ಶಾ || ಶ್ರೀಮಚ್ಚಾಮರ ಸಿಂಹವಿಷ್ಟರ ವರಚ್ಛತ್ರತ್ರಯಾಶೋಕ ದಿ
ವ್ಯಾಮೇಯಧ್ವನಿ ಪುಷ್ಪವೃಷ್ಟಿ ಸುರಭೇರೀ ಭೂರಿ ಭಾಮಂಡಳ
ಸ್ತೋಮಂ ಭಾಸ್ವದನಂತಬೋಧ ಬಳ ದೃಕ್ಸೌಖ್ಯತ್ವ ಲಕ್ಷ್ಮೀಸಮು
ದ್ದಾಮಂ ಮಾೞ್ಕೆಮಗೞ್ಕಱಿಂದೆ ಶುಭಮಂ ಶ್ರೀವರ್ಧಮಾನಂ ಜಿನಂ || ೧

ಚಂ || ಅತನುವನೋವದಪ್ಪಳಿಸಿ ಮೋಹನಸಾಹಸಮಂ ಕಳಲ್ಚಿ ದುಃ
ಕೃತ ಖಳಸೇನೆಯಂ ತವಿಸಿ ವಿಶ್ವಗುಣೋಜ್ಜ್ವಳ ರತ್ನಕೋಶದೀ
ಶತೆವಡೆದಪ್ರತರ್ಕ್ಯಮಹಿಮೋದಯಮಂ ತಳೆದಿರ್ದ ಸಿದ್ಧಸಂ
ತತಿ ನಮಗೀಗೆ ಸಿದ್ಧಿರಮಣೀ ರಮಣೀಯನಿವಾಸ ವಾಸಮಂ || ೨

ಮ || ಸ್ರ || ವರಪಂಚಾಚಾರ ಚಂಚತ್ಕುಳಿಸದೆ ಮದನೋದ್ಯತ್ಪ್ರತಾಪೋಚ್ಚಧಾತ್ರೀ
ಧರಮಂ ಮುಂನುರ್ಚುನೂಱಪ್ರಿನಮೊಡೆದು ತಪಃಪ್ರಾಜ್ಯಸಾಮ್ರಾಜ್ಯಲಕ್ಷ್ಮೀ
ಪರಿರಂಭ ಪ್ರಾಪ್ತಿಯಿಂದಂ ಪ್ರತಿದಿನಮಧಿಕಾನಂದಮಂ ತಾಳ್ದಿದಾಶಾಂ
ಬರಮುಖ್ಯರ್ ಮಾೞ್ಕೆ ಶುದ್ಧಾಚರಣಮನೆಮಗಾಚಾರ್ಯರಾಚಾರವರ್ಯರ್ || ೩

ಇದು ಸಂಸಾರಸ್ವರೂಪಂ ಪರಿಕಿಪೊಡಿದು ಮುಕ್ತಿಸ್ವರೂಪಂ ದಲೆಂದ
ಗ್ಗದ ಸತ್ಯಾಧಿಷ್ಠಿತ ಶ್ರೀಜಿನವಚನದೊಳಿರ್ದಂದಮಂ ಪ್ರೀತಿಯಿಂ ತ
ಪ್ಪದೆ ನಾನಾಜೀವಜಾಳಕ್ಕನುದಿನಮುಪದೇಶಂಗೆಯುತ್ತಿರ್ಪ ಸೌಜ
ನ್ಯದಯಾಂಭೋರಾಶಿಗಳ್ ಸುಶ್ರುತಜಳಧಿಗಳಂ ಮಾೞ್ಕುಪಾಧ್ಯಾಯರೆಮ್ಮಂ || ೪

ಚಂ || ಸಮರಸಭಾವಭಾವನೆಯೆ ಭಾವಮನಾವರಿಸಿತ್ತು ಮತ್ತೆ ಸಂ
ಯಮಗುಣಶೀಲಸಂತತಿ ಸಮಂತತಿ ಶೋಭೆಯನಾಂತುದಿನ್ನರಾ
ರಮಮ ಸಮಸ್ತ ಭೂತಳದೊಳೆಂಬ ಸಮಾಖ್ಯೆಗೆ ಸಂದ ಸಾಧುಗಳ್
ವಿಮಳಯಶೋನಿಧಾನರೆಮಗೀಗೆ ನಿಜೋತ್ತಮಸಾಧುವೃತ್ತಿಯಂ || ೫

