ಆತ್ಮೋನ್ನತಿಗೆ ದಾರಿ ಮಾಡಿಕೊಡುವ ತಪಸ್ಸು, ಧ್ಯಾನ, ಮುನಿ ಆಚಾರಗಳ ಪಾಲನೆಯ ಜೊತೆ ಜೊತೆಗೆ ಜೈನ ಸಾಂಘಿಕ ವ್ಯವಸ್ಥೆಯಲ್ಲಿ ಮತಪ್ರಚಾರವೂ ಆಚಾರ್ಯರ ಪ್ರಥಮ ಕರ್ತವ್ಯವಾಗಿದ್ದಿತು. ವ್ಯಕ್ತಿ ನಿಷ್ಟೆಯೊಂದಿಗೆ (ಆತ್ಮ ಶೋಧನೆ) ಮತನಿಷ್ಟ ಪ್ರಚಾರಕ್ಕೂ ಅವರು ಬದ್ಧರಾಗಿರಬೇಕಾಗಿತ್ತು. ಈ ಮತಪ್ರಚಾರ ವ್ಯವಸ್ಥಿತವಾದ ಸಂಘಟನೆ, ವಾದಮಂಡನೆ, ಧರ್ಮಗೋಷ್ಠಿಗಳ ರೂಪದಲ್ಲಿ ನಡೆಯುತ್ತಿತ್ತು. ಮತಪ್ರಚಾರದ ಉದ್ದೇಶದಿಂದ ದೇಶದ ತುಂಬೆಲ್ಲಾ ಓಡಾಡುತ್ತಾ ಸ್ಯಾದ್ವಾದ ತತ್ತ್ವವನ್ನು ಪ್ರತಿಪಾದಿಸಿ ಜಿನಪತಾಕೆಯನ್ನು ಹಾರಿಸಿದ ಅನೇಕ ಆಚಾರ್ಯರು ಕರ್ನಾಟP ದವರಾಗಿದ್ದಾರೆ. ಅವರು ಸ್ವಮತ ಸ್ಥಾಪನೆಗಾಗಿ ಪರಮತ ಖಂಡನೆಯ ಮೂಲಕ ಧರ್ಮಪ್ರಚಾರಕ್ಕೆ ಇಳಿದರೆಂಬುದಕ್ಕೆ ಕರ್ನಾಟಕದ ಅನೇಕ ಶಾಸನಗಳು, ಕಾವ್ಯಗಳು ಸಾಕ್ಷಿಗಳಾಗಿವೆ. 

ರಾಷ್ಟ್ರ ಮಟ್ಟದಲ್ಲಿ ಧಾರ್ಮಿಕ ಸಂಘರ್ಷಗಳು ತೀವ್ರಗೊಂಡು ಚಳುವಳಿ, ಸಂಘಟನೆಗಳ ರೂಪದಲ್ಲಿ ಜನರನ್ನು ಪ್ರಭಾವಿತಗೊಳಿಸುತ್ತಿದ್ದ ಕಾಲದಲ್ಲಿ ಜೈನಧರ್ಮದ ಅಸ್ತಿತ್ವಕ್ಕಾಗಿ, ಉಳಿವಿಗಾಗಿ ಸಮಂತಭದ್ರರು ನಡೆಸಿದ ಹೋರಾಟ ಅಸದೃಶ್ಯವಾದುದು. ಅನುಪಮವಾದುದು. ನಾಯಕರಲ್ಲಿ ಧಾರ್ಮಿಕ ನಿಲುವುಗಳು ಪರಾಕಾಷ್ಠೆಯನ್ನು ಮುಟ್ಟಿ ಪರವಿರೋಧಿ ನೆಲೆಗಳಲ್ಲಿ ಪರ್ಯಾವಸಾನಗೊಂಡು ಸಂಘರ್ಷಕ್ಕೆಡೆಗೊಟ್ಟ ಸಂದರ್ಭದಲ್ಲಿ ಸ್ಯಾದ್ವಾದ, ಅನೇಕಾಂತವಾದದಲ್ಲಿನ ಸಮನ್ವಯತೆಯನ್ನು, ಅಗತ್ಯವನ್ನು ಮನದಟ್ಟು ಮಾಡಿದವರು ಸ್ವಾಮಿ ಸಮಂತಭದ್ರರು. ಸಮಂತಭದ್ರರ ಕಾಲ ಧಾರ್ಮಿಕ ಸಂಘರ್ಷಗಳು ತೀವ್ರ ಪರಾಕಾಷ್ಠೆಯನ್ನು ಮುಟ್ಟಿದ ಕಾಲ. ತನ್ನ ಧರ್ಮದಲ್ಲಿಯೇ ಇದ್ದ ಶ್ವೇತಾಂಬರ, ದಿಗಂಬರ ಪಂಥಗಳ ಒಳಭೇದಗಳು, ಭಿನ್ನತೆಗಳು ಅವುಗಳ ಸೆಣಸಾಟ ಒಂದು ರೀತಿಯಾಗಿದ್ದರೆ ರಾಷ್ಟ್ರ ಮಟ್ಟದಲ್ಲಿ ವೈದಿಕತ್ವದ ಸವಾಲುಗಳು ಇನ್ನೊಂದು ರೀತಿಯವು. ಇವುಗಳ ಜೊತೆಗೆ ಶ್ರಮಣ ಪರಂಪರೆಯಿಂದಲೇ ಟಿಸಿಲೊಡೆದು ತಾತ್ವಿಕವಾಗಿ ಭಿನ್ನ ವಾಗುತ್ತಾ ನಡೆದ ಸೋದರ ಸಂಬಂಧಿ ಧರ್ಮಗಳಾದ ಬೌದ್ಧ, ಅಜೀವಕ ಮುಂತಾದವುಗಳ ಪ್ರಚಾರ…. ಶ್ರಮಣ ಮತ್ತು ವೈದಿಕ ಪರಂಪರೆಗಳ ಸಂಘರ್ಷ, ಅಶ್ವಘೋಷ, ಮಾತೃಚೇಟ, ನಾಗಾರ್ಜುನ, ಕಣಾದ, ಗೌತಮ, ಜೈಮಿನಿ ಮುಂತಾದ ಮಹಾಪ್ರತಿದ್ವಂದಿ ದಾರ್ಶನಿಕರ ವಿಚಾರ ಲಹರಿಯ ಅಬ್ಬರ- ಖಂಡನ ಮಂಡನಗಳು, ಶಾಸ್ತ್ರಾರ್ಥದ ವಾದ ವಿವಾದಗಳು ಸಮಂಭದ್ರರ ಕಾಲಕ್ಕೆ ಎದ್ದು ಕಾಣುವಂತಹವು. ಈ ಎಲ್ಲವುಗಳೊಂದಿಗೆ ಸಮಂತಭದ್ರರು ನಿರಂತರ ಸೆಣಸುತ್ತಲೇ ಮುಂದೆ ಸಾಗಬೇಕಾಯಿತು. ಅವರ ಬದುಕು ಬರಹದ ವಿವರಗಳು ಉದ್ದಕ್ಕೂ ಇದನ್ನೇ ಸಾರಿ ಹೇಳುತ್ತವೆ. ಸದ್ವಾದ-ಅಸದ್ವಾದ, ಶಾಶ್ವತವಾದ-ವಿಚ್ಛೇದವಾದ, ಅದ್ವೈತವಾದ-ದ್ವೈತವಾದ, ಅವಕ್ತವ್ಯವಾದ-ವ್ಯಕ್ತವ್ಯವಾದಗಳ ತಾತ್ವಿಕ ಜಿಜ್ಞಾಸೆಗಳು, ಚರ್ಚೆಗಳು ಮತಾಂತರದ ಒತ್ತಾಯಗಳು ಸಮಂತಭದ್ರರ ಪರಿಸರವನ್ನು ರೂಪಿಸಿದ್ದವು. ಏಕಾಂತ ವಾದವನ್ನು ಪ್ರತಿನಿಧಿಸುವ ಮೇಲಿನ ಈ ತತ್ತ್ವಗಳು ಪರಿಪೂರ್ಣವಲ್ಲವೆಂದು ಸಾರಿದ ಸಮಂತಭದ್ರರು

ಸ್ಯಾದ್ವಾದಃ ಸರ್ವಥೈಕಾನ್ತಾತ್ಯಾಗಾತ್ ಕಿಂವೃತ್ತ ಚಿದ್ವಿಧಿಃ |
ಸಪ್ತಭಂಗಿನಯಾ ಪೇಕ್ಷೋ ಹೇಯಾದೇಯ ವಿಶೇಷಕಃ ||

ಸ್ಯಾದ್ವಾದ ತತ್ತ್ವವು ಅನೇಕಾಂತ ರೂಪವಾಗಿದೆಯೆಂದು ಸಾರಿದರು. ಈ ಅನೇಕಾಂತ ತತ್ತ್ವ, ಇದರ ದರ್ಶಕನು ಯಾರೇ ಆಗಿರಲಿ ಸುದೃಷ್ಟಿಯಾಗಲು ಸಾಧ್ಯವೆಂದು ಸಾರಿದರು.

