ಸಮಂತಭದ್ರರ ಉಪಲಬ್ಧ ಕೃತಿಗಳಲ್ಲಿ ಆಪ್ತಮಿಮಾಂಸಾ ಪ್ರಮುಖವಾದದ್ದು.  ಇದಕ್ಕೆ ದೇವಾಗಮ ಸ್ತೋತ್ರವೆಂದು ಪರ್ಯಾಯ ನಾಮವುಂಟು. ಈ ಗ್ರಂಥದ ಮೊದಲ ಸೂತ್ರದ ಮೊದಲ ಪದವು ‘ದೇವಾಗಮ ಎಂದಿರುವುದರಿಂದ ‘ದೇವಾಗಮ ಸ್ತೋತ್ರ ವೆಂದು ಕರೆಯುತ್ತಾರೆ.  ದಶಾಧ್ಯಾಯಗಳು ೧೧೪ ಶ್ಲೋಕಗಳನ್ನೊಳಗೊಂಡ ಈ ಕೃತಿ ಸ್ತುತಿರೂಪದಲ್ಲಿದ್ದು ಇತ್ಯಾಪ್ತ ಮೀಮಾಂಸಾ ಭಾಷ್ಯೇ ದಶಮಃ ಪರಿಚ್ಛೇದಃ ಎಂಬ ವಾಕ್ಯದಿಂದ ಕೊನೆಗೊಳ್ಳುತ್ತದೆ. ಅಷ್ಟಸಹಸ್ರಿ ಎಂಬ ಟೀಕಾಗ್ರಂಥದಲ್ಲಿಯೂ ಇತಿ ಮಣಿ ಮಂಡಲಾಲಂಕಾರವಸ್ಸೋರಗ ಪುರಾದೀಪ ಸೂನೋಃ ಶ್ರೀ ಸ್ವಾಮಿ ಸಮಂತಭದ್ರ ಮುನೇಃ ಕೃತಾ ಅಪ್ತಮಿಮಾಂಸಾಯಾಮ್ ಎನ್ನುವಲ್ಲಿಯೂ ಈ ಕೃತಿಗೆ ಅಪ್ತಮಿಮಾಂಸಾ ಎಂದೇ ಗ್ರಂಥಕಾರನು ಹೆಸರಿಟ್ಟಂತೆ ತಿಳಿದುಬರುತ್ತದೆ. 

ಉಮಾಸ್ವಾತಿಗಳ ತತ್ತ್ವಾರ್ಥ ಸೂತ್ರದಲ್ಲಿನ ಮೋಕ್ಷ ಮಾರ್ಗಸ್ಯ ನೇತಾರಂ ಎಂಬ ಮಂಗಳ ಸ್ತ್ರೋತ್ರವು ಆಪ್ರಮೀಮಾಂಸೆಯ ರಚನೆಗೆ ಮೂಲಾಧಾರವಾಗಿದೆ. ಇದರಲ್ಲಿ ವಿಷಯದ ಖಂಡನ ಮಂಡನವನ್ನು ಸ್ಯಾದ್ವಾದದ ಸಪ್ತಭಂಗಿ ಹಾಗೂ ನಯಗಳ ಹಿನ್ನೆಲೆಯಲ್ಲಿ ಮಾಡಲಾಗಿದೆ. ಇದರಲ್ಲಿ ಸಮಂತಭದ್ರರು ಆಪ್ತನ ಲಕ್ಷಣಗಳನ್ನು ವಿವರಿಸುತ್ತಾ ಎಲ್ಲಾ ಏಕಾಂತವಾದಗಳಲ್ಲಿನ ದೋಷಗಳನ್ನು ತೋರಿಸಿ ಇವೆಲ್ಲವುಗಳ ಸಮನ್ವಯ ಅನೇಕಾಂತವಾದದಲ್ಲಿ ಹೇಗೆ ಪರ್ಯಾವಸಾನಗೊಳ್ಳಬಲ್ಲದೆಂಬುದನ್ನು ತೋರಿಸಿದ್ದಾರೆ. ಏಕಾಂತವಾದದ ಖಂಡನೆ, ಅನೇಕಾಂತವಾದದ ಮಂಡನೆ ಇದರಲ್ಲಿ ತರ್ಕಬದ್ಧವಾಗಿ ಬಂದಿದೆ. ಜೈನ ನ್ಯಾಯದ ಈ ಪ್ರಾಚೀನ ಶೈಲಿಯನ್ನು ಪರಿಪುಷ್ಠ ಗೊಳಿಸಿದ ಶ್ರೇಯವು ಆಚಾರ್ಯ ಸಮಂತಭದ್ರರಿಗೆ ಸಂದಿದೆ. ಜೈನದರ್ಶನದಲ್ಲಿ ಇದೊಂದು ಅಪೂರ್ವ ಹಾಗೂ ಅದ್ವಿತೀಯ ಗ್ರಂಥ. ಪ್ರಾಚೀನ ಕಾಲದಲ್ಲಿ ಇದನ್ನು ಕಂಠಸ್ಥವಾಗಿಸುವ ಪರಂಪರೆಯಿತ್ತು.

ಈ ಗ್ರಂಥಕ್ಕೆ ಆಚಾರ್ಯ ಅಕಲಂಕರು ‘ಅಷ್ಟಶತೀ ಎಂಬ ೮೦೦ ಶ್ಲೋಕ ಪ್ರಮಾಣದ ಒಂದು ವೃತ್ತಿಯನ್ನು ಬರೆದಿದ್ದಾರೆ ಅದರಲ್ಲಿ ಅವರು

ತೀರ್ಥಂ ಸರ್ವಪದಾರ್ಥತತ್ವವಿಷಯಸ್ಯಾದ್ವಾದಪುಣ್ಯೋದಧೇ
ರ್ಭವ್ಯಾನಾಮಕಲಂಕಭಾವ ಕೃತಯೇ ಪ್ರಭಾವಿ ಕಾಲೇ ಕಲೌ|
ಯೆನಾಚಾರ್ಯ ಸಮನ್ತಭದ್ರ ಯತಿನಾ ತಸ್ಮೈ ನಮಸ್ಸನ್ತತಂ
ಕೃತ್ವಾ ವಿವ್ರಿಯತೇ ಸ್ತವೋ ಭಗವಂತಾಂ ದೇವಾಗಮಾಸ್ತತ್ಕೃತಿಃ||

ಎಂದು ವಂದಿಸುತ್ತಾ ದೇವಾಗಮದ ವಿವರಣೆಗೆ ತೊಡಗುತ್ತಾರೆ. ಈ ಕೃತಿ ದೇವಾಗಮ ವಿವೃತಿ ಆಪ್ತಮೀಮಾಂಸ ಭಾಷ್ಯ(ದೇವಾಗಮ ಭಾಷ್ಯ) ಎಂಬ ಇನ್ನೆರಡು ಹೆಸರುಗಳಿಂದಲೂ ಜೈನ ವಾಙ್ಮಯದಲ್ಲಿ ಪ್ರಸಿದ್ಧಿ ಪಡೆದಿದೆ. ಇದು ಅತ್ಯಂತ ಜಟಿಲವೂ ದುರವಗಾಹವೂ ಆಗಿದ್ದು ಸಾಮಾನ್ಯರಿಗೆ ದುರ್ಭೇಧ್ಯವಾದುದು.

ಇದೇ ಆಪ್ತಮಿಮಾಂಸೆಗೆ ಆಚಾರ್ಯ ವಿದ್ಯಾನಂದರು (ಕ್ರಿ.ಶ.೯೦೦-೯೫೦) ದೇವಾಗಮಾಲಂಕೃತಿ ಎಂಬ ಅಪೂರ್ವವೂ ಮಹತ್ತ್ವಪೂರ್ಣವೂ ಆದ ಟೀಕೆಯನ್ನು ಬರೆದಿದ್ದಾರೆ. ಅಕಲಂಕರ ವ್ಯಾಖ್ಯಾನದ ನಂತರ ಬಂದ ೨ನೆಯ ವ್ಯಾಖ್ಯಾನವಿದು. ಇದು ಆಪ್ತಮಿಮಾಂಸಾಲಂಕೃತಿ ಆಪ್ತಮಿಮಾಂಸಾಲಂಕಾರ ದೇವಾಗಮಾಲಂಕಾರ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ. ಅಷ್ಟಸಹಸ್ರ (೧೦೦೮) ಶ್ಲೋಕಗಳನ್ನು ಒಳಗೊಂಡಿರುವುದರಿಂದ ಇದಕ್ಕೆ ಅಷ್ಟಸಹಸ್ರಿ ಎಂದೂ ಕರೆಯಲಾಗುತ್ತಿದ್ದು, ಈ ಶೀರ್ಷಿಕೆಯೇ ಹೆಚ್ಚು ಪ್ರಚಲಿತದಲ್ಲಿದೆ. ಇದು ಅಷ್ಟಶತಿಯಂತೆ ದುರೂಹ್ಯವಲ್ಲದೆ ವಿಸ್ತೃತವೂ ಮರ್ಮ ಗರ್ಭಿತವೂ ಆಗಿದೆ.