ಪರಮ ಜಿನೇಂದ್ರಬೋಧ ಹಿಮವನ್ನಗಜಾತೆಯನೇಕ ಭಂಗಭಂ
ಗುರುವಿಸರತ್ತರಂಗೆಯ ನಿಯೋಗ ಸಮುಜ್ಜ್ವಳಫೇನ ಸಂತತ
ಸ್ಫರಿತ ನಯಪ್ರಮಾಣ ಘನಘೋಷ ಲಸದ್ವಚನಾಮೃತಾಂಬು ಸ
ದ್ಭರಿತೆ ಸರಸ್ವತೀಸುರತರಂಗಿಣಿ ಮನ್ಮತಿಗೀಗೆ ಸಿದ್ಧಿಯಂ || ೬

ಕಂ || ಶ್ರೀ ಸಿದ್ಧಾಯಿನಿ ಯಕ್ಷಿ ಸು
ರಾಸುರ ನರಖಚರನಿಚಯಕೀರ್ತಿತೆ ಭುವನೋ
ದ್ಭಾಸಿತೆ ಮತ್ಕೃತಿಗತುಳ ವಿ
ಳಾಸ ವಿಕಾಸಂಗಳಂ ನಿಮಿರ್ಚುಗೆ ಸತತಂ || ೭

ಧರ್ಮವಿರೋಧಿಗಳಂ ದು
ಷ್ಕರ್ಮಪಯೋಧಿಗಳನಧಿಕಜನತಾಧಿಗಳಂ
ನಿರ್ಮೂಳಿಸುಗೆ ಗಜೇಂದ್ರಂ
ಪೆರ್ಮೆಯ ಯಕ್ಷಂ ಜಿನೇಂದ್ರಮತಕೃತಿ ಪಕ್ಷಂ || ೮

ಗೌತಮನಂ ಗತನತಜನ
ತಾತಮನಂ ಸಕಲಲೋಕವರ್ತಿತ ಕೀರ್ತಿ
ಶ್ರೀತಮನಂ ಬಂದಿಸುವೆಂ
ಪ್ರೀತಮನಂ ನಿಖಿಲ ಗಣಧರೌಘೋತ್ತಮನಂ || ೯

ಶರಣಕ್ಕೆಮಗೆಂದುಂ ಭಾ
ಸುರತರ ಭೂತಬಲಿ ಪುಷ್ಪದಂತಾಖ್ಯರ ಸ
ಚ್ಚರಣಸರಸಿರುಹಯುಗಳಂ
ವರಭವ್ಯಮಧುವ್ರತೋತ್ಕರ ಪ್ರೀತಿಕರಂ || ೧೦

ಚಂ || ವಿಮಳಕಳಾವಿಳಾಸದಧಿಕತ್ವಮನಾಂತು ದಿಗಂಬರ ಪ್ರತಾ
ನಮನನುರಾಗದಿಂ ಬೆಳಗಿ ತೂಳ್ದಿ ಕುಮಾರ್ಗತಮಃಸಮೂಹಮಂ
ಪ್ರಮದಮನಿತ್ತು ಸತ್ಕುವಳಯಕ್ಕೆ ಜಗನ್ನುತ ಗೃಧ್ರಪಿಂಛ ಸಂ
ಯಮಿವರನಿಂದುಮಂಡಳದವೋಲೆಸೆದಂ ನಿಸದಂ ಧರಿತ್ರಿಯೊಳ್ || ೧೧

ಕೃತಜಿಮಾರ್ಗವಾರಿಜವಿನಿದ್ರನನುಜ್ಜ್ವಳ ಕೀರ್ತಿಭದ್ರನಂ
ವಿತತ ದಯಾಸಮುದ್ರನಶೇಷ ಜನಸ್ತುತ ಶೀಲಮುದ್ರನಂ
ಗತಮಕರಧ್ವಜೇಭರಿಪುರೌದ್ರನನಪ್ರತಿಮಾಂಕರೌದ್ರನಂ
ಯತಿಪ ಸಮಂತಭದ್ರನನಿಳಾವಳಯಂ ನಲವಿಂದೆ ಕೀರ್ತಿಕುಂ || ೧೨

ಮನದೊಲವಿಂದೆ ಬಂದಿಸುವುದುರ್ವ್ವರೆ ಲಬ್ಧಜಿನಪ್ರಸಾದನಂ
ಮುನಿವಿಹಿತಪ್ರಮೋದನನಶೇಷ ವಿನೂತಕಳಾ ವಿನೋದನಂ
ಕುನಯನಿಕಾಯ ಭೇದನನಪಾತ್ತ ವಿಷಾದನನಪ್ರಮಾದನಂ
ಜನಪತಿ ಪೂಜ್ಯಪಾದನನನೂನಗುಣಾಂಬುಧಿ ಪೂಜ್ಯಪಾದನಂ || ೧೩

