ಆಚಣ್ಣ-ಅಗ್ಗಳ ಸಂಪುಟ ಒಂದು ವಿಶಿಷ್ಟ ಕೃತಿ. ಇಬ್ಬರು ತೀರ್ಥಂಕರರ ಪುರಾಣವನ್ನು ಒಳಗೊಂಡಿದೆ. ಇಬ್ಬರು ಸಮಕಾಲೀನ ಕವಿಗಳು ಇವನ್ನು ರಚಿಸಿದ್ದಾರೆ. ವರ್ಧಮಾನ ಪುರಾಣವನ್ನು ರಚಿಸಿದ ಆಚಣ್ಣ ರಾಜಪರಂಪರೆಗೆ ಹತ್ತಿರವಾದ ದಂಡನಾಯಕ ಮನೆತನದವನು. ಆಡಳಿತಾತ್ಮಕ ವ್ಯವಹಾರಗಳಲ್ಲಿ ತೊಡಗಿಯೂ ಜೈನರುಚಿಯನ್ನು ಬೆಳೆಸಿಕೊಂಡವನು. ವಾಣೀವಲ್ಲಭನಾದವನು. ನಿರ್ಮಳಾಚಾರವನ್ನು ನಿರ್ಮಿಸಿ ಹೆಸರಾದವನು. ಶ್ರೀಪದಾಶೀತಿ ಎನ್ನುವ ಇನ್ನೊಂದು ಕೃತಿಯನ್ನು ರಚಿಸಿದ ಈತ ಜೀವಿತದ ಉತ್ತರಾರ್ಧದಲ್ಲಿ ಜಿನಮುನಿಯಾದವನು. ತಮ್ಮ ಶಕ್ತಿಯನ್ನು ಅರಿಯದೆ ರಾಜಸಭೆಯಲ್ಲಿ ಗಳಹುವವರನ್ನು ಜಗತ್ತಿನಲ್ಲಿ ವರ್ತಿಸುವ ಎಲ್ಲ ಕಲೆಗಳನ್ನೂ ಬಳಸಿಕೊಂಡು ಸೋಲಿಸಿ ತನ್ನ ಅಗ್ಗಳವಾದ ಕಣ್ಣನ್ನು ತೆರೆದು ತೋರಿಸಿದವನು ಅಗ್ಗಳ.

ತೀರ್ಥಂಕರ ಪುರಾಣಗಳ ರಚನೆಯಲ್ಲಿ ಆಚಣ್ಣ ತನ್ನನ್ನು ‘ಅಲ್ಪಧೀಧನ’ ಎಂದಿದ್ದರೆ, ಅಗ್ಗಳ ‘ಒಗೆದಲ್ಪ ಮತಿಯ ಬಲದಿಂ’ ಪುರಾಣವನ್ನು ರಚಿಸಿರುವುದಾಗಿ ತಿಳಿಸಿದ್ದಾನೆ. ಇಬ್ಬರೂ ವಿನಯಪರರು, ವಸ್ತುವಿನ ದೃಷ್ಟಿಯಿಂದ ಕೂಡ ಈ ಸಂಪುಟ ವಿಶಿಷ್ಟವಾದುದು. ೨೪ನೆಯ ತೀರ್ಥಂಕರ ವರ್ಧಮಾನ ಇತಿಹಾಸ ಪುರುಷ. ಕ್ರಿ.ಪೂ. ೫೯೯ರಲ್ಲಿ ಜನಿಸಿ ೭೨ ವರ್ಷ ಕಾಲ ಜೀವಿಸಿ ಕ್ರಿ.ಪೂ. ೫೨೭ರಲ್ಲಿ ನಿರ್ವಾಣ ಹೊಂದಿದ ವರ್ಧಮಾನ ಸಮಕಾಲೀನ ಜನಜೀವನದಲ್ಲಿ ಬೆರೆತವನು. ಕೈವಲ್ಯ ಪ್ರಾಪ್ತಿಯಾದ ಮೇಲೆ ಅರ್ಧಮಾಗಧಿ ಭಾಷೆಯಲ್ಲಿ ಧರ್ಮೋಪದೇಶ ಮಾಡಿ ಜನರನ್ನು ಧರ್ಮಪರರನ್ನಾಗಿ ಮಾಡಿದವನು. ೮ನೆಯ ತೀರ್ಥಂಕರ ಚಂದ್ರಪ್ರಭನಾದರೊ ‘ಪುರಾಣ ಪುರಷ’. ಜೀನಸೇನ-ಗುಣಭದ್ರರು ರೂಪಿಸಿದ ಪುರಾಣ ಪರಂಪರೆಯಲ್ಲಿ ರೂಪುಗೊಂಡವನು.

