ಚರಮಾಂಗಪ್ರವಿಮಳ ಸ
ತ್ಪುರುಷಾಕಾರರ್ ವಿಶುದ್ಧಚೈತನ್ಯಗುಣ
ಸ್ಥಿರಕಾಯರನಾಮಯರು
ದ್ಧುರವಿಮಳಜ್ಞಾನನಿಷ್ಠರಖಿಳವರಿಷ್ಠರ್ || ೪೧

ಗತಸಿಕ್ಥಲಸನ್ಮುಷಾ
ಸ್ಥಿತ ಪುರುಷಾಕಾರಸನ್ನಿಭಾಕೃತಿಯುಕ್ತರ್
ಕೃತಕೃತ್ಯರತೀತಭವರ್
ವಿತತಾನಂತಾವಬೋಧರಪಗತರೋಧರ್ || ೪೨

ಅವ್ಯಾಬಾಧರಮೂರ್ತರ್
ಪ್ರವ್ಯಕ್ತಶಾಸ್ತ್ರ ನಿರಸ್ತವಿಷಯಾಸಂಗರ್
ಭವ್ಯಜನ ಭಕ್ತಿಭಾವ್ಯರ್
ನವ್ಯ ವಿದಾನಂದವಾರ್ಧಿಮಗ್ನರಭಗ್ನರ್ || ೪೩

ಸಿದ್ಧರನಬದ್ಧರಂ ಸಂ
ಶುದ್ಧರನತ್ಯಂತಸೌಖ್ಯಸಂಪದ್ಯುತರಂ
ಬದ್ಧಾಗ್ರಹದಿಂ ಭಾವಿಸೆ
ಸಿದ್ಧ ಚಿದಾನಂದತತ್ಸ್ವರೂಪನೆ ಅಕ್ಕುಂ || ೪೪

ಆಸನ್ನಭವ್ಯನಮೃತ ಸು
ಖಾಸಾರದೆ ಜನ್ಮದವಮನಾಱಿ ಸಲರ್ಹಂ
ಭಾಸುರ ಚಿದ್ಘನ ನಿತ್ಯ ನಿ
ಜಾಸೀನ ನಿರಂಜನಾತ್ಮರಂ ಧ್ಯಾನಿಸುಗುಂ || ೪೫

ಭಾವ್ಯಮೆನಲ್ ಸಿದ್ಧತ್ವಂ
ಭವ್ಯಂಗದೆ ಸಾಧ್ಯಸದೃಶಮಪ್ಪುದರಿಂದಂ
ಸೇವ್ಯಜನ ತತ್ವಮೀಪ್ಸಿತ
ನವ್ಯಪ್ರವ್ಯಕ್ತ ಮುಕ್ತಿಸೂಕ್ತಿ ನಿಮಿತ್ತಂ || ೪೬

ಬಿತ್ತಿಕ್ಕಿದ ಕುಡಿಯಂ ನಿಜ
ಚಿತ್ತಮನಿನ್ನಪ್ಪ ಪುಷ್ಟಕಣಿಶದೊಳಿರಿಪೆಂ
ಉತ್ತಮನೆನಿಪ್ಪ ಭವ್ಯಂ
ಚಿತ್ತಮನಿರಿಸುವುದು ಭಾವಿ ಸಿದ್ಧಾಕೃತಿಯೊಳ್ || ೪೭

ಕೆಯ್ದೆಗೆಯದೊರ್ಮೆಯುಂ ತಾ
ನೆಯ್ದಲ್ವೇಡಿರ್ದಶುದ್ಧ ಸಿದ್ಧತ್ವಮನಾ
ರಯ್ದು ಸಮಚಿತ್ತದಿಂ ದೇ
ಗೆಯ್ದುಂ ಭಾವಿಪುದು ಭವ್ಯನವ್ಯಾಸಂಗಂ || ೪೮

ಏಕಕ್ಷಣ ಸದೃಶಂ ಸಮ
ನಾಕೃತಿಯಂಬೞ್ದತೀತಕಾಲಂ ಭವ್ಯಂ
ಗೇಕಸ್ವರೂಪ ವಿಮಳನಿ
ಜಾಕೃತಿಯಿಂದಿರ್ಪ ಕಾಲದೊಡನೊರ್ಕುಳಿಯಂ || ೪೯

