ಕಂ || ಶ್ರೀವರ ವಿದ್ಯಾಧರಜನ
ತಾವಿಭು ನಿಜಸುತೆಗೆ ಸಮನಿಪತಿಶಯ ಭಾಗ್ಯ
ಕ್ಕಾವಗಮೊಸೆದಂ ಮನದೊಳ್
ಭೂವಿನುತಂ ಪಂಚಪರಮಗುರುಪದವಿನತಂ || ೧

ಚಂ || ಸುಭಗೆ ಸುರೂಪೆ ಸನ್ನುತ ಕಳಾವಿದೆ ಮಾನನಿಧಾನೆ ದಲ್ ಸ್ವಯಂ
ಪ್ರಭೆ ದಿಟದಿಂ ಮದೀಯಸಖಿಗೀಕೆಗೆ ವಲ್ಲಭನಾದಪಂ ಗಡಂ
ವಿಭವಸಮೇತನಾತನಿರವೆಮತುಟೊ ನೋೞ್ಪಮೆನುತ್ತೆ ಖೇಚರ
ಪ್ರಭುಸುತೆಯಾಳಿಯರ್ ಕೆಲಬರಪ್ರಕಟಾಮಗಿಯರಾಗಿ ರಾಗದಿಂ || ೨

ಉ || ಪೋಗಿ ಮುಕುಂದನಂದಮನಲಂಪಿನೊಳೀಕ್ಷಿಸಿ ವೀಕ್ಷಣೋತ್ಸವಾ
ಭೋಗಮನಾವಗಂ ಪಡೆದು ಬಂದು ತದೀಯ ವಿಳಾಸದೇ ೞ್ಗೆಯಂ
ಬೇಗದ ಪೇ ೞೆ ಕೇಳ್ದು ಕಿವಿವೇಟಮೆ ಪಲ್ಲವಿಸುತ್ತುಮಿರ್ಪುದುಂ
ಪೂಗಣೆಗಳ್ಗೆ ತಲ್ಲಲನೆ ಮೆಲ್ಲರ್ದೆಯಂ ಗುಱಿಯಾಗೆ ಮಾಡಿದಳ್ || ೩

ವ || ಅಂತಾ ಖಚರರಾಜತನೂಜೆ ರಾಜೀವಲೋಚನದ ಘನತರ ವಿಳಾಸ ವಿಭವ ವರ್ಣ ನಾಕರ್ಣನಾನಂತರಂ ಕಂತುಸಂತಾಪಾಕ್ರಾನಸ್ತಸ್ವಾನ್ತೆಯಾಗಿ ತತ್ಸಮಾಗಮ ಸಮುತ್ಸುಕ ವೃತ್ತಿಯಿಂ ಕತಿಪಯದಿನಂಗಳನನಂಗೋನ್ಮಾದದಿನೆಂತಾನುಂ ಕಳಿಪುತ್ತುಮಿರೆಯಿರೆ-

ಕಂ || ಸುತೆಗುಚಿತಸ್ಥಾನದೊಳೊಗೆ
ದತೀವ ಬಹುಳಾನುರಾಗಮದು ತನಗಾಕ
ರ್ಣಿತಮಾಗೆ ವಿವಾಹೋದ್ಯೋ
ತತ್ಪರಂ ಮತ್ತಮೊಂದು ದಿನಮಾ ಖಗಪಂ || ೪

ವ || ತನ್ನ ಪಕ್ಕದೊಳಿರ್ದ ಪರಮವಿಶ್ವಾಸಭೂಮಿಯಪ್ಪಿಂದುವೆಂಬ ಪೆಸರಿನೆಸೆವೆನ್ನ ವದನಮಂ ಪದೆದು ನೋಡಿ-

ಮಲ್ಲಿಕಾಮಾಲೆ || ಇಂದು ನಾಳೆ ದಲೆನ್ನದೀಗಳೆ ಪೋಗಿ ಭಾವನ ನಂದನಂ
ಗಿಂದುವಕ್ತ್ರೆಯನೀ ಸ್ವಯಂಪ್ರಭೆಯಂ ಖಗಪ್ರಭುವಿತ್ತನಾ
ನಂದದಿಂದಮೆ ನಿನ್ನ ಮೆಯ್ದುನನೆಂದು ಪೇೞ್ದು ವಿವಾಹಯೋ
ಗ್ಯಂ ದಲಿಂತಿದೆನಿಪ್ಪವಾಸರಮಂ ವಿಚಾರಿಸಿ ಬಾರ ನೀಂ || ೫

ವ || ಎಂದಾ ನಮಿವಂಶಲಲಾಮಂ ಬಾಹುಬಲಿಕುಲೋತ್ತಂಸನಪ್ಪ ನಿನ್ನಲ್ಲಿಗೆನ್ನನಟ್ಟಿದನಿದು ಮದಾಗಮನವೃತ್ತಕಮೆಂದು ಸವಿಸ್ತರಂ ಪೇೞ್ದು ತನ್ನ ತಂದ ಪಾಗುಡಮಂ ಮುಂದಿಡುವುದು ಮದನಾದರದಿಂ ಕೆಯ್ಕೊಂಡು ಮನದೊಳ್ ಗುಡಿಗಟ್ಟಿ-

