಸುಂಧರೆಯ ಮೇಲೆ ತೋರ್ಪ ಸಲಿಲಾಶಯಂಗಳ್ ವಿರಾ
ಜಿಸಿತ್ತು ವಸುಧಾತಳಂ ಗತಕರಾಳಧೂಳೀಕುಳಂ || ೭೭೪

ಚಂ || ಸುರಿದುವು ಕಲ್ಪಭೂಮಿರುಹ ಸಂಕುಳದಿಂ ಸುರಭಿಪ್ರಸೂನಕೋ
ತ್ಕರಮಿರದೊಯ್ಯನೂದಿದುದು ಕಂಪಿನ ಸೊಂಪಮರ್ದಿರ್ದ ತಣ್ಣೆಲರ್
ಧರೆಯ ಸಮಸ್ತಭೂಜಲತಿಕಾದಿಗಳಾದಮೆ ಪಲ್ಲವಂಗಳಂ
ವರ ಸುಮನಃಫಳಂಗಳುಮನಾಂತು ವಿರಾಜಿಸುತಿರ್ದುವೆತ್ತಲುಂ || ೭೫

ಸ್ರ || ಪೀನಂ ಶಂಖಸ್ವನಂ ಭಾವನಭವನಸಮೂಹಂಗಳೊಳ್ ಭೂರಿ ಭೇರೀ
ಧ್ವಾನಂ ತತ್ಕಾಲದೊಳ್ ವ್ಯಂತರನಿಳಯನಿಕಾಯಂಗಳೊಳ್ ಮಿಕ್ಕ ಸಿಂಹ
ಧ್ವಾನಂ ಜ್ಯೋತಿಷ್ಕಧಾಮಪ್ರಕರಣದೊಳುರು ಘಂಟಾರವಂ ಕಳ್ಪವಾಸಿ
ಸ್ಥಾನಾನೀಕಂಗಳೊಳ್ ಪೊಣ್ಮಿದುದೊದವಿದುದಸ್ವಪ್ನ ಪೀಠಪ್ರಕಂಪಂ || ೭೬

ಕಂ || ಏನಂ ಪೇೞ್ವುದೊ ಸಕಳ
ಜ್ಞಾನಂ ಸನ್ಮತಿಗೆ ಸಮನಿಸಿದ ಪದದೊಳ್ ಜೀ
ವಾನೀಕಾಪ್ಯಾಯನಕರ
ಮಾನಂದಮನೂನಮಾಯ್ತು ಭುವನತ್ರಯದೊಳ್ || ೭೭

ಮ || ಸ್ರ || ಇನಿತೊಂದಾಶ್ಚರ್ಯಮಂ ಕಂಡನಿಮಿಷರಮಣಂ ಸುಪ್ರಯುಕ್ತಾವಧಿಜ್ಞಾ
ನನಿಧಾನಂ ವರ್ಧಮಾನಪ್ರಭುಗೊಗೆದ ಲಸತ್ಕೇವಲಜ್ಞಾನಮಂ ಪಾ
ವನ ಭಕ್ತಿಪ್ರಾಜಿತಂ ತಾನಱಿದಿೞಿದು ನಿಜೋಚ್ಚಾಸನೋತ್ಸಂಗದಿಂದಂ
ವಿನತಂ ತದ್ಬೋಧಪೂಜಾವಿಧಿಗೆ ಬುಧನುತಂ ಪೋಗಲುದ್ಯುಕ್ತನಾದಂ || ೮

ವ || ಅಂತು ಕಂತುಕೃತಾಂತನೆನಿಸಿದ ವೀರಭಟ್ಟಾರಕನ ಕೇವಲಾಗಮಸಮುತ್ಪತ್ತಿಯೊಳ್ ಕೃತ್ಯ ಮೆನಿಪ ಚತುರ್ಥಕಲ್ಯಾಣಮಹೋತ್ಸವ ವಿಧಿತ್ಸುತೆಯಿಂ ತತ್ಸುರೇಶ್ವರಂ ಚತುರ ಚತುರಮರ ಸಮವಾಯಸಮನ್ವಿತಂ ಸುರಲೋಕದಿಂ ಧರೆಗೆ ಪರಮವಿಭೂತಿಯಿಂದವ ತರಿಪಾಗಳ್ –