ವರ್ಧಮಾನ ಕಾಲದಲ್ಲಿ ಅದುವರೆಗೆ ಪ್ರತಿಷ್ಠಿತವಾಗಿದ್ದ ವೈದಿಕಧರ್ಮದಿಂದ ಜೈನಧರ್ಮ ಅನುಮೋದನೆ ಪಡೆದಿದೆ. ವರ್ಧಮಾನ ಪುರಾಣದಲ್ಲಿ ಪಾರ್ವತಿ ಪರಮೇಶ್ವರರು ವರ್ಧಮಾನನನ್ನು ಮಹಾಪುರುಷನೆಂದು ಸುತ್ತಿಸಿದರೆ ೧೨ನೆಯ ಶತಮಾನದಲ್ಲಿ ಶೈವ, ವೀರಶೈವಗಳ ಪ್ರಾಬಲ್ಯದಿಂದ, ವೈಷ್ಣವ ಧರ್ಮದ ಉತ್ಕರ್ಷದಿಂದ ಜೈನಧರ್ಮ ಆಘಾತಕೊಳಗಾಗಿದ್ದಾಗ ಅಗ್ಗಳ ರಾಜಸಭೆಗಳಲ್ಲಿ ನಡೆದ ಧಾರ್ಮಿಕ ಗೋಷ್ಠಿಗಳಲ್ಲಿ ಪ್ರತಿವಾದಿಗಳನ್ನು ಸೋಲಿಸಿ ಜೈನಧರ್ಮವನ್ನು ಉಳಿಸಿದ ಸಂಗತಿ ಗಮನಾರ್ಹವಾಗಿದೆ.

ಹೀಗೆ ಅನೇಕ ವೈಶಿಷ್ಟ್ಯಗಳಿಗೆ ಕಾರಣವಾದ ಆಚಣ್ಣ-ಅಗ್ಗಳ ಸಂಪುಟವನ್ನು ಸಂಪಾದಿಸುವ ಅವಕಾಶವನ್ನು ಕನ್ನಡ ವಿಶ್ವವಿದ್ಯಾಲಯ, ಹಂಪಿ ಒದಗಿಸಿಕೊಟ್ಟು ಉಪಕಾರವನ್ನು ಮಾಡಿದೆ. ೧೯೭೪ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆ ಎರಡನೆಯ ನಾಗವರ್ಮನ ವರ್ಧಮಾನ ಪುರಾಣವನ್ನು ಪ್ರಕಟಿಸುವ ಸಂದರ್ಭದಲ್ಲಿ ಅಮೂಲಾಗ್ರವಾಗಿ ಓದುವ ಪ್ರಥಮ ಅವಕಾಶ ನನಗೆ ಲಭಿಸಿತು. ಅಂದಿನಿಂದಲೂ ವರ್ಧಮಾನ ಸಾಹಿತ್ಯದ ಬಗ್ಗೆ ಕೆಲಸ ಮಾಡು ಇಚ್ಛೆ ನನಗೆ ಇದ್ದಿತು. ಈಗ ಅದು ಸಾಧ್ಯವಾಗಿದೆ. ೧೯೮೦ರಲ್ಲಿ ಪಿರಿಯಪಟ್ಟಣದ ದೊಡ್ಡಯ್ಯನ ಚಂದ್ರಪ್ರಭ ಸಾಂಗತ್ಯವನ್ನು ೧೯೮೫ರಲ್ಲಿ ನಿಟ್ಟೂರು ದೊಡ್ಡಣಾಂಕನ ಚಂದ್ರಪ್ರಭ ಷಟ್ಟಪದಿಯನ್ನು ಸಂಪಾದಿಸಿ ಪ್ರಕಟಿಸುವಲ್ಲಿ ಅಗ್ಗಳನನ್ನು ಅಭ್ಯಾಸ ಮಾಡಿದುದು ಈಗ ಪ್ರಯೋಜನಕ್ಕೆ ಬಂದಿದೆ.

