ವೈದಿಕ ಸಂಸ್ಕೃತಿಗೆ ಪರ್ಯಾಯ ಸವಾಲುಗಳನ್ನೊಡ್ಡುತ್ತಲೇ ಬೆಳೆದ ಶ್ರಮಣ ಸಂಸ್ಕೃತಿ ಜನಪರ ಆಶಯಗಳನ್ನು ಹೊತ್ತು ಬೆಳೆದದ್ದು. ಶ್ರಮಣ ಪರಂಪರೆಯ ಧೋರಣೆಗಳನ್ನೇ ಪರ್ಯಾಯವಾಗಿ ಹುಟ್ಟು ಹಾಕುತ್ತಾ ಪ್ರತ್ಯೇಕ ಅಸ್ತಿತ್ವವನ್ನು ಗುರುತಿಸಿಕೊಂಡ ಜೈನ, ಬೌದ್ಧ, ಲೋಕಾಯತ, ಸಾಂಖ್ಯ, ಚಾರ್ವಾಕ ಮತಗಳು ಧಾರ್ಮಿಕ ಇತಿಹಾಸದಲ್ಲಿ ಪ್ರತಿಸಂಸ್ಕೃತಿಗಳೆಂದೇ ಗುರುತಿಸಲ್ಪಟ್ಟವು. ಇಂತಹ ಪ್ರತಿಸಂಸ್ಕೃತಿ ಯನ್ನು ವೈದಿಕ ಸಂಸ್ಕೃತಿಯ ವಿರೋಧಿ ನೆಲೆಯಲ್ಲಿಯೇ ನಿಂತು ಪೋಷಿಸುವಲ್ಲಿ ಪ್ರಧಾನ ಪಾತ್ರ ವಹಿಸಿದುದು ಜೈನಧರ್ಮ. ಸಮಾಜಮುಖಿ, ಜನಮುಖಿಯಾಗುತ್ತಲೆ ಬೆಳೆದ ಜೈನಧರ್ಮ ಇಪ್ಪತ್ನಾಲ್ಕು ಜನ ತೀರ್ಥಂಕರರಿಂದ ಪ್ರವರ್ಧನೆಗೊಂಡು ಆಚಾರ್ಯ ಪರಂಪರೆಯಿಂದಾಗಿ ಗಟ್ಟಿ ನೆಲೆಯನ್ನು ಕಂಡಿತು.

ತೀರ್ಥಂಕರ ಪರಂಪರೆಯ ನಂತರ ಜೈನಧರ್ಮದ ಚುಕ್ಕಾಣಿ ಹಿಡಿದ ಆಚಾರ್ಯ ಪರಂಪರೆ ಅದರಲ್ಲಿಯೂ ಕರ್ನಾಟಕದ ಆಚಾರ್ಯ ಪರಂಪರೆ ಒಂದು ಹೊಸ ಮನ್ವಂತರವನ್ನೇ ಸೃಷ್ಠಿಸಿತು. ಇಂತಹ ಆಚಾರ್ಯ ಪರಂಪರೆಯಲ್ಲಿ ಬಂದವರು ಸ್ವಾಮಿ ಸಮಂತಭದ್ರರು. ಕ್ರಿ.ಶ.ಆರಂಭದಿಂದ ಕರ್ನಾಟಕದಲ್ಲಿ ಕಂಡು ಬರುವ ಆಚಾರ್ಯ ಪರಂಪರೆಯಲ್ಲಿ ಶ್ರೀಕುಂದಕುಂದರು, ಉಮಾಸ್ವಾತಿಗಳ ನಂತರ ಐತಿಹಾಸಿಕವಾಗಿಯೂ, ತಾತ್ತ್ವಿಕವಾಗಿಯೂ ಅತಿ ಮುಖ್ಯವಾಗಿ ಗುರುತಿಸಲ್ಪಟ್ಟವರು ಆಚಾರ್ಯ ಸಮಂತಭದ್ರರು. ಜೈನ ಧರ್ಮದ ಪ್ರಚಾರ-ಪ್ರಸಾರದಲ್ಲಿ ಹೊಸ ಆಯಾಮಗಳನ್ನು ಕಂಡುಕೊಂಡ ಸಮಂತಭದ್ರರು ತಾತ್ತ್ವಿಕ-ತಾರ್ಕಿಕ ಜೈನ ನ್ಯಾಯಶಾಸ್ತ್ರಕ್ಕೆ ಕೊಟ್ಟ ಕೊಡುಗೆ ಅಪಾರ. ವೈದಿಕ ಸಂಸ್ಕೃತಿಯ ದಾಳಿಗಳಿಗೆ ಪ್ರತಿಕ್ರಿಯಿಸುವಲ್ಲಿ ಸಾಂಘಿಕ-ಸಾಹಿತ್ಯಿಕ ಎರಡೂ ಸ್ವರೂಪಗಳಲ್ಲಿಯೂ ಭಿನ್ನವಾಗಿ ತೋರುವ ಸಮಂತಭದ್ರರು ಸರ್ವೋದಯ ಪ್ರತಿಪಾದಕರು. ಇಂತಹ ಸಮಂತಭದ್ರರ ಜೀವನದ ವೈಶಿಷ್ಟ್ಯ ವೈಚಿತ್ರ್ಯಗಳೊಂದಿಗೆ ಅವರ ಸಾಹಿತ್ಯಿಕ ಮಾದರಿಗಳನ್ನು ಗುರುತಿಸುವ ಒಂದು ಚಿಕ್ಕ ಪ್ರಯತ್ನದ ಫಲ ಈ ಚಿಕ್ಕ ಪುಸ್ತಿಕೆ.

* * *

ಭಾರತೀಯ ದರ್ಶನ-ನ್ಯಾಯಶಾಸ್ತ್ರದಲ್ಲಿ ಸಮಂತಭದ್ರರ ಹೆಸರು ಸ್ಥಾಯಿಯಾದುದು. ಬಹುಮುಖ ವ್ಯಕ್ತಿತ್ವವನ್ನು ಹೊಂದಿದ್ದ ಸಮಂತಭದ್ರರ ಜೀವನ ಹಲವಾರು ರೋಚಕ ಘಟನೆಗಳಿಂದ ಕೂಡಿದ್ದು, ಉಲ್ಲೇಖ ಆಕರಗಳಿಗಿಂತ ಬಹಳಷ್ಟು ಅಂಶಗಳು ಐತಿಹ್ಯಗಳ ರೂಪದಲ್ಲೇ ದೊರೆಯುತ್ತವೆ. ಭಾರತೀಯ ಜೈನ ಸಾಹಿತ್ಯದಲ್ಲಿ ದೊರೆಯುವ ಆಚಾರ್ಯ ಪ್ರಭಾಚಂದ್ರರ ಕಥಾಕೋಶ, ಇಂದ್ರನಂದಿಯ ಶ್ರುತಾವತಾರ, ದೇವಚಂದ್ರನ ಪೂಜ್ಯಪಾದ ಚರಿತ್ರೆ, ರಾಜಾವಳಿ ಕಥಾಸಾರ, ಕವಿ ನಾಗರಾಜನ ಸಮಂತಭದ್ರ- ಭಾರತಿಸ್ತೋತ್ರ ಮುಂತಾದ ಗ್ರಂಥಗಳಲ್ಲದೆ  ಕನ್ನಡ ಸಂಸ್ಕೃತ ಸಾಹಿತ್ಯದ ಸ್ತುತಿ ಪದ್ಯಗಳು, ಸಂಸ್ಕೃತ ಕನ್ನಡ ಶಾಸನ ಸಾಹಿತ್ಯದ ಉಲ್ಲೇಖಗಳು, ಇತರ ಶಾಸ್ತ್ರ, ಸಾಹಿತ್ಯ ಗ್ರಂಥಗಳ ಉಲ್ಲೇಖಗಳು ಸ್ಥೂಲವಾಗಿ ಇವರ ವೈಯಕ್ತಿಕ ಸಾಂಘಿಕ ಜೀವನದ ಸಾಧನೆಗಳನ್ನು ದಾಖಲಿಸುತ್ತವೆ. ಸ್ವಾಮಿ ಸಮಂತಭದ್ರರನ್ನು ಜಿನಸೇನರು(೭೮೩) ತಮ್ಮ ಪೂರ್ವ ಪುರಾಣದಲ್ಲಿ

