ಕಂ || ಶ್ರೀ ಸಂಯಮಸಂಪತ್ತಿ ವಿ
ಭಾಸಿತಸಂಪತ್ತಿ ಸಂತತಂ ಸಹಜಾತ್ಮಾ
ಭ್ಯಾಸಪ್ರವೃತ್ತಿ ನೆಗೞ್ದನಿ
ಳಾಸೇವ್ಯಂ ಪಂಚಪರಮಗುರುಪದವಿನತಂ || ೧

ವ || ಇಂತು ಪೆರ್ಮೆವೆತ್ತ ತಮ್ಮ ನೀಶ್ವರಂ ಗಂಭೀರೋದಾರಮಧುರಾವಿಧುರ ಸುವ್ಯಕ್ತಸೂಕ್ತಿ ಜೀಮೂತಸ್ತೋಮದಿಂ ನಿರ್ಮಳಧರ್ಮಾಮೃತಾಸಾರಮಂ ಧಾರಿಣಿಯೊಳ್ ಕೞೆವು ತ್ತುಮಶೇಷ ಭವ್ಯಸಸ್ಯಸಂಪತ್ತಿಯಂ ನಿತ್ಯಮೊದವಿಸುತ್ತಮೊರ್ಮೆ ಸಕಳಸಂಪದುತ್ತರ ಮೆನಿಸಿದುತ್ತರಮಧುರೆಯೆಂಬ ಪೆಸರಿನೆಸೆವ ನಗರಿಯನೆಯ್ದೆವರ್ಪುದುಂ-

ಕಂ || ಬಿಡದೊಡವಂದು ಬೞಲ್ದಿರ್
ನಡೆಯಲ್ವೇಡೆಂದು ಮೊೞ್ಗಿ ಕಾಲ್ಗೆಱಗಿದವೋಲ್
ಅಡಿಮೊದಲಂ ಸಾರ್ದನೆೞಲ್
ನಡುವಗಲಂ ನಿಗದಿಸಿತ್ತು ಮುನಿಪತಿಗಾಗಳ್ || ೨

ವ || ತದನಂತರಂ-

ಸ್ರ || ಮಾಕಂದಾಶೋಕ ಜಂಬೂ ಪನಸ ಕದಳಿ ಪುನ್ನಾಗ ಸನ್ನಾಳಿಕೇರಾ
ನೀಕವ್ಯಾಭಾಸಿತೋದ್ಯಾನದ ವರಸಹಕಾರದ್ರುಮಾಧಃಸ್ಥ ಸತ್ಪ
ಟ್ಟಾಕಾರ ಸ್ಫಾಟಿಕಗ್ರಾವದೊಳತಿಮುದಿಂದಿರ್ದು ನಿರ್ದುಷ್ಟಬೋಧಾ
ಳೋಕಂ ಮಾರ್ಗಾತಿಚಾರೋಚಿತನಿಯಮನಮಂ ಮಾಡಿದಂ ಯೋಗಿವಂದ್ಯಂ || ೩

ವ || ಅಂತು ನಿರ್ವರ್ತಿತನಿಯಮನಾದ ಯಮಿವರಂ ವಿಹಿತಸ್ವಹಿತಮಾಸೋಪವಾಸನಪ್ಪು ದಱಿಂ ಭವ್ಯಸುಖಕಾರಣಂ ಪಾರಣಾನಿಮಿತ್ತಮತ್ಯಂತಪ್ರತಾಪವರ್ತನಂ ವಿಕರ್ತನಂ ವಿಯನ್ಮಧ್ಯವರ್ತಿಯಾದ ತತ್ಕಾಲದೊಳ್ ಪೊೞಲಂ ಪೊಕ್ಕು ನಿರ್ವಿಕಾರ ಯಾನಾವ ಧಾನವನೂನಾತಿಥ್ಯಂ ರಥ್ಯಾಮಾರ್ಗದೊಳ್ ಬರುತಿರ್ದನನ್ನೆಗಂ-

ಮ || ಪರಿಯುತ್ತವ್ವಳಿಸುತ್ತುಮೆಣ್ದೆಸೆಗಮೊಂದೀದಾವು ಮೆಯ್ವೆರ್ಚೆ ಹೂಂ
ಕರಿಸುತ್ತುಂ ಬಿಡೆ ಕಂಡಕಂಡವರ್ಗಳಂ ಬೆನ್ನಟ್ಟುತುಂ ಕರ್ಣಕಂ
ಬರೆ ಬೆನ್ನೊಳ್ ನಲವಿಂದದಂ ಮಿಗೆ ಮರಲ್ದಾಘ್ರಾಣಿಸುತ್ತುಂ ಪುರೀ
ವರ ವೀಥ್ಯಂತರದೊಳ್ ಮಹಾರಭಸಮಂ ಮಾಡಿತ್ತು ತತ್ಕಾಲದೊಳ್ || ೪