ಚಂ || ಸುರುಚಿರ ರತ್ನಭೂಷಣಗಣದ್ಯುತಿಯುಂ ನಿಜಲೋಳಲೋಚನ
ಸ್ಫುರಿತ ಮರೀಚಿಯುಂ ಕರತಳಸ್ಥಿತ ಕಳ್ಪತರುಪ್ರಸೂನಕೋ
ತ್ಕರವರಗಂಧಮುಂ ನಿಖಿಳದಿಗ್ವಳಯಾಂತರಮಂ ಮುಸುಂಕೆ ಭಾ
ಸುರಸುರಸುಂದರೀಜನದ ಸಂದಣಿ ಬಂದುದದೊಂದು ಲೀಲೆಯಿಂ || ೭೯

ಮಾಳಿನಿ || ಅಮರರಮಣನಿಂತಾಶ್ಚರ್ಯಮಂ ಮಾಡುತುಂ ಬಂ
ದಮಳಿನಮತಿ ಮುನ್ನಂ ತನ್ನದೊಂದಾಜ್ಞೆಯಿಂದಂ
ಸಮೆಯೆ ಧನದನುದ್ಯದ್ಭಕ್ತಿಂ ಶೋಭೆವತ್ತಾ
ಸಮವಸರಣದಂತರ್ಭಾಗಮಂ ಪೋಗಿ ಪೊಕ್ಕಂ || ೮೦

ವ || ಅಂತು ಪೊಕ್ಕು ನಿಕ್ಕುವಂ ನಿಜವಿಳೋಚನಕ್ಕಂ ಮನಕ್ಕಂ ಪ್ರೀತಿಕೌತುಕಂಗಳಂ ಸಂಗಳಿಪ ಲಕ್ಷ್ಮೀಮಂಡಪಮಧ್ಯಾಧ್ಯಾಸಿತ ಭಾಸುರಕೇಸರಿವಿಷ್ವರಾಗ್ರಮನಲಂಕರಿಸಿರ್ದ ತ್ರಿಲೋಕೇಶ್ವರನಂ ತ್ರಿಃಪ್ರದಕ್ಷಿಣಂಗೆಯ್ದು ಸರ್ವಾಂಗಲಿಂಗಿತೋರ್ವೀತಳನಾಗಿ ಸಮನಂತರಂನಿಂದಿರ್ದು ಸಮಭಿಮುಖನಮಂದಾನಂದನಂದಿತ ಪುಳಕಕಳಿಕಾವಳೀ ವಿಳಸಿತ ವಪುರ್ಲತಿಕನುಂ ನಿಟಿಳತಟಘಟಿತ ಕರಸರೋಜಕುಟ್ಮಳನುಮಾಗಿ –

ಚಂ || ಜಯಜಯ ದೇವ ದೇವ ಪರಮೇಶ್ವರ ವಿಶ್ವಗುಣಾವಳಂಬ ನಿ
ರ್ಭಯ ನಿರವದ್ಯ ನಿರ್ಮದ ನಿರಂಜನ ನಿಶ್ಚಳ ನಿತ್ಯಸೌಖ್ಯ ನಿ
ರ್ವ್ಯಯಪದ ನಿರ್ವಿಕಾರ ನಿಖಿಳಾಮಳಕೇವಳಬೋಧ ವೀರ ನಿ
ನ್ನಯ ಪದಪದ್ಮಯುಗ್ಮಮೆಮಗೀಗೆ ಮನೋರಥಸಿದ್ಧಿಯಂ ಜಿನಾ || ೮೧

ಮ || ನೆಱೆದೈ ನೆಟ್ಟನೆ ಪುಣ್ಯದೊಂದು ವಿಳಸದ್ವೈರಾಗ್ಯಸಂಪತ್ತಿಯಿಂ
ತೊಱೆದೈ ತದ್ಬಹಿರಂತರಂಗ ನಿಖಿಳಗ್ರಂಥಪ್ರಪಂಚಂಗಳಂ
ಕೊಱೆದೈ ಧ್ಯಾನಲವಿತ್ರಮಾತ್ರದೆ ವಿಚಿತ್ರಾಘೌಘ ಪಾಶಂಗಳಂ
ಪಱಿದೈ ನೀಂ ಜಿನ ಕೇವಳಾವಗಮದಿಂದಾಜನ್ಮಸಂದೋಹಮಂ || ೮೨

ಚಂ || ಮದನಮದಾಂಧಕಾರಮನದಿರ್ಪಿ ಮಹೋದ್ಧತ ಮೋಹಮಲ್ಲನಂ
ವಿದಳಿಸಿ ನಾಡೆ ರೂಢಿವಡೆದೊಪ್ಪುವನಂತಚತುಷ್ಟಯಾಭಿದಾ
ನದ ರಮೆಗೀಶನಾಗಿ ಭುವನತ್ರಯ ವರ್ತಿತ ಕೀರ್ತಿವೆತ್ತ ಪೆಂ
ಪಿದು ಬುಧರಂ ಮರಳ್ಚುವುದು ಸನ್ಮತಿ ಸನ್ಮತಿಲೋಕವಂದಿತಾ || ೮೩