ಒಂದೆರಡು ಜನ್ಮಮಿನ್ನುಂ
ಸಂಧಿಸುವೊಡಮವಱ ಕಣ್ಣಿಯಂ ಗಣಿಯಿಸದಿ
ರ್ಪಂದ ಮನದಿಂದೆ ನೋೞ್ಪುದು
ಮುಂದಣ ಸಿದ್ಧತ್ವಮಿಂದೆ ಬಂದವೊಲನಿಶಂ || ೫೦

ಜ್ಞಾನವನವಾರ್ಧಿ ದೃಷ್ಟಿ ವಿ
ಧಾನಂ ಸಮ್ಯಕ್ತ್ವಸದನಮಗರು ಲಘುತ್ವಾ
ಧಾನಮಬಾಧಾತ್ಮ ಗುಣಂ
ತಾನಾದುದು ಸೂಕ್ಷ್ಮತಾಸ್ಪದಂ ಸಿದ್ಧತ್ವಂ || ೫೧

ಅಮರತ್ವಮನಜರತ್ವಮ
ನಮೃತಾಶಿತ್ವಮುಮನೆಯ್ದು ವುಜ್ಜಗಮುಳ್ಳಂ
ಗಮೃತಪದವೊಂದೆ ಸಾಧ್ಯಂ
ಸಮನಿಸುಗುಮವೆಲ್ಲಮದಱೊಳನ್ವರ್ಥಂಗಳ್ || ೫೨

ಲೋಕಾಲೋಕಮನೆಲ್ಲಮ
ನೇಕಕ್ಷಣದೊಳೆ ಸಮಂತು ಬೆಳಗುವ ಬೋಧಾ
ವ್ಯಾಕುಳತೆ ಸೌಖ್ಯಸುಧೆಯಿಂ
ದೋಕುಳಿಯಾಡಿಸದೆ ಸಿದ್ಧಪರಮೇಷ್ಠಿಗಳಂ || ೫೩

ಪರಮಾನಂದಮಪೂರ್ವಂ
ದೊರೆಕೊಳ್ಳದೊಡಮೃತಪದದೊಳಿಂದ್ರಿಯ ಸುಖಮಂ
ಪರಿಹರಿಸಿ ತಪದೊಳೆಸಗಿದ
ಪುರುಮುಖ್ಯರ್ ಮೂರ್ಖರೆನಿಸಿಕೊಳರೆ ಬುಧರಿಂ || ೫೪

ಅಸುಖ ಪ್ರತಿಪಕ್ಷಂ ಸುಖ
ಮಸದೃಶಮಿಲ್ಲದೊಡೆ ಮುಕ್ತಿಯೊಳ್ ತತ್ಪದಮಂ
ಬಿಸುಡದೆ ಸಾಧಿಪನಾವಂ
ರಸೆಯಂ ನೀರಸೆಯನಗುೞ್ವನೇ ತೃಷ್ಣಾರ್ತಂ || ೫೫

ಇಲ್ಲದೊಡಾನಂದದೊಳಳ
ವಿಲ್ಲದ ಪರಮಾರ್ಥಸೌಖ್ಯವೈಹಿಕಸುಖಮಂ
ವೊಲ್ಲೆನ್ನದೆ ಸಾಧಿಪೊಡೇ
ನಿಲ್ಲಾ ಸತ್ಪುಣ್ಯಮಾರ್ಗಮಾರ್ಗಂ ಸುಲಭಂ || ೫೬

ಅದುಕಾರಣದಿಂ ಸುಖಮೆಂ
ಬುದು ನಿತಯಂ ಪರಮಪದದೊಳೊಂದಱೊಳೆ ಭವಾ
ಸ್ಪದದೊಳಸುಬಂದಲೆತ್ತಂ
ವಿದಿತಂ ಪ್ರತ್ಯಕ್ಷಸದನುಮಾನಾದಿಗಳಿಂ || ೫೭

ದುರಿತವಶನಿಂತು ಜೀವಂ
ದುರಿತಹರಂ ಶೂನ್ಯನೆಂಬನುಡಿಯಪಮಾನಂ
ಪರಿವೃತಘನಪಟಲಂ ಭಾ
ಸ್ಕರನುದಯಪ್ರಾಪ್ತನಾರ್ಗೆ ಸಂದೇಹಕರಂ || ೫೮