ಚಂ || ಮನೆಮನೆದಪ್ಪದೋಡಿ ಪಡಿಯಂ ಕೆಱುತಿರ್ಪ ಗೃಹಂಗಳಗ್ರಮಂ
ತನತನಗೇಱುಮಿರ್ಪ ದಡಿಯಂ ಪಿಡಿದಬ್ಬರಿಸುತ್ತುಮಿರ್ಪ ತೊ
ಟ್ಟನೆ ಕೆಡೆಯುತ್ತುಮಿರ್ಪ ಬಿಡೆ ಕೂಗಿಡುತಿರ್ಪಳುತಿರ್ಪ ತತ್ಪುರೀ
ಜನದ ಪೊದಱ್ದ ತಲ್ಲಣದ ಮಲ್ಲಣಿ ಬೀದಿಯೊಳಾದುದದ್ಭುತಂ || ೫

ವ || ಆ ಪ್ರಸ್ತಾವದೊಳ್-

ಮ || ತಪದಿಂದಂ ಬಡಪಟ್ಟ ನಿಟ್ಟೊಡಲನಂ ನಿರ್ವಯಗ್ರಂ ತತ್ಪುರೋ
ರುಪದಪ್ರಾಪ್ತನನೆೞ್ದು ಪಾಯ್ದು ಪಸು ಕೂರ್ಗೋಡಿಂದೆ ಕೋದೆತ್ತಿ ಮಂ
ಡಪ ಸೋಪಾನದ ಪಾರ್ಶ್ವದಲ್ಲಿ ಕೆಡವಂತೀಡಾಡಿದತ್ತೆತ್ತಲುಂ
ಗ್ಲಪಿತಾಸ್ಯರ್ ಪರಿದೆಯ್ದಿ ಪೌರರೆಬರ್ ಹಾ ಹಾಯೆನುತ್ತಿರ್ಪಿನಂ || ೬

ಕಂ || ಬಸಿದಸಿಯ ದಸಿಯನನುಕರಿ
ಪ ಸೂಜಿಗೊಂಬುರ್ಚಿ ಸೀೞ್ದ ಬಸುಱಿಂ ನಿಸದಂ
ಬಿಸುನೆತ್ತರ ಪೊನಲುಂ ಕರು
ಳ ಸೋಗೆಯುಂ ಕವಿದುವವನಿಗಾ ಯತಿಪತಿಯಾ || ೭

ಅಂತಸುವಱೆಯಾಗಿಯುಮಾ
ಶಾಂತಾತ್ಮಂ ಜೀವಕರ್ಮಭೇದಂಗಳನ
ತ್ಯಂತಂ ಭಾವಿಸುತಿರ್ದಂ
ಸ್ವಾಂತದೊಳೋರಂತೆ ಮುಚ್ಚಿದಕ್ಷಿಗಳಿಂದಂ || ೮

ವ || ಮತ್ತಂ-

ಕಂ || ಕರಮೆ ಪದುಳಿಕೆಯ ಸೊಂಪಾ
ವರಿಸಿದ ನಿಜಸದಯಹೃದಯ ಸದನದೊಳತ್ಯಾ
ದರದಿಂ ಸಕಳತ್ಯಾಗ
ಸ್ವರೂಪ ಸನ್ಯಸನದೈವಮಂ ಸ್ಥಾಪಿಸಿದಂ || ೯

ವ || ಆ ಸಮಯದೊಳ್-

ಚಂ || ಮಸೆದಸಿಧೇನುವಂ ಮಿಗುವ ನೀಳ್ದ ವಿಷಾಣದ ಧೇನು ಬೀದಿಯೊಳ್
ಮಸಗಿ ತಪೋಧನಂ ಬರುತುಮಿರ್ದೊಡೆ ಪಾಯ್ದಿಱಿದಕ್ಕಟಕ್ಕಟಾ
ಬಿಸುಟುದು ಪಾಪಕರ್ಮನವನಾವನೊ ದುಷ್ಟೆಯನಿಂತು ಬಿಟ್ಟನಾ
ಪಸುವನೆನುತ್ತೆ ಮುತ್ತಿ ಮುಸು ಱಿತ್ತು ಜನಂ ಕೆಡೆದಿರ್ದ ಯೋಗಿಯಂ || ೧೦

ಉ || ಓಡನೆ ಪಾಪಕರ್ಮನಡೆಯೊಡ್ಡಿದಮಾೞ್ಕೆಯೊಳಿರ್ದನಳ್ಳೆಯಂ
ಕೋಡು ಱಿ ನಟ್ಟುವೆಯ್ದೆ ಕರುಳೊಕ್ಕುವು ಜೀವಿಸಲಾಱನಕ್ಕಟಾ
ಷೋಡಶವರ್ಷನೆತ್ತಣನೊ ತಾಪಸನೆಂದೞಲುತ್ತುಮೆಲ್ಲರುಂ
ನೋಡುತುಮಿರ್ದರಂದು ಪರಿತಂದು ಗಳದ್ರುಧಿರಪ್ರವಾಹನಂ || ೧೧