ನಮಸ್ಸಮಂತಭದ್ರಾಯ ಮಹತೇ ಕವಿವೇಧಸೇ
ಯದ್ವಚೋ ವಜ್ರ ಪಾತೇನ ನಿರ್ಭಿನ್ನಾಃ ಕುಮತಾದ್ರಯಃ ||

ಎಂದು ಗೌರವದಿಂದ ಸ್ಮರಿಸಿರುವುದರಿಂದ ಇವರು ಜಿನಸೇನರಿಗಿಂತ ಹಿರಿಯರೂ ಹಿಂದಿನವರೆಂಬುದು ಸ್ಪಷ್ಟವಾಗುವುದು. ಶ್ರವಣಬೆಳ್ಗೊಳದ(೧೧೬೩) ಶಾಸನದಲ್ಲಿ ಬಂದ ಪಟ್ಟಾವಲಿಯಾನುಸಾರ ಉಮಾಸ್ವಾತಿಯ ಶಿಷ್ಯ ಬಲಾಕಪಿಂಛರಾಗಿದ್ದು ಇವರ ನಂತರ ಸಮಂತಭದ್ರರು ಗಣ ಪ್ರಮುಖರಾದರೆಂದು ಹೇಳಲಾಗಿದೆ. ದಿಗಂಬರಾನ್ವಯದ ಪ್ರಕಾರ ಸಮಂತಭದ್ರರ ಕಾಲ ಕ್ರಿ.ಶ.೧೨೦ರಿಂದ ೧೮೫ರ ಮಧ್ಯದಲ್ಲಿದೆ. ‘ಈತನು ಶಕ ೬೦ರಲ್ಲಿ ಎಂದರೆ ಕ್ರಿ.ಶ.೧೩೮ರಲ್ಲಿ ಇದ್ದಂತೆ ಜೈನರಲ್ಲಿ ಪ್ರತೀತಿಯಿದೆ. ಶ್ವೇತಾಂಬರ ವೀರ ವಂಶಾವಳಿಯಲ್ಲಿ ಸಮಂತಭದ್ರನು ಮಹಾವೀರನ ನಿರ್ವಾಣವಾದ ೮೮೯ನೆಯ ವರ್ಷದಲ್ಲಿ ಎಂದರೆ ೪೧೯ರಲ್ಲಿ ಇದ್ದನೆಂದು ಹೇಳಿದೆ. ಆದರೆ ಕ್ರಿ.ಶ.೧ನೆಯ ಶತಮಾನ ದಲ್ಲಿ ಇದ್ದನೆಂದು ಹೇಳುವ ಕುಂದಕುಂದಾಚಾರ್ಯರಿಂದ ಸಮಂತಭದ್ರನು ೭-೮ನೆಯ ತಲೆ ಈಚೆಯವನಾದುದರಿಂದ ಇವನ ಕಾಲವು ೧೩೮ಕ್ಕಿಂತ ಈಚೆ ಇದ್ದಿರಬೇಕು. ಪೂಜ್ಯಪಾದನು (ಸು.೬೦೦) ತನ್ನ ಜೈನೇಂದ್ರ ವ್ಯಾಕರಣದಲ್ಲಿ ಈತನ ಹೆಸರನ್ನು ಹೇಳಿರುವುದರಿಂದ ಇವನು ಅವನಿಗಿಂತ ಹಿಂದೆ ಇದ್ದವನು ಎಂಬುದಂತು ಸ್ಪಷ್ಟ. ಇವನು ಸುಮಾರು ೪೦೦ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ. ಎಂದು ಕವಿ ಚರಿತೆಕಾರರು ಅಭಿಪ್ರಾಯ ಪಟ್ಟಿದ್ದಾರೆ.

ಕರ್ನಾಟಕದ ಶ್ಯಾಮಕುಂದಾಚಾರ್ಯ ಮತ್ತು ತುಂಬಳೂರಾಚಾರ್ಯರ ನಂತರದ ಕಾಲದಲ್ಲಿ ಬಂದಂತವರು ಸ್ವಾಮಿ ಸಮಂತಭದ್ರಾಚಾರ್ಯರು. ಕರ್ನಾಟಕದಲ್ಲಿ ಆರು ಜನ ಸಮಂತಭದ್ರಾಚಾರ್ಯರು ಇದ್ದ ಉಲ್ಲೇಖಗಳು ದೊರೆಯುತ್ತವೆ. ಅವರಲ್ಲಿ ೧. ಅಷ್ಟ ಸಹಸ್ರಿಯ ಮೇಲೆ ‘ವಿಷಮಪದ  ತಾತ್ಪರ್ಯ ಟೀಕಾ ಎಂಬ ವೃತ್ತಿಯನ್ನು ಬರೆದ ಸಮಂತಭದ್ರ ೨. ಮೇಘನಂದಿ ಪ್ರತಿಪತ್ತಿಗೆ ಚಿಕ್ಕ ಸಮಂತಭದ್ರನೆಂಬ ಹೆಸರಿದ್ದು ಚಿಕ್ಕಸಮಂತಭದ್ರ ಸೂತ್ರವೊಂದು ಕಂಡುಬರುತ್ತದೆ. ೩. ಗೇರುಸೊಪ್ಪೆಯ ಸಮಂತಭದ್ರನ ಬಗ್ಗೆ ತಾಮ್ರ ಶಾಸನವೊಂದರ ಉಲ್ಲೇಖ ಕಂಡುಬರುತ್ತದೆ. ೪. ಕ್ರಿ.ಶ. ೧೫೬೦ರಲ್ಲಿ  ಶಿವಮೊಗ್ಗೆಯ ಸಾಗರ ತಾಲೂಕಿನ ಶಾಸನದಲ್ಲಿ ಅಭಿನವ ಸಮಂತಭದ್ರರ ಉಲ್ಲೇಖವಿದೆ. ೫. ಸೇನಗಣದ ಪಟ್ಟಾವಲಿಯಲ್ಲಿ ಸಮಂತಭದ್ರ ಭಟ್ಟಾರಕ ಎಂಬುವನ ಹೆಸರಿದ್ದು ೧೭೨೪ ರಲ್ಲಿ ತ್ರೈವರ್ಣಿಕಾಚಾರವೆಂಬ ಕೃತಿಯನ್ನು ಬರೆದಂತೆ ತಿಳಿದು ಬರುತ್ತದೆ. ೬. ಪ್ರತಿಷ್ಠಾತಿಲಕ ಮತ್ತು ಪೂಜಾವಿಧಿ ಎಂಬ ಗ್ರಂಥವನ್ನು ಬರೆದಂತಹ ಸಮಂತಭದ್ರ. ಇವನು ಗೃಹಸ್ಥನಾಗಿದ್ದು ನೇಮಿಚಂದ್ರನ ತಮ್ಮನ ಮಗನಾಗಿದ್ದನೆಂಬುದಾಗಿ ಭಾವಿಸ ಲಾಗಿದೆ. ಆದರೆ ನಮ್ಮ ಶಾಸನಗಳಲ್ಲಿ ಮತ್ತು ಗ್ರಂಥಗಳಲ್ಲಿ ದೊರೆಯುವ ಸಮಂತಭದ್ರರು ಇತಿಹಾಸ ಪ್ರಸಿದ್ಧರಾದ ‘ಸ್ವಾಮಿ ಎಂಬ ಅಭಿದಾನವನ್ನು ಹೊಂದಿದ್ದ ಸ್ವಾಮಿ ಸಮಂತ ಭದ್ರಾಚಾರ್ಯರು. ಇವರ ಕಾಲ ಕ್ರಿ.ಶ.೨ನೆಯ ಅಥವಾ ೩ನೆಯ ಶತಮಾನವಿರಬೇಕೆಂದು ವಿದ್ವಾಂಸರು ನಿರ್ಧರಿಸಿದ್ದಾರೆ. ಜೈನದರ್ಶನದಲ್ಲಿ ಬಹುಶಃ ಕುಂದಕುಂದರ ನಂತರ ಅಷ್ಟೇ ಗೌರವ ಪಡೆದುಕೊಂಡವರೆಂದರೆ ಸಮಂತಭದ್ರರು.

ಅನುಶ್ರುತಿಯ ಪ್ರಕಾರ ಸ್ವಾಮಿ ಸಮಂತಭದ್ರಾಚಾರ್ಯರು ಕ್ಷತ್ರಿಯ ವಂಶದಲ್ಲಿ ಜನಿಸಿದರು. ‘ಇತಿ ಶ್ರೀ___ಫಣಿಮಂಡಲಾಲಂಕಾರ ಸ್ಯೋರಗಪುರಾಧಿಪ ಸೂನೋಃ ಶ್ರೀ ಸ್ವಾಮಿ ಸಮಂತಭದ್ರಮುನೇಃ ಕೃತೌ ಆಪ್ತಮೀಮಂಸಾಯಾಮ್

[1] ‘ಇತಿ ಮಂಡಲಾ ಲಂಕಾರ ಸ್ಯೋರಗಪುರಾಧಿಪ ಸೂನುನಾ ಶಾಂತಿವರ್ಮ ನಾಮಾ ಶ್ರೀಸಮಂತ ಭದ್ರೇಣಎಂಬುದರಿಂದ ಇವರ ಮೂಲ ಹೆಸರು ಶಾಂತಿವರ್ಮನೆಂದು ತಂದೆ ಫಣಿಮಂಡಲದ ಉರಗಪತಿಯೆಂದು ತಿಳಿದು ಬರುತ್ತದೆ. ಇವರು ಕದಂಬ ರಾಜವಂಶ ದವರಾಗಿರಬೇಕೆಂದು ವಿದ್ವಾಂಸರು, ಇತಿಹಾಸ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ‘ಈ ಉರಗ ಪುರವು ಪಾಂಡ್ಯ ದೇಶದ ಪ್ರಾಚೀನ ರಾಜ್ಯಧಾನಿಯಾಗಿದ್ದು.  ಈಗಿನ ತಿರುಚನಾಪಳ್ಳಿಯ ಸಮೀಪದ ಉರೈಯೂರುಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ‘ಭೀಮರಥಿ ಕೃಷ್ಣವೇಣಿ ತೊಱೆಗಳ ಮಧ್ಯ ವಿಷಯದಲ್ಲಿರುವ ಉತ್ಕಾಲಿಕಾ ಗ್ರಾಮದೊಳುದ್ಭವಿಸಿದ ಸಮಂತಭದ್ರಾಚಾರ್ಯರೆಂಬ ಯತಿಪತಿಗಳು ಮಣುವಕ ಹಳ್ಳಿಯೊಳನಶನಾದಿ ತಪದಿಂ ಕ್ರಿಯಾಯುಕ್ತರಾಗಿರಲ್ಎಂಬ ವಿವರಣೆ ದೇವಚಂದ್ರನ ರಾಜಾವಳಿ ಕಥೆ ಮತ್ತು ಪೂಜ್ಯಪಾದ ಚರಿತೆಗಳಲ್ಲಿ ಬರುತ್ತಿದ್ದು ಸಮಂತ ಭದ್ರರು ತಪಸ್ಸು ಮಾಡಿದರೆನ್ನಲಾದ ಈ ‘ಮಣುವಕಹಳ್ಳಿಯ ಬಗ್ಗೆ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಬೆಳಗಾವಿ ಜಿಲ್ಲೆಯ ಸೌದತ್ತಿಯಿಂದ ಉತ್ತರಕ್ಕೆ ಆರು ಮೈಲು ದೂರದಲ್ಲಿರುವ ಮುನವಳ್ಳಿಯೇ ಈ ‘ಮಣುವಕಹಳ್ಳಿಎಂಬುದಾಗಿ ದ.ರಾ.ಬೇಂದ್ರೆಯವರು, ಆದರೆ ಕೃಷ್ಣಾ ಹಾಗೂ ಭೀಮಾ ನದಿಗಳ ಮಧ್ಯದ ಹಳ್ಳಿ ಇದಾದುದರಿಂದ ಇದು ಬಿಜಾಪುರ ಜಿಲ್ಲೆಯ ಮುನವಳ್ಳಿಯೇ ಆಗಿರಬಹುದೆಂದು ಡಾ.ಎಂ.ಎಂ.ಕಲಬುರ್ಗಿಯವರು ಅಭಿಪ್ರಾಯ ಪಟ್ಟಿದ್ದಾರೆ”.[2] ಆದರೆ ಇಂದ್ರನಂದಿಯ ಶ್ರುತಾವತಾರದಲ್ಲಿ ಸಮಂತಭದ್ರರು ಬನವಾಸಿ ಪ್ರಾಂತದ ಅಸಂದಿಯವರೆನ್ನಲಾಗಿದೆ. ಈ ಉತ್ಕಾಲಿಕಾ ಗ್ರಾಮ ಮತ್ತು ಮಣುವಕವಲ್ಲಿಯಲ್ಲಿ ಗುರು ಪರಂಪರೆಯಿಂದ ಬಂದ ಸಿದ್ಧಾಂತದ ಉಪದೇಶವನ್ನು ಶುಭನಂದಿ ಮತ್ತು ವೀರನಂದಿ ಗುರುಗಳಿಂದ ಪಡೆದು ಬಪ್ಪದೇವ ಷಟ್ಖಂಡಾಗಮ ವ್ಯಾಖ್ಯಾನ ರಚನೆ ಮಾಡಿದನೆಂದು ಶ್ರುತಾವತಾರದಲ್ಲಿ ಹೇಳಿದೆ. ಸಮಂತಭದ್ರರಿಂದ ರಚಿತವಾದ ವ್ಯಾಖ್ಯಾನವು ಗುರು ಪರಂಪರಾಗತವಾಗಿ ಅಲ್ಲಿ ರಕ್ಷಿತವಾಗಿದ್ದು ಅದು ಬಪ್ಪದೇವ ಗುರುವಿಗೆ ದೊರೆಯಿತೆಂದು ವ್ಯಕ್ತವಾಗುವುದು. ಈ ಎಲ್ಲ ಕಾರಣಗಳಿಂದ ಕರ್ನಾಟಕವು ಸಮಂತಭದ್ರರ ಸಾಹಿತ್ಯ ರಚನಾ ಕಾರ್ಯದ ಪ್ರಧಾನ ಕೇಂದ್ರವಾಗಿತ್ತೆಂದು ಅಧಿಗತವಾಗುವುದು”.[3]

