ಇನಿತು ೞಿಸದೆ ಕತ್ತುರಿ ಚಂ
ದನಮಂ ಕಱೆ ಪೆಱೆಯನಿಂದ್ರನೀಲಂ ಮುತ್ತಂ
ನನೆಯನಳಿ ಗಂಗೆಯಂ ಜಗು
ನೆ ನುಂಗಿದಂತಾಯ್ತು ನುಂಗೆ ಕೞ್ತಲೆ ಬೆಳಗಂ || ೩೧

ಚಂ || ಉೞಿಯೆ ಜಳಾಹಿಯೆಂದು ಬಿಸವಲ್ಲಿನಂಚಿ ಶಿಳೀಮುಖಂಗಳೆಂ
ದಿೞಿಕೆಯೆ ಪೂಗಳಂ ಪಱಮೆ ಕೋಗಿಳೆಯೆಂದು ಪಿಕಂ ಬಳಾಕೆಯಂ
ಬೞಿಸಲಲಾಸೆಗೆಯ್ಯೆ ಕಳಹಂಸಕುಟುಂಬಿನಿಯಂ ಮಯೂರಿಯೆಂ
ದೆಳಸೆ ಶಿಖಾವಳಂ ಪುದಿದುದಂಧತಮಂ ಭುವನಾಂತರಾಳಮಂ || ೩೨

ವ || ಅದಲ್ಲದೆಯುಮುದರ ಭೂಧರಪ್ರಭೃತಿ ಗಿರಿದುರ್ಗವರ್ಗಮಂ ಪರಿಮುತ್ತುಮುತ್ತಿ ಮಾರ್ತಂಡ ಚಂಡರೋಚಿಯನಱಸಲೆತ್ತಿ ಪೊತ್ತಿಸಿದ ದೀವಿಗೆಗಳೆನಿಸಿ ಮಿಸುಪ ಖದ್ಯೋತ ಜಾತಮಂ ನೆಗಪಿಯುಂ ಪಗಲೊಳ್ ನಿಕುಂಜಗಹ್ವರ ದರೀಕುಹರಿದಿಟ್ಟೆಡೆಯೊಳೊತ್ತಿರ್ದ ಕೞ್ತಲೆಯುಮಂ ಕೂಡಿಕೊಂಡು ದುರ್ಧರಾಧಿತ್ಯಕಾಸ್ಥಳಿಯನಡರ್ದು ಹರಿನೀಳ ಶೃಂಗ ಸಂಕುಳವ್ಯಾಜದಿಂ ನಿಜಜಯಸ್ತಂಭ ನಿಚಯಮಂ ನಿಱಿಸಿಯುಂ ಉಪವನ ಪ್ರದೇಶದೊಳ್ ಬೀಡುವಿಟ್ಟು ತಿಮಿರರಿಪುವ ಪಗೆಯಂ ಬಗೆದು ಪದ್ಮಿನಿಯನಿನವಿಯೋಗ ವಿಧುರೆಯಂ ಪರಿಭವಿಸಿ ತತ್ಕೋಶಲಕ್ಷ್ಮಿಯಂ ಕೆಯ್ಕೊಂಡುಂ ವಿಧುವಿನ ಮುನಿಸುತಂ ಪಾದಾಗಮೌತ್ಸುಕ್ಯ ವಾಸಕಸಜ್ಜೆಯಂ ಕುಮುದ್ವತಿಯನುದ್ಧತ ಭ್ರಮರರೂಪದಿಂ ರಮಿಯಿಸಿಯುಂ ಆತ್ಮಾಂಗಸ್ವರೂಪದೊಳೆ ರಾಜಾರ್ಕತೇಜಂಗಳುಮನಲೆದು ಸಲೆ ನಿಂದ ಬಲ್ಪಿನ ತಮಾಳಕ್ಕೆ ನಿಜರಾಜ್ಯಲಕ್ಷ್ಮಿ ನಿರವಿಸಿಯುಂ ಉೞಿದ ತರುಗಳುಮನಾ ತಮಾಳದ ಪದವಿಯೊಳ್ ಪೊರೆದುಮಿರದೆ ಪುರವರಂಗಳನುರವಣಿಸಿ ಪೊಕ್ಕು ಬೀದಿವೀದಿಯೊಳ್ ಗಾಳಿ ನುಸುೞದಂದದಿಂ ಮಂದಯ್ಸಿಯುಂ ತನ್ನ ಬರವಿನಾತಂಕದೊಳ್ ಕೇಳೀ ಕಪೋತ ಕೂಜಿತವ್ಯಾಜದಿಂ ಕೂಗಿಡುವ ಗಣಿಕಾವಾಟಮಂ ಪೊಕ್ಕು ಮುಗ್ಧಮಧುಕ ರೋಕ್ಷಿ ಸಾರಿಕೆಯರಪ್ಪ ಪಲರುಮಭಿಸಾರಿಕೆಯರಂ ಕೆಯ್ಕೊಂಡುಂ ಉತ್ತುಂಗ ಚೈತ್ಯ ಕೂಟಕೋಟಿಗಳನಡರ್ದು ಕಣ್ಗೊಳಿಪ ಮಣಿಕನಕಕಲಶದೀಪ್ತಿಗಳನಪಹರಿಸಿಯುಂ ಭರ ದಿನರಮನೆಗೆ ಪರಿಯಿಟ್ಟು ಕಟ್ಟಿದಾನೆಗಳ ದಂತಕಾಂತಿಯಂ ಕಿೞ್ತು ಕಳೆದುಂ ಉದ್ಧುರ ಸುಧಾಗಾರ ದೀಧಿತಿನಿಧಾನಮಂ ಸೂಱೆಗೊಂಡು ಉನ್ನತ ಹರ್ಮ್ಯಪಟಳ ಪ್ರಘಣ ಪಾಳಿಕೆಗಳ ನಾಮಯೂರರೂಪದಿಂ ಕಾಪುಗೊಂಡುಂ ಅಂತಃಪುರವಧೂಕದಂಬಕದ ಮುಡಿಗಳಂ ಪಿಡಿದು ಕಡೆಗಣ್ಣಕಾಂತಿಗಳೊಳೆಕ್ಕತುಳಮಿಕ್ಕಿಯುಂ ಮತ್ತ ಮೊತ್ತರಿಸಿ ಬಯಲೊಳ್ ಬೀದಿವರಿದುಂ ಬಟ್ಟೆಯೊಳ್ ಬಿದ್ದಂಬರಿದುಂ ಅಡವಿಯೊಳ್ ಬಿಸಟಂಬರಿದುಂ ಉರ್ವಿಯಂ ಪೂೞ್ದುಂ ಅಗಸಮನೊತ್ತಿಯುಂ ದೆಸೆಗಳಂ ಕೆತ್ತುಂ ಇಂತು ತತ್ತಮೋಬಳಂ ಮುಳಿದು ಮದನಚಕ್ರಿ ಬೆಸಸಿದಾಟವಿಕ ಶಬರಬಳಮೆನಿಸಿ ಸಕಳ ಜಗಮನಂಡಲೆದು ನೆಲಸೆ-

