ಕಂದ || ಶ್ರೀಮತ್ಪಂಚಪದಂ ಗುರು
ನಾಮಾದಿ ತ್ರಿತಳಮತುಳರಮ್ಯಂ ಹರ್ಮ್ಯಂ
ಧಾಮಮಯಂ ಸುಖಕಲಶೋ
ದ್ದಾಮಂ ವಿಶ್ರಾಮಧಾಮಮಕ್ಕೆಮಗನಿಶಂ || ೧

ಅದು ನವಪದಾರ್ಥ ನವನಿಧಿ
ಪದಮದು ಕೈವಲ್ಯಮುಕುರ ಮಂಗಳಕಲಶಂ
ಬೆದೆಬಿದ್ದವೇಕದಡಿಪಾ
ಸ್ಪದಮದು ರತ್ನತ್ರಯಾದಿ ದೈವಾಗಾರಂ || ೨

ಅದು ಪರಮಸೌಖ್ಯಲಕ್ಷ್ಮೀ
ಸದನಂ ವಾಣೀವಿಳಾಸಿನೀಕುಳಭವನಂ
ವಿದಿತಯಶಶ್ಶ್ರೀಹರ್ಷಾ
ಸ್ಪದಗೃಹಮೆರೆದಂದದೊಂದೆ ನುತಿಪದಮಲ್ತೇ || ೩

ನಿರುತಂ ಪಂಚಪದಕ್ಕ
ಕ್ಕರಲಕ್ಷ್ಮೀಸ್ಥಾನಭೇದದಿಂ ತ್ರಿವಿಕಲ್ಪಂ
ದೊರೆಕೊಳ್ಗುಮವಂ ಕ್ರಮದು
ಚ್ಚರಿಸುವ ನೆನೆವಯ್ದುವುಜ್ಜಗುಂ ದಲ್ ಕಜ್ಜಂ || ೪

ಪಣತೀಸಂ ಸೋಳಸವಂ
ಪಣ ಚದು ದುಗಮೇಕಮೆಂದು ಪೇೞ್ವಾಗಮದಿಂ
ಗಣಿಯಿಸುವೊಡೆ ಸವಿಧಂ
ಪ್ರಣುತ ಶ್ರೀಪದಮೆನಿಪ್ಪ ತತ್ಪಂಚಪದಂ || ೫

ವಚನ || ಇದರ ಅರ್ಥಮಂ ಪರಮಾರ್ಥತೀರ್ಥಪರಂಪರಾ ಪ್ರಸಿದ್ಧ ವಿಶುದ್ಧೋಪ ದೇಶದಿಂ ವಿಶದಂ ಮಾೞ್ಪೆಂ –

ಣಮೋ ಅರಿಹಂತಾಣಂ
ಣಮೋ ಸಿದ್ಧಾಣಂ
ಣಮೋ ಆಇರಿಯಾಣಂ
ಣಮೋ ಉವಜ್ಝಾಯಾಣಂ
ಣಮೋ ಲೋಏ ಸವ್ವಸಾಹೂಣಂ

೧) ಎಂಬಿದು ಪಂಚತ್ರಿಂಶದಕ್ಷರಂ ಪಂಚಪದಂ.
ಅರಿಹಂತಸಿದ್ಧ ಆ ಇರಿಯ ಉವಜ್ಝಾಯಾ ಸಾಹೂ

೨) ಎಂಬಿದು ಷೋಡಶಾಕ್ಷರಂ ಪಂಚಪದಂ.
ಅರಿಹಂತ ಸಿಸಾ

೩) ಎಂಬಿದು ಷಡಕ್ಷರಂ ಪಂಚಪದಂ.
ಸಿ ಉಸಾ

೪) ಎಂಬಿದು ಪಂಚಾಕ್ಷರಿ ಪಂಚಪದಂ.
ಸಿ ಸಾಹೂ

೫) ಎಂಬಿದು ಚತುರಕ್ಷರಂ ಪಂಚಪದಂ.
ಸಾ

೬) ಎಂಬಿದು ದ್ವ್ಯಕ್ಷರಂ ಪಂಚಪದಂ.
ಓಂ (ಕಾರಂ)

೭) ಎಂಬಿದು ಏಕಾಕ್ಷರಂ ಪಂಚಪದಂ
ಎಂಬೀ ಸಪ್ತಪದೀ ಪದೋಪಲಕ್ಷಣದಿಂ.

