ವ || ಎಂಬುದುಂ ನಿಜನಿಕಟಸಮುಚಿತಾಸನಾಸೀನರಪ್ಪ ನಂದನರ ಮುಖಾರವಿಂದಮಂ ನೋಡಿ-

ಉ || ಅಪ್ರತಿಮಪ್ರತಾಪನಿಧಿಗಳ್ ವಿನಯಾಂಬುಧಿಗಳ್ ಮದಾತ್ಮಜರ್
ಕ್ಷಿಪ್ರಮೆ ಸಿದ್ಧಿಸಲ್ ನೆಱೆವರೀಪ್ಸಿತಕಾರ್ಯಮನೆಂದು ತನ್ಮೃಗೌ
ಘಪ್ರಭುವಂ ಪ್ರಮರ್ದಿಸಲಿಳಾರಮಣಂ ಬೆಸನಿತ್ತನೀಯೆ ಲೋ
ಕಪ್ರಿಯರಾ ಕುಮಾರರವನೀಪತಿಗಾನತರಾಗಿ ಬೇಗದಿಂ || ೪೧

ವ || ರಾಜದ್ರಾಜಭವನದಿಂ ಪೊಱಮಟ್ಟು ಶೋಭಾಸನಾಥಮಪ್ಪ ಪುರವೀಥಿಯೊಳ್ ಪೋಪಾಗಳ್-

ಮ || ಮರುಳಾದಂ ಜನಪಂ ಸಮಸ್ತಹನನವ್ಯಾಸಂಗಮಂ ಸಿಂಗಮ
ನ್ನಿರಿಯಿಂ ನೀಮದನೆಂದು ಮಕ್ಕಳನಿವಂ ತಾನಟ್ಟಿದಂ ಮಂತ್ರಿಮು
ಖ್ಯರುಮಯ್ಯೋ ವಿನಿವಾರಿಸಲ್ಕಱಿದರಿಲ್ಲೆಂತಕ್ಕುಮೋಯೆಂದು ಚಿ
ಚ್ಚರಮೆಯ್ತಂದು ನಿರೀಕ್ಷಿಸಿತ್ತವರ್ಗಳಂ ತತ್ಪೌರನಾರೀಜನಂ || ೪೨

ವ || ಅಂತು ಮುಗ್ಧಸ್ನಿಗ್ಧ ವನಿತಾಜನ ಚಿತ್ತಾಂದೋಳಮಂ ಮಾಡುತ್ತುಂ ಪೋಗಿ ನಾಗಾರೀ ಖಂಡಿತಮಂ ಮಂಡಲಮಂ ಪೊಕ್ಕು-

ಉ || ನಿರ್ಮೃಗಮಾಯ್ತರಣ್ಯತತಿ ನಿರ್ನ್ನೆರಮಾಯ್ತು ಪುರೌಘಮೆತ್ತಲುಂ
ದುರ್ಮೃತಿಬೆತ್ತು ಬಿೞ್ದ ತನುಭೃತ್ಕುಣಪಾವಳಿ ಕಾಣಲಾಯ್ತು ದು
ಷ್ಕರ್ಮಮನೆಂತುಪಾರ್ಜಿಸಿತೊ ದೇಶಮಶೇಷಮೆನುತ್ತೆ ರಾಜಪು
ತ್ರರ್ಮೃಗರಾಜನಿರ್ದವಿಷಮಮಸ್ಥಳಮಂ ಬಳವಂತೆರೆಯ್ದಿದರ್ || ೪೩

ವ || ಆ ಪ್ರಸ್ತಾವದೊಳ್-

ಚಂ || ಪಟುಪಟಹಂಗಳುಚ್ಚರವಮುಂ ಭಟಪೇಟಕಮಾರೆ ಪೊಣ್ಮುವು
ದ್ಭಟರವಮುಂ ನಿಕುಂಜಗತ ಕುಂಜರವೈರಿಗೆ ಮಾಡೆ ಕೋಪದು
ತ್ಕಟತೆಯನಾಗಸಕ್ಕೆ ಮಿಗೆ ಲಂಘಿಸಿ ಗರ್ಜಿಸೆ ತಾರಕಾಪಥಂ
ಸ್ಫುಟಿಯಿಸಿದತ್ತೊ ಪೇೞೆನಿಸಿ ಮಾರ್ದನಿ ನೀಳ್ದುದು ದಿಕ್ತಟಂಗಳೊಳ್ || ೪೪

ವ || ಆಗಳಾ ಗರ್ಜನವಜ್ರಪಾತದಿಂ ನೆರೆದೊಡವಂದ ಬಿರುದಿನ ಬೀರರೆರ್ದೆವೆಟ್ಟುಗಳ್ ತೊಟ್ಟನೆ ಬಿರಿಯೆ ಸುರುಳ್ದುರುಳ್ದುತೆರಳ್ದು ಪರೆದೋಡೆ ವಿಜಯನೊರ್ವನೆ ವಿಜಯಾರ್ಧದಂತೆ ಗೋವರ್ಧನನಕೆಲದೊಳಚಳಿತನಾಗಿ ನಿಂದುನೋಡಿ-

