ವ || ಅದಲ್ಲದೆಯುಂ-

ಕಂ || ನೆಗೆದ ಮೊಲೆಯೆಂಬ ಪೊಣರ್ವ
ಕ್ಕಿಗೆ ಕುಡುಕಂ ತಳಿಯುತಿರ್ದಪುವು ಕಣ್ಗಳ ಪಾ
ಪೆಗಳೆನೆ ಸುರಿಯುತ್ತಿರ್ಪಳ್
ಮೃಗಾಕ್ಷಿ ಗುಡುಗುಡನೆ ಬಾಷ್ಪಜಳಬಿಂದುಗಳಂ || ೫೧

ಇನಿಯಂ ಪೋಕುಂ ಹೃದಯ
ಸ್ಥನೆಂದು ಬಾಯ್ದೆಱೆಯಲಣ್ಮದಿರ್ಪಂತೆ ಮನೋ
ಜನ ಶಬ್ದವೇಧಶರಭಯ
ದಿನುಸಿರದಿರ್ಪಂತೆ ಕಾಂತೆ ನುಡಿ ಮ ಱೆದಿರ್ಪಳ್ || ೫೨

ಕೆಳದಿಯ ದನಿಗಂ ಪಿಕಕಳ
ಕಳಭಯದಿಂ ಮಳಯಪವನಭಯದಿಂ ಕದಳೀ
ದಳದೆಲರ್ಗಮಿಂದುಭಯದಿಂ
ಬೆಳಗುವ ಕನ್ನಡಿಗಮುಬ್ಬೆಗಂಬಡುವಳವಳ್ || ೫೩

ವ || ಮತ್ತಂ-

ಕಂ || ಬಸದಾಗಿ ತಾನೆ ಮುನ್ನೋ
ದಿಸಿದರಗಿಳಿ ಪೊರೆದ ಹಂಸೆ ನಡಪಿದ ಪಿಕಮಾ
ಡಿಸಿದ ನವಿಲಿಂದು ತನ್ನೆರ್ದೆಗಿ
ಡಿಸಿರ್ದುವೆಂದೊಡೆ ವಿಜಾತಿಕೃತಮಱಿದಪುವೆ || ೫೪

ಶುಕಮುಸುರ್ದು ಕನಲಿಪಿನಿತ
ಲ್ತು ಕದಂಪಂ ತಳೆದ ತಳದ ಕೆಂಪಡರ್ದಿರೆ ಮೌ
ಕ್ತಿಕ ಕರ್ಣಪೂರಮಂ ಶಿಖ
ರಕಾಂಕ್ಷೆಯಿಂ ಸೆಳೆದುಸೆಳೆದು ಕನಲಿಪುದವಳಂ || ೫೫

ಬಱಿದೆ ಕಿಸುಗಣ್ಚಿ ಪಿಕಮನಿ
ತಱೊಳೆರ್ದಪ್ಪುದೆ ಬೞಲ್ದು ಚಿಂತಾರತದಿಂ
ಮಱೆದಿರೆ ಮಱುವಕ್ಕವಳೆ
ಚ್ಚಱೆ ಜಡಿದಬ್ಬರಿಸಿ ಮಗು ೞೆ ಬಳಯಿಪುದೞಲಂ || ೫೬

ವ || ಅಂತಖಿಳ ಸುಕುಮಾರ ಕಮನೀಯಭಾವಂಗಳೆಲ್ಲಮೆಸುಹೃತ್ಸ್ವಭಾವಂಗಳಾಗಿ ಸಕಳ ವಿಷಯಾನುಷಂಗ ಪರಿತಾಪದುಸ್ಸ್ಥೆಯುಂ ಕ್ಷಣಕ್ಷಣ ವಿವರ್ಧಮಾನ ಮನುಮಥಾವಸ್ಥೆ ಯುಮಾಗಿ-

ಕಂ || ಕುಳಿರ್ವ ಕೊಳಂಗಳೆ ಕೋಡುವ
ಪುಳಿನಂಗಳೆ ತಣ್ಣನಪ್ಪ ಧಾರಾನಿಳಯಂ
ಗಳೆ ನೆಲೆಯಾಗಿ ಮನೋಜ
ಜ್ವಳನಾಕುಳೆ ದಿವಸಭಾರಮಂ ಪಿಂಗಿಸುವಳ್ || ೫೭

ಸುಗಿದಲರ್ಗಣೆಗೆ ಶಿಲಾಗ
ರ್ಭಗೂಢೆಯಾಗಿರ್ದಳೆನೆ ನಿಜಾಕೃತಿ ಮಣಿಭಿ
ತ್ರಿಗಳೊಳ್ ಮಾರ್ಪೊಳೆಯುತ್ತಿರೆ
ಮೃಗಾಕ್ಷಿ ಶಶಿಕಾಂತಗೃಹದೊಳಿರುಳಂ ಕಳೆವಳ್ || ೫೮