ವ || ಅನ್ನೆಗಂ ಮುಪೇೞ್ದ ಕಾಮರೂಪಭೂಮೀಶ್ವರಂ ಪರಾಕ್ರಮಾಕ್ರಾಂತ ಸರ್ವೋರ್ವ ರಾಚಕ್ರರುಂ ವಿಳಾಸೈಶ್ವರ್ಯವಿಜಿತಶಕ್ರರುಮೆನಿಸಿದ ವಿಶಾಖಭೂತಿ ವಿಶ್ವನಂದಿಗಳನಿಂದಿತ ಜಿನೇಂದ್ರ ದೀಕ್ಷಾಕೌಕ್ಷೇಯಕದಕ್ಷರಾಗಿ ಕರ್ಮಾರಿಬಳಮನೞಲಿಸಲ್ ನಡೆದಿಂ ಬೞಿಯಂ ಅಳೀಕವಚನವಿಷಸ್ಯಂದಿಯಂ ವಿಶಾಖನಂದಿಯಂ ಕ್ರಮ ಕ್ರಮ ಪರಿತ್ಯಕ್ತಪರಿವಾರನಂ ದಃಕೃತಾಚಾರನಂ ದ್ಯೂತಾದಿವ್ಯಸನಾಭಿನಿವೇಶನಂ ರಕ್ತೀಭೂತ ಮುಕ್ತಾದಿ ರತ್ನಕೋಶನಂ ಪೋಗಿ ಬೇಗದಿಂ ಮುತ್ತಿ-

ಚಂ || ಅದಿರದೆ ಕಾದಿ ತನ್ನಗರಕೋಶಮನೋವದೆ ಸೂ ಱೆಗೊಂಡು ಸಿ
ಲ್ಕಿದ ಖಳನಂ ಪ್ರತಾಪಿ ಸೆ ಱೆಯಿಟ್ಟೊಡೆ ಮಾನವಿಹೀನನಾವುಪಾ
ಯದೊಳಮೊಡಲ್ಗೆ ಕೂೞ್ವಡೆದು ಜೀವಿಪುದೊಂದೆ ವಿಧೇಯಮೆಂದೆ ತ
ತ್ಪದನತಿಲೇಕವಾಹಕತೆಯಂ ಪಡೆದಂ ಪಿರಿದಪ್ಪ ಲಲ್ಲೆಯಿಂ || ೧೨

ವ || ಅಂತಾ ದುರಾತ್ಮ ಕಾಮರೂಪಭೂಪಂಗೆ ಲೇಖವಾಹಕನಾಗಿ ಮನ್ನೆಯ ಮಂಡಲಿಕ ಸಾಮಂತಾದಿ ಮೇದಿನೀಪ್ರಭುಗಳ ಸಭೆಗೆ ಲೀಲೆಯಿನೋಲೆಯನಡಕಿ ಸಂಬಳಂಬಡೆದು ಜಗಂ ತೆಗಳೆ ಜೀವಿಸುತ್ತುಮುತ್ತರಮಧುರೆಯ ಧರೇಶ್ವರಂಗಮಂದಿನದಿನಮೋಲೆಯಂ ತಂದಿಕ್ಕಿ ತತ್ಪುರದೊಳಿರ್ದ ವಿಶಾಖನಂದಿ ಪಸಿವಂ ನಂದಿಸಲೆಂದು ಲಂದಣಿಗರ ಮಂದಿರಕ್ಕೆ ಪೋಪವಂ ಮುಂದೆ ಸಂದಣಿಸಿ ನಿಂದ ನೆರವಿಯಂ ಭೋಂಕೆನೆ ಕಂಡು-

ಕಂ || ಸಿರದೊಳಮರ್ದೋಲೆ ಕೌಂಕುಳ
ಕರಪಾಳಿಕೆ ಮೆಟ್ಟಿದೆಕ್ಕಡಂ ತೊಟ್ಟೆಸೆವಾ
ಕರಿಯ ನಡುಕಟ್ಟಿನಂಗಿಗೆ
ವರಸಿದ ತಲ್ಲೇಖವಾಹನುನ್ನತದೇಹಂ || ೧೩

ಚಂ || ಪರಿದತಿವೇಗದಿಂ ಬಗಿದು ಸಂದಣಿಯಂ ಪುಗುತಂದು ಭಾವನಾ
ಪರನನತೀವ ಸಂವೃತನಿಜಾಂತನನಾದಮೆ ಪೂತಮುತ್ತದಂ
ತಿರೆ ಕೆಡೆದಿರ್ದನಂ ಧರೆಗೆ ಕಣ್ಣೆಮೆಯಿಕ್ಕದೆ ನೋಡಿ ತದ್ದಿಗಂ
ಬರನನೆ ವಿಶ್ವನಂದಿಯಿವನೆಂದಱಿದೊಂದಿದನಂದುರಾಗದಿಂ || ೧೪