ಉ || ಮಾರಿಯ ಮೂರಿ ಮೇಲೆಱಗುವಂದದೆ ಭೋಂಕನೆ ಮೇಲೆವಾಯ್ದ ಕಂ
ಠೀರವಮಂ ಮಹಾರವಮನಾಕೃತಿ ಭೈರವಮಂ ಸಮಗ್ರಮ
ದ್ಗೌರವಮಂ ನಿಜಾವಯವಚಾರವಮಂ ಕಡಿಕೆಯ್ದು ಕೆಯ್ದುವಂ
ಪಾರದೆ ಕೆಯ್ಯೊಪ್ಪಳಿಸಿ ಘಾತಿಸಿದಂ ವಿಜಯಪ್ರಿಯಾನುಜಂ || ೪೫

ವ || ಅಂತು ಪಂಚಾಸ್ಯನಂ ಪಂಚತ್ವಮೆಯ್ದಿಸಿ ಜನಪದಮನನುಪದ್ರವಪದಮಂ ಮಾಡಿ
ನಾಡೆಯುಂ ಪ್ರಜಾಪ್ರಶಂಸಾಶೀರ್ವಚನನಿಚಯಂಗಳನಂಗೀಕರಿಸಿ ಮರೞ್ದು ಬರುತ್ತುಂ-

ಉ || ಕೋಟೆಕನಾಮಧೇಯ ಶಿಲೆ ಮುಂದಿರೆ ಭೋಂಕೆನೆ ಕಂಡು ಮಿಂಡರು
ತ್ಪಾಟಿಪೆಮೆಂದು ಪುಣ್ದಖಿಳಶಕ್ತಿಯಿನೆತ್ತುತುಮಳ್ಳೆವೊಯ್ಯೆ ನಿಃ
ಪಾಟವರಾಗಿ ಪಿಂಗೆ ದರಹಾಸವಿಳಾಸಮುಖಂ ಮುಕುಂದನು
ತ್ಪಾಟಿಸಿ ಲೀಲೆಯಿಂ ಪೊಗೞೆ ವಿಶ್ವಜನಂ ತಿ ಱಿಕಲ್ಲನಾಡಿದಂ || ೪೬

ವ || ಅಂತು ಕೋಟಿಭಟಪೇಟಕಮುಮುತ್ಪಾಟೆಸಲಾಱದೆ ಕೋಟಲೆಗೊಂಡು ಪೂಣ್ದ ಕೋಟೆಕ ಶಿಲೆಯನಯತ್ನದಿನುತ್ಪಾಟೆಸಿದ ತನ್ನ ಬಾಹುಪಾಟವಮಂ ನೋಟಕ ಜನಂಗಳ್ ಕೋಟಿ ಪ್ರಕಾರದಿನುದ್ಘಾಟಿಸಿ ಪೊರೞ್ದು ನಾಟಕಂ ನಲಿಯೆ ತಜ್ಜನಾರ್ದನಂ ಲಜ್ಜಾನತಾನನನಾಗಿ ಬಂದು ಪುರಂದರಪುರಪ್ರತಿಮಮೆನಿಪ ನಿಜಪುರಮನುರುಮುದದಿಂ ಪುಗುವಾಗಳ್-

ಚಂ || ಮೃಗರಿಪುವಂ ಮೃಗಾವತಿಯ ನಂದನನೊರ್ವನೆ ನಿಂದು ಕೊಂದು ನಾ
ಡಿಗರಮನಕ್ಕೆ ಮಿಕ್ಕ ಪರಿತೋಷಮನಿತ್ತು ಬರುತ್ತುಮೞ್ತಿಯಿಂ
ನೆಗಪಿದನೊಂದೆ ಹಸ್ತದೊಳೆ ಕೋಟೆಕನಾಮದ ಶೈಳಮಂ ಗಡೆಂ
ದಗಣಿತ ರಾಗದಿಂ ನೆರೆದು ನೋಡಿದುದಚ್ಚುತನಂ ಪುರೀಜನಂ || ೪೭

ವ || ಅಂತು ಮುನ್ನಂ ತಮ್ಮ ಪೋಗಿಂಗುಮ್ಮಳಿಸಿದ ಪುರಜನಂಗಳುಮ್ಮಳಮನೊರ್ಮೊದ ಲೊಳೆ ನಿರ್ಮೂಳಿಸಿ ಪರಮಪ್ರಮೋದಮನುತ್ಪಾದಿಸುತ್ತುಂ ಮಹಾವಿಭವದಿಂ ಮಹೀಪತಿಮಂದಿರಮಂ ಪೊಕ್ಕು-

