ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರುದ್ಧದ ಹೋರಾಟದ ಬಗ್ಗೆ ಅವಸರದ ತೀರ್ಮಾನಕ್ಕೆ ಬರುವುದು ಉಚಿತವಲ್ಲ. ಎಲ್ಲ ಜನಾಂದೋಲನಗಳಲ್ಲೂ ಕಾಣಿಸಿಕೊಳ್ಳುವ ಕೋಪತಾಪಗಳು, ಅಧಿಕಪ್ರಸಂಗಗಳು, ನಾಟಕಗಳು ಇಲ್ಲಿಯೂ ಸಹಜವಾಗಿ ಕಾಣಿಸಿಕೊಂಡಿವೆ. ಆದರೆ, ಜೊತೆಗೇ ಅಣ್ಣಾರವರ ಸರಳತೆ ಮತ್ತು ಏಕೋದ್ದೇಶದ ಸ್ಪಷ್ಟತೆಯಿಂದ ಒಂದು ಅಸಾಮಾನ್ಯವಾದ ಪರಿವರ್ತನೆಯ ಭರವಸೆಯೂ ಮೂಡಿದೆ. ಒಟ್ಟಿನಲ್ಲಿ ಇಂತಹದೊಂದು ಅಹಿಂಸಾತ್ಮಕ ಚಳವಳಿ ಈ ಕಾಲದಲ್ಲಿ ನಾವು ಬೇರೆ ಯಾವ ದೇಶದಲ್ಲೂ ಕಂಡಿಲ್ಲ.

ನನ್ನಂತವರಿಗೂ ಕೊಂಚ ಇರುಸುಮುರುಸಾಗುವಂತಹ ಘಟನೆಗಳು ನಡೆದಿವೆ. ಶ್ರೀ ರವಿಶಂಕರ್ ಗುರೂಜಿಯಂತವರು ಒಂದು ದೊಡ್ಡ ಪಾತ್ರವನ್ನು ಶಾಂತಿದೂತರಾಗಿ ನಡೆಸಿದ್ದಾರೆಂದು ನಮ್ಮ ದೃಶ್ಯಮಾಧ್ಯಮಗಳು ಸಾರಲು ಪ್ರಯತ್ನಿಸಿದವು. ಅದನ್ನು ನಾನು ಮನಃಪೂರ್ವಕವಾಗಿ ನಂಬಲಾರೆ. ಆಧ್ಯಾತ್ಮವನ್ನು ಮಾರ್ಕೆಟಿಂಗ್ ಮಾಡುವವರಿಗೆ ಟೆಲಿವಿಷನ್‌ನಲ್ಲಿ ಕಾಣಿಸಿಕೊಳ್ಳದೆ ಇರುವುದು ಅಸಾಧ್ಯವೇನೋ? ಅಥವಾ ಇದೊಂದು ದೃಶ್ಯಮಾಧ್ಯಮದವರದ್ದೇ ಆದ ಮಾರ್ಕೆಟಿಂಗ್ ಉಪಾಯವೂ ಇರಬಹುದು. ಕ್ಯಾಮೆರಾದ ಹಸಿವಿಗೆ ಹುಟ್ಟಿದವರೇ ಹೀಗೆ ಕಾಣಿಸಿಕೊಳ್ಳಲು ಕಾದಿರುತ್ತಾರೆ. ಇದಕ್ಕೆ ವಿನಾಯಿತಿ ಎಂಬಂತೆ ಕೊನೆಕೊನೆಯಲ್ಲಿ ನರ್ಮದಾ ಬಚಾವೊ ಆಂದೋಲನದ ಮೇಧಾ ಪಾಟ್ಕರ್ ಕ್ಯಾಮೆರಾ ಕಣ್ಣಿಗೆ ಕಂಡದ್ದು ನನಗೆ ಸಮಾಧಾನ ತಂದಿತು.