ಕಂ || ಕರಮೆಸೆವನುಬಂಧಂ ಪಿರಿ
ಯರೊಳಾದುದು ಪೋದುದೆನಿಸದೀಗಳ್ ತಾನು
ದ್ಧರಿಸಿದನೆ ಬಂಧು ಭಾವಮ
ನರರೆ ಖಗಾಧೀಶನಲ್ತೆ ಗೋತ್ರಪವಿತ್ರಂ || ೬

ವ || ಅದುಕಾರಣದಿಂ ಚಿರಕಾಲ ವ್ಯವಹಿತಮಾದ ನಮ್ಮ ತಮ್ಮನ್ವಯದನುಬಂಧಮಂ ಸಂಬಂಧಿಸಲೆಂದು ಬಗೆದಂದ ವಿಯಚ್ಚರರಾಜನ ವಿವೇಕಮಚ್ಚರಿಯನಾರ್ಗೆ ಮಾಡದೆಂದು ಮೆಚ್ಚಿವಿಚ್ಚಳಿಸಿ ಪೊಗೞೆ ತದವಸರದೊಳ್ ಮುದಮೊದವಿ ವಿಯಚ್ಚರಚರಂಗಭ್ಯಾಗತ ಪ್ರತಿಪತ್ತಿಯನಾಚರಿಪ ಬಗೆಯಿನಿಂದುವಂ ತಂದೆಯನುಮತಿಯಿಂ ವಿಜಯಂ ನಿಜಮಂದಿರ ಕ್ಕೊಡಗೊಂಡು ಪೋಗಿ ಮಜ್ಜನ ಭೋಜನ ತಾಂಬೂಲಾನುಲೇಪನಾದಿಗಳಿಂ ಪ್ರಮೋದ ಮನುತ್ಪಾದಿಸುವುದುಂ-

ಕಂ || ನಗಧರನ ಕೂಡೆ ಸಂಭಾ
ಷೆ ಗೆಯ್ಯಲೆಂದೆಳಸೆ ತನ್ನ ಚಿತ್ತಂ ಮತ್ತಾ
ಖಗನಾ ವಿಜಯನನುಜ್ಞೆಯಿ
ನಗಣಿತಮತಿ ತನ್ನಿವಾಸದಲ್ಲಿಗೆ ಪೋದಂ || ೭

ವ || ಅಂತು ಪೋಗಿ ಮುನ್ನಮೆ ತನ್ನಂ ಬರಿಸಿ ಕನ್ನೆಯಂದಮಂ ವಿಸ್ತರಮಱಿಯಲಿಚ್ಛೈಸುತಿರ್ದ ಜನಾರ್ದನನಂ ಮೆಲ್ಲನೆ ಸಾರ್ದು ನಿಜವಚೋ ನಟೀ ನಾಟ್ಯಾರಂಭದೊಳ್ ಸೂಸುವ ಕುಸುಮಾಂಜಳಿಯನನುಕರಿಪ ದರಹಾಸವಿಳಾಸಮಂ ಮೊದಲೊಳ್ ಮೆಱೆದು-

ಕಂ || ಲೋಕನುತ ಖಚರಪತಿ ರ
ತ್ನಾಕರಸುತೆಯಂ ಸ್ವಯಂಪ್ರಭಾ ಶ್ರೀಸತಿಯಂ
ಸ್ವೀಕರಿಸಿ ನೀಂ ಬೞಿಕ್ಕಂ
ಶ್ರೀಕಾಂತನೆನಿಪ್ಪ ರೂಢಿಯಂ ತಾಳ್ದಿದಪೈ || ೮

ವ || ಎಂದು ನುಡಿವ ನಭಶ್ಚರನ ಕರಮಂ ಕರಮೆ ಪದೆದು ಪಿಡಿದು ಸ್ವಯಂಪ್ರಭನಾಮಶ್ರವಣ ಮಾತ್ರದಿಂ ಕಾಮಕಂಕಪತ್ರಪಾತ್ರೀಭೂತ ಗಾತ್ರನಾ ದಶಶತಪತ್ರನೇತ್ರಂ ನಿರ್ಜನ ಸ್ಥಾನನಿವೇಶನೇಚ್ಛೆಯಿಂ ನಿಜನಿಶಾಂತದ ಪಿಂತಣ ಪೂಗ ಪುನ್ನಾಗ ಪುನ್ನಾಗ ಚೂತ ಚಂಪಕ ಪನಸ ಪಾಟಳ ಕದಳ ಕಾಂಚನಾಳಕಾದಿ ಮೇದಿನೀರುಹಂಗಳಿನಾದಮೆಸೆವ ಸಪವನ ಮನುಪವನಮನಪರಿಮಿತ ರಾಗದಿಂ ಪೊಕ್ಕು-

