ವ || ಅಂತೆಸೆವ ಪೆಂಡವಾಸದ ವಿಳಾಸದಿನನಂಗರಾಜವಿಜಯ ಪ್ರಯಾಣಲೀಲೆಯನೆಳುಱಿ ಸುತ್ತುಮಿದಿರ್ವರ್ಪನ್ನೆಗಂ ಪುರಪರಿಸರ ಸರಿತ್ತೀರವನದ ತರುತಳದೊಳವತರಿಸಿ ನಿಜವಿಭವಪ್ರಕಾಶ ಭೂಷಣ ವಸನ ಕುಸುಮಾದಿ ಪ್ರಸಾಧನ ಕುತೂಹಳಕ್ಷುಭಿತಮಾಗಿರ್ದ ಖಚರಚಕ್ರದ ನಡುವೆ-

ಮ || ತರುಷಂಡ ಪ್ರತಿಬಿಂಬ ಸಂಕ್ರಮಣದಿಂ ಮುಕ್ತಾತಪತ್ರಂಗಳಂ
ಬುರುಹೋನ್ನಾಳದಳಂಗಳಂತಿರೆ ಮೃಣಾಳೀಮಾಳೆವೋಲ್ ಮಿಳ್ಳಿಸು
ತ್ತಿರೆ ಚಂಚಚ್ಚಮರೀರುಹಂಗಳಮಳ ಕ್ಷಾಮೋಜ್ಜ್ವಳಾಂಗಂ ವಿಯ
ಚ್ಚರರಾಜಂ ಖಗರಾಜಚಕ್ರಯುತನಿರ್ದಂ ರಾಜಹಂಸೋಪಮಂ || ೪೧

ವ || ಮತ್ತಂ-

ಕಂ || ನಯನೋತ್ಸವಮಂ ನವಕಳಿ
ಕೆಯಿನುದ್ಯತ್ಪಳದಿನೀವ ಸಂತಾನದ ಲೀ
ಲೆಯನಾಂತು ಖಚರರಾಜಂ
ಸ್ವಯಂಪ್ರಭೆಯುಮರ್ಕಕೀರ್ತಿಯ ರೂಪಂ

ಬೆಳಗುವ ತೇಜೋಗುಣಮನೆ
ಬೆಳಗುವ ಮೆಯ್ಸಿರಿಯಿನರ್ಕಕೀರ್ತಿಯ ರೂಪಂ ||
ತಳೆದವೊಲಿರ್ದಂ ವ್ಯಜನಾ
ನಿಳ ನರ್ತಿತ ಹಾರನರ್ಕಕೀರ್ತಿಕುಮಾರಂ || ೪೩

ಚಂ || ಮುಡಿಯಿಸುವಣ್ಪನಿಕ್ಕುವಡಿಯೂಡುವ ಕನ್ನಡಿದೋರ್ಪ ತಿರ್ದಿಬೊ
ಟ್ಟಿಡುವಬಳಾಕದಂಬದಿನದೇನೆಸೆದಿರ್ದಳೊ ರತ್ನಪೀಠದೊಳ್
ನಡುವೆ ಖಗೇಂದ್ರಕನ್ಯೆ ದರಹಾಸಸುಧಾರುಚಿ ಪರ್ವೆ ಮಿಂಚುಗಳ್
ಗಡಣಿಸಿ ಸುತ್ತೆ ಪೂರ್ವಗಿರಿಕೂಟದೊಳಿರ್ದ ಸುಧಾಂಶುಲೇಖೆವೋಲ್ || ೪೪

ವ || ಮತ್ತಂ-

ಕಂ || ಎಳಸಿ ನವಪತ್ರಮಂಜರಿ
ಗಳ ಗುಚ್ಛದ ಮುಗುಳ ಚೆಲ್ವನಾತ್ಮಾಂಬಿಕೆ ಸಾ
ರ್ದಳವಡಿಸುತ್ತಿರೆ ನನೆಯಿಸಿ
ದಳಬಳೆ ಮಧುಲಕ್ಷ್ಮಿ ಮೇಳಿಸಿರ್ದೆಳಲತೆಯಂ || ೪೫

ವ || ಅಂತು ನಿಜಾಂತಃಪುರಪುರಂಧ್ರಿಯರ್ ತಮತಮಗೆ ತತ್ಪತಿಂವರೆಯ ಮಂಗಳ ಪ್ರಸಾಧನ ವಿನೋದಮೆ ಪುರಪ್ರವೇಶ ಪ್ರಶಸ್ತ ಲಗ್ನಾಂತರಾಳ ವೇಳಾವಿನೋದಮಾಗೆ ಲೀಲೆಯಿನಿರ್ದ ವಿದ್ಯಾಧರಾಧಿರಾಜನ ನಿಜಾಗಮೋತ್ಸವಕ್ಕೆ ನರ್ತಿಸಿದಪುವೆನಿಸಿ ಮಂಗಳಪಟಹಪಟುರ ವದಿಂ ತತ್ಸಭೆಯ ರತ್ನಪೀಠಂಗಳದಿರ್ವಿನಮಿದಿರ್ವಂದು ಸಂಭ್ರಮಾಭ್ಯುತ್ಥಾನ ಸಂಸಮಾನ ಚೀನಾಂಚಳಾಚಲನ ಚಳಿತವಳಯೋನ್ಮುಖರ ಮುಖಿ ಪ್ರಾರ್ಥಿತಪರಿರಂಭನಂ ಬೀಯ ಗನನೞ್ಕಱಿಂ ತೞ್ಕೈಸಿ ತತ್ಕರಪ್ರಸಭಾಕೃಷ್ಪನಿಕಟ ವಿಷ್ಪರೋಪವಿಷ್ಟಂ ತತ್ಸಮಯ ಸಮುಚಿತ ಶೋಭನೋಪಚಾರಾಜ್ಞಾಪಿತ ಕುಲವೃದ್ಧ ಪುರಂಧ್ರೀಜನಸಮಾಜಂ ಪ್ರಜಾಪತಿ ಮಹಾರಾಜಂ ನಿಜಪದನಿಧಾನ ದೀಪವರ್ತಿಯಾದರ್ಕಕೀತಿಯಂ ತೞ್ಕೈಸಿ ಪರಸುವುದು ಮನತಿನಿಕಟದೊಳ್ ಕೆಳದಿಯರ ನಡುವೆ ಮನಸಿಜವಿಳಾಸಕೇಳೀ ಸಾರಿಕೆಯೊಲಿರ್ದ ನಿಜದಾರಿಕೆಯಂ ಜ್ವಳನಜಟಿಮಹಾರಾಜಂ ಪ್ರಣಯಲಾಲನೋಚಿತ ವಿಕೃತಾಭಿದಾನ ಮುಖರ ಮುಖಾಂಭೋಜನೞಿಂ ಕರೆದು-