ಕಂ || ಕುನಯಾಚಳ ಶತ ಶತಧಾ
ರನ ಧೀರನ ಕೃತಪರೋಪಕಾರನ ಗತಶಂ
ಕನ ನೆಗೞ್ದಕಳಂಕನ ದೇ
ವನಪಾವನ ಪದಪಯೋಜಮೀಗೆಮಗೊಳ್ಪಂ || ೧೪

ಮಾನಧನಂ ವಿಳಸಿತ ವಿ
ದ್ಯಾನಿಳಯಂ ವಿಮಳಚಿತ್ತನಮಳ ಚರಿತ್ರಂ
ಭೂನುತಮೆನಿಸುವ ಕವಿಸಂ
ತಾನಂ ತಾನಿಂ ಪ್ರಸನ್ನಮಕ್ಕೆಮಗೆಂದುಂ || ೧೫

ಚಂ || ನಿರತಿಶಯಾರ್ಥ ಸಾರ್ಥವಿವೆನಿಪ್ಪಿನಮೊಪ್ಪುವನೇಕಕಾವ್ಯಮಂ
ಪರಹಿತಮಾಗೆ ರಾಗದೆ ವಿನಿರ್ಮಿಸಿ ನಿರ್ಮಳ ಕೀರ್ತಿಯಂ ದಿಗಂ
ಬರಧರಣೀತಳಾವಳಿಯೊಳಾದಮೆ ಪರ್ವ್ವಿಸಿದಾ ಕವೀಂದ್ರರಂ
ವಿರಹಿತ ತಂದ್ರರಂ ಪೊಗೞದಂಗೆ ತದಾಶ್ರಿತವಾಣಿ ಕೂರ್ಪಳೇ || ೧೬

ಕಂ || ಕರಮೆಸೆವ ಕಾವ್ಯಮುಕುರದೊ
ಳಿರದೆ ಚಿರಂತನರನೇಗಳುಂ ತೋಱುವರೀ
ಧರೆಯೊಳ್ ಸಮರ್ಥರೇನ
ಲ್ಲರೆ ಪೇೞ್ ಸತ್ಕವಿಗಳವರ್ಗಳಂ ಮೆಚ್ಚದರಾರ್ || ೧೭

ಉ || ಶ್ರೀವಿಜಯಂ ಗಜಾಂಕುಶನುದಾತ್ತಯಶಂ ಗುಣವರ್ಮನಾ ಜಗ
ತ್ಪಾವನ ನಾಗವರ್ಮನಸಗಂ ರಸಿಕಾಗ್ರಣಿ ಹಂಪದೇವನಾ
ಭಾವಕ ಚಕ್ರಿ ಹೊನ್ನಿಗನಿಳಾನುತ ರನ್ನಿಗನಗ್ಗದಗ್ಗಳಂ
ಧೀವಿಭು ಬೊಪ್ಪನೆಂಬ ಕವಿದರ್ಶಕರಿದೆಸೆದತ್ತು ಭೂತಳಂ || ೧೮

ಕಂ || ವಚನರುಚಿನಿಚಯದಿಂದಂ
ಸುಚತುರ ಕವಿರವಿಗಳಖಿಳ ಚೇತೋಗಗನ
ಪ್ರಚುರ ತಮಸ್ತಿಮಿರಮನಳ
ಱೆ ಚಳಿಯಿಸಲ್ ನೆಱೆಗುಮುೞಿದವರ್ ನೆಱೆದಪರೇ || ೧೯

ಖಳತತಿಯೊಳಿತರ ಕೃತಿನುತಿ
ಗಳನಾರಯ್ವಂದಮೆಂತುಟೆಂದಪವಿತತೋ
ಪಳದೊಳ್ ವಿಕಸಿತಮೆನಿಸುವ
ನಳಿನಮನಾರಯ್ವ ತೆಱನೆ ಪೆಱತಾದಪುದೇ || ೨೦

ಮ || ಸದಳಂಕಾರದಗಾರಮುದಘರಸಭಾವಾನೀಕದೋಕಂ ಸದ
ರ್ಥದ ಸಾರ್ಥಂ ವರಶಬ್ಧವೃಂದದ ವಿರಾಜನ್ಮಂದಿರಂ ನಾಡೆಯುಂ
ಮೃದುಸಂದರ್ಭದ ಗರ್ಭಮಿಂತಿದೆನಿಸಲ್ ಸಾಲ್ದಿರ್ಧ ಕಾವ್ಯಂ ಸಭಾ
ಸದರಂತಃಕರಣಕ್ಕದೇಂ ಕಱೆಯದೇ ಸೌಖ್ಯಾಮೃತಾಸಾರಮಂ || ೨೧