ಈ ವಿಧದಲ್ಲಿ ಆ ಪಂಚಪದಕ್ಕೆ ಏಳು ಬಗೆಯ ಸ್ವರೂಪವುಂಟು. ಇವುಗಳಲ್ಲಿ ಯಾವುದನ್ನು ಬೇಕಾದರೂ ಯಥಾಶಕ್ತಿ ಭವ್ಯರು ಸ್ವೀಕರಿಸಬಹುದು.

ಓಂ ಹ್ರಾಂ ಣಮೋ ಅರಿಹಂತಾಣಂ
ಓಂ ಹ್ರೀಂ ಣಮೋ ಸವ್ವ ಸಿದ್ಧಾಣಂ
ಓಂ ಹ್ರೂಂ ಣಮೋ ಆ ಇರಿಯಾಣಂ
ಓಂ ಹ್ರೌಂ ಣಮೋ ಉವಜ್ಝಾಯಾಣಂ
ಓಂ ಹ್ರಃ ಣಮೋ ಲೋಏ ಸವ್ವಸಾಹೂಣಂ

ಎಂಬೀ ಅಘೋರ ಪಂಚನಮಸ್ಕಾರ ದಿವ್ಯಮಂತ್ರಮಂಗಳಂ ಶ್ರೀ ಪಂಚಪದ ವಿಶೇಷಂಗಳೆಂದಱಿವುದು.

ಕಂ || ಉದಕಂ ದಕಂ ಕಮೆಂದೊಡ
ಮುದಕವಿಶೇಷಪ್ರತೀತಿಯೆಲ್ಲೆನಿಸುವವೊಲ್
ಸದಮಳಪಣತೀಸಾದಿಕ
ಪದಂಗಳೆ ವಿಶೇಷವಾಚ್ಯವಾಚಕಮೆನಿಕುಂ || ೬

ಗುರುಪಂಚಕನಾಮಾದ್ಯಾ
ಕ್ಷರಸಂಧಿ ಪ್ರಭವಮಖಿಲವಿದ್ಯಾಮಹಿಮಾ
ಕರಮೆನಿಪೋಮಕ್ಷರದೊಳ್
ಸ್ಫುರದಿಂದುದ್ಯುತಿಯೊಳಿರಿಪೆನೆನ್ನಯ ಮತಿಯಂ || ೭

ಓಮಕ್ಷರಮುಂ ವಾಚೋ
ಭಾಮಾವಶ್ಯೈಕತಿಲಕಮಾದುದು ಮುಕ್ತಿ
ಶ್ರೀಮೋಹನಸಾಯಕಮುಂ
ಶ್ರೀಮದ್ಗುರುಪಂಚಕಾಖ್ಯೆ ತಾನಾದುದಱಿಂ || ೮

ಕಿಱಿದೆಂದಿದನಱಿಯಮೆಯಿಂ
ದುಱದ ನರಂ ಚಿಂತಿತಾರ್ಥ ವಿತರನ್ಮಣಿಯಂ
ಕಿಱಿದೆಂದು ಱದನ ತೆಱದಿಂ
ಬಱಿದಾಗದೆ ಬಯಸಿದರ್ಥಮಂ ಪಡೆದಪನೇ || ೯

ಅತಿಶಯಚಿಂತಾಮಣಿ ವಿ
ಶ್ರುತ ವಿದ್ಯಾಕಲ್ಪಕಂದಳೀಕಂದಮಿಳಾ
ಸ್ತುತಬೋಧವಾರ್ಧಿವೇಳಾ
ಸಿತರುಚಿಸಂಪೂರ್ಣಬಿಂಬವಿಭವಂ ಪ್ರಣವಂ || ೧೦

ಭೇದಿಸೆ ವರಜೈನವಚೋ
ವೇದಪ್ರಾಸಾದಮೂಲಮೆಂದಿವನೊಲವಿಂ
ವೇದರಹಸ್ಯಮನಱಿವರ್
(ಮೋದದೆ) ವೇದಾದಿಯೆಂಬರಂಬರವಸನರ್ || ೧೧

ಪೊಳೆವಮೃತಾಂಶುವ ಕಳೆಯಿಂ
ಕಳೆಯೆನಿಸುವ ಬೆಳಗಿನಿಂದಮೆನ್ನಯ ಭಾಲ
ಸ್ಥಳದೊಳ್ ತಿಲಕಶ್ರೀಯಂ
ತುಳುಂಕುವೀ ಬ್ರಹ್ಮಬೀಜಮೆನಗೀಗಱಿವಂ || ೧೨