ವ || ಮತ್ತಮೊರ್ಮೆ ಚಿಂತಾವಿಹಾರ ಭರದೊಳೞಲ್ದು ನಸುಮುಚ್ಚಿದ ವಿಳೋಚನದಿನಿೞಿದು ಪೆರ್ಮೊಲೆಯ ಕೆಲದೊಳ್ ಪನಿವ ಕಣ್ಭನಿಯ ಸಪ್ಪುಳ್ಗೆ ಪೆರ್ವಳಿಸಿ ಬಱಿದೆ ಕಂಪಿಸುವಳೋರೊರ್ಮೆ ನಿರ್ಭರ ಮನೋರಥಪ್ರಾಪ್ತಿಯನೆ ಬಯಸಿ ಮನಸಿಶಯಮಂತ್ರ ಸೇವೆಯಂ ಮಾಡಿದಪಳೆನಿಸಿ ಶಿಶಿರೋಪಚಾರವಸ್ತು ಚರ್ಚಿತ ಲತಾನಿಳಯದೊಳ್ ದರನಿಮೀಳಿತಲೋಚನೆಯಾಗಿ ಬಱಿದೆ ಜಿನುಗುತ್ತಿರ್ಪಳ್ ಓರೊರ್ಮೆ ದೂರ್ತಿ ಪ್ರಯೋಗಕರಣಮನೆ ಮನದೊಳಳವಡಿಸಿ ಬಗೆಯುತುಂ ಬನದೊಳಸವಸದಿನೆೞಲ ನಾದರಿಸಿ ನಿನ್ನ ವೃತ್ತಕಮನುಸಿರ್ದು ಬೆಸಗೊಳ್ವಳ್ ಓರೊರ್ಮೆ ಸಂಕಲ್ಪಸುರತಸಮ್ಮದ ದೊಳೊರ್ಮೊದಲೆ ನೆಗೆವ ಮೆಯ್ನವಿರ ತುಱುಗಲೊಳ್ ತೊಡರ್ದೊಗೆದ ಬೆಮರ ಬಿಂದುಗಳ ಪುದುವಿಂ ಪನಿಪುಲ್ಪೊರೆದ ಶಾಡ್ವಲಸ್ಥಳಿಯನಿೞಿಕೆಯ್ವಳ್ ಓರೊರ್ಮೆ ನಿಜಸಂಜ್ವರಾರ್ಚಿಯಿಂ ಕಂದಿದೆಳದಳಿರ ಪಡೆಯೊಳ್ ಸುರುಳ್ದು ಬಿೞ್ದಿರ್ದ ಮಗ್ಗುಲೊಳೆ ಮಿಡುಕದುಡುಗಿದ ಕೃಶಾಂಗಯಷ್ಟಿಯಿಂ ರಾಹುವ ಮುಖಾಂತರದ ಮಱುಗುವೆಳವೆಱೆಯ ಕೆಳೆಯನೊಳಕೆಯ್ವಳ್ ಓರೊರ್ಮೆ ವಿರಹಾನಳಸನ್ನಿಧಿ ವಿದಾಹದಿಂ ಕೆಂಪಡರೆ ಕಾಯ್ದುವೆನಿಪ ಕೆಂದಾವರೆಯ ಪಾಸಿನೊಳ್ ಕೆಡೆದು ಮಿಡಮಿಡ ಮಿಡುಂಕುವದವೞಲ ಪೆರ್ಚಿನಿಂ ಕಿಚ್ಚಿನೊಳ್ ಬಿೞ್ದಕಿಡಿಯಂ ನೆನೆಯಿಸುವಳ್ ಓರೊರ್ಮೆ ನಿಕತನುವ ತಾಪದಿಂ ಕಾಯ್ಪವೆತ್ತ ಮುತ್ತಿನ ನುಣ್ಮಳಲ ಪುಡಿಯೊಳ್ ಪೊರಳ್ವ ಬೇವಸದೊಳಾವರಿಸಿ ದೂವೆ ಯೊಳ್ ಬಿೞ್ದ ಪಾವಿನಂದಮಂ ಮುಂದಿಡುವಳ್ ಓರೊರ್ಮೆ ತಣ್ಮಲೆವ ಕಪ್ಪುರದ ಜಗಲಿಯೊಳ್ ಕರಮೆ ಕೊರಗಿದ ಶರೀರವಲ್ಲರಿಯನೀಡಾಡಿ ನಿರ್ಭರಸ್ತಬ್ಧಭಾವದಿಂ ಚಂದ್ರಬಿಂಬದಕಳಂಕ ಲಕ್ಷ್ಮಿಯನಳಂಕರಿಪಳ್ ಓರೊರ್ಮೆ ವಿರಹಸಂಜ್ವರವ್ಯಥೆಗೆ ಸೈರಿಸದೆ ನೆಲನ ನೋಡಿಪೊಕ್ಕಪಳೆನಿಸಿಯುಪವನದೀರ್ಘಿಕಾರತ್ನಸೋಪಾನಪಟ್ಟದೊಳ್ ಮಾರ್ಪೊಳೆವಳ್ ಓರೊರ್ಮೆ ಮೆಯ್ ಬಿಸುಪಿನೆಸಕದಿಂ ಪೊಕ್ಕ ನೀರ್ಕದಡಿ ಕುದಿವಿನಂ ಕೃತ್ರಿಮತರಂಗಿಣಿಯ ಪೊನಲೊಳ್ ಪೊರಳ್ದು ನೀರೂಡಲಿಕ್ಕಿದಂಗಜನ ಕೂರಲಗಿನೊ ಲೋರನ್ನಮಪ್ಪಳ್ ಓರೊರ್ಮೆ ಕಂಕೆಲ್ಲಿವಲ್ಲರಿಯ ಕಾವಣದ ಕೋಣೆಯೊಳ್ ಕುಳಿರ್ವ ಶೀತಳಿಕೆಗಳ ತುಱುಗಲಂ ಪೇಱಿ ಬೇಗೆಗಿಚ್ಚಳುರ್ದ ಮೞಿಯೊಳ್ ಸಿಲ್ಕಿ ಬಸವೞಿದ ಚಮರಿಯಿರವನನುಕರಿಪಳ್ ಓರೊರ್ಮೆ ಧಾರಾಗೃಹಾಂತದೊಳಂತುಮಿಂತುಮುಣ್ಮುವ ಹಿಮಾಂಬುಧಾರೆಗಳ್ ಬಳಸೆ ಬೆಗಡುಗೊಂಡು ನೇಣ್ಬಲೆಯ ತೊಡರೊಳ್ ತೊಡಂಕಿ ನಡುಗುವ ಕುರಂಗಿಯೊಳ್ ದೊರೆಯಪ್ಪಳ್ ಓರೊರ್ಮೆ ಕೋಮಳ ಮೃಣಾಳನಾಳಮನಳಂಕರಿಸಿ ಮನಸಿಶಯಪಾಶಬಂಧಮಂ ದ್ವಿಗುಣಿಸುವಳ್ ಓರೊರ್ಮೆಕುಳಿರ್ವ ಕಪ್ಪುರದ ಪಚ್ಚಮನಮರ್ಚಿ ಮನ್ಮಥಜ್ವಲನಪಾತದಿಂ ಮೆಯ್‌ಮಿಗೆ ಪುಗುೞ್ತುದೆಂಬ ಸಂಕೆಯಂ ಕೆಳದಿಯರ್ಗೆ ಬಳಯಿಸುವಳ್ ಓರೊರ್ಮೆ ಪಲ್ಲವಾಸ್ತರಣದೊಳ್ ಮೆಯ್ಯನೀಡಾಡಿ ಮನಸಿಜನ ಸರಲ ಕೆಂಗಱಿಯ ಸೋಂಕನಿರ್ಮಡಿಪಳ್ ಓರೊರ್ಮೆ ಪಾಸಿದಲರ್ವಸೆ ಯನೆಳಸಿ ಕುಸುಮ ಶರಶಯ್ಯೆಯಂ ಪ್ರಕಟಿಪಳ್ ಮತ್ತಮವಳಳವಿಗೞಿದಂಗಜಜ್ವಳನ ಸಂಜ್ವರೋದ್ರೇಕಮಂ ಪೇೞ್ವೊಡತನುವ ಕರಿಂಕುವರಿದ ಕೃತಕಾಚಳಂಗಳೆನೆ ಕಾಯ್ಪನೊಳಕೊಂಡ ಕುಚಮಂಡಲಾಂತರದೊಳೆಡೆವಿಡದೆ ತಳಿವ ಮಳಯಜ ಹಿಮದ್ರವಂ ಕಾವಲಿಯೊಳೆಱೆದ ಕರ್ಬಿನರಸಮನನುಕರಿಪುದು ಅವಳ ಬಿಸುಸುಯ್ಯ ಬೆಂಕೆಯೊಳ್ ಬೆರಸಿದನಿತಱೊಳೆ ತಣ್ಮಲೆವ ತೆಂಗಾಳಿಯುಂ ನಂಜಿನ ಘಾಳಿಯೆನಿಸಿ ವನಕುಸುಮ ಕಿಸಲಯಪ್ರಕರಮಂ ಕೊರಗಿಸುವುದು ಅವಳೆಳಸಿ ಪೊಕ್ಕ ಪೂಗೊಳಂ ಕಾಯ್ದ ಕರ್ವೊನ್ನ ಪುತ್ಥಳಿಯನಿಕ್ಕಿದಂತಿರುರ್ಕುವುದಂತುಮಲ್ಲದೆಯುಂ-