ಉ || ಶ್ರೀ ಕರಣಾಗ್ರಗಣ್ಯನಭಿಮಾನಿ ಜಿನೇಂದ್ರಮತಾಬ್ಜಭಾನು ಪು
ಣ್ಯಾಕರನರ್ಥಿಕಲ್ಪತರು ಭೋಗಪುರಂದರನಂಗಜೋಪಮಂ
ಭೀಕರವೈರಿವಾರಣವಿದಾರಣಕೇಸರಿ ಸತ್ಕಳಾಢ್ಯನ
ಸ್ತೋಕಯಶೋರ್ಥಿ ರೇಚವಿಭು ರಂಜಿಸಿದಂ ವಸುಧೈಕಬಾಂಧವಂ || ೨೨

ಮಿಕ್ಕಸುದಾನಿ ರೇಚಣಚಮೂಪತಿಯರ್ತಿಸ್ಥೆ ಕೇಶಿರಾಜನಾ
ತಿಕ್ಕಣ ಚಾವಣರ್ ಬೆರಸುಪಕ್ರಮಿಸಿರ್ದುದನೆಯ್ದೆ ಪೇೞ್ದು ಲೋ
ಕಕ್ಕನುರಾಗಮಂ ಜನಿಯಿಸಣ್ಣ ಮನೋಮುದದಿಂದಮೆಂದು ಸಂ
ದಕ್ಕರಜಾಣರಾಗ್ರಹಿಸೆ ವೀರಜಿನೇಶ್ವರ ಚಾರುಕಾವ್ಯಮಂ || ೨೩

ಶಾ || ಭಾರಧ್ವಾಜ ಪವಿತ್ರಗೋತ್ರತಿಳಕಂ ಶ್ರೀಕೇಶಿರಾಜಾತ್ಮಜಂ
ಸಾರೋದಾರ ಪವಿತ್ರತಾದಿ ಗುಣಭೃನ್ಮ ಲ್ಲಾಂಬಿಕಾನಂದನಂ
ತಾರೇಶೋಜ್ಜ್ವಳ ಕೀರ್ತಿ ಜೈನರುಚಿ ವಾಣೀವಲ್ಲಭಂ ನಿರ್ಮಳಾ
ಚಾರಂ ನಿರ್ಮಿಸಿ ಪೆರ್ಮೆವೆತ್ತನೊಲವಿಂದಾಚಣ್ಣನೀ ಧಾತ್ರಿಯೊಳ್ || ೨೪

ಚಂ || ಗಣಧರರಿಂ ಬಹುಶ್ರುತರಿನಾದಮೆ ವರ್ಣಿತಮಾದಂದಾ ಜಗ
ತ್ಪ್ರಣುತಮನೊಲ್ದ ವೀರಜಿನಚಾರುಚರಿತ್ರಮನಾತ್ಮಶಕ್ತಿಯಂ
ಗಣಿಯಿಸದಲ್ಪಧೀಧನನೆನಾನಭಿವರ್ಣಿಸಿದಪ್ಪೆನಾಜಿನಾ
ಗ್ರಣಿಯ ಪದಾರವಿಂದಯುಗಭಕ್ತಿಸುಧಾನುಭವೋತ್ಥಶಕ್ತಿಯ || ೨೫

ನುತಜಿನನಾಥ ದಿವ್ಯರವನಂದನಜಂ ಶ್ರುತಕಲ್ಪಭೂರುಹಂ
ಚತುರನಿಯೋಗ ಚಾರುಚತುರುನ್ನತ ಶಾಖೆಗಳಿಂ ವಿರಾಜಿಕುಂ
ಪ್ರತಿದಿನಮಲ್ಲಿ ಸನ್ಮತಿಯಸತ್ಕಥೆ ತಾಂ ಪ್ರಥಮಾನುಯೋಗಮೆಂ
ಬತಿಶಯ ಶಾಖೆಗಾದುದುಪಶಾಖೆ ವಿಬುಧೇಷ್ಪ ಫಲಪ್ರದಾಯಕಂ || ೨೬