ವ || ಅಂತು ಮುನ್ನಂ ತನ್ನಂ ಬನ್ನಂಬಡಿಸಿದುನ್ನತತೇಜನಂ ವಿಶ್ವನಂದಿಯುವರಾಜನಂ ವಿಗತವಿಷಾದನಂ ನಿಜದಾಯಾದನನಱಿದು ತನ್ನಿಱಿವ ಪಗೆಯನೆತ್ತಿಱಿದುದು ಎಂಬ ನಾೞ್ನುಡಿ ನನ್ನಿಯಾದುದೆಂದು ತನ್ನೊಳುನ್ನುನನ್ನನೆ ಪೆರ್ಚ್ಚಿ ಬಿಚ್ಚತಮುಚ್ಚರವದಿನಿಂತೆಂದು ಮೂದಲಿಸಿದಂ-

ಚಂ || ಅದಿರದೆ ವೀರವೈರಿಭಟರಂ ಘಟಿಕೋಟಿಗೆ ಪಾಟಿಗಂಡು ನು
ರ್ಗಿದ ಪಿರಿದಪ್ಪ ಕಲ್ಲಕಡುಗಂಬಮನೊಂದೆ ಕರಾಗ್ರದಿಂದಮೆ
ತ್ತಿದ ಕಪಿಕತ್ಥಮಂ ಘನಕಪಿತ್ಥಮನಾ ಬನದೊಳ್ ಕಡಂಗಿ ಕಿ
ೞ್ತದಟದು ಪೋದುದೇ ನಿನಗಮೀ ತೆಱದಿಂ ಕೆಡೆವಂತುಟಾದುದೇ || ೧೫

ಕಂ || ಧರೆ ಪೊಗೞ್ವ ನಿನ್ನಮುನ್ನಿನ
ಪಿರಿದಪ್ಪಾ ಶಕ್ತಿ ಮುಕ್ತಿವೆತ್ತುದೆಯೆಂದಾ
ವುರವಣಿಸಿ ಬಿೞ್ದು ಪುಡಿಯೊಳ್
ಪೊರಳ್ವ ದೌರ್ಬಲ್ಯಮಿಲ್ಲಿ ಪಲ್ಲವಿಸಿದುದೇ || ೧೬

ವ || ಎಂದಿಂತು ಮರ್ಮೋದ್ಘಾಟನಪಾಟನಮಂ ಸೂಚಿಸುವ ನೀಚನ ವಾಚಾವಿಡಂಬನ ಸ್ತಂಬೇರಮಂ ದಿಗಂಬರನ ಸಮರಸೋದಾತ್ತಚಿತ್ತ ಕಾಸಾರಮಂ ದಯಾಮರಾಳಿಕಾ ಸಾರಮಂ ಪೊಕ್ಕು ನಿಕ್ಕುವಂ ಕಲಂಕಿದಾಗಳ್-

ಕಂ || ದಿವಸಾವಸಾನದೊಳ್ ಪೆ
ರ್ಚುವಂತೆ ತಮದೊಡ್ಡು ಪೆರ್ಚಿದತ್ತಾ ಮುನಿಪುಂ
ಗವನಂತರಂಗದಿ ಪಿಂ
ಗೆ ವಲಂ ಕ್ಷಮೆ ಸಾವಲೇಪಮುತ್ಕಟ ಕೋಪಂ || ೧೭

ವ || ಅಂತು ನೋಕರ್ಮೋಪಾದೇಯನಾ ಸಾಧುವಿನ ಚೇತೋವೃತ್ತಿ ವೀತಸಮಮುಂ ಸ್ಥೀತತಮಮುಮಾಗೆ ಮೆಲ್ಲಮೆಲ್ಲನೆ ಮರಳ್ದು ಸುರುಳ್ದು ಕಣ್ಗಳಂ ತೆಱೆದು-

ಚಂ || ಕರಮೆ ತಪಸ್ವಿ ಕಾಯ್ದಡರೆ ನೋಡಿದನಂದು ವಿಶಾಖನಂದಿಯಂ
ನರಕಬಿಲಂಗೊಳ್ ಸುೞುವ ನಾರಕನಂತಿರೆ ಕಣ್ಣಪಾಪೆ ವೈ
ತರಣಿವೊಲಾಗೆ ಬಾಷ್ಪಮಸಿಪತ್ರವನಕ್ಕೆಮೆ ಪಾಟಿಯಾಗೆ ಚೆ
ಚ್ಚರದಿನವಂಗೆ ದುರ್ಗತಿಯೆ ತಾನಿದಿರ್ವಂದುದೊ ನುಂಗಲೆಂಬಿನಂ || ೧೮

ವ || ಆ ಸಮಯದೊಳ್-

ಕಂ || ದ್ವಾದಶತಪದಧಿದೇವತೆ
ಯಾದ ದಯಾಲಕ್ಷ್ಮಿವೋದ ಬೞಿಕೆ ನಿಧಾನಂ
ಪೋದ ಕುೞಿಯಂತೆ ಜೀವಂ
ಪೋದೊಡಲಂತಾದುದಾ ತಪೋಧನನ ಮನಂ || ೧೯