ಕಂ || ಸ್ಮರನೊತ್ತಿನುಂಡಿಗೆಯಂ
ಬಿರುದಿಂಗೀಧರೆಯ ಬೆನ್ನೊಳೆನಿಸಿರ್ಪುವು ತ
ದ್ವಿರಹಾರ್ತೆ ಮೆಯ್ಯನಿಕ್ಕಿರೆ
ಕರಿಂಕುವೋದೆಡೆಯ ಪಜ್ಜೆ ತಣ್ಬಸಲೆಗಳೊಳ್ || ೫೯

ತನುತಾಪದಿಂದೆ ಪೊರ್ದಿದ
ಬನಮುರಿವುದು ಪೊಕ್ಕ ಪೂಗೊಳಂ ಬತ್ತುವುದಿ
ರ್ದ ನೆಲಂ ಪೊತ್ತುವುದಾಕೆಗೆ
ಜನಪತಿಸುತ ನೀನೆ ದಲ್ ಶರಣ್ ಪೆಱತುಂಟೇ || ೬೦

ವ || ಮತ್ತಮನತಿಶಯಮಾದ ಮನಸಿಶಯದಸೆಯೊಳ್ ನಿಷಿದ್ಧ ನಿಖಿಳೇಂದ್ರಿಯ ವಿಹಾರೆಯು ಮಂತರ್ವಿಲೀನ ಮಾನಸೆಯುಮಾಗಿ-

ಮ || ಪಿರಿದುಂ ಸ್ವಪ್ನರತೋತ್ಸವಾತಿಶಯಮೋ ಚಿಂತಾರತಾವೇಶ ನಿ
ರ್ಭರಮೋ ಪೇೞ್ವೆನದೇನನಾಡಿಸುವ ತೋಳ್ ತೇರಯ್ವಬಾಯ್ ತಪ್ಪಿಬ ರ್ಪರೆವಾತುಣ್ಮುವ ಕಿತ್ತುಸಿರ್ ನೆಗೞ್ದುಮಾಣ್ಬನ್ನಂ ಸುಖೋದ್ರೇಕಮಂ
ತರೆಯಾದಂತೆವೊಲಿರ್ದು ಬೆರ್ಚಿದವೊಲೆ ೞ್ದೇನಾನುಮಂ ಚೇಷ್ಟಿಪಳ್ || ೬೧

ವ || ಅನಂತರಂ ವಿಭ್ರಾಂತಮಾದಂತರಂಗದೊಳ್ ಪಿಂಗದುನ್ಮಾದಭಾವಮೆ ನೆಲಸೆ ನೆನಪ ದೊಳಂ ಕನಸಿನೊಳಂ ಮನಸಿನೊಳಂ ಆದಮೆ ಸನ್ನಿದಮಾದ ವಲ್ಲಭಾಗಮನದೊಳ್ ಬಳೆದ ರತಿಕಲಹನಿರ್ಭರಮನೆ ದಿಟಂ ಮಾಡಿ-

ಕಂ || ಅಕುಟಿಳೆಯನೆನ್ನನೆಲೆ ಚೂ
ತ ಕಳಾಧರ ಮಳಯಪವನ ಪಿಕ ಶುಕ ನೀಮಿಂ
ತಕಟೆನ್ನಿನಿಯನವೋಲ್ ಬಂ
ದು ಕಾಯ್ದು ಬಿಡೆಬೀಸಿ ಜಡಿದು ನುಡಿದಳಲಿಪುದೇ || ೬೨