ಇಂತಹ ಧಾರ್ಮಿಕ ಪರಿಸರದಲ್ಲಿ ಕುಂದಕುಂದ, ಉಮಾಸ್ವಾತಿ ಮೊದಲಾದ ಆಚಾರ್ಯರು ಸೈದ್ಧಾಂತಿಕ ಅಸ್ತಿತ್ವಕ್ಕಾಗಿ ಶ್ವೇತಾಂಬರರನ್ನು, ಧಾರ್ಮಿಕ ಅಸ್ತಿತ್ವಕ್ಕಾಗಿ ಇತರ ಸಮಯಿಗಳನ್ನು ವಾದದಲ್ಲಿ ಗೆಲಿದಂತೆ  ಹೇಳಲಾಗುತ್ತದೆಯಾದರೂ ಧರ್ಮಪ್ರಚಾರದಲ್ಲಿ ದೊಡ್ಡ ಹೆಸರು ಸಮಂತಭದ್ರರದು. ಸ್ಯಾದ್ವಾದ ಸ್ಥಾಪನೆಗೆ ಭದ್ರ ಬುನಾದಿಯನ್ನು ಹಾಕಿದ ಸಮಂತಭದ್ರರು ಧರ್ಮ ಪ್ರಚಾರಕ್ಕಾಗಿ ದೇಶದ ಉದ್ದಗಲಕ್ಕೂ ಪಾದಾಚಾರಿಗಳಾಗಿ ಓಡಾಡಿದ್ದಾರೆ. ಸಂದರ್ಭ ಒದಗಿದಾಗ ಪರಿಸ್ಥಿತಿಗೆ ಅನುಸರಿಸಿ ಭಿನ್ನಮತೀಯ ಸಾಧುಗಳ ವೇಷವನ್ನು ಸಹ ಧರಿಸಿ ಭಾರತದಲ್ಲಿ ಸಂಚರಿಸಿದರು.

ಕಾಂಚ್ಯಾಂ ನಗ್ನಾಟ ಕೋಹಂ ಮಲಮಲಿನತನುರ್ಲಾಂಬುಶೇ ಪಾಂಡುಪಿಂಡಃ
ಪುಂಡ್ರೋಡ್ರೆ ಶಾಕ್ಯ ಭಿಕ್ಷುಃ ದಶಪುರ ನಗರೆ ಮಿಷ್ಟ ಭೋಜೀ ಪರಿವ್ರಾಟ್
ವಾರಾಣಸ್ಯಾಮ ಭೂವಂ ಶಶಿಧರ ಧವಲಃ ಪಾಂಡು ರಂಗ ಸ್ತಪಸ್ವೀ
ರಾಜನ್ ಯಸ್ಯಾಸ್ತಿ ಶಕ್ತಿಃ ವದುತು ಪುರತೋ ಜೈನ ನಿರ್ಗ್ರಂಥವಾದೀ||

[1]

“ಕಾಂಚಿ ನಗರದಲ್ಲಿ ನಗ್ನ ಸಾಧುವಾಗಿ ಲಜ್ಜೆಯನ್ನು ತ್ಯಜಿಸಿ ಸಂಚರಿಸುತ್ತಾ ವಿದ್ಯಾಕೇಂದ್ರವಾಗಿದ್ದ ಅಲ್ಲಿ ಪ್ರತಿ ವಿದ್ವಾಂಸನ ಮನೆಮನೆಗೂ ತಿರುಗಿ ಅವರ ಮನ ಪರಿವರ್ತನೆ ಮಾಡಿದ ನಾನು, ಲಾಮ್ಬುಶದಲ್ಲಿ ತಿರುಗುವಾಗ ಸ್ನಾನ ಪಾನಾದಿಗಳಿಗೂ ಅವಕಾಶವಿಲ್ಲದೆ ದೇಹದ ಮಲಗಳನ್ನು ದೂರೀಕರಿಸಲು ಅವಕಾಶವಿಲ್ಲದಿದ್ದಾಗಲೂ ಪಾಣ್ಡುವರ್ಣದ ಪಿಣ್ಡದಂತಹ ಭಿಕ್ಷಾನ್ನವನ್ನು ತಿಂದುಕೊಂಡು ಆ ಜನರ ಮಧ್ಯದಲ್ಲಿ ಜೈನ ತತ್ತ್ವಾರ್ಥದ ಅರಿವನ್ನುಂಟು ಮಾಡಿ, ಬೌದ್ಧ ಭಿಕ್ಷುಗಳಂತೆ ಓಢ್ರ ದೇಶದಲ್ಲಿ ಸಂಚರಿಸಿ ಶಾಖಾಹಾರದಿಂದಲೇ ತೃಪ್ತನಾಗಿ(?) ಬೌದ್ಧ ಮತದ ಅಸ್ವಾರಸ್ಯವನ್ನು ಆಚರಣೆಯಲ್ಲಿ ತೋರಿ ಮುನ್ನಡೆದು ದಶಪುರ ನಗರದಲ್ಲಿ ಮೃಷ್ಟಾನ್ನವನ್ನುಂಡು ಪರಿವ್ರಾಜಕನಂತೆ ಗ್ರಾಮೈಕರಾತ್ರನಾಗಿ ತಿರುಗಿ ಜೈನ ತತ್ತ್ವಾರ್ಥದ ಹಿರಿಮೆಯನ್ನು ಬೆಳಗಿ ವಾರಣಾಸಿಯಲ್ಲಿ ಶಶಿಧರ(ಈಶ್ವರ)ನಂತೆ ಪಾಂಡುರಂಗನಾಗಿ? ಆ ಶೈವ ಮತದ ಆಚಾರ ವಿಚಾರಗಳಲ್ಲಿ ಅವರಂತೆ ನಡೆದು ಅದರ ಅಸ್ವಾರಸ್ಯವನ್ನು ಸಂದರ್ಭಕ್ಕೆ ತಕ್ಕಂತೆ ಹೊರಗೆಡಹಿ ಜೈನ ಧರ್ಮದ ಮರ್ಮವನ್ನು ಹಿರಿಮೆಯನ್ನು, ಉತ್ಕರ್ಷವನ್ನೂ ಉಪದೇಶಿಸಿ ಆ ವಿದ್ಯಾಕೇಂದ್ರದಲ್ಲಿ ನಾನೇ ನಾನಾಗಿ ನಿಂತು, ನಿರ್ಗ್ಗ್ರಂಥವಾದಿಯಾಗಿ ಎದುರಿಸಲು ಬರುವವರಿಗೆ ಸ್ವಾಗತವೀವ ನನ್ನ ಮುಂದೆ ನಿಲ್ಲಲು ಯಾವನಿಗೆ ತಾನೇ ಶಕ್ತಿಯಾಗಲೀ, ಎದೆಗಾರಿಕೆಯಾಗಲೀ ಉಂಟು? ಅವನಾರಾದರೂ ಇದ್ದರೆ ಎಲೈ ದೊರೆಯೇ! ಕರೆಸು…… ಇದನ್ನು ನೋಡಿದರೆ ಧರ್ಮ ಪ್ರಚಾರದ ಎಲ್ಲ ಸಾಧ್ಯತೆಗಳನ್ನು ಸಮಂತಭದ್ರರು ಪ್ರಯೋಗಾತ್ಮಕವಾಗಿ ಕಾಣ ಪ್ರಯತ್ನಿಸಿದರೆನಿಸುತ್ತದೆ. ಈ ಹಿನ್ನೆಲೆಯಲ್ಲಿ ದೇಶದ ನಾಲ್ಕು ಮೂಲೆಗಳ ಸಂಚಾರ, ಪರ ಸಮಯಿಗಳೊಂದಿಗಿನ ತಾತ್ತ್ವಿಕ ಸಂಘರ್ಷ ಅವರನ್ನು ಇನ್ನೂ ಹೆಚ್ಚು ದಿಟ್ಟರನ್ನಾಗಿಸಿದವು. ಅವರ ಧರ್ಮ ವೀರತ್ವ, ದಯಾ ವೀರತ್ವ, ವಾದ ಕೌಶಲ, ಪ್ರತಿಕಕ್ಷಿಯನ್ನು ವಾದಕ್ಕೆ ಆಹ್ವಾನಿಸುವ ರೀತಿಗಳು ಅವರ ಇಡೀ ವ್ಯಕ್ತಿತ್ವವನ್ನೇ ಪರಿಚಯಿಸುತ್ತವೆ.