ಎಸೆವ ಜಿನಮುದ್ರೆ ಸಮತಾ
ರಸದಿಂ ಸಲೆ ತೊಯ್ದ ಜಾತರೂಪವಿದೆನೆ ರಂ
ಜಿಸಿ ಬೞಿಕವಾದ ಮುಳಿಸಿಂ
ಕಿಸುಕಟ್ಟಂ ಪೋಲ್ತುದಾ ತಪೋಧನನ ಮನಂ || ೨೦

ಅತಿನಿಶಿತ ಪಶು ವಿಷಾಣಾ
ಹತಿಗಂ ಸೈರಿಸಿ ತಪಸ್ವಿ ಸೈರಿಸನೆ ತದು
ದ್ಧತನುಕ್ತಿಗೆ ಜೀವನ ಪರಿ
ಣತೆಯುಂ ಕರ್ಮದ ವಿಪಾಕಮುಂ ಚಿತ್ರತರಂ || ೨೧

ವ || ಮತ್ತಮಾಗಳ್-

ಕಂ || ಈತನ ನಾನೀ ಭವದೊಳ್
ಘಾತಿಸಲಣಮಾಱದಿರ್ದೊಡಂ ಮಱುಭವದೊಳ್
ಘಾತಿಸುವೆನಕ್ಕೆನುತ್ತಾ
ಪಾತಕನೀಯಂದದಿಂ ನಿದಾನಂಗೆಯ್ದಂ || ೨೨

ಮುನಿ ಮುನಿಯುತಿರ್ದಪಂ ದು
ರ್ಜನಂಗೆ ನಮಗೇಕೆ ವಿಗ್ರಹಸ್ಥಿತಿಯೆಂಬಂ
ತೆನಸುಂ ಹರಣಂಗಳ್ ತ
ತ್ತನುವಂ ಪರಿಹರಿಸಿ ಪೋದುವಂತಾ ಪದದೊಳ್ || ೨೩

ವ || ಅಂತು ನಿದಾನಾವಧಾನಮಾನಸಂ ಹೀನಸತ್ವನಾಗಿ ರಥ್ಯಾರಜಃಪಟಳ ಸಂಸ್ತರಣ ಮರಣ ಮನೆಯ್ದಿ ನಾಕಲೋಕಬದ್ಧಮಸಮೃದ್ಧಾಯುಷ್ಕನಪ್ಪುದ ಱಿಂ ವಿತತಸುಖಾವತಾರದೊಳಾ ಶತಾರದೊಳ್ ವೈಮಾನಿಕ ಸಾಮಾನಿಕಾಮರನಾಗಿ ಜನಿಯಿಸಿ-

ಕಂ || ಪ್ರಾತಿಪದಿಕಂಬೊಲಾತನ
ಧಾತುಕನವಿಭಕ್ತಿ ಭೂಷಿತಂ ನಿಯತಾರ್ಥೋ
ಪೇತಂ ನಿಶ್ಚಿತನಾಮ
ಖ್ಯಾತಂ ತಾಂ ಪ್ರತ್ಯಯಾರ್ಹನಾದಂ ದಿವಿಜಂ || ೨೪

ಅನಿಮಿಷವನಿತಾಜನ ಸ
ಧ್ಘನಕುಚಕಳಶಪ್ರವಾಳನಮರಪ್ರಮದಾ
ಜನನಯನೋತ್ಪಳಸಂಮದ
ವನನಿಧಿವಿಧುವೆನಿಪನನುಪಮಾನವಿಳಾಸಂ || ೨೫

ಚಂ || ಅನವಧಿ ಭೋಗದಾಗರಮನೇಕವಿನೋದದ ಸಾಗರಂ ಮನೋ
ಜನ ಶಿತಸಾಯಕಂ ಸುರವಧೂಹೃದಯಂಗಮನಾಯಕಂ ಕಳಾ
ವನಧಿ ಕಳಾಧರಂ ಕುಮುದಕುಂದವಿಕಾಸಯಶೋಧರಂ ವಿವೇ
ಕನಿಧಿ ನಿರಂತರಂ ಪೊಗೞಿಪಂ ವಿಳಸದ್ಗುಣದಿಂ ಮಹನ್ತರಂ || ೨೬

ವ || ಅಂತು ವಿಶ್ರುತ ವಿಶ್ವನಂದಿಚರಸುರವರಂ ವಿಶಾಖಭೂತಿಚರಸುರವರನೊಳ್ ಪೂರ್ವ ಭವಾನುಬಂಧ ಬಂಧುರಸ್ನೇಹಸಂಬಂಧದಿಂ ಪರಮಮಿತ್ರತ್ವಮಂ ತಳೆದು ತಾನು ಮಾತನುಂ ಪಲತೆಱದ ವಿನೋದಂಗಳಿಂ ನಲಿಯುತ್ತುಮುತ್ಕೃಷ್ಟಪುಣ್ಯರಷ್ಟಾದಶ ಪಾರಾವಾರಪ್ರಮಿತನಿಜಾಯುರವಸಾನಂಬರಮಳುಂಬಪ್ಪ ದಿವ್ಯಸುಖಮನವ್ಯಗ್ರತೆಯಿ ನನುಭವಿಸಿದರನ್ನೆಗಮಿತ್ತಲ್-