ಘನತರ ಕರ್ಮಬಂಧನಮನಿಂಧನಮಂ ಸುಡುವಂತೆ ಸುಟ್ಟು ನೆ
ಟ್ಟನೆ ನಿಜ ನಿರ್ವಿಕಾರ ಪರಮಾತ್ಮ ಸಮುದ್ಭವ ಭಾವನಾಹುತಾ
ಶನ ಬಲದಿಂದನಂತಗುಣ ಚಿನ್ಮಯನಾದ ಮಹಾನುಭಾವ ದೇ
ವೆನಗೆ ಜಿನೇಂದ್ರ ನಿನ್ನ ಚರಣಂ ಶರಣಕ್ಕೆ ಜಗತ್ತ್ರಯೇಶ್ವರಾ || ೮೪

ದಯೆಯ ಪಯೋಧಿ ಸತ್ಯದ ತವರ್ಮನೆ ಶೀಲದ ಜನ್ಮಭೂಮಿ ಕಾಂ
ತಿಯಕಣಿ ಶಾಂತಿಯಾಗರಮನಂತಗುಣಂಗಳ ಮಂಗಳಾಲಯಂ
ಜಯರಮೆಯಿಕ್ಕೆದಾಣಮೆನಿಸಿರ್ದ ಜಗನ್ನುತ ವರ್ಧಮಾನ ನಿ
ನ್ನಯ ನಿರವದ್ಯಮಾರ್ಗಮೆಮಗೀಗಪವರ್ಗದ ಸಿದ್ಧಿಯಂ ಜಿನಾ || ೮೫

ವ || ಎಂದು ಸಕಳಸುರೇಂದ್ರಸಂದೋಹಂ ಬೆರಸು ಪುರಂದರಂ ಪರಮ ಜಿನೇಂದ್ರನಂಸ್ತುತಿಯಿಸಿ ಶಚೀನಿಚಿತ ಶುಚಿತರಾನೇಕ ಪೂಜಾದ್ರವ್ಯನಿಚಯಂಗಳಿಂ ಪರಮಾರ್ಹಂತ್ಯ ಲಕ್ಷ್ಮೀಕಾಂತನ ಪಾದಪೀಠೋಪಾಂತಮಂ ನಿತಾಂತಮರ್ಚಿಸಿ –

ಕಂ || ನತಿ ನುತಿ ಪೂಜೆಗಳಂ ಸ
ನ್ಮತಿ ಜಿನಪತಿಗಿಂತು ಭಕ್ತಿಯಿಂ ಮೊದಲೊಳ್ ಗೋ
ಪತಿ ಮಾಡಿ ನೋಡಿದಂ ದಶ
ಶತನಯನದೆ ಸಮವಸೃತಿಯ ಶೋಭೋನ್ನತಿಯಂ || ೮೬

ಆ ರಚಿತ ಸಮವಸರಣಂ
ತಾರಾಪಥಲಕ್ಷ್ಮಿ ತಳೆದ ತೊಡವೆಂಬಿನಮೇಂ
ರಾರಾಜಿಸಿದುದೊ ಮಿಗೆ ನಾ
ನಾರತ್ನಮರೀಚಿ ಪಿಂಜರಿತ ದಿಗ್ವಳಯಂ || ೮೭

ವ || ಅದೆಂತೆನೆ –

ಉ || ಮೇದಿನಿಯಿಂದೆ ಮೇಲೆ ಮಿಗೆ ಪಂಚಸಹಸ್ರಶರಾಸನಾಂತರಂ
ಪೋದೆಡೆಯಲ್ಲಿ ಕಣ್ಗೆಸೆದು ತೋರ್ಪುದು ವೀರಸಭಾಸಮುಲ್ಲಸ
ನ್ಮೇದಿನಿ ಯೋಜನಪ್ರಸರಮಪ್ರತಿಮಂ ಸಮವೃತ್ತರೂಪಮಾ
ಹ್ಲಾದರಕಂ ವಿನೇಯಶರಣಂ ಹರಿನೀಳಮಹಾಶಿಳಾಮಯಂ || ೮೮೮