ಚಂ || ಕರತಳದಂದಮಂ ಕಿಸಲಯಂ ಲತೆಗಳ್ ನಳಿತೋಳ್ಗಳಂದಮಂ
ಗುರುಕುಚದಂದಮಂ ಸ್ತಬಕಮುಳ್ಳಲರ್ಗಳ್ ನಗೆಗಣ್ಗಳಂದಮಂ
ಧರಿಯಿಸೆ ತನ್ನಕಣ್ಗೆ ನಿಜವಲ್ಲಭೆಯಂದಮೆ ಮುಂದೆ ತೋಱುತುಂ
ಬರೆ ಸೊಗಯಿಪ್ಪ ಕೇಳಿವನಲಕ್ಷ್ಮಿಯನಿಂದುಗೆ ತೋಱುತುಂ ನೃಪಂ || ೯

ವ || ಬಂದೊಂದು ಮಾಧವೀಲತಾಮಂಡಪದ ತಣ್ಣೆೞಲೊಳ್ ವನಪಾಲಕನಿಕ್ಕಿದೆಳದಳಿರ ಪಾಸಿನೊಳ್ ಕುಳ್ಳಿರ್ದು ತಣ್ಮಳಲ ಪುೞಿನದ ಮೇಲೆ ಪೊಸನಸೆಯೊಳೆಳಸಿ ಮೇಳಿಸುವ ಹಂಸಮಿಥುನಮಂ ನೋಡಿ ನಸುನಗುತ್ತುಮಿವು ಬೆರ್ಚಿಬಿರ್ಚುಗುಂ ತೊಲಗಿಮೆಂದು ನೆವದಿನಿರ್ದ ಕತಿಪಯಪರಿಜನಮುಮಂ ತೊಲಗಿಸಿ ಕೆಲದೊಳಿಕ್ಕಿದ ಪಲ್ಲವಾಸನ ದೊಳಿಂದುವಂ ಕುಳ್ಳಿರಲ್ವೇೞ್ದು-

ಕಂ || ಅನುಲೇಪನ ಕರ್ಪೂರಾ
ದ್ಯನೂನ ವಸ್ತುಪ್ರತಾನಂದಿದಿಂದುಗೆ ತಾಂ
ಜನಿಯಿಸಿದಂ ಸಂತೋಷಮ
ನನಂಗನುಪದೇಶದಿಂದಾಮಾ ನೃತಪತನಯಂ || ೧೦

ವ || ಆ ಪ್ರಸ್ತಾವದೊಳ್-

ಚಂ || ಖಗಸುತೆಯಂದಮಂ ಚರನೊಳಾಲಿಪ ಲಾಲಸೆಯಿಂದೆ ಕರ್ಣವೀ
ಥಿಗೆ ಪರಿತರ್ಪ ಚಿತ್ತಮನವಂಗಿದೆ ತೋಱಲೆ ನಿೞ್ಕಿದಪ್ಪುದಿ
ಲ್ಲಿಗಿದೆನೆ ಕೆನ್ನೆಯಂ ತುಡುಕೆ ದೃಷ್ಟಿ ಕಟಾಕ್ಷಿಸಿ ನೋಡಿದಂ ಮದಾ
ಳಿಗಳುಲಿಪಕ್ಕೆ ಸೈರಿಸದೆ ಪಕ್ಕದೊಳಿರ್ದಲರ್ಗೊಂಚಲಂ ನೃಪಂ || ೧೧

ವ || ಅನ್ನೆಗಂ ಮುನ್ನವೆ ಬಿನ್ನವಿಸಲವಸರಂಬಾರುತ್ತುಮಿರ್ದ ವಿದ್ಯಾಧರಚರಂ ತನಗೆ ಕಣ್ಸನ್ನೆಗೆ ಯ್ದನೆನಿಸಿ ಸರಸಿಜಾಕ್ಷನೀಕ್ಷಿಸಿದಲರ್ಗುಡಿಯಂ ತನ್ನ ವಜೋನಿರ್ಗಮಕ್ಕೆ ಮುಂಗುಡಿಯಾದುದಿದೆಂದು ಮನದೊಳ್ ಗುಡಿಗಟ್ಟಿ-

ಕಂ || ಸುಮನಶ್ಶಿಲೀಮುಖಾಕ್ರಾಂ
ತಮಿದಲರ್ಗುಡಿ ದೇವ ತನ್ನೊಳುತ್ಕಳಿಕೆ ಕರಂ
ನಿಮಿರ್ದಿರೆ ನಿನಗೆಱಕಮನಾಂ
ತು ಮೆಱೆದಪುದು ತತ್ಸ್ವಯಂಪ್ರಭಾಚೇಷ್ಟಿತಮುಂ || ೧೨