ಕಂ || ತೆಗೆದುರದೊಳಮರ್ಚಿ ಮುಖೇಂ
ದುಗಾಕೆ ಮಱಿಮಾಡಿ ಪಿಡಿದ ಲೀಲಾಬ್ಜಮನೊ
ಯ್ಯಗೆ ಕೆಲಕೆ ನೂಂಕಿದಂ ಪೋ
ಗುಗೆ ಪೊಡವಡಲಕ್ಕ ನಿಮ್ಮಮಾವಂಗೆನುತುಂ || ೪೬

ಇದಿರ್ಗೆಱಗುವುದಂ ಮುನ್ನಱಿ
ಯದೆ ಸಿಡಿಮಿಡಿಗೊಳ್ವ ಮುಗ್ಧೆಯಂ ಭರದೆ ಸಭಾ
ಗ್ರದೊಳೆಱಿಗಿಸಿ ತಾಂ ಗುರುವಾ
ದುದು ಲಜ್ಜೆ ಖಗಾಧಿರಾಜನಂದನೆಗಾಗಳ್ || ೪೭

ವ || ಅಂತು ಸಹಜಸಾಧ್ವಸ ನಮ್ರತೆಯೆ ಭಕ್ತಿಪ್ರಣತೆಯಾಗಿ ಪರಿವರ್ತಿತಕಟಾಕ್ಷ ಕಿರಣಾಕ್ಷತಂಗಳಿಂ ನಿಜಾಂಘ್ರಿಗಳನರ್ಚಿಸುವ ಕನ್ಯಾರತ್ನಮಂ ನಿಜಕುಲಕ್ಕಿದುವೆ ಚೂಡಾರತ್ನಮೆಂದು ನೋಡಿ ಪಾರಯ್ಸಿ ಪಲವಂ ನಲ್ವರಕೆಯಂ ಪರಸಿ ತದುತ್ಸವ ರಸೋತ್ಪ್ಲತಮನಃಪ್ರಮೋದ ವಶದಿನಾಗಳ್ ಸಮಾಹೃತ ಸಮಯೋಚಿತ ಗೋಷ್ಠೀವಿನೋದನೆೞ್ದು ವಿದ್ಯಾಧರಾದಿ ರಾಜನಂ ಮುಂದಿಟ್ಟೊಡಗೊಂಡು ಬಂದು ನಿಜಪುರಮನುತ್ತುಂಗತೋರಣ ತರಂಗಿತ ಗೋಪುರಮನಷ್ಟಮಂಗಳೋಪಚಾರಪುರಸ್ಸರಂ ಪುಗಿಸೆ-

ಮ || ಸ್ರ || ಸುದತೀಸಂದೋಹದಾಕಾರದಿನವನಿತಳಂ ರತ್ನಭೂಷಾಪ್ರಭಾಕಾ
ರದಿನಾಶಾಭಿತ್ತಿ ರೋಧಸ್ಥಳಿ ಚಮರರುಹಚ್ಛತ್ರಪಾಳಿಧ್ವಜಾಕಾ
ರದಿನೊಪ್ಪಂಬೆತ್ತು ರೂಪಾಂತರ ಪರಿಣತಮಾಯ್ತಲ್ಲದಂದೆತ್ತವೋದ
ತ್ತದು ಪೇೞೆಂಬನ್ನಮಾಯ್ತಚ್ಚರಿ ಪುಗೆ ಪುರಮಂ ಬಂದು ವಿದ್ಯಾಧರೇಂದ್ರಂ ||

ಮ || ಸುರಚಾಪಂ ಕವಿದಿರ್ದ ಕವಿದಿರ್ದ ಕಾರಮುಗಿಲೊಳ್ ಮೆಯ್ದೋರ್ಪವಿದ್ಯುಲ್ಲತೋ
ತ್ಕರಮೆಂಬಂದದಿ ನೇಱಿದೋಜೆವಿಡಿಯೊಳ್ ಭಾಸ್ವನ್ಮಣಿಚ್ಛತ್ರಮಂ
ಜರಿ ತಳ್ತೆತ್ತಿರೆ ಭಂಗುರಾಂಗಲತಿಕಾ ಲಾವಣ್ಯಮಂದಲ್ಲಿ ನೋ
ೞ್ಪರ ಕಣ್ಣೊಳ್ ಪೊಳೆದುಳ್ಕೆ ಬಂದುದು ಖಗೇಂದ್ರಾಂತಃಪುರಸ್ತ್ರೀಜನಂ || ೪೯