ಕದಂಬರ ರಾಜ್ಯಧಾನಿ ಬನವಾಸಿ ಪ್ರಾಚೀನ ಕಾಲದಲ್ಲಿ ಜೈನ ಕೇಂದ್ರವಾಗಿದ್ದು, ಕ್ರಿ.ಶ.೩ನೆಯ ಶತಮಾನದಲ್ಲಿ ಬನವಾಸಿಯಲ್ಲಿ ಸಮಂತಭದ್ರರ ಆರಾಧ್ಯ ತೀರ್ಥಂಕರ ಚಂದ್ರಪ್ರಭ ಸ್ವಾಮಿಯ ಚೈತ್ಯಾಲಯವಿದ್ದುದಾಗಿ, ಈ ಚೈತ್ಯಾಲಯದಲ್ಲಿ ಸಮಂತಭದ್ರರು ತಮ್ಮ ಪ್ರಿಯ ತೀರ್ಥಂಕರನಾದ ಚಂದ್ರಪ್ರಭ ಸ್ವಾಮಿಯ ಹೆಸರಿನಿಂದ ಚಂದ್ರಕುಲ ಅನ್ವಯವನ್ನು, ಬನವಾಸಿ ಗಚ್ಛವನ್ನು ಸ್ಥಾಪಿಸಿದಂತೆಯೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

‘ಕನ್ನಡ ನಾಡಿನ ಬನವಾಸಿ ಪ್ರಾಂತವು ಸಮಂತಭದ್ರರ ಪ್ರಧಾನ ವಿಹಾರ ಕ್ಷೇತ್ರವಾಗಿದ್ದಿತ್ತೆಂದು ಮತ್ತು ಇದರಿಂದಾಗಿ ಇವರಿಂದ ಸ್ಥಾಪಿತವಾದ ಗಚ್ಛಕ್ಕೆ ‘ವನವಾಸಿ ಗಚ್ಛಎಂಬ ಹೆಸರು ಬಂದಿದೆ ಎಂದು ಗ್ರಹಿಸಬಹುದಾಗಿದೆ. ಸಮಂತಭದ್ರರು ಅಸಂದಿಯಲ್ಲಿ ಷಟ್ಖಂಡಾಗಮದ ಐದು ಖಂಡಗಳಿಗೆ ೪೮,೦೦೦ ಶ್ಲೋಕ ಪ್ರಮಾಣದ ವ್ಯಾಖ್ಯಾನವನ್ನು, ಅನಂತರ ೨ನೆಯ ಸಿದ್ಧಾಂತದ ವ್ಯಾಖ್ಯಾನ ಮಾಡುವವರಾಗಿ ಭಸ್ಮಕ ರೋಗ ಹುಟ್ಟಿದಂತೆ___ ಶುದ್ಧೀಕರಣ ನಿಮಿತ್ತ ಸಧರ್ಮದಿಂದ ಪ್ರತಿಷಿದ್ಧ ರಾದರೆಂದೂ ಇಂದ್ರನಂದಿಯ ಶ್ರುತಾವತಾರದಲ್ಲಿ ಹೇಳಲಾಗಿದೆ. ಆದರೆ ಪೂಜ್ಯಪಾದ ಚರಿತೆಯಲ್ಲಿ ಉತ್ಕಲಿಕಾ ಗ್ರಾಮದ ಮಣುವಕ ಹಳ್ಳಿಯಲ್ಲಿ ಇರುವಾಗ ಅವರಿಗೆ ಭಸ್ಮಕವ್ಯಾದಿ ಹುಟ್ಟಿತು. ಭಸ್ಮಕವ್ಯಾದಿಯ ನಿವಾರಣೆಯ ಬಳಿಕ ಪುನರ್ದೀಕ್ಷೆಗೊಂಡು “ಸಿದ್ಧಾಂತಾಗಮ ಷಟ್ಖಂಡ ಪಂಚಕವನ್ನುದ್ಧರಿಸಿದ ನಷ್ಟ ಜಲದಿ ಬುದ್ಧಿಯಿಂ ಶತಸಾವಿರ ಗ್ರಂಥವನು ಪೇಳಿ ಸಿದ್ಧಾಂತಿಕನೆನಿಸಿದನೂ || ಬಂಧವ ಮಾಡಿ ಪೇಳ್ದನು ಮೃದುವಿಂದತಿ ಸುಂದರ ಸಂಸ್ಕೃತದೊಳಗೆ | ಬಂಧುರದ್ರವ್ಯಶುದ್ದಿ ಕರಣಗಳಾನಂದದಿ ಬರೆದನಾ ಮುನಿಪಎಂದು ಸಮಂತಭದ್ರರು ಉತ್ಕಲಿಕಾ ಗ್ರಾಮದಲ್ಲಿದ್ದಂತೆ ಹೇಳಿದೆ. “ಉಚಿತದಾ ಮಧ್ಯ ವಿಷಯದಿ ಉತ್ಕಲಿಕಾ ಗ್ರಾಮ ದೊಳಿರುತಿಹ___ಮಣುಕವಲ್ಲಿಯ ಗ್ರಾಮ ಚಿತ್ಕಳೆಯಂತದರಿಳಗೆ ಎಂಬ ಪೂಜ್ಯಪಾದ ಚರಿತೆಯ ಹೇಳಿಕೆಯಲ್ಲಿ ಪ್ರಮಾದವೇರ್ಪಟ್ಟಿರುವಂತೆ ಕಂಡು ಬರುತ್ತದೆ. ಸಮಂತಭದ್ರರ ಹೆಸರಿನೊಡನೆ ಇಲ್ಲಿ ಹೇಳಿರುವ ಉತ್ಕಲಿಕಾ ಗ್ರಾಮ ಮತ್ತು ಮಣುವಕವಳ್ಳಿ ಗ್ರಾಮಗಳನ್ನು ಬಪ್ಪದೇವ ಗುರುವಿನ ಹೆಸರಿನೊಡನೆ ಹೇಳಿದೆ ಯಲ್ಲದೆ ಶ್ರುತಾವತಾರದಲ್ಲಿಯೂ ಬಪ್ಪದೇವ ಗುರುವಿನ ಹೆಸರಿನೊಡನೆ ಇದೇ ಗ್ರಾಮ ಊರುಗಳ ಹೆಸರುಗಳನ್ನು ಹೇಳಿದೆ. ಹಿಂದೆ ಶ್ರುತಾವತಾರದ ಹೇಳಿಕೆಯಾಧಾರದಿಂದ ಸ್ಪಷ್ಟಪಡಿಸಿರುವಂತೆ ಅಸಂದಿಯೇ ಇವರ ಸ್ಥಳವಾಗಿದೆಯೆಂದು ಪರಿಗಣನೆ ಮಾಡಬಹುದಾಗಿದೆ[4] ಎಂದು ಎಂ.ಡಿ.ವಸಂತರಾಜ್ ತೀರ್ಮಾನಿಸಿದ್ದಾರೆ.

ಪ್ರಭಾಚಂದ್ರ (೧೧ನೇ ಶತಮಾನ) ಮತ್ತು ನೇಮಿದತ್ತರ ಕಥಾಕೋಶದಲ್ಲಿಯ “ಕಾಂಚ್ಯಾಂ ನಗ್ನಾಟಕೋಹಃ ಎಂಬ ಮಾತು ಕಂಚಿ ನಗರದೊಂದಿಗಿನ ಇವರ ಸಂಬಂಧವನ್ನು ಸೂಚಿಸುತ್ತದೆ.