ಕಂ || ಕ್ಷೋಣಿತಳಂ ತೀವೆ ತಮಂ
ಮಾಣದೆ ಸೋರ್ದುಡುಗೆ ಸುರಿದ ವಿವರಮವೀಗಳ್
ಕಾಣಲ್ ಬಂದಪುವೆನೆ ಗೀ
ರ್ವಾಣ ಪಥಾಂತರದೊಳುಣ್ಮಿದುವು ತಾರಗೆಗಳ್ || ೩೩

ವ || ಮತ್ತಂ-

ಕಂ || ಒಗೆದುವೊ ರವಿರೋಚಿಸ್ತ
ಪ್ತೆಗೆ ಬೆಮರ್ವನಿ ಗಗನಲಕ್ಷ್ಮಿಗತಿತಾಪದೆ ಮೇಣ್
ಪುಗುೞುಣ್ಮಿದುವೋ ಪೇೞೆನೆ
ಸೊಗಯಿಸಿದುವು ತರದೆ ತುಱುಗಿ ತಾರಾವಳಿಗಳ್ || ೩೪

ವ || ಆ ಸಮಯದೊಳ್

ಕಂ || ಪುದಿದ ತಿಮಿರಾಳಿಕುಳಮಂ
ಬೆದಱಿಪ ಸಂಪಗೆಯ ಮಿಸುಪ ಮುಗುಳ್ಗಳಿವೆಂಬಂ
ದದೆ ಬೆಳಗಿನ ಬಿತ್ತುಗಳೆನಿ
ಸಿದ ಸೊಡರ್ಗುಡಿ ತೊಳಗಿ ಬೆಳಗಿದುವು ಮನೆಮನೆಯೊಳ್ || ೩೫

ವ || ತದನಂತರಂ-

ಕಂ || ಅದಿರ್ದ ಸತೀನಯನಝಷಂ
ಬೆದಱಿ ತಮೋಹ್ರದದೊಳತನು ವಾಗುರಿಕಂ ಬೀ
ಸಿದ ಜಾಳಮೆನಿಸಿ ನಿಮಿರ್ದ
ತ್ತುದಯಾದ್ರಿಯ ದರಿಯೊಳಮೃತಕರ ಕರಜಾಳಂ || ೩೬

ಪರೆದು ತಮಕ್ಕೊಡ್ಡಿದ ಸಾಂ
ಧ್ಯರಾಗಮನಿತುಂ ನಿಜಾಭಿಭವಮಂ ಕಳೆಯಲ್
ನೆರೆದಿಂದ್ರನಾಸೆಯಿಂ ಮಗು
ೞೆ ರೂಪುದೋಱುವವೊಲೊಗೆದುದೈಂದವ ಬಿಂಬಂ || ೩೭

ವ || ಮತ್ತಂ-

ಕಂ || ಆಗಳೆ ಸಿಂಧೂರದ್ಯುತಿ
ಗಾಗಳೆ ಕೋಕನದ ಕಾಂತಿಗಾಗಳೆ ವಕುಳ
ಶ್ರೀಗೆ ನೆಲೆಯಾಗಿ ಹಿಮಕರ
ನಾಗಳೆ ಸಂಸ್ಕೃತಿಯ ಸಿರಿಗೆ ಕನ್ನಡಿಯಾದಂ || ೩೮