ವ || ಅದೆಂತೆನೆ-

ಮ || ಸ್ರ || ಜಿನಬೋಧಾಗಾರ ತೋಯಾಶಯದ ನಡುವೆ ಸರ್ವ್ವಾಂತರಿಷ್ಟಂ ಸರೋಜಾ
ತನಿಭಂ ವಿಭ್ರಾಜಿಕುಂ ಮತ್ತದಱ ನಡುವೆ ಸತ್ಕರ್ಣಿಕಾಕಾರಮಂ ನೆ
ಟ್ಟನೆ ತಾಳ್ದಿರ್ಕುಂ ತ್ರಿಳೋಕಂ ತ್ರಿಪವನಸುಪರಾಗಾವ್ಯತಂ ಚೇತನಾಚೇ
ತನಷಡ್ಡ್ರವ್ಯೋರುಬೀಜಂ ಸಹಜಪರಿಣತಿ ಸ್ಪಾರಬಂಧಾನುಬಂಧಂ || ೨೭

ಶಾ || ಆ ಲೋಕತ್ರಯ ಲಕ್ಷ್ಮಿಗಾದ ವಿಳಸನ್ಮಧ್ಯಪ್ರದೇಶಂಬೊಲೇಂ
ಲೀಲಾಲಂಬನಮಾಯ್ತೊ ತಿರ್ಯಗಭಿಧಾನಂ ಲೋಕಮಸ್ತೋಕ ಸ
ದ್ವೇಳಾಲಂಕೃತ ವಾರಿರಾಶಿವಿಪುಳ ದ್ವೀಪಾವಳೀವೃತ್ತ ಶೋ
ಭಾಲಕ್ಷ್ಮಂ ನಯನ ಪ್ರಮೋದಕರ ಜಂಬೂದ್ವೀಪನಾಭೀಸ್ಥಳಂ || ೨೮

ವ || ಅಂತಾಶ್ಚರ್ಯಕರಮಾದ ತಿರ್ಯಗ್ಲೋಕದ ನಡುವೆ-

ಕಂ || ಮದನನವೋಲ್ ಮಕರಾಂಕಂ
ತ್ರಿದಶಾಧೀಶ್ವರನವೋಲ್ ಸವಜ್ರಂ ಸ್ತ್ರೀವ
ಕ್ಷದವೋಲ್ ಸಪಯೋಧರಮೆನಿ
ಪುದು ಲವಣಸಮುದ್ರಮುಚ್ಚಳದ್ರವರೌದ್ರಂ || ೨೯

ನೆಗೞ್ದಾ ಜಳನಿಧಿ ಬಳಸಿರೆ
ಸೊಗಯಿಸುಗುಂ ಸುಪ್ರಸಿದ್ಧ ಜಂಬೂದ್ವೀಪಂ
ಸುಗತಾಶೇಷಕುಳಾಚಳ
ಸುಗಭೀರ ಮಹಾನದೀ ಬಹುಕ್ಷೇತ್ರಕುಳಂ || ೩೦

ತನ್ಮಧ್ಯದೊಳಿರ್ಪುದು ವಿಳ
ಸನ್ಮಣಿಮಯ ಶಿಖರಚುಂಬಿತಾದ್ಯತ್ರಿದಿವಂ
ಮನ್ಮಥಮದಭಂಜನ ಜಿನ
ಜನ್ಮಾಭಿಷವಾನುಕೂಲಮನಿಮಿಷಶೈಳಂ || ೩೧

ವ || ಆ ಕ್ಷೋಣೀಧರವರಧ ದಕ್ಷಿಣದಿಶಾಭಾಗದಲ್ಲಿ-

ಕಂ || ಭರತಮಹೀಕಾಂತೆಯ ಭಾ
ಸುರಮುಖಸರಸೀರುಹಮೆನಿಸಿ ರಂಜಿಸುತಿರ್ಕುಂ
ವರವಿಷಯಂ ಮಗಧಾಖ್ಯಂ
ಸ್ಮರವಿಷಯಂ ಸಕಳಮಂಗಳೋತ್ಕರ ವಿಷಯಂ || ೩೨

ಮ || ಅದನೇವಣ್ಣಿಪೆನೆಲ್ಲಿನೋಡಿದೊಡಮುದ್ಯಾನಂಗಳೆತ್ತೆತ್ತ ನೋ
ದಿದೊಡಂ ತಣ್ಣುಳಿಲೆಲ್ಲಿನೋಡಿದೊಡಮಾವಾಳಂಗಳೆತ್ತೆತ್ತ ನೋ
ದಿದೊಡಂ ಪೂಗೊಳನೆಲ್ಲಿ ನೋಡಿದೊಡಮಿಕ್ಷುಕ್ಷೇತ್ರಮೆತ್ತೆತ್ತ ನೋ
ಡಿದೊಡಂ ಶಾಲಿವನಂಗಳಿಲ್ಲದ ನೆಲಂ ಬೇಱೆಲ್ಲ ಕಾಲೂಱಿರಲ್ || ೩೩