ರಾಜಾವಳಿ ಕಥಾಸಾರದಲ್ಲಿ ಬರುವ ಸಮಂತಭದ್ರರ ಕಥೆ: ಕಾಂಚಿಪುರಿಯೊಳು ಶಿವಕೋಟಿ ಮಹಾರಾಜನೆಂಬಾತನನುಜಂ ಶಿವಾಯನಂ ಬೆರಸು ರಾಜ್ಯಂಗೈಯುತ್ತೆ ಕೋಟಿಲಿಂಗ ಸ್ಥಾಪನೆಗೈಯ್ದು ಅವಱೋಳು ಭೀಮಲಿಂಗದ ಗುಡಿಯೊಳು ದಿನವೊಂದಕ್ಕೆ ದ್ವಾದಶ ಖಂಡುಗ ತಂಡುಲದ ಅನ್ನಮಂ ವಿನಿಯೊಗಂ ಮಾಡಿಸುರ್ಪಿನಮಿತ್ತ ಭೀಮರಥಿ ಕೃಷ್ಣವೇಣಿ ತೊಱೆಗಳ ಮಧ್ಯ ವಿಷಯದಲ್ಲಿರುವ ಉತ್ಕಲಿ ಗ್ರಾಮದೊಳುದ್ಭವಿಸಿದ ಸಮಂತಭದ್ರಾಚಾರ್ಯರೆಂಬ ಯತಿ ಪತಿಗಳು ಮಣುವಕಹಳ್ಳಿ  ಯೊಳನಶನಾದಿ ತಪದಿಂ ಕ್ರಿಯಾಯುಕ್ತರಾಗಿರಲೊಂದು ಕಾರಣಮಾಗೆ ಭಸ್ಮಕವಾದಿ ಪುಟ್ಟಿಯದಕ್ಕೆ ಪ್ರತಿಕಾರವಿಲ್ಲದುದಱಂ ಸ್ವಗುರುವ ಸಮೀಪನೆಯ್ದಿ-

ಆರ್ಯಾ|| ಉಪಸರ್ಗೇ ದುರ್ಭಿಕ್ಷೇ ಜರಸಿರುಜಾಯಾಂಚ ನಿಷ್ಪ್ರತೀಕಾರೇ
ಧರ್ಮಾಯ ತನುವಿಮೋಚನಮಾಹುಸ್ಸಲ್ಲೇಖನಾಮಾರ್ಯಃ

ಸಲ್ಲೇಖನಮಂ ಬೇಡುವುದುಂ ಗುರುಗಳೆಂದರ್ ನಿಮ್ಮಿಂದ ಮುಂದೆ ಧರ್ಮೋದ್ಧಾರ ಮಪ್ಪುದಱಂದೆಲ್ಲಿಯಾನುಂ ತೃಪ್ತಿಯಪ್ಪಂತು ಭುಂಜಿಸಿ ರೋಗೋಪಶಮಮಾಗೆ ಪುನರ್ದಿಕ್ಷೆಗೊಳ್ವುದೆಂಬುದಂ ಕಾಂಚಿಪುರಮನೆಯ್ದಿ ಶಿವಕೋಟಿಮಹಾರಾಜನಂ ಕಂಡಾಶೀರ್ವಾದಂಗುಡಲವರ ಶರೀರದ ಭದ್ರಕಾರಮಂ ವಾಗ್ಜಾಲಮಂ ನೋಡಿ ಆಶ್ಚರ್ಯಮಾಗೆ ಶಿವನೆಂದೆ ಬಗೆದು ನಮಸ್ಕರಿಸಿ ನೀಂ ಮಾಳ್ಪಂ ಧರ್ಮಮೇನೆಂಬುದುಂ ತನ್ನ ಶಿವಭಕ್ತಿ ಶಿವಾಚಾರಮಂ ಕೋಟಿಲಿಂಗಾರಾಧನೆಯಂ ಭೀಮಲಿಂಗಕ್ಕೆ ಬಿಟ್ಟಿಹ ಪಡಿತರಮಂ ಪೇಳೆ ನಿನ್ನ ಧರ್ಮಮನಾ ಕೂಳೂಮಂ ಶಿವಾರ್ಪಣಂ ಮಾಳ್ಪೆನೆಂದು ಪನ್ನೆರಡು ಖಂಡುದಕ್ಕಿಯನ್ನಕ್ಕೆ ತಕ್ಕ ವ್ಯಂಜನಪದಾರ್ಥಮನಿಕ್ಕಿಸಿ ಕವಾಟಬಂಧಮಂ ಮಾಡಿ ಪೋಗವೇಳ್ದು ತಾನುಮಾ ಭತ್ತಮೆಲ್ಲಮನೋಂದಗಳುಳಿಯದಂತೆ ತನ್ನುದರಾಗ್ನಿ ಗಾಹುತಿಗೊಟ್ಟು ತಣಿಪಿ ಕದಮಂ ತೆರೆಯಲತ್ಯಶ್ಚರ್ಯಂಬಟ್ಟು ಮರುದಿವಸಂ ರಾಶಿಯೊಳರ್ಧಾಂಶದೊಳೊಂದಂಶಮುಳಿದೊಡಿದಿದೇಕಡಕುಳಿದುದೆಂದು ಬೆಸಗೊಳೆ ದೇವರು ಪ್ರಸಾದ ಶೇಷಾನ್ನಮನಿರಿಸಿ ದರೆಂದೊಡಂ ಬೆಳಗಿನೊಳ್ ನಾಲ್ಕರೊಳೊಂದಂಶ ಮುಳಿಯೆ ಪರೀಕ್ಷಿಸಲಾರೈದಂ ನೋಡಿ ತಿಳಿದೈದನೆ ದಿವಸಂ ಚತುರಂಗಬಲಂಬೆರಸರಸಂ ಮೂವಳಸು ಸುತ್ತಿ ಬಾಗಿಲಂ ತೆರೆವುದೆಂದು ಕಲಕಲರವಂ ಪೊಣ್ಮೆ ತದುಪಸರ್ಗಂ ಪಿಂಗುವನ್ನಮಾಹಾರ ಶರೀರನಿವೃತ್ತಿಗೆಯ್ದು ಸರ್ವಜ್ಞನ ವಸ್ತುಸ್ತವಾಗಿ ತ್ರಿವಿಧ ಸ್ತೋತ್ರಮ ನೇಕ ಚಿತ್ತದಿ ವೃಷಭಾದಿ ಇಪ್ಪತ್ತುನಾಲ್ವರ್ಗಮುಪಜಾತಿವಂಶಸ್ಥ ಸ್ಕಂದ ರಥೋದ್ಧತೆ ಮೊದಲಾದ ನಾನಾ ಜಾತಿವೃತ್ತಪದ್ಯಗಳಿಂ ಪೇಳಲ್ತೊಡಗಿಯಷ್ಟಮತೀರ್ಥಕರ ಚಂದ್ರಪ್ರಭ ಸ್ವಾಮಿಗೈದು ಸ್ತುತಿಯಂ ಪೇಳಿ ಭೀಮಲಿಂಗಮನೀಕ್ಷಿಸುವುದುಂ ಜಿನ ಶಾಸನದೇವಿಯಿಂದಾ ಲಿಂಗದೊಳೆ ಮೂರು ಪುರುಷ ಪ್ರಮಾಣದ ಸುವರ್ಣಮಯ ಚಂದ್ರಲಾಂಛನ ಮಪ್ಪರ್ಹದ್ಭಟ್ಟಾರಕಪ್ರತಿಮೆಯು ಯಕ್ಷ ಯಕ್ಷಿ ಪ್ರತಿಮೆಯಿಂದಷ್ಟ ಮಹಾಪ್ರಾತಿಹಾರ್ಯ ದೊಡನೆ ಜಾಜ್ವಲ್ಯಮಾನಮಾಗೆ ಸೂರ್ಯೋದಯಮಾದಂತುದ್ಭವಿಸಿ ತೊರುವುದುಂ ಮುನೀಶ್ವರಂ ಬಾಗಿಲಂ ತೆರೆದುಳಿದ ವೀತರಾಗನ ನುತಿಗೆಯ್ಯುತ್ತೆನಿಂದಿರ್ಪುದುಂ ಆ ಮಹಾತ್ಮಕ್ಕತ್ಯಾಶ್ಚರ್ಯಮಾಗೆ ಶಿವಕೋಟಿ ಮಹಾರಾಜಂ ಭವ್ಯನಪ್ಪುದರಿಂ ನಿಜಾನುಜಂ ವೆರೆಸಾ ಮುನಿಮುಖ್ಯರ ಶ್ರೀಪಾದಕ್ಕಂ ಪೊಡೆವಟ್ಟಿಪ್ಪುದುಂ ಮಹಾವೀರ ವರ್ಧಮಾನ ಪರ್ಯಂತರ ನುತಿಗೆಯ್ದು ಕೈಯೆತ್ತಿಕೊಂಡು ಪರಸೆ ಅರಸಂ ಸದ್ಧರ್ಮಸ್ವರೂಪಮಂ ಸವಿಸ್ತರಂ ಕೇಳ್ದು ಸಂಸಾರ ಶರೀರಭೋಗನೀರ್ವೇಗದಿಂ ಶ್ರೀಕಂಠನೆಂಬ ಸುತಂಗೆ ರಾಜ್ಯಮನಿತ್ತು ಶಿವಾಯನಂಗೂಡಿಯಾ ಮುನಿಪರಲ್ಲಿಯೆ ಜಿನದೀಕ್ಷೆಯನಾಂತು ಶಿವ ಕೊಟ್ಯಾಚಾರ್ಯರಾಗಿ ರತ್ನಮಾಲಾದ್ಯನೇಕ ಶಾಸ್ತ್ರ  ಪ್ರವರ್ಧಕರಾದರಾ ಮಹಾತ್ಮ್ಯದಿಂ ಕೆಲಂಬರಣುವ್ರತಧಾರಿಗಳಾದರ್, ಕೆಲರ್ ಸಮ್ಯಕ್ತ್ವಮಂಕೈಕೊಂಡರಾ ಭಾವಿತೀರ್ಥಕರರಪ್ಪ ಸಮಂತಭದ್ರಸ್ವಾಮಿಗಳ್ ಪುನರ್ದೀಕ್ಷೆಗೊಂಡು ತಪಸ್ಸಾಮರ್ಥ್ಯದಿಂ ಚತುರಂಗುಲ ಚಾರಣತ್ವಮಂ ಪಡೆದು ರತ್ನಕರಂಡಕಾದಿ ಜಿನಾಗಮ ಪುರಾಣಂ ಪೇಳಿ ಸ್ಯಾದ್ವಾದ ವಾದಿಗಳಾಗಿ ಸಮಾಧಿವಡೆದರ್[5]-ರಾಜಾವಳಿ ಕಥಾಸಾರದಲ್ಲಿ ಹೇಳಿರುವಂತೆ “ಸಮಂತ ಭದ್ರರು ತಮಗೆ ಹುಟ್ಟಿದ ಭಸ್ಮಕ ರೋಗವನ್ನು ನಿವಾರಿಸಿಕೊಳ್ಳಲು ಕಂಚಿಗೆ ಹೋಗಿ ಶಿವಕೋಟಿ ಮಹಾರಾಜನಲ್ಲಿ ಶಿವಾಲಯದ ಪುರೋಹಿತರಾಗಿ ದೇವಾರ್ಪಿತ ನೈವೇದ್ಯದ ಮೂಲಕ ತಮ್ಮ ಭಸ್ಮಕ ವ್ಯಾಧಿಯನ್ನು ಪರಿಹರಿಸಿಕೊಳ್ಳುತ್ತಿದ್ದಲ್ಲಿ ಒಂದು ದಿನ ರಹಸ್ಯ ಪ್ರಕಟವಾಗುತ್ತಿದ್ದಂತೆ ೨೪ಜನ ತೀರ್ಥಂಕರರನ್ನು ನಾನಾ ವೃತ್ತ ಜಾತಿಗಳಿಂದ ಸ್ತುತಿಸುತ್ತಾ ಲಿಂಗವನ್ನು ದಿಟ್ಟಿಸಿ ನೋಡಲಾಗಿ ಜಿನಶಾಸನ ದೇವಿಯ ಕೃಪೆಯಿಂದ ಲಿಂಗದೊಳು ಮೂರು ಪುರುಷ ಪ್ರಮಾಣದ ಯಕ್ಷಯಕ್ಷಿಯರೊಡಗೂಡಿ ಚಂದ್ರಪ್ರಭ ತೀರ್ಥಂಕರನ ಪ್ರತಿಮೆ ಮೂಡಲು ಅದನ್ನು ಶಿವಕೋಟಿ ಮಹಾರಾಜನಿಗೆ ತೋರಿಸಲಾಗಿ ಶಿವಕೋಟಿಗೆ ನಿರ್ವೇಗಂ ಪುಟ್ಟಿ ಶ್ರೀಕಂಠನೆಂಬ ಮಗನಿಗೆ ರಾಜ್ಯವನ್ನು ಕೊಟ್ಟು ಜಿನದೀಕ್ಷಿತನಾಗುತ್ತಿದ್ದಂತೆ ಸಮಂತಭದ್ರರೂ ಪುನರ್ ದೀಕ್ಷೆಗೊಳ್ಳುತ್ತಾರೆ. ಸಮಂತಭದ್ರರ ಮಹಿಮೆಗೆ ಮೆಚ್ಚಿದ ಕಂಚಿಯ ಶಿವಕೋಟಿ ಮಹಾರಾಜ ಜಿನದೀಕ್ಷೆಯನ್ನು ತೆಗೆದುಕೊಂಡು ಶಿವಕೋಟ್ಯಾಚಾರ್ಯರಾಗಿ ರತ್ನಮಾಲ ಮೊದಲಾದ ಅನೇಕ ಶಾಸ್ತ್ರ ಗ್ರಂಥಗಳನ್ನು ಬರೆದರೆಂದು ಹೇಳಲಾಗಿದೆ. ಇಲ್ಲಿ ಎಲ್ಲಕ್ಕೂ ಮುಖ್ಯವಾಗಿ ಗಮನ ಸೆಳೆಯುವ ಮಾತೆಂದರೆ ಸ್ಯಾದ್ವಾದಿಗಳಾಗಿ ಸಮಾಧಿಯಂ ಪಡೆದರೆಂಬುದು. ಇದೇ ಐತಿಹ್ಯವನ್ನು ಜಿನಸೇನ ದೇಶಿವ್ರತಿಯು ತನ್ನ ವರ್ಧಮಾನ ಪುರಾಣದ ಆದಿಯಲ್ಲಿ ಈ ರೀತಿ ದಾಖಲಿಸುತ್ತಾನೆ.