ಆಚಾರ್ಯ ವಿದ್ಯಾನಂದರು ಅಷ್ಟಸಹಸ್ರೀಯನ್ನು ರಚಿಸುವಾಗ ಸ್ವತಃ ವಿದ್ಯಾನಂದರೆ  ‘ಕಷ್ಟಸಹಸ್ರಿ ಎಂದು ಬರೆಯುವಲ್ಲಿ ಅನೇಕಾಂತವಾದದ ತೊಡಕು-  ನಿರೂಪಣೆ ಅವರನ್ನು  ಕಾಡಿರಬೇಕು. ಜರ್ಮನ್ ದೇಶದ ವಿದ್ವಾಂಸರೊಬ್ಬರು ಯಾರು ಅಷ್ಟಸಹಸ್ರಿಯನ್ನು ಅಧ್ಯಯನ  ಮಾಡಿರುವುದಿಲ್ಲವೋ ಅವನು ಜೈನನಲ್ಲ. ಅಷ್ಟಸಹಸ್ರಿಯನ್ನು ಓದಿ ಯಾವನು ಜೈನನಾಗುವುದಿಲ್ಲವೋ ಅವನು ಅಷ್ಟಸಹಸ್ರಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿಲ್ಲ ಎಂದು ಜೈನ ಧಾರ್ಮಿಕ ಸಾಹಿತ್ಯದಲ್ಲಿ ಅದಕ್ಕಿದ್ದ ಮಹತ್ವವನ್ನು ಬಹು ಅರ್ಥಪೂರ್ಣವಾಗಿ ಕೆಲವೇ ಮಾತುಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಇದು ಅತಿಶಯೋಕ್ತಿಯಲ್ಲ. ಏಕೆಂದರೆ ಜೈನ ದರ್ಶನಶಾಸ್ತ್ರಗಳಲ್ಲಿ ಅಷ್ಟಸಹಸ್ರಿಯು ಒಂದು ನಿರ್ಣಾಯಕ ಗ್ರಂಥ.

ಆಪ್ತಮಿಮಾಂಸೆಗೆ ದೇವಾಗಮವೃತ್ತಿಯೆಂಬ ವ್ಯಾಖ್ಯಾನವೂ ದೊರೆತಿದ್ದು ಅದರ ಕರ್ತೃ ವಸುನಂದಿ. ಈ ವೃತ್ತಿಯು ಅಷ್ಟಶತಿ ಅಷ್ಟಸಹಸ್ರಿಗಳಂತೆ ಜಟಲತೆಯಿಂದ ಕೂಡಿಲ್ಲ. ಕರ್ತೃವೇ ಶ್ರೀ ಮತ್ಸಮನ್ತಭದ್ರಾಚಾರ್ಯಸ್ಯ…… ದೇವಾಗಮಾಖ್ಯಾಯಾಃ ಕೃತೇ ಸಂಕ್ಷೇಪಭೂತಂ ವಿವರಣಂ ಕೃತಂ ಶ್ರುತ ವಿಸ್ಮರಣ ಶೀಲೇನ ವಸುನನ್ದಿನಾ ಜಡಮತಿನಾತ್ಮೋಪಕಾರಾಯ- ಎಂದು ತನ್ನ ಮನನಕ್ಕಾಗಿ ತಾನೇ ಬರೆದುಕೊಂಡ ವೃತ್ತಿಯೆಂದು ಹೇಳಿಕೊಂಡಿದ್ದಾನೆ. ಆಪ್ತಮಿಮಾಂಸೆಗೆ ಲಘು ಸಮಂತಭದ್ರನ ಅಷ್ಟ ಸಹಸ್ರೀ ವಿಷಮಪದ ತಾತ್ಪರ್ಯ ಟೀಕೆಯೂ ಇದೆ. ಇವನ ಕಾಲ ೧೩ನೇ ಶತಮಾನ. ಉಪಾಧ್ಯಾಯ ಯಶೋವಿಜಯ ಕೃತ ಟಿಪ್ಪಣಿಯೂ ಉಪಲಬ್ಧವಿದ್ದುದಾಗಿ ತಿಳಿದು ಬರುತ್ತದೆ.

ಆಪ್ತನ ಸ್ವರೂಪ ಮಿಮಾಂಸೆಯ ಈ ದೇವಾಗಮದ ಗುಣಾತಿಶಯದಿಂದ ದೇವಾಗಮಮೇತ್ಯಾದಿ ಮಂಗಲ ಪುರಸ್ಸರಸ್ತವವಿಷಯಪರಮಾತ್ಮ| ಗುಣಾತಿಶಯ ಪರೀಕ್ಷಾ ಮುಪಕ್ಷಿಪತೈವ ಸ್ವಯಂ ಶ್ರದ್ಧಾ ಗುಣಜ್ಞತಾ ಲಕ್ಷಣಂ| ಪ್ರಯೋಜನಮಾಕ್ಷಿಪ್ತಂ ಲಕ್ಷ್ಯತೇ; ತದನ್ಯತರಾಪಾಯೇನರ್ಥಕ್ಯಾನುಪಪತ್ತೇಃ| ಶಾಸ್ತ್ರನ್ಯಾಯಾನುಸಾರಿತಯಾ ತಥೈವೋಪನ್ಯಾಸಾತ್|- ಶ್ರವಣ-ಪಠಣ-ಧ್ಯಾನ-ನಿದಿಧ್ಯಾಸನಾದಿಗಳಿಂದ ಸರ್ವಜ್ಞನಾದ ಪರಮಾತ್ಮನಲ್ಲಿ ಶ್ರದ್ಧಾ ಗುಣಜ್ಞತಾದಿಗಳೆರಡೂ ಉಂಟಾಗುತ್ತವೆಂದು ಅಕಲಂಕರು ಬಣ್ಣಿಸಿದ್ದಾರೆ.

ಯುಕ್ತ್ಯನುಶಾಸನ

೬೪ ಪದ್ಯಗಳಲ್ಲಿ ಭಗವಾನ ಮಹಾವೀರನ ಸ್ತುತಿಯನ್ನು ಮಾಡುವುದರೊಂದಿಗೆ  ವಿವಿಧ ದರ್ಶನಗಳ ವಿವೇಚನೆಯಿದೆ. ತತ್ತ್ವeನದ ದೃಷ್ಟಿಯಿಂದ ಈ ಗ್ರಂಥಕ್ಕೆ ಬಹಳ ಶ್ರೇಷ್ಠವಾದ ಸ್ಥಾನವಿದೆ. ಇದನ್ನು ‘ವೀರಜಿನಸ್ತೋತ್ರವೆಂದೂ ಕರೆಯುವರು. ಗ್ರಂಥ ಶೈಲಿ ಸೂತ್ರಾತ್ಮಕವೂ, ಗಂಭೀರವೂ, ಅರ್ಥಗರ್ಭಿತವೂ ಆಗಿದ್ದು ಈ ಗ್ರಂಥಕ್ಕೆ ಅಚಾರ್ಯ ವಿದ್ಯಾನಂದರ ಟೀಕೆಯೂ ಇದೆ. ಈ ಟೀಕೆಯಿಂದ ಸಮಂತಭದ್ರರು ಮೊದಲು ಆಪ್ತಮಿಮಾಂಸೆಯನ್ನು ಬರೆದು, ನಂತರ ಯುಕ್ತ್ಯನುಶಾಸನವನ್ನು ಬರೆದ ರೆಂದು ತಿಳಿದು ಬರುತ್ತದೆ.