ವ || ಎಂದು ವಿದ್ಯಾಧರಕನ್ನೆಗೆ ತನ್ನೊಳಾದ ಪೂರ್ವಾನುರಾಗಮಂ ಪ್ರಸ್ತಾವಿಸುವ ನೆವದಿಂ ಶ್ರವಣನಾಳದೊಳ್ ಸುಖಸುಧಾರಸಮನಸದಳಂ ತಳೆಯೆ-

ಕಂ || ಇನಿಯವಳೊಲವಿನ ನುಡಿಗೇ
ಳ್ದನಿತಱೊಳಲರ್ದತ್ತು ಚಿತ್ತಭವನೆಚ್ಚ ಮುಕುಂ
ದನ ಮನಮೇಂ ಮೃತಸಂಜೀ
ವನ ಯೋಗಮೊ ಕಾಮಿಗಂಗನೆಯರನುರಾಗಂ || ೧೩

ವ || ಆಗಳ್-

ಕಂ || ಇನಿಯವಳಂ ಮುನ್ನುರ್ಚಿದ
ನನೆಗಣೆ ತಳ್ಪೊಯ್ದುದೆರ್ದೆಯನೆಂಬುತ್ಸವದಿಂ
ತನಗೆ ಹಿತಕಾರಿಯಾಗಿರೆ
ಮನೋಜನಂ ನೃಪತಿ ಬಗೆದನಾರ್ದಿಸುತಿರೆಯುಂ || ೧೪

ವ || ಅಂತೊದವಿದ ಮದನಾನುರಾಗ ಮದಿರಾಮದದಿನುನ್ಮತ್ತಮಾದ ಚಿತ್ತಮನವಹಿತ್ಥ ಮಯಕಟಾಕ್ಷ ಪಟದಿನಾಚ್ಛಾದಿಸುತ್ತುಮಿನಿಯವಳೊಲವನನಿತಱೊಳೆ ನಂಬದೆ ನಂಬಿ ನುಡಿಯಿಸುವ ಬಗೆಯಿನಿದುಚಿತಕವಿಪರಿಚಿತ ಚಾಟು ಚಾಪಳಮಿದೆಮ್ಮ ಮನಮನಾರಯ್ವ ನಿನಗೆ ನೆವಮಪ್ಪುದೆಂದು ಪುಸಿಮಾಡಿ ನಸುನಗುವುಪೇಂದ್ರನ ಮುಖೇಂದುಗಿಂದು ಮಂದಸ್ಮಿತ ಚಂದ್ರಿಕೆಯನೋಲಗಿಸಿ-

ಕಂ || ಆ ಕನ್ನೆಯಿರವು ನಿನಗಿಂ
ದಾಕೆಯೆ ಹೃದಯದೊಳಗಿರ್ದೊಡಂ ಮನುಕುಳ ರ
ತ್ನಾಕರ ಸೌಭಾಗ್ಯಮದೋ
ದ್ರೇಕದಿನದು ದಿಟಮೆ ವಿದಿತಮಾಯ್ತಿಲ್ಲಕ್ಕುಂ || ೧೫

ಮೇಲಿಕ್ಕಿ ಪೆಱರ್ ನೆಱೆವರ್
ಸೋಲಿಸಲಿರ್ದೆಡೆಯೊಳಿರ್ದು ಖಗಪತಿಸುತೆಯಂ
ಸೋಲಿಸಿದೈ ನೃಪ ನಿನ್ನಯ
ಲೀಲಾ ಚಕ್ರಾಸ್ತ್ರಮಾದನೆನೆ ಕುಸುಮಾಸ್ತ್ರಂ || ೧೬

ವ || ಅದೆಂತೆಂದೆನೆ ಮನುಕುಲವರಿಷ್ಠಂ ತ್ರಿಪೃಷ್ಠನಪ್ಪ ಪುರುಷೋತ್ತಮನೆ ವಲ್ಲಭಂ ಸ್ವಯಂ ಪ್ರಭೆಗೆಂದಾದೇಶಮಂ ಸವಿಶೇಷಮಱಿವ ಸಹಚರಿಯರಪ್ಪ ಖಚರಿಯರ್ ತಮತಮಗೆ ವಿವಿಧವಿದ್ಯಾವಿಶೇಷ ಕೌಶಲದರ್ಶನದೊಳೆಲ್ಲಮಾಕೆಯ ಮುಂದೆ ಭವದೀಯಾಮೇಯ ರೂಪ ರಾಮಣೀಯಕಾದಿಗಳಪ್ಪಱಿಕೆಯೆಱಕದ ಗುಣಂಗಳನೆ ಕೊಂಡುಕೊನೆದು ಕಿವಿವೇಟಕ್ಕೆ ಪಕ್ಕಪ್ಪಿನೆಗಮಿಂತೆಂದು ಪೇೞ್ವರ್-

ಕಂ || ಅಳಿನೀರುಚಿಯಿಂ ನವಕ
ಜ್ಜಳರೇಖಾ ಶ್ರೀಯನಾಂತ ಕೃಷ್ಣನ ರೂಪಂ
ನಳಿನಾಕ್ಷಿಯರಾರ್ ಕಂಡೊಡ
ಮಲರ್ಗಣ್ಗಳೊಳಿಡಲೆ ಬಗೆವರಿದು ತಕ್ಕುದೆ ದಲ್ || ೧೭