ಹೀಗೆ ಪ್ರತಿದ್ವಂದಿ ಇಲ್ಲದ ಸಿಂಹದಂತೆ ಗರ್ಜಿಸುತ್ತಾ ನಿರ್ಭಿಡೆಯಿಂದ ವಾದಕ್ಕಾಗಿ ಸಮಂತಭದ್ರರು ಭಾರತದ ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ ಬಹುತರ ದೇಶದ ಅಷ್ಟ ದಿಕ್ಕುಗಳಿಗೂ ನಗ್ನ ಪಾದರಾಗಿ ಸಂಚರಿಸುತ್ತಾ ‘ಕರಹಾಟಕ ನಗರಕ್ಕೂ ಬಂದಿದ್ದಾರೆ. ಕರಹಾಟ ನಗರದಲ್ಲಿ ನಡೆದ ಧರ್ಮಗೋಷ್ಠಿಯನ್ನು ಕುರಿತಂತೆ ಶ್ರವಣ ಬೆಳ್ಗೊಳದ ಶಾಸನ ೬೭(೫೪)ವೊಂದು

ಪೂರ್ವಂ ಪಾಟಲಿಪುತ್ರ ಮಧ್ಯನಗರೇ ಭೇರೀ ಮಯಾ ತಾಡಿತಾ
ಪಶ್ಚಾನ್ಮಾಲವ ಸಿಂಧು ಠಕ್ಕ ವಿಷಯೇ ಕಾಂಚೀಪುರೇ ವೈದಿಶೇ
ಪ್ರಾಪೋಕ್ತ ಕರಹಾಟಕಂ ಬಹುಭಟಂ ವಿದ್ಯೋತ್ಕಟಂ ಸಂಕಟಂ
ವಾದಾರ್ಥಿ ವಿಚರಾಮ್ಯಹಂ ನರಪತೇ ಶಾರ್ದೂಲ ವಿಕ್ರೀಡಿತಂ||[2]

“ನಾನು ಸಕಲ ಕಲಾ ಕೇಂದ್ರವಾದ ಮತ್ತು ವಿದ್ಯಾ ನಿವಾಸ ಸ್ಥಾನವಾದ ಮಧ್ಯಪ್ರದೇಶ ಮತ್ತು ಪಾಟಲಿಪುತ್ರ ನಗರದಲ್ಲಿ ಸಂಚರಿಸಿ  ಜೈನಧರ್ಮದ ಹಿರಿಮೆಯನ್ನು ತತ್ತ್ವಾರ್ಥ ವನ್ನು ಹೊರಗೆಡಹಿ ವಾದಿಗಳೊಂದಿಗೆ ಹೋರಾಡಿ ವಿಜಯಭೇರಿಯನ್ನು ಮೊಳಗಿಸಿ ದೆನು. ನಂತರ ಮಾಲವ ದೇಶದಲ್ಲಿಯೂ ಹಾಗೂ ದಕ್ಷಿಣದ ಪರಮೋತ್ಕೃಷ್ಟ ಕೇಂದ್ರವಾದ ಕಾಂಚಿ ನಗರದಲ್ಲಿಯೂ ಮತ್ತೆ ವಾದಕ್ಕಾಗಿ ಪಶ್ಚಿಮ ಘಟ್ಟಗಳಲ್ಲಿಯೂ ಸಂಚರಿಸಿ ವಾದಿಗಳನ್ನು ಅಪ್ರತಿಹತವಾದ ವೈಖರಿಯಿಂದ ಜಯಿಸಿದೆನು. ನಂತರ ನಾನಾ ವಿದ್ಯಾವಿಶಾರದರಾದ ಮತ್ತು ವಿದ್ಯೆಯಿಂದ ಮದಿಸಿದ  ಮತ್ತೆ ಸ್ವಸಮಾನ ವಾದವೈಖರಿ ವಾಗ್ಜಲ, ಪ್ರತಿಭೆ, ನ್ಯಾಯವಿಮರ್ಶೆ ಮುಂತಾದವುಗಳಿಂದ ಎದುರಾಳಿಯ ಎದೆಯನ್ನು ನಡುಗಿಸುವ ಸಾಮರ್ಥ್ಯದಿಂದ ಕೂಡಿದ, ವಿದ್ವಾಂಸರಿಂದ ತುಂಬಿದ ಕರಹಾಟ ದೇಶವನ್ನು ಹೊಕ್ಕು ವಿಜಯ ಪತಾಕೆಯನ್ನು ಹಾರಿಸಿದೆನು. ಇಷ್ಟಾಗಿಯೂ ವಾದಾರ್ಥಿಯನ್ನು ಬಯಸಿ   ‘ವಿಚರಾಮ್ಯಹಂ ನರಪತೇ! ಶಾರ್ದೂಲ ವಿಕ್ರೀಡಿತಂ ಎಂದು ಹೆಬ್ಬುಲಿಯಂತೆ ಎದುರಾಳಿಗಳಿಗಾಗಿ ಅರಸುತ್ತಾ ಎಲ್ಲೆಲ್ಲೂ ಸಂಚರಿಸುತ್ತಿರುವೆನು ಎಂದು ಕಲಾತ್ಮಕವಾಗಿ ಘೋಷಿಸಿದ್ದಾರೆ.[3] ಅವರು ಕರಹಾಟಕ್ಕೆ ಬರುವ ಪೂರ್ವದಲ್ಲಿಯೇ ಪಾಟಲಿಪುತ್ರ, ಮಾಳವ, ಸಿಂಧು, ಪಂಜಾಬ(ಠಕ್ಕ), ಕಾಂಚಿಪುರ, ವೈದಿಶ(ಭಿಲಸಾ) ಮುಂತಾದ ದೇಶಗಳಲ್ಲೆಲ್ಲಾ ಸಂಚರಿಸಿ ಬಂದಿದ್ದಾರೆ. ಅಲ್ಲೆಲ್ಲಾ ಅವರು ನಗಾರಿಯನ್ನು ಬಾರಿಸಿ ಪ್ರತಿಸ್ಪರ್ಧಿಗಳನ್ನು ವಾದಕ್ಕಾಗಿ ಆಹ್ವಾನಿಸಿದ್ದಾರೆ. ಬಹುಶಃ ಅಲ್ಲಿ ಅವರನ್ನು ಯಾರು ಎದುರಿಸಿ ಜಯಿಸಿದಂತೆ ಕಂಡು ಬರುವುದಿಲ್ಲ. ಈಗ ಕರಹಾಟದ ಜೈತ್ರ ಯಾತ್ರೆಯನ್ನು ಮುಗಿಸಿ ‘ಜಿನವಿಜಯಪತಾಕೆ ಯನ್ನು ಹಾರಿಸಿದ್ದಾರೆ. ಸಮಂತಭದ್ರರ ಈ ಯಶೋ ವಿಜಯವನ್ನು ಶ್ರವಣಬೆಳ್ಗೊಳದ ಕ್ರಿ.ಶ. ೧೦೫೦ರ ಮಲ್ಲಿಷೇಣ ಪ್ರಶಸ್ತಿಯಲ್ಲಿಯೂ ೫೪(೬೭) ಕಾಣಲಿಕ್ಕೆ ದೊರೆಯುತ್ತದೆ.