ಕಂ || ವಿಜಯಯುತಂ ವಿಜಯಯುತಂ
ವಿಜಯಾನುಜನಜಡವಿಕ್ರಮಂ ಪಿತೃಪದಪಂ
ಕಜಕೆಱಗೆ ತೆಗೆದು ತರ್ಕ್ಕೈ
ಸಿ ಜನೇಶಂ ಪರಸಿ ಹರ್ಷಮಂ ಮಿಗೆ ತಳೆದಂ || ೪೮

ಅಳವಿಗೞಿದೊಗೆದ ಪುಳಕಾ
ವಳಿ ಪರಿರಂಭಣಕೆ ಪಡೆಯೆ ಶಿಥಿಲತೆಯಂ ಭೂ
ತಳಪತಿ ಸಮುಚಿತ ಪೀಠ
ಸ್ಥಳಿಯೊಳ್ ಕುಳ್ಳಿರಿಸಿದಂ ನಿಜೋರ್ಜಿತಸುತರಂ || ೪೯

ವ || ಆಗಳ್-

ಕಂ || ವಿಜಯಂ ನಿಜಾನುಜಾತನ
ಭುಜಬಳದುನ್ನತಿಯನುಳ್ಳುದಂ ಕಥಿಯಿಸೆಯುಂ
ಸುಜನನುತಂ ನತವದನಾಂ
ಬುಜನಾದನಿದೇನುದಾತ್ತನೋ ವನಜಾಕ್ಷಂ || ೫೦

ವ || ಮತ್ತೊಮೊಂದು ದೆವಸಮಾ ಸುರಮ್ಯಾಧೀಶ್ವರಂ ಸಾಶ್ಚರ್ಯಸೌಂದರ್ಯ ನಿಧಾನಜನ್ಮ ಭೂಮಿಗಳೆನಿಸಿದ ಕಾಮಿನಿಯರ ನಿಕಾಮಕೋಮಳಾವಯವಾಗಣ್ಯಲಾವಣ್ಯಮೆಂಬ ಪುಣ್ಯಜಳಂಗಳಿಂದಮುಂ ಮದನಮಂತ್ರದೇವತೆಯರೆನಿಸಿದ ವಾಮಲೋಚನೆಯರ ವಿಶಾಳಲೋಳಲೋಚನಂಗಳೆಂಬ ಲುಠತ್ಪಾಠೀನಂಗಳಿಂದಮುಂ ಮನೋಜರಾಜ ಪ್ರಾಜ್ಯ ರಾಜ್ಯಗೋಮಿನಿಯರೆನಿಸಿದ ವಿಳಾಸವತಿಯರ ವಿಳಾಸಾವಾಸದರಹಾಸಂಗಳೆಂಬ ಡಿಂಡೀರಪಿಂಡಂಗಳಿಂದಮುಂ ರತಿಜೀವಿತೇಶ್ವರನ ವಿದ್ಯಾದೇವತೆಯರೆನಿಸಿದ ಶಿರೀಷದಾಮ ಕೋಮಳ ಬಾಹುಲತಾಯುಗಳೆಯರ ಬಾಹುವಲ್ಲರಿಗಳೆಂಬ ಕಲ್ಲೋಳಮಾಳೆಗಳಿಂದ ಮುಂ ಕಂದರ್ಪನ ಮಣಿದರ್ಪಣಕಲ್ಪೆಯರೆನಿಸಿದ ವನರುಹವದನೆಯರ ನಗೆಮೊಗಂಗಳೆಂಬ ವಿಕಚವಾರಿಜಂಗಳಿಂದಮುಂ ಚಿತ್ತಜನ ವಿಜಯವೈಜಯಂತಿಗಳೆನಿಸಿದ ಚಕ್ರವಾಕನಿ ಬಿಡಸ್ತನೆಯರ ವೃತ್ತೋತ್ತುಂಗ ವಕ್ಷೋಜಂಗಳೆಂಬ ರಥಾಂಗಂಗಳಿಂದಮುಂ ವಿಷಮಾ ಯುಧನ ಕೂರ್ಗಣೆಗಳೆನಿಸಿದ ನಿತಂಬವತಿಯರ ನಿತಂಬಬಿಂಬಂಗಳೆಂಬ ವಿಶಾಳಕೂಳಂಗ ಳಿಂದಮುಂ ಕುಸುಮಕೋದಂಡನ ಮಂಡಲಾಗ್ರಲತೆಗಳೆನಿಸಿದ ಶೃಂಗಾರವತಿಯರ ರಮಣೀಯಮಣಿಭೂಷಣ ಕ್ವಣನಂಗಳೆಂಬ ಮರಾಳಿಕಾಕಳಕ್ವಣನಂಗಳಿಂದಮುಂ ಮನ್ಮಥನ ಮನೋರಥಸಿದ್ಧಿಗಳೆನಿಸಿದಳಿನೀಳಕುಟಿಲಕುಂತಳೆಯರ ನಿತಾಂತಕಾಂತಕುಂಡಳಂಗಳೆಂಬ ಮದವನ್ಮಧುಕರನಿಕರಂಗಳಿಂದಮುಮೆಸೆದು ಕಣ್ಗೆ ಕರಂ ಸೊಗಯಿಪಭಿನವಸ ರೋವರಮೆಂಬಂತಿರ್ದ ನಿಜಸಭಾಸದನದ ನಡುವೆ ಬೆಡಂಗುವಡೆದ ವಿವಿಧಮಣಿಖಚಿತ ವಿಷ್ಟರಾಂಬುಜದ ಮೇಲೆ ಲೀಲೆಯಿಂದುಪವಿಷ್ಟನಾಗಿ ನಿಜವಿರಾಜಮಾನ ರಾಜ ಹಂಸತ್ವಮಂ ಪ್ರಕಟಿಸುತ್ತುಮಿಂತು-