ಪೀಲಿಯನೆತ್ತಿವಮಿರೆ ಬಾ
ೞ್ವೇಲಿಯ ವೋಲ್ ಬಳಸಿ ಪರಿಯೆ ಯುವತಿಕಟಾಕ್ಷಾ
ವಾಳಜಳಮೆಸೆವುದತನುವ
ಕೇಳೀವನಮೆನಿಸಿ ಕೇಶವನ ಕೇಶವನಂ || ೧೮

ವನಿತಾಕಟಾಕ್ಷತೂಳಿಕೆ
ಯಿನತನು ಸೌಭಾಗ್ಯರೂಪಮಂ ಚಿತ್ರಿಪ ನೂ
ತನ ಚಿತ್ರಫಳಕಮೆನಿಪುದು
ವನಜಾಕ್ಷನ ಭಾಳಫಳಕಮುಜ್ಜವಳತಿಳಕಂ || ೧೯

ಈರೆಲೆವೋದ ತನುವ ಕೇ
ಳೀ ರಂಭಾಕಾಂಡಮೆನಿಪ ನಾಸಾವಂಶಂ
ಭ್ರೂರೇಖಾ ಶಾಖೆಗಳಿಂ
ರಾರಾಜಿಪುದಬಳೆ ಮನುಜಕಂಠೀರವನಾ || ೨೦

ಕರಿಯಾಲಿಯ ನೆವದಿಂ ಚಂ
ಚರೀಕಮಂ ನೇತ್ರಪುತ್ರಿಕೆಯ ನೆವದಿಂದಂ
ಸಿರಿಯಂ ತಳೆದೆಸೆದಿರ್ಪುದು
ಸರೋರುಹಾಕ್ಷನ ದರಸ್ಮಿ ತಾಕ್ಷಿ ಸರೋಜಂ || ೨೧

ಸ್ಮರನಿಂದುಬಿಂಬಮಂ ಪೋ
ಲ್ತಿರೆ ತದ್ವದನೇಂದುಬಿಂಬದೊಳ್ ಕತ್ತುರಿಯಿಂ
ಬರೆದನೆನೆ ತನುತರಶ್ಮ
ಶ್ರುರೇಖೆ ನಿಶ್ವಾಸಸುರಭಿತಂ ಸೊಗಯಿಸುಗುಂ || ೨೨

ಎಱಗಿದ ಮಱಿದುಂಬಿವೊಲಿರೆ
ಮಿಱುಪ ಕೊನರ್ಮೀಸೆ ಸೂಸೆ ದರಹಾಸಶ್ರೀ
ನಱುಗಂಪಂ ಕೃಷ್ಣನ ಬಾ
ಯ್ದೆಱೆ ನಗುವುದು ರಾಗಮೇಱಿ ಬಂದುಗೆಯಲರಂ || ೨೩

ಸ್ಮರಕಲ್ಪಕುಜಸ್ಕಂಧದ
ಸಿರಿ ನೆಲಸಿರೆ ನೀಳ್ದ ಬಾಹುಶಾಖೆಯಿನೆಸೆವಾ
ಹರಿಯ ದೃಢಸ್ಕಂಧಮನ
ಪ್ಪಿರೆ ಭುಜಲತೆ ಸಫಳಮಾದಪುವು ಸಖಿ ನಿನ್ನಾ || ೨೪

ಆ ಮನುಜಲಲಾಮನ ತೋಳ್
ಕಾಮನ ಬಾಳೆನಿಸಿ ಹೊಗರಿಡಲ್ ತಕ್ಕುವು ನಿ
ನ್ನೀ ಮೃಗಮದ ನವಲಿಖಿತ ಲ
ತಾಮಳಿನ ಕಪೋಲಘರ್ಷಣಕ್ರೀಡಿತದಿಂ || ೨೫

ಸಲಿಲಾಯತ ಹಾರದ್ಯುತಿ
ವಳಯಿತಮಾ ನೃಪನುರಸ್ಥಳಂ ನವಪುಳಿನ
ಸ್ಥಳದವೊಲೆಸೆದುವು ತಕ್ಕುದು
ಲಳನೆ ಭವತ್ಕುಚರಥಾಂಗ ಮಿಥುನಕ್ಕೆಳಸಲ್ || ೨೬

ಸಿರಿಯನುರವಾಂತು ಮೇಲಾ
ಗಿರೆ ಪಿಂಗದ ನಿಜದರಿದ್ರತೆಗೆ ಲಜ್ಜಿಸಿದಂ
ತಿರೆ ಬಾಸೆಯ ಮಱೆಯೊಳಡಂ
ಗಿ ರಂಜಿಸುತ್ತಿರ್ಪುದಾ ನೃಸಿಂಹನ ಮಧ್ಯಂ || ೨೭