ವ || ಆಗಳ್-

ಕಂ || ಮನದೊಳಮಾದರಿಸದೆ ತಂ
ನನೆಯಿ ೞಿಕೆಯ್ದಿರ್ಪ ತುದಿಯ ದಿವಮನದಿರ್ಪಲ್
ಮುನಿದು ತಲೆವರಿಗೆಗೊಂಡತ
ನು ನಭಮನಡರ್ದಪ್ಪನೆನಿಸಿದಂ ಶಶಲಕ್ಷ್ಮಂ || ೩೯

ವ || ಅದಲ್ಲದೆಯುಮಾವಗಂ ಪಗಲೊಳೆ ಹಿಮದಾಮದೀಧತಿ ವಿಮರ್ದದಿನುದ್ದಮುರಿವ ರವಿಸಿಳಾಜ್ವಾಳಾಜಾಳದೆ ಕರಿಂಕುವರಿದುದಯಭೂಧರಮನಾತ್ಮ ಕರಸಂಭೃತಸುಧಾಸೇಕ ದಿನಾಱಿಪೆಡೆಯೊಳ್ ಉಣ್ಮಿದ ತದೂಷ್ಮಪಾತದಿಂ ಕಂದಿದಂತೆಯುಂ ನಿಜಕರದೆ ಬರೆ ತೆಗೆದು ತವೆ ಪೀರ್ದ ಸಂತಮಸಮಾತ್ಮೀಯ ವಿಶದಾತಿಶಯದಿಂ ಪೊಱಗಣ್ಗೆ ಮಿಱುಗಿದಪುದೆಂಬಂತೆಯುಂ ಭೂಭುವನಮಾವಗಂ ತೀವೆ ಕವಿವ ಕೌಮುದೀಪ್ರವಾಹದ ನಿರ್ಗಮದ್ವಾರದಂತೆಯುಂ ಕಾಂತಿವೆತ್ತ ನಿಜಲಕ್ಷ್ಮಲಕ್ಷ್ಮಿಯಿಂ ಮನಸಿಜನ ವಿಜಯಧ್ವಜದ ಮಕರಪಾಳಿಕೆಯೊಳ್ ಕೀಲಿಸಿದ ಬಿರುದಿನ ಕನ್ನಡಿಯಿದೆನಿಸಿಯುಂ ವಿರಹಿಮಾರಣಕ್ಕೆ ಮದನಸಿದ್ಧನುದ್ಧರಿಸಿದ ಯಂತ್ರಪಟಮಿಂತಿದೆನಿಸಿಯುಂ ಗಗನಕಾಮಿನಿಯ ಕೆಯ್ಯೊಳ್ ಪದನಿಕ್ಕಿದಂಪಿನ ಕತ್ತುರಿಯ ಬೆಳ್ಳಿವಟ್ಟಲೆನಿಸಿಯುಂ ನಿಶೀಥಿನೀನಾಥನಂಬರತಳಾಂಬುಧಿಗೆ ಕಂಬುಕಂದಳಮಾಗೆ-

ಕಂ || ಇಡಿದ ತಮಮೊರ್ಮೊದಲ್ ತೆಗೆ
ದಡಂಗೆ ಜಗಮೆಯ್ದೆ ಕಾಣಲಾದತ್ತಿತರರ್
ನುಡಿವವೊಲಗಸ್ತ್ಯ ಮುನಿ ಪೀ
ರ್ದೊಡೆ ಕಡಲೀ ತೆಱದಿನಿರ್ಕುಮೆಂಬಂತಾಗಳ್ || ೪೦

ವ || ತದನಂತರಂ-

ಕಂ || ಕಳೆಯೆ ವಿಧುಕರಸಹಸ್ರಂ
ಗಳಿನೊಳಗಣ ತಿಮಿರಪಂಕಮಂ ಶಶಿಮಣಿ ನಿ
ರ್ಮಳ ಸಲಿಲ ಶ್ರುತಿ ಭುವನ
ಸ್ಥಳಮಂ ತೀವಿದವೊಲಾದುದೆಳವೆಳ್ದಿಂಗಳ್ || ೪೧

ಆರೆ ನವವಿಧತಮೋಮಯ
ವಾರಿದತತಿ ಕಱೆದು ಕರಗೆ ತೀವಿದುದು ಪಯಃ
ಪೂರದೆ ಭುವನೋದರಮೆನೆ
ರಾರಾಜಿಸಿದುದು ಸುಧಾಂಶುರುಚಿವಿಸ್ತಾರಂ || ೪೨

