ಈವರೆಗೆ ನಮ್ಮೆಲ್ಲರ ರಾಜಕೀಯ ಆರ್ಥಿಕ ವಿಶ್ಲೇಷಣೆಗೆ ಮೀರಿದ್ದು ಈಗ ಭಾರತದಲ್ಲಿ ಅವತರಿಸಿದೆ. ಅಣ್ಣಾ ಹಜಾರೆಯವರು ಸಾಮಾನ್ಯ ಜನತೆಯ ಆಶೋತ್ತರಗಳನ್ನು ಸಾಂಕೇತಿಸುವ ಇಂದಿನ ಘಟನೆಯನ್ನು ಅವತಾರ ಎಂದು ಕರೆಯುವುದೇ ಸೂಕ್ತವೆನಿಸುತ್ತದೆ. ನಮ್ಮ ದೇಶದ ಆರ್ಥಿಕ ವ್ಯವಸ್ಥೆಯ ಬಗ್ಗೆ ಅದೆಷ್ಟು ಚೆನ್ನಾಗಿ ಮತಾಡಬಲ್ಲ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯಸೇನ್ ಇದ್ದಾರೆ! ಇಂಗ್ಲಿಷ್ ಮತ್ತು ಹಿಂದಿಯಲ್ಲೂ ಅಸ್ಖಲಿತವಾಗಿ ದೇಶದ ದುರವಸ್ಥೆಯನ್ನು ವಿವರಿಸಬಲ್ಲ ಎಷ್ಟು ಲೇಖಕರೂ, ತಜ್ಞರೂ ಇದ್ದಾರೆ! ಆದರೆ ಅವರ ಯಾರ ಮಾತೂ ಮನಸ್ಸಿನೊಳಗೆ ಊರಲಾರದಷ್ಟು ಆಳವಾಗಿ ಅಣ್ಣಾ ಹಜಾರೆಯಂತೆ ಒಬ್ಬ ಸರಳ ವ್ಯಕ್ತಿ ಊರಿದ್ದಾರೆ ಎಂಬುದು ವಿಸ್ಮಯವೆನ್ನಿಸುತ್ತದೆ.

ಕೆಡಕುತನ ತನ್ನ ಅತಿಯನ್ನು ತಲುಪಿ ಆಳುವವರು ನಾಚಿಕೆಗೆಟ್ಟಾಗ ತನ್ನಷ್ಟಕ್ಕೆ ತಾನೇ ಎಂಬಂತೆ ತಲೆದೋರಿದೆ. ಭಾರತದ ಚರಿತ್ರೆಯೇ ಹೀಗಿದೆ. ಟ್ಯಾಗೋರರ ರಾಷ್ಟ್ರಗೀತೆಯಲ್ಲಿ ಒಂದು ಮಾತಿದೆ ‘ಪತನ ಅಭ್ಯುದಯ ಬಂಧುರ ಪಂಥಾ’. ಏಳುಬೀಳುಗಳ ಸುಂದರವಾದ ಪಥದಲ್ಲಿ ಈ ರಾಷ್ಟ್ರ ಚರಿತ್ರೆಯುದ್ದಕ್ಕೂ ಸಾಗಿದೆ ಎನ್ನುತ್ತಾರೆ ಟ್ಯಾಗೋರರು.

ಭ್ರಷ್ಟಾಚಾರ ತಪ್ಪೆಂದು ಹೇಳದವರೇ ಇಲ್ಲ. ನಮ್ಮ ಪ್ರಧಾನಿ, ನಮ್ಮ ಎಲ್ಲ ಮಂತ್ರಿಗಳು, ನಮ್ಮ ಎಲ್ಲ ರಾಜಕಾರಣಿಗಳು ಈ ಮಾತನ್ನು ಪದೇ ಪದೇ ಹೇಳುತ್ತಾರೆ. ಭ್ರಷ್ಟಾಚಾರಿಗಳೇ ಭ್ರಷ್ಟಾಚಾರ ತಪ್ಪೆಂದು ಹೇಳುತ್ತ ಆ ಮಾತಿನ ಅರ್ಥವನ್ನೇ ನಾಶಮಾಡಿದ್ದಾರೆ. ಆದರೆ ಸಿಡಿಮದ್ದಿನ ಗುಂಡು ಒಂದು ಚೀಲದಲ್ಲಿ ಇದ್ದಾಗ ತಾನಾಗಿಯೇ ಯಾವ ಬಲವನ್ನೂ ಪಡೆಯದಂತೆ ಇಂತಹ ಮಾತುಗಳೂ ಕೂಡ ನಮ್ಮ ಕಿವಿಗಳನ್ನು ಹಾದುಹೋಗುವ ಮಾತುಗಳು ಮಾತ್ರ. ಒಂದು ಗುಂಡು ಗನ್ನಿನಿಂದ ಬಂದಾಗ ಮಾತ್ರ ಅದಕ್ಕೆ ಶಕ್ತಿಯಿರುವುದು. ಸತ್ಯ ಮತ್ತು ಅಹಿಂಸೆ ಎಂಬ ಮಾತುಗಳು ಗಾಂಧೀಜಿಯ ಮೆತ್ತಗಿನ ಸಾತ್ವಿಕ ನಾಲಗೆಯಿಂದ ಬಂದಾಗ ಶಬ್ದದಸತ್ವ ಮಾತಿಗೆ ಹಿಂದಿರುಗುವುದು.