ತುಂಗತೆಯಿಂ ಸಿಂಹಾಸನ
ಸಂಗತಿಯುಂ ಕಣ್ಗೆವರೆ ಘನಚ್ಛಾಯೆಯನಾಂ
ತೇಂ ಗೆಡೆಗೊಂಡುದೊ ಪೃಥುಳತೆ
ಯಂ ಗಿರಿಯ ನಿತಂಬದಂತೆ ಹರಿಯ ನಿತಂಬಂ || ೨೮

ಎಂತೆಣೆಯೆಂಬೆನಸಾರತೆ
ಯಂ ತಾಳ್ದಿದ ಕನಕ ಕದಳದಂಡಮನಾಶಾ
ದಂತಿಗಳ ಕರಶ್ರೀಯಂ
ಕಾಂತಿಗಳಿಂ ತೊಡೆವ ತೊಡೆಗಳೊಳ್ ಕೇಶವನಾ || ೨೯

ಪರಿಭವಿಸಿ ಹರಿಯ ಮೇಗಾಲ್
ನೆರೆಯೆ ನಿಜಶ್ರೀಯೊಳೋಡಿ ಕೂರ್ಮಂ ಲಜ್ಜಾ
ಭರದೆ ಪುಗೆ ನೆಲನನೆಳೆಯಂ
ಧರಿಯಿಸಿದುದು ಕೂರ್ಮಮೆಂಬರದಱಿಂದಕ್ಕುಂ || ೩೦

ತೊಳೆವುವು ನಖರೋಚಿರ್ಮಯ
ಜಳದಿಂ ನಡೆವೆಡೆಯೊಳವನಿಯಂ ನೃಪನ ಪದಾಂ
ಗುಳಿಗಳುೞಿದಂತು ಮನುಕುಳ
ತಿಳಕಂ ಮುಟ್ಟುವನೆ ತದ್ರಜೋದೂಷಿತೆಯಂ || ೩೧

ಕಿಸುಸಂಜೆ ತನ್ನ ದೋಷಾ
ಭಿಸಂಧಿವರ್ತನೆಗೆ ಸೆಡೆದು ಕಾಲ್ವಿಡಿದನು ರಂ
ಜಿಸಿದಪ್ಪುದೆನಿಸಿ ತೋರ್ಪುದು
ಮಿಸುಗುವ ಕೇಸಡಿಯ ಕೆಂಪು ಕಮಲೇಕ್ಷಣನಾ || ೩೨

ವ || ಅಂತುಮಲ್ಲದೆಯುಂ-

ಚಂ || ಸುಗಿವುವು ತಿಗ್ಮದೀಧಿತಿಯೆ ಗೆತ್ತವನಂ ನಡೆ ನೋಡಿ ನೋಡೆ ದಿ
ಟ್ಟಿಗಳಮೃತಾಂಶುವಂ ಕಿವಿಗಳಾತನ ಮೆಲ್ನುಡಿಗೇಳ್ದು ಕೇಳೆ ಮೆ
ಯ್ದೆಗೆವುವು ಕೀಚಕಧ್ವನಿಯೆ ಗೆತ್ತು ವಿಪಂಚಿಯ ನುಣ್ಚರಕ್ಕದೆಂ
ತುಗೆ ಬಗೆದಂದಪರ್ ಪೆಱರ್ಗೆ ಕೂಡಿದ ಕಾಂತೆಯರಾ ಕುಮಾರನಂ || ೩೩

ಕಂ || ಎಂದಿಂತು ತಮ್ಮತಮ್ಮ ಱಿ
ವಂದದಿನಾಖಚರಿಗಂಬರೇಚರ ದೂತೀ
ವೃಂದಂ ಪೇೞ್ವುದು ನಿನ್ನೀ
ಸೌಂದರ್ಯಮನೆಯ್ದೆ ಪೊಗೞಲಾರ್ ನೆಱೆದಪರೋ || ೩೪

ಶ್ರೀಕಾಂತ ಭವದ್ಗುಣಿವ
ಹಾಕರ್ಣನ ಮಾತ್ರದಿಂದೆ ಖಗಪತಿಸುತೆಗ
ತ್ಯಾಕುಳತೆ ಮದನರಾಗೋ
ದ್ರೇಕ ಪ್ರಭವಂ ಪ್ರಫೂರ್ಣಿಸಿತ್ತಾಶಯದೊಳ್ || ೩೫

ಉ || ಆಡುವ ಮುಗ್ಧಬಾಳಕಿಯರುಂ ನುಡಿಜಾಣೆಯರಾದರೀಗಳಿಂ
ಪೋಡದ ನಿನ್ನ ಮಾತುಗಳನಾಡಿಯೆ ಕೇಳಿಸಲಾವ ಮೆಯ್ಯೊಳಂ
ಹಾಡುವರಾದರೋವನಿಗೆವಾಡುವರುಂ ನೃಪ ನಿನ್ನ ಗೀತಮಂ
ಹಾಡಿಯೆ ಖೇಚರಾತ್ಮಜೆಗೆ ಭಾವಿಪೊಡಿಂತುಟೆ ಮೆಯ್ಮೆ ಬೇಟದಾ || ೩೭