ವ || ಎನುತುಮಸವಸದಿನಿರ್ದೆಡೆಯಿನೆೞ್ದು ನಿಸುಸುಯ್ದು ಬಱಿದೆ ಬೆಱಗಾಗಿ ತುಱುಗೆಮೆಯ ತೆರ್ಕೆಯೊಳ್ ಬಂಬಳಿಪ ಕಣ್ಬಳಿಗಳೊಸರೆ ಮಸುಳನಾದ ದಿಟ್ಟಿಯಂ ಬಲ್ಪಿನಿಂ ನಿಲಿಸಿ ತನ್ನಿದಿರೊಳಂಗಜಾನಳನ ಕೇಸುರಿಯ ರಾಶಿಯೆನೆ ಕೆಂಕಮಾದ ಕಂಕೆಲ್ಲಿವಲ್ಲರಿಯಂ ನೋಡಿ-

ಕಂ || ಮುನಿದೊದೆದೆನೆ ತಳಿರ್ಗಳ ಸಿರಿ
ನಿನಗಕ್ಕೆಂದೊದೆದೊಡದನೆ ತಪ್ಪಂ ಮಿಗೆಮಾ
ಡಿ ನಿಸರ್ಗಬಂಧುಗೆನಗಸು
ಕೆ ನೀನುಮೆಳದಳಿರ ನೆವದಿನುರಿವುದು ಗುಣಮೇ || ೬೩

ವ || ಎಂದದಱ ಮುಂದೆ ನಿಂದಿರಲಣ್ಮದೋಸರಿಸಿ ನಿಚಿಕುರವಿಕೀರ್ಣ ಪಾನೀಯ ಪೂರಪರಿ ವಧಿತಮನಳಿ ಪಿಕ ಶುಕಾವಳೀ ವಿರಾವಮುಖರಿತೋದ್ಯಾನ ಭೂರುಹಮಂ ಬಾಳ ಸಹಕಾರ ಭೂರುಹಮನೆಯ್ದಿ ಕೆಯ್ಗಳಂ ಮುಗಿದು-

ಕಂ || ಎಲೆ ಚೂತ ತುಂಬಿಗಂ ಕೋ
ಗಿಲೆಗಂ ಕೆಯ್ಗೊಟ್ಟು ನೀನುಮಿಂದೆನ್ನಂ ಬಂ
ದಲೆವುದಿದುಚಿತಮೆ ಭಾವಿಸು
ಸಲೆ ನೀರೆ ಱೆದೋವಿ ನಡಪಿದಂದಿನ ನಲವಂ || ೬೪

ವ || ಎನುತ್ತಮದಱೊಳ್ ಮಱುಮಾತುವಡೆಯದುಬ್ಬೆಗದೆ ಮಗುೞ್ದು ಮೃಗಧರಮಯೂಖ ಶೃಂಖಳಾಪಾತ ಪರಿಭೂಮಾಣೆಯನತಿಮ್ಲಾನ ದೀನ ವದನೆಯಂ ಪದ್ಮಿನಿಯನಿ ದಿರೊಳ್ ಕಂಡು-

ಕಂ || ಮುನಿದೆನ್ನನೊಡೆಯರಿಲ್ಲದ
ಳನಳಲಿಪಂತಳಲಿಸಿದನೆ ನಿನ್ನುಮನೀ ದು
ರ್ಜನನಿನ್ನುಮ ಱಿಯನೇ ನಿ
ನ್ನಿನಿಯಂ ಕಾಯ್ದೆಯ್ದಿ ನಾಳೆ ನಿಸ್ತೇಜಿಪುದಂ || ೬೫

ವ || ಎನುತುಮೆಯ್ದೆವಂದು ದಿವಸಕರ ಸಂಗಮನಾನಂತರ ಶ್ರಾಂತಿಯಿಂ ಕಣ್ಗೆಯ್ದ ತೆಱದಿನಿರ್ದ ತತ್ಪದ್ಮಿನಿಯಂ ಕೆಳದಿಯರ ಪಕ್ಕದೊಳನಾದೃತೆಯಾದವೋಲ್ ವಿಷಾದಮನಪ್ಪುಕೆಯ್ದು-

ಕಂ || ಎಸೆವ ಶಿಶಿರೋಪಚಾರದೊ
ಳಸುವಱೆಮಾಡಿದರಿವಂದಿರೆಂದುಸಿರ್ದಳಲಾ
ಱಿಸಲೆಳಸಿರೆ ಮೊಗಮೀಯದೆ
ಪುಸಿನಿದ್ದೆಯಿನಕಟ ನಳಿನಿ ಕಡೆಗಣಿಸುವುದೇ || ೬೬

ವ || ಎಂದಿಂತು ಪಲತೆಱದೆ ಮಱುಗಿ ಮನದ ನೋವನಾರೊಳಂ ನುಡಿದುಮಲ್ಲಲ್ಲಿ ಬಱೆದೆ ಕಿವಿಯನಿತ್ತಾಲಿಸಿಯುಮೇನಾನುಮಂ ಮನದೊಳವಧರಿಸಿ ನಿಂದು ತಲೆದೂಗಿ ಕೆಲನನಾರಯ್ದು ನಿಶ್ಚೈಸಿ ನೆಗೞ್ವತೆಱದೆ ಕಿಱಿದೆಡೆಯನೆಯ್ದೆವಂದುಪವನದ ಬೀದಿಯೊಳ್ ಬಳಸಿಯುಂ ತೊಳಲ್ವಳ್ ಅತ್ತಮಿತ್ತಣಿಂ ಬರ್ಪ ತೆಂಗಾಳಿಗಿದಿರೆೞ್ದು ಮನ್ನಿಸಿ ನಿಜೇಶ್ವರನ ವಾರ್ತೆಯಂ ಬೆಸಗೊಳ್ವಳ್ ಇದಿರೊಳುಲಿದೆೞ್ದು ಪೋಪ ಕೇಳೀವಿಹಂಗಮಂಗಳ್ಗೆ ಕೆಯ್ಯೊಡ್ಡಿ ನಿಜವಿರಹವೇದನೆಯನೋಪವಂಗೆ ಪೇೞ್ವದೆಂದು ದೈನ್ಯಂ ಬಡುವಳ್ ಅಂತುಮಲ್ಲದೆಯುಂ-