ಭಾವಿಪೊಡನಾದಿನಿಧನಂ
ಜೀವಂ ಪರಿಣಾಮಿ ನಿತ್ಯನುತ್ಪಾದಾದಿ
ತ್ರೈವಿಧ್ಯಲಕ್ಷನಂ ಚಿ
ದ್ಭಾವಂ ಪರಭಾವದೂರನುರುಸುಖಸಾರಂ || ೫೯

ಸಕಲೋಪಾಧಿವಿವರ್ಜಿತ
ನಕಲಂಕನಮೂರ್ತನಕ್ಷಯಂ ಸುವಿಶುದ್ಧಮ
ಪ್ರಕಟ ಸಹಭಾವ ಬೋಧಾಂ
ಬಕನಾನಂದಾಬ್ಧಿಭುವನ ಚೂಡಾರತ್ನಂ || ೬೦

ಪರಮಂ ಪರಮಾತ್ಮಂ ತ
ತ್ಪುರುಷಾಸ್ಪದದದುವೆ ಪರಮಪದಂ ಬಿ
ತ್ತರಿಸುವೆನಾನದನೊಲವಿಂ
ನಿರವಧಿಸುಖಬೋಧಸಿಂಧುವಂ ಬಂಧುರಮಂ || ೬೧

ದುರಿತರಿಪುದೂರ ದುರ್ಗಂ
ಪರಮಾತ್ಮಾಚಿಂತ್ಯಶಕ್ತಿ ಸಾರಾಗಾರಂ
ನಿರವದ್ಯಬೋಧಲಕ್ಷ್ಮೀ
ಸ್ಥಿರಕೇಳೀನಿಲಯಮೆನಿಸದೇ ಪರಮಪದಂ || ೬೨

ಅದು ಸುಖದಸವಿಯಕರಡಿಗೆ
ಚದುರತವರ್ಮನೆ ನಿರಾಕುಳತ್ವದ ನಿಳಯಂ
ಮದಮನೊದವಿಸದ ಸಿರಿಗೆಡೆ
ಪುದುವಿಲ್ಲದ ರಾಜಲೀಲೆಗಾಲಯಮಲ್ತೇ || ೬೩

ಸುಖದಕಣಿ ಸುಖದತಿಂತಿಣಿ
ಸುಖದಬನಂ ಸುಖದಸುಗ್ಗಿ ಸುಖದಬಸಂತಂ
ಸುಖದತಿಳಿ ಸುಖದಪೊಂಪುಳಿ
ಸುಖದೊರ್ಬುಳಿ ಸುಖದಸೋನೆಯೆನಿಸಿದೆ ನಿಸದಂ || ೬೪

ಸುಖದ ತನಿರಸದ ಪೆರ್ಮಡು
ಸುಖದ ತನಿರಸದ ಪೆರ್ಮಡು
ಸುಖದೊತ್ತಿನಸುತ್ತು ಸುಖದ ತಣ್ಬುೞಿಲೆನಿಕುಂ
ಸುಖದಡೊಣೆ ಸುಖದ ದೀರ್ಘಿಕೆ
ಸುಖದಕೊಳಂ ಸುಖದಯಂತ್ರಧಾರಾಗಾರಂ || ೬೫

ಅದೆ ಹರ್ಷದ ಪರುಸದಕಣಿ
ಯದೆ ಚಿಂತೆಯನಂತರಿಪ್ಪಚಿಂತಾಮಣಿ ಮ
ತ್ತದೆ ಬೇಡಿತೀವ ಸುರತರು
ವದೆ ಕಾಮಿಸಿದೀವ ಕಾಮಧೇನುವೆನಿಕ್ಕಂ || ೬೬

ಅಱಿವಂಗಮಱಿಯದಂಗಂ
ಕಿಱಿಕಿಱಿಯದಱಿವಂಗಮಱಿದು ನೆಱೆಮಱೆವಂಗಂ
ಪೊಱಪೊಣ್ಮಿದ ಸುಖರಸಮಂ
ಕಱೆವ ಶಿವಾಸ್ಪದಮನಱಿವುದಱಿಪುವುದಱಿವಂ || ೬೭