ವ || ಅಂತು ಬರ್ಪಂತಃಪುರ ಕಾಂತೆಯರ ನಡುವೆ ಪೀಲಿದೞೆಯ ತುಱುಂಗಲೊಳ್ ಉದ್ಯಾನ ಷಂಡಂಬೆರಸು ವನದೇವತೆಯೆ ಬರ್ಪಂತೆ-

ಉ || ಕಾಂಡದವೋಲ್ ವಿಳಾಸಭೃತವಾರಿಜಮೇಱಿದ ರತ್ನದೋಳಿಕಾ
ದಂಡಿಕೆ ಚಾಪದಂಡದವೋಲಾತ್ಮವಪುರ್ಲತೆ ನಾರಿವೊಲ್ ಮನಂ
ಗೊಂಡಿರೆ ಬಂದಳಿಂದಿವಳ ಮೆಯ್ವಿಡಿದಾಯ್ತು ಮನೋಭವಂಗೆ ಕೋ
ದಂಡಸರಪ್ರಯೋಗಮೆನೆ ತಾಳ್ದಿ ವಿಯಚ್ಚರಕನ್ನೆ ಲೀಲೆಯಿಂ || ೫೦

ವ || ಅಂತು ಮನಸಿಜವಿಜಯಚಕ್ರರತ್ನಮೆನಿಪ ಕನ್ಯಾರತ್ನಮಂ ಮುಂದಿಟ್ಟು ಬರ್ಪ ನಿಬ್ಬಣದ ಬರವಿನಾಡಂಬರಮಂ ಪುರವರದೊಳೆಲ್ಲಮೞ್ತಿಯಿಂ ನೋಡಲೆಂದು-

ಕಂ || ಪೆಱಗುಳಿದಿರ್ದುವು ಪೊಱಮಡ
ಲಱಿಯದೆ ಪಂಜರಶುಕಾದಿಗಳೆ ಪುರಗೃಹದೊಳ್
ಪೆಱಗಿನಿತಿರ್ಪವರಿಲ್ಲೆನೆ
ಪೊಱಮಟ್ಟೈತಂದುದುಂದು ಪುರಜನಮೆಲ್ಲಂ || ೫೧

ಪುರವೀಥೀಲತೆಗಳ್ ಕುಡಿ
ವರಿದಪುವೆನೆ ಮುಂದೆ ತೆಱಪುವಡೆಯದೆ ಸುತ್ತುಂ
ಪರಿವಡೆದುದು ಪುರಜನಮಾ
ಳ್ವರಿಗಳ ಕೊತ್ತಳದ ಮದಿಲಮಾಡದ ಮೇಲಂ || ೫೨

ವ || ಮತ್ತಂ-

ಕಂ || ಪುರವಿಪಣಿಮಾರ್ಗರತ್ನಾ
ಕರಮಂದೇಂ ಘೂರ್ಣಿಸಿತ್ತೊ ಕವಿದೆತ್ತಂ ತೀ
ವಿರೆ ಜನತಾವಾಹಿನಿಗಳ್
ಪರಿತಂದುತ್ತುಂಗ ಹರ್ಮ್ಯಕೂಟಾದ್ರಿಗಳಿಂ || ೫೩

ವ || ಆ ಸಮಯದೊಳ್-

ಚಂ || ಕುಸಿದಪುದೆಮ್ಮ ಬಿಣ್ಪಿನೊಳೆ ಹಾರದಮಾಲೆಯ ಬಿಣ್ಪನೆಂತೊ ಸೈ
ರಿಸಿದಪುದೆಂದು ನೋಡಿ ನೆಗೞ್ವಂತುಪಕಾರಮನಂಗಯಷ್ಟಿ ಗಾ
ಳಿಸಿ ಪಱಿದಿಕ್ಕಿ ಹಾರಲತೆಯಂ ಮೊಲೆ ಸೋರ್ಮುಡಿ ಸೊಸೆ ಮಾಲೆಯಂ
ಪಸರಿಸೆ ವಿಭ್ರಮಂಬಡೆದುದಂಗನೆಯರ್ ಪರಿತರ್ಪ ಸಂಭ್ರಮಂ || ೫೪

ಕಂ || ಬಂಡಾಡೆ ಮೇಲೆ ಮಧುಕರ
ಮಂಡಳಿಗಳ್ ಬಿಟ್ಟು ಮಿಳಿರ್ವ ಮಡದಿಯ ಮುಡಿ ಮಾ
ರ್ಕೊಂಡುದು ಕಾರ್ಮುಗಿಲಡಿಯೊಳ್
ತಾಂಡವಮಂ ಮೆಱೆವ ಸೋಗೆನವಿಲ ಬೆಡಂಗಂ || ೫೫

ವ || ಮತ್ತಂ-

ಕಂ || ನಱುಸುಯ್ಗೆ ಮುಸುಱಿ ಬರುತಿರೆ
ಮಱಿದುಂಬಿಯಪಿಂಡು ಪರಿವ ತರುಣಿಯ ಮುಖಮೇಂ
ಬೆಱಗಾಗಿಸಿದುದೊ ತಿಮಿರಮ
ನಱೆಯಟ್ಟುವ ತಿಂಗಳೆನಿಸಿನೋಡುವ ವಿಟರಂ || ೫೬