ವರ್ಧಮಾನ ಪುರಾಣದ ಸಂದರ್ಭದಲ್ಲಿ ಎಂ. ಮರಿಯಪ್ಪಭಟ್ಟರು ಮತ್ತು ಎಂ.ಗೋವಿಂದರಾಯರ ಪರಿಷ್ಕರಣವನ್ನು ಅವರ ವಿದ್ವತ್ಪೂರ್ಣ ಪೀಠಿಕೆಯನ್ನು ಅವಲಂಬಿಸಿದ್ದೇನೆ. ಇದರ ಜೊತೆಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ಭಂಡಾರದ ಕೆ.ಎ. ೫ ಹಸ್ತಪ್ರತಿಯ ನೆರವಿನಿಂದ ಸಾಕಷ್ಟು ಪರಿಷ್ಕರಣೆ ಸಾಧ್ಯವಾಗಿದೆ. ಗದ್ಯಾನುವಾದದೊಡನೆ ವರ್ಧಮಾನ ಪುರಾಣವನ್ನು ಪ್ರಕಟಿಸುವ ಸಂದರ್ಭದಲ್ಲಿ ಆ.ನೇ. ಉಪಾಧ್ಯೆ, ಕೈಲಾಸಚಂದ್ರಶಾಸ್ತ್ರೀ, ತ.ಸು. ಶಾಮರಾಯ ಮತ್ತು ಪ. ನಾಗರಾಜಯ್ಯನವರು ಬರೆದಿರುವ ಬರಹಗಳಿಂದ ನೆರವು ಪಡೆದಿದ್ದೇನೆ. ಡಾ. ವೈ.ಸಿ. ಭಾನುಮತಿಯವರು ಪಿ.ಎಚ್‌.ಡಿ., ಪದವಿಗಾಗಿ ಸಲ್ಲಿಸಿದ ಕನ್ನಡದಲ್ಲಿ ವರ್ಧಮಾನ ಸಾಹಿತ್ಯ ಎನ್ನುವ ಮಹಾಪ್ರಬಂಧ ಪಿ.ಎಚ್‌.ಡಿ., ಪ್ರಬಂಧಗಳಲ್ಲಿ ಅಮೋಘವಾದುದು. ಅದರಿಂದ ಉಪಕೃತನಾಗಿದ್ದೇನೆ.

ಕಾವ್ಯಕಳಾನಿಧಿಯಿಂದ ೧೯೦೫ರಲ್ಲಿ ಎಂ.ಎ. ರಾಮಾನುಜ ಅಯ್ಯಂಗಾರ್ ಅವರಿಂದ ಪರಿಷ್ಕಾರಗೊಂಡ ಚಂದ್ರಪ್ರಭ ಪುರಾಣಂ ನನ್ನ ಪರಿಷ್ಕರಣ ಕಾರ್ಯಕ್ಕೆ ಆಕರ. ಎಂ.ಎ. ರಾಮಾನುಜ ಅಯ್ಯಂಗಾರ್ ಅವರ ತುಂಬುಪಾಂಡಿತ್ಯ ಕಾರಣವಾಗಿ ಆ ಪರಿಷ್ಕರಣ ಅತ್ಯಂತ ಶುದ್ಧವಾಗಿದೆ. ಆರ್.ವಿ. ಕುಲಕರ್ಣಿ ಅವರು ಮಾಡಿದ ಚಂದ್ರಪ್ರಭ ಪುರಾಣದ ಗದ್ಯಾನುವಾದ ಯಶಸ್ವಿಯಾಗಿದೆ. ಡಿ.ಎಲ್. ನರಸಿಂಹಾಚಾರ್, ಪ್ರಧಾನ ಗುರುದತ್ತ, ಎನ್.ಎಸ್. ತಾರಾನಾಥ ಅವರ ಲೇಖನಗಳು ಸೊಗಸಾಗಿವೆ. ಈ ಎಲ್ಲ ಪೂರ್ವಸೂರಿಗಳಿಗೆ ಕೃತಜ್ಞನಾಗಿದ್ದೇನೆ.