ಸ್ವಯಂಭೂ ಸ್ತೋತ್ರ

ಸಂಸ್ಕೃತದ ಸ್ತ್ರೋತ್ರ ಸಾಹಿತ್ಯದಲ್ಲಿ ಅತಿ ಪ್ರಾಚೀನತಮ ಮತ್ತು ಪ್ರಸಿದ್ಧ ಕೃತಿಗಳೆಂದರೆ ಸಮಂತಭದ್ರರ ಸ್ವಯಂಭುಸ್ತ್ರೋತ್ರ ಮತ್ತ ಜಿನಸ್ತುತಿ ಶತಕ. ಸ್ವಯಂಭೂಸ್ತೋತ್ರದಲ್ಲಿ ೧೪೩ ಪದ್ಯಗಳ ಮೂಲಕ ೨೪ ತೀರ್ಥಂಕರನ್ನು ಸ್ತುತಿಸಲಾಗಿದೆ. ಸ್ವಯಂಭೂವಾ ಎಂಬ ಶಬ್ದದಿಂದ ಪ್ರಾರಂಭವಾಗುವ ಈ ಸ್ತೋತ್ರದಲ್ಲಿ ತೀರ್ಥಂಕರ ಸ್ತುತಿಗಳು ಭಿನ್ನ ಭಿನ್ನವಾಗಿವೆ.  ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ತುತಿಗಳು ಐದೈದು ಪದ್ಯಗಳಿಂದ ಕೂಡಿದ್ದು, ಸಂಸ್ಕೃತದ ಛಂದೋರೂಪಗಳಾದ ವಂಶಸ್ಥ, ಇಂದ್ರವಜ್ರಾ, ವಸಂತತಿಲಕಾ, ಮೊದಲಾದ ಹದಿನೈದು, ಹದಿನಾರು ಪ್ರಕಾರದ ಛಂದಸ್ಸುಗಳನ್ನು ಉಪಯೋಗಿಸಿದುದರಿಂದ ಕಾವ್ಯಗುಣ ಅನೇಕ ವೈವಿಧ್ಯತೆಯನ್ನು ಪಡೆದುಕೊಂಡು ಮನಮೋಹಕವಾಗಿದೆ. ಅರ್ಥಾಲಂಕಾರ ಶಬ್ದಾಲಂಕಾರಗಳು ಈ ಸ್ತೋತ್ರಕ್ಕೆ ಒಂದು ರೀತಿಯ ಕಳೆಯನ್ನುಂಟು ಮಾಡಿದರೆ, ಇಲ್ಲಿಯ ತಾತ್ವಿಕತೆ, ನೈತಿಕ, ಧಾರ್ಮಿಕ ವಿಚಾರಗಳು ಮುದವನ್ನುಂಟು ಮಾಡುತ್ತವೆ. ಸಮಂತಭದ್ರರು ಒಬ್ಬ ದಾರ್ಶನಿಕ, ತತ್ವeನಿ. ಆದರೆ ಅದರೊಂದಿಗೆ ಅವರೊಳಗಿನ ಕಾವ್ಯಶಕ್ತಿಗೆ ಕನ್ನಡಿಯಾಗಿದೆ ಈ ಸ್ವಯಂಭೂ ಸ್ತೋತ್ರ. ಕಾವ್ಯಕ್ಕೆ ಉಚಿತ ವಾದ ರಸ, ಭಾವ, ಅಲಂಕಾರಗಳು ಎಲ್ಲವೂ ಸೇರಿ ಇದೊಂದು ಭಾರತೀಯ ಸಾಹಿತ್ಯದಲ್ಲಿಯೇ ಅತ್ಯುತ್ತಮ ಸ್ತೋತ್ರವೆಂಬ ಕೀರ್ತಿಗೆ ಭಾಜನವಾಗಿದೆ.

ಸ್ವಯಂಭೂ ಸ್ತೋತ್ರವು ಚತುರ್ವ್ವಿಂಶತಿ ತೀರ್ಥಂಕರ ಸ್ತುತಿಯಾಗಿದ್ದರೂ ಒಬ್ಬೊಬ್ಬರ ಸ್ತೋತ್ರದಲ್ಲಿಯೂ ಒಂದೊಂದು ದಾರ್ಶನಿಕವಾದ ಅನ್ವಯಗೊಂಡು ಎಲ್ಲ ಏಕಾಂತ ವಾದಗಳಿಗೂ ಮನ್ನಣೆ ದೊರೆತು ಆ ಎಲ್ಲ ವಾದಗಳು ಅನೇಕಾಂತವಾದದಲ್ಲಿ ಪರ್ಯಾವಸಾನಗೊಳಿಸಲು ಪ್ರಯತ್ನಿಸುವ ಈ ಪ್ರತಿಭೆಯಲ್ಲಿ ಸಮನ್ವಯ ದೃಷ್ಟಿಯಿದೆಯೇ ಹೊರತು ಶ್ರೇಷ್ಠವೆಂಬ ಕನಿಷ್ಟವೆಂಬ ಭಾವವಿಲ್ಲ. ಬಹುಶಃ ಎಲ್ಲ ತತ್ತ್ವಾರ್ಥಶಾಸ್ತ್ರಗಳನ್ನು ಸಮನ್ವಯ ಗೊಳಿಸಲಿಕ್ಕೆ ಸಮಂತಭದ್ರ ಪ್ರಯತ್ನಿಸಿದ್ದರಿಂದಲೇ ಇರಬೇಕು ಸಮಂತಭದ್ರರು ದಿಗಂಬರರು ಶ್ವೇತಾಂಬರರನ್ನು ಒಂದುಗೂಡಿಸಲು ಪ್ರಯತ್ನಿಸಿದರೆಂಬ ಮಾತೊಂದಿದೆ. ಇದರ ಮೇಲೆ ಪ್ರಭಾಚಂದ್ರ ಕೃತ ಸಂಸ್ಕೃತ ಟೀಕೆಯೂ ಇದ್ದಂತೆ ತಿಳಿದು ಬರುತ್ತದೆ.

ಜಿನಸ್ತುತಿಶತಕ

ಇಪ್ಪತ್ನಾಲ್ಕು ಜನ ತೀರ್ಥಂಕರರ ಕಲಾತ್ಮಕ ಸ್ತುತಿಯೇ ಜಿನಸ್ತುತಿಶತಕ. ಇದಕ್ಕೆ ಸ್ತುತಿವಿದ್ಯಾ ‘ಜಿನಶತಕಾಲಂಕಾರ ಮೊದಲಾದ ಹೆಸರುಗಳಿವೆ. ಕಾವ್ಯಕೌಶಲ್ಯ ಅತ್ಯುತ್ತಮ ವಾದುದು. ೧೧೬ ಪದ್ಯಗಳಿಂದ ಕೂಡಿದ ‘ಜಿನಸ್ತುತಿ ಯಲ್ಲಿ ಪ್ರತಿಯೊಂದು ಪದ್ಯವೂ ‘ಚಿತ್ರಬದ್ಧ ಕಾವ್ಯವಾಗಿದೆ. ಟೀಕೆ ಟಿಪ್ಪಣಿಗಳಿಲ್ಲದೆ ಇಲ್ಲಿನ ತಾತ್ವಿಕ ವಿಚಾರಗಳನ್ನು ತಿಳಿದುಕೊಳ್ಳುವುದು ಚಿತ್ರಬದ್ಧತೆಯ ಆನಂದವನ್ನು ಪಡೆಯುವುದು ಕಷ್ಟಸಾಧ್ಯ.  ಒಂದೇ ಅಕ್ಷರದಲ್ಲಿ ಅನೇಕ ಅರ್ಥಗಳ ಆನಂದವನ್ನುಂಟು ಮಾಡುವ ಈ ಕಾವ್ಯ ಸಮಂತಭದ್ರರ ಕವಿತಾಶಕ್ತಿಗೆ ಪ್ರತೀಕವಾಗಿದೆ. ಬಹುಶಃ ಮಾನತುಂಗನ ಭಕ್ತಾಮರ ಸ್ತೋತ್ರದಷ್ಟು ಲೋಕಪ್ರಿಯತೆ ಇದಕ್ಕಿರದಿದ್ದರೂ, ಅತ್ಯುತ್ತಮ ಶತಕವಾಗಿ ಶತಕ ಸಾಹಿತ್ಯದಲ್ಲಿ ನಿಲ್ಲುತ್ತದೆ. ಇದಕ್ಕೆ ವಸುನಂದಿ ಕೃತ ಟೀಕೆಯೂ ಇದ್ದಂತೆ ತಿಳಿದುಬರುತ್ತದೆ.