ಕಂ || ಅದಱ ಕಡೆವಿಡಿದು ಘನಸ
ಮ್ಮದಕರ ಕಿಮ್ಮೀರಕಿರಣಜಾಳಂ ಸಕಳಾ
ಭ್ಯುದಯ ವಿಶಾಳಂ ಶೋಭಿಸು
ವುದು ಧೂಳೀಶಾಳಮಂಬರಶ್ರೀಭಾಳಂ || ೮೯

ಎಸೆವಾ ಪ್ರಾಕಾರದ ನಾ
ಲ್ದೆಸೆಯೊಳಮಿರ್ಪತ್ತು ಸಾಸಿರಂ ಸೋಪಾನಂ
ನಿಸದಂ ಸ್ಫಾಟಿಕಮಭಿರಂ
ಜಿಸುಗುಂ ಪ್ರತ್ಯೇಕಮುದಿತ ವಿದಿತಾಳೋಕಂ || ೯೦

ಮೊದಲದುವುಂ ತುದಿಯದುವುಂ
ಪದಲೇಪೌಷಧಿಯನಾಂತು ಭವ್ಯಜನಂ ಬೇ
ಗದಿನಡರಲುಮಿೞಿಯಲುಮಾ
ಸದಮಳ ಸೋಪಾನಚಯದೊಳೆರಡೆರಡೆಸೆಗುಂ || ೯೧

ಮ || ಮತ್ತಮಾಸೋಪಾನಪಙ್ತಿಗಳಗ್ರಭಾಗದೊಳುದಗ್ರರಶ್ಮಿ ಸಂಚಯಾಂಚಿತ ಪಂಚರತ್ನನೂತ್ನ ಕಳಶವಿಳಸಿತಂಗಳುಂ ಸ್ಫುರನ್ಮಯೂಖಲೇಖಾವಿಸ್ತಾರ ತೋರಣ ಶತಾನ್ವಿತಂಗಳುಂ ಕನತ್ಕನಕಕೂಟಪೇಟಕಭ್ರಾಜಿತಂಗಳುಂ ಜ್ಯೋತಿರಮರದೌವಾರಿಕ ಪಾಳಿಪಾಳಿತಂಗಳುಂ ಅಪ್ಪ ವಿತತಚತುರ್ಗೋಪುರಂಗಳಲ್ಲಿ –

ಕಂ || ಬಹಿರಂತರ್ಜಗತೀದ್ವಯ
ವಿಹಿತಂಗಳ್ ಬೇಱೆವೇಱೆ ನೂ ಱೆಂಟೆಂಬೀ
ಮಹಿಮೆವಡೆದಷ್ಟಮಂಗಳ
ಸಹಿತಂ ನವನಿಧಿಗಳಾವಗಂ ಸೊಗಯಿಸುಗುಂ || ೯೨

ವ || ಮತ್ತಮಾ ಜಾತರೂಪಗೋಪುರಂಗಳಂತರಾಳ ವಿಶಾಳ ವೀಧಿಗಳ ನಡುವೆ –

ಶಾ || ಮಾನಸ್ತಂಭಚತುಷ್ಟಯಂ ಸೊಗಯಿಕುಂ ಶಾಳತ್ರಯಾಳಂಕೃತಂ
ಪೀನದ್ವಾದಶ ಗೋಪುರೋಪರುಚಿರಂ ಪೀಠತ್ರಯೋಪೇತಮ
ನ್ಯೂನಾಂಭಃ ಪರಿಪೂರ್ಣ ಕುಂಡ ಸರಸಂ ಘಂಟಾಲಸತ್ಕಿಂಕಿಣೀ
ನಾನಾಚಾಮರ ಕೇತನಾತಿಸುಭಗಂ ಶ್ರೀಜೈನಬಿಂಬಾನ್ವಿತಂ || ೯೩

ಕಂ || ಸ್ತಂಭಮನೀವುವು ಮಾನ
ಸ್ತಂಭಂಗಳ್ ಕುನಯ ಜನದ ಮನದೊಳ್ ನಿಬಿಡಂ
ಸಂಭವಿಪ ವಿಪುಳಮಾನದ
ದಂಭದ ದಳ್ಳುರಿಗೆ ಕರಮೆ ಕಂಡಾಕ್ಷಣದೊಳ್ || ೯೪