ನಾವು ಗಮನಿಸಬೇಕಾದ ಮುಖ್ಯ ವಿಚಾರಗಳು ಇವು. ೧. ಎಲ್ಲ ರಾಜಕಾರಣಿಗಳೂ ಶೀಲವಿಲ್ಲದ ನಾಚಿಕೆಗೆಟ್ಟ ಜನರು ಎಂದು ಜನಸಮೂಹಕ್ಕೆ ಈ ಚಳವಳಿಯಿಂದಾಗಿ ಅನ್ನಿಸತೊಡಗಿತು. ಇದಕ್ಕೆ ಕಾರಣಗಳು ಇವೆ. ಸರ್ಕಾರ ತಮ್ಮೆದುರಿಗಿದ್ದ ಜನಲೋಕಪಾಲ್ ಬಿಲ್ಲನ್ನು ಸಿವಿಲ್ ಸೊಸೈಟಿ ಜೊತೆಗಿನ ಚರ್ಚೆಯಲ್ಲಿ ಬಲಪಡಿಸಬಹುದಿತ್ತು. ಆದರೆ ಸರ್ಕಾರದ ವತಿಯಿಂದ ಸಮಿತಿಯಲ್ಲಿದ್ದವರು ಅದನ್ನು ಮಾಡಲಿಲ್ಲ. ಆಗಸ್ಟ್ ೧೫ರ ಭಾಷಣದಲ್ಲಿ ಪ್ರಧಾನಿಗಳು ಇನ್ನಷ್ಟು ದೃಢವಾದ ಭ್ರಷ್ಟಾಚಾರದ ವಿರುದ್ಧದ ಕ್ರಮಗಳನ್ನು ಅಣ್ಣಾ ಹಜಾರೆಯವರ ಕೋರಿಕೆಯಂತೆ ಜಾರಿಗೊಳಿಸುವ ನಿರ್ಧಾರ ಮಾಡಬಹುದಿತ್ತು. ಮಾಡಲಿಲ್ಲ. ಬಿಜೆಪಿಗೂ ಜನಲೋಕಪಾಲ್ ಬಿಲ್ ಬೇಡವಾಗಿತ್ತು. ನನ್ನ ಊಹೆ ಇದು. ಡೆವಲಪ್‌ಮೆಂಟಿಗೂ ಭ್ರಷ್ಟಾಚಾರಕ್ಕೂ ಅವಿನಾಭಾವದ ಸಂಬಂಧವಿದೆ. ಆದರೆ ಸರ್ವೋದಯದ ಸಂಕಲ್ಪದ ಕಾರ್ಯಕ್ರಮಗಳಿಗೆ ಭ್ರಷ್ಟಾಚಾರ ವಿರೋಧಿಯಾಗುತ್ತದೆ. ಎಲ್ಲಾ ರಾಜಕೀಯ ಪಕ್ಷಗಳೂ ಒಪ್ಪಿಕೊಂಡಿರುವ ನೀತಿಯೆಂದರೆ-ಐರೋಪ್ಯ ಮಾದರಿಯ ಡೆವಲಪ್‌ಮೆಂಟ್. ಇದಕ್ಕೆ ವೇಗವನ್ನೂ, ಹುರುಪನ್ನೂ, ಆಸಕ್ತಿಯನ್ನೂ ಒದಗಿಸಬಲ್ಲದು ಭ್ರಷ್ಟಾಚಾರ ತರುವ ಕಪ್ಪು ಹಣ. ಗಣಿಗಾರಿಕೆ, ಕೃಷಿ ಭೂಮಿಯನ್ನು ಕೈಗಾರಿಕೋದ್ಯಮಕ್ಕೆ ಬದಲಾಯಿಸುವ ಕ್ರಮಗಳು. ಆದಿವಾಸಿಗಳನ್ನು ಖನಿಜ ಸಂಪತ್ತಿನ ಗುಡ್ಡಗಾಡಿನಿಂದ ಓಡಿಸಿ ನಿರ್ಗತಿಕರನ್ನಾಗಿ ಮಾಡುವುದು. ಇವೆಲ್ಲವೂ ಭ್ರಷ್ಟಾಚಾರವನ್ನು ತನ್ನಲ್ಲೇ ಅಡಗಿಸಿಕೊಂಡ ಎಲ್ಲ ಪಕ್ಷಗಳ ‘ಡೆವಲಪ್‌ಮೆಂಟ್’ ನೀತಿಯಾಗಿದೆ.

೨. ಈ ಬಗೆಯ ‘ಡೆವಲಪ್‌ಮೆಂಟ್’ನಿಂದ ತಮಗೂ ಏನೋ ಸಿಗಬಹುದೆಂದು ಇಡೀ ಜನಸಮುದಾಯ ನಿರೀಕ್ಷಿಸಿತ್ತು. ಈಗ ಆ ಭ್ರಮೆ ನಿರಸನವಾಗಿದೆ. ಆದರೆ ಎಲ್ಲ ರಾಜಕಾರಣಿಗಳು ಈ ಡೆವಲಪ್‌ಮೆಂಟಿನ ಪಾಲುದಾರರಾಗಿದ್ದರಿಂದ ಜನರ ಆಕ್ರೋಶಕ್ಕೆ ಒಳಗಾಗಿದ್ದಾರೆ. ಅಣ್ಣಾ ಹಜಾರೆಯವರ ಚಳವಳಿಯಿಂದ ಎಲ್ಲ ರಾಜಕಾರಣಿಗಳೂ ದಿಗಿಲುಗೊಂಡು ಸದ್ಯ ಪಾರಾಗಲು ಅಣ್ಣಾರವರ ಹಠಕ್ಕೆ ತಮ್ಮ ಒಳಭೇದಗಳನ್ನು ಮರೆತು ತಲೆಬಾಗಿ ಒಂದಾಗಿದ್ದಾರೆ.