ತರಳ || ದೆಸೆಯೆ ಮುತ್ತಿನಭಿತ್ತಿ ಧಾತ್ರಿಯೆ ಚಂದ್ರಕಾಂತದ ರಂಗಮಾ
ಗಸಮೆ ಚೇನವಿತಾನಮಾಗೆ ವಿಚಿತ್ರಮಂಡಪಮಂ ವಿಗು
ರ್ವಿಸಿದನಾತ್ಮ ಸುತಾವಿವಾಹ ಮಹೋತ್ಸವಕ್ಕೆ ಖಗೇಶ್ವರಂ
ಪೊಸತಿದೆಂಬಿನೆಗಂ ಪ್ರಕಾಶಿಸಿದಂ ಸುಧಾದ್ಯುತಿ ಲೋಕಮಂ || ೪೩

ವ || ಮತ್ತಮುತ್ತುಂಗ ಪ್ರಾಸಾದಸೌಧಸದನಂಗಳ ನೆೞಲನೆವದಿನೊತ್ತುಗೊಂಡ ಕೞ್ತಲೆಯಂ ತತ್‌ಸ್ವರೂಪದೊಳೆ ಗಳಿಲೆನೆ ನುಂಗಿಯುಂ ಪ್ರತಿಬಿಂಬಮಂಡಲಚ್ಛಲದೆ ಹರಿನೀಳಕುಟ್ಟಿ ಮತಮಃಸಮುದಯಕ್ಕೆ ಮುನಿದೆಱಗಿಯುಂ ಮುಡಿವೊಱೆಯ ವಿಷಯದೆ ಮಱೆಗೆ ವಂದಂಧತಮಸಮಂ ಪೆಱಗಿಕ್ಕಿ ತನ್ನೊಳ್ ಮಲೆವ ಲಲನೆಯರ ವದನವಿಧುಬಿಂಬದೊಳ್ ಕಪೋಳಸಂಭೃತ ಪ್ರತಿಕೃತಿಚ್ಛದ್ಮದಿಂ ಪೊಕ್ಕು ಪೋರ್ಕುಳಿಯಿಕ್ಕಿಯುಂ ಅಳಿವ್ರಜವ್ಯಾಜದಿಂ ಮರ್ವನೊಳಕೆಯ್ದ ನಳಿನಿಯಂ ಬಳಸಿ ಕಳಹಂಸಮೂರ್ತಿಯಿಂ ಮುತ್ತಿಯುಂ ಪೆರ್ಮರಂಗಳೆಲೆಮಱೆಗಳೊಳ್ ತಲೆಗರೆದಿರ್ದ ತಿಮಿರದ ಬಳಗಮಂ ಬಳಾಕವ್ಯ ಪದೇಶದಿಂದೆಱಗಿ ಸೆಱೆಗೆಯ್ದುಂ ಅಧೋಭುವನವಿವರಮನೋಡಿ ಪೊಕ್ಕ ಸಂತಮಸಸಂತ ತಿಯ ಬೞಿಯೊಳೆಳೆಯಂ ಬಗಿದು ಪುಗುವಂತಿರೆಳಸಿ ತಿಳಿಗೊಳಂಗಳೊಳು ಮಾರ್ಪೊಳೆದಂ ಆತ್ಮೀಯ ಪರಮಸಖಮನಸಿಶಯ ದಾಸೀಕೃತಾಖಿಳ ವಿಳಾಸಿನೀಲೋಕಂ ಲೋಕಾವಳೋಕನಾನಂದನಂ ವಿಭಾವರೀವದನಮಳಯರುಹ ತಿಳಕನುಮೆನಿಪ ತಾರಕಾವಲ್ಲಭಂ ನಭೋಮಂಡಳಾಸ್ಥಾನಮಂಡಪಮಧ್ಯವರ್ತಿಯಾಗೆ-

ಕಂ || ರಜತಗಿರಿ ನಿಜಖಗೇಶಾ
ತ್ಮಜೆಯ ವಿವಾಹಕ್ಕೆ ಕಳಿಪಿದುದು ನಿಬ್ಬಣಮಂ
ನಿಜಕಾಂತಿ ಸಂತತಿಯನೆನೆ
ವಿಜೃಂಭಿಸಿತ್ತಮಳ ಕೌಮುದೀವಿಸ್ತಾರಂ || ೪೪