ಮ || ಜಗದೊಳ್ ರೂಢಿಗೆ ಸಂದುದೊಂದು ಸಲೆ ಜಂಬೂದ್ವೀಪಮಾ ದ್ವೀಪದೊಳ್
ಮಿಗೆ ವಿಖ್ಯಾತಿಯನಾಂತುದೊಂದು ಭರತಾಖ್ಯಕ್ಷೇತ್ರಮಾ ಕ್ಷೇತ್ರದೊಳ್
ಜಗತೀಮಂಡನಮಾದುದೊಂದು ನೆಗೞ್ದಾರ್ಯಾಖಂಡಮಾ ಖಂಡದೊಳ್
ಪೊಗಳಲ್ಕಾದಮಳುಂಬಮಾಯ್ತು ವಿಷಯಂ ರಮ್ಯಂ ಸುರಮ್ಯಾಹ್ವಯಂ || ೨೭

ವ || ತದ್ವಿಷಯದೊಳ್-

ಕುಂ || ಮೇದಿನಿಗೆಸೆವುದು ನಗರಂ
ಪೌದನಮುದ್ಯಜ್ಜಿನೇಂದ್ರಮಂದಿರ ಭೇರೀ
ವಾದನಮಾಹ್ಲಾದನ ಸಂ
ಪಾದನಂತರ ನಿಖಿಳವಸ್ತುವಿಸ್ತೀರ್ಣತರಂ || ೨೮

ಪೃಥ್ವೀ || ಅಜೇಯಭುಜವಿಕ್ರಮಂ ವಿದಿತರಾಜನೀತಿಕ್ರಮಂ
ಗಜೇಂದ್ರಕರಕಲ್ಪ ಬಾಹುಯುಗಳಂ ಜಗನ್ಮಂಗಳಂ
ನಿಜೋಜ್ಜ್ವಳಯಶಸ್ಸುಧಾಧವಳಿತಾಖಿಳಾಶಾತಟಂ
ಪ್ರಜಾಪತಿ ಮಹಾಮಹೀಪತಿ ಪುರಕ್ಕದರ್ಕ್ಕೀಶ್ವರಂ || ೨೯

ಚಂ || ಅಗಣಿತಶೋಭೆಯಂ ಸೊಬಗನಾಂತ ಜಯಾವತಿಯೆಂಬ ಕಾಂತೆಯುಂ
ಮೃಗಧರಕಾಂತಿಯಂ ಕಳೆಯನಾಂತ ಮೃಗಾವತಿಯೆಂಬ ಕಾಂತೆಯುಂ
ಸೊಗಯಿಪ ಸದ್ಗುಣಂಗಳ ಗಣಂಗಳಿವರ್ಗೊಳವೆಂಬ ಮೈಯ್ಮೆಯಿಂ
ನೆಗೞ್ದ ತದುರ್ವರಾಪತಿಗೆ ನಲ್ಮೆಯ ರಾಣಿಯರಾದರೀರ್ವರುಂ || ೩೦

ವ || ಅಂತು ಸಂತತಂ ರಂಜಿತ ಕುಂಜರೇಂದ್ರಕ್ಕೆ ಮದಲೇಖೆಗಳೆಂಬಂತೆಯುಂ ಶರತ್ಸಮಯ ಸಮುದಿತ ತಾರಾಪತಿಗೆ ರಾಕಾರಾತ್ರಿಗಳೆಂಬಂತೆಯುಂ ವಿಶಾಳಶೈಲೇಂದ್ರಕ್ಕುಪತ್ಯ ಕಾಧಿತ್ಯಕಾವನಿಯುಗಂಗಳೆಂಬಂತೆಯುಂ ನವೋದಯ ದಿವಸೇಂದ್ರಂಗೆ ದೀಧತಿ ದಿನಲಕ್ಷ್ಮಿ ಗಳೆಂಬಂತೆಯುಂ ಆ ಕ್ಷೋಣಿಪತಿಚೂಡಾಮಣಿಗಾ ರಾಣಿಯರು ಪ್ರಾಣಪ್ರಿಯೆಯರಾಗಿ ರಾಗದಿಂ ಸಮೀಹಿತವಿಷಯಭೋಗೋಪಭೋಗಾನುಭೂತಿಯಿಂ ಖ್ಯಾತಿವಡೆದು ವರ್ತಿಸುತ್ತುಮಿರೆಯಿರೆ-

ಕಂ || ಮುನ್ನಂ ಪೇೞ್ದ ಶತಾರದ
ಸನ್ನುತ ಗೀರ್ವಾಣರಿರ್ವರುಂ ದೋರ್ವಳಸಂ
ಪನ್ನಂಗೆ ಪೌದನೇಶಂ
ಗುನ್ನತವಿಭವಂಗೆ ಸಂದ ನಂದನರಾದರ್ || ೩೧