ಆಚಾರ್ಯಃ ಸಮಂತಭದ್ರ ಗುಣಭೃದ್ಯೇನೇಹ ಕಾಲೇಕಲೌ
ಜೈನಂ ವರ್ತ್ಮ ಸಮಂತಭದ್ರಮಭವದ್ಭದ್ರಂ ಸಮಂತಾನ್ಮುಹಃ||

ಎಂದು ವರ್ಧಮಾನ ಪ್ರಣೀತ ಜಿನತೀರ್ಥವನ್ನು ಸಮಂತಭದ್ರರು ಪುನಃ ಪ್ರವರ್ಧನೆ ಗೊಳಿಸಿದ್ದನ್ನು ಈ ಶಾಸನ ತಿಳಿಸುತ್ತದೆ. ಅಕಲಂಕರು ತಮ್ಮ ‘ಅಷ್ಟಶತೀ ಯಲ್ಲಿಯೂ ಇದೇ ಮಾತನ್ನು ತೀರ್ಥ ಪ್ರಭಾವಿ ಕಾಲೇಕಲೌ ಎಂದು ಗೌರವದಿಂದ ಸ್ಮರಿಸಿದ್ದಾರೆ. ವಾದಿರಾಜ ಸೂರಿ ತನ್ನ ಯಶೋಧರ ಚರಿತೆಯಲ್ಲಿ “ಸಮಂತಭದ್ರರ ವಚನ ರೂಪಿ ವಜ್ರಾಯುಧದ ಪೆಟ್ಟಿನಿಂದ ಪ್ರತಿ ಪಕ್ಷಗಳ ಸಿದ್ಧಾಂತ ಪರ್ವತಗಳು ತುಂಡು ತುಂಡಾದವು[4] ಎನ್ನುತ್ತಾನೆ. ಬ್ರಹ್ಮ ಅಜಿತನು ‘ಹನುಮಚ್ಚರಿತ ದಲ್ಲಿ ಸಮಂತಭದ್ರರ ಸ್ಯಾದ್ವಾದ ದುರ್ವಾದಿಗಳ ವಾದವೆಂಬ ಚರ್ಮರೋಗ, ಹುರುಕು ಖಜ್ಜಿ ಮುಂತಾದ ತಿನಿಸನ್ನು ಶಮನಗೊಳಿಸುತ್ತದೆ[5] ಎಂದು, ಅಜಿತಸೇನಾಚಾರ್ಯರು ತಮ್ಮ ‘ಅಲಂಕಾರ ಚಿಂತಾಮಣಿ ಯಲ್ಲಿ ಸಮಂತಭದ್ರರ ಕಾಲದಲ್ಲಿ ಕುವಾದೀ ಜನರು ಬಹುತರ ತಮ್ಮ ಸ್ತ್ರೀಯರ ಎದುರಿಗೇನೇ ಕಠೋರ ಮಾತುಗಳನ್ನಾಡುತ್ತಿದ್ದರು. ತಮ್ಮ ಗರ್ವದ ಮಾತು ಗಳನ್ನು ಪರಾಕ್ರಮದ ಸುದ್ದಿಗಳನ್ನು ಹೆಂಡತಿಯರ ಮುಂದಷ್ಟೇ ವಿವರಿಸುತ್ತಿದ್ದರು. ಅಂಥವರು ಯಾವಾಗ ಸಮಂತ್ರಭದ್ರರ ಯೋಗಿಗಳೆದುರಿಗೆ ಬರುತ್ತಿದ್ದರೋ ಆಗ ಅವರು ಮಧುರ ನುಡಿಗಳನ್ನಾಡುವಂತವರಾಗುತ್ತಿದ್ದರು. ನೀವೇ ನಮ್ಮ ರಕ್ಷಕ ರೆನ್ನುತ್ತಿದ್ದರು.[6] ಎಂದು, ಇನ್ನೊಂದೆಡೆ ‘ಯಾವಾಗ ಮಹಾವಾದಿಯಾದ ಸಮಂತಭದ್ರನು (ಸಭಾಸ್ಥಾನ ಮೊದಲಾದಡೆ)ಬರುತ್ತಿದ್ದನೋ ಆಗ ಕುವಾದೀ ಜನರು ತಲೆಕೆಳಗೆ ಹಾಕಿ ತಮ್ಮ ಪಾದದ ಹೆಬ್ಬೆರಳಿನಿಂದ ನೆಲವನ್ನು ಬರೆಯುತ್ತಿದ್ದರು[7] ಎಂದು, ಹೀಗೆ ಸಮಂತ ಭದ್ರರ ಸಾಹಸ ಚೈತ್ರಯಾತ್ರೆಯ ಇಂತಹ ಅನೇಕ ಉದಾಹರಣೆಗಳು ಶಾಸನಗಳಲ್ಲಿಯೂ, ಕಾವ್ಯಗಳಲ್ಲಿಯೂ ದೊರೆಯುತ್ತವೆ.[8]

ಮೇಲಿನ ಉಲ್ಲೇಖಗಳಿಂದ ಸಮಂತಭದ್ರರ ಅಪಾರ ಪಾಂಡಿತ್ಯ, ವಾಗ್ಮಿತ್ವ ಜೈನಧರ್ಮ ಪ್ರಚಾರಕ್ಕಾಗಿ ಅವರು ಪಟ್ಟ ಶ್ರಮ ವಿಹಿತವಾಗದೆ ಇರದು. ಜೈನ ಸಿದ್ಧಾಂತ ಪ್ರಚಾರಕ್ಕಾಗಿ ಭಾರತದೆಲ್ಲೆಡೆ ಸಂಚರಿಸುತ್ತಾ ಎಲ್ಲಿಯೂ ನಿಲ್ಲದೆ ನಿತ್ಯ ಪ್ರವರ್ತನೆಗೆ ತೊಡಗಿದ ಇವರು ಇಡೀ ಭಾರತವನ್ನೇ ತಮ್ಮ ಕ್ರೀಡಾ ಭೂಮಿಯನ್ನಾಗಿ ಮಾಡಿಕೊಂಡರು. ಸಮಂತಭದ್ರರ ಈ ವಾದ ಧೋರಣೆ ದೇಶ ಪರ್ಯಟನೆಯನ್ನು ಕುರಿತು ಎಮ್.ಎಸ್.ರಾಮಸ್ವಾಮಿ ಅಯ್ಯಂಗಾರರು “ಸಮಂತಭದ್ರರು ಬಹುದೊಡ್ಡ ಜೈನ ಧರ್ಮದ ಪ್ರಚಾರಕರೆಂಬುದು ಸ್ಪಷ್ಟವೇ ಇದೆ. ಅವರು ಜೈನ ಸಿದ್ಧಾಂತ ಮತ್ತು ಆಚಾರಗಳನ್ನು ದೂರ ದೂರದವರೆಗೆ ವಿಸ್ತರಿಸುವ ಉದ್ಯೋಗ ಮಾಡಿದರು. ಇವರು ಹೋದಲ್ಲೆಲ್ಲ ಅನ್ಯ ಸಂಪ್ರದಾಯದವರೊಡನೆ ವಿರೋಧದ ಹೋರಾಟವನ್ನು ಮಾಡ ಬೇಕಾಯಿತು.[9] ಆದರೆ ಇವರ ವಾಗ್ಧಾಟಿಗೆ ತಾಳಿಕೊಂಡವರು ತೀರಾ ಕಡಿಮೆಯೆಂದೆ ಎನ್ನಬೇಕು. ಇತರ ಸಂಪ್ರದಾಯಿಕ ವಿರೋಧಗಳನ್ನು ಶಾಂತಗೊಳಿಸುವಷ್ಟು ವರ್ಚ್ಚಸ್ವಿ ವ್ಯಕ್ತಿತ್ವವನ್ನು ಇವರು ಪಡೆದವರಾಗಿದ್ದರು.