ವ || ಮತ್ತಮಾ ಮಹಿತ ಮಹೀತದೊಳ್ ಮಾನಸ್ತಂಭದಿಂ ಮಾನಸ್ತಂಭಂಬರಂ ಅಯ್ದಯ್ದು ಸೌಧಹರ್ಯ್ಮಂಗಳುಮವಱೆಡೆಯೊಳ್ ಒಂದೊಂದು ಸಮುತ್ತುಂಗ ಚೈತ್ಯಮಂದಿರಂಗಳುಂ ಅಳುಂಬಮೆಸೆವುವದಱಿನದರ್ಕೆ ಹರ್ಮ್ಯಚೈತ್ಯಭವನಭೂಮಿನಾಮಂ ನೆಗೞ್ವುದಲ್ಲಿಂ ದತ್ತಲ್ –

ಉ || ರಾಜಿತವೇದಿ ರತ್ನಖಚಿತಂ ಪ್ರಥಮೋಕ್ತ ಸಮಸ್ತವರ್ಣನ
ಭ್ರಾಜಿತಮುದ್ಘಗೋಪುರಚತುಷ್ಟಯಮಾವೃತಮಾಗೆ ನಾಡೆಯುಂ
ರಾಜಿಸುತಿರ್ಪುದಸ್ತಮಳಕೋಮಳ ಪೂರ್ಣಮೆನಿಪ್ಪ ಖಾತಿನಾ
ನಾಜಕೇಳಿಲೋಳ ಖಚರಾಮರ ತಾಮರಸೋತ್ಪಳಾನ್ವಿತಂ || ೯೫

ವ || ಮತ್ತಂ ತತ್ತೋಯಖಾತಿ ಭೂತಳದಿಂದತ್ತಲ್ ಜ್ಯೋತಿಷ್ಕದೇವದೌವಾರಿಕ ಪ್ರಕರಪ್ರಕೃಷ್ಟಾಷ್ಟಮಂಗಳನವನಿಧಿ ವಿಧೃತ ವಿವಿಧರತ್ನ ರಚಿತ ಜಗತೀ ಸಂಗತಂಗಳುಂ ಸಮಣಿ ತೋರಣಂಗಳುಂ ತಾರಮಯಂಗಳುಮಪ್ಪ ಚತುಗೋಪುರಂಗಳುಂ ನಿಸದಮೆಸೆವ ಹಿರಣ್ಮಯವೇದಿಕೆಯಿಂ ವೇಷ್ಟಿತಮಾಗಿ –

ಉ || ಭೂರಿಪರಾಗರಾಗ ವಿನಮನ್ಮಧುಪಾವಳಿ ಗೀತಿಕಾಮನೋ
ಹಾರಿಗಳಾದ ಜಾದಿ ಪೊಸಪಾದರಿ ಕೇದಗೆ ಮೊಲ್ಲೆ ಮಲ್ಲಿ ಮಂ
ದಾರಮಪಾರ ಚೂತಲತೆಯೂಧಿಕ ಸಂದ ವಸಂತದೂತಿಯೆಂ
ಬೀರಮಣೀಯ ವಲ್ಲಿಗಳಿನೊಪ್ಪುವುದಲ್ಲಿ ಲತಾಮಹೀತಳಂ || ೯೬

ವ || ಮತ್ತಮಲ್ಲಿಂದತ್ತ ದೌವಾರಿಕ ಯಕ್ಷರಕ್ಷಿತ ತಾರಮಯೋದಾರ ಗೋಪುರ ಚತುಷ್ಕಮುಂ ಅಮರ್ತ್ಯ ನರ್ತಕೀನರ್ತನೋಚಿತ ಷೋಡಶನಾಟಕಶಾಳಿಕಾಳಂಕೃತಮುಂ ತತ್ಪ್ರಮಾಣಾ ವಿರಳ ಸಮುಚ್ಚಳದಗುರುಧೂಪಧೂಮಧೂಸರಿತ ಸುರಸರಣಿಮಣಿಮಯ ಧೂಪಘಟ ಸಮೇತಮುಂ ಅಪ್ಪ ಜಾತರೂಪಮಯ ವಿಶಾಳಶಾಳಂ ಬಳಸೆ ವಿಳಸಿತಮಾದ ಸಮುದ್ಯಯ ದ್ಯಾನ ಭೂಮಿಯಲ್ಲಿ –

ಕಂ || ಪರಿಗತಶಾಲತ್ರಯ ರ
ತ್ನರಚಿತ ಪೀಠತ್ರಯ ಸ್ಥಿತಾರ್ಹತ್ಪ್ರತಿಮಾ
ಪರಿಕರ ಚೈತ್ಯದ್ರುಮ ಭೌ
ಸುರ ಮಧ್ಯಸ್ಥಳಿಗಳುತ್ಪ್ರವಾಳಾವಳಿಗಳ್ || ೯೭

ಅಸುಕೆಗಳೇೞೆಲೆವಾೞೆಗ
ಳಸಮಂಗಳ್ ಚಂಪಕಂಗಳಾಮ್ರಕುಜಂಗಳ್
ಲಸದಮರವಧೂನೂಪುರ
ವಿಸರದ್ರವಮುದ್ರಿತಂಗಳೆಸೆದುವು ನಿಸದಂ || ೯೮

ವ || ಮತ್ತಮಲ್ಲಿಂದತ್ತಲ್ ಉತ್ತುಂಗರತ್ನತೋರಣಾದಿ ಪೂರ್ವೋಕ್ತ ಸುವ್ಯಕ್ತ ಪರಿಕರ ಪರಿಶೋಭಿತ ಯಕ್ಷದೌವಾರಿಕನಿಕರೋದಾರ ತಾರಗೋಪುರ ಚತುಷ್ಟಯೋಪೇತ ಕಳಧೌತ ವೇದಿಕಾವಳಯ ವಳಯಿತಮಾಗಿ –

ದ್ರುತವಿಳಂಬಿತಂ || ವರ ಮರಾಳ ಮಯೂರ ಮತಂಗಜ
ದ್ವಿರದವೈರಿ ವೃಷಾಂಶುಕ ಚಕ್ರವಾ
ರಿರುಹದಾಮ ಗರುತ್ಮಕುಳಧ್ವಜೋ
ದ್ಭರಿತ ಕೇತುಮಹೀತಳಮೊಪ್ಪುಗುಂ || ೯೯

ವ || ಮತ್ತಮಲ್ಲಿಂದತ್ತ ಪೂರ್ವೋಕ್ತ ಸಮಗ್ರಸಾಮಗ್ರೀಸಮೇತ ಸದ್ರಾಗ ನಾಗಕುಮಾರ ದ್ವಾರಪಾಳಕ ಪಾಳನೀಯ ಸೌರೂಪ್ಯ ರೂಪ್ಯರಚಿತ ಸುಚತುರ್ಗೋಪುರ ವಿರಾಜ ಮಾನಾರ್ಜುನಮಯ ವಿಶಾಳಶಾಳವೇಲ್ಲಿತಮುಂ ಪ್ರಸಿದ್ಧ ಸಿದ್ಧಪ್ರತಿಮಾ ಪ್ರತಿಭಾಸಿತ ಸಿದ್ಧಾರ್ಥಭೂಜಭ್ರಾಜಿತ ಮಧ್ಯಪ್ರವೇಶಮುಮಾಗಿ –

ಚಂ || ಸುರತರುಣೀಕರಾವಚಯ ಪಲ್ಲವಪುಷ್ಟಫಳೋಪಶೋಭಿಗಳ್
ಸುರತರುಗಳ್ ತರಂತರದೆ ತಳ್ತು ತಳತ್ತಳಿಸುತ್ತುಮಿರ್ಪಿನಂ
ಭೂತಳಂ ಸೊಗಯಿಕುಂ ಭುವನತ್ರಯ ಸದ್ಬುಧಾವಳೀ
ಸುರತರು ಸನ್ಮತೀಶ್ವರನ ವಿಶ್ವವಿನೂತ ಸಭಾಂತರಾಳದೊಳ್ || ೧೦೦

ವ || ಮತ್ತಮಲ್ಲಿಂದತ್ತಲ್ –

ಕಂ || ನವನಿಧಿಮಂಗಳಸಂಗತ
ಪವನಾಶದ್ವಾರಪಾಳತಾರಮಯಚತುಃ
ಪ್ರವಿಪುಳ ಗೋಪುರ ವರಕನ
ಕವೇದಿಕಾವಳಯ ಪರಿವೃತಂ ವಿಬುಧನುತಂ || ೧೦೧

ವ || ಎನಿಸಿ ಮಣಿತೋರಣಗಣಪ್ರಣೀತ ಜಿನಸಿದ್ಧಪ್ರತಿಮಾತಪತ್ರ ವಿಚಿತ್ರ ಚಾಮರಾದಿ ರಾಮಣೀಯಕ ನವನವಸ್ತೂಪಕಳಾಪಮಹಿತ ಮಹಾವೀಥ್ಯಂತರಾಳಂಗಳಿಂ ಭಂಗಿವಡೆದ ಸಂಗೀತಸದನ ಭೂತಳದಲ್ಲಿ –