ಗಾಂಧೀಜಿಯವರ ನೆರಳಂತೆ ಮಾತ್ರ ಇರುವ ಅಣ್ಣಾ ಹಜಾರೆಯಂತಹವರು ಈಗ ಮತ್ತೆ ಗಾಂಧೀಜಿಯವರನ್ನು ನೆನಪಿಗೆ ತರಬಲ್ಲ ಶಕ್ತಿಯಾಗಿದ್ದಾರೆ (ಗಾಂಧಿಯವರ ಅನುಯಾಯಿಗಳ ನಡುವೆ ಸ್ವಾತಂತ್ರ್ಯೋತ್ತರ ಕಾಲದಲ್ಲಿ ನೂರಾರು ಅಣ್ಣ ಹಜಾರೆಯಂಥವರು ಇದ್ದರು ಎಂಬುದನ್ನು ನಾವು ಮರೆಯಬಾರದು) ಆದರೆ ಮೃದುಮಾತಿನ ಸಜ್ಜನರು ಎಂದು ನಮ್ಮೆಲ್ಲರ ಮೆಚ್ಚುಗೆಯನ್ನು ಪಡೆದಿದ್ದ ಮನಮೋಹನ ಸಿಂಗರು ಮಾತ್ರ ಕಂಡಿದ್ದನ್ನೂ ಕಾಣದಂತೆ ವರ್ತಿಸುವ ಭೋಳೆಮಾತಿನ ಹೇಡಿಯಂತೆ ಈಗ ಕಾಣುತ್ತಾರೆ. ಅವರ ಒಳ್ಳೆತನವೇ ಅವರು ಏನನ್ನಾದರೂ ಮಾಡಬಲ್ಲ ಅಧಿಕಾರದಲ್ಲಿ ಇದ್ದೂ ಮಾಡದೇ ಇರುವುದರಿಂದ ನಮಗೆ ಹಾಸ್ಯಾಸ್ಪದವೆನಿಸಲು ಶುರುವಾಗಿದೆ. ಹೀಗೆ ಒಳ್ಳೆತನ ಮೋಸಗಾರಿಕೆಗೆ ಬಳಸಲ್ಪಡುವುದು ಒಂದು ದುರಂತವೇ ಸರಿ. ತನಗೆ ಸರಿಕಂಡಂತೆ ನಡೆಯುತ್ತಿದ್ದ ಇಂದಿರಾಜಿಯವರ ಕಠಿಣವಾದ ವ್ಯಕ್ತಿತ್ವ ನೈತಿಕವಾಗಿ ಮನಮೋಹನಸಿಂಗರದಕ್ಕಿಂತ ಹೆಚ್ಚು ನಂಬಿಕೆಗೆ ಅರ್ಹವಾಗಿತ್ತು ಎಂದು ಈಗ ಅನ್ನಿಸತೊಡಗಿದೆ. ಜನಲೋಕಪಾಲ್ ಬಿಲ್ಲನ್ನು ಪಾರ್ಲಿಮೆಂಟ್ ಸ್ವೀಕರಿಸಿದರೆ ಭ್ರಷ್ಟಾಚಾರದಿಂದ ನಾವು ವಿಮುಕ್ತರಾಗುತ್ತೇವೆ ಎಂಬ ಭ್ರಮೆ ನಮಗೆ ಇರಕೂಡದು. ಆದರೆ ಇಷ್ಟಾದರೂ ನಿಜ. ಸತ್ವಯುತವಾದ ಲೋಕಪಾಲ್ ಮಸೂದೆಯಿಲ್ಲದೇ ಹೋದರೆ, ಈಗಿರುವ ಭ್ರಷ್ಟಾಚಾರ ಹೀಗೇ ಮುಂದುವರೆಯುವ ಬದಲು ಇನ್ನಷ್ಟು ಕೆಡುತ್ತದೆ. ಉದಾಹರಣೆಗೆ ನೋಡಿ: ನಮಗೊಂದು ಸಂವಿಧಾನ ಇದೆ. ಈ ಸಂವಿಧಾನದ ಪ್ರಕಾರ ನಾವು ಅಸ್ಪೃಶ್ಯತೆಯನ್ನು ಆಚರಿಸುವಂತಿಲ್ಲ ಆದರೂ ಅಸ್ಪೃಶ್ಯತೆಯ ಪಿಡುಗು ಮಾಯವಾಗಿಲ್ಲ. ಆದರೆ ಸಂವಿಧಾನವೇ ಇಲ್ಲದಿದ್ದರೆ ಯಾವ ಭಯವೂ ಇಲ್ಲದಂತೆ ಅಸ್ಪೃಶ್ಯತೆ ಇನ್ನೂ ಕ್ರೂರವಾಗಿ ಇರುತ್ತಿತ್ತು. ಆದ್ದರಿಂದಲೇ ಆದರ್ಶವನ್ನು ಒತ್ತಾಯ ಮಾಡುವಂತಹ ಕೆಲವು ನಿಯಮಗಳು ಇದ್ದೇ ಇರಬೇಕು. ‘ಜನ ಲೋಕಪಾಲ್‌ ಬಿಲ್’ ಆ ಬಗೆಯ ಒಂದು ಸಂಕಲ್ಪ. ಕೇವಲ ಮಾತಿನಿಂದ ಭ್ರಷ್ಟಾಚಾರವನ್ನು ಉಚ್ಚಾಟಿಸಬಲ್ಲ ಮಂತ್ರ ಅದೆಂದು ಯಾರೂ ತಿಳಿದಿಲ್ಲ. ಅಣ್ಣಾರೂ ತಿಳಿದಿಲ್ಲ. ನಮ್ಮ ಸಂತೋಷ ಹೆಗ್ಡೆಯವರು ಪದೇ ಪದೇ ಈ ಮಾತನ್ನು ಹೇಳಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಮನೆಯನ್ನು ನಿತ್ಯ ಗುಡಿಸಬೇಕಾದ ಕಾಯಕದ ಹಾಗೆ.