ಚ || ಪುದಿದಡೆವೊತ್ತಿದಪ್ಪುದದೆ ಬಂದುಗೆ ಮುಂದೆ ತಮಾಳಕುಂಜಮಿಂ
ತಿದೆ ಪೊಗೆದಪ್ಪುದತ್ತಲದೆ ಕಾಯ್ದುರಿದಪ್ಪುದಶೋಕಮೋವೊಮೋ
ವದೆ ಸುರಿಯುತ್ತುಮಿರ್ದಪುದು ಮುಂಮುರಿಯಂ ಮದನಾಗ್ನಿ ಸುತ್ತಿಮು
ತ್ತಿದುದೆನುತುಂ ದವಾವೃತ ಕುರಂಗಿವೊಲಾಕುಳೆಯಾಗಿ ನೋಡುವಳ್ || ೬೭

ಕಂ || ಅಸಕಳಿದ ತಾಪಮಂ ಸೈ
ರಿಸಲಾಱದೆ ಸಾವ ಬವಸೆಯಿಂ ಪೊರ್ದುವಳ
ರ್ಬಿಸುವ ಪುಲಿಯೆಂದು ಮಧುಪ
ಪ್ರಸೂನ ಸಂಕೀರ್ಣ ಕರ್ಣಿಕಾರದ್ರುಮಮಂ || ೬೮

ವ || ಮತ್ತಂ-

ಕಂ || ನಿಮಿರ್ವ ಶಶಿರಶ್ಮಿಕುಂತ
ಕ್ಕೆ ಮೆಯ್ಯನೊಡ್ಡುವಳಶೋಕಕುಸುಮಾರ್ಚಿರ್ಜಾ
ಳಮನೆಯ್ದಿ ಪುಗುವಳಾಮ್ರೋ
ನ್ನಮಿತಾಂಕುರ ಬಾಳ ಭುಜಗಮಂ ಬರೆತೆಗೆವಳ್ || ೬೯

ವ || ಎಂದು ಪಲತೆಱದೆ ತೆಱೆಯೆ ಪೇೞ್ದಿಂದುವ ಮುಖೇಂದುವಿಂದೆಡೆವಿಡದೆ ಪಸರಿಸುವ ವಲ್ಲಭಾ ವಿಪ್ರಲಂಭ ಶೃಂಗಾರರಸಮಯಸುಧೀಪ್ಲವದೊಳೋಲಾಡಿ ಕೋಡಿದಂದದಿಂ ಗಾತ್ರಮುತ್ಕಂಪ ರೋಮಾಂಚಭಾವಕ್ಕೆ ಪಕ್ಕಾಗೆಯುಂ ತತ್ಪ್ರೀತಿ ನಿರ್ಭರ ರಸಪ್ರವಾಹಮೆ ತನುವನಾವಗಂ ತೀವಿ ಪೊಱಪೊಣ್ಮಿದಪ್ಪುವೆನೆ ಬಾಷ್ಪವಾರಿಪ್ಲವಂ ತುರುಗೆಮೆಯ ಮೇರೆಯಂ ಮೀಱಲೊಡರಿಸೆಯುಂ ಅಬ್ಜಲೋಚನನಪರಾನಂದ ಭಾರಮಂ ತಾಳ್ದಿ-

ಕಂ || ಆಗಳೆ ಯೌವನರಾಜ್ಯ
ಶ್ರೀಗಮರ್ದುದು ಚಕ್ರರತ್ನಮುದ್ಭವಭೂಜ
ಕ್ಕಾಗಳೆ ಫಳನೊಗೆದುದು ಮದ
ಮಾಗಳೆ ಸೌಭಾಗ್ಯದಂತಿಗಾಯ್ತೆನೆ ಬಗೆದಂ || ೭೦

ವ || ತದನಂತರಂ-

ಕಂ || ಹಿಮಮಳಯಜ ಜಳದೊಳಮುಪ
ಶಮಿಸದ ವಿರಹಾಗ್ನಿ ಮಾಣ್ದುದೆರ್ದೆವುಗೆ ತತ್ಕಾಂ
ತೆ ಮನೋಭವಾನಳೋಷ್ಮಾ
ಯಮಾಣೆ ಕಿರ್ಚಿಂಗೆ ಕಿರ್ಚು ಮರ್ದಕ್ಕುಮೆನಲ್ || ೭೧

ಹರಿಣಿ || ಅಳುರ್ವ ತನುಸಂತಾಪಕ್ಕುಳ್ಳೞ್ಕಿ ನಲ್ಲವಳಿಂಬು ಕೆ
ಯ್ವೆಳೆ ವಸಲೆಯಂ ಕೇಳೀಶೈಳಂಗಳಂ ಪುಳಿನಂಗಳಂ
ಕುಳಿರ್ವಕೊಳನಂ ಧಾರಾಗೇಹಂಗಳಂ ಸೆ ಱೆಗೆಯ್ದನಾ
ಕುಳಮೆನೆ ಕುಳಿರ್ಕೋಡಿತ್ತಾಗಳ್ ಮನಂ ಮನುಜೇಂದ್ರನಾ || ೭೨