ವ || ಅನಂತರಮಂತರ್ನಿಮಗ್ನ ಸಕಳಜಗದವದಾತ ದ್ರವ್ಯಸರ್ವಸ್ವಮಾದ ನಿಜನಿಬಿಡ ಬಹಳ ಪ್ರವಾಹದೊಳಾಸ್ಯಗತ ಬಿಸಕಬಳ ಶಕಳಮಂ ಕಳಹಂಸಿ ಕಾಣದೆ ಕೊಳನ ತೆರೆಗೊನೆಯ ತುಱುಗಲೊಳ್ ಪಱಿವಱಯಾಡಿ ಮಿಱುಗುವೈಂದವ ಪ್ರತಿಕೃತಿಗಳಂ ಕರ್ದುಂಕಿ ಕೋಟಲೆಗೊಳೆಯುಂ ಅಲರ್ಗೊಂಚಲಂ ಚಂಚರೀಕಶಾಬಕಂ ಕಾಣದುದ್ದೆಶಕ್ಕೆ ಬಯಲೊಳೆಱಗಿ ಬಱಿದೆ ಬೇವಸಂಬಡೆಯೆಯುಂ ಅರ್ಥಿಯಿಂ ಪೂಗೊಯ್ವ ಮುಗ್ಧಲಲ ನೆಯರ್ ಮಲ್ಲಿಗೆಯ ಗಿಡುಗಳೊಳ್ ಮುಗುಳ್ಗಳಂ ಕಾಣದೆಱಗಿರ್ದ ಬಱಿಯ ಪಱಮೆಗಳ ಮಾಲೆಯನೆ ಕಂಡು ಕರಿಯಮಲ್ಲಿಗೆಯಿವೆತ್ತಣವೆಂದು ನಿಂದು ನೋಡೆಯುಂ ಮೇಲ್ಕೊಂಡ ದುಗುಲಮಂ ಕಾಣದಱಸಿ ತಡವರಿಸಿ ಕೆಲಬರಬಲೆಯರ್ ಕೆಲದ ಕೆಳದಿಯರ ನೆರವಿಯಂ ನಗಿಸೆಯುಂ ನೆಗೆದ ಕೋೞ್ಕಳಂ ಕಾಣದೆ ಕೆಲದ ಯೂಥಪತಿಗಳಂ ಪಿಡಿಗಳೆಂದಿರದೆ ಪಿಡಿದಿಳಿಕೆಯ್ಯೆಯುಂ ಎರಳೆಗಳಧಃಕಾಯಭಾಗಮಃಕಾಯಭಾಗಮಂ ಕಾಣದಣಮೆ ಬಡವಾದುವೆಂದು ಹರಿಣಿಗಳ್ ಕರಮೆ ಕೊರಗೆಯುಂ ಅಲಕ್ಷಿತಬಲಕ್ಷಭಾಗಮಪ್ಪ ಲಲನೆಯರ ಕಣ್ಬೊಣ ರ್ತುಂಬಿಗಳ ಪೋಲ್ವೆಯಂ ನೆಱೆಯೆ ಮೆಱೆಯೆಯುಂ ವಿಘಟಿತಮನೋರಥಂ ರಥಾಂಗ ಮಂಗಜನ ಬೀಸಿದ ಬಲೆಯಿದೆಂದು ನಡುಗಿ ಕಾಲ್ಗೆಡೆಯುಂ ಗವಾಕ್ಷವಿವರಾವತೀರ್ಣ ದೀಧಿತಿ ವಿತಾನದಿಂ ಭವನಾಂತರಂಗದೊಳ್ ಬೇರ್ವರಿದುಮತಿಸೀತ ಸುಧಾಸದನ ಸಂಭೃತ ಪ್ರಭಾಪುಂಜಂಗಳಿಂದ ಕಂದಳಿತಮಾಗೆಯುಂ ಆಕೀರ್ಣ ಪರ್ಣಸಂತಾನ ಕಾಂತಾರಾಂತವಕಾಶಾವಗೂಢರಶ್ಮಿ ರಾಜಿಯಿಂ ಬನಗಳೊಳ್ ಬೀೞಲ್ವರಿದುಮಿತಸ್ತತಃ ಪ್ರಚರದಭಿಸಾರಿಕಾವೃತದುಕೂಲಪಲ್ಲವಂಗಳಿಂ ಪಲ್ಲವಿತಮಾಗೆಯುಂ ಉಲ್ಲಸಿತ ಪ್ರವಲ್ವಿಕಾಪಾನಗಾನಾದಿ ವಿವಿಧ ವಿನೋದ ವಿಧಾಯಿ ಬಾಳಿಕಾಲೋಳಲೋಚನ ಮರೀಚಿಪುಂಜವಿಸರದಿಂ ಕುಸುಮಿತಮಾಗೆಯುಂ ಆಂದೋಳಚಾಳನೋಚ್ಚಳಿತ ಚೇಳ ಕಾಂಚಳ ವಿಳಾಸಿನೀಮಳಯರುಹ ಧವಳ ಕುಚಮಂಡಳಂಗಳಿಂ ಫಳಿತಮಾಗಿಯುಂ ಮಣಿಕಳಶಮಾತ್ರಾಯಮಾಣ ಪ್ರಾಸಾದಹರ್ಮ್ಯನಿವಹಮುಂ ಕಳವಿರುತಿಮಾತ್ರಾಯ ಮಾಣ ಕಳಹಂಸಕುಳಮುಂ ಆಮೋದಮಾತ್ರಾಯಮಾಣ ಕುಮುದ ಪ್ರಮುಖ ಸಮಸ್ತ ಸುಮನಸ್ತಬಕಮುಂ ಕಳಂಕಮಾತ್ರಾಯಮಾಣ ಸ್ವಕೀಯಮಂಡಳಮುಂ ಆಗಿ ವಿಮಳ ಚಂದ್ರಿಕಾ ಸಾಂದ್ರಪೂರಮಖಿಳ ಭುವನೋದರಮನಾವಗಂ ಬೆಳಗಿ ಬೆಡಂಗು ವಡೆಯೆ-