ವ || ಅಂತು ಪರಿತಂದು ನೋೞ್ಪ ನಗರ ನಾರಿಯರ ಲೋಚನಷಟ್ಚರಣ ಚುಂಬನದಿನಾನನಾಬ್ಜ ಮನಲರ್ಚಿಯುಮಿಕ್ಕುವ ಶೇಷಾಕ್ಷತಂಗಳಿನಳಕಲತಿಕೆಗಲರ್ಗೊಂಚಲಂ ನಿರ್ಮಿಚಿಯುಂ ಎಳೆದಳಿರ ತೋರಣಂಗಳಿಂ ಪಟವಾಸರೇಣು ಧೂಸರಿತರತ್ನಾತಪತ್ರಮನುಜ್ಜ್ವಳಿಸಿ ಯುಂ ಅತಿಪರಿಚಯಂಬಡೆದ ವಿಪಣಿವೀಧಿಯಂ ಸ್ವಯಂಪ್ರಭೆ ಮನಮಲ್ಲದ ಮನದಿನ ಗಲ್ವಿನಮೊಡಗೊಂಡು ಬಂದು ಪೌದನಾಧಿರಾಜಮಂದಿರದ ಕೆಲದ ಕೇಳೀವನದಂಗಣ ದೊಳೆತ್ತಿದ ಮುತ್ತಿನಮಂಡವಿಗೆಗಳ ತಂಡದಿಂ ವಿಯನ್ಮಂಡಳಮಕಲಾತಾರಕಿತಮಾಗೆ ಸೊಗಯಿಸುವ ಮಂಗಳ ಸಿಬಿರಮಂ ಬೀಡಿಕೆ ಗೊಟ್ಟು-

ಕಂ || ವಿಭವಮನೇಂ ಮೆ ಱೆದನೊ ದಿ
ವ್ಯಭೋಜನಾಲೇಪ ಮಾಲ್ಯಗೀತಾತೋದ್ಯ
ಪ್ರಭೃತಿ ಮಹಾಸತ್ಕಾರದಿ
ನಭಿನವಸುರಶಾಖೆಯೆನೆ ಖಗೇಂದ್ರಂಗೆ ನೃಪಂ || ೫೭

ವ || ಅನಂತರಂ ತದ್ವಸುಧಾಧಿಪತಿ ಕೃತಸ್ನೇಹ ನಿರ್ಭರೋಪಭೋಗ ಪರಿತೃಪ್ತ ಹೃದಯರ್ ನಿಜಾಂಬಿಕಾಜನಕರಿನಿಸು ವಿಶ್ರಮಿಸಿರ್ಪಿನಂ ಕ್ರೀಡೋಚಿತಾರ್ಥಯಾಮಾವಶೇಷವಾ ಸರಶಿಶಿರವೇಳೆಯೊಳಶೇಷ ಖಚರಕನ್ಯಕಾಪರಿಜನ ಪರೀತೆಯಾಗಿ ನಿಜವಿಳಾಸಮಂ ದಿರೋಪಚತ್ವರಮನೆಳಸಿ ಸುೞಿಯುತ್ತುಮಂಬರಚರೇಶ್ವರ ಕುಮಾರಿ ನಿಜಶಿಬಿರಾಶಿ ನಿಕಟದೊಳೆಲರಿನಲುಗುವೆಳೆದಳಿರ್ಗಳಿಂ ಕೆಯ್ಸನ್ನೆಗೆಯ್ದು ಕರವಂತಿರ್ಧ ಕೇಳೀವನಮನಿದು ಮುಕುಂದನುದ್ಯಾನವನಮೆಂದು ಕೆಳದಿಯರ್ ತೋಱೆ ತದವಳೋಕನಕ್ಯಾಗ್ರಹಂಗೆಯ್ಯೆ ಮುನ್ನಂ ನಿಜೇಶದರ್ಶನಾಭಿಲಾಷದಿಂ ತನ್ನಂ ಕೊಂಡೆವಳ ಕಣ್ಗಳಂ ನಿಲಿಸಲನ್ನೆಗಂ ನೆವಂಬಡೆದೆನೆಂದು ವನವಿಳೋಕನ ಕುತೂಹಲದಿನೆಯ್ದೆವರೆ-

ಮ || ಪುಗುತುಂ ಕಣ್ಬೆಳಗಿಂ ಲತಾಗೃಹದ ಮರ್ವಂ ತೊಳ್ದಿ ಕೇಶಾಂಶುವಿಂ
ಮಗುೞ್ದುತ್ಪಾದಿಸುತುಂ ವನಚ್ಛದಲತಾಂತಚ್ಛಾಯೆಯಂ ದೇಹದೀ
ಪ್ತಿಗಳಿಂ ಮುದ್ರಿಸಿ ಬೇಱೆ ಬಿತ್ತರಿಸುತುಂ ಭೂಷಾಮಣಿಕ್ಷಿಪ್ರ ಕಾಂ
ತಿಗಳಿಂ ಬಂದುದಪೂರ್ವ ಸೃಷ್ಟಿಜನಕಂ ವಿದ್ಯಾಧರಸ್ತ್ರೀಜನಂ || ೫೮

ವ || ಅಂತು ಸಹಜಸೌಂದರ್ಯಸಂದರ್ಶಿತ ಹರಣಭರಣ ಸಾಮರ್ಥ್ಯದಿಂ ಮದನ ನದಿದೇವತೆಯರಂತೆ ಬರ್ಪ ಯುವತಿಯರ ನಡುವೆ-