ಶ್ರಾವಕಾಚಾರ

ಜೈನ ಸಾಂಘಿಕ ವ್ಯವಸ್ಥೆಯಲ್ಲಿ ಮುನಿ, ಆರ್ಯಿಕಾ, ಶ್ರಾವಕ, ಶ್ರಾವಕಿಯರ ಘಟಕಗಳನ್ನು ಚತುರ್ವಿದ ಸಂಘವೆಂದು ಗಣಿಸಲ್ಪಟ್ಟಿದ್ದು, ಒಂದಕ್ಕೊಂದು ಪೂರಕವೂ ಪೋಷಕವೂ ಆಗಿವೆ. ಈ ಚತುರ್ವಿದ ಸಂಘದಲ್ಲಿ ಆಚಾರಕ್ಕೆ, ತತ್ತ್ವಕ್ಕೆ ಪ್ರಾಧಾನ್ಯತೆಯನ್ನು ನೀಡಲಾಗಿದ್ದು, ಆಚಾರದಲ್ಲಿಯೂ ಮುನಿ ಆಚಾರ, ಶ್ರಾವಕಾಚಾರ ಎಂಬುದಾಗಿ ಗುರುತಿಸಲ್ಪಡುತ್ತವೆ. ಯತಿ ನಿಯಮಗಳು, ಆಚರಣೆಗಳು ಮುನಿ ಆಚಾರಕ್ಕೆ ಸಂಬಂಧಿಸಿದ್ದರೆ, ಗೃಹಸ್ಥನ ಆಚಾರಗಳನ್ನು ಶ್ರಾವಕಾಚಾರವೆನ್ನಲಾಗುತ್ತದೆ. ಏಳನೆಯ ಶ್ರುತಾಂಗವಾದ ಉಪಾಸಕಾಧ್ಯಯನದಲ್ಲಿ ಮೊಟ್ಟಮೊದಲಿಗೆ ಇದರ ವಿವರಗಳು ದೊರೆಯುತ್ತಿದ್ದು ನಂತರ ಮೊದಲ ಬಾರಿಗೆ ಬಹುಶಃ ವಿಸ್ತೃತವಾಗಿ, ವಿಫುಲವಾಗಿ ದೊರೆಯುವ ಶ್ರಾವಕಾಚಾರವೆಂದರೆ ಸಮಂತಭದ್ರರದೆ. ಇದರಲ್ಲಿ ಶ್ರಾವಕಾಚಾರದ ಕೊನೆಯ ಹಂತ ದಿಗಂಬರ ಯತಿತ್ವದ ಮೊದಲ ಮೆಟ್ಟಿಲಾಗುತ್ತದೆ. ಯತಿ ಜೀವನಕ್ಕೆ ಸಾಧನೆಯ ಸಾಧನವಾಗುತ್ತದೆ. ಇಹ ಶರೀರದ ಮಮತ್ವವನ್ನು ಶ್ರಾವಕಾಚಾರ ಮಾಗಿಸುತ್ತದೆ. ಹಾಗಾಗಿ ಜೈನ ಸಾಹಿತ್ಯದಲ್ಲಿ, ಜೈನ ಸಮಾಜದಲ್ಲಿ ಸಮಂತಭದ್ರರ ರತ್ನಕರಂಡಕ ಶ್ರಾವಕಾಚಾರಕ್ಕೆ ಬಹು ಮಹತ್ವದ ಸ್ಥಾನವಿದ್ದು ಬಹುತೇಕ ಬಸದಿಗಳಲ್ಲಿ ಇದರ ಪ್ರತಿಗಳು ದೊರೆಯುತ್ತವೆ.

ಆಪ್ತಮೀಮಾಂಸದಂತಹ ಅಪೂರ್ವ ತಾತ್ವಿಕ ಗ್ರಂಥವನ್ನು ಬರೆದಂತಹ ಸಮಂತ ಭದ್ರರು ಸರಳವಾದ ಶ್ರಾವಕಾಚಾರದಂತಹ ಕೃತಿಯನ್ನು ಬರೆದಿರಲಾರರು ಎಂಬ ಅಭಿಪ್ರಾಯವೊಂದಿದೆ. ಆದರೆ ದೊರೆತ ಆಧಾರಗಳು ಸ್ವಾಮಿ ಸಮಂತಭದ್ರರನ್ನೇ ಹೆಸರಿಸುತ್ತವೆ. ಇದರ ಟೀಕಾಕಾರನಾದ ಪ್ರಭಾಚಂದ್ರನು ಶ್ರಾವಕಾಚಾರ ಸಮಂತ್ರ ಭದ್ರರದೆಂದೇ ಹೆಸರಿಸಿದ್ದಾನೆ. ಸಂಸ್ಕೃತದಲ್ಲಿ ಅನೇಕ ಶ್ರಾವಕಾಚಾರಗಳು ಬಂದಿದ್ದರೂ ಸಮಂತಭದ್ರರ ಶ್ರಾವಕಾಚಾರಕ್ಕೆ ಒಂದು ವೈಶಿಷ್ಟ್ಯವಿದೆ. ಜೈನ ಸಮಾಜಶಾಸ್ತ್ರವಾಗಿ ರೂಪುಗೊಂಡ ರತ್ನಕರಂಡಕ ಶ್ರಾವಕಾಚಾರ ಆರೋಗ್ಯಪೂರ್ಣ ಸಮಾಜವನ್ನು ನಿರೀಕ್ಷಿಸುತ್ತದೆ. ೧೫೦ ಶ್ಲೋಕಗಳನ್ನು ಒಳಗೊಂಡ ಈ ಕೃತಿ ಶ್ರಾವಕರ (ಗೃಹಸ್ಥನ) ಆಚಾರಗಳನ್ನು, ಆದರ್ಶಗಳನ್ನು ಪ್ರತಿಪಾದಿಸುವ ನೀತಿ ಸಂಹಿತೆ. ಸ್ವತಃ ಸಮಂತಭದ್ರರೇ ಇದನ್ನು ರತ್ನಕರಂಡಕ ವೆಂದು ಕರೆದಿದ್ದಾರೆ.  ವಾದಿರಾಜರು ಇದನ್ನು ಒಳ್ಳೆಯ ಲಕ್ಷಣಗಳುಳ್ಳ ಧರ್ಮರತ್ನಗಳಿಂದ ಇದು ತುಂಬಿರುವುದರಿಂದ ಇದು ರತ್ನಕರಂಡಕ ವೆಂದು ಕರೆದಿದ್ದಾರೆ.  ಇದನ್ನು ದರ್ಶನಾಧಿಕಾರ (೪೧ ಸೂತ್ರಗಳು), eನಾಧಿಕಾರ (೪೨ ರಿಂದ ೪೬ ಸೂತ್ರಗಳು), ಚಾರಿತ್ರ್ಯಾಧಿಕಾರ(೪೭ ರಿಂದ ೧೨೧ಸೂತ್ರಗಳು) ಗಳೆಂದು ವಿಭಾಗಿಸಿದ್ದು ಕೊನೆಯ ಅಧಿಕಾರ ಸಲ್ಲೇಖನ ಮತ್ತು ಶ್ರಾವಕರ ಹನ್ನೊಂದು ಪ್ರತಿಮೆಗಳಿಗೆ ಮೀಸಲಾಗಿದೆ. ಸಮ್ಯಕ್‌ದರ್ಶನ, eನ, ಚಾರಿತ್ರಗಳಲ್ಲಿ ನಿರೂಪಣೆ ಮಾಡಿ ಚಾರಿತ್ರದಲ್ಲಿ ೫ ಅಣುವ್ರತ, ೩ ಗುಣವ್ರತ, ೪ ಶಿಕ್ಷಾವ್ರತಗಳ ವಿಸ್ತಾರ ವರ್ಣನೆಯಿದೆ.

ಮೊದಲನೆಯದಾದ ದರ್ಶನಾಧಿಕಾರದಲ್ಲಿ ಅದರ ೪೧ ಸೂತ್ರಗಳು ಆಪ್ತ, ಆಗಮ, ಗುರು ಸ್ವರೂಪವನ್ನು ತಿಳಿಸಿ ಕೊಡುತ್ತವೆ. ಎರಡನೆಯದಾದ ಜ್ಞಾನಾಧಿಕಾರ ಸಮ್ಯಕ್ ಜ್ಞಾನದ ಸ್ವರೂಪವನ್ನು, ಮೂರನೆಯದಾದ ಚಾರಿತ್ರ್ಯಾಧಿಕಾರ ಚಾರಿತ್ರ್ಯದ ಸ್ವರೂಪವನ್ನು ತಿಳಿಸಿ ಕೊಡುತ್ತದೆ. ಸಂಸ್ಕೃತ ಭಾಷೆಯಲ್ಲಿ ಶ್ರಾವಕಾಚಾರವನ್ನು ವಿವರಿಸುವ ಯಾವ ಗ್ರಂಥವೂ ಇಷ್ಟು ಪ್ರಾಚೀನ ಪರಿಪೂರ್ಣವಾಗಿಲ್ಲ.

[1] ಶ್ರಾವಕಾಚಾರ ಜೈನ ಸಮಾಜ ಶಾಸ್ತ್ರವಾಗಿದೆ. ಗಾತ್ರ ಚಿಕ್ಕದಾದರೂ ಗುಣದಲ್ಲಿ ಹಿರಿಯದು. ಇವತ್ತಿಗೂ ಜೈನಶಾಲೆಗಳಲ್ಲಿ ಶ್ರಾವಕಾಚಾರವನ್ನು ಕಂಠಪಾಟ ಮಾಡಿಸುವುದುಂಟು.