ಕಂ || ಚಲದಿನಱೆಯಟ್ಟಿ ಚಳಮಂ
ಡಲಾಗ್ರ ಕರದಿಂ ಸುಧಾಂಶು ನೇರ್ದಿಕ್ಕಿದ ಕ
ೞ್ತಲೆಗಳ ತಲೆಗಳೆ ದಿಟಮೆನಿ
ಸಲಾರ್ತುವಲ್ಲಲ್ಲಿ ನಿಂದ ಮರದ ನೆೞಲ್ಗಳ್ || ೪೫

ಸೊಕದೊಳಿರೆ ನೋಡಿ ನಲಿವಗ
ಲೆ ಕೊರಗುವಿನಿತೆ ಸ್ವಬಂಧು ರುಚಿಯಿಂ ಶಶಿಗಾ
ದ ಕಳಂಕ ಲವಮುಮಂ ಪ
ರ್ಚ್ಚುಗೊಂಡುವೆನೆ ತಳೆದುವಳಿಗಳಂ ಕುಮುದಿನಿಗಳ್ || ೪೬

ಭೃತೆಸುರಭಿಗರ್ಭಗತಿಮೋ
ಚಿತ ಪೃಥುಮಧ್ಯೆಯ ವಿಪಾಂಡುರಾನನೆಯ ಕುಮು
ದ್ವತಿಯ ಪ್ರಸವೋತ್ಸವ ಭವ
ವಿತತಾನಕ ರುತಿವೊಲೆಸೆದುದಳಿ ಬಹಳ ರಮಂ || ೪೭

ವ || ಆ ಸಮಯದೊಳ್-

ಚಂ || ಚಳನತಳದ್ಯುತಿಚ್ಛಲದೆ ಕೆಂಬಿಸಿಲಂ ಕಿಡೆಮಟ್ಟಿ ಕುಂತಳ
ಚ್ಛಳದೆ ತಮಂಗಳಂ ಮುಸುಕಿನೊಳ್ ಸೆಱೆಗೆಯ್ದು ಚಳದ್ವಿಳೋಚನಾಂ
ಚಳವಿಳಸನ್ನವೇಂದುಕಳೆ ಸಾಂದ್ರತನುದ್ಯುತಿ ನೂತ್ನಚಂದ್ರಿಕೋ
ಜ್ವಳೆ ಪೊಱಮಟ್ಟಳೊರ್ವಳಭಿಸಾರಿಕೆ ಭೂಚರಚಂದ್ರಮೂರ್ತಿವೋಲ್ || ೪೮

ವ || ಮತ್ತಂ-

ಉ || ಇಂಗದಿರಿಂದೆ ನೆಯ್ದುದೆನಲಪ್ಪ ದುಕೂಲದ ಕಮ್ಮನಪ್ಪ ಬೆ
ಳ್ದಿಂಳೆನಲ್ಕೆ ಬರ್ಪ ಸಿರಿಖಂಡದ ಜೊನ್ನದ ಬಿತ್ತಿವೆಂಬ ಮಾ
ತಿಂಗೆಡೆಯಪ್ಪ ಮಲ್ಲಿಗೆಯ ಕಾಂತಿ ಮುಸುಂಕೆ ತೊೞಲ್ವ ಕಂತು ಕೀ
ರ್ತ್ಯಂಗನೆಯಂದದಿಂದೆ ನಡೆತಂದೊಡಗೂಡಿದಳೊರ್ವಳೋಪನೊಳ್ || ೪೯

ಚಂ || ಬರೆ ತೆಗೆದೀಂಟೆ ನುಣ್ಪಡರೆ ಪೊಣ್ಮಿದ ಬಾಯ್ ಕದಪಂ ಕದಂಪಿನಿಂ
ದೊರಸೆ ಪಗಿಲ್ತ ಕತ್ತುರಿಯ ಪತ್ರಲತಾಂಕುರದಣ್ಕೆ ತಳ್ತು ನಿ
ರ್ಭರಪರಿರಂಭದೊಳ್ ಪೊರೆದ ಕುಂಕುಮಮೆಂದಿತರಾಂಗಸಂಗಮಂ
ನಿರವಿಸುತಿರ್ದೊಡುಂ ಶಶಿಕರಾವೃತಲೋಚನೆ ಕೈತಳೋಪನಂ || ೫೦

ವ || ಅಂತುಮಲ್ಲದೆಯುಂ-

ಮ || ವಳಿತಭ್ರೂಲತಿಕಂ ದುರುಕ್ತಿಮುಖರಂ ಶಾಂತಪ್ರಸಾದಂ ಸ್ಮಿತೋ
ಜ್ವಳಮುದ್ಯತ್ಪುಳಕಂ ಯಥಾಭಿಮತ ನಾನಾಲಾಲನಂ ಸ್ವೇದಶೀ
ತಳಮುಚ್ಯಶ್ವಸನಂ ಶ್ರಮಸ್ತಿಮಿತಗಾತ್ರಂ ಕಾಮುಕಾನೀಕಮಂ
ದೊಳಪೊಕ್ಕೆಯ್ದಿದುದೊಯ್ಯನೊಯ್ಯನೆ ರತಿಕ್ರೀಡಾಪಗಾಪಾರಮಂ || ೫೧