ಕಂ || ಗೀತದ ವಾದ್ಯದ ರೀತಿಯ
ಚಾತುರ್ಯಂ ಮೂರ್ತಿವೆತ್ತುದೆನಿಸಿದ ವಿಬುಧ
ವ್ರಾತದೆ ಮಂತ್ರಿ ಪುರೋಹಿತ
ಜಾತದೆ ಪರಿವೇಷ್ಟಿತಂ ನೃಪಂ ರಂಜಿಸಿದಂ || ೫೧

ವ || ಆಸಮಯದೊಳ್-

ಕಂ || ಕರಧೃತವೇತ್ರಂ ಸಮ್ಮುಖ
ನಿರೂಪಿತಾತ್ಮೀಯಗಾತ್ರನನಿಮಿಷನೇತ್ರಂ
ಸ್ಫುರಿತಾಧರಪತ್ರಂ ಪಳಿ
ತರಾಜಿಪಾತ್ರಂ ದಲೆನಿಪ ಪಡಿಯಱನೊರ್ವಂ || ೫೨

ಬಂದು ಪೊಡವಟ್ಟು ದೇವ ಸ
ಮಂ ದೇವರ್ಕಳೊಳೆನಿಪ್ಪನೊರ್ವಂ ಮುದದಿಂ
ಬಂದಂಬರದಿಂ ಭರದಿಂ
ನಿಂದಿರ್ದಪನೀಕ್ಷಣಾರ್ಥಿ ಬಾಗಿಲೊಳೀಗಳ್ || ೫೩

ವ || ಎಂದು ಬಿನ್ನಪಂ ಗೆಯ್ಯೆ-

ಕಂ || ಆ ನವನಂ ಮಾನವನಂ
ನೀನೀಗಳೆ ಪುಗಿಸು ಮತ್ಸಭಾಭವನಮನೆಂ
ದಾ ನರಪತಿ ಬೆಸಸುವುದುಂ
ತಾನವನಂ ಪುಗಿಸಿದಂ ಪ್ರತೀಹಾರವರಂ || ೫೪

ಪುಗುವವನಂ ಪರಿದಾಗಳೆ
ಬಿಗಿಯಪ್ಪಿದುವಖಿಳ ಸಭೆಯ ನಯನದ್ಯುತಿಮಾ
ಳೆಗಳಳಿಮಾಳೆಗಳಂದದೆ
ಸೊಗಯಿಪ ಪರಿಮಳದ ಪೊಚ್ಚ ಪೊಸಬಾಸಿಗಮಂ || ೫೫

ವ || ಅಂತು ವಿಸ್ಮಯಸ್ವೀಯಾಮೇಯ ಕಾಯವಿಳಾಸನಾ ಸಭಾಂತರಾಳಮಂ ಪೊಕ್ಕನೇಕ ರಾಜಲೋಕಾನೀಕ ಮಣಿಮಕುಟ ಮರೀಚಿಮಂಜರೀಪುಂಜ ರಂಜಿತ ಪದಪಯೋಜನಂ ಪ್ರಜಾಪತಿಮಹಾರಾಜನಂ ಕಂಡು ವಿನಯ ವಿನಮಿತೋತ್ತಮಾಂಗಂ ಪ್ರಭುನಿರೂಪಿತ ಸಮೀಪಸ್ಥಿತ ಸಮುಚಿತಾಸನದೊಳ್ ಕುಳ್ಳಿರ್ಪುದುಂ-