ಚಂ || ಧರಣಿಗೆ ತಾರಕಾವೃತ ಸುಧಾಕರಲೇಖೆಯಿದೆತ್ತ ಲೀಲತಾ
ಪರಿವೃತ ಕಲ್ಪವಲ್ಲಿ ನರಪಾಳಕ ಕೇಳಿ ವನಕ್ಕಿದೆತ್ತಲ
ಚ್ಚರಿಯೆನೆ ಬಂದಳಂಗರುಚಿ ಪರ್ವೆ ದಿಗಂತಮನೀಕ್ಷಣಾಂಶುಮಂ
ಜರಿತವನಾಂತರಾಳಿ ಗಗನೇಚರರಾಜತನೂಜೆ ಲೀಲೆಯಂ || ೫೯

ವ || ಅಂತು ಪಂಕಜಪ್ರಭವ ಪರಮ ಪ್ರಯತ್ನ ವಿರಚಿತ ಸಂಚಾರಿತ ರತ್ನಪುತ್ರಿಕೆಯುಮಂಗಜ ಭುಜೋತ್ಖಾತ ನಿಶಿತಾಸಿಪುತ್ರಿಕೆಯುಮೆನಿಸಿ ಬರ್ಪ ವಿದ್ಯಾಧರಾಧಿಪತಿಪುತ್ರಿಕೆಯನವ ನೀಪಾಳ ಪರಮರಹಸ್ಯ ಶಾಳಿಕೆಯುಂ ಆಕಳಿತಸಕಳಗುಣ ಮಾಳಿಕೆಯುಂ ಅಪ್ಪವನಪುಳಿಕೆ ಯೊರ್ವಳಿದಿರ್ವಂದು ತದ್ವನೋಚಿತೋಪಾಯನಪುರಸ್ಸರಂ ಕಂಡು ಮುಂದಿಟ್ಟೊಡ ಗೊಂಡುಪೋಗಿ ನಿಜವಿಳಾಸಕೇಳೀಕೌತುಕೋತ್ಪಾದಕಂಗಳಪ್ಪ ಕಮನೀಯ ಪ್ರದೇಶಂಗಳಂ ಕಂಡು-

ಚಂ || ಇದು ನಳಿನೇಕ್ಷಣ ಬಿನದದಿಂದಲರ್ಗಟ್ಟುವ ಮಲ್ಲಿಕಾಲತಾ
ಸದನಮಿದಚ್ಯುತಂ ಸಲಿಲಕೇಳಿಯನಾಡುವ ಪದ್ಮಸದ್ಮಮಿಂ
ತಿದು ಕಮಳಾಧಿಪಂ ಕಳೆಯ ಗೀತದ ಗೊಟ್ಟಿಯೊಳಿರ್ಪ ಚಂಪಕಾ
ಸ್ಪದಮಿದು ಚಕ್ರಿಚಿತ್ರ ರಸಚರ್ಚೆಯೊಳಿರ್ಪ ರಸಾಳಮಂದಿರಂ || ೬೦

ವ || ಎಂದು ತೋಱುತ್ತುಂಬರೆ ತತ್ತನ್ಮನೋಹಾರಿ ಚಾರುತೆಗೆ ಮೆಚ್ಚಿ ನೋಡುತ್ತುಮೆೞ್ತರ್ಪ ನಿಜವಿಳೋಚನ ಚಂಚರೀಕಂಗಳಂ ಅಭಿನವೋದ್ಗಮಸ್ತಬಕ ನಿಕುರುಂಬದೊಳೆಱಗಿಸುತ್ತುಂ ವಸಂತರಾಜನೋಲಗಶಾಲೆಯಂತೆ ಶುಕ ಪಿಕ ಮಧುವ್ರತ ಪ್ರಕರ ಮುಖರಾಯಮಾಣ ಮಾದ ಮಾಧವೀಮಂಡಪಮನೆಯ್ದಿವರೆ-

ಚಂ || ಒಸೆದು ನೃಪಾಳನಾಡಿಸಿದ ಸೋಗೆಗಳಿಂತಿವು ಚಕ್ರಿ ಬೀಣೆಬಾ
ಜಿಸೆ ಸುತಿಗೂಡಿ ತಾರಯಿಪ ತುಂಬಿಗಳಿಂತಿವು ಭೂಪನೊಳ್ ಯಥಾ
ವಸರದೆ ಕಾವ್ಯನಾಟಕಮನೋದುವ ಕೀರಮಿವೆಂದು ತತ್ಕಳಾ
ರಸಿಕನ ಚಿತ್ತವೃತ್ತಿಯ ಪಸಾಯಿತೆ ತೋಱೆ ಮನೋನುರಾಗದಿಂ || ೬೧

ವ || ನೋಡಿ ನಾಡೆಯುಂ ತದೀಯ ಸೇವೋಪಚಾರಚಾಪಳಕ್ಕೆ ವಿಸ್ಮಯಸ್ತಿಮಿತಲೋಚನೆ
ಯಾಗಿರ್ಪಿನಂ ಮನೋಹರಿ ಲತಾನಿಕೇತನಾಂತಃಪ್ರದೇಶಮಂ ತೋಱಿ-