ತೆಱವಿಂ ನೀಳ್ಕಿ ಗವಾಕ್ಷಮಂ ತೆಱೆವ ನೀರಂ ಮುಕ್ಕುೞೊಳ್ ತೀವಿ ಕೊಂ
ಡೆಱೆವಿರ್ಗೆಯ್ಯೊಳೆ ಗೂಡುವಾಯ್ವೆರ್ದೆಯನಂತಂ ತಣ್ಪತಾಂಬೂಲಮಂ
ನೆಱೆ ಮೆಲ್ದೀವುಗುರ್ವೊಯ್ಲನೂದುವ ಸೆಱಂಗಿಂ ಬೀಸುತಿರ್ಪೋಪರ
ೞ್ಕಱಲಂಪಂಗನೆಯರ್ಗೆ ರಾಗಮನದೇಂ ಮಾಡಿತ್ತೊ ರತ್ಯಂತದೊಳ್ || ೫೨

ವ || ಅಂತಖಿಳ ಕಾಮುಕನಿಕಾಯಮವಿರಳ ಸುಖಾವಗಾಹದೊಳ್ ನಾಡೆ ತೇಂಕಾಡಿ ತಣಿವಿನಮನಂಗಜಳನಿಧಿಯಂ ನೆಲೆವೆರ್ಚಿಸಿ ನಿರತಿಶಯ ಕೌದುದೀಪೂರಮಸದಳಂ ಬಳೆದು ಬೆಳಗುತಿರ್ಪಿನಂ-

ಕಂ || ಓಪಳ ಬೞಿಯೊಳ್ ಕಳಿಪಲ್
ಪೋಪಂದದೆ ಪೋಗೆ ಕಣ್ಗಳುಂ ಮನಮುಮವಂ
ಭೂಪತಿ ಬರಪಾರ್ದಿರ್ಪವೊ
ಲಾ ಪೊೞ್ತಪ್ಪಿನೆಗಮಿರ್ದ ತೆಱದಿಂದಿರ್ದಂ || ೫೩

ವ || ಅಂತಿರ್ದನಂತರಮೆಂತಾನುಮಲ್ಲಿಂದೆೞ್ದು ಹರ್ಮ್ಯಭೂಮಿಕಾತಳದಿಂ ಭೂಮಿತಳಕ್ಕ ವತರಿಸಿ ಸೆಜ್ಜೆವನಗೆ ಬಿಜಯಂಗೆಯ್ದು ನಿಜಮನೋವಲ್ಲಭೆಯ ನಿಜಮನೋವಲ್ಲಭೆಯ ರೂಪಲಾವಣ್ಯ ಸೌಂದರ್ಯ ದೇಶೀಯ ವೇಷಮುಮನತಿಶಯಮನಃಶಯದಶಾತಿಭರಮುಮನಾತ್ಮಾಂತರಂಗ ಭಿತ್ತಿಯೊಳ್ ಚಿತ್ರಿಸಿದಿಂದುವ ವಚಶ್ಚಿತ್ರ ರಚನೆಯಂ ನಿಜವಿಳೋಚನ ಪ್ರವಿಶತ್ಸಮಯ ಸಮುದಿತರ್ ತದೀಯ ಸಾತ್ವಿಕ ಪ್ರಣಯಭಾವರಸ ಭಾವನೆಯಿನಭಿನವಮಾಗೆ ಭಾವಿಸುತ್ತುಂ ಅವಿದಿತನಿದ್ರಾವೇಷನುಂ ಉತ್ಕಟೋತ್ಕಳಿಕಾಸಮುನ್ಮೇಷನುಮಾಗಿ ವನಜಾಕ್ಷನಿರ್ಪಿನಮಾಗಳ್ ಪರಸ್ಪರ ಸಮಾಗಮೋತ್ಕಂಠೆಯಿಂ ತನ್ನ ಪೋಪುದನೆ ಪಾರ್ದುಮನದೊಳಡಹಡಿಸುತಿರ್ಪುಪೇಂದ್ರನ ಖಗೇಂದ್ರಸುತೆಯ ರತಿಲಾಲಸೆಗೆ ಲಜ್ಜಿಸಿ ತೊಲಗುವಂತೆ ಮುಕುಳಾಯಮಾನ ಕುಮುದನಯನೆಯುಂ ಅಪಾವೃತ್ತ ವಿಧುವದನೆ ಯುಮಾಗಿ ರಜನಿ ಮೆಲ್ಲನೆ ಮೆಯ್ದೆಗೆಯೆ-

ಕಂ || ಜ್ವಳನಜಟಿ ಪೋದನಾಧಿಪ
ನಿಳಯಂಗಳೊಳೊಸಗೆವಸದನಂಗೊಳ್ವಬಳಾ
ವಳಿಯ ಮಣಿಮಯ ವಿಭೂಷಣ
ವಿಳೋಕಮೊಡನೊಡನೆ ಬೆಳಗೆ ಬೆಳಗಾಯ್ತಾಗಳ್ || ೫೪