ಈ ಎಲ್ಲ ವಿವರಗಳನ್ನು ಗಮನಿಸಿದಲ್ಲಿ ಸಮಂತಭದ್ರರ ವ್ಯಕ್ತಿತ್ವ ಅತಿ ವಿಲಕ್ಷಣ ವಾದುದು. ಅಷ್ಟೇ ವೈದೃಶ್ಯಗಳಿಂದ ಕೂಡಿದುದು. ಅವರ ಜೀವಿತದ ಘಟನೆಗಳಾದ ಭಸ್ಮಕ ರೋಗ, ಕಂಚಿಗೆ ಪ್ರಯಾಣ, ವ್ರತ ಭ್ರಷ್ಟತೆ, ಪುನರ್ ದೀಕ್ಷೆ, ಧರ್ಮ ಪ್ರಭಾವನೆಗಾಗಿ ಅನ್ಯ ಮತೀಯ ಸಾಧುಗಳ ವೇಷ………. ಪರಧರ್ಮೀಯರೊಡನೆ ಸೆಣಸಾಟ……., ಸ್ಯಾದ್ವಾದದ ಪ್ರತಿಷ್ಠಾಪನೆ……… ಈ ಎಲ್ಲವೂ ಪ್ರಯೋಗಾತ್ಮಕ ನಿಲುವುಗಳೆ. ಲೌಕಿಕ-ಪರಲೌಕಿಕ ನಿಲುವುಗಳೆರಡನ್ನೂ ಇವು ಪ್ರಕಟಪಡಿಸುತ್ತವೆ. ಏಕೆಂದರೆ ಬಹಳಷ್ಟು ಸಂದರ್ಭಗಳಲ್ಲಿ ಅವು ಜೈನ ಆಚಾರ್ಯ ಸಂಪ್ರದಾಯಗಳನ್ನು ಮೀರಿ ನಿಲ್ಲುತ್ತವೆ. ಜೈನ ಆಚಾರ್ಯ ಪರಂಪರೆಯ ಮಡಿವಂತಿಕೆಯನ್ನೂ ಮೀರಿ ನಿಲ್ಲುತ್ತವೆ. ಆ ಮೂಲಕ ಮಾನವೀಯತೆಯನ್ನು ಪ್ರಕಟಿಸುತ್ತವೆ ಮತ್ತು ಜನಮುಖಿಯಾಗುತ್ತವೆ. ಹೀಗಾಗಿ ಇತರ ಜೈನ ಆಚಾರ್ಯರಿಗಿಂತ ಸಾಂಘಿಕ ಬದುಕಿನಲ್ಲಿ ಮತ್ತು ಬರವಣಿಗೆಯಲ್ಲಿ ಸಮಂತಭದ್ರರು ಇಂದಿಗೂ ಹೆಚ್ಚು ಪ್ರಸ್ತುತರೆನಿಸುತ್ತಾರೆ.

ಜೈನ ಆಗಮ ರೂಪಿ ತತ್ತ್ವಜ್ಞಾನದ ದೃಷ್ಠಿಯನ್ನು ಸ್ಯಾದ್ವಾದ, ಅನೇಕಾಂತವಾದ, ನಯವಾದ ಎಂದು ಕರೆಯಲಾಗುತ್ತದೆ. ಜೈನ ನ್ಯಾಯದ ಈ ಸಿದ್ಧಾಂತವನ್ನು ಬಲವಾಗಿ ಪ್ರತಿಪಾದಿಸಿದ, ಪ್ರತಿಷ್ಠಾಪಿಸಿದ ಕೀರ್ತಿ ಸಮಂತಭದ್ರರದು. ವಸ್ತು ತತ್ತ್ವದಲ್ಲಿ ಅನೇಕ ಧರ್ಮಗಳಿವೆ. ಪ್ರತಿಯೊಂದನ್ನೂ ಅಪೇಕ್ಷಾ ದೃಷ್ಟಿಯಿಂದ ವಿಶ್ಲೇಷಿಸಿ ವಿಮರ್ಶಿಸಿರಿ. ವಸ್ತು ತತ್ತ್ವದ ಒಂದೇ ಅಂಗವನ್ನು ಸ್ವೀಕರಿಸಿದರೆ ವಸ್ತುವನ್ನು ವಿಮರ್ಶಿಸಿದಂತಾ ಗುವುದಿಲ್ಲ. ಆದ್ದರಿಂದ ಅದನ್ನು ಭಿನ್ನಕೋನಗಳಿಂದ ವಿಮರ್ಶಿಸಬೇಕು. ಅಂದಾಗ ಮಾತ್ರ ಯಥಾರ್ಥ ಜ್ಞಾನವು ಉಂಟಾಗುತ್ತದೆ. ಕಾರಣ; ಪ್ರತ್ಯೇಕ ವಸ್ತವಿನಲ್ಲಿ ಅನೇಕ ಧರ್ಮಗಳು ಅಥವಾ ಅನೇಕ ಅಂಗಗಳಿವೆ. ಅದರಿಂದ ವಸ್ತುವು ಒಂದಾದರೂ ಅನೇಕಾತ್ಮಕವಾಗಿದೆ. ಪರಮತದಲ್ಲಿ ಯಾವುದೋ ಒಂದು ಧರ್ಮವು ಅಂಗವಾಗಿದ್ದು ಸರ್ವಥಾ ಅದೇ ರೂಪದಿಂದ ಮಾತ್ರ ವಸ್ತು ತತ್ತ್ವವನ್ನು ಪ್ರತಿಪಾದಿಸುತ್ತಾರೆ. ಆದರೆ ಅದು ಏಕಾಂತವಾಗಿದೆ. ಈ ಏಕಾಂತವಾದವು ಮಿಥ್ಯೆಯಾಗಿದೆ; ಆಗ್ರಹಣಿಯವಾಗಿದೆ. ತತ್ತ್ವಜ್ಞಾನಕ್ಕೆ ವಿರೋಧವಾಗಿದೆ; ಅಧರ್ಮವಾಗಿದೆ; ಅನ್ಯಾಯವಾಗಿದೆ. ಈ ಅಂಶವನ್ನು ಸ್ಯಾದ್ವಾದವು ನಿಷೇಧಿಸುತ್ತಾ- ಸರ್ವಥಾ ಸತ್-ಅಸತ್, ಏಕ-ಅನೇಕ, ನಿತ್ಯ-ಅನಿತ್ಯ ಎಂಬ ಸಂಪೂರ್ಣ ಏಕಾಂತಕ್ಕೆ ವಿಪಕ್ಷವಾದ ಅನೇಕಾಂತ ತತ್ತ್ವವು ಸಾಧಿಸುತ್ತದೆ[10] ಎಂದ ಸಮಂತಭದ್ರರು ವಸ್ತು ಸ್ಥಿತಿಯ ಪರ್ಯಾಯ ಗುಣವನ್ನು ಮತ್ತು ಅದರ ಗ್ರಹಿಕೆಯನ್ನು ಜಗತ್ತಿಗೆ ಸಾರಿದರು. ಇದನ್ನೇ ಸರ್ವಥಾ ಸದಸದೇಕಾನೇಕ-ನಿತ್ಯನಿತ್ಯಾದಿ-ಸಕಲೈಕಾನ್ತಪ್ರತ್ಯನೀಕಾನೇಕಾನ್ತ ತತ್ತ್ವವಿಷಯಃ ಸ್ಯಾದ್ವಾದ- ಎಂದು ಅಂದಿನ ಭಾರತೀಯ ದರ್ಶನಗಳಲ್ಲಿದ್ದ ಏಕಾಂತ ತತ್ತ್ವದೊಳಗಿನ ದೋಷವನ್ನು ಎತ್ತಿತೋರಿ ಅನೇಕಾಂತ ವಾದವನ್ನು ಪ್ರತಿಷ್ಠಾಪಿಸಿದರು. ಇದರಿಂದ ಅಂದಿನ ಭಾರತೀಯ ದರ್ಶನಗಳಲ್ಲಿದ್ದ ದ್ವೇಷವನ್ನು ಕಡಿಮೆ ಮಾಡಿ ಸಮನ್ವಯವನ್ನು ಸಾಧಿಸಲು ಸಾಧ್ಯವಾಯಿತು.

ವಿದ್ಯಾನಂದರ(ಕ್ರಿ.ಶ.೯೦೦-೯೫೦)ಅಷ್ಟ್ರಸಹಸ್ರಿಯ ಶ್ಲೋಕವೊಂದು ಹೇಳಿದಂತೆ

ನಿತ್ಯಾದ್ಯೇಕಾನ್ತಗರ್ತಪ್ರಪತನವಿವಶಾನ್ಪ್ರಾಣಿನೋನರ್ಥ ಸಾರ್ಥಾತ್
ಉದ್ಧರ್ತುಂ ನೇತುಮಚ್ಚೈಃ ಪದಮಮಲಮಲಂ ಮಂಗಳಾನಾಮಲಂಙ್ಛ್ಯಂ|
ಸ್ಯಾದ್ವಾದ ನ್ಯಾಯವರ್ತ್ಮ ಪ್ರಥಯದವಿತಥಾರ್ಥಂ ವಚಃ ಸ್ವಾಮಿ ವಿನೋದಃ
ಪ್ರೇಕ್ಷಾವತ್ಯಾತ್ಪ್ರವೃತ್ತಂ ಜಯತು ವಿಘಟಿತಾಶೇಷ ಮಿಥ್ಯಾ ಪ್ರವಾದಮ್||[11]

ಹೀಗೆ ಮಿಥ್ಯಾತತ್ತ್ವವನ್ನು ದೂರೀಕಿಸುವುದರ ಮೂಲಕ ಸ್ಯಾದ್ವಾದ ತತ್ತ್ವವನ್ನು ಬೆಳಗಿದರು.