ವ || ಅಂತಾ ವಿಶಾಖಭೂತಿಚರಸಾಮಾನಿಕಾಮರಂ ಬಂದು ಜಯವತೀದೇವಿಗೆ ವಿಜಯನೆಂಬ ಪೆಸರಿನೆಸೆವ ಬಲದೇವನಾದಂ ಮತ್ತಮಾ ವಿಶ್ವನಂದಿಚರಸುರವರಂ ದಿವ ದಿನವತರಿಸಿ ಮೃಗಾವತೀದೇವಿಗೆ ತ್ರಿಪಿಷ್ಠನೆಂಬ ನಾಮದ ಮೊದಲ ವಾಸುದೇವನಾದ ನಂತಾ ಬಲಭದ್ರ ಜನಾರ್ದನರಿರ್ವರುಂ ಕ್ಷೀರಪಾರಾವಾರದೊಳ್ ಬಳೆವ ಪ್ರಾಳೇಯಕರ ಕಾಂತ ನೀಳಮಣಿಗಳಂಕುರಂಗಳಂತೆ ತನ್ನೃಪಾಳತಿಳಕನಿಳಯದೊಳ್ ಬಳೆಯೆವಳೆಯೆ-

ಕಂ || ಆಶಯಕುಶೇಶವ್ಯಾ
ಕೋಶಮನಾಗಿಸಿತು ಜನಕೆ ಮಿಗೆ ಧೂಳೀ ಕೇ
ಳೀಶೋಭಿತ ತಾಲಧ್ವಜ
ಕೇಶವಶೈಶವಮಶೇಷ ಮುಗ್ಧಾಚರಣ || ೩೨

ತಾಳಧ್ವಜ ಗರುಡಧ್ವಜ
ಬಾಳಕ್ರೀಡಾವಿಡಂಬನಂ ಜನತಾ ಸೌ
ಖ್ಯಾಳಂಬನಮಾದುದು ಮು
ಗ್ಧಾಳಾಪಕಳಾಪ ಚಾಪಳೀಕೃತ ನಿಳಯಂ || ೩೩

ವ || ಅಂತಶೇಷ ಮಹಿಮಾಮಾಂಗಲ್ಯಮಾದ ಕಲ್ಯಾಣಾಂಗರ ಬಾಲ್ಯಂ ಮೆಲ್ಲನೋಸರಿಸೆ-

ಕಂ || ಇವರಱಿಯದ ಕಳೆ ಭಾವಿಸೆ
ಭುವನಾಂತರದೊಳ್ ಖಪುಷ್ಪ ವಂಧ್ಯಾಗ್ರತನೂ
ಭವಂ ಖರವಿಷಾಣನಿಭಮೆಂ
ದವರಂ ಕವಿನಿವಹಮವಿರತಂ ಕೀರ್ತಿಸುಗುಂ || ೩೪

ಚಂ || ಜನಕನುರಾಗಮಂ ಪಡೆವ ಚಾಗದ ಮೆಯ್ಸಿರಿ ಭೋಗದೇೞ್ಗೆ ಪೆಂ
ಪಿನ ಪಸರಂ ಪರಾಕ್ರಮದಳುರ್ಕೆ ವಿಳಾಸದ ವರ್ಧನಂ ಪ್ರಸಾ
ಧನದ ನಯಂ ವಿವೇಕದೊದವೊಳ್ಪಿನ ಪೆರ್ವೆಳಸಾ ಬಳಂಗಮಾ
ವನರುಹಲೋಚನಂಗಮೆಸೆಗುಂ ನಿಸದಂ ವಸುಧಾತಳಾಗ್ರದೊಳ್ || ೩೫

ಉ || ಜೀವಮದೊಂದೆ ದೇಹವೆರಡಿಂತಿವರ್ಗೆಂಬಭಿಶಂಕೆಯಂ ಧರಿ
ತ್ರೀವಳಯಕ್ಕೆ ಮಾಡುವುದು ತಮ್ಮೊಳಿವಂದಿರ ನಲ್ಮೆ ಬಲ್ಮೆ ಶೋ
ಭಾವಹಮೂರ್ತಿಕೀರ್ತಿ ವಿನಯಂ ಸುನಯಂ ಬಲವೃದ್ಧಿ ಬುದ್ಧಿಯೆಂ
ಬೀವವಿಧೋಲ್ಲಸದ್ಗುಣಗಣಂ ತೊದಳೇಂ ಸದೃಶಸ್ವರೂಪದಿಂ || ೩೬

ಚಂ || ವರಭರತತ್ರಿಖಂಡಪತಿಯಾದಪನೀ ವಿಜಯಾನುಜಾತನೆಂ
ದುರುಮಹಿಮಂ ವಸಂತವೆಸರಿಂದೆಸೆದಿರ್ಪ ನಿಮಿತ್ತವೇದಿಯಾ
ದರದೊಳೆ ತತ್ಪ್ರಜಾಪತಿ ಧರಾಪತಿಗೊರ್ಮೆ ಸಭಾಂತರಾಳದೊಳ್
ಬರೆದು ನಿಜಪ್ರತಿಜ್ಞೆಯಪದಂಗಳ ಪತ್ರಮನಿತ್ತನುತ್ತಮಂ || ೩೭