ಉ || ಸ್ಪಂದನಮಿಲ್ಲದಕ್ಷಿಗಳಿನೀಕ್ಷಿಸುತಿರ್ದುದು ಟಕ್ಕಿನುಂಡೆಯಂ
ತಿಂದವೊಲಾಗಳೊಂದಿನಿತು ಪೊೞ್ತಿನೊಳಾ ಸಭೆ ಭೂಭುಜಂ ಬೞಿ
ಕ್ಕೊಂದಿದ ರಾಗದಿಂದಮವನಂ ಬೆಸಗೊಂಡನುದಗ್ರದಂತ ಭಾ
ವೃಂದದ ಕೂಡೆ ನಾಡೆ ಕುಣಿದಾಡೆ ಸರಸ್ವತಿ ವಕ್ತ್ರರಂಗದೊಳ್ || ೫೬

ಶಾ || ನೀನಾರ್ಗೆತ್ತಣಿನಿತ್ತವಂದೆಯಭಿಧಾನಂ ತಾನದೇಂ ಕಾರ್ಯಮೇ
ನೀ ನಿನ್ನಾಗಮನಕ್ಕೆ ಪೇೞೆನೆ ಕರಂ ಸಂಪ್ರೀತಿಯಿಂ ನೂತನಂ
ತಾನಿಂತೆಂದು ನಿವೇದಿಸಲ್ ತೊಡಗಿದಂ ಪ್ರಸ್ಪಷ್ಟಮೃಷ್ಟಾಕ್ಷರ
ಧ್ವಾನಂ ಸೂನೃತವಾದಿ ಕಾರ್ಯಘಟನಾಚಾತುರ್ಯ ಚಕ್ರೇಶ್ವರಂ || ೫೭

ಮ || ಸ್ಥಿರಸಿದ್ಧಾಯತನಾದಿಕೂಟ ನವಕಂ ಶ್ರೇಣಿದ್ವಯಾಂಕಂ ದಶೋ
ತ್ತರ ವಿಖ್ಯಾತಶತೋಲ್ಲಸತ್ಪುರವರಂ ವಿದ್ಯಾಧರೋತ್ಪತ್ತಿಮಂ
ದಿರಮಂಭೋಧಿ ತರಂಗಸಂಗಮಕರಂ ಧಾವಲ್ಯಸಂಪತ್ತಿ ಸುಂ
ದರಮೊಂದುಂಟ ಪರಾರ್ಧ್ಯಮಿಲ್ಲಿ ವಿಜಯಾರ್ಧಂ ಭೂಮಿಭೃದ್ವಲ್ಲಭಂ || ೫೮

ಕಂ || ಅನತಿಶಯ ವಿಭವಕೃತ ನಿಖಿ
ಳ ನಗೇಂದ್ರಾನೀಕ ಸತತವಿತತ ಸ್ಪರ್ಧಂ
ಜಿನಗೃಹಮಹಿತ ನಿಜೋರ್ಧಂ
ವಿನೂತಿವೆತ್ತುದು ಧರಿತ್ರಿಯೊಳ್ ವಿಜಯಾರ್ಧಂ || ೫೯

ವ || ಆ ಕ್ಷೋಣೀಧರವರದ ದಕ್ಷಿಣಶ್ರೇಣಿಗಳಂಕಾರಮಾಗಿ-

ಕಂ || ಪುರವನವರತಂ ರಥನೂ
ಪುರಮೆಸೆವುದು ಲಸಿತಭರ್ಮನಿರ್ಮಿತಸದ್ಗೋ
ಪುರಮಗಪತಿ ಲಕ್ಷ್ಮೀನೂ
ಪುರಮರಸಂ ಜ್ವಲನಜಟಿ ವಿರಾಜಿಪನದಱೊಳ್ || ೬೦

ಜ್ವಲದರಿಕುಕಾಂತಾರ
ಜ್ವಲನಂ ಜ್ವಲನಜಟಿಭೂಭುಜಂ ಪೋಲ್ವಂ ಪ್ರೋ
ಜ್ವಲನಂ ಶಶಾಂಕನಂ ಕೋ
ಮಲನಂ ಸದ್ವೃತ್ತತಾ ಕಳಾಕಾಂತಿಗಳಿಂ || ೬೧

ಸ್ವಾಗತಂ || ಆ ಯಶೋನಿಧಿಗೆ ವಲ್ಲಭೆಯಾದಳ್
ವಾಯುವೇಗೆ ರಮಣೀಜನರತ್ನಂ
ಶ್ರೀಯ ಭಾರತಿಯ ಸನ್ನಿಭೆ ಪುಣ್ಯೋ
ಪಾಯಧರ್ಮರತಮಾಕೆಯಚಿತ್ತಂ || ೬೨

ಕಂ || ಅರ್ಕಂ ಬುಧಜನವನಜ
ಕ್ಕರ್ಕಂ ರಿಪುವಿಪುಳತಿಮಿರಸಮಿತಿಗೆ ತೊದಳೇ
ನರ್ಕಂ ಕುನಯೋತ್ಪಳತತಿ
ಗರ್ಕದ್ಯುತಿಯರ್ಕಕೀರ್ತಿ ತತ್ಸುತನಾದಂ || ೬೩