ಭ್ರಷ್ಟಾಚಾರ ತಪ್ಪೆಂದು ಹೇಳುವ ಹಲವು ರಾಜಕಾರಣಿಗಳು ನಿಜವಾಗಿಯೂ ಹಾಗೆ ತಿಳಿದಿದ್ದಾರೆಂದು ನಮಗೆ ಅನ್ನಿಸುವುದಿಲ್ಲ. ನಾವು ಬಯಸುವ ‘ಡೆವಲಪ್‌ಮೆಂಟ್’ಗೆ ಅಂಟಿಕೊಂಡೇ ಈ ಭ್ರಷ್ಟಾಚಾರವೂ ಇದೆ. ಡೆವಲಪ್‌ಮೆಂಟ್‌ನಿಂದ ಪ್ರಯೋಜನಪಡುವ ಹಲವರಿಗೆ ಭ್ರಷ್ಟಾಚಾರ ಅನಿಷ್ಟವೆನಿಸಿದರೂ ಅಸಹನೀಯವೇನಲ್ಲ. ಆದ್ದರಿಂದಲೇ ನಮ್ಮ ಆಳುವ ವರ್ಗ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಹೊತ್ತಿನಲ್ಲೇ ಅದನ್ನು ಕೊನೆಗಾಣಿಸುವ ವಿಧೇಯಕಕ್ಕೆ ಹಲ್ಲು ಉಗುರು ಇಲ್ಲದಂತೆ ನೋಡಿಕೊಳ್ಳುತ್ತಾರೆ. ಇದನ್ನು ಬ್ಯಾಡ್ ಫೇತ್- ಅಂದರೆ ತಿಳಿದೂತಿಳಿಯದಂತೆ ನಮಗೇ ನಾವು ಮಾಡಿಕೊಳ್ಳುವ ವಂಚನೆ ಎಂದು ಕರೆಯಬೇಕು.