ವ || ಮತ್ತೊಂದು ದೆವಸಮಾ ಪೌದನಪುರವರಾಧೀಶ್ವರಂ ವಿಜಿತಾಶೇಷ ವಿದ್ವಿಷ್ಟ ಮಂಡಲೇಶ್ವರಂ ಸುರೇಶ್ವರಸಭಾಸದನದಂತೆ ಸುಧರ್ಮಾಖ್ಯಾನಮುಂ ಅನೇಕ ವಿಬುಧ ವಿಭ್ರಾಜಿತಮುಂ ನಭಸ್ಸದನದಂತೆ ಸಕಳರಾಜರಾಜಿತಮುಂ ಆತತಜ್ಯೋತಿರ್ಮಂಡಲ ಮಂಡಿತಮುಮೆನಿಸಿದಾಸ್ಥಾನಭವನದೊಳ್ ನವೀನ ಯೌವನವನಸ್ಥಳಿಗಳೆನಿಸಿದ ವಿಳಾಸವತಿಯರ ಬಳಗಂ ಬಳಸೆ ಬಳವದ್ಭಳಭದ್ರಜಳಜಾಕ್ಷಸಮನ್ವಿತನತುಳ ಶೃಂಗಾರ ಸಾರೋದಯನಾದರದಿಂ ಸಂಸಾರಸಾರಸುಖಪ್ರಭೂತ ಶೋಭೆಗಳ ಘಟ್ಟಿಯೆನಿಸಿ ದಿಟ್ಟಿಗೆವಂದೊಡ್ಡೋಲಗದೊಳನೇಕ ವಿನೋದಾಧೀನಮಾನಸಂ ಮಾನುಷೇಂದ್ರ ನಿರ್ಪುದು ಮಾಪದದೊಳೊರ್ವಂ ಲಬ್ಧಾವಸರನಪ್ಪ ದೇಶಸಚಿವನಿಂತೆಂದು ಬಿನ್ನಪಂಗೆಯ್ದಂ-

ಉ || ಕೇಸುರಿಗಳ್ಗೆ ಪಾಸಟಿಗಳಾದ ಘನಯಕ ಕೇಸರಂಗಳಿಂ
ತ್ರಾಸಕರಂಗಳಾದ ನಖ ದಂಷ್ಟ್ರೆಗಳಿಂ ವಿವೃತಾಸ್ಯದಿಂದ ಮಹಾ
ಕೇಸರಿಯೊಂದು ಬಂದು ಜವನೀ ನೆವದಿಂದಮೆ ಬಂದನೆಂಬವೋಲ್
ದೇಶವನಾವಗಂ ಕೊಲುಲುಮಿರ್ದಪುದಿಂತುಟು ದೇವ ವಿಪ್ಲವಂ || ೩೮

ವ || ಎಂಬುದುಂ ದುರ್ನಿವಾರದಾರುಣ ಕ್ರೂರಸತ್ವಪ್ರಜನಿತಪ್ರಜೋಪದ್ರವೋದ್ರೇಕಮನಾ ಕರ್ಣಿಸಿ ಮೊದಲೊಳ್ ಸದಯ ಹೃದಯನಾಗಿ ತದನಂತರಂ ತದವನಿಪಾಳಂ ನಿಜಭುಜಾ ಪರಿಫಪಾಳನೀಯವಿಷಯಂ ಪಾೞಪ್ಪುದರ್ಕೆ ಸೈರಿಸದೆ ಪಂಚಾಸ್ಯಪಂಚತಾಪ್ರ ಪಂಚಹೇತು ಭೂತ ಭೂರಿತರ ರೋಷಾವೇಶಮನಪ್ಪುಕೆಯ್ದು-

ಉ || ಜಾನಪದಾತಿವಿಪ್ಲವ ವಿಧಾಯಿಯನೋವದೆ ಪೋಗಿ ಪೊಯ್ದು ಪಂ
ಚಾನನಮಂ ಯಮಾನನದೊಳಾದಮೆ ತೂಂತುವೆನೆಂದು ಭೂಭುಜಂ
ಭೂನುತನಾಗಳುಜ್ಜುಗಿಸೆ ತದ್ವಿಜಯಾವರಜಂ ಪ್ರತಾಪಪಂ
ಚಾನನನಿಂತು ಬಿನ್ನವಿಸಿದಂ ಮುಕುಳೀಕೃತಪಾಣಿಪಂಕಜಂ || ೩೯

ಕಂ || ಕೇಸರಿ ನಿಮಗೇಸರಿ ದೇ
ವೀ ಸಡಗರಮಾದುದುಚಿತಮಾಗಿರೆ ಬೆಸಸಿಂ
ಕೇಸರಿಯಂ ಕಡೆಪಟ್ಟಾ
ವೇಸರಿಯಂ ಕೆಡಪುವಂತೆ ಕೆಡಪದೆ ಮಾಣಿಂ || ೪೦