ವ || ಮತ್ತಂ-

ಕಂ || ನಯನೋತ್ಸವಕರಿ ರತಿಪತಿ
ಜಯಲಕ್ಷ್ಮೀ ಸಮಸ್ತ ಸತ್ಕಳಾಕೋವಿದೆ ಪು
ಣ್ಯಯಶೋರ್ಥಿನಿ ಪೆಸರ್ವೆತ್ತಳ್
ಸ್ವಯಂಪ್ರಭಾದೇವಿಯಾತನನುಜಾತೆ ವಲಂ || ೬೪

ಉ || ಆಕೆಯ ವಕ್ತ್ರವಾರಿಜದ ಲೋಚನನೀಳಸರೋಜದೋಷ್ಠಬಂ
ಧೂಕದ ದಂತಕುಂದದ ನಖಾಂಕುರಕೇತಕದಂಬುಮೋಹನ
ಶ್ರೀಕರಮೆಂದಿದೈದುತೆಱದಂಬನೆ ನಚ್ಚಿನ ಕೆಯ್ದುಮಾಡಿ ಮೂ
ಲೋಕದೊಳೆಯ್ದೆ ಪಂಚಶರನುಂ ಕುಸುಮಾಸ್ತ್ರನುಮಾದನಂಗಜಂ || ೬೫

ವ || ಮತ್ತಂ-

ಕಂ || ಕುವಳಯದಳನಯನೆಗೆ ನೆಗ
ೞ್ದ ವಿಯಚ್ಚರಪತಿಯ ಸುತೆಗೆ ಸತಿಯರ್ ಪೆಱರಾ
ರೊ ವಿಚಾರಿಸೆ ಸರಿಯಪ್ಪರ್
ಭುವನಸ್ತವನೀಯರೂಪರಮಣೀಯತೆಯಿಂ || ೬೬

ವ || ಒಂದು ದೆವಸಮಾ ಜ್ವಲನಜಟಿಮಹಾರಾಜಂ ವಿದ್ಯಾಧರರಾಜಸಮಾಜ ವಿರಾಜಿತಮುಂ ಅಂಬರಚರನಿತಂಬಿನೀಕದಂಬಕಸದಂಬಕಪ್ರಭಾಭರಿತಮುಂ ಎನಿಸಿ ಮನಮನು ಱೆ ಸೆಱೆವಿಡಿವ ನಿಜಸಭಾನಿವಾಸದೊಳ್ ವಿಳಾಸಂಬೆತ್ತು ಮಣಿಮಯೋತ್ತುಂಗ ವಿಷ್ಟರೋಪ ವಿಷ್ಟನಾಗಿ ವಿದಗ್ಧವಿದ್ಯಾಧರೀಕರಪಲ್ಲವೋಲ್ಲಸಿತ ವಲ್ಲಕೀವಾದನೋದಿತ ವಿವಿಧರಾಗ ಮಯಮಧುರನಾದೋತ್ಪಾದಿತ ನಿಜಾಂಕಮಾಳಾಕಳಿತ ಲುಳಿತ ಗೀತಾಕರ್ಣನಂ ವಂದಿವೃಂದಾನಂದನಂದಿತವಿತರಣಾದಿಗುಣವರ್ಣನಂ ಕಿಱಿದು ಪೊೞ್ತಂ ಕಳಿಪಿ ವದನಾ ವಳೋಕನ ದರಹಸನ ಸಹಭಾಷಣ ತಾಂಬೂಳಪ್ರದಾನಾದಿ ಸಮುಚಿತ ಪ್ರತಿಪತ್ತಿಗಳಿಂ ತುಷ್ಟಿವೆತ್ತ ಸೇವಾಸಕ್ತಸಾಮಂತಾದಿ ಸ್ವಜನಂಗಳಂ ವಿಸರ್ಜಿಸಿ ಪಕ್ಕದೊಳಿರ್ದ ಸ್ವಯಂ ಪ್ರಭೆಯಂ ವದನಕಾಂತಿ ಸಂತಾನಾಧಃಕೃತ ವಿಧುಪ್ರಭೆಯಂ ಪ್ರಸನ್ನೇಕ್ಷಣದಿನೀಕ್ಷಿಸಿ-

ಚಂ || ಮಗಳೆ ಮನೋನುರಾಗದೊಳೆ ಪೋಗಿ ಜಿಜಾಳಯದಂತರಾಳಮಂ
ಸೊಗಯಿಪ ನಿನ್ನ ಮೂರ್ತಿರಮೆಯಿಂ ರಮಣೀಯಮನಾಗಿಸೆಂದು ಮೆ
ಲ್ಲಗೆ ತೆಗೆದಪ್ಪಿ ತಂಬುಲಮನಿಕ್ಕಿ ವಿಸರ್ಜಿಸಿ ಮುಂದೆ ನಿಂದವಳ್
ದುಗುಲದ ಮೇಲುದಂ ತೆಗೆದು ಭಾವಕಿ ಸಾವಗಿಪಾಗಳಾ ನೃಪಂ || ೬೭