ಬಹಳ ಗಾಢವಾದ ಸತ್ಯಗಳನ್ನು ನೇರವಾಗಿ ಹೇಳಲು ಸರಳತೆ ಅಗತ್ಯ. ವಿಶ್ಲೇಷಣೆಗಳ ಜಾಲದಲ್ಲಿ ಈ ಸರಳತೆ ಮಾಯವಾಗುತ್ತದೆ. ಆದರೆ ಸಾಮಾನ್ಯರಲ್ಲಿ ಸಾಮಾನ್ಯನಂತೆ ಕಾಣುವ ಹಿರಿಯ ನಾಗರಿಕನಾದ-ಈ ಕಾಲದಲ್ಲೂ ಖಾದಿ ಟೋಪಿ ಹಾಕುವ-ಅಣ್ಣಾ ಹಜಾರೆಯಲ್ಲಿ ಇದು ಮಾಯವಾಗಿಲ್ಲ. ಅವರಂತೆಯೇ ಸರಳರಾದ ಸಂಸಾರಿಗಳೆಲ್ಲರ ಬೆಂಬಲ ಹಜಾರೆಯವರಿಗೆ ಇರುವಂತಿದೆ. ಭಾರತದ ತೀಕ್ಷ್ಣ ಚಿಂತಕರಲ್ಲಿ ಒಬ್ಬರಾದ ಶಿವ ವಿಶ್ವನಾಥನ್‌ರವರು ಮನಮೋಹನಸಿಂಗರಿಗೂ ಅವರಿಗೆ ಸಹಜವಾದ ಚೇಷ್ಟೆಯಲ್ಲಿ ಕರೆ ಕೊಟ್ಟಿದ್ದಾರೆ. ‘ನಾವೆಲ್ಲರೂ ಮೆಚ್ಚುತ್ತ ಇದ್ದ ನೀವು ಕೂಡ ಅಣ್ಣಾ ಹಜಾರೆಯವರ ಜೊತೆ ಕೈಗೂಡಿಸಿ ನಿಮ್ಮ ಅಧಿಕಾರದ ಜೈಲಿನಿಂದ ಹೊರಬನ್ನಿ’ ಎಂದು. ನಾವು ಹಗಲುಗನಸಿನಲ್ಲಾದರೂ ಹೀಗೆ ಬಯಸುವ ಸಾಧ್ಯತೆ ಇದೆ ಎಂಬುದೇ ಆಶ್ಚರ್ಯ. ನಮ್ಮ ಪ್ರಧಾನಿಗಳ ಹೃದಯ ಪರಿವರ್ತನೆಯಾಗುತ್ತದೆ ಎಂದು ನಂಬುವುದು ದುಸ್ತರವಾದರೂ ಈ ಬಯಕೆಯನ್ನು ನಾವು ಸಿನಿಕರಾಗಿ ತಿರಸ್ಕರಿಸಬಾರದೇನೊ?

ಗಾಂಧೀಜಿಯವರ ಉಪವಾಸಗಳ ಹಿಂದೆ ತನ್ನನ್ನೂ ತನ್ನ ಎದುರಾಳಿಯನ್ನೂ ಒಟ್ಟಾಗಿ ಪರಿವರ್ತಿಸುವ ಉದ್ದೇಶವಿರುತ್ತ ಇತ್ತು. ಇಲ್ಲವಾದರೆ ಉಪವಾಸ ಬ್ಲಾಕ್‌ಮೇಲ್ ಆಗುತ್ತದೆ. ಉಪವಾಸ ಕೂರುವುದು ಸತ್ಯದ ಆಗ್ರಹವಾಗುವುದು ಸುಲಭವಲ್ಲ. ಉಪವಾಸ ಮಾಡುವವನಲ್ಲಿ ಸಾತ್ವಿಕ ಕೋಪವೂ ಇರಬೇಕು. ಪ್ರೇಮವೂ ಇರಬೇಕು. ಒಂದಕ್ಕೊಂದು ಹೆಣಿಗೆಯಾಗಿ ಇರಬೇಕು. ಎದುರಾಳಿಯಲ್ಲಿ ಅಡಕವಾಗಿರುವ ಸತ್ಯ ಸ್ಪಂದನವನ್ನು ಎಚ್ಚರಗೊಳಿಸುವ ಕ್ರಿಯೆ ಇದು. ಮಾತೃವಾತ್ಸಲ್ಯದ ಕ್ರಿಯೆಯಿದು. ತನ್ನನ್ನೂ ಈ ಬದಲಾವಣೆಗೆ ಶುದ್ಧಗೊಳಿಸಿಕೊಳ್ಳುವ ತಾನೂ ಅರ್ಹನಾಗಲೆಂದು ನಡೆಸುವ ಆಗ್ರಹದ ಕ್ರಿಯೆ ಇದೆ. ಅಣ್ಣಾರಲ್ಲಿ ಕೋಪವೂ ಇದೆ; ಎದುರಾಳಿ ಬದಲಾಗಬಲ್ಲ ಎಂಬ ನೆಚ್ಚುಗೆಯೂ ಇದು. ಗಾಂಧೀಜಿಯವರು ತಾನು ಸಾಯುವುದಿಲ್ಲ ಎಂದು ಹೇಳುತ್ತಲೇ ಆಮರಣಾಂತ ಉಪವಾಸ ಕೂರುತ್ತ ಇದ್ದರು. ಜನ ಸಾಮಾನ್ಯರಿಗೆ ಅಣ್ಣಾ ಹಜಾರೆಯವರ ಕೋಪ ಕಕ್ಕುಲತೆಗಳು ಗಾಂಧೀಜಿಯನ್ನು ನೆನಪಿಗೆ ತಂದಿರಬೇಕು.