ಭೂಮಿಗಧಿಕ ದ್ರಾಕ್ಷಾನಾಮ ಗ್ರಾಮದ ಭೀಮಲಿಂಗದ ಕಟ್ಟನೊಡೆದು
ಸ್ವಾಮಿ ಚಂದ್ರಪ್ರಭ ಜ್ವಾಲಿಯಮ್ಮನ |ನಾ ಮಹಾಜನಕ್ಕೆಲ್ಲ ತೋರಿ
(೪೦)

ಶಿವಕೋಟಿ ಭೂಪನ ಪಿರಿದು ಮಿಥ್ಯತ್ವವ | ತವಿಸಿ ಸಮ್ಯಕ್ತ್ವ ಬಲಿಸಿ
ಭುವನ ಭುಂಭುಕನ ಸಮಂತ ಭದ್ರಾಚಾರ್ಯನ | ಹವಣ ವರ್ಣಿಪ ಕವಿ ಯಾರು (೪೧)
ಜಿನಸೇನ ದೇಶಿವ್ರತಿ (ಕ್ರಿ..೧೬೦೦)ವರ್ಧಮಾನ ಪುರಾಣಂ)     

ಆಚಾರ್ಯ ಪ್ರಭಾಚಂದ್ರರ ಕಥಾಕೋಶದಲ್ಲಿ ದರ್ಶನ ಮತ್ತು eನಗಳ ಉದ್ಯೋತನ ಮಾಡುವಲ್ಲಿ ಸಮಂತಭದ್ರರ ಕಥೆಯನ್ನು ಹೇಳಿದ್ದಾರೆ. ಅದರ ಅನುಸಾರವಾಗಿ ಭಸ್ಮಕವ್ಯಾಧಿ ಪ್ರಾಪ್ತವಾದ ಮೇಲೆ ಸಮಂತಭದ್ರರು ವಾರಣಾಸಿಯ ರಾಜನಾಗಿದ್ದ ಶಿವಕೋಟಿಯ ಆಸ್ಥಾನಕ್ಕೆ ಹೋಗಿ (ದೇವಚಂದ್ರನ ರಾಜಾವಳಿ ಕಥೆಯಲ್ಲಿ ಕಂಚಿಯ ಶಿವಕೋಟಿ ಮಹಾರಾಜ?) ಶಿವಲಿಂಗ ಸ್ಪೋಟ______ ಯಥಾಪ್ರಕಾರ ರಾಜಾವಳಿ ಕಥೆಯನ್ನೆ ಹೋಲುತ್ತಿದ್ದು ರಾಜ್ಯವನ್ನು ತ್ಯಾಗಮಾಡಿದ ಶಿವಕೋಟಿ ಸಮಂತಭದ್ರರಿಂದ ದೀಕ್ಷಿತನಾಗಿ ಅನಂತರ ಸಕಲ ಶ್ರುತವನ್ನು ಅಧ್ಯಯನ ಮಾಡಿ ಲೋಹಾರ್ಯನಿಂದ ರಚಿತವಾದ ೮೪,೦೦೦ಶ್ಲೋಕ ಪ್ರಮಾಣವಿದ್ದ ಗ್ರಂಥವನ್ನು ಸಂಕ್ಷೇಪಗೊಳಿಸಿ ಮೂಲಾರಾಧನಾ ಎಂಬ ಹೆಸರಿನಲ್ಲಿ ಎರಡುವರೆ ಸಾವಿರ ಶ್ಲೋಕ ಪ್ರಮಾಣದ ಗ್ರಂಥರೂಪಕ್ಕಿಳಿಸಿದಂತೆ ಮಾಹಿತಿ ನೀಡುತ್ತದೆ. ಆದರೆ ಎ.ಎನ್.ಉಪಾಧ್ಯೆ ಮುಂತಾದ ವಿದ್ವಾಂಸರು ಮೂಲಾರಾಧನ ಗ್ರಂಥ ಕರ್ತೃವಾದ ಶಿವಕೋಟಿಯೇ ಬೇರೆ, ಸಮಂತಭದ್ರರ ಶಿಷ್ಯರಾಗಿದ್ದ ರತ್ನಮಾಲ ಮೊದಲಾದ ಗ್ರಂಥಗಳನ್ನು ಬರೆದ ಶಿವಕೋಟಿಯೇ ಬೇರೆ ಎಂಬುದಾಗಿ ತರ್ಕಿಸುತ್ತಾರೆ. (ಎ.ಎನ್.ಉಪಾಧ್ಯೆಯವರು ಮೂಲಾರಾಧನ ಗ್ರಂಥ ಕರ್ತೃ ಶಿವಕೋಟಾಚಾರ್ಯರು ಕುಂದಕುಂದ ಮತ್ತು ವಟ್ಟಕೇರರ ಕಾಲದವರೆಂದು ಊಹಿಸುತ್ತಾರೆ.)