ಸ್ಮರಮದಕುಂಭಿಕುಂಭಯುಗಮೆಂಬಿನಮಾವಗಮಿಂಬುವೆತ್ತ ಪೀ
ವರ ಕುಚಮಂಡಳಂ ಮದನಕೇಳಿನಗೇಂದ್ರನಿತಂಬಮೆಂಬಿನಂ
ಕರಮೆಸೆವಾಕೆಯುನ್ನತ ನಿತಂಬಮದನಂಗರಾಜ್ಯಮೆಂಬಿನಂ
ಸ್ಫುರಯಿಪ ಜವ್ವನಂ ಮುದಮನೀಯೆ ನಿರೀಕ್ಷಿಸಿದಂ ಕುಮಾರಿಯಂ || ೬೮

ವ || ಅಂತು ನೋಡಿ-

ಚಂ || ಇವಳ ಕಟಾಕ್ಷವೀಕ್ಷಣಮನೀಕ್ಷಿಸುವಿಕ್ಷುಧನುರ್ಧರಂ ಮಹೋ
ತ್ಸವಮನವಶ್ಯಮೆಯ್ದುವನೆ ಕೆಯ್ದುವನನ್ಯಮನೊಲ್ಲದೊಪ್ಪುವೀ
ಯುವತಿಯ ಹಾವಭಾವಮನೆ ಭಾವಿಪ ಭಾವಭವಂ ಭವಂಗಮಂ
ಜವಲೆಯನೋವದೀವನೆ ವಿಚಾರಿಪೊಡೆತ್ತಣದಿಲ್ಲ ಸಂದೆಯಂ || ೬೯

ವ || ಎಂದು ನಿಜಾತ್ಮಜೆಯ ನವೀನ ಯೌವನಾವಷ್ಟಂಭಮಂ ಭಾವಿಪ ಭೂವಲ್ಲಭನಂತರಂಗ ರಂಗಕ್ಕೆ ಚಿಂತಾನರ್ತಕಿಯವತರಿಸೆ-

ಮ || ಸಿರಿಯಿಂ ಸತ್ಕುಲದಿಂ ಪೊದೞ್ದಸೊಬಗಿಂ ಸೌಂದರ್ಯದಿಂ ಶೀಲದಿಂ
ವರ ಚಾತುರ್ಯದಿನುದ್ಘಯೌವನದಿನಿಂತೀ ಕಾಂತೆಗಿನ್ನಾವನೀ
ಧರೆಯೊಳ್ ಖೇಚರ ಭೂಚರಕ್ಷಿತಿಪರೊಳ್ ಸಾದೃಶ್ಯಮಂ ಪೆತ್ತ ಸ
ದ್ವರನೆಂದೀ ತೆಱದಿಂದೆ ಚಿಂತಿಸಿದನಂದಾ ಖೇಚರಾಧೀಶ್ವರ || ೭೦

ವ || ಅಂತು ಚಿಂತಾಕ್ರಾಂತಸ್ವಾಂತನಾತ್ಮೀಯ ಮಂತ್ರಿಸಂತತಿಯೊಳ್ ಆಲೋಚಿಸಿಯುಮಾತ್ಮ ಜೆಗನುರೂಪನಪ್ಪ ವರನನಱಿಯಲ್ ನೆಱೆಯದೆ ಜಿನಮತಪ್ರಸಿದ್ಧ ಸಮೃದ್ಧಾನೇಕನಿಮಿತ್ತ ಶಾಸ್ತ್ರವಿಚಕ್ಷಣನುಂ ಗಾಂಭೀರ್ಯಾದಿ ಗುಣಲಕ್ಷಣನುಮಪ್ಪ ಸಂಭಿನ್ನನೆಂಬ ಕಾತಾಂತಿ ಕೋತ್ತಮನಂ ಬರಿಸಿ ಯುಕ್ತಾಸನದೊಳಿರಿಸಿ-

ಮ || ವರ ಗಂಧಾಕ್ಷತ ಪುಷ್ಪ ಪೂಗ ಫಲ ಕರ್ಪೂರಾದಿಯಿಂದಾಮನೋ
ಹರನಂ ಮನ್ನಿಸಿ ತನ್ನನಂದನೆಗಧೀಶಂ ಭಾವಿಪಂದಾವೊನೀ
ಧರಣೀಚಕ್ರದೊಳಾಗಲಿರ್ದಪನಿದಂ ಸಂಭಿನ್ನ ಪೇ ೞ್ದೆನ್ನ ದು
ರ್ಧರಚಿಂತಾಭರಮಂ ಕೞಲ್ಚಿಕಳೆ ನೀನೆಂದಂ ಖಗಾಧೀಶ್ವರಂ || ೭೧