೩. ಅಣ್ಣಾರವರ ಹೋರಾಟದಲ್ಲಿ ಎದ್ದು ಕಾಣುವಂತೆ ಮೇಲ್ವರ್ಗದವರಿದ್ದಾರೆ. ಕಾಣಿಸದಂತೆ ಕೆಳವರ್ಗದವರಿದ್ದಾರೆ. ಯಾರನ್ನು ಹೆಚ್ಚು ಕಾಣಿಸಬೇಕು ಎಂಬುದು ಮೇಲ್ವರ್ಗಗಳ ಸುಖಸಾಧನೆಯ ಜಾಹೀರಾತುಗಳಿಂದಲೇ ನಡೆಯುವ ಟೆಲಿವಿಷನ್ ಸಂಸ್ಥೆಗಳ ಹುನ್ನಾರವೂ ಇದ್ದಿರಬಹುದು.

೪. ಸರ್ಕಾರವನ್ನೂ, ಅದನ್ನು ನಡೆಸುವ ಪಾರ್ಲಿಮೆಂಟನ್ನೂ ಬಲಹೀನ ಮಾಡುವಂತೆ ಈ ಚಳವಳಿ ಕೆಲವು ತೀಕ್ಷ್ಣ ವಿಶ್ಲೇಷಕರಿಗೆ ಅನ್ನಿಸಿದ್ದನ್ನು ನಾವು ತುಚ್ಛವಾಗಿ ಕಂಡು ಕಡೆಗಣಿಸಬಾರದು. ಹಿಂದೆ ಗಾಂಧೀಜಿಯವರ ಚಳವಳಿಗಳಲ್ಲೂ ಇಂತಹ ಪ್ರಶ್ನೆಗಳು ಎದ್ದಿದ್ದವು. ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿದ್ದ ಹಲವರು ಮೇಲ್ಜಾತಿಯವರಾಗಿದ್ದರು. ಕಣ್ಣಿಗೆ ಕಾಣುವಂತೆ ಇದ್ದವರು ದ್ವಿಜರು. ಆದ್ದರಿಂದಲೇ ದಕ್ಷಿಣ ಭಾರತದಲ್ಲಿ ‘ಜಸ್ಟೀಸ್’ ಪಾರ್ಟಿ ಬ್ರಾಹ್ಮಣೇತರರ ಹಿತಾಸಕ್ತಿಯನ್ನು ಕಾಯುವ ಪಾರ್ಟಿಯಾಗಿ ಹುಟ್ಟಿತು. ಅಷ್ಟಿಷ್ಟಾದರೂ ನ್ಯಾಯವನ್ನು ಒದಗಿಸುವ ಬ್ರಿಟಿಷರ ಬದಲಾಗಿ ಬ್ರಾಹ್ಮಣರು ಅಧಿಕಾರಕ್ಕೆ ಬಂದರೆ ನಾವು ಶತಮಾನಗಳ ಹಿಂದಿನಂತೆಯೇ ಇರಬೇಕಾಗುತ್ತದೆ ಎಂದು ಬ್ರಾಹ್ಮಣೇತರರು ಅನುಮಾನಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ. ಆದ್ದರಿಂದ ಗಾಂಧೀಜಿ ಮನಃಪೂರ್ವಕ ಇತರರನ್ನು ಒಳಗೊಳ್ಳುತ್ತಾ ಹೋದದ್ದು ಒಂದು ವಿಶೇಷವಾದ ಸಂಗತಿ ನಮ್ಮ ಚರಿತ್ರೆಯಲ್ಲಿ. ಇದನ್ನು ವಿವರಿಸಲು ನಾನು ಹೋಗುವುದಿಲ್ಲ. ಎಲ್ಲ ಚರಿತ್ರೆಯ ವಿದ್ಯಾರ್ಥಿಗಳಿಗೂ ಗೊತ್ತಿರುವ ವಿಷಯ. ರಾಜಾಜಿಯವರಂತಹ ಶುದ್ಧರೂ ಪ್ರಾಮಾಣಿಕರೂ ಆದ ಮೇಲ್ವರ್ಗದ ರಾಜಕಾರಣಿಯ ಕೈಯಿಂದ ಅವರಷ್ಟೇ ಶುದ್ಧರೂ ಪ್ರಾಮಾಣಿಕರೂ ಆದ ಕಾಮರಾಜ ನಾಡಾರ್ ಕೈಗೆ ಅಧಿಕಾರ ಬಂದು ಭಾರತದ ಜನಸತ್ತೆ ಇನ್ನಷ್ಟು ವಿಸ್ತಾರವಾಗಿ ಬಲವಾಯಿತು. ಇಂತಹ ಒಂದು ಬದಲಾವಣೆಯ ನಿರ್ಧಾರವನ್ನು ನೆಹರೂರವರೇ ತಂದರು ಎಂಬುದು ನಮ್ಮ ಪ್ರಜಾಪ್ರಭುತ್ವವು ಕೆಳಹಂತದ ಜನರನ್ನು ಒಳಪಡುತ್ತ ಹೋದ ಚರಿತ್ರೆಯ ಭಾಗವೇ ಆಗಿದೆ.