ಸ್ರ || ಗೀತಾತೋದ್ಯಪ್ರನೃತ್ಯತ್ರಯ ನಿಯತ ಕಳಾಕೋವಿದಾಮರ್ತ್ಯಮರ್ತ್ಯ
ವ್ರಾತೋದ್ಭೂತ ಪ್ರಮೋದ ಪ್ರಸರ ಪರಿಲಸನ್ನಾಟ್ಯಶಾಲಾಸಮೂಹಂ
ಚೇತಃ ಪ್ರೀತಿಪ್ರದಂ ಶೋಭಿಸುವುದಸದಳಂ ನೂತ್ನರತ್ನಾವಳೀ ಪ್ರ
ದ್ಯೋತೊಪೇತಂ ಕವೀಂದ್ರಪ್ರಕರ ಬಹುವಿಧಸ್ತೋತ್ರಪಾತ್ರಂ ವಿಚಿತ್ರಂ || ೧೦೨

ವ || ಮತ್ತಮಲ್ಲಿಂದತ್ತಲ್ –

ಕಂ || ಗದೆ ಮೊದಲಾದುವನಾಂತಿ
ರ್ದ ದಿವಿಜದೌವಾರಿಕರ್ಕಳುಂ ನವನಿಧಿಯುಂ
ವಿದಿತಾಷ್ಟಮಂಗಳಮುಮೊ
ಪ್ಪಿದ ಹರಿನೀಲಮಯ ಗೋಪುರಚತುಷ್ಟಯಮುಂ || ೧೦೩

ತಳೆದೆಸೆವ ನವಸ್ಫಟಿಕೋ
ಪಳ ನಿರ್ಮಿತ ಶಾಳವೇದಿಕೆಗಳೆರಡುಂ ಪ
ಜ್ಜಳಿಸುವ ಭಿತ್ತಿಗಳಾಗಿರೆ
ಲಳಿತ ಶ್ರೀಮಂಡಪಂ ಕರಂ ಸೊಗಯಿಸುಗುಂ || ೧೦೪

ಹೃದಯಕ್ಕಂ ನಯನಕ್ಕಂ
ಮುದಮಂ ಮುಂದಿಡುವ ಪರಮ ಶೋಭೆಯ ಲಕ್ಷ್ಮೀ
ಸದನದೊಳೀರಾಱೆಸೆವುವು
ಸದಮಳಕೋಷ್ಠಂಗಳಾಶ್ರಿತ ಶ್ರೇಷ್ಠಂಗಳ್ || ೧೦೫

ಮ || ಸ್ರ || ಯತಿವೃಂದಂ ಕಳ್ಪಕಾಂತಾವಳಿ ವರಗಣಿನೀಶ್ರಾವಿಕಾಸಂಚಯಂ ಚಾ
ರುತರ ಜ್ಯೋತಿರ್ವಧೂವ್ಯಂತರವರವನಿತಾಸಂಕುಳಂ ಭಾವನ ಸ್ತ್ರೀ
ತತಿ ಭಾಸ್ವದ್ಭಾವನರ್ ವ್ಯಂತರರತಿ ಚತುರರ್ಜ್ಯೋತಿರಿಂದ್ರ ಸುಕಳ್ಪ
ಸ್ಥಿತರುದ್ಯನ್ಮಾನುಷರ್ ವಾರಣರಿಪು ಮೊದಲಾಗಿರ್ದ ತಿರ್ಯಕ್ಸಮೂಹಂ || ೧೦೬

ಕಂ || ಎಂಬೀ ದ್ವಾದಶಗಣಮಿ
ರ್ಕುಂ ಬಹುತರ ಶೋಭೆವೆತ್ತ ಕೋಷ್ಠಂಗಳೊಳಾ
ದಂ ಬಗೆಗೊಳಿಸುವುದನವರ
ತಂ ಬೋಧಪಯೋಧಿ ಜಿನನ ಸಭೆಯಾ ತೆಱದಿಂ || ೧೦೭

ವ || ಮತ್ತಮಲ್ಲಿಂದತ್ತಲ್ –

ಕಂ || ಚಂಚದ್ವೈಡೂರ್ಯಮಯಂ
ಕಾಂಚನಮಯಮಮಳ ಸರ್ವರತ್ನಮಯಂ ಕ
ಣ್ಗೇಂ ಚೆಲ್ವಾದುದೊ ಪರಿವಿಡಿ
ಯಿಂ ಚಿತ್ತಜರಿಪುವ ವಿಪುಳ ಪೀಠತ್ರಿತಯಂ || ೧೦೮