ಸ್ಫುರದರಸಹಸ್ರಶೋಭಾ
ಪರಿಕಳಿತಂ ಧರ್ಮಚಕ್ರಮೆನಗಾಯಗ್ರೇ
ಸರಮೆಂಬ ಮನದ ಪೆರ್ಚಂ
ದೊರೆಕೊಳಿಸುಗೆ ಪಂಚಗುರುಪದಾಕ್ಷರಮಮಳಂ || ೧೩

ಭುವನತ್ರಯಮಂ ನಿಜರುಚಿ
ನವಾಮೃತಾರ್ಣವದೊಳಾವಗಂ ತೇಂಕಿಸುತಿ
ರ್ಪವಿತಕ್ಯರ್ತಕಾಂತಿಕಾಂತಂ
ಶಿವಪದಮಂ ಕುಡುಗೆ ನಮಗೆ ಗುರುಪದಮನಘಂ || ೧೪

ಅಮರ್ದುಂ ಸಲೆ ಸವಿಸಲ್ಕೋಂ
ನಮಯೆಂಬೀ ಪಂಚಪದಸುಧಾಕ್ಷರಮತ್ಯು
ತ್ತಮಮಾತ್ಮರಸನೆಗಾದಂ
ಸಮನಿಸೆ ಪಱಿಪಡದೆ ನಿಖಿಲಜನ್ಮಾತಂಕಂ || ೧೫

ಏಕಾಕ್ಷರೋಕ್ತಲಕ್ಷಣ
ಸಾಕಲ್ಯಂ ದ್ವ್ಯಕ್ಷರಾದಿಗಳುಮಂ ತಾನ
ವ್ಯಾಕುಳಮಮರ್ಗುಂ ಸಕಳಗು
ಣಾಕರಮಾವಾಚಕತ್ವಮದು ಕೇವಳಮೇ || ೧೬

ಭೂತಭವದ್ಭಾವಿಗಳನ
ತೀತಜನಿಗಳಂ ನಿಜಸ್ವರೂಪಸ್ಥಿತಿ ಸಂ
ಜಾತಾನಂದರನಮಳರ
ನಾನತಗುಣ ಪಂಚಗುರುಗಳಂ ಚಿಂತಿಸುವೆಂ || ೧೭

ಘಾತಿಚತುಷ್ಟಯಹತಿ ಸಂ
ಜಾತಾಮಿತಬೋಧದೃಷ್ಟಿ ಸುಖವೀರ್ಯಮಯಂ
ಜ್ಯೋತಿರ್ಮಯ ದಿವ್ಯವಪುಃ
ಖ್ಯಾತಂ ಭೂತಾರ್ಥವಾದಿ ಜಿನನಪವೃಜಿನಂ || ೧೮

ಸಮವಸೃತಿಮಂಡಲ ಶ್ರೀ
ರಮಣೀರಮಣಂ ಸಮಸ್ತಭುವನಸ್ತುತ್ಯ
ಕ್ರಮಕಮಳಂ ಸಿಂಹಾಸನ
ಚಮರರುಹಪ್ರಭೃತಿ ವಿವಿಧಭವವಿಭಾಸಂ || ೧೯

ದ್ವಾದಶಗಣ ಭವ್ಯಮನೋ
ಹ್ಲಾದಿ ವಚೋಮೃತಸುಧಾಂಶುಬಿಂಬಂ ಮುಕ್ತಿ
ಶ್ರೀದಯಿತಂ ಭುವನತ್ರಯ
ವೇದಿ ಜಿನೇಶ್ವರನನಶ್ವರಂ ವಿಶ್ವವರಂ || ೨೦

ಭಾವವಿಮುಕ್ತಂ ಸಕಲಗು
ಣಾವಹ ವಿಶ್ವಾವಬೋಧ ಪರಮಾನಂದಂ
ಪಾವನನಿಜಪದಪದ್ಮಂ
ಸೇವಕ ರಕ್ಷೈಕದಕ್ಷನಕ್ಷಯನಭವಂ || ೨೧