ಅವರ ಈ ನ್ಯಾಯ ವಿವರಣ ಶೈಲಿಯನ್ನೇ ಮುಂದಿನ ಅಕಲಂಕ ಮುಂತಾದವರು ಅನುಸರಿಸಿದರು. ಸಪ್ತಭಂಗಿ ನ್ಯಾಯಕ್ಕೆ ಸ್ಪಷ್ಟ ಕಲ್ಪನೆಯನ್ನಿತ್ತ ಅವರು ಜೈನ ತಾತ್ತ್ವಿಕ ಪ್ರಚಾರಕ್ಕೆ ಅದನ್ನೇ ಸಾಧನವನ್ನಾಗಿಸಿಕೊಂಡರು. ಜೈನ ನ್ಯಾಯಶಾಸ್ತ್ರ ಇವರಿಂದ ವ್ಯವಸ್ಥಿತವಾಗಿ ಪ್ರತಿಷ್ಠಾಪಿಸಲ್ಪಟ್ಟಿತು. ನಂತರ ಬಂದ ಅಕಲಂಕ, ಸಿದ್ಧಸೇನ ದಿವಾಕರ ಮುಂತಾದ ನ್ಯಾಯ ಪ್ರವೀಣರಿಗೆ ಮಾದರಿಯೂ ಆಯಿತು.

ಸಮಂತಭದ್ರರು ಪ್ರತಿಪಾದಿಸುವ ಸರ್ವಹಿತಕಾರಿಯಾದ ಅನೇಕಾಂತವಾದದಲ್ಲಿ ಸರ್ವೋದಯ ದೃಷ್ಟಿಯಿದೆ. ತಮ್ಮ ಯುಕ್ತನುಶಾಸನದಲ್ಲಿ ಹೇಳಿದಂತೆ

ಸರ್ವಾನ್ತವತ್ತದ್ಗುಣ ಮುಖ್ಯಕಲ್ಪಂ ಸರ್ವಾನ್ತ ಶೂನ್ಯಂ ಚ ಮಿಥೋನಪೇಕ್ಷಂ|

ಸರ್ವಾಪದಾಮನ್ತಕರಂ ನಿರನ್ತಂ ಸರ್ವೋದಯಂ ತೀರ್ಥಮಿದಂ ತವೈವ||೬೨||

ಇಂತಹ ಸರ್ವೋದಯ ತತ್ತ್ವದಿಂದಾಗಿ ಅವರು ವೈಚಾರಿಕ ಕ್ರಾಂತಿ ಪುರುಷ ರೆನಿಸುತ್ತಾರೆ. ಏಕೆಂದರೆ ಅವರ ಸರ್ವೋದಯ ತತ್ತ್ವ ಪ್ರಜಾಪ್ರಭುತ್ವವಾದಿ ನಿಲುವು ಗಳಿಂದ ಕೂಡಿರುವಂತಹದ್ದು. ಆಧುನಿಕ ಸಂದರ್ಭದಲ್ಲಿ ಗಾಂಧಿಜೀಯವರು ಪ್ರತಿ ಪಾದಿಸಿದ ಸರ್ವೋದಯದ ಪರಿಕಲ್ಪನೆ ಸಮಂತಭದ್ರರ ಸವೋದಯ ತತ್ತ್ವಕ್ಕೆ ತೀರಾ ನಿಕಟವರ್ತಿಯಾದುದು.

ಧರ್ಮದ ವಿಷಯಕ್ಕೆ ಬಂದರೆ ಜೈನಧರ್ಮದ ಪ್ರಚಾರದಲ್ಲಿ ಇತರ ಆಚಾರ್ಯ ರಿಗಿಂತಲೂ ಹೆಚ್ಚು ಆಸಕ್ತರೂ, ನಿಷ್ಠರೂ ಆಗಿದ್ದು ದೇಶದ ಉದ್ದಗಲಕ್ಕೂ ಸುತ್ತಾಡಿದ ಸಮಂತಭದ್ರರು ದೇಶದ ತುಂಬೆಲ್ಲಾ ಗಾಳಿಯಂತೆ ನುಗ್ಗುತ್ತಾ ಸಾಗುತ್ತಾರೆ. ಎಲ್ಲಿ ಇತರ ಧರ್ಮಗಳ ಪ್ರಾಬಲ್ಯವಿದೆಯೋ ಅಲ್ಲೆಲ್ಲಾ ಸಮಂತಭದ್ರರು ಕಾಣಿಸಿಕೊಂಡಿದ್ದಾರೆ. ಮತ್ತು ಹೋದಲೆಲ್ಲಾ ಪರವಾದಿಗಳನ್ನು ಜಯಿಸಿ ಜೈನಧರ್ಮದ ಮಹತಿಯನ್ನು ಸಾರಿದ್ದಾರೆ. ಇತರ ಆಚಾರ್ಯರ ಬರವಣಿಗೆಗಳಲ್ಲಿ ಈ ಅಂಶಗಳೆಲ್ಲವೂ ಸ್ಪಷ್ಟವಾಗಿ ಚಿತ್ರಿತವಾಗಿವೆ. ಹೀಗಾಗಿ ಜೈನ ಸಿದ್ಧಾಂತದಲ್ಲಿ, ಜೈನ ಸಾಹಿತ್ಯದಲ್ಲಿ, ಜೈನ ಸಾಂಘಿಕ ವಿಚಾರಗಳಲ್ಲಿ ಸಮಂತಭದ್ರರ ಹೆಸರು ಪದೆ ಪದೇ ಪ್ರತಿಧ್ವನಿಸುತ್ತದೆ.

ಸಮಂತಭದ್ರರ ಸಾಹಿತ್ಯ

ಭಾಷಾ ದೃಷ್ಟಿಯಿಂದ ಇದುವರೆಗೂ ಜೈನಾಚಾರ್ಯರಲ್ಲಿದ್ದ ಧೋರಣೆಯನ್ನು ಬದಲಿಸಿದವರು ಉಮಾಸ್ವಾತಿಗಳು ಮತ್ತು ಸಮಂತಭದ್ರರು. ಅದರಲ್ಲಿಯೂ ವಿಶೇಷತಃ ಸಮಂತಭದ್ರರ ಕೊಡುಗೆ ದೊಡ್ಡರು. ವೈದಿಕ ಸಂಸ್ಕೃತಿಯ ಪ್ರತಿನಿಧಿಯಂತಿದ್ದ ಸಂಸ್ಕೃತ-ಜನಪರ ದನಿಯಾಗಿದ್ದ ಪ್ರಾಕೃತ ಇವುಗಳಲ್ಲಿ ತೀರ್ಥಂಕರರು ಪ್ರಾಕೃತಕ್ಕೆ ಒಲಿದಂತೆಯೇ ಆರಂಭದಲ್ಲಿ ಆಚಾರ್ಯರೂ ಪ್ರಾಕೃತಕ್ಕೆ ಒಲಿದರು. ಹಾಗಾಗಿ ಕ್ರಿ.ಶ.ದ ಆದಿಯವರೆಗೂ ಕುಂದಕುಂದರಂತಹ ಆಚಾರ್ಯರು ಪ್ರಾಕೃತದಲ್ಲಿ ಬರೆದರು. ಆದರೆ ಸಮಂತಭದ್ರರ ಕಾಲಕ್ಕೆ ಧಾರ್ಮಿಕ ವಲಯದ ವಿದ್ಯಾಮಾನಗಳು, ಸಾಮಾಜಿಕ ಒತ್ತಡಗಳು ಅವರನ್ನು ಸಂಸ್ಕೃತದೆಡೆಗೆ ವಾಲುವಂತೆ ಮಾಡಿದವು. ಏಕೆಂದರೆ ಸಮಂತಭದ್ರರ ಕಾಲಕ್ಕೆ ಭಾರತದ ಎಲ್ಲ ದಾರ್ಶನಿಕರು ತಮ್ಮ ದರ್ಶನ, ಗಹನ, ರಹಸ್ಯ ಸಿದ್ಧಾಂತಗಳಿಗೆ ಸಂಸ್ಕೃತವನ್ನೇ ವಾಹಕವಾಗಿಸಿಕೊಂಡಿದ್ದರು. ಆದ್ದರಿಂದ ಈ ಭಾಷೆಯನ್ನು ಪುರಸ್ಕರಿಸದವರು ಅಖಿಲ ಭಾರತ ಮಟ್ಟದಲ್ಲಿ ಸ್ಪರ್ಧೆಗಿಳಿಯುವುದು ಕಷ್ಟವಿದ್ದು ತಮ್ಮ ಧಾರ್ಮಿಕ ಅಸ್ತಿತ್ವಕ್ಕಾಗಿ ಸಂಸ್ಕೃತವನ್ನು ಒಪ್ಪಿಕೊಳ್ಳಬೇಕಾಯಿತು. ಸಮಂತಭದ್ರರು ಈ ಪ್ರಯೋಗಗಳಲ್ಲಿ ಯಶಸ್ವಿ ಯಾದರೆಂಬುದು ಅವರ ಕೃತಿಗಳಿಂದ ಮನದಟ್ಟಾಗುತ್ತದೆ.