ವಿದ್ವಾಂಸರಾದ ಮಿರ್ಜಿಯವರು ಸಮಂತಭದ್ರರ ರತ್ನಕರಂಡಕ ಶ್ರಾವಕಾಚಾರ ವಂತೂ ಜೈನ ಸಮಾಜಕ್ಕೆ ಕೈಪಿಡಿಯಾಗಿದೆ. ಭಾರತೀಯ ಸಮಾಜದ ರಚನೆಯ ತಳಹದಿ ಸಮಾಜಧರ್ಮ ಮತ್ತು ವಿಶ್ವ ಶಾಂತಿಗಳ ವಿಚಾರ ಬಂದಾಗಲೆಲ್ಲ ನನಗೆ ಶ್ರಾವಕಾಚಾರ ಮೂಲದಲ್ಲಿರುವ ಕಲ್ಪನೆಯು ಹೊಳೆದು ಒಂದು ಸಮುಚಿತ ಭಾವವು ಮನದಲ್ಲಿಯೇ ಗುಡಿಕಟ್ಟುತ್ತಾ ಹೋಯಿತು. ಅಂದಿನಿಂದ ‘ಸಮಾಜಶಾಸ್ತ್ರಎಂಬ ದೃಷ್ಟಿಯಿಂದ ಈ ಶ್ರಾವಾಕಾಚಾರವನ್ನು ಅವಲೋಕಿಸುವ ಕ್ರಮವು ಆರಂಭವಾಯಿತು. ಅದರ ಪರಿಣಾಮವಾಗಿ ಇಂದಿಗೆ ಹನ್ನೆರಡು ವರ್ಷಗಳ ಹಿಂದೆಯೇ ಸಮಂತಭದ್ರರ ಸಮಾಜಶಾಸ್ತ್ರ ಎಂಬ ಪ್ರಬಂಧವನ್ನು ಬರೆದು ಪ್ರಕಟಿಸುವ ಯೋಜನೆಯನ್ನು ಕೈಗೊಳ್ಳ ಲಾಯಿತು. ಆದರೆ ಇತರ ಕಾರ್ಯಗಳಲ್ಲಿ ಅದು ಅಷ್ಟು ಮುಂದುವರೆಯಲಾರದೇ ಹೋಯಿತು.[2] ಎಂದು ಹೇಳಿರುವ ಈ ಮಾತುಗಳು ರತ್ನಕರಂಡಕದ ಮಹತ್ವವನ್ನು ಜೊತೆಗೆ ಸಮಂತಭದ್ರರ ಮಹತ್ವವನ್ನು ಎತ್ತಿ ಹಿಡಿಯುತ್ತವೆ.

ಸಮಂತಭದ್ರರ ಶ್ರಾವಕಾಚಾರಕ್ಕೆ ವಾದಿರಾಜಸೂರಿಗಳು ಪ್ರಭಾಚಂದ್ರಾಚಾರ್ಯರು ಟೀಕೆಗಳನ್ನು ಬರೆದಿದ್ದಾರೆ. ಆಯತವರ್ಮನು (ಕ್ರಿ.ಶ.೧೪೦೦) ಕನ್ನಡದಲ್ಲಿ ಚಂಪೂ ರೂಪದಲ್ಲಿ ಶ್ರಾವಕಾಚಾರವನ್ನು ಬರೆದಿದ್ದಾನೆ. ವರ್ಧಮಾನ ಸಿದ್ಧಾಂತ ದೇವನ ಶಿಷ್ಯನಾದ ಇವನು ಸಮಂತಭದ್ರರ ಮೂಲ ಕೃತಿಯನ್ನೇ ಅನುಸರಿಸಿದ್ದಾನೆ.

ಗಂಧಹಸ್ತಿಮಹಾಭಾಷ್ಯ

ಸಮಂತಭದ್ರರು ಉಮಾಸ್ವಾತಿಯ ‘ತತ್ತ್ವಾರ್ಥಸೂತ್ರಕ್ಕೆ ಗಂಧಹಸ್ತಿಮಹಾಭಾಷ್ಯ ವೆಂಬ ಭಾಷ್ಯವನ್ನು ಬರೆದಂತೆ ತಿಳಿದು ಬರುತ್ತದೆ. ಸಮಂತಭದ್ರರು ಗಂಧಹಸ್ತಿ ಮಹಾಭಾಷ್ಯವನ್ನು ಬರೆದಿದ್ದಾರೆಂದು ನಮಗೆ ಮೊಟ್ಟಮೊದಲಿಗೆ ತಿಳಿಸಿದವನು ಚಾವುಂಡರಾಯ. ತನ್ನ ಚಾವುಂಡರಾಯ ಪುರಾಣದಲ್ಲಿ

ಅಭಿಮತಮಾಗಿರೆ ತತ್ವಾ
ರ್ಥ ಭಾಷ್ಯಮಂ ತರ್ಕಶಾಸ್ತ್ರಮಂ ಬರೆದು ವಚೋ
ವಿಭವದಿ ನಿಳೆಗೆಸೆದ ಸಮಂ
ತಭದ್ರ ದೇವರ ಸಮಾನರೆಂಬರುವೊಳರೇ ()

ಎಂದು ಅವರನ್ನು ಕೀರ್ತಿಸಿದ್ದಾನೆ.

ನಂತರದ ಸು ಕ್ರಿ.ಶ. ೧೨೩೫ ರಲ್ಲಿದ್ದ ೨ ನೆಯ ಗುಣವರ್ಮನು ತನ್ನ ಪುಷ್ಪದಂತ ಪುರಾಣದಲ್ಲಿ

ಬಿತ್ತರಮಾಗೆ ಸೂತ್ರಗತಿಯಿಂ ಮಿಗೆ ಪಣ್ಣಿದ ಗಂಧಹಸ್ತಿ ತೊಂ
ಭತ್ತರು ಸಾಸಿರಕ್ಕೆ ಶಿವಕೋಟಿಯ ಕೋಟಿ ವಿಪಕ್ಷ ವಿದ್ವದು
ನ್ಮತ್ತಗಜಂ ಮದಂಬಱತು ಕೆಯ್ಯೆಡೆ ಗೊಟ್ಟುದೆನಲ್ಕೆ ಪೇೞ್ವುದೇಂ
ಮತ್ತೆ ಸಮಂತಭದ್ರ ಮುನಿ ರಾಜಾನುದಾತ್ತ ಜಯ ಪ್ರಶಸ್ತಿಯಂ|| (೨೨)

ಎನ್ನುವಲ್ಲಿ ಈ ಕೃತಿಗೆ  ಗಂಧಹಸ್ತಿಭಾಷ್ಯವೆಂದು ಹೆಸರಿದ್ದ ವಿಚಾರದೊಂದಿಗೆ ಆ ಹೆಸರಿನ ಹಿಂದಿರುವ ಐತಿಹ್ಯವೊಂದನ್ನು ಉಲ್ಲೇಖಿಸುತ್ತಾನೆ. ಮತ್ತು ಗಂಧಹಸ್ತಿಮಹಾಭಾಷ್ಯ ೯೬,೦೦೦ ಶ್ಲೋಕ ಪ್ರಮಾಣದಲ್ಲಿದ್ದ ಹೆಚ್ಚಿನ ವಿಚಾರವು ಈ ಪದ್ಯದಿಂದ ತಿಳಿದು ಬರುತ್ತದೆ.

ಇದೇ ಘಟನೆಯನ್ನು ರಾಜಾವಳಿ ಕಥಾಸಾರದಲ್ಲಿ-ಅಕಲಂಕರಿಗೂ ಮತ್ತು ಬೌದ್ಧರಿಗೂ ವಾದವಿವಾದ ನಡೆದಾಗ ಶಬ್ದಾಗಮ ಯುಕ್ತಾನುಪರಮಾಗಮ ಮೊದಲಾದ ಸಂವಾದ ವಿಷಯಗಳನ್ನು ಪತ್ರವದಾದಿಗಳಿಂದ ವಿವರಿಸಿ ಸೌಗತ ಗರ್ವ ಪರ್ವತವನ್ನು ಅಕಲಂಕರು ವಾಗ್ವಜ್ರದಿಂದ ಚೂರ್ಣೀ ಕೃತಿ ಮಾಡಿದರು. ಆ ಸಮಯದೊಳ್ ರಾಜಾಲಯದಿಂ ಭದ್ರಗಜಂ ಮದದಿಂ ಕಂಬಮಂ ಮುರಿದು ರಾಜ ವೀಧಿಯೊಳ್ ಕಂಡ ಜನಂಗಳಂ ಕೊಲ್ಲುತೆ ಬರುತ್ತಿರಲಾ ಸೌಗತರ ಮನೋಗತ ದಿಂದುಭಯ ಶಾಸ್ತ್ರಂಗಳ ನರ್ಚಿಸಿ ಕರಿಯು ಬಪ್ಪ ಮಾರ್ಗದೊಳಿಡುವುದುಂ ಮದಗಜಂ ಬೌದ್ಧಾಗಮ ಪುಸ್ತಕಮನೆಡಗಾಲಿಂ ಪುಡಿಯಂ ಮಾಡಿ ಜಿನಸಿದ್ಧಾಂತಮನೆತ್ತಿ ಮಸ್ತಕದೊಳಿಟ್ಟು ಗ್ರಾಮಪ್ರದಕ್ಷಿಣಂಗೈಯ್ದೊಡಾ ಶಾಸ್ತ್ರಕ್ಕೆ ಗಂಧಹಸ್ತಿ ಮಹಾಭಾಷ್ಯಮೆಂಬ ಪೆಸರಾದುದು[3] ಈ ಘಟನೆಯನ್ನು ಹುಟ್ಟುಹಾಕುವಲ್ಲಿ ಸಮೂಹದ ಸ್ವಧರ್ಮ ಪ್ರತಿಷ್ಠೆಯ ಮನೋವೈಕಲ್ಯ ವಿದ್ದರೂ ಸಮಂತಭದ್ರರ ಸಾಹಿತ್ಯ ಅಂದಿನ ತತ್ತ್ವಶಾಸ್ತ್ರಕ್ಕೆ ಹೊಸ ಪರಿಕಲ್ಪನೆ ಕೊಟ್ಟಿತೆಂಬುದರಲ್ಲಿ ಸಂದೇಹವಿಲ್ಲ. “The Jaina Philosophy of  Syadvada was perhaps for the first time fully explained in this book . The work was there fore discussed by non-jaina philosophers such as kumarila (8-9th centuries) and vachaspatimishra(9th cent) of the mimamsa  and the nyaya school of thought respectively. Few jaina authors except samantabhadra and akalanka have been found worthy of such notice by non-jaina philosophars”[4] ಎಂದ ವಿದ್ವಾಂಸರ ಮಾತುಗಳು ಗಂಧಹಸ್ತಿ ಮಹಾಭಾಷ್ಯಕ್ಕಿದ್ದ ಮಹತ್ವವನ್ನು ಎತ್ತಿ ತೋರಿಸುತ್ತವೆ.