ಅಷ್ಟವಿಧಕರ್ಮವಿಳಯ
ಸ್ವೇಷ್ಟಗುಣಾಷ್ಟಕನನಂತಸುಖಸಂತುಷ್ಟಂ
ಶಿಷ್ಟಾಷ್ಟಮಭೂಮಧ್ಯನಿ
ವಿಷ್ಟ ಶಿಲಾವಿಷ್ಟರನಂತಕಾಲಂ ಶುದ್ಧಂ || ೨೨

ಸೂರಿತ್ರಯಮಾಗಮ ರುಚಿ
ಚಾರಿತ್ರವಹಿತ್ರ ಜನನವಾರಾಶಿ ಸಮು
ತ್ತಾರಕಮಕ್ಕೆಮಗೆಂದುಂ
ಸಾರದಯಾಮೃತಸಮುದ್ರಮುದ್ರಿತಭುವನಂ || ೨೩

ಚರಮಾಂಗಮಂಗಸಂಗತಿ
ವಿರಹಿತನಖಿಳರ್ಧಿಶೀಲಗುಣಗಣರತ್ನಾ
ಭರಣ ವಿರಾಜಿತನಪಗತ
ಪರೀಷಹಂ ಪ್ರವಚನೈಕದೃಷ್ಟಿ ವಿಶಿಷ್ಟಂ || ೨೪

ಶಿಕ್ಷಾದಿಲಕ್ಷಣತ್ರಯ
ಲಕ್ಷಿತನಾಚಾರ್ಯನುತ್ತರೋಭಯಲಕ್ಷ್ಮೀ
ಲಕ್ಷಿತನುಪದೇಶಕ ನಾ
ಲಕ್ಷಿತನಗ್ರೈಕಲಕ್ಷದಿಂ ಸಾಧುವರಂ || ೨೫

ಜಡಿದುಂ ನುಡಿದುಂ ತಮ್ಮೊ
ಳ್ನಡೆಯಂ ಪಡಿದೋಱಿ ಜಡರನೊಯ್ಯನೆ ಕೃಪೆಯಿಂ
ಕಿಡದೆಡೆಗೆಯ್ದಿಪ ಸಾಧುಗ
ಳಡಿಗಳಿಗಳ್ ಕಿಡಿಸುಗೆಮ್ಮ ಜನ್ಮಶ್ರಮಮಂ || ೨೬

ಏಮಾತೊ ಸಕಲ ಮಯದೊ
ಳೀಮಾತೆ ಸುನಿಶ್ಚಿತಾರ್ಥಸಾರಂ ಸಕಲ
ವ್ಯಾಮೋಹಜಾಲರಹಿತ ನಿ
ರಾಮಯ ಚಿತ್ಪದಮೆ ಯೋಗಿಜನಪದಮೆನಿಕುಂ || ೨೭

ಅದನಾದಿ ವಿಮಳಮಚಳಂ
ವಿದಿತಮಖಂಡಾವಿಕಲ್ಪಮತುಲಾದ್ವೈತಂ
ಮದನಶರದೂರ ದುರ್ಗಂ
ಚಿದಮಳ ಪರಮಾಣು ಸಮಯಸಾರಮುದಾರಂ || ೨೮

ಭೇದಾದಿ ವಿಕಲ್ಪಕ್ಕೊಳ
ಗಾದೊಡಮೇಕತ್ವನಿಯತಮಣುವೆನಿಸುವವೊಲ್
ಚೋದಿಸಿ ಚಿತ್ಪರಮಾಣುವು
ಮಾದುದು ತತ್ಸದೃಶಮದಱ ಪೊರ್ದುಗೆಯಿಂದಂ || ೨೯

ಅಲ್ಲಿರ್ದವರೆ ಜಗತ್ತ್ರಯ
ವಲ್ಲಭರಿಂದ್ರಾದಿ ವಿಶ್ವವಂದ್ಯರನಿಂದ್ಯರ್
ಫುಲ್ಲಶರವಿಜಯಿಗಳ್ ಭವ
ವಲ್ಲೀ ವಿಚ್ಛೇದದಕ್ಷರಕ್ಷರನಿಳಯರ್ || ೩೦

ಅವರೆಮಗೆ ಕುಡುಗೆ ದಯೆಯಿಂ
ಭವಜಲಧಿಯ ತಡಿಯನೆಯ್ದುವಲ್ಲಿಗುಪಾಯ
ಪ್ರವರಮೆನಿಸಿದ ನಿಜಾಂಘ್ರಿಯೊ
ಳವಿಕಳ ಸದ್ಭಕ್ತಿಯುಕ್ತಿಯಂ ಮುಕ್ತಿವರಂ || ೩೧