ಕಂ || ಮಱುಗಿ ಭವದ್ವೃತ್ತಾಂತಮ
ನಱಸುವ ಕಿವಿಯಂ ಪಳಂಚೆ ಕುಮುದೋತ್ತಂಸ
ಕೈಱಪಳಿಗಳ ದನಿ ನೋವಳೆ
ಗಱಿಯಿಂದುಡಿವೇಱಿನೊಳಗನೆಳವುವ ತೆಱದಿಂ || ೩೭

ಉ || ಕಾಮುಕವಲ್ಲಭಂ ಪ್ರಣಯಸೃಷ್ಟಿಕರಂ ಹೃದಯಾಸ್ಪದಂ ಸುಖ
ಸ್ವಾಮಿ ರತೀಶನೆಂದರಸ ನಿನ್ನನೆ ಹಾಡಿಸಿ ಕಾಮನಾಮದಿಂ
ಕಾಮನ ನೋಂಪಿಯೊಳ್ ನಿಜಸಖೀಲಿಖಿತತ್ವದಪೂರ್ವವಿದ್ಧಮಂ
ಕಾಮಿನಿ ಲೋಚನೋತ್ಪಳದಿನರ್ಚಿಪಳಶ್ರುಕಣಾಕ್ಷತಾನ್ವಿತಂ || ೩೮

ಕಂ || ಕಿವಿಯಂ ಬಂಚಿಸಿ ಕೇಳ್ವಳ್
ಭವದುಕ್ತಿಯನೀಕ್ಷಣಂಗಳಂ ಬಂಚಿಸಿ ನಿ
ನ್ನವಯವಗಳ ನೋೞ್ಪಳ್ ನಾ
ಣ್ಚುವಳಕ್ಕುಂ ಕುಟಿಳಚಪಳಭಾವಕ್ಕವಱಾ || ೩೯

ಸಾರಿಕೆಯಂ ಶುಕದೊಳ್ ಸಹ
ಕಾರದೊಳೆಳಲತೆಯನೞ್ತಿಯಿಂ ಕೂಡುವಳು
ರ್ವೀರಮಣ ಭವತ್ಸಂಭೋ
ಗಾರಂಭಣಫಳಮನಾಕೆ ಕಾಮಿಸಿ ಮನದೊಳ್ || ೪೦

ವ || ಅಂತವಿಶ್ರಾಂತಪ್ರವಾಹಮಾದ ಪೂರ್ವಾನುರಾಗ ವಿಪ್ರಲಂಭದೊಳ್-

ಕಂ || ವಿಮಳಾತ್ಮ ಕುವಳಯ ಪ್ರಿಯ
ಹಿಮಶೀತಳಮಪ್ಪ ನಿನ್ನ ಗುಣಮಾಕೆಗೆ ತಾ
ಪಮನೊದವಿಸಿದುದು ಕಮಳಾ
ಯಮಾನೆಯಪ್ಪುದಱಿನರಸ ದೂರದೊಳಿರೆಯುಂ || ೪೧

ವ || ಅದು ಕಾರಣದಿಂ-

ಕಂ || ಅನುಲೇಪನದೊಳ್ ಚಂದನ
ಮನೆ ಹಾರದೊಳಚ್ಚಮುತ್ತಿನಾರಮನೆ ನೀಕೆ
ತನದೊಳ್ ಧಾರಾಗೃಹಮನೆ
ವಿನೋದದೊಳ್ ವಾರಿಕೇಳಿಯನೆ ಪದೆವಳವಳ್ || ೪೨

ವ || ಮತ್ತಂ-

ಚಂ || ಲಲನೆ ಮೃಣಾಲಮಂ ಭುಜದೊಳುತ್ಪಳಮಂ ನಗೆಗಣ್ಣೊಬ್ಬಕು
ಟ್ಮಲಮನುರೋಜದೊಳ್ ಕದಳಕಾಂಡಮ ನುಣ್ದೊಡೆಯೊಳ್ ಪ್ರವಾಳಮಂ
ತಳದೊಳಮರ್ಚಿಕೊಂಡು ಪಡಿಯಿಟ್ಟಪೆನಿಂತವನೆಂದು ಮನ್ಮಥಾ
ಕುಳೆ ಸಖಿಯರ್ಗೆ ನಾಣ್ಚಿ ನೆಗೞ್ವರ್ ನೆವದಿಂ ಶಿಶಿರೋಪಚಾರಮಂ || ೪೩