ಅಸಮಾನಹರ್ಷರಸಮಂ
ಪಸರಿಪ ತತ್ಪುರದೊಳಿರ್ದುಬಂದಂತೆ ಬುಧಂ
ಬೆಸಗೊಂಡವರ್ಗದಱೆಸಕಮ
ನುಸಿರ್ವುದು ತತ್ಪದಮನದ ಸುಗಮತ್ತ್ವಮುಮಂ || ೬೮

ಬೆಸಗೊೞ್ವುದು ಪೇೞ್ವುದು ಭಾ
ವಿಸುವುದು ಶಿವತಾತಿಸಿದ್ಧಗತಿಯೊಳೆ ರತಿಯಂ
ಬೆಸಗೊಳ್ಳದಿರಸುಗತಿಯಂ
ಬೆಸಗೊಳ್ವುದೆ ಪೋಗದೂರದಾರಿಯ ದೆಸೆಯಂ || ೬೯

ಗ್ರಾಮಾದಿ ಗಮ್ಯವಸ್ತುವ
ನಾಮಾದ್ಯವಗಮನರುಚಿಯುತಂ ತದಭಿಮುಖಂ
ಪ್ರೇಮದೆ ನಡೆದದನೆಯ್ದುವ
ನಾ ಮಾಳ್ಕೆಯನಾಮುಮೆಯ್ದುವಂ ತತ್ಪದಮಂ || ೭೦

ಇರುಳುಂ ಪಗಲುಂ ನಿಮ್ಮಯ
ಪರಿಚಿಂತಾಕುಳಿತಚಿತ್ತನಾಗಿರ್ದೆನ್ನಂ
ಮರುಳೆಂದು ಮರುಳುಮಾಡದೆ
ಕರುಣದಿನೀಕ್ಷಿಪುದು ವಿಶ್ವರಕ್ಷಾದಕ್ಷರ್ || ೭೧

ಮರುಳಕ್ಕೆಮ ಪುರುಳಕ್ಕೆಮ
ದುರಿತಾಹಿತಭೀತಿಯಿಂ ಭವತ್ಪದಪದ್ಮಂ
ಶರಣೆಂದು ಪೊರ್ದಿದೆನ್ನಂ
ಪರಿಪಾಲಿಸದಿರ್ದೊಡೆತ್ತ ನಿಮಗೆ ಗುರುತ್ವಂ || ೭೨

ಅದರಿಂದಮೃತ ದಯಾಮೃತ
ವಿದಳನ್ನಯನೋತ್ಪಳಾಗ್ರದಿಂದೆನ್ನಂ ನೋ
ೞ್ಪುದೆ ನಿಮಗೆ ಕಜ್ಜಮೆನಗಂ
ಮದಿತಭವದ್ವದನವನಜ ಸೇವಾಲೋಕಂ || ೭೩

ಪಿರಿಯರ್ ಗುರುಗಳ್ ದೇವರ್
ಪರಮಾತ್ಮರಚಿಂತ್ಯಶಕ್ತಿಯುಕ್ತರ್ ಮುಕ್ತರ್
ನಿರತಿಶಯ ಸುಖಸಮೃದ್ಧರ್
ನಿರವಧಿಬೋಧೈಕಮೂರ್ತಿಗಳ್ ನೀಮೆ ವಲಂ || ೭೪

ಏಕಾಕರದನೇಕರ್
ಲೋಕಾಲೋಕಾವಲೋಕದಕ್ಷರನಕ್ಷರ್
ಲೋಕೈಕಹಿತಪದಾರ್ಥರ
ನಾಕುಳರಾಕಾರದೂರರಸಮಾಕಾರರ್ || ೭೫

ಅತನು ಸುಖವ್ರತ ಖೞ್ಗದಿ
ನತನುವನುರದಿಕ್ಕಿಯಾತನತನುತೆಯಂ ಕೊಂ
ಡತನುಸುಖಲೋಲರಾದರ್
ವ್ರತರಹಿತರ್ ಸಿದ್ಧರೆಂಬ ಜಸಮೆಸೆವಿನಗಂ || ೭೬