ಚಂ || ಕವಿಜನಮಿತ್ರನೋದುವ ನಿಬಂಧಮಿವಂಗಜಬಂಧುಬಾಜಿಪಾ
ಳವಿಣೆಯಿವೊಲ್ದುದಂ ಬಹುಕಳಾಖನಿ ಚರ್ಚಿಪ ಶಿಳ್ಪಿಯಂತ್ರಮಿಂ
ತಿವು ಹೃದಯಸ್ಥಮಂ ತನತು ವಿದ್ಧಮನಾ ಮನುವಂಶಮೇರು ತಿ
ಟ್ಟವನಿಡುವಲ್ಲಿಗಾ ಫಳಕಮಿಂತಿವು ನೋೞ್ಪುದು ದೇವಿನೀನಿವಂ || ೬೨

ವ || ಎಂದು ತದ್ವನಪ್ರದೇಶ ಲತಿಕಾವಾಸ ಪ್ರಶಂಸನ ಪ್ರಸಂಗದೆ ಮುಕುಂದಂಗೆ ತನ್ನೊಳಾದ ಪೂರ್ವಾನುರಾಗ ನಿರ್ಭರಾವಸ್ಥೆಯಂ ಪ್ರಸ್ತಾವಿಸಿದ ಮನೋಹರಿಯ ಸೂಕ್ತಿಸೂತ್ರಕ್ಕೆ ಸಾರ್ಥಕೋದಾಹರಣಂಗಳುಂ ತನಗೆ ಮುನ್ನವೆ ಬಿನ್ನವಿಸಿದಿಂದುವ ವಚೋ ರೂಪ ದರ್ಶನಕ್ಕೆ ದರ್ಪಣಂಗಳುಮೆನಿಸಿ-

ಕಂ || ಸುದತಿಗೆ ಕಣ್ಬೊಲನಾದುವು
ಮದನಾನಳಹತಿಗೆ ಸೆಡೆದು ನರಪತಿ ಮಱೆಯೊ
ಡ್ಡಿದ ಹರಿಗೆಗಳೆನಿಸಿ ತದಂ
ಗದ ಸಂಗದೆ ಕೊರಗಿ ಕೆಡೆದ ತಾವರೆಯೆಲೆಗಳ್ || ೬೩

ವ || ಅದಲ್ಲದೆಯುಂ ಕುಸುಮಕಾರ್ಮುಕನ ಪೊಡೆಗೆ ಪದವಡಿಸಿ ಕಾಸಿಕಂದಿಸಿದ ಸೆಲಗಿನಂಬಿ ನಲಗುಗಳಿವೆನಿಸಿ ಕಡುಗಂದಿಸೂಸಿದ ಪಾಸಿದೆಳೆದಳಿರ್ಗಳಂ ಪುಷ್ಪಸರಚಾಪನಿರ್ಮುಕ್ತ ನಾರಾಚನಿಚಯಮೆಂಬಿನಂ ಕಱಂಗಿ ಕೆದಱಿದ ಮೃಣಾಳನಾಳಮಮರೆಗರಿಂಕುವೋದ ಚಮರಿಗಳನನುಕರಿಸಿ ಕೊರಗಿ ಪರೆದ ಶೀತಳಿಕೆಗಳ ಬಳಗಮುಂ ಪೊಗೆಯಡಂಗೆಗವಿದ ದೂವೆಯಂತಿರೆ ಬರುಂಟಿದೊಡೆ ಬಿಸಿಯನುಗುೞ್ವ ಕಪ್ಪುರದ ನುಣ್ಮಳಲ ಜಗಲಿಯುಂ ಮತ್ತಮೋಱೊಂದಱ ಸೌರಭಪ್ರಭೆಗಳೋರೊಂದನೆಳಸೆ ತನ್ನೊಳ್ ತಡಂಗಲಿಸಿ ತೊಳಪ ಕಪ್ಪುರದ ಮೌಕ್ತಿಕದ ತೊಡವನೊಳಕೊಂಡು ಪೊಳೆವ ಪಳುಕಿನ ಪರಿಯಣಂಗಳುಂ ಶಶಿಕಳೆಯ ಮುಱಿಗಳಂ ಮುಕ್ಕುಳಿಸಿದೆಳಗಾರ ಕಿಱುಮುಗಿಲ ಜವಳಿಗಳಿವೆನಿಸಿ ವಿಮಳ ಶೀತಳ ಮೃಣಾಳಶಕಳಮಂ ಸೆಱೆಗೆಯ್ದ ಶತಪತ್ರಪತ್ರಪುಟಿಕೆಗಳುಂ ಮಿಱುಪ ನೆಱೆದಿಂಗಳನೆ ಪೊರೆಯೆತ್ತಿ ತಾರಗೆಯ ತುಱಿಗಲನೆ ತಿಱಿದವೋಲೆಳವಾೞೆಯ ಪುದುವಿನೊಳ್ ಮಿಸುಪ ಮಲ್ಲಿಗೆಯ ಮೊಲ್ಲೆಯ ಮುಗುಳ್ಗಳುಂ ಕಱೆಗಳಿದ ಹೆಱೆಯೊಳಿಕ್ಕಿದ ಸುಧಾಪೇನ ಪಟಳಮೆನಿಸಿ ಚಕಚಕಿತ ಚಷಕದೊಳ್ ಪದನಿಕ್ಕಿದ ಕರ್ಪೂರಪಾಂಶುಪರಿಮಿಳಿತ ಮಳಯ ಜಾನುಲೇಪಮುಂ ಮನ್ಮಥಾನಳನನಾಱಿಸಲ್ ತಳಿವ ಮಳಯಜದ ಸುರಿವ ಕರ್ಪುರದ ಮುಸುಂಕುವ ಮೃಣಾಳಸಂತತಿಯ ಕಾಂತಿಗಳೆ ವಿರಹ ಪರಿತಾಪ ಭೀತಿಯಿಂ ತೊಲಗಿ ನೀರ್ದಾಣಮನೆಳಸಿ ನಿಂದುವೆಂಬಂತಿರೊಳಗೆ ಪರಿವ ಪರಿಕಾಲ ಪೊನಲ್ವರಿಯೊಳಿರ್ಪು ವೊರೆದು ತಣ್ಪೇಱಲಿಕ್ಕಿದ ಮಡಿವರ್ಗದ ದುಗುಲಂಗಳುಂ ತಣ್ಗದಿರ ತುಱುಗಲನೆ ನಿಱಿವಿಡಿದ ತೆಱದಿ ಮಿಸುಪ ಪೊಸಗೆಂಕಿನೊಳಗಣೆಳೆನಾರ ತೊಂಗಲಂ ಸಂಗಳಿಸಿ ಪೊರೆಗಳೆದ ಬಾೞೆಯೆಳೆಯ ಸಸಿಯ ದಂಟಿನೊಳು ಸುತ್ತಿ ಸಿರಿಖಂಡದ ಬಂಡಿನೊಳಲುಂಬಿ ತಳಿರ್ವಸೆಯ ಪಕ್ಕದೊಳ್ ನೇಱಿದ ನವೀನ ಚಮರಜಂಗಳುಂ ಸನ್ನಿಹಿತ ವಿರಹಿಜನ ಸಂಜ್ವರವ್ಯತಿಕರದೊಳವಗೞಿಯ ಮಂದ ಘರ್ಮದಿಂದಿನ್ನುಮೀಕೋಮಳ ಲತಾಂಗ ಪೊಟ್ಟಣಂಗಳಿಂ ಪಟ್ಟನೆ ಪನಿವ ತಣ್ಣನಿಯ ತಂದಲುಂ ಬಣ್ಣಂಬಡೆದ ತಣ್ಣೆಲರ ತನುವಿದೆನಿಸಿ ತೆಳ್ಪುವೆತ್ತ ಬಾೞೆಯೆಲೆಯ ಬಿಜ್ಜಣಿಗೆಯುಂ ಮೊದಲಾಗೆ ವಿರಹತಾಪ ಪರಿಚಯ ಮ್ಲಾನಮಳಿನಂಗಳುಂ ಮನ್ಮಥ ಹುತಾಶನೋಪಶಮ ಸಂವಿಧೇಯಂಗಳುಮಪ್ಪವಲ್ಲಭ ಮನಃಶಯನ ತಾಪಕ್ಕೆ ಶಿಶೀರೋಪಚಾರಪ್ರಪಂಚಿತ ವಸ್ತುಗಳನೆಡೆವಿಡದೆ ನೀಡುಂ ನೋಡಿ-