ಕದಪಿನಳೊತ್ತಲಾಯ್ತು ಮಣಿದರ್ಪಣಮೀಕ್ಷಿಸಲಾಯ್ತೆ ಹಾಸಲಾ
ದುದು ಕುಸುಮೋತ್ಕರಂ ಮುಡಿಯಲಾದುದೆ ಬೊಟ್ಟಿಡಲಾಯ್ತೆ ಚಂದನಂ
ಹೃದಯದೊಳೊಟ್ಟಿಲಾಯ್ತು ಬಿನದಕ್ಕಿರಲಾದುದೆ ಮನ್ಮಥಾಗ್ನಿಗಾ
ಱದೆ ಪುಗಲಾಯ್ತು ಪಲ್ಲವಲತಾಗೃಹಮೀಗಳವಳ್ಗೆ ಭೂಪತೀ || ೪೪

ವ || ಅದಲ್ಲದೆಯುಂ-

ಚಂ || ಹವಣ ಱಿದುತ್ತರಂಗುಡುವ ಮೆಚ್ಚುವ ಮಾತಿನ ಗೊಟ್ಟಿ ಕೇಳ್ವ ಹಾ
ಡುವ ಸವಿಯಪ್ಪ ಗೇಯರಸವಾಡಿಸುವಾಡುವ ಲಾಸ್ಯಲೀಲೆ ನೋ
ಡುವ ಮನದೞ್ತಿಯಿಂ ಬರೆವ ಚಿತ್ರಮವಳ್ಗೆ ವಿಷಸ್ವರೂಪಮಾ
ದುವು ಬೞಿಕೇ ಱಿಂ ಮಱೆಯಿಕುಂ ವಿರಹವ್ಯಥೆಯಂ ಸಖೀಜನಂ || ೪೫

ಉಗೆಮಿಗೆ ಬೆೞ್ಪವಸ್ತುಗಳನೊಲ್ದುಪಭೋಗಿಸಿ ಮೆಚ್ಚಿದೆಚ್ಚೆಯಂ
ನೆಗೞದೆ ಕೇಳ್ವ ಹಾಡು ಹಗೆ ಸೂಡುವ ಹೂ ಹಗೆ ಮೆಲ್ವತಂಬುಲಂ
ಹಗೆ ಬಗೆಗಿನ್ನುಮೇಂ ಪ್ರಿಯಮದುಂ ಹಗೆಯಪ್ಪೊಡೆ ದೇವ ಬೇಟದಿಂ
ಹಗೆ ಪೆಱದೇಕದಾಗದೊಡೆ ಬಾೞ್ವರದೇಂ ತಪಮೋ ಪರಾರ್ಥಮೋ || ೪೬

ವ || ಎಂದು ಪರಿಹಾಸ ಚಾಟುಳಚ್ಛಲದೆ ವಿರಹನಿರ್ಭರೋದ್ವೇಗಭಾವಮನತಿಶಯಿಸಿ ವಿದ್ಯಾಧರಚರಂ ಮತ್ತಮಿಂತೆಂದಂ-

ಕಂ || ನವವಿರಹಶಿಖಿಗೆ ಹವಿಯಾ
ದುವಲ್ಲದಳುರ್ವಂಗತಾಪಮಂ ಮೞ್ಗಿಸಲಾ
ಱವೆ ತಳಿವ ಮಳಯಜಂ ಸೂ
ಸುವಾಲಿನೀರ್ ಮೇಲೆ ಸುರಿವ ಕಪ್ಪುರದರಜಂ || ೪೭

ವ || ಅಂತು ಕಂದರ್ಪದುರ್ವಹ ದಹನದಾಹಮಪರಿಮಿತ ಶಿಶಿರೋಪಚಾರವಿಧಿಗೊಳ ಮುಪಶಮಿಸದುದ್ದಮುರಿಯೆ-

ಕಂ || ಮಗುೞ್ದೊಳಪುಗಲಾಕ್ಷಣದೊಳೆ
ಮೊಗಸದೆ ಪೊಱಪೊಱಗೆ ಪೊೞ್ತಗಳೆದಪುದಿನಿಸಂ
ಸುಗಿದೊಳಗಳುರ್ವ ಮನೋಜಾ
ಗ್ನಿಗಿದೆನಿಸುವುದವಳ ಸರಳ ದೀರ್ಘಶ್ವಾಸಂ || ೪೮

ಬಿಸುಸುಯ್ಯೆಲರಿಂ ಗಱಿ ಸೀ
ದು ಸೌರಭಕ್ಕೆಱಗಿದಳಿಗಳುರುಳುತ್ತಿರೆ ಮೂ
ರ್ಛಿಸಿ ನಾಸಾಮುಕುಳಂ ಪೊಸ
ಯಿಸಿದುದು ಸಂಪಗೆಯ ಕೆಳೆಯನಾ ಕೋಮಳೆಯಾ || ೪೯

ಒಳಗಳುರ್ದುಕೊಳ್ವ ಮದನಾ
ನಳಪುಟವೇಧದೆ ಬೆಮರ್ತ ನೇತ್ರಸರೋಜಂ
ಗಳಿನಿದೆ ಪುಷ್ಪದ್ರವಲವ
ಕುಳಮೊಕ್ಕವುವೆನಿಸಿ ಸೂಸುವುವು ಕಣ್ಬನಿಗಳ್ || ೫೦