ಕಾವ್ಯ ನಿರ್ಮಾಣದ ದೃಷ್ಟಿಯಿಂದ ಸಂಸ್ಕೃತದ ಪ್ರಥಮ ಜೈನಕವಿ ಆಚಾರ್ಯ ಸಮಂತಭದ್ರರು. ಜೈನ ಸಂಸ್ಕೃತ ವಾಙ್ಮಯ ಉಮಾಸ್ವಾತಿಗಳ ತತ್ತ್ವಾಥಸೂತ್ರದಿಂದ ಆರಂಭಗೊಂಡರೆ, ಕಾವ್ಯಾತ್ಮಕ ನೆಲೆಯಲ್ಲಿ ಆ ಕೀರ್ತಿ ಸಮಂತಭದ್ರರಿಗೆ ಸಂದಿದೆ.

ಸಮಂತಭದ್ರರ ಸಂಸ್ಕೃತ ಸಾಹಿತ್ಯದೊಂದಿಗೆ ಕರ್ನಾಟಕದಲ್ಲಿ ಸಂಸ್ಕೃತ ಸಾಹಿತ್ಯ ಚರಿತ್ರೆಯಲ್ಲಿ ಹೊಸ ಮನ್ವಂತರವೆ ಪ್ರಾರಂಭವಾದದ್ದನ್ನು ಕಾಣುತ್ತೇವೆ. ಸಮಂತಭದ್ರರು ದರ್ಶನ, ತರ್ಕ, ವ್ಯಾಕರಣ, ಛಂದಸ್ಸು, ಅಲಂಕಾರ, ಕಾವ್ಯ ಮತ್ತು ಕೋಶಗಳಲ್ಲಿ ಮಹಾಪಂಡಿತರಿದ್ದರೆಂದು ಅವರ ಕೃತಿಗಳ ಅವಲೋಕನದಿಂದ ತಿಳಿದುಬರುತ್ತದೆ. ಭಗವಾನ್ ಜಿನಸೇನಾಚಾರ್ಯರು ತಮ್ಮ ಆದಿಪುರಾಣದಲ್ಲಿ ನಮಃ ಸಮಂತಭದ್ರಾಯ ಮಹತೇ ಕವಿ ವೇಧಸೇ (ಕವಿಗಳನ್ನು ಉತ್ಪತ್ತಿಮಾಡುವ ಬ್ರಹ್ಮ)[12] ಎಂದು ಗೌರವದಿಂದ ನಮಸ್ಕರಿಸುತ್ತಾರೆ.

ಸಮಂತಭದ್ರಾದಿ ಮಹಾಕವೀಶ್ವರೈಃ ಕೃತ ಪ್ರಬಂಧೋಜ್ವಲ ಸತ್ಸರೋವರೇ | ಲಸದ್ರ
ಸಾಲಂಕೃತಿ ನೀರ ಪಂಕಜೇ ಸರಸ್ವತೀ ಕ್ರೀಡತಿ ಭಾವ ಬಂಧುರೇ ||
(ಶೃಂಗಾರ ಚಂದ್ರಿಕಾ- ವಿಜಯವರ್ಣಿ)

ಸಮಂತಭದ್ರರ ಕಾವ್ಯಗಳಲ್ಲಿ ಸರಸ್ವತಿ ಕ್ರೀಡಿಸುತ್ತಾಳೆ ಎಂದು ವಿಜಯವರ್ಣಿ…… ಹೀಗೆ ಸಂಸ್ಕೃತದ ಅತಿ ಪ್ರಸಿದ್ಧ ಜೈನಾಚಾರ್ಯರು, ಕವಿಗಳು ಸಮಂತಭದ್ರರ ಕವಿತ್ವವನ್ನು, ಕವಿತಾ ಮಹತಿಯನ್ನು, ಪಾಂಡಿತ್ಯವನ್ನು ಶ್ಲಾಘಿಸುತ್ತಾ ಸ್ಮರಿಸಿಕೊಂಡಿದ್ದಾರೆ. ಭಗವತ್ ಜಿನಸೇನಾಚಾರ್ಯರು ತಮ್ಮ ಆದಿಪುರಾಣದಲ್ಲಿ ಹೇಳಿದಂತೆ

ಕವಿನಾಂ ಗಮಕಾನಾಂ ವಾದೀನಾಂ ವಾಗ್ಮಿ…….
ಯಶಃ ಸಾಮನ್ತಭದ್ರೀಯಂಭದ್ರೀಯಂ ಮೂರ್ಧ್ನಿ ಚೂಡಾಮಣೀ ಯತೇ|

ಸ್ವಾಮಿ ಸಮಂತಭದ್ರರು ತಮ್ಮ ಕವಿತ್ವ, ಗಮಕತ್ವ, ವಾದಿತ್ವ, ವಾಗ್ಮಿತ್ವಗಳಿಂದ ವಿಶೇಷ ಮನ್ನಣೆಗೆ ಪಾತ್ರರಾಗಿದ್ದರು. ಅವರ ಅಸಾಧಾರಣ ವ್ಯಕ್ತಿತ್ವ ಈ ನಾಲ್ಕು ಗುಣ ಗಳಿಂದಲೇ ಶೋಭಾಯಮಾನವಾಗಿತ್ತು.

ಸ್ವಾಮಿ ಸಮಂತಭದ್ರರ ಕೃತಿಗಳು

೧. ಆಪ್ತಮಿಮಾಂಸಾ. ೨.ಯುಕ್ತ್ಯನುಶಾಸನ (ವೀರಜಿನ ಸ್ತೋತ್ರ) ೩.ಸ್ವಯಂಭೂ ಸ್ತೋತ್ರ ೪. ಜಿನಸ್ತುತಿ ಶತಕ ೫. ರತ್ನಕರಂಡಕ ಶ್ರಾವಕಚಾರ ೬. ಜೀವಸಿದ್ಧಿ, ೭. ತತ್ತ್ವಾನು ಶಾಸನ ೮. ಪ್ರಾಕೃತ ವ್ಯಾಕರಣ ೯. ಪ್ರಮಾಣ ಪದಾರ್ಥ ೧೦. ಕರ್ಮ ಪ್ರಾಭೃತ  ಟೀಕಾ ೧೧. ಗಂಧಹಸ್ತಿಮಹಾಭಾಷ್ಯ. ಅವರ ಆಪ್ತಮಿಮಾಂಸಾ, ಬೃಹತ್ ಸ್ವಯಂಭೂ ಸ್ತೋತ್ರ, ಯುಕ್ತ್ಯನುಶಾಸನ, ಜಿನಸ್ತುತಿಶತಕ, ರತ್ನಕರಂಡಕ ಶ್ರಾವಕಾಚಾರ ಮುಂತಾದವು ದೊರೆತಿದ್ದು ಜೀವಸಿದ್ಧಿ ಮೊದಲಾದ ಗ್ರಂಥಗಳು ದೊರೆತಿಲ್ಲ.  ಇವುಗಳಲ್ಲಿ ಮೊದಲ ಮೂರು ದಾರ್ಶನಿಕ ಗ್ರಂಥಗಳು. ನಾಲ್ಕನೆಯದು ಕಾವ್ಯವಾಗಿದ್ದು, ಐದನೆಯದು ಧಾರ್ಮಿಕ ಗ್ರಂಥ.


[1]      ಉದ್ಧೃತ : (ಸ್ವಾಮಿ ಸಮಂತಭದ್ರ ವಿರಚಿತ ದೇವಾಗಮಾಪ್ತ ಮೀಮಾಂಸಾ ಸ್ತೋತ್ರಂ ಮತ್ತು ತತ್ವಭೋದಿನಿ ಕರ್ನಾಟಕ ಟೀಕೆ, ಸಂ:ಎಂ.ಸಿ.ಪದ್ಮನಾಭ ಶರ್ಮ, ಪೀಠಿಕೆ, ಪುಟ XXXVIII.

[2]      ಎ.ಕ.-೨, ಶ್ರ.ಬೆ. ೬೭(೫೪).