ವ || ಮತ್ತಂ-

ಕಂ || ಕರಿವದನ ಗುಹೋರಗ ಬಂ
ಧುರ ಕಟಕ ಶಿವಾನ್ವಿತಂಗಳಾದುದಱಿಂ ತ
ದ್ಗಿರಿನಿಕರಂಗಳ್ ಭಾವಿಸೆ
ಗಿರೀಶತೆಯನಾಂತುವೆಂಬುದೊಂದಚ್ಚರಿಯೇ || ೩೪

ಕಂ || ಜನಪದದ ಚೆಲ್ವನೀಕ್ಷಿಪೆ
ನೆನುತೆಯ್ತಂದಮೃತವಾರ್ದ್ಧಿ ಬಹುಮುಖದಿಂ ಭೋ
ರೆನೆ ಪರಿಯುತ್ತಿರ್ದಪುದೆಂ
ಬಿನಮಮಳಿನ ನದಿಗಳೆಸೆವುವದಱೊಳ್ ಪಲವುಂ || ೩೫

ಅಮರಾವತಿ ತದ್ಭೂತಳ
ದ ಮೇಲೆ ಸಲ್ಲೀಲೆವೆತ್ತು ಪಲವುಂ ರೂಪಿಂ
ದಮೆ ನಿಂದುದೆಂಬ ತೆಱದಿಂ
ದಮೆಸೆವುವಂತಲ್ಲಿ ಸಂತತಂ ನಗರಂಗಳ್ || ೩೬

ವ || ಅಂತುಮಲ್ಲದೆ-

ಕಂ || ಧಾರಿಣಿಗೆ ದಿವಂಗಳನಾ
ಧಾರಂಗಳ್ ಗಗನದಿಂದೆ ಬಿೞ್ದುವೆನಿಪ್ಪಂ
ತಾ ರುಚಿರ ದೇಶದೂರ್ಗಳ್
ಭೂರಿತರ ಶ್ರೀಯನಾಂತು ನಿಂದುವು ಪಲವುಂ || ೩೭

ವ || ಮತ್ತಮಲ್ಲಿ-

ಕಂ || ಎಳೆಯಂ ಪರ್ವಿದ ವಿಷಯಾ
ಧ್ವಳತಿಕೆಗಲ್ಲಲ್ಲಿಗೊಗೆದ ಫಳಮೆನಿಸಿದುವಾ
ಕುಳ ಸುರಭಿಮಯ ರಸಾಮೃತ
ಕಳಿತಂಗಳ್ ಕಾಂಚನಪ್ರಪಾಕೂಟಂಗಳ್ ||

ಚಂ || ಕಳಶಮನಾಗಳೆತ್ತುವುದುಮಾರ್ದ್ದಿಸೆ ತೋಳ್ದೆಱೆಪಿಂ ಮನೋಜನಾ
ಗಳೆ ಜಳಧಾರೆಗೆತ್ತು ನಖದೀಧಿತಿರೇಖೆಗೆ ಕೆಯ್ಯನೊಡ್ಡುವಾ
ಕುಳತೆಯನಾ ಪ್ರಪಾಂಗನೆಯರೀಕ್ಷಿಸಿ ಪಾಂಥರಮೇಲೆ ಲೋಚನಾಂ
ಚಳದೊಳೆ ಬೀಸುತುಂ ತಳಿವರುಚ್ಚಳಿತ ಸ್ಮಿತವಾರಿಬಿಂದುವಂ || ೩೯

ವ || ಮತ್ತಮಾವಿಷಯದೊಳ್-

ಉ || ಕೈರವವಾರಿಜಂಗಳಲರಂ ತಿಱಿದಾಡುವ ಭೃಂಗಮಾಲೆಯಂ
ಬಾರಿಸಿ ಕಾಲಕರ್ಮಡುಗಳೊಳ್ ನೆಲನಂ ನಡೆ ನೋೞ್ಪ ಭೂಷಿಕಾ
ಕಾರದ ಪಾಮರೀವಿತತಿ ಮಾರ್ಪೊಳೆವೀಕ್ಷಣಂದಿಂ ನಿಜಾಸ್ಯದಿಂ
ತೋರಗುರುಳ್ಗಳಿಂ ಪಡೆವುದೊಪ್ಪಮನಲ್ಲಿಗೆ ಮುನ್ನಿನಂದದಿಂ || ೪೦