೨ನೆಯ ಗುಣವರ್ಮನ ನಂತರ ಈ ಮಹಾಭಾಷ್ಯದ ಬಗ್ಗೆ ಉಲ್ಲೇಖಿಸಿದವನೆಂದರೆ ಕ್ರಿ.ಶ. ೧೫೫೦ ರಲ್ಲಿದ್ದ ದೊಡ್ಡಯ್ಯ ಕವಿ. ಇವನು ತನ್ನ ಚಂದ್ರಪ್ರಭ ಪುರಾಣದಲ್ಲಿ,

ವರಗಂಧ ಹಸ್ತಿ ಮಹಾಭಾಷ್ಯವನೊಲ್ದು
ವಿರಚಿಸಿ ಮಹಿಮೆಯನಾಂತ
ನಿರಘ ಸಮಂತ ಭದ್ರಾಚಾರ್ಯರ ಪದ
ಸರಸಿಜಗಳ ಸ್ಮರಿಸುವೆನು.   (೧೮)

ಎಂದು, ಸಂಸ್ಕೃತ ಕವಿಯಾದ ಹಸ್ತಿಮಲ್ಲನು ತನ್ನ ವಿಕ್ರಾಂತ ಕೌರವ ನಾಟಕದಲ್ಲಿ “ತತ್ತ್ವಾರ್ಥ ಸೂತ್ರ ವ್ಯಾಖ್ಯಾನ ಗಂಧಹಸ್ತಿ ಪ್ರವರ್ತಕಃ  ಸ್ವಾಮಿ ಸಮಂತಭದ್ರೊ ಎಂದು, ಲಘು ಸಮಂತಭದ್ರ ತನ್ನ ಅಷ್ಟಸಹಸ್ರೀ ವಿಷಮಪದ ತಾತ್ಪರ್ಯ ಟೀಕಾದಲ್ಲಿ ಭಗವದ್ಭೀರು ಮಾಸ್ವಾಮಿಪಾದ್ಪೆರಾಚಾರ್ಯರಾ ಸೂತ್ರ ತಸ್ಯ ತತ್ತ್ವಾರ್ಥ ಮಧಿಗಮಸ್ಯ ಮೋಕ್ಷಶಾಸ್ತ್ರಸ್ಯ ಗಂಧ ಹಸ್ತ್ಯಾಖ್ಯಂ ಮಹಾಭಾಷ್ಯ ಮುನಿಪನಿ ಬದ್ಧಂ ತಃ ಸ್ಯಾದ್ವಾದ ವಿದ್ಯಾಗ್ರಗುರವಂ ಶ್ರೀ ಸ್ವಾಮಿ ಸಮಂತ ಭದ್ರಾಚಾರ‍್ಯ ಎಂದು ಬರೆದಿದ್ದಾನೆ. ಮೇಲಿನ ಕನ್ನಡ ಸಂಸ್ಕೃತ ಕವಿಗಳ ಹೇಳಿಕೆಯಿಂದ ಗಂಧಹಸ್ತಿ ಮಹಾಭಾಷ್ಯವನ್ನು ಸಮಂತಭದ್ರರು ಬರೆದಿದ್ದಾರೆಂಬುದು ಸ್ಪಷ್ಟವಾಗುತ್ತದೆ. ಆದರೆ ಇಂದು ಈ ಕೃತಿ ಉಪಲಬ್ಧವಿಲ್ಲ. ಗಂಧಹಸ್ತಿ ಮಹಾಭಾಷ್ಯದ ಬಗೆಗಿದ್ದ ವದಂತಿಗಳನ್ನು ಹಿಂದೆಯೇ ನೋಡಿದ್ದೇವೆ. ಗಂಧಹಸ್ತಿ ಎಂಬ ಹೆಸರು ಅನ್ವರ್ಥಕ ನಾಮವೇ ಅಂಕಿತ ನಾಮವೇ ಎಂಬುದು ತಿಳಿದುಬಂದಿಲ್ಲ.

ಇವುಗಳಲ್ಲದೆ ಇವರು ಜೀವಸಿದ್ಧಿಯನ್ನು ಬರೆದಂತೆ ಪುನ್ನಾಟ ಸಂಘದ ಜಿನಸೇನಾಚಾರ್ಯರ ಹರಿವಂಶ ಪುರಾಣದಿಂದ ತಿಳಿದು ಬರುತ್ತದೆ. ಅದರಲ್ಲಿ ಜೀವಸಿದ್ಧಿ ವಿಧಾಯಿಹ ಕೃತಯುಕ್ತನುಶಾಸನಮ್| ವಚಃ ಸಮಂತಭದ್ರಸ್ಯ ವೀರಸ್ಯೇವ ವಿಜೃಂಭತೇ|| ಎಂಬ ಶ್ಲೋಕದಿಂದ ಈ ಅಭಿಪ್ರಾಯ ಇನ್ನೂ ಸ್ಪಷ್ಟವಾಗುತ್ತದೆ. ಕೆಲವು ಶಿಲಾಲೇಖಗಳಲ್ಲಿ ಇವರನ್ನು ‘ಸ್ವಮಂತ್ರ ವಚನ-ವ್ಯಾಹುತ ಚಂದ್ರಪ್ರಭಃಎಂಬ ವಿಶೇಷಣ ದಿಂದ ಕರೆದರೆ, ೯ನೆಯ ಶತಮಾನದ ಉಗ್ರಾದಿತ್ಯಾಚಾರ್ಯನು ತನ್ನ ಕಲ್ಯಾಣ ಕಾರಕವೆಂಬ ವೈದ್ಯಗ್ರಂಥದಲ್ಲಿ ಅಷ್ಟಾಂಗ ಮಪ್ಯಖಿಲ ಮಂತ್ರ ಸಮಂತಭದ್ರೈಃ ಪೋಕ್ತಂ ಸವಿಸ್ತರ ವಚೋವಿಭವ್ವೆರ್ವಿಶೇಷಾತ್(೨೦-೮೬)ಎನ್ನುವಲ್ಲಿ ಅಷ್ಟಾಂಗ ನಿರೂಪಣೆಯ ವೈದ್ಯ ಗ್ರಂಥವನ್ನು ಬರೆದಂತೆ ಇದರಿಂದ ತಿಳಿದು ಬರುತ್ತದೆ. ಅವರು ತಪಸ್ಸಾಮರ್ಥ್ಯ ದಿಂದ ಚಾರಣ ಋದ್ಧಿಯನ್ನು ಪಡೆದಿದ್ದರೆಂಬ ಮಾತು ಅಲೌಕಿಕ ಸಿದ್ಧಿ ಸಾಮರ್ಥ್ಯವನ್ನು ಪರ್ಯಾಯವಾಗಿ ಸೂಚಿಸುತ್ತದೆ.