ಪಂಚಗುರುಚರಣಭಕ್ತಿ ಸ
ಮಂಚಿತ ಪಂಚಪ್ರಕಾರ ತತ್ಸಂಯಮಮುಂ
ಪಂಚಮಗತಿಯೊಳ್ ರತಿಯುಂ
ಸಂಚಿತಪುಣ್ಯಂಗೆ ನಿಕಟನಿರ್ವೃತಿಗಕ್ಕುಂ || ೩೨

ಜನನ ಜರಾಂತಕ ಮೃತ್ಯು
ಧ್ವನಿಯಂ ಕನಸಿನೊಳಮೊಲ್ಲೆನಾಲಿಸಲೆಂಬೀ
ಮನಮುಳ್ಳೊಡೆ ಗುರುಪದಮಂ
ವಿನಯದಿನಾರಾಧಿಸರ್ಧಿತಾರ್ಥಪ್ರದಮಂ || ೩೩

ಪರಮಪದ ಪರಮಸುಖರಸ
ನಿರವಧಿ ನಿರ್ಗಾಧವಾರ್ಧಿಯೊಳ್ ಮುಳುಗಿ ನಿರಂ
ತರಮಿರ್ಪ ಬಯಕೆಯುಳ್ಳರ್
ಗುರುಪದಮಂ ನೆನೆವುದೞ್ತಿಯಿಂದನವರತಂ || ೩೪

ಪರಮಾನಂದಸುಧಾರ್ಣವ
ನಿರಂತರಾ ಮಗ್ನಪ್ರವೃತ್ತಿ ನಿರಾಕುಳರಂ
ಪರಿಪೂರ್ಣ ಬೋಧ್ಯ ಬೋಧ
ಸ್ವರೂಪರಂ ನೆನೆವೆನೊರ್ಮೆಯುಂ ನಿರ್ಮಳರಂ || ೩೫

ಅವಲೋಹದಿಂದೆ ಪಿಂಗಿದ
ಸುವರ್ಣದಂತಖಿಳ ಕರ್ಮನಿರ್ಮುಕ್ತ ಸಮು
ದ್ಭವ ಸಹಜಗುಣವಿಳಾಸ
ಪ್ರವರಂ ಶಿವನಜನನಂತನರ್ಹ ಸಿದ್ಧಂ || ೩೬

ಏಕಾಗ್ರಮನಂ ಧ್ಯಾನಿಸು
ಲೋಕಾಗ್ರನಿವಾಸಿ ಸಕಲಕರ್ಮಾರಿ ಜಯ
ಸ್ವೀಕೃತ ಶಾಶ್ವತಪದರನ
ನೇಕಾಂತಮತಪ್ರಸಿದ್ಧಸಿದ್ಧರನೊಲವಿಂ || ೩೭

ಧ್ಯಾನೈಕದೃಷ್ಟಿವಿಷಯರ
ನೂನಗುಣಾಸ್ಪದರ ಶೇಷದೋಷವಿದೂರರ್
ಸ್ವಾನಂದವಾರ್ಧಿಗಳ್ ಜಗ
ತೀನುತ ಪದಕಮಲಯುಗಳರಗಣಿತಮಹಿಮರ್ || ೩೮

ಜಾತಿ ಜರಾಮರಣಭಯಾ
ತೀತರ್ ಸಂಯೋಗ ವಿರಹಸಂಜ್ಞಾ ರೋಗೋ
ದ್ಭೂತ ಪರಿಕ್ಲೇಶಾನಭಿ
ಭೂತರ್ ಸಿದ್ಧರ್ ವಿಶುದ್ಧಬೋಧಸಮೃದ್ಧರ್ || ೩೯

ಪರಮಸ್ವಾಸ್ಥ್ಯ ಪ್ರತ್ಯಯ
ಪರಿಸ್ಫುಟಾನುತಗುಣ ನಿಶಾಂತರನಂತರ್
ಸ್ವರಸಾಭಿವ್ಯಕ್ತ ಭುವನ
ಸ್ವರೂಪ ಸಂತೃಪ್ತಿಯುಕ್ತರಪ್ಪರ್ ಮುಕ್ತರ್ || ೪೦