ವ || ಅಂತು ತಣ್ಮಲೆದು ನಲಿವ ಮನದೊಳ್ ತದೀಯವಿರಹೋಪಚಾರಿತ ಚೇಷ್ಟೆಗಳೆ ಮತ್ತ ಮವಿಚಳಂಗಳಾಗೆ-

ಚಂ || ತೆರೆಗೊನೆಯೊಳ್ ತೆರಳ್ದು ನಿಱಿಗಟ್ಟಿದ ಕತ್ತುರಿಯೊಳ್ಗೆಸರ್ಕಮ
ಲ್ವರಿಯೊಳುದಿರ್ಪತಿರ್ಪ ಕುಸುಮದ್ರತಿಯೊಳ್ವೊನಲೊಳ್ ಕಳಲ್ವಕ
ಪ್ಪುರದ ಪುಳಿಲ್ ಪಗಿಲ್ತಲರ ಬಂಡಿನ ಸಣ್ಣಮಣಲ್ ಮನಕ್ಕೆ ಬಂ
ದಿರೆ ಕೃತಕಪ್ರವಾಹಿನಿಯ ತಣ್ಮಳಲಂ ಬಿಡದಿರ್ಪ ನಲ್ಲಳಂ || ೭೩

ಕನಕಪರಾಗದಿಂ ಪಳಿಕಿನಂಚೆಗಳಂ ಪೊಣರ್ವಕ್ಕಿ ಮಾೞ್ಪ ಕಾಂ
ಚನ ಕಮಲಾಳಿ ನೀಳದಳಿಮಾಳಿಕೆಯಿಂದಸಿತಾಬ್ಜಮಾಳೆಯೆಂ
ಬಿನಮೆಸೆವಿಂದುಕಾಂತ ಕುಮುದಾವಳಿತಳ್ತಘನೋಪಳಾಂಬುವಿಂ
ನೆನೆದರುಮಂ ಕುಳಿರ್ಕೊಳಿಪ ಪೂಗೊಳನಂ ಸೆ ಱೆಗೆಯ್ದ ನಲ್ಲಳಂ || ೭೪

ಕಂ || ಮಲರ್ದಲರ್ದ ಬಯಲ್ದಾವರೆ
ಯಲರ್ವಂಡಂ ಮೊಗೆದು ತಳಿಯುತಿರೆ ತಣ್ಣೆಲರಿ
ರ್ಕೆಲದ ಪರಿಕಾಲ್ಗಳಿಂ ತ
ಣ್ಣಲೆವೆಳವಸಲೆಗಳನೆಳಸಿ ಸುೞಿವೆಳೆಯವಳಂ || ೭೫

ಚಂ || ನೆಲೆಮೊಲೆಯೊತ್ತಿನಿಂದೊಗೆವ ಕೋರಕಮುಂ ಪುಳಕಂಗಳುಂ ತಡಂ
ಗಲಿಸೆ ಲತಾಂಗಮಂ ಕುರವಕಾವನೀಜಾತದಮೇಲೆ ಸಾರ್ಚಿ ಕಾ
ದಲನೆಡೆಗೆಯ್ದಿ ಬರ್ಪ ಖಚರೀನಿಚಯಕ್ಕಿದಿರ್ವೋಗಿ ದಿಟ್ಟಿಗಳ್
ಪೊಲಗಿಡೆ ಚಿತ್ತದುಜ್ಜುಗಮುಮಂ ಮ ಱೆದಿರ್ದವೊಲಿರ್ದ ನಲ್ಲಳಂ || ೭೬

ಮುರಿಯೆ ಕೊರಲ್ ಕೆಲಕ್ಕೆ ಮುಡಿಜೋಲ್ವಿನೆಗಂ ಕರಮಂ ಕದಂಪು ಸಾ
ರ್ತರೆ ಮೊಗಮೊಯ್ಯನೋರ್ಗುಡಿಪಿನಂ ನಡುಬಳ್ಕುವಿನಂ ವಳಿತ್ರಯಂ
ತೆರಳೆ ಚರೋಪವಿಷ್ಟ ಶಶಿಕಾಂತಶಿಲಾನಿಹಿತೈಕಪಾಣಿಯಾ
ಗಿರೆ ಕುರುವಿಟ್ಟ ಚಿಂತೆಯನೆ ಚಿತ್ರಿಸಿದಂತೆವೊಲಿರ್ದ ನಲ್ಲಳಂ || ೭೭

ಕದಪಿನೊಳೊತ್ತು ಶೀತಳಿಕೆಯಂ ಕುಚಮಂ ನಳಿನೀದಳಂಗಳಿಂ
ಪೊದಯಿಸಮರ್ಚು ಕಂಠತಟದೊಳ್ ಬಿಸಮಂ ತಳಿ ಚಂದನಾಂಬುವಂ
ಹೃದಯದೊಳೆಂದು ಸಂಭ್ರಮಿಪ ಖೇಚರಿಯರ್ಕಳ ಮುಂದೆ ಬೇಗೆ ತಾ
ಗಿದ ಲತೆವೋಲ್ ಬೞಲ್ದು ಪರಿತಾಪದೆ ಬಂಬಳ ಬಾಡಿದೋಪಳಂ || ೭೮

ಕಂ || ನರಪತಿ ಭಾವಿಸಿ ಮತ್ತಂ
ಚರನುಕ್ತಿಗೆ ವಿಷಯಮಾಗದೋಪಳವಸ್ಥಾಂ
ತರಮುಂ ನಿಜಚಿಂತಾಗೋ
ಚರಮಾಗಿರೆ ಮನ್ಯುಮಿಕ್ಕು ತನ್ನಯ ಹೃದಯಂ || ೭೯

ಚಂ || ನೆನೆನೆನೆದಕ್ಕಟಾ ಕುಸುಮಕೋಮಳೆಯೀ ವಿರಹಾಗ್ನಿಯಿಂದಮಿಂ
ನೆನೆವಿರಿದಪ್ಪವಸ್ಥೆಯುಮನೆಯ್ದುಗುಮೊ ದಯೆಗೆಟ್ಟು ಮತ್ತೆಯುಂ
ಮನಸಿಜನೆಚ್ಚೊಡಾವ ತೆಱನಕ್ಕುಮೊ ಚೆಚ್ಚರಮೆನ್ನ ಪೇೞ್ದುದಂ
ತನಗಿವನೆಯ್ದಿ ಬಿನ್ನವಿಪಿನಂ ಪಿಡಿದಿಕುಮೆ ದೇವ ಜೀವಮಂ || ೮೦