ಅಲ್ಲದೆ ಸಮಂತಭದ್ರರು ೧೮ ಸಹಸ್ರ ಗ್ರಂಥ ಪ್ರಮಾಣದ ಸಿದ್ಧಾಂತ ರಸಾಯನ ಕಲ್ಪ ಎಂಬ ಕೃತಿಯನ್ನು ರಚಿಸಿದರೆಂಬ ಅಭಿಪ್ರಾಯವಿದೆ. ಪೂಜ್ಯಪಾದರ ಜೈನೇಂದ್ರ ವ್ಯಾಕರಣದಲ್ಲಿ ಇವರ ಅಭಿಪ್ರಾಯವನ್ನು ವ್ಯಕ್ತಪಡಿಸುವ ನಾಲ್ಕು ಸೂತ್ರಗಳಿರುವುದರಿಂದ ಇವರು ಸಂಸ್ಕೃತ (ಪ್ರಾಕೃತ ವ್ಯಾಕರಣ?) ವ್ಯಾಕರಣವನ್ನು ಬರೆದಿರುವ ಸಂಭವವಿದೆ ಯೆಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ಹೀಗೆ ಸಮಂತಭದ್ರರ ಪ್ರತಿಭೆ ಬಹುಮುಖಿಯಾದುದು. ಸಿದ್ಧ ಸಾರಸ್ವತರಾಗಿ ಬಹುವಿದ್ಯೆಗಳಲ್ಲಿ ಬಹುಮುಖ ವ್ಯಕ್ತಿತ್ವದೊಂದಿಗೆ ಬೆಳಗಿದ ಸಮಂತಭದ್ರರು ಜಿನತತ್ತ್ವ ಪ್ರತಿಪಾದನೆಗಳಲ್ಲಿ ಮುಳುಗಿದರು. ಪ್ರಯೋಗಾತ್ಮಕ ನಿಲುವುಗಳೊಂದಿಗೆ ಬದುಕುತ್ತಾ ತಮ್ಮ ತಾತ್ತ್ವಿಕ ವಿಚಾರಗಳನ್ನು ಈ ಕೃತಿಗಳ ಮೂಲಕ ದಾಖಲಿಸಿದರು.

ಇಂತಹ ಸಮಂತಭದ್ರರ ಆಕ್ರಮಣಕಾರಿ ವ್ಯಕ್ತಿತ್ವ, ತರ್ಕದ ಅಟ್ಟಹಾಸ, ಎಲ್ಲ ದರ್ಶನಗಳ ಆಳವಾದ ಅಧ್ಯಯನ, ಶೈವರನ್ನು ಶೈವವೇಷಧಾರಿಯಾಗಿ, ಬೌದ್ಧರಲ್ಲಿ ಬೌದ್ಧ ಸನ್ಯಾಸಿಯಂತೆ ವೇಷ ತೊಟ್ಟು…… ಆ ಧರ್ಮದಲ್ಲಿದ್ದುಕೊಂಡೇ ಆಯಾ ಧರ್ಮ ದರ್ಶನಗಳ ಲೋಪದೋಷಗಳನ್ನು ಎತ್ತಿ ತೋರಿ ಅನ್ಯ ದಾರ್ಶನಿಕರನ್ನು, ಧರ್ಮೀಯರನ್ನು ಪರಿವರ್ತಿಸುವಲ್ಲಿ ನಡೆಸಿದ ಅವರ ಈ ಪ್ರಯೋಗಶೀಲತೆ ಜಿನಧರ್ಮವನ್ನು ಪುನರ್ ಪ್ರತಿಷ್ಠಾಪಿಸಲು ಸುಲಭ ಮಾರ್ಗವನ್ನು ಒದಗಿಸಿತು. ಅವರ ಸರ್ವೋದಯ ತತ್ತ್ವ ಆಧುನಿಕ ಕಾಲಕ್ಕೂ ಅನುಕರಣೀಯ. ಅವರ ಈ ಸಾಧನೆ ಸಿದ್ಧಿಗಳು ಅವರನ್ನು ಅಲೌಕಿಕ ವ್ಯಕ್ತಿಯನ್ನಾಗಿಸಿದವು.

ಸಮಂತಭದ್ರರ ಸ್ವಯಂಭೂಸ್ತೋತ್ರದಲ್ಲಿ ಸಮಂತಭದ್ರಾಚಾರ್ಯರ ಬಹುಮುಖ ಪ್ರತಿಭೆಯನ್ನು ಸಾರುವ ಒಂದು ಶ್ಲೋಕವಿದೆ.

ಆಚಾರ್ಯೊಹಂ ಕವಿರಹಮಹಂ ವಾದಿರಾಟ್ ಪಣ್ಡಿತೋಹಂ
ದ್ವೆವಜ್ಞೋಹಂ ಭಿಷಗಹಮಹಂ ಮಾನ್ತ್ರಿಕಸ್ತಾನ್ತ್ರಿ ಕೋಹಮ್
ರಾಜನ್ನಸ್ಯಾಂ ಜಲಧಿವಲಯಾ ಮೇಖಲಾ ಯಾಮಿಲಾಯಾಂ
eಸಿದ್ಧಿಃ ಕಿಮಿತಿ ಬಹುನಾ ಸಿದ್ಧ ಸಾರಸ್ವತೋಹಮ್||

ಎನ್ನುವಲ್ಲಿ – ಆಚಾರ್ಯನು ನಾನು, ಕವಿಯು ನಾನು, ವಾದಿರಾಜನು ನಾನು, ಪಂಡಿತನು ನಾನು, ಜ್ಯೋತಿರ್ವಿದ್ಯಾವಿಶಾರದನು ನಾನು, ವೈದ್ಯವಿದ್ಯಾ ವಿಶಾರದನು ನಾನು, ಮನಶಾಸ್ತ್ರ ಪ್ರವೀಣನು ನಾನು, ತಾಂತ್ರಿಕನು ನಾನು, ಆeಸಿದ್ಧನು ನಾನು, ಸಿದ್ಧ ಸಾರಸ್ವತನು ನಾನು ಎಂದು ಆಪ್ತನ ಲಕ್ಷಣಗಳನ್ನು ಹೇಳುವಲ್ಲಿ ಹೇಳಿದ ಈ ಮಾತುಗಳು ಸಮಂತಭದ್ರಸ್ವಾಮಿಗಳಿಗೂ ಅನ್ವಯವಾಗುತ್ತವೆ. ಬಹುಶಃ ಈ ಕಾರಣ ಕ್ಕಾಗಿಯೇ ಜೈನ ಪರಂಪರೆ ಭಾವಿ ತೀರ್ಥಂಕರರೆಂದು (ವರ್ತಮಾನ ಕಾಲದ) ಅವರನ್ನು ಗೌರವಿಸುತ್ತದೆ. ಅವರ ಗ್ರಂಥಗಳು ಅವರಿಗೆ ಆ ಸ್ಥಾನವನ್ನು ಒದಗಿಸಿಕೊಟ್ಟಿವೆ.

ಜೈನದರ್ಶನ, ತತ್ತ್ವಶಾಸ್ತ್ರದಲ್ಲಿ ಕುಂದಕುಂದರ ನಂತರ ೨ನೆಯ ಸ್ಥಾನ ಸ್ವಾಮಿ ಸಮಂತಭದ್ರರಿಗೆ ಸಲ್ಲುತ್ತದೆ. ನ್ಯಾಯಶಾಸ್ತ್ರ ವಿಷಯದಲ್ಲಿ ಬಹಳ ದೊಡ್ಡ ಸ್ಥಾನ ಆಚಾರ್ಯ ಸಮಂತಭದ್ರರಿಗೆ ಸಂದಿದೆ.  ಸಮಂತಭದ್ರರ ಪ್ರತಿಯೊಂದು ಗ್ರಂಥವೂ ಸಹ ಒಂದೊಂದು ವೈಶಿಷ್ಟ್ಯಗಳಿಂದ ಕೂಡಿದ್ದು ಶ್ರೇಷ್ಠ ಕೃತಿಗಳೇ ಆಗಿವೆ. ಇವುಗಳಿಂದ ಭಾರತೀಯ ತತ್ತ್ವeನ ಕ್ಷೇತ್ರದಲ್ಲಿ ಒಂದು ಹೊಸ ಮನ್ವಂತರವೇ ಪ್ರಾರಂಭವಾಯಿತು. ಅವರ ಆಪ್ತಮೀಮಾಂಸದಂತಹ ಅಪೂರ್ವ, ಅದ್ವೀತಿಯ ತಾರ್ಕಿಕ, ತಾತ್ತ್ವಿಕ ಗ್ರಂಥ ಮತ್ತೊಂದಿಲ್ಲವೆಂಬ ಕೀರ್ತಿಗೆ ಭಾಜನವಾಯಿತು. ಅವರನ್ನು ಕುರಿತಂತೆ “ The Advent of this great writer in Karnataka is rightly consider to make an epoch not only on the digambara history, but in the whole range of Sanskrit literature”[5] ಎನ್ನುವ ಮಾತು ಎಲ್ಲರೂ ಒಪ್ಪತಕ್ಕದ್ದು. ಸಮಂತಭದ್ರರು ಕನ್ನಡ ದಲ್ಲಿಯೂ ಕಾವ್ಯಗಳನ್ನು ಬರೆದಿರಬೇಕೆಂದು ವಿದ್ವಾಂಸರು ಊಹಿಸುತ್ತಾರೆ.[6]