ಶ್ರವಣಬೆಳ್ಗೊಳದ ಮಲ್ಲಿಷೇಣ ಪ್ರಶಸ್ತಿಯೆಂದು (ಕ್ರಿ.ಶ.೧೦೫೦) ಖ್ಯಾತವಾದ ಈ ಶಾಸನದಲ್ಲಿಯೂ

ವನ್ದ್ಯೋ ಭಸ್ಮಕ ಸಾತ್ಕೃತಿಪಟುಃ ಪದ್ಮಾವತೀ ದೇವತಾ
ದತ್ತೋದಾತ್ತ ಪದಸ್ವಮನ್ತ್ರ ವಚನ ವ್ಯಾಹೂತ ಚನ್ದ್ರಪ್ರಭಃ |
ಆಚಾರ್ಯಸ್ಯ ಸಮನ್ತಭದ್ರಗಣಭೃದ್ಯೇನೇಕ ಕಾಲೇ ಕಲೌ
ಜೈನಂ ವರ್ತ್ಮ ಸಮನ್ತಭದ್ರಮಭವದ್ಭದ್ರಂ ಸಮನ್ತಾನ್ಮುಹುಃ ||

ಇಲ್ಲಿಯು ಸಮಂತಭದ್ರರ ಭಸ್ಮಕ ವ್ಯಾಧಿಯ ಪ್ರಸ್ತಾಪ ಮತ್ತು ಅದನ್ನು ಹೋಗಲಾಡಿಸಿ ಕೊಂಡು ಪದ್ಮಾವತೀ ಯಕ್ಷಿ- ಚಂದ್ರಪ್ರಭ ತೀರ್ಥಂಕರರ ಕೃಪಾ ಕಟಾಕ್ಷಕ್ಕೆ ಒಳಗಾದದ್ದು, ಮುಂದಿನ ದಿನಗಳಲ್ಲಿ ಮುನಿ ಸಂಘದ ನಾಯಕತ್ವವನ್ನು ವಹಿಸಿ ಜೈನಧರ್ಮದ ಪ್ರಸಾರಕ್ಕೆ ತೊಡಗಿ ಅಪಾಯದ ಅಂಚಿನಲ್ಲಿದ್ದ ಜೈನಧರ್ಮವನ್ನು ಸರ್ವ ಹಿತಕಾರಿಯಾಗಿ ಪುನಃ ಭದ್ರಗೊಳಿಸಿದ್ದು- ಹೀಗೆ ಸಮಂತಭದ್ರರ ಇತಿವೃತ್ತಕ್ಕೆ ಸಂಬಂಧಿಸಿದ ಅನೇಕ ಅಂಶಗಳು ಈ ಶಾಸನದಲ್ಲಿ ದಾಖಲಾಗಿವೆ.

ಸಮಂತಭದ್ರರಿಗೆ ‘ಸ್ವಾಮಿಎಂಬ ಅಭಿದಾನ ಅರ್ಥಪೂರ್ಣವಾದುದು. ವಿದ್ಯಾ ನಂದರು, ವಾದಿರಾಜಸೂರಿಗಳು, ಆಶಾಧರಸೂರಿಗಳು ಇವರನ್ನು ‘ಸ್ವಾಮಿಎಂದೇ ಸಂಬೋಧಿಸಿದ್ದಾರೆ. ೧೪ನೆಯ ಶತಮಾನದ ಕವಿಗಳಾದ ಹಸ್ತಿಮಲ್ಲ ಮತ್ತು ಅಪ್ಪಯಾರ್ಯ ಇವರು ‘ಮೂಲಸಂಘ ವ್ಯೊಮೇಂದುಃ ಎಂದು, ಶ್ರೀ ವಿದ್ಯಾನಂದ ಸ್ವಾಮಿಗಳು ಯುಕ್ತ್ಯನುಶಾಸನದ ಟೀಕೆಯ ಕೊನೆಯಲ್ಲಿ ‘ಪರೀಕ್ಷೆಕ್ಷಣ ಎಂದು, ಶ್ರವಣ ಬೆಳ್ಗೊಳದ ಶಾಸನ ನಂ.೪೦-೬೪ರಲ್ಲಿ ‘ಗಣತೋ ಗಣೇಶಃ ಎಂದು ‘ಸ್ವಾಮಿ ಸಮಂತಭದ್ರ ಎಂದು ‘ಜೈನಶಾಸ್ತ್ರ ಪ್ರಣೀತ ‘ತರ್ಕಿಕಾರ್ಕ ಮುಂತಾದ ವಿಶೇಷಣಗಳಿಂದ ಸ್ತುತಿಸಿವೆ. ಅನೇಕ ಸಂಸ್ಕೃತ ಕವಿಗಳು ಕನ್ನಡದ ಕವಿಗಳು ಶಾಸನಗಳು ಇವರ ವಾದ, ತರ್ಕ, ಪಾಂಡಿತ್ಯಗಳನ್ನು ಬಹುವಾಗಿ ಶ್ಲಾಘಿಸಿವೆ. ಹರಿಭದ್ರಸೂರಿ(ಶ್ವೇತಾಂಬರ) ತನ್ನ ‘ಅನೇಕಾಂತ ಜಯ ಪತಾಕದಲ್ಲಿ ಸಮಂತಭದ್ರರನ್ನು ‘ವಾದಿಮುಖ್ಯಎಂದು ಕರೆದು ಗೌರವಿಸಿದ್ದಾರೆ. (ದಿಗಂಬರ ಶ್ವೇತಾಂಬರರಿಬ್ಬರೂ ಮಾನ್ಯಮಾಡಿರುವ ಕೊನೆಯ ಆಚಾರ್ಯರೆಂದರೆ ಬಹುಶಃ ಸಮಂತಭದ್ರರೆ)

ಜೈನಧರ್ಮದ ಪುನರುತ್ಥಾನಕ್ಕಾಗಿ “ಕಾಲೇ ಕಲೌ ಜೈನಂ ವರ್ತ್ಮ ಸಮಂತ ಭದ್ರಮಭವದ್ಭದ್ರಂ ಸಮಂತಾನ್ಮುಹುಃ ಎನ್ನುವಂತೆ ಸರ್ವಹಿತಕಾರಿಯಾದ ಜೈನಧರ್ಮವು ಸಮಂತಭದ್ರರಿಂದಾಗಿ ಕಲಿಕಾಲದಲ್ಲಿ ಎಲ್ಲ ದೃಷ್ಟಿಯಿಂದಲೂ ಪುನಃ ಭದ್ರವಾಯಿತು.

ಅಕಲಂಕ ದೇವರು ತಮ್ಮ ಅಷ್ಟಶತಿಯಲ್ಲಿ ಹೇಳಿದಂತೆ ತೀರ್ಥ ಪ್ರಭಾವಿ ಕಾಲೇ ಕಲೌ-ಮಿಥ್ಯಾ ತತ್ತ್ವದ ಕಾಲದಲ್ಲಿಯೂ ಸಮಂತಭದ್ರರಿಂದಾಗಿ ಜೈನಧರ್ಮ ಪ್ರಕಾಶಿಸಿತು. ಹಾಗೆಂದೇ ಭಗವತ್ ಜಿನಸೇನಾಚಾರ್ಯರು ತಮ್ಮ ಹರಿವಂಶ ಪುರಾಣದಲ್ಲಿ ವಚಸ್ಸಮನ್ತಭದ್ರಸ್ಯ ವೀರಸ್ಯೇವ ವಿಜೃಮ್ಭತೇ| ಎಂದು, ಸಮಂತಭದ್ರರ ವಚನಗಳು ತೀರ್ಥಂಕರ ವಚನಗಳಂತೆ ಪ್ರಭಾವ ಯುಕ್ತವಾದುವೆಂದು ಹೇಳಿ ಸಮಂತಭದ್ರರನ್ನು ತೀರ್ಥಂಕರರಿಗೆ ಹೋಲಿಸುತ್ತಾರೆ. ಶ್ರೀ ಶಿವಕೋಟಾಚಾರ್ಯರು ತಮ್ಮ ರತ್ನಮಾಲಾದಲ್ಲಿ ಜಿನ ರಾಜೋದ್ಯಚ್ಛಾದಜಾಮ್ಬುಧಿ ಚನ್ದ್ರಮಾ ಜಿನ ಸಮುದ್ರಕ್ಕೆ ಚಂದ್ರನಂತವರು ಎಂದು ಕೊಂಡಾಡಿದ್ದಾರೆ. ಜೈನಧರ್ಮದ ಪ್ರಚಾರಕ್ಕಾಗಿ ದೇಶದ ನಾನಾ ಮೂಲೆ ಮೂಲೆಗಳಿಗೂ ಸುತ್ತಿದ ಸಮಂತಭದ್ರರು ಪಾಂಡಿತ್ಯಕ್ಕೆ ಹೆಸರಾದರು. ವಿಜಯವರ್ಣಿ ತನ್ನ ‘ಶೃಂಗಾರ ಚಂದ್ರಿಕಾದಲ್ಲಿ ಹೇಳಿರುವಂತೆ:

ಸಮಂತಭದ್ರಾದಿ ಮಹಾಕವೀಶ್ವರೈಃ ಕೃತ ಪ್ರಬಂಧೋಜ್ವಲ ಸತ್ಸರೋವರೇ|
ಲಸದ್ರಸಾಲಂಕೃತಿನೀರಪಂಕಜೇ ಸರಸ್ವತೀ ಕ್ರೀಡತಿ ಭಾವಬಂಧುರೇ||

ಸಮಂತಭದ್ರರ ಕಾವ್ಯಗಳಲ್ಲಿ ಸರಸ್ವತಿ ಕ್ರೀಡಿಸುತ್ತಾಳೆ ಎನ್ನುವ ಮಾತಿನಲ್ಲಿ ಸಮಂತಭದ್ರರ ಪಾಂಡಿತ್ಯದ ಅಗಾಧತೆ ಮನದಟ್ಟಾಗುತ್ತದೆ. ನರೇಂದ್ರಸೇನಾಚಾರ್ಯರು ಸಿದ್ಧಾಂತ ಸಾರ ಸಂಗ್ರಹದಲ್ಲಿ

ಶ್ರೀ ಮತ್ಸಮಂತ ಭದ್ರಸ್ಯ ದೇವಸ್ಯಾಪಿ ವಚೋನಘಮ್ |
ಪ್ರಾಣಿನಾ ದುರ್ಲಭಂ ಯದ್ವನ್ಮಾನುಷತ್ವಂ ತಥಾ ಪುನಾಃ ||