ಕಂ || ಕೂರೆಲೆಗಳ ಬಾಯ್ಧಾರೆಗೆ
ಕೋರೈಸಿ ಮುಸುಂಕಿದಂತೆ ಪರಿಕಾಲ್ಗಳ ಪಂ
ಕೇರುಹ ರಜದೊಳ್ ಪೊರೆದು ಸ
ಮೀರಂ ನವಗಂಧಶಾಳಿ ವನದೊಳ್ ಸುೞಿಗುಂ || ೪೧

ಚಂ || ಮಿಳಿರ್ವೆಲೆಪಕ್ಕದಂತರುಣಿಮತ್ತ್ವದಿನೊಳ್ದೆನೆ ಕುಂಡದಂತೆ ಕ
ಣ್ಗೊಳೆ ಗಿಳಿವೆಣ್ಬೊಲಿರ್ದ ಕಳಮಸ್ತಬಕಾಗ್ರಮನೇ ಱಿ ಪಾಲುಣ
ಲ್ಕೆಳಸುವ ರಾಜಕೀರಮನಿದೋಪವಳೊಳ್ ನೆರೆದಪ್ಪುದಾಗದೀ
ಗಿಳಿಯನಗಲ್ಜಲೆಂದಬಲೆ ಪಾಮರಿ ಸೋಯದೆ ನೋಡಿ ಪಿಂಗುವಳ್ || ೪೨

ವ || ಮತ್ತಮಲ್ಲಿ-

ಮ || ಎಲರ್ವೊಯ್ಲಿಂದೊಸರ್ವಿಕ್ಷುಕಾಂಡರಸದಿಂ ನಾಂದಿಕ್ಕೆ ತಮ್ಮೊಳ್ ಪಳಂ
ಚಲೆವೊಳ್ಗೊಂಚಲ ಕಾಯೊಳುರ್ಕುವೆಳನೀರಿಂದಂ ಬನಂಗಳ್ಗಗುಂ
ದಲೆ ನೀರೂಟಮಿದೇಕೆ ಕೆಮ್ಮನೆ ತೊಳಲ್ವುತ್ತಿರ್ಪರಿಂತೆಮ್ಮನೆಂ
ದುಲಿವಂತಿರ್ಪುವು ರಾಟಣಂಗಳಸಕೃದ್ವ್ಯೂಢಾಕ್ಷ ಚೀತ್ಕಾರದಿಂ || ೪೩

ಅಲರ್ದಂಭೋರುಹಮೆಂಬ ಕಣ್ಮಲರಿನಾದಂ ನೋಡಿ ನೀಡುಂ ತೃಷಾ
ಕುಲಿತಶ್ರಾಂತಿ ಸಮೇತ ಪಾಂಥತತಿಯಂ ಕೇಳೀಮರಾಳಾಳಿ ಕೋ
ಮಲನಾದಂಗಳಿನಾತ್ಮ ನಿರ್ಮಳತರಾಂಭಃಪಾನಮಂಮಾಡಿ ಮಿಂ
ದೊಲವಿಂದಂ ಕರೆವಂತೆ ಕಣ್ಗೊಳಿಪುವೆಂದುಂ ತತ್ಸರಸ್ಸಂಕುಳಂ || ೪೪

ಕಂ || ಕಳಮಕ್ಷೇತ್ರಂಗಳ ಪರಿ
ಮಳಕ್ಕೆ ಮಂಡಳಿಸುವಳಿಗಳಿಂದೆಸೆವ ವಿಯ
ತ್ತಳಮಸಿತ ಬಳಾಹಕಮಂ
ತಳೆದುದುಕಾಲದೊಳಮೆಂಬ ಶಂಕೆಯನೀಗುಂ || ೪೫

ಪರಿಕಿಪೊಡಂತಾವಿಷಯಂ
ನಿರಂತರಂ ಬಂಧುರಾಗರಮಣೀಯಕರಂ
ಪರಿಪಾಳಿತ ಘನಶೋಭಾ
ಕರಂಡಕಂ ಬಂಧುರಾಗರಮಣೀಯಕರಂ || ೪೬