೫. ಪ್ರಾಣ ಹೋದನಂತರ ದೇಹ ಕೊಳೆಯುತ್ತದೆ. ಲಜ್ಜೆಯ ಸೋಂಕಿಲ್ಲದೆ ನಡೆಯುವ ಭ್ರಷ್ಟಾಚಾರದಿಂದ ಶೀಲವೇ ಮಾಯವಾಗಿ ದೇಶ ಕೊಳೆಯುತ್ತದೆ. ಹೀಗೆ ನಾರಲು ತೊಡಗಿದ ನಮ್ಮ ಕಾಲವನ್ನು ಒಬ್ಬ ಸರಳ ಸಜ್ಜನ ವಯೋವೃದ್ಧ ಅಣ್ಣಾ ಹಜಾರೆ ಕಾಪಾಡಿದ್ದಾರೆ. ಗಾಂಧಿ, ನೆಹರೂ, ಅಂಬೇಡ್ಕರ್, ನೆಹರೂ ಮನೆತನ, ಜಯಪ್ರಕಾಶ ನಾರಾಯಣ ಆದ ನಂತರ ಇಡೀ ಭಾರತದಲ್ಲಿ ಎಲ್ಲರ ಕಣ್ಣು, ಕಿವಿ, ಅಂತರಾತ್ಮವನ್ನು ಸೆಳೆದ ವ್ಯಕ್ತಿಯೆಂದರೆ ಅಣ್ಣಾ ಹಜಾರೆ. ಇವರು ಇಂಗ್ಲಿಷ್ ಮಾತಾಡುವುದಿಲ್ಲ ಹಿಂದಿ ಮಾತಾಡುತ್ತಾರೆ. ಆದರೂ ಇವರಿಗೆ ಆಪ್ತವಾಗಿರುವುದು ಅವರ ಮನೆಮಾತಾದ ಮರಾಠಿ. ‘ಶುದ್ಧತೆ’ಯ ಅಪಾರ್ಥಕ್ಕೊಳಗಾಗಿದ್ದ ಖಾದಿ ಟೋಪಿ ಇವರ ತಲೆಯ ಮೇಲೆ ಮತ್ತೆ ಶುಭ್ರವಾಗಿ ಕಾಣಿಸತೊಡಗಿದೆ. ನಾರಲು ತೊಡಗಿದ್ದ ಇಂಡಿಯಾದಲ್ಲಿ ಮತ್ತೆ ಶೀಲ ಮುಖ್ಯವೆಂದು ಜನರಿಗೆ ಅನ್ನಿಸುವಂತಹ ಒಂದು ಸುವಾಸನೆ ಮೆಲ್ಲಗೆ ಸುಳಿಯತೊಡಗಿದೆ.

ಕೊನೆಯಲ್ಲೊಂದು ಮಾತು, ನನ್ನ ಇಡೀ ತಾತ್ವಿಕ ಚಿಂತನೆಗೆ ಸಂಬಂಧಪಟ್ಟಂತೆ ಇದನ್ನು ಹೇಳಬೇಕು. ಲೋಹಿಯಾ ವಾದದಲ್ಲಿ ನನ್ನ ನಂಬಿಕೆ ಇನ್ನೂ ಉಳಿದಿದೆ ಆದರೆ, ಲೋಹಿಯಾವಾದಿಗಳೆಂದು ಕರೆದುಕೊಳ್ಳುವ ನಾಯಕರ ಉಡಾಫೆ ವರ್ತನೆಯನ್ನು ನಾನು ತಿರಸ್ಕರಿಸುತ್ತೇನೆ.

—-
ಪ್ರಜಾವಾಣಿ
ಪತ್ರಿಕೆಯಲ್ಲಿ ಪ್ರಕಟವಾದ ಲೇಖನ.