ಪ್ರಾಣಿಗಳು ಈ ಭವ ಪ್ರಪಂಚದಲ್ಲಿ ಮನುಷ್ಯತ್ವವನ್ನು ಹೊಂದುವುದು ಎಷ್ಟು ದುರ್ಲಬವೊ ಹಾಗೆಯೇ ಸಮಂತಭದ್ರರ ನಿರ್ದೂಷ ವಚನಗಳನ್ನು ಪಡೆಯುವುದು ಕಷ್ಟಸಾಧ್ಯ. ಅದನ್ನು ಹೊಂದಿದವನು ಸೌಭಾಗ್ಯಶಾಲಿ. ಸಮಂತಭದ್ರರನ್ನು ಕುರಿತು ಸಂಸ್ಕೃತದ ಕವಿಗಳು ಮಾತನಾಡಿದಷ್ಟೇ ಮನಃ ಪೂರ್ವಕವಾಗಿ ಕನ್ನಡ ಕವಿಗಳು ಮಾತನಾಡಿದ್ದಾರೆ. ನಾಗಚಂದ್ರನು ತನ್ನ ಮಲ್ಲಿನಾಥ ಪುರಾಣದಲ್ಲಿ ಹೇಳಿದಂತೆ “ಸಮಂತಭದ್ರ ಖ್ಯಾ|ತರ ಪದಪಾಂಸು ಕಿಡಿಸುಗಘ ಪಾಸುಂಗಳಂಎಂದು, ಮಹಾಕವಿ ಕಮಲಭವನು ಶಾಂತೀಶ್ವರ ಪುರಾಣದಲ್ಲಿ ‘ಭವಹರ ಸಮಂತಭದ್ರರೆಂದು ಸಮಂತ ಭದ್ರರನ್ನು ದೈವತ್ವಕ್ಕೇರಿಸಿದ್ದಾನೆ. ಆಚಣ್ಣನು ತನ್ನ ವರ್ಧಮಾನ ಪುರಾಣದಲ್ಲಿ ಸಮಂತ ಭದ್ರರ ಗುಣ ವಿಶೇಷಗಳನ್ನು ಹೇಳುತ್ತಾ:

ಕೃತಜಿನಮಾರ್ಗ ವಾರಿಜ ವಿನಿದ್ರನನುಜ್ಜ್ಯಳ ಕೀರ್ತಿಭದ್ರನಂ
ವಿತತ ದಯಾ ಸಮುದ್ರನಾಶೇಷ ಜನಸ್ತುತ ಶೀಲಮುದ್ರನಂ
ಗತಮಕರ ಧ್ವಜೇಭರಿಪು ಕೌದ್ರನನ ಪ್ರತಿಮಾಂಕ ರೌದ್ರನಂ
ಯತಿಪ ಸಮಂತಭದ್ರನಿಳಾವಳಯಂ ನಲವಿಂದೆ ಕೀರ್ತಿಕುಂ ||

ಈ ರೀತಿಯಾಗಿ ಶಾಸ್ತ್ರಜ್ಞರಿಂದ, ಪಂಡಿತರಿಂದ, ಕವಿಗಳಿಂದ, ಆಚಾರ್ಯರಿಂದ ಸ್ತುತಿಸಲ್ಪಟ್ಟ ಸಮಂತಭದ್ರರು ಸಂಸ್ಕೃತ ಸಾಹಿತ್ಯದಲ್ಲಿ ಜೈನತರ್ಕ, ನ್ಯಾಯಶಾಸ್ತ್ರಕ್ಕೆ ಒಂದು ಗಟ್ಟಿಯಾದ ಸೈದ್ಧಾಂತಿಕ ತಾತ್ತ್ವಿಕ ನೆಲೆಗಟ್ಟನ್ನು ಒದಗಿಸಿಕೊಟ್ಟರು.

ಈ ಆಚಾರ್ಯರಿಗೂ ಜ್ವಾಲಾಮಾಲಿನಿಯ(ಚಂದ್ರಪ್ರಭನ ಯಕ್ಷಿ) ಪವಿತ್ರ ಕ್ಷೇತ್ರವಾದ ಸಿಂಹನಗದ್ದೆಗೂ ಸಂಬಂಧವನ್ನು ಕಲ್ಪಿಸಲಾಗಿದ್ದು ಈ ಸಂಬಂಧದಲ್ಲಿ ಹುಟ್ಟಿಕೊಂಡ ಐತಿಹ್ಯಗಳು ಹಲವಾರಿವೆ. ಸಿಂಹನಗದ್ದೆಯ ಕ್ಷೇತ್ರ ಮಹಾತ್ಮೆ ಮತ್ತು ಅಲ್ಲಿಯ ಜನ ವದಂತಿಗಳು ಸ್ವಾಮಿ ಸಮಂತಭದ್ರರೊಂದಿಗೆ ಅನ್ವಯಿಸಿ ಆ ಕ್ಷೇತ್ರದ ಇತಿಹಾಸವನ್ನು ಕಟ್ಟಿಕೊಳ್ಳುತ್ತವೆ. ಈ ಹಿಂದೆಯೇ ಬನವಾಸಿ ಸಮಂತಭದ್ರರ ವಿಹಾರ ಕ್ಷೇತ್ರವಾಗಿರುವ ಸಾಧ್ಯತೆಯಿದೆ ಎಂಬುದನ್ನು ಚರ್ಚಿಸಿದ್ದಾಗಿದೆ. ಗೇರುಸೊಪ್ಪೆಯನ್ನು ಕುರಿತಂತೆಯೂ ಒಂದು ಐತಿಹ್ಯವಿದೆ. ಪೂರ್ವದಲ್ಲಿ ಗೇರುಸೊಪ್ಪೆಯಲ್ಲಿ ಒಂದು ಜೈನಮಠ ಮತ್ತು ಅನೇಕ ಬಸ್ತಿಗಳು ಇದ್ದುವೆಂದೂ ಅಲ್ಲಿ ಸಮಂತಭದ್ರ ಸ್ವಾಮಿಗಳು ಶ್ರೀ ಜ್ವಾಲಾಮಾಲಿನೀ ದೇವಿಯ ಆರಾಧಕರಾಗಿದ್ದು ಮಠ ಸ್ಥಾಪನೆಯನ್ನು ಮಾಡಿ ಧರ್ಮ ಪ್ರಭಾವನೆಯನ್ನು ಮಾಡುತ್ತಾ ಬಂದಿರುವರೆಂದೂ ಕಾಲಾಂತರದಲ್ಲಿ ಪಟ್ಟಣದ ಪುಣ್ಯ ಕ್ಷಯಿಸುವುದನ್ನರಿತ ಜ್ವಾಲಾಮಾಲಿನಿ ಯಕ್ಷಿ ಒಂದು ರಾತ್ರಿ ಸಮಂತಭದ್ರರ ಕನಸಿನಲ್ಲಿ ಬಂದು ತನ್ನನ್ನು ಬೇರೆಡೆ ಕರೆದೊಯ್ಯುವಂತೆಯೂ, ಹೋಗುವಾಗ ಯಾವ ಸ್ಥಳದಲ್ಲಿ ಸಿಂಹ ಮತ್ತು ದನಗಳು ತಮ್ಮ ಜನ್ಮಜಾತ ವೈರಭಾವವನ್ನು ಬಿಟ್ಟು ಅನ್ಯೋನ್ಯವಾಗಿ ಆಡುತ್ತಾ ಇರುತ್ತವೆಯೋ ಆ ಸ್ಥಳದಲ್ಲಿ ತನ್ನನ್ನು ಸ್ಥಾಪಿಸಬೇಕೆಂದು ಕೇಳಿಕೊಂಡಳಂತೆ. ಅಂತೆಯೇ ಸಮಂತಭದ್ರರು ಜ್ವಾಲಾಮಾಲಿನಿಯನ್ನು ತಂದಿಳಿಸಿದ ಕ್ಷೇತ್ರ ಈಗ ಪ್ರಸಿದ್ಧಿ ಪಡೆದಿರುವ ಸಿಂಹನ ಗದ್ದೆಯೇ ಆಗಿದೆ. ಚಿಕ್ಕಮಂಗಳೂರು ಜಿಲ್ಲೆಗೆ ಸೇರಿದ ನರಸಿಂಹರಾಜಪುರದ ಪಶ್ಚಿಮಕ್ಕೆ ಒಂದು ಮೈಲಿನ ಅಂತರದಲ್ಲಿ ಈ ಸಿಂಹನಗದ್ದೆಯಿದೆ. ಆದರೆ ಮಧ್ಯಕಾಲೀನ ಪ್ರಾದೇಶಿಕ ಇತಿಹಾಸದಲ್ಲಿ ತನ್ನ ಕ್ಷೇತ್ರ ಮಹಾತ್ಮೆಯನ್ನು ಬೆಳೆಸಿಕೊಂಡ ಸಿಂಹನಗದ್ದೆಗೂ ಮತ್ತು ಆ ಇತಿಹಾಸದಲ್ಲಿ ದೊರೆಯುವ ಸಮಂತಭದ್ರರಿಗೂ ಮತ್ತು ೨ನೆಯ ಶತಮಾನ ದಿಂದ ೫ನೆಯ ಶತಮಾನದ ಮಧ್ಯಾವಧಿಯಲ್ಲಿ ಇದ್ದರೆನ್ನಲಾಗುವ ರಾಷ್ಟ್ರಖ್ಯಾತಿಯ ಸಮಂತಭದ್ರರಿಗೂ ಹೋಲಿಸುವುದು ಸಂದೇಹಕ್ಕೆ ಎಡೆಮಾಡಿಕೊಡುತ್ತದೆ.