ಆ ಪದದೊಳ್ ಗಣಕಗಣ
ಸ್ಥಾಪಿತ ಜಳಭಾಂಡನಿಹಿತ ಘಟಿಕಾಪಾತ್ರಂ
ಸಾಪತ್ನಂಬೆತ್ತಿರೆ ಗಗ
ನೋಪಾಂತದೊಳೊಗೆದು ಸೊಗಯಿಸಿತ್ತಿನಬಿಂಬಂ || ೫೫

ವ || ತದನಂತರಂ-

ಚಂ || ಹರಿಗಭಿಷೇಕಮಂಗಳ ವಿಭೂಷಣಮಂಗಳ ಮುಖ್ಯಮಂಗಳಾ
ಚರಣಮನೆಯ್ದೆ ಮಾಡಿ ಜನನೀಜನಕರ್ ತದಶೇಷ ಕೃತ್ಯದೊಳ್
ಪರಿಜನದೋಳಿಯಿಂ ಪರಿವ ತಮ್ಮಯ ಲೀಲೆಯನಿಂದ್ರಲೀಲೆಯಿಂ
ಪಿರಿದುಮಿವರ್ಗಮೆಂದೆ ಬಗೆದರ್ ಗಡಿದೇಂ ಪ್ರಣಯ ಪ್ರಮತ್ತರೋ || ೫೬

ವ || ಅನ್ನೆಗಂ ಜ್ವಳನಜಟಿಮಹಾರಾಜನಟ್ಟಿದ ಮಹತ್ತರರ್ ವಂದು ದೇವ ಕನ್ಯಾವಿವಾಹ ಮಾತ್ಮಗೃಹವಿಧೇಯಮಾಗಿರ್ಪುದಱಿಂ ದೇವರ ಬಿಯ್ಯಗಂ ಪ್ರಭುರ್ಯದೇವೇಚ್ಚತಿ ತತ್ಕರೋತಿ ಎಂಬ ನೀತಿಯಂ ನನ್ನಿಮಾಡಿ ತನ್ನ ಬಿಟ್ಟಿರ್ದ ಲೀಲಾವನಮೆ ಭವನಾಂಗ ಕಲ್ಪಭೂಜಮಾದುದೆನೆ ವಿವಾಹವೇದಿಕಾ ಮಂಡಪಪ್ರದಾನ ಪ್ರಾಸಾದ ಸೌಧಶಳಾದಿ ಸುಭಗ ಶೋಭನ ಮಣಿಭವನಮಂ ವಿದ್ಯೆಯೊಳೆ ನಿರ್ಮಿಸಿ ವಿವಾಹಕಲ್ಯಾಣಮನಲ್ಲಿಯೆ ಮಾೞ್ಪ ಸಮಕಟ್ಟಿಂದಟ್ಟಿದಂ ನಿವರ್ತಿಪ ಮುಹೂರ್ತಮೆ ವಿವಾಹಮಂಗಳಮುಹೂರ್ತ ಮದಱಿಂ ತಡೆಯದೆ ಬಿಜಯಂಗೆಯ್ಯಿಮೆಂದು ಬಿನ್ನವಿಪುದುಂ-

ಚಂ || ಗಗನಚರಾಧಿರಾಜನುಚಿತಜ್ಞತೆಗಂ ಪರಮಾನುರಾಗ ವೃ
ತ್ತಿಗಮತಿಶಾಯನಂ ಬಡೆದ ಸಂಪದಕಂ ಸ್ಮೃತಿಮಾತ್ರ ಕಾರ್ಯಸಿ
ದ್ದಿಗಮವದಾತ ಬುದ್ಧಿಗಮುದಾರತೆಗಂ ಧರಣೀಚರೇಶ್ವರಂ
ಮಿಗೆ ಪರಿತೋಷಮಂ ಹೃದಯದೊಳ್ ತಳೆದಂ ವಸುಧೈಕಬಾಂಧವಂ || ೫೭

ಗದ್ಯಂ
ಇದು ನಿಖಿಳ ಭುವನಜನವಿನೂತ ಸ್ಫೀತಮಹಿಮಾವದಾತ ವೀತರಾಗ ಸರ್ವಜ್ಞತಾ ಸಮೇತ
ಖ್ಯಾತಜಿನಸಮಯ ಕಮಳಿನೀ ಕಳಹಂಸಾಯಮಾನ ಮಾನಿತ
ಶ್ರೀನಂದಿಯೋಗೀಂದ್ರಪ್ರಸಾದ ವಾಚಾಮಹಿತ
ಕೇಶವರಾಜಾನಂದನಂದನ ವಾಣೀವಲ್ಲಭ ವಿಸ್ತಾರಿತಮಪ್ಪ
ವಸುಧೈಕಬಾಂಧವ ಶ್ರೀ ವರ್ಧಮಾನ ಪುರಾಣದೊಳ್
ಸ್ವಯಂಪ್ರಭಾ ಸರೋಜನಾಭ ಪರಸ್ಪರ ನಿರೀಕ್ಷಣ ವರ್ಣನಂ
ಷಷ್ಠಾಶ್ವಾಸಂ