ನಿಮಗಂ ಭಾವಭವಂಗಂ
ಸಮಾನಮತನುತ್ವಮಾದೊಡಂ ತಚ್ಚರಿತಂ
ಸುಮನರ್ಗಮಾದೊಡೆರ್ದೆಗಿ
ಚ್ಚಮರ್ದುಮನೇೞಿಸುವುದಮಮ ನಿಮ್ಮುಪಶಮನಂ || ೭೭

ಆರುಂ ಕಾಣದ ಕೇಳದ
ದೂರದೊಳಷ್ಟಮ ವಿಶಿಷ್ಟಭೂಮಿಯ ಶಿಲೆಯೊಳ್
ನೀರೂಪತೆಯಿಂದಿರ್ದೊಡ
ಮಾರೂಪಿಂ ನಿಮ್ಮ ಬೆನ್ನನಾಂ ಬಿಟ್ಟಪೆನೇ | ೭೮

ಆರುಂ ಕಾಣದ ಕೇಳದ
ದೂರದೊಳಷ್ಟಮ ವಿಶಿಷ್ಟಭೂಮಿಯ ಶಿಲೆಯೊಳ್
ನೀರೂಪತೆಯಿಂದಿರ್ದೊಡ
ಮಾರೂಪಿಂ ನಿಮ್ಮ ಬೆನ್ನನಾಂ ಬಿಟ್ಟಪೆನೇ || ೭೮

ಆರಱಿವರೆಮ್ಮ ತಾಣವ
ನಾರೆಮ್ಮಿರ್ದೆಡೆಗೆ ಬರ್ಪರೆಮ್ಮಂ ಕಾಣ್ಬರ್
ಧೀರರೆನವೇಡ ನಿಮ್ಮ ಪ
ದಾರಾಧನೆ ಮತ್ಸಹಾಯದೇವತೆಯಲ್ತೇ || ೭೯

ಕರೆದು ಕರಗ್ರಹದಿಂದಾ
ದರದಿಂದಾ ರಾಜದರ್ಶನಂಗೆಯಿಸುವನಂ
ತೆರಡೆನಿಸದ ನಿಜಚರಣ
ಸ್ಮರಣಮೆ ಕಾಣಿಸದೆ ನಿಮ್ಮನೆನ್ನನಮೋಘಂ || ೮೦

ಒರ್ವೊರ್ವರೆ ಸಾಲ್ವಿರಿ ಸಕ
ಳೋರ್ವಿಯನವಲೋಕಮಾತ್ರದಿಂ ತಣಿಪಲ್ಕೆ
ನ್ನೊರ್ವನನನಾಥನಂ ಗತ
ಗರ್ವನನಾನಂದರಸದೊಳೋಲಾಡಿಸಿರೇ || ೮೧

ನರಲೋಕಮನಿೞಿಕೆಯ್ದಾ
ಸುರಲೋಕಮನಿಕ್ಕಿ ಮೆಟ್ಟಿ ನಿಮ್ಮುನ್ನತಿಯಂ
ಧರೆಗಱಿಪುವಂತೆ ಲೋಕದ
ಶಿರಮಾದುದು ರಜ್ಜುಮಾತ್ರಮೆಂಟನೆಯ ನೆಲಂ || ೮೨

ವಿಮಳೇಷತ್ಪ್ರಾಗ್ಭಾರಾ
ಷ್ಟಮಭೂಮೀಮಧ್ಯದಲ್ಲಿ ಸೀತಾಭಿಖ್ಯಂ
ಹಿಮಕರಬಿಂಬಾಕಾರಂ
ರಮಣೀಯ ಸ್ಫಾಟಿಕಂ ಶಿಳಾತಳಮೆಸೆಗುಂ || ೮೩

ಸುರಲೋಕದ ಸೌಂದರ್ಯಮ
ನಿರಿಸತ್ತಲೆನಿಪ್ಪ ವರ್ಣಗಂಧಾದಿ ಮನೋ
ಹರತೆ ನಿರಂತರಮದಱೊಳ್
ಪರಮಾತ್ಮರ್ ನೆಲೆಸಿದೆಡೆಗೆ ಪಡಿ ಮತ್ತುಂಟೇ || ೮೪