ಈ ಭಾವನೆಯಿಂದ ಚಿಂತಿಸುವುದಾದರೆ ಪ್ರಧಾನಿಗಳಿಗೆ ಅಣ್ಣಾ ಹಜಾರೆಯವರ ಉಪವಾಸದ ಸವಾಲು ಹೀಗಿರಬೇಕು: ‘ಮಾನ್ಯ ಮನಮೋಹನಸಿಂಗರೇ, ನೀವು ಒಳ್ಳೆಯವರಂತೆ ಕಾಣುತ್ತೀರಿ. ಕಾಣುವಂತೆ ಈಗ ಆಗಿ. ಇಷ್ಟು ಭ್ರಷ್ಟ ಸರ್ಕಾರವನ್ನು ನಡೆಸಿಕೊಂಡು ಹೋಗುವುದು ನಿಮಗೇ ಹೇಸಿಗೆ ಎನ್ನಿಸಿ ರಾಜೀನಾಮೆ ಕೊಟ್ಟು ಬಿಡುಗಡೆ ಪಡೆಯಿರಿ. ನಮ್ಮ ಜೊತೆ ನಿಂತು ನೀವೂ ಹೇಸುವ ಭ್ರಷ್ಟಾಚಾರದಿಂದ ದೇಶವನ್ನು ವಿಮುಕ್ತಗೊಳಿಸಲು ಹೋರಾಡಿ.’

ನಮ್ಮ ಮನಮೋಹನ್ ಸಿಂಗರು ಭಾರತದ ಪ್ರಧಾನಿಯಾದದ್ದೇ ನಾವು ನಿರೀಕ್ಷಿಸದೇ ಇದ್ದ ಒಂದು ಅದ್ಭುತ. ಅದನ್ನು ಅವರು ತೊರೆದು ಹೊರಬಂದು ಅಣ್ಣಾ ಹಜಾರೆಯವರ ಜೊತೆ ಕೈ ಜೋಡಿಸುವುದು ಇನ್ನೊಂದು ಅದ್ಭುತ ಯಾಕಾಗಬಾರದು? ಉಪವಾಸಗಳ ಹಿಂದೆ ಇಂತಹ ಸಂಕಲ್ಪಗಳು ಗಾಂಧೀಜಿಯಲ್ಲಿ ಇದ್ದವು. ಅಣ್ಣಾರಲ್ಲೂ ಇರಬಹುದು ಎಂದು ನಾವು ಕೇವಲ ಸುಖಿಗಳು ಎಂದು ತಿಳಿದಿದ್ದ ಯುವಜನರಿಗೂ ಎನ್ನಿಸುವಂತೆ ತೋರುತ್ತಿದೆ.

ತಿಹಾರ್ ಜೈಲಿನಿಂದ ಅಣ್ಣಾ ಹಜಾರೆಯವರನ್ನು ಬಿಡುಗಡೆಗೊಳಿಸಬೇಕೆಂಬ ನಿರ್ಧಾರದಲ್ಲಿ ಭಾವೀ ಪ್ರಧಾನಿಯಾಗುವ ಕನಸಿನ ರಾಹುಲ್ಲರ ಪ್ರೇರಣೆಯಿರಬಹುದೆಂಬ ನಾವು ಊಹಿಸದೇ ಇದ್ದ ಅದ್ಭುತಕ್ಕಿಂತ ಇದೇನೂ ಇನ್ನೂ ಹೆಚ್ಚಿನ ಅದ್ಭುತವಲ್ಲ.

—-
ಪ್ರಜಾವಾಣಿ
: ೧೮೨೦೧೧