ವ || ಎಂದು ಮತ್ತಂ-

ಕಂ || ಎನಗೋಸುಗಮಾಕೆಯನಿನಿ
ತನವಸ್ಥೆಯನೆಯ್ದಿಪಲ್ಲಿ ಬೆಸಗೊಂಡು ನೆಗ
ೞ್ದನೆ ಮದನನಕಾರಣ ಮಿ
ತ್ರನಿನ್ನುಮೆನಗೊಲ್ದೊಡೋಪಳಂ ಪಾಳಿಸುಗುಂ || ೮೧

ಸುಜನರ ಗುಣಮಾರ್ಗಂ ಪ್ರೀ
ತಿಜನಕಮೆಲ್ಲಿಯುಮದಿರ್ಕೆ ಮಾಯ್ದೆನ್ನ ಗುಣಂ
ಸ್ವಜನಮನೆ ನೋಯಿಸಿದುದಕ
ಟ ಜಗದೊಳೆನ್ನಂತು ದುರ್ಜನಾಗ್ರಣಿಯಾವೊಂ || ೮೨

ವ || ಎಂದು ಮನದೊಳೆ ವಿಕಲ್ಪಿಸುತ್ತುಂ-

ಕಂ || ಪ್ರಿಯಜನದಿನಲ್ಲದಾಱುಗು
ಮೆ ಯುವತಿಯ ವಿರಹಶಿಖಿ ಸಖೀಕೃತಶಿಶಿರ
ಕ್ರಿಯೆಯಿಂ ಹಿಮಕಣಗಣ ವೃ
ಷ್ಟಿಯಲರ್ಚುಗುಮೆ ಸುಧಾಂಶುವೋಲ್ ಕುಮುದಿನಿಯಂ || ೮೩

ಉ || ಕೋಮಲಪಾಣಿಪಲ್ಲವಮನೊತ್ತಿ ಕುಚಂಗೊಳೂರುದಂಡರಂ
ಭಾಮಳ ಕಾಂಡದೊಳ್ ಪದವಮುರ್ಚಿ ನವೋದ್ಗತರೋಮಹರ್ಷವ
ಕ್ಷೋಮೃದು ಶಾಡ್ವಲಸ್ಥಳಿಯೊಳಿಟ್ಟ ತದಂಗಜತೀವ್ರತಾಪಮಂ
ಕೋಮಳೆಗಾನೆ ಪಿಂಗಿಸುವೆನಿಂ ಸಖಿಯರ್ಕಳ ಪಂಗದೇವುದೋ || ೮೪

ವ || ಎಂದು ತದ್ವಿರಹಪರಿತಾಪಾಪನ್ನೋದನೋಪಾಯ ಪ್ರಪಂಚದೊಳಮೋಪಳ ಕೂಟಮನೆ ಕಾಮಿಸಿ ತದೀಯ ದುಸ್ತರ ಸ್ಮರದಶಾವ್ಯತಿಕರಕ್ಕೆ ತಲ್ಲೞಿಸಿ ಕಾಮೋತ್ಕಂಠೆಯಿಂ ಕಂಠತಟ ಪ್ರತಿಷ್ಠಾನುವಾದ ನಲ್ಲಳಸುವನಾಂ ಸಾಹಸದೊಳ್ ತಗುಳ್ಚಿನಿಲೆ ಪಿಡಿವ ನಯಮಂ ಬಗೆದು-

ಕಂ || ಕಾಣದ ಪದದೊಳ್ ಹೃದಯದ
ಕೋಣೆಯೊಳಿರ್ದೆನ್ನ ಮಾನಧನಮಂ ಕೊಂಡಳ್
ಕಾಣಲೊಡಮೊಪ್ಪಿಸದೆ ಪೋ
ಮಾಣೆಂ ಕೆಯ್ವಿಡಿದು ಕಾಮಚಕ್ರಿಗೆ ತನ್ನಂ || ೮೫

ವ || ಎಂಬಿವು ಮೊದಲಾಗೆ ನಿಜಮನಃಪ್ರಿಯ ಪ್ರಕಾಶ ಸಂದೇಶಪದಕಂ ರತ್ನ ಪದಕಮೆನಿಸಿ ನಿಜಹೃದಯದೊಳ್ ವಿರಚಿಸಿ ನಲ್ಲಳೆಡೆಗೆ ನುಡಿದಟ್ಟುವುಜ್ಜುಗದಿನಾಗಳಾಕೆಯೊಲವಿನೊಸ ಗೆಯಂ ತಂದು ತನ್ನಮನಮಂ ಮುನ್ನಮೆ ಮೆಚ್ಚುವಡೆದ ಖೇಚರಚರಂಗೆ ನಿಜಹೃದಯದಾನ ಪೌನರುಕ್ತ್ಯಮಂ ಮಾಡಲಿಚ್ಛೈಸಿ-

ಕಂ || ಚಿತ್ತಮನೆಡೆಗೊಂಡೋಪಳೊ
ಳೊತ್ತೊತ್ತಿಂ ನೂಂಕೆಪಟ್ಟು ಪೊಱಮಡುವವೊಲಂ
ದೊತ್ತರಿಪ ಸುಯ್ಯನಳವಡಿ
ಸುತ್ತಂತರ್ಭರಿತ ವಾಗ್ಭರಸ್ಫುರಿತೋಷ್ಠಂ || ೮೬

ತೆರೆಮಸಗಿ ಬಾಷ್ಪಜಳಮೊ
ತ್ತರಿಸೆ ಮೊದಲ್ ನಾಂದು ಬಿಣ್ಪುವೆತ್ತೆಮೆದೊ ಱೆಯಂ
ಭರದಿಂ ತಾಂಗಿ ನಿಜಾರ್ದ್ರಾಂ
ತರಂಗಭರಮಂ ನಿವೇದಿಪಂತೀಕ್ಷಿಸಿದಂ || ೮೭