ನರಲೋಕಮಾನಸೀಮೋ
ಪರಿಗತತುವಾತ ಚರಮುಖಂಡದೊಳನಿಶಂ
ಬೆರಸಿರ್ಪರನಂತಮಿತರ್
ಶಿರಸ್ಸಮಾನರ್ ವಿಚಿತ್ರದೇಹೋತ್ಸೇಧರ್ || ೮೫

ಸಿದ್ಧಾರ್ಥಮೆಂಬ ಪೆಸರಿಂ
ದುದ್ಧರಮಂಗಳಮದಾಯ್ತು ಸರ್ಷಪಮೆಂದಂ
ದಿದ್ಧವಿಶುದ್ಧಗುಣಾಢ್ಯರ್
ಸಿದ್ಧರೆ ಪರಮಾರ್ಥ ಮಂಗಳಾತ್ಮಕರಲ್ತೇ || ೮೬

ಸಿದ್ಧಿ ನಿಮಗೆತ್ತಲೆಂಬೀ
ಶುದ್ಧವಚೋಮಂಗಳಾಪಸಾರಿತ ವಿಘ್ನಂ
ಸಿದ್ಧಿಸುಗುಮಿಷ್ಟಮೆಂದೊಡೆ
ಸಿದ್ಧಗುಣಸ್ತುತಿಯನಂತಸುಖಮಂ ಕುಡದೇ || ೮೭

ಕೃತಕೃತ್ಯಂ ಧನ್ಯ ಸಂ
ಸ್ತುತಫಲವಜ್ಜನ್ಮನುಂ ಕೃತಾರ್ಥನುಮಾದೆಂ
ವಿತತಗುಣ ಸಿದ್ಧಚರಣೋ
ನ್ನತಿಯಂ ಸತ್ಸೇವೆಮಾಳ್ಪದಾವಾವೊಳ್ಪಂ || ೮೮

ಕಂ || ಭೂತಳದೊಳೀ ಸಿರಿಪದಾ
ಶೀತಿ ಸುಧಾವೃಷ್ಟಿ ಸಕಳಜನತಾಸಸ್ಯ
ವ್ರಾತಕ್ಕೆ ತಣಿಯೆ ಕಱೆದು ನಿ
ಜಾತಕದಿಂಫಲಸಮೃದ್ಧಿಯಂ ಮಾೞ್ಕನಿಶಂ || ೮೯

ಸ್ತುತಿಯಿಸುವ ನೆನೆವ ಭಾವಿಪ
ಸತತಂ ಧ್ಯಾನಿಸುವ ವಿಬುಧಸಂತತಿಗೊಲವಿಂ
ಪ್ರತಿಪಕ್ಷರಹಿತ ಸುಖಸಂ
ತತಿಯಂ ದಯೆಗೆಯ್ಗೆ ಸಿದ್ಧಸಂತತಿಯನಿಶಂ || ೯೦

ಮ || ಸ್ರ || ನಿರಪಾಯಾತ್ಮಪ್ರಭಾವಂ ಪರಮಹಿತಕರಂ ಶೋಷಿತಾಶೇಷದೋಷಂ
ದುರಘವ್ರಾತಾಬ್ಜವಕ್ತ್ರಂ ವಿರಹಿಜನಹಿತಂ ಸತ್ಪಥದ್ಯೋತಿ ಶಶ್ವ
ತ್ಪರಿಪೂರ್ಣಂ ನಿಷ್ಕಳಂಕಂ ಬುಧಹೃದಯಗತ…………………………………….
ಧರೆಯೊಳ್ ವರ್ತಿಕ್ಕೆ ನಿಚ್ಚಂ ಕುವಲಯಸುಖದಂ ಶ್ರೀಪದಾಶೀತಿಚಂದ್ರಂ || ೯೧

ಜಿನಸಮಯಸಮುದ್ಧರಣಂ
ಜಿನಮತಸಿದ್ಧಾಂತವಾರ್ಧಿವರ್ಧನ ಚಂದ್ರಂ
ಜಿನರಂತೆ ಭವ್ಯಸೇವ್ಯಂ
ಜಿನಮುನಿಯಾಚಣ್ಣನಮಳಗುಣಗಣನಿಳಯಂ || ೯೨

|| ಶ್ರೀಪದಾಶೀತಿ ಸಮಾಪ್ತಂ ||