ಚಂ || ಒದವಿ ಭವದ್ರುಮಂ ಘಳಿಮಾಯ್ತನುರಾಗರಸಂ ಸುಬದ್ಧಮಾ
ದುದು ರತಿಕಾಮಧೇನು ಹಯನಾಯ್ತೆನಿಪುತ್ಸವದಿಂ ಸುಖಪ್ರಕಾಂ
ಡದ ಕಡೆಯೆಯ್ದಿದಳ್ ಬಗೆಯ ಕಾಮಿಗೆ ತನ್ನಯ ನಲ್ಮೆಯೊಂದೆ ಸೌ
ಖ್ಯದ ನೆಲೆ ಮತ್ತೆ ತನ್ನವೊಲಿದಿರ್ತನನೊಲ್ದೊಡಮೇನನೆಂಬುದೊ || ೬೪

ವ || ಅನಂತರಮಂತರಂಗದೊಳ್ ನಟ್ಟುಡಿದು ಸಿಲ್ಕಿದಲರಂಬಿನ ಪುಳುಂಬುಗಳೆ ಹೃದಯವಲ್ಲಭ ಪ್ರಣಯಮಯಾಯಸ್ಕಾಂತ ದರ್ಶನದಿನಿರದೆ ಪೊಱಮಟ್ಟಪುವೆನಿಪ್ಪಿನಂ ಮೆಯ್ನವಿರ್ಗ ಳೊರ್ಮೊದಲೆ ಪೊಣ್ಮೆಯುಂ ನಿಜಮನೋರಮಣ ಸಂಜ್ವರಾಪನೋದನ ವ್ಯತಿಕರದೊಳ್ ಕರಮೆ ಕೊರಗಿದ ತದಾವಾಸ ಮಾಧವೀ ಸಹಚರಿಯ ಮೆಯ್ಬಿಸುಪನಾಱಿಸಲು ನಿಮಿರ್ವ ತೆಱದೆ ಸುಯ್ಯೆಲರ್ಗಳೊಗೆಯೆಯುಂ ಕೆದಱಿಪೊಱಮಡುವ ಸುಯ್ಯೆಲರ್ಗಳಲೆಪದಿಂದಲು ಗಿದಪುವೆನಿಸಿ ತನುಲತಿಕೆ ಕರಮೆ ಕಂಪಿಸೆಯುಂ ಆಗಳೆ ಮನಂಬುಗುವ ವಲ್ಲಭನ ಬರವಿನೊಸಗೆಗೆ ವಿಳೋಚನ ದ್ವಾರದೇಶದೊಳ್ ಕಡೆಯಿಕ್ಕಿದ ಬಿಡುಮುತ್ತುಗಳ ತೆಱದೆ ತುಱುಗೆಮೆಯೊಳಶ್ರುಬಿಂದುಗಳು ಮಂದೈಸೆಯುಂ ಅಳಿರಳಿತಶಾಡ್ವಲಚ್ಛಲದೆ ಸಮುನ್ಮಗ್ನ ಮನ್ಮಥ ಶಿಳೀಮುಖಪಟಳಾನುಕೀಲಿತ ಪದಾಬ್ಜೆಯುಂ ಸ್ವೇದಾರ್ದ್ರಪದತಳಾಲಕ್ತ ಕರಸವ್ಯಾಜ ವಜ್ರಲೇಪ ದೃಢಘಟಿತ ಚರಣೆಯುಂ ಪ್ರಣಯಸಾದೃಶ್ಯ ದರ್ಶನ ಕೃತೋಪಕಾರ ಪ್ರಿಯಜನಮನೋಹಾರಿ ಗುಣನಿಗಳ ನಿಯಮಿತಾಂಘ್ರಿಯುಗಳೆಯುಮಾದಳೆನಿಸಿ ಪರಮಾನಂದ ಪಾರವಶ್ಯನಿರ್ಭರಸ್ತಬ್ಧಗಾತ್ರೆಯುಮಾಗಿರ್ದು ಕಿಱಿದಾನುಂ ಬೇಗದಿಂ ಸ್ವಕೀಯ ಸೌಭಾಗ್ಯ ಸಂಪತ್ಪ್ರಶಂಸಂಗಳಪ್ಪ ತತ್ಪ್ರಶಸ್ತ ವಸ್ತುಗಳ ಪರಿಚಯಕ್ಕೆ ನಾಣ್ಚಿದಂತೆಯುಂ ನಿಜೈಕಲೋಚನನಾದ ನಲ್ಲನಂ ತದವಳೊಕನೋತ್ಸುಕಂಗಳಪ್ಪ ಕಣ್ಗಳ್ಗೆ ತೋಱಲಾತುರಿಸುವಂತರಂಗದಿಂ ಪ್ರೇರಿತೆಯಾದಂತೆಯುಂ ತದ್ವಿಳಾಸಲತಿಕಾವಾಸದಿಂ ತಳರ್ದು ಕೆಲದ ಕೃತಕಾಚಳದ ತೞ್ಪಲೊಳ್ ತೋರ್ಪ ಕಂಕೆಲ್ಲಿವಲ್ಲರಿಯನೆಳಸುವಳಿಗ ಳೊಳ್ ಬೆರಸಿ ಪರಿವ ಕಣ್ಬೊಣರ ಬೆಂಬೞಿಯೊಳಸವಸದಿನೆೞ್ತರುತ್ತುಮಿರ್ದಳಿರ್ಪು ದುಂ ಆ ಪ್ರಸ್ತಾವದೊಳ್ ವಿಯಚ್ಚರೇಶ್ವರ ಶಿಬಿರದ ದರ್ಶನ ಕುತೂಹಳದಿನುಪಚಿತಚ್ಛ ತ್ರಚಾಮರಾಧಿರಾಜಚಿಹ್ನನುಂ ಪರಿಚಿತ ತ್ರಿಚತುರ ಸಹಚರಪರೀತನುಮಾಗಿ ಬಿನದದಿಂ ಬನಮನಿನಿಯವಳಂ ನೋಡಲೆತ್ತಾನುಮಿತ್ತಲೆೞ್ತಂದೊಡಸ್ಮದ್ಯಾಚನೋಪಚಿತ ಪುಣ್ಯ ಲಕ್ಷ್ಮೀಪರಂಪರೆಯನೆನಲ್ ಬರ್ಕುಮೆಂದು ಬಗೆಯೊಳ್ ಬಯಸಿ ಪಾರುತ್ತುಂ ಬಂದು-

ಉ || ಆ ಪುರುಷೋತ್ತಮಂ ಸುರಪತಿಪ್ರತಿಮಾಕೃತಿ ತನ್ನ ರಮ್ಯ ಹ
ರ್ಮ್ಯೋಪರಿಮೋಚ್ಚ ಭೂಮಿಕೆಯ ಭೂವಿನುತ ಪ್ರಘಣಾಗ್ರಭಾಗಶೋ
ಭಾಪದ ನ್ಯೂತ್ನರನ್ನ ರಚಿತಾಂಗಣಮಂ ಗುಣರತ್ನಭೂಷಣಂ
ಭೂಪತಿ ತಾನಳಂಕರಿಸಿ ರಂಜಿಸಿದಂ ವಸುಧೈಕಬಾಂಧವಂ || ೬೫

ಗದ್ಯಂ
ಇದು ನಿಖಿಳ ಭುವನಜನವಿನೂತ ಸ್ಫೀತಮಹಿಮಾವದಾತ ವೀತರಾಗ ಸರ್ವಜ್ಞತಾ ಸಮೇತ
ಖ್ಯಾತಜಿನಸಮಯ ಕಮಳಿನೀಕಳಹಂಸಾಯಮಾನ ಮಾನಿತ
ಶ್ರೀನಂದಿಯೋಗೀಂದ್ರಪ್ರಸಾದ ವಾಚಾಮಹಿತ
ಕೇಶವರಾಜಾನಂದನಂದನ ವಾಣೀವಲ್ಲಭ ವಿಸ್ತಾರಿತಮಪ್ಪ
ವಸುಧೈಕಬಾಂಧವ ಶ್ರೀ ವರ್ಧಮಾನ ಪುರಾಣದೊಳ್
ಖಚರರಾಜಾಗಮನ ವರ್ಣನಂ
ಪಂಚಮಾಶ್ವಾಸಂ