ಕನ್ನಡ ವಿಶ್ವವಿದ್ಯಾನಿಲಯ, ಹಂಪಿ, ಕರ್ನಾಟಕ ಸರ್ಕಾರದ ನೆರವಿನಿಂದ ೨೦೦೬ ಶ್ರವಣಬೆಳಗೊಳದ ಐತಿಹಾಸಿಕ ಗೊಮ್ಮಟ ಮಹಾಮಸ್ತಕಾಭಿಷೇಕ ಅಂಗವಾಗಿ ೨೦ ಸಂಪುಟಗಳಲ್ಲಿ ಜೈನ ಸಾಹಿತ್ಯವನ್ನು ಹೊರತರುತ್ತಿರುತ್ತದೆ. ಈ ಬೃಹದ್ ಯೋಜನೆಯಲ್ಲಿ ಆಚಣ್ಣ-ಅಗ್ಗಳ ಸಂಪುಟವನ್ನು ಸಂಪಾದಿಸುವ ಅವಕಾಶವನ್ನು ನೀಡಿದುದಕ್ಕಾಗಿ ಕುಲಪತಿ ಪ್ರೊ. ವಿವೇಕ ರೈ ಅವರಿಗೆ ಕೃತಜ್ಞನಾಗಿದ್ದೇನೆ. ಪ್ರಸಾರಾಂಗದ ನಿರ್ದೇಶಕರು ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ನೀಡಿದ ಒತ್ತಾಸೆ ದೊಡ್ಡದು. ಅದಕ್ಕಾಗಿ ಅವರನ್ನು ಯಾವಾಗಲೂ ನೆನೆಯುತ್ತೇನೆ.

ಕೆ.ಎ. ೫ ಹಸ್ತಪ್ರತಿಯನ್ನು ಬಳಸಿಕೊಳ್ಳಲು ಅನುಮತಿ ನೀಡಿ ಆಚಣ್ಣನ ವರ್ಧಮಾನ ಪುರಾಣದ ಮತ್ತಷ್ಟು ಪರಿಷ್ಕರಣಕ್ಕೆ ಕಾರಣರಾದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿಕಟಪೂರ್ವ ನಿರ್ದೇಶಕರಾದ ಪ್ರೊ. ಅರವಿಂದ ಮಾಲಗತ್ತಿ ಅವರಿಗೆ ಋಣಿಯಾಗಿದ್ದೇನೆ.

ಮುದ್ರಣ ಕ್ಷೇತ್ರದಲ್ಲಿ ಲಕ್ಷ್ಮೀ ಮುದ್ರಣಾಲಯ, ಬೆಂಗಳೂರು ಅವರು ಪ್ರಸಿದ್ಧರು. ಮುದ್ರಣದ ಅಚ್ಚುಕಟ್ಟಿಗೆ ಹೆಸರಾದವರು. ಪ್ರಸ್ತುತ ಸಂಪುಟವನ್ನು ಅತ್ಯಂತ ಸುಂದರವಾಗಿ ಹೊರತಂದಿದ್ದಾರೆ. ಅವರಿಗೆ ವಂದನೆಗಳು.

ವೈಶಿಷ್ಟ್ಯಪೂರ್ಣವಾದ ಆಚಣ್ಣ-ಅಗ್ಗಳ ಸಂಪುಟವನ್ನು ಸಹೃದಯರು ಸ್ವೀಕರಿಸುವರೆಂದು ನಂಬಿದ್ದೇನೆ.  

ಜಿ.ಜಿ. ಮಂಜುನಾಥನ್
ಮೈಸೂರು
೫-೫-೨೦೦೭