ದೇವಚಂದ್ರ ಹೇಳುವಂತೆ ೨ನೆಯ ಶತಮಾನದಲ್ಲಿದ್ದ ಸ್ವಾಮಿ ಸಮಂತಭದ್ರರ ಆರಾಧ್ಯದೈವ ಚಂದ್ರಪ್ರಭ. ಆರಾಧ್ಯ ಯಕ್ಷಿ ಜ್ವಾಲಾಮಾಲಿನಿ.[6] ಗೇರುಸೊಪ್ಪೆ, ಸಿಂಹನ ಗದ್ದೆಗಳ ಐತಿಹ್ಯಗಳಲ್ಲಿ ಕಂಡುಬರುವ ಸಮಂತಭದ್ರರ ಆರಾಧ್ಯ ದೈವ ಚಂದ್ರಪ್ರಭ ತೀರ್ಥಂಕರನ ಯಕ್ಷಿ ಜ್ವಾಲಾಮಾಲಿನಿ. ಇದೊಂದು ಸಾಮ್ಯತೆಯನ್ನು ಬಿಟ್ಟರೆ ಬೇರೆ ಇತರ ಆಧಾರಗಳ ಕೊರತೆಯಿದೆ. ಈಗಾಗಲೇ ಆರು ಜನ ಸಮಂತಭದ್ರರಿದ್ದು ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿಯ ಗುರು ಸಮಂತಭದ್ರರೆಂಬುವರೊಬ್ಬರು ಇದ್ದರೆಂದು ಹಿಂದೆಯೇ ಹೇಳಿದೆ. ಜಿನಸೇನ ದೇಶಿವ್ರತಿ (ಕ್ರಿ.ಶ.೧೫೫೦-೧೬೦೬)ಯ ಗುರು ಸಮಂತಭದ್ರನು, ಈ ಸಮಂತಭದ್ರನೆ ಕ್ಷೇಮಪುರದ ರಾಣಿ ಚೆನ್ನಭೈರಾದೇವಿಯ ಗುರುವಾಗಿದ್ದುದಾಗಿ ಜಿನಸೇನ ದೇಶಿವ್ರತಿಯ ವರ್ಧಮಾನ ಪುರಾಣದಿಂದ ತಿಳಿದು ಬರುತ್ತದೆ.

ಆಯುರ್ವೇದಿ ಸಮಂತಭದ್ರಸ್ವಾಮಿ
ಕಾಯ ಜಹರ ಕ್ಷೇಮ ಪುರದಿ
ತೋಯಜಾಂಬಕಿ ಚೆನ್ನ ಭೈರವಂದೇವಿಗೆ
ಪ್ರಿಯದ ಗುರುವೆನಲೆಸೆದ||
(ವರ್ಧಮಾನ ಪುರಾಣ: ೨೧೪೮)

ಕೆಳದಿಯ ವೆಂಕಟಭೂಪನ ಸಭೆಯಲ್ಲಿ
ಬಲಯುತ ವಾದಿ ಸಂಕುಳವ                                   
ಇಳಿಕೈದು ಗೆಲಿದ ಸಮಂತಭದ್ರಾಚಾರ್ಯ                            
ಯಿಳೆ ತುಂಬಿ ಜನ ಪಸರಿಸಲು||
(ವರ್ಧಮಾನ ಪುರಾಣ: ೨೧೫೦)

ಈ ಆಯುರ್ವೇದಿ ಸಮಂತಭದ್ರನು ಕೆಳದಿಯ ವೆಂಕಟ ಭೂಪನ ಸಭೆಯಲ್ಲಿ ವಾದದಲ್ಲಿ ಗೆದ್ದು ಬಂದಂತೆ ಹೇಳಲಾಗಿದೆ. ಗೇರುಸೊಪ್ಪೆಯ ತಾಮ್ರದ ಶಾಸನದಲ್ಲಿ ಒಬ್ಬ ಸಮಂತಭದ್ರನ ಉಲ್ಲೇಖ ಬರುತ್ತದೆ. ಕಡೂರು ಜಿಲ್ಲೆಯ ಕೊಪ್ಪ ತಾಲೂಕಿನ ಎಡೆಹಳ್ಳಿಯ ಜಿನಬಸ್ತಿಯಲ್ಲಿ ದೊರೆತ ತಾಮ್ರ ಶಾಸನದಲ್ಲಿ ಗೇರುಸೊಪ್ಪೆ-ಸಮಂತ ಭದ್ರದೇವರ ಉಲ್ಲೇಖವಿದೆ. ಇವನ ಕಾಲ ೧೫-೧೬ನೆಯ ಶತಮಾನವಾಗಿದೆ. ಇವರಲ್ಲಿ ಸಿಂಹನಗದ್ದೆ ಐತಿಹ್ಯಕ್ಕೆ ಸೇರಿದ ಸಮಂತಭದ್ರರು ಯಾರೆಂಬುದು ತಿಳಿದು ಬರುವುದಿಲ್ಲ.

ಮೇಲಿನ ಘಟನೆಗಳನ್ನು ಅನುಮೋದಿಸಿದಲ್ಲಿ ಮತ್ತು ಇತರ ದಾಖಲೆಗಳನ್ನು ಗಮನಿಸಿದಲ್ಲಿ ಸ್ವಾಮಿ ಸಮಂತಭದ್ರರು ಧರ್ಮ ಪ್ರವರ್ತನೆಗಾಗಿ ಕರ್ನಾಟಕದ ಅನೇಕ ಭಾಗಗಳಲ್ಲಿ ಸಂಚರಿಸಿದರೂ ತಮ್ಮ ಜೀವನದ ಬಹುಕಾಲವನ್ನು ತಮಿಳುನಾಡಿನಲ್ಲಿಯೇ ಕಳೆದರೆನಿಸುತ್ತದೆ. ಕರ್ನಾಟಕಕ್ಕಿಂತ ತಮಿಳುನಾಡಿಲ್ಲಿಯೇ ಅವರು ಹೆಚ್ಚು ಪ್ರಸಿದ್ಧರಾಗಿದ್ದು ತಮಿಳುನಾಡಿನಲ್ಲಿ ಇಂದಿಗೂ ಸಹ ಮನೆಮಾತಾಗಿದ್ದಾರೆ. ಅನೇಕ ಜೈನ ಮನೆತನಗಳಲ್ಲಿ ಸಮಂತಭದ್ರ, ಸಮಂತಭದ್ರ ಸ್ವಾಮಿ, ಸಮಂತಭದ್ರ ಶಾಸ್ತ್ರಿ ಮುಂತಾದ ಹೆಸರುಗಳು ಇಂದಿಗೂ ಕೇಳಿ ಬರುತ್ತವೆ. ಕಂಚಿಯಿಂದ ೫೦ ಕಿ.ಮೀ. ದೂರದಲ್ಲಿರುವ ತಿರುಮಲೈ ಬೆಟ್ಟದ ಮೇಲೆ ಸಮಂತಭದ್ರರ ಪಾದಗಳನ್ನು ಗುರುತಿಸಲಾಗಿದ್ದು, ಅಲ್ಲಿಯೇ ದೊರೆತ ಶಾಸನದಲ್ಲಿ ಅರ್ಹತ್ ಸುಗಿರಿ ಎಂಬ ಚರಣ ಸಮಂತಭದ್ರರನ್ನು ನೆನಪಿಸುತ್ತದೆ. ಜೈನ ಆಚಾರಾನುಸಾರ ಅಲ್ಲಿ ಕಂಡುಬರುವ ಪಾದ ಚಿನ್ಹೆಗಳು ಅವರ ಸಮಾಧಿ ಮರಣವನ್ನು ನಿರ್ದೇಶಿಸುತ್ತಿದ್ದು ಬಹುಶಃ ಅವರ ಅಂತ್ಯವೂ ಸಹ ಕಂಚಿಯ ತಿರುಮಲೈ ಯಲ್ಲಿಯೇ ಆಗಿರಬೇಕೆಂದು ಊಹಿಸಬಹುದಾಗಿದೆ. (ಈ ಎಲ್ಲ ಮಾಹಿತಿಗಳನ್ನು ನೀಡಿದವರು ಮಲೆಯೂರಿನ ಕನಕಗಿರಿ ಶ್ರೀಕ್ಷೇತ್ರದ ಶ್ರೀ ಪರಮಪೂಜ್ಯ ಭುವನಕೀರ್ತಿ ಭಟಾರಕರು.)


[1]      ರತ್ನಕರಂಡಕ ಶ್ರಾವಕಾಚಾರ, ಅನು:ಮಿರ್ಜಿ ಅಣ್ಣಾರಾಯ, ಪ್ರಸ್ತಾವನೆ, ಪುಟ:VII.

[2]       ಉದ್ಧೃತ: ಸಮಂತಭದ್ರಾಚಾರ್ಯರು: ಎಸ್.ಬಿ.ಪಾಟೀಲ್, ಜೈನ ಸಾಹಿತ್ಯ ಸಂಸ್ಕೃತಿ, ಪುಟ. ೧೫.

[3]       ಕರ್ನಾಟಕದ ಪ್ರಮುಖ ಜೈನ ಸಂಸ್ಕೃತ ಸಾಹಿತಿಗಳು: ಎಂ.ಡಿ. ವಸಂತರಾಜ್, ಕರ್ನಾಟಕದಲ್ಲಿ ಜೈನಧರ್ಮ ಒಂದು ಅಧ್ಯಯನ: ಸಂ: ಟಿ.ಜಿ. ಕಲಘಟಗಿ, ಪುಟ. ೯೫.

[4]      ಜೈನಾಗಮ ಇತಿಹಾಸ ದೀಪಿಕೆ : ಎಂ.ಡಿ.ವಸಂತರಾಜ್, ಪುಟ ೨೪೩.

[5]      ರಾಜಾವಳಿ ಕಥಾಸಾರ: ಪುಟ ೧೩೪-೧೩೫.

[6]      ಸಮಂತಭದ್ರಾಚಾರ್ಯ ಸ್ವಾಮಿಗಳ್ ಕೌಸುಂಬಿ ನಗರದೊಳ್ ಶಾಸನದೇವಿ ಪ್ರತ್ಯಕ್ಯಮಾಗೆ ಸುವರ್ಣಮಯ ಚಂದ್ರಪ್ರಭಸ್ವಾಮಿ ಪ್ರತಿಬಿಂಬಮಂ ಲೋಕಾಶ್ಚರ್ಯಮಾಗೆ ತೋರಿಸಿ….. ರಾಜಾವಳಿ ಕಥಾಸಾರ: ಪುಟ ೧೫.