ವ || ಎಂಬುದುಮಾ ನಿಮಿತ್ತಜ್ಞಮನೋಜ್ಞಂ ಮುನ್ನಂ ತನ್ನ ಶಾಸ್ತ್ರಕ್ರಮದಿಂ ನಿರ್ನಿಕ್ತಮಾಗಿರ್ದು ದನವಧಿಜ್ಞಾನಿಗಳ ಪೇೞ್ಕೆಯಿಂ ತಾರ್ಕಂಡುದನಿಂತೆಂದು ಪೇೞ್ದಂ-

ಕಂ || ವಿಜಯ ತ್ರಿಪಿಷ್ಠರೆಂಬರ್
ಪ್ರಜಾಪತಿಕ್ಷಿತಿಭುಜಂಗೆ ಪೌದನಪತಿಗಾ
ತ್ಮಜರಾದರ್ ಪ್ರಥಮಬಳಾಂ
ಬುಜನಾಭರ್ ದೇವ ಬಗೆವೊಡವರತುಳಬಳರ್ || ೭೨

ಅವರೊಳ್ ತ್ರಿಪಿಷ್ಠನೆಂಬಾ
ತಿವಿಕ್ರಮಂ ಕೂಸುತನದೊಳಂ ಕೇಸರಿಯಂ
ತವೆ ಕೊಂದು ಕೋಟಿಕಾದ್ರಿಯ
ನವಜ್ಞೆಯಿಂ ಕಿೞ್ತು ಬಿಸುಟನಿಂತಪ್ಪಧಟಂ || ೭೩

ಆತಂ ಮುನ್ನಿನ ಜನ್ಮದ
ರಾತಿಯಾನಾ ವಾಜಿಗಳನನಾಜಿಕ್ಷಿತಿಯೊಳ್
ಘಾತಿಸಿದಪಂ ತ್ರಿಖಂಡೋ
ರ್ವೀತಳಮಂ ಚಕ್ರದಿಂದಮಾಕ್ರಮಿಸಿದಪಂ || ೭೪

ಮಲ್ಲಿಕಾಮಾಲೆ || ಆ ಮುಕುಂದನೆ ನಿನ್ನ ನಂದನೆಗಾದಪಂ ಸ್ಥಿರವಲ್ಲಭಂ
ಕಾಮಸನ್ನಿಭಮೂರ್ತಿ ನಿರ್ಮಳಕೀರ್ತಿ ಭೋಗಪುರಂದರಂ
ಪ್ರೇಮದಿಂ ಪಲರುಂ ತನೂಜರನೀಕೆಯೊಳ್ ಪಡೆದಪ್ಪನು
ದ್ದಾಮರಾಗಪಯಃಪಯೋಧಿಮೃಗಾವತೀ ಪ್ರಿಯನಂದನಂ || ೭೫

ಚಂ || ಎನೆ ನೆಗೞ್ದಾ ಬುಧೋತ್ತಮನ ಸೂಕ್ತಿ ಮನಕ್ಕನುರಾಗದೇ ೞ್ಗೆಯಂ
ಜನಿಯಿಸೆ ನೂತ್ನರತ್ನ ಕನಕಾಭರಣಾಂಬರದಾನಪೂರ್ವಮಾ
ತನನವನೀತಳಪ್ರಭು ವಿಸರ್ಜಿಸಿ ಭಾವಿಸುತಿರ್ದನಂದು ನಂ
ದನೆಯ ವಿವಾಹವರ್ತನದುಪಾಯಮನಾ ವಸುಧೈಕಬಾಂಧವಂ || ೭೬

ಗದ್ಯಂ
ಇದು ನಿಖಿಳ ಭುವನ ಜನವಿನೂತ ಸ್ಫೀತಮಹಿಮಾವದಾತ ವೀತರಾಗ ಸರ್ವಜ್ಞತಾ ಸಮೇತ
ಖ್ಯಾತಜಿನಸಮಯ ಕಮಳಿನೀಕಳಹಂಸಾಯಮಾನ ಮಾನಿತ
ಶ್ರೀನಂದಿಯೋಗೀಂದ್ರಪ್ರಸಾದ ವಾಚಾಮಹಿತ
ಕೇಶವರಾಜಾನಂದನಂದನ ವಾಣೀವಲ್ಲಭ ವಿಸ್ತಾರಿತಮಪ್ಪ
ವಸುಧೈಕಬಾಂಧವ ಶ್ರೀ ವರ್ಧಮಾನ ಪುರಾಣದೊಳ್
ಸ್ವಯಂಪ್ರಭಾ ಪ್ರಭಾವವರ್ಣನಂ
ತೃತೀಯಾಶ್ವಾಸಂ