ವಾಸ್ತವ ಭಕ್ತಿಸಮೇತರ್
ಮಸ್ತಕವಿನ್ಯಸ್ತ ಧರ್ಮಚಕ್ರರ್ ಯಕ್ಷರ್
ವಿಸ್ತೃತ ಸತ್ಪೂಜಾದ್ರ
ವ್ಯಸ್ತೋಮದಿನೆಸೆವ ಮೊದಲಪೀಠದೊಳಿರ್ಪರ್ || ೧೦೯

ಎರಡನೆಯ ಪೀಠದೊಳ್ ಬಂ
ಧುರ ಧ್ವಜವ್ರಜಮುಮಷ್ಟಮಂಗಳಮುಂ ಭಾ
ಸುರನವನಿಧಿಗಳುಮಧಿಕಾ
ನುರಾಗಮಂ ನೋೞ್ಪಜನಕೆ ಜನಿಯಿಸುತಿರ್ಕುಂ || ೧೧೦

ಎಸೆಗುಂ ತೃತೀಯಪೀಠದೊ
ಳಸದೃಶ ಸುರಭಿಪ್ರಸೂನ ಕಾಳಾಗರುವಿಂ
ಲಸಿತ ನವದಿವ್ಯಗಂಧ
ಪ್ರಸರಂ ಗಂಧಕುಟಿ ಬಂಧುರಾಕೃತಿ ಸತತಂ || ೧೧೧

ವ || ಮತ್ತಮಾ ಗಂಧಕುಟಿಯ ನಡುವೆ ಬೆಡಂಗುವಡೆದು ಸಿಂಹಸಂಹತಿ ವಿಧೃತಮುಂ ಶೋಣ ಮಾಣಿಕ್ಯದೀಪ್ತಿವ್ಯಾಪ್ತ ದಿಗಂತರಾಳಮುಂ ಬಹುಳಾಮೋದಭದ್ರತರ ವಿನಿದ್ರ ಸಹಸ್ರದಳ ಕಳಧೌತ ಕಮಳಕರ್ಣಿಕಾಕಮನೀಯಮುಂ ಅಪ್ಪ ಸರ್ವೋತ್ಕೃಷ್ಟ ಹರಿವಿಷ್ಟರಾಗ್ರದಲ್ಲಿ –

ಕಂ || ಮದನಾರಿ ನಾಲ್ವೆರಲ್ ಮು
ಟ್ಟದೆ ಜಿನಪತಿ ವರ್ಧಮಾನನನುಮಪಮ ಮಹಿಮಾ
ಸ್ಪದನವನತಲೋಕತ್ರಯ
ನುದಿತಯಶಂ ವಿದಿತವಿಶ್ವನೊಪ್ಪುತ್ತಿರ್ದಂ || ೧೧೨

ಉ || ಇಂತು ನಿರಂತರಂ ನಿಖಿಳಭವ್ಯ ಮನೋಹರ ರೂಪಮಾದ ಪೆಂ
ಪಂ ತಳೆದಿರ್ದ ಸನ್ಮತಿಜಿನೇಂದ್ರನ ರುಂದರವಿಳಾಸಮಂದಿರಂ
ಸಂತಸಮಂ ನಿಮಿರ್ಚೆ ನಲಿದಂ ವಿಬುಧಾಗ್ರಣಿ ಪುಣ್ಯಭಾಜನಂ
ಸ್ವಾಂತದೊಳಿಂದುನಿರ್ಮಳ ಯಶೋರಮಣಂ ವಸುಧೈಕಬಾಂಧವಂ || ೧೧೩

ಗದ್ಯಂ

ಇದು ನಿಖಿಳಭುವನ ಜನವಿನೂತ ಸ್ಫೀತಮಹಿಮಾವದಾತ ವೀತರಾಗ ಸರ್ವಜ್ಞತಾ ಸಮೇತ
ಖ್ಯಾತಜಿನಸಮಯ ಕಮಳಿನೀ ಕಳಹಂಸಾಯಮಾನ ಮಾನಿತ
ಶ್ರೀನಂದಿಯೋಗೀಂದ್ರ ಪ್ರಸಾದ ವಾಚಾಮಹಿತ
ಕೇಶವರಾಜಾನಂದ ನಂದನ ವಾಣೀವಲ್ಲಭ ವಿಸ್ತಾರಿತಮಪ್ಪ
ವಸುಧೈಕಬಾಂಧವ ಶ್ರೀವರ್ಧಮಾನಪುರಾಣದೊಳ್
ತೀರ್ಥಂಕರ ಪರಮದೇವ ಕೇವಲಜ್ಞಾನೋತ್ಪತ್ತಿ ವರ್ಣನಂ
ಪಂಚದಶಾಶ್ವಾಸಂ