ವ || ಮತ್ತಮಾವಿಷಯಂ ವಿಯನ್ಮಂಡಲದಂತೆ ನಿತ್ಯಮಹತ್ವೋಪೇತಮುಂ ನಿರ್ವಾಣ ಪದವಿಯಂತೆ ನಿರ್ವಾದಸೌಖ್ಯಾಭಿರಾಮಮುಂ ಸಿತಪಕ್ಷಪ್ರಚಾರದಂತೆ ಪ್ರವರ್ಧಮಾನ ಸೋಮೋದಯಮುಂ ಸುರುಚಿರ ಸರಸೀಸಂತತಿಯಂತೆ ವಿಕಸತ್ಕಮಳಾವಭಾಸಿತಮುಂ ಸಂವತ್ಸರಪ್ರಕರದಂತೆ ವಿಜಯ ವಿಕ್ರಮ ವಿಭವ ಪ್ರಭವ ಪಾರ್ತ್ಥಿವಾಯತ್ತಮುಂ ವಲ್ಮೀಕಾನೀಕದಂತೆ ಭಾಸ್ವದ್ಭೋಗಿಸಮಾಜವಿರಾಜಿತಮುಂ ಪ್ರಸಿದ್ಧಕವಿಕೃತಶ್ರವ್ಯ ಕಾವ್ಯದಂತೆ ಸಮೀಹಿತಾಶೇಷ ಸರಸಪದಾರ್ಥ ಸಾರ್ಥಾಳಂಕಾರಮುಂ ಸಮಾಸ ಪ್ರಕರಣದಂತೆ ಬಹುವ್ರೀಹಿ ವಿಭ್ರಾಜಿತಮುಂ ನಿಳಿಂಪನಾಯಕ ಹಸ್ತದಂತೆ ವಿಭಾಸ್ವದ್ದಂ ಭೋಳೀವಿಳಾಸಮುಂ ವರ್ಷಾಕಾಲೋದಯದಂತೆ ಕಮನೀಯಕರಕಾನನಮುಂ ಸಮುದ್ಯದುದ್ಯಾನದಂತೆ ವಿವಿಧನಗರಮಾರಂಜಿತಮುಂ ಮಾರ್ತಂಡಮಂಡಳದಂತೆ ಗೋರಾಜಿರಾಜಿತಮುಂ ಸರಿನ್ನಾಥಸಂತತಿಯಂತೆ ನಾನಾರತ್ನ ವ್ಯವಹಾರೋಪಶೋ ಭಿತಮುಂ ಗ್ರಹಸಮೂಹದಂತೆ ಭಾಸ್ವನ್ಮಂಗಳಸಂಗತಮುಂ ಭಾಸುರವಾಸವನಿವಾಸದಂತೆ ಸುಧರ್ಮಾವಭಾಸಿತಮುಮೆನಿಪುದಂತುಮಲ್ಲದೆಯುಂ-

ಕಂ || ಕರಪೀಡನಮುರುಕುಚದೊಳ್
ತರುಣೀಜನ ಮಧ್ಯದೊಳ್ ದರಿದ್ರತೆ ಚಿಂತಾ
ಪರತೆ ಮುನೀಶ್ವರರೊಳ್ ತಾಂ
ದೊರೆಕೊಳ್ಗುಮದಲ್ಲದಿಲ್ಲ ತಜ್ಜನಪದದೊಳ್ || ೪೭

ಪರಿಕಿಸುವೊಡವಗ್ರಹಮು
ದ್ಧುರಸಿಂಧುರ ಬಂಧುರಾಂಗದೊಳ್ ಗುಣಲೋಪಂ
ವರಶಬ್ದಶಾಸ್ತ್ರದೊಳ್ ತಾಂ
ದೊರೆಕೊಳ್ಗುಮದಲ್ಲದಿಲ್ಲ ತಜ್ಜನಪದದೊಳ್ || ೪೮

ವ || ಅಂತತಿಪ್ರಸಿದ್ಧಮುಂ ಶೊಭಾಸಮೃದ್ಧಮುಮೆನಿಪ ಮಗಧಮಹೀಭಾಗದೊಳ್-

ಕಂ || ಕರಮೆಸೆವುದು ರಾಜಗೃಹಂ
ಪುರಮುರುತರ ವಿಭವವಿಜಿತ ಸುರರಾಜಗೃಹಂ
ಸುರುಚಿರರಾಜಗೃಹಂ ರಾ
ಜರಾಜಗೃಹಸದೃಶ ವರವಣಿಗ್ರಾಜಗೃಹಂ || ೪೯

ಇರೆ ತರತರದಿಂ ತುಱುಗಿದ
ಸರಿಗೆಗಳಿಡೆ ದಕ್ಷಿಣೋತ್ತರಾಯಣಗತಿಯೊಳ್
ಪರಿವ ರವಿರಥದ ಗಾಲಿಯ
ಪರಿಕಣಿಯೆನೆ ಪೊನ್ನಕೋಂಟೆ ಸೊಗಯಿಸಿ ತೋರ್ಕುಂ || ೫೦