[3]      ಉದ್ಧೃತ : ಸ್ವಾಮಿ ಸಮಂತಭದ್ರ ವಿರಚಿತ ದೇವಾಗಮಾಪ್ತ ಮೀಮಾಂಸಾ ಸ್ತೋತ್ರಂ ಮತ್ತು ತತ್ವಬೋಧಿನಿ ಕರ್ನಾಟಕ ಟೀಕೆ, ಸಂ:ಎಂ.ಸಿ.ಪದ್ಮನಾಭ ಶರ್ಮ, ಪೀಠಿಕೆ, ಪುಟ XXIV.

[4]      ಸರಸ್ವತೀ ಸ್ಪೈರ ವಿಹಾರ ಭೂಮಯಃ ಸಮಂತಭದ್ರ ಪ್ರಮುಖಾ ಮುನೀಶ್ವರಾಃ| ಜಯಂತಿ ವಾಗ್ವಜ್ರ ನಿಪಾತ ಪಾಟಿತ ಪ್ರತೀ ಪರಾದ್ಧಾಂತ ಮಹೀಧ್ರಕೋಟಯಃ||

[5]      ಜೀ ಯಾತ್ಸಮಂತಭದ್ರೋಸಾ ಭವ್ಯ ಕೈರವ ಚಂದ್ರಮಾಃ
ದುರ್ವಾದಿ ವಾದ ಕಂಡೂನಾಂ ಶಮನೈಕ ಮಹೌಷಧಿಃ

[6]      ಕುವಾದಿನಃ ಸ್ವಕಾಂತಾನಾಂ ನಿಕಟೇ ಪರುಷೋಕ್ತಯಃ
ಸಮಂತಭದ್ರ ಯತ್ಸಗ್ರೇ ಪಾಹಿ ಪಾಹೀತಿ ಸೂಕ್ತಾಯಃ ||

[7]      ಶ್ರೀ ಮತ್ಸಮಂತಭದ್ರಾಖ್ಯೋ ಮಹಾವಾದಿನಿ ಚಾಗತೇ |
ಕುವಾದಿ ನೊಲಿ ಖನ್ಭೂಮಿ ಮಂಗುಷ್ಠೈರಾನತಾನನಾಃ ||

[8]      ಅವಟು ತಟುಮಟತಿ ಝಟತಿ ಸ್ಪುಟಪಟುವಾಚಾಟ ಧೂರ್ಜಟೀರ್ಜಿಹ್ವಾ   ವಾದಿನಿ ಸಮಂತಭದ್ರೇ ಸ್ಥಿತವತಿ ಕಾ ಕಥಾನ್ಸೇಷಾಮ್ ||
(ಹಸ್ತಿಮಲ್ಲನ ವಿಕ್ರಾಂತ ಕೌರವ ನಾಟಕ)
ಸಮಂಥಭದ್ರಃ ಸ ಚಿರಾಯ ಜೀಯಾದ್ವಾದೀಭ ವಜ್ರಾಂಕುಶ ಸೂಕ್ತಿ ಜಾಲಃ
ಯಸ್ಸ ಪ್ರಭಾವಾತ್ಸಕಲಾವನೀಯಂ ವಂಧ್ಯಾಸ ದುರ್ವಾದುಕ ವಾರ್ತ್ತಯಾಪಿ||
(ಶ್ರವಣಬೆಳ್ಗೊಳದ ಶಾಸನ-೧೦೫)
ಸಮಂತಭದ್ರೋಜನಿ ಭದ್ರಮೂರ್ತಿ ಸ್ತತಃ ಪ್ರಣೇತಾ ಜಿನಶಾಸನಶ್ಯ
ಯುದೀಯ ವಾಗ್ವಜ್ರ ಕಠೋರ ಪಾತಶ್ಚೂರ್ಣೀಚಕಾರ ಪ್ರತಿವಾದಿ ಶೈಲಾನ್||
(ಶ್ರವಣಬೆಳ್ಗೊಳದ ಶಾಸನ-೧೦೮)
ಸಮಂತಭದ್ರಃ ಸಂಸ್ತುತ್ಯಃ ಕಸ್ಯ ನ ಸ್ಯಾನ್ಮುನೀಶ್ವರಃ
ವಾರಾಣಾಸೀಶ್ವರ ಸ್ಸಾಗ್ರೇ ನಿರ್ಜಿತಾ ಯೇನ ವಿದ್ವಿಷಃ ||
(ತಿರುಮ ಕೂಡಲು ನರಸೀಪುರದ ಶಾಸನ-೧೦೫)

[9]      ಉದ್ಧೃತ: ಸಮಂತಭದ್ರ ವಿರಚಿತ ರತ್ನಕರಂಡಕ ಶ್ರಾವಕಾಚಾರ, ಅನು:ಮಿರ್ಜಿ ಅಣ್ಣಾರಾಯ, ಪೀಠಿಕೆ, ಪುಟ VIII.

[10]     ಉದ್ಧೃತ:ಸ್ವಾಮಿ ಸಮಂತಭದ್ರ ವಿರಚಿತಂ ದೇವಾಗಮಾಪ್ತ ಮೀಮಾಂಸ ಸ್ತ್ರೋತ್ರಂ ಮತ್ತು ತತ್ತ್ವಭೋದಿಸಿ ಕರ್ನಾಟಕ ಟೀಕೆ, ಸಂ: ಎಂ.ಸಿ. ಪದ್ಮನಾಭಶರ್ಮ, ಪುಟ XXXII.

[11]     ಅದೇ, ಪುಟ V.

[12]     ಶ್ರೀ ಮತ್ಸಮಂತ ಭದ್ರಾದ್ಯಾಃ ಕಾವ್ಯ ಮಾಣಿಕ್ಯ ರೋಹಣಾಃ |
ಸಂತು ನಃ ಸಂತತೋತ್ಕೃಷ್ಟಾಃ ಸೂಕ್ತಿ ರತ್ನೋತ್ಕರ ಪ್ರದಾಃ ||
(ಯಶೋಧರ ಚರಿತೆ-ವಾದಿರಾಜ)

         ಸರಸ್ವತೀ ಸ್ಥೈರ ವಿಹಾರ ಭೂಮಯಃ ಸಮಂತಭದ್ರ ಪ್ರಮುಖಾ ಮುನೀಶ್ವರಾಃ|
ಜಯಂತಿ ವಾಗ್ವಜ್ರ ನಿಪಾತ ಪಾಟಿತ ಪ್ರತೀ ಪರಾದ್ಧಾಂತ ಮಹೀಧ್ರ ಕೋಟಯಃ||
(ಗದ್ಯಚಿಂತಾಮಣಿ-ವಾದಿಭ ಸಿಂಹಸೂರಿ)

         ಸಮಂತ ಭದ್ರಾದಿ ಮಹಾಕವೀಶ್ವರಾಃ ಕುವಾದಿ ವಿದ್ಯಾಜಯ ಲಬ್ಧಕೀರ್ತಯ|
ಸುತರ್ಕ ಶಾಸ್ತ್ರಾಮೃತಸಾರ ಸಾಗರ ಮಯಿ ಪ್ರಸೀದಂತು ಕವಿತ್ವ ಕಾಂಕ್ಷಿಣಿಃ||
(ವರಾಂಗಚರಿತೆ-ವರ್ಧಮಾನಸೂರಿ)

         ಸಮಂತಭದ್ರಾದಿ ಕವೀಂದ್ರ ಭಾಸ್ವತಾಂ ಸ್ಪುರಂತಿ ಯತ್ರಾಮಲ ಸೂಕ್ತಿ ರಶ್ಮಂiiಃ| ವ್ರಜಂತಿ ಖದ್ಯೋತ ಹಾಸ್ಯತಾಂ ನ ತತ್ರ ಕಿಂ ಜ್ಞಾನಲವೋದ್ಧತಾ ಜನಾಃ||
(ಜ್ಞಾನಾರ್ಣವ – ಶುಭಚಂದ್ರಾಚಾರ್ಯ)
ಯದ್ಭಾರತ್ಯಃ ಕವಿಃ ಸವೋಭವತ್ಸಂಜ್ಞಾನ ಪಾರಗಾಃ |   ತಂ ಕವಿ ನಾಯಕಂ ಸ್ತೌಮಿ ಸಮಂತಭದ್ರ ಯೋಗಿನಮಮ್||
(ಚಂದ್ರಪ್ರಭ ಚರಿತೆ- ದಾಮೋದರ)