ವರ್ತಮಾನ ಕಾಲದ ತೀರ್ಥಂಕರರೆಂಬ ಅತಿದೊಡ್ಡ ಗೌರವಕ್ಕೆ ಪಾತ್ರರಾದ ಸಮಂತ ಭದ್ರರನ್ನು ಕುರಿತು ಆಧುನಿಕರಾದ ಪದ್ಮನಾಭಶರ್ಮ ಭುವನಹಳ್ಳಿಯವರು ‘ಸಮಂತಭದ್ರ ಸಂಗತಿ ಅಥವಾ ‘ಜ್ವಾಲಾಮಾಲಿನಿ ಮಹಾತ್ಮೆಎಂಬ ಗ್ರಂಥವನ್ನು ಸಾಂಗತ್ಯದಲ್ಲಿ ಬರೆದಿದ್ದಾರೆ. ಹದಿನೈದು ಆಶ್ವಾಸಗನ್ನೊಳಗೊಂಡಿರುವ ಈ ಕಾವ್ಯದಲ್ಲಿ ತಿಳಿಗನ್ನಡದ ೨,೩೫೮ ಪದ್ಯಗಳಿವೆ. ಆಚಾರ್ಯರನ್ನು ಕುರಿತು ಆಧುನಿಕರು ಬರೆದ ಮೊಟ್ಟ ಮೊದಲ ಸಾಂಗತ್ಯ ಕೃತಿಯಿದು.

ಅಸಮಾನ್ಯ, ವಿಲಕ್ಷಣ ವ್ಯಕ್ತಿತ್ವದ, ಬದುಕಿದ್ದಾಗಲೇ ದಂತಕಥೆಯಾಗಿ ಬಾಳಿದ, ಆಚಾರ್ಯ ಪದವಿಗೆ ಭಿನ್ನವಾದ ಧ್ರಾಷ್ಯವ್ಯಕ್ತಿತ್ವವನ್ನು ಹೊಂದಿದ ಸಮಂತಭದ್ರರನ್ನು ಕುರಿತು ಶುಭಚಂದ್ರಾಚಾರ್ಯರು ತಮ್ಮ ‘ಪಾಂಡವ ಪುರಾಣದಲ್ಲಿ ಹೇಳಿದಂತೆ

ಸಮಂತಭದ್ರೋ ಭದ್ರಾರ್ಥೋ ಭಾತು ಭಾರತ ಭೂಷಣಃ|           
ದೇವಾಗಮೇನ ಯೇನಾತ್ರ ವ್ಯಕ್ತೋ ದೇವಾಗಮ ಕೃತಃ ||
ಸಮಂತಭದ್ರರು ನೂರಕ್ಕೆ ನೂರು ಪಾಲು ಭಾರತ ಭೂಷಣರು.


[1]      ದಿಗಂಬರ ಸಂಪ್ರದಾಯದಲ್ಲಿ ಬಂದಂತಹ ಶ್ರಾವಕಾಚಾರಗಳು:-

೧. ಚಾರಿತ್ರ ಪಾಹುಡ (ಕುಂದಕುಂದ, ೨ನೇ.ಶ.) ೨. ತತ್ತ್ವಾರ್ಥಸೂತ್ರ (ಉಮಾಸ್ಪಾತಿ-೩ನೇ. ಶ.) ೩. ದ್ವಾದಶ ಅನುಪ್ರೇಕ್ಷಾ (ಕಾರ್ತಿಕೇಯ-೪ನೇ.ಶ)  ೪. ರತ್ನಕರಂಡಕ ಶ್ರಾವಕಾಚಾರ (ಸಮಂತಭದ್ರ-ಕ್ರಿ.ಶ೪೫೦) ೫.ಸರ್ವಾರ್ಥಸಿದ್ಧಿ (ಪೂಜ್ಯಪಾದ-೬ನೇ. ಶ.) ೬. ಆದಿಪುರಾಣ (ಜಿನಸೇನ-೯ನೇ.ಶ.) ೭ ಭಾವಸಂಗ್ರಹ (ದೇವಸೇನ -೧೦ನೇ. ಶ.) ೮. ಯಶಸ್ತಿಲಕ (ಸೋಮದೇವ-ಕ್ರಿ.ಶ. ೯೫೯) ೯. ಶುಭಾಷಿತ ರತ್ನ ಸಂದೋಹ (ಅಮಿತಗತಿ-) ೧೦. ಚಾರಿತ್ರಸಾರ (ಚಾವುಂಡರಾಯ-೧೦ನೇ,ಶ.) ೧೧. ಶ್ರಾವಕಧರ್ಮ ದೋಹಕ (ಅಮೃತಚಂದ್ರ ಪುರುಷಾರ್ಥ ಸಿದ್ದುಪಾಧ್ಯಾಯ -೧೧ನೇ. ಶ.) ೧೨. ಶ್ರಾವಕಾಚಾರ(ವಸುನಂದಿ-೧೧ನೇ.ಶ.) ೧೩. ಧರ್ಮರಸಾಯನ(ಪದ್ಮನಂದಿ-೧೨ನೇ. ಶ.) ೧೪. ಸಾಗರ ಧರ್ಮಾಮೃತ(ಆಶಾಧರ-ಕ್ರಿ.ಶ.೧೨೪೦.) ೧೫.ಶ್ರಾವಕಾಚಾರ (ಮಾಘಣಂದಿ- ಕ್ರಿ.ಶ. ೧೨೬೦.) ೧೬. ಶ್ರಾವಕಾಚಾರ (ಗುಣಭೂಷಣ- ಕ್ರಿ.ಶ.೧೩೦೦) ೧೭. ಶ್ರಾವಕಾಚಾರ (ಪದ್ಮನಂದಿ-ಕ್ರಿ. ಶ. ೫ನೇ. ಶ.) ೧೮. ಭಾವಸಂಗ್ರಹ (ವಾಮದೇವ- ೧೫ನೇ.ಶ.) ೧೯ ಪ್ರಶ್ನೋತ್ತರ ಶ್ರಾವಕಾಚಾರ (ಸಕಲಕೀರ್ತಿ-ಕ್ರಿ.ಶ.೧೫೦೪.) ೨೦. ಧರ್ಮಸಂಗ್ರಹ ಶ್ರಾವಕಾಚಾರ (ಮಾಧವ- ಕ್ರಿ. ಶ. ೧೫೦೪.) ೨೧. ಧರ್ಮ ಪೀಯುಷ ಶ್ರಾವಕಾಚಾರ (ಬ್ರಹ್ಮನೇಮಿದತ್ತ-ಕ್ರಿ. ಶ. ೧೫೩೦) ೨೨ ರತ್ನಮಾಲಾ (ಶಿವಕೋಟಿ- ೧೭ನೇ.ಶ.) ೨೩.ತ್ರೈವರ್ಣಿ ಶ್ರಾವಕಾಚಾರ (ಸೋಮಸೇನ-ಕ್ರಿ.ಶ.೧೬೧೦.) ೨೪. ಲಾಟೀಸಂಹಿತಾ (ರಾಚಮಲ್ಲ- ಕ್ರಿ.ಶ. ೧೫೮೪)

[2]      ಸಮಂತಭದ್ರ ವಿರಚಿತ ರತ್ನಕರಂಡಕ ಶ್ರಾವಕಾಚಾರ, ಅನು:ಮಿರ್ಜಿ ಅಣ್ಣಾರಾಯ, ೩ನೆಯ ಆವೃತ್ತಿ, ೧೯೯೨, ಪೀಠಿಕೆ ಪುಟ:III.

[3]      ರಾಜಾವಳಿ ಕಥಾಸಾರ, ಪುಟ:೧೪೭-೧೪೮.

[4]      A History Of The Jainas :A.K.Ray, P:106.

[5]      Jainism and Karnataka culture,  S.R. Sharma, P:69.

[6]      ಬೇಂದ್ರೆಯವರು ಶ್ರೀವಿಜಯ ಎಂದರೆ ಸಮಂತಭದ್ರ, ಕವೀಶ್ವರ ಎಂದರೆ ಕವಿಪರಮೇಷ್ಠಿ ಮತ್ತು ಪಂಡಿತ ಎಂದರೆ ಪೂಜ್ಯಪಾದ ಎಂಬುದಾಗಿ ತರ್ಕಿಸುತ್ತಾರೆ. ಆದರೆ ಕನ್ನಡ ಗ್ರಂಥಗಳಾವುವು ಇಂದಿಗೂ ದೊರೆಯದೆ ಇದು ಕೇವಲ ಊಹೆಯಾಗಿ ಉಳಿದಿದೆ.