ವ || ಅಂತು ನಿಜಮನೋರಥ ವಿವಕ್ಷೆಯಿನೀಕ್ಷಿಸುವ ಗಾಂಭೀರ್ಯವಾರಿಧಿಯ ಜಿಹ್ವಾಲೋಳಕ ಲ್ಲೋಳಲತೆಯನಡ್ಡಯ್ಸುತಿರ್ಪಲಂಘ್ಯ ಮರ್ಯಾದೆಗೆ ನೆರಂಬರ್ಪಂತೆ ಬಂದೊರ್ವ ಪಡಿಯಱಂ ಪೊಡೆವಟ್ಟು ದೇವ ಖೇಚರರಾಜದೂತಂ ಬೆರಸೋಲಗಕ್ಕೆ ಬಿಜಯಂಗೆ ಯ್ವುದೆಂದರಸಟ್ಟಿದ ನಿಯಾಮಮೆಂದು ಬಿನ್ನವಿಸೆ ಕೇಳ್ದಿಂದುವಿಂಗೆ ಮನದೊಳಿರ್ದುದಂ ನುಡಿಯಲೆಡೆವಡೆಯದೆ ತತ್ಪ್ರಸಂಗ ರಸಭಂಗದೊಳ್ ಕೊರಗುವ ಮನಃಕಮಳ ಮನವಿಳಂಬಿತೋಪಲಪ್ಸ್ಯಮಾನ ಪ್ರಾಣೇಶ್ವರೀಪಾಣಿಗ್ರಹಣಕಲ್ಯಾಣೋದ್ಯೋಗ ರಾಗರಸದಿನಲರ್ಚುತ್ತುಮಿಂದುವಿನ ಮೊಗಮಂ ನೋಡಿ ಱೆ-

ಕಂ || ಹೃದಯಂಬುಗಿಸಿ ಮನೋಜಾ
ಗ್ನಿದಗ್ಧೆಯಪ್ಪವಳನೆನಗಮನುತಾಪಮನಿಂ
ತೊದವಿಸಿದ ನಿನ್ನ ಸಂಸ
ರ್ಗದೊಳಿನ್ನಿರಲಾಗದೆಂದು ನಸುನಗೆ ನಗುತಂ || ೮೮

ಸ್ಮರನಱಿದು ಮದನಮುದ್ರಾ
ಸ್ವರೂಪರಂ ಕಾಸಿ ಬೆಚ್ಚನೆನಿಸಿದಪುದು ನೀಂ
ನೆರಪಿದೊಡೆನ್ನೊಳ್ ಪೂರ್ವಾ
ನುರಾಗ ಪರಿತಪ್ತೆಯಾದ ತತ್ಕನ್ಯಕಿಯಂ || ೮೯

ಎಂಬಿನಿತನೆ ಬಲ್ಲೆಂ ತ
ದ್ದಿಂಬಾಧರೆಗಟ್ಟುವುಚಿತ ಸಂದೇಶಮನೇ
ನೆಂಬುದದನೆ ನೀನೆಂತಾ
ನೆಂಬುದುಮಂ ಹೃದಯವರ್ತಿ ನೀನೆ ದಲ ಱಿವೈ || ೯೦

ವ || ಎನುತ್ತಮಲ್ಲಿಂ ತಳರ್ದು ನಿಜವಿಳಾಸ ಕೇಳೀವನಮನುಪಕಂಠ ಪಕ್ಷದ್ವಾರದಿಂ ಪೊಱಮಟ್ಟು ಮುಂದೆ ಸಾರ್ಚಿದಂದಣಮನೇಱಲೊಲ್ಲದಿಂದುವಿನ ಕೆಯ್ಯಂ ಪಿಡಿದು ವಲ್ಲಭಕಳಭಂ ಬೆರಸು ಯೂಥಪತಿ ಬರ್ಪಂತೆ ಪುರಃಪ್ರಚಳಿತಾಕೀರ್ಣಜನ ವಿಭಕ್ತರಿಕ್ತೀ ಭೂತರಾಜ ವೀಥಿಯಂ ದರಹಾಸಫೇನಿಳಾಪಳೋಕನ ಸುಧಾಪ್ರವಾಹದಿಂ ಪೂರಿಸುತ್ತುಮೆೞ್ತಂದು-

ಚಂ || ಧರೆಯ ಸಮಸ್ತಸಜ್ಜನ ಪದಂಗಳ ಸಂಗತಿವೆತ್ತ ಸಾರ ಸೌಂ
ದರತೆಯದೆಲ್ಲಮೊಂದೆಡೆಗೆ ಬಂದವೊಲಾದಮೆ ಕಣ್ಗೆವಂದ ಬಂ
ಧುರ ನರಪಾಲನೋಲಗದ ಶಾಲೆಯನಾ ಹರಿ ಪೊಕ್ಕು ಭೂಮಿಭೃ
ಚ್ಚರಣ ಸರೋರುಹಕ್ಕೆಱಗಿದಂ ಮುದದಿಂ ವಸುಧೈಕಬಾಂಧವಂ || ೯೧

ಗದ್ಯಂ
ಇದು ನಿಖಿಳ ಭುವನ ಜನವಿನೂತ ಸ್ಫೀತಮಹಿಮಾವದಾತ ವೀತರಾಗ ಸರ್ವಜ್ಞತಾ ಸಮೇತ
ಖ್ಯಾತಜಿನಸಮಯ ಕಮಳಿನೀಕಳಹಂಸಾಯಮಾನ ಮಾನಿತ
ಶ್ರೀನಂದಿಯೋಗೀಂದ್ರಪ್ರಸಾದ ವಾಚಾಮಹಿತ
ಕೇಶವರಾಜಾನಂದನಂದನ ವಾಣೀವಲ್ಲಭ ವಿಸ್ತಾರಿತಮಪ್ಪ
ವಸುಧೈಕಬಾಂಧವ ಶ್ರೀ ವರ್ಧಮಾನ ಪುರಾಣದೊಳ್
ಸ್ವಯಂಪ್ರಭಭಮದನೋನ್ಮತ್ತ ವರ್ಣನಂ
ಚತುರ್ಥಾಶ್ವಾಸಂ